ಇಂದಿನ ಇತಿಹಾಸ History Today ಮೇ 16
2018: ಬೆಂಗಳೂರು: ಕರ್ನಾಟಕ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ
ಅತಂತ್ರ ಅಸೆಂಬ್ಲಿ ರಚನೆ ಪರಿಣಾಮವಾಗಿ ಉದ್ಭವಿಸಿದ ಸರ್ಕಾರ ರಚನೆಯ ಬಿಕ್ಕಟ್ಟಿಗೆ ಕಡೆಗೂ ತೆರೆ ಎಳೆದ
ರಾಜ್ಯಪಾಲ ವಜುಭಾಯಿ ವಾಲಾ ಅವರು ಏಕೈಕ ದೊಡ್ಡ ಪಕ್ಷವಾಗಿ ಮೂಡಿಬಂದ ಬಿಜೆಪಿಯ ನಾಯಕ ಬಿ.ಎಸ್. ಯಡಿಯೂರಪ್ಪ
ಅವರಿಗೆ ಸರ್ಕಾರ ರಚನೆಯ ಆಹ್ವಾನವನ್ನು ನೀಡಿದರು. ರಾತ್ರಿ
ಯಡಿಯೂರಪ್ಪ ಅವರ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ
ಅವರು ಗುರುವಾರ ಬೆಳಗ್ಗೆ ೯ ಗಂಟೆಗೆ ರಾಜಭವನದಲ್ಲಿ ಯಡಿಯೂರಪ್ಪ ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಈ ಬಗ್ಗೆ ರಾಜಭವನದಿಂದ ತಮಗೆ ಪತ್ರ ಬಂದಿದೆ ಎಂದು ಪ್ರಕಟಿಸಿದರು. ಈ ಮಧ್ಯೆ ರಾಜ್ಯಪಾಲರ ತೀರ್ಮಾನವನ್ನು
ಪ್ರಶ್ನಿಸಿ ಮಧ್ಯರಾತ್ರಿಯಲ್ಲೇ ಭಾರತದ ಮುಖ್ಯ ನ್ಯಾಯಮೂರ್ತಿ
(ಸಿಜೆಐ) ದೀಪಕ್ ಮಿಶ್ರ ಅವರಿಗೆ ರಾಜ್ಯಪಾಲ ವಜುಭಾಯಿ
ವಾಲಾ ವಿರುದ್ಧ ದೂರು ನೀಡಿದ ಕಾಂಗ್ರೆಸ್, ಈ ರಾತ್ರಿಯೇ ತುರ್ತು ವಿಚಾರಣೆ ನಡೆಸಲು ಮತ್ತು ಯಡಿಯೂರಪ್ಪ
ಪ್ರಮಾಣ ವಚನಕ್ಕೆ ತಡೆ ನೀಡಲು ಮನವಿ ಮಾಡಿತು. ರಾತ್ರೋರಾತ್ರಿಯೇ ರಚನೆಗೊಂಡ ಸುಪ್ರೀಂಕೋರ್ಟಿನ ತ್ರಿಸದಸ್ಯ
ಪೀಠವು ಯಡಿಯೂರಪ್ಪ ಪ್ರಮಾಣವಚನಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿತು. ಆದರೆ ಯಡಿಯೂರಪ್ಪ ಅವರು
ರಾಜ್ಯಪಾಲರಿಗೆ ಸಲ್ಲಿಸಿದ ಪತ್ರಗಳನ್ನು ತನ್ನ ಮುಂದೆ
ಮೇ
18ರಂದು ಹಾಜರು ಪಡಿಸಬೇಕು ಎಂದು ಅಟಾರ್ನಿ ಜನರಲ್ ಅವರಿಗೆ ನಿರ್ದೇಶಿಸಿತು. ಇದರೊಂದಿಗೆ
ಬಿ.ಎಸ್. ಯಡಿಯೂರಪ್ಪ ಅವರು ಗುರುವಾರ ಬೆಳಗ್ಗೆ ೯ ಗಂಟೆಗೆ ರಾಜಭವನದಲ್ಲಿ ಕರ್ನಾಟಕದ ೨4ನೇ ಮುಖ್ಯಮಂತ್ರಿಯಾಗಿ
ಪ್ರಮಾಣವಚನ ಸ್ವೀಕರಿಸುವುದು ಖಚಿತಗೊಂಡಿತು. ಪಕ್ಷದ ಶಾಸಕರು, ಸಂಸದರು, ಇತರ ಪ್ರಮುಖರಿಗೆ ಹಾಜರಿರಲು
ಸೂಚಿಸಲಾಗಿದೆ ಎಂದು ಬೊಮ್ಮಾಯಿ ನುಡಿದರು. ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಇದೀಗ ಮೂರನೇ
ಬಾರಿಗೆ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಯಡಿಯೂರಪ್ಪ
ಅವರಿಗೆ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಲು ೧೫ ದಿನಗಳ ಕಾಲಾವಕಾಶ ನೀಡಲಾಗಿದೆ. ಜನತಾದಳ (ಎಸ್) -ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಎಚ್.
ಡಿ. ಕುಮಾರ ಸ್ವಾಮಿ ಅವರಿಂತ ಮೊದಲು ಬಿಜೆಪಿಯ ಯಡಿಯೂರಪ್ಪ ಅವರಿಗೆ ಸರ್ಕಾರ ರಚಿಸಲು ಅವಕಾಶ ನೀಡುವ
ತೀರ್ಮಾನವನ್ನು ರಾಜ್ಯಪಾಲರು ಸುಪ್ರೀಂಕೋರ್ಟಿನ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಅವರ ಜೊತೆಗೆ
ಸಮಾಲೋಚಿಸಿದ ಬಳಿಕ ಕೈಗೊಂಡರು. ರೋಹ್ಟಗಿ ಅವರು ಏಕೈಕ ದೊಡ್ಡ ಪಕ್ಷಕ್ಕೆ, ಈ ಪ್ರಕರಣದಲ್ಲಿ ಬಿಜೆಪಿಗೆ
ಸರ್ಕಾರ ರಚನೆಗೆ ಅವಕಾಶ ನೀಡಬೇಕು ಎಂದು ಅಭಿಪ್ರಾಯ ನೀಡಿದರು. ಯಡಿಯೂರಪ್ಪ ಅವರು ಪ್ರಮಾಣವಚನ ಸ್ವೀಕರಿಸುವ
ಬಗ್ಗೆ ರಾಜಭವನದಿಂದ ಮಾಹಿತಿ ಬರುವುದಕ್ಕೂ ಮುಂಚಿತವಾಗಿ ಬಿಜೆಪಿ ಶಾಸಕ ಸುರೇಶ್ ಕುಮಾರ್ ಮತ್ತು ಬಿಜೆಪಿಯ
ಟ್ವಿಟ್ಟರ್‌ನಲ್ಲಿ ಸಂದೇಶಗಳು ಪ್ರಕಟವಾದವು. ಆದರೆ ಕೆಲವೇ ನಿಮಿಷಗಳಲ್ಲಿ ಅವುಗಳನ್ನು ಅಳಿಸಿ ಹಾಕಲಾಯಿತು. ಈ ಮಧ್ಯದಲ್ಲಿ ಕಾಂಗ್ರೆಸ್ಸಿನ ರಮ್ಯ ಅವರು ಪ್ರಮಾಣ ವಚನ
ಸ್ವೀಕರಿಸಲಿರುವುದು ಯಡಿಯೂರಪ್ಪ ಅಲ್ಲ ಕುಮಾರ ಸ್ವಾಮಿ ಎಂಬುದಾಗಿ ಟ್ವೀಟ್ ಮಾಡುವ ಮೂಲಕ ಗೊಂದಲವನ್ನು
ಇನ್ನಷ್ಟು ಹೆಚ್ಚಿಸಿದರು. ಈ ಮಧ್ಯೆ ದೆಹಲಿಯಲ್ಲಿ
ಪತ್ರಿಕಾಗೋಷ್ಠಿ ಕರೆದ ಕಾಂಗ್ರೆಸ್ ಪ್ರಮುಖರಾದ ಚಿದಂಬರಂ ಮತ್ತಿತರರು ಕರ್ನಾಟಕ ರಾಜ್ಯಪಾಲರ ನಿರ್ಧಾರ
’ಆಘಾತಕಾರಿ ಮತ್ತು ಪ್ರಜಾಪ್ರಭುತ್ವದ ಕಗ್ಗೊಲೆ’ ಎಂದು ಖಂಡಿಸಿದರು. ಕರ್ನಾಟಕ
ರಾಜ್ಯಪಾಲರ ನಿರ್ಧಾರದ ವಿರುದ್ಧ ಕಾನೂನು ಸಮರ ನಡೆಸುವುದಾಗಿಯೂ ಕಾಂಗ್ರೆಸ್ ಪ್ರಕಟಿಸಿತು. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿ ಬೆಳಗ್ಗೆ ಆಯ್ಕೆಯಾದ
ಎಚ್.ಡಿ. ಕುಮಾರಸ್ವಾಮಿ ಮತ್ತು ಕಾಂಗ್ರೆಸ್ ಧುರೀಣರು ಸಂಜೆ ರಾಜಭವನದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ
ಅವರನ್ನು ಭೇಟಿ ಮಾಡಿ ಮ್ಯಾಜಿಕ್ ಸಂಖ್ಯೆಯಾದ ೧೧೨ನ್ನು ಮೀರಿ ೧೧೭ ಶಾಸಕರ ಬೆಂಬಲ ಹೊಂದಿರುವ ಮೈತ್ರಿಕೂಟಕ್ಕೆ
ಸರ್ಕಾರ ರಚಿಸುವ ಅವಕಾಶ ನೀಡುವಂತೆ ಕೋರಿ ಉಭಯ ಪಕ್ಷಗಳಿಂದಲೂ ೧೦೫ ಶಾಸಕರು ಸಹಿ ಮಾಡಿದ್ದ ಪ್ರತ್ಯೇಕ
ಮನವಿಗಳನ್ನು ಸಲ್ಲಿಸಿದ್ದರು. ರಾಜ್ಯಪಾಲರು ಕಾನೂನು
ತಜ್ಞರ ಜೊತೆಗೆ ಸಮಾಲೋಚಿಸುವುದಾಗಿಯೂ, ಗೋವಾ ಮತ್ತು ಮಣಿಪುರದ ರಾಜ್ಯಪಾಲರ ನಿರ್ಧಾರಗಳನ್ನೂ ಪರಿಶೀಲಿಸುವುದಾಗಿಯೂ
ಮೈತ್ರಿಕೂಟ ಧುರೀಣರಿಗೆ ಭರವಸೆ ಕೊಟ್ಟಿದ್ದರು. ಬೆಳಗ್ಗೆ
ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಯಡಿಯೂರಪ್ಪ ಅವರೂ ರಾಜ್ಯಪಾಲರನ್ನು ಭೇಟಿ ಮಾಡಿ ೧೦೪
ಸದಸ್ಯರ ಬೆಂಬಲ ಇರುವ ತಮಗೆ ಏಕೈಕ ದೊಡ್ಡ ಪಕ್ಷ ಎಂಬ ನೆಲೆಯಲ್ಲಿ ಸರ್ಕಾರ ರಚನೆಯ ಅವಕಾಶ ನೀಡುವಂತೆ
ಕೋರಿಕೆ ಮಂಡಿಸಿದ್ದರು. ರಾಜ್ಯಪಾಲರು ಅವರಿಗೂ ಕಾನೂನು ತಜ್ಞರ ಜೊತೆ ಸಮಾಲೋಚಿಸುವ ಭರವಸೆ ಕೊಟ್ಟಿದ್ದರು. ಈ ಮಧ್ಯೆ ಬಿಜೆಪಿ ಮತ್ತು ಜನತಾದಳ-ಕಾಂಗ್ರೆಸ್ ಮೈತ್ರಿಕೂಟ
ಧುರೀಣರು ತೀವ್ರ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿದ್ದರು.
ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕುಮಾರ ಸ್ವಾಮಿ
ಅವರು ಪಕ್ಷದ ಕೆಲವು ಶಾಸಕರನ್ನು ಸೆಳೆಯಲು ಬಿಜೆಪಿ ಶಾಸಕರಿಗೆ ೧೦೦ ಕೋಟಿ ರೂಪಾಯಿಗಳ ಆಮಿಷ ಒಡ್ಡಿದೆ
ಎಂದು ಆಪಾದಿಸಿದ್ದರು. ಬಿಜೆಪಿ ಧುರೀಣ ಪ್ರಕಾಶ ಜಾವಡೇಕರ್ ಅವರು ಕುಮಾರ ಸ್ವಾಮಿ ಆಪಾದನೆಯನ್ನು ’ಭ್ರಮೆ’ ಎಂದು ಹೇಳಿ ಅಲ್ಲಗಳೆದಿದ್ದರು. ಒಂದು ಹಂತದಲ್ಲಿ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಅವರು
ಬಿಜೆಪಿ ಧುರೀಣರ ದೂರವಾಣಿಗಳನ್ನು ಕದ್ದಾಲಿಸುವ ’ಹೀನ’ ಕೆಲಸವನ್ನು ಕಾಂಗ್ರೆಸ್
ಮಾಡುತ್ತಿದೆ ಎಂದು ಆಪಾದಿಸಿದ್ದರು. ಸಂಜೆ ರಾಜ್ಯಪಾಲರ
ಮುಂದೆ ಶಾಸಕರ ಪೆರೇಡ್ ನಡೆಸಲು ಯೋಚಿಸಿದ ಜನತಾದಳ- ಕಾಂಗ್ರೆಸ್ ಮೈತ್ರಿಕೂಟ ಶಾಸಕರ ಜೊತೆಗೆ ರಾಜಭವನಕ್ಕೆ
ತೆರಳಿತಾದರೂ, ರಾಜಭವನದಲ್ಲಿ ಎಲ್ಲ ಶಾಸಕರಿಗೆ ಪ್ರವೇಶ ಸಿಗಲಿಲ್ಲ. ಉಭಯ ಪಕ್ಷಗಳ ತಲಾ ೧೦ ಶಾಸಕರೊಂದಿಗೆ
ಕುಮಾರ ಸ್ವಾಮಿ ಮತ್ತಿತತರ ಧುರೀಣರು ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ರಾಜ್ಯಪಾಲರು ಕಾನೂನು ಪ್ರಕಾರ ಕ್ರಮ ಕೈಗೊಳ್ಳುವ ಭರವಸೆ
ಕೊಟ್ಟಿದ್ದಾರೆ ಎಂದು ಹೇಳಿದ ಕುಮಾರ ಸ್ವಾಮಿ ಸಂಖ್ಯಾಬಲ ಹೊಂದಿರುವ ತಮಗೆ ಸರ್ಕಾರ ರಚನೆಗೆ ಅವಕಾಶ
ನೀಡದೇ ಬಿಜೆಪಿಗೆ ಅವಕಾಶ ನೀಡಿದಲ್ಲಿ ಕಾನೂನು ಸಮರ ನಡೆಸುವ ಎಚ್ಚರಿಕೆಯನ್ನು ನೀಡಿದರು. ಬಿಜೆಪಿ ಕುದುರೆ
ವ್ಯಾಪಾರಕ್ಕೆ ಇಳಿದಿದೆ ಎಂದೂ ಆಪಾದಿಸಿದ ಜೆಡಿಎಸ್- ಕಾಂಗ್ರೆಸ್ ಧುರೀಣರು ಸಂಜೆ ರಾಜ್ಯಪಾಲರನ್ನು
ಭೇಟಿ ಮಾಡಿದ ಬಳಿಕ ತಮ್ಮ ಶಾಸಕರನ್ನು ಬಿಡದಿ ಸಮೀಪದ ಶಾಂಗ್ರೀಲಾ ಹೋಟೆಲಿಗೆ ತೆರಳಿದರು. ಇದರೊಂದಿಗೆ
ರಾಜ್ಯ ರಾಜಕಾರಣಕ್ಕೂ ’ರಿಸಾರ್ಟ್ ರಾಜಕೀಯ’ ಕಾಲಿಟ್ಟಿತು.
2018:
ನವದೆಹಲಿ: ರಾಜ್ಯದಲ್ಲಿ ಸರ್ಕಾರ ರಚನೆ ರಾಜಕಾರಣದ ದೂಳು ತಿಳಿಯಾಗುವವರೆಗೆ ಕೇಂದ್ರವು ರೂಪಿಸಿರುವ
ಕಾವೇರಿ ನಿರ್ವಹಣಾ ರೂಪುರೇಷೆಯನ್ನು ಅಂತಿಮಗೊಳಿಸುವುದರ ವಿರುದ್ಧ ತಡೆಯಾಜ್ಞೆ ನೀಡುವಂತೆ ಕರ್ನಾಟಕ
ಮಾಡಿದ ಪುನರಪಿ ಮನವಿಗಳನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತು. ವಿಚಾರಣೆಯನ್ನು ಜುಲೈ ಮೊದಲ ವಾರದವರೆಗೆ
ಮುಂದೂಡುವಂತೆ ಕರ್ನಾಟಕದ ಹಿರಿಯ ವಕೀಲ ಶ್ಯಾಮ್ ದಿವಾನ್ ಅವರು ಸುಪ್ರೀಂಪೀಠಕ್ಕೆ ಮನವಿ ಮಾಡುವುದರೊಂದಿಗೆ
ಕರ್ನಾಟಕದ ಭವಿಷ್ಯದ ಸರ್ಕಾರ ರಚನೆ ಕುರಿತ ಅನಿಶ್ಚಿತತೆ ನ್ಯಾಯಾಲಯದ ಕೊಠಡಿಯಲ್ಲೂ ವ್ಯಕ್ತವಾಯಿತು.
‘ಸರ್ಕಾರ ರಚನೆಯ ಪ್ರಕ್ರಿಯೆ ಜಾರಿಯಲ್ಲಿದೆ. ನಾವೂ ಇತರ ರಾಜ್ಯಗಳಂತೆ ಕರಡು ರೂಪುರೇಷೆಗೆ ಸಲಹೆಗಳನ್ನು
ಕೊಡಲು ಬಯಸುತ್ತೇವೆ. ನೀವು ಕೇಂದ್ರಕ್ಕೆ ಸಮಯ ನೀಡಲು ಹಲವಾರು ಬಾರಿ ವಿಚಾರಣೆಯನ್ನು ಮುಂದೂಡಿದ್ದೀರಿ.
ಹಾಗೆ ಆಗದೇ ಇದ್ದಿದರೆ, ನಾವು ಈಗ ಈ ಸ್ಥಿತಿಯಲ್ಲಿ ಇರುತ್ತಿರಲಿಲ್ಲ. ಈ ರೂಪುರೇಷೆಯು ಮುಂದಿನ ೧೫
ವರ್ಷಗಳ ಕಾಲ ಅನುಷ್ಠಾನದಲ್ಲಿ ಇರುತ್ತದೆ. ನಮಗೆ ಏನನ್ನಾದರೂ ಹೇಳುವ ಹಕ್ಕಿದೆ. ಜುಲೈ ಮೊದಲ ವಾರದವರೆಗೆ
ಕರಡನ್ನು ಅಂತಿಮಗೊಳಿಸದಂತೆ ತಡೆಯಿರಿ’ ಎಂದು ದಿವಾನ್ ನ್ಯಾಯಾಲಯಕ್ಕೆ
ಮನವಿ ಮಾಡಿದರು. ತಮಿಳುನಾಡಿನ
ಹಿರಿಯ ವಕೀಲ ಶೇಖರ್ ನಫಡೆ ಅವರು ಇದನ್ನು ಪ್ರತಿಭಟಿಸಿದರು. ಸಂವಿಧಾನವು ಶೂನ್ಯವನ್ನು ಪರಿಗಣಿಸುವುದಿಲ್ಲ. ಕರ್ನಾಟಕದಲ್ಲಿ
ಈಗ ಸರ್ಕಾರ ಇಲ್ಲ ಎಂದು ಹೇಳುವುದು ತಪ್ಪು. ಜೂನ್ ತಿಂಗಳಲ್ಲಿ ಕಾವೇರಿಯಿಂದ ಮೊದಲ ಕಂತಿನ ನೀರು ಬಿಡುಗಡೆಯಾಗಬೇಕಾಗಿರುವುದರಿಂದ
ಜುಲೈವರೆಗೆ ನ್ಯಾಯಾಲಯವು ಕಾಯಲು ಸಾಧ್ಯವಿಲ್ಲ ಎಂದು ನಫಡೆ ವಾದಿಸಿದರು. ಸುಪ್ರೀಂಕೋರ್ಟ್ ದಿವಾನ್
ಅವರ ಮನವಿಯನ್ನು ಪುರಸ್ಕರಿಸಲಿಲ್ಲ, ಬದಲಾಗಿ ತಮಿಳುನಾಡು, ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೆರಿಯ
ಮಾಹಿತಿ ಪಡೆಯುವತ್ತ ಮುಂದುವರೆಯಿತು. ೨೦೧೮ರ ಕಾವೇರಿ ನಿರ್ವಹಣಾ ರೂಪುರೇಷೆಗೆ ರಾಜ್ಯಗಳು ಸೂಚಿಸಿ
ನಾಲ್ಕು ಬದಲಾವಣೆಗಳನ್ನು ನ್ಯಾಯಾಲಯ ಒಪ್ಪಿತು. ನಾಳೆಯೊಳಗೆ
ತಿದ್ದುಪಡಿ: ಮುಂದಿನ ೨೪ ಗಂಟೆಗಳ ಒಳಗಾಗಿ ಕರಡು ರೂಪುರೇಷೆಗೆ ಸೂಚಿಸಲಾಗಿರುವ ಬದಲಾವಣೆಗಳನ್ನು ಕೇಂದ್ರವು
ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಕೋರ್ಟ್ ನಿರ್ದೇಶಿಸಿತು. ‘ನಾಳೆಯ ಒಳಗಾಗಿ ಕರಡು ರೂಪುರೇಷೆಯನ್ನು
ತಿದ್ದುಪಡಿ ಮಾಡಿ’ ಎಂದು ತ್ರಿಸದಸ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ
ಪೀಠದ ನೇತೃತ್ವ ವಹಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಅವರು ಕೇಂದ್ರದ ಪರ ಹಾಜರಾದ ಅಟಾರ್ನಿ
ಜನರಲ್ ಕೆ.ಕೆ. ವೇಣುಗೋಪಾಲ್ ಅವರಿಗೆ ನಿರ್ದೇಶಿಸಿದರು. ಕಾವೇರಿ ನೀರಿಗೆ ಸಂಬಂಧಿಸಿದಂತೆ ಅಂತರ ರಾಜ್ಯ
ವಿವಾದಗಳಾದಲ್ಲಿ ಕೇಂದ್ರ ಸರ್ಕಾರವೇ ಅಂತಿಮ ಮಾತನ್ನು ಹೇಳಲಿದೆ ಎಂಬ ಕಾವೇರಿ ಕರಡಿನ ವಿಧಿಯನ್ನು ಪೀಠ
ಮೊದಲಿಗೆ ಪ್ರಶ್ನಿಸಿತು.
ವಿಧಿಯು
ಕೇಂದ್ರದ ನಿರ್ಧಾರವನ್ನು ಬಂಧನಕಾರಿಯನ್ನಾಗಿ ಮಾಡುತ್ತದೆ. ಕೇಂದ್ರ ಸರ್ಕಾರದ ಅಧಿಕಾರ ಅಂತಿಮವಲ್ಲ.
ಕೇಂದ್ರವು ನಮ್ಮ ತೀರ್ಪನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು ಎಂದು ಮುಖ್ಯ ನ್ಯಾಯಮೂರ್ತಿ ಮಿಶ್ರ
ಮೌಖಿಕವಾಗಿ ಹೇಳಿದರು. ಕೇಂದ್ರಕ್ಕೆ ಇಂತಹ ನಿರಂಕುಶ
ಅಧಿಕಾರ ನೀಡುವುದರಿಂದ ವಿಷಯದ ’ರಾಜಕೀಯಕರಣ’ ಆಗಲು ಸಾಧ್ಯವಿದೆ ಎಂದು
ಪುದುಚೆರಿ ಹೇಳಿತು. ಇಂತಹ ವಿಧಿಯು ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಫೆಬ್ರುವರಿ
೧೬ರಂದು ನೀಡಿದ ತೀರ್ಪಿಗೆ ವಿರುದ್ಧವಾಗಿದೆ ಎಂದು ಮಿಶ್ರ ಅಭಿಪ್ರಾಯ ಪಟ್ಟರು. ರಾಜ್ಯಗಳು ಕಾವೇರಿ ಅನುಷ್ಠಾನ ಪ್ರಾಧಿಕಾರದ ಜೊತೆಗೆ ಸಹಕರಿಸದೇ
ಇದ್ದಲ್ಲಿ ಬಳಸಲಾಗುವ ಸುರಕ್ಷತಾ ಕವಾಟ (ಸೇಫ್ಟಿ ವಾಲ್ವ್) ಮಾತ್ರ ಈ ವಿಧಿ ಎಂದು ವೇಣಿಗೋಪಾಲ್ ಅವರು
ಸಮಜಾಯಿಷಿ ನೀಡಿದರೂ, ನ್ಯಾಯಾಲಯವು ಈ ವಿಧಿಯನ್ನು
ತಿದ್ದುಪಡಿ ಮಾಡುವಂತೆ ಕೇಂದ್ರಕ್ಕೆ ಸೂಚಿಸಿತು.
ತಮಿಳುನಾಡನ್ನು ಪ್ರತಿನಿಧಿಸಿದ ಹಿರಿಯ ವಕೀಲರಾದ ಶೇಖರ ನಫಡೆ, ರಾಕೇಶ್ ದ್ವಿವೇದಿ ಮತ್ತು
ವಕೀಲ ಜಿ. ಉಮಾಪತಿ ಅವರು ಕೇಂದ್ರ ಸರ್ಕಾರವು ಕಾಲಕಾಲಕ್ಕೆ ನೀಡುವ ಯಾವುದೇ ಅಥವಾ ಎಲ್ಲ ನಿರ್ದೇಶನಗಳನ್ನೂ ಕಾವೇರಿ ಪ್ರಾಧಿಕಾರ ಪಾಲಿಸಬೇಕು ಎಂಬ ಕರಡು ರೂಪುರೇಷೆಯ
ಎರಡನೇ ವಿಧಿಯನ್ನೂ ವಿರೋಧಿಸಿದರು. ‘ಈ ಮೂಲಕ ಕೇಂದ್ರವು
ಕಾಲ ಕಾಲಕ್ಕೆ ಸೂಚನೆಗಳನ್ನು ಕೊಡಬಹುದು. . ಎಂತಹ ಅಧಿಕಾರಗಳು! ವಿಧಿ ತುಂಬಾ ವಿಶಾಲವಾಗಿದೆ. ಇದನ್ನು
ದಯವಿಟ್ಟು ಪರಿಶೀಲಿಸಿ’ ಎಂದು ದ್ವಿವೇದಿ ಪೀಠಕ್ಕೆ
ಮನವಿ ಮಾಡಿದರು. ವಿಧಿಯು ಪ್ರಾಧಿಕಾರದ ಕೆಲಸಕ್ಕೆ ಮಾತ್ರವೇ ಸಂಬಂಧಿಸಿದೆ. ಅದು ನೀರು ಹಂಚಿಕೆ ವಿಚಾರಕ್ಕೆ
ವಿಸ್ತರಣೆಯಾಗಿಲ್ಲ ಎಂದು ವೇಣುಗೋಪಾಲ್ ಹೇಳಿದರು. ಈ ವಿಧಿಯನ್ನು ಸ್ಪಷ್ಟ ಪಡಿಸಿ ಎಂದು ನ್ಯಾಯಾಲಯ
ಕೇಂದ್ರಕ್ಕೆ ಸೂಚಿಸಿತು. ಕಾವೇರಿ ಪ್ರಾಧಿಕಾರದ ಕೇಂದ್ರ
ಕಚೇರಿ ನವದೆಹಲಿಯಲ್ಲಿ ಇರಬೇಕು, ಕರಡು ರೂಪುರೇಷೆ ಹೇಳಿರುವಂತೆ ಬೆಂಗಳೂರಿನಲ್ಲಿ ಅಲ್ಲ ಎಂಬ ತಮಿಳುನಾಡು
ಮಾತಿಗೆ ನ್ಯಾಯಾಲಯ ಒಪ್ಪಿತು. ರೂಪುರೇಷೆಯ ಅಡಿಯಲ್ಲಿ ಕಾವೇರಿ ನೀರು ನಿರ್ವಹಣೆ ಮತ್ತು ಮತ್ತು ದಾಸ್ತಾನಿಗೆ
ಸಂಬಂಧಿಸಿದಂತೆ ಅನುದಿನದ ಕಾರ್ಯಗಳ ಹೊಣೆ ವಹಿಸುವ ಕಾವೇರಿ ಜಲ ನಿಯಂತ್ರಣ ಸಮಿತಿಯು ಬೆಂಗಳೂರಿನಲ್ಲಿ
ಇರುವಂತಿಲ್ಲ ಎಂದು ನಫಡೆ ಹೇಳಿದರು. ನ್ಯಾಯಾಲಯವು ಈ ಸಲಹೆಯನ್ನು ಸ್ವೀಕಾರಾರ್ಹ ಎಂದು ಒಪ್ಪಿಕೊಂಡಿತು. ನಿಯಮದಂತೆ, ಕಾವೇರಿ ಪ್ರಾಧಿಕಾರಕ್ಕೆ ’ಕಾವೇರಿ ನಿರ್ವಹಣಾ
ಮಂಡಳಿ’ (ಕಾವೇರಿ ಮ್ಯಾನೇಜ್ ಮೆಂಟ್ ಬೋರ್ಡ್) ಎಂಬುದಾಗಿ
ಹೆಸರಿಸಬೇಕು ಎಂದು ತಮಿಳುನಾಡು ಒತ್ತಾಯಿಸಿತು. ಪ್ರಾಧಿಕಾರದ
ಹೆಸರು ಮಂಡಳಿ, ಪ್ರಾಧಿಕಾರ ಅಥವಾ ಸಮಿತಿ ಎಂಬುದಾಗಿ ಯಾವದೇ ಇದ್ದರೂ ಕೇಂದ್ರಕ್ಕೆ ಯಾವುದೇ ಅಸಮಾಧಾನ
ಇಲ್ಲ ಎಂದು ವೇಣುಗೋಪಾಲ್ ಅವರು ಹೇಳಿದರಾದರೂ, ಅಂತಹ
ಯಾವುದೇ ನಿಯಮವೂ ಇಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಮಿಶ್ರ ಹೇಳಿದರು. ಕಾವೇರಿ
ಪ್ರಾಧಿಕಾರದ ಅಧ್ಯಕ್ಷರು ಕರಡು ಪ್ರಸ್ತಾಪದಂತೆ ಎಂಜಿನಿಯರ್ ಅಥವಾ ಐಎಎಸ್ ಅಧಿಕಾರಿ ಆಗಿರಬಾರದು, ಬದಲಿಗೆ
ನಿವೃತ್ತ ನ್ಯಾಯಾಧೀಶರಂತಹ ’ಸ್ವತಂತ್ರ ವ್ಯಕ್ತಿ’ ಆಗರಬೇಕು ಎಂಬ ತಮಿಳುನಾಡಿನ
ಸಲಹೆಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿತು. ಕರಡು ರೂಪುರೇಷೆಯು ಸುಪ್ರೀಂಕೋರ್ಟಿನ ಫೆಬ್ರುವರಿ ೧೬ರ
ತೀರ್ಪಿಗೆ ಅನುಗುಣವಾಗಿದೆಯೇ ಎಂದು ಪರಿಶೀಲಿಸಲು ಅನುವಾಗುವಂತೆ ಕರಡು ರೂಪುರೇಷೆಯ ಪ್ರತಿಗಳನ್ನು ಕರ್ನಾಟಕ,
ತಮಿಳುನಾಡು, ಕೇರಳ ಮತ್ತು ಪುದುಚೆರಿಗೆ ನೀಡುವಂತೆ ಪೀಠವು ಹಿಂದಿನ ವಿಚಾರಣೆ ವೇಳೆಯಲ್ಲಿ ಕೇಂದ್ರಕ್ಕೆ
ಸೂಚಿಸಿತ್ತು.
2018: ಶ್ರೀನಗರ: ಪವಿತ್ರ ರಂಜಾನ್ ಮಾಸದ ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ
ಕಾರ್ಯಾಚರಣೆಗಳನ್ನು ನಡೆಸದಂತೆ ಕೇಂದ್ರ ಗೃಹ ಸಚಿವಾಲಯವು ಭದ್ರತಾ
ಪಡೆಗಳಿಗೆ ಸೂಚಿಸಿದ್ದು, ಈ ಪ್ರಕಟಣೆ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ಈದಿನ ಮಧ್ಯಾಹ್ನ ಶೋಪಿಯಾನ್
ಜಿಲ್ಲೆಯಲ್ಲಿ ಉಗ್ರಗಾಮಿಗಳು ಮತ್ತು ಭದ್ರತಾ ಪಡೆಗಳ ಮಧ್ಯೆ ಗುಂಡಿನ ಘರ್ಷಣೆ ನಡೆದ ವರದಿಗಳು ಬಂದವು.
ಪ್ರಾಥಮಿಕ ವರದಿಗಳ ಪ್ರಕಾರ, ಶೋಪಿಯಾನ್ ಜಿಲ್ಲೆಯ ಜಾಮ್ ನಗರಿ ಪ್ರದೇಶದಲ್ಲಿ ’ಗುಂಡಿನ ವಿನಿಮಯ’ ನಡೆಯಿತು. ’ನಾವು ವಿವರಗಳನ್ನು ಪರಿಶೀಲಿಸುತ್ತಿದ್ದೇವೆ.
ಯಾವುದೇ ಮುತ್ತಿಗೆ ಅಥವಾ ಶೋಧ ಕಾರ್‍ಯಾಚರಣೆ ಪ್ರದೇಶದಲ್ಲಿ ನಡೆದಿಲ್ಲ’ ಎಂದು ಶ್ರೀನಗರದಲ್ಲಿನ ವಕ್ತಾರರು ಹೇಳಿದರು. ಸಿಆರ್ ಪಿಎಫ್, ವಿಶೇಷ ಕಾರ್ಯಾಚರಣಾ ತಂಡ (ಎಸ್ ಒಜಿ) ಮತ್ತು
ಸೇನೆಯ ೨೩ ಪ್ಯಾರಾ ಕಮಾಂಡೋಗಳ ಜಂಟಿ ಸಿಬ್ಬಂದಿ ತಂಡ ಪ್ರದೇಶದಲ್ಲಿ ಸಕ್ರಿಯವಾದವು. ಪ್ರದೇಶದಲ್ಲಿ ಎಲ್ಲಿಯೂ ಯಾರೇ ಉಗ್ರಗಾಮಿ ಸಿಕ್ಕಿಬಿದ್ದಿರುವ
ವರದಿಗಳಿಲ್ಲ ಎಂದು ಮೂಲಗಳು ಹೇಳಿದವು. ಇದಕ್ಕೆ ಮುನ್ನ ಈದಿನ, ಮಹತ್ವದ ನಿರ್ಧಾರವನ್ನು ಕೈಗೊಂಡ ಕೇಂದ್ರ
ಸರ್ಕಾರವು ಜಮ್ಮು ಮತ್ತು ಕಾಶ್ಮೀರ ದಲ್ಲಿ ಪವಿತ್ರ ರಂಜಾನ್ ಮಾಸದ ಅವಧಿಯಲ್ಲಿ ಯಾವುದೇ ಕಾರ್ಯಾಚರಣೆಗಳನ್ನೂ
ಕೈಗೊಳ್ಳದಂತೆ ಭದ್ರತಾ ಪಡೆಗಳಿಗೆ ಸೂಚಿಸಿತ್ತು. ಶಾಂತಿಪ್ರೇಮಿ ಮುಸ್ಲಿಮರಿಗೆ ಶಾಂತಿಯುತ ಪರಿಸರದಲ್ಲಿ
ರಂಜಾನ್ ಆಚರಿಸಲು ಅನುಕೂಲವಾಗುವಂತೆ ಮಾಡುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಗೃಹ
ಸಚಿವಾಲಯ ವಕ್ತಾರರು ಹೇಳಿದರು. ಏನಿದ್ದರೂ, ಮುಗ್ಧ ಜನರ ಪ್ರಾಣಗಳ ರಕ್ಷಣೆಗೆ ಅಗತ್ಯವಾದಲ್ಲಿ ಸೇಡಿನ
ಕ್ರಮ ಕೈಗೊಳ್ಳುವ ಹಕ್ಕನ್ನು ಭದ್ರತಾ ಪಡೆಗಳು ಮೀಸಲಿಟ್ಟಿವೆ ಎಂದು ಸಚಿವಾಲಯ ಹೇಳಿತು. ಕೇಂದ್ರ ಸರ್ಕಾರದ
ತೀರ್ಮಾನವನ್ನು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ
ಮೆಹಬೂಬಾ ಮುಫ್ತಿ ಅವರಿಗೆ ತಿಳಿಸಿದರು. ‘ಮನಸ್ವೇಚ್ಛೆ
ಹಿಂಸಾಚಾರ ಮತ್ತು ಭಯೋತ್ಪಾದನೆ ಚಟುವಟಿಕೆಗಳಲ್ಲಿ ತೊಡಗುವ ಮೂಲಕ ಇಸ್ಲಾಮಿಗೆ ಕೆಟ್ಟ ಹೆಸರು ತರುತ್ತಿರುವ
ಬಲಗಳನ್ನು ಪ್ರತ್ಯೇಕಿಸುವುದು ಅತ್ಯಂತ ಮಹತ್ವ’ ಎಂದು ವಕ್ತಾರ ನುಡಿದರು. ಮುಸ್ಲಿಮ್
ಸಹೋದರರಿಗೆ ಶಾಂತಿಯುತವಾಗಿ, ಯಾವುದೇ ಕಷ್ಟಗಳಿಲ್ಲದೆ ರಂಜಾನ್ ಆಚರಿಸಲು ನೆರವಾಗುವ ಈ ಉಪಕ್ರಮದಲ್ಲಿ
ಪ್ರತಿಯೊಬ್ಬರೂ ಸಹಕರಿಸಬೇಕು ಎಂದು ಸರ್ಕಾರ ನಿರೀಕ್ಷಿಸುತ್ತದೆ ಎಂದು ವಕ್ತಾರರು ಹೇಳಿದರು.2018: ಶ್ರೀನಗರ: ಪವಿತ್ರ ರಂಜಾನ್ ಮಾಸದ ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ
2009: ಪಾಕಿಸ್ತಾನದ ಹಿಂದಿನ ಸರ್ಕಾರಗಳು ತಾಲಿಬಾನ್ ಉಗ್ರರ ಜತೆ ಒಳ ಒಪ್ಪಂದ ಮಾಡಿಕೊಂಡು ತಪ್ಪೆಸಗಿವೆ ಎಂದು ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಸಿಎನ್ ಎನ್ ಗೆ ನೀಡಿದ ಸಂದರ್ಶನದಲ್ಲಿ ಹೇಳಿದರು. ಅನೇಕ ವರ್ಷಗಳ ಹಿಂದೆ ತಾಲಿ ಬಾನ್ ಉಗ್ರರ ಜತೆ ಒಳ ಒಪ್ಪಂದ ಮಾಡಿಕೊಂಡದ್ದರಿಂದ ಈ ಉಗ್ರಗಾಮಿಗಳು ದೇಶದ ಕೆಲವು ಭಾಗಗಳಲ್ಲಿ ಬಲವಾಗಿ ಬೇರೂರಲು ಸಾಧ್ಯವಾಯಿತು ಎಂದು ಮುಷರಫ್ ನುಡಿದರು.
2009: ಎಲ್‌ಟಿಟಿಇ ವಿರುದ್ಧ ಲಂಕಾ ಸರ್ಕಾರ ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆಯಿತು. ತಮಿಳು ಬಂಡುಕೋರರ ನೌಕಾ ನೆಲೆಯನ್ನು ವಶಪಡಿಸಿಕೊಳ್ಳುವಲ್ಲಿ ಸೇನೆ ಯಶಸ್ವಿಯಾಯಿತು. ಇದರಿಂದಾಗಿ ಎಲ್‌ಟಿಟಿಇಗೆ ಸಮುದ್ರ ಮಾರ್ಗದ ಸಂಪರ್ಕ ಪೂರ್ಣ ಕಡಿದುಹೋಯಿತು.. ಭದ್ರತಾ ಪಡೆಗಳು ಸುತ್ತುವರಿದ ಕಾರಣ ಅವರ ಕಾರ್ಯವ್ಯಾಪ್ತಿ ಯುದ್ಧ ಮುಕ್ತ ವಲಯದಿಂದ ಕೇವಲ 1.5 ಚದರ ಕಿ.ಮೀ.ಗೆ ಮೀಸಲಾಗಿ ಉಳಿಯಿತು.
2009: ಪಂಜಾಬ್ ಮೂಲದ ಅಮೆರಿಕದ ನಾಗರಿಕ ಪ್ರೀತ್ ಭರಾರಾ ಅವರನ್ನು ಅಧ್ಯಕ್ಷ ಬರಾಕ್ ಒಬಾಮ ಅವರು ನ್ಯೂಯಾರ್ಕ್‌ನ ದಕ್ಷಿಣ ಜಿಲ್ಲೆಯ ಅಟಾರ್ನಿಯಾಗಿ ನೇಮಿಸಿದರು. 40 ವರ್ಷದ ವಕೀಲ ಭರಾರಾ ಅವರು ನ್ಯಾಯಾರ್ಕ್‌ನ ಡೆಮಾಕ್ರೆಟಿಕ್ ಪಕ್ಷದ ಸೆನೆಟರ್ ಚಾರ್ಲಸ್ ಸ್ಕಮೆರ್ ಅವರಿಗೆ ಕಾನೂನು ಸಲಹೆಗಾರರಾಗಿದ್ದರು ಹಾಗೂ ಬುಷ್ ಆಡಳಿತ 8 ಮಂದಿ ಅಟಾರ್ನಿಗಳನ್ನು ವಜಾ ಮಾಡಿದ ಸಂದರ್ಭದಲ್ಲಿ ನಡೆದ ಕಾಂಗ್ರೆಸ್ ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಶ್ವೇತಭವನದ ಪ್ರಕಟಣೆ ತಿಳಿಸಿತು.
2009: ದಿ ಟೈಮ್ಸ್‌ನ ಭಾರತೀಯ ಮೂಲದ ಅಂಕಣಕಾರ ಸತ್ನಾಮ್ ಸಂಘೇರಾ ಅವರು ಬರೆದ 'ದಿ ಬಾಯ್ ವಿದ್ ದಿ ಟಾಪ್‌ನಾಟ್' ಕೃತಿಗೆ ಈ ವರ್ಷದ ಮೈಂಡ್ ಬುಕ್ ಪ್ರಶಸ್ತಿ ಲಭಿಸಿತು. 1980ರ ದಶಕದಲ್ಲಿ ಬ್ರಿಟನ್‌ನಲ್ಲಿ ಕಳೆದ ತಮ್ಮ ಜೀವನವನ್ನೇ ಆಧರಿಸಿ ಈ ಪುಸ್ತಕವನ್ನು ಅವರು ಬರೆದಿದ್ದರು.
2008: ಆಂಧ್ರ ಪ್ರದೇಶದ ಮಾಜಿ ರಣಜಿ ಕ್ರಿಕೆಟ್ ಆಟಗಾರ ರಾಜೇಂದ್ರ ಸಾಹು ಅವರನ್ನು ಮಾವೋವಾದಿ ಉಗ್ರರು ರಾಯಗಢ ಜಿಲ್ಲೆ ಗೋಥಲ್ ಪದರಿನಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದರು. ಸಾಹು ಮೂಲತಃ ಒರಿಸ್ಸಾದವರಾಗಿದ್ದು, ಆಂಧ್ರದ ಪರವಾಗಿ 2006-07 ರಲ್ಲಿ ರಣಜಿ ಕ್ರಿಕೆಟ್ ಪಂದ್ಯದಲ್ಲಿ ಆಡಿದ್ದರು.
2008: ಕೇಂದ್ರದ ಹಣಕಾಸು ನೆರವಿನ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಶೆ 27ರಷ್ಟು ಮೀಸಲಾತಿ ಕಲ್ಪಿಸುವುದಕ್ಕೆ ಕೋಲ್ಕತ ಹೈಕೋರ್ಟ್ ವಿಧಿಸಿದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ತೆರವುಗೊಳಿಸಿತು.
2008: ಬೆಂಗಳೂರಿನ ಯಲಹಂಕದಲ್ಲಿ ಇರುವ ರೈಲ್ವೆ ಗಾಲಿ ಕಾರ್ಖಾನೆಗೆ ಪ್ರತಿಷ್ಠಿತ `ಗೋಲ್ಡನ್ ಪಿಕಾಕ್ ಅವಾರ್ಡ್ಫಾರ್ ಆಕ್ಯುಪೇಷನಲ್ ಹೆಲ್ತ್ ಅಂಡ್ ಸೇಫ್ಟಿ-2008' ಪ್ರಶಸ್ತಿ ಲಭಿಸಿತು. ಸುಪ್ರೀಂ ಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿ ಹಾಗೂ ಮಾನವ ಹಕ್ಕುಗಳ ಆಯೋಗದ ಸದಸ್ಯ ಪಿ.ಎನ್.ಭಗವತಿ ಅಧ್ಯಕ್ಷತೆಯ ಆಯ್ಕೆ ಸಮಿತಿ ಕಾರ್ಖಾನೆಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿತು.
2008: ಕರ್ನಾಟಕ ರಾಜ್ಯ ವಿಧಾನಸಭೆಗೆ ಎರಡನೇ ಹಂತದಲ್ಲಿ ನಡೆದ 66 ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಶೇ 60.30ರಷ್ಟು ಮತದಾನವಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಎಂ.ಎನ್.ವಿದ್ಯಾಶಂಕರ್ ಬೆಂಗಳೂರಿನಲ್ಲಿ ಪ್ರಕಟಿಸಿದರು. ನಕ್ಸಲ್ ಪೀಡಿತ ಚಿಕ್ಕಮಗಳೂರು, ಉಡುಪಿ, ಘಟಾನುಘಟಿಗಳೇ ಸ್ಪರ್ಧಿಸಿದ್ದ ಶಿವಮೊಗ್ಗ ಹಾಗೂ ಬಳ್ಳಾರಿ ಸೇರಿದಂತೆ ಒಟ್ಟು 10 ಜಿಲ್ಲೆಗಳಲ್ಲೂ ಮತದಾನ ಬಹುತೇಕ ಶಾಂತಿಯುತವಾಗಿತ್ತು.
2008: ಕರ್ನಾಟಕ ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಇಬ್ಬರು `ನೋಟಾ' (ಎಲ್ಲ ಅಭ್ಯರ್ಥಿಗಳನ್ನು ತಿರಸ್ಕರಿಸುವ) ಮತ ಚಲಾಯಿಸಿದರು. ಮೂಡುಬಿದಿರೆ ಕ್ಷೇತ್ರದ ಕಲ್ಲಬೆಟ್ಟು ಮತಗಟ್ಟೆಯಲ್ಲಿ ವಿಮರ್ಶಕ ಅರವಿಂದ ಚೊಕ್ಕಾಡಿ ಹಾಗೂ ಕಾರ್ಕಳದ ಅಜೆಕಾರು ಮತಗಟ್ಟೆಯಲ್ಲಿ ಶ್ರೀಶ ಉಡುಪ ಅವರು ನೋಟಾ ಮತ ಚಲಾಯಿಸಿದರು. 1961ರ ಚುನಾವಣಾ ನಡಾವಳಿ ಸಂಹಿತೆ ಸೆಕ್ಷನ್ 49-'ಒ'ದ ಪ್ರಕಾರ ಎಲ್ಲ ಅಭ್ಯರ್ಥಿಗಳನ್ನು ತಿರಸ್ಕರಿಸುವ `ನಿರಾಕರಣೆ ಹಕ್ಕನ್ನು' ಅವರು ಬಳಸಿಕೊಂಡರು. ಎಸ್ ಇ ಝೆಡ್, ಕೂಲಿ ಕಾರ್ಮಿಕರ ಸಮಸ್ಯೆ, ಶಿಕ್ಷಣದ ಅಮೆರಿಕೀಕರಣ, ಕ್ಷೇತ್ರದ ಅಭಿವೃದ್ಧಿ ಕುಂಠಿತ, ರೈತರ ಆತ್ಮಹತ್ಯೆ ಮತ್ತಿತರ ಸಮಸ್ಯೆಗಳ ಬಗ್ಗೆ ಅಭ್ಯರ್ಥಿಗಳ ಹಾಗೂ ಪಕ್ಷಗಳ ನಿರ್ಲಕ್ಷ್ಯವನ್ನು ಪ್ರತಿಭಟಿಸಿ ನೋಟಾ ಮತ ಚಲಾಯಿಸಿರುವುದಾಗಿ ಅರವಿಂದ ಚೊಕ್ಕಾಡಿ ಹೇಳಿದರು. ಕ್ಷೇತ್ರದೊಳಗೆ ಶೇ. 50ಕ್ಕಿಂತ ಹೆಚ್ಚು ಮಂದಿ ನೋಟಾ ಮತ ಚಲಾಯಿಸಿದಲ್ಲಿ ಮರು ಮತದಾನ ನಡೆಯಬೇಕು. ಅಲ್ಲದೆ ಆಭ್ಯರ್ಥಿಗಳು ಮತ್ತೆ ಸ್ಪರ್ಧಿಸುವ ಅವಕಾಶ ಕಳೆದುಕೊಳ್ಳುತ್ತಾರೆ. ಈ ಬಗ್ಗೆ ಜಾಗೃತಿ ಮೂಡಿಸಲು ನೋಟಾ ಚಲಾಯಿಸಿದ್ದೇನೆ ಎಂದು ಅವರು ನುಡಿದರು.
2008: ಕಾರ್ಕಳ ತಾಲ್ಲೂಕಿನ ಸೀತಾನದಿಯಲ್ಲಿ ನಡೆದ ನಕ್ಸಲ್ ದಾಳಿಗೆ ಸಂಬಂಧಿಸಿದಂತೆ ಸೋಮೇಶ್ವರದ ತಣ್ಣೀರು ಉದಯ ಆಚಾರ್ಯ ಸಹಿತ ಇಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.
2008: ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಸೊದೆಪುರದಲ್ಲಿನ ಜನನಿಬಿಡ ವ್ಯಾಪಾರ ಮಳಿಗೆಯೊಂದರಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ 12 ಮಂದಿ ಮೃತರಾಗಿ, ಇತರ 23 ಮಂದಿ ಗಾಯಗೊಂಡರು.
2008: ರಾಮಾಯಣದ ದೃಷ್ಟಾಂತಗಳನ್ನು ಬಿಂಬಿಸುವ ಮೊತ್ತಮೊದಲ ಚಿತ್ರಕಲಾ ಪ್ರದರ್ಶನ ಲಂಡನ್ನಿನಲ್ಲಿ ಶುರುವಾಯಿತು. 17ನೇ ಶತಮಾನದ ಮೇವಾರದ ರಾಣಾ ಜಗತ್ ಸಿಂಗನ ಸಂಪುಟಗಳನ್ನು ಆಧರಿಸಿ ರಚಿಸಿದ 120 ಚಿತ್ತಾಕರ್ಷಕ ಚಿತ್ರಗಳನ್ನು ಈ ಪ್ರದರ್ಶನ ಒಳಗೊಂಡಿದೆ. `ಬ್ರಿಟಿಷ್ ಲೈಬ್ರರಿ ಫೀಚರ್ಸ್' ಆಯೋಜಿಸಿದ ಈ ಪ್ರದರ್ಶನದಲ್ಲಿ ಚಿತ್ರಕಲೆಯ ಜತೆಗೆ ಶಿಲ್ಪಕೃತಿಗಳು, ಕಲಾತ್ಮಕ ಉಡುಪುಗಳು, ತೊಗಲು ಬೊಂಬೆಗಳು ಹಾಗೂ ನೃತ್ಯ ಪರಿಕರಗಳನ್ನೂ ಇಡಲಾಗಿತ್ತು. ಇಲ್ಲಿನ ಬಹುತೇಕ ಕಲಾಕೃತಿಗಳನ್ನು ಈತನಕ ಸಾರ್ವಜನಿಕವಾಗಿ ಪ್ರದರ್ಶಿಸಿರಲಿಲ್ಲ.
2007: ನೇಪಾಳದ ಖ್ಯಾತ ಪರ್ವತಾರೋಹಿ ಅಪ್ಪಾ ಶೆರ್ಪಾ ಅವರು 17ನೇ ಬಾರಿಗೆ ಹಿಮಾಲಯ ಶಿಖರವನ್ನು ಹತ್ತುವ ಮೂಲಕ ತಮ್ಮದೇ ವಿಶ್ವದಾಖಲೆಯನ್ನು ಮುರಿದು ಮತ್ತೊಂದು ಇತಿಹಾಸ ನಿರ್ಮಿಸಿದರು. ಆಗ್ನೇಯ ದಿಕ್ಕಿನಿಂದ ಶಿಖರವನ್ನು ಹತ್ತಿದ ಇವರು ಈ ದಿನ ಬೆಳಗ್ಗೆ 8.30ಕ್ಕೆ (ಸ್ಥಳೀಯ ಕಾಲಮಾನ) 29,035 ಅಡಿ ಎತ್ತರ ಕ್ರಮಿಸಿ ನೂತನ ದಾಖಲೆ ನಿರ್ಮಿಸಿದರು. ಇವರ ತಂಡದ ಇತರ ಏಳು ಮಂದಿ ಪರ್ವತಾರೋಹಿಗಳೂ ಯಶಸ್ವಿಯಾಗಿ ಶಿಖರ ಏರಿದರು.
2007: ಮದ್ಯದ ದೊರೆ ವಿಜಯ್ ಮಲ್ಯ ಒಡೆತನದ ಯುನೈಟೆಡ್ ಸ್ಪಿರಿಟ್ , ಸ್ಕಾಟ್ಲೆಂಡಿನ ವಿಸ್ಕಿ ತಯಾರಕ ವೈಟ್ ಅಂಡ್ ವೈಟ್ ಅಂಡ್ ಮೆಕೆಯನ್ನು 5950 ಲಕ್ಷ ಪೌಂಡುಗಳಿಗೆ (ಸುಮಾರು 4819 ಕೋಟಿ ರೂಪಾಯಿಗಳಿಗೆ) ಖರೀದಿಸಿತು.
2007: ಹೊಸದಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು ರಾಗಿಂಗ್ ಮೂಲಕ ಗೋಳು ಹುಯ್ದುಕೊಳ್ಳುವ ಹಿರಿಯ ವಿದ್ಯಾರ್ಥಿಗಳ ವಿರುದ್ಧ ತಪ್ಪದೇ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಸುಪ್ರೀಂಕೋರ್ಟ್ ಶಿಕ್ಷಣ ಸಂಸ್ಥೆಗಳಿಗೆ ಸೂಚಿಸಿತು.
2006: ಪಾಂಡವರು ಮತ್ತು ಕೌರವರ ನಡುವೆ ಯುದ್ಧ ನಡೆದ ಕುರುಕ್ಷೇತ್ರದ ಸಮೀಪದಲ್ಲಿ 4500 ವರ್ಷಗಳಿಗೂ ಹಳೆಯದು ಎಂದು ಅಂದಾಜು ಮಾಡಲಾದ ಇಟ್ಟಿಗೆಗಳು ಪತ್ತೆಯಾಗಿರುವುದಾಗಿ ಹರಿಯಾಣದ ಪ್ರಾಚ್ಯವಸ್ತು ಇಲಾಖೆ ಪ್ರಕಟಿಸಿತು. ಕುಶಾನ ವಂಶದ ಆಡಳಿತ ಅವಧಿಯಲ್ಲಿ ಬ್ರಹ್ಮಸಾರ ತೀರ್ಥದ ಪ್ರದೇಶದಲ್ಲಿ ಬಳಸಲಾಗಿದ್ದವೆಂದು ನಂಬಲಾಗಿರುವ ಈ ಇಟ್ಟಿಗೆಗಳು ಬ್ರಹ್ಮಸಾರ ತೀರ್ಥದಲ್ಲಿ ಹೂಳೆತ್ತುವಾಗ ಪತ್ತೆಯಾದವು.
2006: ಬಿಜೆಪಿ ನೇತೃತ್ವದ ಎನ್ ಡಿಎ ನೇತೃತ್ವದ ಪ್ರತಿಪಕ್ಷಗಳ ವಿರೋಧದ ನಡುವೆ `ಲಾಭದಾಯಕ ಹುದ್ದೆ' ಪರಿಧಿಯಿಂದ ವಿವಾದಾತ್ಮಕ ರಾಷ್ಟ್ರೀಯ ಸಲಹಾ ಮಂಡಳಿಯ ಅಧ್ಯಕ್ಷ ಸ್ಥಾನ ಸೇರಿದಂತೆ 56 ಹುದ್ದೆಗಳಿಗೆ ವಿನಾಯ್ತಿ ನೀಡುವ ಮಸೂದೆಯನ್ನು (ಸಂಸದರ ಅನರ್ಹತೆ ತಡೆ ತಿದ್ದುಪಡಿ ಮಸೂದೆ-2006) ಲೋಕಸಭೆಯಲ್ಲಿ ತೀವ್ರ ಚರ್ಚೆಯ ನಂತರ ಧ್ವನಿಮತದಿಂದ ಅಂಗೀಕರಿಸಲಾಯಿತು. ಲೋಕಸಭಾ ಸ್ಪೀಕರ್ ಸೋಮನಾಥ ಚಟರ್ಜಿ ಅವರು ಅಧ್ಯಕ್ಷರಾಗಿರುವ ಶಾಂತಿನಿಕೇತನ ಅಭಿವೃದ್ಧಿ ಪ್ರಾಧಿಕಾರ, ಸಮಾಜವಾದಿ ಪಕ್ಷದ ನಾಯಕ ಅಮರಸಿಂಗ್ ಅಧ್ಯಕ್ಷರಾಗಿರುವ ಉತ್ತರಪ್ರದೇಶ ಅಭಿವೃದ್ಧಿ ಮಂಡಲಿ, ಕೇಂದ್ರ ಗಣಿ ಖಾತೆ ರಾಜ್ಯ ಸಚಿವ ಟಿ. ಸುಬ್ರಮಣಿ ರೆಡ್ಡಿ ಅಧ್ಯಕ್ಷರಾಗಿರುವ ತಿರುಮಲ ತಿರುಪತಿ ದೇವಸ್ಥಾನಂ ಮಂಡಲಿ, ಬಿಜೆಪಿ ಸಂಸದ ವಿ.ಕೆ. ಮಲ್ಹೋತ್ರ ಅಧ್ಯಕ್ಷರಾಗಿರುವ ಅಖಿಲ ಭಾರತ ಕ್ರೀಡಾ ಮಂಡಲಿ, ಸೋನಿಯಾ ಗಾಂಧಿ ಅವರು ಅಧ್ಯಕ್ಷರಾಗಿರುವ ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ಆರ್ಟ್ಸ್, ನೆಹರು ಸ್ಮಾರಕ ಮ್ಯೂಜಿಯಂ ಮತ್ತು ಗ್ರಂಥಾಲಯ, ಜಲಿಯನ್ ವಾಲಾಬಾಗ್ ಸ್ಮಾರಕ ಟ್ರಸ್ಟುಗಳೂ ಈ ಹುದ್ದೆಗಳಲ್ಲಿ ಸೇರಿವೆ. ಆದರೆ `ಲಾಭದ ಹುದ್ದೆಯ ವಿವಾದಕ್ಕೆ ಮೂಲವಾದ ಹಾಗೂ ಜಯಾ ಬಚ್ಚನ್ ಅವರು ರಾಜ್ಯಸಭಾ ಸ್ಥಾನ ಕಳೆದುಕೊಳ್ಳಲು ಕಾರಣವಾದ ಉತ್ತರಪ್ರದೇಶ ಚಲನಚಿತ್ರ ಅಭಿವೃದ್ಧಿ ನಿಗಮವನ್ನು ಲಾಭದ ಹುದ್ದೆ ಮಸೂದೆ ವ್ಯಾಪ್ತಿಯಿಂದ ಹೊರಗಿಡಲಾಯಿತು.
2006: ಸಹಕಾರ ಕೃಷಿ ಪತ್ತಿನ ಸಂಸ್ಥೆಗಳು ರೈತರಿಗೆ ಏಪ್ರಿಲ್ ಒಂದರಿಂದ ಪೂರ್ವಾನ್ವಯ ಆಗುವಂತೆ ಶೇಕಡಾ 4ರ ಬಡ್ಡಿ ದರದಲ್ಲಿ ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲ ವಿತರಣೆ ಮಾಡಲು ರಾಜ್ಯ ಸರ್ಕಾರ ಹಿಂದಿನ ರಾತ್ರಿ ಆದೇಶ ಹೊರಡಿಸಿದ್ದು, ಉಪಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆದೇಶದ ಪ್ರತಿಗಳನ್ನು ಈದಿನ ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.
1975: ಜಪಾನಿನ ಪರ್ವತಾರೋಹಿ ಜಂಕೋ ತಾಬೀ ಎವರೆಸ್ಟ್ ಶಿಖರವನ್ನು ತಲುಪುವ ಮೂಲಕ ಜಗತ್ತಿನ ಅತಿ ಎತ್ತರದ ಈ ಶಿಖರ ತಲುಪಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
1975: ಸಿಕ್ಕಿಂ ಭಾರತದ 22ನೇ ರಾಜ್ಯವಾಯಿತು.
1957: ಕಲಾವಿದೆ ಆಶಾ ಜನನ.
1957: ಕಲಾವಿದೆ ರಂಗಶ್ರೀ ಜನನ.
1956: ಕಲಾವಿದ ರೆಡ್ಡಪ್ಪ ಎ.ಎನ್. ಜನನ.
1929: ಹಾಲಿವುಡ್ನ ರೂಸ್ ವೆಲ್ಟ್ ಹೋಟೆಲಿನಲ್ಲಿ ಮೊತ್ತ ಮೊದಲ (ಚಲನಚಿತ್ರ) ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಅತ್ಯುತ್ತಮ ನಿರ್ಮಾಣ ಪ್ರಶಸ್ತಿ `ವಿಂಗ್ಸ್' ಚಲನಚಿತ್ರಕ್ಕೆ ಲಭಿಸಿತು. ಎಮಿಲ್ ಜೆನ್ನಿಂಗ್ಸ್ ಮತ್ತು ಜಾನೆಟ್ ಗೇನೊರ್ ಕ್ರಮವಾಗಿ ಅತ್ಯುತ್ತಮ ನಟ ಹಾಗೂ ಅತ್ಯುತ್ತಮ ನಟಿ ಪ್ರಶಸ್ತಿ ಗಳಿಸಿದರು. ಅಕಾಡೆಮಿ ಅಧ್ಯಕ್ಷ ಡಗ್ಲಾಸ್ ಫೇರ್ ಬ್ಯಾಂಕ್ಸ್ ಪ್ರಶಸ್ತಿ ಪ್ರದಾನ ಮಾಡಿದರು.
1926: ಪ್ರಜಾವಾಣಿಯ ನಿವೃತ್ತ ಸಂಪಾದಕ, ಹಿರಿಯ ಪತ್ರಕರ್ತ ವೈಎನ್ ಕೆ (1926-1999)ಅವರು ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಅಗರ ಗ್ರಾಮದಲ್ಲಿ ಈದಿನ ಜನಿಸಿದರು. ವಿದ್ಯಾರ್ಥಿಯಾಗಿದ್ದಾಗಲೇ ಪತ್ರಿಕೋದ್ಯಮದಲ್ಲಿ ಅಪಾರ ಆಸಕ್ತಿ ತಾಳಿದ್ದ ಅವರು `ಬಾಲಚಂದ್ರ' ಎಂಬ ಕೈಬರಹದ ಪತ್ರಿಕೆ ನಡೆಸಿದ್ದರು. ಕೆಲವು ಕಾಲ `ಕುಸುಮ' `ಕಿರಣ' ಕೈಬರಹದ ಪತ್ರಿಕೆಗಳನ್ನು ಹೊರತಂದಿದ್ದರು. ಪತ್ರಿಕೋದ್ಯಮವೂ ಸಾಹಿತ್ಯದ ಒಂದು ಭಾಗ ಎಂಬುದನ್ನು ನಿರೂಪಿಸಲು ಹೊಸ ಹೊಸ ಅಂಕಣಗಳನ್ನು ತಾವು ದುಡಿದ ಪ್ರಜಾವಾಣಿ, ಕನ್ನಡ ಪ್ರಭ ಪತ್ರಿಕೆಗಳಲ್ಲಿ ಆರಂಭಿಸಿ ಅವುಗಳ ಮೌಲ್ಯ ಹೆಚ್ಚಿಸಿದರು. ಶಬ್ದಗಳನ್ನು ಪನ್ (PUN)
ಮಾಡಿ ಆಡುವ ಕಲೆ ಅವರಿಗೆ ಕರಗತವಾಗಿತ್ತು. 16-10-1999 ರಂದು ಅವರು ಹೃದಯಾಘಾತದಿಂದ ನಿಧನರಾದರು.
1916: ನಟ, ನಿರ್ದೇಶಕ, ನಾಟಕಕಾರ, ರಂಗತಜ್ಞ, ರಂಗಶಿಕ್ಷಕರಾಗಿದ್ದ ಚಂದ್ರಶೇಖರ್ (16-5-1916ರಿಂದ 13-12-2000) ಅವರು ವಕೀಲ ಬೆಳವಾಡಿ ರಾಮಸ್ವಾಮಯ್ಯ- ಗುಂಡಮ್ಮ ದಂಪತಿಯ ಮಗನಾಗಿ ಹಾಸನದಲ್ಲಿ ಜನಿಸಿದರು.
1888: ಫ್ರಾಂಕ್ಲಿನ್ ಇನ್ ಸ್ಟಿಟ್ಯೂಟ್ ಆಫ್ ಫಿಲಿಡೆಲ್ಫಿಯದ ಸದಸ್ಯರ ಮುಂದೆ ಫ್ಲಾಟ್ ರೆಕಾರ್ಡಿಂಗ್ ಡಿಸ್ಕನ್ನು (ಹಾಡುವ ತಟ್ಟೆ) ಎಮಿಲ್ ಬರ್ಲೈನರ್ ಮೊತ್ತ ಮೊದಲ ಬಾರಿಗೆ ಪ್ರದರ್ಶಿಸಿದ. ಈ `ರೆಕಾರ್ಡನ್ನು' ಧ್ವನಿ ಮರು ಉತ್ಪಾದಿಸುವ ಯಂತ್ರದಲ್ಲಿ ಹಾಕಿ ಮತ್ತೆ ಧ್ವನಿಯನ್ನು ಕೇಳಬಹುದಾಗಿತ್ತು. ಈ ಧ್ವನಿ ಮರು ಉತ್ಪಾದನಾ ಯಂತ್ರವನ್ನು ಎಮಿಲ್ ಬರ್ಲೈನರ್ `ಗ್ರಾಮೋಫೋನ್' ಎಂಬುದಾಗಿ ಕರೆದ.
1831: ಆಂಗ್ಲೋ ಅಮೆರಿಕನ್ ಸಂಶೋಧಕ ಡೇವಿಡ್ ಎಡ್ವರ್ಡ್ ಹ್ಯೂಗ್ಸ್ (1831-1900) ಜನ್ಮದಿನ. ಈತ ಕಾರ್ಬನ್ ಮೈಕ್ರೋಫೋನನ್ನು ಕಂಡು ಹಿಡಿದ. ಈತನ ಈ ಸಂಶೋಧನೆ ಮುಂದೆ ದೂರವಾಣಿ ತಂತ್ರದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿತು.
No comments:
Post a Comment