2019: ಮಹಾಬಲಿಪುರಂ (ಮಾಮಲ್ಲಪುರಂ):
’ಚೆನ್ನೈ ಸೇತು’ವಿನೊಂದಿಗೆ (ಚೆನ್ನೈ ಕನೆಕ್ಟ್) ಭಾರತ ಮತ್ತು ಚೀನಾ ಮಧ್ಯೆ ಸಹಕಾರದ ಹೊಸ ಯುಗ ಆರಂಭವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ಪ್ರಾಚೀನ ಕರಾವಳಿ
ಪಟ್ಟಣದಲ್ಲಿ ಚೀನೀ ಅಧ್ಯಕ್ಷ ಕ್ಸಿ -ಜಿನ್ಪಿಂಗ್ ಜೊತೆಗಿನ ಎರಡು ದಿನಗಳ ಅವಧಿಯಲ್ಲಿನ ಐದೂವರೆ ಗಂಟೆಗಳ ಮುಖಾಮುಖಿ ಮಾತುಕತೆಗಳ ಬಳಿಕ 2019 ಅಕ್ಟೋಬರ್
12ರ ಶನಿವಾರ ಇಲ್ಲಿ ಹೇಳಿದರು. ಭಾರತ-
ಚೀನಾ ನಡುವಣ ಎರಡನೇ ಅನೌಪಚಾರಿಕ ಶೃಂಗಸಭೆಯ ಅಂಗವಾಗಿ ನಡೆದ ಮಾತುಕತೆಗಳು ದ್ವಿಪಕ್ಷೀಯ ಬಾಂಧವ್ಯಗಳ ಬಗೆಗಿನ ’ಬಿಚ್ಚು ಮನಸ್ಸಿನ’ ಹಾಗೂ ಮನಃಪೂರ್ವಕವಾದ ಉತ್ತಮ ಮಾತುಕತೆಗಳಾಗಿದ್ದವು ಎಂದು ಹೇಳಿದ ಕ್ಸಿ, ’ಭಾರತ-ಚೀನಾ ಬಾಂಧವ್ಯವು ತಮ್ಮ ಸರ್ಕಾರದ ದೃಢ ನೀತಿಯಾಗಿದೆ’ ಎಂದು
ನುಡಿದರು. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನವನ್ನು ರದ್ದು ಪಡಿಸಿದ ಭಾರತದ ನಿರ್ಧಾರದ ಹಿನ್ನೆಲೆಯಲ್ಲಿ ಬಿಗಡಾಯಿಸಿದ ಬಾಂಧವ್ಯಗಳನ್ನು ಮರುಸ್ಥಾಪನೆ ಮಾಡುವ ಯತ್ನ ನಿಯೋಗ ಮಟ್ಟದ ಮಾತುಕತೆಗಳಲ್ಲಿ ಉಭಯ ನಾಯಕರು ಆಡಿದ ಪ್ರಾಸ್ತಾವಿಕ ಮಾತುಗಳಲ್ಲಿ ಪ್ರತಿಫಲಿಸಿತು. ‘ವುಹಾನ್ ಸ್ಫೂರ್ತಿಯು ನಮ್ಮ ಬಾಂಧವ್ಯಗಳಿಗೆ ಹೊಸ ವೇಗವನ್ನು ಮತ್ತು ಒತ್ತನ್ನು ನೀಡಿತು. ಈಗ ನಮ್ಮ ಚೆನ್ನೈ
ಸೇತು (ಚೆನ್ನೈ ಕನಿಕ್ಟ್) ಉಭಯ ರಾಷ್ಟ್ರಗಳ ನಡುವೆ ಸಹಕಾರದ ಹೊಸ ಯುಗಕ್ಕೆ ನಾಂದಿ ಹಾಡಿದೆ’ ಎಂದು ಮೋದಿಯವರು ಮೊದಲ ಅನೌಪಚಾರಿಕ ಶೃಂಗದ ಬಗ್ಗೆ ಉಲ್ಲೇಖಿಸುತ್ತಾ ನುಡಿದರು. ಉಭಯ ನಾಯಕರ ಮೊದಲ ಅನೌಪಚಾರಿಕ ಶೃಂಗಸಭೆಯು ಕಳೆದ ವರ್ಷ ಏಪ್ರಿಲ್ ತಿಂಗಳಲ್ಲಿ ಚೀನಾದ ವುಹಾನ್ ನಗರದಲ್ಲಿ ನಡೆದಿತ್ತು. ವುಹಾನ್ ಶೃಂಗಸಭೆಯು ಭಾರತ - ಚೀನಾ ಬಾಂಧವ್ಯದ ಸ್ಥಿರತೆಯನ್ನು ಹೆಚ್ಚಿಸಿ, ಆಯಕಟ್ಟಿನ ಸಂಪರ್ಕ ಹೆಚ್ಚಳದ ಮೂಲಕ ಹೊಸ ವೇಗವನ್ನು ನೀಡಿದೆ ಎಂದು ಮೋದಿ ಹೇಳಿದರು. ‘ನಾವು ನಮ್ಮ ಭಿನ್ನಾಭಿಪ್ರಾಯಗಳನ್ನು ಪ್ರೌಢತೆಯೊಂದಿಗೆ ನಿಭಾಯಿಸಬೇಕು ಮತ್ತು ಅವು ಘರ್ಷಣೆಗಳಾಗಲು ಬಿಡಬಾರದು ಎಂದು ನಾವು ತೀರ್ಮಾನಿಸಿದ್ದೆವು. ಪರಸ್ಪರರ ಕಾಳಜಿಗಳ ಬಗ್ಗೆ ನಾವು ಸೂಕ್ಷ್ಮವಾಗಿರೇಕು ಮತ್ತು ನಮ್ಮ ಬಾಂಧವ್ಯಗಳು ವಿಶ್ವಾದ್ಯಂತ ಶಾಂತಿ ಮತ್ತು ಸ್ಥಿರತೆಗೆ ದಾರಿ ಮಾಡಬೇಕು ಎಂದು ನಾವು ನಿರ್ಧರಿಸಿದ್ದೆವು ಎಂದು ಮೋದಿ ಹೇಳಿದರು.‘ಇವು ನಮ್ಮ ದೊಡ್ಡ ಸಾಧನೆಗಳಾಗಿದ್ದು, ಭವಿಷ್ಯದಲ್ಲಿ ಈ ನಿಟ್ಟಿನಲ್ಲಿ ಇನ್ನಷ್ಟು
ಸಾಧನೆಗೆ ನಮಗೆ ಪ್ರೇರಣೆ ನೀಡಲಿವೆ’ ಎಂದು ಮೋದಿ ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2019: ನವದೆಹಲಿ: ತಮಿಳುನಾಡಿನ ಚಾರಿತ್ರಿಕ ತಾಣ ಮಹಾಬಲಿಪುರಂ (ಮಾಮಲ್ಲಪುರಂ) ಪಟ್ಟಣದಲ್ಲಿ ನಡೆದ ಎರಡನೇ ಅನೌಪಚಾರಿಕ ಶೃಂಗ ಸಭೆಯಲ್ಲಿ ಕಾಶ್ಮೀರದ ವಿಷಯ ಪ್ರಸ್ತಾಪಗೊಳ್ಳಲಿಲ್ಲ, ಚೀನೀ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭೇಟಿ ಬಗ್ಗೆ ಉಸುರಿದರು, ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಸುಮ್ಮನೇ ಕೇಳಿಸಿಕೊಂಡರು ಅಷ್ಟೆ. ಎರಡು ದಿನಗಳ ಶೃಂಗಸಭೆ ಸಮಾಪ್ತಿಯ ಬಳಿಕ 2019 ಅಕ್ಟೋಬರ್
12ರ ಶನಿವಾರ ವಿಶೇಷ ಪತ್ರಿಕಾಗೋಷ್ಠಿಯಲ್ಲಿ
ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಅವರು ಈ ವಿಷಯವನ್ನು ತಿಳಿಸಿದರು.
‘ಈ (ಕಾಶ್ಮೀರ) ವಿಷಯದ ಪ್ರಸ್ತಾಪವಾಗಲಿಲ್ಲ, ಅಥವಾ ಚರ್ಚೆ ನಡೆಯಲಿಲ್ಲ. ಏನಿದ್ದರೂ, ಇದು ಭಾರತದ ಆಂತರಿಕ ವಿಷಯ ಎಂಬ ನಮ್ಮ ನಿಲುವಂತೂ ಸ್ಪಷ್ಟವಾಗಿದೆ’ ಎಂದು
ಹೇಳಿದರು. ಆದಾಗ್ಯೂ ಕ್ಸಿ ಅವರು ಪ್ರಧಾನಿ ಮೋದಿ ಅವರಿಗೆ ಪಾಕಿಸ್ತಾನಿ ಪ್ರಧಾನಿ ಇಮ್ರಾನ್ ಖಾನ್ ಅವರು ಈ ವಾರಾರಂಭದಲ್ಲಿ ಬೀಜಿಂಗ್ಗೆ ನೀಡಿದ್ದ ಭೇಟಿಯ
ಬಗ್ಗೆ ವಿವರಿಸಿದರು. ಪ್ರಧಾನಿ ಮೋದಿಯವರು ಅದನ್ನು ಸುಮ್ಮನೇ ಕೇಳಿಸಿಕೊಂಡರು, ಆದರೆ ಪ್ರತಿಕ್ರಿಯಿಸಲಿಲ್ಲ ಎಂದು ಗೋಖಲೆ ನುಡಿದರು. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿದ ಬಳಿಕ ಕಳೆದ ಕೆಲವು ತಿಂಗಳುಗಳಲ್ಲಿ ಭಾರತ-ಚೀನಾ ಬಾಂಧವ್ಯ ಪ್ರಕ್ಷುಬ್ಧಗೊಂಡಿತ್ತು. ಈ ಹಿನ್ನೆಲೆಯಲ್ಲಿ ಭಾರತ
-ಚೀನಾ ಅನೌಪಚಾರಿಕ ಶೃಂಗಸಭೆ ನಡೆದಿತ್ತು. ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿದ ಭಾರತದ ಕ್ರಮವನ್ನು ವಿರೋಧಿಸಿದ ಪಾಕಿಸ್ತಾನವನ್ನು ಚೀನಾ ಬೆಂಬಲಿಸಿದ್ದರಿಂದ ಆ ದೇಶದ ಜೊತೆಗಿನ
ಭಾರತದ ಬಾಂಧವ್ಯ ಬಿಗಡಾಯಿಸಿತ್ತು. (ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)
2019: ಟೋಕಿಯೋ:ಪ್ರಬಲ ಹಗಿಬೀಸ್ ಚಂಡಮಾರುತವು 2019 ಅಕ್ಟೋಬರ್ 12ರ
ಶನಿವಾರ ಜಪಾನ್ನ ಟೋಕಿಯೋವನ್ನು ಅಪ್ಪಳಿಸಿದ್ದು, ಇದನ್ನು 60 ವರ್ಷಗಳಲ್ಲೇ ಅತ್ಯಂತ ಭೀಕರ ಚಂಡಮಾರುತ ಎಂದು ಬಣ್ಣಿಸಲಾಯಿತು. ಇದು ಅಪ್ಪಳಿಸುವುದಕ್ಕೂ ಮುನ್ನ ಟೋಕಿಯೋ ಹಾಗೂ ಸುತ್ತಮುತ್ತಲಿನ ನಗರಗಳಲ್ಲಿ ಭಾರೀ ಮಳೆ, ಬಿರುಗಾಳಿ ಸಂಭವಿಸಿ, ಅಪಾರ ಪ್ರಮಾಣದ ಹಾನಿಯೂ ಆಯಿತು. ಹಗಿಬೀಸ್ ಎಂದರೆ ಫಿಲಿಪಿನೋ ಭಾಷೆಯಲ್ಲಿ “ವೇಗ’ ಎಂದು ಅರ್ಥ. ಇದು ಉತ್ತರ-ವಾಯವ್ಯದತ್ತ ಮುನ್ನುಗ್ಗಿ, ಗಂಟೆಗೆ 162 ಕಿಲೋಮೀಟರ್ ವೇಗದಲ್ಲಿ ಅಪ್ಪಳಿಸಿತು. ಚಂಡಮಾರುತದ ಹಿನ್ನೆಲೆಯಲ್ಲಿ ಎಲ್ಲ ನಿಪ್ಪನ್ ಏರ್ವೆàಸ್ ಹಾಗೂ ಜಪಾನ್ ಏರ್ಲೈನ್ಸ್ನ ವಿಮಾನಗಳ ಸಂಚಾರ ರದ್ದಾಗಿವೆ. ಟೋಕಿಯೋ ಮತ್ತು ಒಸಾಕಾ ನಡುವಿನ ಬುಲೆಟ್ ರೈಲು ಸಂಚಾರವೂ ಸ್ಥಗಿತಗೊಂಡಿದೆ. ಟೋಕಿಯೋ ಡಿಸ್ನಿಲ್ಯಾಂಡ್ ಅನ್ನೂ ಶನಿವಾರ ಮುಚ್ಚಲಾಗಿತ್ತು.ಸುಮಾರು 17 ಸಾವಿರ ಪೊಲೀಸರು ಹಾಗೂ ಸೇನಾ ಸಿಬ್ಬಂದಿಯನ್ನು ರಕ್ಷಣೆ ಹಾಗೂ ಪರಿಹಾರ ಕಾರ್ಯಕ್ಕಾಗಿ ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. 60 ವರ್ಷಗಳ ಹಿಂದೆ ಅಂದರೆ 1958ರಲ್ಲಿ ಟೋಕಿಯೋಗೆ ಅಪ್ಪಳಿಸಿದ್ದ ಚಂಡಮಾರುತವು 1,200ಕ್ಕೂ ಹೆಚ್ಚು ಮಂದಿಯನ್ನು ಬಲಿಪಡೆದಿತ್ತು. ಈ ದುರಂತದಲ್ಲಿ 5 ಲಕ್ಷದಷ್ಟು ಮನೆಗಳು ಜಲಾವೃತವಾಗಿದ್ದವು.
2019: ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಇನ್ನೂ ಸಂಪರ್ಕ ಇಲ್ಲದೇ ಇರುವ ಬಾಕಿ ಸ್ಥಳಗಳಲ್ಲೂ ಸೋಮವಾರದಿಂದ ಪೋಸ್ಟ್ ಪೇಯ್ಡ್ ಮೊಬೈಲ್ ಸೇವೆಗಳು ಪುನಾರಂಭಗೊಳ್ಳಲಿವೆ ಎಂದು ಸರ್ಕಾರವು 2019 ಅಕ್ಟೋಬರ್ 12ರ ಶನಿವಾರ
ಪ್ರಕಟಿಸಿತು. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಪಡಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ನಿರ್ಬಂಧಗಳನ್ನು ವಿಧಿಸಿದ ಬಳಿಕ ಮೊಬೈಲ್ ಸೇವೆ ಸೇರಿದಂತೆ ಎಲ್ಲ ದೂರಸಂಪರ್ಕ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಇದಾಗಿ ಎರಡಕ್ಕೂ ಹೆಚ್ಚು ತಿಂಗಳುಗಳ ಬಳಿಕ ಎಲ್ಲ ಪೋಸ್ಟ್ ಪೇಯ್ಡ್ ಮೊಬೈಲ್ ಸೇವೆಗಳನ್ನು ಸೋಮವಾರ ಪುನಾರಂಭಿಸಾಗುವುದು ಎಂದು ಸರ್ಕಾರ ಹೇಳಿತು. ವಿಶೇಷ ಸ್ಥಾನಮಾನ ರದ್ದು ಪಡಿಸಿ ರಾಜ್ಯವನ್ನು ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಎಂಬುದಾಗಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಬಳಿಕ ಜನರ ಸಂಚಾರ, ದೂರವಾಣಿ ಮತ್ತು ಇಂಟರ್ ನೆಟ್ ಸೇವೆಗಳನ್ನು ಅಮಾನತುಗೊಳಿಸಿ ಜನರ ಚಲನವಲನಗಳ ಮೇಲೆ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಆಗಸ್ಟ್ ೫ರಿಂದ ರಾಜ್ಯದ ನೂರಾರು ನಾಯಕರನ್ನೂ ಬಂಧಿಸಲಾಗಿತ್ತು. ಭಯೋತ್ಪಾದನೆ ನಿಗ್ರಹ ಮತ್ತು ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡುವ ಸಲುವಾಗಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಪಡಿಸಲಾಗಿದೆ ಎಂದು ಸರ್ಕಾರ ಹೇಳಿತ್ತು. ‘ಪರಿಸ್ಥಿತಿಯ ಪುನರ್ ಪರಿಶೀಲನೆಯ ಬಳಿಕ, ಜಮ್ಮು ಮತ್ತು ಕಾಶ್ಮೀರದ ಉಳಿದ ಪ್ರದೇಶಗಳಲ್ಲಿ ಮೊಬೈಲ್ ಫೋನ್ ಸೇವೆಗಳನ್ನು ಪುನಾರಂಭಿಸುವ ನಿರ್ಧಾರವನ್ನು ಈಗ ಕೈಗೊಳಲಾಗಿದೆ ಎಂದು
ರಾಜ್ಯದ ಮುಖ್ಯ ಕಾರ್ಯದರ್ಶಿ ರೋಹಿತ್ ಕಂಸಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2019: ಶ್ರಿನಗರ: ಜಮ್ಮು
ಮತ್ತು ಕಾಶ್ಮೀರದ ಶ್ರೀನಗರದಲ್ಲಿ 2019 ಅಕ್ಟೋಬರ್ 12ರ ಶನಿವಾರ ಶಂಕಿತ ಉಗ್ರಗಾಮಿಗಳು ನಡೆಸಿದ ಗ್ರೆನೇಡ್ ದಾಳಿಯಲ್ಲಿ ಒಬ್ಬ ಮಹಿಳೆ ಸೇರಿದಂತೆ ಕನಿಷ್ಠ ೮ ಮಂದಿ ಗಾಯಗೊಂಡರು
ಎಂದು
ಪೊಲೀಸ್ ಅಧಿಕಾರಿಗಳು ತಿಳಿಸಿದರು. ಆಗಸ್ಟ್ ೫ರಂದು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದು ಪಡಿಸಿ, ಜನ ಸಂಚಾರದ ಮೇಲೆ
ನಿರ್ಬಂಧಗಳನ್ನು ವಿಧಿಸಿದ ಬಳಿಕ ಕಾಶ್ಮೀರ ಕಣಿವೆಯಲ್ಲಿ ಸಂಭವಿಸಿದ ಈ ಮಾದರಿಯ ಮೂರನೇ
ಘಟನೆ ಇದಾಯಿತು. ಶಂಕಿತ ಭಯೋತ್ಪಾದಕರು ಹರಿ ಸಿಂಗ್ ಹೈ ಸ್ಟ್ರೀಟಿನಲ್ಲಿ ಗ್ರೆನೇಡ್
ಎಸೆದಿದ್ದು, ಅದು ಲಾಲ್ ಚೌಕದಿಂದ ಕೆಲವು ನೂರು ಮೀಟರ್ ದೂರ ರಸ್ತೆ ಬದಿಯಲ್ಲಿ ಸ್ಫೋಟಗೊಂಡಿದೆ. ಈ ಸ್ಥಳವು ನಾಗರಿಕ
ಸಚಿವಾಲಯ ಮತ್ತು ರಾಜ್ಯ ವಿಧಾನಸಭೆಗೆ ಸಮೀಪವಿರುವ ಸ್ಥಳವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ನಿರ್ಬಂಧಗಳ
ಹಿನ್ನೆಲೆಯಲ್ಲಿ ಅಂಗಡಿಗಳು ಮುಚ್ಚಿದ್ದು, ಪ್ರದೇಶದಲ್ಲಿ ಹಣ್ಣು ಮತ್ತು ಸೆಕೆಂಡ್ ಹ್ಯಾಂಡ್ ಬಟ್ಟೆಗಳನ್ನು ಮಾರುವ ವ್ಯಾಪಾರಿಗಳ ಕೈಗಾಡಿಗಳು ಇದ್ದವು ಎಂದು ಅವರು ಹೇಳಿದರು. (ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment