ನಾನು ಮೆಚ್ಚಿದ ವಾಟ್ಸಪ್

Tuesday, May 26, 2020

ಇಂದಿನ ಇತಿಹಾಸ History Today ಮೇ 26

2020: ನವದೆಹಲಿ: ಲಡಾಖ್ನಲ್ಲಿ ಚೀನಾದೊಂದಿಗೆ ನಡೆಯುತ್ತಿರುವ ಗಡಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ  2020 ಮೇ 26ರ ಮಂಗಳವಾರ ರಾಷ್ಟ್ರೀಯ ಭದ್ರತಾ ಕಾರ್ಯದರ್ಶಿ (ಎನ್ ಎಸ್ ) ಅಜಿತ್ ದೋವಲ್, ಮುಖ್ಯ ರಕ್ಷಣಾ ಸಿಬ್ಬಂದಿ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಮತ್ತು ಮೂರೂ ಪಡೆಗಳ ಮುಖ್ಯಸ್ಥರ ಸಭೆ ನಡೆಯಿತು.  ಇದಲ್ಲದೆ ಪ್ರಧಾನಿ ಮೋದಿಯವರು ವಿದೇಶಾಂಗ ಕಾರ್ಯದರ್ಶಿ ಹರ್ಷ ವರ್ಧನ್ ಶೃಂಗ್ಲಾ ಅವರ ಜೊತೆಗೂ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು ಎಂದು ಸುದ್ದಿ ಮೂಲಗಳು ತಿಳಿಸಿದವು. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು  ಸಿಡಿಎಸ್ ಜನರಲ್ ರಾವತ್ ಮತ್ತು ಮೂರೂ ಪಡೆಗಳ ಮುಖ್ಯಸ್ಥರ ಜೊತೆಗೆ ಚೀನಾ ವಿಷಯಕ್ಕೆ ಸಂಬಂಧಿಸಿದಂತೆ ಸುದೀರ್ಘ ಭದ್ರತಾ ಪರಿಶೀಲನಾ ಸಭೆ ನಡೆಸಿದ ಸ್ವಲ್ಪವೇ ಹೊತ್ತಿನಲ್ಲಿ ಬೆಳವಣಿಗೆ ನಡೆಯಿತು. ಪ್ರಧಾನಿ ಸಭೆಗೆ ಮುನ್ನ ಲಡಾಖ್ನಲ್ಲಿ ಚೀನಾ ಜೊತೆಗಿನ ಗಡಿ ಬಿಕ್ಕಟ್ಟು ಹಿನ್ನೆಲೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ಮತ್ತು ಮೂರೂ ಪಡೆಗಳು ಮುಖ್ಯಸ್ಥರ ಜೊತೆಗೆ ಸುದೀರ್ಘವಾದ ಭದ್ರತಾ ಪರಿಶೀಲನಾ ಸಭೆ ನಡೆಸಿದರು. ಗಡಿಯಲ್ಲಿ ಚೀನಾದ ಇತ್ತೀಚಿನ ಪ್ರಚೋದನೆಗೆ ಪ್ರತಿಕ್ರಿಯಿಸಲು ಇರುವ ಆಯ್ಕೆಗಳನ್ನು ಭಾರತವು ತೂಗಿ ನೋಡುತ್ತಿರುವುದರ ಮಧ್ಯೆ ನಡೆದಿರುವ ಸರಣಿ ಸಮಾಲೋಚನೆಗಳ ಮಧ್ಯೆ ಸಭೆಯು ಇತ್ತೀಚಿನದಾಗಿದೆ.  (ವಿವರಗಳಿಗೆ ಇಲ್ಲಿ  ಕ್ಲಿಕ್   ಮಾಡಿರಿ)

2020: ನವದೆಹಲಿ: ಹೆಚ್ಚುತ್ತಿರುವ ಕೊರೋನಾವೈರಸ್ ಸಾಂಕ್ರಾಮಿಕ ಮತ್ತು ಗಡಿಯಲ್ಲಿ ಚೀನಾದ ತಂಟೆಯ ವಿಷಯಗಳನ್ನು ಹಿಡಿದುಕೊಂಡು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು 2020 ಮೇ 26ರ  ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡರು.  ೨೧ ದಿನಗಳಲ್ಲಿ ಕೊರೋನವೈರಸ್ಸನ್ನು ಸೋಲಿಸುವ ಪ್ರಧಾನಿ ನರೇಂದ್ರ ಮೋದಿಯವರ ಆರಂಭಿಕ ಯೋಜನೆ ವಿಫಲವಾಗಿದೆ ಮತ್ತು ಅದು ಅವರನ್ನು ಹಿಮ್ಮುಖವಾಗಿ ಒಯ್ದಿದೆ ಎಂದು ಹೇಳಿದ ರಾಹುಲ್ಮುಮ್ಮುಖವಾಗಿ ಕೆಲಸ ಮಾಡಿ ಎಂದು ಪ್ರಧಾನಿಯವರನ್ನು ಆಗ್ರಹಿಸಿದರು. ‘ಒಂದಾದ ಬಳಿಕ ಒಂದರಂತೆ ದಿಗ್ಬಂಧನಗಳನ್ನು (ಲಾಕ್ ಡೌನ್) ಜಾರಿಗೊಳಿಸಲಾಗಿದೆ. ಆದರೆ ಅದರಿಂದ ಕೊರೋನಾವೈರಸ್ ಸೋಂಕನ್ನು ತಡೆಗಟ್ಟಲು ನೆರವಾಗಿಲ್ಲ. ರಾಷ್ಟ್ರವು ಪ್ರಸ್ತುತ ೪ನೇ ಹಂತದ ದಿಗ್ಬಂಧನವನ್ನು ಎದುರಿಸುತ್ತಿದ್ದು ಅದು ಮೇ ೩೧ಕ್ಕೆ ಮುಕ್ತಾಯಗೊಳ್ಳಲಿದೆ ಎಂದು ರಾಹುಲ್ ಹೇಳಿದರು. ‘ತಮ್ಮ ಮೊದಲ ಯೋಜನೆ ವಿಫಲವಾಗಿದೆ ಎಂದು ಪ್ರಧಾನಿಯವರು ಅಂಗೀಕರಿಸಬೇಕಾಗುತ್ತದೆ. ಪ್ರಧಾನಿಯವರು ಹಿಮ್ಮುಖವಾಗಿ ಸಾಗುತ್ತಿದ್ದಾರೆ, ನಾನು ಅವರಿಗೆ ಮುಮ್ಮುಖವಾಗಿ ಕೆಲಸ ಮಾಡುವಂತೆ ಮನವಿ ಮಾಡುತ್ತೇನೆ ಎಂದು ಕಾಂಗ್ರೆಸ್ ನಾಯಕ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಪತ್ರಿಕಾ ಸಂವಾದದಲ್ಲಿ ನುಡಿದರು.  (ವಿವರಗಳಿಗೆ ಇಲ್ಲಿ  ಕ್ಲಿಕ್   ಮಾಡಿರಿ)

2020: ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಇಡೀ ವಿಶ್ವಕ್ಕೆ ಹೋಲಿಸಿದರೆ ಭಾರತದಲ್ಲಿ ಅತ್ಯಂತ ಕಡಿಮೆ ಎಂದು ಭಾರತ ಸರ್ಕಾರ  2020 ಮೇ 26ರ ಮಂಗಳವಾರ ಇಲ್ಲಿ ತಿಳಿಸಿತು. ದೇಶದಲ್ಲಿ ಪ್ರಸ್ತುತ ಶೇಕಡಾ .೮೭ರಷ್ಟು ಪ್ರಮಾಣದ ಮಂದಿ ಮಾತ್ರ ಕೊರೋನಾವೈರಸ್ ಸೋಂಕಿಗೆ ಬಲಿಯಾಗಿ ಅಸು ನೀಗುತ್ತಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರವಾಲ್ ಹೇಳಿದರು. ವಿಶ್ವಾದ್ಯಂತ ಒಂದು ಲಕ್ಷ ಜನಸಂಖ್ಯೆಗೆ ಶೇಕಡಾ .೪ರಷ್ಟು ಸಾವುಗಳು ವರದಿಯಾಗಿವೆ. ಆದರೆ ಭಾರತದಲ್ಲಿ ಒಂದು ಲಕ್ಷ ಜನಸಂಖ್ಯೆಗೆ .೩ರಷ್ಟು ಸಾವು ಮಾತ್ರ ಸಂಭವಿಸಿದೆ. ಇದು ಇಡೀ ಜಗತ್ತಿನಲ್ಲೇ ಅತ್ಯಂತ ಕಡಿಮೆ. ದಿಗ್ಬಂಧನ (ಲಾಕ್ ಡೌನ್), ಸಕಾಲಿಕ ಗುರುತಿಸುವಿಕೆ ಮತ್ತು ಕೊರೋನಾವೈರಸ್ ಪ್ರಕರಣಗಳ ನಿರ್ವಹಣೆಯ ಕಾರಣದಿಂದ ಇದು ಸಾಧ್ಯವಾಗಿದೆ ಎಂದು ಅವರು ನುಡಿದರು. ಈವರೆಗೆ, ಕೋವಿಡ್ -೧೯ ಸಾಂಕ್ರಾಮಿಕದಿಂದ ೬೦,೪೯೦ ಮಂದಿ ಚೇತರಿಸಿದ್ದಾರೆ. ಪ್ರಸ್ತುತ ಚೇತರಿಕೆ ಪ್ರಮಾಣ ಶೇಕಡಾ ೪೧.೬೧ ಎಂದು ಅಗರವಾಲ್ ನುಡಿದರು. ರಾಜ್ಯಗಳ ಜೊತೆ ಸಮಾಲೋಚನೆ: ಕೇಂದ್ರ ಆರೋಗ್ಯ ಕಾರ್ಯದರ್ಶಿಯವರು ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ವರದಿಗಳ ಹಿನ್ನೆಲೆಯಲ್ಲಿ ಮಂಗಳವಾರ ಉತ್ತರಪ್ರದೇಶ, ಬಿಹಾರ, ಜಾರ್ಖಂಡ್, ಛತ್ತೀಸ್ ಗಢ ಮತ್ತು ಮಧ್ಯಪ್ರದೇಶ ಐದು ರಾಜ್ಯಗಳ ಅಧಿಕಾರಿಗಳ ಜೊತೆಗೆ ಸಮಾಲೋಚನೆ ನಡೆಸಿದರು. ಕಂಟೈನ್ಮೆಂಟ್ ವಲಯಗಳಲ್ಲಿನ ಪ್ರವೃತ್ತಿ ಬಗ್ಗೆ ವಿಶ್ಲೇಷಣೆ ನಡೆಸಿ ಸೂಕ್ಷ್ಮ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಮತ್ತು ಲೋಪದೋಷಗಳನ್ನು ಸರಿಪಡಿಸಿಕೊಳ್ಳುವಂತೆ ಅವರು ರಾಜ್ಯಗಳಿಗೆ ಸಲಹೆ ಮಾಡಿದರು.  (ವಿವರಗಳಿಗೆ ಇಲ್ಲಿ  ಕ್ಲಿಕ್   ಮಾಡಿರಿ)

2020: ನವದೆಹಲಿ: ವಲಸೆ ಕಾರ್ಮಿಕರ ಸಂಕಷ್ಟಗಳ ಬಗ್ಗೆ ಮಾಧ್ಯಮ, ಪತ್ರಿಕೆಗಳಲ್ಲಿ ಪ್ರಕಟವಾದ ಹಲವಾರು ವರದಿಗಳನ್ನು ಗಣನೆಗೆ ತೆಗೆದುಕೊಂಡಿರುವ ಸುಪ್ರೀಂಕೋರ್ಟ್  2020 ಮೇ 26ರ ಮಂಗಳವಾರ   ಬಗ್ಗೆ ಗಮನ ಹರಿಸಲು ತೀರ್ಮಾನಿಸಿ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿತು. ಕೊರೋನಾವೈರಸ್ ದಿಗ್ಬಂಧನದ ಬಳಿಕ ದೇಶದ ವಿವಿಧ ಕಡೆಗಳಲ್ಲಿ ರಸ್ತೆಗಳು, ಬಸ್ಸು ನಿಲ್ದಾಣಗಳು ಇಲ್ಲವೇ ರೈಲು ನಿಲ್ದಾಣಗಳಲ್ಲಿ ಸಿಕ್ಕಿಹಾಕಿಕೊಂಡು ಸಂಕಷ್ಟಕ್ಕೆ ಈಡಾಗಿರುವ ವಲಸೆ ಕಾರ್ಮಿಕರ ಪರಿಸ್ಥಿತಿ ಸುಧಾರಣೆಗೆ ಪರಿಣಾಮಕಾರಿ ಕ್ರಮಗಳ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್ ಒಪ್ಪಿತು.  ಪರಿಸ್ಥಿತಿ ಸುಧಾರಣೆಗೆ ಪರಿಣಾಮಕಾರಿಯಾದ, ಸಂಘಟಿತವಾದ ನಿರಂತರ ಪ್ರಯತ್ನಗಳ ಅಗತ್ಯವಿದೆ ಎಂಬುದು ನಮ್ಮ ಅಭಿಪ್ರಾಯ ಎಂದು ಸ್ವಯಂ ಇಚ್ಛೆಯ ಪ್ರಕರಣ ದಾಖಲಿಸಿದ ನ್ಯಾಯಮೂರ್ತಿ ಅಶೋಕ ಭೂಷಣ್ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕೆ ಕೌಲ್ ಹಾಗೂ ಎಂಆರ್ ಶಾ ಅವನ್ನು ಒಳಗೊಂಡ ಪೀಠ ಹೇಳಿತು. ತನಗೆ ನೆರವಾಗುವಂತೆ ಕಾನೂನು ಅಧಿಕಾರಿಗೆ ಸೂಚಿಸಿದ ಪೀಠವು ಭಾರತ ಸರ್ಕಾರವು ವಿಷಯಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಎಲ್ಲ ಕ್ರಮಗಳನ್ನು ತನ್ನ ಗಮನಕ್ಕೆ ತರುವಂತೆ ಹೇಳಿತು. ಕೇಂದ್ರ ಸರ್ಕಾರ, ಎಲ್ಲ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೋಟಿಸ್ ಜಾರಿ ಮಾಡಿದ ಪೀಠ, ಆದಷ್ಟೂ ಶೀಘ್ರ ಉತ್ತರ ನೀಡುವಂತೆ ನಿರ್ದೇಶನ ನೀಡಿತು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  HistoryTodayಮೇ 26  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)


No comments:

Post a Comment