ಇಂದಿನ ಇತಿಹಾಸ History
Today
ಮೇ 30
2020: ನವದೆಹಲಿ: ತಮ್ಮ ಎರಡನೇ ಅವಧಿಯ ಆಡಳಿತದ ಮೊದಲ ವಾರ್ಷಿಕೋತ್ಸವದ ಅಂಗವಾಗಿ 2020 ಮೇ 30ರ ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರು ಜನತೆಗೆ ಪತ್ರವೊಂದನ್ನು ಬರೆದು ಸುದೀರ್ಘವಾದ ಕೋವಿಡ್-೧೯ ವಿರೋಧಿ ಸಮರದಲ್ಲಿ ಭಾರತವು ವಿಜಯಪಥದ ಕಡೆಗೆ ಕ್ರಮಿಸಲು ಆರಂಭಿಸಿದೆ ಎಂದು ತಿಳಿಸಿದರು. ಆದರೆ ಇದೇ ವೇಳೆಯಲ್ಲಿ ಇತರರ ಜೊತೆಗೆ ವಲಸೆ ಕಾರ್ಮಿಕರು ಕಠೋರ ಕಷ್ಟ ನಷ್ಟಗಳಿಗೆ ಸಿಲುಕಿ ನರಳುತ್ತಿದ್ದಾರೆ ಎಂದು ಹೇಳಿದರು. ಸಾಮಾನ್ಯ ಸಂದರ್ಭಗಳಲ್ಲಿ ಆಗಿದ್ದರೆ ತಾವು ಇಂತಹ ಹೊತ್ತಿನಲ್ಲಿ ಜನರ ಮಧ್ಯೆ ಇರುತ್ತಿದ್ದೆ, ಆದರೆ ಹಾಲಿ ಪರಿಸ್ಥಿತಿಯಲ್ಲಿ ಕೊರೋನಾವೈರಸ್ ಪರಿಣಾಮವಾಗಿ ದೇಶಾದ್ಯಂತ ದಿಗ್ಬಂಧನ (ಲಾಕ್ ಡೌನ್) ಇರುವುದರಿಂದ ಜನರ ಜೊತೆಗೆ ಇರಲು ತಮಗೆ ಸಾಧ್ಯವಾಗುತ್ತಿಲ್ಲ ಎಂದು ಪತ್ರದ ಕಾರಣಗಳನ್ನು ವಿವರಿಸುತ್ತಾ ಪ್ರಧಾನಿ ಬರೆದರು. ತಮ್ಮ ಸರ್ಕಾರವು "ಐತಿಹಾಸಿಕ" ನಿರ್ಧಾರಗಳನ್ನು ತೆಗೆದುಕೊಂಡಿದೆ ಮತ್ತು ಕಳೆದ ಒಂದು ವರ್ಷದಲ್ಲಿ ರಾಷ್ಟ್ರವು ವೇಗವಾಗಿ ಪ್ರಗತಿ ಸಾಧಿಸಿದೆ, ಆದರೆ ಮಾಡಬೇಕಾಗಿರುವುದು ಬಹಳಷ್ಟು ಇದೆ ಮತ್ತು ಅನೇಕ ಸವಾಲುಗಳು ಮತ್ತು ಸಮಸ್ಯೆಗಳನ್ನು ದೇಶವು ಎದುರಿಸುತಿದೆ ಎಂದು ಅವರು ಹೇಳಿದರು. "ನಾನು ಹಗಲು ರಾತ್ರಿ ಕೆಲಸ ಮಾಡುತ್ತಿದ್ದೇನೆ. ನನ್ನಲ್ಲಿ ನ್ಯೂನತೆಗಳು ಇರಬಹುದು ಆದರೆ ನಮ್ಮ ದೇಶಕ್ಕೆ ಏನೂ ಕೊರತೆಯಿಲ್ಲ" ಎಂದು ಮೋದಿ ಹೇಳಿದ್ದಾರೆ. "ನಾನು ನಿಮ್ಮನ್ನು ನಂಬುತ್ತೇನೆ, ನಿಮ್ಮ ಶಕ್ತಿ ಮತ್ತು ನಿಮ್ಮ ಸಾಮರ್ಥ್ಯಗಳು ನಾನು ನಂಬುವುದಕ್ಕಿಂತಲೂ ಅಗಾಧವಾದದ್ದು’ ಎಂದು ಮೋದಿ ತಿಳಿಸಿದರು. ಕೊರೋನವೈರಸ್ ವಿರುದ್ಧದ ಹೋರಾಟದಲ್ಲಿ ಭಾರತವು ತನ್ನ ಏಕತೆ ಮತ್ತು ಸಂಕಲ್ಪದಿಂದ ಜಗತ್ತನ್ನು ಅಚ್ಚರಿಗೊಳಿಸಿದೆ ಮತ್ತು ಆರ್ಥಿಕ ಪುನರುಜ್ಜೀವನದಲ್ಲೂ ಇದು ಒಂದು ಉದಾಹರಣೆಯನ್ನು ನೀಡುತ್ತದೆ ಎಂಬ ದೃ ಢವಾದ ನಂಬಿಕೆ ಇದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತ ಪಡಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಮಾಸ್ಕೋಗೆ ಹೊರಟಿದ್ದ ವಿಮಾನದ ಪೈಲಟ್ಗೆ ಕೊರೋನಾವೈರಸ್ ಸೋಂಕು ತಲುಪಿದ್ದು ಗೊತ್ತಾದ ಪರಿಣಾಮವಾಗಿ ವಂದೇ ಭಾರತ್ ಮಿಷನ್ ಅಡಿಯಲ್ಲಿ ರಶ್ಯಾದಲ್ಲಿ ಸಿಕ್ಕಿಹಾಕಿಕೊಂಡಿದ್ದ ಭಾರತೀಯರನ್ನು ಕರೆತರಲು ಹೊರಟಿದ್ದ ದೆಹಲಿ-ಮಾಸ್ಕೋ ಏರ್ ಬಸ್ ಎ -೩೨೦ ನಿಯೋ (ವಿಟಿ-ಇಎಕ್ಸ್ಆರ್) ವಿಮಾನವು ಪಯಣವನ್ನು ಸ್ಥಗಿತಗೊಳಿಸಿ ಮಾರ್ಗ ಮಧ್ಯದಿಂದಲೇ ವಾಪಸಾದ ಘಟನೆ 2020 ಮೇ 30ರ ಶನಿವಾರ ಘಟಿಸಿತು. ಪೈಲಟ್ಗೆ ಕೊರೋನಾವೈರಸ್ ಸೋಂಕು ತಲುಪಿದ್ದು ಗೊತ್ತಾಗಿದ್ದು, ತತ್ ಕ್ಷಣವೇ ವಿಮಾನವನ್ನು ಹಿಂದಕ್ಕೆ ಕರೆಸಿ ಕೆಳಕ್ಕೆ ಇಳಿಸಲಾಯಿತು ಎಂದು ವರದಿಗಳು ತಿಳಿಸಿವೆ. ಏರ್ ಇಂಡಿಯಾ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ನೂರಾರು ಪ್ರಯಾಣಿಕರು ಸಂಭವನೀಯ ಅಪಾಯದಿಂದ ಪಾರಾಗಿದ್ದಾರೆ. ಹಾರಾಟ ಪೂರ್ವ ಪರೀಕ್ಷಾ ವರದಿಯಲ್ಲಿ ದೋಷವಿತ್ತು. ವರದಿಯನ್ನು ಆರಂಭದಲ್ಲಿ ನೆಗೆಟಿವ್ ಎಂಬುದಾಗಿ ಓದಿಕೊಳ್ಳಲಾಗಿತ್ತು. ಹಾರಾಟದ ಸಮಯದಲ್ಲಿ ಪೈಲಟ್ ಅನಾರೋಗ್ಯಕ್ಕೆ ಒಳಗಾಗಿದ್ದರು. ಹೀಗಾಗಿ ತತ್ಕ್ಷಣವೇ ಅವರನ್ನು ವಾಪಸ್ ಕರೆಸಲಾಯಿತು ಎಂದು ಅಧಿಕಾರಿಗಳು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಲಡಾಖ್ ಬಿಕ್ಕಟ್ಟು ಇತ್ಯರ್ಥದ ಸಲುವಾಗಿ ಭಾರತ ಮತ್ತು ಚೀನಾ ಸೇನೆ ಹಾಗೂ ರಾಜತಾಂತಿಕ ಮಟ್ಟಗಳಲ್ಲಿ ಮಾತುಕತೆ ನಡೆಸುತ್ತಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು 2020 ಮೇ 30ರ ಶನಿವಾರ ಇಲ್ಲಿ ಹೇಳಿದರು. ನೈಜ ನಿಯಂತ್ರಣ ರೇಖೆಯಲ್ಲಿ ೪ ಕಡೆಗಳಲ್ಲಿ ಚೀನಾದ ಜೊತೆಗೆ ನಡೆಯುತ್ತಿರುವ ಘರ್ಷಣೆಗೆ ಸಂಬಂಧಿಸಿದಂತೆ ಹಿರಿಯ ಕೇಂದ್ರ ಸಚಿವರೊಬ್ಬರಿಂದ ಬಂದಿರುವ ಮೊತ್ತ ಮೊದಲ ಹೇಳಿಕೆ ಇದಾಗಿದೆ. ಸುದ್ದಿ ಮಾದ್ಯಮ ಒಂದರ ಜೊತೆ ಮಾತನಾಡಿದ ರಾಜನಾಥ್ ಸಿಂಗ್ ಅವರು ಸಮಸ್ಯೆಯನ್ನು ಇತ್ಯರ್ಥ ಪಡಿಸಲು ಬಯಸುವುದಾಗಿ ಉಭಯ ರಾಷ್ಟ್ರಗಳೂ ಸ್ಪಷ್ಟ ಪಡಿಸಿವೆ ಎಂದು ಹೇಳಿದರು. ಸಮಸ್ಯೆಯನ್ನು ಇತ್ಯರ್ಥ ಪಡಿಸಿಕೊಳ್ಳಲು ಉಭಯ ರಾಷ್ಟ್ರಗಳು ಈಗಾಗಲೇ ಮಾತುಕತೆಗೆ ಚಾಲನೆ ನೀಡಿರುವ ಕಾರಣ ಅಮೆರಿಕದ ಮಧ್ಯಪ್ರವೇಶದ ಅಗತ್ಯ ಇಲ್ಲ ಎಂದು ಅವರು ನುಡಿದರು. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ವಾರ ಸುದ್ದಿಗಾರರ ಜೊತೆ ಮಾತನಾಡುತ್ತಾ, ’ಭಾರತ ಮತ್ತು ಚೀನಾ ಗಡಿ ಬಿಕ್ಕಟ್ಟು ಮತ್ತು ಪ್ರಕ್ಷುಬ್ಧತೆ ಕೊನೆಗೊಳಿಸುವ ಸಲುವಾಗಿ ಮಧ್ಯಸ್ಥಿಕೆ ವಹಿಸಲು ನಾನು ಸಿದ್ಧನಿದ್ದೇನೆ ಮತ್ತು ಅದಕ್ಕೆ ಸಮರ್ಥನಿದ್ದೇನೆ’ ಎಂದು ಹೇಳಿದ್ದರು. ಡೊನಾಲ್ಡ್ ಟ್ರಂಪ್ ಮುಂದಿಟ್ಟ ಕೊಡುಗೆಯನ್ನು ಉಭಯ ರಾಷ್ಟ್ರಗಳ ವಿದೇಶಾಂಗ ಸಚಿವಾಲಯಗಳು ಈಗಾಗಲೇ ತಿರಸ್ಕರಿಸಿವೆ. ಅಮೆರಿಕ ಅಧ್ಯಕ್ಷರ ಕೊಡುಗೆ ಬಗ್ಗೆ ರಾಜನಾಥ್ ಸಿಂಗ್ ಮತ್ತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕ್ ಎಸ್ಪೆರ್ ನಡುವಣ ಶುಕ್ರವಾರ ಸಂಜೆಯ ಮಾತುಕತೆಯಲ್ಲೂ ಪ್ರಸ್ತಾಪಕ್ಕೆ ಬಂದಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಒಂದೇ ದಿನ ೭,೯೬೪ ಹೊಸ ಪ್ರಕರಣಗಳೊಂದಿಗೆ ಕೋವಿಡ್ -೧೯ ಸೋಂಕಿಗೆ ಒಳಗಾದವರ ಸಂಖ್ಯೆ ಭಾರತದಲ್ಲಿ 2020 ಮೇ 30ರ ಶನಿವಾರ ೧,೭೩,೭೬೩ಕ್ಕೆ ಏರಿತು. ಒಂದೇ ದಿನ ೨೬೫ ಜನರ ಸಾವಿನೊಂದಿಗೆ ಸಾವಿನ ಸಂಖ್ಯೆ ಕೂಡಾ ೪೯೭೧ಕ್ಕೆ ತಲುಪಿತು. ಆದರೆ ಕೊರೋನಾವೈರಸ್ಸಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಕೂಡಾ ಗಮನಾರ್ಹವಾಗಿ ವೃದ್ಧಿಯಾಗಿದ್ದು ಹೊಸ ಭರವಸೆಯನ್ನು ಮೂಡಿಸಿತು. ನಾಲ್ಕನೇ ಹಂತದ ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ ಡೌನ್) ಮುಕ್ತಾಯಕ್ಕೆ ಕೇವಲ ಒಂದು ದಿನ ಇರುವಾಗ ದೇಶzಲ್ಲಿ ಕಳೆದ ೨೪ ಗಂಟೆಗಳಲ್ಲಿ ೧೧,೨೬೪ ಮಂದಿ ರೋಗಿಗಳು ಗುಣಮುಖರಾಗಿದ್ದಾರೆ. ಒಂದೇ ದಿನದಲ್ಲಿ ಚೇತರಿಕೆ ಪ್ರಮಾಣ ಶೇಕಡಾ ೪.೫೧ರಷ್ಟು ಹೆಚ್ಚಿದ್ದು, ಒಟ್ಟು ಚೇತರಿಕೆ ಪ್ರಮಾಣ ಶೇಕಡಾ ೪೭.೪೦ಕ್ಕೆ ಏರಿದೆ. ಇದರಿಂದಾಗಿ ಸಕ್ರಿಯ ರೋಗಿಗಳ ಸಂಖ್ಯೆ ೮೯,೯೮೭ರಿಂದ ೮೬,೪೨೨ಕ್ಕೆ ಇಳಿದಿದೆ ಎಂದು ಸರ್ಕಾರ ತಿಳಿಸಿತು. ಈ ಮಧ್ಯೆ ಮಧ್ಯಪ್ರದೇಶ ಸರ್ಕಾರವು ರಾಜ್ಯದಲ್ಲಿ ದಿಗ್ಬಂಧನವನ್ನು ಜೂನ್ ೧೫ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದರು. ಶುಕ್ರವಾರ ಬೆಳಗ್ಗಿನಿಂದ ಶನಿವಾರದವರೆಗಿನ ವರದಿಗಳ ಪ್ರಕಾರ ೨೬೫ ಜನರು ಕೊರೋನಾಕ್ಕೆ ಬಲಿಯಾಗಿದ್ದು, ಇವರ ಪೈಕಿ ೧೧೬ ಮಂದಿ ಮಹಾರಾಷ್ಟ್ರದಲ್ಲಿ, ೮೨ ಮಂದಿ ದೆಹಲಿಯಲ್ಲಿ, ೨೦ ಮಂದಿ ಗುಜರಾತಿನಲ್ಲಿ, ೧೩ ಮಂದಿ ಮಧ್ಯಪ್ರದೇಶದಲ್ಲಿ, ೯ ಮಂದಿ ತಮಿಳುನಾಡಿನಲ್ಲಿ, ೭ ಮಂದಿ ಪಶ್ಚಿಮ ಬಂಗಾಳದಲ್ಲಿ ತಲಾ ನಾಲ್ವರು ತೆಲಂಗಾಣ ಮತ್ತು ರಾಜಸ್ಥಾನದಲ್ಲಿ, ಇಬ್ಬರು ಪಂಜಾಬಿನಲ್ಲಿ ಮತ್ತು ತಲಾ ಒಬ್ಬರು ಛತ್ತೀಸಗಢ, ಜಮ್ಮು ಮತ್ತು ಕಾಶ್ಮೀರ, ಆಂಧ್ರಪ್ರದೇಶ, ಜಾರ್ಖಂಡ್, ಕರ್ನಾಟಕ, ಕೇರಳ, ಉತ್ತರಾಖಂಡ ಮತ್ತು ಉತ್ತರಪ್ರದೇಶದಲ್ಲಿ ಮೃತರಾಗಿದ್ದಾರೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ರಾಷ್ಟ್ರವ್ಯಾಪಿ ದಿಗ್ಬಂಧನವನ್ನು ಜೂನ್ ೩೦ರವರೆಗೆ ವಿಸ್ತರಿಸಿ ಕೇಂದ್ರ ಸರ್ಕಾರವು 2020 ಮೇ 30ರ ಶನಿವಾರ ಆದೇಶ ಹೊರಡಿಸಿತು. ಕಂಟೈನ್ಮೆಂಟ್ ವಲಯಗಳನ್ನು ಹೊರತುಪಡಿಸಿ ಉಳಿದ ಎಲ್ಲ ಕಡೆ ಹಂತ ಹಂತವಾಗಿ ಆರ್ಥಿಕ ಚಟುವಟಿಕೆಗಳು ಪುನಾರಂಭಗೊಳ್ಳಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿತು. ಕೊರೋನಾವೈರಸ್ ಸೋಂಕಿನ ಪ್ರಸರಣ ತಡೆಗಟ್ಟುವ ಸಲುವಾಗಿ ದೇಶಾದ್ಯಂತ ಹೇರಲಾದ ದಿಗ್ಬಂಧನದ ನಾಲ್ಕನೇ ಹಂತವು ಭಾನುವಾರಕ್ಕೆ ಮುಕ್ತಾಯಗೊಳ್ಳಲಿತ್ತು. ಧಾರಕ ವಲಯಗಳಲ್ಲಿ (ಕಂಟೈನ್ಮೆಂಟ್ ಝೋನ್) ದಿಗ್ಬಂಧನವನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಲಾಗುವುದು ಎಂದು ಆದೇಶ ತಿಳಿಸಿತು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜೊತೆ ವ್ಯಾಪಕ ಸಮಾಲೋಚನೆಗಳನ್ನು ನಡೆಸಿದ ಬಳಿಕ ನೂತನ ಮಾರ್ಗಸೂಚಿಯನ್ನು ಶನಿವಾರ ಬಿಡುಗಡೆ ಮಾಡಲಾಗಿದೆ ಎಂದು ಗೃಹ ವ್ಯವಹಾರಗಳ ಸಚಿವಾಲಯವು ಹೇಳಿತು. ಗೃಹ ಸಚಿವ ಅಮಿತ್ ಶಾ ಅವರು ಗುರುವಾರ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಸಮಾಲೋಚನೆ ನಡೆಸಿದ್ದರು. ಆ ಬಳಿಕ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ವಿವಿಧ ಮುಖ್ಯಮಂತ್ರಿಗಳು ನೀಡಿದ ಸಲಹೆಗಳನ್ನು ಪ್ರಧಾನಿಗೆ ತಿಳಿಸಿದ್ದರು. ಶನಿವಾರ ಗೃಹ ವ್ಯವಹಾರಗಳ ಸಚಿವಾಲಯವು ದಿಗ್ಬಂಧನವನ್ನು ವಿಸ್ತರಿಸಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ) ಇಂದಿನ ಇತಿಹಾಸ History Today ಮೇ 30 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
-ಸಂಗ್ರಹ: ನೆತ್ರಕೆರೆ ಉದಯಶಂಕರ
No comments:
Post a Comment