2019: ನವದೆಹಲಿ: ಗಗನಾಭಿವಮುಖವಾಗಿರುವ ಈರುಳ್ಳಿಯ ಬೆಲೆ ಏರಿಕೆಗೆ ಕಡಿವಾಣ ಹಾಕಿ, ಗೃಹಿಣಿಯರ ಕಣ್ಣಿರು ಅಳಿಸುವ ಸಲುವಾಗಿ ಕೇಂದ್ರ ಸರ್ಕಾರವು ತತ್ ಕ್ಷಣದಿಂದ ಜಾರಿಗೆ ಬರುವಂತೆ ಈರುಳ್ಳಿ ರಫ್ತನ್ನು ನಿಷೇಧಿಸಿ 2019 ಸೆಪ್ಟೆಂಬರ್ 29ರ ಭಾನುವಾರ ಆಜ್ಞೆ ಹೊರಡಿಸಿತು.
‘ಈರುಳ್ಳಿ ರಫ್ತು ನೀತಿಯನ್ನು ತಿದ್ದುಪಡಿ ಮಾಡಲಾಗಿದ್ದು, ಮುಂದಿನ
ಆದೇಶದವರೆಗೆ ಈರುಳ್ಳಿ ರಫ್ತನ್ನು ನಿಷೇಧಿಸಲಾಗಿದೆ’ ಎಂದು
ಕೇಂದ್ರ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಪ್ರಕಟಣೆ ತಿಳಿಸಿತು. ಎಲ್ಲ ವಿಧವಾದ ಈರುಳ್ಳಿಯ ರಫ್ತನ್ನೂ ತತ್ ಕ್ಷಣದಿಂದ ಜಾರಿಯಾಗುವಂತೆ ನಿಷೇಧಿಸಲಾಗಿದೆ ಎಂದು ಸರ್ಕಾರದ ಪ್ರಕಟಣೆ ಹೇಳಿತು. ಮೆಟ್ರೋ ನಗರಗಳಲ್ಲಿ ಈರುಳ್ಳಿಯ ಚಿಲ್ಲರೆ ಮಾರಾಟ ದರ ಕಿಲೋ ಗ್ರಾಮ್ಗೆ ೬೦ ರೂಪಾಯಿಗಳಷ್ಟು
ಏರಿತ್ತು. ಕೆಲವಡೆಗಳಲ್ಲಿ ಇದು ಕಿಲೋಗ್ರಾಮಿಗೆ ೮೦ ರೂಪಾಯಿಗಳಿಗೂ ತಲುಪಿತ್ತು.
ದೇಶೀ ಮಾರುಕಟ್ಟೆಯಲ್ಲಿ ಈರುಳ್ಳಿ ಲಭ್ಯತೆಯನ್ನು ಸುಧಾರಿಸುವ ಸಲುವಾಗಿ ಮಾರಾಟಗಾರರ ಮೇಲೆ ದಾಸ್ತಾನು ಮಿತಿಯನ್ನು ಕೂಡಾ ಕೇಂದ್ರ ಸರ್ಕಾರವು ವಿಧಿಸಿತು. ಚಿಲ್ಲರೆ ಮಾರಾಟಗಾರರು ಕೇವಲ ೧೦೦ ಕ್ವಿಂಟಲ್ಗಳಷ್ಟು ಮಾತ್ರ ದಾಸ್ತಾನು ಮಾಡಬಹುದಾಗಿದ್ದು, ಸಗಟ ಮಾರಾಟಗಾರರಿಗೆ ೫೦೦ ಕ್ವಿಂಟಲ್ಗಳವರೆಗೆ ದಾಸ್ತಾನು ಇಟ್ಟುಕೊಳ್ಳಲು ಸರ್ಕಾರ ಅನುಮತಿ ನೀಡಿದೆ ಎಂದು ಗ್ರಾಹಕ ವ್ಯವಹಾರಗಳ ಸಚಿವಾಲಯ ಹೇಳಿತು.ದಾಸ್ತಾನು ಮಿತಿ ವಿಧಿಸಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ಇದ್ದರೂ, ಈ ಬಾರಿ ಕೇಂದ್ರವು
ದೇಶಾದ್ಯಂತ ರಾಜ್ಯಗಳಲ್ಲೂ ನೇರವಾಗಿ ಮಿತಿಗಳನ್ನು ವಿಧಿಸಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2019: ನವದೆಹಲಿ: ಭಾರತೀಯ ಪ್ರಾಕ್ತನ ಇಲಾಖಾ
(ಎಎಸ್‌ಐ) ಸಮೀಕ್ಷೆಯ ವರದಿಯ
ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ ಬಳಿಕ, ಅಯೋಧ್ಯೆಯ ರಾಮಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದ ಪ್ರಕರಣದ
ಮುಸ್ಲಿಮ್ ಕಕ್ಷಿದಾರರರು ಈಗ ಬಾಬರಿ ಮಸೀದಿ
ನಿರ್ಮಿಸಲಾಗಿದ್ದ ಸ್ಥಳದಲ್ಲಿ ಅದಕ್ಕೂ
ಹಿಂದೆ ಹಿಂದೂ ದೇಗುಲವಿದ್ಧ ಸಾಧ್ಯತೆಗಳ ಕುರಿತು ಪುಸ್ತಕಗಳಲ್ಲಿ ಕಾಲಾಕಾಲದ ವರದಿಗಳೆಲ್ಲವೂ ’ಗಾಳಿ ಮಾತುಗಳು’ ಮತ್ತು ’ಕಟ್ಟು ಕಥೆಗಳು’ ಎಂಬುದಾಗಿ ಸುಪ್ರೀಂಕೋರ್ಟಿನಲ್ಲಿ ವಾದ ಮಂಡಿಸಿದರು. ಪ್ರಕರಣದಲ್ಲಿ ಮುಸ್ಲಿಮ್ ಕಕ್ಷಿದಾರರ ಪರವಾಗಿ ವಾದಿಸಿದ ಹಿರಿಯ ವಕೀಲರಾದ ಮೀನಾಕ್ಷಿ ಅರೋರಾ ಅವರು ವಿವಾದಿತ ಸ್ಥಳದಲ್ಲಿ ಹಿಂದೂ ಧಾರ್ಮಿಕ ರಚನೆಯಿತ್ತು ಎಂಬುದನ್ನು ನಂಬಲು ೨೦೦೩ರ ಭಾರತೀಯ ಪುರಾತತ್ವ ಸಮೀಕ್ಷೆಯನ್ನು ನೆಚ್ಚಿಕೊಳ್ಳುವುದು ಎಷ್ಟು ಅಪಾಯಕಾರಿಯೋ ಅಷ್ಟೇ ಅಪಾಯಕಾರಿ ೧೮ ಮತ್ತು ೧೯ನೇ
ಶತಮಾನದ ಪುಸ್ತಕಗಳಲ್ಲಿ ಇರುವ ಇಂತಹ ವಿವರಗಳನ್ನು ನೆಚ್ಚಿಕೊಳ್ಳುವುದು ಎಂದು ಹೇಳಿದರು. ‘ಈ
ಪುಸ್ತಕಗಳು ಮತ್ತು ಗಜೆಟಿಯರ್ಗಳಲ್ಲಿ ದಾಖಲಾಗಿರುವ ವಿಷಯಗಳು ಗ್ರಂಥಕರ್ತರ ವೈಯಕ್ತಿಕ ಅನುಭವಗಳಲ್ಲ, ಬದಲಿಗೆ ಗಾಳಿಮಾತುಗಳನ್ನು ಅಧರಿಸಿದ್ದು’ ಎಂದು
ಅರೋರಾ ಅವರು ಪ್ರಕರಣವನ್ನು ಆಲಿಸುತ್ತಿರುವ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ನೇತೃತ್ವದ ಸಂವಿಧಾನ ಪೀಠದ ಮುಂದೆ ಸಲ್ಲಿಸಿರುವ ಟಿಪ್ಪಣಿ ಹೇಳಿತು. ಈ ಪುಸ್ತಕಗಳು ಅಥವಾ ಗಜೆಟಿಯರ್ಗಳ ಕರ್ತೃಗಳು ಯಾರೂ
ವೈಯಕ್ತಿಕವಾಗಿ ನಿವೇಶನದಲ್ಲಿ ರಾಮಮಂದಿರ ಇದ್ದುದನ್ನು ನೋಡಿಲ್ಲ ಆಥವಾ ಅದನ್ನು ಮುಸ್ಲಿಮರು ಕೆಡವಿ ಹಾಕಿದ್ದನ್ನು ನೋಡಿಲ್ಲ. ಬದಲಿಗೆ, ಅವರ ಬರಹಗಳು, ಹೆಚ್ಚೆಂದರೆ ಸ್ಥಳೀಯ ಜನರಿಂದ ಕೇಳಿದ ಕಟ್ಟುಕಥೆಗಳು ಮತ್ತು ಗಾಳಿಮಾತುಗಳನ್ನು ಆಧರಿಸಿದ್ದು. ಇವು ಯಾವುವೂ ಭಾರತೀಯ ಪುರಾತತ್ವ ಸಮೀಕ್ಷೆಗೆ ಪೂರಕವಾದ ನೇರ ಸಾಕ್ಷ್ಯಾಧರಗಳಾಗುವುದಿಲ್ಲ ಎಂದು ಟಿಪ್ಪಣಿ ಪ್ರತಿಪಾದಿಸಿತು. (ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)
2019: ನವದೆಹಲಿ: ಜಮ್ಮು ಮತ್ತು ಕಾಶ್ಮೀರವು ಔಪಚಾರಿಕವಾಗಿ ಕೇಂದ್ರಾಡಳಿತ ಪ್ರದೇಶವಾಗುವುದಕ್ಕೆ ಒಂದು ವಾರ ಮುಂಚಿತವಾಗಿ ಅಕ್ಟೋಬರ್ ೨೪ರಂದು ಬ್ಲಾಕ್ ಅಭಿವೃದ್ಧಿ ಮಂಡಳಿ ಚುನಾವಣೆಯನ್ನು ನಡೆಸಲಾಗುವುದು ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯ ಚುನಾವಣಾಧಿಕಾರಿ ಶೈಲೇಂದ್ರ ಕುಮಾರ್ ಅವರು 2019 ಸೆಪ್ಟೆಂಬರ್ 29ರ ಭಾನುವಾರ ಇಲ್ಲಿ ಪ್ರಕಟಿಸಿದರು. ಜಮ್ಮು ಮತ್ತು ಕಾಶ್ಮೀರದಾದ್ಯಂತ ಬ್ಲಾಕ್ ಅಭಿವೃದ್ಧಿ ಮಂಡಳಿ ಚುನಾವಣೆಗಳನ್ನು ಅಕ್ಟೋಬರ್ ೨೪ರಂದು ಬೆಳಗ್ಗೆ ೯ ಗಂಟೆಯಿಂದ ಮಧ್ಯಾಹ್ನ
೧ ಗಂಟೆಯವರೆಗೆ ನಡೆಸಲಾಗುವುದು. ಅದೇ ದಿನ ಮಧ್ಯಾಹ್ನ ೩ ಗಂಟೆಗೆ ಮತಗಳ
ಎಣಿಕೆ ನಡೆಯಲಿದೆ. ರಾಜ್ಯದ
೩೧೬ ಬ್ಲಾಕ್ ಗಳ ಪೈಕಿ ೩೧೦ರಲ್ಲಿ
ಚುನಾವಣೆ ನಡೆಯಿದೆ ಎಂದು ಶೈಲೇಂದ್ರ ಕುಮಾರ್ ಹೇಳಿದರು. ಜಮ್ಮು ಮತ್ತು ಕಾಶ್ಮೀರದ ಹಾಲಿ ಭದ್ರತಾ ಪರಿಸ್ಥಿತಿಗೆ ಇದು ಮೊದಲ ಪರೀಕ್ಷೆಯಾಗಲಿದೆ. ಜಮ್ಮು
ಮತ್ತು ಕಾಶ್ಮೀರದಲ್ಲಿ ಯಾವುದೇ ನಿರ್ಬಂಧಗಳೂ ಇಲ್ಲ. ಈ ಬಗ್ಗೆ ವಿರೋಧ
ಪಕ್ಷಗಳು ಅಪಪ್ರಚಾರ ಮಾಡುತ್ತಿವೆ ಎಂಬುದಾಗಿ ಗೃಹ ಸಚಿವ ಅಮಿತ್ ಶಾ ಅವರು ಹೇಳಿದ
ದಿನವೇ ಚುನಾವಣಾ ಅಧಿಕಾರಿಯಿಂದ ಚುನಾವಣಾ ಪ್ರಕಟಣೆ ಹೊರಬಿದ್ದಿತು. ‘ನಿರ್ಬಂಧಗಳು ಎಲ್ಲಿವೆ? ಅವು ಇರುವುದು ನಿಮ್ಮ ಮನಸ್ಸಿನಲ್ಲಿ ಮಾತ್ರ. ಅಲ್ಲಿ ಯಾವುದೇ ನಿರ್ಬಂಧಗಳೂ ಇಲ್ಲ. ನಿರ್ಬಂಧಗಳ ಬಗ್ಗೆ ಅಪಪ್ರಚಾರವನ್ನು ಮಾತ್ರ ಮಾಡಲಾಗುತ್ತಿದೆ’ ಎಂದು
ರಾಷ್ಟೀಯ ಭದ್ರತೆಗೆ ಸಂಬಂಧಿಸಿದ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಾ ಶಾ ಹೇಳಿದ್ದರು.
2019: ನವದೆಹಲಿ: ಭಾರತದ
ಪ್ರಮುಖ ರಂಗಗಳಾದ ಪೆಟ್ರೋಕೆಮಿಕಲ್ಸ್, ಮೂಲಸವಲತ್ತು, ಗಣಿಗಾರಿಕೆ ಮತ್ತಿತರ ಕ್ಷೇತ್ರಗಳಲ್ಲಿ ೧೦,೦೦೦ ಕೋಟಿ
(೧೦೦ ಬಿಲಿಯನ್) ಡಾಲರ್ ಮೊತ್ತವನ್ನು ಹೂಡಿಕೆ ಮಾಡುವ ಬಗ್ಗೆ ವಿಶ್ವದ ಅತಿದೊಡ್ಡ ತೈಲ ರಫ್ತು ರಾಷ್ಟ್ರವಾದ ಸೌದಿ ಅರೇಬಿಯಾ ಪರಿಶೀಲಿಸುತ್ತಿದೆ ಎಂದು ಮಾಧ್ಯಮ ವರದಿಯೊಂದು ತಿಳಿಸಿತು. ಸೌದಿ ರಾಯಭಾರಿ ಡಾ. ಸೌದ್ ಬಿನ್ ಮೊಹಮ್ಮದ್ ಅಲ್ ಸತಿ ಅವರು ಭಾರತವು ದೊಡ್ಡ ಮೊತ್ತದ ಹೂಡಿಕೆಗೆ ಆಕರ್ಷಕವಾಗಿದೆ, ತಮ್ಮ ರಾಷ್ಟ್ರವು ನವದೆಹಲಿ ಜೊತೆಗೆ ತೈಲ, ಅನಿಲ ಮತ್ತು ಗಣಿಗಾರಿಕೆ ಕ್ಷೇತ್ರಗಳಲ್ಲಿ ದೀರ್ಘಾವಧಿಯ ಪಾಲುದಾರಿಕೆಗಳನ್ನು ಮಾಡಿಕೊಳ್ಳುವ ಬಗ್ಗೆ ದೃಷ್ಟಿ ಹರಿಸಿದೆ ಎಂದು ಹೇಳಿದರು. ‘ಸೌದಿ ಅರೇಬಿಯಾವು ಭಾರತದ ಇಂಧನ, ಸಂಸ್ಕರಣೆ, ಪೆಟ್ರೋಕೆಮಿಕಲ್ಸ್, ಮೂಲ ಸವಲತ್ತು, ಕೃಷಿ, ಖನಿಜಗಳು ಮತ್ತು ಗಣಿಗಾರಿಕೆ ಕ್ಷೇತ್ರಗಳಲ್ಲಿ ೧೦೦ ಬಿಲಿಯನ್ ಡಾಲರ್ ಮೌಲ್ಯದ ಹೂಡಿಕೆಗಳನ್ನು ಮಾಡುವ ಬಗ್ಗೆ ಪರಿಶೀಲಿಸುತ್ತಿದೆ’ ಎಂದು
ಅಲ್ ಸತಿ ಅವರು ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು. ಸೌದಿ ಅರೇಬಿಯಾದ ಅತಿದೊಡ್ಡ
ತೈಲ ದೈತ್ಯ ಅರ್ಮ್ಯಾಕೊ ಕಂಪೆನಿಯು ಮುಖೇಶ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್ ಜೊತೆಗೆ ಒಪ್ಪಂದ ಮಾಡಿಕೊಳ್ಳುವ ಪ್ರಸ್ತಾಪದ ಬಗ್ಗೆ ಉಲ್ಲೇಖಿಸಿದ ರಾಯಭಾರಿ, ಈ ಒಪ್ಪಂದವು ಉಭಯ
ರಾಷ್ಟ್ರಗಳ ನಡುವೆ ಇಂಧನ ಬಾಂಧವ್ಯವು ಬೆಳೆಯುತ್ತಿರುವ ಆಯಕಟ್ಟಿನ ಸ್ವರೂಪವನ್ನು ಪ್ರತಿಫಲಿಸಿದೆ ಎಂದು ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
ಇಂದಿನ ಇತಿಹಾಸ History Today ಸೆಪ್ಟೆಂಬರ್ 29 (2018+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment