Wednesday, May 23, 2018

ಇಂದಿನ ಇತಿಹಾಸ History Today ಮೇ 22

ಇಂದಿನ ಇತಿಹಾಸ History Today ಮೇ 22
2018: ಮಂಗಳೂರು:ಕೇರಳದಾದ್ಯಂತ ಜನತೆಯನ್ನು ಕಂಗೆಡಿಸಿರುವ ನಿಪಾಹ್ ವೈರಸ್ ಸೋಂಕು ಇದೀಗ ಮಂಗಳೂರಿಗೂ ಕಾಲಿಟ್ಟಿದ್ದು, ಇಬ್ಬರಲ್ಲಿ ಶಂಕಿತ ನಿಫಾ ಸೋಂಕು ಪತ್ತೆಯಾಗಿರುವುದಾಗಿ ವರದಿಯಾಯಿತು. ಮಾರಣಾಂತಿಕ ನಿಪಾಹ್ ವೈರಸ್ ಗೆ ಈಗಾಗಲೇ ಕೇರಳದಲ್ಲಿ 10 ಮಂದಿ ಬಲಿಯಾಗಿದ್ದಾರೆ. ಏತನ್ಮಧ್ಯೆ ಕೇರಳಕ್ಕೆ ಹೊಂದಿಕೊಂಡಿರುವ ದಕ್ಷಿಣ ಕನ್ನಡದಲ್ಲಿಯೂ ನಿಪಾಹ್ ಸದ್ದು ಮಾಡತೊಡಗಿರುವುದು ಜನರಲ್ಲಿ ಆತಂಕಕ್ಕೆ ಎಡೆ ಮಾಡಿಕೊಟ್ಟಿತು. ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಓರ್ವ ಕೇರಳ ಹಾಗೂ ಓರ್ವ ಮಂಗಳೂರು ಮೂಲದ ವ್ಯಕ್ತಿಯಲ್ಲಿ ಶಂಕಿತ ನಿಪಾಹ್ ಸೋಂಕು ಪತ್ತೆಯಾಗಿರುವುದಾಗಿ ವರದಿ ತಿಳಿಸಿತು.  ಇಬ್ಬರ ರಕ್ತದ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ವರದಿ ಹೇಳಿತು. ಕೇರಳದಿಂದ ಹೆಚ್ಚಿನ ಜನರು ಮಂಗಳೂರು, ಕೊಲ್ಲೂರು ಸೇರಿದಂತೆ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಹೆಚ್ಚಿನ ನಿಗಾ ವಹಿಸುವಂತೆ ಜಿಲ್ಲಾ ಆರೋಗ್ಯ ಇಲಾಖೆ ಆಸ್ಪತ್ರೆಗಳಿಗೆ ಸೂಚನೆ ನೀಡಿತು. ರೋಗದ ಲಕ್ಷಣಗಳೇನು? ದೇಹಕ್ಕೆ ಪ್ರವೇಶಿಸಿದ 7-14 ದಿನಗಳಲ್ಲಿ ನಿಶ್ಚಲವಾಗಿರುವ ವೈರಸ್‌, ನಂತರ ವೇಗವಾಗಿ ಹರಡುತ್ತದೆ. ಮಿದುಳು ಊತ, ಹಠಾತ್ಜ್ವರ, ಉಸಿರು ಕಡಿಮೆಯಾಗುವುದು, ರಕ್ತದೊತ್ತಡ ಕಡಿಮೆಯಾಗುವುದು, ತಲೆನೋವು, ಮಿದುಳಿನ ಉರಿಯೂತ, ಅಮಲು, ಶ್ವಾಸಕೋಶ ಸೋಂಕು ಮುಂತಾದ ಗುಣಲಕ್ಷಣ ಕಾಣಿಸಿಕೊಳ್ಳುತ್ತದೆ. ವಿಶಿಷ್ಟ ಪ್ರಭೇದದ ವೈರಸ್‌:  *ಪ್ಯಾರಾಮಿಕ್ಸೋವಿರಿಡೆ ಪ್ರಭೇದದ ವೈರಸ್  *ಭಾರತದಲ್ಲಿ ಹಲವು ಬಾರಿ ಕಾಣಿಸಿಕೊಂಡ ವೈರಸ್  * 1998ರಲ್ಲಿ ಮಲೇಷಿಯಾದಲ್ಲಿ ಮೊದಲಿಗೆ ಪತ್ತೆ  *2001ರಲ್ಲಿ ಬಾಂಗ್ಲಾದಲ್ಲಿ, ನಂತರ ಪಶ್ಚಿಮ  ಬಂಗಾಳದ ಸಿಲಿಗುರಿಯಲ್ಲಿ ಕಾಣಿಸಿದ ವೈರಸ್‌.

2018: ಧರ್ಮಸ್ಥಳ/ ಶೃಂಗೇರಿ: ಧರ್ಮಸ್ಥಳ ಮತ್ತು ಶೃಂಗೇರಿಗೆ ಪತ್ನಿ ಅನಿತಾ ಕುಮಾರ ಸ್ವಾಮಿ ಅವರ ಜೊತೆಗೆ ಭೇಟಿ ನೀಡಿದ ರಾಜ್ಯದ ನಿಯೋಜಿತ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರು ಧರ್ಮಸ್ಥಳದಲ್ಲಿ ಮಂಜುನಾಥೇಶ್ವರ ಸ್ವಾಮಿ ಮತ್ತು ಶೃಂಗೇರಿಯಲ್ಲಿ ಶಾರದಾಂಬೆಗೆ ಪೂಜೆ ಸಲ್ಲಿಸಿದರು.  ಈ ಸಂದರ್ಭದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು ಸಂಪುಟ ರಚನೆಗೆ ಸಂಬಂಧಿಸಿದಂತೆ ಯಾವುದೇ ಅಸಮಾಧಾನ, ಸಮಸ್ಯೆಗಳು ಇಲ್ಲ ಎಂದು ಹೇಳಿದರು. ಆದರೆ ರೈತ ಸಾಲ ಮನ್ನಾ ಕುರಿತ ತಮ್ಮ ಚುನಾವಣಾ ಪ್ರಣಾಳಿಕೆಯ ಭರವಸೆ ಈಡೇರಿಸುವ ಬಗ್ಗೆ ಖಚಿತತೆ ನೀಡಲಿಲ್ಲ.  ‘ಸಂಪುಟ ರಚನೆ ಬಗ್ಗೆ ಉಭಯ ಪಕ್ಷಗಳು ಇನ್ನೂ ಮಾತುಕತೆ ನಡೆಸಿಲ್ಲ  ಎಂದು ಧರ್ಮಸ್ಥಳದಲ್ಲಿ ಮಂಜುನಾಥೇಶ್ವರ ಸ್ವಾಮಿ ದರ್ಶನದ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಜನತಾದಳ (ಎಸ್) ನಾಯಕ ನುಡಿದರು. ’ಸಂಪುಟ ರಚನೆಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಬಂದಿರುವ ವರದಿಗಳು ನೈಜ ಸ್ಥಿತಿಯನ್ನು ಆಧರಿಸಿದ್ದಲ್ಲ ಎಂದೂ ಹೇಳಿದರು. ಎತ್ತಿನಹೊಳೆ ನದಿ ನೀರಿನ ತಿರುವು ಯೋಜನೆ ಕುರಿತು ಕರಾವಳಿ ಕರ್ನಾಟಕದಲ್ಲಿ ಇರುವ ಕಳವಳ ಬಗ್ಗೆ ಪ್ರಸ್ತಾಪಿಸಿದ ಕುಮಾರ ಸ್ವಾಮಿ, ನದಿ ನೀರು ತಿರುವು ಯೋಜನೆ ಹೆಸರಿನಲ್ಲಿ ಯಾವುದೇ ಅಕ್ರಮಗಳಿಗೆ ಅವಕಾಶ ನೀಡುವುದಿಲ್ಲ ಎಂದು ನುಡಿದರು.  ತಮ್ಮ ಕುಟುಂಬವು ಸರ್ವಶಕ್ತನನ್ನು ಮೊದಲಿನಿಂದಲೇ ನಂಬುತ್ತಾ ಬಂದಿದೆ. ಸರ್ವಶಕ್ತನ ಕೃಪೆಯಿಂದಲೇ ತಮ್ಮ ಸರ್ಕಾರದ ರಚನೆಯಾಗುತ್ತಿದೆ ಎಂಬುದು ತಮ್ಮ ನಂಬಿಕೆ ಎಂದು ನುಡಿದ ನಿಯೋಜಿತ ಮುಖ್ಯಮಂತ್ರಿ ಭಗವಂತನಲ್ಲಿ ನನ್ನ ವೈಯಕ್ತಿಕ ಲಾಭಕ್ಕಾಗಿ ಯಾವುದೇ ಬೇಡಿಕೆಯೂ ಇಲ್ಲ, ತಮ್ಮ ಸರ್ಕಾರದಿಂದ ಜನರ ನಿರೀಕ್ಷೆಗಳು ಈಡೇರುವ ನಿಟ್ಟಿನಲ್ಲಿ ಮತ್ತು ಕೃಷಿ ಸಮೃದ್ಧಿಗಾಗಿ ಉತ್ತಮ ಮಳೆಯಾಗುವಂತೆ ಭಗವಂತನನ್ನು ಪ್ರಾರ್ಥಿಸಿದುದಾಗಿ ಹೇಳಿದರು.  ತಮ್ಮ ಸರ್ಕಾರವು ಮುಂದಿನ ಐದು ವರ್ಷಗಳ ಅವಧಿಗೆ ಸ್ಥಿರ ಸರ್ಕಾರವನ್ನು ನೀಡುವುದು ಮತ್ತು ಸಾಮಾನ್ಯ ಜನರಿಗೆ ಹೆಚ್ಚುವರಿ ತೆರಿಗೆ ಹೊರೆಯನ್ನು ವಿಧಿಸದೆಯೇ ಕಲ್ಯಾಣ ಕಾರ್‍ಯಕ್ರಮಗಳನ್ನು ಜಾರಿಗೊಳಿಸುವುದು ಎಂದು ಕುಮಾರ ಸ್ವಾಮಿ ನುಡಿದರು.  ಅಪವಿತ್ರ ಮೈತ್ರಿಯನ್ನು ಮಾಡಿಕೊಂಡು ಪ್ರಸ್ತಾಪಿತ ಸರ್ಕಾರದ ರಚನೆಯಾಗುತ್ತಿದೆ ಎಂಬ ಆರೋಪಕ್ಕೆ ’ರಾಜಕೀಯದಲ್ಲಿ ಪವಿತ್ರ, ಅಪವಿತ್ರ ಎಂಬುದಿಲ್ಲ. ಅಗತ್ಯ ಸಂಖ್ಯೆಯ ಶಾಸಕರು ಇದ್ದಲ್ಲಿ ಸರ್ಕಾರ ಉಳಿಯುತ್ತದೆ ಎಂದು ಅವರು ಹೇಳಿದರು.  ಕರಾವಳಿ ಕರ್ನಾಟಕದಲ್ಲಿ ಸಂಭವಿಸುತ್ತಿರುವ ಘರ್ಷಣೆಗಳನ್ನು ಪ್ರಸ್ತಾಪಿಸಿದ ಕುಮಾರ ಸ್ವಾಮಿ, ’ಸಣ್ಣಪುಟ್ಟ ಘಟನೆಗಳು ಘರ್ಷಣೆಗಳಿಗೆ ಕಾರಣವಾಗುತ್ತಿವೆ. ಇದು ಸಮಾಜಕ್ಕೆ ಒಳ್ಳೆಯದಲ್ಲ. ಯುವ ಜನಾಂಗ ಇಂತಹ ಘರ್ಷಣೆಗಳಲ್ಲಿ ಶಾಮೀಲಾಗುವ ಬದಲು ಭವಿಷ್ಯದ ಬಗ್ಗೆ ಬೆಳಕು ಚೆಲ್ಲಬೇಕು ಎಂದು ಹೇಳಿದರು. ಏನಾದರೂ ಸಮಸ್ಯೆ ಇದ್ದರೆ ಇತ್ಯರ್ಥಕ್ಕಾಗಿ ಅವರು ತಮ್ಮನ್ನು ಭೇಟಿ ಮಾಡಬಹುದು ಎಂದು ಸ್ವಾಮಿ ನುಡಿದರು.  ಹೆಲಿಕಾಪ್ಟರ್ ಮೂಲಕ ಧರ್ಮಸ್ಥಳಕ್ಕೆ ಬಂದ ಕುಮಾರ ಸ್ವಾಮಿ ಅವರನ್ನು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಸ್ವಾಗತಿಸಿದರು. ಬಳಿಕ ಕುಮಾರ ಸ್ವಾಮಿ ಮತ್ತು ಪತ್ನಿ ಅನಿತಾ ಕುಮಾರ ಸ್ವಾಮಿ ಮಂಜುನಾಥೇಶ್ವರನ ದರ್ಶನ ಪಡೆದು ಶೃಂಗೇರಿಗೆ ತೆರಳಿದರು.  ಶೃಂಗೇರಿಯಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು ’ಸಾಲ ಮನ್ನಾ ವಿಚಾರದಲ್ಲಿ ಗೊಂದಲ ಬೇಡ. ಸಂಪೂರ್ಣ ಬಹುಮತ ಜೆಡಿಎಸ್‌ಗೆ ಬಂದಿದ್ದರೆ ಸಾಲ ಮನ್ನಾ ಮಾಡುತ್ತಿದ್ದೆ. ಆದರೆ ಈಗ ಸಮ್ಮಿಶ್ರ ಸರ್ಕಾರ ಬಂದಿರುವುದರಿಂದ ಕಾಂಗ್ರೆಸ್‌ನವರನ್ನು ಈ ಬಗ್ಗೆ ಕೇಳಬೇಕಿದೆ ಎಂದು ಹೇಳಿದರು. ‘ವಿಶ್ವಾಸಮತ ಯಾಚನೆಯಾದ ಬಳಿಕ ರೈತನ ಉಳಿವಿಗಾಗಿ ನಮ್ಮ ಪ್ರಣಾಳಿಕೆಯಲ್ಲಿ ಹೇಳಿದ ಹಾಗೂ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ಹೇಳಿದ ಅಂಶಗಳನ್ನು ಜಾರಿಗೊಳಿಸುತ್ತೇನೆ ಎಂದು ಕುಮಾರ ಸ್ವಾಮಿ ನುಡಿದರು.  ‘ಬಹುಮತದೊಂದಿಗೆ ಅಧಿಕಾರ ಕೊಟ್ಟರೆ ಸಾಲ ಮನ್ನಾ ಮಾಡುತ್ತೇನೆ ಎಂದಿದ್ದೆ. ಜನರಿಗೆ ಸಾಲ ಮನ್ನಾ ಬೇಕಿರಲಿಲ್ಲ, ಹಾಗಾಗಿ ನಿಮ್ಮನ್ನು ತಿರಸ್ಕರಿಸಿದ್ದಾರೆ ಎಂದು ಕೆಲವರು ಕೇವಲವಾಗಿ ಮಾತನಾಡುತ್ತಿದ್ದಾರೆ ಎಂದು ಕುಮಾರ ಸ್ವಾಮಿ ಹೇಳಿದರು.   ಜೆಡಿಎಸ್ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದ ೨೪ ಗಂಟೆಗಳ ಒಳಗೆ ರೈತರು ಮಾಡಿರುವ ಎಲ್ಲಾ  ಬಗೆಯ ಕೃಷಿ ಸಾಲವನ್ನು ಒಂದೇ ಹಂತದಲ್ಲಿ ಮನ್ನಾ ಮಾಡುವ ಬಗ್ಗೆ ಘೋಷಿಸಲಾಗಿತ್ತು. ಒಟ್ಟು ೫೩, ೦೦೦ ಕೋಟಿ ರೂ ಸಾಲ ಮನ್ನಾ ಮಾಡುವುದಾಗಿ ಘೋಷಿಸಲಾಗಿತ್ತು. ಆದರೆ ಕುಮಾರ ಸ್ವಾಮಿ ಅವರ ಈದಿನದ ಹೇಳಿಕೆ ರೈತ ಸಾಲ ಮನ್ನಾ ಬಗ್ಗೆ ಅನುಮಾನಗಳನ್ನು ಮೂಡಿಸಿತು.

2018:  ಚೆನ್ನೈ: ತಮಿಳುನಾಡಿನ ತೂತುಕುಡಿಯಲ್ಲಿ ವೇದಾಂತ ಸ್ಟೆರ್ ಲೈಟ್ ತಾಮ್ರದ ಘಟಕವನ್ನು ಮುಚ್ಚುವಂತೆ ಆಗ್ರಹಿಸಿ ಕಳೆದ ಹಲವಾರು ತಿಂಗಳುಗಳಿಂದ ನಡೆಯುತ್ತಿರುವ ಪ್ರತಿಭಟನೆ ಹಿಂಸೆಗೆ ತಿರುಗಿ, ಪೊಲೀಸರು ನಡೆಸಿದ ಗೋಲೀಬಾರಿಗೆ 13 ಮಂದಿ ಬಲಿಯಾಗಿ ೩೦ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಸುಮಾರು ೫೦೦೦ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಪ್ರತಿಭಟನಕಾರರು ತಮ್ಮನ್ನು ಸ್ಟೆರ್ ಲೈಟ್ ಘಟಕದತ್ತ ಮೆರವಣಿಗೆ ನಡೆಸದಂತೆ ನಿರ್ಬಂಧಿಸಿದ ಬಳಿಕ ಪೊಲೀಸ್ ವಾಹನಗಳ ಮೇಲೆ ಕಲ್ಲು ತೂರುವುದರ ಜೊತೆಗೆ ಅವುಗಳನ್ನು ಉರುಳಿಸಿ ಬೆಂಕಿ ಹಚ್ಚಿದ ದೃಶ್ಯಗಳು ಕಂಡು ಬಂದವು.  ಉದ್ರಿಕ್ತ ಗುಂಪನ್ನು ಚದುರಿಸಲು ಪೊಲೀಸರು ಬೆತ್ತಪ್ರಹಾರ, ಆಶ್ರುವಾಯ ಶೆಲ್ ಬಳಸಿದರು. ಹಿಂಸಾಚಾರ ನಿಯಂತ್ರಣ ಮೀರಿದಾಗ ಪ್ರತಿಭಟನಕಾರರ ವಿರುದ್ಧ ಪೊಲೀಸರು ಗುಂಡು ಹಾರಿಸಿದರು. ಪರಿಣಾಮವಾಗಿ ಹಲವಾರು ಮಂದಿ ಸಾವನ್ನಪ್ಪಿದರು.  ಜಿಲ್ಲಾಧಿಕಾರಿಯ ಕಚೇರಿ ಒಳಗಿನ ವಾಹನಗಳಿಗೆ ಉದ್ರಿಕ್ತ ಗುಂಪು ಬೆಂಕಿ ಹಚ್ಚಿತು. ಪರಿಸ್ಥಿತಿ ಪ್ರಕ್ಷುಬ್ಧಗೊಂಡದ್ದನ್ನು ಅನುಸರಿಸಿ ಪೊಲೀಸರು ಹೆಚ್ಚುವರಿ ಪಡೆಗಳನ್ನು ಕಳುಹಿಸುವಂತೆ ಕೋರಿದರು. ತತ್ ಕ್ಷಣವೇ ಸುಮಾರು ೨೦೦೦ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಸಮೀಪದ ಜಿಲ್ಲೆಗಳಿಂದ ತೂತುಕುಡಿಯತ್ತ ಸಾಗಿದರು.  ‘ತೂತುಕುಡಿಯ ಜನ ಚಿಂತಿತರಾಗಬೇಕಾಗಿಲ್ಲ. ನಾವು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಯತ್ನಿಸುತ್ತಿದ್ದು ಈಗಾಗಲೇ ಅದು ಬಹುತೇಕ ನಿಯಂತ್ರಣಕ್ಕೆ ಬಂದಿದೆ ಎಂದು ತಮಿಳುನಾಡು ಡಿಜಿಪಿ ಟಿ ಕೆ ರಾಜೇಂದ್ರನ್ ಹೇಳಿದರು. ವೇದಾಂತ ಸ್ಟೆರ್ ಲೈಟ್ ಘಟಕದಿಂದಾಗಿ ಪ್ರದೇಶದ ಅಂತರ್ಜಲ ಕಲುಷಿತಗೊಂಡಿದೆ ಎಂದು ಆಪಾದಿಸಿ ಸ್ಥಳೀಯರು ಘಟಕದ ವಿಸ್ತರಣೆ ವಿರುದ್ಧ ಹಲವಾರು ತಿಂಗಳುಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ಘಟಕವನ್ನು ತತ್ ಕ್ಷಣ ಮುಚ್ಚಬೇಕು ಎಂದೂ ಅವರು ಆಗ್ರಹಿಸುತ್ತಾ ಬಂದಿದ್ದರು.  ಮದ್ರಾಸ್ ಹೈಕೋರ್ಟ್ ಆದೇಶದ ಪ್ರಕಾರ ಸ್ಟೆರ್ ಲೈಟ್ ಘಟಕದ ಸುತ್ತಮುತ್ತ  ಅಪರಾಧ ದಂಡ ಸಂಹಿತೆಯ ಸೆಕ್ಷನ್ ೧೪೪ನ್ನು ಜಾರಿಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಪೊಲೀಸ್ ಗೋಲೀಬಾರ್ ಘಟನೆಯನ್ನು ಡಿಎಂಕೆ ಕಾರ್ಯಾಧ್ಯಕ್ಷ ಎಂಕೆ ಸ್ಟಾಲಿನ್, ರಾಜಕೀಯದತ್ತ ಮುಖಮಾಡಿರುವ ಚಿತ್ರನಟ ರಜನೀಕಾಂತ್, ಮಕ್ಕಳ್ ನೀಧಿ ಮಯ್ಯಮ್ ಮುಖ್ಯಸ್ಥ ಕಮಲಹಾಸನ್, ಎಂಡಿಎಂಕೆ ಮುಖ್ಯಸ್ಥ ವೈಕೋ ಮತ್ತಿತರರು ಖಂಡಿಸಿದರು. ಘರ್ಷಣೆಗೆ ಎಐಎಡಿಎಂಕೆ ಸರ್ಕಾರವೇ ಹೊಣೆ ಎಂದು ಡಿಎಂಕೆ ಹೇಳಿದೆ. ’ಎಐಎಡಿಎಂಕೆ ಸರ್ಕಾರವು ತೂತುಕುಡಿ ಹಿಂಸಾಚಾರಕ್ಕೆ ಹೊಣೆ. ಪ್ರದೇಶದ ಜನರ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ಬಗ್ಗೆ ಅವರು ಎಂದೂ ಚಿಂತಿಸಲಿಲ್ಲ. ಈ ಬಗ್ಗೆ ಅವರು ಸಂಪೂರ್ಣ ನಿರ್ಲಕ್ಷ್ಯ ತಾಳಿದ್ದರು. ಪ್ರತಿಭಟನೆ ಬಗ್ಗೆ ಸಂಪೂರ್ಣ ಅರಿವಿದ್ದರೂ ಸಾಕಷ್ಟು ಭದ್ರತೆ ಒದಗಿಸದೇ ಇದ್ದುದಕ್ಕಾಗಿ ನಾನು ಸರ್ಕಾರವನ್ನು ಪ್ರಬಲವಾಗಿ ಖಂಡಿಸುತ್ತೇನೆ ಎಂದು ಡಿಎಂಕೆ ಕಾರ್ಯಾಧ್ಯಕ್ಷ ಎಂ.ಕೆ. ಸ್ಟಾಲಿನ್ ಟ್ವೀಟ್ ಮಾಡಿದರು. ಈ ಪ್ರತಿಭಟನೆಗಳನ್ನು ಅನುಸರಿಸಿ ತಮಿಳುನಾಡು ಸರ್ಕಾರವು ತತ್ ಕ್ಷಣವೇ ಸ್ಟೆರ್ ಲೈಟ್ ಘಟಕವನ್ನು ಮುಚ್ಚಬೇಕು ಎಂದು ಅವರು ಆಗ್ರಹಿಸಿದರು.  ಹಿಂಸಾಚಾರವನ್ನು ಖಂಡಿಸಿದ ರಜನೀಕಾಂತ್ ’ಈ ಸರ್ಕಾರವು ಜನರ ಭಾವನೆಗಳನ್ನು ಗೌರವಿಸುತ್ತಿಲ್ಲ.  ಸರ್ಕಾರದ ನೀರಸ ವರ್ತನೆ ಮುಗ್ಧ ಜನರ ಸಾವಿಗೆ ಕಾರಣವಾಯಿತು. ಈ ಸಾವುಗಳಿಗೆ ಸರ್ಕಾರವೇ ಹೊಣೆ ಎಂದು ರಜನೀಕಾಂತ್ ಟ್ವೀಟ್ ಮಾಡಿದರು. ಚಿತ್ರನಟ ಕಮಲಹಾಸನ್ ಅವರ ಮಕ್ಕಳ್ ನೀಧಿ ಮಯ್ಯಮ್ ಕೂಡಾ ತೂತುಕುಡಿ ಪೊಲೀಸ್ ಗೋಲಿಬಾರನ್ನು ಖಂಡಿಸಿತು. ’ನ್ಯಾಯಕ್ಕಾಗಿ ಸ್ಟೆರಿಲೈಟ್ ವಿರುದ್ಧ ನಡೆಯುತ್ತಿದ್ದ ಜನರ ಶಾಂತಿಯುತ ಪ್ರತಿಭಟನೆಯನ್ನು ಸರ್ಕಾರ ನಿರ್ಲಕ್ಷಿಸಿತು. ಈ ದುರದೃಷ್ಟಕರ ಸಾವುಗಳಿಗೆ ಸರ್ಕಾರದ ನಿರ್ಲಕ್ಷವೇ ಹೊಣೆ. ನಾಗರಿಕರು ಕ್ರಿಮಿನಲ್ ಗಳಲ್ಲ. ಪ್ರಾಣಕಳೆದುಕೊಂಡವರು ಈ ಮುಗ್ಧ ಜನ- ಮೊದಲು ಸ್ಟೆರಿಲೈಟ್ ಪರಿಣಾಮವಾಗಿ, ಈಗ ಸರ್ಕಾರದ ಆದೇಶಗಳ ಪರಿಣಾಮವಾಗಿ. ಎಲ್ಲರೂ ಶಾಂತಿ ಕಾಯ್ದುಕೊಳ್ಳಬೇಕು ಎಂದು ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಟ್ವೀಟ್ ಮಾಡಿದರು. ಎಂಡಿಎಂಕೆ ಮುಖ್ಯಸ್ಥ ವೈಕೋ ಅವರೂ ಪ್ರತಿಭಟನಕಾರರ ಮೇಲಿನ ದಾಳಿಯನ್ನು ಖಂಡಿಸಿದರು. ತೂತುಕುಡಿಯ ಸ್ಟೆರ್ ಲೈಟ್ ತಾಮ್ರ ಘಟಕವು ವೇದಾಂತ ಲಿಮಿಟೆಡ್ ಗೆ ಸೇರಿದ ಕೈಗಾರಿಕೆಯಾಗಿದ್ದು ವಾರ್ಷಿಕ ೪,೦೦,೦೦೦ ಟನ್ ತಾಮ್ರ ಉತ್ಪಾದನೆಯನ್ನು ನಿರ್ವಹಿಸುತ್ತಿದೆ.

2018: ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರ ಶೇಖರ ರಾವ್ (ಕೆಸಿಆರ್) ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಎಚ್.ಡಿ ಕುಮಾರ ಸ್ವಾಮಿ ಅವರು ಪ್ರಮಾಣವಚನ ಸ್ವೀಕರಿಸಲಿರುವ ಸಮಾರಂಭಕ್ಕೆ ಗೈರು ಹಾಜರಾಗಲಿದ್ದಾರೆ. ಬದಲಿಗೆ ಒಂದು ದಿನ ಮೊದಲೇ ಜೆಡಿ(ಎಸ್) ನಾಯಕನನ್ನು ಭೇಟಿ ಮಾಡಲು ಅವರು ನಿರ್ಧರಿಸಿದರು. ರಾವ್ ಅವರು ಈದಿನ ಸಂಜೆ ಬೆಂಗಳೂರು ಪಯಣಕ್ಕೆ ಕಾರ್ಯಕ್ರಮ ನಿಗದಿ ಮಾಡಿಕೊಂಡಿದ್ದು, ಆ ರಾತ್ರಿಯೇ ಹೈದರಾಬಾದಿಗೆ ವಾಪಸಾದರು.  ‘ಅತ್ಯಂತ ಪ್ರಮುಖವಾದ ಪೂರ್ವ ನಿಗದಿತ ಕಾರ್‍ಯಕ್ರಮಗಳ ಕಾರಣ ರಾವ್ ಅವರು ಕುಮಾರ ಸ್ವಾಮಿ ಪ್ರಮಾಣವಚನ ಸಮಾರಂಬಕ್ಕೆ ಹಾಜರಾಗುವುದಿಲ್ಲ ಎಂದು ಮುಖ್ಯಮಂತ್ರಿಯವರ ಕಚೇರಿ ತಿಳಿಸಿತು. ಏನಿದ್ದರೂ ಕಾಂಗ್ರೆಸ್ ಪಕ್ಷದ ನಾಯಕರ ಜೊತೆ ವೇದಿಕೆ ಹಂಚಿಕೊಳ್ಳಲು ಬಯಸುತ್ತಿಲ್ಲವಾದ ಕಾರಣ ಅವರು ಕುಮಾರಸ್ವಾಮಿ ಪ್ರಮಾಣವಚನ ಸಮಾರಂಭಕ್ಕೆ ಹಾಜರಾಗದಿರಲು ನಿರ್ಧರಿಸಿದ್ದಾರೆ ಎಂದು ಊಹಿಸಲಾಗಿದೆ. ತೆಲಂಗಾಣ ರಾಷ್ಟ್ರ ಸಮಿತಿಗೆ ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷವೇ ಪ್ರಬಲ ಪ್ರತಿಸ್ಪರ್ಧಿಯಾಗಿದೆ.  ೨೦೧೯ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಫೆಡರಲ್ ಫ್ರಂಟ್ ರಚಿಸುವ ಕಲ್ಪನೆಯನ್ನು ಪ್ರಪ್ರಥಮವಾಗಿ ಹುಟ್ಟು ಹಾಕಿದ್ದೇ ಚಂದ್ರಶೇಖರ ರಾವ್, ಆದರೆ ಜೆಡಿ(ಎಸ್) ಕಾಂಗ್ರೆಸ್ ಜೊತೆಗೆ ಚುನಾವಣೋತ್ತರ ಮೈತ್ರಿ ಮಾಡುಕೊಳ್ಳಲು ನಿರ್ಧರಿಸಿದ್ದು ತೆಲಂಗಾಣ ರಾಷ್ಟ್ರ ಸಮಿತಿಗೆ (ಟಿಆರ್ ಎಸ್) ಇರುಸು ಮುರುಸು ಉಂಟು ಮಾಡಿತು.  ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳಿಗೆ ಮುಂಚಿತವಾಗಿ ಕಾಂಗ್ರೆಸ್ ನಾಯಕರರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರ ಜೊತೆ ವೇದಿಕೆ ಹಂಚಿಕೊಳ್ಳಲು ಇಷ್ಟವಿಲ್ಲದ ಕೆಸಿಆರ್ ಈ ಕಾರಣಕ್ಕಾಗಿಯೇ ದಕ್ಷಿಣ ರಾಜ್ಯದಲ್ಲಿ ವಿರೋಧ ಪಕ್ಷಗಳ ಚೊಚ್ಚಲ ಬಲಪ್ರದರ್ಶನದಿಂದ ತಪ್ಪಿಸಿಕೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಯಿತು.  ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಲ್ಲದೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.  ತಮ್ಮ ’ಫೆಡರಲ್ ಫ್ರಂಟ್ ಗೆ ಬೆಂಬಲ ಗಳಿಸುವ ಸಲುವಾಗಿ ಕೆ ಸಿಆರ್ ಅವರು ಭೇಟಿ ಮಾಡಿದ್ದ ಪ್ರಾದೇಶಿಕ ನಾಯಕರಲ್ಲಿ ಕುಮಾರ ಸ್ವಾಮಿ ಅವರೂ ಒಬ್ಬರಾಗಿದ್ದರು. ಕರ್ನಾಟಕದ ತೆಲುಗು ಮತದಾರರಿಗೆ ಜೆಡಿ(ಎಸ್) ಬೆಂಬಲಿಸುವಂತೆಯೂ ಅವರು ಕರೆ ನೀಡಿದ್ದರು.  ಬಿಜೆಪಿ ಟೀಕೆ: ಕೆಸಿಆರ್ ಕ್ರಮಕ್ಕೆ ಪ್ರತಿಕ್ರಿಯೆ ವ್ಯಕ್ತ ಪಡಿಸಿರುವ ಬಿಜೆಪಿ, ’ಫೆಡರಲ್ ಫ್ರಂಟ್ ಕಲ್ಪನೆಯು ಬಿಜೆಪಿ ವಿರುದ್ಧ ಪಕ್ಷಗಳು ಒಂದಾಗುವುದರ ಹೊರತು ಬೇರೇನೂ ಅಲ್ಲ ಎಂದು ಹೇಳಿತು. ‘ಕೆಸಿಆರ್ ಜನತಾ ದಳ(ಎಸ್)ವನ್ನು ಬೆಂಬಲಿಸಿತು. ಈಗ ಅವರು ಕಾಂಗ್ರೆಸ್ ಜೊತೆ ಸೇರಿದ್ದಾರೆ. ಜೆಡಿ(ಎಸ್) ಮತ್ತು ಕಾಂಗ್ರೆಸ್ ತಮ್ಮ ಶಾಸಕರಿಗೆ ’ಬೇಟೆಯಿಂದ ರಕ್ಷಣೆ ಒದಗಿಸಲು ಟಿಆರ್‌ಎಸ್ ಬೆಂಬಲದೊಂದಿಗೆ ಹೈದರಾಬಾದನ್ನೇ ಆಶ್ರಯಿಸಿದರು. ಇದರೊಂದಿಗೆ ಟಿಆರ್ ಎಸ್ ನ ನಿಗೂಢ ಕಾರ್ಯಸೂಚಿ (ಹಿಡನ್ ಅಜೆಂಡಾ) ಬಹಿರಂಗಗೊಂಡಿದೆ. ಫೆಡರಲ್ ಫ್ರಂಟ್ ಬಿಜೆಪಿ ವಿರುದ್ಧ ಒಂದಾಗುತ್ತಿರುವ ಪಕ್ಷಗಳ ಕೂಟ ಹೊರತು ಬೇರೇನೂ ಅಲ್ಲ. ಟಿಆರ್ ಎಸ್ ಕೂಡಾ ಕರ್ನಾಟಕದ ಜೆಡಿ(ಎಸ್) ನಂತೆ ತೆಲಂಗಾಣದಲ್ಲಿ ಕಾಂಗ್ರೆಸ್ಸಿಗೆ ನೆರವಾಗಲಿದೆ ಎಂದು ತೆಲಂಗಾಣ ಬಿಜೆಪಿ ಅಧ್ಯಕ್ಷ ಕೆ. ಲಕ್ಷ್ಮಣ್ ಹೇಳಿದರು. ಚಂದ್ರಬಾಬು ನಾಯ್ಡು ಅವರಿಗೆ ಕುಮಾರ ಸ್ವಾಮಿ ಅವರ ಪ್ರಮಾಣ ವಚನ ಸಮಾರಂಭವು ಎನ್ ಡಿಎ ಬಿಟ್ಟ ಬಳಿಕ ಇದೀಗ  ವಿರೋಧ ಪಕ್ಷಗಳ ಸಾಲಿನಲ್ಲಿ ಸ್ಥಾನ ಗಳಿಸಿಕೊಳ್ಳಲು ಒಂದು ಅವಕಾಶವಾಗಲಿದೆ.

2018: ಬೆಂಗಳೂರು: ಎಚ್.ಡಿ.ಕುಮಾರಸ್ವಾಮಿ ಅವರು ಮೇ 23ರ ಬುಧವಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಮಾರಂಭಕ್ಕೆ ಬಿಜೆಪಿ ಶಾಸಕರು ಗೈರು ಹಾಜರಾಗಲು ನಿರ್ಧರಿಸಿದ್ದು, ಬೆನ್ನಲ್ಲೇ ರಾಜ್ಯಾದ್ಯಂತ ಕರಾಳ ದಿನ ಆಚರಣೆಗೂ ಬಿಜೆಪಿ ನಿರ್ಧರಿಸಿತು. ರಾಜ್ಯಾದ್ಯಂತ ಬಿಜೆಪಿ ಕರಾಳ ದಿನಾಚರಣೆ ಆಚರಿಸಲಿದ್ದು, ಬೆಂಗಳೂರಿನಲ್ಲಿ ಬಿಎಸ್ ಯಡಿಯೂರಪ್ಪ ಕರಾಳ ದಿನಾಚರಣೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿತು. ಬುಧವಾರ ಸಂಜೆ ೪.೩೦ಕ್ಕೆ ಎಚ್.ಡಿ.ಕುಮಾರಸ್ವಾಮಿ ವಿಧಾನಸೌಧದ ಮುಂದೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ಸಕಲ ಸಿದ್ಧತೆ ನಡೆದಿದೆ.

2016: ಮುಂಬೈ: ಸಾಮಾಜಿಕ ಮಾಧ್ಯಮದಲ್ಲಿ ಸದಾ ಸಕ್ರಿಯರಾಗಿರುವ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರು ತಮ್ಮ ಟ್ವಿಟ್ಟರ್ ಖಾತೆಗೆ 21 ದಶಲಕ್ಷ (2.1 ಕೋಟಿ) ಅಭಿಮಾನಿಗಳನ್ನು ಗಳಿಸಿಕೊಂಡರು.   ಮೈಲುಗಲ್ಲು ದಾಟಿದ್ದಕ್ಕಾಗಿ ಬಚ್ಚನ್ ಅವರು ತಮ್ಮ ಅಭಿಮಾನಿಗಳು ಮತ್ತು ಹಿತೈಷಿಗಳಿಗೆ ವಂದನೆಗಳನ್ನು ಸಲ್ಲಿಸಿದರು. ಶೀಘ್ರದಲ್ಲೇ 2.5 ಕೋಟಿ ಅಭಿಮಾನಿಗಳ ಗುರಿ ತಲುಪುವ ನಿರೀಕ್ಷೆ ಇಟ್ಟುಕೊಂಡಿರುವುದಾಗಿ ಪ್ರಕಟಿಸಿದರು. ಶೋಲೆ’, ‘ದೀವಾರ್ಮತ್ತುಪಿಕುಇತ್ಯಾದಿ ಹಿಟ್ ಚಿತ್ರಗಳನ್ನು ನೀಡಿರುವ 73 ಹರೆಯದ ನಟ, 2.1 ಕೋಟಿ ಅಭಿಮಾನಿಗಳನ್ನು ಗಳಿಸಿದ ಸುದ್ದಿಯನ್ನು ಟ್ವಿಟ್ಟರ್ ಹಾಗೂ ತಮ್ಮ ಅಧಿಕೃತ ಬ್ಲಾಗ್ನಲ್ಲಿ ಹಂಚಿಕೊಂಡರು. ‘21 ಮಿಲಿಯನ್ ಅಭಿಮಾನಿಗಳು.. ಇದಕ್ಕಾಗಿ ನಿಮ್ಮೆಲ್ಲರಿಗೂ ಧನ್ಯವಾದಗಳು… 25 ಮಿಲಿಯನ್ ಸಮೀಪ ಬರುತ್ತಿದ್ದೇವೆ ! ಬಾಆಆಆಆಡ್ಡೂಂಂಂಂಬಾಆಆಆ.’ ಎಂದು ಬಚ್ಚನ್ ಟ್ವೀಟ್ ಮಾಡಿದರು.  ಟ್ವಿಟ್ಟರ್ನಲ್ಲಿ 21 ಮಿಲಿಯನ್ ಅಭಿಮಾನಿಗಳು. ಬ್ಲಾಗ್ ಮತ್ತು ವಿಸ್ತರಿತ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆಎಂದು ತಮ್ಮ ಬ್ಲಾಗ್ನಲ್ಲಿ ಬಿಗ್ ಬಿ ಬರೆದರು.
2016: ನವದೆಹಲಿ: ಕೇಂದ್ರಾಡಳಿತ ಪ್ರದೇಶವಾದ ಪುದುಚೆರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಹಿರಿಯ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿತು. 35 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಕಿರಣ್ ಬೇಡಿ 2007ರಲ್ಲಿ ಸ್ವಯಂ ನಿವೃತ್ತಿ ಪಡೆದಿದ್ದರು. ನಂತರ 2011ರಲ್ಲಿ ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಪಾಲ್ಗೊಂಡಿದ್ದರು. 2012ರಲ್ಲಿ ಅರವಿಂದ ಕೇಜ್ರಿವಾಲ್ ಅವರು ಆಮ್ ಆದ್ಮಿ ಪಕ್ಷ ಪ್ರಾರಂಭಿಸಿದ ನಂತರ ಬೇಡಿ ಆಂದೋಲನದಿಂದ ದೂರ ಸರಿದಿದ್ದರು. ನಂತರ 2015ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದ ಬೇಡಿ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ವಿರುದ್ಧ ಸ್ಪರ್ಧಿಸಿದ್ದರು. ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿತರಾಗಿದ್ದ ಬೇಡಿ ಕೃಷ್ಣ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸೋಲನುಭವಿಸಿದ್ದರು. ನಂತರ ಅವರು ಸಕ್ರಿಯ ರಾಜಕಾರಣದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ. ಇತ್ತೀಚೆಗೆ ಪುದುಚೆರಿಯಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ 30 ಸ್ಥಾನಗಳಲ್ಲಿ ಕಾಂಗ್ರೆಸ್ 15 ಮತ್ತು ಕಾಂಗ್ರೆಸ್ ಮೈತ್ರಿ ಪಕ್ಷ ಡಿಎಂಕೆ 2 ಸ್ಥಾನ ಪಡೆಯುವ ಮೂಲಕ ಅಧಿಕಾರದ ಗದ್ದುಗೆಗೇರಲು ಸಿದ್ಧತೆ ನಡೆಸಿವೆ. ಕಿರಣ್ ಬೇಡಿ ಅಜಯ್ ಕುಮಾರ್ ಸಿಂಗ್ ಅವರಿಂದ ತೆರವಾಗಿರುವ ಸ್ಥಾನಕ್ಕೆ ನೇಮಕವಾದರು. 1972ರಲ್ಲಿ ಪ್ರಥಮ ಮಹಿಳಾ ಐಪಿಎಸ್ ಅಧಿಕಾರಿಯಾಗಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿದ್ದರು. ‘ಇಂತಹ ಅದ್ಭುತ ಅವಕಾಶ ನೀಡಿದ್ದಕ್ಕಾಗಿ ಸರ್ಕಾರಕ್ಕೆ ಆಭಾರಿಯಾಗಿದ್ದೇನೆಎಂದು ಬೇಡಿ ಅವರು ಧನ್ಯವಾದ ಸಲ್ಲಿಸಿದರು.

2016: ನವದೆಹಲಿ: ಅಪೋಲೋ ಆಸ್ಪತ್ರೆಯ ಬೆನ್ನಹುರಿ ಸರ್ಜನ್ ಡಾ. ರಾಜಗೋಪಾಲನ್ ಕೃಷ್ಣನ್ ಅವರು 13 ವರ್ಷದ ಮಹೇಂದ್ರ ಅಹಿರ್ವಾರ್ ಎಂಬ ಬಾಲಕನಿಗೆ ಹೊಸ ಬದುಕು ನೀಡಿರುವುದು ಬೆಳಕಿಗೆ ಬಂತು.  ಅವರು ನಡೆಸಿದ ಅಪೂರ್ವ ಶಸ್ತ್ರಚಿಕಿತ್ಸೆಯಿಂದಾಗಿ 180 ಡಿಗ್ರಿ ಕೋನದಲ್ಲಿ ಕೆಳಕ್ಕೆ ವಾಲಿದ್ದ ಬಾಲಕನ ಕತ್ತು ಎಲ್ಲರಂತೆ ತಲೆಯ ಮೇಲಕ್ಕೆ ಬಂದಿತು. ಸುಮಾರು 10 ಗಂಟೆಗಳ ಅಪೂರ್ವ ಶಸ್ತ್ರಚಿಕಿತ್ಸೆಯಲ್ಲಿ ಕೃಷ್ಣನ್ ಮತ್ತು ಅವರ ತಂಡವು ಮಹೇಂದ್ರನ ಕತ್ತಿನ ಮುಂಭಾಗವನ್ನು ಸಂಪೂರ್ಣವಾಗಿ ಬಿಡಿಸಿ ಕತ್ತಿನ ಡಿಸ್ಕ್ಗಳನ್ನು ತೆಗೆದು ಆತನ ಮೂತ್ರಪಿಂಡದ ಕುಳಿಯಿಂದ ತೆಗೆದ ಮೂಳೆಯನ್ನು ಕತ್ತಿಗೆ ಕಸಿ ಮಾಡಿ ಕತ್ತು ನೇರವಾಗಿ ನಿಲ್ಲುವಂತೆ ಮಾಡಲು ಲೋಹದ ಪ್ಲೇಟ್ ಜೋಡಿಸುವ ಕೆಲಸ ಮಾಡಿದರು. ಶಸ್ತ್ರ ಚಿಕಿತ್ಸೆಯ ಬಳಿಕ ಬಾಲಕ ಈಗ ಎಲ್ಲರಂತಾಗಿದ್ದಾನೆ ಎಂದು ವರದಿಗಳು ತಿಳಿಸಿದವು. ಮಹೇಂದ್ರನಿಗೆ ಇದ್ದದ್ದುಕಂಜೆನಿಟಲ್ ಮ್ಯೋಪತಿಎಂಬ ಅಪರೂಪದಲ್ಲಿ ಅಪರೂಪವಾದ ಸಮಸ್ಯೆ. 12 ವರ್ಷಗಳಿಂದ ಸಮಸ್ಯೆ ಎದುರಿಸುತ್ತಿದ್ದ ಮಹೇಂದ್ರನ ಕತ್ತಿಗೆ ಎಲ್ಲರಂತೆ ನೆಟ್ಟಗೆ ನಿಲ್ಲುವ ಶಕ್ತಿ ಇರಲಿಲ್ಲ. ಹೀಗಾಗಿ ಆತನ ತಲೆ 180 ಡಿಗ್ರಿ ಕೆಳಕ್ಕೆ ವಾಲಿ ಬಲಭುಜ ಇಲ್ಲವೇ ಎದೆಯ ಮುಂಭಾಗದಲ್ಲಿ ಜೋತಾಡುತ್ತಿತ್ತು. ಮಹೇಶನ ತಂದೆ ಮುಖೇಶ್ ಅಹಿರ್ವಾರ್ (41) ಮತ್ತು ತಾಯಿ ಸುಮಿತ್ರಾ (36) ಅಹಿರ್ವಾರ್ ಮತ್ತು ಕುಟುಂಬ ಆತನ ಸಲುವಾಗಿ ಸುತ್ತದ ಆಸ್ಪತ್ರೆಗಳು ಇರಲಿಲ್ಲ. ಆದರೆ ಸಮರ್ಪಕ ನೆರವು ಸಿಗದೆ ಬಾಲಕ ನಿರಂತರ ನೋವು ಅನುಭವಿಸುತ್ತಲೇ ಬದುಕಬೇಕಾಗಿ ಬಂದಿತ್ತು. ಎಲ್ಲೂ ಯಾರೊಂದಿಗೂ ಬೆರೆಯಲು ಆತನಿಗೆ ಸಾಧ್ಯವಾಗುತ್ತಿರಲಿಲ್ಲ. ಮಾಜಿ ಎನ್ಎಚ್ಎಸ್ ಸರ್ಜನ್ ಹಾಗೂ ಇಬ್ಬರು ಮಕ್ಕಳ ತಾಯಿ ಲಿವರ್ಪೂಲ್ ಜೂಲಿ ಜಾನ್ಸನ್ ಅವರು ಮಹೇಂದ್ರನ ಪಾಲಿಗೆ ದೇವತೆಯಾಗಿ ಬಂದರು. ಅಂತರ್ಜಾಲದಲ್ಲಿ ಆತನ ಕಥೆಯನ್ನು ಚಿತ್ರಸಹಿತವಾಗಿ ಪ್ರಕಟಿಸಿದ ಆಕೆಯ ಮನವಿಗೆ ಸ್ಪಂದಿಸಿ ದೇಣಿಯ ಮಹಾಪೂರ ಹರಿದು ಬಂತು. ಶಸ್ತ್ರಚಿಕಿತ್ಸೆಗೆ ಬೇಕಾದ 12,000 ಪೌಂಡ್ (ಸುಮಾರು 12 ಲಕ್ಷ ರೂಪಾಯಿ) ಸಂಗ್ರಹವಾಯಿತು. ಬಳಿಕ ಡಾ. ಕೃಷ್ಣನ್ ಮತ್ತು ತಂಡ ಶಸ್ತ್ರಚಿಕಿತ್ಸೆ ನೆರವೇರಿಸಿತು. ಈಗ ಗಾಲಿ ಕುರ್ಚಿ ಬಳಸಿ ಸಂಚರಿಸುವ ಸಾಮರ್ಥ್ಯ ಪಡೆದಿರುವ ಮಹೇಂದ್ರ ಗೆಳೆಯರೊಂದಿಗೆ ಟಿವಿ, ಸಿನಿಮಾ ನೋಡಲು ಸಮರ್ಥನಾಗಿದ್ದಾನೆ. ಗಟ್ಟಿಯಾಗಿ ಮಾತನಾಡುವ ಶಕ್ತಿಯೂ ಬಂದಿದೆ.
.
2016: ಗುವಾಹಟಿ: ಅಸ್ಸಾಮಿನ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಸರ್ಬಾನಂದ ಸೋನೋವಾಲ್ ಅವರು ಇಲ್ಲಿ ಆಯ್ಕೆಯಾದರುಈದಿನ ಇಲ್ಲಿ ನಡೆದ ನೂತನ ಚುನಾಯಿತ ಬಿಜೆಪಿ ಶಾಸಕರ ಸಭೆಯಲ್ಲಿ ಸೋನೋವಾಲ್ ಅವರನ್ನು ಪಕ್ಷದ ಶಾಸಕಾಂಗ ನಾಯಕರಾಗಿ ಆಯ್ಕೆ ಮಾಡಲಾಯಿತು. ಇದರೊಂದಿಗೆ ಅಸ್ಸಾಮಿನ ನೂತನ ಮುಖ್ಯಮಂತ್ರಿಯನ್ನು ಔಪಚಾರಿಕವಾಗಿ ಆಯ್ಕೆ ಮಾಡಿದಂತಾಯಿತು. ಸೋನೋವಾಲ್ ಅವರು ಮೇ 24ರಂದು ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಪ್ರಮಾಣ ವಚನ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪಕ್ಷದ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆದ ಬಳಿಕ ಗೆಲುವಿನಲ್ಲಿ ಮುಖ್ಯಪಾತ್ರ ವಹಿಸಿದ ಸೋನೋವಾಲ್ ಅವರು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ನಾಯಕರ ಜೊತೆಗೆ ಸರ್ಕಾರ ರಚನೆ ಸಂಬಂಧವಾಗಿ ಮಾತುಕತೆ ನಡೆಸಿ ರಾಜ್ಯಕ್ಕೆ ವಾಪಸಾಗಿದ್ದರು.

2016: ಹುಬ್ಬಳ್ಳಿ: ಕರ್ನಾಟಕ ವಿಶ್ವವಿದ್ಯಾಲಯದ 66ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ಶ್ರೇಯಾಂಕಿತರಿಗೆ ಚಿನ್ನದ ಪದಕ, ಪಿ.ಎಚ್ಡಿ, ಸ್ನಾತಕ, ಸ್ನಾತಕ್ಕೋತ್ತರ ಪದವಿ ಪ್ರದಾನ ಮಾಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂವಿಜ್ಞಾನ ಸಚಿವ ಡಾ. ಹರ್ಷವರ್ಧನ್ ಪಾಲ್ಗೊಂಡಿದ್ದರು. ವಿಜಯವಾಣಿ ಉಪಸಂಪಾದಕ ವರುಣ ಗಜಾನನ ಹೆಗಡೆ ಎಂ.. ಪತ್ರಿಕೋದ್ಯಮ ವಿಭಾಗದಲ್ಲಿ 6 ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಒಟ್ಟು 191 ಚಿನ್ನದ ಪದಕ, 1 ಉತ್ತಮ ಸಂಶೋಧಕ ಶಿಕ್ಷಕ ಚಿನ್ನದ ಪದಕ, 41 ಪಾರಿತೋಷಕ, 24 ಶಿಷ್ಯವೇತನ, 48 ಮಂದಿಗೆ ಡಿ.ಸಿ. ಪಾವಟೆ ವಜ್ರಮಹೋತ್ಸವ ಆಚರಣೆ ಶಿಷ್ಯವೇತನ ವಿತರಣೆ ಮಾಡಲಾಯಿತು. ಅಲ್ಲದೆ, ವಿವಿಧ ನಿಖಾಯಗಳ 83 ಪಿಎಚ್ಡಿ ಪದವಿ, 4765 ಸ್ನಾತಕ ಪದವಿ, 18,703 ಪದವಿ, 181 ಡಿಪ್ಲೋಮಾ, 142 ಸರ್ಟಿಫಿಕೇಟ್ ಕೋರ್ಸ್ಗಳ ಪ್ರದಾನ ಮಾಡಲಾಯಿತು. ಉಳಿದಂತೆ ಯಾವೆಲ್ಲಾ ವಿಭಾಗದಲ್ಲಿ ಯಾರೆಲ್ಲ ಚಿನ್ನದ ಪದಕ ಗಳಿಸಿದ್ದಾರೆ ಎನ್ನುವುದರ ವಿವರ ಇಲ್ಲಿದೆ.
§  ಎಂ. ಕನ್ನಡ ವಿಭಾಗದ ಬಾಗಪ್ಪ ಮುರಡಿಗೆ 8 ಚಿನ್ನದ ಪದಕ.
§  ಜೀವ ರಸಾಯನಶಾಸ್ತ್ರ ವಿಭಾಗದ ಸಂಪತ್ ಶಾಸ್ತ್ರಿಗೆ 8 ಚಿನ್ನದ ಪದಕ
§  ಬಿಎಸ್ಸಿ ಶ್ರೇಯಾಂಕಿತರಾದ ಶೃತಿ ಯರಗಟ್ಟಿ, ಎಂ. ರಾಜ್ಯಶಾಸ್ತ್ರ ವಿಭಾಗದ ದಿಲ್ಶಾದ್ ಮೊಕಾಶಿ, ಎಂಎಸ್ಸಿ ಪ್ರಾಣಿಶಾಸ್ತ್ರ ವಿಭಾಗದ ರೂಪಾ ಪಿಕ್ಲೆ, ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ವಿಭಾಗದ ಸಿದ್ದಲಿಂಗಪ್ಪ ಹುಡೇದ ಅವರಿಗೆ ತಲಾ 7ಚಿನ್ನದ ಪದಕ.
§  ಎಂ.ಎಸ್.ಸಿ ಗಣಿತ ವಿಭಾಗದಲ್ಲಿ ರುಕ್ಸಾರ್ ಯಲ್ಲಾಪುರಗೆ 6 ಚಿನ್ನದ ಪದಕ.
§  ಬಿ.ಎಡ್ ಶ್ರೇಯಾಂಕಿತೆ ಸುಮತಿ ಆಡಿನಾ ಹಾಗೂ ಇಂಗ್ಲಿಷ್ ಶ್ರೇಯಾಂಕಿತ ಅಕ್ಷಯ್ ಅಮೃತ್ ಯಾದ್ರಿಗೆ ತಲಾ 5 ಸ್ವರ್ಣ ಪದಕ.

2016: ಸ್ಯಾಂಟಿಯಾಗೊ (ಚಿಲಿ): ಆತ್ಮಹತ್ಯೆಯ ಯತ್ನವಾಗಿ ಮೃಗಾಲಯದ ಸಿಂಹಗಳ ಬೋನಿಗೆ ಜಿಗಿದ ವ್ಯಕ್ತಿಯೊಬ್ಬನ ರಕ್ಷಣೆಗಾಗಿ ಎರಡು ಸಿಂಹಗಳನ್ನು ಕೊಂದ ದಾರುಣ ಘಟನೆ ಚಿಲಿಯ ರಾಜಧಾನಿ ಸ್ಯಾಂಟಿಯಾಗೊದಲ್ಲಿ ಹಿಂದಿನ ದಿನ ನಸುಕಿನಲ್ಲಿ ಘಟಿಸಿತು. ಗಾಯಗೊಂಡ ವ್ಯಕ್ತಿಯನ್ನು ಸಮೀಪದ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿದ್ದು, ಆತನ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. 20 ಹರೆಯದ ವ್ಯಕ್ತಿ, ಸಂದರ್ಶಕರು ಕಿಕ್ಕಿರಿದಿದ್ದ ವೇಳೆಯಲ್ಲಿ ದಿಢೀರನೆ ತನ್ನ ಬಟ್ಟೆಗಳನ್ನು ಕಳಚಿ ಸಿಂಹಗಳಿದ್ದ ಬೋನಿನೊಳಕ್ಕೆ ಜಿಗಿದ. ನಗ್ನ ವ್ಯಕ್ತಿ ಬೋನಿನೊಳಗೆ ಬೀಳುತ್ತಲೇ ಸಿಂಹಗಳ ಸಮೂಹ ಆತನ ಮೇಲೆರಗಿ ಕಚ್ಚಿ ಎಳೆದಾಡತೊಡಗಿದವು. ಭಯಾನಕ ದೃಶ್ಯದಿಂದ ನೆರೆದಿದ್ದವರು ದಿಗ್ಮೂಢರಾದರು. ಸಿಂಹಗಳನ್ನು ತೆಪ್ಪಗಾಗಿಸಲು ಅರಿವಳಿಕೆ ತಜ್ಞರ ಅಭಾವ ಕಾರಣ ಸಿಬ್ಬಂದಿ ಒಂದು ಸಿಂಹ ಹಾಗೂ ಸಿಂಹಿಣಿಯನ್ನು ಕೊಂದು ಹಾಕಿದರು ಎಂದು ಸ್ಯಾಂಟಿಯಾಗೊ ಮೆಟ್ರೊಪಾಲಿಟನ್ ಮೃಗಾಲಯದ ಅಧಿಕಾರಿಗಳು ತಿಳಿಸಿದರು. ಸಿಂಹಗಳ ಬೋನಿಗೆ ಜಿಗಿದ ವ್ಯಕ್ತಿಯ ಪ್ಯಾಂಟ್ ಕಿಸೆಯಲ್ಲಿ ಆತ್ಮಹತ್ಯಾ ಟಿಪ್ಪಣಿ ಲಭಿಸಿದೆ ಎಂದು ಅವರು ಹೇಳಿದರು.

2016: ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ನೂತನ ಅಧ್ಯಕ್ಷರಾಗಿ ಅನುರಾಗ್ ಠಾಕೂರ್ ಅವಿರೋಧವಾಗಿ ಆಯ್ಕೆಯಾದರು. ಈದಿನ  ಬೆಳಗ್ಗೆ ನಡೆದ ವಿಶೇಷ ಮಹಾಸಭೆಯಲ್ಲಿ ಠಾಕೂರ್ ಅವರನ್ನು ಆಯ್ಕೆ ಮಾಡಲಾಯಿತು.   ಮೂಲಕ 1963 ಬಳಿಕ ಬಿಸಿಸಿಐ ಅಧ್ಯಕ್ಷ ಹುದ್ದೆಗೇರುತ್ತಿರುವ ಅತಿ ಕಿರಿಯ ವ್ಯಕ್ತಿ ಎನಿಸಿಕೊಂಡರು. ವಿಶೇಷ ಮಹಾಸಭೆಯಲ್ಲಿ ಭಾರತ ತಂಡದ ಮಾಜಿ ನಾಯಕ ಹಾಗೂ ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ) ಅಧ್ಯಕ್ಷ ಸೌರವ್ ಗಂಗೂಲಿ, ಅನುರಾಗ್ ಠಾಕೂರ್ ಸೇರಿದಂತೆ ಉಳಿದೆಲ್ಲಾ ಸದಸ್ಯರು ಪಾಲ್ಗೊಂಡಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯ (ಐಸಿಸಿ) ಸ್ವತಂತ್ರ ಚೇರ್ಮನ್ ಆಗಿ ಶಶಾಂಕ್ ಮನೋಹರ್ ಆಯ್ಕೆಯಾದ ಹಿನ್ನೆಲೆಯಲ್ಲಿ ಹುದ್ದೆ ತೆರವುಕೊಂಡಿತ್ತು. ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ಹಿನ್ನೆಲೆಯಲ್ಲಿ ಅನುರಾಗ್ ಠಾಕೂರ್ ಬಿಸಿಸಿಐ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ಸಿಎಬಿ, ಅಸ್ಸಾಂ, ತ್ರಿಪುರ, ಎನ್ಸಿಸಿ ಹಾಗೂ ಜಾರ್ಖಂಡ್ ಕ್ರಿಕೆಟ್ ಸಂಸ್ಥೆಗಳು ಠಾಕೂರ್ ಅವರನ್ನು ಬೆಂಬಲಿಸಿದ್ದವು.
ಶಿರ್ಕೆ ನೂತನ ಕಾರ್ಯದರ್ಶಿ: ಅನುರಾಗ್ ಠಾಕೂರ್ ರಾಜೀನಾಮೆಯಿಂದ ತೆರವಾದ ಬಿಸಿಸಿಐ ಕಾರ್ಯದರ್ಶಿ ಹುದ್ದೆಗೆ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಅಜಯ್ ಶಿರ್ಕೆ ಅವರನ್ನು ಆಯ್ಕೆ ಮಾಡಲಾಯಿತು. ಶಿರ್ಕೆ ಅವರು ಬಿಸಿಸಿಐನ ಹಲವು ಸಮಿತಿಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದವರು.

2016: ವಾಷಿಂಗ್ಟನ್:  ಭಯೋತ್ಪಾದನೆ ವಿರುದ್ಧ ಸಮರ ಸಾರಿರುವ ಅಮೆರಿಕ ವಾಯುದಳ ಪಡೆಯ ದಾಳಿಗೆ ತಾಲಿಬಾನ್ ಮುಖಂಡ, ಉಗ್ರ ಮುಲ್ಲಾ ಮನ್ಸೂರ್ ಹತನಾಗಿದ್ದಾನೆ ಎಂದು ಹೇಳಲಾಯಿತು. ಪಶ್ಚಿಮ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಗಡಿ ಭಾಗದ ಅಜ್ಞಾತ ಸ್ಥಳದಲ್ಲಿ ದಾಳಿ ನಡೆಯಿತು ಎಂದು ಮೂಲಗಳು ತಿಳಿಸಿದವು. ಏತನ್ಮಧ್ಯೆ ಪಾಕ್ ಸುದ್ದಿಸಂಸ್ಥೆಗಳು, ದಾಳಿಯಲ್ಲಿ ಮೃತನಾಗಿರುವುದು ಒಬ್ಬ ಆಟೋ ಚಾಲಕ, ಮುಲ್ಲಾ ಮನ್ಸೂರ್ ಅಲ್ಲ ಎಂದು ವರದಿ ಮಾಡಿದವು. ಆದರೆ ರಾತ್ರಿಯ ವೇಳೆಗೆ ಆಫ್ಘಾನಿಸ್ತಾನದ ತಾಲಿಬಾನ್ ಮೂಲಗಳು ಮುಲ್ಲಾ ಮನ್ಸೂರ್ ಸಾವನ್ನು ದೃಡ ಪಡಿಸಿದವು. ಉಗ್ರಗಾಮಿ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿದ್ದ ಕುಖ್ಯಾತ ಮನ್ಸೂರ್ನನ್ನು ವಧೆ ಮಾಡಲೇಬೇಕೆಂದು ಸಂಕಲ್ಪಿಸಿದ್ದ ಸೇನಾಪಡೆ ಹಿಂದಿನ ದಿನ ಕಾರ್ಯಾಚರಣೆ ನಡೆಸಿತ್ತು. ದಾಳಿಯನ್ನು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಖಚಿತಪಡಿಸಿದ್ದರು.

2016: ಚಂಡೇಲ್(ಮಣಿಪುರ): ಮಣಿಪುರದ ಚಂಡೇಲ್ ಜಿಲ್ಲೆಯಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಗೆ ಅಸ್ಸಾಂ ರೈಫಲ್ಸ್ ಒಬ್ಬ ಸೇನಾಧಿಕಾರಿ ಸೇರಿದಂತೆ 6 ಯೋಧರು ಮೃತರಾದರು. ಚಂಡೇಲ್ ಜಿಲ್ಲೆಯಲ್ಲಿ ಉಂಟಾಗಿರುವ ಭೂಕುಸಿತ ಪ್ರದೇಶವನ್ನು ಪರಿಶೀಲಿಸಿ ವಾಪಸ್ಸಾಗುತ್ತಿದ್ದ 29ನೇ ಅಸ್ಸಾಂ ರೈಫಲ್ಸ್ ಯೋಧರ ಮೇಲೆ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದರು. ನಂತರ ಉಗ್ರರು ಯೋಧರ ಬಳಿ ಇದ್ದ 4 ಎಕೆ.47 ರೈಫಲ್, ಇನ್ಸಾಸ್ ರೈಫಲ್ಗಳು ಮತ್ತು ಎಲ್ಎಂಜಿ ರೈಫಲ್ ಕಸಿದು ಪರಾರಿಯಾಗಿದ್ದರು. ಯೋಧರು ಮರುದಾಳಿಯಲ್ಲಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡರು. ಆದರೆ ಉಗ್ರರು ಪರಾರಿಯಾಗುವಲ್ಲಿ ಯಶಸ್ವಿಯಾದರು ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿದವು. ಗೃಹ ಸಚಿವ ರಾಜನಾಥ್ ಸಿಂಗ್ ಅಸ್ಸಾಂ ರೈಫಲ್ಸ್ ಡಿಜಿಯೊಂದಿಗೆ ಮಾತುಕತೆ ನಡೆಸಿ, ಘಟನೆ ಕುರಿತು ಮಾಹಿತಿ ಪಡೆದರು.

2016: ಕೋಲ್ಕತ: ಪಶ್ಚಿಮ ಬಂಗಾಳದಲ್ಲಿ ವಿರೋಧಿ ರಾಜಕಾರಣಿಗಳ ಮೇಲಿನ ಮುಂದುವರಿದ ದಾಳಿಯಲ್ಲಿ ನಟಿ ಹಾಗೂ ಬಿಜೆಪಿ ನಾಯಕಿ ರೂಪಾ ಗಂಗೂಲಿ ಅವರ ವಾಹನದ ಮೇಲೆ ಕೋಲ್ಕತ ಸಮೀಪದ ಡೈಮಂಡ್ ಹಾರ್ಬರ್ ಬಳಿ ಹಲ್ಲೆ ನಡೆದು  ಗಂಗೂಲಿ ಅವರ ತಲೆಗೆ ಏಟು ಬಿದ್ದಿತು. ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆ ನಡೆದಿದೆ ಎಂದು ಆಪಾದಿಸಲಾಯಿತು.  ಜಿಲ್ಲಾ ಆಸ್ಪತ್ರೆಗೆ ದಾಖಲಾಗಿರುವ ರೂಪಾ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಪಕ್ಷ ಮೂಲಗಳು ಹೇಳಿದವು. ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರೂಪಾ ಪರಾಭವಗೊಂಡಿದ್ದರುರೂಪಾ ಗಂಗೂಲಿ ಅವರು 24 ಪರಗಣ ಜಿಲ್ಲೆಯ ಕೊಕ್ಡದ್ವೀಪದಿಂದ ವಾಪಾಸಾಗುತ್ತಿದ್ದಾಗ ಹಲ್ಲೆ ನಡೆಯಿತು. ರೂಪಾ ಅವರು ರಾಜಕೀಯ ದಾಳಿ ಸಂತ್ರಸ್ಥರನ್ನು ಭೇಟಿ ಮಾಡಲು 24 ಪರಗಣ ಜಿಲ್ಲೆಗೆ ಭೇಟಿ ನೀಡಿದ್ದರು. ದಾಳಿಯಲ್ಲಿ ರೂಪಾ ಅವರ ಕಾರಿಗೆ ತೀವ್ರ ಹಾನಿಯಾಗಿದೆ ಎಂದು ವರದಿಗಳು ಹೇಳಿದವು.
2016: ಇಟಾನಗರ: ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್ ಜಿಲ್ಲೆಯಲ್ಲಿ ವಾಹನವೊಂದು ಕಣಿವೆಗೆ ಉರುಳಿದ ಪರಿಣಾಮ 17 ಜನರು ಮೃತರಾಗಿ ಹಲವರು ಗಾಯಗೊಂಡರು. ಈದಿನ  ಮಧ್ಯಾಹ್ನ 12.30 ಸುಮಾರಿಗೆ ರೂಪ ಕಲಕ್ತಾಂಗ್ ರಸ್ತೆಯಲ್ಲಿ ಅಪಘಾತ ಸಂಭವಿಸಿ, ಕೆಸರಿನಿಂದ ಕೂಡಿದ್ದ ರಸ್ತೆಯಿಂದ ವಾಹನ ಕೆಳಗೆ ಜಾರಿ ಪ್ರಪಾತಕ್ಕೆ ಬಿದ್ದಿತು.

2016: ಗಾಂಧಿನಗರ (ಗುಜರಾತ್): ಗುಜರಾತಿನಲ್ಲಿ ತಾಪಮಾನದ ತೀವ್ರತೆಗೆ ರಸ್ತೆಗಳೂ ಕರಗತೊಡಗಿದವು. ವಲ್ಸದ್ನಲ್ಲಿ ರಸ್ತೆಗೆ ಹಾಕಿದ ತಾರು ಕರಗಿ ಪಾದಚಾರಿಗಳು ರಸ್ತೆದಾಟಲು ಪರದಾಡಬೇಕಾಗಿ ಬಂದ ಅಪಾಯಕಾರಿ ದೃಶ್ಯದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿತು. ವಲ್ಸದ್ನಲ್ಲಿ ಜನ ಹಿಂದಿನ ದಿನ ರಸ್ತೆಗೆ ಇಳಿಯುತ್ತಿದ್ದಂತೆಯೇ ಶೂಗಳು, ಚಪ್ಪಲಿಗಳು ಬಿಸಿಲಿಗೆ ಕರಗುತ್ತಿರುವ ತಾರಿಗೆ ಅಂಟಿಕೊಳ್ಳ ತೊಡಗಿದವು. ಇದರಿಂದ ಚಕಿತರಾದ ಅವರು ತಾರಿನಿಂದ ಶೂ, ಚಪ್ಪಲಿ ಬಿಡಿಸಿಕೊಳ್ಳಲು ಯತ್ನಿಸಿದಾಗ ಕಾಲುಗಳಿಗೇ ತಾರು ಅಂಟಿಕೊಂಡ ಹಾಗೂ ತಲೆಯಲ್ಲಿ ಮೂಟೆ ಹೊತ್ತುಕೊಂಡ ಮಹಿಳೆ ವೇಗವಾಗಿ ರಸ್ತೆ ದಾಟಲಾಗದೆ ಮುಗ್ಗರಿಸಿ ಬಿದ್ದ ದೃಶ್ಯಗಳು ವಿಡಿಯೋದಲ್ಲಿ ದಾಖಲಾಯಿತು.. ಮಹಿಳೆ ಬೀಳುವುದಷ್ಟೇ ಕೆಲವೇ ಸೆಕೆಂಡ್ ಮುಂಚೆ ಟ್ರಕ್ ಒಂದು ಅದೇ ರಸ್ತೆಯಾಗಿ ಚಲಿಸಿದ್ದೂ ವಿಡಿಯೋದಲ್ಲಿ ದಾಖಲಾಯಿತು. ವಲ್ಸದ್ನಲ್ಲಿ 36 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದರೆ, ಅಹಮದಾಬಾದಿನಲ್ಲಿ 45 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ದೇಶಾದ್ಯಂತ ತೀವ್ರ ಬಿಸಿಗಾಳಿ ಬೀಸುತ್ತಿರುವ ವರದಿಗಳು ಬರುತ್ತಿದ್ದು  ಉತ್ತರ ಪ್ರದೇಶದಲ್ಲಿ ಬಲಿಯಾದಲ್ಲಿ ಇಬ್ಬರು ಸಾವನ್ನಪ್ಪಿದರು.  ರಾಜಸ್ಥಾನದ ಚುರು ಮತ್ತು ಶ್ರೀಗಣಗಂಗಾನಗರದಲ್ಲಿ 49.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಯಿತು.

2009: ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ ಮತ್ತು ಎಂ.ವೀರಪ್ಪ ಮೊಯಿಲಿ ಸೇರಿದಂತೆ 19 ಸಚಿವ ಬಲದೊಂದಿಗೆ ಡಾ.ಮನಮೋಹನ್‌ಸಿಂಗ್ ಎರಡನೇ ಬಾರಿ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಸಚಿವಸ್ಥಾನದ ಹಂಚಿಕೆಯನ್ನು ಒಪ್ಪಿಕೊಳ್ಳದೆ ಮುನಿದು ಕೂತ ಡಿಎಂಕೆಯಿಂದಾಗಿ ಪೂರ್ಣಪ್ರಮಾಣದ ಸಂಪುಟವನ್ನು ನೀಡಲಾಗದ ಪ್ರಧಾನಿಯವರು ಮೊದಲ ಕಂತಿನಲ್ಲಿ ಆಯ್ದ ಹಿರಿಯ ನಾಯಕರನ್ನಷ್ಟೇ ಸಂಪುಟಕ್ಕೆ ಸೇರಿಸಿಕೊಂಡರು. ಅವರಲ್ಲಿ ಕಾಂಗ್ರೆಸ್‌ ಪಕ್ಷದ ಪ್ರಣವ್‌ ಮುಖರ್ಜಿ, ಎ.ಕೆ.ಆಂಟನಿ ಮತ್ತು ಪಿ.ಚಿದಂಬರಂ, ನ್ಯಾಷನಲ್ ಕಾಂಗ್ರೆಸ್‌ ಪಕ್ಷದ ಶರದ್‌ಪವಾರ್ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷದ ಮಮತಾ ಬ್ಯಾನರ್ಜಿ ಪ್ರಮುಖರು. ರಾಹುಲ್‌ ಗಾಂಧಿಯವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಅಪೇಕ್ಷೆಯನ್ನು ಮನಮೋಹನ್‌ಸಿಂಗ್ ಅವರೇ ವ್ಯಕ್ತಪಡಿಸಿದ್ದರೂ ಭಾವೀ ಪ್ರಧಾನಿಯೆಂದೇ ಬಿಂಬಿಸಲಾದ ಯುವನಾಯಕ ಸಂಪುಟದಿಂದ ಹೊರಗೆ ಉಳಿದರು.

2009:'ತಮಿಳು ಬಂಡುಕೋರರ (ಎಲ್‌ಟಿಟಿಇ) ವಿರುದ್ಧ 2006ರ ಆಗಸ್ಟ್ ತಿಂಗಳಿನಲ್ಲಿ ಆರಂಭವಾಗಿ ಈವಾರ ಮುಕ್ತಾಯಗೊಂಡ ಅಂತಿಮ ಹಂತದ ಸೇನಾ ಕಾರ್ಯಾಚರಣೆಯಲ್ಲಿ 6261ಕ್ಕೂ ಹೆಚ್ಚು ಭದ್ರತಾ ಯೋಧರು, ಪೊಲೀಸರು, ಅರೆಸೇನಾ ಪಡೆ ಸಿಬ್ಬಂದಿ ಹತರಾಗಿ ಸುಮಾರು 30 ಸಾವಿರ ಸೈನಿಕರು ಗಾಯಗೊಂಡರು' ಎಂದು ಶ್ರೀಲಂಕಾ ಸರ್ಕಾರ ಬಹಿರಂಗ ಪಡಿಸಿತು. ಬಂಡುಕೋರರ ಕಡೆಯಿಂದ ಸೇನೆಗೆ ಆಗಿರುವ ಹಾನಿಯ ಬಗ್ಗೆ ರಕ್ಷಣಾ ಕಾರ್ಯದರ್ಶಿ ಗೊಟಬಾಯ ರಾಜಪಕ್ಸೆ ಇದೇ ಮೊದಲ ಬಾರಿಗೆ ವಿವರ ಪ್ರಕಟಿಸಿದರು.

2009: ನ್ಯೂಯಾರ್ಕಿನ ಮೇಡಂ ಟುಸ್ಯಾಡ್ ವಸ್ತು ಸಂಗ್ರಹಾಲಯದಲ್ಲಿ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ಮೇಣದಿಂದ ನಿರ್ಮಿಸಿದ ಪ್ರತಿಮೆಯನ್ನು ಅನಾವರಣ ಗೊಳಿಸಲಾಯಿತು. ವಿಶ್ವವಿಖ್ಯಾತರ 'ಮೇಣ-ಪ್ರತಿಮೆ'ಗಳ ಸ್ಥಾಪನೆಯ ಹೆಗ್ಗಳಿಕೆಗೆ ಪಾತ್ರವಾದ ಇಲ್ಲಿನ 'ಟೈಮ್ಸ್ ಸ್ಕ್ವೇರ್'ನಲ್ಲಿರುವ ಈ ವಸ್ತು ಸಂಗ್ರಹಾಲಯ ಇದೇ ಪ್ರಥಮ ಬಾರಿಗೆ ಬಾಲಿವುಡ್ ಸಾಧಕರಿಗಾಗಿ ಪ್ರತ್ಯೇಕ ವಿಭಾಗ ತೆರೆಯಿತು.

2009: ಒರಿಸ್ಸಾದ ಮುಖ್ಯಮಂತ್ರಿಯಾಗಿ ಮೂರನೇ ಬಾರಿಗೆ ಅಧಿಕಾರ ವಹಿಸಿಕೊಂಡ ನವೀನ್ ಪಟ್ನಾಯಕ್ ಪ್ರಮುಖ ಖಾತೆಗಳನ್ನು ತಮ್ಮಲ್ಲಿಯೇ ಇಟ್ಟುಕೊಂಡರು.

2009: ಬಡಕುಂದ್ರಿ (ಯಮಕನಮರಡಿ) ಸಮೀಪದ ಯರನಾಳ ಗ್ರಾಮದ ಶ್ರೀ ಶಾಂತಿಸಾಗರರ ದೀಕ್ಷಾಸ್ಥಾನ ಶ್ರೀ ಚಂದ್ರ ಪ್ರಭು ಜಿನಮಂದಿರದಲ್ಲಿ ಆತ್ಮಧ್ಯಾನ ಯೋಗಿ ಶ್ರೀ 108 ಧರ್ಮಭೂಷಣ ಮಹಾರಾಜರು ಈದಿನ ಮುಂಜಾನೆ 9.48ಕ್ಕೆ ಸಲ್ಲೇಖನಾ ಸಮಾಧಿ ಮರಣ ಹೊಂದಿದರು. ಅವರ ಏಕೈಕ ಶಿಷ್ಯರಾದ ಬಾಲಯೋಗಿ ನಿರ್ಯಾಪಕಾಚಾರ್ಯ ಕ್ರಾಂತಿಶಾಂತಿ ಸಂತ ಶ್ರೀ 108 ಕುಲರತ್ನಭೂಷಣ ಮುನಿಮಹಾರಾಜರ ಸಾನ್ನಿಧ್ಯದಲ್ಲಿ ಶಾಸ್ತ್ರೋಕ್ತ ವಿಧಿವಿಧಾನಗಳು ಜರುಗಿದವು. ಆಚಾರ್ಯರತ್ನ ಶ್ರೀ 108 ದೇಶಭೂಷಣ ಮುನಿಮಹಾಜರ ಅಂತಿಮ ಶಿಷ್ಯರಾದ ಶ್ರೀ ಧರ್ಮ ಭೂಷಣ ಮಹಾರಾಜರು 84 ವರ್ಷ ವಯಸ್ಸಿನಲ್ಲಿ ವಿಧಿವಶರಾದರು.

2008: ಕಳ್ಳಬಟ್ಟಿ ದುರಂತದ ಪ್ರಮುಖ ಆರೋಪಿ ಸೌಂದರ್ ರಾಜನ್ ಸೇರಿದಂತೆ ಮೂವರನ್ನು ರಾಜ್ಯ ಪೊಲೀಸರು ತಮಿಳುನಾಡಿನ ಸೇಲಂ ಜಿಲ್ಲೆಯ ನಾಮಕಲ್ನಲ್ಲಿ ಬಂಧಿಸಿದರು. ನಗರದ ಹೊರ ವಲಯದಲ್ಲಿ ಒಬ್ಬ ಮಹಿಳೆಯನ್ನು ವಶಕ್ಕೆ ತೆಗೆದುಕೊಂಡರು. ಬೆಂಗಳೂರು, ಕೋಲಾರ, ಆನೇಕಲ್, ಹೊಸಕೋಟೆಯಲ್ಲಿ ಈದಿನ ಕಳ್ಳಬಟ್ಟಿ ಸೇವನೆ ಪರಿಣಾಮವಾಗಿ ಒಟ್ಟು ಇನ್ನೂ 10 ಮಂದಿ ಮೃತರಾದರು. ಇದರೊಂದಿಗೆ ದುರಂತದಲ್ಲಿ ಸತ್ತವರ ಒಟ್ಟು ಸಂಖ್ಯೆ 199ಕ್ಕೆ ಏರಿತು.

2008: ಶೃಂಗೇರಿ ತಾಲ್ಲೂಕಿನ ಕಿಗ್ಗದಲ್ಲಿ ಲೇವಾದೇವಿ ವ್ಯವಹಾರ ನಡೆಸುತ್ತಿದ್ದ ಕಿರಣ್ ಶೆಟ್ಟಿ ಎಂಬುವವರ ಮನೆಗೆ ಹಿಂದಿನ ದಿನ ಮಧ್ಯರಾತ್ರಿ ದಿಢೀರನೆ ಭೇಟಿ ನೀಡಿದ ನಕ್ಸಲೀಯರ ತಂಡ ಮನೆಯ ಆವರಣದಲ್ಲಿ ನಿಲ್ಲಿಸಿದ್ದ ಬೈಕಿಗೆ ಬೆಂಕಿ ಹಚ್ಚಿ ಪರಾರಿಯಾಯಿತು.

2008: ಜಗತ್ತಿನ ಅತಿ ಸಣ್ಣ ಕಾಡು ಬೆಕ್ಕುಗಳಲ್ಲಿ ಒಂದಾಗಿರುವ ಹಾಗೂ ಭಾರತದ ಅತಿ ಸಣ್ಣ ಬೆಕ್ಕು ಎಂದು ಪರಿಗಣಿತವಾಗಿರುವ `ರಸ್ಟಿ ಸ್ಪಾಟೆಡ್ ಕ್ಯಾಟ್' ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಪತ್ತೆಯಾಗಿರುವುದು ಬೆಳಕಿಗೆ ಬಂತು. ಪಕ್ಕಾ ನಿಶಾಚರಿಯಾದ ಈ ವಾಮನ ಬೆಕ್ಕು ಹೆಚ್ಚೆಂದರೆ ಒಂದರಿಂದ ಒಂದೂವರೆ ಕೆ.ಜಿ. ತೂಕ ಇದೆ. ಬಾಲ ಸೇರಿದಂತೆ ದೇಹದ ಒಟ್ಟು ಉದ್ದ ಸುಮಾರು 35ರಿಂದ 48 ಸೆ.ಮೀ. (14ರಿಂದ 17 ಅಂಗುಲ). ಗಾತ್ರ ನಮ್ಮ ಮನೆಯ ಬೆಕ್ಕಿನ ಸುಮಾರು ಅರ್ಧದಷ್ಟು. ಹವ್ಯಾಸಿ ಛಾಯಾಚಿತ್ರಗ್ರಾಹಕ ಸುಭರ್ಘ್ಯ ದಾಸ್ ಅವರು ಚಾಮುಂಡಿ ಬೆಟ್ಟದಲ್ಲಿ ರಾತ್ರಿ ಸುಮಾರು 7.30ರ ಹೊತ್ತಿಗೆ ಕ್ಯಾಮರಾದಲ್ಲಿ ಇದನ್ನು ಸೆರೆ ಹಿಡಿದರು. ನಸು ಹಳದಿ ಬಣ್ಣದ ಈ ಪುಟಾಣಿ ಬೆಕ್ಕು ಭಾರತ ಪರ್ಯಾಯ ದ್ವೀಪದಲ್ಲಿ ರಾಜಸ್ಥಾನದವರೆಗೆ ವಾಸವಾಗಿರುವುದು ದಾಖಲಾಗಿದ್ದರೂ ಮನುಷ್ಯರ ಕಣ್ಣಿಗೆ ಬೀಳುವುದು ತೀರ ಅಪರೂಪ. ಮಾಂಸ ಹಾಗೂ ತುಪ್ಪಳಕ್ಕಾಗಿಯೂ ಅವುಗಳನ್ನು ಬೇಟೆಯಾಡಲಾಗುತ್ತಿದೆ. ವಿವಿಧ ಕಾರಣಗಳಿಂದ 'ರಸ್ಟಿ ಸ್ಪಾಟೆಡ್ ಕ್ಯಾಟ್' ಅಳಿವಿನ ಅಂಚಿನೆಡೆಗೆ ಸಾಗಿದೆ. 1972ರ ವನ್ಯಜೀವಿ ಸಂರಕ್ಷಣಾ ಕಾಯಿದೆಯ ಶೆಡ್ಯೂಲ್ ಒಂದರಲ್ಲಿ ಈ ಬೆಕ್ಕನ್ನು ಸೇರಿಸಲಾಗಿದೆ.

2008: ಮುಂಬೈ ಚಿನಿವಾರ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ತಲಾ 10 ಗ್ರಾಂಗಳಿಗೆ ಮತ್ತೆ ರೂ 85ರಷ್ಟು ಹೆಚ್ಚಳಗೊಂಡು ರೂ 13 ಸಾವಿರ ಗಡಿ ಹತ್ತಿರ ಸಾಗಿತು.

2008: ಹತ್ತು ದಿನಗಳ ಹಿಂದೆ ನೈಋತ್ಯ ಚೀನಾದಲ್ಲಿ ಸಂಭವಿಸಿದ ಭಾರಿ ಭೂಕಂಪದಲ್ಲಿ 80 ಸಾವಿರಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ ಅಥವಾ ಕಾಣೆಯಾಗಿದ್ದಾರೆ ಎಂದು ಚೀನಾ ಸರ್ಕಾರ ಅಧಿಕೃತವಾಗಿ ಘೋಷಿಸಿತು. ಈ ಭೂಕಂಪದಲ್ಲಿ 2,88,000ಕ್ಕೂ ಹೆಚ್ಚು ಮಂದಿ ಗಾಯಗೊಂಡರು.

2008: ಗುಜರಾತಿನ ಗೋಧ್ರಾದಲ್ಲಿ ಆರು ವರ್ಷಗಳ ಹಿಂದೆ ನಡೆದ ಗಲಭೆಗೆ ತುತ್ತಾದ ಕುಟುಂಬಗಳಿಗೆ ಹೆಚ್ಚುವರಿ ಪರಿಹಾರ ಕಾರ್ಯ ಕೈಗೊಳ್ಳಲು 330 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ನೀಡುವ ಮಹತ್ವದ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಂಡಿತು. ಪ್ರಧಾನಿ ಮನಮೋಹನ್ ಸಿಂಗ್ ತಮ್ಮ ಸಚಿವ ಸಂಪುಟ ಸಭೆಯಲ್ಲಿ ಗಲಭೆ ಸಂತ್ರಸ್ಥರಿಗೆ ಹೆಚ್ಚುವರಿ ಪರಿಹಾರ ನೀಡುವ ಪ್ರಸ್ತಾವನೆಗೆ ಅನುಮೋದನೆ ಪಡೆದ ನಂತರ ಪ್ಯಾಕೆಜ್ ಘೋಷಿಸಿದರು ಎಂದು ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ತಿಳಿಸಿದರು. 2002ರ ಫೆಬ್ರುವರಿಯಲ್ಲಿ ಗೋಧ್ರಾದಲ್ಲಿ ರೈಲ್ವೆ ಬೋಗಿಗೆ ಬೆಂಕಿ ಹಚ್ಚಿದ ಪರಿಣಾಮ ರಾಜ್ಯದಾದ್ಯಂತ ಕೋಮುಗಲಭೆ ಭುಗಿಲೆದ್ದಿತ್ತು.

2008: ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ಗ್ರಾಮವೊಂದರಲ್ಲಿ ಮದವೇರಿದ ಸಲಗದ ತುಳಿತಕ್ಕೆ ಮತ್ತೆ ಇಬ್ಬರು ಬಲಿಯಾದರು. ಇದರೊಂದಿಗೆ ಎರಡು ದಿನಗಳಲ್ಲಿ ಮಡಿದವರ ಸಂಖ್ಯೆ ಆರಕ್ಕೆ ಏರಿತು.

2008: ಅಕ್ರಮ ಬಂಧನದಲ್ಲಿ ಇಟ್ಟುಕೊಂಡು ಮಗಳನ್ನು ಲೈಂಗಿಕವಾಗಿ ಬಳಸಿಕೊಂಡು ಇಬ್ಬರು ಮಕ್ಕಳನ್ನು ಹುಟ್ಟಿಸಿದ ಅರ್ಜೆಂಟೀನಾದ ಪ್ರಜೆಯೊಬ್ಬನಿಗೆ 16 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. 1992ರಲ್ಲಿ ಸೋರಿಯಾ ತನ್ನ ತಂದೆಯಿಂದ ಮೊದಲು ಅತ್ಯಾಚಾರಕ್ಕೆ ಒಳಗಾದಾಗ 12 ವರ್ಷದವಳಾಗಿದ್ದಳು. ಆಗ ಮೊದಲ ಮಗುವಿಗೆ ಜನ್ಮ ನೀಡಿದಳು. ನಂತರ 1997ರಲ್ಲಿ ಎರಡನೇ ಮಗುವಿಗೆ ಜನ್ಮ ನೀಡಿದಳು.

2008: ಮಾನವ ಹಕ್ಕುಗಳ ಸಂಘಟನೆಗಳ ಭಾರಿ ವಿರೋಧದ ಮಧ್ಯೆಯೂ ಪಾಕಿಸ್ಥಾನವುವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಸದಸ್ಯತ್ವ ಪಡೆಯುವಲ್ಲಿ ಯಶಸ್ವಿಯಾಯಿತು.
47 ರಾಷ್ಟ್ರಗಳ ಸದಸ್ಯತ್ವದ ಈ ಮಂಡಳಿಗೆ ಪಾಕಿಸ್ಥಾನದ ಜತೆಗೆ ಜಪಾನ್, ದಕ್ಷಿಣ ಕೊರಿಯಾ, ಬಹ್ರೇನ್ ಸೇರಿದಂತೆ ಒಟ್ಟು 15 ರಾಷ್ಟ್ರಗಳು ಸದಸ್ಯತ್ವ ಪಡೆದವು.

2007: ತಮ್ಮ ನಿವಾಸದಲ್ಲಿ ಕೊಕೇನ್ ಹೊಂದಿದ್ದ ಆರೋಪದ ಮೇರೆಗೆ ಮಾಜಿ ಟೆಸ್ಟ್ ಕ್ರಿಕೆಟ್ ಆಟಗಾರ ಹಾಗೂ ವೀಕ್ಷಕ ವಿವರಣೆಗಾರ ಮಣಿಂದರ್ ಸಿಂಗ್ ಅವರನ್ನು ಬಂಧಿಸಲಾಯಿತು. ದೆಹಲಿಯ ಅವರ `ಪ್ರೀತ್ ವಿಹಾರ್' ನಿವಾಸದಿಂದ 1.5 ಗ್ರಾಂನಷ್ಟು ಕೊಕೇನ್ ವಶಪಡಿಸಿಕೊಳ್ಳಲಾಯಿತು. ಎಡಗೈ ಸ್ಪಿನ್ನರ್ ಮಣಿಂದರ್ 35 ಟೆಸ್ಟ್ ಹಾಗೂ 59 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

2007: ಅವ್ಯವಹಾರಗಳಿಗಾಗಿ ತಮಗೆ ವಿಧಿಸಲಾಗಿರುವ ಸೆರೆವಾಸದ ವಿರುದ್ಧ ಮೇಲ್ಮನವಿ ಸಲ್ಲಿಸುವುದರ ಜೊತೆಗೆ ತಮ್ಮ ವಚನದಂತೆ 100 ಕೋಟಿ ಅಮೆರಿಕನ್ ಡಾಲರುಗಳನ್ನು ಧಾರ್ಮಿಕ ದತ್ತಿ ಸಂಸ್ಥೆಗಳಿಗೆ ದಾನ ನೀಡುವುದಾಗಿ ದಕ್ಷಿಣ ಕೊರಿಯಾದ ಪ್ರಮುಖ ಆಟೋಮೊಬೈಲ್ ಸಂಸ್ಥೆ ಹುಂಡೈ ಮೋಟಾರ್ಸ್ ಮುಖ್ಯಸ್ಥ ಚುಂಗ್ ಮೊಂಗ್ -ಕೂ ಪ್ರಕಟಿಸಿದರು.

2007: ಲಿಕ್ವಿಡ್ ಕ್ರಿಸ್ಟಲ್ ಡಿಸ್ ಪ್ಲೇ (ಎಲ್ ಸಿ ಡಿ) ಜನಕ, ನೊಬೆಲ್ ಪ್ರಶಸ್ತಿ ಪುರಸ್ಕೃತ ಫ್ರಾನ್ಸಿನ ಪಿಯರೆ ಗಿಲಸ್ ಡೆ ಜನಸ್ (74) ಪ್ಯಾರಿಸ್ಸಿನಲ್ಲಿ ನಿಧನರಾದರು. 1991ರ ಭೌತಶಾಸ್ತ್ರ ನೊಬೆಲ್ ಪ್ರಶಸ್ತಿ ಪುರಸ್ಕೃತ ಡೆ ಜನಸ್ ಅವರು ಲಿಕ್ವಿಡ್ ಕ್ರಿಸ್ಟಲ್ ಮತ್ತು ಪಾಲಿಮಾರ್ಸ್ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿದವರು. ಎಲ್ ಸಿ ಡಿ ತಂತ್ರಜ್ಞಾನ ಇಂದಿನ ಎಲೆಕ್ಟ್ರಾನಿಕ್ ಯುಗದಲ್ಲಿ ಪ್ರಮುಖ ಪಾತ್ರ ವಹಿಸಿದೆ. 1932ರಲ್ಲಿ ಜನಿಸಿದ ಡೆ ಜನಸ್ 1974ರಲ್ಲಿ ಪ್ರಕಟಿಸಿದ `ದಿ ಫಿಸಿಕ್ಸ್ ಆಫ್ ಲಿಕ್ವಿಡ್ ಕ್ರಿಸ್ಟಲ್ಸ್' ಈ ಕ್ಷೇತ್ರದ ಮಹತ್ವದ ಕೃತಿ ಎಂಬುದಾಗಿ ಹೆಸರು ಪಡೆದಿದೆ.

2007: ಹತ್ತು ಕೋಟಿ ರೂಪಾಯಿ ಮೌಲ್ಯದ ವಿದೇಶೀ ಕರೆನ್ಸಿ ಒಯ್ಯುವ ವೇಳೆ ಸಿಕ್ಕಿಬಿದ್ದ ನೈಜೀರಿಯಾ ರಾಜತಾಂತ್ರಿಕನನ್ನು ಆದಾಯ ತೆರಿಗೆ ಇಲಾಖೆ ಬಿಡುಗಡೆ ಮಾಡಿತು. ಆದರೆ ಹಣವನ್ನು ವಶಪಡಿಸಿಕೊಳ್ಳಲಾಯಿತು.

2006: ಬುಧಿಯಾಸಿಂಗ್ ಮ್ಯಾರಥಾನ್ ಓಟದಿಂದ ಪ್ರೇರಿತನಾದ ಒರಿಸ್ಸಾದ ಮತ್ತೊಬ್ಬ ಪೋರ, ಭುವನೇಶ್ವರದಿಂದ 15 ಕಿ.ಮೀ. ದೂರದ ಪಿಪ್ಲಿಯ 12 ವರ್ಷದ ಬಾಲಕ ದಿಲೀಪ ರಾಣಾ 45 ಕಿ.ಮೀ. ದೂರವನ್ನು ಐದೂವರೆ ತಾಸಿನಲ್ಲಿ ಕ್ರಮಿಸಿ ದಾಖಲೆ ನಿರ್ಮಿಸಿದ.

2006: ಕೇಂದ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ ಅನುಷ್ಠಾನಗೊಳಿಸುವುದನ್ನು ಪ್ರತಿಭಟಿಸಿ ರಾಷ್ಟ್ರೀಯ ಜ್ಞಾನ ಆಯೋಗದ ಇಬ್ಬರು ಪ್ರಮುಖ ಸದಸ್ಯರಾದ ಪ್ರತಾಪ್ ಭಾನು ಮೆಹ್ತಾ ಮತ್ತು ಆಂಡ್ರೆ ಬೆಟೀಲಿ ರಾಜೀನಾಮೆ ನೀಡಿದರು. ಬೆಂಗಳೂರಿನಲ್ಲಿ ಕೆಲ ದಿನಗಳ ಹಿಂದೆ ನಡೆದ ರಾಷ್ಟ್ರೀಯ ಜ್ಞಾನ ಆಯೋಗದ ಸಭೆಯಲ್ಲಿ ಮೀಸಲಾತಿ ಪ್ರಸ್ತಾವಗಳನ್ನು ವಿರೋಧಿಸಿದ ಆರು ಮಂದಿ ಸದಸ್ಯರಲ್ಲಿ ಮೆಹ್ತಾ ಮತ್ತು ಬೆಟೀಲಿ ಸೇರಿದ್ದು, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಆಯೋಗದ ಅಭಿಪ್ರಾಯಗಳನ್ನು ತೀವ್ರವಾಗಿ ಟೀಕಿಸಿದ್ದರು.

2006: ಪಾಕಿಸ್ಥಾನಿ ಪ್ರಧಾನಿ ಶೌಕತ್ ಅಜೀಜ್ ಅವರ ಮೇಲೆ ವಿಫಲ ಆತ್ಮಹತ್ಯಾ ದಾಳಿ ನಡೆಸಿದ್ದಕ್ಕಾಗಿ ಪಾಕಿಸ್ಥಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವೊಂದು ನಾಲ್ಕು ಮಂದಿ ಉಗ್ರಗಾಮಿಗಳಿಗೆ ಮರಣದಂಡನೆ ಮತ್ತು ಇತರ ಮೂರು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತು. ಸಾಕ್ಷ್ಯದ ಅಭಾವ ಕಾರಣ ಇನ್ನೊಬ್ಬ ಆರೋಪಿಯನ್ನು ಆರೋಪಮುಕ್ತ ಗೊಳಿಸಿತು. ರಾವಲ್ಪಿಂಡಿಯಲ್ಲಿನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯದ ನ್ಯಾಯಾಧೀಶ ಸಫ್ದರ್ ಮಲಿಕ್ ಅವರು ಈ ತೀರ್ಪು ನೀಡಿದರು. 2004ರ ಜುಲೈ 30ರಂದು ಅಟೋಕ್ ಜಿಲ್ಲೆಯ ಫತೇ ಜಂಗ್ ಸಮೀಪದ ಜಾಫ್ರ್ ಮೋರ್ನಲ್ಲಿ ಶೌಕತ್ ಅಜೀಜ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ನಡೆದ ಈ ದಾಳಿಯಲ್ಲಿ 6 ಜನ ಸತ್ತು 48 ಮಂದಿ ಗಾಯಗೊಂಡಿದ್ದರು.

1989: ಭಾರತವು ಒರಿಸ್ಸಾದ ಚಂಡೀಪುರದಲ್ಲಿ `ಅಗ್ನಿ' ಕ್ಷಿಪಣಿಯನ್ನು ಹಾರಿಸಿತು. ಇದರೊಂದಿಗೆ ಭಾರತವು ಜಗತ್ತಿನಲ್ಲಿ ಮಧ್ಯಂತರಗಾಮೀ ಯುದ್ಧ ಕ್ಷಿಪಣಿ ಸಾಮರ್ಥ್ಯ ಹೊಂದಿದ 6ನೇ ರಾಷ್ಟ್ರವಾಯಿತು.

1969: ಕಲಾವಿದ ಪ್ರಕಾಶ ಪಿ. ಶೆಟ್ಟಿ ಜನನ.

1967: ಕಲಾವಿದ ಸೋಮಶೇಖರ ಬಿಸಲ್ವಾಡಿ ಜನನ.

1961: ಭಾರತದ (ಸಂವಿಧಾನದ 7ನೇ ಶೆಡ್ಯೂಲಿನಲ್ಲಿ ಸೇರ್ಪಡೆಯಾಗಿರುವ) ಯಾವುದೇ ಭಾಷೆಯ ಸೃಜನಾತ್ಮಕ ಸಾಹಿತ್ಯ ಕೃತಿಯನ್ನು ಗೌರವಿಸುವ ಸಲುವಾಗಿ ಜ್ಞಾನಪೀಠ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. 1965ರಲ್ಲಿ ಮೊದಲ ಪ್ರಶಸ್ತಿಯನ್ನು ಜಿ. ಶಂಕರ ಕುರುಪ್ ಅವರಿಗೆ ಮಲಯಾಳಂ ಕವನಗಳಿಗಾಗಿ ನೀಡಲಾಯಿತು.

1961: ಕಲಾವಿದ ವಿಶ್ವನಾಥ ನಾಕೋಡ್ ಜನನ.

1960: `ಗಾಮಾ ಪೆಹಲ್ವಾನ್' ಎಂದೇ ಜನಪ್ರಿಯರಾಗಿದ್ದ ಭಾರತೀಯ ಕುಸ್ತಿಪಟು ಗುಲಾಂ ಮಹಮ್ಮದ್ ತಮ್ಮ 80ನೇ ವಯಸ್ಸಿನಲ್ಲಿ ಲಾಹೋರಿನಲ್ಲಿ ಮೃತರಾದರು. ಭಾರತೀಯ ಕುಸ್ತಿಯನ್ನು ಜನಪ್ರಿಯಗೊಳಿಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದರು.

1949: ಕಲಾವಿದ ಎಸ್. ಕೆ. ರುದ್ರಮೂರ್ತಿ ಜನನ.

1940: ಭಾರತದ ಖ್ಯಾತ ಬೌಲರುಗಳಲ್ಲಿ ಒಬ್ಬರಾದ ಎರಪಲ್ಲಿ ಪ್ರಸನ್ನ ಹುಟ್ಟಿದ ದಿನ. 1970ರ ದಶಕದಲ್ಲಿ ಸ್ಪಿನ್ ಬೌಲರುಗಳಾದ ಬೇಡಿ, ಚಂದ್ರಶೇಖರ್ ಮತ್ತು ವೆಂಕಟರಾಘವನ್ ಜೊತೆಗೆ ಪ್ರಸನ್ನ ಕೂಡಾ ಮಿಂಚಿದ್ದರು.

1917: ಕಲಾವಿದ ಟಿ.ಎಸ್. ತಾತಾಚಾರ್ ಜನನ.

1916: ಕೀರ್ತನರತ್ನ, ಕೀರ್ತನ ಕೇಸರಿ ಇತ್ಯಾದಿ ಬಿರುದುಗಳಿಗೆ ಪಾತ್ರರಾಗಿದ್ದ ಖ್ಯಾತ ಕೀರ್ತನಕಾರ ಕೊಣನೂರು ಸೀತಾರಾಮ ಶಾಸ್ತ್ರಿ (22-5-1916ರಿಂದ 28-5-1970) ಅವರು ಶ್ರೀಕಂಠ ಶಾಸ್ತ್ರಿ ಅವರ ಮಗನಾಗಿ ಕೊಣನೂರಿನಲ್ಲಿ ಜನಿಸಿದರು.

1772: ಭಾರತದ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸುಧಾರಕ ರಾಮಮೋಹನ್ ರಾಯ್ (1772-1833) ಜನ್ಮದಿನ. ಸಾಂಪ್ರದಾಯಿಕ ಹಿಂದೂ ಸಂಸ್ಕೃತಿಯನ್ನು ಪ್ರಶ್ನಿಸಿದ ಇವರನ್ನು `ಆಧುನಿಕ ಭಾರತದ ಪಿತಾಮಹ' ಎಂದು ಕರೆಯಲಾಗಿದೆ.

1545: ಕಾಲಿಂಜರಿನಲ್ಲಿ ಸಂಭವಿಸಿದ ಸ್ಫೋಟವೊಂದರಲ್ಲಿ ಆಫ್ಘನ್ ದೊರೆ ಶೇರ್ ಶಹ ಸೂರಿ ಅಸು ನೀಗಿದ.

No comments:

Post a Comment