ನಾನು ಮೆಚ್ಚಿದ ವಾಟ್ಸಪ್

Wednesday, September 4, 2019

ಇಂದಿನ ಇತಿಹಾಸ History Today ಸೆಪ್ಟೆಂಬರ್ 04

2019: ನವದೆಹಲಿ: ಪುಲ್ವಾಮ ದಾಳಿಯ ಸೂತ್ರಧಾರಿ ಹಾಗೂ ಜೈಶ್-ಇ-ಮೊಹಮ್ಮದ್ ಮುಖ್ಯಸ್ಥ
ಮೌಲಾನಾ ಮಸೂದ್ ಅಜ್ಹರ್, ಲಷ್ಕರ್ ಇ-ತೊಯ್ಬಾದ ಹಫೀಜ್ ಸಯೀದ್ ಮತ್ತು ಝಕಿ-ಉರ್-ರಹಮಾನ್ ಲಖ್ವಿ ಹಾಗೂ ಭೂಗತ ಪಾತಕಿ ಮತ್ತು ೧೯೯೩ರ ಮುಂಬೈ ಬಾಂಬ್ ದಾಳಿಗಳ ಮುಖ್ಯ ಸಂಚುಕೋರ ದಾವೂದ್ ಇಬ್ರಾಹಿಂ ಅವರನ್ನು ’ಭಯೋತ್ಪಾದಕರು’ ಎಂಬುದಾಗಿ ಭಾರತ ಸರ್ಕಾರ ಘೋಷಣೆ ಮಾಡಿತು.  ಭಯೋತ್ಪಾದನೆ ಕೃತ್ಯಗಳ ಜೊತೆ ಸಂಪರ್ಕ ಇದೆಯೆಂದು ಶಂಕಿಸಲಾದ ವ್ಯಕ್ತಿಯನ್ನು (ಸಂಘಟನೆಗೆ ಬದಲಾಗಿ) ಭಯೋತ್ಪಾದಕ ಎಂಬುದಾಗಿ ಘೋಷಿಸಿ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ರಾಜ್ಯ ಪೊಲೀಸರ ಅನುಮತಿ ಇಲ್ಲದೆಯೇ ಅಂತಹ ವ್ಯಕ್ತಿಗಳ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶ ಕಲ್ಪಿಸಿ ಜುಲೈ ತಿಂಗಳಲ್ಲಿ ಅಂಗೀಕರಿಸಲಾದ ಮಸೂದೆಯಡಿಯಲ್ಲಿ ’ಭಯೋತ್ಪಾದಕರು’ ಎಂಬುದಾಗಿ ಘೋಷಿಸಲ್ಪಟ್ಟ ಮೊದಲ ವ್ಯಕ್ತಿಗಳು ಇವರಾದರು. ಅಜ್ಹರ್, ಸಯೀದ್ ಮತ್ತು ಲಖ್ವಿ ಈ ಮೂವರು ಪಾಕಿಸ್ತಾನೀಯರಾಗಿದ್ದರೆ, ದಾವೂದ್ ಭಾರತೀಯನಾಗಿದ್ದು ಪ್ರಸ್ತುತ ಪಾಕಿಸ್ತಾನದಲ್ಲಿ ವಾಸವಾಗಿದ್ದಾನೆ ಎಂದು ನಂಬಲಾಗಿದೆ.  ಅಜ್ಹರ್ ನೇತೃತ್ವದ ಜೈಶ್-ಇ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯು ೨೦೦೧ರಷ್ಟು ಹಿಂದೆಯೇ ಭಾರತೀಯ ಸಂಸತ್ತಿನ ಮೇಲೆ ದಾಳಿ ನಡೆಸಿದ್ದಲ್ಲದೆ ಈ ವರ್ಷದ ಆದಿಯಲ್ಲಿ ಪುಲ್ವಾಮದಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ ಪಿಎಫ್) ಮೇಲೆ ಭಯೋತ್ಪಾದಕ ದಾಳಿ ನಡೆಸಿತ್ತು. ಪುಲ್ವಾಮ ದಾಳಿಯಲಿ ೪೦ ಮಂದಿ ಯೋಧರು ಹುತಾತ್ಮರಾಗಿದ್ದರು. ಈ ದಾಳಿಯ ವಿರುದ್ಧ ಸೇಡಿನ ಕ್ರಮವಾಗಿ ಭಾರತವು ಪಾಕಿಸ್ತಾನದ ಬಾಲಾಕೋಟ್‌ನಲ್ಲಿನ ಜೈಶ್-ಇ-ಮೊಹಮ್ಮದ್ ತರಬೇತಿ ಶಿಬಿರದ ಮೇಲೆ ಭಾರೀ ವೈಮಾನಿಕ ಬಾಂಬ್ ದಾಳಿ ನಡೆಸಿತ್ತು.  ೨೦೧೯ರ ಮೇ ೧ರಂದು ನಡೆದ ವಿಶ್ವಸಂಸ್ಥೆ ಭದ್ರತಾ ಮಂಡಳಿಯು ಮಸೂದ್ ಅಜ್ಹರನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕ ಎಂಬುದಾಗಿ ಘೋಷಿಸಿತ್ತು. ೧೯೯೪ರಲ್ಲಿ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಬಂಧಿಸಲ್ಪಟ್ಟಿದ್ದ ಅಜ್ಹರನನ್ನು ೧೯೯೯ರ ಡಿಸೆಂಬರಿನಲ್ಲಿ, ಅಪಹರಣಕಾರರು ಇಂಡಿಯನ್ ಏರ್ ಲೈನ್ಸ್ ವಿಮಾನ ಐಸಿ೮೧೪ನ್ನು ಅಪಹರಿಸಿ ಪ್ರಯಾಣಿಕರ ಬಿಡುಗಡೆಗೆ ಅಜ್ಹರನನ್ನು ಬಿಡುಗಡೆ ಮಾಡಬೇಕೆಂಬ ಬೇಡಿಕೆ ಇಟ್ಟಾಗ ಬಿಡುಗಡೆ ಮಾಡಲಾಗಿತ್ತು. ೨೦೦೮ರ ಮುಂಬೈ ಭಯೋತ್ಪಾದಕ ದಾಳಿಗಳ ಸೂತ್ರಧಾರಿಯಾದ ಹಫೀಜ್ ಸಯೀದ್ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ’ಮೋಸ್ಟ್ ವಾಂಟೆಡ್ ಲಿಸ್ಟ್’ನಲ್ಲಿ ಇರುವ ವ್ಯಕ್ತಿ. ಸಯೀದ್ ನೇತೃತ್ವದ ಲಷ್ಕರ್-ಇ-ತೊಯ್ಬಾ ಸಂಘಟನೆಯ ೧೦ ಸದಸ್ಯರು ಮುಂಬೈಯಾದ್ಯಂತ ನಾಲ್ಕು ದಿನಗಳ ಅವಧಿಯಲ್ಲಿ ೧೨ ಸಮನ್ವಯಿತ ಗುಂಡಿನ ದಾಳಿ ಮತ್ತು ಬಾಂಬ್ ದಾಳಿಗಳನ್ನು ನಡೆಸಿದ್ದರು. ಈ ದಾಳಿಯಲ್ಲಿ ೯ ಮಂದಿ ದಾಳಿಕೋರರು ಸೇರಿದಂತೆ ೧೭೪ ಜನರು ಸಾವನ್ನಪ್ಪಿ, ೩೦೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಸಯೀದ್ ನೇತೃತ್ವದ ಸಂಘಟನೆಗಳಾದ ಲಷ್ಕರ್ ಮತ್ತು ಜಮಾತ್-ಉದ್-ದವಾ ಸಂಘಟನೆಗಳನ್ನು ಭಾರತವು ಈಗಾಗಲೇ ನಿಷೇಧಿಸಿದ್ದು, ಅಮೆರಿಕ, ಇಂಗ್ಲೆಂಡ್, ಐರೋಪ್ಯ ಒಕ್ಕೂಟ ಮ್ತು ಆಸ್ಟ್ರೇಲಿಯಾ ಕೂಡಾ ಈ ಸಂಘಟನೆಗಳನ್ನು ನಿಷೇಧಿಸಿವೆ. ಝಕಿ- ಉರ್- ರಹಮಾನ್ ಲಖ್ವಿ ಲಷ್ಕರ್ ಸಂಘಟನೆಯ ಮುಖ್ಯ ಕಾರ್‍ಯಾಚರಣಾ ಕಮಾಂಡರ್ ಆಗಿದ್ದಾನೆ.  ಪ್ರಸ್ತುತ ಪಾಕಿಸ್ತಾನದಲ್ಲಿ ವಾಸವಾಗಿರುವನೆನ್ನಲಾದ ದಾವೂದ್ ಇಬ್ರಾಹಿಂ ೧೯೯೩ರ ಮುಂಬೈ ಬಾಂಬ್ ದಾಳಿಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಂದು ನಂಬಲಾಗಿದೆ ಈ ದಾಳಿಗಳಲ್ಲಿ ೩೦೦ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.  ಜಗತ್ತಿನ ಮೋಸ್ಟ್ ವಾಂಟೆಡ್ ಲಿಸ್ಟಿನಲ್ಲಿ ೨೦೧೦ರಿಂದಲೇ ಈತನ ಹೆಸರಿದ್ದು, ವಿಶ್ವಸಂಸ್ಥೆಯು ಈತನನ್ನು ಕೂಡಾ ’ಜಾಗತಿಕ ಭಯೋತ್ಪಾದಕ’ ಎಂಬುದಾಗಿ ಘೋಷಿಸಿತ್ತು.
2019: ನವದೆಹಲಿ: ಪಂಜಾಬಿನ ಗುರುದಾಸಪುರ ಜಿಲ್ಲೆಯ ಬಟಾಲಾ ಸಮೀಪದ ಪಟಾಕಿ
ಕಾರ್ಖಾನೆಯಲ್ಲಿ ಬುಧವಾರ ಸಂಭವಿಸಿದ  ಭಾರೀ ಸ್ಫೋಟದಲ್ಲಿ 23 ಮಂದಿ ಸಾವನ್ನಪ್ಪಿ, 27ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಹಲವಾರು ಕಾರ್ಮಿಕರು ಕುಸಿದ ಕಾರ್ಖಾನೆಯ ಅವಶೇಷಗಳ ಅಡಿಯಲ್ಲಿ ಸಿಕ್ಕಿಹಾಕಿಕೊಂಡರು. ಬಟಾಲಾದ ಜಲಂಧರ್ ರಸ್ತೆಯಲ್ಲಿನ ಹಂಸ್ಲಿ ನಾಲಾ ಸಮೀಪದ  ವಸತಿ ಪ್ರದೇಶದ ಕಟ್ಟಡವೊಂದರಲ್ಲಿ ಈ ಪಟಾಕಿ ಕಾರ್ಖಾನೆ ಇತ್ತು. ಸ್ಫೋಟದ ಬಳಿಕ ಕಟ್ಟಡದ ಭಗ್ನಾವಶೇಷಗಳ ಅಡಿಯಲ್ಲಿ ೫೦ಕ್ಕೂ ಹೆಚ್ಚು ಕಾರ್ಮಿಕರು ಹುಗಿಯಲ್ಪಟ್ಟಿರುವುದರಿಂದ ಸಾವಿನ ಸಂಖ್ಯೆ ಇನ್ನಷ್ಟು ಏರುವ ಭೀತಿ ಇದೆ ಎಂದು ವರದಿಗಳು ಹೇಳಿದವು. ’ಸ್ಫೋಟ ಘಟನೆಯಲ್ಲಿ ಒಟ್ಟು 23 ಮಂದಿ ಸಾವನ್ನಪ್ಪಿದ್ದಾರೆ’ ಎಂದು ಬಟಾಲಾದ ಹಿರಿಯ ವೈದ್ಯಾಧಿಕಾರಿ ಸಂಜೀವ ಭಲ್ಲಾ ಹೇಳಿದರು.  ಗಂಭೀರವಾಗಿ ಗಾಯಗೊಂಡಿರುವ ೧೪ ಜನರ ೧೨ ಮಂದಿಯನ್ನು  ಅಮೃತಸರದ ಗುರುನಾನಕ್ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಭಲ್ಲಾ ನುಡಿದರು.  ಸಂಜೆ ೪ ಗಂಟೆ ಸುಮಾರಿಗೆ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದೆ. ಭಾರೀ ಸ್ಫೋಟದ ಪರಿಣಾಮವಾಗಿ ಆಸುಪಾಸಿನ ಕಟ್ಟಡಗಳೂ ಕುಸಿದಿದವು. ಸಮೀಪದಲ್ಲೇ ನಿಲ್ಲಿಸಲಾಗಿದ್ದ ಹಲವಾರು ಕಾರುಗಳು ಕೂಡಾ ಸ್ಫೋಟದಲ್ಲಿ ಹಾನಿಗೊಂಡಿವೆ ಎಂದು ಇನ್‌ಸ್ಪೆಕ್ಟರ್ ಜನರಲ್ (ಗಡಿವಲಯ) ಎಸ್‌ಪಿಎಸ್ ಪರ್ಮಾರ್ ಅವರು ಹೇಳಿದರು. ರಕ್ಷಣಾ ಕಾರ್‍ಯಾಚರಣೆಯನ್ನು ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಮತ್ತು ಎಸ್‌ಎಸ್‌ಪಿ ರಕ್ಷಣೆ ಮತ್ತು ಪರಿಹಾರ ಕಾರ್ಯದ ನೇತೃತ್ವ ವಹಿಸಿದ್ದಾರೆ ಎಂದು ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ನುಡಿದರು.  ’ಬಟಾಲಾದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟದ ಪರಿಣಾಮವಾಗಿ ಹಲವಾರು ಜೀವ ನಷ್ಟವಾಗಿರುವುದರಿಂದ ಅತೀವ  ಉದ್ವಿಗ್ನತೆಗೆ ಒಳಗಾಗಿದ್ದೇನೆ. ಜಿಲ್ಲಾಧಿಕಾರಿ ಮತ್ತು ಎಸ್‌ಎಸ್‌ಪಿ ನೇತ್ವತ್ವದಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್‍ಯಾಚರಣೆಗಳು ನಡೆಯುತ್ತಿವೆ’  ಎಂದು ಅವರು ಹೇಳಿದರು. ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (ಎನ್‌ಡಿಆರ್‌ಎಫ್) ಮತ್ತು ಸ್ಥಳೀಯ ಆಡಳಿತವು ಸ್ಥಳಕ್ಕೆ ಧಾವಿಸಿವೆ ಎಂದು ಬಿಜೆಪಿಯ ಗುರುದಾಸಪುರ ಸಂಸತ್ ಸದಸ್ಯ  ಸನ್ನಿ ದಿಯೋಲ್ ಟ್ವೀಟ್ ಮಾಡಿದರು.
2019: ನವದೆಹಲಿ:  ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಕಾಂಗ್ರೆಸ್
ನಾಯಕ, ಮಾಜಿ ಸಚಿವ ಡಿಕೆ ಶಿವಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿ ವಾದ, ಪ್ರತಿವಾದ ಆಲಿಸಿದ ನವದೆಹಲಿಯ ರೋಸ್ ಅವೆನ್ಯೂ ಕೋರ್ಟ್ ನ್ಯಾಯಾಧೀಶ ಅಜಯ ಕುಮಾರ್ ಕುಹರ್ ಅವರು ಶಿವಕುಮಾರ್ ಅವರನ್ನು ಸೆ.೧೩ರವರೆಗೆ ಜಾರಿ ನಿರ್ದೇಶನಾಲಯ (ಇ.ಡಿ) ವಶಕ್ಕೆ ಒಪ್ಪಿಸಿ ಈದಿನ ಸಂಜೆ ತೀರ್ಪು ನೀಡಿದರು. ಹೀಗಾಗಿ ಕಾಂಗ್ರೆಸ್ಸಿನ ’ಟ್ರಬಲ್ ಶೂಟರ್’ ಗೆ ಯಾವುದೇ ನಿರಾಳತೆ ಲಭಿಸಲಿಲ್ಲ. ಮುಂದಿನ ೯ ದಿನಗಳ ಕಾಲ ಅವರು ಇಡಿ ಬಂಧನದಲ್ಲಿಯೇ ಮುಂದುವರೆಯಬೇಕಾಗಿ ಬಂದಿತು. ಏನಿದ್ದರೂ, ಕುಟುಂಬದ ಸದಸ್ಯರಿಗೆ ಪ್ರತಿದಿನವೂ ಶಿವಕುಮಾರ್ ಭೇಟಿ ಮಾಡಲು ನ್ಯಾಯಾಲಯವು ಅನುಮತಿ ನೀಡಿತು. ಹಿಂದಿನ ರಾತ್ರಿ  ಜಾರಿ ನಿರ್ದೇಶನಾಲಯದಿಂದ ಬಂಧಿಸಲ್ಪಟ್ಟ ಡಿಕೆ ಶಿವಕುಮಾರ್ ಅವರು ಜಾಮೀನು ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆ ಈದಿನ  ಸಂಜೆ ನವದೆಹಲಿಯ ರೋಸ್ ಅವೆನ್ಯೂ ವಿಶೇಷ ನ್ಯಾಯಾಲಯದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಡಿಕೆಶಿ ಅವರನ್ನು ೧೪ ದಿನಗಳ ಕಾಲ ಕಸ್ಟಡಿಗೆ ಒಪ್ಪಿಸಬೇಕೆಂದು ಜಾರಿ ನಿರ್ದೇಶನಾಲಯ ಪರ ವಕೀಲರಾದ ನಟರಾಜನ್ ಅವರು ಮನವಿ ಮಾಡಿದರು. ಅಪಾರ್ಟ್‌ಮೆಂಟಿನಲ್ಲಿ ಸಿಕ್ಕಿದ ೮ ಕೋಟಿ ರೂಪಾಯಿ  ಹಣದ ಬಗ್ಗೆ ವಿಚಾರಣೆ ವೇಳೆ ಸರಿಯಾದ ಉತ್ತರ ಕೊಟ್ಟಿಲ್ಲ. ಹೀಗಾಗಿ ಬಂಧಿಸಿಯೇ ವಿಚಾರಣೆಗೆ ಒಳಪಡಿಸಬೇಕಾಗಿದೆ ಎಂದು ಜಾರಿ ನಿರ್ದೇಶನಾಲಯವು ನ್ಯಾಯಾಲಯಕ್ಕೆ ಮನವಿ ಮಾಡಿತು. ಆರೋಪಿಯ ವಿರುದ್ಧ ಅಕ್ರಮ ಹಣ ವರ್ಗಾವಣೆಯ ಆರೋಪವಿದೆ. ಕೆಲವೇ ವರ್ಷಗಳಲ್ಲಿ ಡಿಕೆಶಿ ಕುಟುಂಬದ ಸಂಪತ್ತು ಅಗಾಧ ಏರಿಕೆ ಕಂಡಿತ್ತು. ಹೀಗಾಗಿ ಡಿಕೆ ಶಿವಕುಮಾರ್ ಅವರನ್ನು ವಿಚಾರಣೆಗೆ ಒಳಪಡಿಸುವ ಅಗತ್ಯವಿದೆ ಎಂದು ಇಡಿ ವಾದ ಮಂಡಿಸಿತು. ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ ಕಾಯ್ದೆ) ಅಡಿಯಲ್ಲಿ ಆರೋಪಿಯನ್ನು ಶಿಕ್ಷಿಸಬಹುದಾದ ದಾಖಲೆಗಳು ಲಭ್ಯ  ಇವೆ ಎಂದು ಜಾರಿ ನಿರ್ದೇಶನಾಲಯ ವಾದಿಸಿತು. ಸಿದ್ಧ ಅರ್ಜಿಗೆ ಶಿವಕುಮಾರ್ ಅವರು ೩೦ ಸೆಕೆಂಡ್‌ಗಳಲ್ಲಿ ಸಹಿ ಹಾಕಿದ್ದಾರೆ. ಜಾರಿ ನಿರ್ದೇಶನಾಲಯವು ನಾಲ್ಕು ದಿನ ವಿಚಾರಣೆ ನಡೆಸಿದೆ. ಆದ್ದರಿಂದ ಈಗ ಒಂದೇ ಒಂದು ಕ್ಷಣದ ವಿಚಾರಣೆ ಅಗತ್ಯವೂ ಇಲ್ಲ ಎಂದು ಡಿಕೆಶಿ ಪರ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಪ್ರತಿವಾದ ಮಂಡಿಸಿದರು. ’ತನಿಖೆಗೆ ಖುದ್ದು ಅವರೇ ಹಾಜರಾಗಿದ್ದಾರೆ. ಕಳೆದ ೪ ದಿನಗಳಲ್ಲಿ ೩೩ಗಂಟೆ ವಿಚಾರಣೆ ನಡೆದಿದೆ. ಆರೋಪಿಯ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ನ್ಯಾಯಾಲಯದಲ್ಲಿ ಸಹಿ ಹಾಕಿದೆ ಎಂಬ ಕಾರಣಕ್ಕೆ ಅರ್ಜಿಯನ್ನು ತಿರಸ್ಕರಿಸುವಂತಿಲ್ಲ ಎಂದು ಅವರು ವಾದಿಸಿದರು. ಜಾರಿ ನಿರ್ದೇಶನಾಲಯದಿಂದ ಆರೋಪಿಗೆ ಸಮನ್ಸ್ ನೀಡಲಾಗಿದೆ ಎಂದು ಇ.ಡಿ.ಪರ ವಕೀಲರಾದ ಕೆಎಂ ನಟರಾಜ್ ಪುನಃ  ವಾದ ಮಂಡಿಸಿ, ಜಾಮೀನು ನೀಡಬಾರದು ಎಂದು ವಿನಂತಿಸಿಕೊಂಡರು. ವಾದ, ಪ್ರತಿವಾದ ಆಲಿಸಿದ ನ್ಯಾಯಾಧೀಶರು ತೀರ್ಪನ್ನು  ಸ್ವಲ್ಪ ಅವಧಿಗೆ ಕಾಯ್ದಿರಿಸಿದರು. ಈ ವೇಳೆಯಲ್ಲಿ ನ್ಯಾಯಾಲಯದ ಹೊರಗೆ ಡಿಕೆ ಶಿವಕುಮಾರ್ ಹಾಗೂ ವಕೀಲ ಅಭಿಷೇಕ್ ಮನು ಸಿಂಘ್ವಿ ಚರ್ಚೆ ನಡೆಸಿದರು.  ಆ ಬಳಿಕ ನ್ಯಾಯಾಧೀಶರು ಜಾರಿ ನಿರ್ದೇಶನಾಲಯ ಅಧಿಕಾರಿಗಳ ಮನವಿಯನ್ನು ಪುರಸ್ಕರಿಸಿ ಡಿಕೆ ಶಿವಕುಮಾರ್ ಅವರನ್ನು ಸೆಪ್ಟೆಂಬರ್ ೧೩ರವರೆಗೆ ಜಾರಿ ನಿರ್ದೇಶನಾಲಯ ವಶಕ್ಕೆ ಒಪ್ಪಿಸಿ ತೀರ್ಪು ನೀಡಿದರು.  ಡಿಕೆ ಶಿವಕುಮಾರ್ ಅವರಿಂದ ಹೆಚ್ಚಿನ ಮಾಹಿತಿ ಪಡೆಯಬೇಕಾಗಿದೆ. ಹೀಗಾಗಿ ವಿಚಾರಣೆ ನಡೆಸಲು ಕಸ್ಟಡಿಗೆ ಒಪ್ಪಿಸಬೇಕೆಂದು ಇಡಿ ಪರ ವಕೀಲರು ಮಾಡಿದ ಮನವಿಗೆ ನ್ಯಾಯಾಧೀಶರು ಸ್ಪಂದಿಸಿದರು.  ಡಿ.ಕೆ. ಶಿವಕುಮಾರ್ ಅವರ ಜಾಮೀನು ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ ೧೩ರಂದೇ ನಡೆಸುವುದಾಗಿಯೂ ನ್ಯಾಯಾಲಯ ತಿಳಿಸಿತು. ಇದಕ್ಕೆ ಮುನ್ನ ಡಿಕೆಶಿ ಅವರ ಜಾಮೀನು ಅರ್ಜಿಗೆ ಆಕ್ಷೇಪ ಸಲ್ಲಿಸಲು ಒಂದು ವಾರದ ಕಾಲಾವಕಾಶ ನೀಡುವಂತೆಯೂ ಜಾರಿ ನಿರ್ದೇಶನಾಲಯ ಮನವಿ ಮಾಡಿತ್ತು. ತೀರ್ಪು ಪ್ರಕಟಿಸಿದ ನಂತರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಡಿಕೆಶಿ ಅವರನ್ನು ಕಚೇರಿಗೆ ಕೊಂಡೊಯ್ದರು.  ನ್ಯಾಯಾಧೀಶರು ಆದೇಶ ಪ್ರಕಟಿಸುತ್ತಿದ್ದಂತೆ ಡಿಕೆಶಿ ಮುಖದಲ್ಲಿ ನಿರಾಸೆಯ ಕಾರ್ಮೋಡ ಕವಿಯಿತು. ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯ ಸಮುಚ್ಚಯದ ವಿಶೇಷ ನ್ಯಾಯಾಲಯಕ್ಕೆ ಡಿಕೆ ಶಿವಕುಮಾರ್ ಅವರನ್ನು ಕರೆತಂದ ಇಡಿ ಅಧಿಕಾರಿಗಳು ವಿಶೇಷ ನ್ಯಾಯಾಧೀಶ ಅಜಯ ಕುಮಾರ್ ಕುಹರ್ ಮುಂದೆ ಹಾಜರುಪಡಿಸಿದ್ದರು. ಹಿಂದಿನ ರಾತ್ರಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾದ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅನಾರೋಗ್ಯದಿಂದಾಗಿ ದೆಹಲಿಯ ರಾಮ ಮನೋಹರ ಲೋಹಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು.  ಆಸ್ಪತ್ರೆಯಿಂದ ನೇರವಾಗಿ ಬಿಗಿ ಪೊಲೀಸ್ ಭದ್ರತೆಯಲ್ಲಿ ಡಿ.ಕೆ ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಹೆಚ್ಚಿನ ವಿಚಾರಣೆಗಾಗಿ ಇಡಿ ಡಿಕೆ ಶಿವಕುಮಾರ್ ಅವರನ್ನು ೧೪ ದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ಮನವಿ ಸಲ್ಲಿಸಿತು. ಜಾರಿ ನಿರ್ದೇಶನಾಲಯವು ಡಿ.ಕೆ ಶಿವಕುಮಾರ್ ಅವರ ಸಫ್ದರ್ ಜಂಗ್ ಎನ್ ಕ್ಲೇವ್ ನಿವಾಸದ ಮೇಲೆ ದಾಳಿ ನಡೆಸಿದ ವೇಳೆ ೮.೫೬ ಕೋಟಿ ರೂಪಾಯಿ ಹಣ ಪತ್ತೆಯಾಗಿತ್ತು. ಈ ವಿಚಾರವಾಗಿ ಸತತ ೨೫ ಗಂಟೆಗಳ ಕಾಲ ಅಧಿಕಾರಿಗಳು ಡಿಕೆಶಿ ವಿಚಾರಣೆ ನಡೆಸಿದರೂ ಹೆಚ್ಚಿನ ಮಾಹಿತಿ ಲಭ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಶಿವಕುಮಾರ್ ಅವರು ತನಿಖೆಯಲ್ಲಿ ಸಹಕರಿಸಿಲ್ಲ ಎಂಬ ಕಾರಣ ನೀಡಿ ಇಡಿ ಅಧಿಕಾರಿಗಳು ಸೆಪ್ಟೆಂಬರ್ 4ರ ರಾತ್ರಿ ಅವರನ್ನು ಬಂಧಿಸಿದ್ದರು.
2019: ನವದೆಹಲಿ: ಕರ್ತಾರಪುರ ಕಾರಿಡಾರ್ ಮೂಲಕ ದರ್ಬಾರ ಸಾಹಿಬ್ ಗುರುದ್ವಾರಕ್ಕೆ ಪ್ರತಿದಿನ
೫೦೦೦ ಮಂದಿ ಭಾರತೀಯ ಯಾತ್ರಿಕರಿಗೆ ವೀಸಾಮುಕ್ತ ಪಯಣಕ್ಕೆ ಭಾರತ ಮತ್ತು ಪಾಕಿಸ್ತಾನಿ ಅಧಿಕಾರಿಗಳು ಬುಧವಾರ ಸಹಮತಕ್ಕೆ ಬಂದಿದ್ದಾರೆ, ಆದರೆ ಕರಡು ಒಪ್ಪಂದವನ್ನು ಅಂತಿಮಗೊಳಿಸಲು ವಿಫಲರಾಗಿದ್ದಾರೆ ಎಂದು ನಂಬಲರ್ಹ ಮೂಲಗಳು ತಿಳಿಸಿದವು. ಕೆಲವು ಪ್ರಮುಖ ವಿಷಯಗಳಿಗೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯಗಳ ಪರಿಣಾಮವಾಗಿ ಒಪ್ಪಂದವನ್ನು ಅಂತಿಮಗೊಳಿಸಲಾಗಿಲ್ಲ ಎಂದು ಹೆಸರು ಹೇಳಲು ನಿರಾಕರಿಸಿದ ವ್ಯಕ್ತಿಯೊಬ್ಬರು ನುಡಿದರು. ಕರ್ತಾರಪುರದಲ್ಲಿನ ಗುರುದ್ವಾರಕ್ಕೆ  ಭೇಟಿ ನೀಡುವ ಯಾತ್ರಿಕರಿಗೆ ಸೇವಾ ಶುಲ್ಕ ವಿಧಿಸಬೇಕು ಎಂಬುದಾಗಿ ಪಾಕಿಸ್ತಾನ ಪಟ್ಟು ಹಿಡಿಯಿತು. ಆದರೆ ಇದು ಕಾರಿಡಾರ್ ಮೂಲಕ ಗುರುದ್ವಾರಕ್ಕೆ ಸುಲಭ ಸುಲಲಿತ ಪ್ರವೇಶ ಲಭಿಸಬೇಕೆಂಬ ಆಶಯಕ್ಕೆ ಅನುಗುಣವಾದ್ದಲ್ಲವಾದ ಕಾರಣ ಒಪ್ಪಲಾಗದು ಎಂಬುದು ಭಾರತದ ನಿಲುವು ಎಂದು ವ್ಯಕ್ತಿ ಹೇಳಿದರು.  ಗುರುದ್ವಾರದಲ್ಲಿ ಭಾರತೀಯ ರಾಜತಾಂತ್ರಿಕರು ಅಥವಾ ಶಿಷ್ಟಾಚಾರ ಅಧಿಕಾರಿಗಳ ಪ್ರಸ್ತುತಿಗೆ ಅವಕಾಶ ನೀಡಲು ಪಾಕಿಸ್ತಾನವು ತನಗೆ ಸಮ್ಮತವಿಲ್ಲ ಎಂದು ಹೇಳಿದ ಪಾಕಿಸ್ತಾನ ಈ ವಿಷಯವನ್ನು ಪುನರ್ ವಿಮರ್ಶಿಸಬೇಕು ಎಂದು ಆಗ್ರಹಿಸಿತು ಎಂದು ಅವರು ನುಡಿದರು.  ಕರ್ತಾರಪುರ ಕಾರಿಡಾರ್ ಬಳಕೆಯ ವಿಧಿವಿಧಾನಗಳನ್ನು ಅಂತಿಮಗೊಳಿಸಲು ಹಿರಿಯ ಅಧಿಕಾರಿಗಳ ಮಧ್ಯೆ ನಡೆದ ಮೂರನೇ ಸುತ್ತಿನ ಮಾತುಕತೆಯಲ್ಲಿ ಯಾತ್ರಿಕರ ಚಲನವಲನಕ್ಕೆ ಸಂಬಂಧಿಸಿದ ತಿಳುವಳಿಕೆಗೆ ಬರಲು ಸಾಧ್ಯವಾಯಿತು. ಉಭಯ ರಾಷ್ಟ್ರಗಳ ಮಧ್ಯೆ ಅಟ್ಟಾರಿ ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿನ ಪ್ರಕ್ಷುಬ್ಧತೆಯ ಹಿನ್ನೆಲೆಯಲ್ಲೇ ಅಧಿಕಾರಿಗಳ ಸಭೆ ನಡೆದಿತ್ತು.  ’ಭಾರತೀಯ  ಯಾತ್ರಿಕರಿಗೆ ಅವರ ಧಾರ್ಮಿಕ ನಂಬಿಕೆಯನ್ನು ಆಧರಿಸಿ ಯಾವುದೇ ನಿರ್ಬಂಧಗಳಿಲ್ಲದ ವೀಸಾಮುಕ್ತ ಪಯಣಕ್ಕೆ ಅವಕಾಶ ನೀಡುವ ಬಗ್ಗೆ ಸಹಮತ ಸಾಧ್ಯವಾಯಿತು. ಒಸಿಐ ಕಾರ್ಡ್ ಹೊಂದಿರುವ ಭಾರತೀಯ ಮೂಲದ ವ್ಯಕ್ತಿಗಳು ದರ್ಬಾರ ಸಾಹಿಬ್ ಗುರುದ್ವಾರಕ್ಕೆ ಕಾರಿಡಾರ್ ಬಳಸಿಕೊಂಡು ಭೇಟಿ ನೀಡಬಹುದು ಎಂದು ಪರಸ್ಪರ ಒಪ್ಪಲಾಯಿತು ಎಂದು ಮೇಲಿನ ಮಾಹಿತಿ ಒದಗಿಸಿದ ವ್ಯಕ್ತಿ ಹೇಳಿದರು.  ಕಾರಿಡಾರ್ ಬಳಸಿ ಪಾಕಿಸ್ತಾನದಲ್ಲಿರುವ ಗುರುದ್ವಾರಕ್ಕೆ ಪ್ರತಿದಿನ ಒಟ್ಟು ೫೦೦೦ ಮಂದಿ ಯಾತ್ರಿಕರು ಭೇಟಿ ನೀಡಬಹುದು ಮತ್ತು ಪಾಕಿಸ್ತಾನವು ಹೆಚ್ಚು ಮಂದಿಯ ಭೇಟಿಗೆ ಅವಕಾಶ ಒದಗಿಸಿದಲ್ಲಿ, ಇದಕ್ಕಿಂತ ಹೆಚ್ಚಿನ ಸಂಖ್ಯೆಯ ಯಾತ್ರಿಕರು ವಿಶೇಷ ಸಂದರ್ಭಗಳಲ್ಲಿ ಭೇಟಿ ನೀಡಬಹುದು ಎಂದು ಮೂಲ ಹೇಳಿತು.  ಸಾಧ್ಯವಿರುವ ಗರಿಷ್ಠ ಪ್ರಮಾಣಕ್ಕೆ ಈ ಸಂಖ್ಯೆಯನ್ನು ಹೆಚ್ಚಿಸಲು ತನ್ನ ಬದ್ಧತೆಯನ್ನೂ ಪಾಕಿಸ್ತಾನ ವ್ಯಕ್ತ ಪಡಿಸಿತು ಎಂದು ವ್ಯಕ್ತಿ ತಿಳಿಸಿದರು. ಕಾರಿಡಾರನ್ನು ವರ್ಷಪೂರ್ತಿ ವಾರದ ಏಳೂ ದಿನಗಳಲ್ಲಿ ಸಂಚಾರಕ್ಕೆ ಮುಕ್ತವಾಗಿ ಇರಿಸಲಾಗುವುದು. ಯಾತ್ರಿಕರಿಗೆ ಏಕಾಂಗಿಯಾಗಿ ಅಥವಾ ಗುಂಪುಗಳಲ್ಲಿ ಪಾದಯಾತ್ರೆ ಮೂಲಕ ಭೇಟಿಯ ಆಯ್ಕೆ ಇರುತ್ತದೆ ಎಂದು ಅವರು ನುಡಿದರು. ಮಳೆಗಾಲದಲ್ಲಿ ಜನರಿಗೆ ಸಂಚರಿಸಲು ಸಾಧ್ಯವಾಗವಂತೆ ಬುಧಿ ರಾವಿ ಕಾಲುವೆಗೆ ಸೇತುವೆ ನಿರ್ಮಿಸಲು ಉಭಯ ಕಡೆಗಳು ಒಪ್ಪಿದವು. ಸೇತುವೆ ನಿರ್ಮಾಣವಾಗುವವರೆಗೆ ಪಾದಯಾತ್ರೆಗೆ ಅನುಕೂಲವಾಗುವಂತೆ ತಾತ್ಕಾಲಿಕ ಸರ್ವೀಸ್ ರಸ್ತೆ ಒದಗಿಸಲು ಒಪ್ಪಲಾಗಿದ್ದು, ಈ ರಸ್ತೆಯ ನಿರ್ಮಾಣ ಮಾಡಲಾಗುತ್ತಿದೆ ಎಂದು ಅವರು ಹೇಳಿದರು. ವಿಶೇಷವಾಗಿ ವೈದ್ಯಕೀಯ ತುರ್ತಿಗಾಗಿ ತುರ್ತು ತೆರವು ಪ್ರಕ್ರಿಯೆಗಳನ್ನು ನಡೆಸಲು ಉಭಯ ರಾಷ್ಟ್ರಗಳು ಒಪ್ಪಿದವು. ಭಾರತದ ಗಡಿಭದ್ರತಾ ಪಡೆ ಮತ್ತು ಪಾಕಿಸ್ತಾನಿ ರೇಂಜರುಗಳ ಮಧ್ಯೆ ಇಂತಹ ಸಂದರ್ಭಗಳಲ್ಲಿ ಬಳಸಲು ನೇರ ದೂರವಾಣಿ ಸಂಪರ್ಕಕ್ಕೂ ಒಪ್ಪಲಾಯಿತು. ಆಗಸ್ಟ್ ೩೦ರಂದು ನಡೆದ ತಾಂತ್ರಿಕ ತಜ್ಞರ ಸಭೆಯಲ್ಲಿ ಉಭಯ ಕಡೆಗಳು ಅನುಮೋದಿಸಿದ ಯಾತ್ರಿಕರ ವಿವರಗಳನ್ನು ಹಂಚಿಕೊಳ್ಳುವ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು. ’ಯಾತ್ರಿಕರ ಸಂಚಾರ ಕಾಲದಲ್ಲಿ ಸುಭದ್ರ ಮತ್ತು ಸುರಕ್ಷಿತ ಪರಿಸರದ ಖಾತರಿ ಒದಗಿಸಲೂ ಉಭಯ ಕಡೆಗಳು ಒಪ್ಪಿದವು. ಭಾರತೀಯ ಯಾತ್ರಿಕರಿಗೆ ಸುಗಮ ಪ್ರವಾಸ ಸಾಧ್ಯವಾಗುವಂತೆ ನೋಡಿಕೊಳ್ಳಲು ಶಿಷ್ಟಾಚಾರ ಅಧಿಕಾರಿಗಳ ಉಪಸ್ಥಿತಿಗೆ ಅವಕಾಶ ನೀಡುವಂತೆ ಪಾಕಿಸ್ತಾನಕ್ಕೆ ಮರುಮನವಿ ಮಾಡಿಕೊಳ್ಳಲಾಯಿತು ಎಂದೂ ಮಾಹಿತಿ ಒದಗಿಸಿದ ವ್ಯಕ್ತಿ ಹೇಳಿದರು. ಯಾತ್ರಿಕರಿಗೆ ಸಾಕಷ್ಟು ’ಜಂಗರ್’ ಮತ್ತು ’ಪ್ರಸಾದ’ ತಯಾರಿ ಮತ್ತು ವಿತರಣೆಗೆ ಅವಕಾಶ ಒದಗಿಸಲೂ ಪಾಕಿಸ್ತಾನಿ ಅಧಿಕಾರಿಗಳು ಒಪ್ಪಿದರು. ಪ್ರತಿದಿನ ೧೫,೦೦೦ಕ್ಕೂ ಹೆಚ್ಚು ಯಾತ್ರಿಕರನ್ನು ನಿಭಾಯಿಸಲು ಸಾಧ್ಯವಾಗುವಂತೆ ಭಾರತೀಯ ಕಡೆಯಲ್ಲಿ ಪ್ಯಾಸೆಂಜರ್ ಟರ್ಮಿನಲ್ ಸೇರಿದಂತೆ ವ್ಯವಸ್ಥಿತ ಮೂಲಸವಲತ್ತು ಕಲ್ಪಿಸುವ ನಿಟ್ಟಿನಲ್ಲೂ ಮಹತ್ವದ ಪ್ರಗತಿಯಾಗಿದೆ. ಈ ಮೂಲ ಸವಲತ್ತು ಅಕ್ಟೋಬರ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಭಾರತೀಯ ಕಡೆಯಲ್ಲಿ ಅಂತಾರಾಷ್ಟ್ರೀಯ ಗಡಿಯವರೆಗೆ ಚತುಷ್ಪಥ ಹೆದ್ದಾರಿ ನಿರ್ಮಾಣದ ಕಾಮಗಾರಿ ನಡೆಯುತ್ತಿದ್ದು, ಸೆಪ್ಟೆಂಬರ್ ಅಂತ್ಯದ ಒಳಗಾಗಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಕರ್ತಾರಪುರ ಕಾರಿಡಾರ್ ಮೂಲಕ ಸಿಖ್ ಪಂಥದ ಸ್ಥಾಪಕ ಗುರುನಾನಕ್ ಅವರ ೫೫೦ನೇ ಜನ್ಮದಿನಾಚರಣೆಯಲ್ಲಿ ಪಾಲ್ಗೊಳ್ಳಲಿರುವ ಯಾತ್ರಿಕರಿಗೆ ಬೇಕಾದ ಎಲ್ಲ ಸವಲತ್ತುಗಳನ್ನೂ ಭಾರತದ ಕಡೆಯಿಂದ ನವೆಂಬರ್ ವೇಳೆಗೆ ಒದಗಿಸಲಾಗುವುದು. ದರ್ಬಾರ ಸಾಹಿಬ್ ಗುರುದ್ವಾರವನ್ನು ಗುರುನಾನಕ್ ಅವರು ತಮ್ಮ ಬದುಕಿನ ಕೊನೆಯ ವರ್ಷಗಳನ್ನು ಕಳೆದ ಸ್ಥಳದಲ್ಲಿ ದರ್ಬಾರ್ ಸಾಹಿಬ್ ಗುರುದ್ವಾರವನ್ನು ನಿರ್ಮಿಸಲಾಗಿತ್ತು.

2019: ಇಸ್ಲಾಮಾಬಾದ್: ಇದೇ ಮೊದಲ ಬಾರಿಗೆ ಪಾಕಿಸ್ತಾನದ ಸಹಾಯಕ ಪೊಲೀಸ್ ಸಬ್
ಇನ್ಸ್ಪೆಕ್ಟರ್ ಆಗಿ ಹಿಂದೂ ಧರ್ಮದ ಯುವತಿ ಆಯ್ಕೆಯಾದರು. ಪಾಕಿಸ್ತಾನ ಸರ್ಕಾರ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಿಂಧ್ ಪ್ರಾಂತ್ಯದ ಯುವತಿ ಪುಷ್ಪಾ ಕೊಲ್ಹಿ ಆಯ್ಕೆಯಾದರು. ಮಹಿಳೆಯೊಬ್ಬರು ಪೊಲೀಸ್ ಅಧಿಕಾರಿಯಾಗಿ ಆಯ್ಕೆಯಾಗಿರುವುದು ಇದೇ ಪ್ರಥಮ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿದವು. ಪಾಕಿಸ್ತಾನದ ಸಿಂಧ್ ಪಬ್ಲಿಕ್ ಸರ್ವೀಸ್ ಕಮಿಷನ್ ಇತ್ತೀಚೆಗೆ ನಡೆಸಿದ ಪ್ರಾಂತೀಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪುಷ್ಪಾ ಹೆಚ್ಚು ಅಂಕಗಳನ್ನು ಪಡೆದು ಆಯ್ಕೆಯಾಗಿದ್ದರು. ವಿಷಯವನ್ನು ಸಿಂಧ್ ಪ್ರಾಂತ್ಯದ ಮಾನವ ಹಕ್ಕುಗಳ ಹೋರಾಟಗಾರ ಕಪಿಲ್ ದೇವ್ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವುದಾಗಿ ಪಿಟಿಐ ವರದಿ ಮಾಡಿತು. ಕಳೆದ ಜನವರಿಯಲ್ಲಿ ಪಾಕಿಸ್ತಾನದ ನ್ಯಾಯಾಧೀಶರಾಗಿ ಸಿಂಧ್ ಪ್ರಾಂತ್ಯದ ಹಿಂದೂ ಮಹಿಳೆಯೊಬ್ಬರು ಆಯ್ಕೆಯಾಗಿದ್ದರು. ಪಾಕಿಸ್ತಾನ ಸರ್ಕಾರ ನಡೆಸಿದ ನ್ಯಾಯಾಧೀಶರ ಪರೀಕ್ಷೆಯಲ್ಲಿ ಸುಮನ್ ಪವನ್ ಬೋದನಿ 54ನೇ ಸ್ಥಾನ ಪಡೆದು ನ್ಯಾಯಾಧೀಶರ ಪಟ್ಟ ಅಲಂಕರಿಸಿದ್ದರು.  ಸಂಬಂಧ ಅಂತಾರಾಷ್ಟ್ರೀಯ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಸುಮನ್, ಸಿಂಧ್ ಪ್ರಾಂತ್ಯ ತೀರಾ ಹಿಂದುಳಿದ ಪ್ರದೇಶವಾಗಿದ್ದು, ಪ್ರದೇಶದಿಂದ ನಾನು ಆಯ್ಕೆಯಾಗಿರುವುದಕ್ಕೆ ಹೆಮ್ಮೆಪಡುತ್ತೇನೆ. ನನ್ನ ಸಾಧನೆಗೆ ನನ್ನ ಕುಟುಂಬದವರ ಸಹಕಾರ ಕಾರಣ ಎಂದು ಹೇಳಿದರು. ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತರದಲ್ಲಿ ಹಿಂದೂಗಳೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸರ್ಕಾರದ ಅಂಕಿ ಅಂಶಗಳ ಪ್ರಕಾರ 75 ಲಕ್ಷ ಹಿಂದೂಗಳು ಪಾಕಿಸ್ತಾನದಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ. ಮತ್ತೊಂದು ಮಾಹಿತಿಯ ಪ್ರಕಾರ 90 ಲಕ್ಷಕ್ಕೂ ಅಧಿಕ ಹಿಂದೂಗಳು ವಾಸವಾಗಿದ್ದುಇವರಲ್ಲಿ ಸಿಂಧ್ ಪ್ರಾಂತ್ಯ ಅತಿ ಹೆಚ್ಚು ಹಿಂದೂಗಳನ್ನು ಹೊಂದಿದೆಇಲ್ಲಿ ಹಿಂದೂ ಧರ್ಮದ ಹಬ್ಬ, ಆಚರಣೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂತಸ ಸಂಭ್ರಮದಿಂದ ಆಚರಿಸುತ್ತಾರೆ ಎಂದು ವರದಿಗಳು ತಿಳಿಸಿದವು.
2019: ಬೆಂಗಳೂರು:  ಬೆಂಗಳೂರಿನ ರಸ್ತೆ ಹೊಂಡಗಳ ಬಗ್ಗೆ ಗಮನ ಸೆಳೆಯಲು ಬೀದಿ ಕಲಾವಿದ
ಬಾದಲ್ ನಂಜುಂಡಸ್ವಾಮಿ ಅವರು ನಡೆಸಿದ್ದ ‘ಚಂದ್ರ ನಡಿಗೆ’ಯ ವಿನೂತನ ಪ್ರತಿಭಟನೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಒಂದೇ ದಿನದಲ್ಲಿ ಮಣಿಯಿತು. ವಿನಾಯಕ ಚತುರ್ಥಿಯ ದಿನ ಬಾದಲ್ ಅವರು ಬೆಂಗಳೂರಿನ ತುಂಗಾನಗರ ಬಡಾವಣೆಯ ಮುಖ್ಯರಸ್ತೆಯಲ್ಲಿ ನಡೆಸಿದ್ದ ‘ಚಂದ್ರ ನಡಿಗೆ’ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಮರುದಿನವೇ (2019 ಸೆಪ್ಟೆಂಬರ್  04ರ ಮಂಗಳವಾರ) ಬಿಬಿಎಂಪಿ ರಸ್ತೆ ದುರಸ್ತಿಗೆ ಕ್ರಮ ಕೈಗೊಂಡಿತು.. ‘ಚಂದ್ರ ನಡಿಗೆ’ಯ  ವರದಿಯನ್ನು ‘ಸ್ಪರ್ಧಾ’  ಸೆಪ್ಟೆಂಬರ್ 3ರ ಸೋಮವಾರ ಪ್ರಕಟಿಸಿತ್ತು. ಬೆಂಗಳೂರಿನ ತುಂಗಾನಗರ ಬಡಾವಣೆಯ ಮುಖ್ಯರಸ್ತೆಯ ಹೊಂಡಗಳ ಬಗ್ಗೆ ಗಮನ ಸೆಳೆಯಲು  ಬೀದಿ ಕಲಾವಿದ  ಬಾದಲ್ ನಂಜುಂಡ ಸ್ವಾಮಿ ಅವರು ಗಗನಯಾನಿಯಂತೆ ವೇಷಭೂಷಣ ಧರಿಸಿಕೊಂಡು ರಸ್ತೆಯ ಹೊಂಡಗಳ ಮಧ್ಯೆ ‘ಚಂದ್ರ ನಡಿಗೆ’ ನಡೆಸಿದ  ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ 2019 ಸೆಪ್ಟೆಂಬರ್ 3ರ ಸೋಮವಾರ ವೈರಲ್ ಆಗಿತ್ತು. ಬಾದಲ್ ಅವರು ರಸ್ತೆ ಅವ್ಯವಸ್ಥೆಗಳ ಬಗ್ಗೆ ಗಮನ ಸೆಳೆಯಲು ತಮ್ಮ ಸೃಜನಶೀಲ ಕಲೆಯನ್ನು ಬಳಸಿಕೊಂಡಿರುವುದು ಇದೇ ಮೊದಲು ಏನಲ್ಲ. ಬೆಂಗಳೂರಿನ ರಸ್ತೆ ಹೊಂಡಗಳನ್ನು ಅವರು ಹಿಂದೆತಾವರೆ ಕೊಳಗಳನ್ನಾಗಿಯೂ, ‘ಮೊಸಳೆ ಹೊಂಡಗಳಾಗಿಯೂ ಪರಿವರ್ತಿಸಿದ್ದರು.ಬೆಂಗಳೂರಿನ ರಸ್ತೆ ಹೊಂಡಗಳನ್ನು ಆದ್ಯತೆ ಆಧಾರದಲ್ಲಿ ಮುಚ್ಚಲು ಕ್ರಮ ಕೈಗೊಂಡಿರುವುದಾಗಿ ಬಿಬಿಎಂಪಿ ಪ್ರತಿಪಾದಿಸುತ್ತಿರುವುದರ ಮಧ್ಯೆ ನಂಜುಂಡ ಸ್ವಾಮಿ ಅವರುಚಂದ್ರ ನಡಿಗೆಮೂಲಕ ಬೆಂಗಳೂರು ರಸ್ತೆಗಳ ದುರವಸ್ಥೆಗೆ ಕನ್ನಡಿ ಹಿಡಿದಿದ್ದರು. ಹೊಂಡಗಳ ಪರಿಣಾಮವಾಗಿ ಸಂಭವಿಸುವ ರಸ್ತೆ ಅಪಘಾತಗಳಿಗೆ ಬಿಬಿಎಂಪಿಯನ್ನೇ ಹೊಣೆ ಮಾಡುವುದಾಗಿ ಕರ್ನಾಟಕ ಹೈಕೋರ್ಟ್ ಕಳೆದ ಆಗಸ್ಟ್ ತಿಂಗಳಲ್ಲಿ ಎಚ್ಚರಿಸಿದ ಬಳಿಕ ಬಿಬಿಎಂಪಿ ಹೊಂಡಗಳನ್ನು ಮುಚ್ಚಲು ಆದ್ಯತೆ ಆಧಾರದಲ್ಲಿ ಕ್ರಮ ವಹಿಸುವುದಾಗಿ ಹೇಳಿಕೆ ನೀಡಿತ್ತು. ತ್ವರಿತ ಕ್ರಮ  ಕೈಗೊಂಡದ್ದಕ್ಕೆ  ನಂಜುಂಡಸ್ವಾಮಿ ಅವರು ಬಿಬಿಎಂಪಿಗೆ ಕೃತಜ್ಞತೆ ಸಲ್ಲಿಸಿದರು.



No comments:

Post a Comment