2020: ನವದೆಹಲಿ: ಕೊರೋನಾವೈರಸ್ ಹರಡದಂತೆ ತಡೆಯುವ ಸಲುವಾಗಿ ವಿಧಿಸಲಾಗಿರುವ ರಾಷ್ಟ್ರವ್ಯಾಪಿ ದಿಗ್ಬಂಧನದಿಂದ ಸಂಕಷ್ಟಕ್ಕೆ ಒಳಗಾದ ರಂಗಗಳಿಗೆ ಎರಡನೇ ಉತ್ತೇಜನ ಕೊಡುಗೆ ನೀಡುವ ಬಗ್ಗೆ ಕೇಂದ್ರ ಸರ್ಕಾರ ತೀವ್ರ ಪರಿಶೀಲನೆ ನಡೆಸುತ್ತಿದೆ ಎಂದು ನಂಬಲರ್ಹ ಮೂಲಗಳು 2020 ಮೇ 02ರ ಶನಿವಾರ ವರದಿ ಮಾಡಿದವು. ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿನ್ನೆಲೆಯಲ್ಲಿ ಶನಿವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಆರ್ಥಿಕ ಸಚಿವಾಲಯದ ಅಧಿಕಾರಿಗಳು ಸೇರಿದಂತೆ ಪ್ರಮುಖ ಸಚಿವಾಲಯಗಳ ಜೊತೆಗೆ ಸರಣಿ ಸಭೆಗಳನ್ನು ನಡೆಸಿದರು. ಪ್ರಧಾನಿಯವರು ಶಾ ಮತ್ತು ಸೀತಾರಾಮನ್ ಅವರ ಜೊತೆಗೆ ಮಾತುಕತೆ ನಡೆಸಿದ್ದು, ಪ್ರಮುಖ ಆರ್ಥಿಕ ಸಚಿವಾಲಯಗಳಾUದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್ ಎಂಇ) ಜೊತೆಗೂ ಸಮಾಲೋಚನೆಗಳನ್ನು ಮುಂದುವೆಸುವರು ಎಂದು ಮೂಲಗಳು ಹೇಳಿದವು. ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ) ಮಾಸಿಕ ಸಂಗ್ರಹದ ವಿವರಗಳ ಪ್ರಕಟಣೆಯನ್ನು ಶುಕ್ರವಾರ ಮುಂದೂಡಿರುವ ಹಣಕಾಸು ಸಚಿವಾಲಯ ಕೂಡಾ ಆರ್ಥಿಕ ಸ್ಥಿತಿಗತಿ ಮತ್ತು ಭಾರತೀಯ ಆರ್ಥಿಕತೆಗೆ ಉತ್ತೇಜನ ನೀಡಲು ತಾನು ಯೋಜಿಸಿರುವ ಉಪಕ್ರಮಗಳ ಬಗ್ಗೆ ವಿಸ್ತೃತ ಮಾಹಿತಿ ನೀಡಲಿದೆ ಎಂದು ಮೂಲಗಳು ಹೇಳಿದವು. ಪ್ರಧಾನಿಯವರು ನಾಗರಿಕ ವಿಮಾನಯಾನ, ಕಾರ್ಮಿಕ, ವಿದ್ಯುಚ್ಛಕ್ತಿ ಸಚಿವಾಲಯಗಳು ಸೇರಿದಂತೆ ವಿವಿಧ ಸಚಿವಾಲಯಗಳ ಜೊತೆಗೆ ಶುಕ್ರವಾರ ಸಭೆಗಳನ್ನು ನಡೆಸಿದ್ದಾರೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಸೇರಿದಂತೆ ವಿವಿಧ ಸಚಿವಾಲಯಗಳ ಜೊತೆ ದೇಶೀಯ ಮತ್ತು ಸಾಗರದಾಚೆಯ ಹೂಡಿಕೆ ಆಕರ್ಷಣೆ ಮತ್ತು ದೇಶದಲ್ಲಿ ಸಣ್ಣ ಉದ್ಯಮಗಳ ಪುನಃಶ್ಚೇತನ ಮೂಲಕ ಚೇತರಿಕೆ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಬಗ್ಗೆ ಚರ್ಚಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಕೊರೋನಾವೈರಸ್ ಸಾಂಕ್ರಾಮಿಕ ಪ್ರಸರಣವನ್ನು ತಡೆಗಟ್ಟಲು ವಿಧಿಸಲಾಗಿರುವ ರಾಷ್ಟ್ರವ್ಯಾಪಿ ದಿಗ್ಬಂಧನವನ್ನು ವಿಸ್ತರಿಸಿದ ಕ್ರಮಕ್ಕೆ ಅನುಗುಣವಾಗಿ ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನ ಯಾನಗಳ ಮೇಲೆ ವಿಧಿಸಲಾಗಿದ್ದ ನಿಷೇಧವನ್ನೂ 2020 ಮೇ 02ರ ಶನಿವಾರ ಮೇ ೧೭ರವರೆಗೆ ವಿಸ್ತರಿಸಲಾಯಿತು. ನಿರ್ಬಂಧವು ಎಲ್ಲ ಅಂತಾರಾಷ್ಟ್ರೀಯ ಸರಕು ಸಾಗಾಟಕ್ಕೆ ಮತ್ತು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು (ಡಿಜಿಸಿಎ) ಅನುಮತಿ ನೀಡಿದ ವಿಶೇಷ ವಿಮಾನ ಯಾನಗಳಿಗೆ ಅನ್ವಯಿಸುವುದಿಲ್ಲ ಎಂದು ಡಿಜಿಸಿಎ ತಿಳಿಸಿತು. ವಿದೇಶೀ ಮತ್ತು ದೇಶೀಯ ವಿಮಾನಯಾನಗಳ ಪುನಾರಂಭದ ವೇಳೆಯನ್ನು ಮುಂದಕ್ಕೆ ತಿಳಿಸಲಾಗುವುದು ಎಂದೂ ಡಿಜಿಸಿಎ ಹೊರಡಿಸಿದ ಸುತ್ತೋಲೆ ಹೇಳಿತು. ಈ ಮಧ್ಯೆ ವಿಮಾನಯಾನ ಸಂಸ್ಥೆಗಳು ಕೋವಿಡ್-೧೯ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಪಾಲಿಸಬೇಕಾದ ನೂತನ ಸಾಮಾಜಿಕ ಅಂತರದ ಬಗ್ಗೆ ಸಿಬ್ಬಂದಿಗೆ ಶಿಕ್ಷಣ ನೀಡಲು ಅಣಕು ಕವಾಯತುಗಳನ್ನು ಆರಂಭಿಸಿದವು. ಪ್ರಧಾನಿ ಮೋದಿಯವರು ಈಗಾಗಲೇ ’ದೋ ಗಜ್ ದೂರಿ’ (ಎರಡು ಯಾರ್ಡ್ ಅಂತರ) ಮಹತ್ವದ ಬಗ್ಗೆ ಒತ್ತು ನೀಡಿದ್ದಾರೆ. ’ದೋ ಗಜ್ ದೂರಿ’ ಎಂಬುದು ಕೋರೋನಾವೈರಸ್ ಸಾಂಕ್ರಾಮಿಕ ವಿರೋಧಿ ಸಮರದಲ್ಲಿ ನಮ್ಮ ಮಂತ್ರವಾಗಬೇಕು ಎಂದು ಮೋದಿ ಹೇಳಿದರು. ಶುಕ್ರವಾರ, ಪ್ರಸಕ್ತ ಹಣಕಾಸು ವರ್ಷಕ್ಕೆ ತನ್ನ ದೇಶೀಯ ವಾಯು ಸಂಚಾರವನ್ನು ೫.೫-೭ ಕೋಟಿ ಇಳಿಸಿ ಪರಿಷ್ಕರಿಸಿದ ಜಾಗತಿಕ ವಾಯುಯಾನ ಸಲಹಾ ಪ್ರಾಧಿಕಾರ ಸಿಎಪಿಎ, ರಚನಾತ್ಮಕ ಹಾನಿ ಮತ್ತು ಗ್ರಾಹಕರ ದುರ್ಬಲ ಮನೋಭಾವ ಎದ್ದು ಕಾಣುತ್ತಿದೆ ಎಂದು ಉಲ್ಲೇಖಿಸಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಕೆಲವು ನಿರ್ದಿಷ್ಟ ಪ್ರದೇಶ ಹಾಗೂ ರಾಜ್ಯಗಳಲ್ಲಿ ಕೊರೊನಾ ವೈರಸ್ ಕ್ಷಿಪ್ರ ಗತಿಯಲ್ಲಿ ಹರಡುತ್ತಿರುವುದರ ಮಧ್ಯೆಯೇ, ಕೊರೋನಾ ಸೋಂಕಿನಿಂದ ಸಂಪೂರ್ಣ ಗುಣಮುಖರಾದವರ ಸಂಖ್ಯೆ ೧೦ ಸಾವಿರದ ಗಡಿ ದಾಟಿದ ಸಂತಸಕರ ಸುದ್ದಿ ಬಂದಿದೆ. ಇದೇ ವೇಳೆಗೆ ಭಾರತದ ವಾಯುಪಡೆ 2020 ಮೇ 02ರ ಭಾನುವಾರ ಕೋವಿಡ್ ಆಸ್ಪತ್ರೆಗಳ ಮೇಲೆ ಪುಷ್ಪವೃಷ್ಠಿ ಮಾಡುವ ಮೂಲಕ ಕೊರೋನಾಯೋಧರನ್ನು ಗೌರವಿಸಲು ಸಜ್ಜಾಯಿತು. ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ವಿಭಾಗವು ನೀಡಿರುವ ಮಾಹಿತಿಯ ಪ್ರಕಾರ ಮೇ ೨ ಶನಿವಾರ ಸಂಜೆಯ ಹೊತ್ತಿಗೆ ದೇಶದಲ್ಲಿ ಕೊರೊನಾ ರೋಗಿಗಳ ಒಟ್ಟು ಸಂಖ್ಯೆ ೩೭,೭೭೬ಕ್ಕೆ ಏರಿಕೆಯಾಗಿದೆ. ಈ ಪೈಕಿ ೧೦,೦೧೮ ಮಂಗಿ ಕೋವಿಡ್ ರೋಗದಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ೧೦,೦೦೦ಕ್ಕೂ ಹೆಚ್ಚು ಮಂದಿ ಗುಣಮುಖರಾದ ಹಿನ್ನೆಲೆಯಲ್ಲಿ ಶನಿವಾರದ ವೇಳೆಗೆ ದೇಶದಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ ೨೬,೫೩೫ ಎಂಬುದಾಗಿ ದಾಖಲಾಗಿದೆ. ಒಟ್ಟು ಪ್ರಕರಣಗಳ ಪೈಕಿ ಈವರೆಗೆ ೧೨೨೩ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮಧ್ಯೆ ಕರ್ನಾಟಕದಲಿ ಶನಿವಾರ ೧೨ ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ರಾಜ್ಯದಲ್ಲಿ ಕೊರೋನಾ ಸೋಂಕಿತರ ಒಟ್ಟು ಪ್ರಕರಣಗಳು ೬೦೧ಕ್ಕೆ ಏರಿಕೆಯಾಗಿವೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ದಿಗ್ಬಂಧನದಿಂದಾಗಿ (ಲಾಕ್ ಡೌನ್) ದೇಶದ ಹಲವು ಭಾಗಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರು ತಮ್ಮ ಮನೆಗಳಿಗೆ ಹಿಂದಿರುಗಲು ಕೇಂದ್ರ ಹಾಗೂ ರಾಜ್ಯ ಸರ್ಕಾರವು ಅವಕಾಶ ಕಲ್ಪಿಸಿದ್ದರೂ, ಅದಕ್ಕೂ ಮುನ್ನ ಕೆಲವರು ಕಾಂಕ್ರೀಟ್ ಮಿಕ್ಸರಿನೊಳಗೆ ಕುಳಿತು ಪಯಣಿಸುವ ಮಾರ್ಗ ಕಂಡು ಕೊಂಡಿದ್ದುದು ಬೆಳಕಿಗೆ 2020 ಮೇ 02ರ ಶನಿವಾರ ಬಂದಿತು. ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ಕಾಂಕ್ರೀಟ್ ಮಿಕ್ಸರ್ ವಾಹನದೊಳಗೆ ಕುಳಿತು ೧೮ ಕಾರ್ಮಿಕರು ಪ್ರಯಾಣಿಸುತ್ತಿದ್ದ ವಿಚಾರ ಇದೀಗ ಬಹಿರಂಗಗೊಂಡಿದೆ ಎಂದು ಸ್ಥಳೀಯ ಅಧಿಕಾರಿಗಳನ್ನು ಉಲ್ಲೇಖಿಸಿದ ವರದಿಯೊಂದು ತಿಳಿಸಿತು. ಪೊಲೀಸರು ವಾಹನವನ್ನು ತಡೆದ ಬಳಿಕ ಕಾಂಕ್ರೀಟ್ ಮಿಕ್ಸರ್ ಟ್ಯಾಂಕರಿನಿಂದ ಕಾರ್ಮಿಕರು ಒಬ್ಬೊಬ್ಬರೇ ಹೊರ ಬರುತ್ತಿರುವ ದೃಶ್ಯ ಸುಮಾರು ೪೧ ಸೆಕೆಂಡ್ಗಳ ವಿಡಿಯೋದಲ್ಲಿ ಸೆರೆಯಾಗಿದೆ. ಈ ಕಾರ್ಮಿಕರು ಮಹಾರಾಷ್ಟ್ರದಿಂದ ಲಖನೌಗೆ ಪ್ರಯಾಣ ಹೊರಟಿದ್ದರು. ಟ್ರಕ್ಕನ್ನು ಪೊಲೀಸ್ ಠಾಣೆಗೆ ಕಳುಹಿಸಲಾಗಿದ್ದು, ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಉಮಾಕಾಂತ್ ಚೌಧರಿ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment