ನಾನು ಮೆಚ್ಚಿದ ವಾಟ್ಸಪ್

Saturday, May 9, 2020

ಇಂದಿನ ಇತಿಹಾಸ History Today ಮೇ 09

2020: ನವದೆಹಲಿ: ದಕ್ಷಿಣ ಕೋಲ್ಕತದ ೫೨ರ ಹರೆಯದ ನಿತಾಯಿದಾಸ್ ಮುಖರ್ಜಿ ಅವರು ೩೮ ದಿನಗಳ ವೆಂಟಿಲೇಟರ್ ವಾಸದ ಬಳಿಕ ಸಂಪೂರ್ಣ ಗುಣಮುಖರಾಗಿ ಕೋವಿಡ್ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ 2020 ಮೇ 09ರ ಶನಿವಾರ ಪಾತ್ರರಾದರು.   ಮಧ್ಯೆ, ೩೩೨೦ ಹೊಸ ಪ್ರಕರಣಗಳೊಂದಿಗೆ ಭಾರತದ ಕೊರೋನಾವೈರಸ್ ಸೋಂಕಿನ ಪ್ರಕರಣಗಳ ಸಂಖ್ಯೆ ೫೯,೬೬೨ಕ್ಕೆ ಏರಿತು. ೨೪ ಗಂಟೆಗಳಲ್ಲಿ ೯೫ ಸಾವುಗಳೊಂದಿಗೆ ಸೋಂಕಿಗೆ ಬಲಿಯಾದವರ ಸಂಖ್ಯೆ ೧೯೮೧ಕ್ಕೇ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿತು.  ಒಟ್ಟು ಪ್ರಕರಣಗಳಲ್ಲಿ ೧೬,೫೪೦ ಮಂದಿ ಚೇತರಿಸಿಕೊಳ್ಳುವುದರೊಂದಿಗೆ ಭಾರತದ ಕೋವಿಡ್-೧೯ ಚೇತರಿಕೆ ಪ್ರಮಾಣವು ಶೇಕಡಾ ೨೯.೩೬ಕ್ಕೆ ಏರಿದೆ. ಶುಕ್ರವಾರ ಒಂದೇ ದಿನ ,೨೭೩ ಮಂದಿ ಗುಣಮುಖರಾಗಿದ್ದಾರೆ. ಸತತವಾಗಿ ಎರಡು ಬಾರಿ ನೆಗೆಟಿವ್ ವರದಿ ಬಂದವರನ್ನು ಮಾತ್ರವೇ ಗುಣಮುಖರಾಗಿದ್ದಾರೆ ಎಂಬುದಾಗಿ ಪರಿಗಣಿಸಿ ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ ಎಂದು ಮೂಲಗಳು ಹೇಳಿದವು. ಕೇಂದ್ರ ಸರ್ಕಾರವು ಆಸ್ಪತ್ರೆಯಿಂದ ಬಿಡುಗಡೆ ಮಾಡುವ ತನ್ನ ನೀತಿಯನ್ನೂ ಬದಲಾಯಿಸಿದ್ದು, ಬಿಡುಗಡೆಗೆ ಮುನ್ನ ಈಗ ಅತ್ಯಂತ ತೀವ್ರವಾಗಿ ಬಾಧಿಸಲ್ಪಟ್ಟವರನ್ನು ಮಾತ್ರವೇ ಪರೀಕ್ಷಿಸಲಾಗುತ್ತಿದೆ. ಜೂನ್-ಜುಲೈ ತಿಂಗಳಲ್ಲಿ ಭಾರತದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಉತ್ತುಂಗಕ್ಕೆ ಏರಬಹುದು ಎಂಬ ವರದಿಗಳ ಹಿನ್ನೆಲೆಯಲ್ಲಿ ಹೊಸ ನಿಯಮಗಳನ್ನು ಜಾರಿಗೊಳಿಸಲಾಯಿತು. ೩೮ ದಿನಗಳ ವೆಂಟಿಲೇಟರ್ ವಾಸದ ಬಳಿಕ ಶನಿವಾರ ಮನೆಗೆ ವಾಪಸಾದ ನಿತಾಯಿದಾಸ್ ಮುಖರ್ಜಿ ಅವರಿಗೆ ನೆರೆಹೊರೆಯ ಮಂದಿ ವೀರೋಚಿತ ಸ್ವಾಗತ ನೀಡಿದರು. ಇಷ್ಟೊಂದು ದೀರ್ಘಕಾಲ ವೆಂಟಿಲೇಟರಿನಲ್ಲಿ ಇದ್ದ ವ್ಯಕ್ತಿ ಚೇತರಿಸಿಕೊಂಡು ಗುಣಮುಖರಾಗಿ ಮನೆಗೆ ತೆರಳಿದ್ದು ಆಸ್ಪತ್ರೆಯ ಅಧಿಕಾರಿಗಳಿಗೆ ಪವಾಡಸದೃಶ ಘಟನೆಯಾಗಿದೆ  ಎಂದು ಆಸ್ಪತ್ರೆಯ ವೈದ್ಯರು ಹೇಳಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)

2020:  ನವದೆಹಲಿ: ರಾಷ್ಟ್ರವ್ಯಾಪಿ ಕೊರೋನಾ ದಿಗ್ಬಂಧನ (ಲಾಕ್ ಡೌನ್) ಪರಿಣಾಮವಾಗಿ ವಿವಿಧೆಡೆಗಳಲ್ಲಿ ಸಿಕ್ಕಿಹಾಕಿಕೊಂಡಿದ್ದ ವಲಸೆ ಕಾರ್ಮಿಕರನ್ನು ಅವರ ಹುಟ್ಟೂರುಗಳಿಗೆ ತೆರಳಲು ಅವಕಾಶ ಮಾಡಿಕೊಡುವ ವಿಚಾರ ಇದೀಗ ಪಶ್ಚಿಮ ಬಂಗಾಳ ಮತ್ತು ಕೇಂದ್ರ ಸರ್ಕಾರದ ಮಧ್ಯೆ ಇನ್ನೊಂದು ಸುತ್ತಿನ ಸಮರವನ್ನು ಹುಟ್ಟು ಹಾಕಿದೆ.  ಸಿಕ್ಕಿಬಿದ್ದ ವಲಸಿಗರನ್ನು ಪಶ್ಚಿಮ ಬಂಗಾಳಕ್ಕೆ ಸಾಗಿಸುವ ಬಗ್ಗೆ ನಡೆದ ವಾದವಿವಾದಗಳ ಮಧ್ಯೆ,  ಯಾವುದೇ ಶ್ರಮಿಕ್ ಸ್ಪೆಷಲ್ ರೈಲುಗಳನ್ನು ರಾಜ್ಯಕ್ಕೆ ಓಡಿಸುವ ಯಾವುದೇ ಹೊಸ ಪ್ರಸ್ತಾಪ ನಮ್ಮ ಮುಂದೆ ಇಲ್ಲ ಎಂದು ರೈಲ್ವೆ ಅಧಿಕಾರಿಗಳು 2020 ಮೇ 09ರ ಶನಿವಾರ ಹೇಳಿದರು. ಕರ್ನಾಟಕ, ತಮಿಳುನಾಡು, ಪಂಜಾಬ್ ಮತ್ತು ತೆಲಂಗಾಣದಿಂದ ವಲಸಿಗರನ್ನು ಕರೆತರಲು ಎಂಟು ರೈಲುಗಳನ್ನು ಓಡಿಸಲು ಈಗಾಗಲೇ ಯೋಜಿಸಿದ್ದೇವೆ ಎಂದು ಟಿಎಂಸಿ ಹೇಳಿದ ಕೆಲವೇ ನಿಮಿಷಗಳಲ್ಲಿ ಭಾರತೀಯ ರೈಲ್ವೆ  ಪ್ರತಿಕ್ರಿಯೆ ನೀಡಿತು. ಇನ್ನಷ್ಟು ರೈಲುಗನ್ನು ಓಡಿಸುವ ಬಗ್ಗೆ ನಮ್ಮ ಮುಂದೆ ಯಾವುದೇ ಪ್ರಸ್ತಾಪವಿಲ್ಲ ಎಂದು ರೈಲ್ವೆ ತಿಳಿಸಿತು. ಹೈದರಾಬಾದ್ನಿಂದ ಮಾಲ್ಡಾಕ್ಕೆ ಶನಿವಾರ ಮಧ್ಯಾಹ್ನ ಗಂಟೆಗೆ ವಿಶೇಷ ರೈಲು ಪಯಣಿಸಲಿದೆ ಎಂದು ತೃಣಮೂಲ ಕಾಂಗ್ರೆಸ್ ಹೇಳಿಕೆ ನೀಡಿತ್ತು. ಕೊರೋನಾವೈರಸ್ ಹಿನ್ನೆಲೆಯಲ್ಲಿ ಇತರ ರಾಜ್ಯಗಳಿಂದ ರಾಜ್ಯದ ಕಾರ್ಮಿಕರಿಗೆ ಬರಲು ರಾಜ್ಯ ಸರ್ಕಾರ ಅವಕಾಶ ನೀಡುತ್ತಿಲ್ಲ ಎಂಬ ವ್ಯಾಪಕ ಟೀಕೆಗಳು ಬಂದಿದ್ದವು. ಇದೇ ವೇಳೆಯಲ್ಲಿ,  ಪಶ್ಚಿಮ ಬಂಗಾಳಕ್ಕೆ ರೈಲುಗಳನ್ನು ಓಡಿಸಲು ಅವಕಾಶ ನೀಡದೇ ಇರುವುದು ರಾಜ್ಯದ ಕಾರ್ಮಿಕರಿಗೆ ಎಸಗಲಾಗಿರುವ ಅನ್ಯಾಯ ಎಂಬುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಪತ್ರ ಬರೆದಿದ್ದರು. ಪತ್ರದ ಬಳಿಕ ಮಮತಾ ಬ್ಯಾನರ್ಜಿ ಸರ್ಕಾರವು ರಾಜ್ಯಕ್ಕೆ  ವಿಶೇಷ ರೈಲುಗಳ ಪಯಣಕ್ಕೆ ಅನುಮತಿ ನೀಡಿತ್ತು. (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)

2020: ಮುಂಬೈ: ಔರಂಗಾಬಾದಿನಲ್ಲಿ ಮೇ ೮ರಂದು ೧೬ ಮಂದಿಯ ಸಾವಿಗೆ ಕಾರಣವಾದ ಖಾಲಿ ಗೂಡ್ಸ್ ರೈಲುಗಾಡಿ ದುರಂತದ ಹಿನ್ನೆಲೆಯಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್ಎಚ್ಆರ್ಸಿ) 2020 ಮೇ 09ರ ಶನಿವಾರ ಮಹಾರಾಷ್ಟ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಮಾಧ್ಯಮ ವರದಿಗಳನ್ನು ಆಧರಿಸಿ ಸ್ವಯಂ ಇಚ್ಛೆಯ ಪ್ರಕರಣ ದಾಖಲಿಸಿದ ಆಯೋಗ, ನಾಲ್ಕು ವಾರಗಳ ಒಳಗಾಗಿ ದುರ್ಘಟನೆ ಬಗ್ಗೆ ವಿಸ್ತೃತ ವರದಿ ಸಲ್ಲಿಸುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಔರಂಗಾಬಾದ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಗೆ ನಿರ್ದೇಶನ ನೀಡಿತು. ನಾಂದೇಡ್ ವಿಭಾಗದ ಬದ್ನಾಪುರ ಮತ್ತು ಕರ್ಮಡ್ ನಿಲ್ದಾಣಗಳ ಮಧ್ಯೆ ದುರಂತ ಸಂಭವಿಸಿತ್ತು. ಘಟನೆ ಬಗ್ಗೆ ನಾಲ್ಕು ವಾರಗಳ ಒಳಗೆ ವಿವರವಾದ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ. ವರದಿಯು ಬಡ ವ್ಯಕ್ತಿಗಳು, ವಿಶೇಷವಾಗಿ ವಲಸೆ ಕಾರ್ಮಿಕರಿಗೆ ಆಹಾರ,ಆಶ್ರಯ ಮತ್ತು ಇತರ ಅಗತ್ಯ ಸವಲತ್ತುಗಳನ್ನು ಒದಗಿಸಲಾಗಿವುದಕ್ಕೆ ಸಂಬಂಧಿಸಿದ ವಿವರಗಳನ್ನು ಒಳಗೊಂಡಿರಬೇಕು ಎಂದು ಸೂಚಿಸಲಾಗಿದೆ. ಎಲ್ಲ ಆಯಾಮಗಳಿಂದಲೂ ಘಟನೆಯನ್ನು ಪರಿಶೀಲಿಸಿ ವಲಸೆ ಕಾರ್ಮಿಕರು ಅನುಭವಿಸುತ್ತಿರುವ ತೊಂದರೆಗಳ ಬಗ್ಗೆ ಮಾಹಿತಿ ನೀಡುವಂತೆಯೂ ಸೂಚಿಸಲಾಗಿದೆ ಎಂದು ಆಯೋಗದ ಪ್ರಕಟಣೆ ತಿಳಿಸಿತು. ಸಂತ್ರಸ್ಥ ಕಾರ್ಮಿಕರು ಮತ್ತು ಅವರನ್ನು ಅವಲಂಬಿಸಿದವರಿಗೆ ಕಲ್ಪಿಸಲಾಗಿರುವ ಪರಿಹಾರ ಮತ್ತು ಪುನರ್ ವಸತಿ ವ್ಯವಸ್ಥೆಯ ವಿವರಗಳು, ಗಾಯಾಳುಗಳಿಗೆ ಒದಗಿಸಲಾದ ವೈದ್ಯಕೀಯ ಚಿಕಿತ್ಸೆಯ ವಿವgಗಳನ್ನು ಕೂಡಾ ವರದಿ ಒದಗಿಸಬೇಕು ಎಂದು ಆಯೋಗ ಸೂಚಿಸಿತು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ತಾವು ಆರೋಗ್ಯವಂತರಾಗಿದ್ದು ಯಾವುದೇ ರೋಗಬಾಧೆಯಿಂದ ಬಳಲುತ್ತಿಲ್ಲ ಎಂದು ಹೇಳುವ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಹರಡಿದ ಎಲ್ಲ ವದಂತಿಗಳನ್ನೂ 2020 ಮೇ 09ರ ಶನಿವಾರ ಮಧ್ಯಾಹ್ನ ಇಲ್ಲಿ ತಳ್ಳಿಹಾಕಿದರು. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿವರವಾದ ಪೋಸ್ಟ್ ಒಂದನ್ನು ಪ್ರಕಟಿಸಿದ ಅಮಿತ್ ಶಾ, ಕಳೆದ ಹಲವಾರು ದಿನಗಳಿಂದ ಕೆಲವರು ಸಾಮಾಜಿಕ ಮಾಧ್ಯಮದ ಮೂಲಕ ತಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೇಗೆ ವದಂತಿಗಳನ್ನು ಹರಡುತ್ತಿದ್ದಾರೆ ಎಂದು ವಿವರಿಸಿದರು. ಹಲವರು ತಮ್ಮ ಸಾವಿಗಾಗಿ ಪ್ರಾರ್ಥಿಸುತ್ತಿರುವುದಾಗಿಯೂ ಟ್ವೀಟ್ ಮಾಡಿದ್ದಾರೆ ಎಂದು ಅವರು ತಿಳಿಸಿದರು.  ದೇಶವು ಪ್ರಸ್ತುತ ಕೊರೋನಾವೈರಸ್ಸಿನಂತಹ ಜಾಗತಿಕ ಸಾಂಕ್ರಾಮಿಕದ ವಿರುದ್ಧ ಸಮರ ನಡೆಸುತ್ತಿದೆ. ನಾನು ರಾಷ್ಟ್ರದ ಗೃಹ ಸಚಿವನಾಗಿ ತಡ ರಾತ್ರಿಯವರೆಗೂ ಕಾರ್ಯಮಗ್ನನಾಗಿದ್ದುದರಿಂದ ವದಂತಿಗಳ ಬಗ್ಗೆ ಗಮನ ಹರಿಸಿರಲಿಲ್ಲ. ಕಳೆದ ರಾತ್ರಿ ಇದು ನನ್ನ ಗಮನಕ್ಕೆ ಬಂತು. ಎಲ್ಲ ವ್ಯಕ್ತಿಗಳೂ ತಮ್ಮ ಕಲ್ಪನಾವಿಲಾಸದಲ್ಲಿ ಖುಷಿ ಪಡುತ್ತಿದ್ದಾರೆ ಎಂದು ನಾನು ಯೋಚಿಸಿದೆ. ಹಾಗಾಗಿ ನಾನು ಯಾವುದೇ ಸ್ಪಷ್ಟನೆ ನೀಡಲಿಲ್ಲ ಎಂದು ಶಾ ಹೇಳಿದರು. ಆದರೆ ನನ್ನ ಪಕ್ಷದ ಲಕ್ಷಾಂತರ ಮಂದಿ ಕಾರ್ಯಕರ್ತರು ಮತ್ತು ನನ್ನ ಹಿತೈಷಿಗಳು ಕಳೆದ ಎರಡು ದಿನಗಳಿಂದ ಅತೀವ ಕಳವಳ ವ್ಯಕ್ತ ಪಡಿಸಿದ್ದಾರೆ. ನಾನು ಅವರ ಕಳವಳವನ್ನು ನಿರ್ಲಕ್ಷಿಸಲಾರೆ. ಆದ್ದರಿಂದ ನಾನು ಸಂಪೂರ್ಣ ಆರೋಗ್ಯವಂತನಾಗಿದ್ದೇನೆ ಮತ್ತು ಯಾವುದೇ ಕಾಯಿಲೆಯಿಂದ ಬಳಲುತ್ತಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಲು ನಾನು ಬಯಸಿದ್ದೇನೆ ಎಂದು ಶಾ ನುಡಿದರು. ತಮ್ಮ ಆರೋಗ್ಯದ ಬಗ್ಗೆ ಕಳಕಳಿ ವ್ಯಕ್ತ ಪಡಿಸಿದ ಎಲ್ಲ ಪಕ್ಷ ಕಾರ್ಯಕರ್ತರು ಮತ್ತು ಹಿತೈಷಿಗಳಿಗೆ ಗೃಹ ಸಚಿವರು ತಮ್ಮ ಕೃತಜ್ಞತೆಯನ್ನು ವ್ಯಕ್ತ ಪಡಿಸಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್   ಮಾಡಿರಿ)

2020: ನವದೆಹಲಿ: ಪ್ರಶ್ನಾರ್ಹ ಒಪ್ಪಂದಗಳ ಮೂಲಕ ಕೋಟ್ಯಂತರ ಡಾಲರ್ ಹಣ ಮಾಡುತ್ತಿರುವ ಸ್ವತಂತ್ರ ವಿದ್ಯುತ್ ಉತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಅತ್ಯುತ್ಸಾಹ ಚೀನಾ ಮಧ್ಯಪ್ರವೇಶದ ಬಳಿಕ ಜರ್ರನೆ ಇಳಿದಿದ್ದು, ವಿದ್ಯುತ್ ಕಂಪೆನಿಗಳ ವಿರುದ್ಧದ ಕ್ರಮಗಳನ್ನು ಅವರು ತಡೆ ಹಿಡಿದಿದ್ದಾರೆ ಎಂದು ವರದಿಗಳು 2020 ಮೇ 09ರ ಶನಿವಾರ ತಿಳಿಸಿದವು.  ಸ್ವತಂತ್ರ ವಿದ್ಯುತ್ ಉತ್ಪಾದಕರ ವಿರುದ್ಧದ ತನಿಖಾ ಕ್ರಮಗಳು ಪಾಕಿಸ್ತಾನಕ್ಕೆ ತಿರುಗುಬಾಣವಾಗಬಹುದು ಎಂಬುದಾಗಿ ಚೀನಾವು ಖಾನ್ ಅವರಿಗೆ ಎಚ್ಚರಿಕೆ ನೀಡಿದೆ ಎಂದು ಸುದ್ದಿ ಮೂಲಗಳು ತಿಳಿಸಿವೆ. ಚೀನಾದ ವಿದ್ಯುತ್ ಉತ್ಪಾದಕ ಕಂಪೆನಿಗಳು ಸೇರಿದಂತೆ ಹಲವಾರು ವಿದ್ಯುತ್ ಉತ್ಪಾದಕ ಕಂಪೆನಿಗಳಿಗೆ ನೀಡಿದ ಸಾಲ ಮತ್ತು ಸಬ್ಸಿಡಿಗಳಿಂದಾಗಿ ರಾಷ್ಟ್ರಕ್ಕೆ ಟ್ರಿಲಿಯನ್ ರೂಪಾಯಿಗಳಿಗೂ ಹೆಚ್ಚಿನ ನಷ್ಟವಾಗಿದೆ ಎಂದು ತಮ್ಮ ಸರ್ಕಾರ ರಚಿಸಿದ್ದ ತನಿಖಾ ಸಮಿತಿಯೊಂದು ಕಳೆದ ಆಗಸ್ಟ್ ತಿಂಗಳಲ್ಲಿ ವರದಿ ನೀಡಿದ ಬಳಿಕ ದೇಶದಲ್ಲಿನ ಸ್ವತಂತ್ರ ವಿದ್ಯುತ್ ಉತ್ಪಾದಕ ಕಂಪೆನಿಗಳ ಬಗ್ಗೆ ತನಿಖೆಗೆ ಇಮ್ರಾನ್ ಖಾನ್ ಸರ್ಕಾರ ಏಪ್ರಿಲ್ ೨೧ರಂದು ಆದೇಶ ನೀಡಿತ್ತು. ಪಾಕಿಸ್ತಾನದಲ್ಲಿನ ಗ್ರಾಹಕರು ಪ್ರದೇಶದಲ್ಲಿ ಅತ್ಯಂತ ಹೆಚ್ಚಿನ ದರಗಳನ್ನು ಪಾವತಿ ಮಾಡಬೇಕಾಗಿ ಬಂದಿರುವುದು ಏಕೆ ಎಂಬುದಾಗಿ ಪತ್ತೆ ಮಾಡುವಂತೆ ಸರ್ಕಾರವು ತನಿಖಾ ಸಮಿತಿಗೆ ಆದೇಶ ನೀಡಿತ್ತು. ೧೬ ಸ್ವತಂತ್ರ ವಿದ್ಯುತ್ ಉತ್ಪಾದಕ ಕಂಪೆನಿಗಳು (ಐಪಿಪಿ) ಸುಮಾರು ೬೦ ಬಿಲಿಯನ್ (೬೦೦೦ ಕೋಟಿ) ರೂಪಾಯಿಗಳನ್ನು ಹೂಡಿಕೆ ಮಾಡಿ ಸುಮಾರು ೪೦೦ ಬಿಲಿಯನ್ (೪೦,೦೦೦ ಕೋಟಿ) ರೂಪಾಯಿಗಳಷ್ಟು ಲಾಭವನ್ನು ಎರಡರಿಂದ ನಾಲ್ಕು ವರ್ಷಗಳ ಅವಧಿಯಲ್ಲಿ  ಮಾಡಿವೆ ಎಂದು ಸಮಿತಿ ಹೇಳಿತ್ತು. ಆದರೆ ವಾರ ಇಮ್ರಾನ್ ಖಾನ್ ಅವರು ಸಮಿತಿಯ ವರದಿ ಮೇಲಿನ ತನಿಖಾ ಕ್ರಮವನ್ನು ದಿಢೀರನೆ ಎರಡು ತಿಂಗಳ ಅವಧಿಗೆ ಮುಂದೂಡಿದರು.  (ವಿವರಗಳಿಗೆ ಇಲ್ಲಿ  ಕ್ಲಿಕ್   ಮಾಡಿರಿ)

2020: ನವದೆಹಲಿ:  ಅಸಾಧಾರಣ ನಡೆಯೊಂದರಲ್ಲಿ ಕೇಂದ್ರ ಸರ್ಕಾರವು  2020 ಮೇ 09ರ ಶನಿವಾರ ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ನೀಡುವ ದೇಣಿಗೆಗಳಿಗೆ ತೆರಿಗೆ ವಿನಾಯಿತಿಯನ್ನು ಘೋಷಿಸಿತು. ಕೇಂದ್ರ ನೇರ ತೆರಿಗೆ ಮಂಡಳಿಯು 2020 ಮೇ ೮ರಂದು ಈ ಬಗ್ಗೆ ಅಧಿಸೂಚನೆಯೊಂದನ್ನು ಹೊರಡಿಸಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ ೮೦ ಜಿಯ ಉಪವಾಕ್ಯ (ಬಿ) ಅನ್ವಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರವನ್ನು ಐತಿಹಾಸಿಕ ಮಹತ್ವದ ಹಾಗೂ ಪ್ರಸಿದ್ಧ ಸಾರ್ವಜನಿಕ ಆರಾಧನಾ ಸ್ಥಳವೆಂದು ವರ್ಗೀಕರಿಸಲಾಗಿದೆ. ಇದರಿಂದಾಗಿ ೨೦೨೦-೨೧ರ ವಿತ್ತೀಯ ವರ್ಷದಲ್ಲಿ ಟ್ರಸ್ಟ್ಗೆ ದೇಣಿಗೆ ನೀಡುವವರ ಆದಾಯ ತೆರಿಗೆಯಲ್ಲಿ ಶೇ.೫೦ರವರೆಗೆ ವಿನಾಯಿತಿ ನೀಡಬಹುದಾಗಿದೆ ಎಂದ ಹೇಳಿಕೆ ತಿಳಿಸಿತು. ೧೫ ಸದಸ್ಯರನ್ನೊಳಗೊಂಡ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅನ್ನು ಕೇಂದ್ರ ಸರ್ಕಾರವು  ಫೆಬ್ರವರಿ ೫ರಂದು ರಚಿಸಿತ್ತು. ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ರಾಮಮಂದಿರವನ್ನು ನಿರ್ಮಿಸಲು ಸುಪ್ರೀಂಕೋರ್ಟ್ ಆದೇಶ ನೀಡಿದ ಮೂರು ತಿಂಗಳ ಬಳಿಕ ಟ್ರಸ್ಟ್ ರಚನೆಯಾಗಿತ್ತು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  History Today ಮೇ 09  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)


No comments:

Post a Comment