ನಾನು ಮೆಚ್ಚಿದ ವಾಟ್ಸಪ್

Monday, September 2, 2019

ಇಂದಿನ ಇತಿಹಾಸ History Today ಸೆಪ್ಟೆಂಬರ್ 02

2019: ಬೆಂಗಳೂರು: ಬೆಂಗಳೂರಿನ ತುಂಗಾನಗರ ಬಡಾವಣೆಯ ಮುಖ್ಯರಸ್ತೆಯ ಹೊಂಡಗಳ ಬಗ್ಗೆ ಗಮನ ಸೆಳೆಯಲು  ಬೀದಿ ಕಲಾವಿದ  ಬಾದಲ್ ನಂಜುಂಡ ಸ್ವಾಮಿ ಅವರು ಗಗನಯಾನಿಯಂತೆ ವೇಷಭೂಷಣ ಧರಿಸಿಕೊಂಡು ರಸ್ತೆಯ ಹೊಂಡಗಳ ಮಧ್ಯೆ ‘ಚಂದ್ರ ನಡಿಗೆ’ ನಡೆಸಿದ  ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಯಿತು.  ಬಾದಲ್ ಅವರು ರಸ್ತೆ ಅವ್ಯವಸ್ಥೆಗಳ ಬಗ್ಗೆ ಗಮನ ಸೆಳೆಯಲು ತಮ್ಮ ಸೃಜನಶೀಲ ಕಲೆಯನ್ನು ಬಳಸಿಕೊಂಡಿರುವುದು ಇದೇ ಮೊದಲು ಏನಲ್ಲ. ಬೆಂಗಳೂರಿನ ರಸ್ತೆ ಹೊಂಡಗಳನ್ನು ಅವರು ಹಿಂದೆತಾವರೆ ಕೊಳಗಳನ್ನಾಗಿಯೂ, ‘ಮೊಸಳೆ ಹೊಂಡಗಳಾಗಿಯೂ ಪರಿವರ್ತಿಸಿದ್ದರು.ಬೆಂಗಳೂರಿನ ರಸ್ತೆ ಹೊಂಡಗಳನ್ನು ಆದ್ಯತೆ ಆಧಾರದಲ್ಲಿ ಮುಚ್ಚಲು ಕ್ರಮ ಕೈಗೊಂಡಿರುವುದಾಗಿ ಬಿಬಿಎಂಪಿ ಪ್ರತಿಪಾದಿಸುತ್ತಿರುವುದರ ಮಧ್ಯೆ ನಂಜುಂಡ ಸ್ವಾಮಿ ಅವರುಚಂದ್ರ ನಡಿಗೆಮೂಲಕ ಬೆಂಗಳೂರು ರಸ್ತೆಗಳ ದುರವಸ್ಥೆಗೆ ಕನ್ನಡಿ ಹಿಡಿದರು. ಹೊಂಡಗಳ ಪರಿಣಾಮವಾಗಿ ಸಂಭವಿಸುವ ರಸ್ತೆ ಅಪಘಾತಗಳಿಗೆ ಬಿಬಿಎಂಪಿಯನ್ನೇ ಹೊಣೆ ಮಾಡುವುದಾಗಿ ಕರ್ನಾಟಕ ಹೈಕೋರ್ಟ್ ಕಳೆದ ಆಗಸ್ಟ್ ತಿಂಗಳಲ್ಲಿ ಎಚ್ಚರಿಸಿದ ಬಳಿಕ ಬಿಬಿಎಂಪಿ ಹೊಂಡಗಳನ್ನು ಮುಚ್ಚಲು ಆದ್ಯತೆ ಆಧಾರದಲ್ಲಿ ಕ್ರಮ ವಹಿಸುವುದಾಗಿ ಹೇಳಿಕೆ ನೀಡಿತ್ತು.

2019:  ಬೆಂಗಳೂರು: ಬಾಹ್ಯಾಕಾಶ ಕ್ಷೇತ್ರದಲ್ಲಿ ಇತಿಹಾಸ ನಿರ್ಮಿಸಲು ಇಸ್ರೋ ಸಜ್ಜಾಯಿತು. ಒಂದು ತಿಂಗಳ ಹಿಂದೆ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರನ ಅಂಗಳಕ್ಕೆ ಹಾರಿದ್ದ ಚಂದ್ರಯಾನ 2 ನೌಕೆ ಇದೀಗ ಚಂದಿರನ ಕಕ್ಷೆಯಲ್ಲಿ ಸುತ್ತುತ್ತಿದ್ದು ವಿನಾಯಕ ಚೌತಿಯ ದಿನವೇ ತನ್ನೊಳಗಿದ್ದ ವಿಕ್ರಮ್ ಲ್ಯಾಂಡರ್ ಹಾಗೂ ಆರು ಚಕ್ರಗಳ ಪ್ರಗ್ಯಾನ್ ರೋವರ್ ಗಳನ್ನು ಯಶಸ್ವಿಯಾಗಿ ಪ್ರತ್ಯೇಕಿಸಿತು. ಇದೀಗ ವಿಕ್ರಮ್ ಮತ್ತು ಪ್ರಗ್ಯಾನ್ ಚಂದ್ರನತ್ತ ಮುಖಮಾಡಿ ಸಾಗುತ್ತಿವೆ. ಎಲ್ಲವೂ ನಿರ್ವಿಘ್ನವಾಗಿ ನೆರವೇರಿದರೆ ಇನ್ನು ಆರು ದಿನಗಳಲ್ಲಿ ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ನೌಕೆ ಇಳಿಯುವ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಈದಿನ ಮಧ್ಯಾಹ್ನ 1.15 ಸುಮಾರಿಗೆ ಪ್ರತ್ಯೇಕಿಸುವಿಕೆ ಕಾರ್ಯ ಯಶಸ್ವಿಯಾಗಿ ನೆರವೇರಿತು. ಪ್ರಸ್ತುತ ವಿಕ್ರಮ್ ನೌಕೆ ಚಂದ್ರನ ಕಕ್ಷೆಯ ಸುತ್ತ 119 ಕಿ.ಮೀ . 127 ಕಿ.ಮೀ. ಅಂತರದಲ್ಲಿ ಸುತ್ತುತ್ತಿದೆ. ವಿಕ್ರಂ ಮತ್ತು ಪ್ರಗ್ಯಾನ್ ಅನ್ನು ಹೊತ್ತು ತಂದಿದ್ದ ಆರ್ಬಿಟರ್ ನೌಕೆ ಸಹ ಇದೇ ಕಕ್ಷೆಯಲ್ಲಿ ಸುತ್ತುತ್ತಿದ್ದು ಮುಂದಿನ ಒಂದು ವರ್ಷಗಳವರೆಗೆ ಅದು ಅಲ್ಲೇ ಚಂದ್ರನಿಗೆ ಪ್ರದಕ್ಷಿಣೆ ಹಾಕಲಿದೆ.  ಮುಂದಿನ ಕೆಲ ದಿನಗಳಲ್ಲಿ ಚಂದ್ರನ ಅಂಗಳಕ್ಕೆ ಇನ್ನಷ್ಟು ಹತ್ತಿರವಾಗುವ ನಿಟ್ಟಿನಲ್ಲಿ ವಿಕ್ರಮ್  ಲ್ಯಾಂಡರ್ ಗೆ ಎರಡು ಕಕ್ಷೆ ಏರಿಸುವಿಕೆ ಪ್ರಕ್ರಿಯೆಗಳು ನಡೆಯಲಿವೆ. ಸೆಪ್ಟಂಬರ 4 ರಂದು ಬೆಳಿಗ್ಗೆ ವಿಕ್ರಮ್ ಚಂದ್ರನ ಕಕ್ಷೆಯ ಅತೀ ಸನಿಹದಲ್ಲಿ ಅಂದರೆ 36 ಕಿಲೋಮೀಟರ್ ಗಳ ಅಂತರದಲ್ಲಿ ಸುತ್ತಲು ಪ್ರಾರಂಭಿಸಲಿದೆ. ಸಂದರ್ಭದಲ್ಲಿ ಕಕ್ಷೆಯಿಂದ ನೌಕೆಯ ಗರಿಷ್ಠ ಅಂತರ 110 ಕಿಲೋ ಮೀಟರ್ ಇರಲಿದೆ. ಸೆಪ್ಟಂಬರ್ 7ರಂದು ವಿಕ್ರಂ ಲ್ಯಾಂಡರ್ 15 ನಿಮಿಷಗಳ ಶಕ್ತಿಯುತ ಅವತರಣ (ಇಳಿಯುವಿಕೆ) ಪ್ರಾರಂಭಿಸಲಿದೆ. 15 ನಿಮಿಷಗಳು ಇಸ್ರೋ ಪಾಲಿಗೆ ನಿರ್ಣಾಯಕವಾಗಿಲಿದೆ ಮತ್ತು ಇದು ಇಸ್ರೋ ಪಾಲಿನ ಅತ್ಯಂತ ಸವಾಲಿನ ನಿಮಿಷಗಳಲ್ಲಿ ಒಂದಾಗಲಿದೆ. ಮೂಲಕ ವಿಕ್ರಂ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದ ಅಂಗಳದಲ್ಲಿ ಇಳಿದ ತಕ್ಷಣ ರೋವರ್ ಒಂದನ್ನು ಚಂದ್ರನಲ್ಲಿ ಇಳಿಸಿದ ವಿಶ್ವದ ನಾಲ್ಕನೇ ದೇಶವಾಗಿ ಭಾರತ ಮೂಡಿಬರಲಿದೆ ಮತ್ತು ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸಿದ ವಿಶ್ವದ ಪ್ರಪ್ರಥಮ ರಾಷ್ಟ್ರವೆಂಬ ಹೆಗ್ಗಳಿಕೆ ನಮ್ಮ ದೇಶದ ವಿಜ್ಞಾನಿಗಳದ್ದಾಗಲಿದೆ.

2019: ಇಸ್ಲಾಮಾಬಾದ್/ನವದೆಹಲಿ: ಗೂಢಚಾರಿಕೆ ಆರೋಪದಲ್ಲಿ ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ವಿಪರೀತ ಒತ್ತಡಕ್ಕೊಳಗಾಗಿದ್ದಾರೆ ಎಂದು ವಿದೇಶಾಂಗ ಇಲಾಖೆ ತಿಳಿಸಿತು. ಇಸ್ಲಾಮಾಬಾದಿನಲ್ಲಿ  ಭಾರತದ ರಾಯಭಾರಿಯಾಗಿರುವ ಗೌರವ್ ಅಹ್ಲುವಾಲಿಯಾ ಅವರು ಜಾಧವ್ಅವರನ್ನು ಈದಿನ ಭೇಟಿ ಮಾಡಿದರು. 2016ರಲ್ಲಿ ಜಾಧವ್ ಅವರನ್ನು ಪಾಕಿಸ್ತಾನ ಬಂಧಿಸಿತ್ತು. ಅದಾದ ನಂತರ ಇದೇ ಮೊದಲ ಬಾರಿ ರಾಜತಾಂತ್ರಿಕರ ಭೇಟಿಗೆ ಅವಕಾಶ ದೊರೆಕಿತು. ಅಂತಾರಾಷ್ಟ್ರೀಯ ನ್ಯಾಯಾಲಯದ (ಐಸಿಜೆ) ನಿರ್ದೇಶನದ ಹಿನ್ನೆಲೆಯಲ್ಲಿ ರಾಜತಾಂತ್ರಿಕರ ಭೇಟಿಗೆ ಪಾಕಿಸ್ತಾನ ಅವಕಾಶ ನೀಡಿತು.ಪಾಕಿಸ್ತಾನದ ಸುಳ್ಳು ಪ್ರತಿಪಾದನೆಗಳಿಂದಾಗಿ ಜಾಧವ್ ಅವರು ವಿಪರೀತ ಒತ್ತಡಕ್ಕೊಳಗಾಗಿದ್ದಾರೆ. ಸಮಗ್ರ ವರದಿಗಾಗಿ ನಾವು ಎದುರುನೋಡುತ್ತಿದ್ದೇವೆಎಂದು ವಿದೇಶಾಂಗ ಇಲಾಖೆಯ ವಕ್ತಾರ ರವೀಶ್ ಕುಮಾರ್ ಹೇಳಿದರು. ವಿಸ್ತೃತ ವರದಿ ದೊರೆತ ಬಳಿಕ ಮುಂದೇನು ಮಾಡಬೇಕು ಎಂಬುದನ್ನು ನಿರ್ಧರಿಸಲಿದ್ದೇವೆ. ಅಂತಾರಾಷ್ಟ್ರೀಯ ನ್ಯಾಯಾಲಯದ ನಿರ್ದೇಶನಗಳಿಗೆ ಅನುಗುಣವಾಗಿ ಮುಂದಿನ ಕಾರ್ಯತಂತ್ರ ರೂಪಿಸಲಾಗುವುದುಎಂದೂ ಅವರು ತಿಳಿಸಿದರು. ವಿಯೆನ್ನಾ ಒಪ್ಪಂದ, ಅಂತಾರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ಹಾಗೂ ಪಾಕಿಸ್ತಾನದ ಕಾನೂನಿಗೆ ಅನುಗುಣವಾಗಿ ರಾಜತಾಂತ್ರಿಕರ ಭೇಟಿಗೆ ಅನುವು ಮಾಡಿಕೊಡಲಾಗುವುದು ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆಯ ವಕ್ತಾರ ಮೊಹಮ್ಮದ್ ಫೈಸಲ್ ಹಿಂದಿನ ದಿನ ತಿಳಿಸಿದ್ದರು.

2019:  ನವದೆಹಲಿ: ಐಎನ್ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರಿಗೆ ಸುಪ್ರೀಂಕೋರ್ಟಿನಲ್ಲಿ  ಈದಿನ ತುಸು ನಿರಾಳತೆ ದೊರಕಿತು. ಚಿದಂಬರಂ ಅವರನ್ನು ತಿಹಾರ್ ಜೈಲಿಗೆ ಕಳುಹಿಸದಂತೆ ಮತ್ತು ಸಿಬಿಐ ಪ್ರಧಾನ ಕಚೇರಿಯಲ್ಲೇ ಸೆಪ್ಟೆಂಬರ್ 5ರ ಗುರುವಾರದವರೆಗೆ ಇರಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಸೂಚಿಸಿತು. ಜತೆಗೆ, ಅವರ ಮಧ್ಯಂತರ ಜಾಮೀನು ಅರ್ಜಿಯನ್ನು ಪರಿಗಣಿಸುವಂತೆಯೂ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿತು. ಚಿದಂಬರಂ ಪರವಾಗಿ ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಸುಪ್ರೀಂಕೋರ್ಟಿನಲ್ಲಿ ವಾದ ಮಂಡಿಸಿ, ‘ಸಿಬಿಐ ಕಸ್ಟಡಿಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿರುವಾಗ ಅವರನ್ನು ತಿಹಾರ್ ಜೈಲಿಗೆ ಯಾಕೆ ಕಳುಹಿಸಬೇಕು? ಸದ್ಯದ ಮಟ್ಟಿಗೆ ಅವರಿಗೆ ಗೃಹಬಂಧನ ಸಾಕು. ನ್ಯಾಯ ಒದಗಿಸಬೇಕುಎಂದು ಮನವಿ ಮಾಡಿದ್ದರು. ಇದನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್, ಚಿದಂಬರಂ ಅವರನ್ನು ಜೈಲಿಗೆ ಕಳುಹಿಸದಂತೆ ಆದೇಶಿಸಿತು. ಜಾಮೀನುರಹಿತ ವಾರಂಟ್ ಪ್ರಶ್ನಿಸಿ ಚಿದಂಬರಂ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿ ಪ್ರತಿಕ್ರಿಯೆ ನೀಡುವಂತೆ ನ್ಯಾಯಮೂರ್ತಿ ಆರ್.ಬಾನುಮತಿ ಮತ್ತು .ಎಸ್.ಬೋಪಣ್ಣ ಅವರನ್ನು ಒಳಗೊಂಡ ನ್ಯಾಯಪೀಠ ಸಿಬಿಐಗೆ ಸೂಚಿಸಿತು.
2019: ನವದೆಹಲಿ: ವಿದ್ಯುತ್, ಕಚ್ಚಾ ತೈಲ, ಸಿಮೆಂಟ್ ಸೇರಿದಂತೆ ಪ್ರಮುಖ ಎಂಟು ಕೈಗಾರಿಕಾ ವಲಯಗಳ ಆರ್ಥಿಕ ಬೆಳವಣಿಗೆ ಪ್ರಮಾಣ ಜುಲೈನಲ್ಲಿ ಶೇ 2.1ಕ್ಕೆ ಕುಸಿದಿದೆ ಎಂದು ಸರ್ಕಾರ ಬಿಡುಗಡೆ ಮಾಡಿದ ಅಂಕಿಅಂಶ ತಿಳಿಸಿತು. ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ಪೆಟ್ರೋಲಿಯಂ ಉತ್ಪನ್ನಗಳು, ರಸಗೊಬ್ಬರ, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ವಲಯಗಳ ಬೆಳವಣಿಗೆ ದರ ಕಳೆದ ವರ್ಷ ಜುಲೈನಲ್ಲಿ ಶೇ 7.3ರಷ್ಟಿತ್ತು. ಆದರೆ ವರ್ಷ ಜುಲೈನಲ್ಲಿ ಶೇ 2.1ರಷ್ಟಿದೆ ಎಂದು ಸರ್ಕಾರ ಬಿಡುಗಡೆ ಮಾಡಿರುವ ಅಂಕಿಅಂಶಗಳನ್ನು ಉಲ್ಲೇಖಿಸಿದ ವರದಿ ತಿಳಿಸಿತು. ಕೈಗಾರಿಕಾ ಉತ್ಪಾದನೆ ಸೂಚ್ಯಂಕದಲ್ಲಿ (ಐಐಪಿ) ಕೈಗಾರಿಕೆಗಳ ಕೊಡುಗೆ ಶೇ 40.27ರಷ್ಟಿದೆ.ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ವಲಯಗಳು ಕ್ರಮವಾಗಿ ಶೇ 6.6, ಶೇ 7.9 ಮತ್ತು ಶೇ 4.2 ಇಳಿಕೆ ಕಂಡಿವೆ. ಇವು ಕಳೆದ ವರ್ಷ ಕ್ರಮವಾಗಿ ಶೇ 6.9, ಶೇ 11.2 ಹಾಗೂ ಶೇ 6.7 ಬೆಳವಣಿಗೆ ಕಂಡಿದ್ದವು ಎಂದು ವರದಿ ಹೇಳಿತು.  ಆದರೂ, ರಸಗೊಬ್ಬರ ಕೈಗಾರಿಕೆ ತುಸು ಸುಧಾರಣೆ ಕಂಡಿದ್ದು ಶೇ 1.5 ದಾಖಲಾಗಿತ್ತು.. ಇದು ಕಳೆದ ವರ್ಷ ಜುಲೈನಲ್ಲಿ ಶೇ 1.3ರಷ್ಟು ದಾಖಲಾಗಿತ್ತು.

2019: ಪಠಾಣ್ ಕೋಟ್ (ಪಂಜಾಬ್): ಭಾರತೀಯ ವಾಯು ಪಡೆಯ ಮುಖ್ಯಸ್ಥ ಬಿ.ಎಸ್. ಧನೋವಾ ಮತ್ತು ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರು ಈದಿನ ಜೊತೆಯಾಗಿ ಮಿಗ್ ವಿಮಾನದಲ್ಲಿ ಸಂಚರಿಸಿದರು. ಪಂಜಾಬ್ ನಲ್ಲಿರುವ ಪಠಾಣ್ ಕೋಟ್ ವಾಯುನೆಲೆಯಲ್ಲಿ ಇವರಿಬ್ಬರು ಮಿಗ್ 21 ಯುದ್ಧ ವಿಮಾನವನ್ನು ಯಶಸ್ವಿಯಾಗಿ ಚಲಾಯಿಸಿದರು.ಕಳೆದ ಫೆಬ್ರವರಿಯಲ್ಲಿ ಬಾಲಾಕೋಟ್ ವಾಯುದಾಳಿಯ ಬಳಿಕ ಭಾರತ ಮತ್ತು ಪಾಕಿಸ್ಥಾನದ ನಡುವೆ ಯುದ್ಧ ಸನ್ನಿವೇಶ ನಿರ್ಮಾಣಗೊಂಡಿದ್ದ ಸಂದರ್ಭದಲ್ಲಿ ಗಡಿ ನಿಯಂತ್ರಣ ರೇಖೆಯ ಸಮೀಪ ಎರಡೂ ದೇಶಗಳ ಯುದ್ಧ ವಿಮಾನಗಳು ನಡೆಸಿದ್ದ ಡಾಗ್ ಫೈಟ್ ಸಂದರ್ಭದಲ್ಲಿ ಅಭಿನಂದನ್ ಅವರು ತಮ್ಮ ಮಿಗ್ ವಿಮಾನದ ಮೂಲಕ ಪಾಕಿಸ್ಥಾನದ ಎಫ್ 16 ಯುದ್ಧವಿಮಾನವನ್ನು ಹೊಡೆದುರುಳಿಸಿದ್ದರು. ಮತ್ತು ಬಳಿಕ ಇವರು ಚಲಾಯಿಸುತ್ತಿದ್ದ ಮಿಗ್ ವಿಮಾನವು ಪಾಕ್ ಆಕ್ರಮಿತ ಕಾಶ್ಮೀರ ಭಾಗದಲ್ಲಿ ಪತನಗೊಂಡ ಪರಿಣಾಮವಾಗಿ  ಪಾಕ್ ಸೈನಿಕರ ಕೈಗೆ ಸೆರೆ ಸಿಕ್ಕಿದ್ದರು.ಬಳಿಕ ಭಾರತಕ್ಕೆ ಹಸ್ತಾಂತರಗೊಂಡಿದ್ದ ಅಭಿನಂದನ್ ಅವರು ವಿಶ್ರಾಂತಿ ರಜೆಯ ಮೇಲಿದ್ದರು. ಇದೀಗ ಸರಿಸುಮಾರು ಏಳು ತಿಂಗಳುಗಳ ಬಳಿಕ ಅಭಿನಂದನ್ ಮತ್ತೆ ವಾಯುಪಡೆಯ ಕರ್ತವ್ಯಕ್ಕೆ ಮರಳಿದರು. ಸಂಪೂರ್ಣ ವೈದ್ಯಕೀಯ ತಪಾಸಣೆ ಬಳಿಕ ಅಭಿನಂದನ್ ಅವರು ವಿಮಾನ ಹಾರಾಟ ನಡೆಸಬಹುದು ಎಂದು ಕಳೆದ ತಿಂಗಳು ಪ್ರಮಾಣ ಪತ್ರ ನೀಡಲಾಗಿತ್ತುಎಂದು ವಾಯುಪಡೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಸುಮಾರು 30 ನಿಮಿಷ ಹಾರಾಟ ನಡೆಸಲಾಯಿತು ಎಂದು ವರದಿ ತಿಳಿಸಿತು.

2019: ರಾಯಚೂರು: ಚಂದ್ರಯಾನ-2 ನೌಕೆ ಚಂದ್ರನ ಅಂಗಳದಲ್ಲಿ ಇಳಿಯುವುದನ್ನು ಪ್ರಧಾನಿ ಮೋದಿ ಜೊತೆ ವೀಕ್ಷಿಸಲು ರಾಯಚೂರಿನ ಸಿಂಧನೂರಿನ ವಿದ್ಯಾರ್ಥಿನಿ ಆಯ್ಕೆಯಾದಳು. ಸೆ.7 ರಂದು ಬೆಂಗಳೂರಿನ ಬಾಹ್ಯಾಕಾಶ ಸಂಶೋಧನಾ ಕೇಂದ್ರ ಕಚೇರಿಯಲ್ಲಿ ವೀಕ್ಷಿಸಲು ಸಿಂಧನೂರಿನ ಡಾ ಫಡಿಲ್ಸ್ ಕಾನ್ಸೆಪ್ಟ್ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ  ಜಿ.ವೈಷ್ಣವಿ ಆಯ್ಕೆಯಾದಳು. ಅಂತರ್ಜಾಲ ಮೂಲಕ ಆಗಸ್ಟ್ 25 ರಂದು ನಡೆದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೈಷ್ಣವಿ 20 ಪ್ರಶ್ನೆಗಳಿಗೆ 5 ನಿಮಿಷದಲ್ಲಿ ಉತ್ತರಿಸಿದ್ದಳು. 20 ಪ್ರಶ್ನೆಗಳಿಗೆ 10 ನಿಮಿಷಗಳಲ್ಲಿ ಉತ್ತರಿಸಲು ಅವಕಾಶ ನೀಡಲಾಗಿತ್ತು. ಆದರೆ,  ವೈಷ್ಣವಿ 5 ನಿಮಿಷದಲ್ಲಿ ಉತ್ತರಿಸಿದ್ದಳು. ಪ್ರತೀ ರಾಜ್ಯದಿಂದ ಇಬ್ಬರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದ್ದು, ರಾಜ್ಯದ ಇಬ್ಬರು ವಿದ್ಯಾರ್ಥಿಗಳಲ್ಲಿ ಸಿಂಧನೂರಿನ ವೈಷ್ಣವಿ ಕೂಡ ಒಬ್ಬರು ಎನ್ನುವುದು ವಿಶೇಷ.

No comments:

Post a Comment