2020: ನವದೆಹಲಿ: ಕೊರೋನವೈರಸ್ ಲಾಕ್ಡೌನ್ ಹಿನ್ನೆಲೆಯಲ್ಲಿ ವಿದೇಗಳಲ್ಲಿ ಸಿಲುಕಿರುವ ೧೪,೮೦೦ ಕ್ಕೂ ಹೆಚ್ಚು ಭಾರತೀಯರನ್ನು ಶೀಘ್ರದಲ್ಲೇ ಸುಮಾರು ೬೪ ವಿಮಾನಗಳಲ್ಲಿ ಸ್ವದೇಶಕ್ಕೆ ಕರೆ ತರಲಾಗುವುದು. ಏರ್ ಇಂಡಿಯಾ ಮತ್ತು ಅದರ ಅಂಗಸಂಸ್ಥೆ ಏರ್ ಇಂಡಿಯಾ ಎಕ್ಸ್ಪ್ರೆಸ್ ನಿರ್ವಹಿಸುವ ವಿಶೇಷ ವಿಮಾನಗಳು ಮೇ ೭ ರಿಂದ ೧೩ ರವರೆಗೆ ಈ ವಲಸಿಗರ ಭಾರತೀಯರನ್ನು ಕರೆತರಲಿವೆ ಎಂದು ಹಿರಿಯ ಸರ್ಕಾರಿ ಅಧಿಕಾರಿಗಳು 2020 ಮೇ 05ರ ಮಂಗಳವಾರ ತಿಳಿಸಿದರು. ವಾಪಸಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಭಾರತವು ಒಟ್ಟು ೧೨ ದೇಶಗಳತ್ತ ಗಮನ ಹರಿಸಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಇಂಗ್ಲೆಂಡ್, ಅಮೆರಿಕ, ಕತಾರ್, ಸೌದಿ ಅರೇಬಿಯಾ, ಸಿಂಗಾಪುರ, ಮಲೇಷ್ಯಾ, ಫಿಲಿಪೈನ್ಸ್, ಬಾಂಗ್ಲಾದೇಶ, ಬಹ್ರೇನ್, ಕುವೈತ್ ಮತ್ತು ಓಮನ್ ಈ ೧೨ ದೇಶಗಳಿಂದ ಭಾರತೀಯgನ್ನು ಕರೆತರಲು ಈ ವಿಶೇಷ ವಿಮಾನಗಳನ್ನು ಬಳಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು. ಕೊರೋನವೈರಸ್ ಹರಡುವುದನ್ನು ತಡೆಯಲು ಭಾರತವು ಮಾರ್ಚ್ ೨೫ ರಿಂದ ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ ಡೌನ್) ಘೋಷಿಸಿತ್ತು. ಈ ದಿಗ್ಬಂಧನವು ಮೇ ೧೭ ರವರೆಗೆ ಮುಂದುವರೆಯಲಿದೆ. ಈ ಅವದಿಯಲ್ಲಿ ಎಲ್ಲ ವಾಣಿಜ್ಯ ಪ್ರಯಾಣಿಕರ ವಿಮಾನಗಳನ್ನು ಸ್ಥಗಿತಗೊಳಿಸಲಾಗಿದೆ. ಹೀಗಾಗಿ, ಮೇ ೭ ರಿಂದ ವಿದೇಶಗಳಲ್ಲಿ ಸಿಲುಕಿರುವ ರೋಗ ಲಕ್ಷಣ ರಹಿತ ಭಾರತೀಯ ಪ್ರಜೆಗಳನ್ನು ಹಂತ ಹಂತವಾಗಿ ವಿಮಾನ ಮತ್ತು ನೌಕಾಪಡೆ ಹಡಗುಗಳ ಮೂಲಕ ಪಾವತಿ ಆಧಾರದ ಮೇಲೆ ಹಿಂದಕ್ಕೆ ಕರೆತರಲಾಗುವುದು ಎಂದು ಎಂದು ಗೃಹ ವ್ಯವಹಾರ ಸಚಿವಾಲಯ ಸೋಮವಾರ ಪ್ರಕಟಿಸಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಕೊರೊನಾವೈರಸ್ ವಿರುದ್ಧ ಹೋರಾಟ ನಡೆಸಿರುವ ಭಾರತದ ವಿರುದ್ಧ ಮುಸ್ಲಿಮರು ಜಿಹಾದ್ ನಡೆಸಬೇಕಾಗಿದೆ ಎಂದು ಅರಬ್ ಪರ್ಯಾಯದ್ವೀಪದ ದಕ್ಷಿಣ ತುದಿಯಲ್ಲಿರುವ ಯೆಮೆನ್ನ ಅಲ್ ಖೈದಾ (ಎಕ್ಯೂಎಪಿ) ಉಗ್ರ ಸಂಘಟನೆ 2020 ಮೇ 05ರ ಮಂಗಳವಾರ ಕರೆ ನೀಡಿದೆ. ಕಾಶ್ಮೀರದಲ್ಲಿರುವ ಉಗ್ರರಿಗೆ ಭಾರತದ ವಿರುದ್ಧ ಸಮರ ಸಾರುವಂತೆ ಈ ಉಗ್ರ ಸಂಘಟನೆಯ ಮುಖ್ಯಸ್ಥ ಅಯ್ಮಾನ್ ಅಲ್ ಜವಾಹಿರಿ ಈ ಹಿಂದೆ ಕರೆ ನೀಡಿದ್ದ. ಮುಸ್ಲಿಮರ ವಿರುದ್ಧ ನಡೆದಿರುವ ಜಾಗತಿಕ ಸಮರದಲ್ಲಿ ಭಾರತವೂ ಕೈಜೋಡಿಸಿದೆ ಎಂಬುದಾಗಿ ಜಾಗತಿಕ ನಿಷೇಧಕ್ಕೆ ಒಳಗಾಗಿರುವ ಯೆಮನ್ ಅಲ್ ಖೈದಾ ಸಂಘಟನೆ ಆಪಾದಿಸಿದೆ. ಭಾರತವನ್ನು ಇಸ್ಲಾಮೋಫೋಬಿಕ್ ಎಂದು ಕುವೈತ್ ಸರ್ಕಾರ, ಅರಬ್ ಸಂಘಟನೆಗಳು, ಇಸ್ಲಾಮಿಕ್ ಕೋ ಆಪರೇಷನ್ ಆರ್ಗನೈಜೇಷನ್(ಒಐಸಿ) ಪರಿಗಣಿಸಿವೆ ಎಂದು ಅಲ್ ಖೈದಾ ಹೇಳಿದೆ. ಪೌರತ್ವ ತಿದ್ದುಪಡಿ ಕಾಯ್ದೆ, ತಬ್ಲಿಘಿ ಸಂಘಟನೆ ಮೇಲೆ ಆರೋಪ ಇವೆಲ್ಲವೂ ಭಾರತವನ್ನು ಮುಸ್ಲಿಂ ದ್ವೇಷಿ ಎಂಬುದಾಗಿ ತೋರಿಸಲು ಪಾಕಿಸ್ತಾನ ಹೂಡಿರುವ ತಂತ್ರವಾಗಿದ್ದು, ಇದಕ್ಕೆ ಪೂರಕವಾಗಿ ಅರಬ್ ಸಂಘಟನೆ ಭಾರತದ ವಿರುದ್ಧ ತಿರುಗಿ ಬಿದ್ದಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಪ್ರಸ್ತುತ ವರ್ಷ ವರ್ಷ ಜೆಇಇ (ಮುಖ್ಯ) ಪರೀಕ್ಷೆಯು ಜುಲೈ ೧೮ ರಿಂದ ೨೩ ರವರೆಗೆ ಮತ್ತು ನೀಟ್ ಪರೀಕ್ಷೆಯು ಜುಲೈ ೨೬ ರಂದು ನಡೆಯಲಿದೆ ಎಂದು ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು 2020 ಮೇ 05ರ ಮಂಗಳವಾರ ಪ್ರಕಟಿಸಿದರು. ಇದರೊಂದಿಗೆ ಸುಮಾರು ೨೫ ಲಕ್ಷ ಅಭ್ಯರ್ಥಿಗಳ ಅನಿಶ್ಚಿತತೆಯ ದಿನಗಳು ಕೊನೆಗೊಂಡವು. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಈ ಹಿಂದೆ ಏಪ್ರಿಲ್ ೫,೭,೮, ಮತ್ತು ೧೧ ರಂದು ನಡೆಯಬೇಕಾಗಿದ್ದ ೨೦೨೦ರ ಜೆಇಇ (ಮುಖ್ಯ) ಪರೀಕ್ಷೆಯನ್ನು ಮೇ ಕೊನೆಯ ವಾರಕ್ಕೆ ಮುಂದೂಡಿತ್ತು. ಸಿಬಿಎಸ್ಇ ೧೦ ನೇ ತರಗತಿ, ೧೨ ಬೋರ್ಡ್ ಪರೀಕ್ಷೆಗಳ ಕುರಿತು ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದೂ ಸಚಿವರು ನುಡಿದರು.ಕೊರೋನಾವೈರಸ್ ಪ್ರಸರಣವನ್ನು ತಡೆಗಟ್ಟುವ ಸಲುವಾಗಿ ಕೇಂದ್ರ ಸರ್ಕಾರವು ಘೋಷಿಸಿದ ಕ್ರಮಗಳ ಹಿನ್ನೆಲೆಯಲ್ಲಿ ಮಾರ್ಚ್ ೧೬ ರಿಂದ ದೇಶಾದ್ಯಂತ ವಿಶ್ವವಿದ್ಯಾಲಯಗಳು ಮತ್ತು ಶಾಲೆಗಳನ್ನು ಮುಚ್ಚಲಾಗಿತ್ತು. ನಂತರ, ಮಾರ್ಚ್ ೨೪ ರಂದು ರಾಷ್ಟ್ರವ್ಯಾಪಿ ಲಾಕ್ಡೌನ್ ಘೋಷಿಸಲಾಯಿತು. ಕೊರೋನವೈರಸ್ ಸಾಂಕ್ರಾಮಿಕ ರೋU ಹರಡದಂತೆ ತಡೆಯುವ ಸಲುವಾಗಿ ಘೋಷಿಸಲಾದ ದಿಗ್ಬಂಧನವನ್ನು ವಿಸ್ತರಿಸಿದ್ದರಿಂದ ನೀಟ್ ಮತ್ತು ಜೆಇಇ ಪರೀಕ್ಷೆಗಳನ್ನು ಸಹ ಮುಂದೂಡಲಾಗಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಕೊರೋನಾವೈರಸ್ ಸೋಂಕಿನ ಪ್ರಕರಣ ಹಾಗೂ ಸಾವು ಪ್ರಕರಣಗಳು 2020 ಮೇ 05ರ ಮಂಗಳವಾರ ಭಾರತದಲ್ಲಿ ಏಕಾಏಕಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು ೨೪ ಗಂಟೆಗಳ ಅವಧಿಯಲ್ಲಿ ೩೯೦೦ ಸೋಂಕಿನ ಹೊಸ ಪ್ರಕರಣಗಳು ಮತ್ತು ವಿವಿಧ ಆಸ್ಪತ್ರೆಗಳಲ್ಲಿ ಕೋವಿಡ್-೧೯ ರೋಗಿಗಳ ೧೯೫ ಸಾವಿನ ಪ್ರಕರಣಗಳು ವರದಿಯಾದವು. ೨೪ ಗಂಟೆಗಳ ಅವಧಿಯಲ್ಲಿ ಕೊರೋನಾವೈರಸ್ ಸೋಂಕಿನ ಪ್ರಕರಣಗಳ ಪ್ರಮಾಣ ಶೇಕಡಾ ೫೦ರಷ್ಟು ಏರಿಕೆಯಾಗಿದ್ದು ಮೇ ೩ರಂದು ದಾಖಲೆಯ ೨,೬೪೪ ಹೊಸ ಪ್ರಕರಣ ದಾಖಲಾಗಿದ್ದವು. ಈದಿನದ ೨೯೦೦ ಹೊಸ ಪ್ರಕರಣಗಳೊಂದಿಗೆ ಭಾರತದ ಒಟ್ಟು ಕೋವಿಡ್-೧೯ ಪ್ರಕರಣಗಳ ಸಂಖ್ಯೆ ೪೬,೭೧೧ಕ್ಕೆ ಏರಿದೆ. ಇದರಲ್ಲಿ ಒಟ್ಟು ೧೫೮೩ ಸಾವು ಪ್ರಕರಣಗಳೂ ಸೇರಿದೆ. ಒಟ್ಟು ಪ್ರಕರಣಗಳಲ್ಲಿ ೧೨,೭೨೭ ರೋಗಿಗಳು ಚೇತರಿಸಿಕೊಂಡಿದ್ದು, ಚೇತರಿಕೆಯ ಪ್ರಮಾಣ ಶೇಕಡಾ ೨೭ನ್ನು ದಾಟಿತು.. ಸೋಮವಾರ ಸಂಜೆಯಿಂದೀಚೆಗೆ ಒಟ್ಟು ೧೭೯ ಸಾವುಗಳು ವರದಿಯಾಗಿದ್ದು, ಈ ಪೈಕಿ ೯೮ ಪ್ರಕರಣಗಳು ಪಶ್ಚಿಮ ಬಂಗಾಳ, ೩೫ ಪ್ರಕರಣಗಳು ಮಹಾರಾಷ್ಟ್ರ, ೨೯ ಪ್ರಕರಣಗಳು ಗುಜರಾತ್, ೬ ಪ್ರಕರಣಗಳು ರಾಜಸ್ಥಾನ, ೫ ಪ್ರಕರಣಗಳು ಉತ್ತರ ಪ್ರದೇಶ, ಎರಡು ಪ್ರಕರಣಗಳು ಪಂಜಾಬ್ ಮತ್ತು ತಲಾ ಒಂದು ಪ್ರಕರಣ ಚಂಡೀಗಢ, ಹರಿಯಾಣ, ಕರ್ನಾಟಕ ಮತ್ತು ತಮಿಳುನಾಡಿನಿಂದ ವರದಿಯಾದವು. ಪಶ್ಚಿಮ ಬಂಗಾಳದಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ೭೨ ಮಂದಿ ಕೋವಿಡ್ -೧೯ ರೋಗಿಗಳ ಸಾವಿನೊಂದಿಗೆ ರಾಜ್ಯದಲ್ಲ್ಲಿ ದೈನಂದಿನ ಸಾವಿನ ಸಂಖ್ಯೆ ಅತ್ಯಂತ ಹೆಚ್ಚಾಯಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ದೆಹಲಿಯ ಸೇನಾ ಆಸ್ಪತ್ರೆಯಲ್ಲಿ (ಸಂಶೋಧನೆ ಮತ್ತು ರೆಫರಲ್) 2020 ಮೇ 05ರ ಮಂಗಳವಾರ ಕೋವಿಡ್-೧೯ ರೋಗದ ೨೪ ಪ್ರಕರಣಗಳು ವರದಿಯಾದವು. ಇವುಗಳಲ್ಲಿ ಕೆಲವರು ಸೇವಾ ನಿರತ ಸಿಬ್ಬಂದಿ ಸೇರಿದ್ದಾರೆ ಎಂದು ಇಬ್ಬರು ಅಧಿಕಾರಿಗಳು ತಿಳಿಸಿದರು. ಎಲ್ಲ ೨೪ ಪಾಸಿಟಿವ್ ಪ್ರಕರಣಗಳು ಆಸ್ಪತ್ರೆಯ ಗ್ರಂಥಿ ವಿಜ್ಞಾನ (ಆಂಕೋಲಜಿ) ವಾರ್ಡಿನಿಂದ ವರದಿಯಾಗಿವೆ ಎಂದು ಅಧಿಕಾರಿಯೊಬ್ಬರು ಹೇಳಿದರು. ಯಾರೇ ಆರೋಗ್ಯ ರಕ್ಷಣಾ ಕಾರ್ಯಕರ್ತರಿಗೆ ಕೋವಿಡ್-೧೯ ಈವರೆಗೂ ಅಂಟಿಲ್ಲ. ಸಂಪರ್ಕ ಇತಿಹಾಸ ಪತ್ತೆ ಸೇರಿದಂತೆ ಸಕಲ ಶಿಷ್ಟಾಚಾರದ ಅಗತ್ಯ ಕ್ರಮಗಳನ್ನೂ ಕೈಗೊಳ್ಳಲಾಗಿದೆ ಎಂದು ಅಧಿಕಾರಿ ನುಡಿದರು. ಪಾಸಿಟಿವ್ ಪ್ರಕರಣಗಳಲ್ಲಿ ಸೇವಾ ನಿರತ ಮತ್ತು ನಿವೃತ್ತ ಸಿಬ್ಬಂದಿಯೂ ಸೇರಿದ್ದಾರೆ. ಅವರನ್ನು ಅವಲಂಬಿಸಿದವರ ಪೈಕಿ ಕೆಲವರನ್ನು ಕೂಡಾ ದೆಹಲಿ ದಂಡು ಪ್ರದೇಶದ ಸೇನಾ ಮೂಲ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇದು ಕೋವಿಡ್ -೧೯ ಸಲುವಾಗಿಯೇ ಮೀಸಲಾಗಿರುವ ಆಸ್ಪತ್ರೆಯಾಗಿದೆ ಎಂದು ಎರಡನೇ ಅಧಿಕಾರಿ ನುಡಿದರು. ಕಳೆದ ತಿಂಗಳು ಭಾರತೀಯ ನೌಕಾಪಡೆಯ ೨೬ ಮಂದಿ ನಾವಿಕರಿಗೆ ಕೊರೋನಾವೈರಸ್ ಸೋಂಕು ತಗಲುವುದರೊಂದಿಗೆ ಭಾರತೀಯ ಸೇನೆಯಲ್ಲಿ ಅತ್ಯಂತ ದೊಡ್ಡ ಪ್ರಮಾಣದ ಏಕೈಕ ಪ್ರಕರಣ ವರದಿಯಾಗಿತ್ತು. ಪಶ್ಚಿಮ ನೌಕಾ ಕಮಾಂಡ್ ಅಡಿಯಲ್ಲಿನ ಸಾಗಣೆ ಮತ್ತು ಆಡಳಿತಾತ್ಮಕ ಬೆಂಬಲ ನೆಲೆಯ ಐಎನ್ ಎಸ್ ಆಂಗ್ರೆಯಲ್ಲಿ ಈ ಘಟನೆ ಘಟಿಸಿತ್ತು. ಎಲ್ಲ ಸೋಂಕಿನ ಪ್ರಕರಣಗಳೂ ಒಬ್ಬನೇ ಒಬ್ಬ ನಾವಿಕನಿಂದ ಹರಡಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಕೊರೋನಾವೈರಸ್ ಪರಿಣಾಮವಾಗಿ ವಿದೇಶಗಳಲ್ಲಿ ಸಿಕ್ಕಿಹಾಕಿಕೊಂಡ ಭಾರತೀಯರು ಮರಳಿ ತಾಯ್ನಾಡಿಗೆ ತಮ್ಮನ್ನು ಒಯ್ಯುವ ವಿಮಾನಗಳಿಗೆ ಪಯಣದ ವೆಚ್ಚ ಪಾವತಿ ಮಾಡಬೇಕಾಗುತ್ತದೆ ಎಂದು ವಿಮಾನಯಾನ ಸಚಿವ ಹರದೀಪ್ ಪುರಿ ಅವರು 2020 ಮೇ 05ರ ಮಂಗಳವಾರ ಇಲ್ಲಿ ಪ್ರಕಟಿಸಿದರು. ರೋಗ ಲಕ್ಷಣ ರಹಿತರಾದ ಎಲ್ಲ ಭಾರತೀಯರಿಗೂ ತಾಯ್ನಾಡು ತಲುಪಿದ ಬಳಿಕ ೧೪ ದಿನಗಳ ಸ್ವಯಂ ಕ್ವಾರಂಟೈನ್ ಮಾಡಿಕೊಳ್ಳಲು ಸೂಚಿಸಲಾಗುವುದು, ಈ ಕ್ವಾರಂಟೈನ್ ವ್ಯವಸ್ಥೆಯ ಹೊಣೆಗಾರಿಕೆ ಆಯಾ ರಾಜ್ಯ ಸರ್ಕಾರಗಳಿಗೆ ಸೇರಿದೆ ಎಂದು ಅವರು ನುಡಿದರು. ಮೇ ೭ರಿಂದ ಎಲ್ಲ ವಿಮಾನಗಳ ಹಾರಾಟ ವ್ಯವಸ್ಥೆಯನ್ನೂ ಏರ್ ಇಂಡಿಯಾ ಮಾಡುವುದು. ಖಾಸಗಿ ವಿಮಾನಗಳ ಬಳಕೆ ಬಗೆಗೂ ಪರಿಶೀಲಿಸಲಾಗುವುದು ಎಂದು ಸಚಿವರು ನುಡಿದರು. ಅಮೆರಿಕ ಮತ್ತು ಇಂಗ್ಲೆಂಡಿನಿಂದ ಭಾರತಕ್ಕೆ ವಾಪಸಾಗುವ ವೆಚ್ಚ ವ್ಯಕ್ತಿಯೊಬ್ಬರಿಗೆ ಕ್ರಮವಾಗಿ ೧ ಲಕ್ಷ ರೂಪಾಯಿ ಮತ್ತು ೫೦,೦೦೦ ರೂಪಾಯಿ ಆಗುತ್ತದೆ ಎಂದು ಪುರಿ ಹೇಳಿದರು. ಸಿಂಗಾಪುರ-ದೆಹಲಿ/ಮುಂಬೈ ಪಯಣದ ವೆಚ್ಚ ೨೦,೦೦೦ ರೂಪಾಯಿ ಆಗುತ್ತದೆ. ಸಿಂಗಾಪುರ-ಬೆಂಗಳೂರು ಪಯಣದ ವೆಚ್ಚ ೧೮,೦೦೦ ರೂಪಾಯಿಗಳಾಗುತ್ತವೆ ಎಂದು ಎಚ್.ಎಸ್. ಪುರಿ ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment