ಇಂದಿನ ಇತಿಹಾಸ History Today ಮೇ 24
2018: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಎಸೆದ ’ಹಮ್ ಫಿಟ್ ತೊ ಇಂಡಿಯಾ ಫಿಟ್’ ಅಭಿಯಾನದ ಅಡಿಯಲ್ಲಿ ’ಫಿಟ್ ನೆಸ್’ ಸವಾಲನ್ನು ಪ್ರಧಾನಿ ಅಂಗೀಕರಿಸಿದ ಬೆನ್ನಲ್ಲೇ ಪ್ರಚೋದಿತರಾದ ವಿರೋಧ ಪಕ್ಷಗಳ ಸದಸ್ಯರೂ ಪ್ರಧಾನಿಗೆ ’ಸವಾಲು’ ಎಸೆಯಲು ನಿರ್ಧರಿಸಿದರು. ಆದರೆ ವಿರೋಧ ಪಕ್ಷಗಳ ಸದಸ್ಯರು ಪ್ರಧಾನಿಗೆ ಎಸೆದಿರುವ ಸವಾಲು ಭಿನ್ನ ರೀತಿಯದು! ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಇಂಧನಗಳ ಬೆಲೆ ಇಳಿಸುವಂತೆ ಪ್ರಧಾನಿಗೆ ಸವಾಲು ಹಾಕಿದರು. ಪ್ರಧಾನಿಯವರು ಇದರಲ್ಲಿ ವಿಫಲರಾದರೆ ಕಾಂಗ್ರೆಸ್ ಪಕ್ಷವು ರಾಷ್ಟ್ರವ್ಯಾಪಿ ಆಂದೋಳನ ಆರಂಭಿಸಲಿದೆ ಎಂದು ಹೇಳಿದ ಅವರು ’ಸವಾಲಿಗೆ ಮೋದಿ ಅವರ ಉತ್ತರಕ್ಕಾಗಿ ಕಾಯುತ್ತಿರುವೆ’ ಎಂದು ಟ್ವೀಟ್ ಮಾಡಿದರು. ‘ಪ್ರಿಯ ಪ್ರಧಾನಿಯವರೇ, ತಾವು ವಿರಾಟ್ ಕೊಹ್ಲಿ ಅವರ ಫಿಟ್ ನೆಸ್ ಸವಾಲು ಸ್ವೀಕರಿಸಿದ್ದು ಕಂಡು ಖುಷಿಯಾಯಿತು. ಇಲ್ಲಿ ನನ್ನಿಂದಲೂ ಒಂದು ಸವಾಲು ಇದೆ. ಇಂಧನ ದರಗಳನ್ನು ಇಳಿಸಿ. ಇಲ್ಲದೇ ಇದ್ದಲ್ಲಿ ಹಾಗೆ ಮಾಡುವಂತೆ ನಿಮ್ಮ ಮೇಲೆ ಒತ್ತಡ ಬೀರಲು ಕಾಂಗ್ರೆಸ್ ಇದಕ್ಕಾಗಿ ರಾಷ್ಟ್ರವ್ಯಾಪಿ ಚಳವಳಿ ಮಾಡಲಿದೆ. ನಿಮ್ಮ ಪ್ರತಿಕ್ರಿಯೆಗಾಗಿ ಎದುರು ನೋಡುತ್ತಿರುವೆ’ ಎಂದು ರಾಹುಲ್ ಗಾಂಧಿ ತಮ್ಮ ಟ್ವೀಟಿನಲ್ಲಿ ಸವಾಲು ಎಸೆದರು. ರಾಹುಲ್ ಗಾಂಧಿ ಅವರು ಸವಾಲು ಎಸೆದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದ ಸಂಪರ್ಕ ಉಸ್ತುವಾರಿ ನೋಡಿಕೊಳ್ಳುತ್ತಿರುವ ರಣ್ ದೀಪ್ ಸುರ್ಜಿವಾಲ ಅವರು ’ಆರ್ಥಿಕ ಫಿಟ್ ನೆಸ್’ ಸವಾಲನ್ನು ಪ್ರಧಾನಿಗೆ ಎಸೆದರು. ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನು ಇಳಿಸಿ ಜನಸಾಮಾನ್ಯರ ಹೊರೆಯನ್ನು ತಗ್ಗಿಸಿ ಎಂದು ಅವರು ಪ್ರಧಾನಿಯನ್ನು ಒತ್ತಾಯಿಸಿದರು. ಭಾರತದಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆ ಸಾರ್ವಕಾಲಿಕ ದಾಖಲೆಗಳನ್ನು ಮುರಿದಿದ್ದು ವಿಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ವಿರುದ್ಧ ಸಾಮಾನ್ಯ ಜನರಿಗೆ ತೊಂದರೆಗಳು ಆಗುತ್ತಿರುವುದಕ್ಕಾಗಿ ಟೀಕಾ ಪ್ರಹಾರ ನಡೆಸಲು ಅವಕಾಶ ಕಲ್ಪಿಸಿದೆ. ಇಂಧನ ಬೆಲೆ ಏರಿಕೆಗೆ ಜಾಗತಿಕ ಕಚ್ಛಾತೈಲ ಬೆಲೆ ಏರಿಕೆ ಕಾರಣವಾಗಿದ್ದರೂ, ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಶೇಕಡಾ ೪೦-೫೦ರಷ್ಟು ಏರಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಭಾರಿ ಪ್ರಮಾಣದ ತೆರಿಗೆಗಳೂ ಕಾರಣವಾಗಿವೆ. ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ರಾಷ್ಟ್ರೀಯ ಜನತಾದಳದ (ಆರ್ ಜೆಡಿ) ತೇಜಸ್ವಿ ಯಾದವ್ ಅವರೂ ’ಸವಾಲೆಸೆಯುವ’ ಕಣಕ್ಕೆ ಧುಮುಕಿದ್ದು, ಪ್ರಧಾನಿಗೆ ಸವಾಲುಗಳ ಸರಮಾಲೆಯನ್ನೇ ಎಸೆದರು. ರಾಹುಲ್ ಗಾಂಧಿ ಅವರು ನಿರ್ದಿಷ್ಟವಾದ ಒಂದು ಸವಾಲು ಹಾಕಿದ್ದರೆ, ತೇಜಸ್ವಿ ಯಾದವ್ ಅವರು ಉದ್ಯೋಗ ಸೃಷ್ಟಿಯಿಂದ ರೈತರು ಎದುರಿಸುತ್ತಿರುವ ಸಮಸ್ಯೆಗಳು, ದಲಿತರ ವಿರುದ್ಧದ ದೌರ್ಜನ್ಯಗಳು ಸೇರಿದಂತೆ ಹಲವಾರು ವಿಷಯಗಳಿಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರಿಗೆ ಸವಾಲೆಸೆದರು. ನೀವು ವಿರಾಟ್ ಕೊಹ್ಲಿ ಅವರ ಸವಾಲು ಅಂಗೀಕರಿಸುವುದಕ್ಕೆ ನಮ್ಮ ವಿರೋಧವೇನಿಲ್ಲ. ಆದರೆ ಯುವಕರಿಗೆ ಉದ್ಯೋಗ ಒದಗಿಸುವ, ರೈತರಿಗೆ ಪರಿಹಾರ ಒದಗಿಸುವ, ದಲಿತರು ಮತ್ತು ಅಲ್ಪಸಂಖ್ಯಾತರ ವಇರುದ್ಧ ದೌರ್ಜನ್ಯ-ಹಿಂಸೆಗಳು ನಡೆಯದಂತಹ ಸವಾಲನ್ನು ನೀವು ಅಂಗೀಕರಿಸಬೇಕು ಎಂದು ನಾನು ಆಗ್ರಹಿಸುತ್ತೇನೆ. ನನ್ನ ಸವಾಲನ್ನು ಸ್ವೀಕರಿಸುವಿರಾ ಸ್ವಾಮಿ?’ ಎಂದು ತೇಜಸ್ವಿ ಯಾದವ್ ಟ್ವೀಟ್ ಮಾಡಿದರು. ‘ಹಮ್ ಫಿಟ್ ತೊ ಇಂಡಿಯಾ ಫಿಟ್’ ಶೀರ್ಷಿಕೆಯ ಈ ಸವಾಲುಗಳ ಸರಣಿ ಕೇಂದ್ರ ಕ್ರೀಡಾ ಸಚಿವ ರಾಜ್ಯವರ್ಧನ ಸಿಂಗ್ ರಾಥೋಡ್ ಅವರಿಂದ ಆರಂಭವಾಯಿತು. ರಾಥೋಡ್ ‘ಹಮ್ ಫಿಟ್ ತೋ ಇಂಡಿಯಾ ಫಿಟ್’ ಎಂಬ ಅಭಿಯಾನದ ಅಡಿಯಲ್ಲಿ ಎಲ್ಲ ಭಾರತೀಯರು ತಮ್ಮ ಫಿಟ್‌ನೆಸ್ ಮಂತ್ರದ ಬಗ್ಗೆ ವಿಡಿಯೊ ಮಾಡಿ ಹಂಚಿಕೊಳ್ಳುವಂತೆ ಟ್ವಿಟರ್‌ನಲ್ಲಿ ಕರೆ ನೀಡಿದ್ದರು. ತಮ್ಮ ವಿಡಿಯೋ ಅಪ್ ಲೋಡ್ ಮಾಡುತ್ತಾ ಹೃತಿಕ್ ರೋಷನ್, ವಿರಾಟ್ ಕೊಹ್ಲಿ, ಎನ್. ಸೈನಾ ಅವರಿಗೆ ರಾಥೋಡ್ ವಿಡಿಯೋ ಅಪ್ ಲೋಡ್ ಮಾಡುವಂತೆ ಸವಾಲು ಹಾಕಿದ್ದರು. ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸವಾಲು ಅಂಗೀಕರಿಸಿ, ‘ಹಮ್ ಫಿಟ್ ತೋ ಇಂಡಿಯಾ ಫಿಟ್’ ಎಂಬ ಅಭಿಯಾನದ ಅಡಿಯಲ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಕ್ರಿಕೆಟಿಗ ಮಹೇಂದ್ರ ಸಿಂಗ್ ದೋನಿ ಅವರಿಗೆ ಬುಧವಾರ ಟ್ವಿಟರ್‌ನಲ್ಲಿ ಸವಾಲು ಎಸೆದಿದ್ದರು. ವಿರಾಟ್ ಕೊಹ್ಲಿ ಹಾಕಿದ ಸವಾಲನ್ನು ಸ್ವೀಕರಿಸಿದ ಪ್ರಧಾನಿ ಮೋದಿ, ತಾವು ಫಿಟ್‌ನೆಸ್ ಕಾಯ್ದುಕೊಳ್ಳಲು ಅನುಸರಿಸುವ ಗುಟ್ಟನ್ನು ವಿಡಿಯೊ ಮೂಲಕ ಆದಷ್ಟು ಬೇಗ ಬಹಿರಂಗ ಪಡಿಸುವುದಾಗಿ ಟ್ವೀಟ್ ಮಾಡಿದ್ದರು.
2018: ಕರಾಚಿ: ಜಮಾತ್ -ಉದ್-ದವಾ ಮುಖ್ಯಸ್ಥ ಹಫೀಜ್ ಸಯೀದನನ್ನು ಪಶ್ಚಿಮ ಏಷ್ಯಾದ ಯಾವುದಾದರೂ ರಾಷ್ಟ್ರಕ್ಕೆ ಸ್ಥಳಾಂತರಿಸುವಂತೆ ಚೀನಾ ಪಾಕಿಸ್ತಾನಕ್ಕೆ ಸೂಚಿಸಿತು. ಸಯೀದ್ ವಿರುದ್ಧ, ಆತ ಭಯೋತ್ಪಾದಕ ಸಂಘಟನೆಗಳ ಜೊತೆಗೆ ಸಂಪರ್ಕ ಹೊಂದಿರುವ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳುವಂತೆ ಅಂತಾರಾಷ್ಟ್ರೀಯ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚೀನಾ ಈ ಸೂಚನೆ ನೀಡಿತು. ವರದಿಗಳ ಪ್ರಕಾರ ಚೀನಾದ ಅಧ್ಯಕ್ಷ ಕ್ಷಿ ಜಿನ್ ಪಿಂಗ್ ಅವರು ಪಾಕಿಸ್ತಾನದ ಪ್ರಧಾನಿ ಶಾಹಿದ್ ಖಾಖನ್ ಅಬ್ಬಾಸಿ ಅವರಿಗೆ ಕಳೆದ ತಿಂಗಳು ಚೀನಾದಲ್ಲಿ ನಡೆದ ಬಾವೊ ಫೋರಮ್ ಸಭೆಯ ಸಂದರ್ಭದಲ್ಲಿ ಈ ಸೂಚನೆ ನೀಡಿ ’ಪಶ್ಚಿಮ ಏಷ್ಯಾದ ಯಾವುದಾದರೂ ರಾಷ್ಟ್ರಕ್ಕೆ ಸಯೀದನನ್ನು ಸ್ಥಳಾಂತರಿಸಿ, ಅಲ್ಲಿ ಆತ ಹಾಯಾಗಿ ಇರಲಿ’ ಎಂದು ಹೇಳಿದ್ದಾರೆ ಎನ್ನಲಾಯಿತು. ‘೩೫ ನಿಮಿಷಗಳ ಸಭೆಯಲ್ಲಿ ಕನಿಷ್ಠ ೧೦ ನಿಮಿಷಗಳನ್ನು ಕ್ಷಿ ಅವರು ಸಯೀದನ ಜೊತೆಗೆ ಹೇಗೆ ವ್ಯವಹರಿಸಬೇಕು ಎಂಬ ಬಗ್ಗೆ ಚರ್ಚಿಸುವುದಕ್ಕಾಗಿಯೇ ತೆಗೆದುಕೊಂಡರು. ಸಯೀದನನ್ನು ಲೋಕಪ್ರಸಿದ್ಧಿಯಿಂದ ದೂರ ಇಡಲು ಆದಷ್ಟೂ ಬೇಗೆ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆಯೇ ಈ ಚರ್ಚೆ ನಡೆಯಿತು’ ಎಂದು ಹೆಸರು ಹೇಳಲು ಇಚ್ಛಿಸದ ಅಬ್ಬಾಸಿ ನಿಕಟವರ್ತಿಯೊಬ್ಬರು ಹೇಳಿದರು. ಅಬ್ಬಾಸಿ ಅವರು ಸರ್ಕಾರಿ ಕಾನೂನು ತಜ್ಞರ ತಂಡದ ಜೊತೆಗೆ ಈ ವಿಚಾರದ ಬಗ್ಗೆ ಸಮಾಲೋಚಿಸಿದ್ದಾರೆ. ಆದರೆ ಪರಿಹಾರ ಇನ್ನೂ ಲಭಿಸಿಲ್ಲ. ಹಾಲಿ ಪ್ರಧಾನಿಯವರು ಮೇ ೩೧ರಂದು ತಮ್ಮ ಅವಧಿ ಪೂರ್ಣಗೊಂಡ ಬಳಿಕ ಅಧಿಕಾರ ತ್ಯಜಿಸುವುದರಿಂದ ಮುಂದಿನ ಸರ್ಕಾರಕ್ಕೆ ಈ ವಿಷಯವನ್ನು ವರ್ಗಾಯಿಸಲಾಗುವುದು ಎಂದು ಮೂಲಗಳು ಹೇಳಿದವು. ಪ್ರಧಾನಿ ಸ್ಥಾನಕ್ಕೆ ಜುಲೈ ಕೊನೆಗೆ ದೇಶದಲ್ಲಿ ಮಹಾಚುನಾವಣೆ ನಡೆಯಲಿದೆ. ಜೆಯುಡಿ ಆಪಾದನೆ: ಈ ಮಧ್ಯೆ, ಸರ್ಕಾರವು ಅಮೆರಿಕ ಮತ್ತು ಭಾರತದ ಪ್ರಚೋದನೆಯಿಂದ ಸಯೀದ್ ವಿರುದ್ಧ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಜೆಯುಡಿಯು ಪಾಕ್ ಸರ್ಕಾರದ ವಿರುದ್ಧ ಆರೋಪ ಮಾಡಿತು. ಕರಾಚಿಯಲ್ಲಿ ಇಫ್ತಾರ್ ಕೂಟದದ ಸಂದರ್ಭದಲ್ಲಿ ಕೆಲವು ಪತ್ರಕರ್ತರನ್ನು ಭೇಟಿ ಮಾಡಿದ್ದ ಸಯೀದ್ ಚೀನಾವು ತನ್ನ ವಿರುದ್ಧ ನಿಷೇಧ ವಿಧಿಸಲು ಅಥವಾ ತನ್ನನ್ನು ಬೇರೆ ರಾಷ್ಟ್ರಕ್ಕೆ ಕಳುಹಿಸಲು ಬಯಸಿದೆ ಎಂಬುದನ್ನು ತಾನು ನಂಬುವುದಿಲ್ಲ ಎಂದು ಹೇಳಿದ. ಏನಿದ್ದರೂ ಚೀನಾವು ’ಸೂಪರ್ ಪವರ್’ ಆಗಿ ವರ್ತಿಸಬಹುದು ಮತ್ತು ಪಾಕಿಸ್ತಾನಕ್ಕೆ ನಿರ್ದೇಶನಗಳನ್ನು ನೀಡಬಲ್ಲುದು ಎಂದು ಒಪ್ಪಿಕೊಂಡ ಸಯೀದ್ ಇತ್ತೀಚಿನ ವಾರಗಳಲ್ಲಿ ಜೆಯುಡಿಯ ಭವಿಷ್ಯ ಬಗ್ಗೆ ಚರ್ಚಿಸಲು ಸರ್ಕಾರದ ಪ್ರತಿನಿಧಿ ತನ್ನನ್ನು ಭೇಟಿ ಮಾಡಿದ್ದಾರೆ ಎಂಬುದನ್ನು ನಿರಾಕರಿಸಿದ. ಜಾಗತಿಕ ಭಯೋತ್ಪಾದಕ ಎಂಬುದಾಗಿ ವಿಶ್ವಸಂಸ್ಥೆ, ಅಮೆರಿಕ ಮತ್ತು ಭಾರತ ಘೋಷಿಸಲ್ಪಟ್ಟಿರುವ ಹಫೀಜ್ ಸಯೀದ್ ತಲೆಗೆ ೫೦ ಲಕ್ಷ ಡಾಲರ್ ಬಹುಮಾನವನ್ನು ಘೋಷಿಸಿಲಾಗಿದೆ. ೨೦೦೮ರ ಮುಂಬೈ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಆತನನ್ನು ಹಿಡಿದುಕೊಟ್ಟವರಿಗೆ ಈ ಬಹುಮಾನವನ್ನು ಘೋಷಿಸಲಾಗಿತ್ತು. ಪಾಕಿಸ್ತಾನಿ ಅಧಿಕಾರಿಗಳು ಸಯೀದನನ್ನು ಕಳೆದ ವರ್ಷ ಸುಮಾರು ೯ ತಿಂಗಳ ಕಾಲ ಗೃಹ ಬಂಧನದಲ್ಲಿ ಇಟ್ಟಿದ್ದರು. ಆದರೆ, ಲಾಹೋರ್ ಹೈಕೋರ್ಟ್ ತೀರ್ಪಿನ ಪರಿಣಾಮವಾಗಿ ಆತನನ್ನು ಬಿಡುಗಡೆ ಮಾಡಿತ್ತು. ಈ ವರ್ಷದ ಆದಿಯಲ್ಲಿ ಜೆಯುಡಿಯನ್ನು ಪ್ಯಾರಿಸ್ಸಿನಲ್ಲಿ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ ಸಭೆಗೆ ಮುನ್ನ ನಿಷೇಧಿತ ಸಂಘಟನೆಗಳ ಪಟ್ಟಿಗೆ ಸೇರಿಸಲಾಗಿತ್ತು. ಭಯೋತ್ಪಾದನೆಗೆ ಹಣಕಾಸು ನೆರವು ನೀಡುವುದನ್ನು ತಡೆಯುವಲ್ಲಿ ವಿಫಲವಾದುದಕ್ಕಾಗಿ ಪಾಕಿಸ್ತಾನವನ್ನು ಗ್ರೇ ಲಿಸ್ಟ್‌ಗೆ ಸೇರಿಸಲೂ’ ಸಭೆ ನಿರ್ಧರಿಸಿತ್ತು. ಸಯೀದನ ಜೆಯುಡಿಗೆ ಸಂಬಂಧಿಸಿದ ಎಲ್ಲ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆಯೂ ಪಾಕಿಸ್ತಾನ ಅಧ್ಯಕ್ಷೀಯ ಸುಗ್ರೀವಾಜ್ಞೆ ಹೊರಡಿಸಿತ್ತು. ಆದರೆ ಭಯೋತ್ಪಾದನೆ ನಿಗ್ರಹ ಕಾಯ್ದೆಯ ಶೆಡ್ಯೂಲು ೧ರ ವ್ಯಾಪ್ತಿಗೆ ಜೆಯುಡಿಯನ್ನು ಸೇರಿಸಿರಲಿಲ್ಲ. ಶೆಡ್ಯೂಲು ೧ ನಿಷೇಧಿತ ಸಂಘಟನೆಯ ನಾಯಕರ ಬಂಧನವನ್ನು ಕಡ್ಡಾಯಗೊಳಿಸುತ್ತದೆ.
2018: ಬೀಜಿಂಗ್: ಜಮಾತ್ -ಉದ್- ದವಾ
ಮುಖ್ಯಸ್ಥ ಹಫೀಜ್ ಸಯೀದನನ್ನು ಪಶ್ಚಿಮ ಏಷ್ಯಾದ ಯಾವುದಾದರೂ ರಾಷ್ಟ್ರಕ್ಕೆ ಸ್ಥಳಾಂತರಿಸುವಂತೆ ಪಾಕಿಸ್ತಾನಕ್ಕೆ
ಚೀನಾವು ಸೂಚಿಸಿದೆ ಎಂಬುದಾಗಿ ಕೆಲವು ಪತ್ರಿಕೆಗಳಲ್ಲಿ ಬಂದಿರುವ ವರದಿ ಬುಡರಹಿತವಾದದ್ದು ಎಂದು ಚೀನೀ
ವಿದೇಶಾಂಗ ಸಚಿವಾಲಯವು ಪ್ರತಿಕ್ರಿಯಿಸಿತು. ವರದಿಯನ್ನು
ಟೀಕಿಸಿದ ಚೀನೀ ವಿದೇಶಾಂಗ ಸಚಿವಾಲಯದ ವಕ್ತಾರರು ’ವರದಿಯು ಆಘಾತಕಾರಿ. ಏಕೆಂದರೆ ಅದು ಬುಡರಹಿತವಾದದ್ದು’ಎಂದು ಹೇಳಿದರು. ವರದಿಯ ಪ್ರಕಾರ ಭಯೋತ್ಪಾದಕ ಸಂಘಟನೆಗಳ
ಜೊತೆಗೆ ಸಂಪರ್ಕ ಹೊಂದಿರುವುದಕ್ಕಾಗಿ ಹಫೀಜ್ ಸಯೀದನನ್ನು ಪಶ್ಚಿಮ ಏಷ್ಯಾ ರಾಷ್ಟ್ರವೊಂದಕ್ಕೆ ಸ್ಥಳಾಂತರಿಸುವಂತೆ
ಚೀನಾವು ಪಾಕಿಸ್ತಾನಕ್ಕೆ ಸೂಚಿಸಿದೆ ಎಂದು ಹೇಳಲಾಗಿತ್ತು. ಪಶ್ಚಿಮ ಏಷ್ಯಾದ ರಾಷ್ಟ್ರವೊಂದಕ್ಕೆ ಸ್ಥಳಾಂತರಿಸುವ
ಮೂಲಕ ಸಯೀದನನ್ನು ಲೋಕಪ್ರಸಿದ್ಧಿಯಿಂದ ದೂರ ಮಾಡಿ ಸದ್ದಿಲ್ಲದ ಜೀವನ ನಡೆಸುವಂತೆ ಮಾಡಬೇಕು ಎಂದು ಚೀನೀ
ಅಧ್ಯಕ್ಷ ಕ್ಷಿ ಜಿನ್ ಪಿಂಗ್ ಅವರು ಪಾಕ್ ಪ್ರಧಾನಿ ಶಾಹಿದ್ ಖಾಖನ್ ಅಬ್ಬಾಸಿ ಅವರಿಗೆ ಚೀನಾದಲ್ಲಿ
ಕಳೆದ ತಿಂಗಳು ನಡೆದ ಬಾವೊ ಫೋರಂ ಸಭೆಯ ಸಂದರ್ಭದಲ್ಲಿ ಸಲಹೆ ಮಾಡಿದ್ದರು ಎಂದು ವರದಿ ಹೇಳಿತ್ತು.
2018: ನವದೆಹಲಿ: ಕಾಶ್ಮೀರದಲ್ಲಿ ಜಾರಿಗೊಳಿಸಲಾಗಿರುವ
ರಂಜಾನ್ ಕದನವಿರಾಮಕ್ಕೆ ಉತ್ತಮ ಸ್ಪಂದನೆ ಲಭಿಸಿರುವ ಹಿನ್ನೆಲೆಯಲ್ಲಿ ಸಂತೃಪ್ತಗೊಂಡಿರುವ ಕೇಂದ್ರ
ಸರ್ಕಾರ ಪವಿತ್ರ ಮಾಸದ ಬಳಿಕವೂ ಅದನ್ನು ವಿಸ್ತರಿಸಲು ಹಿಂಜರಿಯದು ಎಂದು ಗೃಹ ವ್ಯವಹಾರಗಳ ಸಚಿವಾಲಯ
ಮೂಲಗಳು ತಿಳಿಸಿದವು. ‘ಕದನ ವಿರಾಮಕ್ಕೆ ಒಳ್ಳೆಯ ಸ್ಪಂದನೆ ಲಭಿಸಿದೆ. ರಂಜಾನ್ ಪವಿತ್ರ ಮಾಸದಾಚೆಗೂ
ಅದನ್ನು ವಿಸ್ತರಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ’ ಎಂದು ಹಿರಿಯ ಅಧಿಕಾರಿಯೊಬ್ಬರು
ತಿಳಿಸಿದರು. ಕಾಶ್ಮೀರ ಕಣಿವೆಯಲ್ಲಿ ಸರ್ಕಾರವು ಕೈಗೊಂಡಿರುವ ಶಾಂತಿ ಉಪಕ್ರಮವು ಫಲ ನೀಡುತ್ತಿರುವುದರಿಂದ
ತಳಮಳಗೊಂಡಿರುವ ಪಾಕಿಸ್ತಾನವು ತನ್ನ ಸೈನಿಕರ ಮೂಲಕ ಅಂತಾರಾಷ್ಟ್ರೀಯ ಗಡಿಯಲ್ಲಿ ಶೆಲ್ ದಾಳಿಯನ್ನು
ಹೆಚ್ಚಿಸಿರುವುದು ’ಕದನವಿರಾಮ ಫಲಪ್ರದ’ ಆಗಿರುವುದಕ್ಕೆ ಸಾಕ್ಷಿ
ಎಂದು ಉನ್ನತ ಅಧಿಕಾರಿ ಹೇಳಿದರು. ಪಾಕಿಸ್ತಾನವು ಅಂತಾರಾಷ್ಟ್ರೀಯ
ಗಡಿಯಲ್ಲಿ ಕದನ ವಿರಾಮ ಉಲ್ಲಂಘನೆಗಳನ್ನು ತೀವ್ರಗೊಳಿಸಿದೆ. ಏಕೆಂದರೆ ಕಾಶ್ಮೀರದಲ್ಲಿ ಕದನ ವಿರಾಮಕ್ಕೆ
ಉತ್ತಮ ಪ್ರತಿಕ್ರಿಯೆ ಲಭಿಸಿರುವುದು ಅವರಿಗೆ ಅಸಮಾಧಾನವನ್ನು ಉಂಟು ಮಾಡಿದೆ. ನಮಗೆ ಬಿಎಸ್ ಎಫ್ ನಿಂದ
ಪ್ರತಿದಿನದ ವರದಿ ಬರುತ್ತಿದೆ ಮತ್ತು ನಮ್ಮ ಯೋಧರು ಪಾಕಿಸ್ತಾನಕ್ಕೆ ತಕ್ಕ ಉತ್ತರ ಕೊಡುತ್ತಿದ್ದಾರೆ
ಎಂದು ಅಧಿಕಾರಿ ನುಡಿದರು. ಪಾಕ್ ಸೈನಿಕರಿಂದ ಹಿಂದಿನ
ದಿನ ನಡೆದ ಶೆಲ್ ದಾಳಿಯಲ್ಲಿ ಕನಿಷ್ಠ ಐವರು ನಾಗರಿಕರು ಅಸು ನೀಗಿ, ೬ ಮಂದಿ ಬಿಎಸ್ ಎಫ್ ಯೋಧರು ಸೇರಿದಂತೆ
೩೦ಕ್ಕಿಂತಲೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಜಮ್ಮು ವಿಭಾಗದ ಕಥುವಾದಿಂದ ಅಖ್ನೂರಿನವರೆಗಿನ ೧೮೧
ಕಿಮೀ ಅಂತಾರಾಷ್ಟ್ರೀಯ ಗಡಿಯಲ್ಲಿ ಅವರು ಶೆಲ್ ದಾಳಿ ನಡೆಸಿದ್ದಾರೆ. ಕಾಶ್ಮೀರ ಕಣಿವೆಯು ಸಂಪೂರ್ಣವಾಗಿ
ಶಾಂತವಾಗಿರುವಾಗಲೇ ಪಾಕಿಸ್ತಾನದ ಕಡೆಯಿಂದ ಗುಂಡಿನ ದಾಳಿಯ ಪ್ರಮಾಣ ಹೆಚ್ಚಿದ್ದು ಕಾಕತಾಳೀಯ ಏನೂ ಅಲ್ಲ
ಎಂದು ಅಧಿಕಾರಿಗಳು ಹೇಳಿದರು. ಜಮ್ಮು ಮತ್ತು ಕಾಶ್ಮೀರದ
ಪೊಲೀಸ್ ಮಹಾ ನಿರ್ದೇಶಕ ಎಸ್.ಪಿ. ವೈದ್ ಅವರು ಕದನವಿರಾಮ ಆರಂಭವಾದ ಬಳಿಕ ಮೇ ೧೭ರಿಂದ ಮೇ ೨೦ರವರೆಗಿನ
ಅವಧಿಯಲ್ಲಿ ಕಲ್ಲೆಸೆತದ ಕೇವಲ ೬ ಘಟನೆಗಳು ಘಟಿಸಿವೆ ಎಂದು ನುಡಿದರು. ಪ್ರಧಾನಿಯವರ
ಶಾಂತಿ ಉಪಕ್ರಮವು ಕಣಿವೆ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸುಧಾರಣೆಗೆ ನೆರವಾಗಿದೆ. ಪರಿಸ್ಥಿತಿ, ವಿಶೇಷವಾಗಿ ದಕ್ಷಿಣ ಕಾಶ್ಮೀರದಲ್ಲಿ ಸುಧಾರಿಸಿದೆ
ಮತ್ತು ಕುಟುಂಬಗಳಲ್ಲಿ ವಿಶ್ವಾಸ ಮೂಡಿಸುವಲ್ಲಿ ನೆರವಾಗುತ್ತಿದೆ ಎಂದು ಎಸ್ಪಿ ವೈದ್ ಹೇಳಿದರು. ಪಿಡಿಪಿ
ನಾಯಕ ವಹೀದ್ ಪರ ಅವರು ಕದನ ವಿರಾಮ ವಿಸ್ತರಣೆ ಬಗ್ಗೆ ಪರಿಶೀಲಿಸುವ ಕೇಂದ್ರದ ನಿರ್ಧಾರವನ್ನು ಸ್ವಾಗತಿಸಿದರು. ’sಸಮರಸತೆಯ ಪರಿಸರ ಸೃಷ್ಟಿಯಾಗುತ್ತಿದೆ. ಸಾಕಷ್ಟು ನಿರಾಳತೆ
ಲಭಿಸಿದೆ. ಕೇಂದ್ರವು ಕದನವಿರಾಮವನ್ನು ಉಲ್ಲಂಘಿಸಿದರೆ ಅದು ಸ್ವಾಗತಾರ್ಹ ಕ್ರಮ’ ಎಂದು ಅವರು ನುಡಿದರು. ಪಡೆಗಳು ಮುತ್ತಿಗೆ
ಹಾಕುವಿಕೆ ಮತು ಶೋಧ ಕಾರ್ಯಾಚರಣೆಗಳಿಂದ ದೂರವಿದ್ದರೂ, ಹಿಂಸಾಚಾರದ ಒಂದೇ ಒಂದು ಕೆಟ್ಟ ಘಟನೆ ಕೂಡಾ
ಕಣಿವೆಯ ಪರಿಸ್ಥಿತಿಯನ್ನು ಬದಲಾಯಿಸಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದರು. ಆದರೆ ಪೊಲೀಸರ ಅಂಕಿಸಂಖ್ಯೆಗಳನ್ನು
ನಿರಾಕರಿಸಿರುವ ಸಿಆರ್ ಪಿಎಫ್, ವಾಸ್ತವವಾಗಿ ಕಲ್ಲೆಸೆತದ ಘಟನೆಗಳು ದುಪ್ಪಟ್ಟುಗೊಂಡಿವೆ ಎಂದು ಹೇಳಿತು.
ಶೋಪಿಯಾನ್ ಜಿಲ್ಲೆಯಲ್ಲಿ ಗ್ರಾಮಸ್ಥರು ಸೇನೆಯ ಜೊತೆ
ಇಫ್ತಾರಿಗೆ ಸಂಬಂಧಿಸಿದಂತೆ ಘರ್ಷಿಸಿದ ವರದಿಗಳಿದ್ದು, ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಕೂಡಾ
ಕದನವಿರಾಮ ಬೇಷರತ್ ಅಲ್ಲ, ಷರತ್ತಿನದು ಎಂದು ಸ್ಪಷ್ಟ ಪಡಿಸಿದರು. ‘ಇಸ್ಲಾಮನ್ನು ಅನುಸರಿಸುವವರು,
ರಂಜಾನಿನ ಪಾವಿತ್ರ್ಯವನ್ನು ಗೌರವಿಸದೇ ಇದ್ದಲ್ಲಿ, ಭದ್ರತಾ ಪಡೆಗಳು ಅನುಕಂಪದಿಂದ ಇರಬೇಕು ಎಂದು ನೀವು
ನಿರೀಕ್ಷಿಸಲಾಗದು. ಭಯೋತ್ಪಾದಕರು ಮತ್ತು ಕಲ್ಲೆಸೆಯುವವರು ಹಿಂಸಾಚಾರಕ್ಕೆ ಇಳಿದರೆ ಅವರನ್ನು ಹೇಗೆ
ನೋಡಿಕೊಳ್ಳಬೇಕೋ ಹಾಗೆಯೇ ನೋಡಿಕೊಳ್ಳಲಾಗುತ್ತದೆ’ ಎಂದು ಸಿಂಗ್ ಎಚ್ಚರಿಸಿದರು.
2009: ಡಿಎಂಕೆಯ ಒತ್ತಡ ತಂತ್ರ ಕೊನೆಗೊಂಡಿತು. ಕಡೆಗೂ ಕೇಂದ್ರ ಸರ್ಕಾರವನ್ನು ಸೇರಲು ದ್ರಾವಿಡ ಪಕ್ಷ ನಿರ್ಧರಿಸಿತು. ಮೂರು ಸಂಪುಟ ದರ್ಜೆ ಸೇರಿದಂತೆ ಒಟ್ಟು 7 ಸಚಿವ ಸ್ಥಾನಗಳಿಗೆ 'ಚೌಕಾಸಿ' ಒಪ್ಪಂದ ಕುದುರಿತು. ಮನಮೋಹನ ಸಿಂಗ್ ನೇತೃತ್ವದ ನೂತನ ಸರ್ಕಾರದಲ್ಲಿ ಮೂರು ಸಂಪುಟ ದರ್ಜೆಯ ಜೊತೆಗೆ 9 ಸಚಿವ ಸ್ಥಾನಗಳಿಗೆ ಡಿಎಂಕೆ ಬೇಡಿಕೆ ಮಂಡಿಸಿತ್ತು. ಮೊದಲನೆಯದಕ್ಕೆ 'ಅಸ್ತು' ಎಂದರೂ 9ರ ಸಂಖ್ಯೆಯನ್ನು 6ಕ್ಕೆ ಇಳಿಸುವ ಕಾಂಗ್ರೆಸ್ ಯತ್ನ ಫಲಿಸಿರಲಿಲ್ಲ. ಆದರೆ ಕಳೆದ ಸರ್ಕಾರದಲ್ಲಿ ಡಿಎಂಕೆ ಹೊಂದಿದ್ದ 7 ಸ್ಥಾನಗಳನ್ನೇ ಉಳಿಸಿ 'ಯಥಾಸ್ಥಿತಿ' ಕಾಯ್ದುಕೊಳ್ಳಲು ಅದು ಶಕ್ತವಾಯಿತು.. ಕನಿಮೊಳಿ ಅವರಿಗೆ ಕ್ಯಾಬಿನೆಟ್ ದರ್ಜೆ ನೀಡಬೇಕೆಂದು ಡಿಎಂಕೆ ಹಠಹಿಡಿದಿತ್ತು. ಪಕ್ಷದ ಸಭೆಯಲ್ಲಿ ಕನಿಮೊಳಿ ಅವರು ಸಚಿವ ಸ್ಥಾನದಿಂದಲೇ ಹಿಂದೆ ಸರಿದದ್ದರಿಂದ ಸಮಸ್ಯೆಗೆ ಪರಿಹಾರ ಸಾಧ್ಯವಾಯಿತು. ಕೊನೆಗೆ ಕನಿಮೊಳಿ ಅವರನ್ನು ರಾಜ್ಯ ಸಚಿವರಾಗುವಂತೆ ಒಪ್ಪಿಸಲಾಯಿತು.
2009: ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರ ಹತ್ಯೆಯ ಸಂಚಿನಲ್ಲಿ ಭಾಗಿಯಾಗಿದ್ದ ವ್ಯಕ್ತಿ ಸೇರಿದಂತೆ ಇಬ್ಬರು ಮಾವೋವಾದಿಗಳನ್ನು ಆಂಧ್ರ ಪ್ರದೇಶ ಪೊಲೀಸರು ಈದಿನ ನಸುಕಿನಲ್ಲಿ ಗುಂಡಿಕ್ಕಿ ಹತ್ಯೆಗೈದರು. ವಾರಂಗಲ್ ಜಿಲ್ಲೆಯ ತಡ್ವಿ ಅರಣ್ಯ ಪ್ರದೇಶದಲ್ಲಿ ಪೊಲೀಸರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಸಿಪಿಎಂ ಕೇಂದ್ರ ಸಮಿತಿ ಸದಸ್ಯ ಪಟೇಲ್ ಸುಧಾಕರ ರೆಡ್ಡಿ, ಮತ್ತು ರಾಜ್ಯ ಸಮಿತಿ ಸದಸ್ಯ ಕೆ.ವೆಂಕಟಯ್ಯ ಅವರು ಮೃತರಾದರು ಪೊಲೀಸರಿಗೆ ಅತ್ಯವಶ್ಯಕವಾಗಿ ಬೇಕಾಗಿದ್ದ ಸುಧಾಕರ ರೆಡ್ಡಿ ಪತ್ತೆಗೆ ಸರ್ಕಾರ 2.1 ದಶ ಲಕ್ಷ ರೂಪಾಯಿ ಘೋಷಣೆ ಮಾಡಿತ್ತು.
2009: ವಿದ್ಯಾರ್ಥಿಗಳನ್ನು ಪೀಡಿಸಿ ಬಲವಂತವಾಗಿ ಹಣ ವಸೂಲಿ ಮಾಡುತ್ತಾ, ಅದೇ ವಿದ್ಯಾರ್ಥಿಗಳೊಂದಿಗೆ ಮಾದಕ ವಸ್ತುಗಳನ್ನು ಸೇವಿಸಿ, ಲೈಂಗಿಕ ಚಟುವಟಿಕೆಗಳಲ್ಲಿ ತೊಡಗುತ್ತಿದ್ದ ಆರೋಪದ ಮೇಲೆ ಫಿಲಿಡೆಲ್ಫಿಯಾದ ಪಾದ್ರಿ ಹಾಗೂ ರೋಮನ್ ಕ್ಯಾಥೋಲಿಕ್ ಪ್ರೌಢಶಾಲೆಯ ಮಾಜಿ ಪ್ರಾಚಾರ್ಯ ರೆವರೆಂಡ್ ಚಾರ್ಲ್ಸ್ ನ್ಯೂಮ್ಯಾನ್‌ಗೆ(58) ನ್ಯಾಯಾಲಯ 3 ರಿಂದ 6 ವರ್ಷ ಸೆರೆವಾಸದ ಶಿಕ್ಷೆ ವಿಧಿಸಿತು. ಈತ ಮಾಜಿ ಹಾಗೂ ಹಾಲಿ ವಿದ್ಯಾರ್ಥಿಗಳನ್ನು ಹಣಕ್ಕಾಗಿ ಪೀಡಿಸುತ್ತಿದ್ದ. ಅವರಿಂದ ಒಟ್ಟು 9 ಲಕ್ಷ ಡಾಲರ್‌ನಷ್ಟು ವಸೂಲಿ ಮಾಡಿದ್ದ. ಹೀಗೆ ಪೀಡಿಸಿ ಹಣ ಸಂಗ್ರಸುತ್ತಿದ್ದ ಹಣದಿಂದ ವಿದ್ಯಾರ್ಥಿಗಳೊಂದಿಗೆ ಸೇರಿ ಮದ್ಯ ಹಾಗೂ ಮಾದಕ ದ್ರವ್ಯಗಳನ್ನು ಸೇವಿಸುತ್ತಿದ್ದ.
2009: ಅಮೆರಿಕದಲ್ಲಿನ ಭಾರತದ ನೂತನ ರಾಯಭಾರಿಯಾಗಿ ಮೀರಾ ಶಂಕರ್ ನೇಮಕಗೊಂಡರು. ಈ ಮೊದಲು ಜರ್ಮನಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಅವರು, ಜವಹರಲಾಲ್ ನೆಹರೂ ಅವರ ಸಹೋದರಿ ವಿಜಯಲಕ್ಷ್ಮಿ ಪಂಡಿತ್ (1949- 1952) ಅವರ ನಂತರ ಅಮೆರಿಕದಲ್ಲಿ ಭಾರತವನ್ನು ಪ್ರತಿನಿಧಿಸುವ ಎರಡನೇ ಮಹಿಳೆಯಾದರು. 58 ವರ್ಷದ ಮೀರಾ ಶ್ವೇತಭವನಕ್ಕೆ ತೆರಳಿ ಅಧ್ಯಕ್ಷ ಬರಾಕ್ ಒಬಾಮ ಅವರನ್ನು ಭೇಟಿ ಮಾಡಿ ಪರಿಚಯಿಸಿಕೊಂಡರು.
2009: ಜಗತ್ತಿನ ಅತಿ ದೊಡ್ಡ ಉಕ್ಕು ಉತ್ಪಾದನಾ ಕಂಪೆನಿಯಾದ 'ಆರ್ಸೆಲರ್- ಮಿತ್ತಲ್' ಮಾಲೀಕ, ಅನಿವಾಸಿ ಭಾರತೀಯರಾದ ಲಕ್ಷ್ಮೀ ಮಿತ್ತಲ್, ಅವರ ಪುತ್ರ ಆದಿತ್ಯ ಮತ್ತು ಪುತ್ರಿ ವನಿಶಾ ಅವರು ತಮ್ಮ ವೇತನದಲ್ಲಿ ಶೇ 15 ರಷ್ಟು ಕಡಿತ ಮಾಡಿಕೊಂಡರು. ಆರ್ಥಿಕ ಹಿಂಜರಿತ ಹಾಗೂ ಉಕ್ಕು ಉದ್ಯಮದಲ್ಲಿ ಉಂಟಾದ ಕುಸಿತದ ಹಿನ್ನೆಲೆಯಲ್ಲಿ ಕಂಪೆನಿಯ ಆಡಳಿತ ಮಂಡಳಿ ಸದಸ್ಯರ ಸಂಬಳದಲ್ಲಿ ಕಡಿತ ಮಾಡುವ ಪ್ರಸ್ತಾವವನ್ನು ಕಳೆದ ಫೆಬ್ರುವರಿಯಲ್ಲಿ ಕೈಗೊಳ್ಳಲಾಗಿತ್ತು.
2009: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಬಂಟ, ರಶೀದ್ ಮಲಬಾರಿಯ ಸಹಚರ ಉಡುಪಿ ಜಿಲ್ಲೆಯ ಕಾಪುವಿನ ಇಸ್ಮಾಯಿಲ್‌ನನ್ನು ದಕ್ಷಿಣ ಕನ್ನಡ ಜಿಲ್ಲಾ ಅಪರಾಧ ಮತ್ತು ಗುಪ್ತವಾರ್ತೆ ವಿಭಾಗದ ಪೊಲೀಸರ ತಂಡ ಚೆನ್ನೈ ವಿಮಾನ ನಿಲ್ದಾಣದಲ್ಲಿ ಬಂಧಿಸಿತು.
2008: ಪರಿಶಿಷ್ಟ ಪಂಗಡ (ಎಸ್ ಟಿ) ಸ್ಥಾನಕ್ಕಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ಗುಜ್ಜರ್ ಸಮುದಾಯದವರ ಮೇಲೆ ಪೊಲೀಸರು ಗುಂಡು ಹಾರಿಸಿದ ಪರಿಣಾಮ ರಾಜಸ್ಥಾನದ ಡೌಸಾ ಜಿಲ್ಲೆಯ ಸಿಕಂದರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 16 ಜನರು ಮೃತರಾದರು. ಮಧ್ಯಾಹ್ನದ ವೇಳೆಗೆ ಹಿಂಸಾರೂಪಕ್ಕಿಳಿದ ಪ್ರತಿಭಟನಾಕಾರರು ಸಿಕಂದರ ಪೊಲೀಸ್ ಠಾಣೆಯನ್ನು ಸುಟ್ಟುಹಾಕಲು ಪ್ರಯತ್ನಿಸಿದಾಗ ಪೊಲೀಸರು ಗೋಲಿಬಾರ್ ಮಾಡಿದರು. ಹಿಂದಿನ ದಿನ ಭರತ್ ಪುರದಲ್ಲೂ ಇದೇ ರೀತಿ ಪ್ರತಿಭಟನೆ ನಡೆಸುತ್ತಿದ್ದ ಗುಜ್ಜರ್ ಸಮುದಾಯದ ಪ್ರತಿಭಟನಾಕಾರರ ಮೇಲೆ ಪೊಲೀಸರು ಗೋಲಿಬಾರ್ ನಡೆಸಿದ್ದರಿಂದ ಕನಿಷ್ಠ 15 ಜನರು ಮೃತರಾಗಿದ್ದರು. ಇದರೊಂದಿಗೆ ಗುಜ್ಜರ್ ಚಳವಳಿ ಗೋಲಿಬಾರಿಗೆ ಬಲಿಯಾದವರ ಸಂಖ್ಯೆ 31ಕ್ಕೆ ಏರಿತು.
2008: ಕರ್ನಾಟಕದ ವಿವಿಧೆಡೆ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದ 15ಕ್ಕೂ ಹೆಚ್ಚು ಮಂದಿ ಪ್ರಭಾವಿ ರಾಜಕೀಯ ವ್ಯಕ್ತಿಗಳಿಗೆ ಲೋಕಾಯುಕ್ತ, ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ನೋಟಿಸ್ ಜಾರಿ ಮಾಡಿದರು. ಪರವಾನಗಿ ಇಲ್ಲದೇ ಸರ್ಕಾರಿ ಭೂಮಿಯಲ್ಲಿ ಗಣಿಗಾರಿಕೆ ನಡೆಸುತ್ತಿರುವುದು, ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿರುವುದು, ಪರಿಸರಕ್ಕೆ ಹಾನಿ ಮಾಡಿರುವುದು ಮತ್ತಿತರ ಪ್ರಶ್ನೆಗಳಿಗೆ ಉತ್ತರ ನೀಡುವಂತೆ ನೋಟಿಸಿನಲ್ಲಿ ಸೂಚಿಸಲಾಯಿತು.
2008: ಲೋಕಪಾಲ ಮಸೂದೆ ವ್ಯಾಪ್ತಿಯಡಿ ಪ್ರಧಾನಿ ಹುದ್ದೆಯನ್ನು ತರುವಂತೆ, ಪ್ರಧಾನಿ ಮನ ಮೋಹನ ಸಿಂಗ್ ಅವರೇ ಸೂಚಿಸಿದ್ದರೂ, ಕೇಂದ್ರ ಸಚಿವ ಸಂಪುಟ ಅದನ್ನು ತಿರಸ್ಕರಿಸಿತು.
2008: ಬಣ್ಣ ಅದರಲ್ಲೂ ಗ್ಲೈಕೋಲ್ ಇಥರ್ಸ್ ನಂತಹ ರಾಸಾಯನಿಕಗಳನ್ನು ಒಳಗೊಂಡ ಬಣ್ಣದ ಕೆಲಸಗಳನ್ನು ಮಾಡುವ ಕಾರ್ಮಿಕರ ವೀರ್ಯದಲ್ಲಿ ದೋಷ ಕಂಡುಬರುತ್ತದೆ ಎಂದು ಹೊಸ ಸಂಶೋಧನೆಯಿಂದ ಬೆಳಕಿಗೆ ಬಂದಿತು. ಗ್ಲೈಕೋಲ್ ಇಥರ್ಸ್ ನಂತಹ ರಾಸಾಯನಿಕ ಬಳಸಿ ಬಣ್ಣ ತಯಾರಿಸುವುದು ಈಗ ಕಡಿಮೆಯಾಗಿದೆ. ಆದರೂ ಕೆಲವು ಸಂದರ್ಭದಲ್ಲಿ ಅವುಗಳ ಬಳಕೆ ಆಗುತ್ತಿರುವುದರಿಂದ ಪುರುಷ ಕಾರ್ಮಿಕರಿಗೆ ಅಪಾಯ ಉಂಟಾಗುತ್ತದೆ ಎಂದು ಲಂಡನ್ನಿನ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದ ಸಂಶೋಧಕರು ತಿಳಿಸಿದರು.
2008: ಬೆಂಗಳೂರಿನ ವಿಜಯನಗರದ ಸಮಾಜ ಸಂಪರ್ಕ ವೇದಿಕೆಯ ವತಿಯಿಂದ ನೀಡಲಾಗುವ ಪ್ರಸಕ್ತ ಸಾಲಿನ `ರಾಷ್ಟ್ರಕವಿ ಕುವೆಂಪು ಶತಮಾನೋತ್ಸವ ಪ್ರಶಸ್ತಿ'ಗೆ ಕುವೆಂಪು ಅವರ ಪುತ್ರಿ ತಾರಿಣಿ ಚಿದಾನಂದಗೌಡ ಅವರನ್ನು ಆಯ್ಕೆ ಮಾಡಲಾಯಿತು. ಸಂಗೀತ, ಸಾಹಿತ್ಯ ಮತ್ತು ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ ತಾರಿಣಿ ಅವರು ಈವರೆಗೆ ಮಾಡಿರುವ ಸಾಧನೆಯನ್ನು ಗಮನಿಸಿ ಅವರಿಗೆ ಈ ಪ್ರಶಸ್ತಿ ನೀಡಲು ನಿರ್ಧರಿಸಲಾಯಿತು.
2008: ಶಿರಸಿಯ ಎ.ಪಿ.ಎಂ.ಸಿ ಮಾರುಕಟ್ಟೆ ಪ್ರಾಂಗಣದ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ನಿಯಮಿತ ಆವರಣದಲ್ಲಿ ನಡೆದ ಎರಡು ದಿನಗಳ ರಾಜ್ಯ ಮಟ್ಟದ ಹಲಸು ಮೇಳ ಸಮಾರೋಪಗೊಂಡಿತು. `ಹಲಸಿನ ಹಣ್ಣು ಕೂಡ ಒಂದು ಹಾರ್ಟ್ ಟಾನಿಕ್. ದೇಹದ ಪುಷ್ಟಿಗೆ, ಪುರುಷತ್ವದ ವೃದ್ಧಿಗೆ, ಬಂಜೆತನ ನಿವಾರಣೆಗೆ ಹಲಸು ಉಪಯುಕ್ತವಾಗಿದೆ ಎಂಬ ಸಂಗತಿಯನ್ನು ಆಯುರ್ವೇದದಲ್ಲಿ ಹೇಳಲಾಗಿದೆ. ಹಲಸನ್ನು ಸರಿಯಾದ ರೀತಿಯಲ್ಲಿ ಬಳಸಿದಲ್ಲಿ ಅದು ಆರೋಗ್ಯದಾಯಕ ಫಲವಾಗುವುದು' ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿಯ ಡಾ. ಸತ್ಯನಾರಾಯಣ ಭಟ್ಟ ಹೇಳಿದರು. ದ್ರಾಕ್ಷಿ, ಕವಳಿ, ನೆಲ್ಲಿ, ದಾಳಿಂಬೆ, ಮುರುಗಲು ಹೇಗೆ ಆಯುರ್ವೇದದಲ್ಲಿ ಹಾರ್ಟ್ ಟಾನಿಕ್ ಸ್ಥಾನವನ್ನು ಪಡೆದುಕೊಂಡಿವೆಯೋ ಹಾಗೆಯೇ ಹಲಸು ಕೂಡ ಆರೋಗ್ಯ ವೃದ್ಧಿಯಲ್ಲಿ ಜಾಗ ಪಡೆದುಕೊಂಡಿದೆ. ಆದರೆ ಅಗ್ನಿಮಾಂದ್ಯ, ಪಿತ್ತ, ಗುಲ್ಮಾ, ಜೀರ್ಣ ಶಕ್ತಿ ಕಡಿಮೆ ಇರುವವರು ಹಲಸಿನ ಹಣ್ಣನ್ನು ಉಪಯೋಗಿಸಬಾರದು. ಹಲಸು ದೇಹಕ್ಕೆ ಕ್ಯಾನ್ಸರ್ ರೋಗ ನಿರೋಧಕ ಶಕ್ತಿಯನ್ನು ನೀಡಬಲ್ಲುದು. ಕಲಶಕ್ಕೆ ಹಲಸಿನ ಎಲೆ ಇಟ್ಟು ಅದರಲ್ಲಿರುವ ನೀರನ್ನು ತೀರ್ಥವಾಗಿ ಸ್ವೀಕರಿಸುವುದು ಕೂಡ ಆರೋಗ್ಯದ ದೃಷ್ಟಿಯನ್ನು ಹೊತ್ತಿದೆ. ಹಲಸಿನ ಎಲೆಯಿಂದ ಬರುವ ಹಾಲು ನೀರಿನೊಂದಿಗೆ ಬೆರೆತು ಅದು ಆರೋಗ್ಯಕ್ಕೆ ದಾರಿಯಾಗಲಿದೆ ಎಂಬುದು ವೈಜ್ಞಾನಿಕವಾಗಿ ದೃಢಪಟ್ಟಿದೆ ಎಂದು ಅವರು ವಿವರಿಸಿದರು.
2007: ಭಾಷಾ ಮಾಧ್ಯಮದ ಉಲ್ಲಂಘನೆಯ ಆರೋಪದಿಂದ ಮಾನ್ಯತೆ ಕಳೆದುಕೊಂಡಿರುವ 2215 ಖಾಸಗಿ ಪ್ರಾಥಮಿಕ ಶಾಲೆಗಳು ಇನ್ನು ಮುಂದೆ ಕನ್ನಡ ಮಾಧ್ಯಮದಲ್ಲೇ ಬೋಧಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ಆಜ್ಞಾಪಿಸಿತು. ನ್ಯಾಯಮೂರ್ತಿ ಎ.ಸಿ. ಕಬ್ಬಿಣ ಅವರು ಈ ಆದೇಶ ನೀಡಿದರು.
2007: ಒಂದು ನಿಮಿಷದಲ್ಲಿ ಮೇಕಪ್, ಹೇರ್ ಸ್ಟೈಲ್ ಇತ್ಯಾದಿ ಮಾಡಿ ಈಗಾಗಲೇ ಲಿಮ್ಕಾ ದಾಖಲೆ ಮಾಡಿರುವ `ಒನ್ ಮಿನಿಟ್ ಉಮಾ' ಎಂದೇ ಖ್ಯಾತಿ ಪಡೆದಿರುವ ಸೌಂದರ್ಯ ತಜ್ಞೆ ಉಮಾ ಜಯಕುಮಾರ್ ಅವರು ಈದಿನ ಬೆಂಗಳೂರು ಮಹಾಲಕ್ಷ್ಮಿಪುರಂ ಕ್ಲಬ್ಬಿನಲ್ಲಿ ಮಂಜುಗಡ್ಡೆಯ ಮೇಲೆ ನಿಂತು ಒಂದು ನಿಮಿಷದಲ್ಲಿ ಕೇಶ ವಿನ್ಯಾಸ, ಮೇಕಪ್, ಮದುಮಗಳ ಸಿಂಗಾರ ಇತ್ಯಾದಿ ಹತ್ತಕ್ಕೂ ಹೆಚ್ಚು ಕಾರ್ಯಗಳನ್ನು ಮಾಡಿ ತಮ್ಮ ದಾಖಲೆಯನ್ನು ತಾವೇ ಮುರಿದರು.
2007: ಈ ಹಿಂದೆ ಒಂದು ಕೈಯಲ್ಲಿ 21 ಮೊಟ್ಟೆಗಳನ್ನು ಹಿಡಿದು ದಾಖಲೆ ಮಾಡಿದ್ದ ಮೈಸೂರಿನ ಎಂ.ಎಲ್. ಶಿವಕುಮಾರ್ (44) ಅವರು ತಮ್ಮ ಬಲಗೈಯಲ್ಲಿ 120 ಸೆಕೆಂಡುಗಳಲ್ಲಿ 23 ಕೋಳಿ ಮೊಟ್ಟೆಗಳನ್ನು ಇಟ್ಟುಕೊಳ್ಳುವ ಮೂಲಕ ತಮ್ಮ ಹಿಂದಿನ ದಾಖಲೆ ಮುರಿದರು.
2007: ಜಾಗತಿಕ, ಆರ್ಥಿಕ ಮತ್ತು ರಾಜಕೀಯ ರಂಗದಲ್ಲಿ ಭಾರತ ನಿರ್ವಹಿಸುತ್ತಿರುವ ಪ್ರಮುಖ ಪಾತ್ರವನ್ನು ಗುರುತಿಸಿ ಇಲ್ಲಿಯ ನ್ಯೂ ಮೆಕ್ಸಿಕೊ ಟೆಕ್ ವಿಶ್ವ ವಿದ್ಯಾಲಯವು ಭಾರತದ ತಜ್ಞರ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ಚಿಂತಕರ ಚಾವಡಿಯೊಂದನ್ನು ಆರಂಭಿಸಿತು.
2007: ಶ್ರೀಲಂಕೆಯಲ್ಲಿ ಎಲ್ ಟಿ ಟಿ ಇ ಬಂಡುಕೋರರು ಉತ್ತರ ಜಾಫ್ನಾ ದ್ವೀಪದ ಬಳಿಕ ಸಣ್ಣ ದ್ವೀಪವೊಂದರ ಆಯಕಟ್ಟಿನ ನೌಕಾ ನೆಲೆ ಮೇಲೆ ದಾಳಿ ನಡೆಸಿದ್ದಲ್ಲದೆ ಕೊಲಂಬೋ ಸಮೀಪ ಸೇನಾ ಬಸ್ಸನ್ನು ಸ್ಫೋಟಿಸಿದ ಪರಿಣಾಮವಾಗಿ 35 ಮಂದಿ ಹತರಾದರು.
2006: ಭಾರತೀಯ ಗಡಿ ರಕ್ಷಣಾ ಪಡೆಯ ಹಿರಿಯ ಅಧಿಕಾರಿ ಎಸ್.ಸಿ. ನೇಗಿ (56) ಅವರು ಪ್ರಪಂಚದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಏರಿದ ಅತ್ಯಂತ ಹಿರಿಯ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
2006: ರಾಜ್ಯಸಭೆಯ ಮಾಜಿ ಸದಸ್ಯೆ ಜಯಾ ಬಚ್ಚನ್ ಅವರು ಉತ್ತರ ಪ್ರದೇಶ ಚಲನಚಿತ್ರ ಮಂಡಳಿಯ (ಯು ಪಿ ಎಫ್ ಡಿ ಸಿ) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ, ರಾಜ್ಯಸಭಾ ಉಪಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಲು ಮಾರ್ಗ ಸುಗಮಗೊಳಿಸಿಕೊಂಡರು.
1968: ಕಲಾವಿದೆ ಶುಭ ಧನಂಜಯ ಜನನ.
1946: ಕಲಾವಿದೆ ಮರಿಗೆಮ್ಮ ಎಂ. ಜನನ.
1941: ಜರ್ಮನ್ ಸಮರನೌಕೆ ಬಿಸ್ಮಾರ್ಕ್ ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಗ್ರೀನ್ ಲ್ಯಾಂಡ್ ಕರಾವಳಿ ಸಮೀಪ ಬ್ರಿಟಿಷರ ಎಚ್ ಎಂಎಸ್ `ಹುಡ್' ನೌಕೆಯನ್ನು ಮುಳುಗಿಸಿತು. ನೌಕೆಯಲ್ಲಿದ್ದ 1421 ಮಂದಿಯ ಪೈಕಿ ಕೇವಲ 3 ಮಂದಿಯನ್ನು ರಕ್ಷಿಸಲು ಸಾಧ್ಯವಾಯಿತು.
1927: ಹಿರಿಯ ಮೃದಂಗ ವಿದ್ವಾಂಸರಲ್ಲೊಬ್ಬರಾದ ಎಂ.ಎಸ್. ರಾಮಯ್ಯ ಅವರು ತಬಲ ವಿದ್ವಾಂಸ ಸುಬ್ಬಣ್ಣ ಪುತ್ರನಾಗಿ ಮೈಸೂರಿನಲ್ಲಿ ಜನಿಸಿದರು.
1922: ಕಲಾವಿದ ರಾಮನರಸಯ್ಯ ಜನನ.
1905: ಕಲಾವಿದ ಹರ್ತಿಕೋಟೆ ಸುಬ್ಬಣ್ಣ ಜನನ.
1875: ಸರ್ ಸೈಯದ್ ಅಹಮದ್ ಖಾನ್ ಮತ್ತು ಅವರ ಮಗ ಸೈಯದ್ ಮಹಮೂದ್ ಆಲಿಘಡದಲ್ಲಿ ಮಹಮ್ಮಡನ್ ಆಂಗ್ಲೋ - ಓರಿಯಂಟಲ್ ಸ್ಕೂಲ್ ಸ್ಥಾಪಿಸಿದರು. 1920ರಲ್ಲಿ ಅದು ಅಲಿಘಡ ಮುಸ್ಲಿಂ ವಿಶ್ವ ವಿದ್ಯಾಲಯವಾಯಿತು.
1844: ಸ್ಯಾಮ್ಯುಯೆಲ್ ಮೋರ್ಸ್, ಬಾಲ್ಟಿಮೋರಿನಿಂದ ವಾಷಿಂಗ್ಟನ್ನಿಗೆ ಟೆಲಿಗ್ರಾಫ್ ಸಂದೇಶವನ್ನು ಕಳುಹಿಸುವ ಮೂಲಕ ಅಮೆರಿಕದ ಮೊತ್ತ ಮೊದಲ ಟೆಲಿಗ್ರಾಫ್ ಲೈನ್ ಉದ್ಘಾಟಿಸಿದ.
1819: ರಾಣಿ ವಿಕ್ಟೋರಿಯಾ ಜನ್ಮದಿನ. ವಿಕ್ಟೋರಿಯಾ (1819-1901) ಇಂಗ್ಲೆಂಡಿನ ಅತ್ಯಂತ ದೀರ್ಘ ಅವಧಿಯ ರಾಣಿ ಎಂಬ ಖ್ಯಾತಿ ಪಡೆದ ವ್ಯಕ್ತಿ.
1686: ಡೇನಿಯಲ್ ಗ್ಯಾಬ್ರಿಯಲ್ ಫ್ಯಾರನ್ ಹೀಟ್ (1686-1736) ಜನ್ಮದಿನ. ಜರ್ಮನಿಯ ವೈದ್ಯನಾದ ಈತ ಆಲ್ಕೋಹಾಲ್ ಥರ್ಮಾಮೀಟರ್, ಮರ್ಕ್ಯುರಿ ಥರ್ಮಾಮೀಟರ್ ಮುಂತಾದ ಉಷ್ಣಮಾಪಕಗಳನ್ನು ಸಂಶೋಧಿಸಿದ. ಈತ ಸಂಶೋಧಿಸಿದ ಉಷ್ಣಮಾಪಕಕ್ಕೆ ಈತನ ಹೆಸರನ್ನೇ ಇಟ್ಟು ಗೌರವಿಸಲಾಯಿತು.
No comments:
Post a Comment