2020: ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ಮೇ. ೩೧ರವರೆಗೆ ದೇಶೀಯ ವಿಮಾನ ಸಂಚಾರ ಬೇಡ ಎಂದು 2020 ಮೇ
24ರ ಭಾನುವಾರ ಹೇಳಿದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಸಮ್ಮಿಶ್ರ ಸರ್ಕಾರ, ಕೇವಲ ಒಂದೇ ಗಂಟೆಯಲ್ಲಿ ತಿಪ್ಪರಲಾಗ ಹೊಡೆದು ವಿಮಾನಗಳ ಹಾರಾಟಕ್ಕೆ ಅನುಮತಿ ನೀಡಿತು. ಮೇ. ೩೧ರವೆರೆಗೆ ವಿಮಾನ ಹಾರಾಟಕ್ಕೆ ಅನುಮತಿ ನೀಡುವುದು ಕಷ್ಟ ಎಂದಿದ್ದ ಮಹಾರಾಷ್ಟ್ರ ಸರ್ಕಾರ, ಇದೀಗ ರಾಜಧಾನಿ ಮುಂಬೈಗೆ ದಿನಕ್ಕೆ ೨೫ ವಿಮಾನಗಳ ಸಂಚಾರಕ್ಕೆ ಅನುಮತಿ ನೀಡಿತು. ದಿನಕ್ಕೆ ರಾಜ್ಯದ ರಾಜಧಾನಿ ಮುಂಬೈಗೆ ೨೫ ವಿಮಾನಗಳ ಆಗಮನ ಹಾಗೂ ಮುಂಬೈನಿಂದ ೨೫ ವಿಮಾನಗಳ ನಿರ್ಗಮನಕ್ಕೆ ಉದ್ಧವ್ ಠಾಕ್ರೆ ಸರ್ಕಾರ ಒಪ್ಪಿಗೆ ಕೊಟ್ಟಿತು. ಕೇಂದ್ರ ವಿಮಾನಯಾನ ಸಚಿವ ಹರದೀಪ್ ಸಿಂಗ್ ಪುರಿ ಅವರೊಂದಿಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ದೂರವಾಣಿಯಲ್ಲಿ ಮಾತನಾಡಿದ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸಚಿವ ನವಾಬ್ ಮಲಿಕ್ ಸ್ಪಷ್ಟಪಡಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಚೀನಾದಲ್ಲಿ ಕಾಣಿಸಿಕೊಂಡ ಮಾರಕ ಕೊರೋನಾ ವೈರಸ್ ಹಾವಳಿ 2020 ಮೇ 24ರ ಭಾನುವಾರವೂ ಭಾರತದಲ್ಲಿ ಮುಂದುವರೆಯಿತು. ಕಳೆದ ೨೪ ಗಂಟೆಯಲ್ಲಿ ದೇಶದಲ್ಲಿ ೬೭೬೭ ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾದವು. ಸತತ ಮೂರನೇ ದಿನವೂ ೬ ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುವ ಮೂಲಕ ಸೋಂಕಿತರ ಸಂಖ್ಯೆ ೧,೩೮,೧೮೧ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ ನೀಡಿತು. ಇನ್ನು, ಕೇಂದ್ರದ ಮಾಹಿತಿ ಪ್ರಕಾರ ಒಂದೇ ದಿನ ಮಾರಕ ಕೊರೋನಾಗೆ ೧೪೭ ಮಂದಿ ಬಲಿಯಾಗಿದ್ದಾರೆ. ಇದರ ಪರಿಣಾಮ ಕೋವಿಡ್-೧೯ ಸೋಂಕಿಗೆ ಬಲಿಯಾದವರ ಸಂಖ್ಯೆ ೩೮೬೭ಕ್ಕೆ ಏರಿತು. ಜಗತ್ತಿನಾದ್ಯಂತ ಇದುವರೆಗೂ ಒಟ್ಟು ೫೪, ೦೧,೨೨೨ ಮಂದಿಗೆ ಕೊರೋನಾ ಸೋಂಕು ತಗುಲಿದೆ. ಜಾನ್ಸ್ ಹಾಪ್ಕಿನ್ಸ್ ಕೊರೋನಾ ವೈರಸ್ ಸಂಪನ್ಮೂಲ ಕೇಂದ್ರದ ಮಾಹಿತಿ ಪ್ರಕಾರ, ಸೋಂಕಿಗೆ ಜಾಗತಿಕವಾಗಿ ೩,೪೩,೭೯೯ ಜನರು ಬಲಿಯಾಗಿದ್ದಾರೆ. ಈ ಪೈಕಿ ಅಮೆರಿಕ ಒಂದರಲ್ಲೇ ೯೮,೬೮೩ ಜನ ಅಸುನೀಗಿದ್ದಾರೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment