2020: ನವದೆಹಲಿ: ದೇಶದೆಲ್ಲೆಡೆ 2020 ಮೇ 17ರ ಭಾನುವಾರ ೩ನೇ ಹಂತದ ದಿಗ್ಬಂಧನ ಮುಕ್ತಾಯಗಕ್ಕೆ ಮುನ್ನವೇ ಕೇಂದ್ರ ಸರ್ಕಾರವು ರಾಷ್ಟ್ರವ್ಯಾಪಿ ದಿಗ್ಬಂಧನವನ್ನು ಮೇ 31ರವರೆಗೆ ವಿಸ್ತರಿಸಲಾಗುವುದು ಎಂದು ಪ್ರಕಟಿಸಿ, ನಾಲ್ಕನೇ ಹಂತದ ದಿಗ್ಬಂಧನ (ಲಾಕ್ ಡೌನ್) ಮಾರ್ಗಸೂಚಿಯನ್ನು ಪ್ರಕಟಿಸಿತು.4ನೇ ಹಂತದ ದಿಗ್ಬಂಧನ ಮಾರ್ಗಸೂಚಿ ಪ್ರಕಾರ ದೇಶಾದ್ಯಂತ ಮೇ ೩೧ರವರೆಗೆ ರೈಲು, ಮೆಟ್ರೋ, ವಿಮಾನ ಸಂಚಾರವನ್ನು ನಿಷೇಧಿಸಲಾಯಿತು. ವೈದ್ಯಕೀಯ ಉಪಕರಣಗಳು ಮತ್ತು ಅಗತ್ಯವಸ್ತುಗಳ ಸಾಗಾಟಕ್ಕೆ ಮಾತ್ರ ವಿಮಾನವನ್ನು ಬಳಸಲು ಅವಕಾಶ ನೀಡಲಾಯಿತು. ಶಾಲೆಗಳು, ಕಾಲೇಜುಗಳು ಮತ್ತಿತರ ಎಲ್ಲ ಶೈಕ್ಷಣಿಕ ಸಂಸ್ಥೆಗಳು ಮೇ ೩೧ರವರೆಗೆ ತೆರೆಯುವಂತಿಲ್ಲ. ಶಾಪಿಂಗ್ ಸಮುಚ್ಚಯಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಆಯಾ ರಾಜ್ಯಗಳ ಕೆಂಪು, ಕಿತ್ತಳೆ, ಹಸಿರು ವಲಯಗಳಲ್ಲಿ ನಿಯಮಗಳನ್ನು ಸಡಿಲಗೊಳಿಸುವ ಮತ್ತು ಬಿಗಿಗೊಳಿಸುವ ನಿರ್ಧಾರವನ್ನು ರಾಜ್ಯ ಸರ್ಕಾರಗಳಿಗೆ ಬಿಡಲಾಯಿತು.ಕೇಂದ್ರ ಗೃಹ ಸಚಿವಾಲಯವು ಕೋವಿಡ್ ಸಂಬಂಧಿತ ರಾಷ್ಟ್ರವ್ಯಾಪಿ ದಿಗ್ಬಂಧನವನ್ನು ವಿಸ್ತರಿಸುವ ಆದೇಶವನ್ನು ಭಾನುವಾರ ಹೊರಡಿಸಿ, ಮಾರ್ಗಸೂಚಿಯನ್ನು ಎಲ್ಲ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಳುಹಿಸಿತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರಕಟಿಸಿದ ೨೦ ಲಕ್ಷ ಕೋಟಿ ರೂಪಾಯಿ ಮತ್ತದ ವಿಶೇಷ ಕೊಡುಗೆಯ ಕೊನೆಯ ಮತ್ತು ಐದನೇ ಕಂತಿನ ವಿವರಗಳನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2020 ಮೇ 17ರ ಭಾನುವಾರ ಪ್ರಕಟಿಸಿದರು. ‘ಪ್ರಧಾನಿ ನರೇಂದ್ರ ಮೋದಿ ಅವರ ಸ್ವಾವಲಂಬಿ ಭಾರತದ ಕನಸನ್ನು ಸಾಕಾರಗೊಳಿಸಲು ಭೂಮಿ, ಕಾರ್ಮಿಕರು, ಹಣಕಾಸು ಲಭ್ಯತೆ ಮತ್ತು ಕಾನೂನುಗಳಲ್ಲಿ ಅಗತ್ಯ ಪರಿವರ್ತನೆ ತರಲಾಗುವುದು. ಇವೆಲ್ಲವೂ ಈ ಕೊಡುಗೆಯಲ್ಲಿ ಸೇರಿವೆ’ ಎಂದು ನಿರ್ಮಲಾ ಹೇಳಿದರು.ಭಾರತೀಯ ಆಹಾರ ನಿಗಮ (ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ), ನಫೇಡ್ ಮತ್ತು ರಾಜ್ಯ ಸರ್ಕಾರಗಳು ಬಡವರಿಗೆ ಮತ್ತು ಅಗತ್ಯವಿರುವವರಿಗೆ ಸಾಕಷ್ಟು ಪ್ರಮಾಣದಲ್ಲಿ ಆಹಾರ ಧಾನ್ಯಗಳನ್ನು ವಿತರಿಸುತ್ತಿವೆ ಎಂದು ಸಚಿವರು ಶ್ಲಾಘಿಸಿದರು.ಉದ್ಯೋಗ ಖಾತ್ರಿ ಯೋಜನೆಗೆ ಹೆಚ್ಚುವರಿ ಅನುದಾನ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು, ವ್ಯವಹಾರ ನಿರ್ವಹಿಸುವುದನ್ನು ಸುಲಭಗೊಳಿಸಲು ನೆರವು ಸೇರಿದಂತೆ ಹಲವು ವಿಚಾರಗಳನ್ನು ನಿರ್ಮಲಾ ಉಲ್ಲೇಖಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment