ನಾನು ಮೆಚ್ಚಿದ ವಾಟ್ಸಪ್

Wednesday, May 6, 2020

ಇಂದಿನ ಇತಿಹಾಸ History Today ಮೇ 06

2020: ಶ್ರೀನಗರ: ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಜೊತೆಗೆ  2020 ಮೇ  06ರ ಬುಧವಾರ ನಡೆದ ಗುಂಡಿನ ಘರ್ಷಣೆಯಲ್ಲಿ ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ಭಯೋತ್ಪಾದಕ ರಿಯಾಜ್ ನೈಕೂ ಇತರ ಇಬ್ಬರ ಜೊತೆಗೆ ಹತನಾದ.. ಎಂಟು ವರ್ಷಗಳಿಂದ ಭೂಗತ ಕಾರ್ಯಾಚರಣೆ ನಿರತನಾಗಿದ್ದ ನೈಕೂ ತನ್ನ ಹುಟ್ಟೂರಿನಲ್ಲಿಯೇ ಭದ್ರತಾ ಪಡೆ ಗುಂಡಿಗೆ ಬಲಿಯಾಗಿದ.. ಈತನ ಸಾವಿನ ಹಿನ್ನೆಲೆಯಲ್ಲಿ ಮುಂಜಾಗರೂಕತಾ ಕ್ರಮವಾಗಿ ಕಣಿವೆಯಾದ್ಯಂತ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ನೈಕೂ ಹತ್ಯೆಯ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಸಮಸ್ಯೆ ಉದ್ಭವಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕಣಿವೆಯಾದ್ಯಂತ ಎಚ್ಚರಿಕೆಯ ಕ್ರಮ ವಹಿಸಲಾಗಿದೆ. ಜನರ ಚಲನವಲನಗಳ ಮೇಲೆ ನಿರ್ಬಂಧಗಳನ್ನು ವಿಧಿಸಲಾಗಿದೆ ಎಂದು ಅವರು ಹೇಳಿದರು. ನಿಷೇಧಿತ ಹಿಜ್ಬುಲ್  ಮುಜಾಹಿದೀನ್ ಸಂಘಟನೆಯ ಕಾರ್ಯಾಚರಣಾ ಕಮಾಂಡರ್ ಆಗಿದ್ದ ನೈಕೂನನ್ನು ಪುಲ್ವಾಮ ಜಿಲ್ಲೆಯ ಬೀಗ್ಪೋರಾ ಗ್ರಾಮದಲ್ಲಿ ನಡೆದ ಜಂಟಿ ಕಾರ್ಯಾಚರಣೆಯಲ್ಲಿ ಖೆಡ್ಡಾಕ್ಕೆ ಬೀಳಿಸಲಾಯಿತು ಎಂದು ಅಧಿಕಾರಿಗಳು ನುಡಿದರು. ಇದಕ್ಕೂ ಮುನ್ನ ಪೊಲೀಸ್ ವಕ್ತಾರರು ಘರ್ಷಣೆಯೊಂದರಲ್ಲಿ ಒಬ್ಬ ಉನ್ನತ ಭಯೋತ್ಪಾದಕ ಮತ್ತು ಆತನ ಸಹಚರ ಸಿಕ್ಕಿಹಾಕಿಕೊಂಡಿದ್ದಾನೆ ಎಂದು ಹೇಳಿದ್ದರು. ಆದರೆ ಆತನ ಗುರುತು ಪರಿಚಯದ ವಿವರ ನೀಡಿರಲಿಲ್ಲ. ಬಳಿಕ ಸಿಕ್ಕಿಹಾಕಿಕೊಂಡಿರುವ ಭಯೋತ್ಪಾದಕ ನೈಕೂ ಆಗಿದ್ದು, ಈತನ ತಲೆಗೆ ೧೦ ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದರು. ಪೊಲೀಸರು ಈತನಿಗಾಗಿ ವರ್ಷಗಳಿಂದ ಹುಡುಕಾಟ ನಡೆಸಿದ್ದರು.  (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)

2020:  ನವದೆಹಲಿ: ರಾಷ್ಟ್ರವ್ಯಾಪಿ ದಿಗ್ಬಂಧನವು (ಲಾಕ್ ಡೌನ್) ಎಷ್ಟು ಸಮಯ ಮುಂದುವರೆಯಬೇಕು ಎಂಬುದನ್ನು ನಿರ್ಧರಿಸಲು ಸರ್ಕಾರವು ಯಾವ ಮಾನದಂಡವನ್ನು ಅನುಸರಿಸುತ್ತಿದೆ ಎಂಬುದಾಗಿ ಪಕ್ಷವು ತಿಳಿಯಬಯಸಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು 2020 ಮೇ  06ರ ಬುಧವಾರ ಹೇಳಿದರುಸೋನಿಯಾ ಗಾಂಧಿಯವರು ಕಾಂಗ್ರೆಸ್ ಆಡಳಿತ ಇರುವ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ‘ಮೇ ೧೭ರ ಬಳಿಕ ಏನು? ಮತ್ತು ಮೇ ೧೭ರ ಬಳಿಕ ಹೇಗೆ? ಲಾಕ್ ಡೌನ್ ಎಷ್ಟು ಸಮಯ ಮುಂದುವರೆಯಬೇಕು ಎಂದು ತೀರ್ಮಾನಿಸಲು ಸರ್ಕಾರ ಅನುಸರಿಸುತ್ತಿರುವ ಮಾನದಂಡ ಏನು?’ ಎಂದು ಸೋನಿಯಾ ಪ್ರಶ್ನಿಸಿದರು. ಸಭೆಯಲ್ಲಿ ಹಾಜರಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರುಲಾಕ್ ಡೌನ್ . ಬಳಿಕ ಏನಾಗಲಿದೆ ಎಂಬುದಾಗಿ ನಾವು ತಿಳಿದುಕೊಳ್ಳಬೇಕಾದ ಅಗತ್ಯ ಇದೆಎಂದು ಹೇಳಿದರು. ಸೋನಿಯಾ ಗಾಂಧಿಯವರು ಕೊರೋನಾವೈರಸ್ ಸಾಂಕ್ರಾಮಿಕದ ಪರಿಣಾಮ ಬಗ್ಗೆ ಪಕ್ಷದ ಆಡಳಿತ ಇರುವ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸಿದರು ಮತ್ತು ಸಾಂಕ್ರಾಮಿಕವನ್ನು ತಡೆಯಲು ಕೈಗೊಳ್ಳಲಾಗಿರುವ ಕ್ರಮಗಳ ಅಂದಾಜು ಮಾಡಿದರು. (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)
2020:  ಲಂಡನ್: ಕೋವಿಡ್ -೧೯ ಸೋಂಕಿತ ,೫೦೦ ಕ್ಕೂ ಹೆಚ್ಚು ಜನರ ಮಾದರಿಗಳ ಆನುವಂಶಿಕ ವಿಶ್ಲೇಷಣೆಯಿಂದ  ಕೊರೋನಾವೈರಸ್ ಕಳೆದ ವರ್ಷದ ಕೊನೆಯಲ್ಲಿ ಪ್ರಪಂಚದಾದ್ಯಂತ ವೇಗವಾಗಿ ಹರಡಲು ಆರಂಭಿಸಿದ್ದು, ವೇಳೆಯಲ್ಲೇ ಮಾನವ ದೇಹವನ್ನು ಆಶ್ರಯಿಸಲು ಅದು ಕಲಿತುಕೊಂಡಿತು ಎಂಬುದು ಬೆಳಕಿಗೆ ಬಂದಿದೆ ಎಂದು  ವಿಜ್ಞಾನಿಗಳು 2020 ಮೇ  06ರ ಬುಧವಾರ ಹೇಳಿದರು. ಯೂನಿವರ್ಸಿಟಿ ಕಾಲೇಜ್ ಲಂಡನ್ (ಯುಸಿಎಲ್) ಜೆನೆಟಿಕ್ಸ್ ಇನ್ಸ್ಟಿಟ್ಯೂಟ್ ವಿಜ್ಞಾನಿಗಳು ನಡೆಸಿದ ಅಧ್ಯಯನವು ಕೊರೋನಾವೈರಸ್ಸಿನ (ಎಸ್ಎಆರ್ಎಸ್-ಕೋವಿ -) ಸುಮಾರು ೨೦೦ ಪುನರಾವರ್ತಿತ ಆನುವಂಶಿಕ ರೂಪಾಂತರಗಳನ್ನು ಕಂಡುಹಿಡಿದಿದೆ - ಇದು ಜನರಲ್ಲಿ ಹರಡುವಾಗ ಅದು ಹೇಗೆ ವಿಕಸನಗೊಳ್ಳಬಹುದು ಎಂಬುದನ್ನು ಸೂಚಿಸುತ್ತಿವೆ ಎಂದು ಸಂಶೋಧಕರು ಹೇಳಿದರು.  ಸಂಶೋಧನೆಯ ಸಹ-ನೇತೃತ್ವ ವಹಿಸಿದ್ದ ಯುಸಿಎಲ್ ಪ್ರಾಧ್ಯಾಪಕ ಫ್ರಾಂಕೋಯಿಸ್ ಬಲ್ಲೌಕ್ಸ್, ಸಾರ್ಸ್ ಕೋವ್- ಜಾಗತಿಕ ಆನುವಂಶಿಕ ವೈವಿಧ್ಯತೆಯ ಹೆಚ್ಚಿನ ಪ್ರಮಾಣವು ರೋಗ ಬಾಧಿತವಾದ ದೇಶಗಳಲ್ಲಿ ಕಂಡುಬರುತ್ತದೆ ಎಂದು ಫಲಿತಾಂಶಗಳು ತೋರಿಸಿದೆ ಎಂದು ಹೇಳಿದರು.  ಇದು ಸಾಂಕ್ರಾಮಿಕ ರೋಗದ ಆರಂಭದಿಂದಲೂ ವೈರಸ್ ಜಗತ್ತಿನಾದ್ಯಂತ ವ್ಯಾಪಕವಾಗಿ ಹರಡುತ್ತಿದೆ ಎಂಬುದನ್ನು ಅದು ಸೂಚಿಸುತ್ತದೆ ಎಂದೂ ಸಂಶೋಧಕರು ನುಡಿದರು. (ವಿವರಗಳಿಗೆ  ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ಕೋವಿಡ್ -೧೯ ಯುಗದ ಬಳಿಕ ಸ್ವಾವಲಂಬನೆ ಅಥವಾಸ್ವದೇಶಿಪರ್ಯಾಯ ಆರ್ಥಿಕ ಮಾದರಿ ರೂಪಿಸುವ ಬಗ್ಗೆ ಒತ್ತು ನೀಡಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘವು (ಆರ್ ಎಸ್ ಎಸ್) ಜಾಗತಿಕ ಸಾಂಕ್ರಾಮಿಕ ರೋಗದಮೂಲವನ್ನು ಪತ್ತೆ ಹಚ್ಚಲುವಿಸ್ತೃತ ತನಿಖೆ ನಡೆಯಬೇಕು ಎಂದು  2020 ಮೇ  06ರ ಬುಧವಾರ ಹೇಳಿತು.  ಆರ್ಎಸ್ಎಸ್ ಜಂಟಿ ಪ್ರಧಾನ ಕಾರ್ಯದರ್ಶಿ (ಸಹ ಕಾರ್ಯವಾಹ) ದತ್ತಾತ್ರೇಯ ಹೊಸಬಾಳೆ ಮತ್ತು ವಿದೇಶಿ ಮಾಧ್ಯಮ ವ್ಯಕ್ತಿಗಳ ನಡುವಿನ ಸಂವಾದಕ್ಕೆ ಮುನ್ನ ಸಂಘವು ವಿತರಿಸಿರುವ ಹಿನ್ನೆಲೆ ಟಿಪ್ಪಣಿಯಲ್ಲಿ ಕೆಲವು ವಿಶಾಲ ನೀತಿ ಹಾಗೂ ಸಮಸ್ಯೆಗಳನ್ನು ವಿವರಿಸಲಾಗಿದೆ.  ಸಾಂಕ್ರಾಮಿಕ ರೋಗದ ಮೂಲ, ಕಾರಣ ಮತ್ತು ಪ್ರಭಾವದ ಬಗ್ಗೆ ತನಿಖೆ ನಡೆಸಲು ವಿಸ್ತೃತ ವಿಚಾರಣೆ ನಡೆಸಲಾಗುವುದು ಎಂದು ನಾವು ಆಶಿಸುತ್ತೇವೆ. ಭವಿಷ್ಯದಲ್ಲಿ ಇಂತಹ ವಿಷಮ ಪರಿಸ್ಥಿತಿಯನ್ನು ನಿವಾರಿಸುವ ನಿಟ್ಟಿನಲ್ಲಿ ವ್ಯವಹರಿಸಲು ಜವಾಬ್ದಾರಿಯುತ ವ್ಯಕ್ತಿಗಳು, ಸಂಸ್ಥೆಗಳು ಮತ್ತು ದೇಶಗಳನ್ನು ಒಳಗೊಂಡಂತೆ ಹೊಸ ಪ್ರಭುತ್ವಗಳನ್ನು ಸೃಷ್ಟಿಸಲು ಇಡೀ ಜಗತ್ತು ಒಗ್ಗೂಡಬೇಕುಎಂದು ಟಿಪ್ಪಣಿ ಹೇಳಿದೆ. ಆದರೆ ಎಲ್ಲೂ ಅದು ಚೀನಾ ಹೆಸರನ್ನು ಪ್ರಸ್ತಾಪಿಸಿಲ್ಲ.  ರಾಷ್ಟ್ರೀಯ ಸ್ವಯಂ ಸೇವಕ ಸಂಘವು (ಆರ್ಎಸ್ಎಸ್) ಪ್ರಧಾನಿ ನರೇಂದ್ರ ಮೋದಿಯವರ ಮುಖಂಡತ್ವದಲ್ಲಿ ಕೇಂದ್ರದಲ್ಲಿ ರಚಿಸಲಾಗಿರುವ ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿರುವ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸೈದ್ಧಾಂತಿಕ ಚಿಲುಮೆಯಾಗಿದೆ ಎಂಬುದು ಗಮನಾರ್ಹ.  ಸಾಂಕ್ರಾಮಿಕ ರೋಗದ ನಂತರ ಸರ್ಕಾರದ ಕಾರ್ಯ ಮತ್ತು ಉದ್ದೇಶಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ದೇಶೀಯ ಮತ್ತು ಅಂತರಾಷ್ಟೀಯ ನೀತಿಗಳ ಬಗ್ಗೆ ಆರ್ಎಸ್ಎಸ್ ಟಿಪ್ಪಣಿ ಒತ್ತು ನೀಡಿದೆ.  (ವಿವರಗಳಿಗೆ  ಇಲ್ಲಿ ಕ್ಲಿಕ್ ಮಾಡಿರಿ)

2020: ನವದೆಹಲಿ: ಭಾರತದಲ್ಲಿ ಕೊರೋನಾವೈರಸ್ ಸೋಂಕಿಗೆ ತುತ್ತಾದವರ ಚೇತರಿಕೆ ಪ್ರಮಾಣ ಇನ್ನಷ್ಟು ಹೆಚ್ಚಿದ್ದು,  2020 ಮೇ  06ರ ಬುಧವಾರ  ಶೇಕಡಾ ೨೯ಕ್ಕೆ ಏರಿದೆ. ಇದೇ ವೇಳೆಗೆ ಶೀಘ್ರದಲ್ಲೇ ಕೆಲವು ಮಾರ್ಗಸೂಚಿಗಳೊಂದಿಗೆ ಸಾರ್ವಜನಿಕ ಸಾರಿಗೆ ಆರಂಭದ ವಿಶ್ವಾಸವನ್ನು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ವ್ಯಕ್ತ ಪಡಿಸಿದರು. ಭಾರತದಲ್ಲಿ ಒಟ್ಟು ಕೊರೋನಾವೈರಸ್ ಸೋಂಕಿನ ಪ್ರಕರಣಗಳ ಸಂಖ್ಯೆ ೪೯,೩೯೧ಕ್ಕೆ ಏರಿದ್ದು, ಸಾವಿನ ಸಂಖ್ಯೆ ೧೬೯೪ಕ್ಕೆ ಮುಟ್ಟಿದೆ. ಸುಮಾರು ೧೪,೦೦೦ ಮಂದಿ ರೋಗಿಗಳು ಗುಣಮುಖರಾಗಿದ್ದು, ಭಾರತದಲ್ಲಿ ಕೊರೋನಾವೈರಸ್ ಸೋಂಕಿತರ ಚೇತರಿಕೆ ಪ್ರಮಾಣ ಶೇಕಡಾ ೨೯ಕ್ಕೆ ಏರಿತು. ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ೧೬,೭೫೮ಕ್ಕೆ ತಲುಪಿದ್ದು ಬುಧವಾರ ೧೨೩೩ ಹೊಸ ಪ್ರಕರಣಗಳು ದಾಖಲಾಗಿವೆ.  ತಮಿಳುನಾಡಿನಲ್ಲೂ ೭೭೧ ಹೊಸ ಪ್ರಕರಣಗಳು ದಾಖಲಾಗಿದ್ದು ಪೈಕಿ ೩೨೪ ಪ್ರಕರಣಗಳು ಕೇವಲ ಚೆನ್ನೈ ನಗರದಿಂದ ವರದಿಯಾಯಿತು. ಈ ಮಧ್ಯೆ ಮಾರ್ಚ್ ೨೪ರಂದು ಮೊದಲ ಹಂತದ ರಾಷ್ಟ್ರವ್ಯಾಪಿ ದಿಗ್ಬಂಧನದ (ಲಾಕ್ ಡೌನ್) ಘೋಷಣೆಯಾದ  ಬಳಿಕ ಸಂಪೂರ್ಣವಾಗಿ ಸ್ಥಗಿತಗೊಂಡಿರುವ ಸಾರ್ವಜನಿಕ ಸಾರಿಗೆಯು ಶೀಘ್ರದಲ್ಲೇ ಪುನಾರಂಭಗೊಳ್ಳಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಸಾಗಣೆದಾರರಿಗೆ 2020 ಮೇ  06ರ ಬುಧವಾರ ಭರವಸೆ ನೀಡಿದರು. ಸಾರಿಗೆ ಮತ್ತು ಹೆದ್ದಾರಿಗಳ ಪುನರಾಂಭವು ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೇಳಿದ ಸಚಿವರು, ಕೆಲವು ಮಾರ್ಗಸೂಚಿಗಳೊಂದಿಗೆ ಸಾರ್ವಜನಿಕ ಸಾರಿಗೆಯು ಶೀಘ್ರವೇ ಆರಂಭವಾಗಬಹುದು ಎಂದು ನುಡಿದರು. (ವಿವರಗಳಿಗೆ  ಇಲ್ಲಿ ಕ್ಲಿಕ್ ಮಾಡಿರಿ)

2020: ಟೆಲ್ ಅವೀವ್/ ನವದೆಹಲಿ: ವಿಶ್ವಾದ್ಯಂತ ಮಾನವರನ್ನು ಹೈರಾಣಗೊಳಿಸಿರುವ ಕೊರೋನಾವೈರಸ್ಸಿಗೆ ಇಸ್ರೇಲ್ ವಿಜ್ಞಾನಿಗಳು ಔಷಧ ಅಭಿವೃದ್ಧಿ ಪಡಿಸಿದ್ದು, ಶೀಘ್ರದಲ್ಲೇ ನಾವು ಅದನ್ನು ವಿಶ್ವದ ಜೊತೆಗೆ ಹಂಚಿಕೊಳ್ಳಲಿದ್ದೇವೆ ಎಂದು ಇಸ್ರೇಲ್ ಪ್ರಕಟಿಸಿತು. ಭಾರತದಲ್ಲಿನ ಇಸ್ರೇಲ್ ರಾಯಭಾರಿ ರೋನ್ ಮಲ್ಕಾ ಅವರು ಬುಧವಾರ ಕೋವಿಡ್-೧೯ ಪ್ರತಿಕಾಯಗಳನ್ನು ಅಭಿವೃದ್ಧಿ ಪಡಿಸಿರುವ ಇಸ್ರೇಲಿನ ಸಾಧನೆ ಬಗ್ಗೆ ಪ್ರತಿಕ್ರಿಯಿಸುತ್ತಾ ತಾವು ಔಷಧದ ವಿವರಗಳಿಗಾಗಿ ಕಾದಿರುವುದಾಗಿ ನುಡಿದರು. ಪ್ರಕ್ರಿಯೆ ಇನ್ನೂ ಅಂತಿಮಗೊಂಡಿಲ್ಲ, ನಾವು ಅತ್ಯಂತ ಮುಂದುವರೆದ ಹಂತದಲ್ಲಿ ಇದ್ದೇವೆ. ಹೌದು, ಖಂಡಿತವಾಗಿ, ನಾವು ಅದನ್ನು ವಿಶ್ವದ ಜೊತೆಗೆ ಹಂಚಿಕೊಳ್ಳಲಿದ್ದೇವೆಎಂದು ಮಲ್ಕಾ ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದರು. ಕೊರೋನಾವೈರಸ್ ಬಿಕ್ಕಟ್ಟು ಭಾರತ ಮತ್ತು ಇಸ್ರೇಲನ್ನು ಅತ್ಯಂತ ಸನಿಹಕ್ಕೆ ತಂದಿದೆ. ಕೊರೋನಾವೈರಸ್ ನಿಗ್ರಹದ ಉತ್ತಮ ವಿಧಾನಗಳನ್ನು ನಾವು ಪರಸ್ಪರ ಹಂಚಿಕೊಳ್ಳುತ್ತಿದ್ದೇವೆ ಮತ್ತು ಹೊಸ ಹೊಸ ಪ್ರಕ್ರಿಯೆಗಳನ್ನು ಅಭಿವೃದ್ಧಿ ಪಡಿಸುತ್ತಿದ್ದೇವೆ ಎಂದು ಅವರು ನುಡಿದರು. (ವಿವರಗಳಿಗೆ  ಇಲ್ಲಿ ಕ್ಲಿಕ್ ಮಾಡಿರಿ)

ಇಂದಿನ ಇತಿಹಾಸ  HistoryTodayಮೇ 06  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)




No comments:

Post a Comment