Friday, May 18, 2018

ಇಂದಿನ ಇತಿಹಾಸ History Today ಮೇ 17

ಇಂದಿನ ಇತಿಹಾಸ History Today  ಮೇ 17
2018:  ಬೆಂಗಳೂರು: ಮಧ್ಯರಾತ್ರಿಯ ಐತಿಹಾಸಿಕ ವಿಚಾರಣೆಯಲ್ಲಿ ಪ್ರಮಾಣವಚನ ಸಮಾರಂಭಕ್ಕೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದ ಬಳಿಕ ಈದಿನ ಬೆಳಗ್ಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಅತಿಶೀಘ್ರದಲ್ಲೇ ವಿಶ್ವಾಸ ಮತ ಕೋರುವುದಾಗಿ ಪ್ರಕಟಿಸಿದರು.  ಈ ಮಧ್ಯೆ ಯಡಿಯೂರಪ್ಪ ಅವರು ರಾಜ್ಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಕ್ಕೆ ವಿಪಕ್ಷಗಳು ರಾಷ್ಟ್ರಾದ್ಯಂತ ’ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಪ್ರತಿಭಟಿಸಿದ್ದರೆ, ಅದಕ್ಕೆ ಪ್ರತಿಯಾಗಿ ಬಿಜೆಪಿಯೂ ’ಪ್ರಜಾಪ್ರಭುತ್ವದ ಕಗ್ಗೊಲೆಯಾಗಿರುವುದು ಜನಾದೇಶವಿಲ್ಲದೆ ಅಧಿಕಾರ ಹಿಡಿಯಲು ಯತ್ನಿಸಿದ ವಿಪಕ್ಷಗಳಿಂದ ಎಂದು ಖಂಡಿಸಿತು.  ಕಾಂಗ್ರೆಸ್ ಅಧ್ಯಕ್ಷ ಜಿ. ಪರಮೇಶ್ವರ್ ಮತ್ತು ಜನತಾದಳ (ಎಸ್) ನಾಯಕ ಎಚ್.ಡಿ. ಕುಮಾರ ಸ್ವಾಮಿ ಅವರು ಯಡಿಯೂರಪ್ಪ ಅವರಿಗೆ ಸರ್ಕಾರ ರಚಿಸಲು ಆಹ್ವಾನ ನೀಡಿದ ರಾಜ್ಯಪಾಲ ವಜುಭಾಯಿ ವಾಲಾ ಅವರ ತೀರ್ಮಾನವನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಮಧ್ಯರಾತ್ರಿಯಲ್ಲೇ ನಡೆಸಿದ ತ್ರಿಸದಸ್ಯ ಪೀಠವು ಪ್ರಮಾಣವಚನ ಸಮಾರಂಭಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿತು. ಆದರೆ ೪೮ ಗಂಟೆಗಳ ಒಳಗಾಗಿ ಯಡಿಯೂರಪ್ಪ ಅವರು ರಾಜ್ಯಪಾಲರಿಗೆ ಸಲ್ಲಿಸಿದ ಪತ್ರವನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಬೇಕು ಎಂದು ಅಟಾರ್ನಿ ಜನರಲ್ ಅವರಿಗೆ ಆದೇಶಿಸಿತು. ಈದಿನ ಬೆಳಗ್ಗೆ ಪಕ್ಷದ ರಾಷ್ಟ್ರೀಯ ನಾಯಕರಾದ ಮುರಳೀಧರ ರಾವ್, ಜಾವಡೇಕರ್, ರಾಜ್ಯ ನಾಯಕರಾದ ಅನಂತ ಕುಮಾರ್ ಮತ್ತಿತರರ ಸಮ್ಮುಖದಲ್ಲಿ ರಾಜಭವನದ ಗಾಜಿನ ಮನೆಯಲ್ಲಿ ಯಡಿಯೂರಪ್ಪ ಅವರು ’ದೇವರು ಹಾಗೂ ರೈತನ ಹೆಸರಿನಲ್ಲಿ ರಾಜ್ಯದ ೨೩ನೇ ಮುಖ್ಯಮಂತ್ರಿಯಾಗಿ ಹಾಗೂ ಮೂರನೇ ಬಾರಿಗೆ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದರು. ಹಸಿರು ಶಾಲು ಹೊದ್ದು ಪ್ರಮಾಣವಚನ ಸ್ವೀಕರಿಸಿದ ಯಡಿಯೂರಪ್ಪ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದ ರಾಜ್ಯಪಾಲ ವಜುಭಾಯಿ ವಾಲಾ ಅವರು ಪುಷ್ಪಗುಚ್ಛ ನೀಡಿ ನೂತನ ಮುಖ್ಯಮಂತ್ರಿಯನ್ನು ಅಭಿನಂದಿಸಿದರು.  ಕೇವಲ ೧೦ ನಿಮಿಷದಲ್ಲಿ ಕಾರ್ಯಕ್ರಮ ಮುಕ್ತಾಯವಾಯಿತು. ಯಡಿಯೂರಪ್ಪ ಅವರು ವೇದಿಕೆಯಿಂದ ಕೆಳಗಿಳಿಯುತ್ತಿದ್ದಂತೆ ಮುಖಂಡರು ಹೂ ಗುಚ್ಚಗಳನ್ನು ನೀಡಿ ಅಭಿನಂದಿಸಿದರು. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಯಡಿಯೂರಪ್ಪ, ಬಹುಮತ ಸಾಬೀತು ಪಡಿಸಲು ರಾಜ್ಯಪಾಲರು ತಮಗೆ ೧೫ ದಿನಗಳ ಕಾಲಾವಕಾಶ ನೀಡಿದ್ದರೂ, ಅಷ್ಟು ದಿನ ಕಾಯುವುದಿಲ್ಲ, ಆದಷ್ಟೂ ಬೇಗ ವಿಶ್ವಾಸಮತ ಯಾಚನೆ ಮಾಡುವೆ ಎಂದು ಹೇಳಿದರು.  ಏಕೈಕ ದೊಡ್ಡ ಪಕ್ಷವಾಗಿ ಆಯ್ಕೆ ಮಾಡುವ ಮೂಲಕ ಜನತೆ ಬಿಜೆಪಿಗೆ ಸರ್ಕಾರ ರಚನೆಗೆ ಜನಾದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ವಿಶ್ವಾಸಮತ ಯಾಚನೆಯ ವೇಳೆಯಲ್ಲಿ ಜನಾದೇಶವನ್ನು ಎತ್ತಿ ಹಿಡಿಯಲು ಆತ್ಮಸಾಕ್ಷಿ ಮತ ನೀಡುವಂತೆ ಎಲ್ಲ ಶಾಸಕರನ್ನೂ ಕೋರುವೆ ಎಂದು ಅವರು ನುಡಿದರು. ಮುಖ್ಯಮಂತ್ರಿ ಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಸಂಪುಟ ಸಭೆಯಲ್ಲೇ ರೈತರ ಸಾಲಮನ್ನಾ ಮಾಡುವುದಾಗಿ  ನೀಡಿದ್ದ ಭರವಸೆ ಬಗ್ಗೆ ಪ್ರಸ್ತಾಪಿಸಿದ ಅವರು  ಮುಖ್ಯಕಾರ್ಯದರ್ಶಿಯವರಿಗೆ ಇದಕ್ಕೆ ಸಂಬಂಧಿಸಿದ ವಿವರಗಳ ಪರಿಶೀಲನೆಗೆ ಸೂಚಿಸಿದ್ದು ಇಷ್ಟರಲ್ಲೇ ನಿರ್ಧಾರ ಪ್ರಕಟಿಸಲಾಗುವುದು ಎಂದರು. ಮೇ 18ರ ಶುಕ್ರವಾರ ರೈತ ಸಾಲಮನ್ನಾ ಕುರಿತ ನಿರ್ಧಾರ ಪ್ರಕಟಿಸಲಾಗುವುದು ಎಂದು ಅವರು ಹೇಳಿದರು.  ಕಾಂಗ್ರೆಸ್ - ಜೆಡಿಎಸ್ ಕೂಟವು ಚುನಾವಣೋತ್ತರವಾಗಿ ಅನೈತಿಕ ಮೈತ್ರಿ ಮಾಡಿಕೊಂಡು ಅಧಿಕಾರ ಕಬಳಿಸಲು ಯತ್ನಿಸುತ್ತಿವೆ. ನನಗೆ ವಿಶ್ವಾಸಮತ ಗೆಲ್ಲುವ ವಿಶ್ವಾಸವಿದೆ. ನನ್ನ ಸರ್ಕಾರ ಐದು ವರ್ಷಗಳನ್ನು ಪೂರೈಸುವುದು ಎಂದು ಅವರು ನುಡಿದರು.  ಹಲವು ಶಾಸಕರು ಬಿಜೆಪಿ ಜೊತೆ ಸಂಪರ್ಕದಲ್ಲಿ: ಈ ಮಧ್ಯೆ ಬಿಜೆಪಿಯು ’ಎಲ್ಲರ ಕಲ್ಪನೆಯನ್ನೂ ಮೀರಿದ ಸಂಖ್ಯಾಬಲದೊಂದಿಗೆ ಬಿಜೆಪಿಯು ಸದನದಲ್ಲಿ ಬಹುಮತ ಸಾಬೀತು ಪಡಿಸುವುದು ಎಂದು ಮೊಳಕಾಲ್ಮೂರು ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ ಬಿ. ಶ್ರೀರಾಮುಲು ಈದಿನ ಹೇಳಿದರು.  ಹಲವಾರು ಶಾಸಕರು ತಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ಜೆಡಿ(ಎಸ್) ಮತ್ತು ಕಾಂಗ್ರೆಸ್ ಪಕ್ಷದ ಹಲವಾರು ಅತೃಪ್ತರು ಯಡಿಯೂರಪ್ಪ ಅವರನ್ನು ಬೆಂಬಲಿಸಲಿದ್ದಾರೆ ಎಂದು ವಾಲ್ಮೀಕಿ ನಾಯಕ ಸಮುದಾಯದ ನಾಯಕ ಹಾಗೂ ಗಣಿ ಉದ್ಯಮಿ ಜನಾರ್ದನ ರೆಡ್ಡಿ ಅವರ ನಿಕಟವರ್ತಿಯಾದ ಶ್ರೀರಾಮುಲು ಹೇಳಿದರು.  ಭೀತಿಯ ಪರಿಸರ ಸೃಷ್ಟಿ- ರಾಹುಲ್ ಗಾಂಧಿ: ದೇಶದಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಛತ್ತೀಸ್ ಗಢದ ರಾಯ್‌ಪುರದಲ್ಲಿ ಹೇಳಿದರು. ’ರಾಷ್ಟ್ರದಲ್ಲಿ ಸಂವಿಧಾನದ ಮೇಲೆ ತೀವ್ರ ದಾಳಿ ನಡೆದಿದೆ. ಬಿಜೆಪಿ ಮತ್ತು ಆರ್ ಎಸ್ ಎಸ್ ರಾಷ್ಟ್ರದ ಪ್ರತಿಯೊಂದು ಪ್ರಜಾತಾಂತ್ರಿಕ ಸಂಸ್ಥೆಯನ್ನು ವಶಪಡಿಸಿಕೊಳ್ಳುತ್ತಿದೆ ಎಂದು ರಾಹುಲ್ ನುಡಿದರು. ರಾಮ್ ಜೇಠ್ಮಲಾನಿ ಸುಪ್ರೀಂಗೆ: ಏತನ್ಮಧ್ಯೆ ಹಿರಿಯ ವಕೀಲ ರಾಮ್ ಜೇಠ್ಮಲಾನಿ ಅವರು ಬಿಜೆಪಿಗೆ ಸರ್ಕಾರ ರಚನೆಗೆ ಆಹ್ವಾನ ನೀಡಿದ ಕರ್ನಾಟಕ ರಾಜ್ಯಪಾಲರ ನಿರ್ಧಾರದ ವಿರುದ್ಧ ವೈಯಕ್ತಿಕ ನೆಲೆಯಲ್ಲಿ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ರಾಜ್ಯಪಾಲರ ಆದೇಶವು ’ಸಾಂವಿಧಾನಿಕ ಅಧಿಕಾರದ ಅತಿಸ್ಪಷ್ಟವಾದ ದುರುಪಯೋಗ ಎಂದು ಅವರು ಸುಪ್ರೀಂಕೋರ್ಟಿಗೆ ಹೇಳಿದರು. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಅವರು ಮೇ 19ರ ಶನಿವಾರ ಸಂಬಂಧಪಟ್ಟ ಪೀಠದ ಮುಂದೆ ಅರ್ಜಿಯನ್ನು ಪ್ರಸ್ತಾಪಿಸುವಂತೆ ಸೂಚಿಸಿದರು. ರಾಜ್ಯಪಾಲರ ವಾಪಸಿಗೆ ಆಗ್ರಹ: ಕರ್ನಾಟಕದ ರಾಜ್ಯಪಾಲರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ಅವರು ೨೦೧೧ರಲ್ಲಿ ತಾವು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಮಾಡಿದ  ಟ್ವೀಟನ್ನು ಉಲ್ಲೇಖಿಸಿದ ಕಾಂಗ್ರೆಸ್ ಪಕ್ಷವು, ’ನಾವಿದನ್ನು ಒಪ್ಪುತ್ತೇವೆ ಎಂದು ಹೇಳುವ ಮೂಲಕ ಕರ್ನಾಟಕ ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಈದಿನ ಕೇಂದ್ರವನ್ನು ಆಗ್ರಹಿಸಿತು.  ‘ಕರ್ನಾಟಕದ ರಾಜ್ಯಪಾಲರು ಭಾರತದ ಒಕ್ಕೂಟ ರಚನೆಯನ್ನು ಹಾಳುಗೆಡವಲು ಟೊಂಕಕಟ್ಟಿದ್ದಾರೆ. ಅವರನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ರಾಷ್ಟ್ರಪತಿಗೆ ಹೇಳಿ ಎಂದು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ೨೦೧೧ರ ಮೇ ೧೯ರಂದು ಮೋದಿ ಅವರು ಮಾಡಿದ್ದ ಟ್ವೀಟನ್ನು ಉಲ್ಲೇಖಿಸಿ ಕಾಂಗ್ರೆಸ್ ಪ್ರಧಾನಿಯನ್ನು ಒತ್ತಾಯಿಸಿತು. ೨೦೧೧ರಲ್ಲಿ ಕರ್ನಾಟಕದ ರಾಜ್ಯಪಾಲ ಎಚ್.ಆರ್. ಭಾರಧ್ವಾಜ್ ಅವರು ಪಕ್ಷಪಾತಿ ವರ್ತನೆ ತೋರುತ್ತಾ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ಕಿರುಕುಳ ನೀಡುತ್ತಿದ್ದಾರೆ ಎಂದು ಆಪಾದಿಸಿದ್ದ ಮೋದಿ ಮತ್ತು ಬಿಜೆಪಿ ಅವರನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಆಗ್ರಹಿಸಿತ್ತು.  ಪ್ರತಿಭಟನೆಯಲ್ಲಿ ಪಾಲ್ಗೊಂಡ ದೇವೇಗೌಡ: ರಾಜಭವನದಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರದ ಸಂಭ್ರಮದಲ್ಲಿದ್ದಾಗ ವಿಧಾನಸೌಧದ ಮುಂದಿನ ಗಾಂಧಿ ಪ್ರತಿಮೆಯ ಬಳಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಾದ ಸಿದ್ದರಾಮಯ್ಯ, ಗುಲಾಂ ನಬಿ ಆಜಾದ್ ಮತ್ತಿತರರು ಪ್ರತಿಭಟನಾ ಧರಣಿ ಆರಂಭಿಸಿದರು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಬಳಿಕ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ದೇವೇಗೌಡ ಅವರು ಮೊದಲು ಹೊಟೇಲಿನಲ್ಲಿ ತಂಗಿರುವ ಜೆಡಿಎಸ್ ಶಾಸಕರನ್ನು ಭೇಟಿ ಮಾಡಿ ಬಳಿಕ ಪ್ರತಿಭಟನಾ ಸ್ಥಳಕ್ಕೆ ತೆರಳಿದರು. ನ್ಯಾಯದೊರಕುವವರೆಗೂ ತಮ್ಮ ಪ್ರತಿಭಟನೆ ಮುಂದುವರೆಯುವುದು ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ  ಹೇಳಿದರು. ’ಕಣ್ಮರೆಯಾಗಿರುವ ಶಾಸಕರು ಶೀಘ್ರವೇ ನಮ್ಮ ಜೊತೆ ಸೇರಲಿದ್ದಾರೆ ಎಂದು ಜೆಡಿಎಸ್ ನಾಯಕ ಕುಮಾರ ಸ್ವಾಮಿ ಈ ಸಂದರ್ಭದಲ್ಲಿ ಹೇಳಿದರು.  ರಾಹುಲ್-ಅಮಿತ್ ವಾಕ್ಸಮರ: ’ಪ್ರಜಾಪ್ರಭುತ್ವದ ಕಗ್ಗೊಲೆ ಕುರಿತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಟ್ವೀಟ್ ವಾಕ್ಸಮರ ನಡೆಸಿದರು.  ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಸಂಪೂರ್ಣ ಘಟನಾವಳಿ ಗಳನ್ನು ’ಪ್ರಜಾತಂತ್ರದ ಪರಾಭವ ಎಂದು ರಾಹುಲ್ ಗಾಂಧಿ ಬಣ್ಣಿಸಿದರು. ತನಗೆ ಸಂಖ್ಯಾಬಲ ಇಲ್ಲದೇ ಇದ್ದರೂ ಸರ್ಕಾರ ರಚನೆಗೆ ಒತ್ತಾಯಿಸಿದ ಬಿಜೆಪಿಯ ಆಗ್ರಹ ನಮ್ಮ ಸಂವಿಧಾನದ ಅಪಹಾಸ್ಯ ಎಂದು ಅವರು ಹೇಳಿದರು. ’ಈದಿನ ಬೆಳಗ್ಗೆ ಬಿಜೆಪಿಯು ತನ್ನ ಟೊಳ್ಳು ವಿಜಯದ ಸಂಭ್ರಮಾಚರಣೆ ಮಾಡಿದರೆ, ಭಾರತವು ಪ್ರಜಾತಂತ್ರದ ಪರಾಭವಕ್ಕಾಗಿ ಶೋಕಿಸಿತು ಎಂದು ಅವರು ಟ್ವೀಟ್ ಮಾಡಿದರು.  ಇದಕ್ಕೆ ಟ್ವೀಟ್ ಮೂಲಕವೇ ಉತ್ತರ ನೀಡಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ’ಭ್ರಮನಿರಸನಗೊಂಡ ಕಾಂಗ್ರೆಸ್ ಪಕ್ಷವು ಜೆಡಿ(ಎಸ್)ಗೆ ಅವಕಾಶವಾದಿ ಕೊಡುಗೆ ಘೋಷಿಸಿದ ಕ್ಷಣದಲ್ಲೇ ’ಪ್ರಜಾಪ್ರಭುತ್ವದ ಕೊಲೆ ಆಯಿತು ಎಂದು ಹೇಳಿದರು. ತಮ್ಮ ಪಕ್ಷದ ಇತಿಹಾಸ ಬಹುಶಃ ಕಾಂಗ್ರೆಸ್ ಅಧ್ಯಕ್ಷರಿಗೆ ಮರೆತುಹೋಗಿದೆ. ಭೀಕರ ತುರ್ತು ಪರಿಸ್ಥಿತಿಯನ್ನು ದೇಶದ ಮೇಲೆ ಹೇರಿದ, ಸಂವಿಧಾನದ ೩೫೬ನೇ ಪರಿಚ್ಛೇದವನ್ನು ಢಾಳಾಗಿ ದುರುಪಯೋಗ ಮಾಡಿದ, ನ್ಯಾಯಾಲಗಳು, ಮಾಧ್ಯಮ, ನಾಗರಿಕ ಸಮಾಜವನ್ನು ಪತನಗೊಳಿಸಿದ್ದು ರಾಹುಲ್ ಗಾಂಧಿ ಅವರ ಪಕ್ಷದ ಕಾಣಿಕೆ ಎಂದು ಅಮಿತ್ ಶಾ ಚುಚ್ಚಿದರು. ‘ಕರ್ನಾಟಕದಲ್ಲಿ ಯಾರಿಗೆ ಜನಾದೇಶ ಲಭಿಸಿದೆ? ೧೦೪ ಸ್ಥಾನಗಳನ್ನು ಗೆದ್ದ ಬಿಜೆಪಿಗೋ? ಅಥವಾ ಸ್ವತಃ ಮುಖ್ಯಮಂತ್ರಿ ಮತ್ತು ಸಚಿವರ ಭಾರಿ ಅಂತರದ ಪರಾಭವದೊಂದಿಗೆ ೭೮ ಸ್ಥಾನಗಳಿಗೆ ಕುಸಿದ ಕಾಂಗ್ರೆಸಿಗೋ, ಹಲವರು ಠೇವಣಿಗಳನ್ನೂ ಕಳೆದುಕೊಳ್ಳುವುದರ ಜೊತೆಗೆ ಕೇವಲ ೩೭ ಸ್ಥಾನ ಗೆದ್ದ ಜೆಡಿ(ಎಸ್) ಗೋ? ಆನರು ಇದನ್ನು ಅರ್ಥ ಮಾಡಿಕೊಳ್ಳುವಷ್ಟು ಬುದ್ಧಿವಂತರಾಗಿದ್ದಾರೆ ಎಂದು ಅಮಿತ್ ಶಾ ಟ್ವೀಟ್ ಮಾಡಿದರು.  ‘ಕಾಂಗ್ರೆಸ್ ಪಕ್ಷವು ಜನತಾದಳ (ಎಸ್)ಕ್ಕೆ ಈ ಅವಕಾಶವಾದಿ ಕೊಡುಗೆ ನೀಡಿದ್ದು ಕರ್ನಾಟಕದ ಕಲ್ಯಾಣಕ್ಕಾಗಿ ಅಲ್ಲ, ಕ್ಷುಲ್ಲಕ ರಾಜಕೀಯ ಲಾಭಕ್ಕಾಗಿ, ನಾಚಿಕೆಗೇಡು ಎಂದೂ ಶಾ ಜರೆದರು.  ಶಾಸಕರ ಮೇಲೆ ಒತ್ತಡ: ಇದಕ್ಕೆ ಮುನ್ನ ಬೆಂಗಳೂರಿನಲ್ಲಿ ಎಚ್.ಡಿ. ಕುಮಾರ ಸ್ವಾಮಿ ಅವರು ಕಾಂಗ್ರೆಸ್ ಮತ್ತು ಜನತಾದಳ ಶಾಸಕರಮೇಲೆ  ಬಿಜೆಪಿ ಒತ್ತಡ ಹಾಕುತ್ತಿದೆ. ಶಾಸಕ ಆನಂದ ಸಿಂಗ್ ಅವರನ್ನು ವಿಮಾನದಲ್ಲಿ ದೆಹಲಿಗೆ ಕರೆದೊಯ್ಯಲಾಗಿದ್ದು ಅವರ ಮೇಲೆ ಜಾರಿ ನಿರ್ದೇಶನಾಲಯ ಪ್ರಕರಣಗಳನ್ನು ಜಡಿಯಲಾಗುವುದು ಎಂದು ಬೆದರಿಸಲಾಗುತ್ತಿದೆ ಎಂದು ಆಪಾದಿಸಿದರು. ’ನಮ್ಮ ಶಾಸಕರ ರಕ್ಷಣೆ ನಮ್ಮ ಆದ್ಯ ಕೆಲಸವಾಗಿದೆ. ಮುಖ್ಯಮಂತ್ರಿಗಳಾದ ಚಂದ್ರಬಾಬು ನಾಯ್ಡು, ಮಮತಾ ಬ್ಯಾನರ್ಜಿ ಅವರಂತಹವರೂ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ನುಡಿದರು.

2018: ನವದೆಹಲಿ: ಕರ್ನಾಟಕದ ಮುಖ್ಯಮಂತ್ರಿಯಾಗಿ ಬೆಳಗ್ಗೆ ಪ್ರಮಾಣ ವಚನ ಸ್ವೀಕರಿಸಿದ ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಸಲ್ಲಿಸಿದ ಎರಡು ಪತ್ರಗಳನ್ನು ತನ್ನ ಮುಂದೆ ಹಾಜರು ಪಡಿಸಲು ಸುಪ್ರೀಂಕೋರ್ಟ್ ಅಟಾರ್ನಿ ಜನರಲ್ ಅವರಿಗೆ ೪೮ ಗಂಟೆಗಳ ಗಡುವು ನೀಡಿತು.  ಹೀಗಾಗಿ ಕರ್ನಾಟಕ ಸರ್ಕಾರದ ಭವಿಷ್ಯ ಏನಾಗಲಿದೆ ಎಂಬ ಕುತೂಹಲ ರಾಷ್ಟ್ರಾದ್ಯಂತ ಮೂಡಿತು. ಈದಿನ ನಸುಕಿನಲ್ಲಿ ಚಾರಿತ್ರಿಕ ವಿಚಾರಣೆ ನಡೆಸಿದ ಸುಪ್ರೀಂಕೋರ್ಟಿನ ತ್ರಿಸದಸ್ಯ ಪೀಠವು ನೀಡಿದ ನಿರ್ದೇಶನದ ಪ್ರಕಾರ ದೇಶದ ಅತ್ಯುನ್ನತ ಕಾನೂನು ಅಧಿಕಾರಿಯಾಗಿರುವ ಅಟಾರ್ನಿ ಜನರಲ್ ಅವರು ರಾಜ್ಯಪಾಲರಿಂದ ಯಡಿಯೂರಪ್ಪ ಅವರು ಸಲ್ಲಿಸಿದ ಪತ್ರಗಳನ್ನು ಪಡೆದುಕೊಂಡು ಮೇ ೧೮ರಂದು ಬೆಳಗ್ಗೆ ೧೦.೩೦ ಗಂಟೆಗೆ ಸುಪ್ರೀಂಕೋರ್ಟಿನಲ್ಲಿ ಹಾಜರು ಪಡಿಸಬೇಕು.  ಮೇ ೧೬ರ ಸಂಜೆ ಯಡಿಯೂರಪ್ಪ ಅವರಿಗೆ ಸರ್ಕಾರ ರಚಿಸುವಂತೆ ರಾಜ್ಯಪಾಲರು ಆಹ್ವಾನ ನೀಡಲು, ಬಿಜೆಪಿ ನಾಯಕ ಮೇ ೧೫ ಮತ್ತು ೧೬ರ ದಿನಾಂಕಗಳನ್ನು ಸಲ್ಲಿಸಿದ್ದ ಪತ್ರಗಳೇ ಆಧಾರವಾಗಿದ್ದು, ಇದೀಗ ಆ ಪತ್ರಗಳಲ್ಲಿ ಏನು ಬರೆಯಲಾಗಿದೆ ಎಂಬ ಬಗ್ಗೆ ಅರಿತುಕೊಳ್ಳುವತ್ತ ನ್ಯಾಯಾಲಯ ಗಮನ ಹರಿಸಿದೆ. ರಾಜ್ಯಪಾಲರ ಆಹ್ವಾನದ ಮೇರೆಗೆ ಯಡಿಯೂರಪ್ಪ ಅವರು ಈದಿನ ಬೆಳಗ್ಗೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಸುಪ್ರೀಂಕೋರ್ಟಿನ ನ್ಯಾಯಮೂರ್ತಿ ಎ.ಕೆ. ಸಿಕ್ರಿ ನೇತೃತ್ವದ ತ್ರಿಸದಸ್ಯ ಪೀಠವು ಎರಡು ಪತ್ರಗಳಲ್ಲಿ ಇರುವ ಅಂಶಗಳನ್ನು ಪರಿಶೀಲಿಸಲು ಬಯಸಿದೆ. ಮುಖ್ಯವಾಗಿ ಯಡಿಯೂರಪ್ಪ ಅವರನ್ನು ಸರ್ಕಾರ ರಚಿಸುವಂತೆ ಆಹ್ವಾನಿಸುವ ರಾಜ್ಯಪಾಲರ ನಿರ್ಧಾರವು ಸೂಚಿತವಾದುದಾಗಿತ್ತೇ ಎಂಬುದನ್ನು ಪರಿಶೀಲಿಸಲು ಪೀಠವು ಬಯಸಿದೆ.  ಬೇರೆಯೇ ಮಾತುಗಳಲ್ಲಿ ಹೇಳುವುದಾದರೆ, ಕಾಂಗ್ರೆಸ್- ಜೆಡಿಎಸ್ ಕೂಟಕ್ಕಿಂತಲೂ ಯಡಿಯೂರಪ್ಪ ಅವರೇ ಅತ್ಯುತ್ತಮ ಆಯ್ಕೆ ಎಂಬ ತೀರ್ಮಾನಕ್ಕೆ ಬರಲು ರಾಜ್ಯಪಾಲರಿಗೆ ಸೂಕ್ತವಾದ ಮಾಹಿತಿಗಳನ್ನು ಯಡಿಯೂರಪ್ಪ ಅವರು ಒದಗಿಸಿದ್ದರೇ ಎಂಬುದನ್ನು ಪರಿಶೀಲಿಸಲು ನ್ಯಾಯಾಲಯ ಬಯಸಿತು. ರಾಜ್ಯಪಾಲರು ಮುಖ್ಯಮಂತ್ರಿಗೆ ಸದನದಲ್ಲಿ ತಮ್ಮ ಬಹುಮತ ಸಾಬೀತು ಪಡಿಸಲು ೧೫ ದಿನಗಳ ಕಾಲಾವಕಾಶವನ್ನು ಹೇಗೆ ನೀಡಿದರು ಎಂಬ ಬಗ್ಗೆ ಹಿರಿಯ ವಕೀಲ ಅಭಿಷೇಕ್ ಮನು ಸಿಂಗ್ ಅವರು ತಮ್ಮ ದೂರಿನಲ್ಲಿ ಒತ್ತು ನೀಡಿದ್ದರು.  ಯಡಿಯೂರಪ್ಪ ಅವರು ಬಹುಮತ ಸಾಬೀತು ಪಡಿಸಲು ಕೇವಲ ೭ ದಿನಗಳ ಕಾಲಾವಕಾಶ ಕೋರಿದ್ದರು, ಆದರೆ ರಾಜ್ಯಪಾಲರು ಅವರಿಗೆ ಧಾರಾಳವಾಗಿ ೧೫ ದಿನಗಳ ಕಾಲಾವಕಾಶ ನೀಡಿದರು. ಇಷ್ಟೊಂದು ಸಮಯದಲ್ಲಿ ಬಿಜೆಪಿಯ ತನ್ನ ಸಂಖ್ಯೆ ಹೆಚ್ಚಿಸಿಕೊಳ್ಳಲು ’ಕುದುರೆ ವ್ಯಾಪಾರಕ್ಕಾಗಿ ಒದಗಿಸಲಾಗಿದೆ ಎಂಬ ಶಂಕೆ ವಿಪಕ್ಷಗಳದು.  ಹಲವಾರು ಸಾಧ್ಯತೆಗಳಲ್ಲಿ ಒಂದು ನ್ಯಾಯಾಲಯವು ಸದನದಲ್ಲಿ ಬಹುಮತ ಸಾಬೀತು ಪಡಿಸುವ ದಿನಾಂಕವನ್ನು ಮುಂದೂಡುವುದು ಅಥವಾ ಹಿಂದೂಡುವುದು. ಮುಂದೂಡಿದರೆ ಪಕ್ಷಕ್ಕೆ ಸದಸ್ಯರ ಸಂಖ್ಯೆ ಹೆಚ್ಚಿಸಿಕೊಳ್ಳಲು ಅವಕಾಶ ದೊರೆಯುತ್ತದೆ. ಪ್ರಸ್ತುತ ಬಿಜೆಪಿ ೧೦೪ ಸದಸ್ಯರನ್ನು ಹೊಂದಿದ್ದರೆ ಕಾಂಗ್ರೆಸ್-ಜೆಡಿಎಸ್ ಕೂಟವು ೧೧೭ ಸದಸ್ಯರನ್ನು ಹೊಂದಿದ್ದು, ಬಹುಮತಕ್ಕಿಂತ ಹೆಚ್ಚಿನ ಸಂಖ್ಯೆಯನ್ನು ಹೊಂದಿದೆ. ಇದಕ್ಕೆ ಬದಲಾಗಿ ನ್ಯಾಯಾಲಯವು ಬಹುಮತ ಸಾಬೀತು ಪಡಿಸುವ ದಿನಾಂಕವನ್ನು ಹಿಂದೂಡಿದರೆ ಪಕ್ಷಕ್ಕೆ ಅಗತ್ಯ ಸಂಖ್ಯೆ ಗಳಿಸಿಕೊಳ್ಳಲು ಕಷ್ಟವಾಗಬಹುದು. ಸದನ ಪರೀಕ್ಷೆಯಲ್ಲಿ ಯಡಿಯೂರಪ್ಪ ಅವರು ತಮ್ಮ ಬಹುಮತ ಸಾಬೀತು ಪಡಿಸಲು ವಿಫಲರಾದಲ್ಲಿ, ರಾಜ್ಯಪಾಲರಿಗೆ ಕಾಂಗ್ರೆಸ್-ಜೆಡಿಎಸ್ ಕೂಟವನ್ನು ಸರ್ಕಾರ ರಚಿಸುವಂತೆ ಆಹ್ವಾನಿಸುವುದು ಅನಿವಾರ್‍ಯವಾಗಲಿದೆ.  ಸರ್ಕಾರಿಯಾ ಆಯೋಗವು ೧೯೮೮ರಲ್ಲಿ ಸಲ್ಲಿಸಿರುವ ವರದಿಯ ಶಿಫಾರಸಿನಂತೆ ಏಕೈಕ ದೊಡ್ಡ ಪಕ್ಷವು ಬಹುಮತ ಸಾಬೀತು ಪಡಿಸುವಲ್ಲಿ ವಿಫಲವಾದರೆ ಚುನಾವಣೋತ್ತರ ಮೈತ್ರಿಯನ್ನು ಪರಿಗಣಿಸಬಹುದು.  ಈ ಸೂತ್ರವನ್ನು ಸುಪ್ರೀಂಕೋರ್ಟ್ ಹಲವಾರು ತೀರ್ಪುಗಳಲ್ಲಿ ಅನುಮೋದಿಸಿದೆ.  ಇದಲ್ಲದೆ, ಏಕೈಕ ದೊಡ್ಡ ಪಕ್ಷವನ್ನು ಸರ್ಕಾರ ರಚನೆಗೆ ಆಹ್ವಾನಿಸುವ ಮುನ್ನ ಆ ಪಕ್ಷವು ಚುನಾವಣೋತ್ತರ ಮೈತ್ರಿಗಿಂತ ಮೊದಲಿನ ಆದ್ಯತೆ ಪಡೆಯುವ ಸಲುವಾಗಿ ಪಕ್ಷೇತರರೂ ಸೇರಿದಂತೆ ಇತರ ಪಕ್ಷಗಳಿಂದ ಅಗತ್ಯ ಬೆಂಬಲವನ್ನು ಪಡೆದಿರಬೇಕು ಎಂಬುದಾಗಿ ಸರ್ಕಾರಿಯಾ ಆಯೋಗ ಮಾಡಿದ್ದ ಶಿಫಾರಸನ್ನು ಕರ್ನಾಟಕ ರಾಜ್ಯಪಾಲರು ಗಣನೆಗೆ ತೆಗೆದುಕೊಂಡಿದ್ದಾರೆಯೇ ಎಂದೂ ಸಿಂಘ್ವಿ ಪ್ರಶ್ನಿಸಿದ್ದಾರೆ.
ಶುಕ್ರವಾರ ಸುಪ್ರೀಂಕೋರ್ಟ್ ಕಾಂಗ್ರೆಸ್- ಜನತಾದಳ ಅರ್ಜಿಯ ವಿಚಾರಣೆ ನಡೆಸಲಿರುವ ಹಿನ್ನೆಲೆಯಲ್ಲಿ ವಿಪಕ್ಷಗಳು ಯಡಿಯೂರಪ್ಪ ಅವರು ’ಒಂದು ದಿನದ ಮುಖ್ಯಮಂತ್ರಿ ಆಗುವ ಸಾಧ್ಯತೆಗಳಿವೆ ಎಂದು ನಂಬಿವೆ.

2018: ನವದೆಹಲಿ: ಕರ್ನಾಟಕದಲ್ಲಿ ಏಕೈಕ ದೊಡ್ಡ ಪಕ್ಷವಾದ ಬಿಜೆಪಿಗೆ ಸರ್ಕಾರ ರಚನೆಗೆ ರಾಜ್ಯಪಾಲರು ಆಹ್ವಾನ ನೀಡಿದ ವಿದ್ಯಮಾನದ ಹಿನ್ನೆಲೆಯಲ್ಲಿ ಗೋವಾ, ಬಿಹಾರ, ಮಣಿಪುರ ಮತ್ತು ಮೇಘಾಲಯ ರಾಜ್ಯಗಳಲ್ಲಿ ವಿರೋಧ ಪಕ್ಷಗಳು ತಮಗೂ ಸರ್ಕಾರ ರಚನೆಯ ಹಕ್ಕು ಪ್ರತಿಪಾದಿಸುವ ಮೂಲಕ ಬಿಜೆಪಿ ವಿರುದ್ಧ ಅನಿರೀಕ್ಷಿತ ಆಕ್ರಮಣ ನಡೆಸಿದವು. ಕರ್ನಾಟಕ ರಾಜ್ಯಪಾಲರ ಮಾದರಿಯನ್ನೇ ಅನುಸರಿಸಿದರೆ ಗೋವಾ ವಿಧಾನಸಭೆಯಲ್ಲಿ ಇತರ ಪಕ್ಷಗಳ ಚುನಾವಣೋತ್ತರ ಮೈತ್ರಿಗೆ ಅವಕಾಶ ನೀಡುವ ಮುನ್ನ ೪೦ ಸದಸ್ಯಬಲದ ಸದನದಲ್ಲಿ ೧೭ ಸ್ಥಾನಗಳನ್ನು ಗೆದ್ದು ಏಕೈಕ ದೊಡ್ಡ ಪಕ್ಷವಾಗಿ ಉದಯಿಸಿದ್ದ ಕಾಂಗ್ರೆಸ್ ಪಕ್ಷಕ್ಕೆ ಮೊದಲು ಸರ್ಕಾರ ರಚಿಸಿ ಸದನದಲ್ಲಿ ಬಹುಮತ ಸಾಬೀತು ಪಡಿಸುವ ಅವಕಾಶ ನೀಡಬೇಕಾಗಿತ್ತು. ಇದನ್ನು ಉಲ್ಲೇಖಿಸಿರುವ ಕಾಂಗ್ರೆಸ್ ಮೇ 18ರ ಶುಕ್ರವಾರ ರಾಜ್ಯಪಾಲರ ಬಳಿ ಸರ್ಕಾರ ರಚನೆಯ ಹಕ್ಕು ಮಂಡನೆ ಮಾಡಲು ನಿರ್ಧರಿಸಿತು. ಇದೇ ರೀತಿ ಬಿಹಾರಿನಲ್ಲಿ ವಿರೋಧ ಪಕ್ಷದ ನಾಯಕ ಹಾಗೂ ಆರ್ ಜೆಡಿ ಧುರೀಣರಾಗಿರುವ ತೇಜಸ್ವಿ ಯಾದವ್ ಅವರು ೨೦೧೫ರ ಚುನಾವಣೆಯಲ್ಲಿ ಅತ್ಯಂತ ಹೆಚ್ಚು ಸ್ಥಾನ ಗಳಿಸಿದ ತಮ್ಮ ಪಕ್ಷದ ಶಾಸಕರನ್ನು ರಾಜ್ಯಪಾಲರ ಮುಂದೆ ಒಯ್ದು ಪರೇಡ್ ನಡೆಸುವುದಾಗಿ ಹೇಳಿದರು.  ೨೦೧೫ರ ವಿಧಾನಸಭಾ ಚುನಾವಣೆಯಲ್ಲಿ ೨೪೩ ಸ್ಥಾನಬಲದ ವಿಧಾನಸಭೆಯಲ್ಲಿ ಆರ್ ಜೆಡಿ ೮೦ ಸ್ಥಾನಗಳನ್ನು ಗೆದ್ದಿತ್ತು.  ‘ರಾಜ್ಯಪಾಲರ ಮುಂದೆ ನಾವು ಸರ್ಕಾರ ರಚನೆಯ ಹಕ್ಕು ಪ್ರತಿಪಾದಿಸಲು ಹೋದಾಗ, ಈಗ ಕರ್ನಾಟಕದಲ್ಲಿ ಇದ್ದಂತಹುದೇ ಸ್ಥಿತಿ ಬಿಹಾರದಲ್ಲಿ ಇತ್ತು. ರಾಜ್ಯಪಾಲರು ನಮಗೆ ಒಂದು ದಿನದ ಬಳಿಕ ಭೇಟಿ ಅವಕಾಶ ನೀಡಿದರು. ನಾಳೆ ನಮಗೆ ಅವಕಾಶ ನೀಡಿದರೆ, ನಾವು ಈಗಲೂ ಸದನದಲ್ಲಿ ಬಹುಮತ ಸಾಬೀತು ಪಡಿಸಬಲ್ಲೆವು ಎಂದು ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಹೇಳಿದರು. ಯಡಿಯೂರಪ್ಪ ಅವರು ಸ್ವತಃ ಬಹುಮತ ಸಾಬೀತಿಗೆ ೭ ದಿನಗಳ ಕಾಲಾವಕಾಶ ಕೋರಿದ್ದಾಗ, ರಾಜ್ಯಪಾಲರು ಅವರಿಗೆ ೧೫ ದಿನಗಳ ಕಾಲಾವಕಾಶ ನೀಡಿದ್ದು ಏಕೆ ಎಂದೂ ತೇಜಸ್ವಿ ಪ್ರಶ್ನಿಸಿದರು.  ‘ನಾನು ನಾಳೆ ಮಧ್ಯಾಹ್ನ ೧ ಗಂಟೆಗೆ ರಾಜ್ಯಪಾಲರ ಭೇಟಿಗಾಗಿ ಅವಕಾಶ ಪಡೆದಿದ್ದೇನೆ. ನಾನು ಅವರ ಬಳಿ ಹೋಗಲಿದ್ದೇನೆ ಮತ್ತು ಕಾಂಗ್ರೆಸ್ ನಮಗೆ ಬೆಂಬಲ ನೀಡಲಿದೆ. ನಾವು ಬೆಂಬಲದ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಲಿದ್ದೇವೆ ಎಂದು ತೇಜಸ್ವಿ ನುಡಿದರು.  ಮಣಿಪುರದಲ್ಲಿ ಮಾಜಿ ಮುಖ್ಯಮಂತ್ರಿ ಓಕ್ರಮ್ ಐಬೋಬಿ ಸಿಂಗ್ ಅವರೂ ಸರ್ಕಾರ ರಚನೆಗೆ ಹಕ್ಕು ಪ್ರತಿಪಾದಿಸಿದ್ದು ರಾಜ್ಯಪಾಲರನ್ನು ಭೇಟಿ ಮಾಡಲು ನಿರ್ಧರಿಸಿದರು. ಈ ಮಧ್ಯೆ ಕಾಂಗ್ರೆಸ್ ಪಕ್ಷವು ಮೇಘಾಲಯದಲ್ಲಿಯೂ ಇದೇ ತಂತ್ರ ರೂಪಿಸಲು ಸಿದ್ಧತೆ ನಡೆಸಿತು. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ೬೦ ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ ಗರಿಷ್ಠ ಅಂದರೆ ೨೧ ಸ್ಥಾನಗಳನ್ನು ಗೆದ್ದಿತ್ತು. ಮೇಘಾಲಯ, ಮಣಿಪುರ ಮತ್ತು ಗೋವಾದಲ್ಲಿ ಪಕ್ಷವು ಏಕೈಕ ದೊಡ್ಡ ಪಕ್ಷವಾಗಿ ಉದಯಿಸಿತ್ತು. ಆದರೆ ಬಿಜೆಪಿಯ ಚುನಾವಣೋತ್ತರ ಮೈತ್ರಿಗಳನ್ನು ಮಾಡಿಕೊಂಡು ಸರ್ಕಾರ ರಚಿಸಿತ್ತು.  ಗೋವಾದಲ್ಲಿ ಕಾಂಗ್ರೆಸ್ಸಿನ ಉಸ್ತುವಾರಿ ನೋಡಿಕೊಳ್ಳುತ್ತಿರುವ ಚೆಲ್ಲ ಕುಮಾರ್ ಅವರು ತಮ್ಮ ಶಾಸಕರನ್ನು ಜೊತೆಯಾಗಿ ಕರೆದುಕೊಂಡು ಗೋವಾ ರಾಜ್ಯಪಾಲರನ್ನು ಭೇಟಿ ಮಾಡುವ ನಿಟ್ಟಿನಲ್ಲಿ ಸಿದ್ಧತೆ ನಡೆಸಲು ಗೋವಾಕ್ಕೆ ತೆರಳಲು ಸಜ್ಜಾದರು. ಕರ್ನಾಟಕದ ರಾಜ್ಯಪಾಲ ವಜುಭಾಯಿ ವಾಲಾ ಅವರ ಕಚೇರಿಯ ಹೊರಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಕೆಲವು ಗಂಟೆಗಳ ಹಿಂದೆ ಶಿಬಿರ ಹೂಡಿದ್ದಾಗ ಈ ಬೆಳವಣಿಗೆಗಳು ನಡೆದಿದ್ದು, ಬಳಿಕ ಉಭಯ ಪಕ್ಷಗಳ ಸದಸ್ಯರೂ ವಿವಿಧ ಕಡೆಗಳಲ್ಲಿನ ರಿಸಾರ್ಟ್‌ಗಳಿಗೆ ತೆರಳಿದರು.  ಈ ಮಧ್ಯೆ ಬಿಜೆಪಿಯ ಹಿರಿಯ ನಾಯಕ ಹಾಗೂ ಗೋವಾದ ಮಾಜಿ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪರ್ಸೇಕರ್ ಅವರು ರಾಜ್ಯ ಕಾಂಗ್ರೆಸ್ ಚಟುವಟಿಕೆಗಳನ್ನು ’ಅವಕಾಶವಾದಿ ಕಸರತ್ತು ಎಂದು ಬಣ್ಣಿಸಿದರು.  ‘ಕಳೆದ ೧೫ ತಿಂಗಳುಗಳ ಕಾಲ ಇವರೆಲ್ಲಿದ್ದರು? ಅವರು ಮೊದಲ ೩-೪ ದಿನಗಳಲ್ಲಿ ಮುಖ್ಯಮಂತ್ರಿಯ ಹೆಸರನ್ನು ನಿರ್ಧರಿಸಲೂ ವಿಫಲರಾಗಿದ್ದರು. ಈಗ ದಿಢೀರನೆ ಎಚ್ಚೆತ್ತುಕೊಂಡಿದ್ದಾರೆ ಎಂದು ಪರ್ಸೇಕರ್ ಹೇಳಿದರು.  ಏನಿದ್ದರೂ ತಮ್ಮ ಪಕ್ಷವು ಕರ್ನಾಟಕದ ರಾಜ್ಯಪಾಲರು ಹುಟ್ಟುಹಾಕಿರುವ ಸಂಪ್ರದಾಯದ ದಾರಿಯನ್ನು ಅನುಸರಿಸುತ್ತಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಪಕ್ಷದ ವಕ್ತಾರ ಸಂಜಯ್ ಝಾ ಹೇಳಿದರು.  ಕರ್ನಾಟಕದಲ್ಲಿ ಬಹುಮತ ಸಾಬೀತು ಪಡಿಸುವ ಅವಕಾಶವನ್ನು ರಾಜ್ಯಪಾಲರು ನಮಗೆ ನಿರಾಕರಿಸಿದ್ದಾರೆ. ರಾಜ್ಯಪಾಲರು ಮೊದಲ ಅವಕಾಶವನ್ನು ಏಕೈಕ ದೊಡ್ಡ ಪಕ್ಷವಾದ ಬಿಜೆಪಿಗೆ ನೀಡಿದ್ದಾರೆ. ಈಗ ಅದೇ ತತ್ವವನ್ನು ಗೋವಾಕ್ಕೂ ಏಕೆ ಅನ್ವಯಿಸಬಾರದು? ಎಂದು ಝಾ ಪ್ರಶ್ನಿಸಿದರು. ಪಣಜಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಗೋವಾದ ಹಿರಿಯ ಕಾಂಗ್ರೆಸ್ ನಾಯಕರು ತಮ್ಮ ಪಕ್ಷವು ರಾಜ್ಯದಲ್ಲಿ ಬಹುಮತ ಸಾಬೀತು ಪಡಿಸಲು ಸಿದ್ಧವಿದೆ ಎಂದು ಹೇಳಿದರು. ರಾಜ್ಯದಲ್ಲಿ ಯಾವುದೇ ಸರ್ಕಾರ ಕಾರ್‍ಯ ನಿರ್ವಹಿಸುತ್ತಿಲ್ಲ. ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರು ಸಂಪುಟ ಸಲಹಾ ಸಮಿತಿಯನ್ನು ರಚಿಸಿದ್ದಾರೆ. ಇಂತಹುದನ್ನು ಎಂದೂ ನಾವು ಕೇಳಿಯೇ ಇಲ್ಲ. ಅವರು ಯಾರಿಗೂ ಅಧಿಕಾರವನ್ನು ವಹಿಸಿಕೊಟ್ಟಿಲ್ಲಎಂದು ಕಾಂಗ್ರೆಸ್ ನಾಯಕರು ಗುರುವಾರ ಮಧ್ಯಾಹ್ನ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.  ಕಾಂಗ್ರೆಸ್ ಪ್ರತಿಪಾದನೆಯ ಅರ್ಹತೆಗಳನ್ನು ಪ್ರಶ್ನಿಸಿದ ಹಿರಿಯ ಬಿಜೆಪಿ ನಾಯಕ ಮತ್ತು ದಕ್ಷಿಣ ಗೋವಾ ಬಿಜೆಪಿ ಸಂಸತ್ ಸದಸ್ಯ ನರೇಂದ್ರ ಸವೋಯಿಕರ್ ಅವರು ಗೋವಾ ಮತ್ತು ಕರ್ನಾಟಕದ ಪರಿಸ್ಥಿತಿಯನ್ನು ಹೋಲಿಸಲಾಗದು ಎಂದು ನುಡಿದರು.  ‘ನೀವು ಎರಡು ರಾಜ್ಯಗಳನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗಲಾಗದು. ವಾಸ್ತವವಾಗಿ ಪರಿಸ್ಥಿತಿಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಗೋವಾದ ಘಟನಾವಳಿಗಳು ಕರ್ನಾಟಕದ ಘಟನಾವಳಿಗಳಿಗಿಂತ ಭಿನ್ನ ಎಂದು ಅವರು ಹೇಳಿದರು.  ಆದರೆ ಗೋವಾದಲ್ಲಿ ಕಾಂಗ್ರೆಸ್ಸಿನ ಸರ್ಕಾರ ರಚನೆಯ ಹಕ್ಕು ಪ್ರತಿಪಾದನೆಯ ಕುರಿತ ಬಿಜೆಪಿಯ ವಾದವಷ್ಟೇ ವಿಷಯವಲ್ಲ. ಇತರ ಎರಡು ಪಕ್ಷಗಳು ಮತ್ತು ಮೂವರು ಪಕ್ಷೇತರರನ್ನು ಸೇರಿಸಿಕೊಂಡು ಮೈತ್ರಿಕೂಟ ರಚಿಸಿರುವ ಆಡಳಿತಾರೂಢ ಬಿಜೆಪಿ ಈಗ ಮೈತ್ರಿಕೂಟದ ಅಂಗ ಪಕ್ಷಗಳಿಂದ ಅಸಮಾಧಾನದ ಅನುಭವಕ್ಕೆ ಒಳಗಾಗಿದೆ.  ಬಿಜೆಪಿಯನ್ನು ಬೆಂಬಲಿಸಿರುವ ಗೋವಾ ಫಾರ್ವರ್ಡ್ ಪಕ್ಷದ (ಜಿಎಫ್ ಪಿ) ಮುಖ್ಯಸ್ಥ ವಿಜಯ್ ಸರ್‌ದೇಸಾಯಿ ಅವರು ಇತ್ತೀಚೆಗೆ ಇದನ್ನು ಬಹಿರಂಗ ಪಡಿಸಿದ್ದರು. ’ನೀವು ಪ್ರಾದೇಶಿಕ ಪಕ್ಷಗಳನ್ನು ಮೂಲೆಪಾಲು ಮಾಡಲು ಸಾಧ್ಯವಿಲ್ಲ. ಕರ್ನಾಟಕ ಚುನಾವಣೆಯ ಫಲಿತಾಂಶವನ್ನು ಮತ್ತು ಜೆಡಿ(ಎಸ್) ಪ್ರಭಾವವನ್ನು ನೋಡಿ. ರಾಜಕಾರಣದಲ್ಲಿ ಪ್ರಾದೇಶಿಕ ಪಕ್ಷಗಳ ಮಹತ್ವವನ್ನು ಗೌಣಗೊಳಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದರು. ಏನಿದ್ದರೂ, ಈ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ತಮ್ಮ ಪಕ್ಷವು ರಾಜ್ಯದಲ್ಲಿ ಐದು ವರ್ಷಗಳ ಪೂರ್ಣಾವಧಿಯನ್ನು ಪೂರೈಸುವುದು ಎಂದು ಹೇಳಿದರು.

2018: ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿ  ಬೆಳಗೆ ಅಧಿಕಾರ ವಹಿಸಿಕೊಂಡಿರುವ ಬಿ.ಎಸ್. ಯಡಿಯೂರಪ್ಪ ಅವರು ಆಡಳಿತ ಯಂತ್ರದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿ, ಹಲವಾರು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ವರ್ಗಾಯಿಸಿದರು. ಸರ್ಕಾರವು ಸಾರ್ವಜನಿಕ ಲೋಕೋಪಯೋಗಿ ಇಲಾಖೆಯ ಅಡಿಷನಲ್ ಮುಖ್ಯ ಕಾರ್ಯದರ್ಶಿ ಎಂ. ಲಕ್ಷ್ಮೀನಾರಾಯಣ ಅವರನ್ನು ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಿತು.  ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್‍ಯದರ್ಶಿ ಹುದ್ದೆಯು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯ ಹುದ್ದೆಗೆ ಸರಿಸಮಾನವಾಗಿದೆ ಎಂದೂ ಸರ್ಕಾರ ಪ್ರಕಟಿಸಿತು. ರೈಲ್ವೇ ಇಲಾಖೆಯ ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಆಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ಐಪಿಎಸ್ ಅಧಿಕಾರಿ ಅಮರಕುಮಾರ ಪಾಂಡೆ ಅವರನ್ನು ಗುಪ್ತಚರ ಇಲಾಖೆಯ ಎಡಿಜಿಪಿ ಆಗಿ ನೇಮಿಸಲಾಗಿದೆ ಎಂದು ಸರ್ಕಾರಿ ಪ್ರಕಟಣೆ ತಿಳಿಸಿತು. ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಡೆಪ್ಯುಟಿ ಇನ್ ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಡಿಐಜಿ) ಸಂದೀಪ್ ಪಾಟೀಲ್ ಅವರು ಗುಪ್ತಚರ ಇಲಾಖೆಯ ಡಿಐಜಿ ಆಗಿ ನೇಮಕಗೊಂಡರು. ಬೀದರ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಡಿ. ದೇವರಾಜ ಅವರನ್ನು ಬೆಂಗಳೂರು ಕೇಂದ್ರ ವಿಭಾಗದ ಡೆಪ್ಯುಟಿ ಕಮೀಷನರ್ ಆಫ್ ಪೊಲೀಸ್ (ಡಿಸಿಪಿ) ಆಗಿ ವರ್ಗಾವಣೆ ಮಾಡಲಾಯಿತು. ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ವರಿಷ್ಠಾಧಿಕಾರಿ ಎಸ್. ಗಿರೀಶ್ ಅವರನ್ನು ಬೆಂಗಳೂರು ಈಶಾನ್ಯ ವಿಭಾಗದ ಡಿಸಿಪಿ ಆಗಿ ವರ್ಗಾಯಿಸಲಾಯಿತು.

2018: ಕೋಲ್ಕತ: ಪಶ್ಚಿಮ ಬಂಗಾಳದ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಗ್ರಾಮೀಣ ಪಶ್ಚಿಮ ಬಂಗಾಳದಲ್ಲಿನ ತನ್ನ ಹಿಡಿತವನ್ನು ದೃಢಪಡಿಸಿದ್ದು ಗ್ರಾಮಪಂಚಾಯತುಗಳಲ್ಲಿ ೯,೨೭೦ ಸ್ಥಾನಗಳನ್ನು ಗೆದ್ದುಕೊಂಡಿತು. ಬಹುತೇಕ ಜಿಲ್ಲೆಗಳಲ್ಲಿ ಆಡಳಿತಾರೂಢ ಪಕ್ಷಕ್ಕೆ ಬಿಜೆಪಿ ಪ್ರಬಲ ಸ್ಪರ್ಧೆ ಒಡ್ಡಿದ್ದು ಎರಡನೇ ಸ್ಥಾನವನ್ನು ಗಳಿಸಿತು. ರಾಜ್ಯ ಚುನಾವಣಾ ಆಯೋಗದ ಮೂಲಗಳ ಪ್ರಕಾರ ೨,೩೧೭ ಗ್ರಾಮಪಂಚಾಯತುಗಳಲ್ಲಿ ಟಿಎಂಸಿ ಮುನ್ನಡೆಯಲ್ಲಿತ್ತು.  ಬಿಜೆಪಿ ೨,೦೭೯ ಪಂಚಾಯತ್ ಸ್ಥಾನಗಳನ್ನು ಗೆದ್ದುಕೊಂಡು, ಇತರ ೨೦೦ ಸ್ಥಾನಗಳಲ್ಲಿ ಮುನ್ನಡೆಯಲ್ಲಿತ್ತು. ಮೂರನೇ ಸ್ಥಾನಕ್ಕೆ ಇಳಿದಿರುವ ಸಿಪಿಐ(ಎಂ) ೫೬೨ ಗ್ರಾಮಪಂಚಾಯತ್ ಸ್ಥಾನಗಳನ್ನು ಗೆದ್ದುಕೊಂಡಿದ್ದು ಇತರ ೧೧೩ ಸ್ಥಾನಗಳಲ್ಲಿ ಮುನ್ನಡೆಯಲ್ಲಿತ್ತು. ಕಾಂಗ್ರೆಸ್ ಪಕ್ಷವು ೩೧೫ ಸ್ಥಾನಗಳನ್ನು ಗೆದ್ದಿದ್ದು ೬೧ ಸ್ಥಾನಗಳಲ್ಲಿ ಮುನ್ನಡೆಯಲ್ಲಿದೆ. ಪಕ್ಷೇತರ ಅಭ್ಯರ್ಥಿಗಳು ೭೦೭ ಸ್ಥಾನಗಳಲ್ಲಿ ಜಯಗಳಿಸಿದ್ದು ಇತರ ೧೨೦ ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದಾರೆ ಎಂದು ಚುನಾವಣಾ ಆಯೋಗದ ಮೂಲಗಳು ಹೇಳಿವೆ.  ಚುನಾವಣಾ ಆಯೋಗದ ಪ್ರಕಾರ ಟಿಎಂಸಿಯು ಈವರೆಗೆ ೯೫ ಪಂಚಾಯತ್ ಸಮಿತಿ ಸ್ಥಾನಗಳನ್ನು ಗೆದ್ದಿದ್ದು, ಇತರ ೬೫ರಲ್ಲಿ ಮುನ್ನಡೆ ಸಾಧಿಸಿದೆ. ಇತರ ಪಕ್ಷಗಳು ಇನ್ನೂ ಖಾತೆಯನ್ನೇ ತೆರೆಯಲಿಲ್ಲ.

2009: ಎಲ್‌ಟಿಟಿಇಯ ಸುಮಾರು 300 ಉಗ್ರರು ಆತ್ಮಹತ್ಯೆ ಮಾಡಿಕೊಂಡರು. ಅವರಲ್ಲಿ ಪ್ರಭಾಕರನ್ ಸೇರಿರಬಹುದೆಂದು ಶಂಕಿಸಲಾಯಿತು. ಆದರೆ ಇದರ ಬಗ್ಗೆ ಖಚಿತ ಮಾಹಿತಿ ಬರಲಿಲ್ಲ. ಶ್ರೀಲಂಕಾ ಸೇನೆಯು ಎಲ್‌ಟಿಟಿಇ ವಿರುದ್ಧ ನಡೆಸಿದ ಅಂತಿಮ ಹಂತದ ದಾಳಿಯಲ್ಲಿ ಎಲ್‌ಟಿಟಿಇಯ ಇಬ್ಬರು ಅಗ್ರ ನಾಯಕರು ಸೇರಿದಂತೆ 70 ಉಗ್ರಗಾಮಿಗಳನ್ನು ಹತ್ಯೆ ಮಾಡಿತು. ಸಶಸ್ತ್ರ ಹೋರಾಟವನ್ನು ನಿಲ್ಲಿಸಲಾಗಿದೆ ಎಂದು ಎಲ್‌ಟಿಟಿಇ ಘೋಷಿಸಿದರೂ, ಅದರ ಮುಖ್ಯಸ್ಥ ವಿ. ಪ್ರಭಾಕರನ್ ಪತ್ತೆಯಾಗಲಿಲ್ಲ.

2009: ಶ್ರೀಲಂಕಾದ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರು ತಮ್ಮ ಜೊರ್ಡಾನ್ ಪ್ರವಾಸವನ್ನು ಮೊಟಕುಗೊಳಿಸಿ ಸ್ವದೇಶಕ್ಕೆ ವಾಪಸಾದರು. ರಾಜಪಕ್ಸೆ ಅವರು ವಿಮಾನದಿಂದ ಕೆಳಗಿಳಿದ ಕೂಡಲೇ ನೆಲ ಮುಟ್ಟಿ ನಮಸ್ಕರಿಸಿದರು. 'ಸೇನೆಯು ದೇಶವನ್ನು ಎಲ್‌ಟಿಟಿಇ ಭಯೋತ್ಪಾದಕರಿಂದ ಮುಕ್ತಗೊಳಿಸಿದೆ' ಎಂದು ಅವರು ಈ ಸಂದರ್ಭದಲ್ಲಿ ಘೋಷಿಸಿದರು. ಯುದ್ಧ ವಲಯದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಸುಮಾರು 50 ಸಾವಿರ ನಾಗರಿಕರು ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿದವು. ಸೇನೆಯ ಅಂತಿಮ ಕಾರ್ಯಾಚರಣೆಯಲ್ಲಿ ಎಲ್‌ಟಿಟಿಯ ಅಗ್ರ ನಾಯಕರಾದ ಸ್ವರನಮ್ ಮತ್ತು ಶಶಿ ಮಾಸ್ಟರ್ ಅವರನ್ನು ಹತ್ಯೆ ಮಾಡಲಾಯಿತು.. ಕೊನೆಗೂ ಮಣಿದ ಎಲ್‌ಟಿಟಿಇ ಸಶಸ್ತ್ರ ಹೋರಾಟಕ್ಕೆ ಪೂರ್ಣವಿರಾಮ ಘೋಷಿಸಿತು. 'ಕದನ ಕೆಟ್ಟ ಅಂತ್ಯವನ್ನು ಕಂಡಿದೆ, ಆದ್ದರಿಂದ ನಾವು ನಮ್ಮ ಜನರನ್ನು ಕೊಲ್ಲುತ್ತಿರುವ ವೈರಿಗಳನ್ನು ಕ್ಷಮಿಸಿ ಬಂದೂಕನ್ನು ಸ್ಥಗಿತಗೊಳಿಸುತ್ತೇವೆ' ಎಂದು ಎಲ್‌ಟಿಟಿಇ ಪರ ಇರುವ ತಮಿಳ್‌ನೆಟ್ ವೆಬ್‌ಸೈಟ್‌ನಲ್ಲಿ ಪ್ರಸಾರ ಮಾಡಲಾಯಿತು. ಎಲ್‌ಟಿಟಿಇಯ ಅಂತಾರಾಷ್ಟ್ರೀಯ ಸಂಬಂಧಗಳ ಮುಖ್ಯಸ್ಥ ಸೆಲ್ವೆರಸ ಪದ್ಮನಾಥಮ್ ಅವರು ನೀಡಿದ ಈ ಹೇಳಿಕೆಯನ್ನು ವೆಬ್‌ಸೈಟ್ ಪ್ರಸಾರ ಮಾಡಿತು.

2009: ಕಡಲಾಳದಲ್ಲಿ ಹೆಚ್ಚುತ್ತಿರುವ ಉಷ್ಣತೆ, ಏರುತ್ತಿರುವ ಸಮುದ್ರ ಮಟ್ಟ, ಎಲ್ಲೆ ಮೀರಿದ ಆಮ್ಲತೆ, ಮಿತಿ ಮೀರಿದ ಮೀನುಗಾರಿಕೆ ಮತ್ತು ಮಾಲಿನ್ಯದಿಂದಾಗಿ ಹವಳದ ದಂಡೆಗಳು ವಿನಾಶದ ಅಂಚಿಗೆ ತಲುಪಿದೆ ಎಂದು 'ವರ್ಲ್ಡ್ ವೈಡ್ ಫಂಡ್ ಫಾರ್ ನೇಚರ್' ಸಂಸ್ಥೆ ಸಿದ್ಧಪಡಿಸಿದ ವರದಿ ಹೇಳಿತು. ಈ ವರದಿಯ ಪ್ರಕಾರ ಕಡಲಿನಲ್ಲಿರುವ ಹವಳದ ತ್ರಿಭುಜಗಳು ನಾಶವಾದರೆ ಕಡಲ ತೀರದ ಶೇ 80ರಷ್ಟು ಜನ ಆಹಾರ ಕಳೆದುಕೊಳ್ಳಬಹುದು, ಸುಮಾರು 10 ಕೋಟಿ ಜನರ ಜೀವಕ್ಕೇ ಅಪಾಯ ಕಾದಿದೆ. ಮಲೇಷ್ಯಾ, ಇಂಡೋನೇಷ್ಯಾ, ಪಪುವಾ ನ್ಯುಗಿನಿಯಾ,ಪೂರ್ವ ತೈಮೋರ್, ಸಾಲೊಮನ್ ದ್ವೀಪ ಹಾಗು ಫಿಲಿಪ್ಪೀನ್ಸ್ ದೇಶಗಳ ಸಮುದ್ರ ತೀರಗಳು ಹವಳದ ತ್ರಿಭುಜವನ್ನು ಸುತ್ತುವರೆದಿದ್ದು, ಇದು ಅತ್ಯಂತ ಸಂಪದ್ಭರಿತ ಹವಳದ ದಂಡೆ ಎಂದು ಗುರುತಿಸಲಾಗಿದೆ. ವಿಶ್ವದ ಶೇ 30ರಷ್ಟು ಹವಳ ಸಂಪತ್ತು ಈ ತ್ರಿಭುಜದಲ್ಲಿಯೇ ಇದೆ. ಹವಳದ ದಂಡೆಯನ್ನೇ ಆಶ್ರಯಿಸಿ 10 ಕೋಟಿಗೂ ಹೆಚ್ಚು ಜನ ಬದುಕು ಸಾಗಿಸುತ್ತಿದ್ದಾರೆ.

2009: ಐದನೇ ತರಗತಿ ಓದುತ್ತಿದ್ದಾಗಲೇ ಶಾಲೆ ತೊರೆದು ಹೋದ ಬಾಲಕನೊಬ್ಬ ಮುಂದೆ ರಾಜ್ಯದ ಮುಖ್ಯಮಂತ್ರಿಯಾಗುತ್ತಾನೆಂದು ಯಾರೂ ಎಣಿಸಿರಲಿಲ್ಲ. ಆದರೆ ಪವನ್‌ಕುಮಾರ್ ಚಾಮ್ಲಿಂಗ್ ಅದನ್ನೆಲ್ಲ ಸುಳ್ಳಾಗಿಸಿ ನಾಲ್ಕನೇ ಬಾರಿಗೆ ಸಿಕ್ಕಿಂ ಮುಖ್ಯಮಂತ್ರಿಯಾಗಿ ವಿಜೃಂಭಿಸಿದರು. ಚಾಮ್ಲಿಂಗ್ ನೇತೃತ್ವದಲ್ಲಿ ಎಲ್ಲ 32 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ (ಎಸ್‌ಡಿಎಫ್) ಸಿಕ್ಕಿಂನ ಏಕೈಕ ಲೋಕಸಭಾ ಕ್ಷೇತ್ರವನ್ನು ಕೂಡ ತನ್ನ ತೆಕ್ಕೆಗೆ ಎಳೆದುಕೊಂಡಿತು.  ಚಾಮ್ಲಿಂಗ್ ತಾವು ಸ್ಪರ್ಧಿಸಿದ್ದ ಎರಡೂ ವಿಧಾನಸಭಾ ಕ್ಷೇತ್ರಗಳಿಂದ ಚುನಾಯಿತರಾದರು. 1956ರಲ್ಲಿ ಬಹದೂರ್ ರಾಯ್ ಮತ್ತು ಮಾಯಾರಾಯ್ ದಂಪತಿಗೆ ಜನಿಸಿದ ಚಾಮ್ಲಿಂಗ್ ಐದನೇ ತರಗತಿಗೇ ಶಾಲೆಗೆ ಹೋಗುವ ಅವಕಾಶದಿಂದ ವಂಚಿತರಾಗಿದ್ದರು.

2009: 15ನೇ ಲೋಕಸಭೆಯು ಇದೇ ಪ್ರಥಮ ಬಾರಿಗೆ ನಾಲ್ವರು 'ಗಾಂಧಿ'ಗಳನ್ನು ಪಡೆದು ಅಚ್ಚರಿ ಮೂಡಿಸಿತು. ಪ್ರತಿಷ್ಠಿತ ನೆಹರು-ಗಾಂಧಿ ಕುಟುಂಬಕ್ಕೆ ಸೇರಿದ ವರುಣ್ ಗಾಂಧಿ ಉತ್ತರ ಪ್ರದೇಶದ ಫಿಲಿಬಿಟ್ ಕ್ಷೇತ್ರದಿಂದ ಸಂಸತ್‌ಗೆ ಆಯ್ಕೆಯಾಗುವುದರೊಂದಿಗೆ ನಾಲ್ಕನೇ 'ಗಾಂಧಿ' ಸಂಸತ್ ಒಳಗೆ ಒಟ್ಟಿಗೆ ಕುಳಿತುಕೊಳ್ಳುವಂತಾಯಿತು. ಅದರಲ್ಲೂ ಮುಖ್ಯವಾಗಿ ಇಬ್ಬರು ಅಮ್ಮ-ಮಗ ಜೋಡಿ ಒಟ್ಟಾಗಿ ಕಾಣಿಸಿಕೊಳ್ಳುವಂತಾಯಿತು. ಸೋನಿಯಾ ಮತ್ತು ರಾಹುಲ್ ಗಾಂಧಿ ಆಡಳಿರೂಢ ಗುಂಪಿನಲ್ಲಿದ್ದರೆ, ಬಿಜೆಪಿ ನಾಯಕರಾದ ಮೇನಕಾ ಮತ್ತು ವರುಣ್ ಗಾಂಧಿ ವಿರೋಧಿ ಗುಂಪಿನಲ್ಲಿ ಗೆದ್ದು ಬಂದರು. ಪ್ರಥಮ ಲೋಕಸಭೆಯಿಂದ ಹಿಡಿದು ಇಲ್ಲಿಯ ತನಕ ನೆಹರು- ಗಾಂಧಿ ಕುಟುಂಬದ ಒಬ್ಬರು ಸದಸ್ಯರಾದರೂ ಸಂಸತ್‌ನಲ್ಲಿ ಬಹುತೇಕ ಇದ್ದರೆಂದೇ ಹೇಳಬಹುದು. ಆದರೆ ಈ ಬಾರಿ ಅವರ ಸಂಖ್ಯೆ ಇದೇ ಪ್ರಥಮ ಬಾರಿಗೆ 4ಕ್ಕೆ ಏರಿತು.

2009: 'ಸಾಮಾಜಿಕ ಸಂಶೋಧನೆ' ವಿಷಯ ಕುರಿತು 51 ಗಂಟೆ ಕಾಲ ನಿರಂತರ ಉಪನ್ಯಾಸ ನೀಡಿ ಲಿಮ್ಕಾ ಮತ್ತು ಗಿನ್ನೆಸ್ ದಾಖಲೆ ಮಾಡಲು ನಿರ್ಧರಿಸಿದ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನ ಅಂಚೆ ತೆರಪಿನ ಶಿಕ್ಷಣ ಸಂಸ್ಥೆಯ ಸಮಾಲೋಚಕಿ ಎಚ್.ಕೆ. ಕೋಮಲ ಈದಿನ ತಮ್ಮ ಉಪನ್ಯಾಸ ಆರಂಭಿಸಿದರು. ಚನ್ನರಾಯಪಟ್ಟಣದ ಹೇಮಾವತಿ ಒಕ್ಕಲಿಗರ ಮಹಿಳಾ ಸಂಘದ ಆವರಣದಲ್ಲಿ ವಿದ್ಯಾರ್ಥಿಗಳು, ಅನೇಕ ಬಂಧುಗಳ ಸಮ್ಮುಖದಲ್ಲಿ ಅವರು ಉತ್ಸಾಹದಿಂದ ಉಪನ್ಯಾಸ ಆರಂಭಿಸಿದರು.

2008: ಬೆಂಗಳೂರಿನ ಎಚ್ ಎ ಎಲ್ ವಿಮಾನ ನಿಲ್ದಾಣವನ್ನು ಸ್ಥಗಿತಗೊಳಿಸದಂತೆ ಒತ್ತಾಯಿಸಿ ಐಟಿ, ಬಿಟಿ ಕ್ಷೇತ್ರದ ಪ್ರಮುಖರು ಹಾಗೂ ವಿಮಾನ ನಿಲ್ದಾಣದ ನೌಕರರು ಎಚ್ ಎ ಎಲ್ ವಿಮಾನ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಷಾ, ಇನ್ಫೋಸಿಸ್ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಮೋಹನ್ ದಾಸ್ ಪೈ ಮತ್ತು ವಿಮಾನ ನಿಲ್ದಾಣ ನೌಕರರು, `ಎಚ್ ಎ ಎಲ್ ವಿಮಾನ ನಿಲ್ದಾಣವನ್ನು ಮುಂದುವರೆಸುವ ಬಗ್ಗೆ ಸರ್ಕಾರ ಬಿಐಎಎಲ್ನೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು' ಎಂದು ಒತ್ತಾಯಿಸಿದರು.

2008: ಭೂಕಂಪ ಪೀಡಿತ ಪ್ರದೇಶ ಬೈಚುವಾನ್ ಕೌಂಟಿಯಲ್ಲಿನ `ಚೈನಾ ಸರೋವರ' ಉಕ್ಕುವ ಭೀತಿಯಿಂದ ಸರೋವರ ದಡದಲ್ಲಿನ ನಿವಾಸಿಗಳು ಬೆಟ್ಟ ಪ್ರದೇಶಕ್ಕೆ ಸ್ಥಳಾಂತರಗೊಂಡರು. ಸರೋವರ ಉಕ್ಕುತ್ತಿರುವುದನ್ನು ಪ್ರತ್ಯಕ್ಷದರ್ಶಿಯೊಬ್ಬ ದೂರವಾಣಿ ಮುಖಾಂತರ ಸೇನಾಪಡೆಗೆ ತಿಳಿಸಿದ. ಕೂಡಲೇ ಸೇನೆ ಇಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸುವ ಕಾರ್ಯಕ್ಕೆ ಮುಂದಾಯಿತು. ಸಿಚುವಾನ್ ಪ್ರಾಂತ್ಯದಲ್ಲಿ ಭೂಕಂಪದಿಂದ ಮಡಿದವರ ಸಂಖ್ಯೆ ಈಗ 28,881 ಎಂದು ಚೀನಾ ಹೇಳಿತು. ಆದರೆ ಮೃತರ ಸಂಖ್ಯೆ 50 ಸಾವಿರ ದಾಟುವ ನಿರೀಕ್ಷೆ ವ್ಯಕ್ತವಾಗಿದೆ.

2008: ಎಂಟು ವರ್ಷಗಳ ಹಿಂದಿನ ಆಫ್ಘನ್ ವಿಮಾನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಲಂಡನ್ನಿನ ಅಂತಾರಾಷ್ಟ್ರೀಯ ಹೀಥ್ರೂ ವಿಮಾನ ನಿಲ್ದಾಣದ ಸ್ವಚ್ಛತಾ ವಿಭಾಗದ ಪರಿಚಾರಕ ನಿಜಾಮುದ್ದೀನ್ ಮೊಹಮ್ಮದಿ (34) ಎಂಬಾತನನ್ನು ಬಂಧಿಸಲಾಯಿತು. ಈತ ಆಫ್ಘಾನಿಸ್ಥಾನದ ಪ್ರಜೆ. ಒಂಬತ್ತು ಜನ ಅಪಹರಣಕಾರರಲ್ಲಿ ಇವನೂ ಒಬ್ಬನೆಂದು ಗುರುತಿಸಲಾಗಿದೆ.

2008: ಮೂರು ತಿಂಗಳ ಹಿಂದೆ ತಾಲಿಬಾನ್ ಉಗ್ರರಿಂದ ಅಪಹೃತರಾಗಿದ್ದ ಅಫ್ಘಾನಿಸ್ಥಾನದಲ್ಲಿರುವ ಪಾಕಿಸ್ಥಾನದ ರಾಯಭಾರಿ ತಾರಿಖ್ ಅಜೀಜ್ ಅವರನ್ನು ಉಗ್ರರು ಬಿಡುಗಡೆ ಮಾಡಿದರು. ತಾಲಿಬಾನ್ ಮತ್ತು ಸರ್ಕಾರದ ನಡುವೆ ಶಾಂತಿ ಮಾತುಕತೆಯಲ್ಲಿ ಪ್ರಗತಿ ಕಂಡುಬಂದ ಹಿನ್ನೆಲೆಯಲ್ಲಿ ರಾಯಭಾರಿಯ ಬಿಡುಗಡೆ ನಡೆಯಿತು.

2008: ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯ ಐದು ಗ್ರಾಮಗಳಲ್ಲಿ ಹಕ್ಕಿ ಜ್ವರ ಮತ್ತೆ ಪತ್ತೆಯಾದ ಹಿನ್ನೆಲೆಯಲ್ಲಿ ಸಾವಿರಾರು ಕೋಳಿಗಳನ್ನು ನಾಶಮಾಡಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿದವು. ರೋಗ ಕಾಣಿಸಿಕೊಂಡಿರುವ ಬಿಜನ್ ಬರಿಯಿಂದ ಮೇ 11ರಂದು ಭೋಪಾಲ ಮೂಲದ ಬಿಗಿ ಭದ್ರತೆಯ ಪಶುರೋಗ ಪತ್ತೆ ಪ್ರಯೋಗಾಯಲಕ್ಕೆ ಸೋಂಕುಪೀಡಿತ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿತ್ತು. ಪ್ರಯೋಗಾಲಯವು ರೋಗ ಪತ್ತೆಯಾಗಿರುವುದನ್ನು ದೃಢಪಡಿಸಿತು.

2008: ಜೈಪುರದಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೆ ಮೂವರು ಶಂಕಿತರ ರೇಖಾಚಿತ್ರ ಬಿಡುಗಡೆ ಮಾಡಿದರು. ಉಗ್ರರು ಸೈಕಲುಗಳನ್ನು ಖರೀದಿಸಿದ್ದ ಅಂಗಡಿಯವರು, ಸ್ಫೋಟದಲ್ಲಿ ಗಾಯಗೊಂಡವರನ್ನು ಮಾತನಾಡಿಸಿ ಇನ್ನೂ ಕೆಲವು ಶಂಕಿತರ ರೇಖಾಚಿತ್ರ ರಚಿಸಲಾಯಿತು ಎಂದು ಪೊಲೀಸರು ತಿಳಿಸಿದರು.

2008: ತೀವ್ರ ಉಸಿರಾಟದ ತೊಂದರೆಯಿಂದ ಬಳಲಿದ ಹಿರಿಯ ಮಾರ್ಕ್ಸ್ವಾದಿ ಹರಿಕಿಷನ್ ಸಿಂಗ್ ಸುರ್ಜಿತ್ ಅವರ ದೇಹಸ್ಥಿತಿ ವಿಷಮಿಸಿದ್ದು, ಅವರು ಕೋಮಾ ಸ್ಥಿತಿಗೆ ಜಾರಿದರು.

2008: ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಬಿಹಾರದ ಸಾರಿಗೆ ಸಚಿವ ರಮಾನಂದ ಪ್ರಸಾದ್ ಸಿಂಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಭ್ರಷ್ಟಾಚಾರ ನಡೆಸಿದ ಬಗ್ಗೆ ಸಿಂಗ್ ಅವರ ವಿರುದ್ಧ ರಾಜ್ಯ ಗುಪ್ತದಳವು 1990ರ ಮೇ 24ರಂದು ಪ್ರಕರಣ ದಾಖಲಿಸಿಕೊಂಡಿತ್ತು. ಅದು ಬಹಿರಂಗಗೊಂಡ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಿದರು.

2007: ಕ್ಯಾಲಿಫೋರ್ನಿಯಾದ 18ರ ಹರೆಯದ ತರುಣಿ ಸಮಂಥಾ ಲಾರ್ಸನ್ ಅವರು ವಿಶ್ವದ ಅತ್ಯುನ್ನತವಾದ ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ಮೊತ್ತ ಮೊದಲ ಅತಿ ಕಿರಿಯ ವಿದೇಶಿ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರಳಾದಳು. ನೇಪಾಳದ 15 ವರ್ಷದ ಶೆರ್ಪಾ ಬಾಲಕಿಯೊಬ್ಬಳು ಎವರೆಸ್ಟ್ ಶಿಖರ ಏರಿದ ಕಿರಿಯ ಹುಡುಗಿ ಎಂಬ ಹೆಗ್ಗಳಿಕೆಗೆ ಈಗಾಗಲೇ ಪಾತ್ರಳಾಗಿದ್ದಾಳೆ.

2007: ಬಜಾಜ್ ಆಟೋ ಸಂಸ್ಥೆಯನ್ನು ಬಜಾಜ್ ಹೋಲ್ಡಿಂಗ್ಸ್ ಅಂಡ್ ಇನ್ ವೆಸ್ಟ್ ಮೆಂಟ್ಸ್ ಲಿಮಿಟೆಡ್ (ಬಿಎಚ್ ಐಎಲ್) ಮತ್ತು ಬಜಾಜ್ ಫೈನಾನ್ಸರ್ಸ್ ಲಿಮಿಟೆಡ್ (ಬಿಎಫ್ ಎಲ್) ಎಂಬ ಹೆಸರಿನೊಂದಿಗೆ ಎರಡು ಸಂಸ್ಥೆಗಳಾಗಿ ವಿಭಜಿಸುವ ಯೋಜನೆಗೆ ಬಜಾಜ್ ಆಟೋ ಲಿಮಿಟೆಡ್ ಬೋರ್ಡ್ ಒಪ್ಪಿಗೆ ನೀಡಿತು.

2007: ಮೈಸೂರು, ಮಂಡ್ಯ ಜಿಲ್ಲೆಗೆ ನೀರು ಒದಗಿಸುವ ಕೃಷ್ಣರಾಜ ಸಾಗರ ಜಲಾಶಯದ ನೀರಿನ ಮಟ್ಟ ತಗ್ಗುತ್ತಿದ್ದಂತೆಯೇ ಮೈಸೂರು ತಾಲ್ಲೂಕಿಗೆ ಸೇರಿದ ಆನಂದೂರು ಗ್ರಾಮದ ಬಳಿ ಜಲಾಶಯದ ಕೆಳಗಿದ್ದ ನಾರಾಯಣಸ್ವಾಮಿ ದೇವಾಲಯ ಪ್ರತ್ಯಕ್ಷವಾಯಿತು. ಕಳೆದ ಬಾರಿ ಜಲಾಶಯದಲ್ಲಿ ಕನ್ನಂಬಾಡಿ ಗ್ರಾಮದ ಬಳಿ ವೇಣುಗೋಪಾಲ ಸ್ವಾಮಿ ದೇವಸ್ಥಾನ ಗೋಚರಿಸಿತ್ತು.

2007: ಉನ್ನತ ಶಿಕ್ಷಣಸಂಸ್ಥೆಗಳಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ (ಓಬಿಸಿ) ಶೇಕಡಾ 27ರಷ್ಟು ಮೀಸಲಾತಿ ನೀಡುವ ವಿವಾದಾತ್ಮಕ ವಿಷಯದ ವಿಚಾರಣೆಯನ್ನು ಸುಪ್ರೀಂಕೋರ್ಟಿನ ದ್ವಿಸದಸ್ಯ ಪೀಠವು ಉನ್ನತ ಪೀಠಕ್ಕೆ ವಹಿಸಿತು.

2007: ಬ್ರಿಟನ್ನಿನ ಚಾನ್ಸೆಲರ್ ಗಾರ್ಡನ್ ಬ್ರೌನ್ ಅವರು ಸಂಸತ್ತಿನಲ್ಲಿ ನಡೆದ ನಾಮ ನಿರ್ದೇಶನದಲ್ಲಿ ್ಲತಮ್ಮ ವಿರೋಧಿ ಎಡಪಂಥೀಯ ಜಾನ್ ಮೆಕ್ ಡೊನೆಲ್ ಅವರನ್ನು ಸೋಲಿಸಿದರು. ಇದರೊಂದಿಗೆ ಟೋನಿ ಬ್ಲೇರ್ ನಂತರ ಬ್ರೌನ್ ಪ್ರಧಾನ ಮಂತ್ರಿಯಾಗುವುದು ಖಚಿತಗೊಂಡಿತು.

2007: ಹಿಂದೂಗಳ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಬ್ರಿಟನ್ನಿನ ಹಿಂದೂ ದೇವಾಲಯದಲ್ಲಿ ಬಿಡಲಾಗಿದ್ದ ಬಸವನ (ಶಂಭು) ಹತ್ಯೆಯ ನಿರ್ಧಾರವನ್ನು ಸರ್ಕಾರ ಮುಂದೂಡಿತು.

2007: ಐವತ್ತಾರು ವರ್ಷಗಳ ಬಳಿಕ ಉತ್ತರ ಮತ್ತು ದಕ್ಷಿಣ ಕೊರಿಯಾಗಳ ಎರಡು ರೈಲುಗಾಡಿಗಳು ಪರಸ್ಪರ ಗಡಿ ದಾಟಿ ಏಕತೆಯೆಡೆಗೆ ಮತ್ತೆ ಹೆಜ್ಜೆ ಹಾಕಿದವು.

2007: ದೇಶದ ಪ್ರಪ್ರಥಮ ಕೃಷಿ ಸಮುದಾಯ ಬಾನುಲಿ ಕೇಂದವು ಧಾರವಾಡದ ಕೃಷಿ ವಿಶ್ವ ವಿದ್ಯಾಲಯದಲ್ಲಿ ಚಾಲನೆಗೊಂಡಿತು. ಕೃಷಿ ಸಚಿವ ಬಂಡೆಪ್ಪ ಕಾಶೆಂಪೂರ ಬಾನುಲಿ ಕೇಂದ್ರವನ್ನು ಉದ್ಘಾಟಿಸಿದರು.

2007: ಡೆಕ್ಕನ್ ಹೆರಾಲ್ಡ್ ಹಿರಿಯ ವರದಿಗಾರ್ತಿ ಸಂಗೀತಾ ಚೆಂಗಪ್ಪ ಅವರಿಗೆ 9ನೇ ವರ್ಷದ `ಪೋಲ್ಸ್ಟಾರ್' ಪ್ರಶಸ್ತಿ ಲಭಿಸಿತು.

2006: ಸ್ವಾತಂತ್ರ್ಯ ಹೋರಾಟಗಾರ, ಇಂಡಿಯನ್ ನ್ಯಾಷನಲ್ ಆರ್ಮಿ ಸಂಸ್ಥಾಪಕ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರು ವಿಮಾನ ಅಪಘಾತದಲ್ಲಿ ಮೃತಪಟ್ಟಿಲ್ಲ ಎಂಬುದಾಗಿ ಹೇಳಿರುವ ನ್ಯಾಯಮೂರ್ತಿ ಎಂ.ಕೆ. ಮುಖರ್ಜಿ ಆಯೋಗದ ವರದಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿತು. ನ್ಯಾಯಮೂರ್ತಿ ಮುಖರ್ಜಿ ಆಯೋಗವು 2005 ನವೆಂಬರ್ 8ರಂದು ಸಲ್ಲಿಸಿದ್ದ ವರದಿಯನ್ನು ಸರ್ಕಾರವು ಪರಿಶೀಲಿಸಿದೆ, ಆದರೆ ನೇತಾಜಿ ವಿಮಾನ ಅಪಘಾತದಲ್ಲಿ ಸತ್ತಿಲ್ಲ, ಜಪಾನ್ ದೇವಾಲಯದಲ್ಲಿ ಇರುವ ಚಿತಾಭಸ್ಮ ಅವರದ್ದಲ್ಲ ಎಂಬ ಆಯೋಗದ ವರದಿಗೆ ಸರ್ಕಾರದ ಸಹಮತ ಇಲ್ಲ ಎಂದು ಸದನದಲ್ಲಿ ವರದಿಯ ಜೊತೆಗೆ ಮಂಡಿಸಲಾದ ಕ್ರಮಾನುಷ್ಠಾನ ವರದಿಯಲ್ಲಿ (ಕ್ರಮ ಕೈಗೊಂಡ ವರದಿ) ಸರ್ಕಾರ ತಿಳಿಸಿತು.

2006: ಇತರ ಹಿಂದುಳಿದ ವರ್ಗಗಳಿಗೆ ಶೇಕಡಾ 27 ಮೀಸಲಾತಿ ಕಲ್ಪಿಸುವ ಪ್ರಸ್ತಾವದ ವಿರುದ್ಧ ದೇಶದ ವಿವಿಧ ಪ್ರದೇಶಗಳಿಗೆ ಚಳವಳಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸೀಟು ಹೆಚ್ಚಳ ಪರಿಶೀಲಿಸಿ ಬಿಕ್ಕಟ್ಟು ಬಗೆಹರಿಸುವ ಸಲುವಾಗಿ ಪ್ರಧಾನಿ ಮನಮೋಹನ್ ಸಿಂಗ್ ಅವರು ರಕ್ಷಣಾ ಸಚಿವ ಪ್ರಣವ್ ಮುಖರ್ಜಿ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಅರ್ಜುನ್ ಸಿಂಗ್, ಕಾನೂನು ಸಚಿವ ಎಚ್. ಆರ್. ಭಾರದ್ವಾಜ್ ಮತ್ತು ಹಣಕಾಸು ಸಚಿವ ಪಿ. ಚಿದಂಬರಂ ಅವರನ್ನು ಒಳಗೊಂಡ ನಾಲ್ಕು ಮಂದಿ ಸಚಿವರ `ಅನೌಪಚಾರಿಕ ಸಲಹಾ ಸಮಿತಿ' ಒಂದನ್ನು ರಚಿಸಿದರು.

1965: ಕಲಾವಿದ ರಾಜಗೋಪಾಲ ಕಲ್ಲೂರಕರ ಜನನ.

1954: ಕರಿಯರು ಮತ್ತು ಬಿಳಿಯರಿಗಾಗಿ `ಪ್ರತ್ಯೇಕ ಮತ್ತು ಸಮಾನ' ಪಬ್ಲಿಕ್ ಶಾಲೆಗಳನ್ನು ನಡೆಸುವುದು ಸಂವಿಧಾನದ ಉಲ್ಲಂಘನೆಯಾಗುತ್ತದೆ ಎಂಬ ಚಾರಿತ್ರಿಕ ತೀರ್ಪನ್ನು ಅಮೆರಿಕದ ಸುಪ್ರೀಂ ಕೋರ್ಟ್ ನೀಡಿತು.

1946: ಕಲಾವಿದೆ ಕಾವೇರಿ ಶ್ರೀಧರ್ ಜನನ.

1935: ಕಲಾವಿದ ಉತ್ತರಾಚಾರ್ಯ ಜನನ.

1934: ಕಲಾವಿದ ರಾಮಮೂರ್ತಿ ಜನನ.

1934: ಕಲಾವಿದ ಜಂಬೂಕಣ್ಣನ್ ಜನನ.

1897: ಕರ್ನಾಟಕ ಸಂಗೀತದ ವಾಗ್ಗೇಯಕಾರ ಎಚ್. ಯೋಗಾ ನರಸಿಂಹಂ (17-5-1897ರಿಂದ 14-5-1971) ಅವರು ಹೊಳೆನರಸೀಪುರದ ನಾರಣಪ್ಪ- ಲಕ್ಷ್ಮೀದೇವಮ್ಮ ದಂಪತಿಯ ಮಗನಾಗಿ ಕೋಲಾರದಲ್ಲಿ ಜನಿಸಿದರು.

1861: ಲಂಡನ್ನಿನಿಂದ ಪ್ಯಾರಿಸ್ಸಿಗೆ 6 ದಿನಗಳ ಪ್ರವಾಸ ಏರ್ಪಡಿಸುವ ಮೂಲಕ ಥಾಮಸ್ ಕುಕ್ ಮೊತ್ತ ಮೊದಲ `ಪ್ಯಾಕೇಜ್ ಹಾಲಿಡೇ' ಆರಂಭಿಸಿದ.

1792: `ನ್ಯೂಯಾರ್ಕ್ ಸ್ಟಾಕ್ ಎಕ್ಸ್ ಚೇಂಜ್' ಆರಂಭಗೊಂಡಿತು. ಈಗ ವಾಲ್ ಸ್ಟ್ರೀಟ್ ಎಂಬುದಾಗಿ ಕರೆಯಲಾಗುವ ಸ್ಥಳದಲ್ಲಿ ಸೆಕ್ಯುರಿಟಿಗಳ ಖರೀದಿ ಹಾಗೂ ಮಾರಾಟ ಮಾಡುತ್ತಿದ್ದ ಸ್ಥಳೀಯ ಬ್ರೋಕರುಗಳು ತಮ್ಮ ವಹಿವಾಟನ್ನು ಈ ಕೇಂದ್ರದ ಮೂಲಕ ಅಧಿಕೃತಗೊಳಿಸಲು ಒಪ್ಪಿದರು. ಈಗ ಎಲ್ಲರಿಂದ ಮಾನ್ಯತೆ ಪಡೆದಿರುವ ದಿ ನ್ಯೂಯಾರ್ಕ್ ಸ್ಟಾಕ್ ಎಕ್ಸ್ ಚೇಂಜ್ 1825ರಲ್ಲಿ ನ್ಯೂಯಾರ್ಕ್ ನಗರದ ವಾಲ್ ಸ್ಟ್ರೀಟಿನ 11ನೇ ನಂಬರ್ ಕಟ್ಟಡದಲ್ಲಿ ಸ್ಥಾಪನೆಗೊಂಡಿತು.

1540: ಕನೋಜಿನಲ್ಲಿ ನಡೆದ ಕದನದಲ್ಲಿ ಹುಮಾಯೂನನನ್ನು ಶೇರ್ ಶಹ ಸೂರಿ ಸೋಲಿಸಿದ. ಸೋತ ಹುಮಾಯೂನ್ ಸಿಂಧ್ ಹಾಗೂ ನಂತರ ಮಾರವಾಡದಲ್ಲಿ ನಿರಾಶ್ರಿತನಾಗಿ ನೆಲೆಸಬೇಕಾಯಿತು. ಆತನ ಮಗ ಅಕ್ಬರ್ ಇಂತಹ ಪರಿಸ್ಥಿತಿಯಲ್ಲೇ 1542ರಲ್ಲಿ ಜನಿಸಿ ಮುಂದೆ ಮೊಘಲ್ ಸಾಮ್ರಾಟರಲ್ಲೇ ಅತ್ಯಂತ ಶ್ರೇಷ್ಠ ಸಾಮ್ರಾಟನೆಂಬ ಹೆಸರು ಪಡೆದ.

No comments:

Post a Comment