2019: ಹ್ಯೂಸ್ಟನ್ (ಅಮೆರಿಕ): ವಿಶ್ವದ ಎರಡು ಅತಿದೊಡ್ಡ ಪ್ರಜಾಪ್ರಭುತ್ವ ಹಾಗೂ ಅಣು ಶಕ್ತಿಯ ದೇಶ ಒಂದಾಗಿರುವುದು ಎರಡೂ ದೇಶಗಳ ಬಲವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಮೂಲಕ ಉಭಯ ದೇಶಗಳ ಜನರ ಶ್ರೇಯೋಭಿವೃದ್ಧಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2019 ಸೆಪ್ಟೆಂಬರ್ 22ರ
ಭಾನುವಾರ ಇಲ್ಲಿ ಹೇಳಿದರು. ಪಾಕಿಸ್ತಾನದ ಪ್ರಧಾನಿ
ಇಮ್ರಾನ್ ಖಾನ್ ಅವರನ್ನು ಹೆಸರು ಹೇಳದೆಯೇ ತರಾಟೆಗೆ ತೆಗೆದುಕೊಂಡ ಪ್ರಧಾನಿ ‘ಭಾರತವು 370ನೇ ವಿಧಿಯನ್ನು
ರದ್ದು ಪಡಿಸಿದ್ದು, ತನ್ನನ್ನು ತಾನೇ ನಿಯಂತ್ರಿಸಿಕೊಳ್ಳಲಾರದ ದೇಶಕ್ಕೆ ಕಿರಿಕಿರಿ ಉಂಟು ಮಾಡಿದೆ.
ಆ ದೇಶ ಭಯೋತ್ಪಾದನೆಯ ಬೀಜ ಬಿತ್ತುವ ನೆಲ. ಅಮೆರಿಕದ 9/11 ದಾಳಿ ಇರಲಿ, ಮುಂಬೈಯ 26/11ರ ದಾಳಿ ಇರಲಿ ಅವುಗಳ ಪ್ರಚೋದಕರು ಆ ದೇಶದಿಂದಲೇ ಬಂದವರು’ ಎಂದು ಟೀಕಿಸಿದರು. ಭಯೋತ್ಪಾದನೆಯ ವಿರುದ್ಧ ಕಠಿಣ ನಿಲುವು ಕೈಗೊಳ್ಳಬೇಕಾದ ಕಾಲ ಬಂದಿದೆ ಎಂದು ಅವರು ನುಡಿದರು.ಅಭೂತಪೂರ್ವ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಿ, "ಅಬ್ ಕಿ ಬಾರ್ ಟ್ರಂಪ್ ಸರ್ಕಾರ್" ಎಂದು ಘೋಷಣೆ ಕೂಗುವ ಮೂಲಕ ಈ ಬಾರಿಯೂ ಅಮೆರಿಕದಲ್ಲಿ ಟ್ರಂಪ್ ಅವರೇ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿ 7 ದಿನಗಳ ಪ್ರವಾಸಕ್ಕಾಗಿ ಹಿಂದಿನ ದಿನ ಅಮೆರಿಕಕ್ಕೆ ತೆರಳಿದ್ದು, ಈದಿನ ಹೂಸ್ಟನ್ ನಗರದ ಎನ್ಆರ್ಜಿ ಸ್ಟೇಡಿಯಂನಲ್ಲಿ ನಡೆದ ಬಹು ನಿರೀಕ್ಷಿತ “ಹೌಡಿ ಮೋದಿ” ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಸುಮಾರು 50 ಸಾವಿರಕ್ಕೂ ಹೆಚ್ಚು ಅನಿವಾಸಿ ಭಾರತೀಯರು ಮೋದಿಯವರನ್ನು ಹರ್ಷೋದ್ಘಾರದೊಂದಿಗೆ ಈ ಕಾರ್ಯಕ್ರಮಕ್ಕೆ ಸ್ವಾಗತಿಸಿದರು.(ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2019: ನವದೆಹಲಿ: ೧೯೬೫ ಮತ್ತು ೧೯೭೧ರ ತಪ್ಪುಗಳನ್ನು ಪುನರಾವರ್ತಿಸುವುದರ ವಿರುದ್ಧ 2019 ಸೆಪ್ಟೆಂಬರ್
22ರ ಭಾನುವಾರ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ’ತನ್ನ ನೆಲದಲ್ಲೇ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತಿರುವುದಕ್ಕಾಗಿ ಇನ್ನಷ್ಟು ಛಿದ್ರವಾಗುವ ಅಪಾಯವನ್ನು ಅದು ಎದುರುಹಾಕಿಕೊಳ್ಳುತ್ತಿದೆ’ ಎಂದು ಹೇಳಿದರು.‘ಅವರು ೧೯೬೫ ಮತ್ತು ೧೯೭೧ರ ತಪ್ಪುಗಳನ್ನು ಪುನರಾವರ್ತನೆ ಮಾಡುವ ತಪ್ಪು ಮಾಡಬಾರದು. ಮಾಡಿದರೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಗತಿ ಏನಾದೀತು ಮತ್ತು ಬಲೂಚ್ ಮತ್ತು ಪಶ್ತೂನ್ಗಳ ವಿರುದ್ಧ ಅದು ಮಾಡುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯ ಪರಿಣಾಮ ಏನಾದೀತು ಎಂದು ಅದು ಯೋಚಿಸಬೇಕು’ ಎಂದು ಅವರು ನುಡಿದರು.‘ಇದು ಹೀಗೇ ಮುಂದುವರೆದರೆ, ಪಾಕಿಸ್ತಾನ ಛಿದ್ರ ಛಿದ್ರವಾಗದಂತೆ ರಕ್ಷಿಸಲು ಯಾವ ಶಕ್ತಿಗೂ ಸಾಧ್ಯವಿಲ್ಲ’ ಎಂದು ಬಿಹಾರದ ಪಾಟ್ನಾದಲ್ಲಿ ಬಿಜೆಪಿ ಸಂಘಟಿಸಿದ್ದ ’ಜನ ಜಾಗರಣ ಸಭೆ’ಯಲ್ಲಿ ರಾಜನಾಥ್ ಸಿಂಗ್ ಹೇಳಿದರು.ಕಾಶ್ಮೀರದ ಪುಲ್ವಾಮದಲ್ಲಿ ಫೆಬ್ರುವರಿ ತಿಂಗಳಲ್ಲಿ ಆತ್ಮಹತ್ಯಾ ಬಾಂಬರ್ ೪೦ ಮಂದಿ ಸಿಆರ್ಪಿಎಫ್ ಯೋಧರನ್ನು ಹತ್ಯೆಗೈದಂದಿನಿಂದ ಉಭಯ ರಾಷ್ಟ್ರಗಳ ಬಾಂಧವ್ಯ ಬಿಗಡಾಯಿಸಿದೆ. ಈ ದಾಳಿಯ ಸೇಡು ತೀರಿಸಲು ಭಾರತೀಯ ವಾಯುಪಡೆ ವಿಮಾನಗಳು ಪಾಕಿಸ್ತಾನದ ಬಾಲಾಕೋಟ್ನಲ್ಲಿ ಜೈಶ್-ಇ-ಮೊಹಮ್ಮದ್ ಭಯೋತ್ಪಾದಕ ತರಬೇತಿ ಶಿಬಿರಗಳ ಮೇಲೆ ಬಾಂಬ್ ದಾಳಿ ನಡೆಸಿದ್ದವು.(ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2019: ಮುಂಬೈ: ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ವಿರುದ್ಧ 2019 ಸೆಪ್ಟೆಂಬರ್
22ರ ಭಾನುವಾರ ಇಲ್ಲಿ ತೀವ್ರ ಟೀಕಾಪ್ರಹಾರ ನಡೆಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ‘ನೆಹರೂ ಅವರು ಕದನ ವಿರಾಮಕ್ಕೆ ಕೈಗೊಂಡ ಅಕಾಲಿಕ ನಿರ್ಧಾರದ ಪರಿಣಾಮವಾಗಿ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಸೃಷ್ಟಿಯಾಯಿತು’ ಎಂದು ಆಪಾದಿಸಿದರು. ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ’ಅನುಚಿತ ಸಮಯದಲ್ಲಿ ಪಕ್ಕದ ರಾಷ್ಟ್ರದೊಂದಿಗೆ ಕದನ ವಿರಾಮ ಘೋಷಿಸದೇ ಹೋಗಿದ್ದರೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ(ಪಿಒಕೆ)ದ ಸೃಷ್ಟಿಯೇ ಆಗುತ್ತಿರಲಿಲ್ಲ’ ಎಂದು ಹೇಳಿದರು. ‘ಕಾಶ್ಮೀರದ ವಿಚಾರವನ್ನು ಆಗಿನ ಪ್ರಧಾನಿಗಿಂತಲೂ ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ನಿಭಾಯಿಸಬೇಕಾಗಿತ್ತು’ ಎಂದು ಶಾ ಅಭಿಪ್ರಾಯಪಟ್ಟರು. ಜಮ್ಮು ಮತ್ತು ಕಾಶ್ಮೀರದಲ್ಲಿ ೩೭೦ನೇ ವಿಧಿ ರದ್ದತಿಗೆ ಕೇಂದ್ರದ ನಿರ್ಧಾರದ ಕುರಿತು ಹಾಗೂ ಮಹಾರಾಷ್ಟ್ರದಲ್ಲಿ ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆ ಪ್ರಚಾರಕ್ಕಾಗಿ ನಡೆದ ಸಭೆಯಲ್ಲಿ ಮಾತನಾಡಿದ ಅಮಿತ್ ಶಾ ‘ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯು ೩೭೦ನೇ ವಿಧಿ ರದ್ದತಿಯ ಕುರಿತ ಜನಮತಗಣನೆಯಾಗಲಿದೆ’ ಎಂದೂ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2019: ನವದೆಹಲಿ: ಭಾರತೀಯ ವಾಯುಪಡೆ ವಿಮಾನಗಳು ಬಾಂಬ್ ದಾಳಿ ನಡೆಸಿದ ಸುಮಾರು ಏಳು ತಿಂಗಳುಗಳ ಬಳಿಕ ಪಾಕಿಸ್ತಾನದ ಬಾಲಾಕೋಟ್ನಲ್ಲಿ ಜೈಶ್-ಇ-ಮೊಹಮ್ಮದ್ (ಜೆಇಎಂ) ಭಯೋತ್ಪಾದಕ ಸಂಘಟನೆಯು ತನ್ನ ಸಮುಚ್ಚಯವನ್ನು ಪುನರುಜ್ಜೀವನಗೊಳಿಸಿ ಜಮ್ಮು ಮತ್ತು ಕಾಶ್ಮೀರ ಅಥವಾ ಭಾರತದ ಬೇರೆ ಎಲ್ಲಾದರೂ ದಾಳಿ ನಡೆಸಲು ಸುಮಾರು ೪೦ಕ್ಕೂ ಹೆಚ್ಚು ಮಂದಿ ಜೆಹಾದಿಗಳಿಗೆ ಸಕ್ರಿಯ ತರಬೇತಿ ನೀಡುತ್ತಿರುವುದು ಬೆಳಕಿಗೆ ಬಂದಿತು.
ಈ ಬಾರಿಯ ದಾಳಿಯನ್ನು ಅಂತಾರಾಷ್ಟ್ರೀಯ ತಪಾಸಣೆಯ ಕಣ್ಣು ತಪ್ಪಿಸುವ ಸಲುವಾಗಿ ಹೊಸ ಹೆಸರಿನಲ್ಲಿ ನಡೆಸಲು ಜೆಇಎಂ ಉದ್ದೇಶಿಸಿದೆ ಎಂದು ಸುದ್ದಿ ಸಂಸ್ಥೆಯೊಂದರ ವರದಿ ತಿಳಿಸಿದೆ. ಇದರ ಜೊತೆಗೆ ಕಾಶ್ಮೀರ ಕಾರ್ಯಾಚರಣೆಗಾಗಿ ಲಷ್ಕರ್ -ಇ-ತೊಯ್ಬಾ ಮತ್ತು ಹಿಜ್ಬುಲ್ ಮುಜಾಹಿದೀನ್ ಕೂಡಾ ಭರದ ಸಿದ್ಧತೆಯಲ್ಲಿವೆ ಎಂದು ವರದಿಗಳು ಹೇಳಿದವು.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಒದಗಿಸಿದ್ದ ಭಾರತೀಯ ಸಂವಿಧಾನದ ೩೭೦ನೇ ವಿಧಿಯನ್ನು ಭಾರತವು ಆಗಸ್ಟ್ ೫ರಂದು ರದ್ದು ಪಡಿಸಿ ರಾಜ್ಯವನ್ನು ಜಮ್ಮು-ಕಾಶ್ಮೀರ ಮತ್ತು ಲಡಾಖ್ ಎಂಬುದಾಗಿ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಆಶೀರ್ವಾದದೊಂದಿಗೇ ಈ ಬೆಳವಣಿಗೆಯಾಗಿದೆ. ವಿಶ್ವಸಂಸ್ಥೆ ಮಹಾಸಭೆಯಲ್ಲಿ ಸೆಪ್ಟೆಂಬರ್ ೨೩ರಂದು ’ಭಯೋತ್ಪಾದನೆ ಮತ್ತು ಉಗ್ರವಾದಕ್ಕೆ ದೋರಣಾತ್ಮಕ ಪ್ರತಿಕ್ರಿಯೆ’ ಕುರಿತ ನಾಯಕರ ಸಂಭಾಷಣೆ ಕಾರ್ಯಕ್ರಮದ ಮುನ್ನಾದಿನ ಭಾರತವನ್ನು ಗುರಿಯಾಗಿಟ್ಟುಕೊಂಡೇ ಪಾಕಿಸ್ತಾನವು ಆಗಸ್ಟ್ ೫ರ ಬಳಿಕ ಭಯೋತ್ಪಾದಕ ಗುಂಪುಗಳ ಮೇಲಿನ ನಿರ್ಬಂಧಗಳನ್ನು ಸಡಿಲಿಸಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2019: ನವದೆಹಲಿ: ನಿಯತಕಾಲಿಕೆ ಫಾರ್ಚೂನ್ ಇಂಡಿಯಾ ತಯಾರಿಸಿರುವ “2019ನೇ ಸಾಲಿನ ಭಾರತದ 50 ಅತಿ ಪ್ರಭಾವಿ ಮಹಿಳೆಯರ ಪಟ್ಟಿ’ಯಲ್ಲಿ ಬಾಲಿವುಡ್ ನಟಿ ಅನುಷ್ಕಾ ಶರ್ಮ (31) ಸ್ಥಾನ ಪಡೆದರು. ತಮ್ಮ 25ನೇ ವಯಸ್ಸಿನಲ್ಲೇ ಕ್ಲೀನ್ ಸ್ಲೇಟ್ ಫಿಲ್ಮ್ಸ್ ಎಂಬ ಸಂಸ್ಥೆ ಹುಟ್ಟುಹಾಕಿದ್ದ ಅನುಷ್ಕಾ, ಈವರೆಗೆ ಅದರಿಂದ ಮೂರು ಪುಟ್ಟ ಬಜೆಟ್ನ ಚಿತ್ರಗಳನ್ನು ತಯಾರಿಸಿದ್ದಾರೆ. ನೆಟ್ಫ್ಲಿಕ್ಸ್ ಜತೆಗೆ ಒಪ್ಪಂದ ಮಾಡಿಕೊಂಡು ಟೆಲಿ ಚಲನಚಿತ್ರ, ವೆಬ್ಸರಣಿಗಳನ್ನು ನಿರ್ಮಿಸಿದ್ದಾರೆ. “ನಶ್’ ಎಂಬ ತಮ್ಮದೇ ಆದ ಸಿದ್ಧ ಉಡುಪು ತಯಾರಿಕಾ ಸಂಸ್ಥೆಯನ್ನು ಸ್ಥಾಪಿಸಿರುವ ಅವರು, ಮೈಂತ್ರಾ, ಲ್ಯಾವಿ, ನಿವಿಯಾ ಹಾಗೂ ಎಲ್ 18ನಂಥ ಪ್ರತಿಷ್ಠಿತ ಕಂಪನಿಗಳ ಪ್ರಚಾರ ರಾಯಭಾರಿಯೂ ಆಗಿದ್ದಾರೆ. ಹೀಗೆ, ವಾಣಿಜ್ಯ ಕ್ಷೇತ್ರದಲ್ಲೂ ಸಾಧನೆ ಮಾಡಿರುವುದರ ಜತೆಗೆ, ಸಾಂಸ್ಕೃತಿಕ ಪ್ರತಿನಿಧಿಯಂತೆ ಜನರ ಮೇಲೆ ಪ್ರಭಾವ ಬೀರುವ ಸಾಮರ್ಥ್ಯವನ್ನೂ ಗಳಿಸಿರುವ ಕಾರಣಕ್ಕಾಗಿ ಅನುಷ್ಕಾರನ್ನು ಈ ಪಟ್ಟಿಗೆ ಆಯ್ಕೆ ಮಾಡಲಾಗಿದೆ ಎಂದು ಫಾರ್ಚೂನ್ ಇಂಡಿಯಾ ಹೇಳಿತು.
No comments:
Post a Comment