ನಾನು ಮೆಚ್ಚಿದ ವಾಟ್ಸಪ್

Wednesday, September 18, 2019

ಇಂದಿನ ಇತಿಹಾಸ History Today ಸೆಪ್ಟೆಂಬರ್ 18

ಇಂದಿನ ಇತಿಹಾಸ  History Today  ಸೆಪ್ಟೆಂಬರ್ 18

2019: ನವದೆಹಲಿ:  ಅಕ್ಟೋಬರ್ ೧೮ರ ಒಳಗಾಗಿ ಎಲ್ಲ ವಿಚಾರಣೆಗಳನ್ನೂ ಮುಕ್ತಾಯಗೊಳಿಸಲು ಗಡುವು
ನಿಗದಿ ಪಡಿಸುವುದರ
 ಜೊತೆಗೆ ಸಂಧಾನ ಪ್ರಕ್ರಿಯೆಗೂ ಸುಪ್ರೀಂಕೋರ್ಟ್  ಈದಿನ ಅನುಮತಿ ನೀಡುವುದರೊಂದಿಗೆದ ದಶಕಗಳಷ್ಟು ಹಳೆಯದಾದ ಅಯೋಧ್ಯೆಯ ರಾಮಜನ್ಮಭೂಮಿ- ಬಾಬರಿ ಮಸೀದಿ ಭೂ ವಿವಾದ ಪ್ರಕರಣ ತ್ವರಿತವಾಗಿ ಬಗೆಹರಿಯುವ ಸಾಧ್ಯತೆ ಉಜ್ಜಲಗೊಂಡಿತು. ಅಕ್ಟೋಬರ್ ೧೮ರೊಳಗೆ ಎಲ್ಲಾ ವಿಚಾರಣೆಗಳನ್ನು ಮುಕ್ತಾಯಗೊಳಿಸಲು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೋಯಿ ಅವರು ಗಡುವು ನಿಗದಿ ಪಡಿಸಿ, ಎಲ್ಲರೂ ಸಹರಿಸುವಂತೆ ಕೋರಿದರು. ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯಿ ಅವರು ನವೆಂಬರ್ ೧೭ರಂದು ನಿವೃತ್ತರಾಗಲಿದ್ದು, ಅವರ ಅಧಿಕಾರಾವಧಿ ಇನ್ನು ಎರಡು ತಿಂಗಳಷ್ಟೇ ಬಾಕಿ ಉಳಿದಿದೆ. ಅಷ್ಟರೊಳಗೆ ಅವರು ಈ ಪ್ರಕರಣವನ್ನು ಇತ್ಯರ್ಥಪಡಿಸಲು ಬಯಸಿದಂತಿದೆ. ಅದಕ್ಕಾಗಿ ನ್ಯಾಯಪೀಠವು ನಿಗದಿಗಿಂತ ಹೆಚ್ಚು ಸಮಯ ಹಾಗೂ ರಜೆಯ ದಿನಗಳಲ್ಲೂ ಕೆಲಸ ಮಾಡಲಿದೆ ಎಂದು ಅವರು ತಿಳಿಸಿದರು. ಅಗತ್ಯ ಬಿದ್ದಲ್ಲಿ ಪ್ರತಿದಿನ ಒಂದು ಗಂಟೆ ಹೆಚ್ಚು ಅಥವಾ ಶನಿವಾರ ಹೆಚ್ಚುವರಿ ಅವಧಿಯ ವಿಚಾರಣೆಗೆ ಪೀಠ ಸಿದ್ಧ ಎಂದು ಅವರು ಹೇಳಿದರು.  ಮುಸ್ಲಿಮ್ ಕಕ್ಷಿದಾರರು ಸೆಪ್ಟೆಂಬರ್ ೨೮ರೊಳಗೆ ತಮ್ಮ ವಾದ ಮಂಡನೆ ಮುಗಿಸುವುದಾಗಿ ತಿಳಿಸಿದ್ದಾರೆ. ಶ್ರೀರಾಮ ಲಲ್ಲಾ ಪರ ವಕೀಲರು ಎರಡು ದಿನದಲ್ಲಿ ಉತ್ತರರೂಪದಲ್ಲಿ ಪ್ರತಿವಾದ ಮಂಡನೆ ಮುಗಿಸಲು ಒಪ್ಪಿಕೊಂಡಿದ್ದಾರೆ. ಆ ಬಳಿಕ ಇನ್ನೂ ಮೂರು ದಿನಗಳ ಕಾಲ ಉಳಿದೆಲ್ಲಾ ವಾದ ಪ್ರತಿವಾದಗಳನ್ನು ನಡೆಸಲು ಯೋಜಿಸಲಾಗಿದೆ.  ಇದೇ ವೇಳೆಗೆ, ಪರ್‍ಯಾಯವಾಗಿ ಸಂಧಾನ ಮಾತುಕತೆ ಮೂಲಕ ವಿವಾದಕ್ಕೆ ಪರಿಹಾರ ಕಂಡುಕೊಳ್ಳಲು ಅವಕಾಶ ನೀಡುವಂತೆ ಸುಪ್ರೀಂಕೋರ್ಟ್ ನೇಮಿಸಿದ್ದ ಸಂಧಾನ ಸಮಿತಿ ಮಾಡಿಕೊಂಡ ಮನವಿಗೂ ಸುಪ್ರೀಂಕೋರ್ಟ್ ಪೂರಕವಾಗಿ ಸ್ಪಂದಿಸಿದೆ. “ಈ ವ್ಯಾಜ್ಯವನ್ನು ನಿಮ್ಮಲ್ಲೇ ಪರಿಹರಿಸಿಕೊಳ್ಳಲು ಇಚ್ಛಿಸಿದರೆ ಹಾಗೇ ಮಾಡಿ. ನಿಮ್ಮ ಪರಿಹಾರವನ್ನು ನ್ಯಾಯಾಲಯದ ಮುಂದೆ ಸಲ್ಲಿಸಿ” ಎಂದು ಸುಪ್ರೀಂ ನ್ಯಾಯಪೀಠ ಸೂಚಿಸಿತು.  (ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ: ದಸರಾ ಮತ್ತು ದೀಪಾವಳಿ ಹಬ್ಬಗಳಿಗಿಂತ ಸಾಕಷ್ಟು ಮುಂಚಿತವಾಗಿಯೇ ರೈಲ್ವೇ
ನೌಕರರಿಗೆ ೭೮ ದಿನಗಳ ವೇತನವನ್ನು ’ಬೋನಸ್’ ಆಗಿ ನೀಡುವ ಹಾಗೂ ಇ-ಸಿಗರೇಟು ಮತ್ತು ಇ-ಹುಕ್ಕಾಗಳನ್ನು ನಿಷೇಧಿಸುವ ಮಹತ್ವದ ತೀರ್ಮಾನಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಈದಿನ  ಕೈಗೊಂಡಿತು.  ಸಂಪುಟ ಸಭೆಯ ಬಳಿಕ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಅವರು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಕಟಿಸಿದರು.  ಇ-ಸಿಗರೇಟುಗಳನ್ನು ನಿಷೇಧಿಸುವ ನಿರ್ಧಾರಕ್ಕೆ ಸಂಪುಟ ಸಭೆಯು ಅನುಮೋದನೆ ನೀಡಿದೆ. ಅಂದರೆ ಇ-ಸಿಗರೇಟುಗಳ ಉತ್ಪಾದನೆ, ತಯಾರಿಕೆ, ಅಮದು, ರಫ್ತು, ಸಾಗಣೆ, ಮಾರಾಟ, ವಿತರಣೆ, ದಾಸ್ತಾನು ಮತ್ತು ಇ-ಸಿಗರೇಟಿಗೆ ಸಂಬಂಧಿಸಿದಂತೆ ಜಾಹೀರಾತು ನೀಡುವುದನ್ನು ನಿಷೇಧಿಸಲಾಗಿದೆ ಎಂದು ಸೀತಾರಾಮನ್ ಹೇಳಿದರು. ಎಲೆಕ್ಟ್ರಾನಿಕ್ ನಿಕೋಟಿನ್ ವಿತರಣೆ ವ್ಯವಸ್ಥೆಯನ್ನು (ಎಲೆಕ್ಟ್ರಾನಿಕ್ ನಿಕೋಟಿನ್ ಡೆಲಿವರಿ ಸಿಸ್ಟಮ್ಸ್ - ಎಂಡ್ಸ್) ನಿಷೇಧಿಸುವಂತೆ ಹಲವಾರು ಕಡೆಗಳಿಂದ ಆಗ್ರಹಗಳು ಬಂದ ಹಿನ್ನೆಲೆಯಲ್ಲಿ ಸಂಪುಟವು ಈ ನಿರ್ಧಾರ ಕೈಗೊಂಡಿತು. ಎಲೆಕ್ಟ್ರಾನಿಕ್ ನಿಕೋಟಿನ್ ವಿತರಣೆ ವ್ಯವಸ್ಥೆಯಲ್ಲಿ ಇ-ಸಿಗರೇಟ್, ಹೀಟ್-ನಾಟ್ ಬರ್ನ್ ಸಾಧನಗಳು, ವೇಪ್, ಇ-ಶೀಷ, ಇ-ನಿಕೋಟಿನ್ ಫ್ಲೇವರ್‍ಡ್ ಹುಕ್ಕಾ ಮತ್ತು ಇಂತಹ ಇತರ ಸಾಧನಗಳು ಸೇರಿವೆ.
(ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)

2019: ನವದೆಹಲಿ:  ಅಮೆರಿಕ ಪ್ರವಾಸಕ್ಕೆ ತನ್ನ ವಾಯುಪ್ರದೇಶವನ್ನು ಬಳಸಿಕೊಳ್ಳಲು ಭಾರತದ ಪ್ರಧಾನಿ
ನರೇಂದ್ರ ಮೋದಿ ಅವರಿಗೆ ಅವಕಾಶ ನೀಡುವುದಿಲ್ಲ ಎಂದು ಈದಿನ ಪ್ರಕಟಿಸಿತು. ಪಾಕಿಸ್ತಾನವು ಮೋದಿ ಅವರಿಗೆ ಪಾಕಿಸ್ತಾನದ ವಾಯುಮಾರ್ಗ ಬಳಸಿಕೊಳ್ಳಲು ಅವಕಾಶ ನಿರಾಕರಿಸಿದೆ ಎದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಶಿ    ಖಚಿತ ಪಡಿಸಿದರು. ’ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಮಾನಯಾನಕ್ಕೆ ನಮ್ಮ ಆಗಸವನ್ನು ಬಳಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂಬುದಾಗಿ ನಾವು ಭಾರತೀಯ ಹೈಕಮೀಷನ್‌ಗೆ ತಿಳಿಸಿದ್ದೇವೆ’ ಎಂದು ಶಾ ಮೆಹಮೂದ್ ಖುರೇಶಿ ಅವರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಪಾಕಿಸ್ತಾನದ ಆಕಾಶವನ್ನು ಮೋದಿ ಅವರ ವಿಮಾನಪಯಣಕ್ಕೆ ಬಳಸಲು ಅವಕಾಶ ನೀಡುವಂತೆ ಭಾರತವು ಪಾಕಿಸ್ತಾನಿ ಅಧಿಕಾರಿಗಳಿಗೆ ಔಪಚಾರಿಕ ಮನವಿ ಮಾಡಿರುವುದಾಗಿ ಪಾಕಿಸ್ತಾನಿ ಮಾಧ್ಯಮಗಳು  ಇದಕ್ಕೆ ಮುನ್ನ  ವರದಿ ಮಾಡಿದ್ದವು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

2019: ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈದಿನ  ಪ್ರಧಾನಿಯವರನ್ನು ಭೇಟಿ ಮಾಡಿ ಪಶ್ಚಿಮ ಬಂಗಾಳಕ್ಕೆ ಬಾಂಗ್ಲಾ ಮರುನಾಮಕರಣ ಸೇರಿದಂತೆ ವಿವಿಧ ವಿಷಯಗಳನ್ನು ಚರ್ಚಿಸಿದರು. ಮೋದಿ ಜತೆ ಮಾತುಕತೆ ಸಾಧ್ಯವೇ ಇಲ್ಲ ಎನ್ನುತ್ತಿದ್ದ ಮಮತಾ ಬ್ಯಾನರ್ಜಿ ಈದಿನ ಮೋದಿ ಜತೆ ಮಾತುಕತೆ ನಡೆಸಿದ ಬಳಿಕ, ಮಾತುಕತೆ ಫಲಪ್ರದವಾಗಿದ್ದು, ಪ್ರಧಾನಿಯವರು ಬಾಂಗ್ಲಾ ಮರುನಾಮಕರಣ ಬಗ್ಗೆ ಸ್ಪಂದಿಸಿದ್ದಾರೆ ಎಂದು ಪತ್ರಕರ್ತರಿಗೆ ತಿಳಿಸಿದರು. ನವದೆಹಲಿಗೆ ಆಗಮಿಸಿದ ಮಮತಾ ಬ್ಯಾನರ್ಜಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ, ಬಂಗಾಲಿ ಸಿಹಿ ತಿಂಡಿಗಳು, ಕುರ್ತಾ ಹಾಗೂ ಹೂ ಗುಚ್ಛವನ್ನು ನೀಡಿದರು. ಪಶ್ಚಿಮ ಬಂಗಾಳ ಹೆಸರನ್ನು ಬಾಂಗ್ಲಾ ಎಂದು ಮರು ನಾಮಕರಣ ಮಾಡುವ ವಿಷಯವನ್ನು  ಪ್ರಧಾನಮಂತ್ರಿ ಮೋದಿ ಮುಂದೆ ಪ್ರಮುಖವಾಗಿ ಪ್ರಸ್ತಾಪಿಸಿದರು. ಈಗಾಗಲೇ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ನಿರ್ಣಯ ಕೂಡ ಹೊರಡಿಸಲಾಗಿದೆ. ಕುರಿತು ಕ್ರಮ ಕೈಗೊಳ್ಳಬೇಕೆಂದು ಮೋದಿಗೆ ಮಮತಾ ಮನವಿ ಮಾಡಿದರು.  ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ, ಇದೊಂದು ಸೌಹಾರ್ದಯುತ ಭೇಟಿಯಾಗಿತ್ತು. ಹಲವಾರು ವಿಷಯಗಳ ಕುರಿತು ಮೋದಿ ಜತೆ ಚರ್ಚೆ ನಡೆಸಲಾಯಿತು ಎಂದು ಹೇಳಿದರು. ದುರ್ಗಾ ಪೂಜೆ ನಂತರ ದೇಶದ ಎರಡನೇ ಅತಿ ದೊಡ್ಡ ಕಲ್ಲಿದ್ದಲು ಗಣಿ ಉದ್ಘಾಟನೆಗೆ ಆಗಮಿಸಬೇಕು ಎಂದು ಆಹ್ವಾನ ನೀಡಲಾಯಿತು ಎಂದು ಮಮತಾ ಬ್ಯಾನರ್ಜಿ ತಿಳಿಸಿದರು. ಭಾರಿ ಚರ್ಚೆಗೆ ಗ್ರಾಸವಾಗಿರುವ ರಾಷ್ಟ್ರೀಯ ನಾಗರಿಕ ನೋಂದಣಿ ವಿಷಯವಾಗಿ ಯಾವುದೇ ಚರ್ಚೆ ನಡೆದಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದರು. 

ಇಂದಿನ ಇತಿಹಾಸ History Today  ಸೆಪ್ಟೆಂಬರ್ 18 (2018+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

-ಸಂಗ್ರಹ: ನೆತ್ರಕೆರೆ ಉದಯಶಂಕರ

No comments:

Post a Comment