ಇಂದಿನ ಇತಿಹಾಸ History
Today
ಮೇ 28
2020: ನವದೆಹಲಿ: ಕೊರೋನಾವೈರಸ್ ದಿಗ್ಬಂಧನದಿಂದಾಗಿ (ಲಾಕ್ ಡೌನ್) ದೇಶಾದ್ಯಂತ ಸಿಕ್ಕಿಹಾಕಿಕೊಂಡಿರುವ ವಲಸೆ ಕಾರ್ಮಿಕರಿಂದ ರೈಲು ಅಥವಾ ಬಸ್ಸು ಟಿಕೆಟ್ ದರ ವಸೂಲಿ ಮಾಡಬಾರದು ಮತ್ತು ಅವರಿಗೆ ಆಹಾರ ಮತ್ತು ನೀರನ್ನು ಒದಗಿಸಬೇಕು ಎಂದು ಸುಪ್ರೀಂಕೋರ್ಟ್ 2020 ಮೇ 28ರ ಗುರುವಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿತು.ಸ್ವ ಇಚ್ಛೆಯಿಂದ ದಾಖಲಿಸಿದ ಪ್ರಕರಣದಲ್ಲಿ, ಮಧ್ಯಂತರ ನಿರ್ದೇಶನ ನೀಡಿದ ನ್ಯಾಯಮೂರ್ತಿ ಅಶೋಕ ಭೂಷಣ್ ನೇತೃತ್ವದ ಪೀಠವು, ಸಿಕ್ಕಿಹಾಕಿಕೊಂಡಿರುವ ಎಲ್ಲ ವಲಸೆ ಕಾರ್ಮಿಕರಿಗೆ ಆಯಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪ್ರಕಟಿತ ಮತ್ತು ಘೋಷಿತ ಸ್ಥಳಗಳಲ್ಲಿ ಅವರಿಗೆ ರೈಲು ಅಥವಾ ಬಸ್ಸು ಏರಲು ಸಾಧ್ಯವಾಗುವವರೆಗೂ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡಬೇಕು ಎಂದು ಹೇಳಿತು. ಪಯಣ ಆರಂಭವಾಗುವ ರಾಜ್ಯವು ನಿಲ್ದಾಣಗಳಲ್ಲಿಯೇ ಊಟ ಮತ್ತು ನೀರನ್ನು ಒದಗಿಸಬೇಕು, ಭಾರತೀಯ ರೈಲ್ವೇಯು ಪಯಣದ ವೇಳೆಯಲ್ಲಿ ಅವರಿಗೆ ಆಹಾರ ನೀರನ್ನು ಒದಗಿಸಬೇಕು. ಬಸ್ಸು ಪಯಣದಲ್ಲೂ ಅವರಿಗೆ ಊಟ, ನೀರಿನ ವ್ಯವಸ್ಥೆ ಮಾಡಬೇಕು ಎಂದು ಪೀಠ ಸೂಚಿಸಿತು. ವಲಸೆ ಕಾರ್ಮಿಕರಿಗೆ ಆದಷ್ಟೂ ಬೇಗನೆ ರೈಲು ಅಥವಾ ಬಸ್ಸು ಪಯಣ ಮಾಡಲು ಸಾಧ್ಯವಾಗುವಂತೆ ಸೂಕ್ತ ವ್ಯವಸ್ಥೆಗಳನ್ನು ರಾಜ್ಯಗಳು ಮಾಡಬೇಕು. ಈ ನಿಟ್ಟಿನ ಸಂಪೂರ್ಣ ಮಾಹಿತಿಯನ್ನು ಸಂಬಂಧಪಟ್ಟ ಪ್ರತಿಯೊಬ್ಬರಿಗೂ ಒದಗಿಸಬೇಕು ಎಂದು ನ್ಯಾಯಮೂರ್ತಿಗಳಾದ ಎಸ್‌ಕೆ ಕೌಲ್ ಮತ್ತು ಎಂಆರ್ ಶಾ ಅವರನ್ನೂ ಒಳಗೊಂಡ ಪೀಠ ನಿರ್ದೇಶನ ನೀಡಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಕೋಚಿ (ಕೇರಳ): ಬಂಗಾಳ ಕೊಲ್ಲಿಯಲ್ಲಿ ಎದ್ದಿದ್ದ ಅಂಫಾನ್ ಚಂಡಮಾರುತದಿಂದ ಮುಂಗಾರು ಮಾರುತದ ಚಲನೆಗೆ ಉಂಟಾಗಿದ್ದ ಅಡಚಣೆ ನಿವಾರಣೆಯಾಗಿದ್ದು, ಇದೀಗ ನೈಋತ್ಯ ಮುಂಗಾರು ಮಾರುತವು ಅರಬ್ಬಿ ಸಮುದ್ರದಲ್ಲಿ ಕೇರಳ ತೀರದತ್ತ ಪಯಣ ಮುಂದುವರೆಸಿವೆ ಎಂದು ವರದಿಗಳು 2020 ಮೇ 28ರ ಗುರುವಾರ ತಿಳಿಸಿದವು. ಜೂನ್ ೧ರ ವೇಳೆಗೆ ಮುಂಗಾರು ಮಾರುತ ಕೇರಳ ತೀರ ಪ್ರವೇಶಿಸಲಿವೆ. ಮೇ ೩೧ರಿಂದ ಜೂನ್ ೪ರವರೆಗೆ ನೈಋತ್ಯ ಭಾಗದಲ್ಲಿ ಕಡಿಮೆ ಒತ್ತಡ ಉಂಟಾಗಲಿದೆ. ಹೀಗಾಗಿ ಮುಂಗಾರು ಮಳೆ ತರುವ ನೈಋತ್ತ ಮುಂಗಾರು ಮಾರುತದ ಚಲನೆ ತಡೆರಹಿತವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿತು. ನೈಋತ್ಯ ಮುಂಗಾರು ಮಾರುತವು ಗುರುವಾರ ಮಾಲ್ಡೀವ್ಸ್, ಕೊಮೊರಿನ್ ಪ್ರದೇಶ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸಮೀಪಕ್ಕೆ ಪ್ರವೇಶ ಮಾಡಿವೆ. ಮುಂದಿನ ೪೮ ಗಂಟೆಗಳಲ್ಲಿ ವಾಯುಭಾರ ಕುಸಿತ ಉಂಟಾಗುವ ಲಕ್ಷಣ ಇದ್ದು, ಮುಂಗಾರು ಮಾರುತವು ಆಗ್ನೇಯ ದಿಕ್ಕಿನತ್ತ ಚಲಿಸಲಿದೆ. ಮುಂದಿನ ಮೂರು ದಿನಗಳಲ್ಲಿ ದಕ್ಷಿಣ ಒಮಾನ್ ಮತ್ತು ಪೂರ್ವ ಯೆಮನ್ ತೀರ ತಲುಪಲಿವೆ ಎಂದು ಹವಾಮಾನ ವರದಿ ಹೇಳಿದೆ. ಮೀನುಗಾರರಿಗೆ ಎಚ್ಚರಿಕೆ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ಇಳಿಯುವ ಮೀನುಗಾರರು ಮೇ ೨೯ರಿಂದ ಜೂನ್ ೪ರ ವರೆಗೆ ಸಮುದ್ರಕ್ಕೆ ಇಳಿಯಬಾರದು ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅವಿಗುಂಡ್ ರಾಜ್‌ಪೊರಾ ಪ್ರದೇಶದಲ್ಲಿ ಕಾರಿನಿಂದ ಪ್ರಬಲ ಐಇಡಿ ಸ್ಫೋಟಕವನ್ನು ಪತ್ತೆ ಹಚ್ಚಿ ಸ್ಫೋಟಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಸೇನೆಯ ಬಾಂಬ್ ವಿಲೇವಾರಿ ದಳ ಸಂಭವಿಸಬಹುದಾಗಿದ್ದ ಪುಲ್ವಾಮಾ ಮಾದರಿಯ ಭಾರೀ ಭಯೋತ್ಪಾದಕ ದಾಳಿಯನ್ನು 2020 ಮೇ 28ರ ಗುರುವಾರ ತಪ್ಪಿಸಿದವು. ಪುಲ್ವಾಮಾ ಪ್ರದೇಶದಲ್ಲಿ ಸ್ಫೋಟಕ ತುಂಬಿದ ಸ್ಯಾಂಟ್ರೊ ಕಾರಿನೊಂದಿಗೆ ಭಯೋತ್ಪಾದಕನು ಸಂಚರಿಸುತ್ತಿದ್ದಾನೆ ಎಂಬ ಮಾಹಿತಿಯನ್ನು ಅನುಸರಿಸಿ ಶೋಧ ಆರಂಭಿಸಿದ ಪೊಲೀಸರು ವಾಹನವನ್ನು ತಡೆದರು. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತಂಡ ಮತ್ತು ಸಿಆರ್ ಪಿಎಫ್ ಕೂಡಾ ಪೊಲೀಸರ ನೆರವಿಗೆ ಬಂದವು. ಪೊಲೀಸರು ಮತ್ತು ಎನ್‌ಐಎ ಸಿಬ್ಬಂದಿ ಮುತ್ತಿಗೆ ಹಾಕಿ ಕೆಲವು ಸುತ್ತುಗಳ ಗುಂಡು ಹಾರಿಸಿದವು. ಬಳಿಕ ಹಿಜ್ಬುಲ್ ಮುಜಾಹಿದ್ದೀನ್ (ಎಚ್‌ಎಂ) ಸಂಘಟನೆಯ ಉಗ್ರ ಎಂಬುದಾಗಿ ಶಂಕಿಸಲಾಗಿರುವ ಉಗ್ರ ವಾಹನವನ್ನು ಬಿಟ್ಟು ಪರಾರಿಯಾಗಿದ್ದಾನೆ ಎಂದು ವರದಿಗಳು ತಿಳಿಸಿದವು. "ಜೈಶ್-ಎ-ಮೊಹಮ್ಮದ್ ಉಗ್ರಗಾಮಿ ಸಂಘಟನೆ ಭಯೋತ್ಪಾದಕ ಕಾರ್ಯಾಚರಣೆ ನಡೆಸಲಿದೆ ಎಂಬ ಮಾಹಿತಿ ನಮಗೆ ಬಂದಿತ್ತು. ಆದ್ದರಿಂದ ಐಇಡಿ ಇದ್ದ ಹಿಜ್ಬುಲ್ ಮುಜಾಹಿದೀನ್ ಉಗ್ರ ಎಂಬುದಾಗಿ ಶಂಕಿಸಲಾಗಿರುವ ಕಾರಿನ ಚಾಲಕ ಅದಿಲ್ ಜೈಶ್-ಇ- ಮೊಹಮ್ಮದ್ ಜೊತೆ ಸಂಪರ್ಕದಲ್ಲಿದ್ದಾನೆ’ ಎಂಬ ಅನುಮಾನ ನಮಗಿದೆ ಎಂದು ಕಾಶ್ಮೀರ ಐಜಿ ವಿಜಯಕುಮಾರ್ ಹೇಳಿದರು. ಭದ್ರತಾ ಪಡೆಗಳ ವಾಹನಗಳನ್ನು ಗುರಿಯಾಗಿಸುವ ಉದ್ದೇಶವನ್ನು ಅವರು ಹೊಂದಿದ್ದರು ಎಂದು ವಿಜಯ ಕುಮಾರ್ ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಕೋವಿಡ್ -೧೯ ಹಿನ್ನೆಲೆಯಲ್ಲಿ ವಿದೇಶದಲ್ಲಿ ಸಿಲುಕಿರುವ ಒಂದು ಲಕ್ಷ ಭಾರತೀಯರನ್ನು ವಂದೇ ಭಾರತ್ ಮಿಷನ್‌ನ ಎರಡನೇ ಹಂತ ಮುಕ್ತಾಯದ ವೇಳೆಗೆ ಮರಳಿ ಭಾರತಕ್ಕೆ ಕರೆ ತರಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮೂಲಗಳು 2020 ಮೇ 28ರ ಗುರುವಾರ ತಿಳಿಸಿದವು. ವಂದೇ ಭಾರತ ಮಿಷನ್ ಹಂತ ೨ ಜೂನ್ ೧೩ ರಂದು ಕೊನೆಗೊಳ್ಳಲಿದೆ. ಕೋವಿಡ್ -೧೯ ಸಾಂಕ್ರಾಮಿPದ ಹಿನ್ನೆಲೆಯಲ್ಲಿ ಮನೆಗೆ ಮರಳಲು ಸುಮಾರು ೩,೦೮,೨೦೦ ಭಾರತೀಯರು ವಿದೇಗಳಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ವಿದೇಶಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯರನ್ನು ಮರಳಿ ಕರೆತರಲು ನೌಕಾಪಡೆಯು ಶ್ರೀಲಂಕಾ, ಮಾಲ್ಡೀವ್ಸ್ ಮತ್ತು ಇರಾನ್‌ಗೆ ನಾಲ್ಕು ವಿಮಾನಗಳನ್ನು ಕಳುಹಿಸಲಿದೆ. ಕನಿಷ್ಠ ೫೦೦೦ ಭಾರತೀಯರು ಇತ್ತೀಚೆಗೆ ನೆರೆಯ ನೇಪಾಳ ಮತ್ತು ಬಾಂಗ್ಲಾದೇಶದಿಂದ ಭಾರತಕ್ಕೆ ಹಿಂತಿರುಗಿದ್ದಾರೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ದೇಶಾದ್ಯಂತ ಕೊರೋನಾ ಸಾಂಕ್ರಾಮಿಕ ಸೋಂಕಿನ ಪ್ರಕರಣಗಳು ೧,೫೮,೩೩೩ಕ್ಕೇ ಏರಿದ್ದು ಸಾವಿನ ಸಂಖ್ಯೆ ೪೫೩೧ಕ್ಕೆ ತಲುಪಿದೆ. ಇದೇ ವೇಳೆಗೆ ಕರ್ನಾಟಕವು ರಾಜ್ಯದಲ್ಲಿ ಸೋಂಕು ಹರಡುವಿಕೆಯನ್ನು ತಡೆಯಲು ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಮಧ್ಯಪ್ರದೇಶ ಮತ್ತು ರಾಜಸ್ಥಾ- ಈ ಐದು ರಾಜ್ಯಗಳಿಂದ ವಿಮಾನ, ರೈಲು ಮತ್ತು ಇತರ ವಾಹನಗಳ ಆಗಮನವನ್ನು 2020 ಮೇ 28ರ ಗುರುವಾರ ಅಮಾನತುಗೊಳಿಸಿತು. ಐದು ರಾಜ್ಯಗಳ ಪೈಕಿ ಮಹಾರಾಷ್ಟ್ರದಲ್ಲಿ ದೇಶದಲ್ಲೇ ಅತ್ಯಂತ ಹೆಚ್ಚಿನ ಪ್ರಮಾಣದ ಕೊರೋನಾ ಸೋಂಕು ಇದ್ದು, ಅಲ್ಲಿ ಸೋಂಕಿನ ಪ್ರಕರಣಗಳ ಸಂಖ್ಯೆ ೫೬,೦೦೦ ಇದೆ. ತಮಿಳುನಾಡಿನಲ್ಲಿ ೧೮,೦೦೦ ಸೋಂಕು ಪ್ರಕರಣಗಳು ಇದ್ದರೆ ಗುಜರಾತಿನಲ್ಲಿ ೧೫,೦೦೦ಕ್ಕಿಂತಲೂ ಹೆಚ್ಚಿನ ಸೋಂಕು ಪ್ರಕರಣಗಳಿವೆ. ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ತಲಾ ೭೦೦೦ಕ್ಕಿಂತ ಹೆಚ್ಚು ಸೋಂಕು ಪ್ರಕರಣಗಳಿವೆ. ಕರ್ನಾಟಕದಲ್ಲಿ ಗುರುವಾರ ಕೋವಿಡ್-೧೯ ಸೋಂಕಿನ ೧೧೫ ಹೊಸ ಪ್ರಕರಣಗಳು ವರದಿಯಾಗಿದ್ದು ಇದರೊಂದಿಗೆ ರಾಜ್ಯದಲ್ಲಿ ಸೋಂಕಿನ ಪ್ರಕರಣಗಳ ಸಂಖ್ಯೆ ೨೫೩೩ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿತು. ಭಾರತದಲ್ಲಿ ದೇಶೀ ವಿಮಾನಯಾನ ಎರಡು ತಿಂUಳುಗಳ ಲಾಕ್ ಡೌನ್ ಅವಧಿಯ ಬಳಿಕ ಸೋಮವಾರ ಆರಂಭವಾಗಿದೆ. ಆದರೆ ಈಗ ಯಾವುದೇ ವಿಮಾನ ಈ ಐದು ರಾಜ್ಯಗಳಿಂದ ಬೆಂಗಳೂರಿಗೆ ಬರುವಂತಿಲ್ಲ. ರೈಲುಗಳ ಪೈಕಿ ಬಹುತೇಕ ಶ್ರಮಿಕ ವಿಶೇಷ ರೈಲುಗಳು ದೇಶದ ವಿವಿಧ ಭಾಗಗಳಲ್ಲಿ ಸಿಕ್ಕಿಹಾಕಿಕೊಂಡ ವಲಸೆ ಕಾರ್ಮಿಕರನ್ನು ಅವರವರ ಹುಟ್ಟೂರುಗಳಿಗೆ ಒಯ್ಯುತ್ತಿವೆ. ಕಪ್ಪು ಪಟ್ಟಿಗೆ ಸೇರಿಸಲಾಗಿರುವ ಐದು ರಾಜ್ಯಗಳ ಪೈಕಿ ಮಹಾರಾಷ್ಟ್ರ ಮತ್ತು ತಮಿಳುನಾಡಿನ ಜೊತೆಗೆ ಕರ್ನಾಟಕ ಗಡಿಗಳನ್ನು ಹಂಚಿಕೊಂಡಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
ಇಂದಿನ ಇತಿಹಾಸ History Today ಮೇ 28 (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment