2020: ನವದೆಹಲಿ: ಅಂಫಾನ್ ಚಂಡಮಾರುತದಿಂದ ಕುಸಿದು ಬಿದ್ದಿರುವ ರಾಜ್ಯದ ಅಗತ್ಯ ಮೂಲಸವಲತ್ತು ಮತ್ತು ಅಗತ್ಯ ಸೇವೆಗಳನ್ನು ಪುನಃಸ್ಥಾಪನೆ ಮಾಡುವ ಮಹಾ ಪ್ರಯತ್ನದಲ್ಲಿ ಸಹಕರಿಸಲು ಸೇನೆಯನ್ನು ನಿಯೋಜಿಸುವಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸರ್ಕಾರವು 2020 ಮೇ 23ರ ಶನಿವಾರ ಮಾಡಿದ ಮನವಿಗೆ ಕೇಂದ್ರ ಸರ್ಕಾರವು ಸ್ಪಂದಿಸಿದ್ದು, ಭಾರತೀಯ ಸೇನೆಯ ೫ ಕಾಲಂಗಳನ್ನು ಕಳುಹಿಸಲು ನಿರ್ಧರಿಸಿತು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮನವಿ ಮೇರೆಗೆ ರಾಜಧಾನಿ ಕೋಲ್ಕತ ನಗರದ ಅಗತ್ಯ ಸೇವೆ ಮತ್ತು ಮೂಲಸವಲತ್ತು ಮರುಸ್ಥಾಪನೆಗಾಗಿ ಈ ಸೇನಾ ತುಕಡಿಯನ್ನು ಕಳುಹಿಸಲು ಕೇಂದ್ರ ತೀರ್ಮಾನಿಸಿತು. ಸರಣಿ ಟ್ವೀಟ್‌ಗಳನ್ನು ಮಾಡಿದ ಪಶ್ಚಿಮ ಬಂಗಾಳದ ಗೃಹ ಇಲಾಖೆಯು ಅಗತ್ಯ ಸೇವೆ, ಮೂಲಸವಲತ್ತುಗಳ ಪುನಃಸ್ಥಾಪನೆಗಾಗಿ ರಾಜ್ಯವು ಪ್ರತಿಯೊಬ್ಬರನ್ನೂ ಬಳಸಿಕೊಳ್ಳುತ್ತಿದೆ. ಆದರೆ ಇನ್ನಷ್ಟು ನೆರವಿನ ಅಗತ್ಯವಿದೆ ಎಂದು ಹೇಳಿ, ನೆರವಿಗಾಗಿ ಸೇನೆಯನ್ನು ನಿಯೋಜಿಸುವಂತೆ ಕೇಂದ್ರಕ್ಕೆ ಮನವಿ ಮಾಡಿತ್ತು. ಚಂಡಮಾರುತೋತ್ತರ ಪರಿಸ್ಥಿತಿಯನ್ನು ಸಹಜಸ್ಥಿತಿಗೆ ತರಲು ಸೇನೆಯನ್ನು ನಿಯೋಜಿಸುವಂತೆ ಪಶ್ಚಿಮ ಬಂಗಾಳ ಗೃಹ ಇಲಾಖೆ ಮಾಡಿರುವ ಮನವಿಗೆ ಕೇಂದ್ರ ರಾತ್ರಿಯವೇಳೆಗೆ ಸ್ಪಂದಿಸಿತು. ಈ ಮಧ್ಯೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು (ಎನ್‌ಡಿಆರ್‌ಎಫ್) ಇನ್ನೂ ೧೦ ಹೆಚ್ಚಿನ ತಂಡಗಳನ್ನು ಜೊತೆಗೂಡಿಸಿಕೊಳ್ಳುತ್ತಿರುವುದಾಗಿ ತಿಳಿಸಿದೆ. ಎನ್ ಡಿಆರ್‌ಎಫ್ ಈಗಾಗಲೇ ಚಂಡಮಾರುತ ಪೀಡಿತ ಬಂಗಾಳದಲ್ಲಿ ತನ್ನ ೨೬ ತಂಡಗಳನ್ನು ಕಾರ್ಯಾಚರಣೆಗೆ ಇಳಿಸಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ).
2020: ನವದೆಹಲಿ: ಭಾರತದಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಅತ್ಯಂತ ಹೆಚ್ಚು ಅಂದರೆ ೬,೬೫೪ ಹೊಸ ಪ್ರಕರಣಗಳೊಂದಿಗೆ ರಾಷ್ಟ್ರವ್ಯಾಪಿ ದಿಗ್ಬಂಧನದ (ಲಾಕ್‌ಡೌನ್) ೬೦ನೇ ದಿನವಾದ 2020 ಮೇ 23ರ ಶನಿವಾರ ಮಾರಕ ಕೊರೊನಾವೈರಸ್ ಸೋಂಕು ೧,೨೫,೧೦೧ಕ್ಕೆ ತಲುಪಿತು. ೧೩೭ ಮಂದಿ ಸಾವನ್ನಪ್ಪುವುದರೊಂದಿಗೆ ಸಾಂಕ್ರಾಮಿಕಕ್ಕೆ ಬಲಿಯಾದವರ ಸಂಖ್ಯೆ ೩,೭೨೦ಕ್ಕೆ ಏರಿತು. ಒಂದು ವಾರದ ಅವಧಿಯಲ್ಲಿ ಸೋಂಕು ದಾಖಲೆ ಸಂಖ್ಯೆಯಲ್ಲಿ ಹೆಚ್ಚುತ್ತಿರುವುದು ಶನಿವಾರ ೫ನೇ ದಿನವಾಗಿದ್ದು, ಈ ೫ ದಿನಗಳ ಅವಧಿಯಲ್ಲಿ ಸುಮಾರು ೩೫,೦೦೦ ಮಂದಿಗೆ ಹೊಸದಾಗಿ ಸೋಂಕು ತಗುಲಿದೆ. ವೈರಸ್ ಪ್ರಸರಣ ಮತ್ತು ಪ್ರಕರಣಗಳ ಸಂಖ್ಯೆಯಲ್ಲಿ ದಿಢೀರನೆ ಹೆಚ್ಚಳವಾಗುತ್ತಿರುವುದು ಇತ್ತೀಚಿನ ದಿನಗಳಲ್ಲಿ ಅಧಿಕಾರಿಗಳಲ್ಲಿ ಕಳವಳ ಉಂಟು ಮಾಡಿತು. ಮೇ ೧೭ರಂದು ಒಂದೇ ದಿನ ೪,೯೮೭ ಪ್ರಕರಣಗಳು ಹೊಸದಾಗಿ ದಾಖಲಾಗುವುದರೊಂದಿಗೆ ಭಾರತದಲ್ಲಿ ಭಾರೀ ಸಂಖ್ಯೆಯಲ್ಲಿ ಸೋಂಕು ಪ್ರಕರಣ ಮೊತ್ತ ಮೊದಲಿಗೆ ದಾಖಲೆ ನಿರ್ಮಿಸಿತು. ಮೇ ೧೮ರಂದು ದೈನಂದಿನ ಪ್ರಕರಣಗಳ ಸಂಖ್ಯೆ ಇನ್ನೂ ಹೆಚ್ಚಿ ೫,೨೪೨ಕ್ಕೆ ತಲುಪಿತು. ಮೇ ೨೦ರಂದು ೫,೬೧೧ ಪ್ರಕರಣಗಳು ದಾಖಲಾದವು. ಮೇ ೨೨ರಂದು (೬,೦೮೮) ಪ್ರಕರಣಗಳು, ಮೇ ೨೩ರಂದು ೬,೬೫೪ ಪ್ರಕರಣಗಳು ದಾಖಲಾದವು. ಮೇ ೧೯ ಮತ್ತು ಮೇ ೨೧ರಂದು ಮಾತ್ರ ಹಿಂದಿನ ದಿನಕ್ಕೆ ಹೋಲಿಸಿದರೆ ಕಡಿಮೆ ಸಂಖ್ಯೆಯ ಪ್ರಕರಣಗಳು ದಾಖಲಾಗಿದ್ದವು. ಈ ದಿನಗಳಲ್ಲಿ ಕ್ರಮವಾಗಿ ೪,೯೭೦ ಮತ್ತು ೫,೬೦೯ ಪ್ರಕರಣಗಳು ವರದಿಯಾಗಿದ್ದವು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಮುಂಬೈ: ಮಹಾರಾಷ್ಟ್ರದಲ್ಲಿ ಗುರುವಾರದವರೆಗಿನ ಅಂಕಿ ಅಂಶದಂತೆ ಕಳೆದ ಒಂದು ತಿಂಗಳ ಅವಧಿಯಲ್ಲಿ ಕೋವಿಡ್-೧೯ ಸಾವಿನ ಪ್ರಮಾಣ ಶೇಕಡಾ ೪.೭೬ರಿಂದ ಶೇಕಡಾ ೩.೪೯ಕ್ಕೆ ಕುಸಿದಿದೆ ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆ 2020 ಮೇ 23ರ ಶನಿವಾರ ಮಾಹಿತಿ ನೀಡಿತು.
ಆದಾಗ್ಯೂ, ಇದೇ ಅವಧಿಯಲ್ಲಿ ಸಾವಿನ ಸಂಖ್ಯೆಗಳು ಏಪ್ರಿಲ್ ೨೨ರಂದು ಇದ್ದ ೨೬೯ರಿಂದ ಗುರುವಾರದ ವೇಳೆಗೆ ೧,೪೫೪ಕ್ಕೆ ಏರಿವೆ. ಏಪ್ರಿಲ್ ೨೨ರಂದು ರಾಜ್ಯದಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ ೫,೬೪೯ ಇತ್ತು. ಈ ವೇಳೆಗೆ ರಾಜ್ಯದಲ್ಲಿ ಸಾವಿನ ಪ್ರಮಾಣ ಶೇಕಡಾ ೪.೭೬ರಷ್ಟು ಇತ್ತು. ಮೇ ೨೧ರಂದು ರಾಜ್ಯದಲ್ಲಿನ ಕೊರೋನಾ ಸೋಂಕು ಪ್ರಕರಣಗಳ ಸಂಖ್ಯೆ ೪೧,೬೪೨. ಇದೇ ವೇಳೆಗೆ ಸಾವಿನ ಪ್ರಮಾಣ ಶೇಕಡಾ ೩.೪೯. ಶನಿವಾರದ ಅಂಕಿಸಂಖ್ಯೆಗಳ ಪ್ರಕಾರ ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ೪೪,೫೮೨ ಮತ್ತು ಸಾವಿನ ಸಂಖ್ಯೆ ೧,೫೧೭. ಅಂದರೆ ಸಾವಿನ ಪ್ರಮಾಣ ಶೇಕಡಾ ೩.೪೦. ಏನಿದ್ದರೂ ಶನಿವಾರದ ಮಾಹಿತಿಯ ವಿಶ್ಲೇಷಣೆಯನ್ನು ಮಹಾರಾಷ್ಟ್ರ ಸರ್ಕಾರ ಇನ್ನೂ ಬಿಡುಗಡೆ ಮಾಡಿಲ್ಲ. ಮಹಾರಾಷ್ಟ್ರದಲ್ಲಿ ಸಾವಿನ ಪ್ರಮಾಣ ಕಳೆದ ಒಂದು ತಿಂಗಳಿಂದ ಗಮನಾರ್ಹವಾಗಿ ಕುಸಿದಿದೆ. ರಾಜ್ಯ ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ ಏಪ್ರಿಲ್ ೨೨ರಂದು ಸಾವಿನ ಪ್ರಮಾಣ ಶೇಕಡಾ ೪.೭೬ ಆಗಿದ್ದರೆ ಏಪ್ರಿಲ್ ೨೬ರಂದು ಶೇಕಡಾ ೪.೨೪, ಏಪ್ರಿಲ್ ೩೦ರಂದು ಶೇಕಡಾ ೪.೩೭, ಮೇ ೧ರಂದು ಶೇಕಡಾ ೪.೨೨, ಮೇ ೯ರಂದು ಶೇಕಡಾ ೩.೮೫, ಮೇ ೧೪ರಂದು ಶೇಕಡಾ ೩.೯, ಮೇ ೧೬ರಂದು ಶೇಕಡಾ ೩.೬೨ ಮತ್ತು ಮೇ ೨೧ರಂದು ಶೇಕಡಾ ೩.೪೯. ಈ ಅವಧಿಯಲ್ಲಿ ಪರೀಕ್ಷಾ ಪ್ರಮಾಣವೂ ಹೆಚ್ಚಾಗಿದೆ. ಏಪ್ರಿಲ್ ೨೨ರಂದು ೮೯,೦೦೦ದಷ್ಟು ಇದ್ದ ಪರೀಕ್ಷೆಗಳ ಸಂಖ್ಯೆ ಶನಿವಾರದ ವೇಳೆಗೆ ೩.೨೨ ಲಕ್ಷಕ್ಕೆ ಏರಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ದೆಹಲಿಯ ೯೨ ಸಕ್ರಿಯ ಧಾರಕವಲಯಗಳ (ಕಂಟೈನ್ ಮೆಂಟ್) ಪೈಕಿ ಅರ್ಧದಷ್ಟು ವಲಯಗಳಲ್ಲಿ ಕಳೆದ ೧೪ ದಿನಗಳಿಂದ ಒಂದೇ ಒಂದು ಕೊರೋನಾಸೋಂಕು ವರದಿಯಾಗಿಲ್ಲ, ಹೀಗಾಗಿ ಪ್ರಸ್ತುತ ಕಿತ್ತಳೆ ವಲಯಕ್ಕೆ ತಿರುಗಿರುವ ಈ ವಲಯಗಳು ಮುಂದಿನ ಎರಡು ವಾರಗಳಲ್ಲಿ ಹಸಿರು ವಲಯಕ್ಕೆ ತಿರುಗುವ ಆಶಯವಿದೆ ಎಂದು ದೆಹಲಿ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು 2020 ಮೇ 23ರ ಶನಿವಾರ ಹೇಳಿದರು. ನಗರ ಸರ್ಕಾರವು ಕೋವಿಡ್ -೧೯ ಪ್ರಕರಣಗಳು ಕಂಡು ಬಂದ ಪ್ರದೇಶಗಳನ್ನು ಕಂಟೈನ್ ಮೆಂಟ್ ವಲಯಗಳು ಎಂಬುದಾಗಿ ಮಾರ್ಚ್ ಕೊನೆಯಿಂದ ಪ್ರಕಟಿಸಲು ಆರಂಭಿಸಿತ್ತು. ಒಟ್ಟು ೧೨೬ ಪ್ರದೇಶಗಳನ್ನು ಕಂಟೈನ್‌ಮೆಂಟ್ ವಲಯಗಳು ಎಂಬುದಾಗಿ ಘೋಷಿಸಲಾಗಿತ್ತು. ಕಳೆದ ಕೆಲವು ವಾರಗಳಲ್ಲಿ ಅಧಿಕಾರಿಗಳು ಈ ಪೈಕಿ ಸುಮಾರು ೩೪ ಪ್ರದೇಶಗಳನ್ನು ತನ್ನ ಧಾರಕ ವಲಯಗಳ ಪಟ್ಟಿಯಿಂದ ತೆಗೆದುಹಾಕಿದ್ದು, ಸಕ್ರಿಯ ವಲಯಗಳ ಸಂಖ್ಯೆ ೯೨ಕ್ಕೆ ಇಳಿದಿದೆ. ಕಂಟೈನ್‌ಮೆಂಟ್ ವಲಯಗಳಲ್ಲಿ ಅಪಾರ್ಟ್ ಮೆಂಟ್ ಬ್ಲಾಕ್‌ಗಳು, ಗೇಟೆಡ್ ಕಮ್ಯೂನಿಟಿಗಳು, ಕೊಳಚೆಗೇರಿಗಳು, ಬೀದಿಗಳು ಮತ್ತು ಸಂಪೂರ್ಣ ನೆರೆಹೊರೆ ಪ್ರದೇಶಗಳು ಸೇರಿವೆ. ಅವುಗಳನ್ನು ಸಂಪೂರ್ಣ ಕ್ವಾರಂಟೈನ್ ವಲಯಗಳು ಎಂಬುದಾಗಿ ಘೋಷಿಸಲಾಗಿದ್ದು, ಯಾರಿಗೂ ಹಾಲು, ಹಣ್ಣು, ತರಕಾರಿಯಂತಹ ಅಗತ್ಯ ವಸ್ತುಗಳನ್ನು ತರಲು ಕೂಡಾ ಹೊರಕ್ಕೆ ಬಿಡಲಾಗುವುದಿಲ್ಲ. ಎಲ್ಲ ಪ್ರವೇಶ ಮತ್ತು ನಿರ್ಗಮನ ಪಾಯಿಂಟ್‌ಗಳನ್ನು ಒಳಗಲ್ಲಿಗಳಲ್ಲಿ ಕೂಡಾ ಅಡ್ಡಗಟ್ಟೆಗಳನ್ನು (ಬ್ಯಾರಿಕೇಡ್) ಹಾಕಲಾಗುತ್ತದೆ. ಆಯ್ದ ವ್ಯಾಪಾರಿಗಳಿಗೆ ಮಾತ್ರ ದಿನಸಿ ಮತ್ತಿತರ ಅಗತ್ಯ ವಸ್ತುಗಳನ್ನು ನೆರೆಹೊರೆಯವರಿಗೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಮತ್ತು ನಾಗರಿಕರ ರಕ್ಷಣಾ ಸ್ವಯಂಸೇವಕರ ನೆರವಿನೊಂದಿಗೆ ಸರಬರಾಜು ಮಾಡಲು ಅಧಿಕಾರಿಗಳು ಅವಕಾಶ ಕಲ್ಪಿಸುತ್ತಾರೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಕೋರೋನಾವೈರಸ್ ಸೋಂಕಿನ (ಕೋವಿಡ್-೧೯) ಲಕ್ಷಣಗಳು ಇಲ್ಲದ ಮತ್ತು ಆರೋಗ್ಯ ಸೇತು ಆಪ್ನಲ್ಲಿ ’ಹಸಿರು ಸ್ಟಾಟಸ್’ ಇರುವ ದೇಶೀ ವಿಮಾನ ಪ್ರಯಾಣಿಕರು ತಮ್ಮ ಗಮ್ಯ ತಾಣ ತಲುಪಿದ ಬಳಿಕ ಕ್ವಾರಂಟೈನ್‌ಗೆ ಒಳಗಾಗುವ ಅಗತ್ಯ ಇಲ್ಲ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರದೀಪ್ ಸಿಂಗ್ ಪುರಿ 2020 ಮೇ 23ರ ಶನಿವಾರ ಇಲ್ಲಿ ಹೇಳಿದರು. ’ಯಾರೇ ಪ್ರಯಾಣಿಕರು ಆರೋಗ್ಯ ಸೇತು ಆಪ್ ಅಳವಡಿಸಿಕೊಂಡಿದ್ದಲ್ಲಿ, ಅದು ಪಾಸ್ ಪೋರ್ಟ್ ಇದ್ದಂತೆ ಎಂಬುದಾಗಿ ನಾವು ಸ್ಪಷ್ಟ ಪಡಿಸಿದ್ದೇವೆ. ಅವರನ್ನು ಕ್ವಾರಂಟೈನ್‌ಗೆ ಒಳಪಡಿಸಬೇಕು ಎಂದು ಯಾರಾದರೂ ಏಕೆ ಬಯಸುತ್ತಾರೆ?’ ಎಂದು ಹರದೀಪ್ ಸಿಂಗ್ ಪುರಿ ನುಡಿದರು. ಫೇಸ್ ಬುಕ್ ನೇರ ಸಮಾವೇಶದಲ್ಲಿ ಪ್ರಶ್ನೆಯೊಂದಕ್ಕೆ ವಿಮಾನಯಾನ ಸಚಿವರು ಉತ್ತರಿಸುತ್ತಿದ್ದರು. ವಿಮಾನಯಾನ ಸಚಿವಾಲಯವು ಬಿಡುಗಡೆ ಮಾಡಿರುವ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್‍ಸ್ (ಎಸ್ ಒಪಿ) ಈ ಬಗ್ಗೆ ವಿವರವಾದ ಮಾರ್ಗಸೂಚಿಗಳನ್ನು ನೀಡಿದೆ ಎಂದು ಪುರಿ ಹೇಳಿದರು. ‘ನಾನು ಕ್ವಾರಂಟೈನ್ ಬಗ್ಗೆ ಮಾತನಾಡುವಾಗ, ನಾನು ದೇಶೀ ಪ್ರಯಾಣಿಕರ ಬಗ್ಗೆ ಮಾತನಾಡುತ್ತಿದ್ದೇನೆ, ಅಂತಾರಾಷ್ಟ್ರೀಯ ಪ್ರಯಾಣಿಕರು ೧೪ ದಿನಗಳ ಕ್ವಾರಂಟೈನ್‌ಗೆ ಒಳಪಡಬೇಕು ಎಂದು ಈಗಾಗಲೇ ನಿರ್ದಿಷ್ಟ ಪಡಿಸಲಾಗಿದೆ’ ಎಂದು ಸಚಿವರು ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ವಿರೋಧಿ ಹೋರಾಟಕ್ಕಾಗಿ ಹಣಕಾಸು ಸಂಪನ್ಮೂಲ ಕ್ರೋಡೀಕರಿಸಲು ಹೆಚ್ಚುವರಿ ವಿಪತ್ತು ಸೆಸ್ ವಿಧಿಸುವುದಕ್ಕೆ ಸಂಬಂಧಿಸಿದ ಎಲ್ಲ ಊಹಾಪೋಹಗಳನ್ನು ವಿತ್ತ ಸಚಿವಾಲಯದ ಅಧಿಕಾರಿಗಳು 2020 ಮೇ 23ರ ಶನಿವಾರ ವಾರ ತಳ್ಳಿ ಹಾಕಿದರು. ತೆರಿಗೆ ಪರಿಹಾರಗಳು ಸೇರಿದಂತೆ ವ್ಯವಹಾರಗಳಿಗೆ ನಿರಾಳತೆ ಒದಗಿಸಲು ಸರ್ಕಾರ ನಡೆಸುತ್ತಿರುವ ಯತ್ನಗಳಿಗೆ ವಿರುದ್ಧವಾದ ಕಲ್ಪನೆ ಇದು ಎಂದು ಅಧಿಕಾರಿಗಳು ಹೇಳಿದರು. ಹಣಕಾಸು ಸಚಿವಾಲಯದ ಹೆಸರು ಹೇಳಲು ಇಚ್ಛಿಸದ ಅಧಿಕಾರಿಗಳು ಇಂತಹ ಕ್ರಮವನ್ನು ಖಂಡತುಂಡವಾಗಿ ಅಲ್ಲಗಳೆದರು. ಕೋವಿಡ್ -೧೯ ಆರ್ಥಿಕ ಸಂಕಷ್ಟ ನಿವಾರಣೆಗಾಗಿ ಕೇಂದ್ರ ಸರ್ಕಾರವು ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ಮೇಲೆ ವಿಪತ್ತು ಸೆಸ್ ವಿಧಿಸುವ ಬಗ್ಗೆ ಪರಿಶೀಲಿಸುತ್ತಿದೆ ಎಂಬುದಾಗಿ ಮಾಧ್ಯಮಗಳಲ್ಲಿ ಬರುತ್ತಿರುವ ವರದಿಗಳೆಲ್ಲವನ್ನೂ ಅವರು ತಿರಸ್ಕರಿಸಿದರು. ಸೆಸ್ ಎಂಬುದು ವಿಶೇಷ ಸಂದರ್ಭಗಳಲ್ಲಿ ಬಜೆಟ್ ನಿಗದಿಗೆ ಹೊರತಾಗಿ ಆದಾಯ ಕ್ರೋಡೀಕರಿಸಲು ವಿಧಿಸಲಾಗುವ ಹೆಚ್ಚುವರಿ ತೆರಿಗೆಯಾಗಿದೆ (ಮೇಲ್ತೆರಿಗೆ). ಹಾಲಿ ಆರ್ಥಿಕ ಪರಿಸ್ಥಿತಿಯಲ್ಲಿ ವಿಪತ್ತು ತೆರಿಗೆ ಅಳವಡಿಕೆಯ ಯಾವುದೇ ಪ್ರಸ್ತಾಪವು ಸರ್ಕಾರದ ನಿಲುವಿಗೇ ವಿರುದ್ಧವಾಗಿರುವುದಲ್ಲದೆ, ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ನಡೆಸುತ್ತಿರುವ ಯತ್ನಗಳಿಗೆ ತಿರುಗುಬಾಣವಾದೀತು ಎಂದು ಅಧಿಕಾರಿ ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment