Saturday, September 7, 2019

ಇಂದಿನ ಇತಿಹಾಸ History Today ಸೆಪ್ಟೆಂಬರ್ 07

2019: ಬೆಂಗಳೂರು:  ಭಾರತದ ಚಂದ್ರಯಾನ-೨ ಯೋಜನೆ  ಯಶಸ್ಸಿನ ಕೊನೆಯ ಪಾದದ ಅಂತಿಮ ಕ್ಷಣಗಳಲ್ಲಿ  ವಿಕ್ರಮ್  ಲ್ಯಾಂಡರ್  ಬೆಂಗಳೂರಿನ  ಇಸ್ರೋ  ನಿಯಂತ್ರಣ ಕೇಂದ್ರದೊಂದಿಗಿನ  ಸಂಪರ್ಕವನ್ನು ಕಳೆದುಕೊಂಡ ಕೆಲವೇ  ಗಂಟೆಗಳ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ’ಹೊಸ ಅರುಣೋದಯವಾಗಲಿದೆ  ಎಂದು ಹೇಳುವ ಮೂಲಕ ಭಾರತೀಯ ಬಾಹ್ಯಾಕಾಶ ವಿಜ್ಞಾನಿಗಳನ್ನು ಈದಿನ ಹುರಿದುಂಬಿಸಿದರು. "ನಾಳೆ ಶೀಘ್ರದಲ್ಲೇ  ಹೊಸ ಅರುಣೋದಯವಾಗಲಿದೆ ಮತ್ತು ಅದು ಇನ್ನಷ್ಟು ಪ್ರಕಾಶಮಾನವಾಗಿರುತ್ತದೆ" ಎಂದು ಅವರು ಇಸ್ರೋ ನಿಯಂತ್ರಣ ಕೇಂದ್ರದಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಹೇಳಿದರು.  2019 ಸೆಪ್ಟೆಂಬರ್ 07ರ ಶನಿವಾರ ನಸುಕಿನ ೧.೫೫ರ ಸುಮಾರಿಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ’ವಿಕ್ರಮ್ ಲ್ಯಾಂಡರ್ ಇಳಿಸುವ ಮೂಲಕ ಬಾಹ್ಯಾಕಾಶ ರಂಗದಲಿ ಮೈಲಿಗಲ್ಲು ಸ್ಥಾಪನೆಗೆ ಮುಂದಾಗಿದ್ದ ಇಸ್ರೋಗೆ ವಿಕ್ರಮ್ ಲ್ಯಾಂಡರ್ ಸಂವಹನ ಕಡಿತದಿಂದಾಗಿ ಅಲ್ಪ ಹಿನ್ನಡೆಯಾಗಿತ್ತು. ೪೮ ದಿನಗಳ ಸುದೀರ್ಘ ಪಯಣದ  ಬಳಿಕ  ಈದಿನ  ನಸುಕಿನಲ್ಲಿ  ೨೭ ಕಿಲೋ ಗ್ರಾಂ ತೂಕದ ಪ್ರಗ್ಯಾನ್ ರೋವರ್‌ನ್ನು ತನ್ನ ಒಡಲಲ್ಲಿ ಇರಿಸಿಕೊಂಡಿದ್ದ ೧೪೭೧ ಕಿಲೋ ಗ್ರಾಂ ತೂಕದ ‘ವಿಕ್ರಮ್  ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವ ಪ್ರದೇಶದ ಉದ್ದೇಶಿತ ಪ್ರದೇಶದಲ್ಲಿ ಇಳಿಯುವ ಹಂತದಲ್ಲಿ ಕೊನೇ ಕ್ಷಣದಲ್ಲಿ ನಿಯಂತ್ರಣ ಕೇಂದ್ರದ ಜೊತೆಗಿನ ತನ್ನ ಸಂಪರ್ಕವನ್ನು ಕಡಿದುಕೊಂಡಿತ್ತು.  ಇದು ಇಸ್ರೋ ವಿಜ್ಞಾನಿಗಳಲ್ಲಿ ಆತಂಕ ಮತ್ತು ನಿರಾಸೆ ಮೂಡಿಸಿತ್ತು. ಈ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ಇಂದು ಸುದ್ದಿಗೋಷ್ಠಿ ನಡೆಸಿ  ವಿಜ್ಞಾನಿಗಳಿಗೆ ಆತ್ಮಸ್ಥೈರ್ಯ ತುಂಬಿದರು.  ‘ಪ್ರಜ್ಞಾನ್ ರೋವರ್ ಸಹಿತವಾದ ’ವಿಕ್ರಮ್ ಲ್ಯಾಂಡರ್ ಚಂದ್ರನಲ್ಲಿ ಇಳಿಯುವ ವೇಳೆಯಲ್ಲಿ ಬೆಂಗಳೂರಿನ ಇಸ್ರೋ  ನಿಯಂತ್ರಣ ಕೇಂದ್ರದಲ್ಲಿದ್ದ ಪ್ರಧಾನಿ, ‘ವಿಕ್ರಮ್ ಸಂಪರ್ಕ ಕಳೆದುಕೊಂಡ ಸ್ವಲ್ಪ ಸಮಯದ ನಂತರ ಅಲ್ಲಿಂದ ತಮ್ಮ ವಾಸ್ತವ್ಯ ಕೊಠಡಿಗೆ ತೆರಳಿದರು. ಅದಕ್ಕೆ ಮುನ್ನ "ಚಂದ್ರನನ್ನು ಸ್ಪರ್ಶಿಸುವ ನಮ್ಮ ಸಂಕಲ್ಪವು ಇನ್ನಷ್ಟು ಪ್ರಬಲವಾಗಿದೆ, ನಾವು ಬಹಳ ಹತ್ತಿರ ಬಂದಿದ್ದೇವೆ. ಆದರೆ ನಾವು ಹೆಚ್ಚಿನ ನೆಲೆಗಳನ್ನು ಅಳವಡಿಸಿಕೊಳ್ಳಬೇಕಾಗಿದೆ" ಎಂದು  ವಿಜ್ಞಾನಿಗಳೊಂದಿಗೆ ಮಾತನಾಡುತ್ತಾ ಹೇಳಿದರು. ಈ ಹಿನ್ನಡೆಯು ಭಾರತದ ಬಾಹ್ಯಾಕಾಶಯಾತ್ರೆಯ ವೇಗಕ್ಕೆ ಧಕ್ಕೆಯಾಗದಿರಲಿ ಎಂದು ಮೋದಿ ಹೇಳಿದರು. ಅಡೆತಡೆಗಳು ಎದುರಾಗಿವೆ. ಆದರೆ ಅವುಗಳನ್ನು ಬಗೆಹರಿಸುವ ಕಾರ್ಯ  ದುರ್ಬಲಗೊಳ್ಳುವುದಿಲ್ಲ  ಎಂದು ಅವರು ಹೇಳಿದರು. "ಬಾಹ್ಯಾಕಾಶ ಕಾರ್ಯಕ್ರಮದ ವಿಚಾರಲ್ಲಿ ಇನ್ನಷ್ಟು ಉತ್ತಮ ಸಾಧನೆಗಳು ಸಾಧ್ಯವಾಗಲಿವೆ  ಎಂಬ ವಿಶ್ವಾಸ ನಮಗಿದೆ." ಎಂದು ಪ್ರಧಾನಿ ನುಡಿದರು. ರಾಷ್ಟ್ರವನ್ನು ಉದ್ದೇಶಿಸಿ ಇಸ್ರೋ ಕೇಂದ್ರದಿಂದಲೇ ಮಾಡಿದ ಭಾಷಣದಲ್ಲಿ ಪ್ರಧಾನಿ ಭಾರತದ ವಿಜ್ಞಾನಿಗಳನ್ನು ಶ್ಲಾಘಿಸಿದರು ಮತ್ತು ಅವರಿಗೆ ಇಡೀ ದೇಶದ ಬೆಂಬಲ  ಅವರಿಗೆ ಇದೆ ಎಂದು ಭರವಸೆ ನೀಡಿದರು. "ನಮ್ಮ ವಿಜ್ಞಾನಿಗಳಿಗೆ ಭಾರತವು ನಿಮ್ಮೊಂದಿಗೆ ಇದೆ ಎಂದು ಹೇಳಲು ನಾನು ಬಯಸುತ್ತೇನೆ. ನೀವು ರಾಷ್ಟ್ರೀಯ ಪ್ರಗತಿಗೆ ನಂಬಲಾಗದ ಕೊಡುಗೆ ನೀಡಿದ ಅಸಾಧಾರಣ ವೃತ್ತಿಪರರು, ”ಎಂದು ಅವರು ಹೇಳಿದರು. ವಿಕ್ರಮ್ ಲ್ಯಾಂಡರ್ ಇನ್ನೇನು ಚಂದ್ರ ನೆಲ ಸ್ಪರ್ಶಿಸಬೇಕು ಎಂಬ ಹಂತಕ್ಕೆ ತಲುಪಿದ್ದಾಗ, ನಿಯಂತ್ರಣ ಕೇಂದ್ರದ ಜೊತೆ  ಸಂಪರ್ಕ ಕಡಿದು ಹೋದ  ಪರಿಣಾಮವಾಗಿ  ಶನಿವಾರ ನಸುಕಿನಲ್ಲಿ ಚಂದ್ರಯಾನ-೨  ಯೋಜನೆ  ನಿರೀಕ್ಷೆಯಂತೆ ಪೂರ್ಣಗೊಳ್ಳದೆ ವಿಜ್ಞಾನಿಗಳಿಗೆ ತೀವ್ರ  ನಿರಾಶೆಯಾಯಿತು. ಅಲ್ಲ್ಲಿಯವರೆಗೆ ಚಂದ್ರಯಾನ-೨ ಯೋಜಿಸಿದಂತೆ ಪ್ರಗತಿ ಸಾಧಿಸಿತ್ತು ಮತ್ತು ೨.೧ ಕಿ.ಮೀ.ವರೆಗೂ ಯೋಜಿತ ಕಾರ್ಯ ಸೂಚಿಯಂತೆಂಯೇ ಅದು ಸಾಗಿತ್ತು. ಈ ಹಿನ್ನಡೆಯ ಹೊರತಾಗಿಯೂ, ಮೋದಿ ಭಾರತದ ಬಾಹ್ಯಾಕಾಶ ವಿಜ್ಞಾನಿಗಳನ್ನು ಉತ್ತೇಜಿಸಿದರು, “ಎಂತಹ  ಪ್ರತಿಕೂಲ ಪರಿಸ್ಥಿತಿಯಲ್ಲೂ  ಇಸ್ರೋ  ಎಂದಿಗೂ ಯೋಜನೆಯನ್ನು ಕೈಬಿಡುವುದಿಲ್ಲ ಎಂಬುದಕ್ಕೆ ಜೀವಂತ ಉದಾಹರಣೆ ಇದು. ನಾನು ನಿಮ್ಮೊಂದಿಗಿದ್ದೇನೆ. ದೇಶವೂ ನಿಮ್ಮೊಂದಿಗಿದೆ. ಪ್ರತಿಯೊಂದು ಅಡಚಣೆಯು ನಮಗೆ ಹೊಸ ಪಾಠವನ್ನು  ಕಲಿಸುತ್ತದೆ. ” ಎಂದು ಪ್ರಧಾನಿ ಹೇಳಿದರು. ಕೊನೆಯ ಹಂತದಲ್ಲಿ ಚಂದ್ರಯಾನ -೨  ಯೋಜನೆಯ ಪ್ರಕಾರ ಹೋಗದಿರಬಹುದು,  ‘ಆದರೆ ಪ್ರಯಾಣವು ಅಸಾಧಾರಣವಾದುದು ಎಂದು ಮೋದಿ ಹೇಳಿದರು. "ಭಾರತವು ಒಂದು ಪ್ರಮುಖ ಬಾಹ್ಯಾಕಾಶ ಶಕ್ತಿಯಾಗಿದ್ದು, ಇಸ್ರೋ ವಿಜ್ಞಾನಿಗಳಿಲ್ಲದೆ ಅದು ಸಾಧ್ಯವಾಗುತ್ತಿರಲಿಲ್ಲ" ಎಂದು ಪ್ರಧಾನಿ  ನುಡಿದರು. ನೀವೆಲ್ಲ ರಾತ್ರಿಯಿಡೀ ನಿದ್ದೆಗೆಟ್ಟು ಕೆಲಸ ಮಾಡಿದ್ದೀರಿ. ನೀವು ನಮ್ಮ ಮಾತೃಭೂಮಿಗೆ ಅದ್ಭುತವಾದ ಕೊಡುಗೆ ನೀಡಿದ್ದೀರಿ. ಇಡೀ ದೇಶ ನಿಮ್ಮ ಸಾಧನೆಯನ್ನು ನೋಡಿದೆ. ನಿಮ್ಮ ಸಾಧನೆಯಲ್ಲಿ ಕೊಂಚ ಹಿನ್ನಡೆಯಾಗಿರಬಹುದು. ಆದರೆ, ನಿಮ್ಮ ಕಠಿಣ ಪರಿಶ್ರಮಕ್ಕೆ ನಾವು ಹೆಮ್ಮೆ ಪಡುತ್ತೇವೆ. ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ಸಾಧನೆಗಳಾಗುವ ಬಗ್ಗೆ ನನಗೆ ನಂಬಿಕೆಯಿದೆ. ಇಡೀ ಭಾರತವೇ ನಿಮ್ಮೊಂದಿಗಿದೆ ಎಂದು ಪ್ರಧಾನಿ ಹೇಳಿದರು.

2019: ಬೆಂಗಳೂರು:  ಯಶಸ್ವಿಯಾಗುವ ನಿರೀಕ್ಷೆಯಲ್ಲಿದ್ದ ಚಂದ್ರಯಾನ ೨ ಕೊನೆ ಕ್ಷಣಗಳಲ್ಲಿ ಸಂವಹನ ಕಳೆದುಕೊಂಡು ಗುರಿ ಸಾಧನೆಯಲ್ಲಿ ವಿಫಲವಾದುದಕ್ಕಾಗಿ ಭಾವುಕರಾಗಿ ಕಣ್ಣೀರಿಳಿಸಿದ ಇಸ್ರೋ ಅಧ್ಯಕ್ಷ ಕೆ. ಶಿವನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಬ್ಬಿಕೊಂಡು ಸಾಂತ್ವನಗೈದ ಘಟನೆ ಈದಿನ ಬೆಂಗಳೂರಿನಲ್ಲಿ ಘಟಿಸಿತು.  ಚಂದ್ರಯಾನ ೨ ವಿಕ್ರಮ್ ಲ್ಯಾಂಡಿಂಗ್ ವೀಕ್ಷಿಸಲು ಬೆಂಗಳೂರಿಗೆ ಬಂದಿದ್ದ ಪ್ರಧಾನಿ ಬೆಳಗ್ಗೆ ಬೆಂಗಳೂರು ಇಸ್ರೋ ಕೇಂದ್ರದಿಂದ ಯಲಹಂಕ ವಾಯುನೆಲೆ ಕೇಂದ್ರಕ್ಕೆ ತೆರಳಿದರು. ಯಲಹಂಕ ವಾಯುನೆಲೆಯಿಂದ ದೆಹಲಿಗೆ ಹೊರಡಲು ಸಜ್ಜಾಗಿದ್ದ ಪ್ರಧಾನಿ ಇಸ್ರೋ ಅಧ್ಯಕ್ಷ ಕೆ. ಶಿವನ್ ಭಾವುಕರಾಗಿ ನಿಂತಿದ್ದುದನ್ನು ಗಮನಿಸಿ ಹಿಂದಕ್ಕೆ ಬಂದರು.  ತಮ್ಮ ಕನಸು ಈಡೇರದ ಕಾರಣ ಹತಾಶೆಯಿಂದ ನಿಂತಿದ್ದ ಶಿವನ್ ಅವರನ್ನು ನೋಡಿ ತಾವೂ ಕೂಡಾ ಭಾವುಕರಾದ  ಪ್ರಧಾನಿ ಮೋದಿ ಶಿವನ್ ಅವರನ್ನು ತಬ್ಬಿ ಹಿಡಿದು ಸಂತೈಸಿದರು. ಪ್ರಧಾನಿ ಮೋದಿಯವರು ಕೆ.ಶಿವನ್ ಅವರನ್ನು ತಬ್ಬಿ ಸಾಂತ್ವನ ಮಾಡುತ್ತಿರುವ ವಿಡಿಯೋ ಟ್ವಿಟ್ಟರಿನಲ್ಲಿ ವ್ಯಾಪಕವಾಗಿ ಹರಿದಾಡಿತು. ಇಸ್ರೋ ಸಾಧನೆಗೆ ಟ್ವೀಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿ, ಈಗ ಉಂಟಾದ ಹಿನ್ನಡೆಯಿಂದ ವಿಜ್ಞಾನಿಗಳ ಮೇಲಿನ ಗೌರವ ಕಡಿಮೆಯಾಗುವುದಿಲ್ಲ ಎಂದು ಟ್ವೀಟ್ ಮಾಡಿದರು.  ಸಂಪೂರ್ಣ ವಿಫಲವಲ್ಲ: ಕೊನೆಯ ಕ್ಷಣದ ಹಿನ್ನಡೆಯಾಗಿದ್ದರೂ ಚಂದ್ರಯಾನ -೨ ಸಂಪೂರ್ಣ ವಿಫಲವೇನೂ ಆಗಿಲ್ಲ. ಚಂದ್ರಕಕ್ಷೆಯಲ್ಲಿರುವ ಅರ್ಬಿಟರ್ ತನ್ನ ಪ್ರದಕ್ಷಿಣೆಯನ್ನು ಮುಂದುವರೆಸಿ ಚಂದ್ರನ ವಿವಿಧ ಮಗ್ಗುಲುಗಳ ಫೋಟೊ ತೆಗೆದು ಕಳುಹಿಸಲಿದೆ ಎಂದು ವಿಜ್ಞಾನಿಗಳು ಇದೇ ವೇಳೆಗೆ ಹೇಳಿದರು. 

2019: ಬೆಂಗಳೂರು:  ಶತಕೋಟಿ ಭಾರತೀಯರು ಚಾತಕ ಪಕ್ಷಿಯಂತೆ ಎದುರು ನೋಡುತ್ತಿದ್ದ ಬಹುನಿರೀಕ್ಷಿತ ಚಂದ್ರಯಾನ-೨ ನೌಕೆಯ ವಿಕ್ರಮ್ ಲ್ಯಾಂಡರ್ ಕೊನೆಯ ನಿರ್ಣಾಯಕ ಕ್ಷಣದಲ್ಲಿ ಸಂವಹನ ಕಡಿತ ಉಂಟಾಗಿ ತೀವ್ರ ನಿರಾಶೆ ಉಂಟಾಯಿತು. ಜಗತ್ತಿನ ಯಾರೂ ಪ್ರವೇಶಿಸದ ಚಂದ್ರನ ದಕ್ಷಿಣ ಧ್ರುವದ ಮೇಲ್ಮೈ ತಲುಪುವ ಕ್ಷಣಕ್ಕಾಗಿ ಕಾಯುತ್ತಿದ್ದ  ಪೀಣ್ಯದ ಇಸ್ರೋ ಕೇಂದ್ರದಲ್ಲಿ ಮನೆ ಮಾಡಿದ್ದ ಸಂಭ್ರಮ ಕ್ಷಣಾರ್ಧದಲ್ಲಿ ಮರೆಯಾಯಿತು. ಆದರೂ, ಇಸ್ರೋ ವಿಜ್ಞಾನಿಗಳ ಈ ಮಹಾನ್ ಸಾಧನೆಗೆ ವಿಶ್ವದೆಲ್ಲೆಡೆ ಭಾರೀ ಪ್ರಶಂಸೆ ವ್ಯಕ್ತವಾಯಿತು.. ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ಸೇರಿದಂತೆ ಪಕ್ಷ ಬೇದ ಮರೆತು ಎಲ್ಲರೂ ಮೆಚ್ಚುಗೆ ಸೂಚಿಸಿ,ನಿಮ್ಮ ಬೆಂಬಲಕ್ಕೆ ನಾವಿದ್ದೇವೆ ಎಂಬಸಂದೇಶವನ್ನು ರವಾನಿಸಿದರು.  ಚಂದ್ರಯಾನ ೨ ಯೋಜನೆಯ ಲ್ಯಾಂಡರ್ ಚಂದ್ರನ ಮೇಲ್ಮೈಗೆ ಇಳಿಯಲು ಆರಂಭಿಸುತ್ತಿದ್ದ ಕೇಂದ್ರದಲ್ಲಿ ನೆರೆದಿದ್ದ ವಿಜ್ಞಾನಿಗಳು, ವಿದ್ಯಾರ್ಥಿಗಳು ಮತ್ತಿತರರ ಗಣ್ಯರಲ್ಲಿ ಸಂತಸ ಮನೆ ಮಾಡಿತ್ತು. ಲ್ಯಾಂಡರ್‌ನ ಪ್ರತಿ ಚಲನವಲನವನ್ನೂ ಕೂಲಂಕುಶವಾಗಿ ಗಮನಿಸುತ್ತಿದ್ದ ವಿಜ್ಞಾನಿಗಳು ಚಪ್ಪಾಳೆ  ತಟ್ಟಿ ಸಂಭ್ರಮಿಸುತ್ತಿದ್ದರು. ಜಾಗತಿಕವಾಗಿ ಭಾರತಕ್ಕೆ ಮಹತ್ವದ ಸ್ಥಾನ ಕಲ್ಪಿಸಿಕೊಡಲಿರುವ ಚಂದ್ರಯಾನ-೨ ಪ್ರಮುಖ ಹಂತವಾಗಿ ವಿಕ್ರಮ್ ಚಂದ್ರನ ದಕ್ಷಿಣ ಧ್ರುವದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಗುವ ಪ್ರಕ್ರಿಯೆಯಲ್ಲಿ ಕೊನೆಯ ಕ್ಷಣದಲ್ಲಿ ಸಂಪರ್ಕ ಕಳೆದುಕೊಂಡಿತು. ಚಂದ್ರನ ಮೇಲೆ ಸುರಕ್ಷಿತವಾಗಿ ಇಳಿದ ವಿಶ್ವದ ನಾಲ್ಕನೇ ದೇಶ ಎಂಬುದರ ಜತೆಗೆ ಚಂದ್ರನ ದಕ್ಷಿಣ ಧ್ರುವದಲ್ಲಿ  ಇಳಿದ  ಹಾಗೂ ಮೊದಲ ಪ್ರಯತ್ನದಲ್ಲೇ ಚಂದ್ರಯಾನ ಯಶಸ್ವಿಗೊಳಿಸಿದ  ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿತ್ತು. ಆದರೆ ಕೊನೆಯ ಹಂತದಲ್ಲಿ ಲ್ಯಾಂಡರ್ ಸುರಕ್ಷಿತವಾಗಿ ಇಳಿಯಲು ಸಾಧ್ಯವಾಗದಿರುವುದರಿಂದ ಇಸ್ರೋ ವಿಜ್ಞಾನಿಗಳಿಗೆ ನಿರಾಸೆ  ಉಂಟಾಯಿತು.

2019: ನವದೆಹಲಿ: ಭಾರತದ ಚಂದ್ರಯಾನ -೨ ಯೋಜನೆಯ ಕೊನೆಯ ಕ್ಷಣಗಳಲ್ಲಿ ಈದಿನ  ನಸುಕಿನಲ್ಲಿ ಆದ ಅಲ್ಪ ಹಿನ್ನಡೆಯ ಬಳಿಕ ರಾತ್ರಿ ನೀಡಲಾದ ಮೊತ್ತ ಮೊದಲ ಹೇಳಿಕೆಯಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೋ)  ’ವಿಕ್ರಮ್ ಲ್ಯಾಂಡರ್ ಕೊನೆಗಳಿಗೆಯಲ್ಲಿ ಸಂವಹನ ಕಳೆದುಕೊಂಡಿದ್ದರೂ ಯೋಜನೆಯ ಶೇಕಡಾ ೯೦-೯೫ರಷ್ಟು ಗುರಿಸಾಧಿಸಲಾಗಿದೆ ಎಂದು ಪ್ರಕಟಿಸಿತು.  ‘ಮಹತ್ವದ ತಾಂತ್ರಿಕ ದಾಪುಗಾಲು ಎಂಬುದಾಗಿ ಪರಿಗಣಿಸಲಾಗಿದ್ದ ಈ ಯೋಜನೆ ಅತ್ಯಂತ ಕ್ಲಿಷ್ಟಕರವಾದ ಯೋಜನೆಯಾಗಿತ್ತು ಎಂದು ಹೇಳಿಕೆ ತಿಳಿಸಿತು. ಅತ್ಯಂತ ನಿಖರ ಉಡಾವಣೆ ಮತ್ತು ಯೋಜನೆಯ ನಿರ್ವಹಣೆ ಯಶಸ್ಸಿನ ಪ್ರಮುಖ ಭಾಗಗಳಲ್ಲಿ ಒಂದು. ಇನ್ನೂ ಮಹತ್ವದ ವಿಚಾರವೆಂದರೆ ಚಂದ್ರಕಕ್ಷೆ ಸೇರಿರುವ ಆರ್ಬಿಟರ್ ಬಾಹ್ಯಾಕಾಶ ನೌಕೆಯು ಈ ಹಿಂದೆ ಯೋಜಿಸಿದ್ದಂತೆ ಒಂದು ವರ್ಷದ ಬದಲು ೭ ವರ್ಷಗಳ ಕಾಲ ಚಂದ್ರಗ್ರಹಕ್ಕೆ ಪ್ರದಕ್ಷಿಣೆ ಹಾಕುವಂತೆ ಮಾಡಲು ಸಾಧ್ಯವಿರುವುದು ಇನ್ನೊಂದು ಮಹತ್ವದ ಯಶಸ್ಸು ಎಂದು ಹೇಳಿಕೆ ಬಣ್ಣಿಸಿತು. ‘ಇದೊಂದು ಅಪೂರ್ವವಾದ ಯೋಜನೆ. ಇದು ಚಂದ್ರನ ಯಾವುದೇ ಒಂದು ನಿರ್ದಿಷ್ಟ ಭಾಗದ ಅಧ್ಯಯನದ ಗುರಿಯನ್ನು ಮಾತ್ರವೇ ಹೊಂದಿಲ್ಲ, ಬದಲಿಗೆ ಚಂದ್ರನ ಮೇಲ್ಮೈ ಮತ್ತು ಉಪ-ಮೇಲ್ಮೈ (ಸಬ್ ಸರ್ಫೇಸ್) ಈ ಎರಡರ ಅಧ್ಯಯನವನ್ನೂ ಒಂದೇ ಯೋಜನೆಯಲ್ಲಿ ನಡೆಸುವ ಗುರಿ ಹೊಂದಿದೆ ಎಂದು ಹೇಳಿಕೆ ತಿಳಿಸಿತು. ವಿಕ್ರಮ್ ಲ್ಯಾಂಡರ್ ಗುರಿಯಂತೆಯೇ ತನ್ನ ಕಕ್ಷೆಯಿಂದ ೩೫ ಕಿಮೀಯಷ್ಟು ಪಯಣಿಸಿ, ಚಂದ್ರ ಮೇಲ್ಮೈಗಿಂತ ೨ ಕಿಮೀಗಿಂತಲೂ ಕಡಿಮೆ ಎತ್ತರದವರೆಗೆ ತಲುಪಿತ್ತು ಎಂದು ಹೇಳಿಕೆ ತಿಳಿಸಿತು. ಈ ಹಂತದ ಬಳಿಕ ವಿಕ್ರಮ್ ಲ್ಯಾಂಡರ್ ಗೆ ಏನಾಗಿರಬಹುದು ಎಂಬ ಬಗ್ಗೆ ಹೇಳಿಕೆ ಯಾವುದೇ ಉಲ್ಲೇಖವನ್ನೂ ಮಾಡಲಿಲ್ಲ.  ಇದೇ ವೇಳೆಗೆ ಪತ್ರಿಕೆಯೊಂದರ ಬಳಿ ಮಾತನಾಡಿದ ಇಸ್ರೋ ಮುಖ್ಯಸ್ಥ ಕೆ. ಶಿವನ್ ಅವರು ಮುಂದಿನ 14 ದಿನಗಳ ಕಾಲ ‘ವಿಕ್ರಮ್’ ಜೊತೆ ಸಂಪರ್ಕಕ್ಕೆ ಯತ್ನಿಸಲಾಗುವುದು ಮತ್ತು 2022ರಕ್ಕೆ ಮಾನವ ಸಹಿತ ಚಂದ್ರಯಾನ ನಡೆಯುವುದು ಎಂದು ಹೇಳಿದರು.
2019: ಮುಂಬೈ:  ಮುಂಬೈಯಲ್ಲಿ ದೇಶೀ ನಿರ್ಮಿತ ಮೆಟ್ರೋ ರೈಲುಗಾಡಿಗಳನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ವಿಜ್ಞಾನಿಗಳಿಂದ ಧೈರ್ಯ ಸಾಹಸವನ್ನು ಕಲಿತುಕೊಳ್ಳಬೇಕು ಎಂದು ನಾಗರಿಕರಿಗೆ ಕರೆ ನೀಡಿದರು. ಚಂದ್ರಯಾನ -೨ರ ಅಡಚಣೆಯ ಹೊರತಾಗಿಯೂ ಚಂದ್ರನನ್ನು ಸ್ಪರ್ಶಿಸುವ ರಾಷ್ಟ್ರದ ಗುರಿಯನ್ನು ಸಾಧಿಸಲಾಗುವುದು ಎಂದು ಪ್ರಧಾನಿ ದೃಢ ವಿಶ್ವಾಸ ವ್ಯಕ್ತ ಪಡಿಸಿದರು.  ‘ಬೆಂಗಳೂರಿನಲ್ಲಿ ನಾನು ಇಡೀ ರಾತ್ರಿ ನನ್ನ ವೈಜ್ಞಾನಿಕ ಸಹೋದ್ಯೋಗಿಗಳ ಜೊತೆಗೆ ಇಸ್ರೋದಲ್ಲಿ ಕಳೆದೆ. ಅವರು ತೋರಿದಂತಹ ಧೈರ್‍ಯ ನನ್ನ ಮೇಲೆ ಅಚ್ಚಳಿಯದ ಪ್ರಭಾವ ಬೀರಿದೆ. ಪೂರ್ಣ ಸಾಮರ್ಥ್ಯದೊಂದಿಗೆ ದೊಡ್ಡ ಸವಾಲನ್ನು ಎದುರಿಸುವ ಗುರಿಯನ್ನು ಹೇಗೆ ಸಾಧಿಸಬಹುದು ಎಂಬುದನ್ನು ನಾವು ಬಾಹ್ಯಾಕಾಶ ಸಂಸ್ಥೆಯ ನಮ್ಮ ವಿಜ್ಞಾನಿಗಳು ಮತ್ತು ಎಂಜಿನಿಯರುಗಳಿಂದ ಕಲಿಯಬೇಕು ’ ಎಂದು ಮೋದಿ ಹೇಳಿದರು. ಇಸ್ರೋ ವಿಜ್ಞಾನಿಗಳು ತಮ್ಮ ಗುರಿ ಈಡೇರುವವರೆಗೂ ವಿರಮಿಸುವುದಿಲ್ಲ ಎಂದು ಪ್ರಧಾನಿ ಹೇಳಿದರು. ಮುಂಬೈ ಮೆಟ್ರೋ ರೈಲು ನಿಗಮಕ್ಕೆ ನೀಡಲಾದ ೫೦೦ ಮೆಟ್ರೋ ಬೋಗಿಗಳ ಪೈಕಿ ಮೊದಲನೆಯ ಮೆಟ್ರೋ ಬೋಗಿಯನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಜೊತೆಗೆ ಪ್ರಧಾನಿ ಮೋದಿ ಉದ್ಘಾಟಿಸಿದರು. ಬೆಂಗಳೂರಿನ ಭಾರತ ಅರ್ತ್ ಮೂವರ್ಸ್ (ಬಿಎಎಂಎಲ್) ಸಂಸ್ಥೆಯು ಕೇವಲ ೭೫ ದಿನಗಳಲ್ಲಿ ಈ ದೇಶೀ ಮೆಟ್ರೋ ಬೋಗಿಯನ್ನು ನಿರ್ಮಿಸಿತ್ತು. ಮುಂದಿನ ಒಂದು ದಶಕದಲ್ಲಿ ೧.೨ ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚಿನ ವೆಚ್ಚದಲ್ಲಿ ೩೩೪ ಕಿಮೀ ದೂರದ ಮಾರ್ಗದಲ್ಲಿ ೧೪ ಮೆಟ್ರೋ ಕಾರಿಡಾರ್‌ಗಳನ್ನು ನಿರ್ಮಿಸುವ ಮೂಲಕ ದೇಶದ ಆರ್ಥಿಕ ರಾಜಧಾನಿಯು ರಾಷ್ಟ್ರೀಯ ರಾಜಧಾನಿಯ ಜೊತೆಗೆ ದಶಕಗಳ ಬಳಿಕ ಆಧುನಿಕ ಸಾರ್ವಜನಿಕ ಸಾರಿಗೆ ಮೂಲಕ ಸಂಪರ್ಕ ಪಡೆಯಲು ಸಜ್ಜಾಗುತ್ತಿದೆ. ಅಭಿವೃದ್ಧಿ ಹೊಂದಿದ ಜಗತ್ತಿನ ನಗರಗಳಲ್ಲಿ ಇರುವಂತೆ, ಹೊಸ ಮೆಟ್ರೋ ಬೋಗಿಯು ಪ್ರಯಾಣಿಕರಿಗೆ ತಮ್ಮ ಬೈಸಿಕಲ್ಲುಗಳ ಜೊತೆಗೆ ಗಮ್ಯಸ್ಥಾನ ಸೇರಲು ಹೇಗೆ ನೆರವಾಗಲಿವೆ ಎಂದು ಮೆಟ್ರೋಪಾಲಿಟನ್ ಕಮಿಷನರ್ ಆರ್ ಎ ರಾಜೀವ್ ಅವರು ವಿವರಿಸಿದರು. ಪ್ರಧಾನಿ ಮೋದಿಯವರು ನಗರಕ್ಕಾಗಿ ೧೯,೦೦೦ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಇನ್ನೂ ಮೂರು ಮೆಟ್ರೋ ಮಾರ್ಗಗಳನ್ನು ಕೂಡಾ ಉದ್ಘಾಟಿಸಿದರು. ೨೧ನೇ ಶತಮಾನದ ನಗರಗಳ ಸೃಷ್ಟಿಯ ಅಗತ್ಯವನ್ನು ಅವರು ಒತ್ತಿ ಹೇಳಿದರು. ಇಂತಹ ನಗರಗಳ ಸೃಷ್ಟಿಯ ಹೊರತಾಗಿ ಭಾರತದ ೫ ಟ್ರಿಲಿಯನ್ ಆರ್ಥಿಕತೆಯು ಕನಸಾಗಿ ಉಳಿಯಬಹುದು ಎಂದು ಪ್ರಧಾನಿ ನುಡಿದರು. ಮೆಟ್ರೋಭವನಕ್ಕಾಗಿ ಶಿಲಾನ್ಯಾಸವನ್ನೂ ನೆರವೇರಿಸಿದ ಮೋದಿ, ನಮ್ಮ ನಗರಗಳ ಸಂಚಾರ, ಸಂಪರ್ಕ, ಉತ್ಪಾದಕತೆ, ಸುರಕ್ಷತೆ ಮತ್ತು ಸುಸ್ಥಿರತೆಯ ಅಗತ್ಯಗಳನ್ನು ಈಡೇರಿಸುವಂತಹ ವ್ಯವಸ್ಥೆಗಳನ್ನು ಸೃಷ್ಟಿಸುವ ಅಗತ್ಯ ಇದೆ ಎಂದು ಹೇಳಿದರು. ೪,೪೭೬ ಕೋಟಿ ರೂಪಾಯಿ ವೆಚ್ಚದ ೯.೨ ಕಿಮೀ ದೂರದ ಗೈಮುಖ್- ಶಿವಾಜಿ ಚೌಕ (ಮೀರಾ ರಸ್ತೆ) ಮೆಟ್ರೋ-೧೦, ರೂಪಾಯಿ ೮,೭೩೯ ಕೋಟಿ ವೆಚ್ಚದ ೧೨.೮ ಕಿಮೀ ದೂರದ ವಡಾಲಾ-ಸಿಎಸ್‌ಟಿ ಮೆಟ್ರೋ -೧೧ ಮತ್ತು ೫,೮೬೫ ಕೋಟಿ ರೂಪಾಯಿ ವೆಚ್ಚದ ೨೦.೭ ಕಿಮೀ ದೂರದ ಕಲ್ಯಾಣ -ತಲೋಜಾ ಮೆಟ್ರೋ-೧೨ ಕಾರಿಡಾರುಗಳು ಮೂರು ನೂತನ ಮೆಟ್ರೋ ಯೋಜನೆಗಳಾಗಿವೆ. ಈ ಮೂರು ರೈಲು ಮಾರ್ಗಗಳು ೨೦೨೬ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ವೇಳೆಗೆ ಸಂಪೂರ್ಣ ಎಂಎಂಆರ್ ಪ್ರದೇಶವು ೩೩೭ ಕಿಮೀ ದೂರದ ೧೪ ಮೆಟ್ರೋ ಮಾರ್ಗಗಳನ್ನು ಹೊಂದಿರುತ್ತವೆ. ಉತ್ತರ ಹೊರವಲಯ ಗೋರೆಗಾಂವ್‌ನ ಆರೇ ಕಾಲೋನಿಯಲ್ಲಿ ೩೨ ಮಹಡಿಯ ಮೆಟ್ರೋಭವನ ನಿರ್ಮಾಣಗೊಳ್ಳಲಿದೆ. ಇದು ಮೆಟ್ರೋ ಯೋಜನೆಯ ಸಮನ್ವಯಿತ ಕಾರ್ಯಾಚರಣೆ ಮತ್ತು  ನಿಯಂತ್ರಣ ಕೇಂದ್ರವಾಗಲಿದೆ.   ಮೆಟ್ರೋಭವನವು ದೇಶದ ಎರಡು ಅತಿದೊಡ್ಡ ಹಸಿರು ಪ್ರದೇಶವಾದ ಆರೇ ಕಾಲೋನಿಯ ದಟ್ಟ ಅರಣ್ಯ ಪ್ರದೇಶದ ೨೦,೩೮೭ ಚದರ ಮೀಟರ್ ಜಾಗದಲ್ಲಿ ಬರುತ್ತಿರುವುದು ವಿಶೇಷವಾಗಿದೆ.  ನೂರಾರು ವನ್ಯಜೀವಿಗಳ ನೆಲೆವೀಡಾಗಿರುವ ಆರೇ ಕಾಲೋನಿ ದಟ್ಟಾರಣ್ಯದ ಸಹಸ್ರಾರು ಮರಗಳನ್ನು ಕಡಿಯಲಾಗುತ್ತದೆ ಎಂಬ ಕಾರಣಕ್ಕಾಗಿ ಈ ಯೋಜನೆ ವಿರುದ್ಧ ನಗರದಲ್ಲಿ ಭಾರೀ ಪ್ರಮಾಣದಲ್ಲಿ ಸಾರ್ವಜನಿಕ ಪ್ರತಿಭಟನೆ ನಡೆದಿತ್ತು. ಮೆಟ್ರೋ ಯೋಜನೆಗಳ ಬಗ್ಗೆ ಮಾತನಾಡಿದ ಪ್ರಧಾನಿ, ’ನೂತನ ಮೆಟ್ರೋ ಮಾರ್ಗವಿರಲಿ ಅಥವಾ ಮೆಟ್ರೋ ಭವನವಿರಲಿ ಅಥವಾ  ಹೆದ್ದಾರಿಯನ್ನು ಸಂಪರ್ಕಿಸುವ ಎತ್ತರಿಸಿದ ಬಿಕೆಸಿ ಸೇತುವೆ ಇರಲಿ- ಇವೆಲ್ಲವನ್ನೂ ಪ್ರಯಾಣಿಕರಿಗೆ ಬದುಕು ಸುರಳೀತವಾಗಲಿ ಎಂಬ ದೃಷ್ಟಿಯೊಂದಿಗೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದರು. ನಗರದಲ್ಲಿ ವಿವಿಧ ಮೂಲಸವಲತ್ತು ಯೋಜನೆಗಳನ್ನು ತ್ವರಿತವಾಗಿ ಜಾರಿಗೊಳಿಸುತ್ತಿರುವುದಕ್ಕಾಗಿ ಮುಖ್ಯಮಂತ್ರಿ ಫಡ್ನವಿಸ್ ಅವರನ್ನು ಪ್ರಧಾನಿ ಅಭಿನಂದಿಸಿದರು. ’ಮುಂಬೈಯು ಇಡೀ ದೇಶಕ್ಕೆ ವೇಗ ನೀಡಿರುವಂತಹ ನಗರ ಎಂದು ಅವರು ನುಡಿದರು.

2019: ನವದೆಹಲಿ: ತನ್ನ ಆಗಸದ ಮೂಲಕ ನವದೆಹಲಿಯಿಂದ ವಿದೇಶಯಾನ ಗೈಯಲು ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ವಿಮಾನಕ್ಕೆ ತಾನು ಅನುಮತಿ ನಿರಾಕರಿಸಿವುದಾಗಿ ಪಾಕಿಸ್ತಾನವು ಪ್ರಕಟಿಸಿತು.  ಎಂತಹುದೇ ಸಂದರ್ಭದಲ್ಲೂ ರಾಷ್ಟ್ರಗಳು ಇಂತಹ ಮನವಿಗಳಿಗೆ ಸಾಮಾನ್ಯವಾಗಿ ಅನುಮತಿ ಕೊಡುತ್ತವೆ.  ‘ಭಾರತದ ವರ್ತನೆಯನ್ನು ಅನುಲಕ್ಷಿಸಿ ಈ ನಿರ್ಧಾರವನ್ನು ಕೈಗೊಳ್ಳಲಾಯಿತು ಎಂದು ಪಾಕಿಸ್ತಾನಿ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಶಿ ಪಾಕಿಸ್ತಾನದ ಸರ್ಕಾರಿ ಸ್ವಾಮ್ಯದ ಪಿಟಿವಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿತು. ಭಾರತ ಸರ್ಕಾರವು ಜಮ್ಮು -ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ ಸಂವಿಧಾನದ ೩೭೦ನೇ ವಿಧಿಯನ್ನು ರದ್ದು ಪಡಿಸಿ, ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಬಳಿಕ ಉಭಯ ರಾಷ್ಟ್ರಗಳ ನಡುವಣ ಬಾಂಧವ್ಯ ಪ್ರಕ್ಷುಬ್ಧಗೊಂಡಿತ್ತು. ಈ ಬೆಳವಣಿಗೆಯ ಬಳಿಕ ಪಾಕಿಸ್ತಾನವು ಒಂದಲ್ಲ ಒಂದು ರೀತಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಷಯವನ್ನು ಎತ್ತಲು ವಿಫಲ ಯತ್ನಗಳನ್ನು ನಡೆಸುತ್ತಲೇ ಬಂದಿತ್ತು. ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು 2019 ಸೆಪ್ಟೆಂಬರ್  09ರ ಸೋಮವಾರದಿಂದ ಐಸ್‌ಲ್ಯಾಂಡ್, ಸ್ವಿಜರ್ಲೆಂಡ್ ಮತ್ತು ಸ್ಲೊವೇನಿಯಾಕ್ಕೆ ಭೇಟಿ ನೀಡಲು ಕಾರ್ಯಕ್ರಮ ನಿಗದಿಯಾಗಿದೆ. ಭಾರತದ ಕಾಳಜಿಗಳ ಬಗ್ಗೆ, ವಿಶೇಷವಾಗಿ ಪುಲ್ವಾಮ ದಾಳಿ ಸೇರಿದಂತೆ ಈ ವರ್ಷದ ಭಯೋತ್ಪಾದಕ ಘಟನೆಗಳ ಬಗ್ಗೆ ಈ ರಾಷ್ಟ್ರಗಳಿಗೆ ವಿವರಿಸುವ ಸಲುವಾಗಿ ಉನ್ನತ ನಾಯಕತ್ವದ ಈ ಭೇಟಿ ನಿಗದಿಯಾಗಿತ್ತು. ಐಸ್‌ಲ್ಯಾಂಡ್ ಪಯಣಕ್ಕೆ ಪಾಕಿಸ್ತಾನದ ಆಗಸ ಬಳಸಲು ಭಾರತದ ರಾಷ್ಟ್ರಪತಿಯವರು ಅನುಮತಿ ಕೋರಿದ್ದರು. ಆದರೆ ನಾವು ಅವರಿಗೆ ಅನುಮತಿ ನೀಡದೇ ಇರಲು ತೀರ್ಮಾನಿಸಿದ್ದೇವೆ ಎಂದು ಖುರೇಶಿ ಹೇಳಿದರು. ಹೆಚ್ಚಿನ ವಿವರಗಳನ್ನು ಅವರು ನೀಡಲಿಲ್ಲ. ಕಾಶ್ಮೀರ ಕಣಿವೆಯ ಪ್ರಕ್ಷುಬ್ಧ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪ್ರಧಾನಿ ಇಮ್ರಾನ್ ಖಾನ್ ಅವರು ಈ ನಿರ್ಧಾರಕ್ಕೆ ಒಪ್ಪಿಗೆ ನೀಡಿದ್ದಾರೆ ಎಂದು ಸಚಿವರು ನುಡಿದರು. ಫೆಬ್ರುವರಿ ತಿಂಗಳಲ್ಲಿ ಜಮ್ಮ-ಕಾಶ್ಮೀರದ ಪುಲ್ವಾಮದಲ್ಲಿ ಭಯೋತ್ಪಾದಕ ದಾಳಿ ನಡೆಸಿ ೪೦ ಮಂದಿ ಸಿಆರ್ ಪಿಎಫ್ ಯೋಧರನ್ನು ಬಲಿತೆಗೆದುಕೊಂಡದ್ದಕ್ಕೆ ಪ್ರತಿಯಾಗಿ, ಭಾರತೀಯ ವಾಯುಪಡೆಯ (ಐಎಎಫ್) ಯುದ್ಧ ವಿಮಾನಗಳು ಪಾಕಿಸ್ತಾನದ ಬಾಲಾಕೋಟ್‌ನಲ್ಲಿನ ಜೈಶ್-ಇ-ಮೊಹಮ್ಮದ್ (ಜೆಇಎಂ) ಭಯೋತ್ಪಾದಕ ತರಬೇತಿ ಶಿಬಿರದ ಮೇಲೆ ಬಾಂಬ್ ದಾಳಿ ನಡೆಸಿದ ಬಳಿಕ ಪಾಕಿಸ್ತಾನವು ಭಾರತದ ವಿಮಾನಗಳಿಗೆ ತನ್ನ ಆಗಸವನ್ನು ಸಂಪೂರ್ಣವಾಗಿ ಮುಚ್ಚಿತ್ತು. ಮಾರ್ಚ್ ೨೭ರಿಂದ ನವದೆಹಲಿಯನ್ನು ಹೊರತುಪಡಿಸಿ ಬ್ಯಾಂಕಾಕ್ ಮತ್ತು ಕ್ವಾಲಾಲಂಪುರದ ವಿಮಾನಗಳಿಗೆ ತನ್ನ ಆಗಸವನ್ನು ತೆರೆದಿತ್ತು. ಮೇ೧೫ರಂದು ಪಾಕಿಸ್ತಾನವು ಭಾರತದ ವಿಮಾನಗಳಿಗೆ ವಿಧಿಸಿದ ಆಗಸ ನಿಷೇಧವನ್ನು ಮೇ ೩೦ರವರೆಗೆ ವಿಸ್ತರಿಸಿತ್ತು ಜುಲೈ ೧೬ರಂದು ಎಲ್ಲ ನಾಗರಿಕ ವಿಮಾನಗಳಿಗೆ ತನ್ನ ಆಗಸವನ್ನು ಅದು ಸಂಪೂರ್ಣವಾಗಿ ತೆರೆದಿತ್ತು. ಜಮ್ಮು -ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಭಾರತ ರದ್ದು ಪಡಿಸಿದ ಬಳಿಕ ಪಾಕಿಸ್ತಾನದ ಆಗಸವನ್ನು ಬಳಸದಂತೆ ಭಾರತದ ಮೇಲೆ ನಿಷೇಧ ವಿಧಿಸಬೇಕು ಎಂದು ಇಮ್ರಾನ್ ಖಾನ್ ಸರ್ಕಾರದ ಮೇಲೆ ವಿರೋಧ ಪಕ್ಷಗಳು ಮತ್ತು ಕೆಲವು ಸಚಿವರು ತೀವ್ರ ಒತ್ತಡ ಹಾಕಿದ್ದಾರೆ. ಸಾರಾಸಗಟು ನಿಷೇಧ ವಿಧಿಸುವ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲವಾದರೂ, ಪಾಕಿಸ್ತಾನವು ಕೋವಿಂದ್ ವಿಮಾನ ಸಂಚಾರಕ್ಕೆ ಅನುಮತಿ ನಿರಾಕರಿಸುವ ಮೂಲಕ ತನ್ನ ಉದ್ದೇಶವನ್ನು ಜಾಹೀರುಪಡಿಸಿತು. ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತ ತಳೆದಿರುವ ಕಠಿಣ ನಿಲುವು ಗಂಭೀರವಾದ ವಿಷಯವಾಗಿದ್ದು ತಾನು ಅದನ್ನು ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯಲ್ಲಿ ಪ್ರಸ್ತಾಪಿಸುವುದಾಗಿ ಖರೇಶಿ ಹೇಳಿದರು. ಕಾಶ್ಮೀರದಲ್ಲಿ ನಿರ್ಬಂಧಗಳನ್ನು ವಿಧಿಸಿ ೩೪ ದಿನಗಳು ಕಳೆದಿವೆ ಎಂದು ಅವರು ನುಡಿದರು.  ಪಾಕಿಸ್ತಾನವು ಈಗಾಗಲೇ ಭಾರತ ಜೊತೆಗಿನ ತನ್ನ ವ್ಯಾಪಾರವನ್ನು ಅಮಾನತುಗೊಳಿಸಿದ್ದು, ರೈಲು ಮತ್ತು ಬಸ್ಸು ಸೇವೆಗಳನ್ನೂ ಸ್ಥಗಿತಗೊಳಿಸಿತ್ತು. ೩೭೦ನೇ ವಿಧಿಯನ್ನು ರದ್ದು ಪಡಿಸಿದ ಭಾರತದ ಕ್ರಮ ತನ್ನ ಆಂತರಿಕ ವಿಚಾರವಾಗಿದೆ ಎಂಬುದಾಗಿ ಅಂತಾರಾಷ್ಟ್ರೀಯ ಸಮುದಾಯಕ್ಕೆ ಖಂಡತುಡವಾಗಿ ಹೇಳಿರುವ ಭಾರತ ವಾಸ್ತವವನ್ನು ಅಂಗೀಕರಿಸುವಂತೆ ಪಾಕಿಸ್ತಾನಕ್ಕೆ ಸಲಹೆ ಮಾಡಿತ್ತು.

2019: ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಸಿಂಧು ಬಿ. ರೂಪೇಶ್ ಅವರು ಮಂಗಳೂರಿನಲ್ಲಿ ಅಧಿಕಾರ ಸ್ವೀಕರಿಸಿದರು. ಅಪರ ಜಿಲ್ಲಾಧಿಕಾರಿ ರೂಪಾ ನೂತನ ಜಿಲ್ಲಾಧಿಕಾರಿಗಳನ್ನು ಸ್ವಾಗತಿಸಿದರು. ಮಂಗಳೂರು ಉಪವಿಭಾಗಾಧಿಕಾರಿ ರವಿಚಂದ್ರ ನಾಯ್ಕ್, ತಹಶೀಲ್ದಾರ್ ಗುರುಪ್ರಸಾದ್ ಉಪಸ್ಥಿತರಿದ್ದರು. ಸಿಂಧು ಅವರು ದಕ್ಷಿಣ ಕನ್ನಡ ಜಿಲ್ಲೆಯ ಎರಡನೇ ಮಹಿಳಾ ಜಿಲ್ಲಾಧಿಕಾರಿಯಾಗಿದ್ದಾರೆ.   ಹಿಂದೆ, 1989 ರಲ್ಲಿ ರಂಜನಿ ಶ್ರೀಕುಮಾರ್ ಅವರು ಅವಿಭಜಿತ .. ಜಿಲ್ಲೆಯ ಪ್ರಥಮ ಮಹಿಳಾ ಜಿಲ್ಲಾಧಿಕಾರಿಯಾಗಿದ್ದರು. ಸಿಂದು ಬಿ. ರೂಪೇಶ್ ಅವರು .. ಜಿಲ್ಲೆಯ 129 ನೇ ಜಿಲ್ಲಾಧಿಕಾರಿ. ಇದೇ ಮೊದಲ ಬಾರಿಗೆ .. ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿಗಳೆರಡೂ ಹುದ್ದೆಗಳಲ್ಲಿ ಮಹಿಳೆಯರಿರುವುದು ವಿಶೇಷ.


No comments:

Post a Comment