2019: ನವದೆಹಲಿ: ಹಣ
ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ಕರ್ನಾಟಕದ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಡಿ,ಕೆ. ಶಿವಕುಮಾರ್
ಅವರಿಗೆ ಅಕ್ಟೋಬರ್ ೧ರವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಿ ದೆಹಲಿ ನ್ಯಾಯಾಲಯವು ಈದಿನ ಆದೇಶ
ನೀಡಿತು. ಇದರೊಂದಿಗೆ ಶಿವಕುಮಾರ್ ಅವರಿಗೆ ಮತ್ತೆ ಹಿನ್ನಡೆಯಾಯಿತು. ಶಿವಕುಮಾರ್ ಅವರ ಜಾಮೀನು ಅರ್ಜಿಯ ವಿಚಾರಣೆಗೆ
ಸೆಪ್ಟೆಂಬರ್ 18ರ ಬುಧವಾರ ಮಧ್ಯಾಹ್ನ 3.30ರ ವೇಳೆಯನ್ನು ನ್ಯಾಯಾಲಯ ನಿಗದಿ ಪಡಿಸಿತು. ಶಿವಕುಮಾರ್
ಅವರಿಗೆ ಅಕ್ಟೋಬರ್ ೧ರವರೆಗೆ ನ್ಯಾಯಾಂಗ ಬಂಧನವನ್ನು ವಿಧಿಸಿದ ವಿಶೇಷ ನ್ಯಾಯಾಧೀಶ ಅಜಯ್ ಕುಮಾರ್ ಕುಹರ್ ಅವರು ಶಿವಕುಮಾರ್ ಅವರನ್ನು ಮೊದಲು ಆಸ್ಪತ್ರೆಗೆ ಒಯ್ದು ಅವರನ್ನು ಅಲ್ಲಿ ದಾಖಲು ಮಾಡಬೇಕಾಗುತ್ತದೆಯೇ ಎಂಬ ಬಗ್ಗೆ ವೈದ್ಯರ ಸಲಹೆ ಪಡೆಯುವಂತೆ ಜಾರಿ ನಿರ್ದೇಶನಾಲಯಕ್ಕೆ ನಿರ್ದೇಶನ ನೀಡಿದರು. ಶಿವಕುಮಾರ್ ಅವರ ತನಿಖೆ ಇನ್ನೂ ಪೂರ್ಣಗೊಂಡಿಲ್ಲ, ಆದ್ದರಿಂದ ನ್ಯಾಯಾಂಗ ಬಂಧನದಲ್ಲಿ ಇದ್ದಾಗಲೇ ಅವರನ್ನು ಪ್ರಶ್ನಿಸಲು ತನಗೆ ಅನುಮತಿ ನೀಡಬೇಕು ಎಂದು ತನಿಖಾ ಸಂಸ್ಥೆಯು ನ್ಯಾಯಾಧೀಶರನ್ನು ಕೋರಿತು. ಜಾರಿ ನಿರ್ದೇಶನಾಲಯ (ಇಡಿ)
ಪರವಾಗಿ ಹಾಜರಾಗಿದ್ದ ಅಡಿಷನಲ್ ಸಾಲಿಸಿಟರ್ ಜನರಲ್ (ಎಎಸ್ಜಿ) ಕೆಎಂ ನಟರಾಜ್ ಅವರು ’ಶಿವಕುಮಾರ್ ಅವರ ಆರೋಗ್ಯ ಪರಿಸ್ಥಿತಿಯು ಪರಿಣಾಮಕಾರಿಯಾಗಿ ಅವರನ್ನು ಪ್ರಶ್ನಿಸಲು ಅವಕಾಶ ನೀಡಿಲ್ಲ’ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಕಾಂಗ್ರೆಸ್ ನಾಯಕನ ಪರ ವಕೀಲರು ನ್ಯಾಯಾಂಗ
ವಶಕ್ಕೆ ಒಪ್ಪಿಸುವಂತೆ ಜಾರಿ ನಿರ್ದೇಶನಾಲಯ ಮಾಡಿದ ಮನವಿಯನ್ನು ತೀವ್ರವಾಗಿ ವಿರೋಧಿಸಿ ವೈದ್ಯಕೀಯ ನೆಲೆಯಲ್ಲಿ ಜಾಮೀನು ನೀಡುವಂತೆ ಕೋರಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2019: ನವದೆಹಲಿ: ಭಾರತ-ಮತ್ತು ಅಮೆರಿಕದ ಬಾಂಧವ್ಯ ಸುದೀರ್ಘ ಕಾಲದಿಂದ ಸಾಗಿ ಬಂದಿದ್ದು, ಸುಸ್ಥಿತಿಯಲ್ಲಿದೆ ಮತ್ತು ಮೇಲ್ಮುಖವಾಗಿ ಸಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಈದಿನ
ಇಲ್ಲಿ
ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದರು. ‘ಭಾರತ-ಅಮೆರಿಕ ಬಾಂಧವ್ಯಗಳು ಸುದೀರ್ಘವಾದವುಗಳು. ಈ ಬಾಂಧವ್ಯಗಳು ಅತ್ಯುತ್ತಮ
ಸ್ಥಿತಿಯಲ್ಲಿವೆ ಎಂಬುದಾಗಿ ನಿಮಗೆ ಭರವಸೆ ನೀಡಬಯಸುತ್ತೇನೆ. ಬಾಂಧವ್ಯ ವೃದ್ಧಿಯಾದಂತೆಯೇ ಹಲವಾರು ವಿಷಯಗಳು ಬೆಳೆಯುತ್ತವೆ. ನಾವು ಅಮೆರಿಕದ ಜೊತೆಗೆ ಮಾತನಾಡುತ್ತಿದ್ದೇವೆ, ಹರಿತವಾದ ಮಗ್ಗುಲುಗಳ ಬಗ್ಗೆ ನಾವು ಶೀಘ್ರದಲ್ಲಿಯೇ ಪರಿಶೀಲಿಸಲಿದ್ದೇವೆ ಎಂಬುದು ನನ್ನ ನಿರೀಕ್ಷೆ’
ಎಂದು ಪ್ರದಾನಿ ಮೋದಿ ಅವರ ಎರಡನೇ ಅವಧಿಯ ೧೦೦ ದಿನಗಳ ಕುರಿತು ಮಾತನಾಡುತ್ತಾ ’ ಜೈಶಂಕರ್ ವಿವರಿಸಿದರು. ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಪಡಿಸಿದ ಬಳಿಕದ ಪರಿಸ್ಥಿತಿ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಜೈಶಂಕರ್ ’ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಯಾವತ್ತಿಗೂ ಭಾರತದ ಭಾಗ ಮತ್ತು ಒಂದಲ್ಲ ಒಂದು ದಿನ ರಾಷ್ಟ್ರವು ಅದರ ಭೌತಿಕ ಸ್ವಾಧೀನವನ್ನು ಹೊಂದುತ್ತದೆ. ಇದು ಸ್ಪಷ್ಟ. ೩೭೦ನೇ ವಿಧಿ ರದ್ದು ಪ್ರಶ್ನೆ ಸಂಪೂರ್ಣವಾಗಿ ಭಾರತದ ಆಂತರಿಕ ವಿಷಯ’ ಎಂದು ಹೇಳಿದರು. (ವಿವರಗಳಿಗೆಇಲ್ಲಿ ಕ್ಲಿಕ್ಕಿಸಿ)
2019: ನವದೆಹಲಿ: ಸರ್ಕಾರೇತರ ಸಂಸ್ಥೆಗಳು ವಿದೇಶಗಳಿಂದ ದೇಣಿಗೆ ಪಡೆಯವುದಕ್ಕೆ
ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಕೇಂದ್ರ ಸರ್ಕಾರ
ಜಾರಿಗೆ ತಂದಿತು. ಕೆಲವು ಎನ್ಜಿಒಗಳು ವಿದೇಶಿ ನೆರವನ್ನು ಬಳಸಿಕೊಂಡು ಮತಾಂತರದಲ್ಲಿ ತೊಡಗಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಯಿತು. ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆ (ಎಫ್‌ಸಿಆರ್‌ಎ) ಹೊಸ ನಿಯಮಗಳಿಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವಾಲಯ ಈದಿನ ಅಧಿಸೂಚನೆ ಹೊರಡಿಸಿತು.
ದೇಶದಲ್ಲಿಎನ್ಜಿಒಗಳ ಮೂಲಕ ವಿದೇಶಿ ದೇಣಿಗೆ ಹರಿದುಬಂದು, ಮತಾಂತರಕ್ಕೆ ಭಾರಿ ಕುಮ್ಮಕ್ಕು ಸಿಗುತ್ತಿದೆ ಎಂದು ಗುಪ್ತಚರ ದಳ ಹಾಗೂ ಭದ್ರತಾ ಪಡೆ ಸರ್ಕಾರವನ್ನು
ಎಚ್ಚರಿಸಿದ್ದವು. ಸ್ಟೂಡೆಂಟ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ, ಜಮಾತ್-ಎ-ಇಸ್ಲಾಮಿ ಹಿಂದ್ ಸಂಘಟನೆಗಳು ವಿದೇಶಿ ದೇಣಿಗೆ ಬಳಸಿ ಮತಾಂತರ ಮಾಡುತ್ತಿರುವ ಆರೋಪ ವ್ಯಾಪಕವಾಗಿ ಕೇಳಿಬಂದಿತ್ತು. ಅದರಂತೆ ಹಲವು ಎನ್ಜಿಒಗಳ ಮೇಲೆ ನಿಗಾ ಇರಿಸಿದ್ದ ಸರಕಾರ ನಿಯಮಾವಳಿಗಳ ಕಡ್ಡಾಯ ಪಾಲನೆ, ಆಡಿಟ್ ವರದಿ ಮತ್ತು ವಿಸ್ತೃತ ಮಾಹಿತಿಯೊಂದಿಗೆ ಪರವಾನಗಿ ನವೀಕರಣ ಮಾಡಿಕೊಳ್ಳುವಂತೆ ಸೂಚಿಸಿತ್ತು.(ವಿವರಗಳಿಗೆಇಲ್ಲಿ ಕ್ಲಿಕ್ಕಿಸಿ)2019: ಗಾಂಧಿನಗರ (ಗುಜರಾತ್): ಪ್ರಧಾನಿ ನರೇಂದ್ರ ಮೋದಿ ಅವರು 2019 ಸೆಪ್ಟೆಂಬರ್ 18ರ
ಮಂಗಳವಾರ ೬೯ನೇ ವರ್ಷಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಗುಜರಾತಿನ ಗಾಂಧಿನಗರದಲ್ಲಿ ತಮ್ಮ ತಾಯಿ ಹೀರಾಬೆನ್ ಅವರನ್ನು ಅವರ ನಿವಾಸದಲಿ ಭೇಟಿ ಮಾಡಿ ಅವರ ಆಶೀರ್ವಾದ ಪಡೆದದ್ದಲ್ಲದೆ ಹೀರಾಬೆನ್ ಅವರ ಜೊತೆಗೇ ಮಧ್ಯಾಹ್ನ ಊಟವನ್ನು ಸವಿದರು. ಪ್ರಧಾನಿ ಮೋದಿಯವರು ತಾಯಿ ಹೀರಾಬೆನ್ ಜೊತೆಗೆ ಕುಳಿತುಕೊಂಡು ಗುಜರಾಥಿ ತಟ್ಟೆಯಲ್ಲಿ (ಗುಜರಾಥಿ ಥಾಲಿ) ಊಟ ಮಾಡುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಗೊಂಡು ವೈರಲ್ ಆದವು. ಇದಕ್ಕೆ ಮುನ್ನ ಪ್ರಧಾನಿಯವರು ಕೇವಡಿಯಾದಲ್ಲಿ ಸರ್ದಾರ್ ಸರೋವರ ಅಣೆಕಟ್ಟಿಗೆ ಭೇಟಿ ನೀಡಿದ್ದರು. ನರ್ಮದಾ ಜಿಲ್ಲೆಯ ಕೇವಡಿಯಾದಲ್ಲಿ ಸ್ಥಾಪಿಸಲಾಗಿರುವ ಏಕತಾ ಪ್ರತಿಮೆಯ ವಿಡಿಯೋವನ್ನೂ ಪ್ರಧಾನಿಯವರು ಟ್ವಿಟ್ಟರಿನಲ್ಲಿ ಪ್ರಕಟಿಸಿದರು. ಭಾರತದ ಮೊದಲ ಗೃಹಸಚಿವರಾಗಿದ್ದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಬೃಹತ್ ಪ್ರತಿಮೆಯನ್ನು ಪ್ರಧಾನಿ ಮೋದಿಯವರು ಕೇವಡಿಯಾದಲ್ಲಿ ಕಳೆದ ವರ್ಷ ಅಕ್ಟೊಬರ್ ೩೧ರಂದು ಉದ್ಘಾಟಿಸಿದ್ದರು. ವಿಶ್ವದಲ್ಲೇ ಅತ್ಯಂತ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಗೆ ಈ ’ಏಕತಾ ಪ್ರತಿಮೆ’ ಪಾತ್ರವಾಗಿದೆ. ‘ಮಹಾನ್ ಸರ್ದಾರ್ ಪಟೇಲ್ ಅವರಿಗೆ ಭಾರತದ ಗೌರವವಾಗಿ ನಿರ್ಮಾಣಗೊಂಡಿರುವ ಭವ್ಯವಾದ ’ಏಕತಾ ಪ್ರತಿಮೆಯನ್ನು ವೀಕ್ಷಿಸಿ’ ಎಂದು ಟ್ವೀಟ್ ಮಾಡಿದ ಪ್ರಧಾನಿ ಅದಕ್ಕೆ ೧.೩೦ ನಿಮಿಷದ ವಿಡಿಯೋ ಲಗತ್ತಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2019: ಕಾಬೂಲ್: ಆಫ್ಘಾನಿಸ್ಥಾನದ ಅಧ್ಯಕ್ಷ ಅಶ್ರಫ್ ಘನಿ ಅವರು ಪಾಲ್ಗೊಂಡಿದ್ದ ಚುನಾವಣಾ ಸಭೆಯೊಂದರ ಈದಿನ
ಸಂಭವಿಸಿದ
ಸ್ಫೋಟದಲ್ಲಿ 48ಮಂದಿ ಸಾವನ್ನಪ್ಪಿ ಇತರ 42 ಮಂದಿ ಗಾಯಗೊಂಡರು. ಅಶ್ರಫ್
ಘನಿ ಅವರು ಘಟನೆಯಲ್ಲಿ ಗಾಯಗೊಳ್ಳದೆ ಪಾರಾಗಿದ್ದಾರೆ ಎಂದು ನಿಕಟವರ್ತಿಯೊಬ್ಬರು ತಿಳಿಸಿದರು. ಶಂಕಿತ ಉಗ್ರಗಾಮಿ ದಾಳಿ ಸಂಭವಿಸಿದ ವೇಳೆಯಲ್ಲಿ ಕಾಬೂಲಿನ ಉತ್ತರಕ್ಕೆ ಇರುವ ಪರ್ವಾನ್ ಪ್ರಾಂತ್ಯದ ರಾಜಧಾನಿ ಚರಿಕರ್ನಲ್ಲಿ ನಡೆದಿದ್ದ ಚುನಾವಣಾ ಸಭೆಯನ್ನು
ಉದ್ದೇಶಿಸಿ ಘನಿ ಅವರು ಭಾಷಣ ಮಾಡುತ್ತಿದ್ದರು. ಮೃತರಾದವರಲ್ಲಿ ಬಹುತೇಕ ಮಂದಿ ಮಹಿಳೆಯರು ಮತ್ತು ಮಕ್ಕಳಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಏರುವ ಸಾಧ್ಯತೆಗಳಿವೆ ಎಂದು ಪ್ರಾಂತೀಯ ಆಸ್ಪತ್ರೆಯ ಮುಖ್ಯಸ್ಥ ಅಬ್ದುಲ್ ಖಾಸಿಮ್ ಸಂಗಿನ್ ಹೇಳಿದರು. ಆತ್ಮಹತ್ಯಾ ಬಾಂಬರ್ ಈ ದಾಳಿಯನ್ನು ನಡೆಸಿದ್ದಾನೆ
ಎಂದು ಸ್ಥಳೀಯ ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದರು. ‘ಅಧ್ಯಕ್ಷರಿಗೆ ಯಾವುದೇ ಗಾಯಗಳಾಗಿಲ್ಲ’ ಎಂದು
ಘನಿ ಅವರ ನಿಕಟವರ್ತಿ ತಿಳಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
ಇಂದಿನ ಇತಿಹಾಸ History Today ಸೆಪ್ಟೆಂಬರ್ 17 (2018+ ಹಿಂದಿನವುಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment