ನಾನು ಮೆಚ್ಚಿದ ವಾಟ್ಸಪ್

Tuesday, October 8, 2019

ಇಂದಿನ ಇತಿಹಾಸ History Today ಅಕ್ಟೋಬರ್ 08

2019: ಪ್ಯಾರಿಸ್:  ದೇಶದ ವಾಯುಪಡೆಗೆ ವಿಶೇಷ ಬಲ ತುಂಬಲಿರುವ ಅತ್ಯಾಧುನಿಕ ಮಾದರಿಯ ರಫೇಲ್ ಯುದ್ಧವಿಮಾನವನ್ನು ಭಾರತಕ್ಕೆ ಹಸ್ತಾಂತರಿಸುವ ಔಪಚಾರಿಕ ಪ್ರಕ್ರಿಯೆ ಫ್ರಾನ್ಸಿನ  ಮೆರಿಗ್ನ್ಯಾಕ್ ನಲ್ಲಿ  2019 ಅಕ್ಟೋಬರ್ 08ರ ಮಂಗಳವಾರ ಯಶಸ್ವಿಯಾಗಿ ನೆರವೇರಿತುಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ರಫೇಲ್ ಡಸಾಲ್ಟ್ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಎರಿಕ್ ಟ್ರ್ಯಾಪಿಯರ್ ಅವರು ಮೊದಲ ರಫೇಲ್ ಯುದ್ಧ ವಿಮಾನವನ್ನು ಅಧಿಕೃತವಾಗಿ ಹಸ್ತಾಂತರಿಸಿದರುಪ್ರಥಮ ರಫೇಲ್ ವಿಮಾನವನ್ನು ಸ್ವೀಕರಿಸಿದ ಬಳಿಕ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಯುದ್ಧ ವಿಮಾನಕ್ಕೆ ಆಯುಧ ಪೂಜೆಯನ್ನು ನೆರವೇರಿಸಿದರು. ವಿಮಾನದ ಎದುರು ಭಾಗದಲ್ಲಿಓಂಎಂದು ಕುಂಕುಮದಲ್ಲಿ ಬರೆದ ಸಿಂಗ್ ಬಳಿಕ ವಿಮಾನದ ಚಕ್ರಗಳಿಗೆ ಲಿಂಬೆ ಹಣ್ಣನ್ನು ಮತ್ತು ವಿಮಾನದ  ಮುಂಭಾಗದಲ್ಲಿ ತೆಂಗಿನ ಕಾಯಿಯನ್ನು ಇರಿಸಿ ಸಾಂಪ್ರದಾಯಿಕ ರೀತಿಯಲ್ಲೇ ಆಯುಧ ಪೂಜೆಯನ್ನು ನೆರವೇರಿಸಿದರು.  ಬಳಿಕ ರಾಜನಾಥ್ ಸಿಂಗ್ ಅವರು ರಫೇಲ್ ಯುದ್ಧ ವಿಮಾನವನ್ನು ಏರಿ ಅದರಲ್ಲಿ ಹಾರಾಟ ನಡೆಸಿದರು. ಪೈಲಟ್ ಫಿಲಿಪ್ ಡ್ಯುಶಾಟ್ ಅವರು ರಕ್ಷಣಾ ಸಚಿವರಿದ್ದ ರಫೇಲ್  ವಿಮಾನವನ್ನು  ಚಲಾಯಿಸಿದರು. ಇದರೊಂದಿಗೆ  ರಫೇಲ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಪ್ರಥಮ ರಕ್ಷಣಾ ಸಚಿವರೆಂಬ ಹೆಗ್ಗಳಿಕೆಗೆ ರಾಜನಾಥ್ ಸಿಂಗ್ ಅವರು ಪಾತ್ರರಾದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

2019: ಸ್ಟಾಕ್ಹೋಮ್:  ಜೇಮ್ಸ್ ಪೀಬಲ್ಸ್, ಮಿಶೆಲ್ ಮೇಯರ್ ಮತ್ತು ಡಿಡಿಯರ್ ಕ್ವೆಲೋಜ್ ಅವರಿಗೆ 2019ನೇ ಸಾಲಿನ ಭೌತಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ ನೀಡಲಾಗಿದೆ ಎಂದು ನೊಬೆಲ್ ಪ್ರಶಸ್ತಿ ಸಮಿತಿಯು 2019 ಅಕ್ಟೋಬರ್  08 ಮಂಗಳವಾರ ಪ್ರಕಟಿಸಿತು. ನಮ್ಮ ವಿಶ್ವ ಬೆಳೆದು ಬಂದದ್ದು ಹೇಗೆ, ವಿಶ್ವದಲ್ಲಿ ಭೂಮಿಯ ಸ್ಥಾನ ಏನು ಎಂಬುದನ್ನು ಅರ್ಥ ಮಾಡಿಕೊಳ್ಳಲು ವಿಜ್ಞಾನಿಗಳ ಸಂಶೋಧನೆ ಮತ್ತು ಅಧ್ಯಯನ ಬಹಳ ಮಹತ್ವಪೂರ್ಣವಾದುದು ಎಂದು ಪರಿಗಣಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಇವರಿಗೆ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ತೀರ್ಪುಗಾರರ ಸಮಿತಿ ತಿಳಿಸಿತು. ಭೌತ ವಿಶ್ವಶಾಸ್ತ್ರದಲ್ಲಿ ಜೇಮ್ಸ್ ಪೀಬಲ್ಸ್ ಹಲವು ಮಹತ್ವದ ಸಂಶೋಧನೆಗಳನ್ನು ಮಾಡಿದ್ದಾರೆ. ಇನ್ನು, ಮಿಶೆಲ್ ಮೇಯರ್ ಮತ್ತು ಡಿಡಿಯರ್ ಕ್ವಿಲೋಜ್ ಅವರು ಎಕ್ಸೋಪ್ಲಾನೆಟ್ವೊಂದನ್ನು ಪತ್ತೆ ಹೆಚ್ಚಿದ್ದರು. ಎಕ್ಸೋಪ್ಲಾನೆಟ್ ಎಂಬುದು ಸೌರ ವ್ಯವಸ್ಥೆ ಹೊರಗಿರುವ ಗ್ರಹವಾಗಿದೆ. ಬಾಹ್ಯ ಗ್ರಹದ ಪತ್ತೆಯಿಂದ ವಿಶ್ವ ರಚನೆಯ ಅಭ್ಯಾಸಕ್ಕೆ ಸಹಾಯವಾಗಲಿದೆ. (ವಿವರಗಳಿಗೆಇಲ್ಲಿ ಕ್ಲಿಕ್  ಮಾಡಿರಿ)

2019: ಮೈಸೂರು:  ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮದ ಪ್ರಮುಖ ಆಕರ್ಷಣೆಯಾದ
ಜಂಬೂಸವಾರಿಯೊಂದಿಗೆ  2019 ಅಕ್ಟೋಬರ್ 08 ಮಂಗಳವಾರ ದಸರಾ  ಉತ್ಸವಕ್ಕೆ ತೆರೆ ಬಿದ್ದಿತು. ದಸರಾ ಮೆರವಣಿಗೆಯ  ವೈಭವದ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಜನರು ಅರಮನೆಯ ಮುಂದಿನ ರಸ್ತೆಗಳಲ್ಲಿ ನೆರೆದಿದ್ದರು. ಕ್ಯಾಪ್ಟನ್ ಅರ್ಜುನ 8 ಬಾರಿ ಅಂಬಾರಿ ಹೊತ್ತು ಜಂಬೂ ಸವಾರಿ ಯಶಸ್ವಿಗೊಳಿಸಿದ.  ಕ್ಯಾಪ್ಟನ್ ಅರ್ಜುನನಿಗೆ 59 ವರ್ಷವಾಗಿದ್ದು ಜಂಬೂ ಸವಾರಿ ಮೆರವಣಿಗೆಯಲ್ಲಿ ಅರ್ಜುನನನ್ನು ಮಾವುತ ವಿನು ,ಕಾವಾಡಿ ಮಧು ಮುನ್ನಡೆಸಿದರು.  ಅರ್ಜುನ ಕಳೆದ 19-20 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗಿಯಾಗಿದ್ದು, 2012 ರಿಂದ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿಯನ್ನ ನಿರ್ವಹಿಸಿದ್ದಾನೆ. ಬಣ್ಣಗಳ ಚಿತ್ತಾರದಿಂದ ಅಲಂಕೃತನಾದ ಅರ್ಜುನ ಆನೆಯ ಮೇಲೆ ಹೊರಟ ಚಿನ್ನದ ಅಂಬಾರಿ ಮೈಸೂರಿನ ಮುಖ್ಯರಸ್ತೆಗಳಲ್ಲಿ ಸಾಗಿ ಬನ್ನಿ ಮಂಟಪವನ್ನು ತಲುಪಿತು.  ಅರ್ಜುನನ ಮೇಲಿನ 750 ಕೆ.ಜಿ. ತೂಕದ ಚಿನ್ನದ ಅಂಬಾರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪುಷ್ಪನಮನ ಸಲ್ಲಿಸಿ ಐತಿಹಾಸಿಕ ಜಂಬೂಸವಾರಿಗೆ ಚಾಲನೆ ನೀಡಿದ್ದರು. ಚಾಮುಂಡೇಶ್ವರಿ ಉತ್ಸವಮೂರ್ತಿಯನ್ನು ಹೊತ್ತ ಅರ್ಜುನ ಗಾಂಭೀರ್ಯದಿಂದ ಹೆಜ್ಜೆಹಾಕಿದ. ತಾಯಿ ಚಾಮುಂಡೇಶ್ವರಿಗೆ ಜೈಕಾರ ಹಾಕುತ್ತಾ ಮೈಸೂರಿನ ಜನರು ಸಂಭ್ರಮದಿಂದ ಜಂಬೂಸವಾರಿಯನ್ನು ಕಣ್ತುಂಬಿಕೊಂಡರು. (ವಿವರಗಳಿಗೆಇಲ್ಲಿ ಕ್ಲಿಕ್  ಮಾಡಿರಿ)

2019: ಲಂಡನ್:  ಇಂಗ್ಲೆಂಡ್ ರಾಜಧಾನಿಯಲ್ಲಿ . 10ರವರೆಗೆ ನಡೆಯುತ್ತಿರುವ ದಿ ಬ್ಯುಸಿನೆಸ್
ಸ್ಪೋರ್ಟ್ಸ್ ಶೃಂಗ ಸಭೆಯಲ್ಲಿ  2019 ಅಕ್ಟೋಬರ್ 08ರ ಮಂಗಳವಾರ  ನೀತಾ ಅಂಬಾನಿ ಅವರು ಭಾಷಣ ಮಾಡಿದರು.  ಬಿಲಿಯನ್ ಡ್ರೀಮ್ಸ್: ದಿ ಇಂಡಿಯಾ ಆಪರ್ಚುನಿಟಿವಿಷಯದ ಕುರಿತು ಮಾತನಾಡಿದ ರಿಲಾಯನ್ಸ್ ಫೌಂಡೇಶನ್ ಮುಖ್ಯಸ್ಥೆ ನೀತಾ ಅಂಬಾನಿ ಅವರು ಭಾರತದ ಕ್ರೀಡಾ ಶಕ್ತಿ, ನಾರಿ ಶಕ್ತಿ ಮತ್ತು ಯುವ ಶಕ್ತಿಯ ಬಗ್ಗೆ ಹೊಸ ಬೆಳಕು ಚೆಲ್ಲುವ ಪ್ರಯತ್ನ ಮಾಡಿದರು.
‘ನಮಸ್ಕಾರ’ ಎಂದು ಭಾಷಣ ಆರಂಭಿಸಿದ ನೀತಾ ಅವರು, ತಮಗೆ ವೇದಿಕೆ ಏರಲು ಅವಕಾಶ ಮಾಡಿಕೊಟ್ಟ ಆಯೋಜಕರಿಗೆ ಧನ್ಯವಾದ ಅರ್ಪಿಸಿದರು. “ಇವರು ನನ್ನನ್ನು ಭಾರತದ ಕ್ರೀಡೆಯ ಮೊದಲ ಮಹಿಳೆ ಎಂದು ಪರಿಗಣಿಸಿದ್ದು ನನ್ನ ಪಾಲಿನ ಗೌರವ. ನಾನಿಲ್ಲಿ ಬಂದಿರುವುದು ಭಾರತದ ಎಲ್ಲಾ ಮಹಿಳೆಯರಿಗೂ ಗೌರವದ ವಿಷಯವಾಗಿದೆ. ಭಾರತದಲ್ಲಿರುವ ಎಲ್ಲಾ ಮಹಿಳೆಯರ ಸಬಲೀಕರಣ ಮಾಡುವುದು ನನ್ನ ಧ್ಯೇಯ ಮತ್ತು ಗುರಿಯಾಗಿದೆಎಂದು ಹೇಳಿದರು. (ವಿವರಗಳಿಗೆಇಲ್ಲಿ ಕ್ಲಿಕ್  ಮಾಡಿರಿ)

2019: ಬೆಂಗಳೂರು:  ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ  ಪಿಲುಂಗುಳಿಯ ಶಾರದ ಟೀಚರ್ ಅವರು ಬೆಂಗಳೂರಿನ ಗಿರಿನಗರದಲ್ಲಿ 2019 ಅಕ್ಟೋಬರ್ 08ರ ಮಂಗಳವಾರ  ಬೆಳಗ್ಗೆ ದೈವಾಧೀನರಾದರು. ಅವರಿಗೆ 79ವರ್ಷ ವಯಸ್ಸಾಗಿತ್ತು. ಕನ್ಯಾನ, ವಿಟ್ಲ ಆಸುಪಾಸಿನಲ್ಲಿ ಶಾರದಕ್ಕ, ಶಾರದಾ ಟೀಚರ್  ಎಂದೇ ಪರಿಚಿತರಾಗಿದ್ದ ಪಿಲುಂಗುಳಿ  ಶಾರದ  ಅವರು ದಿವಂಗತ ನಾರಾಯಣ ಭಟ್ ಮತ್ತು ಸರಸ್ವತಿ ಅಮ್ಮ ಅವರ ಪುತ್ರಿಯಾಗಿದ್ದು ಅವಿವಾಹಿತರಾಗಿದ್ದರು. ವಿಟ್ಲದ ನೆತ್ರಕೆರೆಯ ದಿವಂಗತ ಕೃಷ್ಣಭಟ್ ಅವರ  ಧರ್ಮಪತ್ನಿ ದಿವಂಗತ ಗೌರಮ್ಮ ಶಾರದಾ ಅವರ ತಾಯಿಯ ತಂಗಿ. ತಂಗಿಯರಾದ ಲಲಿತಾ,ಜಯಂತಿ ಹಾಗೂ ಅಪಾರ ಅಭಿಮಾನಿಗಳು,ಬಂಧು ಮಿತ್ರರನ್ನು ಶಾರದಾ ಅವರು ಅಗಲಿದ್ದಾರೆ.ಕನ್ಯಾನದ ಬಾಲವಾಡಿ/ ಅಂಗನವಾಡಿ ಶಿಕ್ಷಿಕಿಯಾಗಿ ನಿವೃತ್ತರಾಗಿದ್ದ ಶಾರದ ಅವರು ಅಪಾರ  ದೈವಭಕ್ತೆಯಾಗಿದ್ದರು. ನೂರಾರು ಶೋಭಾನೆಗಳನ್ನು ಹಾಡುವುದಲ್ಲದೆ, ಸ್ವತಃ ಶೋಭಾನೆಗಳನ್ನು ರಚಿಸಿದ್ದರು. 1940ರ ಡಿಸೆಂಬರ್  8ರಂದು ಜನಿಸಿದ್ದ ಶಾರದ ಅವರು  ತಮ್ಮ  ಇಳಿವಯಸ್ಸಿನಲ್ಲಿ ಯಕ್ಷಗಾನ ಕಲಿತು,  ವೇಷ ಹಾಕಿ ಯಕ್ಷ ರಂಗಭೂಮಿಯನ್ನು ಏರಿದ್ದರು. ಅವರು ಹಾಸ್ಯ ಪಾತ್ರಗಳನ್ನು ಇಷ್ಟ ಪಟ್ಟು  ಆ ವೇಷಗಳನ್ನು ಹಾಕುತ್ತಿದ್ದರು.  ಹೆಣ್ಮಕ್ಕಳ  ಯಕ್ಷಗಾನ ತಂಡ ಕಟ್ಟಿ, ಹಲವಾರು ಕಡೆ ಪ್ರದರ್ಶನಗಳನ್ನೂ ಕೂಡಾ ಕೊಟ್ಟ ಧೀಮಂತೆ ಅವರಾಗಿದ್ದರು. ಇಳಿವಯಸ್ಸಿನಲ್ಲಿ ಯಕ್ಷ ರಂಗ ಭೂಮಿಯನ್ನು ಏರಿ ಪ್ರದರ್ಶನ ನೀಡಿದ್ದಕ್ಕಾಗಿ ಯಕ್ಷಗಾನದ ಹಿರಿಯ ಭಾಗವತರಾದ ಬಲಿಪ ನಾರಾಯಣ ಭಾಗವತರು ಅವರ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)


No comments:

Post a Comment