ನಾನು ಮೆಚ್ಚಿದ ವಾಟ್ಸಪ್

Friday, May 8, 2020

ಇಂದಿನ ಇತಿಹಾಸ History Today ಮೇ 08

2020:  ಮುಂಬೈ: ಮಹಾರಾಷ್ಟ್ರದ  ಔರಂಗಾಬಾದ್ ನಗರದ ರೈಲು ಹಳಿಯಲ್ಲಿ ನಡೆದು ಸುಸ್ತಾಗಿ ಮಲಗಿದ್ದ ವಲಸೆ ಕಾರ್ಮಿಕರ ಮೇಲೆ ಗೂಡ್ಸ್ ರೈಲು ಹರಿದ ಪರಿಣಾಮವಾಗಿ ೧೬ ಮಂದಿ ವಲಸೆ ಕಾರ್ಮಿಕರು ಸಾವನ್ನಪ್ಪಿದ ದಾರುಣ ಘಟನೆ  2020 ಮೇ 08ರ ಶುಕ್ರವಾರ ನಸುಕಿನಲ್ಲಿ ಘಟಿಸಿದೆ. ಗಾಯಗೊಂಡವರಲ್ಲಿ ಮತ್ತೊಬ್ಬ ಆಸ್ಪತ್ರೆಯಲ್ಲಿ  ಮೃತನಾಗಿದ್ದಾನೆ. ದೂರದಲ್ಲಿ ಕುಳಿತಿದ್ದ ನಾಲ್ಕು ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದುರಂತ ಸಾವಿಗೀಡಾದ ಮಂದಿ ಮಧ್ಯಪ್ರದೇಶದ ಗ್ರಾಮೀಣ ಭಾಗದ ತಮ್ಮ ಮನೆಗಳಿಗೆ ವಾಪಸಾಗುವ ಸಲುವಾಗಿ ಪಾದಯಾತ್ರೆ ಹೊರಟಿದ್ದರು ಎಂದು ಸುದ್ದಿ ಮೂಲಗಳು ಹೇಳಿವೆ.  ೧೬  ಮಂದಿ ಸಾವಿಗೀಡಾಗಿರುದನ್ನು ಪೊಲೀಸರು ದೃಢಪಡಿಸಿದ್ದು, ದಕ್ಷಿಣ ಸೆಂಟ್ರಲ್ ರೈಲ್ವೇಯು ೧೫ ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿತು.  ಕಾರ್ಮಿಕರು ರೈಲು ಹಳಿ ಮೂಲಕ ಕಾಲ್ನಡಿಗೆ ಹೊರಟಿದ್ದರು. ನಡೆದು ಸುಸ್ತಾಗಿದ್ದ ಅವರು ಹಳಿಗಳ ಮೇಲೆ ವಿಶ್ರಾಂತಿ ಪಡೆಯುತ್ತಾ ನಿದ್ದೆಗೆ ಜಾರಿದ್ದರು. ಬೆಳಗ್ಗೆ .೧೫ರ ವೇಳೆಗೆ ಜಲ್ನಾ ಮತ್ತು ಔರಂಗಾಬಾದ್ ನಡುವಣ ಗೂಡ್ಸ್ ರೈಲುಗಾಡಿ ಅವರ ಮೇಲೆ ಹಾದುಹೋಯಿತು ಎಂದು ವರದಿಗಳು ಹೇಳಿವೆ.  ಘಟನೆಯಲ್ಲಿ ಗಾಯಗೊಂಡಿದ್ದ ಒಬ್ಬ ವ್ಯಕ್ತಿಯನ್ನು ಸಿವಿಲ್ ಆಸ್ಪತೆಗೆ ದಾಖಲಿಸಲಾಯಿತು. ಬದುಕಿ ಉಳಿದ ನಾಲ್ವರು ಆಘಾತಕ್ಕೆ ಒಳಗಾಗಿದ್ದು, ಅವರಿಗೆ ಪೊಲೀಸರು ಸಾಂತ್ವನ ನೀಡುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೋಕ್ಷದಾ ಪಾಟೀಲ್ ನುಡಿದರು. ಜಲ್ನಾದ ಕಬ್ಬಿಣದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಕೊರೋನಾವೈರಸ್ ಲಾಕ್ ಡೌನ್ ಕಾರಣ ಕೆಲಸ ಕಳೆದುಕೊಂಡು ನಡಿಗೆ ಮೂಲಕ ಮಧ್ಯಪ್ರದೇಶಕ್ಕೆ ವಾಪಸ್ ಹೊರಟಿದ್ದರು.  ಕಾರ್ಮಿಕರು ಮಹಾರಾಷ್ಟ್ರದ ಜಲ್ನಾದಿಂದ ೧೭೦ ಕಿಮೀ ದೂರದ ಭುವಸಾಲ್ಗೆ ನಡೆಯುತ್ತಾ ಹೊರಟಿದ್ದರು. ಭುವಸಾಲ್ನಲ್ಲಿ ತಮ್ಮೂರಿಗೆ ವಾಪಸಾಗಲು ರೈಲುಗಾಡಿ ಹಿಡಿಯುವುದು ಅವರ ಉದ್ದೇಶವಾಗಿತ್ತು. ಬಸ್, ರೈಲು ಸೇರಿದಂತೆ ಎಲ್ಲಾ ರೀತಿಯ ವಾಹನ ಸಂಚಾರ ರದ್ದಾಗಿದ್ದವು. ಕಾರಣದಿಂದಾಗಿ ಎಲ್ಲರೂ ರೈಲು ಹಳಿಗಳ ಮೂಲಕ ನಡೆದುಕೊಂಡೇ ಹೋಗಲು ನಿರ್ಧರಿಸಿದ್ದರು. ಸರಕು ಸಾಗಾಣಿಕೆ ರೈಲು ಸಂಚಾರ ಇದ್ದೇ ಇರುತ್ತದೆ ಎಂಬುದು ಅವರ ಅರಿವಿಗೆ ಬಂದಿರಲಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.  (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020:  ವಾಷಿಂಗ್ಟನ್: ವಿಶ್ವವನ್ನು ಕಾಡುತ್ತಿರುವ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ನರಳುತ್ತಿರುವ ಪ್ರತಿಯೊಬ್ಬರ ಆರೋಗ್ಯ, ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ಹಿಂದೂ ಪುರೋಹಿತರೊಬ್ಬರು ಶ್ವೇತಭವನದ ರೋಸ್ ಗಾರ್ಡನ್ನಿನಲ್ಲಿ  2020 ಮೇ 08ರ ಗುರುವಾರ ಶಾಂತಿ ಮಂತ್ರ ಪಠಣ ಮಾಡಿದರು.  ಅಮೆರಿಕದ ರಾಷ್ಟ್ರೀಯ ಪ್ರಾರ್ಥನಾ ಸೇವೆಯ ದಿನ ಶ್ವೇತಭವನದಲ್ಲಿ ಎಲ್ಲ ಧರ್ಮಗಳ ಧರ್ಮಗುರುಗಳಿಂದ ಶಾಂತಿ ಪ್ರಾರ್ಥನೆ ಮಾಡಿಸುವ ಕ್ರಮವಿದೆ. ಅದರಂತೆ ಹಿಂದು ಪುರೋಹಿತರಿಂದ ಗುರುವಾರ ಶಾಂತಿ ಮಂತ್ರ ಪಠಣ ನಡೆಯಿತು.   ನ್ಯೂಜೆರ್ಸಿಯ ಬಿಎಪಿಎಸ್ ಸ್ವಾಮಿನಾರಾಯಣ ಮಂದಿರದ ಪುರೋಹಿತ ಹರೀಶ ಬ್ರಹ್ಮಭಟ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಹ್ವಾನದ ಮೇರೆಗೆ ಶ್ವೇತಭವನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶಾಂತಿಮಂತ್ರವನ್ನು ಪಠಿಸಿದರು.  ಕೊರೊನಾ ವೈರಸ್ ಮತ್ತು ದಿಗ್ಬಂಧನಗಳಿಂದ ತೊಂದgಗೆ ಒಳಗಾಗಿರುವ   ಹೊತ್ತಿನಲ್ಲಿ, ಜನರು ಆತಂಕಕ್ಕೊಳಗಾಗುವುದು ಅಥವಾ ಅವರ ಶಾಂತಿಗೆ ಭಂಗವಾಗುವುದು ಸಹಜ. ಶಾಂತಿ ಮಂತ್ರವು, ಲೌಕಿಕ ಸಂಪತ್ತು, ಯಶಸ್ಸು, ಖ್ಯಾತಿಯನ್ನೂ ಮೀರಿ ಶಾಂತಿಗಾಗಿ ಸಲ್ಲಿಸುವ ಪ್ರಾರ್ಥನೆಯಾಗಿದೆ. ಇದು ಶಾಂತಿಯನ್ನು ಕೋರುವ ಹಿಂದೂ ಪ್ರಾರ್ಥನೆ. ಯಜುರ್ವೇದ ಮೂಲದ ವೈದಿಕ ಮಂತ್ರಎಂದು ಶ್ವೇತಭವನದ ರೋಸ್ ಗಾರ್ಡನ್ನಿನಲ್ಲಿ ಹರೀಶ  ಬ್ರಹ್ಮಭಟ್ ವಿವರಿಸಿದರು.  ಪ್ರಾರ್ಥನೆ, ಮಂತ್ರ ಪಠಣೆಗಾಗಿ ಡೊನಾಲ್ಡ್ ಟ್ರಂಪ್ ಅವರು ಹರೀಶ ಬ್ರಹ್ಮಭಟ್ ಅವರಿಗೆ ಧನ್ಯವಾದ ಅರ್ಪಿಸಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಶುಕ್ರವಾರ ಸಂಭವಿಸಿದ ವಿಷಾನಿಲ ಸೋರಿಕೆ ಪ್ರಕರಣದ ಹಿನ್ನೆಲೆಯಲ್ಲಿ ೫೦ ಕೋಟಿ ರೂಪಾಯಿಗಳ ಮಧ್ಯಂತರ ಪರಿಹಾರ ನೀಡುವಂತೆ ಎಲ್ಜಿ ಪಾಲಿಮರ್ಸ್ ಇಂಡಿಯಾ ಕಂಪೆನಿಗೆ  2020 ಮೇ 08ರ ಶುಕ್ರವಾರ  ಆದೇಶ ನೀಡಿದ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್ಜಿಟಿ) ಕೇಂದ್ರ ಮತ್ತು ಇತರರಿಗೆ ನೋಟಿಸ್ ಜಾರಿ ಮಾಡಿತು.  ಎನ್ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಆದರ್ಶ ಕುಮಾರ್ ಗೋಯೆಲ್ ನೇತೃತ್ವದ ಪೀಠವು ೧೧ ಮಂದಿಯ ಸಾವು ಮತ್ತು ಸುಮಾರು ೧೦೦೦ ಮಂದಿ ಅಸ್ವಸ್ಥಗೊಳ್ಳುವಂತೆ ಮಾಡಿದ ಗುರುವಾರದ ರಾಸಾಯನಿಕ ಕಾರ್ಖಾನೆಯಲ್ಲಿನ ಅನಿಲ ಸೋರಿಕೆ ಪ್ರಕರಣದ ತನಿಖೆಗೆ ಸದಸ್ಯರ ಸಮಿತಿಯೊಂದನ್ನೂ ರಚನೆ ಮಾಡಿತು. ನಿಯಮಾವಳಿಗಳು ಮತ್ತು ಸ್ಥಾಯೀ ವಿಧಿಗಳನ್ನು ಪಾಲಿಸುವಲ್ಲಿ ವೈಫಲ್ಯ ಸಂಭವಿಸಿರುವಂತೆ ಕಾಣುತ್ತಿದೆ ಎಂದು ನ್ಯಾಯಮಂಡಳಿ ಹೇಳಿತು.  ಪ್ರಾಣ, ಸಾರ್ವಜನಿಕ ಆರೋಗ್ಯ ಮತ್ತು ಪರಿಸರಕ್ಕೆ ಆಗಿರುವ ಹಾನಿ ಮೇಲ್ನೋಟಕ್ಕೇ ಕಂಡು ಬರುತ್ತಿದ್ದು, ೫೦ ಕೋಟಿ ರೂಪಾಯಿಗಳ ಪ್ರಾಥಮಿಕ ಮೊತ್ತವನ್ನು ತತ್ ಕ್ಷಣವೇ ಠೇವಣಿ ಇಡುವಂತೆ ನಾವು ಎಲ್ ಜಿ ಪಾಲಿಮರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ಗೆ ಆದೇಶ ನೀಡುತ್ತಿದ್ದೇವೆ. ಹಣವನ್ನು ವಿಶಾಖಪಟ್ಟಣ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಗೆ ಪಾವತಿ ಮಾಡಬೇಕು, ಜಿಲ್ಲಾ ಮ್ಯಾಜಿಸ್ಟ್ರೇಟರು ನಿಟ್ಟಿನಲ್ಲಿ ನ್ಯಾಯಮಂಡಳಿ ನೀಡುವ ಮುಂದಿನ ಆದೇಶವನ್ನು ಪಾಲಿಸಬೇಕು ಎಂದು ಪೀಠ ಆಜ್ಞಾಪಿಸಿತು. ಕಂಪೆನಿಯ ಆರ್ಥಿಕ ಸ್ಥಿತಿ ಮತ್ತು ಆಗಿರುವ ಹಾನಿಯ ಪ್ರಮಾಣಕ್ಕೆ ಅನುಗುಣವಾಗಿ ಮೊತ್ತವನ್ನು ನಿಗದಿ ಪಡಿಸಲಾಗುತ್ತದೆ ಎಂದು ಪೀಠ ತಿಳಿಸಿತು.  ಪರಿಸರ ಮತ್ತು ಅರಣ್ಯ ಸಚಿವಾಲಯ, ಎಲ್ಜಿ ಪಾಲಿಮರ್ಸ್ ಇಂಡಿಯಾ, ಆಂಧ್ರ ಪ್ರದೇಶ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಕೇಂದ್ರೀಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ವಿಶಾಖಪಟ್ಟಣ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಗೂ ನೋಟಿಸ್ಗಳನ್ನು ಜಾರಿ ಮಾಡಿದ ಪೀಠ ಮುಂದಿನ ವಿಚಾರಣಾ ದಿನಾಂಕ ಮೇ ೧೮ಕ್ಕೆ ಮುನ್ನ ಉತ್ತರ ಸಲ್ಲಿಸಲು ಸೂಚಿಸಿತು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020:  ನವದೆಹಲಿ: ಕೊರೋನಾವೈರಸ್ ತಡೆಗಟ್ಟುವ ಸಲುವಾಗಿ ಮದ್ಯವನ್ನು ನೇರವಾಗಿ ಮಾರಾಟ ಮಾಡುವ ಬದಲಿಗೆ ಮನೆ ಮನೆಗೆ ಸರಬರಾಜು ಮಾಡುವ ಬಗ್ಗೆ ಅಥವಾ ಆನ್ ಲೈನ್ ಮೂಲಕ ಸರಬರಾಜು ಮಾಡುವ ಬಗ್ಗೆ ರಾಜ್ಯ ಸರ್ಕಾರಗಳು ಗಂಭೀರವಾಗಿ ಆಲೋಚಿಸಬೇಕು. ಇದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಸುಪ್ರೀಂಕೋರ್ಟ್  2020 ಮೇ 08ರ ಶುಕ್ರವಾರ  ನಿರ್ದೇಶನ ನೀಡಿತು.  ರಾಷ್ಟ್ರವ್ಯಾಪಿ ದಿಗ್ಬಂಧನ (ಲಾಕ್ ಡೌನ್) ಸಂದರ್ಭದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕೊಟ್ಟರೆ ಅದು ಜನಸಾಮಾನ್ಯರ ಜೀವನದ ಮೇಲೆ ಪರಿಣಾಮ ಬೀರಲಿದೆ ಎಂಬುದಾಗಿ ದೂರಿದ ಸಾರ್ವಜನಿಕ ಹಿತಾಸಕ್ತಿ (ಪಿಐಎಲ್) ಅರ್ಜಿಯನ್ನು ಇತ್ಯರ್ಥ ಪಡಿಸುತ್ತಾ ಸುಪ್ರೀಂಕೋರ್ಟ್ ನಿರ್ದೇಶನ ನೀಡಿತು.  ದಿಗ್ಬಂಧನ ಮುಂದುವರೆಸಿರುವ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ  ಅಶೋಕ ಭೂಷಣ್, ಸಂಜಯ್ ಕಿಶನ್ ಕೌಲ್ ಮತ್ತು ಬಿಆರ್ ಗವಾಯಿ ಅವರನ್ನು ಒಳಗೊಂಡ ಪೀಠವು ಸೂಚನೆ ನೀಡಿತು.  ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ನಾವು ಯಾವುದೇ ಆದೇಶ ನೀಡುವುದಿಲ್ಲ. ಆದರೆ ರಾಜ್ಯ ಸರ್ಕಾರಗಳು ಸಾಮಾಜಿಕ ಅಂತರವನ್ನು ಜನರು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮದ್ಯವನ್ನು ನೇರವಾಗಿ ಮಾರಾಟ ಮಾಡದೇ ಮನೆಗೆ ಸರಬರಾಜು ಮಾಡುವ ಬಗ್ಗೆ ಆಲೋಚಿಸಬೇಕುಎಂದು ಪೀಠ ತಿಳಿಸಿತು. ದಿಗ್ಬಂಧನ ವೇಳೆಯಲ್ಲಿ ಮೇ ೧ರಿಂದ ನೇರವಾಗಿ ಮದ್ಯ ಮಾರಾಟ ಮಾಡಲು ಅನುಮತಿ ನೀಡಿ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ಹೊರಡಿಸಿದ ಮಾರ್ಗಸೂಚಿಯನ್ನು ಅರ್ಜಿ ಪ್ರಶ್ನಿಸಿತ್ತು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

2020: ನವದೆಹಲಿ: ದೇಶದ ಕೊರೋನಾವೈರಸ್ ಪ್ರಕರಣಗಳ ಮಾಹಿತಿಯ ವಿಶ್ಲೇಷಣೆಯ ಬಳಿಕ ಶೀಘ್ರದಲ್ಲೇ ಕೇಂದ್ರವು ಕೆಂಪು, ಕಿತ್ತಳೆ ಮತ್ತು ಹಸಿರು ವಲಯಗಳ ಪರಿಷ್ಕೃತ ಪಟ್ಟಿಯನ್ನು ರಾಜ್ಯಗಳಿಗೆ ಕಳುಹಿಸಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರವಾಲ್ ಅವರು 2020 ಮೇ 08ರ ಶುಕ್ರವಾರ ಇಲ್ಲಿ ಪ್ರಕಟಿಸಿದರು.  ದೇಶದ ೨೧೬ ಜಿಲ್ಲೆಗಳಲ್ಲಿ ಪ್ರಸ್ತುತ ಕೊರೋನಾವೈರಸ್ ಪ್ರಕರಣಗಳು ಇಲ್ಲ, ಒಟ್ಟು ೨೯ ಜಿಲ್ಲೆಗಳಲ್ಲಿ ಕಳೆದ ೨೧ ದಿನಗಳಿಂದ ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ ಮತ್ತು ೩೬ ಜಿಲ್ಲೆಗಳಲ್ಲಿ ಕಳೆದ ೧೪ ದಿನಗಳಿಂದ ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ. ೪೬ ಜಿಲ್ಲೆಗಳಲ್ಲಿ ಕಳೆದ ದಿನಗಳಿಂದ ಯಾವುದೇ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ. ಮಾರ್ಗಸೂಚಿಗಳನ್ನು ಸಮರ್ಪಕವಾಗಿ ನಾವು ಪಾಲಿಸಿದ್ದೇ ಆದರೆ ಕೋವಿಡ್ -೧೯ ಪ್ರಕರಣಗಳು ಉತ್ತುಂಗಕ್ಕೆ ಏರಲು ಸಾಧ್ಯವಿಲ್ಲ ಎಂದು ಅವರು ನುಡಿದರು.  ಅಗತ್ಯ ಮುಂಜಾಗರೂಕತೆಗಳನ್ನು ನಾವು ಕೈಗೊಳ್ಳದೇ ಇದ್ದಲ್ಲಿ ಮತ್ತು ಅಗತ್ಯ ಪ್ರಕ್ರಿಯೆಗಳನ್ನು ಅನುಸರಿಸದೇ ಇದ್ದಲ್ಲಿ ಪ್ರಕರಣಗಳು ಹೆಚ್ಚುವ ಸಾಧ್ಯತೆಯ ಪ್ರಶ್ನೆಗಳು ಯಾವಾಗಲೂ ಇರುತ್ತವೆ ಎಂದು ಅಗರವಾಲ್ ಹೇಳಿದರು.  ದೇಶದಲ್ಲಿ ಕೊರೋನಾ ಸೋಂಕಿಗೆ ಈಡಾದವರು ಚೇತರಿಸುತ್ತಿರುವ ಪ್ರಮಾಣ ಹೆಚ್ಚುತ್ತಿದೆ. ಭಾರತದಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ,೩೯೦ ಹೊಸ ಕೋವಿಡ್-೧೯ ಸೋಂಕಿನ ಪ್ರಕರಣಗಳು ವರದಿಯಾಗಿದ್ದು, ,೨೭೩ ಪ್ರಕರಣಗಳು ಚೇತರಿಕೆ ಕಂಡಿವೆ. ೫೬,೩೪೨ ಪ್ರಕರಣಗಳ ಪೈಕಿ ೩೭,೯೧೬ ಪ್ರಕರಣಗಳು ಸಕ್ರಿಯ ಪ್ರಕರಣಗಳಾಗಿವೆ. ೧೬,೫೪೦ ಪ್ರಕರಣಗಳಲ್ಲಿ ರೋಗಿಗಳು ಗುಣಮುಖರಾಗಿದ್ದು ಚೇತರಿಕೆಯ ಪ್ರಮಾಣ ಶೇಕಡಾ ೨೯.೩೬ಕ್ಕೆ ಏರಿದೆ ಎಂದು ಅಗರವಾಲ್ ನುಡಿದರು.  ಕಳೆದ ೨೪ ಗಂಟೆಗಳಲ್ಲಿ ೧೦೩ ಸಾವಿನ ಪ್ರಕರಣಗಳೊಂದಿಗೆ ಭಾರತದಲ್ಲಿ ಒಟ್ಟು ಸಾವಿನ ಸಂಖ್ಯೆ ೧೮೮೬ಕ್ಕೇ ಏರಿದೆ ಎಂದೂ ಅಗರವಾಲ್ ನುಡಿದರು. (ವಿವರಗಳಿಗೆ  ಇಲ್ಲಿ  ಕ್ಲಿಕ್  ಮಾಡಿರಿ)

ಇಂದಿನ ಇತಿಹಾಸ  HistoryTodayಮೇ 08  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)


No comments:

Post a Comment