2019: ಪಠಾಣ್ ಕೋಟ್: ಭಾರತೀಯ ಸೇನೆಯ ಆಧುನೀಕರಣ ಯೋಜನೆಯ ಅಂಗವಾಗಿ
ಅಮೆರಿಕದ ಎಂಟು ಎಎಚ್ -೬೪ಇ(೧) ದಾಳಿ ಹೆಲಿಕಾಪ್ಟರ್‌ಗಳು ಪಠಾಣ್ ಕೋಟ್ ವಾಯುನೆಲೆಯಲ್ಲಿ ಭಾರತೀಯ ವಾಯುಪಡೆಗೆ
(ಐಎಎಫ್) ಸೇರ್ಪಡೆಯಾದವು. ಎರಡು ಅಪಾಚೆ ಹೆಲಿಕಾಪ್ಟರ್‌ಗಳನ್ನು ವಿಂಗ್ ಕಮಾಂಡರ್ ಕ್ಷಿತಿಜ್ ಅವಸ್ಥಿ
ಮತ್ತು ಸ್ಕ್ವಾಡ್ರನ್ ಲೀಡರ್ ಮುನಿಶ್ ಡೋಗ್ರಾ ಅವರು ವಾಯುಪಡೆ ಮುಖ್ಯಸ್ಥ ಬಿಎಸ್ ಧನೋವಾ ಮತ್ತು ಇತರ
ಆಯ್ದ ಗಣ್ಯರ ಸಮ್ಮುಖದಲ್ಲಿ ಹಾರಿಸುವ ಮೂಲಕ ಅವುಗಳ ಸಮರ ತಂತ್ರ ಕುಶಲತೆಯನ್ನು ಪ್ರದರ್ಶಿಸಿದರು. ಸಹ
ಪೈಲಟ್‌ಗಳಾದ ಎ.ಕೆ. ಶ್ರೀವಾಸ್ತವ ಮತ್ತು ಅನೂಪ್ ಕುಮಾರ್ ಸಿಂಗ್ ಅವರು ಹೆಲಿಕಾಪ್ಟರ್ ಚಲಾವಣೆಯಲ್ಲಿ
ಅವರಿಗೆ ನೆರವಾದರು. ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಶಲ್ ಧನೋವಾ ಅವರು ಪೈಲಟ್‌ಗಳನ್ನು ಅಭಿನಂದಿಸಿ
ಹೊಸ ಹೆಲಿಕಾಪ್ಟರ್‌ಗಳ ಸೇರ್ಪಡೆಗೆ ಮುನ್ನ ಪೂಜೆ ಸಲ್ಲಿಸಿದರು. ಬಳಿಕ ಅವರಿಗೆ ವಾಟರ್ ಕ್ಯಾನನ್ ಸೆಲ್ಯೂಟ್
ಸಲ್ಲಿಸಲಾಯಿತು. ’ಹೊಸ ಸೇರ್ಪಡೆ: ಎಎಫ್‌ಎಸ್ ಹಿಂಡನ್‌ನಲಿ ಎಎಚ್-೬೪ಇ ಅಪಾಚೆ ದಾಳಿ ಹೆಲಿಕಾಪ್ಟರಿನ
ಚೊಚ್ಚಲ ಹಾರಾಟ. ಹೆಲಿಕಾಪ್ಟರನ್ನು ಪಠಾಣ್ ಕೋಟ್ ವಾಯುನೆಲೆಗೆ ೨೦೧೯ರ ಸೆಪ್ಟೆಂಬರ್ ೩ರಂದು ಸೇರ್ಪಡೆ
ಮಾಡಿಕೊಳ್ಳಲು ಯೋಜಿಸಲಾಗಿದೆ’ ಎಂದು ಭಾರತೀಯ ವಾಯುಪಡೆಯು ಹೆಲಿಕಾಪ್ಟರಿನ
ನಾಲ್ಕು ನಿಮಿಷಗಳ ವಿಡಿಯೋ ಸಹಿತವಾದ ಟ್ವೀಟಿನಲ್ಲಿ ತಿಳಿಸಿತು. ಭಾರತೀಯ ವಾಯುಪಡೆಯ ದಾಳಿ ಸಾಮರ್ಥ್ಯ
ವೃದ್ಧಿಗಾಗಿ ೨೨ ಅಪಾಚೆ ಹೆಲಿಕಾಪ್ಟರ್‌ಗಳನ್ನು ಖರೀದಿಸಲು ಅಮೆರಿಕದ ರಕ್ಷಣಾ ಪಡೆ ದೈತ್ಯ ಬೋಯಿಂಗ್
ಜೊತೆ ೨೦೧೫ರ ಸೆಪ್ಟೆಂಬರಿನಲಿ ೧.೧ ಬಿಲಿಯನ್ (೧೧೦ ಕೋಟಿ) ಡಾಲರ್ ಮೊತ್ತದ ಒಪ್ಪಂದಕ್ಕೆ ಭಾರತ ಸಹಿ
ಹಾಕಿತ್ತು. ಎಂಟು ಹೆಲಿಕಾಪ್ಟರುಗಳ ಮೊದಲ ಅಪಾಚೆ ಹೆಲಿಕಾಪ್ಟರ್ ಕಂತನ್ನು ಬೋಯಿಂಗ್ ಈಗ ಸರಬರಾಜು ಮಾಡಿದೆ.
ಎಲ್ಲ ೨೨ ಹೆಲಿಕಾಪ್ಟರುಗಳನ್ನು ಭಾರತೀಯ ವಾಯುಪಡೆಗೆ ೨೦೨೦ರ ವೇಳೆಗೆ ಸರಬರಾಜು ಮಾಡುವ ನಿರೀಕ್ಷೆ ಇದೆ.
ಭಾರತೀಯ ವಾಯುಪಡೆಯು ಪ್ರಸ್ತುತ ಸೋವಿಯತ್ ಮೂಲದ ಎಂಐ-೨೫ ಹೆಲಿಕಾಪ್ಟರ್ ಗನ್ ಶಿಪ್‌ಗಳನ್ನು ಬಳಸುತ್ತಿತ್ತು. ‘ಭಾರತೀಯ ವಾಯುಪಡೆಯ ಬತ್ತಳಿಕೆಯಲ್ಲಿ ಅತ್ಯಾಧುನಿಕ ದಾಳಿ
ಹೆಲಿಕಾಪ್ಟರುಗಳ ಅಗತ್ಯತೆಯ ಸುದೀರ್ಘ ಕಾಲದ ಬೇಡಿಕೆ ಈಡೇರಿಸಲು ಅಪಾಚೆ ಎಎಚ್-೬೪ಇ ಹೆಲಿಕಾಪ್ಟರ್‌ನ್ನು
ಆಯ್ಕೆ ಮಾಡಲಾಗಿತ್ತು’ ಎಂದು ವಿಂಗ್ ಕಮಾಂಡರ್ ಶೆಲ್ಲಿ ಸೇರ್ಪಡೆ
ಸಮಾರಂಭದಲ್ಲಿ ವಿವರಿಸಿದರು. ’ಅಪಾಚೆ ಹೆಲಿಕಾಪ್ಟರುಗಳ ದಾಳಿ ಸಾಮರ್ಥ್ಯ ಮತ್ತು ವೈರಿ ಗುರಿಗಳ ಮೇಲಿನ
ದಾಳಿಯ ನಿಖರತೆ ಸಾಟಿ ಇಲ್ಲದಂತಹುದು’ ಎಂದು ಅವರು ನುಡಿದರು. ಹಿಂಡನ್ ವಾಯುಪಡೆ
ನಿಲ್ದಾಣಕ್ಕೆ ಅಪಾಚೆ ಹೆಲಿಕಾಪ್ಟರುಗಳು ಈ ವರ್ಷ ಜುಲೈಯಲ್ಲಿ ತಲಾ ೪ರಂತೆ ಎರಡು ಕಂತುಗಳಲ್ಲಿ ಬಂದಿದ್ದವು.
ಬಳಿಕ ಅವುಗಳನ್ನು ಪಂಜಾಬಿನ ಪಠಾಣ್ ಕೋಟ್‌ಗೆ ಕಳುಹಿಸಿ ಸೇರ್ಪಡೆ ಸಲುವಾಗಿ ಕಾಯಲಾಗಿತ್ತು. ಈ ಎಂಟು
ಅಪಾಚೆ ಹೆಲಿಕಾಪ್ಟರುಗಳ ಪೈಕಿ ನಾಲ್ಕು ಹೆಲಿಕಾಪ್ಟರುಗಳನ್ನು ಪಾಕಿಸ್ತಾನದ ಪ್ರಮುಖ ವಾಯುನೆಲೆಯಿಂದ
ಕೆಲವೇ ಮೈಲುಗಳಷ್ಟು ದೂರದಲ್ಲಿರುವ ಭಾರತೀಯ ಗಡಿಯಲ್ಲಿರುವ ಪಠಾಣ್ ಕೋಟ್ ವಾಯುನೆಲೆಯಲ್ಲಿ ಇರಿಸಲಾಗುವುದು. ೨೦೧೬ರ ಜನವರಿಯಲ್ಲಿ ಈ ವಾಯುನೆಲೆಯ ಮೇಲೆ ನಡೆದ ಭಯೋತ್ಪಾದಕ
ದಾಳಿಯಲ್ಲಿ ಕನಿಷ್ಠ ೬ ಯೋಧರು ಹುತಾತ್ಮರಾಗಿದ್ದರು. ನಾಲ್ಕು ಅಪಾಚೆ ಹೆಲಿಕಾಪ್ಟರುಗಳ ಎರಡನೇ ತಂಡವನ್ನು
ಅಸ್ಸಾಮಿನ ಜೊರ್‍ಹಾಟ್‌ನಲಿ ಇರಿಸಲಾಗುವುದು ಎಂದು ಐಎಎಫ್ ಅಧಿಕಾರಿಗಳು ಹೇಳಿದರು. ಏನಿದರ ಸಾಮರ್ಥ್ಯ? ಪ್ರತಿಯೊಂದು ಅಪಾಚೆ ಹೆಲಿಕಾಪ್ಟರ್ ಎಂಟು
ಫೈರ್ ಅಂಡ್ ಫಾರ್‍ಗೆಟ್ ಹೆಲ್‌ಫೈರ್ ಕ್ಷಿಪಣಿಗಳನ್ನು ಒಯ್ಯಬಲ್ಲವು ಜೊತೆಗೆ ೧,೨೦೦ ಸುತ್ತಿನಷ್ಟು
ಮದ್ದುಗುಂಡನ್ನೂ ಒಯ್ಯಬಲ್ಲವು. ಈ ದಾಳಿ ಹೆಲಿಕಾಪ್ಟರುಗಳು ಒಂದು ನಿಮಿಷದಲ್ಲಿ ೧೨೮ ಗುರಿಗಳನ್ನು ಪತ್ತೆ
ಹಚ್ಚಿ ಅಪಾಯಕ್ಕೆ ಅನುಗುಣವಾಗಿ ಆದ್ಯತೆ ನಿರ್ಧರಿಸಬಲ್ಲವು ಭಾರೀ ಪ್ರತಿದಾಳಿ ಸಾಮರ್ಥ್ಯದ ಗನ್ ಶಿಪ್
ಹೊಂದಿದ ಕ್ಷಿಪಣಿಗಳೊಂದಿಗೆ ಹೆಲಿಕಾಪ್ಟರ್ ಸಜ್ಜಾಗಿರುತ್ತದೆ. ಭಾರತೀಯ ಸೇನೆಯು ೪,೧೬೮ ರೂಪಾಯಿ ವೆಚ್ಚದಲ್ಲಿ
ಅಮೆರಿಕದಿಂದ ೬ ದಾಳಿ ಹೆಲಿಕಾಪ್ಟರುಗಳನ್ನು ಖರೀದಿಸುವ ಪ್ರಕ್ರಿಯೆಯನ್ನೂ ಭಾರತೀಯ ಸೇನೆ ನಡೆಸುತ್ತಿದೆ. ಅಪಾಚೆ ಹೆಲಿಕಾಪ್ಟರ್ ಭಾರತದ ವಾಯಪಡೆಗೆ ಸೇರ್ಪಡೆಯಾಗುತ್ತಿರುವ
ಎರಡನೇ ಅಮೆರಿಕ ನಿರ್ಮಿತ ಹೆಲಿಕಾಪ್ಟರ್. ಮಾರ್ಚ್ ತಿಂಗಳಲ್ಲಿ ಭಾರತೀಯ ವಾಯುಪಡೆಯು ಬೋಯಿಂಗ್ ಸಿಎಚ್-೪೭ಎಫ್
(೧) ಚಿನೂಕ್ ಹೆಲಿಕಾಪ್ಟರುಗಳನ್ನು ಸೇರ್ಪಡೆ ಮಾಡಿಕೊಂಡಿತ್ತು. ಈದಿನ ಅಪಾಚೆ
ಹೆಲಿಕಾಪ್ಟರುಗಳು ಮತ್ತು ಈ ವರ್ಷ ಮಾರ್ಚ್ ತಿಂಗಳಲ್ಲಿ ಭಾರೀ ಗಾತ್ರದ ಚಿನೂಕ್ ಹೆಲಿಕಾಪ್ಟರುಗಳನ್ನು
ಸೇರ್ಪಡೆ ಮಾಡಿಕೊಂಡಿರುವುದು ಭಾರತೀಯ ಸೇನೆಯ ಸಮರ ತಂತ್ರ ಬದಲಾವಣೆಯ ಸೂಚನೆಯಾಗಿದೆ. ಇಲ್ಲಿಯವರೆಗೆ
ಭಾರತೀಯ ವಾಯುಪಡೆಯು ರಶ್ಯಾ ನಿರ್ಮಿತ ಎಂಐ-೧೭ ಮೀಡಿಯಂ ಲಿಫ್ಟ್ ಹೆಲಿಕಾಪ್ಟರುಗಳನ್ನು ಮತ್ತು ರಶ್ಯಾದ
ಹಳೆಯ ಎಂಐ-೨೬ ಹೆಲಿಕಾಪ್ಟರುಗಳನ್ನು ವಾಯುಪಡೆಗೆ ತುರ್ತು ಅಗತ್ಯ ಪೂರೈಸಲು ಸೇರ್ಪಡೆ ಮಾಡಿಕೊಂಡಿತ್ತು.
ಭಾರತೀಯ ವಾಯುಪಡೆಯ ದಾಳಿ ಸಾಮರ್ಥ್ಯವು ಎಂಐ-೩೫ ಹೆಲಿಕಾಪ್ಟರುಗಳ
ಎರಡು ದಳಗಳಿಗೆ ಮಾತ್ರ ಸೀಮಿತವಾಗಿತ್ತು. ಇವುಗಳನ್ನು ಹಿಂದಿನ ಸೋವಿಯತ್ ಒಕ್ಕೂಟವು ೧೯೮೦ರ ದಶಕದಲ್ಲಿ
ತಾನು ಆಫ್ಘಾನಿಸ್ಥಾನವನ್ನು ಅತಿಕ್ರಮಿಸಿಕೊಂಡಿದ್ದಾಗ ಬಳಸುತ್ತಿತ್ತು. ಬಳಸಿ ಬಿಸಾಕುವಂತಹ ಟ್ಯಾಂಕ್
ನಿರೋಧಕ ಕ್ಷಿಪಣಿಗಳು, ಬಾನಿನಿಂದ ಬಾನಿಗೆ ಹಾರಬಲ್ಲ ಕ್ಷಿಪಣಿಗಳು, ರಾಕೆಟ್‌ಗಳು ಮತ್ತು ಇತರ ಮದ್ದುಗುಂಡು
ಸಾಮರ್ಥ್ಯದ ಜೊತೆಗೆ ಭಾರತವು ಇದೀಗ ಆಧುನಿಕ ಎಲೆಕ್ಟ್ರಾನಿಕ್ ಸಮರ ಸಾಮರ್ಥ್ಯವನ್ನೂ ಹೆಲಿಕಾಪ್ಟರುಗಳಿಗೆ
ಒದಗಿಸಿದೆ- ಇದು ಜಾಲತಂತ್ರ ಕೇಂದ್ರಿತ ವೈಮಾನಿಕ ಯುದ್ದದಲ್ಲಿ ಹೆಲಿಕಾಪ್ಟರುಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ
ಎಂದು ಏರ್ ಚೀಫ್ ಮಾರ್ಶಲ್ ಬಿಎಸ್ ಧನೋವಾ ಹೇಳಿದರು. ಅಪಾಚೆ ದಾಳಿ ಹೆಲಿಕಾಪ್ಟರ್ ನಿಂತ ಜಾಗದಿಂದಲೇ
ನಿಖರ ಗುರಿಯ ಮೇಲೆ ದಾಳಿ ನಡೆಸುವ ಹಾಗೂ ನೆಲದಿಂದಲೇ ವೈರಿದೇಶದ ವೈಮಾನಿಕ ದಾಳಿ ಅಪಾಯವನ್ನು ಗುರುತಿಸಿ
ಕಾರ್ಯಾಚರಣೆ ನಡೆಸುವಂತಹ ಸಾಮರ್ಥ್ಯವನ್ನು ಹೊಂದಿದೆ ಎಂದು ಅಧಿಕಾರಿಗಳು ನುಡಿದರು. ಹೆಲಿಕಾಪ್ಟರಿನ
ಸೇರ್ಪಡೆಯನ್ನು ಭಾರತೀಯ ವಾಯುಪಡೆಯು ’ಮಾರಕ ಸೇರ್ಪಡೆ’ ಎಂಬುದಾಗಿ
ಬಣ್ಣಿಸಿದೆ. ಈ ಹೆಲಿಕಾಪ್ಟರ್ ಸಮರಾಂಗಣದ ಚಿತ್ರಗಳನ್ನು ರವಾನಿಸುವ ಮತ್ತು ಸ್ವೀಕರಿಸುವ ಸಾಮರ್ಥ್ಯವನ್ನೂ
ಹೊಂದಿದೆ. ಸೇನಾಪಡೆಯ ಜೊತೆಗೆ ನಡೆಸಲಾಗುವ ಭವಿಷ್ಯದ ಜಂಟಿ ಕಾರ್ಯಾಚರಣೆಗಳಲ್ಲಿ ಅಪಾಚೆ ಮಹತ್ವದ ಪಾತ್ರ
ವಹಿಸಲಿದೆ ಎಂದು ವಾಯುಪಡೆ ಅಧಿಕಾರಿಯೊಬ್ಬರು ತಿಳಿಸಿದರು.
2019: ನವದೆಹಲಿ: ಕರ್ನಾಟಕದ ಮಾಜಿ ಸಚಿವ, ಕಾಂಗ್ರೆಸ್ಸಿನ
’ಸಂಕಟ ನಿವಾರಕ’ ಡಿಕೆ ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯವು
(ಇಡಿ) ಈದಿನ ರಾತ್ರಿ ಹಣ ವರ್ಗಾವಣೆ ಆಪಾದನೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿತು. ಕೇಂದ್ರೀಯ
ತನಿಖಾ ದಳವು ಕಳೆದ ವರ್ಷ ಸೆಪ್ಟೆಂಬರಿನಲಿ ಶಿವಕುಮಾರ್ ಮತ್ತು ಇತರರ ವಿರುದ್ಧ ಆದಾಯ ತೆರಿಗೆ ಇಲಾಖೆಯು
ನ್ಯಾಯಾಲಯ ಒಂದರಲ್ಲಿ ದಾಖಲಿಸಿದ್ದ ತೆರಿಗೆ ವಂಚನೆ ಮತ್ತು ಕೋಟಿಗಟ್ಟಲೆ ರೂಪಾಯಿ ಮೊತ್ತದ ಹಣವನ್ನು
ಹವಾಲಾ ವಹಿವಾಟು ಜಾಲದ ಮೂಲಕ ವರ್ಗಾಯಿಸಿದ ಆಪಾದನೆ ಸಂಬಂಧ ಸಲ್ಲಿಸಿದ್ದ ದೋಷಾರೋಪ ಪಟ್ಟಿಯನ್ನು (ಚಾರ್ಜ್‌ಶೀಟ್)
ಆಧರಿಸಿ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿತ್ತು. ಹಣ ವರ್ಗಾವಣೆ ಪ್ರಕರಣ ದಾಖಲಿಸಿದ ಬಳಿಕ, ಇದೇ
ಮೊದಲ ಬಾರಿಗೆ ಜಾರಿ ನಿರ್ದೇಶನಾಲಯವು ಸಮನ್ಸ್ ನೀಡಿ ಶನಿವಾರದಿಂದ ಶಿವಕುಮಾರ್ ಅವರನ್ನು ಕರೆಸಿಕೊಂಡು
ತೀವ್ರವಾಗಿ ಪ್ರಶ್ನಿಸಿತ್ತು. ಪ್ರಕರಣದ ತನಿಖಾಧಿಕಾರಿಯು ಪ್ರಕರಣದ ತನಿಖೆಯ ಭಾಗವಾಗಿ ಕಾಂಗ್ರೆಸ್
ನಾಯಕನನ್ನು ಶುಕ್ರವಾರ ನಾಲ್ಕು ಗಂಟೆಗಳಿಗೂ ಹೆಚ್ಚು ಹೊತ್ತು ಪ್ರಶ್ನಿಸಿದರೆ, ಶನಿವಾರ ಸುಮಾರು ೮
ಗಂಟೆಗಳ ಕಾಲ ಪ್ರಶ್ನಿಸಿದ್ದರು. ಕರ್ನಾಟಕದ ಮಾಜಿ ಸಂಪುಟ ದರ್ಜೆ ಸಚಿವರ ಹೇಳಿಕೆಯನ್ನು ಹಣ ವರ್ಗಾವಣೆ
ತಡೆ ಕಾಯ್ದೆ (ಪಿಎಂಎಲ್ ಎ) ಅಡಿಯಲ್ಲಿ ಈ ಹಿಂದೆ ಎರಡು ಸಂದರ್ಭಗಳಲ್ಲಿ ದಾಖಲಿಸಲಾಗಿತ್ತು. ಭಾರತೀಯ
ಜನತಾ ಪಕ್ಷದ (ಬಿಜೆಪಿ) ಸರ್ಕಾರವು ಶಿವಕುಮಾರ್ ಪ್ರಕರಣದಲ್ಲಿ ’ಸೇಡಿನ ರಾಜಕಾರಣ’ ನಡೆಸುತ್ತಿದೆ
ಎಂದು ಕಾಂಗ್ರೆಸ್ ಪಕ್ಷವು ಆಪಾದಿಸಿತು. ಶಿವಕುಮಾರ್
ಅವರು, ಬಿಂಬಿಸಲಾಗಿರುವಂತೆ, ಯಾವುದೇ ಆರ್ಥಿಕ ಅಪರಾಧವನ್ನೂ
ಎಸಗಿಲ್ಲ ಎಂದು ಪಕ್ಷದ ವಕ್ತಾರ, ಮಾಜಿ ಸಂಸದ ವಿಎಸ್ ಉಗ್ರಪ್ಪ ಪ್ರತಿಪಾದಿಸಿದರು. ಆಗಸ್ಟ್ ೩೦ರಂದು
ನವದೆಹಲಿಯಲ್ಲಿ ಜಾರಿ ನಿರ್ದೇಶನಾಲಯದ ಮುಂದೆ ಮೊದಲ ಬಾರಿಗೆ ಹಾಜರಾದ ಕನಕಪುರ ವಿಧಾನಸಭಾ ಕ್ಷೇತ್ರದ
ಶಾಸಕ, ಪ್ರಕರಣದ ತನಿಖೆಯಲ್ಲಿ ತನಿಖಾ ಸಂಸ್ಥೆಯ ಜೊತೆಗೆ ತಾವು ಸಂಪೂರ್ಣವಾಗಿ ಸಹಕರಿಸುವುದಾಗಿ ಹೇಳಿದ್ದರು. ‘ಅದು (ಹಾಜರಾಗುವುದು) ನನ್ನ ಕರ್ತವ್ಯ... ನಾನು ಕಾನೂನನ್ನು ಗೌರವಿಸಬೇಕಾಗಿದೆ. ನಾವು ಕಾನೂನು ರೂಪಿಸುವವರು ಮತ್ತು ಕಾನೂನಿಗೆ
ಅನುಗುಣವಾಗಿ ನಡೆಯುವ ನಾಗರಿಕರು. ಅವರು (ಇಡಿ) ನನ್ನನ್ನು ಕರೆದಿದ್ದಾರೆ. ನನ್ನನ್ನು ಹಣ ವರ್ಗಾವಣೆ
(ತಡೆ) ಕಾಯ್ದೆಯ (ಪಿಎಂಎಲ್ ಎ) ಅಡಿಯಲ್ಲಿ ಯಾಕೆ ಕರೆದಿದ್ದಾರೆ ಎಂಬುದು ನನಗೆ ಗೊತ್ತಿಲ್ಲ’ ಎಂದು ಶಿವಕುಮಾರ್ ಅವರು ಜಾರಿ ನಿರ್ದೇಶನಾಲಯದ ಹೊರಗೆ ಸುದ್ದಿಗಾರರ
ಜೊತೆ ಮಾತನಾಡುತ್ತಾ ಹೇಳಿದ್ದರು. ‘ನನ್ನನ್ನು ನೋಡಲಿ
ಮತ್ತು ಆಲಿಸಲಿ. ಅವರನ್ನು (ಇಡಿ) ಎದುರಿಸಲು ನಾನು ಸಜ್ಜಾಗಿದ್ದೇನೆ’ ಎಂದು
ಅವರು ಹೇಳಿದ್ದರು. ಜಾರಿ ನಿರ್ದೇಶನಾಲಯವು ಜಾರಿಮಾಡಿದ್ದ ಸಮನ್ಸ್‌ನ್ನು ಪ್ರಶ್ನಿಸಿ ಶಿವಕುಮಾರ್ ಅವರು
ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದ ಬಳಿಕ ಶಿವಕುಮಾರ್ ಅವರು ಜಾರಿ ನಿರ್ದೇಶನಾಲಯದ
ಮುಂದೆ ಹಾಜರಾಗಬೇಕಾಗಿ ಬಂದಿತ್ತು. ತಾನು ಯಾವುದೇ
ತಪ್ಪು ಮಾಡಿಲ್ಲ ಎಂದು ಹೇಳಿದ್ದ ಶಿವಕುಮಾರ್, ೨೦೧೭ರ ರಾಜ್ಯಸಭಾ ಚುನಾವಣೆ ಕಾಲದಲ್ಲಿ ಗುಜರಾತಿನ ಕಾಂಗ್ರೆಸ್
ಶಾಸಕರಿಗೆ ಸುರಕ್ಷಿತ ವಸತಿಗೆ ವ್ಯಸ್ಥೆ ಮಾಡುವಲ್ಲಿ ತಾವು ವಹಿಸಿದ್ದ ಪಾತ್ರ ಅತ್ಯಂತ ಮುಖ್ಯವಾದುದಾಗಿತ್ತು. ಬಿಜೆಪಿಯ ಕಾಂಗ್ರೆಸ್
ಶಾಸಕರನ್ನು ಬೇಟೆಯಾಡಲು ಯತ್ನಿಸಿತ್ತು. ನನ್ನ ಮೇಲಿನ
ಆದಾಯ ತೆರಿಗೆ ಶೋಧಗಳುಮತ್ತು ಆ ಬಳಿಕದ ಜಾರಿ ನಿರ್ದೇಶನಾಲಯ ಕ್ರಮಕ್ಕೆ ಇದೇ ಕಾರಣ ಎಂದಿದ್ದರು. ಜಾರಿ ನಿರ್ದೇಶನಾಲಯವು ಶಿವಕುಮಾರ್ ಮತ್ತು ದೆಹಲಿಯ ಕರ್ನಾಟಕ
ಭವನದ ನೌಕರ ಹನುಮಂತಯ್ಯ ಮತ್ತು ಇತರರ ವಿರುದ್ಧ ಕಳೆದ ವರ್ಷ ಸೆಪ್ಟೆಂಬರಿನಲ್ಲಿ ಪ್ರಕರಣ ದಾಖಲಿಸಿತ್ತು.
ಆದಾಯ ತೆರಿಗೆ ಇಲಾಖೆಯು ಕಳೆದ ವರ್ಷ ಬೆಂಗಳೂರಿನ ವಿಶೇಷ ನ್ಯಾಯಾಲಯ ಒಂದರಲ್ಲಿ ತೆರಿಗೆ ವಂಚನೆ ಮತ್ತು
ಹವಾವಾ ವಹಿವಾಟಿಗೆ ಸಂಬಂಧಿಸಿದಂತೆ ದಾಖಲಿಸಿದ್ದ ಚಾರ್ಜ್‌ಶೀಟ್ ಆಧರಿಸಿ ಜಾರಿ ನಿರ್ದೇಶನಾಲಯ ಹಣ ವರ್ಗಾವಣೆ
ಪ್ರಕರಣ ದಾಖಲಿಸಿತ್ತು. ಶಿವಕುಮಾರ್ ಮತ್ತು ಅವರ ನಿಕಟವರ್ತಿಗಳು ಭಾರೀ ಮೊತ್ತದ ಲೆಕ್ಕವಿಲ್ಲದ ಹಣವನ್ನು
ಹವಾಲಾ ಜಾಲದ ಮೂಲಕ ಮೂವರು ಆಪಾದಿತರ ನೆರವಿನೊಂದಿಗೆ ಒಯ್ದಿದ್ದರು ಎಂದು ಆದಾಯ ತೆರಿಗೆ ಇಲಾಖೆ ಆಪಾದಿಸಿತ್ತು.
2019: ನವದೆಹಲಿ:
ಕಣಿವೆಯಲ್ಲಿ ವಿಧಿಸಲಾಗಿರುವ ಸಂಪರ್ಕ ನಿರ್ಬಂಧ
ಕ್ರಮಗಳನ್ನು ೧೫ ದಿನಗಳಲ್ಲಿ ತೆರವುಗೊಳಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ
ಅವರು ಜಮ್ಮು ಮತ್ತು ಕಾಶ್ಮೀರದ ನಿಯೋಗ ಒಂದಕ್ಕೆ ಭರವಸೆ
ನೀಡಿದರು. ತಮ್ಮನ್ನು ಭೇಟಿ ಮಾಡಿದ ಗ್ರಾಮಗಳ ಮುಖ್ಯಸ್ಥರ ಜೊತೆ ಮಾತನಾಡಿದ ಗೃಹಸಚಿವರು ಎಲ್ಲ ಪಂಚರು
ಮತ್ತು ಸರಪಂಚರಿಗೆ ೨ ಲಕ್ಷ ರೂಪಾಯಿಗಳ ವಿಮಾ ರಕ್ಷಣೆಯನ್ನೂ ಘೋಷಿಸಿದರು. ‘ಸಚಿವರ ಜೊತೆಗೆ ಒಳ್ಳೆಯ ಸಭೆ ನಡೆಯಿತು. ಅವರು ನಮ್ಮ ಕಳವಳಗಳಿಗೆ
ಸಂಬಂಧಿಸಿದಂತೆ ಭರವಸೆ ನೀಡಿದ್ದಾರೆ’ ಎಂದು ಸಭೆಯ ಬಳಿಕ ಪುಲ್ವಾಮದ ಸರಪಂಚ ಮನೋಜ್
ಪಂಡಿತ ಹೇಳಿದರು. ‘ಸಂಪರ್ಕ ನಿರ್ಬಂಧ ಕುರಿತಂತೆ ಮುಂದಿನ
೧೦-೧೫ ದಿನಗಳಲ್ಲಿ ಸಂಪರ್ಕ ನಿರ್ಬಂಧಗಳನ್ನು ತೆರವುಗೊಳಿಸಲಾಗುವುದು’ ಎಂದು
ಅಮಿತ್ ಶಾ ಭರವಸೆ ನೀಡಿದರು’ ಎಂದು ಅವರು ನುಡಿದರು. ಶಾ ಅವರಲ್ಲದೆ, ಗೃಹ
ರಾಜ್ಯ ಸಚಿವ ನಿತ್ಯಾನಂದ ರೈ, ಪ್ರಧಾನ ಮಂತ್ರಿಗಳ ಕಚೇರಿಯ
ಸಚಿವ ಜಿ ಕೆ ರೆಡ್ಡಿ, ಗೃಹ ಸಚಿವಾಯದ ಜಿತೇಂದರ್ ಸಿಂಗ್ ಮತ್ತು ಇತರ ಅಧಿಕಾರಿಗಳನ್ನು ಕಾಶ್ಮೀರದ
ಗ್ರಾಮ ಪ್ರಮುಖರು, ಸೇಬು ಬೆಳೆಗಾರರು ಮತ್ತು ನಾಗರಿಕರ ಮೂರು ತಂಡಗಳು ಪ್ರತ್ಯೇಕವಾಗಿ ಭೇಟಿ ಮಾಡಿದವು. ರಾಜ್ಯ ಸ್ಥಾನಮಾನ, ಸಂಪರ್ಕ, ಪಂಚ ಮತ್ತು ಸರಪಂಚರಿಗೆ ವಿಮಾ
ರಕ್ಷಣೆ ಸೇರಿದಂತೆ ಹಲವಾರು ವಿಷಯಗಳು ಸಭೆಯಲ್ಲಿ ಚರ್ಚೆಗೆ ಬಂದವು. ನಾವು ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನಮಾನ ಬಗ್ಗೆ
ಪ್ರಸ್ತಾಪಿಸಿದೆವು ಮತ್ತು ಅದಕ್ಕೆ ಧನಾತ್ಮಕ ಸ್ಪಂದನೆ ಲಭಿಸಿತು ಎಂದು ಕುಪ್ವಾರದ ಲಾಂಗೇಟ್‌ನ ಮೀರ್
ಜುನೈದ್ ಹೇಳಿದರು. ‘ಜನರು ಆದ್ಯತೆ ಆಧಾರದಲ್ಲಿ ರಾಜ್ಯ
ಸ್ಥಾನಮಾನವನ್ನು ಪುನಃಸ್ಥಾಪಿಸಬೇಕು ಎಬುದಾಗಿ ಬಯಸುತ್ತಿದ್ದಾರೆ ಎಂದು ನಾನು ಗೃಹ ಸಚಿವರಿಗೆ ಹೇಳಿದೆ.
ಕಣಿವೆ ಸಹಜಸ್ಥಿತಿಗೆ ಹಿಂದಿರುಗುತ್ತಿದ್ದಂತೆಯೇ ರಾಜ್ಯಸ್ಥಾನಮಾನವನ್ನು ಒದಗಿಸಲಾಗುವುದು ಎಂದು ಸದನದಲ್ಲೇ
ನಾನು ಬದ್ಧತೆಯನ್ನು ಘೋಷಿಸಿದ್ದೇನೆ ಎಂದು ಶಾ ಹೇಳಿದರು’ ಎಂದು
ಜುನೈದ್ ನುಡಿದರು. ಎಲ್ಲ ಚುನಾಯಿತ ಗ್ರಾಮ ಮುಖ್ಯಸ್ಥರಿಗೆ
ವಿಮಾ ಸವಲತ್ತು ಮತ್ತು ಭದ್ರತೆ ಒದಗಿಸಬೇಕು ಎಂದು
ನಾನು ಶಾ ಅವರಿಗೆ ಮನವಿ ಮಾಡಿದೆ. ಸ್ಥಳೀಯ ಸಂಸ್ಥೆ ಚುನಾವಣೆ ಎದರಿಸುವಲ್ಲಿ ನಾವು ದೊಡ್ಡ ಅಪಾಯವನ್ನು
ಎದುರುಹಾಕಿಕೊಂಡಿದ್ದೆವು. ಎರಡು ಲಕ್ಷ ರೂಪಾಯಿಗಳ
ವಿಮಾ ಒದಗಿಸುವಂತೆ ಕೋರಿದೆವು. ಸಚಿವರು ಅದನ್ನು ಒದಗಿಸುವ ಭರವಸೆ ಕೊಟ್ಟರು. ಭದ್ರತೆ ಒದಗಿಸುವ ಭರವಸೆಯನ್ನೂ
ಸಚಿವರು ನೀಡಿದರು ಎಂದು ಶ್ರೀನಗರದ ಪಂಚ ಜಬೈರ್ ಶಾ ಹೇಳಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಆರು ವರ್ಷಗಳ ಅಂತರದ ಬಳಿಕ
ಕಳೆದ ವರ್ಷ ಜುಲೈ ತಿಂಗಳಲ್ಲಿ ಪಂಚಾಯ್ತಿ ಚುನಾವಣೆ ನಡೆದಿತ್ತು. ಸಂವಿಧಾನದ ೩೫ಎ ವಿಧಿ ರದ್ಧತಿಯ ಹಿನ್ನೆಲೆಯಲ್ಲಿ
ಭೂಮಿಯ ಹಕ್ಕಗಳ ಬಗ್ಗೆ ನಿಯೋಗದ ಕೆಲವು ಸದಸ್ಯರು ಕಳವಳ ವ್ಯಕ್ತಪಡಿಸಿದರು. ‘ನಮ್ಮ ಭೂಮಿ ಹಕ್ಕುಗಳಿಗೆ ಏನಾಗುತ್ತದೋ ಎಂದು ಜಮ್ಮು ಪ್ರದೇಶದ
ಜನರು ಕೂಡಾ ಚಿಂತಿತರಾಗಿದ್ದಾರೆ. ಈ ಭೂಮಿ ಹಕ್ಕು ೩೫ಎ ವಿಧಿಯ ಅಡಿಯಲ್ಲಿ ಭದ್ರವಾಗಿತ್ತು. ನಾವು ಈ
ಬಗ್ಗೆ ಕಳವಳ ವ್ಯಕ್ತಪಡಿಸಿ ನಮ್ಮ ಹಕ್ಕುಗಳ ರಕ್ಷಣೆಯಾಗಬೇಕು. ಆದರೆ ತತ್ ಕ್ಷಣದ ಆದ್ಯತೆ ಕಾನೂನು
ಮತ್ತು ಸುವ್ಯವಸ್ಥೆಯದು’ ಎಂದು ಜಮ್ಮುವಿನಿಂದ ಬಂದಿದ್ದ ಬಬಿತಾ ಅವರು
ಶಾ ಅವರಿಗೆ ತಿಳಿಸಿದರು. ಗುರುತು ಹೇಳಲು ಇಚ್ಛಿಸದ ನಿಯೋಗದ ಇನ್ನೊಬ್ಬ ಸದಸ್ಯರು ’ನಿರ್ಬಂಧಗಳಿಂದ
ವಹಿವಾಟಿಗೆ ಧಕ್ಕೆಯಾಗಿದೆ’ ಎಂದು ಹೇಳಿದರು. ’ನಮ್ಮ ಉತ್ಪನ್ನಗಳು ಯಾವ
ದರದಲ್ಲಿ ಮಾರಾಟವಾಗುತ್ತದೋ ಎಂಬ ಆತಂಕ ನಮಗಿದೆ. ಸೇಬಿನಂತಹ ಬೇಗನೇ ಹಾಳಾಗುವ ಉತ್ಪನ್ನಗಳಿಗೆ ಸಾರಿಗೆ
ದೊಡ್ಡ ಸಮಸ್ಯೆಯಾಗಿದೆ. ಈ ನಿರ್ಬಂಧ ಒಳ್ಳೆಯದಲ್ಲ’ ಎಂದು
ಅವರು ನುಡಿದರು. ಏನಿದ್ದರೂ, ನಿರ್ಬಂಧಗಳು ತಾತ್ಕಾಲಿಕ
ಮಾತ್ರ ಎಂಬುದಾಗಿ ಶಾ ಅವರು ನಿಯೋಗದ ಸದಸ್ಯರಿಗೆ ಭರವಸೆ ನೀಡಿದರು. ’ಈದಿನ ಪಂಚರಿಗೆ ಭದ್ರತೆಯ ಭರವಸೆಯನ್ನು ನಾವು ನೀಡುತ್ತಿದ್ದೇವೆ. ಆದರೆ ಶೀಘ್ರದಲ್ಲೇ ಕಣಿವೆಯಲ್ಲಿ
ಪರಿಸ್ಥಿತಿ ಎಷ್ಟೊಂದು ಶಾಂತವಾಗಿರುತ್ತದೆ ಎಂದರೆ ಭದ್ರತೆಯ ಅಗತ್ಯವೇ ಇರುವುದಿಲ್ಲ’ ಎಂದು ಶಾ ಹೇಳಿದರು.
ತಮ್ಮನ್ನು ಭೇಟಿ ಮಾಡಿದ ಗ್ರಾಮಗಳ ಮುಖ್ಯಸ್ಥರೇ ನಿಜವಾಗಿ ಕಾಶ್ಮೀರದ ನಾಯಕರು ಮತ್ತು ವಿಶ್ವಾಸ ಕಳೆದುಕೊಂಡಿರುವ ಹಾಲಿ ನಾಯಕತ್ವಕ್ಕೆ ಅವರು ಪರ್ಯಾಯ
ಒದಗಿಸಬಲ್ಲರು ಎಂದು ಶಾ ನುಡಿದರು. ತಮ್ಮ ಸಂಪರ್ಕ ಅಭಿಯಾನದ ಅಂಗವಾಗಿ, ಶಾ ಅವರು ಮುಂದಿನ ಕೆಲವು ದಿನಗಳಲ್ಲಿ
ಇನ್ನಷ್ಟು ಕಾಶ್ಮೀರಿ ಮತ್ತು ಕಾಶ್ಮೀರೇತರ ನಾಯಕರನ್ನು ಭೇಟಿ ಮಾಡಲಿದ್ದಾರೆ ಮತ್ತು ಸರ್ಕಾರದ ಸಂದೇಶವನ್ನು
ಕಾಶ್ಮೀರಕ್ಕೆ ಮುಟ್ಟಿಸಲಿದ್ದಾರೆ. ಬಿಎಸ್ ಎನ್ ಎಲ್
ಬ್ರಾಡ್ ಬ್ಯಾಂಡ್ ಮತ್ತು ಖಾಸಗಿ ಗುತ್ತಿಗೆ ಲೈನಿನ ಇಂಟರ್ ನೆಟ್ ಸೇರಿದಂತೆ ಮೊಬೈಲ್ ಮತ್ತು ಇಂಟರ್
ನೆಟ್ ಸಂಪರ್ಕಗಳು ಆಗಸ್ಟ್ ೫ರಂದು ಜಮ್ಮು -ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ ೩೭೦ನೇ
ವಿಧಿ ರದ್ದು ಮತ್ತು ರಾಜ್ಯವನ್ನು ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ
ಬಳಿಕ ಸ್ಥಗಿತಂಡಿದ್ದವು.
2019: ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದತಿ ಬಳಿಕ ಎಗರಾಡುತ್ತಿದ್ದ ಪಾಕಿಸ್ಥಾನ ಈಗ ಒಂದೊಂದೇ ವಿಚಾರದಲ್ಲಿ ಉಲ್ಟಾ ಹೊಡೆಯತೊಡಗಿತು. ಯುದ್ಧದ ವಿಚಾರ, ಪರಮಾಣು ಬಾಂಬ್ ದಾಳಿ ಮಾಡುತ್ತೇವೆ ಎಂದೆಲ್ಲ ಹೇಳಿದ್ದ ಆ ದೇಶ ಕಳೆದೆರಡು ದಿನಗಳಿಂದ ಇಲ್ಲ ಇಲ್ಲ.. ಎನ್ನುತ್ತ ಯೂ ಟರ್ನ್ ತೆಗೆದುಕೊಂಡಿತ್ತು. ಈಗ ವ್ಯಾಪಾರ ನಿಷೇಧ ವಿಚಾರದಲ್ಲೂ ಉಲ್ಟಾ ಹೊಡೆಯಿತು. ಭಾರತದೊಂದಿಗೆ ಆಮದು-ತುರ್ತುಗಳನ್ನು ನಿಷೇಧಿಸಿದ್ದ ಪಾಕಿಸ್ಥಾನ ಅಗತ್ಯ ವಸ್ತುಗಳ ವಿಚಾರದಲ್ಲಿ ಸಂಕಷ್ಟಕ್ಕೀಡಾಗಿದ್ದು, ಇದರಿಂದ ಔಷಧಿ ತಯಾರಿಕೆಯ ಕಚ್ಚಾ ವಸ್ತುಗಳಿಗೆ ಹೇರಲಾಗಿದ್ದ ನಿಷೇಧವನ್ನು ಅದು ರದ್ದುಗೊಳಿಸಿತು. ಕ್ಯಾನ್ಸರ್, ಕ್ಷಯ, ಹೃದಯ ಸಂಬಂಧಿ ಕಾಯಿಲೆಗಳೂ ಸೇರಿದಂತೆ ಪ್ರಮುಖ ಔಷಧಿಗಳ ಕಚ್ಚಾ ವಸ್ತುಗಳನ್ನು ಭಾರತದಿಂದ ತರಿಸಿಕೊಳ್ಳಲು ಅದು ಉದ್ಯಮಕ್ಕೆ ಸಮ್ಮತಿ ನೀಡಿತು. ಇದಕ್ಕೆ ಕಾರಣ ಪಾಕ್ ನಲ್ಲಿ ಈ ಔಷಧಿಗಳ ಕೊರತೆಯಾಗುವ ಸಾಧ್ಯತೆ ದಟ್ಟವಾದದ್ದು. ಇನ್ನು ಕೆಲವು ದಿನಗಳು ಕಳೆದರೆ ಔಷಧ ಅಲಭ್ಯತೆ ಕಾಡುವುದಾಗಿ ಅಲ್ಲಿನ ಉದ್ಯಮ ವಲಯ ಆತಂಕ ವ್ಯಕ್ತಪಡಿಸಿತ್ತು. ಅಲ್ಲದೇ ಭಾರತ ಹೊರತು ಬೇರೆಯಾವುದೇ ದೇಶಗಳಿಂದ ಕಚ್ಚಾ ವಸ್ತುಗಳನ್ನು ತರಿಸುವುದು ಅತಿ ದುಬಾರಿಯಾದ್ದರಿಂದ ಪಾಕಿಸ್ಥಾನಕ್ಕೆ ಬೇರೆ ದಾರಿಯೇ ಇಲ್ಲ ಎಂದು ಹೇಳಲಾಯಿತು. ಅಲ್ಲದೇ ಪಾಕ್ ಶೇ.50ರಷ್ಟು ಔಷಧಿಗಳ ಕಚ್ಚಾವಸ್ತುಗಳನ್ನು ಭಾರತದಿಂದ ಆಮದು ಮಾಡುತ್ತಿದೆ. ಔಷಧಿಗಳಿಗೆ ಬಳಸುವ 820 ರಾಸಾಯನಿಕಗಳನ್ನು ಅದು ಆಮದು ಮಾಡಿಕೊಳ್ಳುತ್ತಿದೆ. ಇವುಗಳಲ್ಲಿ 62 ಕಚ್ಚಾ ವಸ್ತುಗಳಿಗೆ ಪಾಕ್ ಭಾರತವನ್ನೇ ಶೇ.100ರಷ್ಟು ಆಶ್ರಯಿಸಿದೆ. ಇವುಗಳಲ್ಲಿ 23 ವಸ್ತುಗಳು ಯಾವತ್ತೂ ಬೇಕಾಗುವ, ಅತಿ ಬೇಡಿಕೆಯಿರುವ ಜೀವ ರಕ್ಷಕ ಔಷಧಿಯ ಮೂಲವಸ್ತುಗಳಾಗಿವೆ.
2019: ನವದೆಹಲಿ: ಭಾರತೀಯ ಮಹಿಳೆಯರ ಕ್ರಿಕೆಟ್ ತಂಡದ ನಾಯಕಿ ಮತ್ತು ಮಹಿಳಾ ಟಿ20 ತಂಡದ ಪ್ರಪ್ರಥಮ ನಾಯಕಿ ಮಿಥಾಲಿ ರಾಜ್ ಅವರು ಅಂತಾರಾಷ್ಟ್ರೀಯ ಟಿ20 ಮಾದರಿಗೆ ಗುಡ್ ಬೈ ಹೇಳಿದರು.
ಮಿಥಾಲಿ ರಾಜ್ ಅವರು 32 ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು ಮತ್ತು ಮೂರು ಟಿ20 ವಿಶ್ವಕಪ್ ಗಳಲ್ಲಿ ತಂಡವನ್ನು ಮುನ್ನಡೆಸಿದ ಹೆಗ್ಗಳಿಕೆ ಮಿಥಾಲಿ ರಾಜ್ ಅವರದ್ದು. 2006ರಲ್ಲಿ ಡರ್ಬಿಯಲ್ಲಿ ಭಾರತ ಮಹಿಳಾ ತಂಡವು ತನ್ನ ಪ್ರಪ್ರಥಮ ಟಿ20 ಪಂದ್ಯವನ್ನಾಡಿದ ಸಂದರ್ಭದಲ್ಲಿ ತಂಡವನ್ನು ಮುನ್ನಡೆಸಿದ ಹೆಗ್ಗಳಿಕೆ ಮಿಥಾಲಿ ರಾಜ್ ಅವರದ್ದಾಗಿತ್ತು. ಮಿಥಾಲಿ ಅವರು ತಮ್ಮ ಅಂತಿಮ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನು ಕಳೆದ ಮಾರ್ಚ್ ತಿಂಗಳಿನಲ್ಲಿ ಇಂಗ್ಲಂಡ್ ವಿರುದ್ಧ ಆಡಿದ್ದರು ಮತ್ತು ಈ ಪಂದ್ಯದಲ್ಲಿ ಅವರು 30 ರನ್ ಗಳಿಸಿ ಔಟಾಗದೇ ಉಳಿದಿದ್ದರು. ‘2006ರಿಂದ ಸತತವಾಗಿ ಭಾರತ ಮಹಿಳಾ ಟಿ20 ತಂಡದಲ್ಲಿ ಆಡುತ್ತಾ ಬಂದಿದ್ದೇನೆ ಇನ್ನು 2021ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಕೂಟಕ್ಕೆ ನನ್ನನ್ನು ನಾನು ಸಿದ್ಧಗೊಳಿಸಿಕೊಳ್ಳಬೇಕಾಗಿರುವುದರಿಂದ ಟಿ20 ಮಾದರಿಯಿಂದ ನಿವೃತ್ತಿಯಾಗುತ್ತಿದ್ದೇನೆ. ನನ್ನ ದೇಶಕ್ಕೆ ವಿಶ್ವಕಪ್ ಒಂದನ್ನು ಗೆಲ್ಲಿಸಿಕೊಡುವುದು ನನ್ನ ಕನಸಾಗಿದ್ದು ಇದಕ್ಕಾಗಿ ನಾನು ಪರಿಪೂರ್ಣ ಪ್ರದರ್ಶನವನ್ನು ನೀಡುವುದು ಅಗತ್ಯವಾಗಿದೆ’ ಎಂದು ಮಿಥಾಲಿ ರಾಜ್ ಅವರು ತನ್ನ ವಿದಾಯಕ್ಕೆ ಸಮರ್ಥನೆಯನ್ನು ನೀಡಿದರು. ತವರಿನಂಗಳದಲ್ಲಿ ನಡೆಯಲಿರುವ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಗೆ ತಾನು ಆಯ್ಕೆಗೆ ಲಭ್ಯ ಇರುವುದಾಗಿ ಮಿಥಾಲಿ ಅವರು ಇತ್ತೀಚೆಗಷ್ಟೇ ಆಯ್ಕೆ ಮಂಡಳಿಗೆ ತಿಳಿಸಿದ್ದರು. ಆದರೆ ತಂಡದ ಆಯ್ಕೆಗೆ ಇನ್ನು ಎರಡು ದಿನ ಬಾಕಿ ಇರುವಂತೆ ಮಿಥಾಲಿ ರಾಜ್ ಅವರು ಟಿ20 ಮಾದರಿಗೆ ನಿವೃತ್ತಿ ಘೋಷಿಸಿದರು. ಮಿಥಾಲಿ ರಾಜ್ ಅವರು ಇದುವರೆಗೆ 89 ಪಂದ್ಯಗಳನ್ನಾಡಿದ್ದು 2364 ರನ್ನುಗಳನ್ನು ಬಾರಿಸಿದ್ದರು. ಇದರಲ್ಲಿ 17 ಅರ್ಧಶತಕಗಳಿವೆ. ಟಿ20ಯಲ್ಲಿ ಮಿಥಾಲಿ ಅವರ ಬೆಸ್ಟ್ ಸ್ಕೋರ್ ಔಟಾಗದೇ 97 ರನ್ನುಗಳು. ಮಿಥಾಲಿ ರಾಜ್ ಅವರು 32 ಟಿ20 ಪಂದ್ಯಗಳಲ್ಲಿ ಭಾರತ ಮಹಿಳಾ ತಂಡವನ್ನು ಮುನ್ನಡೆಸಿದ್ದಾರೆ. 2012, 2014 ಮತ್ತು 2016ರ ಟಿ20 ವಿಶ್ವಕಪ್ ಗಳಲ್ಲಿ ಮಿಥಾಲಿ ರಾಜ್ ಅವರು ಭಾರತ ತಂಡದ ನಾಯಕಿಯಾಗಿದ್ದರು.
2019: ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆಯಲ್ಲಿ ಈದಿನ ಹೂಡಿಕೆದಾರರಿಗೆ ಅಮಂಗಳವಾಯಿತು. ಷೇರುಪೇಟೆಯಲ್ಲಿ ಭಾರಿ ಕುಸಿತ ಉಂಟಾದದ್ದರಿಂದ ಹೂಡಿಕೆದಾರರು 2.61 ಲಕ್ಷ ಕೋಟಿ ರೂ. ನಷ್ಟ ಅನುಭವಿಸಿದರು. ಮುಂಬಯಿ ಷೇರು ವಿನಿಮಯ ಪೇಟೆ (ಬಿಎಸ್‌ಇ) ದಿನದಂತ್ಯಕ್ಕೆ ಒಟ್ಟು
770 ಅಂಕ ಕಳೆದುಕೊಂಡಿತು. ದಿನದಂತ್ಯದಲ್ಲಿ ಬಿಎಸ್‌ಇ 36,562.91 ಅಂಕ ದಾಖಲಾಗಿತ್ತು. ರಾಷ್ಟ್ರೀಯ ಷೇರು ವಿನಿಮಯ ಪೇಟೆ (ಎನ್‌ಎಸ್‌ಇ)
225 ಅಂಕ ಇಳಿಕೆ ಕಂಡಿತು.
ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ದರ ಇಳಿಕೆ ಹಾಗೂ ಆಟೊಮೊಬೈಲ್ ಕ್ಷೇತ್ರದಲ್ಲಿ ಭಾರಿ ಇಳಿಕೆ ಕಂಡ ಹಿನ್ನೆಲೆಯಲ್ಲಿ ಷೇರು ಪೇಟೆಯಲ್ಲೂ ಅಲ್ಲೋಲ ಕಲ್ಲೋಲ ಸೃಷ್ಟಿಯಾಯಿತು. ಜಾಗತಿಕ ಆರ್ಥಿಕ ಕುಸಿತದ ಪರಿಣಾಮ ಭಾರತದ ಮೇಲೂ ಆಗುತ್ತಿದೆ. ಇದರಿಂದ ದೇಶದ ಪ್ರತಿಷ್ಠಿತ ಕಂಪನಿಗಳೇ ಷೇರುಪೇಟೆಯಲ್ಲಿ ಭಾರಿ ನಷ್ಟ ಅನುಭವಿಸುತ್ತಿವೆ. ಇದಲ್ಲದೇ ಇತ್ತೀಚಿನ ದಿನಗಳಲ್ಲಿ ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಸಮರ ಕೂಡ ಜಾಗತಿಕ ಆರ್ಥಿಕತೆ ಮೇಲೆ ಪರಿಣಾಮ ಬೀರಿತ್ತು. ಇದು ಎಲ್ಲ ದೇಶಗಳಿಗೂ ವ್ಯಾಪಿಸಿತ್ತು. ದೇಶದ ಆರ್ಥಿಕತೆಯ ಸುಧಾರಣೆಗೆ ಕೇಂದ್ರ ಸರಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಭಾರಿ ಇಳಿಮುಖ ಕಂಡುಬಂದಿತು.
ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ದರ ಇಳಿಕೆ ಹಾಗೂ ಆಟೊಮೊಬೈಲ್ ಕ್ಷೇತ್ರದಲ್ಲಿ ಭಾರಿ ಇಳಿಕೆ ಕಂಡ ಹಿನ್ನೆಲೆಯಲ್ಲಿ ಷೇರು ಪೇಟೆಯಲ್ಲೂ ಅಲ್ಲೋಲ ಕಲ್ಲೋಲ ಸೃಷ್ಟಿಯಾಯಿತು. ಜಾಗತಿಕ ಆರ್ಥಿಕ ಕುಸಿತದ ಪರಿಣಾಮ ಭಾರತದ ಮೇಲೂ ಆಗುತ್ತಿದೆ. ಇದರಿಂದ ದೇಶದ ಪ್ರತಿಷ್ಠಿತ ಕಂಪನಿಗಳೇ ಷೇರುಪೇಟೆಯಲ್ಲಿ ಭಾರಿ ನಷ್ಟ ಅನುಭವಿಸುತ್ತಿವೆ. ಇದಲ್ಲದೇ ಇತ್ತೀಚಿನ ದಿನಗಳಲ್ಲಿ ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಸಮರ ಕೂಡ ಜಾಗತಿಕ ಆರ್ಥಿಕತೆ ಮೇಲೆ ಪರಿಣಾಮ ಬೀರಿತ್ತು. ಇದು ಎಲ್ಲ ದೇಶಗಳಿಗೂ ವ್ಯಾಪಿಸಿತ್ತು. ದೇಶದ ಆರ್ಥಿಕತೆಯ ಸುಧಾರಣೆಗೆ ಕೇಂದ್ರ ಸರಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಭಾರಿ ಇಳಿಮುಖ ಕಂಡುಬಂದಿತು.
2019: ದುಬೈ: ಆಸೀಸ್ ಆಟಗಾರ ಸ್ಟೀವನ್ ಸ್ಮಿತ್ ಟೆಸ್ಟ್ ಕ್ರಿಕೆಟ್ ನಲ್ಲಿ ಈಗ ನಂ 1 ಆಟಗಾರ. ಭಾರತದ ನಾಯಕ ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿ ಸ್ಮಿತ್ ಈ ಸಾಧನೆ ಮಾಡಿದರು. ವಿಂಡೀಸ್ ಸರಣಿಯಲ್ಲಿ ಸಾಧಾರಣ ಪ್ರದರ್ಶನ ನೀಡಿದ ಹಿನ್ನಲೆಯಲ್ಲಿ ಕೊಹ್ಲಿ ದ್ವಿತೀಯ ಸ್ಥಾನಕ್ಕೆ ತಳ್ಳಲ್ಪಟ್ಟರು. ವಿಂಡೀಸ್ ವಿರುದ್ಧ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಅಜಿಂಕ್ಯ ರಹಾನೆ 7ನೇ ಶ್ರೇಯಾಂಕ ಪಡೆದರು. ದ್ವಿತೀಯ ಪಂದ್ಯದ ಶತಕವೀರ ಹನುಮ ವಿಹಾರಿ 40 ಸ್ಥಾನ ಭಡ್ತಿ ಪಡೆದು 30ನೇ ಶ್ರೇಯಾಂಕಕ್ಕೆ ತಲುಪಿದರು. ದ್ವಿತೀಯ ಪಂದ್ಯದಲ್ಲಿ ತಲಾ ಐದು ವಿಕೆಟ್ ಗೊಂಚಲು ಪಡೆದ ಜಸ್ಪ್ರೀತ್ ಬುಮ್ರಾ ಮತ್ತು ಜೇಸನ್ ಹೋಲ್ಡರ್ ಬೌಲಿಂಗ್ ಶ್ರೇಯಾಂಕದಲ್ಲಿ ಕ್ರಮವಾಗಿ 3 ಮತ್ತು 4ನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಮೊದಲೆರಡು ಸ್ಥಾನದಲ್ಲಿ ಪ್ಯಾಟ್ ಕಮಿನ್ಸ್ ಮತ್ತು ಜೋಶ್ ಹ್ಯಾಝಲ್ ವುಡ್ ಇದ್ದರು.
ಇಂದಿನ ಇತಿಹಾಸ History Today ಸೆಪ್ಟೆಂಬರ್ 03 (2008+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್
ಮಾಡಿರಿ.)
No comments:
Post a Comment