Wednesday, September 25, 2019

ಇಂದಿನ ಇತಿಹಾಸ History Today ಸೆಪ್ಟೆಂಬರ್ 25

2019: ನವದೆಹಲಿ : ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ರಾಷ್ಟ್ರೀಯ ರಕ್ಷಣಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಗುರಿಯಾಗಿಸಿಕೊಂಡು ಉಗ್ರರು ಹತ್ಯೆ ಸಂಚು ರೂಪಿಸಿದ್ದಾರೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ ಎಂದು ಗೃಹ ಇಲಾಖೆ 2019 ಸೆಪ್ಟೆಂಬರ್ 25ರ ಬುಧವಾರ ಮಾಹಿತಿ ನೀಡಿತು. ಸಚಿವಾಲಯದ ಮಾಹಿತಿ ಮೇರೆಗೆ ದೇಶದ ಎಲ್ಲಾ ರಾಜ್ಯಗಳಲ್ಲಿಯೂ ಕಟ್ಟೆಚ್ಚರ ಘೋಷಣೆ ಮಾಡಲಾಯಿತು. ಭಾರತೀಯ ವಾಯು ಪಡೆ ಮೂಲಗಳು ಕೂಡ ಬೆದರಿಕೆ ಇರುವುದನ್ನು ಒಪ್ಪಿಕೊಂಡಿದ್ದು, ಬಗ್ಗೆ ಹಲವು ಮೂಲಗಳಿಂದ ಮಾಹಿತಿ ಸಿಕ್ಕಿದೆ ಎಂದು ತಿಳಿಸಿದವು.  ಶ್ರೀನಗರ, ಅವಂತಿಪೋರ, ಜಮ್ಮು, ಪಠಾಣ್ ಕೋಟ್ ಮತ್ತು ಹಿಂಡನ್ ವಾಯುನೆಲೆಗಳಲ್ಲಿ ಪ್ರಮುಖವಾಗಿ ಬಿಗಿ ಬಂದೋಬಸ್ತ್ ಮಾಡಿ ಕಟ್ಟೆಚ್ಚರ ಘೋಷಣೆ ಮಾಡಲಾಯಿತು.  ರಕ್ಷಣಾ ಸಚಿವಾಲಯ ಮತ್ತು ಗುಪ್ತಚರ ಏಜೆನ್ಸಿ ಮಾಹಿತಿ ಅನ್ವಯ, ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಜೈಶ್-ಇ- ಮೊಹಮ್ಮದ್  ವಾಯುನೆಲೆಗಳ ಮೇಲೆ ಆತ್ಮಹತ್ಯಾ ದಾಳಿ ನಡೆಸಲು ಸಂಚು ರೂಪಿಸಿದೆ. ನಾಗರಿಕ ವಿಮಾನ ರಕ್ಷಣಾ ಸಂಸ್ಥೆಗೆ ಬೆದರಿಕೆ ಪತ್ರ ಕೂಡ ಬಂದಿದೆ, ಪತ್ರದಲ್ಲಿ ವಿಧಿ 370 ರದ್ದುಗೊಳಿಸಿದ್ದಕ್ಕೆ ಸರ್ಕಾರದ ಮೇಲೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಜೈಶ್ ತಿಳಿಸಿತು. ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಒದಗಿಸಿದ್ದ 370ನೇ  ವಿಧಿಯನ್ನು ರದ್ದು ಮಾಡಿದ ದಿನದಿಂದ ಭಾರತದೊಳಗೆ ಶಾಂತಿ ಕದಡುವ ಕಾರ್ಯವನ್ನು ಪಾಕಿಸ್ತಾನದ ಸಂಘಟನೆಗಳು ಮಾಡುತ್ತಲೆ ಇವೆ. ಅಲ್ಲದೇ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಕೂಡ ಕಾಶ್ಮೀರ ವಿಷಯ ಕುರಿತು ಭಾರತ ಸರ್ಕಾರವನ್ನು ಗುರಿಯಾಗಿಸಿಕೊಂಡು ವಿಶ್ವಸಂಸ್ಥೆ ಸಾಮಾನ್ಯ ಮಂಡಳಿ ಮುಂದೆ ಕೂಡ ವಿಷಯ ಪ್ರಸ್ತಾಪಿಸಿ ಹಿನ್ನೆಡೆ ಅನುಭವಿಸಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)

2019: ನವದೆಹಲಿ: ಪಾಕಿಸ್ತಾನ ಮೂಲದ ಖಲಿಸ್ಥಾನಿ ಭಯೋತ್ಪಾದಕ ಗುಂಪುಗಳು 2019
ಸೆಪ್ಟೆಂಬರ್ ಮತ್ತು ೧೬ರ ನಡುವಣ ಅವಧಿಯಲ್ಲಿ ಪಂಜಾಬಿಗೆ ಗಡಿಯಾಚೆಯ ಪಾಕಿಸ್ತಾನದಿಂದ ಒಟ್ಟು ೮೦ ಕಿ.ಗ್ರಾಂ.ಗಳಷ್ಟು ಶಸ್ತ್ರಾಸ್ತ್ರಗಳನ್ನು (ಶಸ್ತ್ರಾಸ್ತ್ರ ಮತ್ತು ಮದ್ದುಗುಂಡು) ಚೀನೀ ಡ್ರೋಣ್ಗಳನ್ನು ಬಳಸಿ ಆಕಾಶ ಮಾರ್ಗದ ಮೂಲಕ ರವಾನಿಸಿರುವ ವಿಚಾರ ಬೆಳಕಿಗೆ ಬಂದಿದ್ದು, ಹೆಸರು ಹೇಳಲು ಇಚ್ಛಿಸದ ಭದ್ರತಾ ಸಂಸ್ಥೆಗಳು ಮತ್ತು ಪಂಜಾಬ್ ಪೊಲೀಸ್ ಅಧಿಕಾರಿಗಳು ಇದನ್ನು ದೃಢ ಪಡಿಸಿದರು. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಂಟರ್ ಸರ್ವೀಸಸ್ ಇಂಟಲಿಜೆನ್ಸ್ (ಐಎಸ್) ನೆರವಿನೊಂದಿಗೆ ಖಲಿಸ್ಥಾನ್ ಜಿಂದಾಬಾದ್ ಫೋರ್ಸ್ (ಕೆಝಡ್ಎಫ್) ಜಾಲವನ್ನು ಬಳಸಿಕೊಂಡು ಶಸ್ತ್ರಾಸ್ತ್ರ- ಮದ್ದುಗುಂಡುಗಳ ಸರಕನ್ನು ಪಂಜಾಬಿನಲ್ಲಿ ಡ್ರೋಣ್ ಮೂಲಕ ಸಾಗಿಸಿ ಇಳಿಸಲಾಯಿತು. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಗೆ ನೆರವಾಗಲು ಜರ್ಮನಿ ಮತ್ತು ಲಾಹೋರಿನಲ್ಲಿ ಜಂಟಿಯಾಗಿ ಯೋಜನೆಯನ್ನು ರೂಪಿಸಲಾಗಿತ್ತು ಎಂಬುದೂ ಬೆಳಕಿಗೆ ಬಂದಿತು. 2019 ಸೆಪ್ಟೆಂಬರ್ ೨೨ರಂದು ಪಂಜಾಬಿನ ತರಣ್  ತರಣ್ ಜಿಲ್ಲೆಯಲ್ಲಿ ವಶಪಡಿಸಿಕೊಳ್ಳಲಾದ ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದಂತೆ ನಡೆಸಲಾದ ತನಿಖೆಯಲ್ಲಿ ಡ್ರೋಣ್ ಮೂಲಕ ಆಗಸ ಮಾರ್ಗವಾಗಿ ಮೂಲಕ ಶಸ್ತ್ರಾಸ್ತ್ರ- ಮದ್ದು ಗುಂಡನ್ನು ರವಾನಿಸಿ ಪಂಜಾಬಿನಲ್ಲಿ ಉದುರಿಸಿದ ಪ್ರಕರಣದ ವಿವರಗಳು ಬಯಲಾದವು.. ಮದ್ದುಗುಂಡುಗಳ ಸರಕನ್ನು ಅಮೃತಸರ ಮತ್ತು ತರಣ್  ತರಣ್ ನಲ್ಲಿ ಇಳಿಸಲಾಗಿತ್ತು.(ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)


2019: ನ್ಯೂಯಾರ್ಕ್: ಜಾಗತಿಕ ವ್ಯಾಪಾರೋದ್ಯಮಿಗಳಿಗೆ ಭಾರತದಲ್ಲಿ ಹೂಡಿಕೆ ಮಾಡುವಂತೆ
2019 ಸೆಪ್ಟೆಂಬರ್ 25ರ ಬುಧವಾರ ಇಲ್ಲಿ ಆಹ್ವಾನ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸರ್ಕಾರವು ಕಾರ್ಪೋರೇಟ್ ತೆರಿಗೆ ಇಳಿಸುವ ಚಾರಿತ್ರಿಕ ಕ್ರಮದ ಮೂಲಕ ಭಾರತದಲ್ಲಿ ಹಣ ಹೂಡಿಕೆಗೆ ಸುವರ್ಣಾವಕಾಶವನ್ನು ನೀಡಿದೆ ಎಂದು ಹೇಳಿದರು. ಬ್ಲೂಮ್ ಬರ್ಗ್ ಗ್ಲೋಬಲ್ ಬಿಸಿನೆಸ್ ಫೋರಂ ಕಾರ್ಯಕ್ರಮದಲ್ಲಿ ಜಾಗತಿಕ ವ್ಯಾಪಾರೋದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ವ್ಯಾಪಾರೋದ್ಯಮ ಪರಿಸರವನ್ನು ಸುಧಾರಿಸಲು ಇನ್ನಷ್ಟು ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.‘ರಾಷ್ಟ್ರದಲ್ಲಿ ಹೂಡಿಕೆಗೆ ಸುವರ್ಣಾವಕಾಶವನ್ನು ಭಾರತವು ನೀಡಿದೆ. ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ನೀವು ಬಯಸುವುದಾದರೆ ಭಾರತಕ್ಕೆ ಬನ್ನಿ. ವಿಶ್ವದಲ್ಲೇ ಅತ್ಯಂತ ದೊಡ್ಡ ಪ್ರಮಾಣದ ಮೂಲಸವಲತ್ತುಗಳಿರುವ ಯಾವುದಾದರೂ ಒಂದು ಕಡೆ ನೀವು ಹೂಡಿಕೆ ಮಾಡಬಯಸುವಿರಾದರೆ ಭಾರತಕ್ಕೆ ಬನ್ನಿಎಂದು ಪ್ರಧಾನಿ ಜಾಗತಿಕ ಕಾರ್ಪೋರೇಟ್ಗಳಿಗೆ ಆಹ್ವಾನ ನೀಡಿದರು. ತಿಂಗಳ ಆದಿಯಲ್ಲಿ ಸರ್ಕಾರವು ವಾಸ್ತವಿಕ ಕಾರ್ಪೋರೇಟ್ ತೆರಿಗೆ ದರವನ್ನು ಶೇಕಡಾ ೩೫ರಿಂದ ಶೇಕಡ ೨೫.೧೭ಕ್ಕೆ ಇಳಿಸಿತ್ತು. ತನ್ಮೂಲಕ ತೆರಿಗೆ ರಂಗದಲ್ಲಿ ಪ್ರಮುಖ ಜಾಗತಿಕ ಆರ್ಥಿಕತೆಗಳಿಗೆ ಭಾರತದ ಆರ್ಥಿಕತೆಯನ್ನು ಸಮಾನವಾಗುವಂತೆ ಮಾಡಿತ್ತು.ಸುಮಾರು ೫೦ ದೇಶಗಳ ಮುಖ್ಯಸ್ಥರು ಮತ್ತು ೨೦೦ ಸಿಇಒಗಳು ಪಾಲ್ಗೊಂಡಿದ್ದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಭಾರತವು ತನ್ನ ನಗರಗಳನ್ನು ಅತ್ಯಂತ ವೇಗವಾಗಿ ಆಧುನೀಕರಿಸುತ್ತಿದೆ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಮತ್ತು ನಾಗರಿಕ ಮಿತ್ರ ಮೂಲಸವಲತ್ತುಗಳೊಂದಿಗೆ ಅವುಗಳನ್ನು ಸಜ್ಜುಗೊಳಿಸುತ್ತಿದೆ ಎಂದು ಹೇಳಿದರು.(ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)


2019: ಮುಂಬಯಿ: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ ಅಂಬಾನಿ ಈಗ ದೇಶದ ಅತೀ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದರು. ಹೀಗೆ ಅವರು ಅತಿ ಶ್ರೀಮಂತ ವ್ಯಕ್ತಿಯ ಪಟ್ಟವನ್ನು ಹೊಂದಿರುವುದು ಇದು ಸತತ 8ನೇ ಬಾರಿ. 3,80,700 ಕೋಟಿ ರೂ. ಆಸ್ತಿಯನ್ನು ಅವರು ಹೊಂದಿರುವುದಾಗಿ ಸಮೀಕ್ಷೆ ನಡೆಸಿದ ಐಐಎಫ್ಎಲ್ ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್‌ 2019 ಸೆಪ್ಟೆಂಬರ್  25ರ ಬುಧವಾರ ಹೇಳಿತು. ಎರಡನೇ ಸ್ಥಾನವನ್ನು ಲಂಡನ್ ಮೂಲದ ಎಸ್ಪಿ ಹಿಂದುಜಾ ಮತ್ತು ಕುಟುಂಬ ಹೊಂದಿದೆ. ಇವರ ಆಸ್ತಿ 1,86,500 ಕೋಟಿ ರೂ. ಆಗಿದೆ. ಮೂರನೇ ಸ್ಥಾನವನ್ನು ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್ಜಿ ಪಡೆದಿದ್ದಾರೆ. ಅವರ ಆಸ್ತಿ ಮೊತ್ತ 1,17,100 ಕೋಟಿ ರೂ. ಆಗಿದೆ. ಮೂರನೇ ಸ್ಥಾನವನ್ನು ಆರ್ಸೆಲರ್ ಮಿತ್ತಲ್ ಸಿಇಒ (1,07,300 ಕೋಟಿ ರೂ.) ಮತ್ತು 5ನೇ ಸ್ಥಾನವನ್ನು ಅದಾನಿ ಸಮೂಹದ ಗೌತಮ್ ಅದಾನಿ (94,500 ರೂ.) ಹೊಂದಿದ್ದಾರೆ.ಸಮೀಕ್ಷೆ ಪ್ರಕಾರ 1 ಸಾವಿರ ಕೋಟಿ ರೂ.ಗಳಿಗೆ ಮಿಕ್ಕಿ ಆಸ್ತಿ ಹೊಂದಿದವರ ಸಂಖ್ಯೆ 953ಕ್ಕೇರಿದೆ. ಹಿಂದಿನ ವರ್ಷ ಇವರ ಸಂಖ್ಯೆ 831 ಇತ್ತು.ಪಟ್ಟಿಯಲ್ಲಿ ಟಾಪ್ 25 ಪಟ್ಟಿಯಲ್ಲಿರುವವ ಒಟ್ಟು ಆಸ್ತಿಯ ಪ್ರಮಾಣ ಭಾರತದ ಜಿಡಿಪಿಯ ಶೇ.10ರಷ್ಟು ಆಗುತ್ತದೆ. ಹಾಗೆಯೇ 953 ಮಂದಿಯ ಒಟ್ಟು ಆಸ್ತಿಯ ಪ್ರಮಾಣ ಜಿಡಿಪಿ ಮೊತ್ತದ ಶೇ.27ರಷ್ಟು ಆಗುತ್ತದೆ.

2019: ನವದೆಹಲಿ: ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ  ಹಿರಿಯ  ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್  ಅವರ ಜಾಮೀನು ಅರ್ಜಿಯನ್ನು ವಜಾ ಗೊಳಿಸಿರುವುದಾಗಿ 2019 ಸೆಪ್ಟೆಂಬರ್ 25ರ ಬುಧವಾರ ಸಂಜೆ ದೆಹಲಿಯ ವಿಶೇಷ ನ್ಯಾಯಾಲಯದ ತೀರ್ಪು ಪ್ರಕಟಿಸಿತು. ಇದರಿಂದಾಗಿ ಶಿವಕುಮಾರ್ ಅವರಿಗೆ ಗೆ ತಿಹಾರ್ ಜೈಲುವಾಸ ಮುಂದುವರಿಯುವಂತಾಯಿತು. ಈದಿನ  ಮಧ್ಯಾಹ್ನ 3.30ಕ್ಕೆ ಡಿಕೆ ಶಿವಕುಮಾರ್ ಜಾಮೀನು ಅರ್ಜಿ ಕುರಿತ ಆದೇಶ ಪ್ರಕಟವಾಗಬೇಕಿತ್ತು. ಆದರೆ ಸುಮಾರು ಒಂದೂವರೆ ಗಂಟೆಗಳ ಕಾಲ ನ್ಯಾಯಾಧೀಶ ಅಜಯ್ ಕುಮಾರ್ ಕುಹರ್ ಅವರು ತಮ್ಮ ಕೋಣೆಯಲ್ಲಿಯೇ ಹಾಜರಾದ ವಕೀಲರಿಂದ  ಮಾಹಿತಿಯನ್ನು ಪಡೆದುಕೊಂಡು, 5.15ಕ್ಕೆ ಜಾಮೀನು ಅರ್ಜಿ ವಜಾಗೊಳಿಸಿರುವುದಾಗಿ ಒಂದೇ ವಾಕ್ಯದ ತೀರ್ಪು ಪ್ರಕಟಿಸಿದರು. ನ್ಯಾಯಾಲಯಕ್ಕೆ ಡಿಕೆ ಶಿವಕುಮಾರ್ ಪರ ಹಾಗೂ ಜಾರಿ ನಿರ್ದೇಶನಾಲಯದ ಪರ ವಕೀಲರು ಹಾಜರಾಗಿದ್ದರುಜಾರಿ ನಿರ್ದೇಶನಾಲಯದ ವಶದಲ್ಲಿದ್ದ ಡಿಕೆ ಶಿವಕುಮಾರ್ ಅವರ ನಿರಂತರ ವಿಚಾರಣೆ ಬಳಿಕ ದೆಹಲಿಯ ರೌಸ್ ಅವೆನ್ಯೂ ಸಮುಚ್ಚಯದಲ್ಲಿನ ವಿಶೇಷ ನ್ಯಾಯಾಲಯ  14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಕಳೆದ ಆರು ದಿನಗಳಿಂದ ಡಿಕೆ ಶಿವಕುಮಾರ್ ತಿಹಾರ್ ಜೈಲಿನಲ್ಲಿದ್ದರು.ಸೆಪ್ಟೆಂಬರ್ 17ರಿಂದ ನ್ಯಾಯಾಂಗ ಬಂಧನದಲ್ಲಿರುವ ಡಿಕೆ ಶಿವಕುಮಾರ್ ತಮಗೆ ಜಾಮೀನು ನೀಡಬೇಕು, ವಿಚಾರಣೆಗೆ ಸಹಕರಿಸಲು ಸಿದ್ದ ಎಂದು ನ್ಯಾಯಾಲಯಕ್ಕೆ ಜಾಮೀನು ಅರ್ಜಿ ವಿಚಾರಣೆ ವೇಳೆ ತಿಳಿಸಿದ್ದರು. ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಅಜಯ್ ಕುಮಾರ್ ಕುಹರ್ ಅವರು ವಾದ, ಪ್ರತಿವಾದ ಆಲಿಸಿದ ಬಳಿಕ ತೀರ್ಪನ್ನು ಸೆ.25ಕ್ಕೆ ಕಾಯ್ದಿರಿಸಿದ್ದರು.(ವಿವರಗಳಿಗೆ ಇಲ್ಲಿ ಕ್ಲಿಕ್ಕಿಸಿ)



No comments:

Post a Comment