2020: ನವದೆಹಲಿ: ಕೊರೋನಾವೈರಸ್ ದಿಗ್ಬಂಧನದಿಂದಾಗಿ (ಲಾಕ್ ಡೌನ್) ರಾಷ್ಟ್ರದಲ್ಲಿ ಸೃಷ್ಟಿಯಾಗಿರುವ ಆರ್ಥಿಕ ಬಿಕ್ಕಟ್ಟು ಶಮನಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ ೨೦ ಲಕ್ಷ ಕೋಟಿ ರೂಪಾಯಿಗಳ ವಿಶೇಷ ಕೊಡುಗೆಯ ಮೂರನೇ ಕಂತಿನ ವಿವರಗಳನ್ನು 2020 ಮೇ 15ರ ಶುಕ್ರವಾರ ಪ್ರಕಟಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೃಷಿ ಮತ್ತು ಪೂರಕ ವಲಯಕ್ಕೆ ೧ ಲಕ್ಷ ಕೋಟಿ ರೂಪಾಯಿಗಳ ಸಹಾಯಧನವನ್ನು ಘೋಷಿಸಿದರು. ಕೃಷಿ, ಮೀನುಗಾರಿಕೆ, ಹೈನುಗಾರಿಕೆ, ಪಶುಸಂಗೋಪನೆ ಮತ್ತು ಆಹಾರ ಸಂಸ್ಕರಣೆ ಮತ್ತು ಪೂರಕ ಚಟುವಟಿಕೆಗಳಿಗೆ ಉತ್ತೇಜನ ನೀಡುವತ್ತ ಸಚಿವರು ಹೆಚ್ಚಿನ ಬೆಳಕು ಚೆಲ್ಲಿದರು. ಆಕರ್ಷಕ ಬೆಲೆಗೆ ಉತ್ಪನ್ನಗಳನ್ನು ಮಾರಾಟ ಮಾಡಲು ರೈತರಿಗೆ ಸಾಕಷ್ಟು ಆಯ್ಕೆಗಳನ್ನು ಒದಗಿಸಲು ತಡೆರಹಿತ ಮುಕ್ತ ಅಂತರರಾಜ್ಯ ವ್ಯಾಪಾರ ಮತ್ತು ಕೃಷಿ ಉತ್ಪನ್ನಗಳ ಮಾರಾಟ ಮತ್ತು ಕೃಷಿ ಉತ್ಪನ್ನಗಳ ಇ-ವ್ಯಾಪಾರಕ್ಕಾಗಿ ಚೌಕಟ್ಟು ಒದಗಿಸುವ ಸಲುವಾಗಿ ಕೇಂದ್ರ ಮಟ್ಟದಲ್ಲಿ ಕಾನೂನು ರೂಪಿಸಲಾಗುವುದು ಎಂದು ಅವರು ನುಡಿದರು. ದೇಶದ ಅತಿದೊಡ್ಡ ವಲಯವಾಗಿರುವ ಕೃಷಿ ವಲಯದಲ್ಲಿ ಕೃಷಿ ಮೂಲ ಸವಲತ್ತು ಮತ್ತು ಸಾಮರ್ಥ್ಯ ವೃದ್ಧಿ ಯೋಜನೆಗಳಿಗೆ ೧ ಲಕ್ಷ ಕೋಟಿ ರೂಪಾಯಿ ಸಹಾಯ ಧನ ಒದಗಿಸಲಾಗಿದ್ದು ಇದರ ಅಡಿಯಲ್ಲಿ ಕೃಷಿ ಚಟುವಟಿಕೆಗಳಿಗೆ ಆರ್ಥಿಕ ನೆರವು ಒದಗಿಸಲಾಗುವುದು ಎಂದು ಸಚಿವರು ನುಡಿದರು. ಮೂರನೇ ಕಂತಿನಲ್ಲಿ ೧೧ ಉಪಕ್ರಮಗಳನ್ನು ಸಚಿವರು ಘೋಷಿಸಿದ್ದಾರೆ. ಇವುಗಳಲ್ಲಿ ೮ ಉಪಕ್ರಮಗಳು ಮೂಲಸೌಕರ್ಯ, ಸರಕು ಸಾಗಣೆ ವ್ಯವಸ್ಥೆ ಉತ್ತಮಗೊಳಿಸುವುದಕ್ಕೆ ಸಂಬಂಧಿಸಿದ್ದರೆ, ಉಳಿದ ಮೂರು ಉಪಕ್ರಮಗಳು ಆಡಳಿತ ಹಾಗೂ ಆಡಳಿತಾತ್ಮಕ ಸುಧಾರಣೆಗಳಿಗೆ ಸಂಬಂಧಿಸಿವೆ.
(ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಮ್ಯಾನ್ಮಾರ್ ಸೇನೆಯು ೨೨ ಮಂದಿ ಈಶಾನ್ಯ ಬಂಡುಕೋರರನ್ನು ಭಾರತೀಯ ಸರ್ಕಾರಕ್ಕೆ ಶುಕ್ರವಾರ ಹಸ್ತಾಂತರಿಸಿದೆ. ಮಣಿಪುರ ಮತ್ತು ಅಸ್ಸಾಂ ಸರ್ಕಾರಗಳಿಗೆ ಬೇಕಾಗಿದ್ದ ಈ ಬಂಡುಕೋರರನ್ನು ವಿಶೇಷ ವಿಮಾನದಲ್ಲಿ ಭಾರತಕ್ಕೆ ಕರೆತರಲಾಗುತ್ತಿದೆ ಎಂದು ಸುದ್ದಿ ಮೂಲಗಳು 2020 ಮೇ 15ರ ಶುಕ್ರವಾರ ತಿಳಿಸಿದವು. ಮ್ಯಾನ್ಮಾರ್ ಸರ್ಕಾರದ ಪಾಲಿಗೆ ಇದೊಂದು ದೊಡ್ಡ ಹೆಜ್ಜೆ ಮತ್ತು ಉಭಯ ರಾಷ್ಟ್ರಗಳ ಮಧ್ಯೆ ಬಾಂಧವ್ಯ ಗಾಢಗೊಳ್ಳೂತ್ತಿರುವುದರ ಪ್ರತಿಫಲನ’ ಎಂದು ಬಂಡುಕೋರರನ್ನು ಹೊತ್ತ ವಿಮಾನ ಮ್ಯಾನ್ಮಾರಿನಿಂದ ಹೊರಟ ಬಳಿಕ ಉನ್ನತ ಸರ್ಕಾರಿ ಅಧಿಕಾರಿಯೊಬ್ಬರು ನುಡಿದರು. ವಿಮಾನವು ಮೊದಲ ಮಣಿಪುರ ರಾಜಧಾನಿ ಇಂಫಾಲ್‌ನಲ್ಲಿ ಇಳಿದು ಬಳಿಕ ಅಸ್ಸಾಮಿನ ಗುವಾಹತಿಯತ್ತ ತೆರಳುವುದು. ಬಂಡುಕೋರರನ್ನು ಉಭಯ ರಾಜ್ಯಗಳ ಸ್ಥಳೀಯ ಪೊಲೀಸರ ವಶಕ್ಕೆ ಒಪ್ಪಿಸಲಾಗುವುದು ಎಂದು ಅಧಿಕಾರಿ ಹೇಳಿದರು. ಈಶಾನ್ಯ ಬಂಡುಕೋg ನಾಯಕರನ್ನು ಹಸ್ತಾಂತರಿಸುವಂತೆ ಭಾರತ ಮಾಡಿದ್ದ ಮನವಿಗೆ ಮ್ಯಾನ್ಮಾರ್ ಸರ್ಕಾರವು ಸ್ಪಂದಿಸಿದ್ದು ಇದೇ ಮೊದಲು ಎಂದು ಹಿರಿಯ ರಾಷ್ಟ್ರೀಯ ಭದ್ರತಾ ಯೋಜಕರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕಾರ್‍ಯಾಚರಣೆಯ ಬಗ್ಗೆ ಮಾತನಾಡುತ್ತಾ ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ದೇಶದ ಬಡವರು ಹಾಗೂ ವಲಸೆ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳಿಗೆ ಬೆಂಬಲ ನೀಡಲು ವಿಶ್ವ ಬ್ಯಾಂಕ್ ಸಮ್ಮತಿಸಿದ್ದು, ೧ ಬಿಲಿಯನ್ (೧೦೦ ಕೋಟಿ) ಅಮೆರಿಕನ್ ಡಾಲರ್ (ಸುಮಾರು ೭,೫೦೦ ಕೋಟಿ ರೂಪಾಯಿ) ನೆರವನ್ನು 2020 ಮೇ 15ರ ಶುಕ್ರವಾರ ಘೋಷಿಸಿತು. ಕೊರೋನಾವೈರಸ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತದ ಆರೋಗ್ಯ ವಲಯಕ್ಕಾಗಿ ವಿಶ್ವ ಬ್ಯಾಂಕ್ ಕಳೆದ ತಿಂಗಳು ೧ ಬಿಲಿಯನ್ (೧೦೦ ಕೋಟಿ) ಅಮೆರಿಕನ್ ಡಾಲರ್ ತುರ್ತು ನೆರವು ಘೋಷಿಸಿತ್ತು. ಈ ಮೂಲಕ ದೇಶಕ್ಕೆ ವಿಶ್ವ ಬ್ಯಾಂಕಿನಿಂದ ಎರಡು ಬಿಲಿಯನ್ (೨೦೦ ಕೋಟಿ) ಡಾಲರ್ ನೆರವು ದೊರೆತಂತಾಯಿತು. ವಿಶ್ವ ಬ್ಯಾಂಕ್ ಭಾರತದೊಂದಿಗೆ ಮೂರು ವಲಯಗಳಲ್ಲಿ ಕೈಜೋಡಿಸಲಿದೆ ಎಂದು ವಿಶ್ವ ಬ್ಯಾಂಕ್ ನಿರ್ದೇಶಕರಾಗಿರುವ ಜುನೈದ್ ಅಹಮದ್ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಪ್ರಯಾಗರಾಜ್: ಮಸೀದಿಯ ಗೋಪುರಗಳಿಂದ
ಮೊಯಿಜ್ಜೀನ್ ಅಥವಾ ಮೌಲ್ವಿಗಳು ಮುಸ್ಲಿಮರ ಪ್ರಾರ್ಥನಾ ವಿಧಿಗಾಗಿ ನೀಡುವ ಆಝಾನ್ ಅಥವಾ ಇಸ್ಲಾಮಿಕ್ ಕರೆಯನ್ನು ಧ್ವನಿ ವರ್ಧಕದ ಮೂಲಕ ನೀಡುವಂತಿಲ್ಲ, ಕೇವಲ ಮೌಖಿಕ ಧ್ವನಿಯಲ್ಲಿ ನೀಡಬೇಕು ಎಂದು ಅಲಹಾಬಾದ್ ಹೈಕೋರ್ಟ್ 2020 ಮೇ 15ರ ಶುಕ್ರವಾರ ತೀರ್ಪು ನೀಡಿತು. ಆದರೆ, ಕೊರೋನಾವೈರಸ್ ಹರಡದಂತೆ ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯ ಉಲ್ಲಂಘನೆಯಾಗುತ್ತದೆ ಎಂಬ ನೆಪದಲ್ಲಿ ಮೌಖಿಕ ಧ್ವನಿಯಲ್ಲಿ ಆಝಾನ್ ಪಠಣಕ್ಕೆ ಅಡ್ಡಿ ಪಡಿಸುವಂತಿಲ್ಲ ಎಂದು ಪೀಠ ಹೇಳಿತು. ಕಾನೂನಿನ ಪ್ರಕಾರ ಜಿಲ್ಲಾ ಆಡಳಿತದ ಪೂರ್ವಾನುಮತಿ ಇಲ್ಲದೆ ಆಝಾನ್ ಕರೆಗಾಗಿ ಯಾರು ಕೂಡಾ ಧ್ವನಿ ವರ್ಧಕವನ್ನು ಬಳಸುವಂತಿಲ್ಲ ಎಂದೂ ಹೈಕೋರ್ಟ್ ಹೇಳಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಭಾರತದಲ್ಲಿ ಕೊರೋನಾವೈರಸ್ ಸೋಂಕಿನ ಪ್ರಕರಣಗಳು 2020 ಮೇ 15ರ ಶುಕ್ರವಾರ ೮೨,೦೦೦ದ ಸಮೀಪಕ್ಕೆ ಬಂದಿವೆ. ಸಾವಿನ ಸಂಖ್ಯೆ ೨,೬೪೯ಕ್ಕೆ ಏರಿದೆ. ಏನಿದ್ದರೂ, ಕೋವಿಡ್-೧೯ ಪರೀಕ್ಷೆಯ ಪ್ರಮಾಣವೂ ಹನ್ನೆರಡು ದಿನಗಳಲ್ಲಿ ದುಪ್ಪಟ್ಟಾಗಿದ್ದು, ಗುರುವಾರ ಒಂದೇ ದಿನ ೨೦ ಲಕ್ಷ ಜನರನ್ನು ಪರೀಕ್ಷಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿತು.ಆರೋಗ್ಯ ಸಚಿವಾಲಯದ ಅಂಕಿಸಂಖ್ಯೆಗಳ ಪ್ರಕಾರ ಕೊರೋನಾವೈರಸ್ ದೃಢಪಟ್ಟ ಪ್ರಕರಣಗಳ ಸಂಖ್ಯೆ ೮೧,೯೭೦. ಸಾವಿನ ಸಂಖ್ಯೆ ೨೬೪೯. ಗುಣಮುಖರಾದವರ ಸಂಖ್ಯೆ ೨೭,೯೨೦. ಸಕ್ರಿಯ ಪ್ರಕರಣಗಳ ಸಂಖ್ಯೆ ೫೧,೪೦೧. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ರಾಮನಗರ: ಜಯ ಕರ್ನಾಟಕ ಸಂಘಟನೆಯ ಸಂಸ್ಥಾಪಕ, ಭೂಗತ ಲೋಕದ ಮಾಜಿ ಡಾನ್ ಮುತ್ತಪ್ಪ ರೈ (೬೮)
2020 ಮೇ 15ರ ಶುಕ್ರವಾರ ನಸುಕಿನ ಎರಡು ಗಂಟೆ ಸುಮಾರಿಗೆ ನಿಧನರಾದರು. ಒಂದು ವರ್ಷದ ಹಿಂದೆ ಕ್ಯಾನ್ಸರಿಗೆ ತುತ್ತಾಗಿದ್ದ ಅವರು ಕೆಲವು ದಿನದಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಲ್ಲಿಯೇ ಕೊನೆಯುಸಿರು ಎಳೆದರು. ಇಬ್ಬರು ಪುತ್ರರು, ಮೂವರು ಸಹೋದರರು ಹಾಗೂ ಒಬ್ಬ ಸಹೋದರಿಯನ್ನು ರೈ ಅಗಲಿದರು. ತುಳು ಭಾಷೆಯ ಬಂಟರ ಕುಟುಂಬದ ನೆಟ್ಟಲ ನಾರಾಯಣ ರೈ ಮತ್ತು ಸುಶೀಲಾ ರೈ ದಂಪತಿಯ ಪುತ್ರನಾಗಿ ಪುತ್ತೂರಿನಲ್ಲಿ ಜನಿಸಿದ ನೆಟ್ಟಲ ಮುತ್ತಪ್ಪ ರೈ ಒಂದು ಕಾಲದಲ್ಲಿ ಭೂಗತ ಲೋಕದ ಡಾನ್ ಎಂದು ಕುಖ್ಯಾತರಾಗಿದ್ದರು. ಮೊದಲ ಪತ್ನಿ ರೇಖಾ ಸಿಂಗಪುರದಲ್ಲಿ ನಿಧನರಾಗಿದ್ದರು. ರಾಖಿ ಮತ್ತು ರಿಕ್ಕಿ ಇಬ್ಬರು ಪುತ್ರರು. ತುಳು ಸಿನಿಮಾ ‘ಕಂಚಿಲ್ದ ಬಾಲೆ’ಯಲ್ಲಿ ಮುತ್ತಪ್ಪ ರೈ ಕಾಣಿಸಿಕೊಂಡಿದ್ದರು. ‘ಜಯ ಕರ್ನಾಟಕ’ ಸಂಘಟನೆಯನ್ನು ಹುಟ್ಟುಹಾಕಿ ಸಮಾಜ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment