2019: ನವದೆಹಲಿ: ಐರೋಪ್ಯ ಸಂಸತ್ತಿನ ಸಂಸತ್ ಸದಸ್ಯರ ತಂಡವೊಂದಕ್ಕೆ 2019 ಅಕ್ಟೋಬರ್
29ರ ಮಂಗಳವಾರ ಜಮ್ಮು
ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲು ಕೇಂದ್ರ ಸರ್ಕಾರವು ಅನುಮತಿ ನೀಡಿದ್ದು, 2019 ಅಕ್ಟೋಬರ್ 28ರ ಸೋಮವಾರ
ತಂಡದ ಸದಸ್ಯರ ಜೊತೆ ಸಂವಹನ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ’ಈ ಭೇಟಿಯು ಸರ್ಕಾರದ
ಆದ್ಯತೆಗಳ ಸ್ಪಷ್ಟ ಚಿತ್ರಣವನ್ನು ತಂಡಕ್ಕೆ ನೀಡಲಿದೆ’ ಎಂದು ಹೇಳಿದರು. ‘ಭಯೋತ್ಪಾದನೆಗೆ
ಬೆಂಬಲ ನೀಡುವವರು ಅಥವಾ ಭಯೋತ್ಪಾದನೆಯನ್ನು ರಾಷ್ಟ್ರೀಯ ನೀತಿಯನ್ನಾಗಿ ಮಾಡಿಕೊಂಡಿರುವವರ ವಿರುದ್ಧ ತುರ್ತು ಕ್ರಮ ಕೈಗೊಳ್ಳುವಂತೆ’ ಪ್ರಧಾನಿ
ಈ ಸಂದರ್ಭದಲ್ಲಿ ಕರೆ ನೀಡಿದರು. ‘ಭಯೋತ್ಪಾದನೆ ಬಗ್ಗೆ ಶೂನ್ಯ ಸಹನೆ ಇರಬೇಕು’ ಎಂದು ಪ್ರಧಾನಿ ಭಾರತಕ್ಕೆ ಪ್ರವಾಸ ಬಂದಿರುವ ಐರೋಪ್ಯ ಒಕ್ಕೂಟದ ಶಾಸನಕರ್ತರ ಜೊತೆ ಮಾತನಾಡುತ್ತಾ ಹೇಳಿದರು. ದೇಶದ ವಿವಿಧ ಭಾಗಗಳಿಗೆ ಭೇಟಿ ನೀಡಲಿರುವ ಐರೋಪ್ಯ ಸಂಸತ್ತಿನ ಸದಸ್ಯರ ತಂಡವು ಜಮ್ಮು ಮತ್ತು ಕಾಶ್ಮೀರಕ್ಕೆ ಮಂಗಳವಾರ ಭೇಟಿ ನೀಡಲಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ
ಸ್ಥಾನಮಾನವನ್ನು ಒದಗಿಸಿದ್ದ ಸಂವಿಧಾದ ೩೭೦ನೇ ವಿಧಿಯನ್ನು ರದ್ದು ಪಡಿಸಿ, ರಾಜ್ಯವನ್ನು ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಎಂಬುದಾಗಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲು ಕೇಂದ್ರ ಸರ್ಕಾರವು ನಿರ್ಧರಿಸಿದ ಬಳಿಕ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡುತ್ತಿರುವ ಮೊತ್ತ ಮೊದಲ ಶಾಸನಕರ್ತರ ತಂಡ ಇದಾಗಿದೆ. (ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)
2019: ಜಮ್ಮು: ಕಣಿವೆ ರಾಜ್ಯದಲ್ಲಿ ಉಗ್ರಗಾಮಿಗಳ ಉಪಟಳ ಹೆಚ್ಚಾಗಿದ್ದು, ಭಯೋತ್ಪಾದಕರ ದಾಳಿಗೆ ಮತ್ತೊಬ್ಬ ಲಾರಿ ಚಾಲಕ 2019 ಅಕ್ಟೋಬರ್ 28ರ ಸೋಮವಾರ
ಬಲಿಯಾದ. ದಕ್ಷಿಣ ಕಾಶ್ಮೀರದ ಅನಂತ್ನಾಗ್ ಜಿಲ್ಲೆಯ ಬಿಜ್ಬೆಹರಾದಲ್ಲಿ ಉಗ್ರರು ಚಾಲಕನನ್ನು ಗುಂಡು ಹಾರಿಸಿ ಹತ್ಯೆ ಮಾಡಿದರು. ಚಾಲಕನನ್ನು ಉಧಮ್ಪುರ ಜಿಲ್ಲೆಯ ಕಾತ್ರಾ ಪ್ರದೇಶದ ನಾರಾಯಣ್ ದತ್ ಎಂದು ಗುರುತಿಸಲಾಯಿತು. ಈದಿನ ಸಂಜೆ ಈ ಘಟನೆ ಘಟಿಸಿದ್ದು, ಟ್ರಕ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಎಂದು
ವರದಿಗಳು ತಿಳಿಸಿದವು. ವಿಷಯ ತಿಳಿದ ಕೂಡಲೇ ಸ್ಥಳೀಯ ಪೊಲೀಸ್ ಅಧಿಕಾರಿ ಸ್ಥಳಕ್ಕೆ ಧಾವಿಸಿದರು. ಸುತ್ತಮುತ್ತಲ ಪ್ರದೇಶದಲ್ಲಿ ಇದ್ದ ಇನ್ನಿಬ್ಬರು ಟ್ರಕ್ ಚಾಲಕರನ್ನು ಪೊಲೀಸರು ರಕ್ಷಿಸಿದರು. ಬಳಿಕ ದಾಳಿಕೋರರನ್ನು ಸೆದೆ ಬಡೆಯಲು ಆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದರು. ಈ ದಾಳಿ ಸೇರಿ ದಕ್ಷಿಣ ಕಾಶ್ಮೀರದಲ್ಲಿ ಕಳೆದ 2 ವಾರಗಳಿಂದೀಚೆಗೆ ನಡೆದ ಉಗ್ರರ ದಾಳಿಗೆ 6 ಮಂದಿ ಟ್ರಕ್ ಚಾಲಕರು ಬಲಿಯಾಗಿದ್ದಾರೆ. ಬಲಿಯಾದವರೆಲ್ಲರೂ ಕಾಶ್ಮೀರೇತರರು ಎಂದು ತಿಳಿದು ಬಂದಿದೆ. ದಕ್ಷಿಣ ಕಾಶ್ಮೀರದಲ್ಲಿ ಕಳೆದೆರಡು ವಾರಗಳಿಂದ ಕಾಶ್ಮೀರೇತರರನ್ನೇ ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಹಿಂದಿನ ದಿನ ಹೊರ ರಾಜ್ಯಗಳ ಟ್ರಕ್ ಚಾಲಕರನ್ನು ಶೋಫಿಯಾನ್ ನಗರದಿಂದ ಹೊರ ಕಳಿಸಲು ಮುಂದಾಗಿದ್ದರು. ಮರುದಿನವೇ ಮತ್ತೊಂದು ದಾಳಿ ನಡೆಯಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2019: ವಾಷಿಂಗ್ಟನ್: ಸಿರಿಯಾದಲ್ಲಿ ಅಮೆರಿಕ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಐಸಿಸ್ ಮುಖ್ಯಸ್ಥ ಅಬು ಬಕರ್ ಅಲ್-ಬಾಗ್ದಾದಿ ಹೆದರಿ ಮಕ್ಕಳೊಂದಿಗೆ ಓಡಿ ಸುರಂಗ ಸೇರಿಕೊಂಡು ಅಳುತ್ತಾ ರಣಹೇಡಿಯಂತೆ ಸ್ವತಃ ಸ್ಫೋಟಿಸಿಕೊಂಡು ನಾಯಿಯಂತೆ ಸಾವನ್ನಪ್ಪಿದ್ದಾನೆ ಎಂದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಟಿಸಿದರು. ಶ್ವೇತಭವನದಲ್ಲಿ
ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್, “ನಾವು ದಾಳಿಗೆ ಮುಂದಾದಾಗ ಬಾಗ್ದಾದಿ ಆತ್ಮಹತ್ಯೆ ಮಾಡಿಕೊಂಡಿದ್ದ. ಬೆದರಿ ಮೂವರು ಮಕ್ಕಳೊಂದಿಗೆ ಓಡುತ್ತಾ ಸುರಂಗದೊಳಗೆ ನುಸುಳಿದ್ದ ಆತ ಜೋರಾಗಿ ಅಳುತ್ತಾ
ಕಿರಿಚಾಡುತ್ತಿದ್ದ. ಆತನ
ಆರೋಗ್ಯ ತುಂಬಾ ಹದಗೆಟ್ಟಿತ್ತು. ಈಗ ಆತ ಮೃತನಾಗಿದ್ದಾನೆ.
ನಮ್ಮ ದಾಳಿಯಲ್ಲಿ ಸಾಕಷ್ಟು ಐಸಿಸ್ ಉಗ್ರರು ಸಾವನ್ನಪಿದ್ದು, ವಿಶ್ವ ಈಗ ಮತ್ತಷ್ಟು ಸುರಕ್ಷಿತವಾಗಿದೆ,”
ಎಂದು ಹೇಳಿದರು. ‘ದೊಡ್ಡ ಬೆಳವಣಿಗೆಯೊಂದು ಈಗಷ್ಟೇ ನಡೆದಿದೆ’ ಎಂದು
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಕ್ಟೋಬರ್ ೨೬ರ ಶನಿವಾರ ರಾತಿ ಟ್ವೀಟ್ ಮಾಡಿದ್ದರು. ಇದು ಭಾರೀ ಕುತೂಹಲ ಮೂಡಿಸಿತ್ತು. ಬಾಗ್ದಾದಿ ಮೃತನಾದ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದರು
ಎಂದು ಭಾವಿಸಲಾಗಿತ್ತು. ಬಾಗ್ದಾದಿ
ಐಸಿಸ್ ಉಗ್ರ ಸಂಘಟನೆಯ ನಾಯಕ. ೨೦೧೪ರಿಂದ ಬಾಗ್ದಾದಿ ಭೂಗತನಾಗಿದ್ದ. ಏಪ್ರಿಲ್ ತಿಂಗಳಲ್ಲಿ ಐಸಿಸ್ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿತ್ತು. ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ವ್ಯಕ್ತಿ ಬಾಗ್ದಾದಿ ಎಂದು ಹೇಳಲಾಗಿತ್ತು. ಮೇ ೨೦೧೭ರಲ್ಲಿ ಅಮೆರಿಕ
ನಡೆಸಿದ ವಾಯು ದಾಳಿಯಲ್ಲಿ ಬಾಗ್ದಾದಿ ಗಾಯಗೊಂಡಿದ್ದ ಎಂದು ೨೦೧೮ರ ಫೆಬ್ರವರಿಯಲ್ಲಿ ಅಮೆರಿಕ ಸೇನೆ ಹೇಳಿತ್ತು. ಈತ ೨೦೧೦ರಲ್ಲಿ ಐಸಿಸ್
ನೇತೃತ್ವವನ್ನು ವಹಿಸಿಕೊಂಡಿದ್ದ. ಈಗ ಅಮೆರಿಕ ನಡೆಸಿದ
ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದ್ದಾನೆ ಹೇಳಲಾಗಿತ್ತು. ಇರಾಕ್ ಮತ್ತು ಸಿರಿಯಾದಲ್ಲಿ
ನೂರಾರು ವ್ಯಕ್ತಿಗಳನ್ನು ಶಿರಚ್ಛೇದದ ಮೂಲಕ ಕೊಲ್ಲಿಸಿ, ಇರಾಕಿನ ಬಹುಭಾಗದ ಮೇಲೆ ಸ್ವಾಮ್ಯ ಹೊಂದಿದ್ದ ಬಾಗ್ದಾದಿ ವಿಶ್ವದ ’ಮೋಸ್ಟ್ ವಾಂಟೆಡ್’ ಉಗ್ರನಾಗಿದ್ದ. ಆತನ ವಿರುದ್ಧ ಅಮೆರಿಕ ಇದೀಗ ಅಲ್ಖೈದಾ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ವಿರುದ್ಧ ನಡೆಸಿದ ಮಾದರಿಯಲ್ಲೇ ಕಾರ್ಯಾಚರಣೆ ನಡೆಸಿ ಆತನನ್ನು ಬಲಿ ಪಡೆಯಿತು. ಬಾಗ್ದಾದಿಯನ್ನು ಸೆರೆ ಹಿಡಿಯಲು ಅಥವಾ ಕೊಲ್ಲಲು ಅಮೆರಿಕ ಸೇನೆ ಹಲವು ತಿಂಗಳುಗಳಿಂದ ಸಿದ್ಧತೆಗಳನ್ನು ನಡೆಸಿತ್ತು ಎನ್ನಲಾಗಿದ್ದು, ಸೆರೆ ಸಿಕ್ಕಿದ್ದ ಆತನ ಆಪ್ತನಿಂದನೇ ಆತನ ಆತನ ಅಡಗುದಾಣವನ್ನು ಪತ್ತೆ ಹಚ್ಚಲಾಗಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2019: ಚಂಡೀಗಡ: ಹರಿಯಾಣ ಸರ್ಕಾರದ ಮುಖ್ಯಮಂತ್ರಿಯಾಗಿ ಮನೋಹರ್ ಲಾಲ್ ಖಟ್ಟರ್ ಅವರು 2019 ಅಕ್ಟೋಬರ್
28ರ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರು. ಅವರೊಂದಿಗೆ ಮಿತ್ರ ಪಕ್ಷವಾದ ಜೆಜೆಪಿ ಮುಖ್ಯಸ್ಥ ದುಷ್ಯಂತ್ ಚೌಟಾಲ ಅವರು ಉಪ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.
ಮನೋಹರ್ ಲಾಲ್ ಖಟ್ಟರ್ ಅವರು ಹರಿಯಾಣದಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾದರು. ಅವರು ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ
ಮುಖ್ಯಮಂತ್ರಿ ಆಗಿದ್ದರು. ಸದ್ಯ ಬಿಜೆಪಿ ಮತ್ತು ಜೆಜೆಪಿ ಮೈತ್ರಿ ಸರ್ಕಾರದಲ್ಲಿಯೂ ಅವರೇ ಮುಖ್ಯಮಂತ್ರಿ
ಆದರು. ರಾಜ್ಯಪಾಲ ಸತ್ಯದೇವ್ ನಾರಾಯಣ್ ಆರ್ಯ ಅವರು ಇಬ್ಬರಿಗೂ ಪ್ರತಿಜ್ಙಾವಿಧಿ ಬೋಧಿಸಿದರು.
ದುಷ್ಯಂತ್ ಚೌಟಾಲಾ ಅವರು ಉಪ ಮುಖ್ಯಮಂತ್ರಿಯಾದ ಕುರಿತು ಮಾತನಾಡಿರುವ ಅವರ ತಂದೆ ಅಜಯ್ ಚೌಟಾಲಾ, ‘ ಒಬ್ಬ ತಂದೆಗೆ ಖುಷಿ ಕೊಡುವಂಥ ಸನ್ನಿವೇಶ ಇದಕ್ಕಿಂತಲೂ ಮಿಗಿಲಾದದ್ದು ಯಾವುದಾದರೂ ಇದೆಯೇ? ಇದಕ್ಕಿಂತಲೂ ಹೆಚ್ಚು ಸಂತೋಷ ಕೊಡುವ ದೀಪಾವಳಿ ನನಗೆ ಇನ್ನೊಂದಿಲ್ಲ. ಈ ಸರ್ಕಾರ ಐದು ವರ್ಷ ಸದೃಢವಾಗಿ ನಡೆಯುತ್ತದೆ. ಹರಿಯಾಣದ ಅಭಿವೃದ್ಧಿಗೆ ದುಡಿಯಲಿದೆ,’ ಎಂದು ಹೇಳಿದರು.
No comments:
Post a Comment