ನಾನು ಮೆಚ್ಚಿದ ವಾಟ್ಸಪ್

Saturday, October 5, 2019

ಇಂದಿನ ಇತಿಹಾಸ History Today ಅಕ್ಟೋಬರ್ 05

2019: ಮುಂಬೈ:  ಮಹಾನಗರದ ಆರೇ ಕಾಲೋನಿಯಲ್ಲಿ ಮುಂಬೈ ಮೆಟ್ರೋ ರೈಲು ಕಾರ್ಪೋರೇಷನ್ನಿನ (ಎಂಎಂಆರ್ಸಿ) ಮೆಟ್ರೋ ಕಾರು ಶೆಡ್ ನಿರ್ಮಾಣಕ್ಕಾಗಿ ಸಹಸ್ರಾರು ಮರಗಳ ನಾಶವನ್ನು ವಿರೋಧಿಸಿ ಪ್ರತಿಭಟಿಸಿದ ೩೮ ಮಂದಿಯನ್ನು ಪೊಲೀಸರು  2019 ಅಕ್ಟೋಬರ್ 05ರ ಶನಿವಾರ ಬಂಧಿಸಿದ್ದು, ಅವರ ಜಾಮೀನು ಅರ್ಜಿಗಳನ್ನು ನ್ಯಾಯಾಲಯ ತಿರಸ್ಕರಿಸಿತು. ಇದರ ಜೊತೆಗೆ ಮರಗಳ ನಾಶಕ್ಕೆ ತಡೆ ಕೋರಿ ಪರಿಸರ ಕಾರ್ಯಕರ್ತರು ಸಲ್ಲಿಸಿದ ಹೊಸ ಅರ್ಜಿಯನ್ನೂ ಬಾಂಬೆ ಹೈಕೋರ್ಟ್ ತಳ್ಳಿ ಹಾಕಿತು. ಮರ ಕಡಿಯುವುದನ್ನು ಪ್ರತಿಭಟಿಸಿದ ೩೮ ಮಂದಿ ಪರಿಸರ ಕಾರ್ಯಕರ್ತರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನ್ಯಾಯಾಲಯ ಅವರಿಗೆ ಸೋಮವಾರದವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಿತು. ಇವರ ಹೊರತಾಗಿ ೫೫ ಮಂದಿಯನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಈಮಧ್ಯೆ ಆರೇ ಕಾಲೋನಿಯಲ್ಲಿ ಮರಗಳನ್ನು ಕಡೆಯುವುದಕ್ಕೆ ತೀವ್ರ ಪ್ರತಿಭಟನೆ ವ್ಯಕ್ತವಾಗಿರುವುದರ ನಡುವೆ ಮರಕಡಿಯಲು ಶುಕ್ರವಾರ ಒಪ್ಪಿಗೆ ನೀಡಿದ್ದ ಬಾಂಬೆ ಹೈಕೋರ್ಟ್, ಮರ ಕಡಿಯುವುದಕ್ಕೆ ತಡೆಯಾಜ್ಞೆ ಕೋರಿ ಪರಿಸರವಾದಿಗಳು ಹೊಸದಾಗಿ ಸಲ್ಲಿಸಿದ ಅರ್ಜಿಯನ್ನೂ  ಈದಿನ  ತಿರಸ್ಕರಿಸಿತು. “ಮರಗಳನ್ನು ಕಡಿಯಲು ಮುನಿಸಿಪಲ್ ಕಾರ್ಪೋರೇಷನ್ನಿನ  ಮರ ಪ್ರಾಧಿಕಾರವು ಸೆಪ್ಟೆಂಬರ್ ೧೩ರಂದು ಅನುಮತಿ ನೀಡಿತ್ತು. ಹೈಕೋರ್ಟ್ ಮರ ಕಡಿಯುವುದರ ವಿರುದ್ಧ ಸಲ್ಲಿಸಲಾಗಿದ್ದ ನಾಲ್ಕು ಅರ್ಜಿಗಳನ್ನು ವಜಾಗೊಳಿಸಿದ್ದಲ್ಲದೆ, ಕ್ಷುಲ್ಲಕ ಅರ್ಜಿ ಸಲ್ಲಿಸಿದ್ದಕ್ಕಾಗಿ ೫೦,೦೦೦ ರೂಪಾಯಿ ದಂಡವನ್ನೂ ವಿಧಿಸಿದೆಎಂದು ಎಂಎಂಆರ್ಸಿ ಆಡಳಿತ ನಿರ್ದೇಶಕಿ ಅಶ್ವಿನಿ ಭಿಡೆ ಹೇಳಿದರು. ‘ಅವರ ಚಟುವಟಿಕೆಗಳು ಅಕ್ರಮವಷ್ಟೇ ಅಲ್ಲ, ಭಂಡತನದ್ದೂ ಆಗಿವೆ. ನೀವು ನ್ಯಾಯಾಲಯದಲ್ಲಿ ಸೋತರೆ, ಗೌರವಪೂರ್ವಕವಾಗಿ ಅದನ್ನು ಅಂಗೀಕರಿಸುವುದು ಒಳ್ಳೆಯದು, ಬೀದಿಗೆ ಒಯ್ಯುವುದಲ್ಲಎಂದು ಆಕೆ ಟ್ವೀಟ್ ಮಾಡಿದರು. ಆರೇಯಲ್ಲಿ ಮರಗಳನ್ನು ಕಡಿಯಲು ಹೊಸದಾಗಿ ಅನುಮತಿ ಪಡೆಯಬೇಕು ಎಂಬ ಪರಿಸರವಾದಿಗಳ ಪ್ರತಿಪಾದನೆಯನ್ನು ಮುಂಬೈ ಮೆಟ್ರೋ ರೈಲು ನಿಗಮವು (ಎಂಎಂಆರ್ಸಿ) ತಳ್ಳಿಹಾಕಿತು.  ಹಿಂದಿನ ದಿನ ತಡರಾತ್ರಿ ಎಂಎಂಆರ್ಸಿಯು ಮುಂಬೈ ಮೆಟ್ರೋದ ಮೂರನೇ ಹಂತಕ್ಕಾಗಿ ಕಾರು ಶೆಡ್ ನಿರ್ಮಿಸಲು ಕಡಿಯಲು ಆರಂಭಿಸಿದಾಗ ಆರೇ ಕಾಲೋನಿಯಲ್ಲಿ ಪ್ರತಿಭಟನೆ ಭುಗಿಲೆದ್ದಿತ್ತು. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)

2019: ವಾಷಿಂಗ್ಟನ್: ಅಮೆರಿಕದ ವೀಸಾಗಳಿಗಾಗಿ ಅರ್ಜಿ ಸಲ್ಲಿಸುವ ವಲಸಿಗರು ತಮ್ಮ ಆರೋಗ್ಯದ ಕಾಳಜಿಯನ್ನು ತಾವೇ ನೋಡಿಕೊಳ್ಳಲು ಸಾಧ್ಯವಾಗದಿದ್ದರೆ ಅಂತಹವರಿಗೆ ಅಮೆರಿಕ ಪ್ರವೇಶವನ್ನ ನಿರಾಕರಿಸುವ ಘೋಷಣೆಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್  2019 ಅಕ್ಟೋಬರ್  04ರ ಶುಕ್ರವಾರ ಭಾರತದಲ್ಲಿ  ಅಕ್ಟೋಬರ್ 5 ಶನಿವಾರ) ಸಹಿ ಮಾಡಿದರು. ಹೊಸ ನಿಯಮಾವಳಿಗಳು ವಿದೇಶದಿಂದ ಅಮೆರಿಕಕ್ಕೆ ಬರಲು ವಲಸೆಗಾರರ ವೀಸಾ ಕೋರುವವರಿಗೆ ಅನ್ವಯವಾಗುತ್ತದೆ ಹೊರತು ಈಗಾಗಲೇ ಅಮೆರಿಕದಲ್ಲಿ ಇರುವವರಿಗೆ ಅಲ್ಲ. ಅಮೆರಿಕದ ಕಾನೂನುಬದ್ಧ ನಿವಾಸಿಗಳಿಗೆ ಇದರಿಂದ ಯಾವುದೇ ಪರಿಣಾಮವಾಗುವುದಿಲ್ಲ. ನೂತನ ನಿಯಮಾವಳಿ ಆಶ್ರಯ ಕೋರುವವರಿಗೆ, ನಿರಾಶ್ರಿತರಿಗೆ ಅಥವಾ ಮಕ್ಕಳಿಗೆ ಅನ್ವಯಿಸುವುದಿಲ್ಲ. ಆದರೆ ಅಮೆರಿಕದ ನಾಗರಿಕರ ಸಂಗಾತಿಗಳು ಮತ್ತು ಹೆತ್ತವರಿಗೆ (ತಂದೆ, ತಾಯಿಗಳು) ನೂತನ ವೀಸಾ ನಿಯಮಾವಳಿಗಳು ಅನ್ವಯವಾಗುತ್ತದೆ. ತಮ್ಮ ಹೆತ್ತವರನ್ನು ಅಮೆರಿಕಕ್ಕೆ ಕರೆಸಿಕೊಳ್ಳಲು ಯತ್ನಿಸುತ್ತಿರುವ ಕುಟುಂಬಗಳ ಮೇಲೆ ನಿಯಮಾವಳಿಗಳು ಪ್ರಭಾವ ಬೀರಲಿವೆ. ಅಮೆರಿಕ ಪ್ರವೇಶಿಸಿದ ೩೦ ದಿನಗಳ ಒಳಗಾಗಿ ಆರೋಗ್ಯ ವಿಮಾ ಮಾಡಿಸಿಕೊಳ್ಳದೇ ಇದ್ದಲ್ಲಿ ಅಥವಾ ತಮ್ಮ ವೈದ್ಯಕೀಯ ವೆಚ್ಚಗಳನ್ನು ಭರಿಸಲು ಸಾಕಾಗುವಷ್ಟ್ ಆರ್ಥಿಕ ಸಂಪನ್ಮೂಲ ಹೊಂದಿರದೇ ಇದ್ದಲ್ಲಿ ಅಂತಹ ವಲಸೆಗಾರರು ದೇಶ ಪ್ರವೇಶಿಸದಂತೆ ನಿಷೇಧಿಸಲಾಗುವುದು ಎಂದು ಘೋಷಣೆ ತಿಳಿಸಿದೆ. ಹೊಸ ನಿಮಮಾವಳಿಗಳು ನವೆಂಬರ್ ೩ರಿಂದ ಜಾರಿಗೆ ಬರಲಿವೆ. ಕುಟುಂಬ ಆಧಾರಿತ ವಲಸೆ ವ್ಯವಸ್ಥೆಯಿಂದ ದೂರವಾಗಿ ಅರ್ಹತೆ ಆಧಾರಿತ ವ್ಯವಸ್ಥೆ ಅಳವಡಿಸಿಕೊಳ್ಳಲು ಟ್ರಂಪ್ ಆಡಳಿತವು ಯತ್ನಿಸುತ್ತಿದ್ದು, ಶುಕ್ರವಾರದ ಘೋಷಣೆಯು ವಲಸಿಗರಿಗೆ ಸಾರ್ವಜನಿಕ ಕಾರ್ಯಕ್ರಮಗಳ ಲಾಭ ಲಭಿಸದಂತೆ ಮಾಡುವ ನಿಟ್ಟಿನಲ್ಲಿ ಇನ್ನೊಂದು ಪ್ರಯತ್ನವಾಗಿದೆ. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)
2019: ನವದೆಹಲಿ: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗಳಿಗಾಗಿ ತಮ್ಮ ರಾಜಕೀಯ ಪ್ರತಿಸ್ಪರ್ಧಿಗಳು ಪಕ್ಷದ ಟಿಕೆಟ್ಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಆಪಾದಿಸಿ ಪಕ್ಷದ ಚುನಾವಣಾ ಸಮಿತಿಯನ್ನು ತ್ಯಜಿಸಿದ್ದ ಕಾಂಗ್ರೆಸ್ ಪಕ್ಷದ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಅಶೋಕ ತನ್ವರ್  ಅವರು ಎರಡು ದಿನಗಳ ಬಳಿಕ 2019 ಅಕ್ಟೋಬರ್ 5ರ ಶನಿವಾರ ಪಕ್ಷದ  ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಿದರು. ‘ಪಕ್ಷದ ಕಾರ್ಯಕರ್ತರ ಜೊತೆಗೆ ಸುದೀರ್ಘ ಮಾತುಕತೆ ನಡೆಸಿದ ಬಳಿಕ, ಎಲ್ಲ ಕಾಂಗ್ರೆಸ್ಸಿಗರು ಮತ್ತು ಸಾರ್ವಜನಿಕರಿಗೆ ಗೊತ್ತಿರುವ ಕಾರಣಗಳಿಗಾಗಿ ನಾನು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಮೂಲಕ ರಾಜೀನಾಮೆ ನೀಡುತ್ತಿದ್ದೇನೆಎಂದು ತನ್ವರ್  ಟ್ವೀಟ್ ಮಾಡಿದರು. ಕಾಂಗ್ರೆಸ್ ಹಂಗಾಮೀ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬರೆದ ನಾಲ್ಕು ಪುಟಗಳ ರಾಜೀನಾಮೆ ಪತ್ರದಲ್ಲಿ ತನ್ವರ್ಕಾಂಗ್ರೆಸ್ ಪಕ್ಷವು ವಿರೋಧಿಗಳ ಕಾರಣದಿಂದಾಗಿ ಅಲ್ಲ, ಬದಲಿಗೆ ಗಂಭೀರವಾದ ಆಂತರಿಕ ವಿರೋಧಾಬಾಸಗಳ ಕಾರಣಕ್ಕಾಗಿ ಅಸ್ತಿತ್ವದ ಬಿಕ್ಕಟ್ಟನ್ನು ಎದುರಿಸುತ್ತಿದೆಎಂದು  ಆಪಾದಿಸಿದರು. ‘ನನ್ನ ಬೆವರು ಮತ್ತು ರಕ್ತ ಹರಿಸಿ ಬೆಳೆಸಿದ್ದ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಹಲವಾರು ತಿಂಗಳುಗಳ ಪರಿಗಣನೆಯ ಬಳಿಕ ನಾನು ರಾಜೀನಾಮೆ ನೀಡುತ್ತಿದ್ದೇನೆ. ನನ್ನ ಹೋರಾಟ ವೈಯಕ್ತಿಕವಲ್ಲ, ಬದಲಿಗೆ ಹಳೆಯ ಮಹಾನ್ ಪಕ್ಷವನ್ನು ನಾಶಪಡಿಸುತ್ತಿರುವ ವ್ಯವಸ್ಥೆಯ ವಿರುದ್ಧಎಂದು ತನ್ವರ್ ಪತ್ರ ಹೇಳಿತು. ತನ್ವರ್ ಅವರು ಹರಿಯಾಣ ವಿಧಾನಸಭಾ ಚುನಾವಣೆಗಾಗಿ ಟಿಕೆಟ್ ಹಂಚಿಕೆಗೆ ಸಂಬಂಧಿಸಿದಂತೆ ನವದೆಹಲಿಯಲ್ಲಿ ಬುಧವಾರ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಸೋನಿಯಾಗಾಂಧಿ ಅವರ ನಿವಾಸದ ಹೊರಭಾಗದಲ್ಲಿ ಪ್ರತಿಭಟನೆ ನಡೆಸಿದ್ದರು. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)


No comments:

Post a Comment