2020: ನವದೆಹಲಿ/ ಕೋಲ್ಕತ: ಈ ಸಂಕಟ ಸಮಯದಲ್ಲಿ ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳದ ಜೊತೆ ನಿಲ್ಲುತ್ತದೆ ಮತ್ತು ೧೦೦೦ ಕೋಟಿ ರೂಪಾಯಿಗಳ ತತ್ಕ್ಷಣದ ಮುಂಗಡ ಪರಿಹಾರದ ಭರವಸೆ ನೀಡುತ್ತದೆ ಎಂದು ಪ್ರದಾನಿ ನರೇಂದ್ರ ಮೋದಿ ಅವರು 2020 ಮೇ 22ರ ಶುಕ್ರವಾರ ಘೋಷಿಸಿದರು. ಅಂಫಾನ್ ಚಂಡಮಾರುತದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿ ವೈಮಾನಿಕ ಸಮೀಕ್ಷೆ ನಡೆಸಿದ ಬಳಿಕ ಪ್ರಧಾನಿ ಈ ಘೋಷಣೆ ಮಾಡಿದರು. ಸುಮಾರು ಮೂರು ತಿಂಗಳುಗಳ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೊರ ರಾಜ್ಯಕ್ಕೆ ನೀಡಿದ ಮೊದಲ ಭೇಟಿ ಇದು. ಪ್ರಧಾನಿ ಮೋದಿಯವರನ್ನು ರಾಜ್ಯಪಾಲ ಜಗದೀಪ್ ಧನ್ಕರ್ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿಮಾನನಿಲ್ದಾಣದಲ್ಲಿ ಬರಮಾಡಿಕೊಂಡರು. ರಾಜ್ಯದಲ್ಲಿ ಚಂಡಮಾರುತದಿಂದ ಬಹುತೇಕ ಹಾನಿಯಾದ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ ಪ್ರಧಾನಿಯವರಿಗೆ ಮಮತಾ ಬ್ಯಾನರ್ಜಿ ಸಹಯೋಗ ನೀಡಿದರು. ಸಮೀಕ್ಷೆ ಬಳಿಕ ಕೋಲ್ಕತಾ ವಿಮಾನ ನಿಲ್ದಾಣದಿಂದ ೫೦ ಕಿಮೀ ದೂರದ ಬಶೀರತ್ನಲ್ಲಿ ಶಾಲೆಯೊಂದರ ಸಮೀಪದಲ್ಲಿ ಪ್ರಧಾನಿ ಬಂದಿಳಿದರು. ಬಶೀರತ್ ಶಾಲೆಯಲ್ಲಿ ಪರಿಶೀಲನಾ ಸಭೆಯನ್ನು ನಡೆಸಿದ ಪ್ರಧಾನಿಯವರಿಗೆ ಜನರು ತಮ್ಮ ಬದುಕನ್ನು ಮತ್ತೆ ಕಟ್ಟಿಕೊಳ್ಳಲು ಸಾಧ್ಯವಾಗುವಂತೆ ಜನತೆಗೆ ಕೇಂದ್ರದಿಂದ ಹೆಚ್ಚಿನ ನೆರವು ಬೇಕು ಎಂದು ಮಮತಾ ಬ್ಯಾನರ್ಜಿ ಮನವಿ ಮಾಡಿದರು. ಚಂಡಮಾರುತಕ್ಕೆ ಕನಿಷ್ಠ ೮೦ ಮಂದಿ ಬಲಿಯಾಗಿದ್ದಾರೆ, ಈ ಪೈಕಿ ಬಹುತೇಕ ಮಂದಿ ವಿದುತ್ ತಗುಲಿ ಸಾವನ್ನಪ್ಪಿದ್ದಾರೆ ಎಂದು ಮಮತಾ ವಿವರಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಕನಿಷ್ಠ ೯೯ ಮಂದಿ ಪ್ರಯಾಣಿಕರು ಇದ್ದ ಪಾಕಿಸ್ತಾ ಇಂಟರ್ ನ್ಯಾಷನಲ್ ಏರ್ ಲೈನ್ಸ್ (ಪಿಐಎ) ವಿಮಾನವೊಂದು ಕರಾಚಿಯ ಸಮೀಪ 2020 ಮೇ 22ರ ಶುಕ್ರವಾರ ಭೀಕರವಾಗಿ ಪತನಗೊಂಡಿದ್ದು, ಕನಿಷ್ಠ ಇಬ್ಬರು ಪಾರಾಗಿದ್ದಾರೆ ಎಂದು ಪಾಕಿಸ್ತಾನದ ನಾಗರಿಕ ವಿಮಾನಯಾನ ಅಧಿಕಾರಿಗಳು ತಿಳಿಸಿದ್ದಾರೆ. 100ಕ್ಕೂ ಹೆಚ್ಚು ಮಂದಿ ಅಸು ನೀಗಿರುವರೆಂದು
ಶಂಕಿಸಲಾಯಿತು. ವಿಮಾನ ದುರಂತದಲ್ಲಿ ಅದರಲ್ಲಿ ಇದ್ದ ಎಲ್ಲರೂ ಸಾವನ್ನಪ್ಪಿದ್ದಾರೆ ಎಂದು ಕರಾಚಿಯ ಮೇಯರ್ ಇದಕ್ಕೆ ಮುನ್ನ ತಿಳಿಸಿದ್ದರು. ಆದಾಗ್ಯೂ, ಭೀಕರ ದುರಂತದಲ್ಲಿ ಕನಿಷ್ಠ ಇಬ್ಬರು ಪಾರಾಗಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಇಬ್ಬರು ಅಧಿಕಾರಿಗಳು ನುಡಿದರು. ವಿಮಾನ ಅಪಘಾತದಲ್ಲಿ ಬದುಕಿ ಉಳಿದವನೆಂದು ಹೇಳಲಾದ ವ್ಯಕ್ತಿಯೊಬ್ಬನನ್ನು ಸ್ಟ್ರೆಚರ್ ನಲ್ಲಿ ಒಯ್ಯುತ್ತಿದ್ದ ವಿಡಿಯೋ ದೃಶ್ಯಾವಳಿಗಳನ್ನು ಪಾಕಿಸ್ತಾನ ಸ್ಥಳೀಯ ಟೆಲಿವಿಷನ್ ಜಾಲಗಳು ಪ್ರಸಾರ ಮಾಡಿವೆ. ಕರಾಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಂಚಿನಲ್ಲಿ ಇರುವ ಕಿಕ್ಕಿರಿದ ಜನವಸತಿ ಪ್ರದೇಶದಲ್ಲಿ ವಿಮಾನ ಪತನಗೊಂಡಿದೆ ಎಂದು ವರದಿಗಳು ಹೇಳಿದವು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಕೊರೊನಾ ದಿಗ್ಬಂಧನದಿಂದ (ಲಾಕ್ ಡೌನ್) ಕಂಗೆಟ್ಟಿರುವ ಮಾರುಕಟ್ಟೆಗೆ ಚೈತನ್ಯ ತುಂಬಲು ಭಾರತೀಯ ರಿಸರ್ವ್ ಬ್ಯಾಂಕ್ 2020 ಮೇ 22ರ ಶುಕ್ರವಾರ ರೆಪೋ ದರದಲ್ಲಿ ಭಾರೀ ಕಡಿತ ಘೋಷಿಸಿತು. ಶೇ. ೪.೪ರಷ್ಟಿದ್ದ ರೆಪೋದರವನ್ನು ಶೇ.೪ಕ್ಕೆ ಇಳಿಕೆ ಮಾಡಿದ್ದು ರಿವರ್ಸ್ ರೆಪೋ ದರವನ್ನು ಕೂಡಾ ಶೇ.೩.೩೫ಕ್ಕೆ ಇಳಿಕೆ ಮಾಡಿತು. ಭಾರತೀಯ ರಿಸರ್ವ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಅವರು ರೆಪೋ ದರ ಕಡಿತ ಘೋಷಿಸಿದರು. ಇದೇ ವೇಳೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಇಎಂಐ ಪಾವತಿ ಅವಧಿಯನ್ನು ಮತ್ತೆ ಮೂರು ತಿಂಗಳ ಕಾಲ ವಿಸ್ತರಿಸಿತು. ಜೂನ್ ೧ರಿಂದ ಆಗಸ್ಟ್ ೩೧ರವರೆಗೆ ಮೂರು ತಿಂಗಳ ಕಾಲ ಇಎಂಐ ಪಾವತಿಯನ್ನುಅವಧಿಯನ್ನು ವಿಸ್ತರಿಸಲಾಗಿದೆ. ಈ ಮೊದಲು ಮಾರ್ಚ್ ೧ರಿಂದ ಮೇ ೩೧ರವರೆಗೆ ಇಎಂಐ ಪಾವತಿ ಅವಧಿಯನ್ನು ಮುಂದೂಡಲಾಗಿತ್ತು. ಇದೀಗ ಆರ್ಬಿಐ ಮತ್ತೊಮ್ಮೆ ಇಎಂಐ ಪಾವತಿ ಅವಧಿಯನ್ನು ಮುಂದೂಡಿದೆ. ಇದರಿಂದ ಲಾಕ್ಡೌನ್ ಸಂಕಷ್ಟಕ್ಕೆ ಒಳಗಾಗಿರುವ ಲಕ್ಷಾಂತರ ಮಂದಿಗೆ ಅನುಕೂಲವಾದಂತಾಗಿದೆ. ರೆಪೋ ದರ ಕಡಿತದ ಪರಿಣಾಮವಾಗಿ ಬಡ್ಡಿ ದರದಲ್ಲಿ ಭಾರೀ ಇಳಿಕೆಯಾಗಲಿದೆ. ಗೃಹ ಸಾಲ, ವಾಹನ ಸಾಲ ಹಾಗೂ ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿದರದಲ್ಲೂ ಇಳಿಕೆಯಾಗಲಿದೆ. ಸಾಲ ಪಡೆಯಲು ಇದು ಸಕಾಲವಾಗಿದೆ. ಆರ್ ಬಿಐ ರೆಪೋ ದರ ಕಡಿತ ಘೋಷಿಸುತ್ತಿದ್ದಂತೆಯೇ ಷೇರು ಪೇಟೆ ಪುಟಿದೆದ್ದಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment