ನಾನು ಮೆಚ್ಚಿದ ವಾಟ್ಸಪ್

Saturday, September 21, 2019

ಇಂದಿನ ಇತಿಹಾಸ History Today ಸೆಪ್ಟೆಂಬರ್ 21

2019: ನವದೆಹಲಿ: ರಶ್ಯಾದ ಎಕಟೆರಿನ್ಬರ್ಗ್ನಲ್ಲಿ ನಡೆದ ೨೦೧೯ರ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ರಿಯೋ ಒಲಿಂಪಿಕ್ ಚಾಂಪಿಯನ್ ಶಖೋಬಿದಿನ್ ಝೊಯಿರೊವ್ ಅವರೊಂದಿಗೆ ನಡೆದ ಅಂತಿಮ ಸುತ್ತಿನ ಪಂದ್ಯದಲ್ಲಿ ತೀವ್ರ ಸೆಣಸಾಟದ ಬಳಿಕ ಸೋತರೂ ಭಾರತಕ್ಕೆ ಬೆಳ್ಳಿ ಪದಕವನ್ನು ತಂದುಕೊಡುವ ಮೂಲಕ ಅಮಿತ್ ಪಂಘಲ್ ಅವರು  2019 2019 ಸೆಪ್ಟೆಂಬರ್ 21ರ  ಶನಿವಾರ  ಇತಿಹಾಸ ಸೃಷ್ಟಿಸಿದರು. ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ೫೨ ಕೆಜಿ ವಿಭಾಗದಲ್ಲಿ ರಿಯೋ ಒಲಿಂಪಿಕ್ ಚಾಂಪಿಯನ್ ಝೊಯಿರೊವ್ ಅವರೊಂದಿಗೆ ಅಂತಿಮ ಸುತ್ತಿನ ಹೋರಾಟ ನಡೆಸಿ ಎರಡನೇ ಸ್ಥಾನ ಪಡೆಯುವುದರೊಂದಿಗೆ ಬೆಳ್ಳಿ ಗೆದ್ದ ಭಾರತದ ಮೊತ್ತ ಮೊದಲ ಪುರುಷ ಬಾಕ್ಸರ್ ಎಂಬ ಹೆಗ್ಗಳಿಕೆಗೆ ಪಂಘಲ್ ಪಾತ್ರರಾದರು.ಸ್ವರ್ಣ ಗೆದ್ದ ಸಾಧನೆ ಅಂತಿಮ ಸುತ್ತಿನ ಸೆಣಸಾಟದಲ್ಲಿ ಗೆದ್ದ ಝೊಯಿರವ್ ಅವರದಾಯಿತು. (ವಿವರಗಳಿಗೆಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ (ಇಸ್ರೋ) ಚಂದ್ರಯಾನ ೨ರ ವಿಕ್ರಮ್ ಲ್ಯಾಂಡರ್ ಜೊತೆಗೆ ಸಂಪರ್ಕ ಸಾಧಿಸಲು ಕೊನೆಗೂ ಸಾಧ್ಯವಾಗಿಲ್ಲ, ಆದರೆ ಚಂದ್ರಯಾನ ಗುರಿಗಳು ಶೇಕಡಾ ೯೮ರಷ್ಟು ಯಶಸ್ವಿಯಾಗಿವೆ. ನಮ್ಮ ಮುಂದಿನ ಆದ್ಯತೆ ಗಗನಯಾನ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ಅವರು 2019  ಸೆಪ್ಟೆಂಬರ್  21ರ ಶನಿವಾರ ಇಲ್ಲಿ ಪ್ರಕಟಿಸಿದರು. ಚಂದ್ರಯಾನ ೨ರ ವಿಕ್ರಮ್ ಲ್ಯಾಂಡರ್ ೧೪ ದಿನಗಳ (ಒಂದು ಚಾಂದ್ರ ದಿನ) ಜೀವಿತಾವಧಿಯ (ಆಯುಸ್ಸು) ಗಡುವು ಮುಕ್ತಾಯಗೊಂಡಿದ್ದು, ಅದರ ಒಳಗೆ ಅದರ ಜೊತೆಗೆ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ. ಸೆಪ್ಟೆಂಬರ್ ೭ರಂದು ಚಂದ್ರನ ನೆಲ ಸ್ಪರ್ಶಿಸುವ ಯತ್ನವನ್ನು ದೇಶದ ಮುಂಚೂಣಿಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಡೆಸಿತ್ತು.ವಿಕ್ರಮ್ ಲ್ಯಾಂಡರ್ ಜೊತೆಗಿನ ಸಂಪರ್ಕ ಸಾಧನೆಗೆ ಮಾಡಿದ ಎಲ್ಲ ಪ್ರಯತ್ನಗಳು ವಿಫಲವಾದರೂ, ಚಂದ್ರಯಾನ ಯೋಜನೆಯು ಒಂದು ದೊಡ್ಡ ಯಶಸ್ಸು. ಇದು ಚಂದ್ರನ ಇಡಿ ಮೇಲ್ಮೈಯ ನಕ್ಷೆಯನ್ನು ವಿವರವಾಗಿ ಮತ್ತು ನಿಖರವಾಗಿ ತಯಾರಿಸಲು ನೆರವಾಗಿದೆ ಎಂದು ಶಿವನ್ ಹೇಳಿದರು.ಭುವನೇಶ್ವರದ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಎಂಟನೇ ಘಟಿಕೋತ್ಸವದಲ್ಲಿ ಇಸ್ರೋ ಅಧ್ಯಕ್ಷರು ಮಾತನಾಡುತ್ತಿದ್ದರು.‘ಚಂದ್ರಯಾನ- ಅತ್ಯಂತ ದೊಡ್ಡ ಗಾತ್ರದ ವಿಜ್ಞಾನದ ಭಾಗ ಮತ್ತು ತಂತ್ರಜ್ಞಾನ ಪ್ರದರ್ಶನದ ಸಣ್ಣ ಭಾಗವನ್ನು ಒಳಗೊಂಡಿತ್ತು. ಚಂದ್ರನ ದಕ್ಷಿಣ ಧ್ರುವದ ಸಮೀಪ ಹಗುರ ಸ್ಪರ್ಶ ಮಾಡುವುದೂ ಇದರಲ್ಲಿ ಒಳಗೊಂಡಿತ್ತು. ಅಂತರ್ ಗ್ರಹ ವಿಜ್ಞಾನದಲ್ಲಿ ಬಹುತೇಕ ಪ್ರಯೋಗಗಳನ್ನು ಅರ್ಬಿಟರ್ ಮೂಲಕವೇ ನಡೆಸಲಾಗುತ್ತದೆ. ಮೂಲತಃ ಆರ್ಬಿಟರ್ ಆಯುಸ್ಸು ಒಂದು ವರ್ಷ ಮಾತ್ರ, ಆದರೆ ಗರಿಷ್ಠ ಕಾರ್ಯಾಚರಣೆಗಳ ಬಳಿಕ ಅದನ್ನು . ವರ್ಷಗಳಿಗೆ ಹೆಚ್ಚಿಸಲು ಸಾಧ್ಯವಾಗಿದೆ. ಈಗ ವಿಜ್ಞಾನಿಗಳು ನಿರೀಕ್ಷಿಸಿದ್ದಕ್ಕಿಂತ . ಪಟ್ಟಿನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆಯಲು ಸಾಧ್ಯ. ಇದು ನಿಜವಾಗಿಯೂ ಅತ್ಯಂತ ದೊಡ್ಡ ಯಶಸ್ಸುಎಂದು ಶಿವನ್ ವಿವರಿಸಿದರು. (ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)

2019: ಬೆಂಗಳೂರು: ನೂತನ ಮೋಟಾರು ವಾಹನ ಕಾಯ್ದೆಯಡಿ ಸಂಚಾರ ನಿಯಮ ಉಲ್ಲಂಘಿಸಿದವರಿಗೆ ಭಾರೀ ದಂಡ ವಿಧಿಸುತ್ತಿರುವ ಬಗ್ಗೆ ಈಗಾಗಲೇ ವಾಹನ ಸವಾರರು ಅಸಮಾಧಾನ ಹಿನ್ನೆಲೆಯಲ್ಲಿ ನೂತನ ಸಂಚಾರ ನಿಯಮ ಉಲ್ಲಂಘನೆಯ ದಂಡದ ಮೊತ್ತವನ್ನು ರಾಜ್ಯ ಸರ್ಕಾರ ಇಳಿಕೆ ಮಾಡಿ 2019 ಸೆಪ್ಟೆಂಬರ್ 21ರ ಶನಿವಾರ ಆದೇಶ ಹೊರಡಿಸಿತು. ಸೆಪ್ಟೆಂಬರ್ 3ರಿಂದ ಕೇಂದ್ರದ ನೂತನ ಮೋಟಾರು ವಾಹನ ಕಾಯ್ದೆ ದೇಶಾದ್ಯಂತ ಜಾರಿಗೊಂಡಿತ್ತು. ಸಂಚಾರ ನಿಯಮ ಉಲ್ಲಂಘಿಸಿದ್ದ ವಾಹನ ಸವಾರರಿಗೆ ಭಾರೀ ಮೊತ್ತದ ದಂಡ ಬಿಸಿ ಮುಟ್ಟಿಸಿತ್ತು.ಭಾರೀ ದಂಡದ ಮೊತ್ತ ಬಿಸಿ ತಾಗುತ್ತಿದ್ದಂತೆಯೇ ದೇಶದ ಹಲವೆಡೆ ವಾಹನ ಸವಾರರು ಅಸಮಾಧಾನ ಹೊರಹಾಕತೊಡಗಿದ್ದರು. ಇದರಿಂದಾಗಿ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ಕೆಲವು ನಿರ್ಧಾರಗಳಿಗೆ ರಾಜ್ಯ ಸರ್ಕಾರಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.(ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

2019: ಚಿಕ್ಕಬಳ್ಳಾಪುರ: ಕ್ಷೇತ್ರದ ಅನರ್ಹ ಶಾಸಕ ಡಾ.ಕೆ.ಸುಧಾಕರ್, ಮೈತ್ರಿ ಸರ್ಕಾರದಲ್ಲಿ ನೇಮಕವಾಗಿದ್ದ ಮಹತ್ವದ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ರಾಜೀನಾಮೆ ಸಲ್ಲಿಸಿದರು.  ಬೆಂಗಳೂರಿನಲ್ಲಿ 2019 ಸೆಪ್ಟೆಂಬರ್ 21ರ ಶನಿವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಭೇಟಿ ಮಾಡಿದ ಸುಧಾಕರ್ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದರು. ಕಾಂಗ್ರೆಸ್ ಶಾಸಕರಾಗಿದ್ದ ಡಾ.ಕೆ.ಸುಧಾಕರ್ ಮೈತ್ರಿ ಸರ್ಕಾರದಲ್ಲಿ ಸಚಿವರಾಗಲು ಸಾಕಷ್ಟು ಹೋರಾಟ ನಡೆಸಿದ್ದರು. ಕೊನೆಗೆ ಕಾಂಗ್ರೆಸ್ ಹೈಕಮಾಂಡ್ ಶಿಪಾರಸ್ಸಿನಂತೆ ಸಿಎಂ ಆಗಿದ್ದ ಕುಮಾರಸ್ವಾಮಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿ ನೇಮಕ ಮಾಡಿದ್ದರು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮಾಲಿನ್ಯ ನಿಯಂತ್ರಣ ಮಂಡಳಿಗೂ ರಾಜೀನಾಮೆ ನೀಡುವಂತೆ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಆಗ್ರಹಿಸಿದ್ದರು. ಇದೀಗ ಉಪ ಚುನಾವಣೆ ಘೋಷಣೆ ಬೆನ್ನಲೇ ಸುಧಾಕರ್ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಕುತೂಹಲ ಕೆರಳಿಸಿತು.

2019: ನವದೆಹಲಿ: ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆಗಳಿಗೆ ಅಕ್ಟೋಬರ್ ೨೧ರಂದು ಏಕಹಂತದ ಚುನಾವಣೆಯನ್ನು ಚುನಾವಣಾ ಆಯೋಗವು 2019 ಸೆಪ್ಟೆಂಬರ್  21ರ  ಶನಿವಾರ ಪ್ರಕಟಿಸಿತು. ಅದೇ ದಿನ ೧೮ ರಾಜ್ಯಗಳ ೬೪ ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆಯನ್ನೂ ನಡೆಸಲಾಗುವುದು ಎಂದು ಚುನಾವಣಾ ಆಯೋಗ ಪ್ರಕಟಿಸಿತು. ಇದರೊಂದಿಗೆ ಇನ್ನೊಂದು ಹಂತದ ರಾಜಕೀಯ ಸಮರಕ್ಕೆ ದೇಶ ಅಣಿಯಾಯಿತು.ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆಗಳಿಗೆ ಚುನಾವಣೆ ಮತ್ತು ೧೮ ರಾಜ್ಯಗಳ ೬೪ ಸ್ಥಾನಗಳಿಗೆ ಹಾಗೂ ಬಿಹಾರದ ಸಮಷ್ಟಿಪುರಪುರ ಲೋಕಸಭಾ ಸ್ಥಾನಕ್ಕೆ ಉಪಚುನಾವಣೆ ಅಕ್ಟೋಬರ್ ೨೧ರಂದು ಏಕಕಾಲಕ್ಕೆ ನಡೆಯಲಿದ್ದು, ಅಕ್ಟೋಬರ್ ೨೪ರಂದು ಮತಗಳ ಎಣಿಕೆ ನಡೆಯುವುದು ಎಂದು ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.ಅರುಣಾಚಲ ಪ್ರದೇಶ, ಅಸ್ಸಾಮ್, ಬಿಹಾರ, ಛತ್ತೀಸ್ಗಢ, ಗುಜರಾತ್, ಹಿಮಾಚಲ ಪ್ರದೇಶ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮೇಘಾಲಯ, ಒಡಿಶಾ, ಪುದುಚೆರಿ, ಪಂಜಾಬ್, ರಾಜಸ್ಥಾನ, ಸಿಕ್ಕಿಮ್, ತಮಿಳುನಾಡು, ತೆಲಂಗಾಣ ಮತ್ತು ಉತ್ತರ ಪ್ರದೇಶ ರಾಜ್ಯಗಳಲ್ಲಿ ಖಾಲಿ ಬಿದ್ದಿರುವ ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ.ಉಪಚುನಾವಣೆ ನಡೆಯಲಿರುವ ೧೮ ರಾಜ್ಯಗಳ ೬೪ ವಿಧಾನಸಭಾ ಕ್ಷೇತ್ರಗಳಲ್ಲಿ ಕರ್ನಾಟಕದ ೧೫ ಮತ್ತು ಉತ್ತರಪ್ರದೇಶದ ೧೧ ವಿಧಾನಸಭಾ ಕ್ಷೇತ್ರಗಳೂ ಸೇರಿವೆ.ಕರ್ನಾಟಕದಲ್ಲಿ ಇತ್ತೀಚೆಗೆ ಅನರ್ಹಗೊಂಡಿರುವ ಶಾಸಕರ ಸ್ಥಾನಗಳು ಸೇರಿದಂತೆ ಖಾಲಿ ಬಿದ್ದಿರುವ ಸ್ಥಾನಗಳಿಗೆ ಉಪಚುನಾವಣೆಗಳು ನಡೆಯಲಿವೆ ಎಂದು ಸುನಿಲ್ ಅರೋರಾ ಹೇಳಿದರು.(ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)

2019: ನವದೆಹಲಿ: ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಕಾಂಗ್ರೆಸ್ ಶಾಸಕ ಡಿ.ಕೆ. ಶಿವಕುಮಾರ್ ಅವರ ಜಾಮೀನು ಅರ್ಜಿ ಕುರಿತ ತೀರ್ಪನ್ನು 2019  ಸೆಪ್ಟೆಂಬರ್ 25ರ ಬುಧವಾರ ಪ್ರಕಟಿಸುವುದಾಗಿ ನ್ಯಾಯಾಲಯ 2019 ಸೆಪ್ಟೆಂಬರ್ 21ರ ಶನಿವಾರ ತಿಳಿಸಿತು.ದೆಹಲಿಯ ರೌಸ್ ಅವೆನ್ಯೂ ಸಮುಚ್ಚಯದಲಿನ ವಿಶೇಷ ನ್ಯಾಯಾಲಯದಲ್ಲಿ ಡಿ.ಕೆ.ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ಜಾರಿ ನಿರ್ದೇಶನಾಲಯದ (ಇಡಿ) ಪರವಾಗಿ ಅಡಿಷನಲ್ ಸಾಲಿಸಿಟರ್ ಜನರಲ್ ನಟರಾಜ್ ಹಾಗೂ ಡಿ.ಕೆ.ಶಿವಕುಮಾರ್ ಪರವಾಗಿ ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಮತ್ತು ಮುಕುಲ್ ರೋಹಟ್ಗಿ ವಾದ ಮಂಡಿಸಿದರು.ಎರಡು ಕಡೆಯ ವಾದ ಪ್ರತಿವಾದ ಆಲಿಸಿದ ನ್ಯಾಯಾಪೀಠವು ಜಾಮೀನು ಅರ್ಜಿ ಕುರಿತ ಆದೇಶವನ್ನು ಬುಧವಾರ ಪ್ರಕಟಿಸುವುದಾಗಿ ಹೇಳಿತು.ಜಾಮೀನಿನ ಆದೇಶ ಪ್ರಕಟವಾಗುವವರೆಗೂ ಡಿ.ಕೆ.ಶಿವಕುಮಾರ್ ತಿಹಾರ್ ಜೈಲಿನಲ್ಲೇ ಮುಂದುವರೆಯಬೇಕಾಗುತ್ತದೆ.


No comments:

Post a Comment