ನಾನು ಮೆಚ್ಚಿದ ವಾಟ್ಸಪ್

Sunday, October 6, 2019

ಇಂದಿನ ಇತಿಹಾಸ History Today ಅಕ್ಟೋಬರ್ 06

2019: ನವದೆಹಲಿ: ಮುಂಬೈ ಮೆಟ್ರೋ ೩ನೇ ಹಂತದ ಕಾಮಗಾರಿಗಾಗಿ ಉತ್ತರ ಮುಂಬೈಯ ಆರೇ ಕಾಲೋನಿಯಲ್ಲಿ ನಡೆಸಲಾಗುತ್ತಿರುವ ಸಹಸ್ರಾರು ಮರಗಳ ಮಾರಣಹೋಮವನ್ನು  ಭಾನುವಾರ ಸ್ವ ಇಚ್ಛೆಯಿಂದ ಗಮನಕ್ಕೆ ತೆಗೆದುಕೊಂಡಿರುವ ಸುಪ್ರೀಂಕೋರ್ಟ್  2019 ಅಕ್ಟೋಬರ್ 07ರ ಸೋಮವಾರ ಪ್ರಕರಣದ ವಿಶೇಷ ವಿಚಾರಣೆ ನಡೆಸುವುದಾಗಿ 2019 ಅಕ್ಟೋಬರ್ 06ರ ಭಾನುವಾರ ಪ್ರಕಟಿಸಿತು.  ಗ್ರೇಟರ್ ನೋಯ್ಡಾದ ಲಾಯ್ಡ್ ಕಾನೂನು ಕಾಲೇಜಿನ  ವಿದ್ಯಾರ್ಥಿ  ರಿಶವ್ ರಂಜನ್ ಮತ್ತು ಇತರರ ಗುಂಪು ಸಲ್ಲಿಸಿದ ಪತ್ರವನ್ನು ಪರಿಗಣನೆಗೆ ತೆಗೆದುಕೊಂಡ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರು ಪ್ರಕರಣದ ವಿಚಾರಣೆಗೆ ವಿಶೇಷ ಪೀಠವನ್ನು ರಚಿಸಿ ಸೋಮವಾರ ಬೆಳಗ್ಗೆ 10 ಗಂಟೆಗೆ ಪೀಠವು ಪ್ರಕರಣದ ವಿಚಾರಣೆ ನಡೆಸಲಾಗುವುದು ಎಂದು ಸುಪ್ರೀಂಕೋರ್ಟ್ ವೆಬ್ ಸೈಟಿನಲ್ಲಿ ಪ್ರಕಟಿಸಿದರು. ಕಾನೂನು ವಿದ್ಯಾರ್ಥಿಗಳ ಗುಂಪೊಂದು ಸಲ್ಲಿಸಿದ ಮನವಿಯನ್ನು ಸಾರ್ವಜನಿಕ ಹಿತಾಸಕ್ತಿ ಖಟ್ಲೆಯಾಗಿ ಸುಪ್ರೀಂಕೋರ್ಟ್  ಮಾರ್ಪಾಡು ಮಾಡಿತು. ವಿಶೇಷ ನ್ಯಾಯಪೀಠವು  ಆರೇ ಕಾಲೋನಿಯ ಪ್ರತಿನಿಧಿಗಳು ಮತ್ತು ಮುಂಬೈನ ಮೆಟ್ರೋ ಅಧಿಕಾರಿಗಳ ವಾದ-ಪ್ರತಿವಾದ ಆಲಿಸಲಿದೆ. ಬಳಿಕ ಮುಂಬೈ ಹೈಕೋರ್ಟ್​​ ಮತ್ತೊಮ್ಮೆ ಪರಿಶೀಲಿಸಲಿದೆ ಎನ್ನಲಾಯಿತು.  ಮೆಟ್ರೋ ಕಾಮಗಾರಿಗಾಗಿ ಮರಗಳನ್ನು ಕಡಿಯಲು ಮುಂದಾದ ಅಧಿಕಾರಿಗಳ ವಿರುದ್ಧ ಬೀದಿಗಿಳಿದು ಪ್ರತಿಭಟಿಸಿದ ಆರೆ ಕಾಲೋನಿಯ 38  ಮಂದಿಯನ್ನು ಬಂಧಿಸಲಾಗಿತ್ತು. ಮುಂಬೈ ನ್ಯಾಯಲಯವೇ ಪ್ರತಿಭಟನಕಾರರ ಜಾಮೀನು ಅರ್ಜಿಯನ್ನು ವಜಾಗೊಳಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಇದಲ್ಲದೆ  55 ಮಂದಿಯನ್ನು ವಶಕ್ಕೆ ಪಡೆದಿದ್ದರು. (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)

2019: ನವದೆಹಲಿ:  ಮೊದಲ ಕಂತಿನ ರಫೇಲ್ ಯುದ್ಧ ವಿಮಾನಗಳನ್ನು ಸ್ವೀಕರಿಸುವ ಸಲುವಾಗಿ ಫ್ರಾನ್ಸಿಗೆ ತೆರಳಲ್ಲು ಸಜ್ಜಾಗಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಪ್ಯಾರಿಸ್ಸಿನಲ್ಲಿ ಮೊದಲ ಬಟವಾಡೆಗೆ ಮುನ್ನ 2019ರ  ಅಕ್ಟೋಬರ್ ೮ರ ಮಂಗಳವಾರ   ’ರಫೇಲ್ಗೆ ಶಸ್ತ್ರ ಪೂಜೆ (ಆಯುಧ ಪೂಜೆ) ನೆರವೇರಿಸಲಿದ್ದಾರೆ. ಭಾರತದಲ್ಲಿ ಇದೇ ಸಂದರ್ಭದಲ್ಲಿ ಕಾಕತಾಳೀಯವಾಗಿ  ’ದಸರಾಸಂಭ್ರಮಾಚರಣೆ ನಡೆಯುತ್ತಿದೆಹಿಂದೂ ಸಂಪ್ರದಾಯದ ಪ್ರಕಾರ ಯೋಧರು ತಮ್ಮ ಶಸ್ತ್ರಾಸ್ತಗಳು ಮತ್ತು ಆಯುಧಗಳಿಗೆ  ದಸರಾ ಹಬ್ಬ ಆಚರಣೆಯ ಸಂದರ್ಭದಲ್ಲೇ  ’ಶಸ್ತ್ರ ಪೂಜೆಯನ್ನು ನೆರವೇರಿಸುತ್ತಾರೆ.  ‘ಗೃಹ ಸಚಿವರಾಗಿದ್ದ ದಿನಗಳಲ್ಲಿ ರಾಜನಾಥ್ ಸಿಂಗ್ ಅವರು ಪ್ರತಿ ದಸರಾ ಹಬ್ಬದ ಸಂದರ್ಭದಲ್ಲಿಶಸ್ತ್ರ ಪೂಜೆಯನ್ನು ನೆರವೇರಿಸುತ್ತಿದ್ದರು. ಈಗ, ರಕ್ಷಣಾ ಸಚಿವರಾಗಿ ಕೂಡಾ ಅವರು ತಮ್ಮ ಸಂಪ್ರದಾಯವನ್ನು ಮುಂದುವರೆಸುವರುಎಂದು ರಾಜನಾಥ್ ಸಿಂಗ್ ಅವರಿಗೆ ನಿಕಟವಾಗಿರುವ ರಕ್ಷಣಾ ಅಧಿಕಾರಿಗಳು ಹೇಳಿದರು. ಸಚಿವರು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರನ್ನು ಭೇಟಿ ಮಾಡುವರು ಮತ್ತು ನಂತರ ಬೋರ್ಡೆಯಕ್ಸ್ಗೆ ಭಾರತಕ್ಕಾಗಿ ನಿರ್ಮಿಸಿದ ಮೊದಲ ರಫೇಲ್ ಯುದ್ಧ ವಿಮಾನವನ್ನು ಸ್ವೀಕರಿಸಲು ತೆರಳುವರು. ಫ್ರಾನ್ಸಿನ ಉನ್ನತ ಸೇನಾ ಅಧಿಕಾರಿ ಮತ್ತು ರಫೇಲ್ ನಿರ್ಮಾಪಕ ಕಂಪೆನಿ ಡಸ್ಸಾಲ್ಟ್ ಏವಿಯೇಷನ್ ಹಿರಿಯ ಅಧಿಕಾರಿಗಳುರಫೇಲ್ ಹಸ್ತಾಂತರಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. (ವಿವರಗಳಿಗೆ  ಇಲ್ಲಿ ಕ್ಲಿಕ್   ಮಾಡಿರಿ)

2019: ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದಿನ ಬಳಿಕ ಮೊದಲ ರಾಜಕೀಯ ಬೆಳವಣಿಗೆಯಲ್ಲಿ ನ್ಯಾಷನಲ್ ಕಾನ್ಫರೆನ್ಸಿನ ೧೫ ಸದಸ್ಯರ ನಿಯೋಗವೊಂದು ಶ್ರೀನಗರದಲ್ಲಿ ಬಂಧನದಲ್ಲಿರುವ ಪಕ್ಷದ ನಾಯಕರಾದ ಫರೂಕ್ ಅಬ್ದುಲ್ಲ  ಮತು ಒಮರ್ ಅಬ್ದುಲ್ಲ ಅವರನ್ನು 2019 ಅಕ್ಟೋಬರ್  06ರ ಭಾನುವಾರ ಭೇಟಿ ಮಾಡಿ ಮಾತುಕತೆ ನಡೆಸಿತು. ಈಮಧ್ಯೆ, ಜಮ್ಮು ಮತ್ತು ಕಾಶ್ಮೀರ ಆಡಳಿತವು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ) ನಿಯೋಗಕ್ಕೆ ಪಕ್ಷದ ಬಂಧಿತ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರನ್ನು 2019 ಅಕ್ಟೋಬರ್ 07 ಸೋಮವಾರ ಭೇಟಿ ಮಾಡಲು ಭಾನುವಾರ ಅನುಮತಿ ನೀಡಿತು. ನ್ಯಾಷನಲ್ ಕಾನ್ಫರೆನ್ಸ್ ನಿಯೋಗವು ಉಭಯ ನಾಯಕರ ಜೊತೆಗಿನ ಪ್ರತ್ಯೇಕ ಮಾತುಕತೆಗಳಲ್ಲಿ ರಾಜ್ಯದಲ್ಲಿನ ಬೆಳವಣಿಗೆಗಳು ಮತ್ತು ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳ ಬಗ್ಗೆ ಚರ್ಚಿಸಿತು. ನಾಯಕರನ್ನು ಭೇಟಿ ಮಾಡಲು ನಿಯೋಗಕ್ಕೆ ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಅನುಮತಿ ನೀಡಿತ್ತು. ಪಕ್ಷದ ಜಮ್ಮು ಪ್ರಾಂತೀಯ ಮುಖ್ಯಸ್ಥ ದೇವಿಂದರ್ ಸಿಂಗ್ ರಾಣಾ ನೇತೃತ್ವದ ನಿಯೋಗವು ಮೊದಲು ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲ ಅವರನ್ನು ಹರಿ ನಿವಾಸದಲ್ಲಿ ಭೇಟಿ ಮಾಡಿ ಸುಮಾರು ೩೦ ನಿಮಿಸಗಳಿಗಿಂತ ಸ್ವಲ್ಪ ಕಡಿಮೆಕಾಲ ಮಾತುಕತೆ ನಡೆಸಿತು. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ ಸಂವಿಧಾನದ ೩೭೦ನೇ ವಿಧಿಯನ್ನು ರದ್ದು ಪಡಿಸಿರುವುದಾಗಿ ಕೇಂದ್ರ ಸರ್ಕಾರವು ಪ್ರಕಟಿಸಿದ ಆಗಸ್ಟ್ ೫ನೇ ದಿನಾಂಕದಿಂದ ಬಂಧನದಲ್ಲಿರುವ ಒಮರ್ ಅಬ್ದುಲ್ಲ ಅವರನ್ನು ಮೊದಲಿಗೆ ಭೇಟಿ ಮಾಡಿತು. ಒಮರ್ ಅವರು ನಿಯೋಗದಲ್ಲಿ ಬಂದ ಪಕ್ಷ ನಾಯಕರ ಜೊತೆಗೆ ಸೆಲ್ಫಿ ತೆಗೆದುಕೊಂಡ ದೃಶ್ಯ ಕಾಣಿಸಿತು ಎಂದು ವರದಿಗಳು ತಿಳಿಸಿದವು.  ನಿಯೋಗವು ಬಳಿಕ ಫರೂಕ್ ಅಬ್ದುಲ್ಲ ನಿವಾಸಕ್ಕೆ ತೆರಳಿತು. ಭೇಟಿಯ ಬಳಿಕ ನಿಯೋಗದ ಮುಖ್ಯಸ್ಥ ರಾಣಾ ಅವರು ವರದಿಗಾರರ ಜೊತೆ ಮಾತನಾಡುತ್ತಾಯಾವುದೇ ರಾಜಕೀಯ ಪ್ರಕ್ರಿಯೆ ಆರಂಭಗೊಳ್ಳಲು ಮೊದಲು ಪಕ್ಷ ನಾಯಕರ ಬಿಡುಗಡೆ ಆಗಬೇಕುಎಂದು ಹೇಳಿದರು. (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)



No comments:

Post a Comment