Saturday, September 14, 2019

ಇಂದಿನ ಇತಿಹಾಸ History Today ಸೆಪ್ಟೆಂಬರ್ 14

2019: ನವದೆಹಲಿ: ದೇಶದ ಆರ್ಥಿಕತೆ ಮಂದಗತಿಯಲ್ಲಿರುವ ವರದಿಗಳ ಮಧ್ಯೆ ಆರ್ಥಿಕತೆಗೆ ಬಲತುಂಬುವ  ಸಲುವಾಗಿ ಮೂರನೇ ಹಂತದ ಮಹತ್ವದ ಉತ್ತೇಜನ ಕೊಡುಗೆಗಳನ್ನು ಈದಿನ  ಪ್ರಕಟಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗೃಹ ಯೋಜನೆಗಳಿಗೆ ೨೦,೦೦೦ ಕೋಟಿ ರೂಪಾಯಿ ಮತ್ತು ರಫ್ತು ಕ್ಷೇತ್ರಕ್ಕೆ ೫೦,೦೦೦ ಕೋಟಿ ರೂಪಾಯಿಗಳ ಕೊಡುಗೆ ಘೋಷಿಸಿದರು. ಮಧ್ಯಮ ವರ್ಗದ ಮಂದಿಗೆ, ಅರ್ಧಕ್ಕೆ ನಿಂತ ತಮ್ಮ ಕನಸಿನ ಮನೆಗಳನ್ನು ಪೂರ್ಣಗೊಳಿಸಲು ವಿಶೇಷ ಸಾಲ ಒದಗಿಸುವ ವಿಶೇಷ ಯೋಜನೆಯನ್ನು ಆರಂಭಿಸುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದ ಸಚಿವರು, ಪೂರ್ಣಗೊಳ್ಳದ ಯೋಜನೆಗಳನ್ನು ಪೂರ್ಣಗೊಳಿಸುವುದೇ ಮುಖ್ಯ ಗುರಿ ಎಂದು ಹೇಳಿದರು. ಮನೆ ನಿರ್ಮಾಣ ಮೇಲಿನ ಸಾಲದ ಬಡ್ಡಿದರವನ್ನು ಇಳಿಸುವ ಭರವಸೆ ನೀಡಿದರು. ಮನೆಗಳನ್ನು ಖರೀದಿಸುವಂತೆ ಸರ್ಕಾರಿ ನೌಕರರನ್ನು ಅವರು ಪ್ರೋತ್ಸಾಹಿಸಿದರು.  ಸದರಿ ನೆರವಿನಿಂದ ದೇಶಾದ್ಯಂತ . ಲಕ್ಷ ಯೋಜನೆಗಳಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು.  ಅರ್ಧಕ್ಕೆ ನಿಂತ ಮನೆಗಳನ್ನು ಪೂರ್ಣಗೊಳಿಸುವ ಯೋಜನೆಗೆ ಕೇಂದ್ರ ಸರ್ಕಾರ ೧೦,೦೦೦ ಕೋಟಿ ರೂಪಾಯಿಗಳನ್ನು ಒದಗಿಸುವುದು. ಅಷ್ಟೇ ಮೊತ್ತದ ಹಣವನ್ನು ಹೊರಗಿನ ಹೂಡಿಕೆದಾರರು ಒದಗಿಸಲಿದ್ದಾರೆ. ನಿಧಿಯನ್ನು ವಸತಿ ಬ್ಯಾಂಕುಗಳ ರಂಗದ ವೃತ್ತಿ ತಜ್ಞರೇ ನಿಭಾಯಿಸಲಿದ್ದಾರೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.  (ವಿವರಗಳಿಗೆಇಲ್ಲಿ ಕ್ಲಿಕ್ಕಿಸಿ).

2019: ರಿಯಾದ್: ಸೌದಿ ಅರೇಬಿಯಾದ ಎರಡು ಅರಮ್ಕೋ ತೈಲ ನಿಕ್ಷೇಪಗಳ ಮೇಲೆ ಇರಾನ್ ಬೆಂಬಲಿತ ಯೆಮಿನಿ ಬಂಡುಕೋರರು  ಈದಿನ  ಬೆಳಗ್ಗೆ ಡ್ರೋನ್ ದಾಳಿ ನಡೆಸಿದ್ದು, ವಿಶ್ವದ ಅತಿದೊಡ್ಡಅರಮ್ಕೋತೈಲ ಸಂಸ್ಕರಣಾ ಘಟಕವು ಭಾರೀ ಪ್ರಮಾಣದಲ್ಲಿ ಧಗ ಧಗನೆ ಹೊತ್ತಿಕೊಂಡು ಉರಿಯುತ್ತಿದೆ ಎಂದು ವರದಿಗಳು ತಿಳಿಸಿದವು. ಖುರೈಸ್ ಮತ್ತು ಬುಖ್ಯಾಖ್ ತೈಲ ಘಟಕಗಳ ಸಂಸ್ಕರಣಾಗಾರಗಳ ಮೇಲೆ ದಾಳಿ ನಡೆದಿದ್ದು, ಯೆಮಿನಿ ಬಂಡುಕೋರರು ದಾಳಿಯ ಹೊಣೆ ಹೊತ್ತುಕೊಂಡರು. ಕಳೆದ ಮೇ ಮತ್ತು ಆಗಸ್ಟ್ ತಿಂಗಳಲ್ಲಿ ಕೂಡಾ ಯೆಮೆನ್ ಮೂಲದ ಹೌತಿ ಬಂಡುಕೋರರು ಇದೇ ರೀತಿಯ ಡ್ರೋನ್ ದಾಳಿ ನಡೆಸಿದ್ದರು. ಅರಮ್ಕೋ ವಿಶ್ವದ ಅತೀ ತೊಡ್ಡ ತೈಲ ಸಂಸ್ಕರಣಾ ಘಟಕವಾಗಿದ್ದು, ಸೌದಿ ಅರಮ್ಕೋ ನಡೆಸುತ್ತಿರುವ ಬುಖ್ವಾಕ್ ಮತ್ತು ಖುರೈಸ್ ತೈಲ ನಿಕ್ಷೇಪಗಳ ಸಮೀಪದಲ್ಲೇ ತೈಲ ಸಂಸ್ಕರಣಾ ಘಟಕ ಇದೆ. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ).

2019: ವಾಷಿಂಗ್ಟನ್: ಅಲ್ ಖೈದಾ ಉಗ್ರ ಸಂಘಟನೆಯ ಸ್ಥಾಪಕ ಒಸಾಮಾ ಬಿನ್ ಲಾಡೆನ್ ಪುತ್ರ ಹಮ್ಜಾ ಬಿನ್ ಲಾಡೆನ್ ಆಫ್ಘಾನಿಸ್ಥಾನ- ಪಾಕಿಸ್ತಾನ ಗಡಿಯಲ್ಲಿ ನಡೆಸಲಾದ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯಲಿ ಅಸು ನೀಗಿದ್ದಾನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಈದಿನ ದೃಢ ಪಡಿಸಿದರು. ಅಲ್ ಖೈದಾ ಸಂಘಟನೆಯ ಮುಂದಿನ ನಾಯಕ ಎಂಬುದಾಗಿ ಹಮ್ಜಾ ಪರಿಗಣಿತನಾಗಿದ್ದ. ಒಸಾಮಾ ಬಿನ್ ಲಾಡೆನ್ ೨೦ ಮಕ್ಕಳ ಪೈಕಿ ೧೫ನೆಯವನಾದ ಹಮ್ಜಾ ಲಾಡೆನ್ ಒಸಾಮಾನಿಗೆ ಮೂರನೇ ಪತ್ನಿಯಿಂದ ಜನಿಸಿದ್ದ. ಈತನ ವಯಸ್ಸು ಅಂದಾಜು ೩೦ ವರ್ಷ ಎಂಬುದಾಗಿ ಹೇಳಲಾಗಿತ್ತು. ‘ಹಮ್ಜಾ ಸಾವು ಅಲ್ ಖೈದಾ ಭಯೋತ್ಪಾದಕ ಸಂಘಟನೆಗೆ ದೊಡ್ಡ ನಷ್ಟವಾಗಿದ್ದು, ಅದು ನಾಯಕತ್ವ ಗುಣದ ಮಹತ್ವದ ವ್ಯಕ್ತಿಯಿಂದ ವಂಚಿತವಾಗಿದೆಎಂದು ಶ್ವೇತ ಭವನವು ಬಿಡುಗಡೆ ಮಾಡಿದ ಟ್ರಂಪ್ ಅವರ ಹೇಳಿಕೆ ತಿಳಿಸಿತು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ).

2019: ನವದೆಹಲಿ/ಇಸ್ಲಾಮಾಬಾದ್: ಜಮ್ಮು-ಕಾಶ್ಮೀರದ ವಿಚಾರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗ ಅನುಭವಿಸಿದ ನಂತರ ಕೊನೆಯ ಪ್ರಯತ್ನ ಎಂಬಂತೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪಾಕ್ ಆಕ್ರಮಿತ ಕಾಶ್ಮೀರದ  ಮುಜಾಫರಾಬಾದಿನಲ್ಲಿ ಹಿಂದಿನ ದಿನ ಆಯೋಜಿಸಿದ್ದ ಬೃಹತ್ ಸಮಾವೇಶ ಫ್ಲಾಪ್ ಶೋ ಎಂದು ಪಿಒಕೆ ಸಾಮಾಜಿಕ ಕಾರ್ಯಕರ್ತರು ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ಖಾನ್ ಮತ್ತೊಮ್ಮೆ ಮುಖಭಂಗ ಅನುಭವಿಸುವಂತಾದುದು  ೀದಿನ ಬೆಳಕಿಗೆ ಬಂದಿತು. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಸಾಮಾಜಿಕ ಕಾರ್ಯಕರ್ತ ಅಮ್ಜದ್ ಅಯೂಬ್ ಮಿರ್ಜಾ ಎಎನ್ ನ್ಯೂಸ್ ಏಜೆನ್ಸಿ ಜತೆ ಮಾತನಾಡುತ್ತ, ಮುಜಾಫರಬಾದ್ ನಲ್ಲಿ ಇಮ್ರಾನ್ ಖಾನ್ ನಡೆಸಿದ ಬೃಹತ್ ಸಮಾವೇಶಕ್ಕೆ ಅಬೋಟ್ಟಾಬಾದ್ ಮತ್ತು ರಾವಲ್ಪಿಂಡಿಯಿಂದ ಜನರನ್ನು ಕರೆತಂದಿರುವುದಾಗಿ ಆರೋಪಿಸಿದರು. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಇಮ್ರಾನ್ ಆಯೋಜಿಸಿದ್ದ ಸಮಾವೇಶ ಜನರಿಲ್ಲದೆ ಖಾಲಿ, ಖಾಲಿಯಾಗಿತ್ತು. ಇದನ್ನು ಗಮನಿಸಿದ ಅಧಿಕಾರಿಗಳು ಅಬೋಟ್ಟಾಬಾದ್ ಮತ್ತು ರಾವಲ್ಪಿಂಡಿಯಿಂದ ಲಾರಿಗಳಲ್ಲಿ ಜನರನ್ನು ಕರೆತಂದಿದ್ದರು ಎಂದು ಮಿರ್ಜಾ ಮಾಹಿತಿ ನೀಡಿದರು. (ವಿವರಗಳಿಗೆ ಇಲ್ಲಿಕ್ಲಿಕ್ಕಿಸಿ)


No comments:

Post a Comment