2020: ನವದೆಹಲಿ: ಇಡೀ ಜಗತ್ತಿನ ೪೨ ಲಕ್ಷಕ್ಕೂ ಹೆಚ್ಚು ಮಂದಿಯನ್ನು
ಕಾಡುತ್ತಿರುವ ಕೊರೋನಾವೈರಸ್ ವಿರುದ್ಧ ಹೋರಾಟಕ್ಕಾಗಿ ’ಆತ್ಮ ನಿರ್ಭರ ಭಾರತ’ ದ (ಸ್ವಾವಲಂಬಿ ಭಾರತ)
ಸಂಕಲ್ಪದೊಂದಿಗೆ ದೇಶದ ಅಭಿವೃದ್ಧಿ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು 2020 ಮೇ 12ರ ಮಂಗಳವಾರ
೨೦ ಲಕ್ಷ ಕೋಟಿ ರೂಪಾಯಿಗಳ ವಿಶೇಷ ಕೊಡುಗೆಯನ್ನು ಘೋಷಿಸಿದರು. ರಾಷ್ಟ್ರವನ್ನು
ಉದ್ದೇಶಿಸಿ ತಮ್ಮ ೫ನೇ ಭಾಷಣವನ್ನು ಮಾಡಿದ ಪ್ರಧಾನಿ ಭೂಮಿಗೆ, ಹಣದ ಹರಿವಿಗೆ, ಹಗಲಿರುಳು ದುಡಿಯುವವರಿಗೆ
ಈ ಆರ್ಥಿಕ ಕೊಡುಗೆಯಿಂದ ಅನುಕೂಲವಾಗಲಿದೆ. ಈ ವಿಶೇಷ ಕೊಡುಗೆ ಬಗ್ಗೆ ಬುಧವಾರ
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಪೂರ್ಣ ಮಾಹಿತಿ ನೀಡಲಿದ್ದಾರೆ ಎಂದು ಮೋದಿ ಪ್ರಕಟಿಸಿದರು.
ಭಾರತವು ಈದಿನ ಘೋಷಿಸುತ್ತಿರುವ ೨೦ ಲಕ್ಷ ಕೋಟಿ ರೂಪಾಯಿಗಳ
ವಿಶೇಷ ಕೊಡುಗೆಯು ಭಾರತದ ಜಿಡಿಪಿಯ ಶೇಕಡಾ ೧೦ರಷ್ಟು ಆಗುತ್ತದೆ. ಇದು ರೈತರು, ಶ್ರಮಿಕರು, ಕಾರ್ಮಿಕರು,
ಎಂಎಸ್‌ಎಂಇ ಸಹಿತ ಎಲ್ಲ ಉದ್ಯಮಿಗಳು ಸೇರಿದಂತೆ ಸಂಕಷ್ಟದಲ್ಲಿ ಇರುವ ಎಲ್ಲ ವರ್ಗಗಳ ನೆರವಿಗೆ ಬರಲಿದೆ
ಎಂದು ಪ್ರಧಾನಿ ನುಡಿದರು. ಪ್ರಾಮಾಣಿಕವಾಗಿ ತೆರಿಗೆ ಸಲ್ಲಿಸುತ್ತಿರುವ ಎಲ್ಲರಿಗೂ ಈ ನೆರವು ನಾಳೆಯಿಂದ
ಆರಂಭವಾಗಲಿದೆ. ’ಆತ್ಮ ನಿರ್ಭರ ಭಾರತ ಅಭಿಯಾನ’ದ ಕಡೆಗೆ ದೇಶವನ್ನು ಮುನ್ನಡೆಸುವ ಈ ಕೊಡುಗೆ ವಿವರಗಳನ್ನು ಬುಧವಾರ ವಿತ್ತ ಸಚಿವೆ ನೀಡಲಿದ್ದಾರೆ
ಎಂದು ಅವರು ಹೇಳಿದರು. ಸರ್ಕಾರದ ಈ ವಿಶೇಷ ಕೊಡುಗೆಯು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಭಾರತಕ್ಕೆ
ಬಲ ತುಂಬಲಿದೆ. ಭಾರತವು ವಿಶ್ವದ ಸರಬರಾಜು ಸರಪಣಿಯಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿದೆ ಎಂದು ಮೋದಿ
ಹೇಳಿದರು. ಕಲ್ಪಿಸಿಕೊಳ್ಳಲಾಗದಂತಹ ಬಿಕ್ಕಟ್ಟು ಈಗಿನದು. ಇಂತಹ ಸಂದರ್ಭದಲ್ಲಿ ಸ್ವಾವಲಂಬನೆಯೊಂದೇ
ಮುಂದುವರೆಯಲು ನಮಗೆ ಇರುವ ಮಾರ್ಗ. ನಾವು ಬಲಾಡ್ಯರಾಗಬೇಕು ಇದೇ ವೇಳೆಗೆ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು
ಎಂದು ಪ್ರಧಾನಿ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಕೋವಿಡ್ ದಿಗ್ಬಂಧನದ (ಲಾಕ್ ಡೌನ್) ಬಳಿಕ ರೈಲು
ಪ್ರಯಾಣಿಕರಿಗೆ ತಮ್ಮ ಫೋನುಗಳಲ್ಲಿ ಆರೋಗ್ಯ ಸೇತು ಅಪ್ಲಿಕೇಷನ್ (ಆಪ್) ಅಳವಡಿಕೆಯನ್ನು ಕೇಂದ್ರ ಸರ್ಕಾರವು
ಕಡ್ಡಾಯಗೊಳಿಸಿದೆ. ವಿಮಾನ ಪ್ರಯಾಣಿಕರಿಗೂ ತಮ್ಮ ಮೊಬೈಲ್‌ಗಳಲ್ಲಿ ಈ ಆಪ್ ಅಳವಡಿಕೆಯನ್ನು ಕಡ್ಡಾಯಗೊಳಿಸುವ
ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ‘ಆರೋಗ್ಯ ಸೇತು ಆಪ್ ಅಳವಡಿಕೆಯನ್ನು ವಿಮಾನ ಪ್ರಯಾಣಿಕರಿಗೆ
ಕಡ್ಡಾಯಗೊಳಿಸುವ ಬಗ್ಗೆ ವಿಮಾನಯಾನ ಸಂಸ್ಥೆಗಳ ಜೊತೆ ಪ್ರಾಥಮಿಕ ಮಾತುಕತೆ ನಡೆಸಲಾಗಿದೆ, ಆದರೆ ನಾಗರಿಕ
ವಿಮಾನಯಾನ ಸಚಿವಾಲಯವು ಈ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ’ ಎಂದು ಸರ್ಕಾರಿ ಅಧಿಕಾರಿಗಳು 2020 ಮೇ 12ರ
ಮಂಗಳವಾರ ಹೇಳಿದರು. ಏನಿದ್ದರೂ ಪ್ರತಿ ಪ್ರಕರಣವನ್ನು ಆಧರಿಸಿ ಯಾವುದೇ ಅಪವಾದಗಳ ಬಗ್ಗೆ ನಿರ್ಧರಿಸಲಾಗುವುದು
ಎಂದು ಹೇಳಿದ ಅಧಿಕಾರಿಗಳು ತಮ್ಮ ಮೊಬೈಲ್ ಫೋನುಗಳಲ್ಲಿ ಆರೋಗ್ಯ ಸೇತು ಆಪ್ ಅಳವಡಿಸಕೊಳ್ಳದ ಪ್ರಯಾಣಿರಿಗೆ
ಪಯಣದ ಅವಕಾಶ ನಿರಾಕರಿಸುವ ಸಾಧ್ಯತೆಗಳನ್ನು ತಳ್ಳಿಹಾಕಲಿಲ್ಲ. ದೆಹಲಿ ಮತ್ತು ರಾಷ್ಟ್ರದ ಪ್ರಮುಖ ನಗರಗಳಿಗೆ ೧೫ ಜೊತೆ ವಿಶೇಷ
ರೈಲುಗಳನ್ನು ಓಡಿಸಲು ಅನುಮತಿ ನೀಡಿರುವ ರೈಲ್ವೇಯು ಮೊಬೈಲ್ ಆಪ್ ಅಳವಡಿಕೆಯನ್ನು ಕಡ್ಡಾಯಗೊಳಿಸುವ
ಬಗ್ಗೆ ಮಾರ್ಗಸೂಚಿಯಲ್ಲಿ ಏನನ್ನೂ ಹೇಳಿಲ್ಲ. ಆದರೆ
ತಡರಾತ್ರಿ (ನಸುಕಿನ ೧೨.೨೪ ಗಂಟೆಯ) ಟ್ವೀಟಿನಲ್ಲಿ ರೈಲ್ವೇ ಸಚಿವಾಲಯವು ಅದನ್ನು ಕಡ್ಡಾಯಗೊಳಿಸಿದೆ
ಎಂದು ಹೇಳಿದೆ. ‘ರೈಲ್ವೇ ಪಯಣಕ್ಕೆ ಈಗ ಫೋನುಗಳಲ್ಲಿ
ಆರೋಗ್ಯ ಸೇತು ಆಪ್ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ರೈಲ್ವೇ ವಕ್ತಾರರಾದ ಆರ್ ಡಿ ಬಾಜಪೇಯಿ
ಅವರು ದೃಢಪಡಿಸಿದ್ದಾರೆ. ರೈಲು ಟಿಕೆಟ್‌ಗಳನ್ನು ಆನ್ ಲೈನ್ ಮೂಲಕ ಬುಕ್ ಮಾಡಲು ಮೊಬೈಲ್ ನಂಬರ್ ಕಡ್ಡಾಯವಾಗಿರುವುದರಿಂದ
ಎಲ್ಲ ಪ್ರಯಾಣಿಕರೂ ತಮ್ಮ ಬಳಿ ಮೊಬೈಲ್ ಫೋನುಗಳನ್ನು ಇಟ್ಟುಕೊಂಡಿರಬೇಕು ಎಂದು ಅವರು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ:
ಪೀಪಲ್ಸ್ ಲಿಬರೇಷನ್ ಆರ್ಮಿಗೆ ಸೇರಿದ ಎರಡು ಚೀನೀ ಹೆಲಿಕಾಪ್ಟರುಗಳು ಪೂರ್ವ ಲಡಾಖ್ ಪ್ರದೇಶದಲ್ಲಿ
ಮೇ ೫ರ ಮಧ್ಯಾಹ್ನ ಭಾರತೀಯ ವಾಯುಪ್ರದೇಶವನ್ನು ಉಲ್ಲಂಘಿಸಿದ ಘಟನೆ ಘಟಿಸಿದೆ. ಹಿರಿಯ ಸೇನಾ ಅಧಿಕಾರಿಯೊಬ್ಬರು
ಲಡಾಖ್‌ನತ್ತ ವಿಮಾನದಲ್ಲಿ ತೆರಳಿದ್ದ ವೇಳೆಯಲ್ಲೇ ಈ ಘಟನೆ ಸಂಭವಿಸಿದೆ ಎಂದು ಮೂಲಗಳು 2020 ಮೇ 12ರ ಮಂಗಳವಾರ ಹೇಳಿವೆ.
ಚೀನೀ ವರ್ತನೆಗೆ
ಪ್ರತಿಕ್ರಿಯೆಯಾಗಿ ಭಾರತೀಯ ವಾಯುಪಡೆಯು ತನ್ನ ಸುಖೋಯ್ ಯುದ್ಧ ವಿಮಾನಗಳನ್ನು ಲೇಹ್ ವಾಯುನೆಲೆಯಿಂದ
ಲಡಾಖ್ ಕಡೆಗೆ ಪಹರೆಯ ಸಲುವಾಗಿ ಕಳುಹಿಸಿದೆ ಎಂದು ಮೂಲಗಳು ಮಂಗಳವಾರ ತಿಳಿಸಿದವು. ಆದಾಗ್ಯೂ, ಇವೆಲ್ಲವೂ ನಿಯಮಿತ ತರಬೇತಿಯ ಕವಾಯತುಗಳೇ ಹೊರತು,
ಬೇರೇನಲ್ಲ, ವಾಯುಪ್ರದೇಶದ ಯಾವುದೇ ಉಲ್ಲಂಘನೆ ಆಗಿಲ್ಲ ಎಂದು ವಾಯುಪಡೆ ಹೇಳಿದೆ. ಮೂಲಗಳ ಪ್ರಕಾರ,
ಅದೇ ದಿನ ಸಂಜೆ ೨೫೦ ಮಂದಿ ಭಾರತೀಯ ಮತ್ತು ಚೀನೀ ಸೈನಿಕರು ಲಡಾಖ್‌ನ ನೈಜ ನಿಯಂತ್ರಣ ರೇಖೆಯ ಸಮೀಪ
ಪರಸ್ಪರ ಘರ್ಷಿಸಿದ್ದರು. ಘರ್ಷಣೆ ಹಿಂಸಾತ್ಮಕವಾಗಿತ್ತು ಮತ್ತು ೭೦ರಿಂದ ೮೦ ಮಂದಿ ಭಾರತೀಯ ಯೋಧರು
ಗಾಯಗೊಂಡಿದ್ದರು ಎಂದು ಮೂಲಗಳು ಹೇಳಿದವು. ಈ ಘಟನೆಯ
ಬಳಿಕ, ಉಭಯ ಕಡೆಗಳಲ್ಲೂ ಹೆಚ್ಚುವರಿ ಪಡೆಗಳನ್ನು ಜಮಾಯಿಸಲಾಯಿತು ಎಂದೂ ಮೂಲಗಳು ಹೇಳಿದವು. (ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ:
ಕೊರೋನಾ ವೈರಸ್ ತಡೆಯುವ ಸಲುವಾಗಿ ವಿಧಿಸಲಾಗಿದ್ದ ರಾಷ್ಟ್ರವ್ಯಾಪಿ ದಿಗ್ಬಂಧನದ (ಲಾಕ್ ಡೌನ್) ವೇಳೆಯಲಿ
ದೇಶದ ವಿವಿಧ ಭಾಗಗಳಲ್ಲಿ ಸಿಕ್ಕಿಹಾಕಿಕೊಂಡವರಿಗೆ ತಮ್ಮ ಹುಟ್ಟೂರುಗಳನ್ನು ತಲುಪಲು ಭಾರತೀಯ ರೈಲ್ವೇಯು
ವಿಶೇಷ ರೈಲುಗಳ ಸಂಚಾರ ನಡೆಸುತ್ತಿದ್ದು, ಸುಮಾರು ೮೦,೦೦೦ ಪ್ರಯಾಣಿಕರು ಒಟ್ಟು ೧೬ ಕೋಟಿ ರೂಪಾಯಿ
ಮೌಲ್ಯದ ಟಿಕೆಟುಗಳನ್ನು ಬುಕ್ ಮಾಡಿದ್ದಾರೆ. ಮೇ ೧೧ರ ಸೋಮವಾರ ಸಂಜೆ ೬ ಗಂಟೆಯಿಂದ ವಿಶೇಷ ರೈಲುಗಳ ಚಿಕೆಟ್
ಬುಕ್ಕಿಂಗ್ ಅವಕಾಶ ಕಲ್ಪಿಸಲಾಗಿತ್ತು. ನವದೆಹಲಿ ರೈಲ್ವೆ ನಿಲ್ದಾಣದಿಂದ ಮಂಗಳವಾರ ಮೊದಲ ವಿಶೇಷ ರೈಲು
ಮಧ್ಯ ಪ್ರದೇಶದ ಬಿಲಾಸ್ಪುರದತ್ತ ಚಲಿಸುವುದು ಎಂದು ರೈಲ್ವೇ ಮೂಲಗಳು ಹೇಳಿದವು. ಮುಂದಿನ ಏಳು ದಿನಗವರೆಗಿನ ವಿಶೇಷ ರೈಲುಗಳಿಗೆ ೧೬.೧೫ ಕೋಟಿ
ರೂಪಾಯಿ ಮೌಲ್ಯದ ೪೫,೫೩೩ ಬುಕ್ಕಿಂಗ್ ಗಳು (ಪಿಎನ್‌ಆರ್) ದಾಖಲಾಗಿವೆ. ಈ ಬುಕ್ಕಿಂಗ್‌ಗಳ ಮೂಲಕ ೮೨,೩೧೭
ಪ್ರಯಾಣಿಕರು ಪ್ರಯಾಣ ಬೆಳೆಸಲಿದ್ದಾರೆ ಎಂದು ರೈಲ್ವೆ ಇಲಾಖೆ ಹೇಳಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಕೋವಿಡ್ -೧೯ ಹರಡುವಿಕೆಯನ್ನು ತಡೆಯುವ ಸಲುವಾಗಿ
ಮಾರ್ಚ್ ೨೫ರಂದು ಸ್ಥಗಿತಗೊಳಿಸಲಾಗಿರು ದೇಶೀಯ ವಿಮಾನ ಸೇವೆ ಪುನಾರಂಭವಾದ ಬಳಿಕ ಕ್ಯಾಬಿನ್ ಲಗ್ಗೇಜುಗಳಿಗೆ
ಅವಕಾಶ ಇರುವುದಿಲ್ಲ ಮತ್ತು ೮೦ ವರ್ಷ ಮೇಲ್ಪಟ್ಟವರಿಗೆ ವಿಮಾನಯಾನಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು
ವಾಣಿಜ್ಯ ವಿಮಾನಯಾನ ಪುನಾರಂಭದ ಮೊದಲ ಹಂತಕ್ಕಾಗಿ ಸರ್ಕಾರವು ಸಿದ್ಧಪಡಿಸಿರುವ ಕರಡು ಮಾರ್ಗಸೂಚಿ ಹೇಳಿದೆ. ನಾಗರಿಕ ವಿಮಾನಯಾನ ಸಚಿವಾಲಯವು ಪ್ರಯಾಣಿಕರು, ಏರ್ ಲೈನ್ಸ್ ಮತ್ತು ವಿಮಾನ ನಿಲ್ದಾಣ ಆಪರೇಟರುಗಳಿಗಾಗಿ 2020 ಮೇ 11ರ
ಸೋಮವಾರ ಸಭೆಯೊಂದರಲ್ಲಿ ಸಿದ್ಧ ಪಡಿಸಿರುವ ಕಾರ್ಯಾಚರಣಾ ವಿಧಾನಗಳ ಕರಡಿನಲ್ಲಿ ಈ ವಿಚಾರವನ್ನು ತಿಳಿಸಲಾಗಿದೆ.
ಸಾಮಾಜಿಕ ಅಂತರ ನಿಯಮ ಪಾಲನೆ ಸಲುವಾಗಿ ಮಧ್ಯದ ಆಸನಗಳನ್ನು ಖಾಲಿ ಬಿqಲು ನಿಯಮಾವಳಿ ಸೂಚಿಸಿದೆ. ಟರ್ಮಿನಲ್
ಗೇಟುಗಳಲ್ಲಿ ದಟ್ಟಣೆಯನ್ನು ಕಡಿಮೆಗೊಳಿಸುವ ಸಲುವಾಗಿ ಪ್ರಯಾಣಿಕರ ಗುರುತು ತಪಾಸಣೆಯ ಅಗತ್ಯವನ್ನು
ಕೈಬಿಡಲಾಗಿದೆ. ವಿಮಾನಯಾನ ಸಂಸ್ಥೆಗಳು, ವಿಮಾನ ನಿಲ್ದಾಣ ಆಪರೇಟರುಗಳು ಸೇರಿದಂತೆ ವಿಮಾನಯಾನ ವ್ಯವಹಾರದ
ಪಾಲುದಾರರಿಗೆ ಕರಡನ್ನು ಪರಿಶೀಲಿಸಲು ಸೂಚಿಸಲಾಗಿದ್ದು, ವಾರಾಂತ್ಯದ ಒಳಗಾಗಿ ಹಿಮ್ಮಾಹಿತಿ ನೀಡಲು
2020 ಮೇ 12ರ ಮಂಗಳವಾರ ತಿಳಿಸಲಾಗಿದೆ. ಎಲ್ಲ ಪ್ರಯಾಣಿಕರು
ವಿಮಾನ ನಿಲ್ದಾಣಕ್ಕೆ ಮನೆಯಲ್ಲೇ ವೆಬ್ ಚೆಕ್-ಇನ್ ಪೂರ್ಣಗೊಳಿಸಿದ ಬಳಿಕವೇ ಬರುವುದನ್ನು ನಿಯಮಾವಳಿ
ಕಡ್ಡಾಯಗೊಳಿಸಿದೆ. ವಿಮಾನ ನಿಲ್ದಾಣದಲ್ಲಿ ಹಾಜರಾತಿ ಅವಧಿಯನ್ನು ಎರಡು ಗಂಟೆಗಳಷ್ಟು ಹೆಚ್ಚಿಸುವ ಪ್ರಸ್ತಾಪ
ಮಾಡಲಾಗಿದೆ. ಮುಂದಿನ ಆರು ಗಂಟೆಯಲ್ಲಿ ಪ್ರಯಾಣ ಮಾಡಲಿರುವ ವಿಮಾನದ ಪ್ರಯಾಣಿಕರಿಗೆ ಮಾತ್ರವೇ ವಿಮಾನ
ನಿಲ್ದಾಣದ ಒಳಗೆ ಪ್ರವೇಶ ಅವಕಾಶ ಕಲ್ಪಿಸಲಾಗುವುದು ಎಂದು ನಿಯಮಾವಳಿ ಹೇಳಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ).
2020: ನವದೆಹಲಿ: ದಿಗ್ಬಂಧನ (ಲಾಕ್ ಡೌನ್) ಮತ್ತು ಕೊರೋನಾ ಬಿಕ್ಕಟ್ಟಿನ
ಸಮಯದಲ್ಲಿ ವಿದೇಶಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆದುಕೊಂಡು ಬರುವ ವಂದೇ
ಭಾರತ್ ಮಿಷನ್ನಿನ ಎರಡನೇ ಹಂತ ಮೇ ೧೬ ರಿಂದ ಆರಂಭವಾಗಲಿದ್ದು,
ಮೇ ೨೨ರವರೆಗೂ ಭಾರತೀಯರ ವಾಪಸಾತಿ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಸುದ್ದಿ ಮೂಲಗಳು 2020 ಮೇ
12ರ ಮಂಗಳವಾರ ತಿಳಿಸಿದವು. ಎರಡನೇ ಹಂತದ ವಂದೇ ಭಾರತ್
ಮಿಷನ್ನಿನಲ್ಲಿ ಒಟ್ಟು ೩೧ ದೇಶಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯರನ್ನು ಕರೆತರಲು ಭಾರತ ಸರ್ಕಾರ
ನಿರ್ಧರಿಸಿದೆ. ಇದಕ್ಕಾಗಿ ೧೪೯ ವಿಮಾನಗಳನ್ನು ಕೇಂದ್ರ ಸರ್ಕಾರ ಮೀಸಲಿಟ್ಟಿದೆ. ಇದರ ಜೊತೆ ಫೀಡರ್
ವಿಮಾನಗಳನ್ನು ಕೂಡ ನಿಗದಿಪಡಿಸಲಾಗಿದೆ ಎಂದು ಮೂಲಗಳು ಹೇಳಿದವು. ಅಮೆರಿಕ, ಯುನೈಟೆಡ್ ಅರಬ್ ಎಮಿರೇಟ್ಸ್
(ಯುಎಇ), ಕೆನಡಾ, ಸೌದಿ ಅರೇಬಿಯಾ, ಇಂಗ್ಲೆಂಡ್, ಮಲೇಷಿಯಾ, ಓಮನ್, ಕಜಕಸ್ಥಾನ್, ಆಸ್ಟ್ರೇಲಿಯಾ, ಉಕ್ರೇನ್,
ಕತಾರ್, ಇಂಡೋನೆಷಿಯಾ, ರಷ್ಯಾ, ಫಿಲಿಫೈನ್ಸ್, ಫ್ರಾನ್ಸ್, ಸಿಂಗಪೂರ್, ಐರ್ಲೆಂಡ್, ಕಿರ್ಗಿಸ್ತಾನ್,
ಕುವೈತ್, ಜಪಾನ್, ಜೊರ್ಜಿಯೋ, ಜರ್ಮನಿ, ತಜಕಿಸ್ತಾನ್, ಬಹ್ರೇನ್, ಆರ್ಮೇನಿಯಾ, ಥೈಲ್ಯಾಂಡ್, ಇಟಲಿ,
ನೇಪಾಳ, ಬೆಲಾರಸ್, ನೈಜೀರಿಯಾ ಹಾಗೂ ಬಾಂಗ್ಲಾದೇಶದಲ್ಲಿನ ಭಾರತೀಯರನ್ನು ಎರಡನೇ ಹಂತದಲ್ಲಿ ಕರೆದುಕೊಂಡು
ಬರಲಾಗುತ್ತದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಇಡೀ ವಿಶ್ವದಲ್ಲೇ ಕೋವಿಡ್-೧೯ ಸಾವಿನ ಪ್ರಮಾಣ
ಭಾರತದಲ್ಲಿ ಅತ್ಯಂತ ಕಡಿಮೆ. ವಿಶ್ವದಲ್ಲಿ ಕೋವಿಡ್ ಸಾವಿನ ಪ್ರಮಾಣ ಶೇಕಡಾ ೭.೫ ಆಗಿದ್ದರೆ, ಭಾರತದಲ್ಲಿ
ಅದು ಶೇಕಡಾ ೩.೨, ದೇಶದ ಕೆಲವು ರಾಜ್ಯಗಳಲ್ಲಿ ಈ ಪ್ರಮಾಣ ಇದಕ್ಕಿಂತಲೂ ಕಡಿಮೆ ಎಂದು ಕೇಂದ್ರ ಆರೋಗ್ಯ
ಸಚಿವ ಡಾ. ಹರ್ಷ ವರ್ಧನ್ ಅವರು 2020 ಮೇ 12ರ ಮಂಗಳವಾರ
ಇಲ್ಲಿ ಹೇಳಿದರು. ಭಾರತದಲ್ಲಿ ಕೊರೋನಾ ಸಾವಿನ ಪ್ರಕರಣಗಳ ಸಂಖ್ಯೆ ಮಂಗಳವಾರ ೭೦,೦೦೦ಕ್ಕೆ ಏರಿದ್ದು,
ಕಳೆದ ೨೪ ಗಂಟೆಗಳಲ್ಲಿ ೨,೨೯೩ ಹೊಸ ಪ್ರಕರಣಗಳು ಮತ್ತು ೮೭ಸಾವುಗಳು ಸಂಭವಿಸಿವೆ. ೨೨,೪೫೪ ಮಂದಿ ಗುಣಮುಖರಾಗಿದ್ದು,
ಸಕ್ರಿಯ ಪ್ರಕರಣಗಳ ಸಂಖ್ಯೆ ೪೬,೦೦೮ ಆಗಿದೆ. (ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment