ನಾನು ಮೆಚ್ಚಿದ ವಾಟ್ಸಪ್

Thursday, October 31, 2019

ಇಂದಿನ ಇತಿಹಾಸ History Today ಅಕ್ಟೋಬರ್ 31

2019: ನವದೆಹಲಿ: ಇದುವರೆಗೆ ರಾಜ್ಯವಾಗಿದ್ದ ಜಮ್ಮು ಮತ್ತು ಕಾಶ್ಮೀರವು, ರಾಷ್ಟ್ರೀಯ ಏಕತಾ ದಿನವಾಗಿ ಆಚರಣೆಗೊಳ್ಳುತ್ತಿರುವ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಭಾಯಿ ಪಟೇಲ್‌ಅವರ ೧೪೪ನೇ ಜನ್ಮದಿನವಾದ 2019 ಅಕ್ಟೋಬರ್ 31ರ ಗುರುವಾರ ಇತಿಹಾಸದ ಗರ್ಭವನ್ನು ಸೇರಿದ್ದು, ಹೊಸ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳು ಜನ್ಮ ತಳೆದವು. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ ಸಂವಿಧಾನದ ೩೭೦ನೇ ವಿಧಿಯನ್ನು ಸಂಸತ್ತು 2019 ಆಗಸ್ಟ್ ೫ರಂದು ರದ್ದು ಪಡಿಸಿದ ೮೬ ದಿನಗಳ ಬಳಿಕ, 2019 ಅಕ್ಟೋಬರ್ ೩೦ರ ಬುಧವಾರ ಮಧ್ಯರಾತ್ರಿ ಜಮ್ಮು ಮತ್ತು ಕಾಶ್ಮೀರ ರಾಜ್ಯವು ಅಸ್ತಿತ್ವವನ್ನು ಕಳೆದುಕೊಂಡು, ನೂತನ ಕೇಂದ್ರಾಡಳಿತ ಪ್ರದೇಶಗಳು ಅಸ್ತಿತ್ವಕ್ಕೆ ಬಂದವು. ಆರ್.ಕೆ. ಮಾಥುರ್ ಅವರು ಲಡಾಖ್ ಕೇಂದ್ರಾಡಳಿತ ಪ್ರದೇಶದ  ಮೊದಲ ಲೆಫ್ಟಿನೆಂಟ್‌ಗವರ್ನರ್ ಆಗಿ ಪ್ರಮಾಣ ವಚನ ಸ್ವೀಕರಿಸಿದರು.  ಗೃಹ ಸಚಿವಾಲಯವು ತಡರಾತ್ರಿ ಹೊರಡಿಸಿದ ಅಧಿಸೂಚನೆಯಲ್ಲಿ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು "ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ’  ಹಾಗೂ ‘ಲಡಾಖ್ ಕೇಂದ್ರಾಡಳಿತ ಪ್ರದೇಶ’ ಎಂಬುದಾಗಿ ಬದಲಾಯಿಸಲಾಗಿದೆ ಮತ್ತು ‘ಶಾಶ್ವತ ನಿವಾಸಿಗಳು ಅಥವಾ ಆನುವಂಶಿಕ ರಾಜ್ಯ’ ವಿಷಯಗಳನ್ನು ಕೈಬಿಡಲಾಗಿದೆ’ ಎಂದು ಘೋಷಿಸಲಾಯಿತು. ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವು ಪುದುಚೆರಿಯಂತಹ ಶಾಸಕಾಂಗ, ಚುನಾಯಿತ ಶಾಸನಸಭೆ ಮತ್ತು ಮುಖ್ಯಮಂತ್ರಿಯನ್ನು ಹೊಂದಿರುತ್ತದೆ. ಇನ್ನೊಂದೆಡೆಯಲ್ಲಿ  ಲಡಾಖ್ ಕೇಂದ್ರಾಡಳಿತ ಪ್ರದೇಶವು ಶಾಸನಸಭೆರಹಿತವಾದ ಚಂಡೀಗಢ ಮಾದರಿಯ ಕೇಂದ್ರಾಡಳಿತ ಪ್ರದೇಶವಾಗಿರುತ್ತದೆ. ಇದು ಎರಡು ಗುಡ್ಡಗಾಡು ಅಭಿವೃದ್ಧಿ ಮಂಡಳಿಗಳನ್ನು ಹೊಂದಿರುತ್ತದೆ. ಜಮ್ಮು ಮತ್ತು ಕಾಶ್ಮೀರ ಮರುಸಂಘಟನಾ ಕಾಯ್ದೆ, ೨೦೧೯ರ ಅಡಿಯಲ್ಲಿ ಎರಡೂ ಕೇಂದ್ರಾಡಳಿತ ಪ್ರದೇಶಗಳ ಮುಖ್ಯಸ್ಥರಾಗಿ ಆಡಳಿತವನ್ನು ಲೆಫ್ಟಿನೆಂಟ್ ಗವರ್ನರುಗಳು (ಎಲ್-ಜಿ) ವಹಿಸಿಕೊಂಡರು. (ವಿವರಗಳಿಗೆ  ಇಲ್ಲಿ  ಕ್ಲಿಕ್ ಮಾಡಿರಿ)

2019: ನವದೆಹಲಿ/ ಕೇವಡಿಯಾ: ಸಂವಿಧಾನದ ೩೭೦ನೇ ವಿಧಿಯು ಜಮ್ಮು ಮತ್ತು ಕಾಶ್ಮೀರವನ್ನು ರಾಷ್ಟ್ರದ ಇತರ ಭಾಗಳಿಂದ ಪ್ರತ್ಯೇಕಿಸುವ ’ಕೃತಕಗೋಡೆಯನ್ನು’ ಸೃಷ್ಟಿಸಿತ್ತು; ಆಗಸ್ಟ್ ೫ರಂದು ಅದನ್ನು ರದ್ದು ಪಡಿಸುವ ಮೂಲಕ ಸರ್ದಾರ್ ಪಟೇಲ್‌ಅವರು ಕಂಡಿದ್ದ ಭಾರತವನ್ನು ಏಕೀಕರಣ ಮಾಡುವ ಕನಸಿನ ಯೋಜನೆಯನ್ನು ಈಡೇರಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2019 ಅಕ್ಟೋಬರ್ 31ರ ಗುರುವಾರ ಹೇಳಿದರು. ಪ್ರಧಾನಿಯವರು ಗುಜರಾತಿನ ಕೇವಡಿಯಾದಲ್ಲಿ ಭಾರತದ ಮೊದಲ ಗೃಹ ಸಚಿವರ ೧೪೪ನೇ ಜನ್ಮದಿನವನ್ನು ‘ರಾಷ್ಟ್ರೀಯ ಏಕತಾ ದಿನ’ವಾಗಿ ಆಚರಿಸುವ ಸಲುವಾಗಿ ನಡೆದ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಸರ್ದಾರ್ ಪಟೇಲರ ೧೪೪ನೇ ಜನ್ಮದಿನದಂದು ಪ್ರಧಾನಿ ಮೋದಿಯವರು ಏಕತಾ ಪ್ರತಿಮೆಗೆ ಪುಷ್ಪಾರ್ಚನೆ ಮಾಡುವ ಮೂಲಕ ತಮ್ಮ ಶ್ರದ್ಧಾಂಜಲಿಯನ್ನು ಸಲ್ಲಿಸಿದರು. ಪ್ರಧಾನಿ ಭೇಟಿಯ ಹಿನ್ನೆಲೆಯಲ್ಲಿ ಪ್ರದೇಶದಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿತ್ತು. ಏಕತಾ ಪ್ರತಿಮೆಯನ್ನು ಕಳೆದ ವರ್ಷ ಸರ್ದಾರ್ ಪಟೇಲ್ ಅವರ ಗೌರವಾರ್ಥವಾಗಿ ನಿರ್ಮಿಸಿ ಉದ್ಘಾಟಿಸಲಾಗಿತ್ತು.  ಮೋದಿ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರವು ೨೦೧೪ರಿಂದೀಚೆಗೆ ಸರ್ದಾರ್ ಪಟೇಲ್‌ ಜನ್ಮದಿನವನ್ನು ರಾಷ್ಟ್ರೀಯ ಏಕತಾ ದಿನವಾಗಿ ಆಚರಿಸುತ್ತಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ‘ರಾಜಕೀಯ ಸ್ಥಿರತೆಯ ಮತ್ತು ಅಭಿವೃದ್ಧಿಯ ಹೊಸ ಯುಗ’ ಉದಯಿಸಿದ್ದು, ಸ್ವಾತಂತ್ರ್ಯಾ ನಂತರ ಇದೇ ಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಬ್ಲಾಕ್ ಮತು ಅಭಿವೃದ್ಧಿ ಮಂಡಳಿ (ಬಿಡಿಸಿ) ಚುನಾವಣೆಗಳು ಇತ್ತೀಚೆಗೆ ನಡೆದವು ಎಂದು ಮೋದಿ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2019: ನವದೆಹಲಿ/ ಮುಂಬೈ: ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ಕೇಸರಿ ಮೈತ್ರಿಕೂಟದ ಬಿಕ್ಕಟ್ಟು
ಬಗೆಹರಿಯದೇ ಇದ್ದರೂ, ನವೆಂಬರ್ ೪-೫ರ ವೇಳೆಗೆ ವಾಂಖೇಡೆ ಕ್ರೀಡಾಂಗಣದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಸಲು ಬಿಜೆಪಿ ಸಿದ್ಧತೆ ಆರಂಭಿಸಿತು. ಆದರೆ ಶಿವಸೇನೆ- ಬಿಜೆಪಿ ಮಧ್ಯೆ ಹಗ್ಗ ಜಗ್ಗಾಟ ಮುಂದುವರೆದಿದ್ದು, ಸೇನೆಯು ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆಗೂ ಮಾತುಕತೆ ನಡೆಸಿತು.ಶಿವಸೇನೆಯ ಸಂಜಯ ರಾವತ್ ಅವರು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಭೇಟಿ ಮಾಡಿ ಮಾತುಕತೆ ನಡೆಸಿದರು. ಶಿವಸೇನೆಯು ೫೦:೫೦ ಅಧಿಕಾರ ಹಂಚಿಕೆ ಸೂತ್ರದ ಕುರಿತ ತನ್ನ ಪಟ್ಟನ್ನು ಸಡಿಲಿಸಿದೆ ಎಂಬ ವರದಿಗಳ ಮಧ್ಯೆಯೇ ಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ’ಶಿವ ಸೈನಿಕನನ್ನು ಮಹಾರಾಷ್ಟ್ರದ ಮುಖ್ಯಮಂತ್ರಿಯನ್ನಾಗಿ ಮಾಡಲಾಗುವುದು ಎಂದು ಶಾಸಕರ ಸಭೆಯಲ್ಲಿ ಘೋಷಿಸುವ ಮೂಲಕ ತಾನಿನ್ನೂ ಪಟ್ಟು ಸಡಿಲಿಸಿಲ್ಲ ಎಂದು ಸುಳಿವು ನೀಡಿದರು. ಕ್ಷವು ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆಗೆ ಇನ್ನೂ ಮಾತುಕತೆ ನಡೆಸುತ್ತಿದೆ ಮತ್ತು ಶಿವಸೈನಿಕನನ್ನು ಮಹಾರಾಷ್ಟ್ರದ ಮುಖ್ಯಮಂತ್ರಿಯನ್ನಾಗಿ ಮಾಡಲು ಬಯಸಿದೆ. ನಾವು ಯಾವುದಕ್ಕೆ ಬದ್ಧರಾಗಿದ್ದೇವೋ ಅದನ್ನೇ ಕೇಳುತ್ತಿದ್ದೇವೆ’ ಎಂದು ಠಾಕ್ರೆ ಹೇಳಿದರು. ೫೦:೫೦ ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ಬಿಜೆಪಿ ಭರವಸೆ ಕೊಟ್ಟಿಲ್ಲ ಎಂಬುದಾಗಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಹೇಳಿರುವುದಕ್ಕೆ ಭ್ರಮನಿರಸನ ವ್ಯಕ್ತ ಪಡಿಸಿದ ಉದ್ಧವ್ ’ಅಮಿತ್ ಶಾ ಮತ್ತು ತಮ್ಮ ಮಧ್ಯೆ ಯಾವುದಕ್ಕೆ ಬದ್ಧತೆ ವ್ಯಕ್ತ ಪಡಿಸಲಾಗಿತ್ತು ಎಂದು ಫಡ್ನವಿಸ್ ಅವರು ಮೊದಲು ಸ್ಪಷ್ಟ ಪಡಿಸಿಕೊಳ್ಳಲಿ’ ಎಂದು ಹೇಳಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ) 

2019: ಇಸ್ಲಾಮಾಬಾದ್: ಕೇಂದ್ರ ಪಾಕಿಸ್ತಾನದ ಪ್ಯಾಸೆಂಜರ್ ರೈಲುಗಾಡಿಯೊಂದಕ್ಕೆ 2019
ಅಕ್ಟೋಬರ್  31ರ ಗುರುವಾರ ಬೆಂಕಿ ಹತ್ತಿಕೊಂಡ ಪರಿಣಾಮವಾಗಿ ಕನಿಷ್ಠ ೭೩ ಮಂದಿ ಸುಟ್ಟು ಕರಕಲಾಗಿದ್ದು, ಇತರ ೪೦ಕ್ಕೂ ಹೆಚ್ಚು ಮಂದಿ ಸುಟ್ಟ ಗಾಯಗಳಿಗೆ ಒಳಗಾಗಿದ್ದಾರೆ ಎಂದು ಪ್ರಾಂತೀಯ ಸಚಿವರು ತಿಳಿಸಿದರು. ಬೋಗಿಗಳಲ್ಲಿ ಧಗಧಗಿಸುತ್ತಿದ್ದ ಬೆಂಕಿಯ ಕೆನ್ನಾಲಗೆ ಹಾಗೂ ರೈಲುಬೋಗಿಗಳ ಒಳಗಿನಿಂದ ಪ್ರಯಾಣಕರ ಹಾಹಾಕಾರ, ಕಿರಿಚಾಟ ಕೇಳುತ್ತಿದ್ದ ಭೀಕರ ದೃಶ್ಯಗಳನ್ನು ಟೆಲಿವಿಷನ್‌ಗಳು ಪ್ರಸಾರ ಮಾಡಿದವು. ಪಂಜಾಬ್ ಪ್ರಾಂತದ ರಹೀಮ್ ಯಾರ್ ಖಾನ್ ಜಿಲ್ಲೆಯ ಸಮೀಪ ಈ ದುರಂತ ಸಂಭವಿಸಿತು. ’ನಮಗೆ ಬಂದಿರುವ ವರದಿಗಳ ಪ್ರಕಾರ ೬೫ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ೪೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ’ ಎಂದು ಪ್ರಾಂತೀಯ ಆರೋಗ್ಯ ಸಚಿವೆ ಡಾ. ಯಾಸ್ಮೀನ್ ರಶೀದ್ ಹೇಳಿದರು. ಗಾಯಾಳುಗಳನ್ನು ಸಮೀಪದ ಬಹವಾಲ್ಪುರ ಮತ್ತು ಆಸುಪಾಸಿನ ಆಸ್ಪತ್ರೆಗಳಿಗೆ ಒಯ್ಯಲಾಗಿದೆ ಎಂದು ಆಕೆ ನುಡಿದರು. ಕೇವಲ ೧೮ ಶವಗಳು ಗುರುತಿಸುವ ಸ್ಥಿತಿಯಲ್ಲಿದ್ದು, ಉಳಿದ ಶವಗಳು ಗುರುತಿಸಲೂ ಸಾಧ್ಯವಾಗದಷ್ಟು ಕರಟಿಹೋಗಿವೆ ಎಂದು ಅವರು ಹೇಳಿದರು. ’ಭಯಾನಕ.. ಪ್ರಯಾಣಿಕರು ಒಯ್ದಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಿಸಿದ್ದರಿಂದ ಸಂಭವಿಸಿದ ಈ ದುರಂತ ಭಯಾನಕ’ ಎಂದು ಮಾನವ ಹಕ್ಕುಗಳ ಸಚಿವೆ ಶಿರೀನ್ ಮಝಾರಿ ಟ್ವೀಟ್ ಮಾಡಿದರು. ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಾಗ ಕೆಲವು ಪ್ರಯಾಣಿಕರು ಬೆಳಗಿನ ಉಪಾಹಾರ ಸಿದ್ಧ ಪಡಿಸುವುದರಲ್ಲಿ ತಲ್ಲೀನರಾಗಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದವು. ದುರಂತಕ್ಕೆ ಈಡಾಗಿರುವ ರೈಲು ಪಾಕಿಸ್ತಾನದ ಅತ್ಯಂತ ಹಳೆಯ ಹಾಗೂ ಜನಪ್ರಿಯ ಸೇವೆ ಒದಗಿಸುತ್ತಿದ್ದ ’ತೇಝಗಮ್’. ಇದು ಇಸ್ಲಾಮಾಬಾದ್ ಸಮೀಪದ ರಾವಲ್ಪಿಂಡಿ ಮತ್ತು ದಕ್ಷಿಣದ ಬಂದರು ನಗರ ಕರಾಚಿ ಮಧ್ಯೆ ಸಂಚರಿಸುತ್ತದೆ. (ವಿವರಗಳಿಗೆ ಇಲ್ಲಿ  ಕ್ಲಿಕ್ ಮಾಡಿರಿ)



No comments:

Post a Comment