2020: ನವದೆಹಲಿ:
ಕೊರೋನಾವೈರಸ್ ದಿಗ್ಬಂಧನ (ಲಾಕ್ ಡೌನ್) ಪರಿಣಾಮವಾಗಿ ಸಂಕಟದಲ್ಲಿ ಸಿಲುಕಿದ ದೇಶದ ಆರ್ಥಿಕತೆಯನು ಸುಧಾರಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ ೨೦ ಲಕ್ಷ ಕೋಟಿ ರೂಪಾಯಿ ಮೊತ್ತದ ವಿಶೇಷ ಕೊಡುಗೆಯ ೪ನೇ ಕಂತಿನ ಉಪಕ್ರಮಗಳನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2020 ಮೇ
16ರ ಶನಿವಾರ ಪ್ರಕಟಿಸಿದರು. ಕಲ್ಲಿದ್ದಲು, ಖನಿಜ, ರಕ್ಷಣಾ ಉತ್ಪನ್ನಗಳ ತಯಾರಿಕೆ, ವಿಮಾನ ನಿಲ್ದಾಣಗಳು ಮತ್ತು ವಾಯುವಲಯ ನಿರ್ವಹಣೆ, ವಾಣಿಜ್ಯ ವೈಮಾನಿಕ ಉದ್ಯಮದ ನಿರ್ವಹಣೆ, ದುರಸ್ತಿ ಮತ್ತು ಕೂಲಂಕಷ ಪರೀಕ್ಷೆ (ಎಂಆರ್ ಒ), ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿದ್ಯುತ್ ವಿತರಣೆ, ಬಾಹ್ಯಾಕಾಶ ವಲಯ ಹಾಗೂ ಪರಮಾಣು ಇಂಧನ ಸೇರಿಂತೆ ಎಂಟು ವಲಯಗಳಿಗೆ ನಾಲ್ಕನೇ ಹಂತದ ಕೊಡುಗೆಯಲ್ಲಿ ಉಪಶಮನ ಕ್ರಮಗಳನ್ನು ಪ್ರಕಟಿಸಲಾಯಿತು. ವಿಶೇಷ ಆರ್ಥಿಕ ವಲಯ (ಎಸ್ಇಝಡ್),
ಕೈಗಾರಿಕಾ ಪಾರ್ಕ್ಗಳು
ಒಟ್ಟು ೫ ಲಕ್ಷ ಹೆಕ್ಟೇರುಗಳಲ್ಲಿ ವ್ಯಾಪಿಸಿದ್ದು, ಅವುಗಳನ್ನು ಗುರುತಿಸಲು ಸಾಧ್ಯವಾಗುವ ವ್ಯವಸ್ಥೆ ರೂಪಿಸುವ ಮೂಲಕ ಹೂಡಿಕೆದಾರರಿಗೆ ಸಮಸ್ಯೆ ಎದುರಾಗುವುದನ್ನು ತಪ್ಪಿಸಲಾಗುವುದು ಎಂದು ಸಚಿವರು ನುಡಿದರು. ನಾಲ್ಕನೇ ಹಂತರ ಸುಧಾರಣೆಗಳು ರಚನಾತ್ಮಕ ಸುಧಾರಣೆಗಳತ್ತ ಗಮನ ಹರಿಸಿದೆ ಎಂದು ನುಡಿದ ವಿತ್ತ ಸಚಿವೆ ಸ್ವಾವಲಂಬಿ ಭಾರತವನ್ನು ನಿರ್ಮಿಸುವಲ್ಲಿ ನಾವು ಕಠಿಣ ಸ್ಪರ್ಧೆಗಳಿಗೆ ನಮ್ಮನ್ನು ಒಡ್ಡಿಕೊಳ್ಳಬೇಕಾಗುತ್ತದೆ ಮತ್ತು ಜಾಗತಿಕ ಮೌಲ್ಯ ಸರಪಣಿಯ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂಬುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ ಎಂದು ನುಡಿದರು. ತ್ವರಿತಗತಿಯ ಹೂಡಿಕೆಗಳನ್ನು ಕಳೆದ ಎರಡು ತಿಂಗಳುಗಳಲ್ಲಿ ಪ್ರಾರಂಭಿಸಲಾದ ನೀತಿ ಸುಧಾರಣೆಗಳನ್ನು ಪಟ್ಟಿ ಮಾಡಿದ ವಿತ್ತ ಸಚಿವೆ, ತ್ವರಿತ ಹೂಡಿಕೆಗೆ ನೀತಿ ಸುಧಾರಣೆಗಳು. ಸಶಕ್ತ ಗುಂಪು ಕಾರ್ಯದರ್ಶಿಗಳ ಮೂಲಕ ತ್ವರಿತ ಹೂಡಿಕೆಗಳಿಗೆ ಅನುವು ಮಾಡಿಕೊಡಲಾಗುತ್ತಿದೆ. ಹೂಡಿಕೆ ಮಾಡಬಹುದಾದ ಯೋಜನೆಗಳನ್ನು ತಯಾರಿಸಲು, ಹೂಡಿಕೆದಾರರು ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೊಂದಿಗೆ ಸಮನ್ವಯಗೊಳಿಸಲು ಪ್ರತಿ ಸಚಿವಾಲಯದಲ್ಲಿ ಯೋಜನಾ ಅಭಿವೃದ್ಧಿ ಕೋಶಗಳನ್ನು ರಚಿಸಲಾಗುತ್ತಿದೆ ಎಂದು ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ:
ಕೊರೋನಾವೈರಸ್ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಭಾರತೀಯರಿಗೆ ನೆರವಾಗಲು ಭಾರತಕ್ಕೆ ಅಂದಾಜು ತಲಾ ೧೦ ಲಕ್ಷ ರೂಪಾಯಿ (ಒಂದು ಮಿಲಿಯನ್) ಮೌಲ್ಯದ ೨೦೦ ಸಂಚಾರಿ ವೆಂಟಿಲೇಟರುಗಳನ್ನು (ಮೊಬೈಲ್ ವೆಂಟಿಲೇಟರ್) ವಿಮಾನ ಮೂಲಕ ಕಳುಹಿಸುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 2020 ಮೇ
16ರ ಶನಿವಾರ ಪ್ರಕಟಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಇದಕ್ಕಾಗಿ ಧನ್ಯವಾದ ಸಲ್ಲಿಸಿದ್ದಾರೆ. ಕೊರೋನಾವೈರಸ್ ವಿರುದ್ಧದ ಹೋರಾಟಕ್ಕಾಗಿ ನೂರಾರು ವೆಂಟಿಲೇಟರುಗಳನ್ನು ಭಾರತಕ್ಕೆ ಕಳುಹಿಸುವುದಾಗಿ ಅಮೆರಿಕದ ಅಧ್ಯಕ್ಷ ಟ್ರಂಪ್ ಟ್ವಟ್ಟರಿನಲ್ಲಿ ಪ್ರಕಟಿಸಿದ್ದಕ್ಕೆ ಮೋದಿಯವರು ಟ್ವೀಟ್ ಮೂಲಕವೇ ಧನ್ಯವಾದ ಸಲ್ಲಿಸಿದರು. ‘ಡೊನಾಲ್ಡ್ ಟ್ರಂಪ್ ಅವರೇ ಧನ್ಯವಾದಗಳು. ಈ ಸಾಂಕ್ರಾಮಿಕದ ವಿರುದ್ಧ ನಾವೆಲ್ಲರೂ ಸಾಮೂಹಿಕವಾಗಿ ಹೋರಾಡುತ್ತಿದ್ದೇವೆ. ಇಂತಹ ಸಮಯದಲ್ಲಿ ರಾಷ್ಟ್ರಗಳು ಸಾಧ್ಯವಾದಷ್ಟೂ ಒಟ್ಟಾಗಿ ಕೆಲಸ ಮಾಡುವುದು ಮತ್ತು ನಮ್ಮ ವಿಶ್ವವನ್ನು ಆರೋಗ್ಯಶಾಲಿಯನ್ನಾಗಿ ಮಾಡುವುದು ಹಾಗೂ ಕೋವಿಡ್-೧೯ರಿಂದ ಮುಕ್ತಗೊಳಿಸುವುದು ಅತ್ಯಂತ ಮುಖ್ಯವಾಗಿದೆ’
ಎಂದು ಪ್ರಧಾನಿ ಟ್ವೀಟ್ ಮಾಡಿದರು. ‘ಭಾರತ-ಅಮೆರಿಕ ಮೈತ್ರಿಗೆ ಇನ್ನಷ್ಟು ಬಲ’
ಎಂಬುದಾಗಿ ಮೋದಿ ಬಣ್ಣಿಸಿದರು. ಭಾರತಕ್ಕೆ ವೆಂಟಿಲೇಟರುಗಳನ್ನು ಕಳುಹಿಸುವ ನಿರ್ಧಾರವನ್ನು ಟ್ರಂಪ್ ಅವರು ಟ್ವಿಟ್ಟರ್ ಮೂಲಕ ಪ್ರಕಟಿಸಿ, ಉಭಯ ರಾಷ್ಟ್ರಗಳ ನಡುವಣ ನಿಕಟ ಬಾಂಧವ್ಯವನ್ನು ಸಾರಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಲಕ್ನೋ:
ಎರಡು ಟ್ರಕ್ಕು ಡಿಕ್ಕಿ ಹೊಡೆದ ಪರಿಣಾಮವಾಗಿ ೨೪ ಮಂದಿ ವಲಸೆ ಕಾರ್ಮಿಕರು ಮೃತರಾಗಿ ಹಲವರು ಗಾಯಗೊಂಡ ಘಟನೆ ಉತ್ತರ ಪ್ರದೇಶದಲ್ಲಿ 2020 ಮೇ
16ರ ಶನಿವಾರ ನಸುಕಿನಲ್ಲಿ ಘಟಿಸಿತು. ಉತ್ತರ ಪ್ರದೇಶ ರಾಜಧಾನಿ ಲಕ್ನೋದಿಂದ ೨೦೦ ಕಿ.ಮೀ ದೂರದಲ್ಲಿ, ನಸುಕಿನ ೩ ಗಂಟೆಗೆ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ವಲಸೆ ಕಾರ್ಮಿಕರು ರಾಜಸ್ಥಾನದಿಂದ ಟ್ರಕ್ಕಿನಲ್ಲಿ ಬಿಹಾರ ಮತ್ತು ಜಾರ್ಖಂಡಿಗೆ ಹೊರಟಿದ್ದರು. ಕೊರೊನಾ ವೈರಸ್ ಸೋಂಕು ಹಿನ್ನೆಲೆಯಲ್ಲಿ ದೇಶದಾದ್ಯಂತ ದಿಗ್ಬಂಧನ (ಲಾಕ್ ಡೌನ್) ಜಾರಿಯಾದ ಬಳಿಕ ಈ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರು ತಮ್ಮ ಹುಟ್ಟೂರಿಗೆ ವಾಪಸ್ ಹೊರಟಿದ್ದರು. ಅಪಘಾತದಲ್ಲಿ ೨೪ ಜನರು ಮೃತರಾಗಿದ್ದಾರೆ. ೨೨ ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ೧೫ ಜನರನ್ನು ಉತ್ತರ ಪ್ರದೇಶದ ಗ್ರಾಮೀಣ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ಒಯ್ಯಲಾಗಿದೆ. ವಲಸೆ ಕಾರ್ಮಿಕರು ರಾಜಸ್ಥಾನದಿಂದ ಬಿಹಾರ ಮತ್ತು ಜಾರ್ಖಂಡಿಗೆ ತೆರಳುತ್ತಿದ್ದರು’
ಎಂದು ಮುಖ್ಯ ವೈದ್ಯಾಧಿಕಾರಿ ಅರ್ಚನಾ ಶ್ರೀವಾಸ್ತವ ತಿಳಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ:
ಒಂದು ಸಾವಿರಕ್ಕೂ ಹೆಚ್ಚು ’ಶ್ರಮಿಕ ವಿಶೇಷ’
ರೈಲುಗಳನ್ನು ಮೇ ೧೫ರ ನಡುರಾತ್ರಿಯವರೆಗೆ ಓಡಿಸುವ ಮೂಲಕ ಭಾರತೀಯ ರೈಲ್ವೇ ಸಚಿವಾಲಯವು ದೇಶದ ವಿವಿಧ ಕಡೆಗಳಲ್ಲಿ ಸಿಕ್ಕಿಹಾಕಿಕೊಂಡಿದ್ದ ಸುಮಾರು ೧೪ ಲಕ್ಷಕ್ಕೂ ಹೆಚ್ಚು ವಲಸೆ ಕಾರ್ಮಿಕರನ್ನು ಅವರವರ ಹುಟ್ಟೂರುಗಳಿಗೆ ಮುಟ್ಟಿಸಿದೆ ಎಂದು ಸಚಿವಾಲಯದ ಹೇಳಿಕೆ ಅವರು 2020 ಮೇ
16ರ ಶನಿವಾರ ತಿಳಿಸಿತು. ಮೇ
೧೫ರ ಮಧ್ಯರಾತ್ರಿಯವರೆಗೆ ೧೦೭೪ ಶ್ರಮಿಕ ವಿಶೇಷ ರೈಲುಗಳನ್ನು ಓಡಿಸಲಾಗಿದೆ ಎಂದು ಸಚಿವಾಲಯ ಹೇಳಿತು. ಕಳೆದ
ಮೂರು ದಿನಗಳ ಅವಧಿಯಲ್ಲಿ ಪ್ರತಿದಿನ ೨ ಲಕ್ಷಕ್ಕೂ ಹೆಚ್ಚು ವ್ಯಕ್ತಿಗಳನ್ನು ಒಯ್ಯಲಾಗಿದೆ ಎಂದು ಹೇಳಿಕೆ ತಿಳಿಸಿತು.. ಕೊರೋನಾವೈರಸ್ ದಿಗ್ಬಂಧನ (ಲಾಕ್ ಡೌನ್) ಹಿನ್ನೆಲೆಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಸಿಕ್ಕಿಹಾಕಿಕೊಂಡಿದ್ದ ವಲಸೆ ಕಾರ್ಮಿಕರನ್ನು ಅವರವರ ಹುಟ್ಟೂರುಗಳಿಗೆ ಒಯ್ಯುವ ಸಲುವಾಗಿ ಸರ್ಕಾರವು ’ಶ್ರಮಿಕ’ ರೈಲುಗಳನ್ನು
ಓಡಿಸುವ ಕಾರ್ಯವನ್ನು
ಈ ತಿಂಗಳ ಆರಂಭದಲ್ಲಿ ಶುರು ಮಾಡಿತ್ತು. ಮೇ ೧೨ರಿಂದ ೧೫ ಅಂತರರಾಜ್ಯ ಪ್ಯಾಸೆಂಜರ್ ರೈಲು ಸೇವೆಯನ್ನೂ ಸಚಿವಾಲಯ ಆರಂಭಿಸಿತ್ತು. ರಾಷ್ಟ್ರದ ರಾಜಧಾನಿಯಿಂದ ಹೊರಡುವ ಈ ರೈಲುಗಳು ದೇಶಾದ್ಯಂತ ವಿವಿಧ ನಗರಗಳನ್ನು ಸಂಪರ್ಕಿಸಿದ್ದವು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ:
ನಾಲ್ಕನೇ ಹಂತದ ಕೊರೋನಾ ದಿಗ್ಬಂಧನಕ್ಕೆ ಕಾಲಿಡುವುದಕ್ಕೆ ಕೇವಲ ಎರಡು ದಿನಗಳು ಇರುವಾಗ ಕೊರೋನಾವೈರಸ್ ಸೋಂಕು ಪ್ರಕರಣಗಳು ೮೫,೯೪೦ಕ್ಕೇ ಏರುವ ಮೂಲಕ ಅವರು 2020 ಮೇ
16ರ ಶನಿವಾರ ಭಾರತವು ಚೀನಾವನ್ನು ಮೀರಿಸಿದೆ. ಚೀನಾದಲ್ಲಿ ಈವರೆಗೆ ಕೊರೋನಾವೈರಸ್ ದೃಢಪಟ್ಟ ಪ್ರಕರಣಗಳ ಸಂಖ್ಯೆ ೮೨,೯೩೩ ಮಾತ್ರ. ಭಾರತದ ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ, ಭಾರತದಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ೩,೯೭೦ ಹೊಸ ಪ್ರಕರಣಗಳು ಪತ್ತೆಯಾಗಿದ್ದು ಒಟ್ಟು ಪ್ರಕರಣಗಳ ಸಂಖ್ಯೆ ೮೫,೯೪೦ಕ್ಕೆ ಏರಿತು. ಒಟ್ಟು
ಪ್ರಕರಣಗಳ ಪೈಕಿ ೩೦,೧೫೨ ಮಂದಿ ಗುಣಮುಖರಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ ೫೩,೦೩೫ ಎಂದು ಸಚಿವಾಲಯ ತಿಳಿಸಿತು.
ಈ ಮಧ್ಯೆ, ಸೋಂಕಿಗೆ ಬಲಿಯಾದವರ ಸಂಖ್ಯೆ ೨,೭೫೨ಕ್ಕೆ ಏರಿದೆ. ಕಳೆದ ೨೪ ಗಂಟೆಗಳ ಅವಧಿಯಲ್ಲಿ ೧೦೦ ಮಂದಿ ಸೋಂಕಿಗೆ ಬಲಿಯಾದರು.
(ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ತಿರುವನಂತಪುರ/ ನವದೆಹಲಿ: ಹಸಿರುವಲಯವಾಗಿದ್ದ ಕೇರಳದ ವೇನಾಡ್ನಲ್ಲಿ
ಈಗ ೧೯ ಸಕ್ರಿಯ ಕೊರೋನಾವೈರಸ್ ಪ್ರಕರಣಗಳು ವರದಿಯಾಗಿವೆ. ಇದು ರಾಜ್ಯದಲ್ಲೇ ಅತ್ಯಂತ ಗರಿಷ್ಠ ಪ್ರಮಾಣದ ಕೋವಿಡ್ -೧೯ ಪ್ರಕರಣವಾಗಿದ್ದು, ತಮಿಳುನಾಡಿನ ಚೆನ್ನೈಯ ಕೊಯಂಬೇಡು ಮಾರುಕಟ್ಟೆಯಿಂದ ಹಿಂತಿರುಗಿದ ಟ್ರಕ್ ಚಾಲಕನ ಪ್ರಾಥಮಿಕ ಮತ್ತು ಎರಡನೇ ಸಂಪರ್ಕದಿಂದ ೧೫ ಮಂದಿಗೆ ಸೋಂಕು ಹರಡಿದೆ. ಮೇ ೨ರಂದು ಚಾಲಕನಿಗೆ ಕೋವಿಡ್ ಪಾಸಿಟಿವ್ ಪತ್ತೆಯಾಗಿತ್ತು. ಇದರೊಂದಿಗೆ ವೇನಾಡ್ ತನ್ನ ’ಹಸಿರುವಲಯ’ ಸ್ಥಾನಮಾನವನ್ನು
ಕಳೆದುಕೊಂಡಿತ್ತು. ಚಾಲಕ, ಆತನ ಪತ್ನಿ, ತಾಯಿ, ಪುತ್ರಿ, ಅಳಿಯ, ಪುತ್ರ ಮತ್ತು ಮೊಮ್ಮಕ್ಕಳಿಗೂ ಸೋಂಕು ಹರಡಿತ್ತು. ‘ಚಾಲಕ ಕೊಯಂಬೇಡು ಮಾರುಕಟ್ಟೆಯಿಂದ ಏಪ್ರಿಲ್ ೨೬ರ ಸಂಜೆ ವಾಪಸಾಗಿದ್ದ. ಹೋಂ ಕ್ವಾರಂಟೈನಿನಲ್ಲಿ ಇರುವಂತೆ ಆತನಿಗೆ ಸೂಚಿಸಲಾಗಿತ್ತು. ಆತನ ಗಂಟಲ ದ್ರವ ಮಾದರಿಯನ್ನು ಏಪ್ರಿಲ್ ೨೮ರಂದು ಸಂಗ್ರಹಿಸಲಾಗಿತ್ತು. ಮೇ ೨ರಂದು ಆತನಿಗೆ ಕೋವಿಡ್ ಪಾಸಿಟಿವ್ ವರದಿ ಬಂತು. ನಾವು ಆತನ ಜೊತೆಗೆ ಸಂಪರ್ಕಕ್ಕೆ ಬಂದವರೆಲ್ಲರ ಪತ್ತೆ ಮಾಡಿದೆವು ಮತ್ತು ಎಲ್ಲರನ್ನೂ ನಿಗಾದಲ್ಲಿ ಇಡಲಾಯಿತು. ಆತನ ಮನೆಯಲ್ಲಿ ಆತನ ಮಗನ ಮದುವೆ ನಿಶ್ಚಿತಾರ್ಥದ ಸಮಾರಂಭವಿತ್ತು. ಹೀಗಾಗಿ ಅಷ್ಟೊಂದು ಮಂದಿ ಆತನ ಸಂಪರ್ಕಕ್ಕೆ ಬಂದಿದ್ದರು ಎಂದು ವೇನಾಡ್ ಜಿಲ್ಲಾ ವೈದ್ಯಾಧಿಕಾರಿ ಆರ್. ರೇಣುಕಾ ನುಡಿದರು. (ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment