ನಾನು ಮೆಚ್ಚಿದ ವಾಟ್ಸಪ್

Friday, October 18, 2019

ಇಂದಿನ ಇತಿಹಾಸ History Today ಅಕ್ಟೋಬರ್ 18

2019: ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೋಯಿ ಅವರು ತಮ್ಮ ಉತ್ತರಾಧಿಕಾರಿಯಾಗಿ ನ್ಯಾಯಮೂರ್ತಿ ಶರದ್ ಅರವಿಂದ ಬೋಬ್ಡೆ ಅವರ ಹೆಸರನ್ನು ಶಿಫಾರಸು ಮಾಡಿದರು. 2018 ಅಕ್ಟೋಬರ್ 3ರಂದು ದೇಶದ 46ನೇ ಮುಖ್ಯನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡಿದ್ದ ನ್ಯಾಯಮೂರ್ತಿ  ರಂಜನ್ ಗೊಗೋಯಿ ನವೆಂಬರ್17ರಂದು ನಿವೃತ್ತಿ ಹೊಂದಲಿದ್ದಾರೆ. ಹಿನ್ನೆಲೆಯಲ್ಲಿ ಅವರು ಮುಂದಿನ ನ್ಯಾಯಮೂರ್ತಿಯ ಹೆಸರನ್ನು ಶಿಫಾರಸು ಮಾಡಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ ಎಂದು ಸುದ್ದಿ ಮೂಲಗಳು 2019 ಅಕ್ಟೋಬರ್ 18ರ ಶುಕ್ರವಾರ ತಿಳಿಸಿದವು. ಸುಪ್ರೀಂಕೋರ್ಟ್ ನಿಂದ ನಿವೃತ್ತಿಯಾಗಲಿರುವ  ಪ್ರತಿಯೊಬ್ಬ ಸಿಜೆಐ ಕೂಡಾ ಇದೇ  ಸಂಪ್ರದಾಯವನ್ನು  ಅನುಸರಿಸುತ್ತಾರೆ. ತಮ್ಮ ನಂತರ ಮುಂದಿನ ಸಿಜೆಐ ಯಾರಾಗಬೇಕು ಎಂಬ ಬಗ್ಗೆ ಕೇಂದ್ರಕ್ಕೆ ಶಿಫಾರಸು ಮಾಡುವುದು ರೂಢಿ. ಸಿಜೆಐ ರಂಜನ್ ಗೋಗೊಯಿ ನಂತರ ಸುಪ್ರೀಂಕೋರ್ಟ್ ನಲ್ಲಿ ಎರಡನೇ ಹಿರಿಯ  ನ್ಯಾಯಮೂರ್ತಿ ಆಗಿದ್ದಾರೆ ನ್ಯಾಯಮೂರ್ತಿ ಎಸ್..ಬೋಬ್ಡೆ.  ಅವರ ಹಿರಿತನದ ಆಧಾರದ ಮೇಲೆ ಮುಂದಿನ ನೂತನ ಸಿಜೆಐ ಆಗಿ ನೇಮಕ ಮಾಡುವಂತೆ ಗೋಗೋಯಿ ಅವರು ಕಾನೂನು ಸಚಿವಾಲಯಕ್ಕೆ ಶಿಫಾರಸು ಪತ್ರ ಬರೆದಿದ್ದಾರೆ. ಹಾಲಿ ಸಿಜೆಐ ಶಿಫಾರಸು ಮಾಡಿದವರನ್ನೇ ಸಾಮಾನ್ಯವಾಗಿ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಪರಿಗಣಿಸುವ ಸಾಧ್ಯತೆ  ಇದೆ. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2019: ನವದೆಹಲಿ: ಅಯೋಧ್ಯೆಯ ವಿವಾದಿತ ಭೂ ಪ್ರದೇಶದ ಒಡೆತನವನ್ನು ಹಿಂದೂ ಸಂಘಟನೆಗಳಿಗೆ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎಂದು ಸುನ್ನಿ ವಕ್ಫ್ ಮಂಡಳಿ ಹೊರತುಪಡಿಸಿ ಇತರ ಮುಸ್ಲಿಮ್  ಕಕ್ಷಿದಾರರು 2019 ಅಕ್ಟೋಬರ್ 18ರ ಶುಕ್ರವಾರ ಸ್ಪಷ್ಟ ಪಡಿಸಿದರು.  ಸುನ್ನಿ ವಕ್ಫ್ ಮಂಡಳಿಯು ಸಂಧಾನ ಸಮಿತಿ ಮೂಲಕ ವಿವಾದಿತ ಸ್ಥಳದ ಮೇಲಿನ ಹಕ್ಕು ಪ್ರತಿಪಾದನೆಯಿಂದ ಹಿಂದೆ ಸರಿಯುವ ಪ್ರಸ್ತಾಪವನ್ನು  ಸಲ್ಲಿಸಿದೆ ಎಂಬ ವರದಿಗಳ ಬೆನ್ನಲ್ಲೇ ಮುಸ್ಲಿಮ್ ಕಕ್ಷಿದಾರರ ಪರ ವಾದಿಸುತ್ತಿರುವ ವಕೀಲ ಇಜಾಜ್ ಮಕ್ಬೂಲ್ ಸ್ಪಷ್ಟೀಕರಣ ನೀಡಿದರು. ‘ಸುನ್ನಿ ವಕ್ಫ್ ಮಂಡಳಿ ಪ್ರಸ್ತಾವ ಮಂಡಿಸಿರಬಹುದು, ನಾವಂತೂ ಸಂಧಾನ ಸಮಿತಿ ಮುಂದೆ ಇಂತಹ ಯಾವುದೇ ಪ್ರಸ್ತಾವ ಇರಿಸಿಲ್ಲ. ವಿವಾದ ನ್ಯಾಯಾಲಯದಲ್ಲಿಯೇ ಇತ್ಯರ್ಥವಾಗಲಿ ಎಂಬುದು ನಮ್ಮ ಸ್ಪಷ್ಟ ನಿಲುವು’ ಎಂದೂ ಇಜಾಜ್ ತಿಳಿಸಿದರು.  ಸಂಧಾನ ಸಮಿತಿಯ ಮುಂದೆ ಅಯೋಧ್ಯೆ ವಿವಾದವನ್ನು ಸೌಹಾರ್ದಯುತವಾಗಿ ಪರಿಹರಿಸುವ ನಿಟ್ಟಿನಲ್ಲಿ ನಮ್ಮ ನಿಲುವುಗಳನ್ನು ಸಲ್ಲಿಸಲಾಗಿದೆ. ವಿವಾದಿತ ಸ್ಥಳದ ಮೇಲಿನ ಹಕ್ಕು ಪ್ರತಿಪಾದನೆಯಿಂದ ಸುನ್ನಿ ವಕ್ಫ್ ಬೋರ್ಡ್ ಹಿಂದೆ ಸರಿಯಲು ನಾಲ್ಕು ಷರತ್ತುಗಳನ್ನು ಮುಂದಿಟ್ಟಿದೆ ಎಂಬ ವರದಿಗಳು ನಮಗೆ ಅಚ್ಚರಿ ತರಿಸಿವೆ. ಪ್ರಸ್ತಾವನೆಯನ್ನು ಸುನ್ನಿ ವಕ್ಫ್ ಬೋರ್ಡ್ ಬಿಟ್ಟರೆ ಬೇರೆಲ್ಲಾ ಮುಸ್ಲಿಮ್ ಕಕ್ಷಿದಾರರು ವಿರೋಧಿಸಿದ್ದಾರೆ ಎಂದೂ ವಕೀಲ ಇಜಾಜ್ ಮಕ್ಬೂಲ್ ಹೇಳಿದರು. . (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)

2019: ಚೆನ್ನೈ: ಸ್ವಯಂ ಘೋಷಿತದೇವಮಾನವಕಲ್ಕಿ ಭಗವಾನ್‌‌  ಅವರಿಗೆ ಸೇರಿದ ಆಂಧ್ರ ಪ್ರದೇಶದ ವರದೈಪಾಲಂ, ಚೆನ್ನೈ, ಹೈದರಾಬಾದ್ ಮತ್ತು ಬೆಂಗಳೂರಿನ ಅಧ್ಯಾತ್ಮ ಮತ್ತು ವೇದಾಂತ ಬೋಧನೆ ಹಾಗೂ ತರಬೇತಿ ಕೇಂದ್ರಗಳ ಮೇಲೆ ಆದಾಯ ತೆರಿಗೆ ಇಲಾಖೆ 2019 ಅಕ್ಟೋಬರ್ 18 ಶುಕ್ರವಾರ ದಾಳಿ ನಡೆಸಿತು. ಅಕ್ಟೋಬರ್ 16 ಬುಧವಾರವೇ ದಾಳಿ ಆರಂಭವಾಗಿದ್ದು ಚೆನ್ನೈ, ಹೈದರಾಬಾದ್, ಬೆಂಗಳೂರು ಮತ್ತು ವರದೈಪಾಲಂನಲ್ಲಿರುವ 40 ಪ್ರಮುಖ ಪ್ರದೇಶಗಳಲ್ಲಿ ದಾಳಿ ಮುಂದುವರೆಯಿತು. ಕಲ್ಕಿ ಭಗವಾನ್‌‌ ಮತ್ತು ಅವರ ಮಗ ಕೃಷ್ಣ ಅವರ ಮಾಲೀಕತ್ವದ ಸ್ಥಳಗಳ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇದುವರೆಗೆ ರೂ.  43.9 ಕೋಟಿ ನಗದು ಹಾಗೂ ಡಾಲರ್ ರೂಪದಲ್ಲಿದ್ದ 18 ಕೋಟಿ ಮತ್ತು ರೂ 26 ಕೋಟಿ ಮೌಲ್ಯದ 88 ಕೆ.ಜಿ. ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ ಎಂದು ಸುದ್ದಿ ಮೂಲಗಳು ತಿಳಿಸಿದವು. ಕೋಟ್ಯಂತರ ರೂಪಾಯಿ ತೆರಿಗೆ ವಂಚಿಸಲಾಗಿದೆ ಎನ್ನುವ ಖಚಿತ ಮಾಹಿತಿ ಪಡೆದು ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿನ ಆಶ್ರಮಗಳು ಸೇರಿದಂತೆ 40ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ನಡೆಸಲಾಗಿತ್ತು. ಸ್ಥಳಗಳಲ್ಲಿ ವಶಪಡಿಸಿ ಕೊಳ್ಳಲಾದ  ದಾಖಲೆಗಳ ಅನ್ವಯ ಸುಮಾರು ರೂ.500 ಕೋಟಿ ತೆರಿಗೆಯನ್ನು ವಂಚಿಸಿರುವುದು ಪತ್ತೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಮೂಲಗಳು ತಿಳಿಸಿದವು. . (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)

2019: ನವದೆಹಲಿ:  ಐಎನ್ಎಕ್ಸ್ ಮೀಡಿಯಾ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಬಿಐ ಹೊಸ ಆರೋಪ ಪಟ್ಟಿ ದಾಖಲಿಸಿತು. ರೋಸ್ ಅವೆನ್ಯೂ ಕೋರ್ಟ್ನಲ್ಲಿ ಸಲ್ಲಿಸಲಾಗಿರುವ ಚಾರ್ಜ್ಶೀಟ್ನಲ್ಲಿ ಪಿ. ಚಿದಂಬರಮ್ ಅವರ ಹೆಸರನ್ನು ಸೇರಿಸಲಾಯಿತು. ಇದರೊಂದಿಗೆ ಪ್ರಕರಣದಲ್ಲಿ ಚಿದಂಬರಮ್ ಅವರು ಅಧಿಕೃತವಾಗಿ ಆರೋಪಿಯಾಗಲಿದ್ದಾರೆ. 71 ವರ್ಷದ ಪಿ. ಚಿದಂಬರಮ್, ಅವರ ಮಗ ಕಾರ್ತಿ ಚಿದಂಬರಮ್, ಐಎನ್​​ಎಕ್ಸ್ ಮೀಡಿಯಾ ಮಾಲೀಕರಾದ ಪೀಟರ್ ಮುಖರ್ಜಿಯಾ  ಮತ್ತು ಇಂದ್ರಾಣಿ ಮುಖರ್ಜಿಯಾ ಸೇರಿದಂತೆ ಒಟ್ಟು 14 ಮಂದಿಯನ್ನು ಆರೋಪಿಗಳೆಂದು ಚಾರ್ಜ್ಶೀಟ್ನಲ್ಲಿ ತಿಳಿಸಲಾಯಿತು.


No comments:

Post a Comment