ನಾನು ಮೆಚ್ಚಿದ ವಾಟ್ಸಪ್

Thursday, October 24, 2019

ಇಂದಿನ ಇತಿಹಾಸ History Today ಅಕ್ಟೋಬರ್ 24

2019: ನವದೆಹಲಿ: ಭಾರತೀಯ ಜನತಾ ಪಕ್ಷ ನೇತೃತ್ವದ ಎನ್‌ಡಿಎ-೨ ಸರ್ಕಾರವು ಕೇಂದ್ರದಲ್ಲಿ ಅಧಿಕಾರಕ್ಕೆ ಏರಿದ ಬಳಿಕ ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಉದಯಿಸಿ, ಸರ್ಕಾರ ರಚನೆಯ ಘೋಷಣೆ ಮಾಡಿದ್ದರೂ, ನಿರೀಕ್ಷೆಗಳಿಗೆ ವಿರುದ್ಧವಾಗಿ ಸ್ಥಾನಗಳ ನಷ್ಟದ ಭಾರೀ ಆಘಾತವನ್ನು 2019 ಅಕ್ಟೋಬರ್ 24ರ ಗುರುವಾರ ಅನುಭವಿಸಿತು.  ಮಹಾರಾಷ್ಟ್ರದಲ್ಲಿ ೨೮೮ ಸ್ಥಾನಗಳ ಪೈಕಿ ಬಿಜೆಪಿ ಮತ್ತು ಶಿವಸೇನಾ ಮೈತ್ರಿಕೂಟ ೧೬೨ ಸ್ಥಾನಗಳೊಂದಿಗೆ ಬಹುಮತ ಪಡೆದರೂ, ೨೦೧೪ಕ್ಕೆ ಹೋಲಿಸಿದರೆ ಮೈತ್ರಿಕೂಟ ೨೩ ಸ್ಥಾನಗಳ ನಷ್ಟ ಅನುಭವಿಸಿತು. ೯೦ ಸದಸ್ಯಬಲದ ಹರಿಯಾಣದಲ್ಲಿ ಅತಂತ್ರ ವಿಧಾನಸಭೆ ರೂಪುಗೊಂಡಿದ್ದು, ೪೦ ಸ್ಥಾನಗಳೊಂದಿಗೆ ಏಕೈಕ ದೊಡ್ಡ ಪಕ್ಷವಾಗಿ ಉದಯಿಸಿದ ಬಿಜೆಪಿ ೭ ಸ್ಥಾನಗಳ ನಷ್ಟ ಅನುಭವಿಸಿತು.ಉಭಯ ರಾಜ್ಯಗಳಲ್ಲೂ ವಿರೋಧಿ ಕಾಂಗ್ರೆಸ್ ಚೇತರಿಸಿಕೊಂಡಿತು. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮತ್ತು ಎನ್‌ಸಿಪಿ ಮೈತ್ರಿಕೂಟ ೧೨ ಸ್ಥಾನಗಳ ಹೆಚ್ಚುವರಿ ಗಳಿಕೆಯೊಂದಿಗೆ 104  ಸ್ಥಾನಗಳನ್ನು ಗೆದ್ದಿವೆ. ಹರಿಯಾಣದಲ್ಲಿ ೧೬ ಹೆಚ್ಚುವರಿ ಸ್ಥಾನಗಳಿಕೆಯೊಂದಿಗೆ ೩೧ ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿದೆ. ಮಹಾರಾಷ್ಟ್ರದಲ್ಲಿ ಇತರರು ೩೧ ಸ್ಥಾನಗಳನ್ನು ಗೆದ್ದರೆ, ಹರಿಯಾಣದಲ್ಲಿ ೧೯ ಮಂದಿ ಇತರರು ಗೆದ್ದಿದ್ದು ಈ ಪೈಕಿ ಜನನಾಯಕ ಜನತಾ ಪಕ್ಷದ (ಜೆಜೆಪಿ) ನಾಯಕ ದುಶ್ಯಂತ್ ’ಕಿಂಗ್ ಮೇಕರ್ ಸ್ಥಾನಕ್ಕೆ ಏರಿದರು. ಬಿಜೆಪಿ ಮತ್ತು ಕಾಂಗ್ರೆಸ್ ಅಧಿಕಾರಕ್ಕಾಗಿ ಹಣಾಹಣಿಗೆ ಇಳಿದಿದ್ದು, ಬೆಂಬಲಕ್ಕಾಗಿ ದುಶ್ಯಂತ್ ಕಡೆಗೆ ನೋಡುವಂತಾಯಿತು. ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಅವರು ಸರ್ಕಾರ ರಚನೆಗೆ ರಾಜ್ಯಪಾಲ ಸತ್ಯದೇವ್ ನಾರಾಯಣ್ ಆರ್ಯ ಬಳಿ ಹಕ್ಕು ಮಂಡಿಸಿ, ಏಕೈಕ ದೊಡ್ಡ ಪಕ್ಷವಾಗಿರುವ ನೆಲೆಯಲ್ಲಿ ಬಿಜೆಪಿಯನ್ನು ಸರ್ಕಾರ ರಚಿಸಲು ಆಹ್ವಾನಿಸಬೇಕು ಎಂದು ಕೋರಿದರು.   ಚುನಾವಣಾ ಫಲಿತಾಂಶದ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರು ಪಕ್ಷದ ಸಾಧನೆಗಾಗಿ ಮಹಾರಾಷ್ಟ್ರ ಮತ್ತು ಹರಿಯಣದ ಮುಖ್ಯಮಂತ್ರಿಗಳನ್ನು ಅಭಿನಂದಿಸಿ ಪಕ್ಷಕ್ಕೆ ಮತ್ತೊಮ್ಮೆ ಜನರ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಟ್ಟದ್ದಕ್ಕಾಗಿ ಧನ್ಯವಾದ ಸಲ್ಲಿಸಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)

2019: ಮುಂಬೈ: ಮಹಾರಾಷ್ಟ್ರ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶಗಳು ಹೊರಬರುತ್ತಿದ್ದಂತೆಯೇ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಮಿತ್ರ ಪಕ್ಷ ಭಾರತೀಯ ಜನತಾ ಪಕ್ಷಕ್ಕೆ ಸರ್ಕಾರ ರಚನೆ ಸುಲಭವಲ್ಲ ಎಂಬ ಸಂದೇಶವನ್ನು 2019 ಅಕ್ಟೋಬರ್ 24ರ ಗುರುವಾರ ರವಾನಿಸಿದರು. ಮಹಾರಾಷ್ಟ್ರ ಚುನಾವಣೆಗಳಲ್ಲಿ ಕಿರಿಯ ಪಾಲುದಾರನಾಗಲು ಮನಸ್ಸಿಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡಿದ್ದ ಶಿವಸೇನಾ ಮುಖ್ಯಸ್ಥ, ಸರ್ಕಾರ ರಚನೆಯ ವಿಚಾರದಲ್ಲಿ ತನ್ನ ನಡೆಯನ್ನು ಶಿವಸೇನೆ ಒಪ್ಪಿಕೊಳ್ಳುತ್ತದೆ ಎಂದು ಬಿಜೆಪಿ ತೀರ್ಮಾನಿಸಬೇಕಾಗಿಲ್ಲ, ಇದು ಚರ್ಚಿಸಬೇಕಾದ ವಿಷಯ ಎಂದು ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.
 ವಿಧಾನಸಭಾ ಚುನಾವಣಾ ಫಲಿತಾಂಶದ ಬಗ್ಗೆ ಮೊದಲ ಪ್ರತಿಕ್ರಿಯೆ ನೀಡಿದ ಉದ್ಧವ್, ಫೆಬ್ರುವರಿಯಲ್ಲಿ ಉಭಯ ಪಕ್ಷಗಳೂ ೫೦:೫೦ ಅಧಿಕಾರ ಹಂಚಿಕೆಯನ್ನು ಒಪ್ಪಿಕೊಂಡಿದ್ದವು ಎಂಬ ವಿಚಾರನ್ನು ನಿರ್ದಿಷ್ಟವಾಗಿ ನೆನಪಿಸಿದರು. ಆದರೆ ಹಲವಾರು ಬಾರಿ ಇದನ್ನೂ ನೆನಪಿಸಿದರೂ ಬಿಜೆಪಿ ತನ್ನ ವಚನವನ್ನು ಪಾಲಿಸದೆ ೧೬೪ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿತ್ತು. ಶಿವಸೇನೆ ೧೨೪ ಅಭ್ಯರ್ಥಿಗಳನ್ನೂ ಮಾತ್ರ ಕಣಕ್ಕೆ ಇಳಿಸಿತ್ತು. ಬಿಜೆಪಿಯು ೧೦೩ ಸ್ಥಾನಗಳೊಂದಿಗೆ ದೊಡ್ಡ ಪಕ್ಷವಾಗಿ ಉದಯಿಸಿದ್ದರೂ, ೨೮೮ ಸದಸ್ಯ ಬಲದ ವಿಧಾನಸಭೆಯಲ್ಲಿ ಶಿವಸೇನೆಯನ್ನು ಸರ್ಕಾರ ರಚನೆಗಾಗಿ ನೆಚ್ಚಿಕೊಳ್ಳಲೇಬೇಕಾಗಿದೆ. ಈ ಅವಕಾಶವನ್ನು ಠಾಕ್ರೆ ಅತ್ಯಂತ ಕ್ಷಿಪ್ರವಾಗಿ ಬಳಸಿಕೊಂಡಿದ್ದಾರೆ. ‘ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬುದು ಅತ್ಯಂತ ಮಹತ್ವದ ಪ್ರಶ್ನೆ ಎಂದು ಉದ್ಧವ್ ಠಾಕ್ರೆ ಹೇಳಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2019: ನವದೆಹಲಿ: ಸಿಖ್ ಪಂಥದ ಸಂಸ್ಥಾಪಕ ಗುರುನಾನಕ್‌ದೇವ್‌ಅವರು ತಮ್ಮ ಜೀವನದ ಅಂತಿಮ ವರ್ಷಗಳನ್ನು ಕಳೆದ ಸ್ಥಳದಲ್ಲಿ ನಿರ್ಮಿಸಲಾಗಿರುವ ಗುರುದ್ವಾರ ಸಂದರ್ಶನಕ್ಕೆ  ಭಾರತೀಯ ಯಾತ್ರಾರ್ಥಿಗಳಿಗೆ ವೀಸಾಮುಕ್ತ ಅವಕಾಶ ನೀಡುವ ಚಾರಿತ್ರಿಕ ಕರ್ತಾರಪುರ ಕಾರಿಡಾರ್ ಕಾರ್ಯಗತ ಒಪ್ಪಂದಕ್ಕೆ  ಭಾರತ ಮತ್ತು ಪಾಕಿಸ್ತಾನ 2019 ಅಕ್ಟೋಬರ್ 24ರ ಗುರುವಾರ ಗಡಿಯಲ್ಲಿನ ‘ಶೂನ್ಯರೇಖೆ ಯಲ್ಲಿ ಸಹಿ ಮಾಡಿದವು. ಉಭಯ ರಾಷ್ಟ್ರಗಳ  ಅಧಿಕಾರಿಗಳು ಒಪ್ಪಂದಕ್ಕೆ ಸಹಿ ಹಾಕಿದರು. ಒಪ್ಪಂದಕ್ಕೆ ಸಹಿ ಹಾಕಲು ಅಕ್ಟೋಬರ್ ೨೩ ರ ದಿನಾಂಕವನ್ನು ಭಾರತವು ಸೋಮವಾರ ಪ್ರಸ್ತಾಪಿಸಿತ್ತು. ಆದರೆ ಪಾಕಿಸ್ತಾನದ ಕಡೆಯ “ಆಡಳಿತಾತ್ಮಕ ಸಮಸ್ಯೆಗಳ ಕಾರಣ ಈ ದಿನಾಂಕವನ್ನು ಒಂದು ದಿನ ಮುಂದೂಡಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದರು. ಪಾಕಿಸ್ತಾನ ನಿಯೋಗದ ನೇತೃತ್ವವನ್ನು ವಿದೇಶಾಂಗ ಕಚೇರಿ ವಕ್ತಾರ ಮೊಹಮ್ಮದ್ ಫೈಸಲ್ ವಹಿಸಿದ್ದರು. ‘ಕರ್ತಾರಪುರ ಸಾಹಿಬ್ ತಲುಪಲು ಕರ್ತಾರಪುರ ಕಾರಿಡಾರ್ ತೆರೆಯುವ ಬಗೆಗಿನ ಐತಿಹಾಸಿಕ ಪಾಕಿಸ್ತಾನ- ಭಾರತ ಒಪ್ಪಂದಕ್ಕೆ ಸಹಿ ಹಾಕಲು  ತೆರಳುತ್ತಿರುವೆ.  ನವೆಂಬರ್ ೯ ರಂದು ಪಾಕಿಸ್ತಾನದ ನರೋವಾಲದಲ್ಲಿ ಕರ್ತಾರಪುರ ಸಾಹಿಬ್‌ಕಾರಿಡಾರನ್ನು ಪ್ರಧಾನಿ ಇಮ್ರಾನ್‌ಖಾನ್ ಉದ್ಘಾಟಿಸಲಿದ್ದಾರೆ ”ಎಂದು ಶೂನ್ಯರೇಖೆಯತ್ತ ಹೊರಡುವ ಮುನ್ನ ಫೈಸಲ್ ಟ್ವೀಟ್ ಮಾಡಿದ್ದರು. ಗುರುನಾನಕ್ ದೇವ್‌ಅವರ ೫೫೦ ನೇ ಜನ್ಮದಿನಾಚರಣೆಗೆ ಮುನ್ನ ಮುನ್ನ ಕಾರಿಡಾರ್ ಕಾರ್ಯಗತಕ್ಕಾಗಿ ಭಾರತ ಮತ್ತು ಪಾಕಿಸ್ತಾನ  ಉನ್ನತ ಮಟ್ಟದ ಮಾತುಕತೆ ನಡೆಸಿವೆ. ಭಾರತೀಯ ಯಾತ್ರಿಕರ ವೀಸಾ ಮುಕ್ತ ಸಂಚಾರಕ್ಕೆ ಕಾರಿಡಾರ್ ಅನುಕೂಲಕರವಾಗಲಿದೆ. ೧೫೨೨ ರಲ್ಲಿ ಸಿಖ್ ಪಂಥದ  ಸಂಸ್ಥಾಪಕ ಗುರುನಾನಕ್ ದೇವ್‌ಅವರು ಸ್ಥಾಪಿಸಿದ ಕರ್ತಾರಪುರ ಸಾಹಿಬ್‌ಗೆ ಭೇಟಿ ನೀಡಲು ಭಾರತೀಯ ಯಾತ್ರಿಕರು ಅನುಮತಿ ಪಡೆದರೆ ಸಾಕಾಗುತ್ತದೆ. ವೀಸಾದ ಅಗತ್ಯ ಬೀಳುವುದಿಲ್ಲ. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

No comments:

Post a Comment