2019: ಮುಂಬೈ: ಕುಂಠಿತಗೊಂಡಿರುವ
ಭಾರತದ ಆರ್ಥಿಕತೆಗೆ ಬಲ ತುಂಬಲು ಭಾರತೀಯ
ರಿಸರ್ವ್ ಬ್ಯಾಂಕ್ (ಆರ್ಬಿಐ) 2019 ಅಕ್ಟೋಬರ್ 4ರ ಶುಕ್ರವಾರ ಈ ವರ್ಷದಲ್ಲಿ ಸತತ
ಐದನೇ ಬಾರಿಗೆ ಬ್ಯಾಂಕ್ ಬಡ್ಡಿದರಗಳನ್ನು ಇಳಿಸುವುದರ ಜೊತೆಗೆ ೨೦೧೯-೨೦ರ ಹಣಕಾಸು
ವರ್ಷದ ಸಮಗ್ರ ಆಂತರಿಕ ಉತ್ಪನ್ನ (ಜಿಡಿಪಿ) ಗುರಿಯನ್ನು ಶೇಕಡಾ ೬.೯ರಿಂದ ಶೇಕಡಾ
೬.೧ಕ್ಕೆ ಇಳಿಸಿತು. ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇತೃತ್ವದ ೬ ಸದಸ್ಯರ ಹಣಕಾಸು
ನೀತಿ ಸಮಿತಿಯು (ಎಂಪಿಸಿ) ರೆಪೋ ದರವನ್ನು ೨೫ ಮೂಲ ಆಂಶಗಳಷ್ಟು
ಅಂದರೆ ಶೇಕಡಾ ೫.೧೫ಕ್ಕೆ ಇಳಿಸುವ
ಸರ್ವಾನುಮತದ ತೀರ್ಮಾನ ಕೈಗೊಂಡಿತು. ರಿವರ್ಸ್ ರೆಪೋ ದರವನ್ನು ಶೇಕಡಾ ೪.೯ಕ್ಕೆ ಇಳಿಸಲಾಯಿತು.
ಶಕ್ತಿಕಾಂತ ದಾಸ್ ನೇತೃತ್ವದ ಹಣಕಾಸು ನೀತಿ ಸಮಿತಿಯು ಬಡ್ಡಿ ದರಗಳನ್ನು ಇಳಿಸಿದ್ದು ಇದು ಸತತ ೫ನೇ ಸಲವಾಗಿದ್ದು, ಇದು ಆರ್ಬಿಐ ಪ್ರಸ್ತುತ ವರ್ಷಕ್ಕಾಗಿ ಈವರೆಗೆ ಪ್ರಕಟಿಸಿರುವ ೧೧೦ ಸಂಚಿತ ಅಥವಾ ಒಟ್ಟುಗೂಡಿದ (ಕ್ಯುಮುಲೇಟಿವ್) ಮೂಲ ಅಂಶಗಳಿಗೆ ಹೊಸ ಸೇರ್ಪಡೆಯಾಗಿದೆ. ಪರಿಣಾಮವಾಗಿ ರೆಪೋ ದರವು ಈಗ ೨೦೧೦ರ ಮಾರ್ಚ್ನಿಂದೀಚೆಗೆ ಅತ್ಯಂತ ಕನಿಷ್ಠ ಪ್ರಮಾಣಕ್ಕೆ ಇಳಿಯಿತು.ಹಣದುಬ್ಬರ ನಿರೀಕ್ಷೆಗಳ ಹಿನ್ನೆಲೆಯಲ್ಲಿ ನಿರೀಕ್ಷಿಸಿದ್ದಂತೆಯೇ ರಿಸರ್ವ್ ಬ್ಯಾಂಕ್ ಬಡ್ಡಿ ದರಗಳನ್ನು ಇಳಿಸಿದೆ. ಕುಂಟುತ್ತಿರವ ಆರ್ಥಿಕತೆಗೆ ಮರುಚೇತನ ನೀಡುವ ಸಲುವಾಗಿ ನೀತಿ ನಿರೂಪಕರು ಒತ್ತು ನೀಡಬಹುದು ಎಂಬ ನಿರೀಕ್ಷೆಯ ಮಧ್ಯೆ ರಿಸರ್ವ್ ಬ್ಯಾಂಕ್ ಈ ಕ್ರಮ ಕೈಗೊಂಡಿದೆ.
ಬೆಳವಣಿಗೆಗೆ ಪುನಶ್ಚೇತನ ಸಾಧ್ಯವಾವುಗುದರ ಜೊತೆಗೆ ಹಣದುಬ್ಬರವು ಮಿತಿಯ ಒಳಗೆ ಉಳಿಯಲು ಎಷ್ಟು ಸಮಯ ಬೇಕಾಗುತ್ತದೋ ಅಷ್ಟು ಸಮಯದವರೆಗೂ ಇಂತಹ ನಿಲುವನ್ನು ಮುಂದುವರೆಸುವುದಾಗಿ ಹಣಕಾಸು ನೀತಿ ಸಮಿತಿಯು ಹೇಳಿತು. ತನ್ನ ಹಿಂದಿನ ಸಭೆಯಲ್ಲಿ ಹಣಕಾಸು ನೀತಿ ಸಮಿತಿಯು, ಬೇಡಿಕೆಗೆ ಒತ್ತು ಸಿಗುವಂತೆ ಮಾಡಲು ಮಾನದಂಡ ಸಾಲದರವನ್ನು (ರೆಪೋ ದರ) ೩೫
ಮೂಲ ಅಂಶದಷ್ಟು ಅಂದರೆ ಶೇಕಡಾ ೫.೪೦ರಷ್ಟಕ್ಕೆ ಏರಿಸಿತ್ತು.
ಆದರೆ ಈ ಕ್ರಮಗಳು ಈವರೆಗೂ
ಉದ್ದೇಶಿತ ಪರಿಣಾಮವನ್ನು ಬೀರುವಲ್ಲಿ ವಿಫಲವಾಗಿದ್ದವು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2019: ನವದೆಹಲಿ: ಭಾರತದ ವಿರುದ್ಧ ಜಿಹಾದ್ ನಡೆಸುವಂತೆ ಮತ್ತು ಗಡಿ
ನಿಯಂತ್ರಣ ರೇಖೆಯನ್ನು ದಾಟಿ ಭಾರತದತ್ತ ಸಾಗುವಂತೆ ಜನರಿಗೆ ಕರೆಕೊಟ್ಟ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ’ತಾವು ಹೊಂದಿದ ಹುದ್ದೆಗೆ ಸೂಕ್ತವಾದ ಮಾತುಗಳನ್ನು ಆಡಿಲ್ಲ’ ಎಂಬುದಾಗಿ ಹೇಳುವ ಮೂಲಕ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ 2019 ಅಕ್ಟೋಬರ್ 04ರ ಶುಕ್ರವಾರ
ಪ್ರಬಲ ಎದಿರೇಟು ನೀಡಿತು. ಪಾಕ್
ಆಕ್ರಮಿತ ಕಾಶ್ಮೀರದ ಮುಜಾಫ್ಫರಾಬಾದಿನಲ್ಲಿ 2019 ಸೆಪ್ಟೆಂಬರ್ ೧೩ರಂದು ಭಾಷಣ ಮಾಡಿದ್ದ ಇಮ್ರಾನ್ ಖಾನ್ ತನ್ನ ಕರೆಯ ಮೇರೆಗೆ ಭಾರತದ ಗಡಿ ನಿಯಂತ್ರಣ ರೇಖೆಯತ್ತ ಸಾಗಲು ಸಜ್ಜಾಗಿರುವಂತೆ ಜನರಿಗೆ ಕರೆ ಕೊಟ್ಟಿದ್ದರು. ‘ನಾನು ಹೇಳುವವರೆಗೆ ಗಡಿ ನಿಯಂತ್ರಣ ರೇಖೆಯ ಕಡೆಗೆ ಹೋಗಬೇಡಿ. ನೀವು ಯಾವಾಗ ಹೋಗಬಹುದು ಎಂದು ನಾನು ಹೇಳುತ್ತೇನೆ. ಈಗ ನೀವು ಹೋಗಬಾರದು’ ಎಂದು ಖಾನ್
ಸಾರ್ವಜನಿಕ ಸಭೆಯೊಂದನ್ನು
ಉದ್ದೇಶಿಸಿ ಮಾತನಾಡುತ್ತಾ ಕರೆ ಕೊಟ್ಟಿದ್ದರು.’ ‘ಇಂತಹ
ಬೇಜವಾಬ್ದಾರಿ ಮತ್ತು ಪ್ರಚೋದನಕಾರಿ ಮಾತುಗಳನ್ನು ಕಟು ಪದಗಳಿಂದ ನಾವು ಖಂಡಿಸುತ್ತೇವೆ. ಅವರಿಗೆ ಅಂತಾರಾಷ್ಟ್ರೀಯ ಬಾಂಧವ್ಯಗಳು ಹೇಗಿರುತ್ತವೆ, ಮತ್ತು ಹೇಗೆ ಕೆಲಸ ಮಾಡುತ್ತವೆ ಎಂಬುದೇ ಗೊತ್ತಿಲ್ಲ. ಆದರೆ ಇದಕ್ಕಿಂತಲೂ ಹೆಚ್ಚು ಗಂಭೀರವಾದದ್ದು ಏನೆಂದರೆ ಭಾರತದ ವಿರುದ್ಧ ’ಜಿಹಾದ್’ ಯಾತ್ರೆ ನಡೆಸುವಂತೆ ಅವರು ಬಹಿರಂಗ ಕರೆ ಕೊಟ್ಟಿದ್ದು’ ಎಂದು
ವಿದೇಶಾಂಗ ವ್ಯವಹಾರಗಳ ವಕ್ತಾರ ರವೀಶ ಕುಮಾರ್ ಹೇಳಿದರು. ‘ಗಡಿ ದಾಟಲು ಜನರಿಗೆ ಅವರು ಕೊಟ್ಟ ಕರೆ ಇನ್ನೊಂದು ರಾಷ್ಟ್ರದ ಸಾರ್ವಭೌಮತ್ತ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಉಲ್ಲಂಘಿಸುತ್ತದೆ. ಇದು ಅವರು ಹೊಂದಿರುವ ಹುದ್ದೆಗೆ ಸೂಕ್ತವಾದ ಹೇಳಿಕೆಯಲ್ಲ’ ಎಂದು
ರವೀಶ ಕುಮಾರ್ ನುಡಿದರು. ಕಾಶ್ಮೀರ ವಿಷಯವನ್ನು ಅಂತಾರಾಷ್ಟ್ರೀಯ ವಿಷಯವನ್ನಾಗಿ ಮಾಡುವ ತಮ್ಮ ಯತ್ನಗಳ ಹಿನ್ಲೆಲೆಯಲ್ಲಿ ಪಾಕಿಸ್ತಾನಿ ಪ್ರಧಾನಿ ಮಾಡಿದ್ದ ಭಾಷಣದ ವಿರುದ್ಧ ವಿದೇಶಾಂಗ ಸಚಿವಾಲಯ ಈ ಕಠಿಣ ದಾಳಿ
ನಡೆಸಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2019: ಪಣಜಿ: ಆರ್ಥಿಕ ಸಮೃದ್ಧಿ, ಮೂಲಸವಲತ್ತು ವೃದ್ಧಿ ಮತ್ತು ಭದ್ರತೆಯ ಸಲುವಾಗಿ ಹಿಂದೂ ಮಹಾಸಾಗರ ವಲಯದ ರಾಷ್ಟ್ರಗಳ ಸಹಕಾರ ಸಾಧನೆಯ ಕಲ್ಪನೆಯನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು 2019 ಅಕ್ಟೋಬರ್ 04ರ ಶುಕ್ರವಾರ ಇಲ್ಲಿ ನಡೆದ
೧೦ ರಾಷ್ಟ್ರಗಳ ನೌಕಾ ಮುಖ್ಯಸ್ಥರ ಸಮ್ಮೇಳನದಲ್ಲಿ ಮುಂದಿಟ್ಟರು. ‘ಭಾರತವು ತನ್ನ ಸುತ್ತಮುತ್ತಣ ದೇಶಗಳ ಆರ್ಥಿಕ ಅಭಿವೃದ್ಧಿ ಮತ್ತು ರಕ್ಷಣೆಗೆ ನೆರವಾಗಲು ತನ್ನ ಗಾತ್ರ ಮತ್ತು ತಂತ್ರಜ್ಞಾನಗಳ ಸದ್ಭಳಕೆಯನ್ನು ಮಾಡಲು ಇಚ್ಛಿಸುತ್ತದೆ’ ಎಂದು
ಹಿಂದೂ ಮಹಾಸಾಗರ ವಲಯದ ರಾಷ್ಟ್ರಗಳ ೨ನೇ ಗೋವಾ ಕಡಲ ತಡಿಯ ರಾಷ್ಟ್ರಗಳ ನೌಕಾ ಮುಖ್ಯಸ್ಥರ ಸಮ್ಮೇಳನದಲ್ಲಿ ದೋವಲ್ ಹೇಳಿದರು. ಭಾರತೀಯ ನೌಕಾಪಡೆಯು ಈ ಸಮ್ಮೇಳನಕ್ಕೆ ಆತಿಥ್ಯ
ನೀಡಿತು. ತನ್ನ ಗಾತ್ರ ಮತ್ತು ಕೆಲವೊಂದು ಭೌಗೋಳಿಕ ಅನುಕೂಲಗಳನ್ನು ಭಾರತ ಹೊಂದಿದೆ. ಮತ್ತು ಸಮಾನ ಗುರಿ ಸಾಧನೆಗಾಗಿ ಕೆಲವೊಂದು ಕ್ರಮಗಳನ್ನು ಈಗಾಗಲೇ ಆರಂಭಿಸಿದೆ ಎಂದು ದೋವಲ್ ನುಡಿದರು. ಭಾರತಕ್ಕೆ ತಂತ್ರಜ್ಞಾನ ಮತ್ತು ಮೂಲ ಸವಲತ್ತುಗಳನ್ನು ನಿರ್ಮಿಸುವ ಶಕ್ತಿ ಇದೆ. ಪ್ರದೇಶದ ರಾಷ್ಟ್ರಗಳ ಅನುಕೂಲಕ್ಕಾಗಿ ಇದನ್ನು ಬಳಸಲು ನಾವು ಇಚ್ಛಿಸುತ್ತೇವೆ. ನೆರೆಯ ರಾಷ್ಟ್ರಗಳಿಗೆ ನಾವು ಈಗಾಗಲೇ ನೌಕಾಯಾನ ಎಚ್ಚರಿಕೆಗಳು ಮತ್ತು ಹೈಡ್ರೋಗ್ರಾಫಿಕ್ ಸರ್ವೆ ಅನುಕೂಲಗಳನ್ನು ಒದಗಿಸಿದ್ದೇವೆ ಎಂದು ದೋವಲ್ ಹೇಳಿದರು. ‘ನಮ್ಮ ನೆರೆ ಹೊರೆ ಮೊದಲು ನೀತಿಯಡಿಯಲ್ಲಿ ಇದು ನಮ್ಮ ಬದ್ಧತೆಯಾಗಿದೆ. ಭಯೋತ್ಪಾದನೆ, ಸಂಘಟಿತ ಅಪರಾಧ, ಮಾದಕ ದ್ರವ್ಯ, ಶಸ್ತ್ರಾಸ್ತ್ರ
ಕಳ್ಳ ಸಾಗಣೆ ವಿರುದ್ಧದ ಹೋರಾಟದಲ್ಲಿ ನಿಮ್ಮೆಲ್ಲರ ಜೊತೆಗೂ ಸಹಕರಿಸಲು ನಾವು ಬಯಸುತ್ತೇವೆ’ ಎಂದು
ದೋವಲ್ ನುಡಿದರು.
‘ಆದರೆ
ಭಾರತ ಹಲವು ಕ್ಷೇತ್ರಗಳಲ್ಲಿ ಹಿಂದುಳಿದೆ. ಈ ಕ್ಷೇತ್ರಗಳಲ್ಲಿ ಅಭಿವೃದ್ಧಿ
ಸಾಧಿಸಲು ಮತ್ತು ಬೆಳೆಯಲು ನಾವು ಬಯಸುತ್ತೇವೆ. ಆದರೆ ಈ ಮಾರ್ಗದಲ್ಲಿ ರಾಷ್ಟ್ರದ
ಅನುಕೂಲಗಳನ್ನು ಗರಿಷ್ಠಗೊಳಿಸುವುದು ಮಾತ್ರವಲ್ಲ ನಮ್ಮ ನೆರೆಹೊರೆಯ ರಾಷ್ಟ್ರಗಳಿಗೂ ಅವುಗಳಿಂದ ಹೆಚ್ಚಿನ ಅನುಕೂಲ ಆಗಬೇಕು ಎಂದು ಭಾರತ ಬಯಸುತ್ತದೆ’
ಎಂದು ಅವರು ಹೇಳಿದರು. ಏನಿದ್ದರೂ ಈ
ಯೋಜನೆ ಪರಸ್ಪರ ಸಹಕಾರಕ್ಕಾಗಿ ಮಾತ್ರ. ನೌಕಾ ಮೈತ್ರಿಕೂಟ ರಚನೆಗಾಗಿ ಅಲ್ಲ ಎಂದು ದೋವಲ್ ಸ್ಪಷ್ಟ ಪಡಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2019: ಮುಂಬೈ: ಪಂಜಾಬ್ ಮತ್ತು ಮಹಾರಾಷ್ಟ್ರ ಬ್ಯಾಂಕಿನಿಂದ (ಪಿಎಂಸಿ) ಅಮಾನತುಗೊಂಡಿರುವ ವ್ಯವಸ್ಥಾಪಕ ನಿರ್ದೇಶಕ (ಎಂಡಿ)
ಜೋಯ್ ಥಾಮಸ್ ಅವರನ್ನು ೬,೫೦೦ ಕೋಟಿ
ರೂಪಾಯಿ ವಂಚನೆ ಆರೋಪದಲ್ಲಿ 2019 ಅಕ್ಟೋಬರ್ 04ರ ಶುಕ್ರವಾರ ಬಂಧಿಸಲಾಗಿದೆ ಎಂದು ಮುಂಬೈಯ ಆರ್ಥಿಕ ಅಪರಾಧ ದಳ ತಿಳಿಸಿತು. ಪಿಎಂಸಿ ಮಂಡಳಿಯ ಮಾಜಿ ಸದಸ್ಯ
ಮತ್ತು ಎಚ್‌ಡಿಐಎಲ್‌ನ ಹಿರಿಯ ಕಾರ್ಯನಿರ್ವಾಹಕ
ಅಧಿಕಾರಿ ವಿರುದ್ಧ ಅಕ್ರಮ ಹಣ ವರ್ಗಾವಣೆ ಆರೋಪದಡಿಯಲ್ಲಿ
ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿತ್ತು. ಮುಂಬೈ ಮತ್ತು ಸುತ್ತಮುತ್ತಣ ಪ್ರದೇಶಗಳಲ್ಲಿ ಎಚ್‌ಡಿಐಎಲ್‌ನ ಪ್ರವರ್ತಕರು ಮತ್ತು
ಬ್ಯಾಂಕಿನ ಮಾಜಿ ಅಧ್ಯಕ್ಷರಿಗೆ ಸಂಪರ್ಕವಿರುವ ೬ ಸ್ಥಳಗಳಲ್ಲಿ ಜಾರಿ
ನಿರ್ದೇಶನಾಲಯ ಶೋಧ
ನಡೆಸಿತು. ಎಚ್‌ಡಿಐಎಲ್‌ನ ಹಿರಿಯ ಕಾರ್ಯ
ನಿರ್ವಾಹಕರಾದ ರಾಕೇಶ್
ವಧವಾನ್ ಮತ್ತು ಸಾರಂಗ್ ವಧವಾನ್ ಅವರನ್ನು ಪೊಲೀಸರು ಅಕ್ಟೋಬರ್ ೯ರ ವರೆಗೆ ಬಂಧನದಲ್ಲಿರಿಸಿದ್ದರು.
ದಿವಾಳಿಯಾಗಿರುವ ಎಚ್ಡಿಐಎಲ್ಗೆ ಪಿಎಂಸಿ ಬ್ಯಾಂಕ್
ಶೇ. ೭೫ ರಷ್ಟು ಸಾಲವನ್ನು
ನೀಡಿತ್ತು. ಎಚ್ಡಿಐಎಲ್ ಪ್ರವರ್ತಕರು ಸಾಲ ಪಡೆಯುವುದಕ್ಕಾಗಿ ೨೧,೦೦೦ ನಕಲಿ ಖಾತೆಗಳನ್ನು ಸೃಷ್ಟಿಸಿದ್ದರು ಎಂಬ ಆರೋಪವಿತ್ತು. (ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)
ಇಂದಿನ ಇತಿಹಾಸ History Today ಅಕ್ಟೋಬರ್ 04
(2018+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment