2020: ನವದೆಹಲಿ:
ಹಳ್ಳಿಗಳಿಗೆ ಕೊರೋನಾ ವೈರಸ್ ಮುಟ್ಟದಂತೆ ನೋಡಿಕೊಳ್ಳಬೇಕಾದದ್ದು ಈಗ ನಮ್ಮ ಮುಂದಿರುವ
ಅತಿದೊಡ್ಡ ಸವಾಲು ಎಂದು ಪ್ರಧಾನಿ ನರೇಂದ್ರ ಮೋದಿ ಅವರು 2020 ಮೇ 11ರ ಸೋಮವಾರ ಇಲ್ಲಿ ಹೇಳಿದರು. ರಾಷ್ಟ್ರವ್ಯಾಪಿ ದಿಗ್ಬಂಧನದ (ಲಾಕ್ ಡೌನ್) ಮೂರನೇ ಹಂತದ ಮುಕ್ತಾಯಕ್ಕೆ ಒಂದು ವಾರ ಮುಂಚಿತವಾಗಿ ರಾಜ್ಯ ಮುಖ್ಯಮಂತ್ರಿಗಳ ಜೊತೆಗೆ ವಿಡಿಯೋ ಸಂವಾದ ನಡೆಸಿದ ಪ್ರಧಾನಿ ಸಮ್ಮೇಳನದ ಆರಂಭದಲ್ಲೇ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ’ಸಮಗ್ರ ವಿಧಾನ ಅನುಸರಿಸುವ ಮೂಲಕ ಮುಂದಕ್ಕೆ ಸಾಗುವ ಬಗ್ಗೆ ಸರ್ಕಾರ ಚಿಂತಿಸಬೇಕಾಗಿದೆ ಎಂದು ಹೇಳಿದರು. ‘ಈ
ಸಮಗ್ರ ಹೋರಾಟದಲ್ಲಿ ಕೋವಿಡ್-೧೯ ಬೆದರಿಕೆ ವಿರುದ್ಧ
ಹೋರಾಡುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ವಿಶ್ವವು ಹೇಳುತ್ತಿದೆ. ಈ ಹೋರಾಟದಲ್ಲಿ ರಾಜ್ಯಗಳು
ಮಹತ್ವದ ಪಾತ್ರ ವಹಿಸಿವೆ. ಅವುಗಳು ತಮ್ಮ ಹೊಣೆಗಾರಿಕೆಯನ್ನು ಅರಿತುಕೊಂಡಿವೆ ಮತ್ತು ಈ ಅಪಾಯವನ್ನು ನಿವಾರಿಸುವ
ನಿಟ್ಟಿನಲ್ಲಿ ತಮ್ಮ ಪಾತ್ರಗಳನ್ನು ನಿಭಾಯಿಸಿವೆ. ಎರಡು ಗಜ ದೂರ ಎಂಬ
ನಿಯಮ ಸಡಿಲವಾಗಿದ್ದರೆ ಬಿಕ್ಕಟ್ಟು ಹೆಚ್ಚಾಗುತ್ತಿತ್ತು’ ಎಂದು
ಪ್ರಧಾನಿ ನುಡಿದರು. ‘ಜನರು ಇದ್ದಲ್ಲಿಯೇ ಇರಬೇಕು ಎಂಬುದಕ್ಕೆ ನಾವು ಒತ್ತು ನೀಡಿದೆವು. ಆದರೆ ಮನೆಯ ಹೋಗಬೇಕು ಎಂಬುದಾಗಿ ಬಯಸುವುದು ಮನುಷ್ಯ ಸಹಜ ವರ್ತನೆ. ಆದ್ದರಿಂದ ನಾವು ನಮ್ಮ ನಿಧಾರಗಳನ್ನು ಪರಿಷ್ಕರಿಸಬೇಕಾಯಿತು ಅಥವಾ ಬದಲಾಯಿಸಬೇಕಾಯಿತು. ಇದರ ಹೊರತಾಗಿಯೂ ರೋಗವು ಹರಡದಂತೆ ಮತ್ತು ಹಳ್ಳಿಗಳಿಗೆ ಹೋಗದಂತೆ ನಾವು ಖಚಿತಪಡಿಸಿಕೊಳ್ಳಬೇಕಾಗಿದೆ. ಇದು ಈಗ ನಮ್ಮ ಮುಂದಿರುವ
ದೊಡ್ಡ ಸವಾಲು’ ಎಂದು ಪ್ರಧಾನಿ ವಲಸೆ ಕಾರ್ಮಿಕರ ಮರುವಲಸೆ ಬಗ್ಗೆ ಉಲ್ಲೇಖಿಸುತ್ತಾ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ:
ಕೊರೋನಾವೈರಸ್ ಸೋಂಕನ್ನು (ಕೋವಿಡ್ -೧೯) ಎದುರಿಸುವಲ್ಲಿ ವಿಶ್ವದ ಸುಮಾರು ೯೦ ರಾಷ್ಟ್ರಗಳಿಗೆ ವೈದ್ಯಕೀಯ
ನೆರವನ್ನು ಹೆಚ್ಚಿಸುವ ಗುರಿ ಈಡೇರಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲು ಭಾರತ ತೀರ್ಮಾನಿಸಿದೆ ಎಂದು ಸುದ್ದಿ ಮೂಲಗಳು 2020 ಮೇ
11ರ ಸೋಮವಾರ ತಿಳಿಸಿದವು. ವಿದೇಶಗಳನ್ನು
ತಲುಪುವ ಭಾರತೀಯ ರಾಜತಾಂತ್ರಿಕ ವ್ಯವಸ್ಥೆಗೆ ಈ ಕಾರ್ಯಕ್ಕೆ
ಅಗುವ ವೆಚ್ಚ
ಅಂದಾಜು ೧೧೦-೧೨೦ ಕೋಟಿ ರೂಪಾಯಿಗಳು (೧.೧-೧.೨
ಬಿಲಿಯನ್ ರೂ) ಎಂದು ಮೂಲಗಳು ಹೇಳಿವೆ. ಭಾರತವು
ವಿವಿಧ ದೇಶಗಳಿಗೆ ವಾಣಿಜ್ಯ ದೃಷ್ಟಿಯಿಂದ ಪೂರೈಸುತ್ತಿರುವ ಔಷಧಗಳಿಗೆ ಹೊರತಾಗಿ ಮಾಡಲಾಗುವ ಹೊಸ ನೆರವು ಇದು ಎಂದು ಮೂಲಗಳು ಹೇಳಿವೆ. ಸದ್ಯಕ್ಕೆ
೬೭ ದೇಶಗಳಿಗೆ ೬೦ ಕೋಟಿ ರೂಪಾಯಿ
ಮೌಲ್ಯದ ಔಷಧ, ಪರೀಕ್ಷಾ ಕಿಟ್ಗಳು ಮತ್ತು ಇತರ ವೈದ್ಯಕೀಯ ನೆರವು ನೀಡುವುದಾಗಿ ಭಾರತದ ವಿದೇಶಾಂಗ ಸಚಿವಾಲಯ ವಾಗ್ದಾನ ಮಾಡಿದೆ. "ಆದರೆ ಪ್ರಧಾನಿ ಮೋದಿಯವರ ಸ್ಪಷ್ಟ ನಿರ್ದೇಶನಗಳನ್ನು ಅನುಸರಿಸಿ, ವಿದೇಶಾಂಗ ಸಚಿವಾಲಯವು ವಿವಿಧ ದೇಶಗಳಿಂದ ನೆರವಿಗಾಗಿ ಬಂದಿರುವ ಹೆಚ್ಚಿನ ಮನವಿಗಳಿಗೆ ಸ್ಪಂದಿಸುವ ಸಾಧ್ಯತೆಗಳಿವೆ" ಎಂದು ಉನ್ನತ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ:
ಕೋವಿಡ್-೧೯ ದಿಗ್ಬಂಧನ (ಲಾಕ್
ಡೌನ್) ಪರಿಣಾಮವಾಗಿ ವಿವಿಧ
ರಾಜ್ಯಗಳಲ್ಲಿ ಸಿಕ್ಕಿಹಾಕಿಕೊಂಡಿರುವ ವಲಸೆ
ಕಾರ್ಮಿಕರನ್ನು ಅವರವರ ಹುಟ್ಟೂರುಗಳಿಗೆ ತಲುಪಿಸುವ ಸಲುವಾಗಿ ಓಡಿಸಲಾಗುತಿರುವ ’ಶ್ರಮಿಕ’ ವಿಶೇಷ ರೈಲುಗಳ ಮಾರ್ಗಸೂಚಿಗಳನ್ನು ರೈಲ್ವೇ ಸಚಿವಾಲಯವು 2020 ಮೇ 11ರ ಸೋಮವಾರ ಪರಿಷ್ಕರಿಸಿತು. ‘ಶ್ರಮಿಕ’ ವಿಶೇಷ ರೈಲುಗಳ ಸಾಮರ್ಥ್ಯವನ್ನು ಕೂಡಾ ಈಗಿನ ೧,೨೦೦ ರಿಂದ
೧,೭೦೦ಕ್ಕೆ ಹೆಚ್ಚಿಸಲು ಕೂಡಾ ಸಚಿವಾಲಯ ನಿರ್ಧರಿಸಿದೆ. ಈ ರೈಲುಗಾಡಿಗಳ ಸಾಮರ್ಥ್ಯವು
ಸ್ಲೀಪರ್ ಬರ್ತ್ಗಳ ಸಂಖ್ಯೆಗೆ ಸಮವಾಗಿರಬೇಕು
ಎಂದು ಪರಿಷ್ಕೃತ ಮಾರ್ಗಸೂಚಿ ಹೇಳಿತು. ಗಮ್ಯ ರಾಜ್ಯದಲ್ಲಿ ರಾಜ್ಯ ಸರ್ಕಾರದ ಮನವಿ ಮೇರೆಗೆ ಕೊನೆಯ ನಿಲುಗಡೆ ಹೊರತಾಗಿ ಮೂರು ನಿಲುಗಡೆಗಳಿಗೆ ವ್ಯವಸ್ಥೆ ಮಾಡುವಂತೆಯೂ ರೈಲ್ವೇ ವಲಯಗಳಿಗೆ ಸೂಚಿಸಲಾಗಿದೆ. ರಾಜ್ಯಗಳಿಗೆ, ಅದರಲ್ಲೂ ವಿಶೇಷವಾಗಿ ಕೆಲವೇ ಕೆಲವು ರೈಲುಗಾಡಿಗಳ ಪ್ರವೇಶಕ್ಕೆ ಅನುಮತಿ ನೀಡಿರುವ ರಾಜ್ಯಗಳಿಗೆ ರೈಲು ಸಂಚಾರಕ್ಕೆ ಅನುಮತಿ ನೀಡುವಲ್ಲಿ ಉದಾರ ಧೋರಣೆ ತಾಳಲು ರೈಲ್ವೇ ಸಚಿವಾಲಯ ಮನವಿ ಮಾಡಿದೆ. ಭಾನುವಾರ ರಾಜ್ಯಗಳ ಜೊತೆ ಗೃಹ ಕಾರ್ಯದರ್ಶಿಯವರು ನಡೆಸಿದ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಲಾಗಿದ್ದು,
ಗೃಹ ಕಾರ್ಯದರ್ಶಿಯವರು ಈ ನಿಟ್ಟಿನಲ್ಲಿ ಪತ್ರಗಳನ್ನೂ
ಬರೆದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ:
ರಾಷ್ಟ್ರವ್ಯಾಪಿ ದಿಗ್ಬಂಧನದ ಸಂದರ್ಭದಲ್ಲಿ ದೆಹಲಿ, ಹರಿಯಾಣ, ರಾಜಸ್ಥಾನ, ಉತ್ತರ ಪ್ರದೇಶ ಮತ್ತಿತರ ರಾಜ್ಯಗಳಲ್ಲಿ ಸಿಲುಕಿರುವ ಕರ್ನಾಟಕದ ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ವಲಸೆ ಕಾರ್ಮಿಕರನ್ನು ‘ಶ್ರಮಿಕ ವಿಶೇಷ’ ರೈಲಿನ ಮೂಲಕ ಕರ್ನಾಟಕಕ್ಕೆ ಕರೆದೊಯ್ಯಲು ರಾಜ್ಯ ಸರ್ಕಾರ ನಿರ್ಧರಿಸಿತು. ಈಗಾಗಲೇ ‘ಸೇವಾ ಸಿಂಧು’ ಸಹಾಯವಾಣಿಯಲ್ಲಿ ನೋಂದಣಿ ಮಾಡಿಸಿರುವವರನ್ನು ಈ ರೈಲಿನ ಮೂಲಕ
ಉಚಿತವಾಗಿ ಕರೆದೊಯ್ಯಲು ಕ್ರಮ ಕೈಗೊಳ್ಳಲಾಗಿದೆ. ರೈಲು ಹೊರಡುವ ಸಮಯ ಮತ್ತು ದಿನಾಂಕವನ್ನು ಮುಂದಕ್ಕೆ ತಿಳಿಸಲಾಗುವುದು ಎಂದು ಕರ್ನಾಟಕ ಭವನದ ಮೂಲಗಳು 2020 ಮೇ 11ರ ಸೋಮವಾರ ತಿಳಿಸಿದವು. ಒಟ್ಟು ೯೫೬ ಜನ ನೋಂದಣಿ ಮಾಡಿಸಿದ್ದು,
ಆ ಪೈಕಿ ಅಂದಾಜು ೮೦೦ ಜನರಿಗೆ ಅವರವರ ಮೂಲ ಜಿಲ್ಲೆಗಳಲ್ಲಿನ ಜಿಲ್ಲಾಧಿಕಾರಿಗಳಿಂದ ಕರೆಸಿಕೊಳ್ಳಲು ಒಪ್ಪಿಗೆ ದೊರೆತಿದೆ. ಇನ್ನಿತರರಿಗೆ ಅನ್ಯ ಕಾರಣಗಳಿಂದ ಪ್ರಯಾಣಕ್ಕೆ ಅವಕಾಶ ದೊರೆಯುವುದು ಬಾಕಿ ಇದೆ. ಎಲ್ಲರನ್ನೂ ಮೊದಲು ದೆಹಲಿ ಸರ್ಕಾರದ ವೈದ್ಯಕೀಯ ಸಿಬ್ಬಂದಿ ಮೂಲಕ ಅಗತ್ಯ ಆರೋಗ್ಯ ತಪಾಸಣೆಗೆ ಒಳಪಡಿಸಿ, ಕೊರೊನಾ ಸೋಂಕಿನಿಂದ ಮುಕ್ತರಾಗಿದ್ದಲ್ಲಿ ಮಾತ್ರ ಕರೆದೊಯ್ಯಲಾಗುತ್ತದೆ ಎಂದು ಮೂಲಗಳು ಹೇಳಿದವು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ:
ಕೋವಿಡ್ -೧೯ ಪ್ರಸರಣ ತಡೆಯ
ಸಲುವಾಗಿ ಸ್ಥಗಿತಗೊಳಿಸಲಾಗಿದ್ದ ರೈಲು ಸೇವೆಯ ಪುನಾರಂಭವನ್ನು ಕನಿಷ್ಠ ನಾಲ್ಕು ರಾಜ್ಯಗಳು ವಿರೋಧಿಸಿದ್ದು, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು ಮತ್ತು ಛತ್ತೀಸ್ ಗಢ ರಾಜ್ಯಗಳ ಮುಖ್ಯಮಂತ್ರಿಗಳು
2020 ಮೇ
11ರ ಸೋಮವಾರ ಪ್ರಧಾನಿ
ನರೇಂದ್ರ ಮೋದಿ ಅವರ ಜೊತೆಗಿನ ವಿಡಿಯೋ ಸಂವಾದದಲ್ಲಿ ರೈಲು ಸೇವೆ ಪುನಾರಂಭಕ್ಕೆ ವಿರೋಧ ವ್ಯಕ್ತ ಪಡಿಸಿದರು. ರೈಲು ಸೇವೆ ಪುನಾರಂಭದಿಂದ ಶಂಕಿತ ಕೋವಿಡ್-೧೯ ಪ್ರಕರಣಗಳನ್ನು ಪರೀಕ್ಷಿಸಲು,
ಪತ್ತೆ ಹಚ್ಚಲು ಮತ್ತು ಪ್ರತ್ಯೇಕಿಸಲು ಅತ್ಯಂತ ಕಠಿಣವಾದೀತು ಮತ್ತು ಇದರ ಪರಿಣಾಮವಾಗಿ ದೇಶದಲ್ಲಿ ಅರಾಜಕತೆ ಸೃಷ್ಟಿಯಾದೀತು ಎಂದು ಎಚ್ಚರಿಸಿದ ಈ ಮುಖ್ಯಮಂತ್ರಿಗಳು ರೈಲು
ಸೇವೆ ಪುನರಾಂಭದ ನಿರ್ಧಾರದಿಂದ ಹಿಂದೆ ಸರಿಯುವಂತೆ ಆಗ್ರಹಿಸಿದರು. ಅತ್ಯಂತ
ಹೆಚ್ಚು ಕೋವಿಡ್-೧೯ ಪ್ರಕರಣಗಳೂ ಇರುವ
ಕೆಂಪು ವಲಯಗಳನ್ನು ಕಿತ್ತಳೆ ವಲಯವಾಗಿ ಮಾರ್ಪಡಿಸುವ ಅಥವಾ ಹಿಸುರ ವಲಯವಾಗಿ ಮಾರ್ಪಡಿಸುವ ಬಗ್ಗೆ ಮತ್ತು ವ್ಯವಸ್ಥಿತ ರೀತಿಯಲ್ಲಿ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸುವ ಬಗ್ಗೆ ಪ್ರಧಾನಿ ಮೋದಿ ವಿಡಿಯೋ ಕಾನ್ಫರೆನ್ಸಿನಲ್ಲಿ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿದರು. ಮಂಗಳವಾರದಿಂದ ರೈಲು ಸೇವೆ ಪುನಾರಂಭವನ್ನು ವಿರೋಧಿಸಿದ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್
ಅವರು ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಅವರ ನಿಲುವನ್ನು ಬೆಂಬಲಿಸಿದರು. ಉಭಯ ಮುಖ್ಯಮಂತ್ರಿಗಳ ಮಾತನ್ನು ಆಂದ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಮತ್ತು ಛತ್ತೀಸ್ ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಕೂಡಾ ಸಮರ್ಥಿಸಿದರು. (ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಕೊರೋನಾವೈರಸ್ ಪ್ರಸರಣ ತಡೆಯುವ ಸಲುವಾಗಿ ಸ್ಥಗಿತಗೊಳಿಸಲಾಗಿದ್ದ ರೈಲು ಸಂಚಾರವನ್ನು ಭಾರತೀಯ ರೈಲ್ವೆಯು ಒಂದೂವರೆ ತಿಂಗಳ ಬಳಿಕ 2020 ಮೇ ೧೨ರ ಮಂಗಳವಾರ ಪುನಾರಂಭ ಮಾಡಲಿದೆ. ಮೇ ೧೭ರಂದು ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ ಡೌನ್) ಅಂತ್ಯಗೊಳ್ಳಲಿದ್ದು, ಅದಕ್ಕೂ ಮುನ್ನವೇ ರೈಲು ಸೇವೆ ಪುನಾರಂಭಕ್ಕೆ ರೈಲ್ವೇ ಇಲಾಖೆ ನಿರ್ಧರಿಸಿತು. ಕೊರೋನಾವೈರಸ್ ಸೋಂಕು ಪ್ರಸರಣ ತಡೆಯುವ ಸಲುವಾಗಿ ಮಾರ್ಚ್ ಮಾಸಾಂತ್ಯದಲ್ಲಿ ರಾಷ್ಟ್ರವ್ಯಾಪಿ ದಿಗ್ಬಂಧನ ಘೋಷಿಸಲಾಗಿತ್ತು. ಮಾರ್ಚ್ ೨೨ರಿಂದ ಎಲ್ಲಾ ಪ್ರಯಾಣಿಕ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಮಂಗಳವಾರದಿಂದ ಪ್ರತಿದಿನ ೧೫ ರೈಲುಗಳು ಸಂಚಾರ ನಡೆಸಲಿವೆ. ಈ ವಿಶೇಷ ರೈಲುಗಳು ನವದೆಹಲಿಯಿಂದ ದಿಬ್ರುಗಢ, ಅಗರ್ತಲ, ಹೌರಾ, ಪಾಟ್ನಾ, ಬಿಲಾಸಪುರ, ರಾಂಚಿ, ಭುವನೇಶ್ವರ, ಸಿಕಂದರಾಬಾದ್, ಬೆಂಗಳೂರು, ಚೆನ್ನೈ, ತಿರುವನಂತಪುರಂ, ಮಡಗಾಂವ್, ಮುಂಬೈ ಸೆಂಟ್ರಲ್, ಅಹಮದಾಬಾದ್ ಮತ್ತು ಜಮ್ಮು-ತಾವಿಗೆ ಸಂಚರಿಸಲಿದೆ. ಈ ರೈಲುಗಳು ಕೆಲವು ಕಡೆ ಮಾತ್ರ ನಿಲುಗಡೆಯಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment