2019: ನ್ಯೂಯಾರ್ಕ್: ವಿಶ್ವಸಂಸ್ಥೆಯ ೭೪ನೇ ಮಹಾ ಅಧಿವೇಶನವನ್ನು ಉದ್ದೇಶಿಸಿ 2019 ಸೆಪ್ಟೆಂಬರ್ 27ರ ಶುಕ್ರವಾರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ’ಸಬ್ ಕಾ ಸಾಥ್ ಸಬ್
ಕಾ ವಿಕಾಸ್’ ಘೋಷಣೆಯನ್ನು ಮೊಳಗಿಸಿ, ಭಯೋತ್ಪಾದನೆ, ಜಾಗತಿಕ ತಾಪಮಾನ ಏರಿಕೆ ವಿರುದ್ಧ ’ಸಂಯುಕ್ತ ಸಮರ’ಕ್ಕೆ ಕರೆ ನೀಡಿದರು. ‘ಸಬ್
ಕಾ ಸಾಥ್ ಸಬ್ ಕಾ ವಿಕಾಸ್’ ಘೋಷಣೆಯು ತಮ್ಮ
ಸರ್ಕಾರದ ಸ್ಫೂರ್ತಿ ಮಂತ್ರವಾಗಿದ್ದು, ಭಾರತದ ಅಭಿವೃದ್ಧಿಯು ಇತರ ರಾಷ್ಟ್ರಗಳಿಗೂ ಸ್ಫೂರ್ತಿ ನೀಡಬಲ್ಲುದು’ ಎಂದು
ಪ್ರಧಾನಿ ಹಿಂದಿಯಲ್ಲಿ ಮಾತನಾಡುತ್ತಾ ಹೇಳಿದರು. ಜನರ ಪಾಲ್ಗೊಳ್ಳುವಿಕೆಯೊಂದಿಗೆ ಜನ ಕಲ್ಯಾಣವು ನಮ್ಮ
ಮಂತ್ರವಾಗಿದೆ. ನೂತನ ಭಾರತವು ಜಾಗತಿಕ ಆಶಯಗಳನ್ನು ಹೊಂದಿದೆ’ ಎಂದು ಅವರು ನುಡಿದರು. ‘ನಾನು
ಇಲ್ಲಿಗೆ ಬಂದಾಗ ವಿಶ್ವಸಂಸ್ಥೆಯ ಗೋಡೆಯಲ್ಲಿ ’ಪ್ಲಾಸ್ಟಿಕ್ ಬಳಕೆ ಇನ್ನಿಲ್ಲ’ ಎಂಬ ಬರಹ ಬರೆದಿರುವುದನ್ನು ಓದಿದೆ. ಭಾರತವು ಬಳಸಿ ಬಿಸಾಡುವಂತಹ (ಏಕ ಬಳಕೆಯ) ಪ್ಲಾಸ್ಟಿಕ್ನಿಂದ ರಾಷ್ಟ್ರವನ್ನು ಮುಕ್ತಗೊಳಿಸಲು ಬೃಹತ್ ಪ್ರಚಾರಾಭಿಯಾನವನ್ನು ನಡೆಸುತ್ತಿದೆ ಎಂದು ನಿಮಗೆ ತಿಳಿಸಲು ನನಗೆ ಸಂತಸವಾಗುತ್ತಿದೆ’ ಎಂದು
ಪ್ರಧಾನಿ ಭಾರೀ
ಕರತಾಡನದ ಮಧ್ಯೆ ಹೇಳಿದರು. ‘ವಿಶ್ವದ
ಅತಿದೊಡ್ಡ ಸ್ವಚ್ಛತಾ ಕಾರ್ಯಕ್ರಮವನ್ನು ಭಾರತವು ಕೇವಲ ೫ ತಿಂಗಳಲ್ಲಿ ಪೂರ್ಣಗೊಳಿಸಿದೆ
ಮತ್ತು ರಾಷ್ಟ್ರದಲ್ಲಿ ೧೧ ಕೋಟಿ ಶೌಚಾಲಯಗಳನ್ನು
ನಿರ್ಮಿಸಿದೆ’ ಎಂದು
ಮೋದಿ ವಿವರಿಸಿದರು. ತಮ್ಮ ಸರ್ಕಾರದ ’ಆಯುಷ್ಮಾನ್ ಭಾರತ’ ಯೋಜನೆಯನ್ನು ಪ್ರಸ್ತಾಪಿಸಿದ ಪ್ರಧಾನಿ ಮೋದಿ, ’ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವೊಂದು ಯಶಸ್ವಿಯಾಗಿ ವಿಶ್ವದ ಅತಿದೊಡ್ಡ ಆರೋಗ್ಯ ವಿಮಾ ಯೋಜನೆಯನ್ನು ಜಾರಿಗೊಳಿಸಿ, ೫೦೦ ಮಿಲಿಯನ್ (೫೦೦ ಕೋಟಿ) ಜನರಿಗೆ ವರ್ಷಕ್ಕೆ ೫ ಲಕ್ಷ ರೂಪಾಯಿಗಳವರೆಗಿನ
ಉಚಿತ ಚಿಕಿತ್ಸೆಗಾಗಿ ಆರೋಗ್ಯ ರಕ್ಷೆಯ ಸವಲತ್ತನ್ನು ಒದಗಿಸಿರುವಾಗ ಈ ಯೋಜನೆಯ
ಸಾಧನೆಗಳು ಮತ್ತು ಸ್ಪಂದನ ವ್ಯವಸ್ಥೆಗಳು ಜಗತ್ತಿಗೆ
ಹೊಸ ದಾರಿಯನ್ನು ತೋರಿಸಬಲ್ಲವು’ ಎಂದು
ಹೇಳಿದರು. ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಆರಂಭಿಸಲಾದ ’ಆಯುಷ್ಮಾನ್ ಭಾರತ’ ಯೋಜನೆಯು ೧೦ ಕೋಟಿಗೂ ಹೆಚ್ಚಿನ
ಅತ್ಯಂದ ದುರ್ಬಲ ಕುಟುಂಬಗಳಿಗೆ ಅಥವಾ ಅಂದಾಜು ೫೦ ಕೋಟಿ ಜನರಿಗೆ
ವೈದ್ಯಕೀಯ ಸವಲತ್ತನ್ನು ಒದಗಿಸುವ ಗುರಿ ಹೊಂದಿದೆ. ಯೋಜನೆಯ ಅಡಿಯಲ್ಲಿ ಫಲಾನುಭವಿ ಕುಟುಂಬಕ್ಕೆ ವರ್ಷಕ್ಕೆ ೫ ಲಕ್ಷ ರೂಪಾಯಿಗಳ
ಆರೋಗ್ಯ ವಿಮಾ ರಕ್ಷಣೆಯನ್ನು ಒದಗಿಸಲಾಗುತ್ತದೆ. ಭಯೋತ್ಪಾದನೆಯ ವಿರುದ್ಧ ಅಂತಾರಾಷ್ಟ್ರೀಯ ಸಮುದಾಯವು ಒಟ್ಟಾಗಿ ನಿಲ್ಲಬೇಕಾದ ಅಗತ್ಯವನ್ನು ಪ್ರತಿಪಾದಿಸಿದ ಪ್ರಧಾನಿ ಮೋದಿ, ವಿಶ್ವದ ಅತ್ಯಂತ ದೊಡ್ಡ ಸವಾಲುಗಳಲ್ಲಿ ಒಂದಾಗಿರುವ ಭಯೋತ್ಪಾದನೆಯನ್ನು ಯಾವುದೇ ಒಂದು ರಾಷ್ಟ್ರ ಏಕಾಂಗಿಯಾಗಿ ಎದುರಿಸುವುದು ಕಷ್ಟ ಎಂದು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2019: ನವದೆಹಲಿ: ಕರಾವಳಿ ನಿಯಂತಣ ವಲಯ ನಿಯಮಾವಳಿಗಳನ್ನು ಉಲ್ಲಂಘಿಸಿ ಕೋಚಿಯ ಮರಡುವಿನಲ್ಲಿ ನಿರ್ಮಿಸಲಾದ ನಾಲ್ಕು ಅಪಾರ್ಟ್ಮೆಂಟ್ಗಳ ನೆಲಸಮ ಕಾರ್ಯವನ್ನು
ತಡೆಯಲು ಕೇರಳ ಸರ್ಕಾರವು ನಡೆಸಿದ ಕೊನೆಯ ಕ್ಷಣದ ಯತ್ನಗಳನ್ನು 2019 ಸೆಪ್ಟೆಂಬರ್
27ರ ಶುಕ್ರವಾರ ಖಂಡತುಂಡವಾಗಿ
ತಿರಸ್ಕರಿಸಿದ ಸುಪ್ರೀಂಕೋರ್ಟ್ ಪ್ರತಿಯೊಬ್ಬ ಫ್ಲ್ಯಾಟ್ ಮಾಲೀಕರಿಗೂ ಮಧ್ಯಂತರ ಪರಿಹಾರವಾಗಿ ೨೫ ಲಕ್ಷ ರೂಪಾಯಿಗಳನ್ನು
ಪಾವತಿ ಪಾಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿತು.
‘ಏನಾದರೂ ಸರಿ, ಕಟ್ಟಡಗಳನ್ನು ನೆಲಸಮ ಮಾಡಲೇಬೇಕು’
ಎಂದು ಕಟ್ಟಾಜ್ಞೆ ನೀಡಿದ ಸುಪ್ರೀಂಕೋರ್ಟ್ ’ಅಕ್ರಮ ಮುಂದುವರಿಕೆಗೆ ಕೋರ್ಟ್ ಅವಕಾಶ ನೀಡಲು ಸಾಧ್ಯವಿಲ್ಲ’ ಎಂದು
ದೃಢವಾಗಿ ಹೇಳಿತು. ಕಟ್ಟಡಗಳಲ್ಲಿ ವಾಸವಾಗಿರುವವರನ್ನು ತೆರವುಗೊಳಿಸುವುದಾಗಿಯೂ, ಕಟ್ಟಡಗಳನ್ನು ಹಾಗೆಯೇ ಉಳಿಸಿಕೊಳ್ಳಲು ಅನುಮತಿ ನೀಡುವಂತೆಯೂ ಕೇರಳ ಸರ್ಕಾರ ಕೋರಿತು. ‘ನಿಮಗೆ ಅಪಾರ್ಟ್ಮೆಂಟ್ ಸಮುಚ್ಚಯಗಳನ್ನು ನೆಲಸಮ ಮಾಡಲು ಆಗುತ್ತದೆಯೋ ಇಲ್ಲವೋ ಹೇಳಿ. ರಾಜ್ಯ ಸರ್ಕಾರಕ್ಕೆ ಈ ಕೆಲಸ ಮಾಡಲು
ಆಗುವುದಿಲ್ಲವಾದರೆ ಅದನ್ನು ನೆಲಸಮ ಮಾಡಿಸಲು ನ್ಯಾಯಾಲಯಕ್ಕೆ ಗೊತ್ತಿದೆ’
ಎಂದು ನ್ಯಾಯಮೂರ್ತಿಗಳು ಕೇರಳ ಸರ್ಕಾರಕ್ಕೆ ಹೇಳಿದರು. ಶುಕ್ರವಾರ ವಿಚಾರಣೆಯ ಕೊನೆಗೆ ಕಟ್ಟಡ ನೆಲಸಮಗೊಳಿಸಿ ಅವಶೇಷಗಳನ್ನು ತೆರವುಗೊಳಿಸಲು ೧೩೮ ದಿನಗಳ ಕಾಲಮಿತಿಯನ್ನು ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಕ್ಕೆ ನೀಡಿತು. ನಿಯಮಾವಳಿಗಳನ್ನು ಉಲ್ಲಂಘಿಸಿ ನಿರ್ಮಿಸಲಾದ ಸಮುಚ್ಚಯಗಳಲ್ಲಿ ಫ್ಲ್ಯಾಟ್ಗಳನ್ನು ಖರೀದಿಸಿದವರಿಗೆ ತಲಾ ೨೫ ಲಕ್ಷ ರೂಪಾಯಿಗಳ
ಮಧ್ಯಂತರ ಪರಿಹಾರವನ್ನು ಪಾವತಿಸಲು ರಾಜ್ಯ ಸರ್ಕಾರಕ್ಕೆ ನಾಲ್ಕು ವಾರಗಳ ಕಾಲಾವಕಾಶವನ್ನು ಸುಪ್ರೀಂಕೋರ್ಟ್ ನೀಡಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2019: ನವದೆಹಲಿ: ಕೇರಳ, ಉತ್ತರ ಪ್ರದೇಶ, ಛತ್ತೀಸ್ ಗಢ ಮತ್ತು ತ್ರಿಪುರಾ
ರಾಜ್ಯಗಳ ಒಟ್ಟು ೪ ವಿಧಾನಸಭಾ ಕ್ಷೇತ್ರಗಳಿಗೆ
ನಡೆದ ಉಪ ಚುನಾಣಾ ಫಲಿತಾಂಶಗಳು
2019 ಸೆಪ್ಟೆಂಬರ್
27ರ ಶುಕ್ರವಾರ ಪ್ರಕಟವಾಗಿದ್ದು, ಬಿಜೆಪಿ ಎರಡು ಕ್ಷೇತ್ರಗಳಲ್ಲಿ ಜಯಿಸಿದರೆ, ಕಾಂಗ್ರೆಸ್ ಹಾಗೂ ಎಡ ಪ್ರಜಾತಾಂತ್ರಿಕ ರಂಗ
(ಎಲ್ ಡಿಎಫ್) ತಲಾ ಒಂದೊಂದು ಸ್ಥಾನ ಗೆದ್ದಿವು. ಒಟ್ಟಾರೆಯಾಗಿ, ಬಿಜೆಪಿಗೆ ಒಂದು ಸ್ಥಾನ ನಷ್ಟವಾದರೆ, ಕಾಂಗ್ರೆಸ್ ಒಂದು ಸ್ಥಾನ ಕಳೆದುಕೊಂಡು ಒಂದನ್ನು ಪಡೆದುಕೊಂಡಿತು. ಆದರೆ, ಎಡರಂಗವು ಕಾಂಗ್ರೆಸ್ ಪಕ್ಷದ ೫೪ ವರ್ಷಗಳ ಭದ್ರಕೋಟೆಯನ್ನು
ವಶಪಡಿಸಿಕೊಂಡು ಹೊಸ ಇತಿಹಾಸ ನಿರ್ಮಿಸಿತು. ಕೇರಳದ ಪಾಲಾ ಕ್ಷೇತ್ರದಲ್ಲಿ ಎಡರಂಗ ಜಯಭೇರಿ ಭಾರಿಸಿ ಕಾಂಗ್ರೆಸ್ ಭದ್ರಕೋಟೆಯನ್ನು ಛಿದ್ರಗೊಳಿಸಿತು. ಛತ್ತೀಸ್ ಗಢದ ದಾಂತೆವಾಡ ಕ್ಷೇತ್ರವನ್ನು ಬಿಜೆಪಿಯಿಂದ ಕಾಂಗ್ರೆಸ್ ಕಿತ್ತುಕೊಂಡಿತು. ಉತ್ತರ ಪ್ರದೇಶದ ಹಮೀರಪುರ ಹಾಗೂ
ತ್ರಿಪುರಾದ ಬಾಧರ್ಘಾಟ್ ಕ್ಷೇತ್ರಗಳನ್ನು ಬಿಜೆಪಿ ಉಳಿಸಿಕೊಂಡಿತು. ಕೇರಳದ ಕೊಟ್ಟಾಯಂ ಜಿಲ್ಲೆಯ ಪಾಲಾ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ಸಿನ ಭದ್ರಾತಿಭದ್ರಕೋಟೆ ಎನಿಸಿತ್ತು. ಕಳೆದ ೫೪ ವರ್ಷಗಳಿಂದಲೂ ಕಾಂಗ್ರೆಸ್
ಪಕ್ಷವೇ ಇಲ್ಲಿ ಗೆಲ್ಲುತ್ತಾ ಬಂದಿತ್ತು. ಕೇರಳ ಕಾಂಗ್ರೆಸ್ ಮುಖ್ಯಸ್ಥ ಕೆ.ಎಂ. ಮಣಿ
ಅವರು ೧೯೬೫ರಿಂದ ಇಲ್ಲಿಯವರೆಗೆ ಈ ಕ್ಷೇತ್ರದಲ್ಲಿ ಸತತ
೧೨ ಬಾರಿ ಚುನಾವಣೆ ಗೆದ್ದು ಶಾಸಕರಾಗಿದ್ದರು. ಅವರ ನಿಧನದಿಂದ ತೆರವಾದ ಈ ಕ್ಷೇತ್ರದಲ್ಲಿ ಕಾಂಗ್ರೆಸ್
ಮೊದಲ ಬಾರಿಗೆ ಅಪಜಯ ಅನುಭವಿಸಿತು. ಎಡರಂಗದ ಅಭ್ಯರ್ಥಿ
ಮಣಿ ಸಿ. ಕಪ್ಪನ್ ಅವರು ಯುಡಿಎಫ್ ಅಭ್ಯರ್ಥಿ ಟಾಮ್ ಜೋಸ್ ಅವರನ್ನು ೨,೯೪೩ ಮತಗಳ
ಅಂತರದಿಂದ ಸೋಲಿಸಿದರು. ಇದೇ ಸೋಮವಾರದಂದು ನಡೆದ ಚುನಾವಣೆಯಲ್ಲಿ ಪಾಲಾ ಕ್ಷೇತ್ರದಲ್ಲಿ ಶೇ. ೭೧.೪೧ರಷ್ಟು ಮತದಾನವಾಗಿತ್ತು.
(ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)
2019: ವಾಷಿಂಗ್ಟನ್: ಚೀನಾದಲ್ಲಿ ಬಂಧಿಸಲ್ಪಟ್ಟಿರುವ ೧೦ ಲಕ್ಷ ಉಯಿಘುರ್ಗಳು ಮತ್ತು ಟರ್ಕಿ ಮಾತನಾಡುವ ಮುಸ್ಲಿಮರ ಬಗ್ಗೆ ಪಾಕಿಸ್ತಾನ ಏಕೆ ತುಟಿ ಬಿಚ್ಚುತ್ತಿಲ್ಲ ಎಂಬುದಾಗಿ ಪ್ರಶ್ನಿಸುವ ಮೂಲಕ ಅಮೆರಿಕದ ಉನ್ನತ ರಾಜತಂತ್ರಜ್ಞೆ ಅಲೀಸ್ ವೆಲ್ಸ್ ಅವರು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರನ್ನು 2019 ಸೆಪ್ಟೆಂಬರ್ 27ರ ಶುಕ್ರವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ ಭಾರತೀಯ ಸಂವಿಧಾನದ ೩೭೦ನೇ ವಿಧಿಯನ್ನು ನವದೆಹಲಿಯು ರದ್ದು ಪಡಿಸಿದ ಬಳಿಕ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಪ್ರಕ್ಷುಬ್ದತೆ ತೀವ್ರಗೊಂಡಿರುವುದರ ನಡುವೆಯೇ ದಕ್ಷಿಣ ಮತ್ತು ಕೇಂದ್ರ ಏಷ್ಯಾದ ಅಮೆರಿಕದ ಹಂಗಾಮೀ ಸಹಾಯಕ ಕಾರ್ಯದರ್ಶಿ ಅಲೀಸ್ ವೆಲ್ಸ್ ಅವರು ’ಇಮ್ರಾನ್ ಖಾನ್ ಅವರ ಕಾಶ್ಮೀರ ಕುರಿತಾದ ಟೀಕೆಗಳಿಂದ ಯಾವ ಪ್ರಯೋಜನವೂ ಇಲ್ಲ’ ಎಂದು ಜರೆದರು. ‘ಅಣ್ವಸ್ತ್ರ ಶಕ್ತಿ ರಾಷ್ಟ್ರಗಳ ನಡುವಣ ವಾಗ್ಯುದ್ಧ ಇಳಿಸುವ ವಿಚಾರ ಸ್ವಾಗತಾರ್ಹ, ಆದರೆ ಕಾಶ್ಮೀರ ಕುರಿತ ಇಮ್ರಾನ್ ಖಾನ್ ಅವರ ಟೀಕೆಗಳಿಂದ ಯಾವ ಪ್ರಯೋಜನವೂ ಇಲ್ಲ’ ಎಂದು ಅಲೀಸ್ ಹೇಳಿದರು. ‘ಒಂದು ಮಿಲಿಯನ್ (೧೦ ಲಕ್ಷ) ಉಯಿಘರ್ಗಳನ್ನು ಸೆರೆಯಲ್ಲಿ ಇಟ್ಟಿರುವ ಚೀನಾ ಬಗ್ಗೆ ಏಕೆ ತುಟಿ ಬಿಚ್ಚುತ್ತಿಲ್ಲ?’ ಎಂದು ಇಮ್ರಾನ್ ಖಾನ್ ಅವರನ್ನು
ಪ್ರಶ್ನಿಸಿದ ಅಲೀಸ್ ವೆಲ್ಸ್ ’ಕಾಶ್ಮೀರದ ಬಗ್ಗೆ ವ್ಯಕ್ತ ಪಡಿಸುತ್ತಿರುವುದಕ್ಕಿಂತ ಮಿಗಿಲಾದ ಕಾಳಜಿಯನ್ನು ಅವರು ಪಶ್ಚಿಮ ಚೀನಾದಲ್ಲಿ ಬಂಧನಕ್ಕೆ ಒಳಗಾಗಿರುವ ಮುಸ್ಲಿಮರ ಬಗೆಗೂ ಅವರು ವ್ಯಕ್ತ ಪಡಿಸುದನ್ನು ಕಾಣಲು ನಾನು ಬಯಸುತ್ತೇನೆ. ಕಾಶ್ಮೀರಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಚೀನಾದ ಮುಸ್ಲಿಮರ ಮಾನವ ಹಕ್ಕುಗಳನ್ನು ಕಳೆದುಕೊಂಡಿರುವ ಬಗ್ಗೆ ಇಮ್ರಾನ್ ಖಾನ್ ಅವರಿಂದ ಹೆಚ್ಚಿನ ಕಾಳಜಿ ವ್ಯಕ್ತಗೊಳ್ಳುವುದನ್ನು ನಾನು ನೋಡಬಯಸುತ್ತೇನೆ. ವಿಶ್ವಸಂಸ್ಥೆಯ ಮಹಾ ಅಧಿವೇಶನದಲ್ಲಿ ಅಮೆರಿಕದ ಆಡಳಿತವು ಚೀನಾದ್ಯಂತ ಮುಸ್ಲಿಮರು ಅನುಭವಿಸುತ್ತಿರುವ ದುಃಸ್ಥಿತಿ ಮತ್ತು ಅವರ ಭೀಕರ ಪರಿಸ್ಥಿತಿ ಬಗ್ಗೆ ಬೆಳಕು ಚೆಲ್ಲಲು ಯತ್ನಿಸಿದೆ’
ಎಂದು ನುಡಿದರು.
(ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2019: ನವದೆಹಲಿ: ಕಾಂಗ್ರೆಸ್ ಮತ್ತು ಜೆಡಿಎಸ್ ನ 17 ಶಾಸಕರ ರಾಜೀನಾಮೆಯಿಂದ ತೆರವಾಗಿದ್ದ ಕ್ಷೇತ್ರಗಳಲ್ಲಿ 15 ಕ್ಷೇತ್ರಗಳ ಉಪಚುನಾವಣೆಗಳಿಗೆ ಮರು ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗವು 2019 ಸೆಪ್ಟೆಂಬರ್ 27ರ ಶುಕ್ರವಾರ ಪ್ರಕಟಿಸಿತು. ಈ 15 ಕ್ಷೇತ್ರಗಳಿಗೆ ಡಿಸೆಂಬರ್ 05ರಂದು ಉಪಚುನಾವಣೆ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ನವಂಬರ್ 11ರಂದು ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದೆ ಮತ್ತು ನವಂಬರ್ 18 ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿರುತ್ತದೆ. ನವಂಬರ್ 19ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು ನವಂಬರ್ 21ರಂದು ನಾಮಪತ್ರಗಳನ್ನು ಹಿಂಪಡೆಯಲು ಕಡೇ ದಿನವಾಗಿರುತ್ತದೆ ಎಂದು ಚುನಾವಣಾ ಆಯೋಗದ ಮೂಲಗಳು
ಹೇಳಿದವು. ಅಥಣಿ, ಕಾಗವಾಡ, ಗೋಕಾಕ್, ಯಲ್ಲಾಪುರ, ಹಿರೇಕೆರೂರ್, ರಾಣಿಬೆನ್ನೂರು, ವಿಜಯನಗರ, ಚಿಕ್ಕಬಳ್ಳಾಪುರ, ಕೆ.ಆರ್.ಪುರ, ಯಶವಂತಪುರ, ಮಹಾಲಕ್ಷ್ಮೀ ಲೇಔಟ್, ಶಿವಾಜಿನಗರ, ಹೊಸಕೋಟೆ, ಕೆ.ಆರ್. ಪೇಟೆ ಮತ್ತು ಹುಣಸೂರು ಕ್ಷೇತ್ರಗಳಿಗೆ ಈ ಉಪಚುನಾವಣೆ ನಡೆಯಲಿದೆ.ಈ ಮೊದಲು ಅಕ್ಟೋಬರ್ 21ರಂದು ಈ 15 ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕ ನಿಗದಿಯಾಗಿತ್ತು. ಆದರೆ ತಮ್ಮ ಅಮಾನತನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಿರುವ 17 ಜನ ಶಾಸಕರ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿರುವ ತ್ರಿಸದಸ್ಯ ಪೀಠದ ಎದುರು ಚುನಾವಣಾ ಆಯೋಗವು 17 ಅನರ್ಹ ಶಾಸಕರ ಪೈಕಿ 15 ಶಾಸಕರ ಕ್ಷೇತ್ರದಲ್ಲಿ ಅಕ್ಟೋಬರ್ 21ರಂದು ನಡೆಸಲುದ್ದೇಶಿಸಿದ್ದ ಉಪಚುನಾವಣೆಯ ವೇಳಾಪಟ್ಟಿಯನ್ನು ಮುಂದೂಡಿಕೆ ಮಾಡುವ ಬಗ್ಗೆ ಅರಿಕೆ ಮಾಡಿಕೊಂಡಿತ್ತು.(ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
ಇಂದಿನ ಇತಿಹಾಸ History Today ಸೆಪ್ಟೆಂಬರ್ 27
(2018+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment