2019: ನವದೆಹಲಿ: ಭಾರತೀಯ ಚಿತ್ರರಂಗಕ್ಕೆ ಸಲ್ಲಿಸಿದ ಜೀವಮಾನದ ಸಾಧನೆಗಾಗಿ ಕೇಂದ್ರ ಸರ್ಕಾರವು ಕೊಡುವ ‘ದಾದಾ ಸಾಹೇಬ್ ಫಾಲ್ಕೆ’ ಪ್ರಶಸ್ತಿಗೆ ಈ ಬಾರಿ ಬಾಲಿವುಡ್ ಚಿತ್ರರಂಗದ ಬಿಗ್ ಬಿ ಅಮಿತಾಭ್ ಬಚ್ಚನ್ ಆಯ್ಕೆಯಾದರು. ಬಚ್ಚನ್ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವ ಬಗ್ಗೆ 2019 ಸೆಪ್ಟೆಂಬರ್ 24ರ ಮಂಗಳವಾರ ಟ್ವೀಟ್ ಮಾಡಿದ ಮಾಹಿತಿ ಮತ್ತು ಪ್ರಸಾರ ಖಾತೆ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, "ಎರಡು ತಲೆಮಾರುಗಳನ್ನು ರಂಜಿಸಿದ ಮತ್ತು ಸ್ಫೂರ್ತಿಯ ಸೆಲೆ, ಬೆಳ್ಳಿಪರದೆಯ ದಂತಕಥೆ ಅಮಿತಾಭ್
ಬಚ್ಚನ್ ಅವರು
ಅವಿರೋಧವಾಗಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಇಡೀ ದೇಶ ಮತ್ತು ಅಂತರಾಷ್ಟ್ರೀಯ ಸಮುದಾಯಕ್ಕೆ ಇದು ಖುಷಿ ಕೊಡುವ ಸಂಗತಿ. ಅಮಿತಾಭ್ ಜಿ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು" ಎಂದು ತಿಳಿಸಿದರು. ಸಿನಿಮಾ ಕ್ಷೇತ್ರದಲ್ಲಿ ಜೀವಮಾನದ ಸಾಧನೆಗಾಗಿ ಭಾರತೀಯ ಸಿನಿಮಾ ರಂಗದ ಪಿತಾಮಹ ದಾದಾಸಾಹೇಬ್ ಫಾಲ್ಕೆ ಹೆಸರಲ್ಲಿ ಭಾರತ ಸರ್ಕಾರವು 1969ರಿಂದ ಪ್ರಶಸ್ತಿ ನೀಡುತ್ತಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಚಲನಚಿತ್ರೋತ್ಸವಗಳ ನಿರ್ದೇಶನಾಲಯದಿಂದ ಆಯೋಜಿಸಲಾಗುವ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಸಮಾರಂಭದಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತದೆ.ಪ್ರಶಸ್ತಿಯು ಸ್ವರ್ಣ ಕಮಲ ಪದಕ, ಶಾಲು ಹಾಗೂ 10 ಲಕ್ಷ ರೂ.ನಗದು ಬಹುಮಾನವನ್ನು ಒಳಗೊಂಡಿರುತ್ತದೆ. ನಟಿ ದೇವಿಕಾ ರಾಣಿ ಅವರಿಗೆ 1969ರಲ್ಲಿ 17ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಮೊತ್ತ ಮೊದಲ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.(ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2019: ನ್ಯೂಯಾರ್ಕ್: ಕಾಶ್ಮೀರ ವಿವಾದ ಇತ್ಯರ್ಥಕ್ಕಾಗಿ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಸಂಧಾನಕಾರನಾಗಲು ತಾನು ಸಿದ್ಧ ಎಂಬುದಾಗಿ
2019 ಸೆಪ್ಟೆಂಬರ್ 24ರಂದು ೨೪ ಗಂಟೆಗಳ ಒಳಗಾಗಿ ಎರಡು ಬಾರಿ ಹೇಳಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ’ಆದರೆ ಉಭಯ ರಾಷ್ಟ್ರಗಳು ಒಪ್ಪಿ
ಬಯಸಿದರೆ ಮಾತ್ರ’ ಎಂಬ ಶರತ್ತು ವಿಧಿಸಿ ಬುದ್ದಿವಂತಿಕೆ ಮೆರೆದರು. ಇದೇ ವೇಳೆಗೆ ಪಾಕಿಸ್ತಾನಕ್ಕೆ ಬೇಕಾದ ಮಾತುಗಳನ್ನು ತನ್ನ ಬಾಯಿಯಿಂದ ಉದುರಿಸಲು ಯತ್ನಿಸಿದ ಪಾಕ್ ಪತ್ರಕರ್ತನಿಗೆ ಅವರು ತಿರುಗೇಟು ಕೊಟ್ಟರು.ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಜೊತೆಗಿನ ಜಂಟಿ ಪತ್ರಿಕಾಗೋಷ್ಠಿಯ ವೇಳೆಯಲ್ಲಿ ಜಮ್ಮು -ಕಾಶ್ಮೀರ ವಿಚಾರದಲ್ಲಿ ಮಧ್ಯಸ್ಥಿಕೆಯ ಪ್ರಸ್ತಾಪ ಮಾಡಿದ್ದ ಡೊನಾಲ್ಡ್ ಟ್ರಂಪ್ ಅವರು ವಿಶ್ವಸಂಸ್ಥೆ ಮಹಾಸಭೆಯಲ್ಲಿನ ತಮ್ಮ ಭಾಷಣಕ್ಕೆ ಮುನ್ನ ಪುನಃ ಉಭಯ ದೇಶಗಳು ಬಯಸಿದರೆ ತಾನು ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಲು ಸಿದ್ದ ಎಂದು ಹೇಳಿದರು. ವಿಶ್ವಸಂಸ್ಥೆ ಮಹಾ ಅಧಿವೇಶನದ ಬಳಿಕ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಜೊತೆಗೆ ಮಾತುಕತೆ ನಡೆಸಿದ
ಟ್ರಂಪ್ ಭಯೋತ್ಪಾದನೆಗೆ ತಿರುಗೇಟು ಕೊಡಲು ಮೋದಿ ಅವರಿಗೆ ಚೆನ್ನಾಗಿ ಗೊತ್ತಿದೆ ಎಂದು ಶ್ಲಾಘಿಸಿದರು.. ೨೪ ಗಂಟೆಗಳಲ್ಲಿ ಎರಡನೇ ಬಾರಿ ಕಾಶ್ಮೀರ ವಿಚಾರದಲ್ಲಿ ಮಧ್ಯಸ್ಥಿಕೆಯ ಪ್ರಸ್ತಾಪ ಮಾಡುವುದರೊಂದಿಗೆ ಟ್ರಂಪ್ ಅವರು ಪ್ರಸ್ತುತ ವರ್ಷದಲ್ಲಿ ಒಟ್ಟು ನಾಲ್ಕು ಬಾರಿ ಈ ಪ್ರಸ್ತಾಪ ಮಾಡಿದಂತಾಯಿತು.
(ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2019: ನವದೆಹಲಿ: ತಂತ್ರಜ್ಞಾನವು ಅಪಾಯಕಾರಿ ತಿರುವನ್ನು ಪಡೆದುಕೊಂಡಿದೆ ಎಂಬುದಾಗಿ
2019 ಸೆಪ್ಟೆಂಬರ್ 24ರ ಮಂಗಳವಾರ ಅಭಿಪ್ರಾಯಪಟ್ಟ ಸುಪ್ರೀಂಕೋರ್ಟ್, ರಾಷ್ಟ್ರದಲ್ಲಿ ಸಾಮಾಜಿಕ ಮಾಧ್ಯಮದ ದುರುಪಯೋಗವನ್ನು ನಿಗ್ರಹಿಸಲು ಮಾರ್ಗದರ್ಶಿ ಸೂತ್ರಗಳನ್ನು ರಚಿಸಲು ಬೇಕಾದ ಕಾಲಾವಕಾಶದ ಬಗ್ಗೆ ಮೂರು ವಾರಗಳ ಒಳಗಾಗಿ ತನಗೆ ತಿಳಿಸುವಂತೆ ನಿರ್ದೇಶಿಸಿತು.ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರ ಮತ್ತು ಅನಿರುದ್ಧ ಬೋಸ್ ಅವರನ್ನು ಒಳಗೊಂಡ ಪೀಠವು ಕೆಲವು ಸಾಮಾಜಿಕ ಮಾಧ್ಯಮ ವೇದಿಕೆಗಳು ಸಂದೇಶ ಅಥವಾ ಅಂತರ್ಜಾಲ ಮಾಹಿತಿಯ ಸೃಷ್ಟಿಕರ್ತರನ್ನು ಪತ್ತೆಹಚ್ಚಲು ವಿಫಲವಾಗಿರುವ ಬಗ್ಗೆ ತೀವ್ರ ಕಳವಳ ವ್ಯಕ್ತ ಪಡಿಸಿ, ಈಗ ಸರ್ಕಾರ ಮಧ್ಯಪ್ರವೇಶ ಮಾಡಲೇಬೇಕು ಎಂದು ಹೇಳಿತು.ಈ ವೈಜ್ಞಾನಿಕ ವಿಷಯದ ಬಗ್ಗೆ ನಿರ್ಧರಿಸಿಲು ಸುಪ್ರೀಂಕೋರ್ಟ್ ಅಥವಾ ಹೈಕೋರ್ಟ್ ಸಮರ್ಥವಲ್ಲ. ಇಂತಹ ವಿಷಯಗಳ ಬಗ್ಗೆ ವ್ಯವಹರಿಸಲು ಸೂಕ್ತ ಮಾರ್ಗದರ್ಶಿ ಸೂತ್ರಗಳನ್ನು ರಚಿಸುವುದು ಸರ್ಕಾರದ ಕೆಲಸ ಎಂದು ಹೇಳಿತು.ತಾಂತ್ರಿಕ ಪ್ರಗತಿಯಲ್ಲಿನ ಕುಂದುಕೊರತೆಗಳ ಬಗ್ಗೆ ಗಂಭೀರ ಕಳವಳ ವ್ಯಕ್ತ ಪಡಿಸಿದ ಕೋರ್ಟ್, ‘ತಂತ್ರಜ್ಞಾನ ಬೆಳೆಯುತ್ತಿರುವ ರೀತಿ ಅಪಾಯಕಾರಿ. ಸಾಮಾಜಿಕ ಮಾಧ್ಯಮಗಳಿಗಾಗಿ ಮಾರ್ಗದರ್ಶಿ ಸೂತ್ರ ರಚಿಸುವ ಸಂಬಂಧ ಸರ್ಕಾರ ವಸ್ತುಸ್ಥಿತಿ ವರದಿಯನ್ನು ನೀಡಬೇಕು ಎಂದು ಹೇಳಿತು.(ವಿವರಗಳಿಗೆಇಲ್ಲಿ ಕ್ಲಿಕ್ಕಿಸಿ)
2019: ನವದೆಹಲಿ: ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್ (ಎಂಎಸ್ಸಿಬಿ) ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ವಹಿವಾಟು ನಡೆಸಿರುವ ಆರೋಪದ ಮೇಲೆ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಅವರ ಸೋದರಳಿಯ ಹಾಗೂ ಮಾಜಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ವಿರುದ್ಧ ಜಾರಿ ನಿರ್ದೇಶನಾಲಯವು
2019 ಸೆಪ್ಟೆಂಬರ್ 24ರ
ಮಂಗಳವಾರ ಪ್ರಕರಣ ದಾಖಲಿಸಿತು.ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಇನ್ನು ಒಂದು ತಿಂಗಳು ಬಾಕಿ ಇರುವಂತೆ ಈ ವಿದ್ಯಮಾನ ಘಟಿಸಿತು.
ಬಾಂಬೆ ಹೈಕೋರ್ಟ್ ನಿರ್ದೇಶನದ ಮೇರೆಗೆ ಎಂಎಸ್ಸಿಬಿ ಹಗರಣ ಪ್ರಕರಣ ಸಂಬಂಧ ಕಳೆದ ತಿಂಗಳು ಮುಂಬೈ ಪೊಲೀಸರು ಅಜಿತ್ ಪವಾರ್ ಮತ್ತು ಇತರರ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.ರೈತರು ಮತ್ತು ಕಾರ್ಯಕರ್ತರು ಪಕ್ಷದ ನಾಯಕ ಜಯಂತ್ ಪಾಟೀಲ್ ಮತ್ತು ರಾಜ್ಯದ ೩೪ ಜಿಲ್ಲೆಗಳ ಸೂಪರ್ ಸೀಡ್ ಬ್ಯಾಂಕ್ ಅಧಿಕಾರಿಗಳು ಸೇರಿದಂತೆ ಹಲವರ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.೨೦೦೭ ರಿಂದ ೨೦೧೧ರ ನಡುವೆ ನಡೆದ ಎಂಎಸ್ಸಿಬಿ ಹಗರಣದಿಂದ ಸುಮಾರು ಒಂದು ಸಾವಿರ ಕೋಟಿ ನಷ್ಟವಾಗಿದೆ ಎಂದು ಆರೋಪಿಸಲಾಗಿತ್ತು.
(ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)
2019: ನವದೆಹಲಿ: ಪಾಕಿಸ್ತಾನ ಭಾರತ ಗಡಿ ಪ್ರದೇಶದಲ್ಲಿ
2019 ಸೆಪ್ಟೆಂಬರ್ 24ರ ಮಂಗಳವಾರ ಸಂಜೆ ೪.೩೧ರ ಸುಮಾರಿಗೆ ರಿಕ್ಟರ್ ಮಾಪಕದಲ್ಲಿ ೬.೩ ತೀವ್ರತೆಯ ಭೂಕಂಪ ಸಂಭವಿಸಿದ ಪರಿಣಾಮವಾಗಿ ಪಾಕ್ ಆಕ್ರಮಿತ ಕಾಶ್ಮೀರ ಸೇರಿದಂತೆ ಪಾಕಿಸ್ತಾನದಲ್ಲಿ ೧೯ ಮಂದಿ ಸಾವನ್ನಪ್ಪಿ, ೩೦೦ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಪಾಕ್ ಆಕ್ರಮಿಕ ಕಾಶ್ಮೀರದಿಂದ ಬಂದ ವರದಿ ತಿಳಿಸಿದೆ.ಸುಮಾರು ೮-೧೦ ಸೆಕೆಂಡ್ ಕಾಲದ ಭೂಕಂಪದ ಪರಿಣಾಮವಾಗಿ ಭಾರತದ ರಾಜಧಾನಿ ದೆಹಲಿ, ರಾಷ್ಟ್ರೀಯ ರಾಜಧಾನಿ ಪ್ರದೇಶ (ನ್ಯಾಷನಲ್ ಕ್ಯಾಪಿಟಲ್ ರೀಜನ್- ಎನ್ಸಿಆರ್) ಪಂಜಾಬ್, ಹರಿಯಾಣದಲ್ಲಿ ಭೂಮಿ ಕಂಪಿಸಿತು ಎಂದು ಭೂಕಂಪಶಾಸ್ತ್ರ ಇಲಾಖೆ ಅಧಿಕಾರಿಗಳು ಹೇಳಿದರು.ಇಸ್ಲಾಮಾಬಾದ್, ಪೇಶಾವರ, ರಾವಲ್ಪಿಂಡಿ ಮತ್ತು ಲಾಹೋರ್ ಸೇರಿದಂತೆ ಪಾಕಿಸ್ತಾನದ ಪ್ರಮುಖ ನಗರಗಳಲ್ಲಿ ಭೂಕಂಪ ಸಂಭವಿಸಿತು ಎಂದು ಪಾಕಿಸ್ತಾನದ ’ಡಾನ್ ನ್ಯೂಸ್’ ವರದಿ ಮಾಡಿತು.ಭೂಕಂಪದ ಪರಿಣಾಮವಾಗಿ ಭಾರತದಲ್ಲಿ ಸಾವು ನೋವು ಸಂಭವಿಸಿರುವ ಬಗ್ಗೆ ತತ್ ಕ್ಷಣಕ್ಕೆ ಯಾವುದೇ ವರದಿಗಳು ಬಂದಿಲ್ಲ. ಭೂಕಂಪನದಿಂದಾಗಿ ಭೂಮಿ ೪೦ ಕಿಮಿ ಆಳದವರೆಗೆ ಭೂಮಿ ಕಂಪಿಸಿತು. ಪ್ರಾಥಮಿಕ ವರದಿಗಳ ಪ್ರಕಾರ ಇಸ್ಲಾಮಾಬಾದಿನಲ್ಲಿ ಭೂಕಂಪನಕ್ಕೆ ಕಟ್ಟಡವೊಂದು ಕುಸಿದು ಬಿದ್ದು ಕನಿಷ್ಠ ೧೯ ಮಂದಿ ಮೃತರಾಗಿ ೩೦೦ಕ್ಕೂ ಹೆಚ್ಚು ಮಂದಿ ಗಾಯಗೊಂಡರು ಎಂದು ವರದಿ ತಿಳಿಸಿದೆ.(ವಿವರಗಳಿಗೆಇಲ್ಲಿ ಕ್ಲಿಕ್ಕಿಸಿ)
ಇಂದಿನ ಇತಿಹಾಸ History Today ಸೆಪ್ಟೆಂಬರ್ 24
(2018+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ಕಿಸಿ)
No comments:
Post a Comment