Sunday, May 13, 2018

ಇಂದಿನ ಇತಿಹಾಸ History Today ಮೇ 12

ಇಂದಿನ ಇತಿಹಾಸ History Today ಮೇ 12
 2018: ಕಠ್ಮಂಡು: ಪ್ರಧಾನಿ ನರೇಂದ್ರ ಮೋದಿ ಅವರು ಹಿಂದುಗಳು ಮತ್ತು ಬೌದ್ಧರಿಗೆ ಪವಿತ್ರವಾದ ನೇಪಾಳದ ಮುಕ್ತಿನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಈ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಮೊತ್ತ ಮೊದಲ ವಿಶ್ವ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾದರು.  ಮೋದಿ ಅವರು ಬಾಗ್ಮತಿ ನದಿ ದಂಡೆಯಲ್ಲಿರುವ ಪಶುಪತಿ ನಾಥ ದೇವಾಲಯದಲ್ಲೂ ಪ್ರಾರ್ಥನೆ ಸಲ್ಲಿಸಿದರು. ಪಶುಪತಿನಾಥ ದೇವಾಲಯವು ನೇಪಾಳದಲ್ಲಿನ ಅತ್ಯಂತ ಹಳೆಯ ಹಾಗೂ ಪವಿತ್ರ ದೇವಾಲಯ. ಪಶುಪತಿನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ, ಮೋದಿಯವರು ಅಲ್ಲಿನ ಸಂದರ್ಶಕರ ಪುಸ್ತಕದಲ್ಲಿ ಸಹಿ ಮಾಡಿದರು. ಅವರಿಗೆ ದೇವಾಲಯದ ಕಿರು ಪ್ರತಿಕೃತಿಯನ್ನು ಕೊಡುಗೆಯಾಗಿ ನೀಡಲಾಯಿತು. ನೇಪಾಳ ಪ್ರವಾಸದ ಎರಡನೇ ದಿನ ಮುಸ್ತಾಂಗ್ ಜಿಲ್ಲೆಯಿಂದ ವಾಯಮಾರ್ಗ ಮೂಲಕವಾಗಿ ಮುಕ್ತಿನಾಥಕ್ಕೆ ತೆರಳಿದ ಮೋದಿ ಅವರು  ೧೨೧೭೨ ಅಡಿ ಎತ್ತರದಲ್ಲಿರುವ ಪವಿತ್ರ ಮುಕ್ತಿನಾಥ ದರ್ಶನ ಪಡೆದರು. ತನ್ಮೂಲಕ ಭಾರತ ಮತ್ತು ನೇಪಾಳದ ನಡುವಿನ ಪ್ರಾಚೀನ ಸಾಂಸ್ಕೃತಿಕ ಬಾಂಧವ್ಯಕ್ಕೆ ಸುಭದ್ರ ಬೆಸುಗೆ ಹಾಕಿದರು.  ‘ಪ್ರಧಾನಿ ಮೋದಿ ಅವರು ಶ್ರೀ ಮುಕ್ತಿ ನಾರಾಯಣ ರೂಪದಲ್ಲಿರುವ ಭಗವಾನ್ ವಿಷ್ಣುವಿನ ಆಳೆತ್ತರದ ಸ್ವರ್ಣ ಪ್ರತಿಮೆಯ ಮುಂದೆ ಕುಳಿತು ಪ್ರಾರ್ಥನೆ ಸಲ್ಲಿಸಿದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ವಕ್ತಾರ ರವೀಶ್ ಕುಮಾರ್ ಅವರು ಪ್ರಧಾನಿಯವರ ಮುಕ್ತಿನಾಥ ದೇವಾಲಯ ಭೇಟಿ ಬಳಿಕ ಹೇಳಿದರು.  ಮುಕ್ತಿನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಮೋದಿ ಅವರು ಮುಕ್ತಿನಾಥ ದೇವಾಲಯದ ಪವಿತ್ರ ಗರ್ಭಗುಡಿಯಲ್ಲಿ ಪ್ರಾರ್ಥನೆ ಸಲ್ಲಿಸುವ ಮೊತ್ತ ಮೊದಲ ವಿದೇಶೀ ಅತಿಥಿಯಾಗಲಿದದಾರೆ ಎಂದು ನೇಪಾಳದ ಪ್ರಧಾನಿ ಕೆ.ಪಿ. ಶರ್ಮ ಒಲಿ ಅವರು ಮೇ 11ರ ಶುಕ್ರವಾರ ಹೇಳಿದ್ದರು.  ಮೋದಿ ಅವರ ಭೇಟಿಯ ಹಿನ್ನೆಲೆಯಲ್ಲಿ ಮುಸ್ತಾಂಗ್ ನಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಮೋದಿ ಅವರ ಬೇಟಿ ಸುರಕ್ಷಿತ ಮತ್ತು ವ್ಯವಸ್ಥಿತವಾಗಿ ನೆರವೇರುವಂತೆ ನೋಡಿಕೊಳ್ಳುವ ಸಲುವಾಗಿ ಸ್ಥಳೀಯ ಆಡಳಿತವು ವಿಶೇಷ ಭದ್ರತಾ ಯೋಜನೆಯನ್ನೇ ರೂಪಿಸಿತ್ತು. ಮುಕ್ತಿನಾಥ ಕಣಿವೆಯಲ್ಲಿ ಇರುವ ಮುಕ್ತಿನಾಥ ದೇವಾಲಯವು ಹಿಂದುಗಳು ಮತ್ತು ಬೌದ್ಧ ಎರಡೂ ಸಮುದಾಯಗಳಿಗೆ ಅತ್ಯಂತ ಪವಿತ್ರ ಸ್ಥಳ ಎಂದೇ ಪರಿಗಣಿತವಾಗಿದೆ. ದೇವಾಲಯವು ಮುಸ್ತಾಂಗ್ ಜಿಲ್ಲೆಯ ಪರ್ವತ ಪ್ರದೇಶದ ಥೊರೊಂಗ್ ಲಾ ಪಾಸ್ ಬುಡದಲ್ಲಿ, ೩,೭೧೦ ಮೀಟರ್ ಎತ್ತರದಲ್ಲಿದೆ.


2018: ಕಠ್ಮಂಡು: ನೇಪಾಳವು ಭಾರತದ ಹಿತಾಸಕ್ತಿಗಳಿಗೆ ಸಂಬಂಧಿಸಿದಂತೆ ಅತ್ಯಂತ ಸೂಕ್ಷ್ಮವಾಗಿದ್ದು, ತನ್ನ ನೆಲವನ್ನು ಭಾರತದ ವಿರುದ್ಧ ಬಳಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ನೇಪಾಳದ ಪ್ರಧಾನಿ  ಕೆ.ಪಿ. ಶರ್ಮ ಒಲಿ ಅವರು ಇಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭರವಸೆ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರ ಎರಡು ದಿನಗಳ ನೇಪಾಳ ಭೇಟಿಯ ಅಂತ್ಯದಲ್ಲಿ ವರದಿಗಾರರ ಜೊತೆಗೆ ಮಾತನಾಡಿದ ವಿದೇಶಾಂಗ ಕಾರ್‍ಯದರ್ಶಿ ವಿಜಯ್ ಗೋಖಲೆ ಅವರು ಪ್ರಧಾನಿ ಒಲಿ ಅವರಿಂದ ಬಂದಿರುವ ಅತ್ಯಂತ ಮಹತ್ವದ ಹೇಳಿಕೆ ಇದಾಗಿದ್ದು, ಮಾತುಕತೆಗಳ ಬಗ್ಗೆ ಭಾರತ ಸಂತೃಪ್ತವಾಗಿದೆ ಎಂದು ಹೇಳಿದರು.  ‘ನೇಪಾಳವು ಭಾರತದ ಹಿತಾಸಕ್ತಿಗಳಿಗೆ ಸಂಬಂಧಿಸಿದಂತೆ ಅತ್ಯಂತ ಸೂಕ್ಷ್ಮವಾಗಿದೆ ಮತ್ತು ತನ್ನ ನೆಲವನ್ನು ಭಾರತದ ವಿರುದ್ಧ ಬಳಸಿಕೊಳ್ಳಲಾಗುವುದಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದೆ ಎಂದು ಗೋಖಲೆ ನುಡಿದರು.  ನೇಪಾಳವು ಭಾರತದ ಪೂರ್ವ, ದಕ್ಷಿಣ ಮತ್ತು ಪಶ್ಚಿಮದಲ್ಲಿ ಸಿಕ್ಕಿಂ, ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಈ ಐದು ರಾಜ್ಯಗಳಲ್ಲಿ ಹರಡಿರುವ ೧,೮೫೦ ಕಿಮೀ ಪ್ರದೇಶದಲ್ಲಿ ಗಡಿಯಲ್ಲಿ ಹೊಂದಿದೆ.  ಒಲಿ ಜೊತೆಗಿನ ಮುಖಾಮುಖಿ ಭೇಟಿಯ ಬಳಿಕ ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮೋದಿ ಅವರು ಭಾರತ ಮತ್ತು ನೇಪಾಳ ನಡುವಣ ಮುಕ್ತ ಗಡಿಗಳು ಪ್ರಬಲ ದ್ವಿಪಕ್ಷೀಯ ಬಾಂಧವ್ಯದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದ್ದರು.  ‘ಸಮಾಜವಿರೋಧಿ ಶಕ್ತಿಗಳಿಗೆ ನಾವು ಅದರ ದುರುಪಯೋಗ ಮಾಡಿಕೊಳ್ಳಲು ಬಿಡುವುದಿಲ್ಲ ಎಂದು ನಿಯೋಗ ಮಟ್ಟದ ಸುದೀರ್ಘ ಮಾತುಕತೆಗಳ ಬಳಿಕ ಮೋದಿ ತಿಳಿಸಿದ್ದರು. ಈ ಮಾತುಕತೆಯಲ್ಲಿ ಉಭಯ ಪಕ್ಷಗಳೂ ದ್ವಿಪಕ್ಷೀಯ ಬಾಂಧವ್ಯದ ಬಗ್ಗೆ ವಿಸ್ತೃತ ಮಾತುಕತೆ ನಡೆಸಿದ್ದರು. ‘ರಕ್ಷಣೆ, ಗಡಿಯಲ್ಲಿನ ಮುಕ್ತ ಗಡಿಯನ್ನು ದುರುಪಯೋಗಿಸಿಕೊಂಡು ನಡೆಸಲಾಗುವ ಅಪರಾಧಗಳನ್ನು ನಿಯಂತ್ರಿಸಲು ಜಂಟಿ ಪ್ರಯತ್ನಗಳನ್ನು ಇನ್ನಷ್ಟು ಪ್ರಬಲಗೊಳಿಸಲು ನಾವು ಒಪ್ಪಿದೆವು. ಇದು ಉಭಯ ಕಡೆಗಳ ಜನರಿಗೆ ಅತ್ಯಂತ ಮಹತ್ವದ ವಿಚಾರ ಎಂದು ಅವರು ತಿಳಿಸಿದ್ದರು.  ಭಾರತ- ನೇಪಾಳ ಗಡಿಯು ಮುಕ್ತವಾಗಿದ್ದು, ಜನಸಂಖ್ಯೆಯೂ ಹೆಚ್ಚಿದೆ. ಗಡಿಯಲ್ಲಿನ ಜನರ ಚಲನವಲನದ ಮೇಲೆ ೧೯೫೦ರ ಭಾರತ - ನೇಪಾಳ ಶಾಂತಿ ಮತ್ತು ಸ್ನೇಹ ಒಪ್ಪಂದಗಳಿಗೆ ಅನುಗುಣವಾಗಿ ನಿಗಾ ಇಡಲಾಗಿದೆ.  ಪ್ರಧಾನಿ ಮೋದಿ ಅವರ ಜೊತೆಗಿನ ಮಾತುಕತೆಯಲ್ಲಿ ಉನ್ನತ ಮಟ್ಟದ ಭೇಟಿಗಳು ಸಂಪರ್ಕವನ್ನು ಬಲಪಡಿಸುತ್ತವೆ ಎಂದು ಮತ್ತು ನೇಪಾಳ ಅಧ್ಯಕ್ಷರಾದ ಬಿದ್ಯಾ ದೇವಿ ಭಂಡಾರಿ ಹೇಳಿದರು.   ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ನೇಪಾಳಿ ನಾಯಕರು ಜನಕಪುರ ಮತ್ತು ಮುಕ್ತಿನಾಥದಂತಹ ಸಾಂಸ್ಕೃತಿಕ ಸ್ಥಳಗಳಿಗೆ ಮೋದಿ ನೀಡಿದ ಭೇಟಿಯಿಂದ ಪ್ರವಾಸೋದ್ಯಮಕ್ಕೆ ಒತ್ತು ಸಿಗಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು ಎಂದು ಗೋಖಲೆ ನುಡಿದರು.  ಉಭಯ ಕಡೆಗಳೂ ಈ ವರ್ಷ ಸೆಪ್ಟೆಂಬರ್ ವೇಳೆಗೆ ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ಅನೌಪಚಾರಿಕ ಕಾಲಮಿತಿಯ ಚರ್ಚೆ ನಡೆಸಲು ಉಭಯ ಕಡೆಗಳೂ ಒಪ್ಪಿವೆ ಎಂದೂ ಅವರು ಹೇಳಿದರು. ನೇಪಾಳದಲ್ಲಿನ ಭಾರತ ನೆರವಿನ ವಿವಿಧ ಯೋಜನೆಗಳ ಅನುಷ್ಠಾನ ಬಗೆಗೂ ಉಭಯ ನಾಯಕರು ಚರ್ಚಿಸಿದರು ಮತ್ತು ಕೆಲವು ಯೋಜನೆಗಳ ಅನುಷ್ಠಾನದಲ್ಲಿನ ಅಂತರವನ್ನು ನಿವಾರಿಸಲು ನಿರ್ಧರಿಸಿದರು ಎಂದು ವಿದೇಶಾಂಗ ಕಾರ್ಯದರ್ಶಿ ಹೇಳಿದರು.

2018: ಶಿಮ್ಲಾ: ಕರ್ನಾಟಕದಲ್ಲಿ ಜೆಡಿ(ಎಸ್) ಜೊತೆಗೆ ಯಾವುದೇ ಮೈತ್ರಿ ರಚನೆಗೆ ಕಾಂಗ್ರೆಸ್ ಪಕ್ಷಕ್ಕೆ ಹಿಂಜರಿಕೆ ಇಲ್ಲ ಎಂದು ಇಲ್ಲಿ ಹೇಳಿದ ರಾಜ್ಯಸಭೆಯಲ್ಲಿನ ಕಾಂಗ್ರೆಸ್ ಉಪನಾಯಕ ಆನಂದ ಶರ್ಮ ಅವರು ’ಇದು ಜಾತ್ಯತೀತ ಮತ್ತು ಸಮಾನಮನಸ್ಕ ರಾಜಕೀಯ ಶಕ್ತಿಗಳ ಜೊತೆಗೆ ಹೋಗುವ ಪಕ್ಷದ ಇತ್ತೀಚಿನ ರಾಜಕೀಯ ಗೊತ್ತುವಳಿಗೆ ಅನುಗುಣವಾಗಿದೆ ಎಂದು ಸ್ಪಷ್ಟ ಪಡಿಸಿದರು.  ಕರ್ನಾಟಕದಲ್ಲಿ ಬಿಜೆಪಿಯ ಚುನಾವಣಾ ವೆಚ್ಚ ಮತ್ತು ಸರ್ಕಾರಿ ಯಂತ್ರದ ದುರುಪಯೋಗ ಬಗ್ಗೆ ಪ್ರಶ್ನೆಯೆತ್ತಿದ ಶರ್ಮ, ವಿಧಾನಸಭಾ ಸ್ಥಾನಕ್ಕೆ ಸ್ಪರ್ಧಿಸಿರುವ ಪ್ರತಿಯೊಬ್ಬ ಬಿಜೆಪಿ ಅಭ್ಯರ್ಥಿಗೆ ಕೋಟ್ಯಂತರ ರೂಪಾಯಿಗಳನ್ನು ನೀಡಲಾಗಿದೆ ಮತ್ತು ಚಾರ್ಟರ್ಡ್ ಹೆಲಿಕಾಪ್ಟರ್ ಗಳ ವೆಚ್ಚವೇ ಈಗ ೧೫,೦೦೦ ಕೋಟಿ ರೂಪಾಯಿಗಳನ್ನು ದಾಟಿರಬಹುದು. ಇನ್ನೊಂದೆಡೆ ಕಾಂಗ್ರೆಸ್ ಪ್ರಚಾರಕ್ಕೆ ತಡೆಯೊಡ್ಡಲಾಗಿದೆ. ಅಭ್ಯರ್ಥಿಗಳು ನಡುರಾತ್ರಿಯ ಆದಾಯ ತೆರಿಗೆ ದಾಳಿಗಳ ಅನುಭವಕ್ಕೆ ಒಳಗಾಗುತ್ತಿದ್ದಾರೆ ಎಂದು ಅವರು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ನುಡಿದರು.  ನಾಲ್ಕು ವರ್ಷಗಳ ನರೇಂದ್ರ ಮೋದಿ ಸರ್ಕಾರ ಸಂಪೂರ್ಣವಾಗಿ ವೈಫಲ್ಯ, ವಂಚನೆ, ಅಪ್ರಾಮಾಣಿಕತೆ, ಸುಳ್ಳುಗಳು ಮತ್ತು ತಪ್ಪು ಭರವಸೆಗಳಿಂದ ಕೂಡಿದೆ. ಸರ್ಕಾರವು ಕೋಟಿಗಟ್ಟಲೆ ರೂಪಾಯಿಗಳನ್ನು ತನ್ನ ನಾಲ್ಕು ವರ್ಷಗಳ ಅವಧಿಯಲ್ಲಿ ತಪ್ಪು ಪ್ರಚಾರಕ್ಕಾಗಿ ಕೋಟ್ಯಂತರ ರೂಪಾಯಿಗಳನ್ನು ವ್ಯಯಿಸುವುದು ಎಂದು ಅವರು ಹೇಳಿದರು.  ‘ಮೋದಿ ಸರ್ಕಾರವು ಸುಳ್ಳು  ಪ್ರಚಾರದಲ್ಲಿ ತೊಡಗುವುದನ್ನು ಬಿಟ್ಟು, ಪಶ್ಚಾತ್ತಾಪಕ್ಕಾಗಿ ಕಾಲ ವ್ಯಯಿಸಬೇಕು. ನೋಟು ಅಮಾನ್ಯೀಕರಣ ಮತ್ತು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಈ ಎರಡು ಮಹತ್ವವಾದ ಅದರ ತೀರ್ಮಾನಗಳು ಅತಿದೊಡ್ಡ ವೈಫಲ್ಯಗಳಾಗಿದ್ದು ಭಾರತದ ಆರ್ಥಿಕತೆಯನ್ನು ಕುಲಗೆಡಿಸಿದೆ ಎಂಬುದು ಸಾಬೀತಾಗಿದೆ ಎಂದು ಅವರು ನುಡಿದರು. ಸರ್ಕಾರವು ನೋಟು ಅಮಾನ್ಯೀಕರಣದ ಮೂಲಕ ಭ್ರಷ್ಟಾಚಾರ, ಕಾಳಧನ ಮತ್ತು ಭಯೋತ್ಪಾದನೆಯನ್ನು ನಿಗ್ರಹಿಸುವುದಾಗಿ ನೀಡಿದ ತನ್ನ ವಚನವನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಬದಲಿಗೆ ಈ ಕಸರತ್ತಿನಲ್ಲಿ ೧೪೩ ಜನ ಪ್ರಾಣ ಕಳೆದುಕೊಂಡರು. ಜಿಎಸ್ಟಿಯಿಂದ ಆಲ್ಕೋಹಾಲ್, ಪೆಟ್ರೋಲ್ ಮತ್ತು ರಿಯಲ್ ಎಸ್ಟೇಟ್ ಸೇರಿದಂತೆ ಯಾವುದರ ಆದಾಯ ಕೂಡಾ ಶೇಕಡಾ ೪೫ನ್ನೂ ಮುಟ್ಟಲಿಲ್ಲ ಎಂದು ಅವರು ಆಪಾದಿಸಿದರು.  ಜಿಎಸ್ಟಿಯಲ್ಲಿ ೫ ಹಂತಗಳನ್ನು ಸೃಷ್ಟಿಸಿದ ಬಳಿಕ ಈಗಾಗಲೇ ೪೦ ತಿದ್ದುಪಡಿಗಳನ್ನು ಮಾಡಲಾಗಿದೆ ಆದರೂ ವೆಚ್ಚ ಸಾಲ ಮರುಪಾವತಿ ಸಾಧ್ಯವಾಗಿಲ್ಲ. ಅದು ತೆರಿಗೆ ಭಯೋತ್ಪಾದನೆಯ ಆಡಳಿತವನ್ನು ಸೃಷ್ಟಿಸಿದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕಾ ರಂಗದ ಶೇಕಡಾ ೩೩ರಷ್ಟು ಉದ್ಯಮಗಳು ಮುಚ್ಚಿಹೋಗಿವೆ, ಪರಿಣಾಮವಾಗಿ ೪ ಕೋಟಿ ಉದ್ಯೋಗ ನಷ್ಟವಾಗಿದೆ. ಹೂಡಿಕೆ ದರ ಈಗ ಚರಿತ್ರೆಯಲ್ಲೇ ಕಾಣದಷ್ಟು ಕೆಳಕ್ಕೆ ಇಳಿದಿದೆ. ರಾಷ್ಟ್ರೀಯ ಉಳಿತಾಯ ದರ ಕೂಡಾ ಜನರು ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ವಿಶ್ವಾಸ ಕಳೆದುಕೊಂಡ ಪರಿಣಾಮವಾಗಿ ಕುಸಿದಿದೆ. ಭಾರತದ ರಿಸರ್ವ್ ಬ್ಯಾಂಕ್ ವಿಶ್ವಾದ್ಯಂತ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ. ವಸೂಲಾಗದ ಸಾಲ (ಎನ್ ಪಿಎ) ೩ ಲಕ್ಷ ಕೋಟಿಯಿಂದ ೧೧ ಲಕ್ಷ ಕೋಟಿಗೆ ಏರಿದೆ ಎಂದು ಅವರು ನುಡಿದರು.  ಬಿಜೆಪಿ ಸರ್ಕಾರವು ಸಿಬಿಐ, ಜಾರಿ ನಿರ್ದೇಶನಾಲಯ, ಭಾರತದ ಚುನಾವಣಾ ಆಯೋಗ, ಭಾರತದ ರಿಸರ್ವ್ ಬ್ಯಾಂಕ್ ಮತ್ತು ನ್ಯಾಯಾಂಗದಂತಹ ಸಂಸ್ಥೆಗಳ ಪಾವಿತ್ರ್ಯ ಮತ್ತು ಸ್ವಾತಂತ್ರ್ಯವನ್ನು ಕೊಂದು ಹಾಕಿದೆ. ಇದು ಗೊತ್ತಿಲ್ಲದೇ ಆದದ್ದಲ್ಲ, ಉದ್ದೇಶಪೂರ್ವಕವಾಗಿ ಆಗಿರುವಂತಹುದು ಎಂದು ಅವರು ಹೇಳಿದರು.  ಈ ಸರ್ಕಾರವು ಮಹಿಳೆಯರಿಗೆ ಸುರಕ್ಷತೆ ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಮತ್ತು ಇಡೀ ವಿಶ್ವವೇ ಈ ಬಗ್ಗೆ ಮಾತನಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಾಂಗ ನೀತಿ ಮತ್ತು ರಾಜತಂತ್ರವು ಗುರುತ್ವ ಮತ್ತು ಆಳವನ್ನು ಕಳೆದುಕೊಂಡಿದೆ. ಅದು ಕೇವಲ ಫೊಟೋ ಅವಕಾಶಗಳು ಮತ್ತು ವೈಯಕ್ತಿಕ ಪ್ರಚಾರಕ್ಕೆ ಸೀಮಿತವಾಗಿದೆ ಎಂದು ಅವರು ನುಡಿದರು.

2018: ನವದೆಹಲಿ: ಭಾರತ- ಪಾಕ್ ಬಾಂಧವ್ಯವನ್ನು ಇನ್ನಷ್ಟು ಕುಲಗೆಡಿಸಬಹುದಾದಂತಹ ಸ್ಫೋಟಕ ಹೇಳಿಕೆಯೊಂದರಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಅವರು ಮುಂಬೈ ಮೇಲಿನ ೨೬/೧೧ರ ಭಯೋತ್ಪಾದಕ ದಾಳಿ ನಡೆಸುವ ಸಲುವಾಗಿ ಗಡಿ ದಾಟಿ ಹೋಗಲು ಪಾಕಿಸ್ತಾನ ತನ್ನ ಭಯೋತ್ಪಾದಕರಿಗೆ ಅನುಮತಿ ನೀಡಿತ್ತು ಎಂದು ಒಪ್ಪಿಕೊಂಡರು.  ಮುಂಬೈ ಮೇಲಿನ ೨೬/೧೧ರ ಭಯೋತ್ಪಾದಕ ದಾಳಿಗೆ ೧೫೦ಕ್ಕೂ ಹೆಚ್ಚು ಮಂದಿ ಬಲಿಯಾಗಿ ೩೦೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.  ಪಾಕಿಸ್ತಾನದ ಅತಿದೊಡ್ಡ ದೈನಿಕ ’ಡಾನ್ಗೆ ನೀಡಿದ ಸಂದರ್ಶನದಲ್ಲಿ ಶರೀಫ್ ಅವರು ’ಉಗ್ರಗಾಮಿ ಸಂಘಟನೆಗಳು ಸಕ್ರಿಯವಾಗಿವೆ. ಅವರನ್ನು ದೇಶರಹಿತರು ಎಂದೇ ಕರಿಯಿರಿ. ನಾವು ಅವರಿಗೆ ಗಡಿದಾಟಿ ಹೋಗಿ ಮುಂಬೈಯಲ್ಲಿ ೧೫೦ ಮಂದಿಯನ್ನು ಕೊಲ್ಲಲು ಅನುಮತಿ ನೀಡಬೇಕೆ ಎಂದು ಶರೀಫ್ ಪ್ರಶ್ನಿಸಿದರು. ಶರೀಫ್ ಅವರು ರಾಷ್ಟ್ರದಲ್ಲಿ ಉಗ್ರಗಾಮಿ ಸಂಘಟನೆಗಳು ಸಕ್ರಿಯವಾಗಿವೆ ಎಂದು ಬಹಿರಂಗವಾಗಿ ಒಪ್ಪಿಕೊಂಡದ್ದು ಮತ್ತು ದೇಶರಹಿತ ಉಗ್ರಗಾಮಿಗಳಿಗೆ ಗಡಿದಾಟಿ ಮುಂಬೈಯಲ್ಲಿ ಜನರನ್ನು ’ಕೊಲ್ಲಲು ಅನುಮತಿ ನೀಡಿದ ನೀತಿಯನ್ನು ಪ್ರಶ್ನಿಸಿದ್ದು ಇದೇ ಮೊದಲ ಸಲ ಎಂದು ಮಾಧ್ಯಮ ವರದಿ ತಿಳಿಸಿತು. ‘ನಾವು ನಮ್ಮನ್ನು ಪ್ರತ್ಯೇಕಿಸಿಕೊಂಡಿದ್ದೇವೆ. ಬಲಿದಾನಗಳನ್ನು ಮಾಡಿದ್ದರ ಹೊರತಾಗಿಯೂ ನಮ್ಮ ವಿವರಣೆಯನ್ನು ಒಪ್ಪಿಕೊಳ್ಳಲಾಗುತ್ತಿಲ್ಲ. ಆಫ್ಘಾನಿಸ್ಥಾನದ ವಿವರಣೆಯನ್ನು ಅಂಗೀಕರಿಸಲಾಗುತ್ತಿದೆ, ಆದರೆ ನಮ್ಮದನ್ನು ಅಂಗೀಕರಿಸುವುದಿಲ್ಲ. ನಾವು ಈ ಬಗ್ಗೆ ಗಮನಿಸಬೇಕು ಎಂದು ಶರೀಫ್ ’ಡಾನ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಭ್ರಷ್ಟಾಚಾರ ಪ್ರಕರಣದಲ್ಲಿ ತಪ್ಪಿತಸ್ಥ ಎಂಬುದಾಗಿ ಸಾಬೀತಾದ ಬಳಿಕ ಪ್ರಧಾನಿ ಸ್ಥಾನದಿಂದ ಉಚ್ಚಾಟಿಸಲ್ಪಟ್ಟಿದ್ದ ಶರೀಫ್ ಅವರು ’೨೬/೧೧ ದಾಳಿ ಪ್ರಕರಣದ ವಿಚಾರಣೆಯನ್ನು ಪಾಕಿಸ್ತಾನ ಇನ್ನೂ ಯಾಕೆ ಪೂರ್ಣಗೊಳಿಸಿಲ್ಲ ಎಂದು ಪ್ರಶ್ನಿಸಿದರು.  ‘ನನಗೆ ಅದನ್ನು ವಿವರಿಸಿ. ನಮಗೆ ಏಕೆ ವಿಚಾರಣೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ?’ ಎಂದು ನವಾಜ್ ಶರೀಫ್ ಸಂದರ್ಶನದಲ್ಲಿ ಮುಂಬೈ ಮೇಲಿನ ಭಯೋತ್ಪಾದಕ ದಾಳಿಯನ್ನು ಉಲ್ಲೇಖಿಸಿ ಕೇಳಿದರು. ಪಾಕಿಸ್ತಾನವು ೨೬/೧೧ರ ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದ ವಿಚಾರಣೆಯನ್ನು ಈವರೆಗೂ ಪೂರ್ಣಗೊಳಿಸಿಲ್ಲ. ಜೊತೆಗೆ ದಾಳಿಯ ಸಂಚುಕೋರ ಹಫೀಜ್ ಸಯೀದನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕ ಎಂಬುದಾಗಿ ಘೋಷಿಸಲಾಗಿದ್ದರೂ, ರಾಷ್ಟ್ರದಲ್ಲಿ ಮುಕ್ತವಾಗಿ ಸಂಚರಿಸಲು ಬಿಟ್ಟಿತ್ತು.

2018: ಪಾಟ್ನಾ: ಕರ್ನಾಟಕದ ವಿಧಾನಸಭೆಗೆ ಚುನಾವಣೆ ನಡೆಯುತ್ತಿರುವ ಹೊತ್ತಿನಲ್ಲೇ ಬಿಜೆಪಿ ಅತೃಪ್ತಿ ಸಂಸದ ಶತ್ರುಘ್ನ ಸಿನ್ಹ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮತ್ತು ಗುಡುಗಿದ್ದಲ್ಲದೆ ’ಪ್ರಧಾನಿಯವರು ರಾಹುಲ್ ಗಾಂಧಿ ಅವರು  ಎತ್ತಿದ ಜ್ವಲಂತ ಪ್ರಶ್ನೆಗಳಿಗೆ ಉತ್ತರಿಸುವ ಬದಲು ಗಮನಪಲ್ಲಟ ರಾಜಕೀಯ ತಂತ್ರ ಅನುಸರಿಸುತ್ತಿದ್ದಾರೆ ಎಂದು ದೂರಿದರು. ರಾಹುಲ್ ಗಾಂಧಿ ಅವರು ಪ್ರಧಾನಿಯಾಗಲು ಸಿದ್ಧ ಎಂಬುದಾಗಿ ನೀಡಿದ ಹೇಳಿಕೆಯನ್ನು ಟೀಕಿಸಿದ್ದಕ್ಕಾಗಿ ಮೋದಿ ಅವರನ್ನು ಸರಣಿ ಟ್ವೀಟ್ ಗಳಲ್ಲಿ ತರಾಟೆಗೆ ತೆಗೆದುಕೊಂಡ  ಪಾಟ್ನಾ  ಸಾಹಿಬ್ ಬಿಜೆಪಿ ಸಂಸದ, ’ಕಳೆದ ಕೆಲವು ವರ್ಷಗಳಲ್ಲಿ ಪ್ರಬುದ್ಧರಾಗಿರುವ ಕಾಂಗ್ರೆಸ್ ಅಧ್ಯಕ್ಷರು ಜನಸಾಮಾನ್ಯರ ಮಧ್ಯೆ ಜನಪ್ರಿಯರಾಗಿದ್ದಾರೆ ಎಂದು ಹೇಳಿದರು. ಅತ್ಯಂತ ಹಳೆಯ ದೊಡ್ಡ ರಾಷ್ಟ್ರೀಯ ಪಕ್ಷದ ನಾಯಕ ಮುಂದಿನ ಪ್ರಧಾನಿಯಾಗುವ ಸಾಧ್ಯತೆಯನ್ನು ಕಂಡಿದ್ದರೆ ಅದರಲ್ಲಿ ತಪ್ಪೇನಿದೆ ಎಂದೂ ಅವರು ಪ್ರಶಿಸಿದರು.  ‘ನಮ್ಮ ರಾಷ್ಟ್ರದಲ್ಲಿ ಯಾರು ಬೇಕಿದ್ದರೂ ಪ್ರಧಾನಿಯಾಗಬಹುದು. ನಾಮ್ ದಾರ್, ಕಾಮ್ ದಾರ್, ದಾಮ್ ದಾರ್ ಅಥವಾ ಸಾಮಾನ್ಯ ಸಮಜ್‌ದಾರ್ ಕೂಡಾ ಸಂಖ್ಯೆ ಮತ್ತು ಬೆಂಬಲ ಹೊಂದಿದ್ದರೆ ಪ್ರಧಾನಿಯಾಗಬಹುದು ಎಂದು ಶತ್ರು ಚುಚ್ಚಿದರು. ‘ನಾವು ಏಕೆ ಅದರ ಬಗ್ಗೆ ಅಷ್ಟೊಂದು ಹುಯಿಲು ಎಬ್ಬಿಸುತ್ತಿದ್ದೇವೆ? ಅದು ಅವರ ಆಂತರಿಕ ವಿಚಾರವಲ್ಲವೇ? ಅಲ್ಲದೇ ಯಾವುದೇ ಪ್ರಧಾನಿ ಹುದ್ದೆಯು ಬಹುಮತೀಯ ತೀರ್ಪಿನ ಮೂಲಕ ಆಗುವಂತಹುದಲ್ಲವೇ?’ ಎಂದು ಮೋದಿ ಮತ್ತು ಬಿಜೆಪಿಯನ್ನು ಟ್ಯಾಗ್ ಮಾಡಿದ ಸರಣಿ ಟ್ವೀಟ್‌ಗಳಲ್ಲಿ ಸಿನ್ಹ ಪ್ರಶ್ನಿಸಿದ್ದಾರೆ. ಟ್ವೀಟ್‌ಗಳ ಕೊನೆಗೆ ’ಜೈ ಕರ್ನಾಟಕ, ಜೈ ಹಿಂದ್ ಘೋಷಣೆಗಳನ್ನೂ ಜೋಡಿಸಿದರು. ೨೦೧೯ರ ಮಹಾಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ದೊಡ್ಡ ಪಕ್ಷವಾಗಿ ಉದಯಿಸಿದರೆ ತಾವು ಪ್ರಧಾನಿಯಾಗಲು ಸಿದ್ಧ ಎಂಬುದಾಗಿ ರಾಹುಲ್ ಗಾಂಧಿ ಅವರು ಇತ್ತೀಚೆಗೆ ನೀಡಿದ ಹೇಳಿಕೆಯನ್ನು ಲೇವಡಿ ಮಾಡಿದ್ದ ಪ್ರಧಾನಿ ಮೋದಿಯವರು, ರಾಹುಲ್ ಗಾಂಧಿಯವರನ್ನು ಅಪಕ್ವ ಮತ್ತು ನಾಮದಾರ್ (ಕುಟುಂಬ ಖ್ಯಾತಿಯ ವ್ಯಕ್ತಿ) ಎಂದು ಟೀಕಿಸಿದ್ದರು. ’ನೀವು (ಗಾಂಧಿ) ನಾಮ್ ದಾರ್, ಆಗಿದ್ದರೆ ನಾನು ಕಾಮ್ ದಾರ್ (ಸಾಮಾನ್ಯ ಕಾರ್‍ಯಕರ್ತ)’ ಎಂದು ಅವರು ಹೇಳಿದ್ದರು.  ೨೦೧೫ರ ಬಿಹಾರ ಚುನಾವಣೆಯಲ್ಲಿ ತಮ್ಮನ್ನು ನಿರ್ಲಕ್ಷಿಸಿದಂದಿನಿಂದ ಪಕ್ಷ ನಾಯಕತ್ವದ ಜೊತೆ ಘರ್ಷಣೆಗೆ ಇಳಿದಿರುವ ಸಿನ್ಹ, ಹಲವಾರು ಬಾರಿ, ಮೋದಿ ಮತ್ತು ಅಮಿತ್ ಶಾ ಅವರನ್ನು ನಿರಂತರ ಟೀಕಿಸಿ ಇತ್ತೀಚೆಗೆ ಬಿಜೆಪಿ ತ್ಯಜಿಸಿದ ಮಾಜಿ ಕೇಂದ್ರ ಸಚಿವ ಯಶವಂತ ಸಿನ್ಹ ಅವರ ಜೊತೆಗೂ ಕಾಣಿಸಿಕೊಂಡಿದ್ದರು.  ಸೆರೆಮನೆ ಸೇರಿದ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರನ್ನೂ ಭೇಟಿ ಮಾಡಲು ತೆರಳಿದ್ದ ಶತ್ರುಘ್ನ ಸಿನ್ಹ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನೂ ಇತ್ತೀಚೆಗೆ ರಾಷ್ಟ್ರ ರಾಜಧಾನಿಯಲ್ಲಿ ಯಶವಂತ ಸಿನ್ಹ ಮತ್ತು ಅರುಣ್ ಶೌರಿ ಜೊತೆಗೆ ಭೇಟಿ ಮಾಡಿದ್ದರು. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ ಡಿಎ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ್ದ ಸಿನ್ಹ, ಕಾಂಗ್ರೆಸ್ ಅಧ್ಯಕ್ಷರು ಎತ್ತಿದ ಅಭಿವೃದ್ಧಿ ಮತ್ತಿತರ ಜ್ವಲಂತ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುವುದು ಬಿಟ್ಟು ತಾವು ಚಾಣಾಕ್ಷರಾಗಿರುವ ’ಗಮನ ಪಲ್ಲಟ ರಾಜಕೀಯ ನಡೆಸುತ್ತಿದ್ದಾರೆ ಎಂದು ಹೇಳಿದರು.  ‘ಸ್ವಾಮೀ, ನಿಮಗೆ ನಮ್ಮ ಮತ್ತು ಮಾಧ್ಯಮದ ಪೂರ್ಣ ಬೆಂಬಲ ಲಭಿಸಿತ್ತು. ಈಗ ಅತ್ಯಂತ ದೊಡ್ಡ, ಹಳೆಯ ರಾಷ್ಟ್ರೀಯ ಪಕ್ಷದ ಅಧ್ಯಕ್ಷ ಪ್ರಧಾನಿಯಾಗುವ ಸಾಧ್ಯತೆ ಕಂಡು ಮುಂದಿನ ಚುನಾವಣೆಯಲ್ಲಿ ಗೆದ್ದರೆ ಪ್ರಧಾನಿಯಾಗಬಯಸಿದರೆ ತಪ್ಪೇನಿದೆ?’ ಎಂದು ಸಿನ್ಹ, ಬಿಜೆಪಿಯನ್ನು ಟ್ಯಾಗ್ ಮಾಡಿದ ಟ್ವೀಟ್ ನಲ್ಲಿ ಪ್ರಶ್ನಿಸಿದರು.  ‘ಹಾಗೆ ನೋಡಿದರೆ, ಕಳೆದ ಕೆಲವು ವರ್ಷಗಳಲ್ಲಿ ಹಳೆಯ ಪಕ್ಷದ ಅಧ್ಯಕ್ಷರು ಪ್ರಬುದ್ಧರಾಗಿದ್ದು, ಕೆಲವು ಜ್ವಲಂತ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ನೀವು ಅವುಗಳಿಗೆ ಉತ್ತರಿಸಲು ನಿರಾಕರಿಸುತ್ತಿದ್ದೀರಿ. ನೀರವ್, ಲಲಿತ್, ಮಲ್ಯ, ಬ್ಯಾಂಕ್, ರಫೇಲ್ ವ್ಯವಹಾರ ಇತ್ಯಾದಿಗಳನ್ನು ಅವರು ಎತ್ತಿದ್ದಾರೆ ಎಂದು ಸಿನ್ಹ ಅವರು ಮೋದಿ ಮತ್ತು ಬಿಜೆಪಿಯನ್ನು ಟ್ಯಾಗ್ ಮಾಡಿದ ಇನ್ನೊಂದು ಟ್ವೀಟಿನಲ್ಲಿ ಬರೆದರು. ‘ಅಭಿವೃದ್ಧಿ ಮತ್ತಿತರ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುವುದನ್ನು ಬಿಟ್ಟು, ನಾವು ಕರಗತ ಮಾಡಿಕೊಂಡಿರುವ ಗಮನ ಪಲ್ಲಟ ರಾಜಕೀಯ ಮಾಡುತ್ತಿದ್ದೇವೆ ಎಂದು ಸಿನ್ಹ ಛೇಡಿಸಿದರು. ‘ಏನಿದ್ದರೂ ಸ್ವಾಮಿ, ಇದು ಜನರಿಗೆ, ನಮ್ಮ ರಾಜಕೀಯ, ನಮ್ಮ ನೀತಿಗಳಿಗೆ ಸಂಬಂಧಪಟ್ಟ ವಿಷಯ. ಆದ್ದರಿಂದ ಕಡಿಮೆ ಮಾತನಾಡಿದಷ್ಟೂ ಒಳ್ಳೆಯದು. ನಿಮ್ಮ ಬಗ್ಗೆ ಆದರಗಳೊಂದಿಗೆ, ಜೈ ಕರ್ನಾಟಕ, ಜೈ ಹಿಂದಿ ಎಂದು ಇನ್ನೊಂದು ಟ್ವೀಟಿನಲ್ಲಿ ಸಿನ್ಹ ಬರೆದರು.

2018: ಬೆಂಗಳೂರು: ಕರ್ನಾಟಕ ವಿಧಾನಸಭೆಯ ೨೨೪ ಕ್ಷೇತ್ರಗಳ ಪೈಕಿ ೨೨೨ ಕ್ಷೇತ್ರಗಳಲ್ಲಿ ಮತದಾನ ಮುಗಿದು ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಗಳಲ್ಲಿ ಭದ್ರವಾಗುತ್ತಿದ್ದಂತೆಯೇ ಮತಗಟ್ಟೆ ಸಮೀಕ್ಷೆಗಳ (ಮತದಾನೋತ್ತರ ಸಮೀಕ್ಷೆ) ಫಲಿತಾಂಶ ಹೊರಬಿದ್ದಿದ್ದು, ಅದರಲ್ಲೂ ಅತಂತ್ರ ವಿಧಾನಸಭೆಯ ಸೂಚನೆಯೇ ಕಂಡು ಬಂದಿತು. ೧೧ ಮತಗಟ್ಟೆ ಸಮೀಕ್ಷೆಗಳಲ್ಲಿ ೬ ಸಮೀಕ್ಷೆಗಳು ಬಿಜೆಪಿ ದೊಡ್ಡ ಪಕ್ಷವಾಗಿ ಉದಯಿಸಿ, ಕಾಂಗ್ರೆಸ್ ಎರಡನೇ ದೊಡ್ಡ ಪಕ್ಷವಾಗಿಯೂ, ಜನತಾದಳ (ಜಾತ್ಯತೀತ) ಮೂರನೇ ಸ್ಥಾನವನ್ನು ಗಳಿಸುವುದಾಗಿಯೂ ಭವಿಷ್ಯ ನುಡಿದರೆ, ೫ ಸಮೀಕ್ಷೆಗಳು ಕಾಂಗ್ರೆಸ್ ದೊಡ್ಡ ಪಕ್ಷವಾಗಿಯೂ, ಬಿಜೆಪಿ ೨ನೇ ಪಕ್ಷವಾಗಿಯೂ ಉದಯಿಸಲಿದ್ದು, ಜನತಾದಳ ಮೂರನೇ ಸ್ಥಾನ ಗಳಿಸುವುದು ಎಂದು ಹೇಳಿದವು.  ಇಂಡಿಯಾ ನ್ಯೂಸ್- ಟುಡೇಸ್ ಚಾಣಕ್ಯ ಸಮೀಕ್ಷೆಯು ಬಿಜೆಪಿಗೆ ಬಹುಮತ ಬರುವುದು ಎಂದು ಭವಿಷ್ಯ ನುಡಿದಿದ್ದರೆ,  ಎಬಿಪಿ, ನ್ಯೂಸ್ ಎಕ್ಸ್, ನ್ಯೂಸ್ ನೇಷನ್, ದಿಗ್ವಿಜಯ ನ್ಯೂಸ್ ಮತ್ತು ರಿಪಬ್ಲಿಕ್ ಟಿವಿ ಸೇರಿ ೫ ಮತಗಟ್ಟೆ ಸಮೀಕ್ಷೆಗಳು ಬಿಜೆಪಿ ದೊಡ್ಡ ಪಕ್ಷವಾಗಿ ಉದಯಿಸುವ ಭವಿಷ್ಯ ನುಡಿದವು. ಸುವರ್ಣ ಕನ್ನಡ ಚಾನೆಲ್, ಟೈಮ್ಸ್ ನೌ-ವಿಎಂಆರ್, ಆಜ್ ತಕ್ ಮತ್ತು ಇಂಡಿಯಾ ಟುಡೆ-ಆಕ್ಸಿಸ್, ಇಂಡಿಯಾ ಟಿವಿ-ವಿಎಂಆರ್ ಸೇರಿ ೫ ಮತಗಟ್ಟೆ ಸಮೀಕ್ಷೆಗಳು ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿ ಉದಯಿಸುವ ಸೂಚನೆ ನೀಡಿದವು.  ಬೆಳಗ್ಗೆ ೭ರಿಂದ ಸಂಜೆ ೬ರವರೆಗೆ ನಡೆದ ಚುನಾವಣೆಯಲ್ಲಿ ಶೇಕಡಾ ೭೦ರಷ್ಟು ಮತದಾನವಾಗಿದೆ ಎಂದು ಈ ಮಧ್ಯೆ ಚುನಾವಣಾ ಆಯೋಗ ತಿಳಿಸಿದೆ.
ವಿವಿಧ ಮತಗಟ್ಟೆ ಸಮೀಕ್ಷಾ ಫಲಿತಾಂಶಗಳು:  ಇಂಡಿಯಾ ನ್ಯೂಸ್ - ಟುಡೇಸ್ ಚಾಣಕ್ಯ: ಬಿಜೆಪಿ: ೧೨೦ (ಬಹುಮತ),  ಕಾಂಗ್ರೆಸ್: ೭೩, ಜೆಡಿಎಸ್: ೨೬, ಇತರರು: ೦೩.  ಎಬಿಪಿ: ಬಿಜೆಪಿ: ೯೭- ೧೦೯ ಸ್ಥಾನ (ಏಕೈಕ ದೊಡ್ಡ ಪಕ್ಷ), ಕಾಂಗ್ರೆಸ್ ೮೭-೯೯ ಸ್ಥಾನ, ಜೆಡಿಎಸ್- ೨೧-೩೦ ಸ್ಥಾನ, ಇತರರು- ೧-೮ ಸ್ಥಾನ.  ನ್ಯೂಸ್ ಎಕ್ಸ್- ಸಿಎನ್ ಎಕ್ಸ್: ಬಿಜೆಪಿ ೧೦೨-೧೦೬ ಸ್ಥಾನ (ಏಕೈಕ ದೊಡ್ಡ ಪಕ್ಷ), ಕಾಂಗ್ರೆಸ್ ೭೨-೭೫, ಜೆಡಿಎಸ್: ೩೫-೩೮, ಇತರರು: ೩ರಿಂದ ೬.  ನ್ಯೂಸ್ ನೇಷನ್: ಬಿಜೆಪಿ ೧೦೫-೧೦೯ ಸ್ಥಾನ (ಏಕೈಕ ದೊಡ್ಡ ಪಕ್ಷ), ಕಾಂಗ್ರೆಸ್ ೭೧-೭೫ ಸ್ಥಾನ, ಜೆಡಿಎಸ್: ೩೬ರಿಂದ ೪೦ ಸ್ಥಾನ, ಇತರರು: ೩-೫ ಸ್ಥಾನ.  ದಿಗ್ವಿಜಯ ನ್ಯೂಸ್: ಬಿಜೆಪಿ: ೧೦೩-೧೦೭ ಸ್ಥಾನ (ಏಕೈಕ ದೊಡ್ಡ ಪಕ್ಷ), ಕಾಂಗ್ರೆಸ್: ೭೬ರಿಂದ ೮೦ ಸ್ಥಾನ, ಜೆಡಿಎಸ್: ೩೧ರಿಂದ ೩೫ ಸ್ಥಾನ, ಇತರರು: ೦೪ರಿಂದ ೦೮ ಸ್ಥಾನ.  ರಿಪಬ್ಲಿಕ್ ಟಿವಿ-ಜನ್ ಕಿ ಬಾತ್: ಬಿಜೆಪಿ: ೯೫-೧೧೪ ಸ್ಥಾನ (ಏಕೈಕ ದೊಡ್ಡ ಪಕ್ಷ), ಕಾಂಗ್ರೆಸ್: ೭೩-೮೨ ಸ್ಥಾನ, ಜೆಡಿಎಸ್: ೩೨ರಿಂದ -೪೩ ಸ್ಥಾನ. ಸುವರ್ಣ ಕನ್ನಡ ಚಾನೆಲ್:  ಕಾಂಗ್ರೆಸ್: ೧೦೬- ೧೧೮ ಸ್ಥಾನ (ಏಕೈಕ ದೊಡ್ಡ ಪಕ್ಷ), ಬಿಜೆಪಿ: ೭೯- ೯೨ ಸ್ಥಾನ,  ಜೆಡಿ (ಎಸ್) ೨೨-೩೦ ಸ್ಥಾ. ಇತರರು: ೧-ದ ೪ ಸ್ಥಾನ.  ಟೈಮ್ಸ್ ನೌ- ವಿಎಂಆರ್: ಕಾಂಗ್ರೆಸ್: ೯೦-೧೦೩ ಸ್ಥಾನ (ಏಕೈಕ ದೊಡ್ಡ ಪಕ್ಷ), ಬಿಜೆಪಿ: ೮೦-೯೩ ಸ್ಥಾನ, ಜೆಡಿ(ಎಸ್): ೩೧-೩೯ ಸ್ಥಾನ. ಬಿಜೆಪಿ ಸ್ಥಾನ ಹೆಚ್ಚಿನ ಗಳಿಕೆ: ೪೮, ಕಾಂಗ್ರೆಸ್ ನಷ್ಟ (-) ೨೪, ಜೆಡಿ(ಎಸ್) ನಷ್ಟ (-)೫, ಇತರರು ನಷ್ಟ (-) ೫. ಬಿಜೆಪಿಯತ್ತ ಮತಗಳ ಪಾಲು ಶೇಕಡಾ ೩೪.೬, ಕಾಂಗ್ರೆಸ್ ಶೇಕಡಾ ೩೮.೪, ಜೆಡಿ(ಎಸ್) ಶೇಕಡಾ ೧೯.೮, ಇತರರು: ಶೇಕಡಾ ೭.೨.  ಆಜ್ ತಕ್: ಬಿಜೆಪಿ ೭೨-೭೬ ಸ್ಥಾನ, ಕಾಂಗ್ರೆಸ್: ೧೦೬-೧೧೮ (ಏಕೈಕ ದೊಡ್ಡ ಪಕ್ಷ), ಜೆಡಿಎಸ್: ೨೫-೩೦ ಸ್ಥಾನ, ಇತರರು: ೪-೮ ಸ್ಥಾನ.  ಇಂಡಿಯಾ ಟುಡೆ- ಆಕ್ಸಿಸ್: ಕಾಂಗ್ರೆಸ್: ೧೦೬-೧೧೮ ಸ್ಥಾನ (ಏಕೈಕ ದೊಡ್ಡ ಪಕ್ಷ), ಬಿಜೆಪಿ: ೭೯-೯೨ ಸ್ಥಾನ, ಜೆಡಿ(ಎಸ್): ೨೨-೩೦ ಸ್ಥಾನ.  ಇಂಡಿಯಾ ಟಿವಿ-ವಿಎಂಆರ್: ಕಾಂಗ್ರೆಸ್: ೯೦-೧೦೩ (ಏಕೈಕ ದೊಡ್ಡ ಪಕ್ಷ), ಬಿಜೆಪಿ: ೮೦-೯೩, ಜೆಡಿಎಸ್: ೩೧-೩೯.
2018: ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಮತದಾನ ಪ್ರಕ್ರಿಯೆ ಸಂಜೆ 6ಗಂಟೆಗೆ ಮುಕ್ತಾಯವಾಗಿದ್ದು,  ರಾಜ್ಯಾದ್ಯಂತ ಒಟ್ಟು ಶೇ.70ರಷ್ಟು ಮತದಾನವಾಯಿತು. ಬೆಳಗ್ಗೆ 7ಗಂಟೆಯಿಂದ ಸಂಜೆ 6ಗಂಟೆವರೆಗೆ ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ನೀಡಿತ್ತು. 2013ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು ಶೇ.71ರಷ್ಟು ಮತದಾನವಾಗಿತ್ತು. ರಾಜ್ಯದ 222 ವಿಧಾನಸಭಾ ಕ್ಷೇತ್ರಗಳಿಗೆ ಸಣ್ಣ, ಪುಟ್ಟ ಅಹಿತಕರ ಘಟನೆ ಹೊರತುಪಡಿಸಿ ಶಾಂತಿಯುತ ಮತದಾನ ನಡೆಯಿತು. ಎಲ್ಲಾ ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದ್ದು, ಮೇ 15ರಂದು ಫಲಿತಾಂಶ ಹೊರಬೀಳಲಿದೆ.


2017: ನವದೆಹಲಿ: ನವದೆಹಲಿಯಲ್ಲಿ ನಡೆದ ಏಷ್ಯನ್ ಕುಸ್ತಿ ಚಾಂಪಿಯನ್​ಷಿಪ್​ನ ಮಹಿಳೆಯರ ವಿಭಾಗದಲ್ಲಿ ಭಾರತದ ಸಾಕ್ಷಿ ಮಲಿಕ್, ವಿನೇಶ್ ಪೋಗತ್ ಮತ್ತು ದಿವ್ಯಾ ಕಕ್ರನ್ ಬೆಳ್ಳಿ ಪದಕ ಜಯಿಸಿದರೆ, ರೀತು ಪೋಗತ್ ಕಂಚಿನ ಪದಕ ಜಯಿಸಿದರು.  ರಿಯೋ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ಅವರು 60 ಕೆ.ಜಿ. ವಿಭಾಗದ ಫೈನಲ್​ನಲ್ಲಿ ಜಪಾನ್​ನ ರಿಸಾಕೋ ಕವಾಯಿ ಅವರ ವಿರುದ್ಧ 0-10 ಅಂಕಗಳ ಅಂತರದಿಂದ ಸೋಲನುಭವಿಸುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟುಕೊಂಡರು. ರಿಯೋ ಒಲಿಂಪಿಕ್ಸ್​ನಲ್ಲಿ ಕಾಲಿಗಾಗಿದ್ದ ಗಾಯದಿಂದ ಚೇತರಿಸಿಕೊಂಡು ಮತ್ತೆ ಕುಸ್ತಿ ಅಖಾಡಕ್ಕಿಳಿದಿರುವ ವಿನೇಶ್ ಪೋಗತ್ ಅವರು 55 ಕೆ.ಜಿ. ವಿಭಾಗದ ಫೈನಲ್​ನಲ್ಲಿ ಜಪಾನ್​ನ ಸೇ ನಂಜೋ ಅವರ ವಿರುದ್ಧ 4-8 ಅಂಕಗಳ ಅಂತರದಿಂದ ಸೋಲನುಭವಿಸಿ ಬೆಳ್ಳಿ ಪದಕ ಜಯಿಸಿದರು.  69 ಕೆ.ಜಿ. ವಿಭಾಗದಲ್ಲಿ ಭಾರತದ ದಿವ್ಯ ಕಕ್ರನ್ ಅವರು ಜಪಾನ್​ನ ಸಾರಾ ದೋಶೋ ಅವರ ವಿರುದ್ಧ 0-8 ಅಂಕಗಳ ಅಂತರದಿಂದ ಸೋಲನುಭವಿಸುವ ಮೂಲಕ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. ರೀತು ಪೋಗತ್ 48 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಯಾವುದೇ ಸ್ಪರ್ಧೆಯಲ್ಲಿದೆ ಕಂಚಿನ ಪದಕ ಜಯಿಸಿದರು. ರೀತು ಪೋಗತ್ ಎದುರಾಳಿ ಚೀನಾ ಸುನ್ ಯನಾನ್ ಅವರು ಗಾಯಗೊಂಡು ನಿವೃತ್ತಿ ಘೋಷಿಸಿದ್ದರಿಂದ ರೀತುಗೆ ಕಂಚಿನ ಪದಕ ಒಲಿಯಿತು.
2017: ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದ ಸಂಬಂಧ ಆದಾಯ ತೆರಿಗೆ ಅಧಿಕಾರಿಗಳ
ವಿಚಾರಣೆಗೆ ತಡೆ ನೀಡಬೇಕು ಎಂದು ಯಂಗ್ ಇಂಡಿಯಾ ಕಂಪನಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿತು. ದೆಹಲಿ ಹೈಕೋರ್ಟ್​ನ ಆದೇಶದಿಂದಾಗಿ ಈ ಪ್ರಕರಣದಲ್ಲಿ ಆರೋಪಿಗಳಾಗಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿಯವರಿಗೆ ಮತ್ತೆ ಸಂಕಷ್ಟ ಎದುರಾಯಿತು. ಯಂಗ್ ಇಂಡಿಯಾ ಲಿ. ಕಂಪನಿ ಪಟಿಯಾಲ ಕೋರ್ಟ್​ನ ಆದೇಶಕ್ಕೆ ತಡೆ ನೀಡುವಂತೆ ಕೋರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು. ಕಂಪನಿ ಈದಿನ ತಾನು ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದುಕೊಂಡಿತು. ಈ ಹಿನ್ನೆಲೆಯಲ್ಲಿ ಹೈಕೋರ್ಟ್​ನ ಜಸ್ಟೀಸ್ ಎಸ್. ಮುರಳೀಧರ್ ಮತ್ತು ಜ. ಚಂದರ್ ಶೇಖರ್ ಅವರ ಪೀಠ ಆದಾಯ ತೆರಿಗೆ ಅಧಿಕಾರಿಗಳಿಗೆ ಅಗತ್ಯ ದಾಖಲೆ ಒದಗಿಸಬೇಕು ಮತ್ತು ತನಿಖೆಗೆ ಸಹಕರಿಸಬೇಕು ಎಂದು ಯಂಗ್ ಇಂಡಿಯಾ ಕಂಪನಿಗೆ ಸೂಚಿಸಿತು.  ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಹಣವನ್ನು ಕಾಂಗ್ರೆಸ್ ಪಕ್ಷ ದುರ್ಬಳಕೆ ಮಾಡಿಕೊಂಡಿದೆ ಎಂಬ ಆರೋಪದ ಮೇಲೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಾಗಿತ್ತು. 2011-12ರಲ್ಲಿ ಯಂಗ್ ಇಂಡಿಯಾ ಕಂಪನಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿ, ಹಣಕಾಸಿನ ವ್ಯವಹಾರದ ಮಾಹಿತಿ ನೀಡುವಂತೆ ಕೋರಿತ್ತು. ಬಿಜೆಪಿ ಧುರೀಣ ಸುಬ್ರಮಣಿಯನ್ ಸ್ವಾಮಿ ಅವರು ಸೋನಿಯಾ, ರಾಹುಲ್ ಮತ್ತು ಇತರ ಕಾಂಗ್ರೆಸ್ ಪ್ರಮುಖರ ವಿರುದ್ಧ ಈ ಪ್ರಕರಣ ದಾಖಲಿಸಿದ್ದರು.
2017: ನವದೆಹಲಿ: ವಿದ್ಯುನ್ಮಾನ ಮತಯಂತ್ರಗಳ ದುರುಪಯೋಗ ಆಗುತ್ತಿದೆ ಎಂಬ ಆಮ್ ಆದ್ಮಿ
ಪಾರ್ಟಿ(ಎಎಪಿ)ಯ ಆರೋಪವನ್ನು ಚುನಾವಣಾ ಆಯೋಗ ತಳ್ಳಿಹಾಕಿತು. ಇವಿಎಂಗಳ ಬಗ್ಗೆ ಚರ್ಚಿಸಲು ಚುನಾವಣಾ ಆಯೋಗ ಕರೆದಿದ್ದ ರಾಜಕೀಯ ಪಕ್ಷಗಳ ಸಭೆಯಲ್ಲಿ, ಎಎಪಿಯ ಆರೋಪವನ್ನು ಸರಾಸಗಟಾಗಿ ತಳ್ಳಿಹಾಕಲಾಯಿತು. ಮತಯಂತ್ರಗಳ ವಿಶ್ವಾಸಾರ್ಹತೆ ಬಗ್ಗೆ ಕೇಳಿ ಬರುತ್ತಿರುವ ಆರೋಪಗಳ ಪರಿಶೀಲನೆಗಾಗಿ ಸರ್ವಪಕ್ಷಗಳ ಸಮಿತಿ ರಚಿಸಬೇಕು ಎಂದು ಎಎಪಿಯು ಚುನಾವಣಾ ಆಯೋಗವನ್ನು ಒತ್ತಾಯಿಸಿತ್ತು. ಇತ್ತೀಚಿನ ವಿಧಾನಸಭಾ ಚುನಾವಣೆಗಳಲ್ಲಿ ಬಳಸಿದ ಇವಿಎಂಗಳನ್ನು ಪರಿಶೀಲಿಸಲು ತನಗೆ ಅವಕಾಶ ನೀಡಬೇಕು ಎಂದು ಕೋರಿತ್ತು. ಚುನಾವಣೆಗೆ ಬಳಸಲಾಗಿದ್ದ ಮತಯಂತ್ರಗಳನ್ನೇ ಬಳಸಿಕೊಂಡು ಮತಯಂತ್ರ ದುರ್ಬಳಕೆ ಮಾಡಿರುವ ಆರೋಪವನ್ನು ಸಾಬೀತುಪಡಿಸುವಂತೆ ಚುನಾವಣಾ ಆಯೋಗ ರಾಜಕೀಯ ಪಕ್ಷಗಳಿಗೆ ಸವಾಲು ಹಾಕಿತು. ಸಭೆಯಲ್ಲಿ ಮಾತನಾಡಿರುವ ಮುಖ್ಯ ಚುನಾವಣಾ ಆಯುಕ್ತ ನಸೀಮ್ ಜೈದಿ ಅವರು, ನಮಗೆ ಯಾರೂ ಆಪ್ತರಲ್ಲ. ಎಲ್ಲಾ ಪಕ್ಷಗಳಿಂದಲೂ ಸಮಾನ ಅಂತರ ಕಾಯ್ದುಕೊಂಡಿದ್ದೇವೆ. ಆದರೆ, ಇವಿಎಂಗಳ ದುರ್ಬಳಕೆ ಆರೋಪ ಕೇಳಿಬಂದಿದೆ. ಆದ್ದರಿಂದ, ಚುನಾವಣೆಗೆ ಬಳಕೆ ಮಾಡಿರುವ ಮತಯಂತ್ರಗಳನ್ನೇ ಬಳಸಿ ರಾಜಕೀಯ ಪಕ್ಷಗಳು ಆರೋಪ ಸಾಬೀತುಪಡಿಸಲು ಅವಕಾಶ ನೀಡುತ್ತೇವೆ ಎಂದು ಸವಾಲು ಹಾಕಿದರು.
2017: ನವದೆಹಲಿ: ಮುಸ್ಲಿಮ್ ಸಮುದಾಯದಲ್ಲಿರುವ ಮೂರು ಬಾರಿ ‘ತಲಾಖ್‌’ ಹೇಳಿ ವಿಚ್ಛೇದನ
ಪಡೆಯುವುದು ಅತ್ಯಂತ ಕೆಟ್ಟ ಪದ್ಧತಿ ಎಂದು ಸುಪ್ರೀಮ್ ಕೋರ್ಟ್‌ ಅಭಿಪ್ರಾಯಪಟ್ಟಿತು. ಎರಡನೇದಿನವಾದ ಈದಿನವೂ ತ್ರಿವಳಿ ತಲಾಖ್‌ನ ಸಾಂವಿಧಾನಿಕ ಸಿಂಧುತ್ವದ ಬಗೆಗಿನ ಚಾರಿತ್ರಿಕ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಡೆಸಿತು. ಹಿಂದಿನ ದಿನ ಬಹುಪತ್ನಿತ್ವದ ವಿಷಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ನ್ಯಾಯಾಲಯ ತಿಳಿಸಿತ್ತು. ಇಂದಿನ ವಿಚಾರಣೆಯಲ್ಲಿ ಇದೊಂದು ಕೆಟ್ಟ ಪದ್ಧತಿ ಎಂದು  ಸುಪ್ರೀಂಕೋರ್ಟ್‌ನ ಸಂವಿಧಾನ ಪೀಠ ಅಭಿಪ್ರಾಯಪಟ್ಟಿತು. ಕೆಲವು ಇಸ್ಲಾಮಿಕ್‌ ದೇಶಗಳಲ್ಲಿ ತ್ರಿವಳಿ ತಲಾಖ್‌ ನಿಷೇಧಿಸಲಾಗಿದ್ದು ಆ ದೇಶಗಳ ಮಾಹಿತಿ ನೀಡುವಂತೆ ಸುಪ್ರೀಂ ಕೋರ್ಟ್‌ ಸೂಚಿಸಿತು.

2017: ಲಖನೌ: ವ್ಯಕ್ತಿಯೊಬ್ಬ ತನ್ನ ಆಯ್ಕೆಯ ಆಹಾರ ತಿನ್ನುವುದನ್ನು ತಡೆಯುವುದಕ್ಕೆ ಸರ್ಕಾರಕ್ಕೆ
ಯಾವ ಅಧಿಕಾರವೂಇಲ್ಲ ಎಂದು ಅಲಹಾಬಾದ್‌ ಹೈಕೋರ್ಟ್‌ ಹೇಳಿತು. ಉತ್ತರ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾನೂನುಬದ್ಧ ಕಸಾಯಿಖಾನೆಗಳ ಪರವಾನಗಿಯನ್ನು ನವೀಕರಿಸುವಂತೆ ಅಲ್ಲಿನ ಸರ್ಕಾರಕ್ಕೆ ಅಲಹಾಬಾದ್‌ ಹೈಕೋರ್ಟ್‌ನ ಲಖನೌ ಪೀಠ ಸೂಚಿಸಿತು. ನಿಯಮ, ನಿಬಂಧನೆಗಳಿಗೆ ಅನುಗುಣವಾಗಿದ್ದರೆ ಹೊಸ ಕಸಾಯಿಖಾನೆಗಳಿಗೆ ಪರವಾನಗಿನೀಡಬೇಕು ಎಂದೂ ಪೀಠ ನಿರ್ದೇಶಿಸಿತು. ಜನರ ಆಹಾರದ ಅಭ್ಯಾಸ ಜಾತ್ಯತೀತ ಸಂಸ್ಕೃತಿಯ ಭಾಗವಾಗಿದೆ. ಜತೆಗೆ, ಅದು ‘ಜೀವಿಸುವ ಹಕ್ಕಿನ’ ಭಾಗವೂಹೌದು ಎಂದು ಹಿಂದಿನ ವಿಚಾರಣೆ ಸಂದರ್ಭದಲ್ಲಿ ಪೀಠ ಹೇಳಿತ್ತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನೂರಾರು ‘ಅಕ್ರಮ’ ಕಸಾಯಿಖಾನೆಗಳನ್ನು ಮುಚ್ಚಿಸಲಾಗಿತ್ತು. ಅಕ್ರಮ ಕಸಾಯಿಖಾನೆಗಳನ್ನು ಮುಚ್ಚಿಸುವ ಭರವಸೆ ಚುನಾವಣಾ ಪ್ರಣಾಳಿಕೆಯಲ್ಲಿ ಇತ್ತು.
2016: ದುಬೈ: ಭಾರತದ ಮಾಜಿ ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ 
ಅವಿರೋಧವಾಗಿ ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುವುದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯ ಮೊದಲನೇ ಸ್ವತಂತ್ರ ಅಧ್ಯಕ್ಷ ಎಂಬ ಗೌರವಕ್ಕೆ ಪಾತ್ರರಾದರು. ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐಗೆ ಮೇ 11ರಂದು ಗುಡ್ ಬೈ ಹೇಳುವ ಮೂಲಕ ಅಚ್ಚರಿಯ ನಿರ್ಧಾರ ಕೈಗೊಂಡಿದ್ದರು. ಆದರೆ ಇದೀಗ ಐಸಿಸಿ ಅಧ್ಯಕ್ಷಗಾದಿ ಏರುವ ಮೂಲಕ ತಮ್ಮ ನಿರ್ಣಯದ ಹಿಂದಿನ ಉದೇಶವನ್ನು ಬಹಿರಂಗಗೊಳಿಸಿದರು.. ಐಸಿಸಿಯ ಇಬ್ಬರು ನಿರ್ದೇಶಕರು ಶಶಾಂಕ ಪರ ಬ್ಯಾಟ್ ಬೀಸಿದ ಪರಿಣಾಮ ಅವಿರೋಧವಾಗಿ ಆಯ್ಕೆಯಾದರು. ಕುರಿತು ಪ್ರತಿಕ್ರಿಯಿಸಿರುವ ಶಶಾಂಕ್ ಮನೋಹರ್, ಕ್ರಿಕೆಟ್ ಭವಿಷ್ಯದ ದೃಷ್ಟಿಯಿಂದ ಕಾರ್ಯ ಕೈಗೊಳ್ಳಲಿದ್ದು, 2014 ಸಾಂವಿಧಾನಿಕ ತಿದ್ದುಪಡಿಗಳನ್ನು ಯಾವರೀತಿ ಜಾರಿಗೆ ತರಲು ಸಾಧ್ಯ ಎಂದು ಚಿಂತಿಸಲಾಗುವುದು. ಕ್ರಿಕೆಟ್ ಎಲ್ಲಾ ಘಟಕಗಳಲ್ಲಿ ಅಭಿವೃದ್ಧಿಗೆ ಹೆಚ್ಚು ಗಮನ ನೀಡುವೆ ಎಂದು ಹೇಳಿ, ಐಸಿಸಿ ಹಾಗೂ ಬಿಸಿಸಿಐ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದರು. 2015ರ ಸೆಪ್ಟೆಂಬರ್ ನಲ್ಲಿ ಜಗಮೊಹನ್ ದಾಲ್ಮಿಯಾ ನಿಧನದ ನಂತರ ಬಿಸಿಸಿಐ ಹುದ್ದೆಗೇರಿದ್ದ ಶಶಾಂಕ್, 7 ತಿಂಗಳು ಸೇವೆ ಸಲ್ಲಿಸಿದ್ದರು.

2016: ನವದೆಹಲಿ: ಜನಪ್ರಿಯ ವೀಕ್ಷಕ ವಿವರಣೆಗಾರ ಹಾಗೂ ಕ್ರೀಡಾ ಬರಹಗಾರ ಟೋನಿ ಕೋಝೀರ್ ಹಿಂದಿನ ದಿನ ತಡರಾತ್ರಿ ಬಾರ್ಬಡೋಸ್ ನಗರದಲ್ಲಿ ನಿಧನರಾದರು.ವೆಸ್ಟ್ ಇಂಡೀಸ್ 75 ಹರೆಯದ ಟೋನಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಮೇ 3ರಂದು ಬೇವ್ಯೂ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದರು. ಕ್ರಿಕೆಟ್ ಲೋಕಕ್ಕೆ ಅಮೋಘ ಕೊಡುಗೆ ನೀಡಿರುವ ಟೋನಿ, 1960ರಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಗೆ ವೀಕ್ಷಕ ವಿವರಣೆ ನೀಡಿದ್ದರು.. 1962 ನಂತರ ವಿಂಡೀಸ್ ಪ್ರಮುಖ ಸರಣಿಗಳಲ್ಲಿ ವೀಕ್ಷಕ ವಿವರಣೆ (ಕಾಮೆಂಟರಿ) ನೀಡುವ ಮೂಲಕ ಮನೆ ಮಾತಾಗಿದ್ದರು. 1970ರಲ್ಲಿ ವೆಸ್ಟ್ ಇಂಡೀಸ್ ಆಡಿದ ಎಲ್ಲಾ ಸರಣಿಗಳಲ್ಲಿ ಧ್ವನಿ ನೀಡಿದ ಕೀರ್ತಿಗೆ ಭಾಜನರಾಗಿದ್ದರು. 1958ರಿಂದ ಕ್ರಿಕೆಟ್ ಕುರಿತು ಅಂಕಣ ಬರೆಯಲು ಆರಂಭಿಸಿದ ಟೋನಿ, ತಮ್ಮದೇ ಓದುಗ ಬಳಗವನ್ನು ನಿರ್ಮಿಸಿಕೊಂಡಿದ್ದರು. 2016 ಮೇ 1ರಂದು ಇವರ ಕೊನೆಯ ಅಂಕಣ ಪ್ರಕಟವಾಗಿತ್ತು..

2016: ಕೊಚ್ಚಿ: ಲಿಬಿಯಾದಿಂದ 29 ಭಾರತೀಯರನ್ನು ಸುರಕ್ಷಿತರಾಗಿ ಕೇರಳಕ್ಕೆ ಕರೆತರಲಾಯಿತು. ಈದಿನ ಬೆಳಗ್ಗೆ ಇವರು ಕೊಚ್ಚಿ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಎಳೆಯ ಮಕ್ಕಳು ಸೇರಿದಂತೆ ಸುರಕ್ಷಿತರಾಗಿ ಬಂದಿಳಿದ 29 ಜನರ ಪೈಕಿ 6 ಕುಟುಂಬದವರು ಕೇರಳ ಮತ್ತು 3 ಕುಟುಂಬದವರು ತಮಿಳುನಾಡಿಗೆ ಸೇರಿದವರು.. ಇವರು ಟ್ರಿಪೊಲಿಯಿಂದ ಇಸ್ತಾಂಬುಲ್ ಮೂಲಕ ಕೊಚ್ಚಿಗೆ ಬಂದಿಳಿದರು. ಲಿಬಿಯಾದ ಸಬ್ರತಾ ಪ್ರದೇಶದ ಜಾವಿಯಾ ಆಸ್ಪತ್ರೆಯಲ್ಲಿ ಇವರಲ್ಲಿ ಹೆಚ್ಚಿನ ಮಂದಿ ಕೆಲಸ ಮಾಡುತ್ತಿದ್ದರು. ಕಳೆದ ಮಾರ್ಚ್ನಲ್ಲಿ ಲಿಬಿಯಾದ ಸಬ್ರತಾ ಪ್ರದೇಶದಲ್ಲಿ ಭಾರತೀಯ ನರ್ಸ್ ನಿವಾಸದ ಮೇಲೆ ಷೆಲ್ ದಾಳಿ ನಡೆದಿತ್ತು. ಘಟನೆಯಲ್ಲಿ ನರ್ಸ್ ಮತ್ತು ಅವರ ಮಗ ಸಾವನ್ನಪ್ಪಿದ್ದರು. ಹಿನ್ನೆಲೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ಲಿಬಿಯಾದಲ್ಲಿ ಕೆಲಸ ಮಾಡುತ್ತಿರುವ ಭಾರತೀಯರನ್ನು ವಾಪಾಸು ಭಾರತಕ್ಕೆ ಕರೆಸಿಕೊಳ್ಳಬೇಕು ಎಂದು ಕುಟುಂಬಸ್ಥರು ಕೇರಳ ಸರ್ಕಾರಕ್ಕೆ ಮನವಿ ಮಾಡಿದ್ದರು. ಲಿಬಿಯಾದಿಂದ 29 ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ಮರಳಲು ಸಹಕರಿಸಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಕೇರಳ ಸರ್ಕಾರ ಅಭಿನಂದನೆ ಸಲ್ಲಿಸಿತು.

2016: ಮುಂಬೈ: ದೇವಾಲಯಗಳಿಗೆ ಮಹಿಳಾ ಪ್ರವೇಶಾತಿ ವಿರೋಧಿಸಿ ಹೋರಾಟ ನಡೆಸಿ ಯಶಸ್ವಿಯಾಗಿದ್ದ ತೃಪ್ತಿ ದೇಸಾಯಿ ಇದೀಗ ಜೀವ ಬೆದರಿಕೆಯನ್ನು ಲೆಕ್ಕಿಸದೆ ದರ್ಗಾ ಪ್ರವೇಶಿಸಿದರು.
ಈದಿನ ಮುಂಜಾನೆ ಭೂಮಾತಾ ಬ್ರಿಗೇಡ್ ಸಂಘಟನೆ ಮುಖ್ಯಸ್ಥೆ ತೃಪ್ತಿ ದೇಸಾಯಿ ಮುಂಬೈನಲ್ಲಿರುವ ಹಜ್ ಅಲಿ ದರ್ಗಾ ಪ್ರವೇಶಿಸಿ ಪಾರ್ಥನೆ ಸಲ್ಲಿಸಿದರು. ಸಂದರ್ಭದಲ್ಲಿ ಮಹಿಳೆಯರಿಗೆ ಪೊಲೀಸರು ಭದ್ರತೆ ನೀಡಿದ್ದರು. ಆದರೆ ಮಹಿಳೆಯರಿಗೆ ದರ್ಗಾದಲ್ಲಿನ ಮಝುರ್ ( ಗರ್ಭಗುಡಿ) ಪ್ರವೇಶವನ್ನು ನಿರಾಕರಿಸಲಾಯಿತು. ಬಳಿಕ ಮಾತನಾಡಿದ ತೃಪ್ತಿ ದೇಸಾಯಿ, ಪ್ರವೇಶಾತಿಯಿಂದ ನಮಗೆ ಜಯ ದೊರಕಿದೆ. ಇನ್ನು ಹದಿನೈದು ದಿನಗಳೊಳಗೆ ಮಝುರ್ ಪ್ರವೇಶ ಕಾರ್ಯ ಕೈಗೊಳ್ಳಲಿದ್ದು, ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಬಹಿರಂಗವಾಗಿ ಸವಾಲು ಹಾಕಿದರು. ಕಳೆದ ಏಪ್ರಿಲ್ನಲ್ಲಿ ಭೂಮಾತಾ ಬ್ರಿಗೇಡ್ ಸಂಘಟನೆ ಮಹಿಳೆಯರು ದರ್ಗಾ ಪ್ರವೇಶಕ್ಕೆ ಮುಂದಾದಾಗ ಸ್ಥಳೀಯ ಮುಖಂಡರು ಇದನ್ನು ವಿರೋಧಿಸಿ, ಜೀವ ಬೆದರಿಕೆ ಹಾಕಿದ್ದರು. ಆದರೆ ಇದನ್ನು ಲೆಕ್ಕಿಸದೆ ಹಜ್ ಎಲ್ಲರ ಆಸ್ತಿ ಎಂಬ ಘೊಷಣೆಯೊಂದಿಗೆ ತೃಪ್ತಿ ಅವರು ಹೋರಾಟ ನಡೆಸಿದರು. ಕಾರ್ಯಕ್ಕೆ ಮುಸ್ಲಿಂ ಮಹಿಳೆಯರೂ ಕೂಡ ಕೈ ಜೋಡಿಸಿದರು.
2016: ದುಬೈ: 2008ರಲ್ಲಿ ಬರೆದ ಪತ್ರವೊಂದರಲ್ಲಿ ತಾನು ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರನ್ನು ಉನ್ನತ ರಾಜಕಾರಣಿಗಳಿಗೆ ಬಳಸಲು ಅನುಕೂಲವಾಗುವಂತಹ ಹೊಸ ಅಗಸ್ತಾ ಹೆಲಿಕಾಪ್ಟರ್ಗಳನ್ನು ಖರೀದಿಸುವ ಬಗ್ಗೆ ನಿರ್ಣಯ ಕೈಗೊಳ್ಳುವಲ್ಲಿಪ್ರಮುಖ ಪ್ರೇರಕ ಶಕ್ತಿಯಾಗಿದ್ದರುಎಂದು ಬಣ್ಣಿಸಿರುವುದು ಹೌದು ಎಂದು ಅಗಸ್ತಾ ವೆಸ್ಟ್ಲ್ಯಾಂಡ್ ಹೆಲಿಕಾಪ್ಟರ್ ಪ್ರಕರಣದ ಮಧ್ಯವರ್ತಿಗಳಲ್ಲಿ ಒಬ್ಬರಾದ ಕ್ರಿಶ್ಚಿಯನ್ ಮೈಕೆಲ್ ದೃಢಪಡಿಸಿದರು. ಪ್ರಸ್ತುತ ದುಬೈಯಲ್ಲಿ ಇರುವ ಮೈಕೆಲ್ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ವಿಚಾರವನ್ನು ದೃಢಪಡಿಸಿ, ಸೋನಿಯಾ ಗಾಂಧಿ ಅವರ ಪಕ್ಷ ಅಧಿಕಾರದಲ್ಲಿ ಇದ್ದಾಗ ವ್ಯವಹಾರ ನಡೆದಿದೆ ಎಂದು ಹೇಳಿದರು. ತಮಗೆ ವೈಯಕ್ತಿಕವಾಗಿ ಸೋನಿಯಾ ಗಾಂಧಿ ಅವರಾಗಲೀ ಅವರ ಪುತ್ರ ರಾಹುಲ್ ಗಾಂಧಿ ಅವರಾಗಲೀ ಗೊತ್ತಿಲ್ಲ. ಆದರೆ ಅವರ ಬಳಿ ಲಾಬಿ ಮಾಡಲು ತಮಗೆ ತಿಳಿಸಲಾಗಿತ್ತು. ಅವರ ಬಳಿ ಲಾಬಿ ಮಾಡುವುದು ಎಂಬುದರ ಅರ್ಥ ಅವರಿಗೆ ಲಂಚ ಪಾವತಿಯಾಗಿದೆ ಎಂದು ಅಲ್ಲ ಎಂದು ಮೈಕೆಲ್ ಹೇಳಿದರು. ನನ್ನನು ರಕ್ಷಿಸಿಕೊಳ್ಳಲು ನಾನು ಅವರನ್ನು ರಕ್ಷಿಸುವುದು ಅಗತ್ಯಎಂದು ಹೇಳಿದ ಮೈಕೆಲ್, ‘ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ಇಟಲಿಯ ಪ್ರಧಾನಿಯನ್ನು ಭೇಟಿಯಾಗಿ ಅಗಸ್ತಾ ವ್ಯವಹಾರದಲ್ಲಿ ಸೋನಿಯಾ ಗಾಂಧಿಯವರನ್ನು ಸಿಲುಕಿಸುವಂತಹ ಅಥವಾ ಅವರಿಗೆ ಕಿರಿಕಿರಿಯಾಗುವಂತಹ ಮಾಹಿತಿ ಒದಗಿಸಿದರೆ ಕೊಲೆ ಪ್ರಕರಣದಲ್ಲಿ ಸಿಲುಕಿರುವ ಇಬ್ಬರು ಇಟಲಿ ಪ್ರಜೆಗಳನ್ನು ಬಿಡುಗಡೆ ಮಾಡುವ ಕೊಡುಗೆ ಮುಂದಿಟ್ಟಿದ್ದರು ಎಂಬ ಹೇಳಿಕೆಗೆ ತಾನು ಈಗಲೂ ಬದ್ಧಎಂದು ಮೈಕೆಲ್ ತಿಳಿಸಿದರು.

2016: ನವದೆಹಲಿ: ದೆಹಲಿ ಈಗ ವಿಶ್ವದಲ್ಲಿ ಅತ್ಯಂತ ಹೆಚ್ಚು ಮಾಲಿನ್ಯ ಹೊಂದಿದ ನಗರವಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ನಗರ ವಾಯು ಗುಣಮಟ್ಟ ಮಾಹಿತಿ ವರದಿ ಹೇಳಿತು.  ರಾಷ್ಟ್ರದ ರಾಜಧಾನಿಯನ್ನು ಇರಾನಿನ ಝುಬೋಲ್ ನಗರ ಹಿಂದಕ್ಕೆ ಹಾಕಿದ್ದು ವಿಶ್ವದ ಅತ್ಯಂತ ಹೆಚ್ಚು ಮಾಲಿನ್ಯ ಹೊಂದಿರುವ ನಗರಗಳ ಪೈಕಿ 9ನೇ ಸ್ಥಾನವನ್ನು ಪಡೆಯಿತು. ಭಾರತದ ಗ್ವಾಲಿಯರ್, ಅಲಹಾಬಾದ್, ಪಟನಾ ಮತ್ತು ರಾಯ್ಪುರ ನಗರಗಳು ದೆಹಲಿಗಿಂತಲೂ ಹೆಚ್ಚು ಮಾಲಿನ್ಯ ಹೊಂದಿವೆ ಎಂದು ವರದಿ ಹೇಳಿತು. ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿ ವರದಿಯಲ್ಲಿ 103 ರಾಷ್ಟ್ರಗಳ 3000 ನಗರಗಳು ಸೇರಿವೆ. ತನ್ನ 2014 ವರದಿಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಕೇವಲ 1600 ನಗರಗಳನ್ನು ತನ್ನ ಪಟ್ಟಿಯಲ್ಲಿ ಸೇರಿಸಿತ್ತು.

2016: ಜಾರ್ಗ್ರಾಮ್ (ಪಶ್ಚಿಮ ಬಂಗಾಳ): ಮದುವೆ ದಿಬ್ಬಣವನ್ನು ಒಯ್ಯುತ್ತಿದ್ದ ವಾಹನವೊಂದು ಗುಡ್ಡಗಾಡು ರಸ್ತೆಯಲ್ಲಿ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿ ಹೊಡೆದ ಪರಿಣಾಮವಾಗಿ ದಿಬ್ಬಣದ 8 ಮಂದಿ ಮೃತರಾಗಿ, ಇತರ 22 ಮಂದಿ ಗಾಯಗೊಂಡ ಘಟನೆ ಪಶ್ಚಿಮ ಮಿಡ್ನಾಪೂರ ಜಿಲ್ಲೆಯಲ್ಲಿ ಘಟಿಸಿತು. ಪುರುಲಿಯಾ ಜಿಲ್ಲೆಯ ಬಂದ್ವಾನ್ನಲ್ಲಿ ಮದುವೆ ಮುಗಿಸಿ ದಿಬ್ಬಣ ವಾಪಸಾಗುತ್ತಿದ್ದಾಗ ಮುರಾನ್ಸೋಲೆ ಗ್ರಾಮದಲ್ಲಿ ಬೆಲ್ಪಹರಿ ಪೊಲೀಸ್ ಠಾಣೆ ವ್ಯಾಪ್ತಿಯ ತಮಜುರಿ ಸಮೀಪ ಅಪಘಾತ ಸಂಭವಿಸಿತು. ಆರು ಜನ ಸ್ಥಳದಲ್ಲೇ ಸಾವನ್ನಪ್ಪಿದರೆ, 24 ಗಾಯಾಳುಗಳನ್ನು ಮೊದಲು ಬೆಲ್ಪಹರಿ ಬ್ಲಾಕ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಜಾರ್ಗ್ರಾಮ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು.  ಗಾಯಾಳುಗಳ ಪೈಕಿ ಇಬ್ಬರು ಮಾರ್ಗಮಧ್ಯದಲ್ಲಿ ಅಸು ನೀಗಿದರು ಎಂದು ಪೊಲೀಸರು ತಿಳಿಸಿದರು. ಸಾವನ್ನಪ್ಪಿದವರಲ್ಲಿ ವಾಹನ ಚಾಲಕನೂ ಸೇರಿದ್ದಾನೆ. ವಧು ಮತ್ತು ವರ ಬೇರೊಂದು ಕಾರಿನಲ್ಲಿದ್ದರು ಎನ್ನಲಾಗಿದ್ದು ಇಬ್ಬರು ಸುರಕ್ಷಿತವಾಗಿದ್ದಾರೆ ಎಂದು ಪೊಲೀಸರು ಹೇಳಿದರು.
2016: ನವದೆಹಲಿ: ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸದಸ್ಯ ಪ್ರವೀಣ್ ರಾಷ್ಟ್ರಪಾಲ್ ಅವರು ಈದಿನ ನಸುಕಿನಲ್ಲಿ ಹೃದಯಾಘಾತದ ಪರಿಣಾಮವಾಗಿ ನಿಧನರಾದರು.  76 ಹರೆಯದ ರಾಷ್ಟ್ರಪಾಲ್ ಅವರು ಮೂವರು ಪುತ್ರಿಯರು ಮತ್ತು ಒಬ್ಬ ಪುತ್ರನನ್ನು ಅಗಲಿದರು. ಅವರ ಪತ್ನಿ ಕೆಲ ವರ್ಷಗಳ ಹಿಂದೆ ನಿಧನರಾಗಿದ್ದರು. ರಾಷ್ಟ್ರಪಾಲ್ ಅವರು ನಸುಕಿನಲ್ಲಿ ಅಸ್ವಾಸ್ಥ್ಯ ಬಗ್ಗೆ ಹೇಳಿದರು. ಆದರೆ ವೈದ್ಯಕೀಯ ನೆರವು ಒದಗಿಸುವುದಕ್ಕೂ ಮುನ್ನವೇ ಹೃತ್ಕ್ರಿಯೆ ನಿಂತು ಅವರು ನಿಧನರಾದರು ಎಂದು ಸಹಾಯಕ ಅಮೃತ ಪಾಂಡ್ಯ ತಿಳಿಸಿದರು. ಏಐಸಿಸಿ ಕಾರ್ಯದರ್ಶಿಯಾಗಿದ್ದ ರಾಷ್ಟ್ರಪಾಲ್ ಅವರು ಉತ್ತರ ಪ್ರದೇಶದ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಆದಾಯ ತೆರಿಗೆ ನೌಕರರು ಮತ್ತು ಕೇಂದ್ರ ಸರ್ಕಾರಿ ನೌಕರರ ಸಂಘಗಳ ಚಳವಳಿಯಲ್ಲಿ ಸಕ್ರಿಯರಾಗಿದ್ದ ಅವರು ರಾಜಕೀಯಕ್ಕೆ ಧುಮುಕುವ ಮುನ್ನ ಆದಾಯ ತೆರಿಗೆ ಇಲಾಖೆಯಲ್ಲಿ ಅಸಿಸ್ಟೆಂಟ್ ಕಮೀಷನರ್ ಆಗಿ ಸೇವೆ ಸಲ್ಲಿಸಿದ್ದರು. 1999-2004 ಅವಧಿಯಲ್ಲಿ 13ನೇ ಲೋಕಸಭೆಗೆ ಆಯ್ಕೆಯಾಗಿದ್ದ ರಾಷ್ಟ್ರಪಾಲ್ 2006ರಿಂದ 2012ರವರೆಗೆ ಮೇಲ್ಮನೆ ಸದಸ್ಯರಾಗಿದ್ದರು. 2012ರಲ್ಲಿ ಅವರು ಮೇಲ್ಮನೆ ಸದಸ್ಯರಾಗಿ ಪುನರಾಯ್ಕೆಯಾಗಿದ್ದರು. ಹಿಂದಿನ ಲೋಕಸಭೆಯ 2ಜಿ ಹಗರಣಕ್ಕೆ ಸಂಬಂಧಿಸಿದ ಜಂಟಿ ಸಂಸದೀಯ ಸಮಿತಿ ಸದಸ್ಯರಾಗಿಯೂ ಅವರು ಸೇವೆ ಸಲ್ಲಿಸಿದ್ದರು. ರಾಷ್ಟ್ರಪಾಲ್ ಗೌರವಾರ್ಥ ರಾಜ್ಯಸಭೆಯ ಈದಿನ ಕಲಾಪಗಳನ್ನು ಇಡೀ ದಿನದ ಮಟ್ಟಿಗೆ ಮುಂದೂಡಲಾಯಿತು.

2016: ಮುಂಬೈ: ಬರ ಪೀಡಿತ ಲಾತೂರ್ ಜಿಲ್ಲೆಗೆ ಕಳೆದ ಒಂದು ತಿಂಗಳಿಂದ 6.2 ಕೋಟಿ ಲೀಟರ್ ನೀರು ಸರಬರಾಜು ಮಾಡಿದ್ದಕ್ಕಾಗಿ ರೈಲ್ವೆ ಇಲಾಖೆ 4 ಕೋಟಿ ರೂ. ಬಿಲ್ ಅನ್ನು ಲಾತೂರ್ ಜಿಲ್ಲಾಡಳಿತಕ್ಕೆ ರವಾನೆ ಮಾಡಿತು. ಲಾತೂಲ್ ಜಿಲ್ಲಾಧಿಕಾರಿ ಮನವಿ ಸಲ್ಲಿಸಿದ ಕಾರಣ ನೀರು ಪೂರೈಕೆ ಮಾಡಿದ್ದಕ್ಕಾಗಿ ಬಿಲ್ ನೀಡಲಾಗಿದೆ. ರೈಲ್ವೆ ಇಲಾಖೆಗೆ ಬಿಲ್ ಪಾವತಿ ಮಾಡುವುದು ಅಥವಾ ಬಿಡುವುದು ಲಾತೂರ್ ಜಿಲ್ಲಾಧಿಕಾರಿಗೆ ಸೇರಿದ ವಿಷಯ ಎಂದು ಮಧ್ಯ ರೈಲ್ವೆಯ ಜನರಲ್ ಮ್ಯಾನೇಜರ್ ಎಸ್.ಕೆ.ಸೂದ್ ತಿಳಿಸಿದರು. ಲಾತೂರ್ ಜಿಲ್ಲೆಯಲ್ಲಿ ತೀವ್ರ ನೀರಿನ ಅಭಾವ ಉಂಟಾದ ಕಾರಣ ರೈಲ್ವೆ ಇಲಾಖೆಯು ಏಪ್ರಿಲ್ 11 ರಿಂದಜಲಧೂತ್ರೈಲಿನ ಮೂಲಕ ಪ್ರತೀ ದಿನ 25 ಲಕ್ಷ ಲೀ. ನೀರನ್ನು ಪೂರೈಕೆ ಮಾಡುತ್ತಿದೆ. ಇದಕ್ಕಾಗಿ 50 ಬೋಗಿಗಳ ಒಂದು ರೈಲನ್ನು ಮೀಸಲಿಡಲಾಗಿದೆ. ಪ್ರಾರಂಭದಲ್ಲಿ ಪಶ್ಚಿಮ ಮಹಾರಾಷ್ಟ್ರದ ಮೀರಜ್ನಿಂದ ನೀರು ಸರಬರಾಜು ಮಾಡಲಾಗುತ್ತಿತ್ತು. ನಂತರ ರಾಜಸ್ಥಾನದ ಕೋಟಾದಿಂದ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಸೂದ್ ತಿಳಿಸಿದರು.

2016: ನವದೆಹಲಿ: ನಿರುದ್ಯೋಗ ಮತ್ತು ಕೈಗಾರಿಕಾ ಚಟುವಟಿಕೆ ಕುಸಿತಕ್ಕೆಹೊಣೆಗಾರರಾದ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮ್ ರಾಜನ್ ಅವರನ್ನು ಹುದ್ದೆಯಿಂದ ಕಿತ್ತು ಹಾಕಬೇಕು ಎಂದು ಬಿಜೆಪಿ ಸುಬ್ರಮಣಿಯನ್ ಸ್ವಾಮಿ ಇಲ್ಲಿ ಸಲಹೆ ಮಾಡಿದರು. ನನ್ನ ದೃಷ್ಟಿಯಲ್ಲಿ ಆರ್ಬಿಐ ಗವರ್ನರ್ ಅವರು ರಾಷ್ಟ್ರಕ್ಕೆ ಸೂಕ್ತರಾದ ವ್ಯಕ್ತಿ ಅಲ್ಲ. ನಾನು ಅವರ ಬಗ್ಗೆ ಹೆಚ್ಚು ಮಾತನಾಡಲು ಇಚ್ಛಿಸುವುದಿಲ್ಲ. ಹಣದುಬ್ಬರವನ್ನು ನಿಯಂತ್ರಿಸುವ ನೆಪದಲ್ಲಿ ಬಡ್ಡಿ ದರಗಳನ್ನು ಏರಿಸುವ ಮೂಲಕ ಅವರು ರಾಷ್ಟ್ರಕ್ಕೆ ಹಾನಿ ಉಂಟು ಮಾಡಿದ್ದಾರೆಎಂದು ಸ್ವಾಮಿ ಸಂಸತ್ ಭವನದಲ್ಲಿ ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದರು. ಗವರ್ನರ್ ಅವರ ಕ್ರಮಗಳು ಕೈಗಾರಿಕೆಯ ಪತನ ಮತ್ತು ನಿರುದ್ಯೋಗ ಹೆಚ್ಚಲು ಕಾರಣವಾಗಿವೆ. ಎಷ್ಟು ಬೇಗ ಅವರನ್ನು ಚಿಕಾಗೋಗೆ ಕಳುಹಿಸಲು ಸಾಧ್ಯವೋ ಅಷ್ಟು ಒಳ್ಳೆಯದು ಎಂದು ಸ್ವಾಮಿ ನುಡಿದರು. ರಾಜನ್ ಅವರು ಚಿಕಾಗೋ ವಿಶ್ವವಿದ್ಯಾಲಯದ ಬೂತ್ ಸ್ಕೂಲ್ ಆಫ್ ಬಿಸಿನೆಸ್ ರಜಾದಲ್ಲಿರುವ ಪ್ರಾಧ್ಯಾಪಕರಾಗಿದ್ದಾರೆ. 2013 ಸೆಪ್ಟೆಂಬರ್ನಲ್ಲಿ ಆರ್ಬಿಐ ಗವರ್ನರ್ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ರಾಜನ್ ಅವರು ಅಲ್ಪಾವಧಿ ಸಾಲಗಳ ದರವನ್ನು ಶೇಕಡಾ 7.25ರಿಂದ ಶೇಕಡಾ 8ಕ್ಕೆ ಏರಿಸುವ ಮೂಲಕ 2014 ಸಾಲಿನಲ್ಲಿ ಅತ್ಯಂತ ಹೆಚ್ಚಿನ ದರಗಳನ್ನು ಉಳಿಸಿದರು. ಬೆಳವಣಿಗೆಗೆ ಒತ್ತು ನೀಡುವ ಸಲುವಾಗಿ ದರಗಳ ವಿಚಾರದಲ್ಲಿ ಮೆದು ನೀತಿ ಅನುಸರಿಸಲು ವಿತ್ತ ಸಚಿವಾಲಯ ಮತ್ತು ಕೈಗಾರಿಕಾ ಕ್ಷೇತ್ರದಿಂದ ಒತ್ತಡ ಇದ್ದರೂ ಹಣದುಬ್ಬರದತ್ತ ಬೊಟ್ಟು ಮಾಡುತ್ತಾ ಅವರು ಬಡ್ಡಿ ದರಗಳನ್ನು ಇಳಿಸದೆ ಹಾಗೆಯೇ ಮುಂದುವರೆಸಿದರು ಎಂದು ಸ್ವಾಮಿ ಹೇಳಿದರು.

2016: ಸನಾ: ಯೆಮೆನ್ನಲ್ಲಿ ಸೇನಾನೆಲೆಯನ್ನು ಗುರಿಯಾಗಿಟ್ಟುಕೊಂಡು ಅಲ್ಖೈದಾ ಸಂಘಟನೆ ನಡೆಸಿದ ಮೂರು ಪ್ರತ್ಯೇಕ ಕಾರು ಬಾಂಬ್ ಸ್ಪೋಟಗಳಲ್ಲಿ 16 ಮಂದಿ ಯೆಮೆನ್ ಸೈನಿಕರು ಮೃತರಾದರು. ಕಾರು ಬಾಂಬ್ ಸ್ಪೋಟಗಳನ್ನು ಹೊಸದಾಗಿ ನೇಮಕಗೊಂಡ ಸೈನಿಕರನ್ನೊಳಗೊಂಡ ಸೇನಾನೆಲೆಯನ್ನು ಗುರಿಯಾಗಿಟ್ಟುಕೊಂಡು ನಡೆಸಲಾಗಿತ್ತು.  ನೆಲೆಯಲ್ಲಿ ಯೆಮೆನ್ ಮತ್ತು ಯುಎಇ ಸೈನಿಕರಿದ್ದರು ಎಂದು ಸೇನಾ ಅಧಿಕಾರಿಗಳನ್ನು ಉಲ್ಲೇಖಿಸಿ ಕ್ಷಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿತು.

2016: ಇಸ್ಲಾಮಾಬಾದ್: ಪ್ರೇಮ ವಿವಾಹ ಬೆಂಬಲಿಸಿದಕ್ಕಾಗಿ ಪಾಕಿಸ್ತಾನಿ ಪತ್ರಕರ್ತನೋರ್ವನನ್ನು ಯುವತಿಯ ಕಡೆಯವರು ಗುಂಡಿಕ್ಕಿ ಕೊಲೆಗೈದ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಘಟಿಸಿತು. ಮನೆಯವರ ಅನುಮತಿಯಿಲ್ಲದೆ ಯುವತಿಯೊಬ್ಬಳು ತಾನು ಪ್ರೀತಿಸಿದ ಹುಡುಗನೊಂದಿಗೆ ವಿವಾಹವಾಗಲು ಬಯಸಿದ್ದಳು, ವಿವಾಹವನ್ನು ಪತ್ರಕರ್ತ ಅಜ್ಮಲ್ ಜೊಯಿಯಾ ನಡೆಸಿಕೊಟ್ಟಿದ್ದರು. ಇದರಿಂದ ರೊಚ್ಚಿಗೆದ್ದ ಯುವತಿಯ ಸಂಬಂಧಿಕರು ಅಜ್ಮಲ್ನನ್ನು ಗುಂಡಿಕ್ಕಿ ಕೊಲೆ ಮಾಡಿದರು.. ಘಟನೆಗೆ ಸಂಬಂಧಪಟ್ಟಂತೆ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು ಉಳಿದ ಇಬ್ಬರು ಆರೋಪಿಗಾಗಿ ಶೋಧ ಮುಂದುವರೆಯಿತು.  ಪಂಜಾಬ್ ಪ್ರಾಂತ್ಯದಾದ್ಯಂತ ಪತ್ರಕರ್ತರ ಸಂಘಗಳು ಪ್ರತಿಭಟನೆ ನಡೆಸುತ್ತಿದ್ದು ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದವು.

2016: ನವದೆಹಲಿ: ಇರಾನಿನಿಂದ ಕಚ್ಚಾತೈಲ ಪಡೆಯುತ್ತಿದ್ದ ಭಾರತೀಯ ತೈಲ ಸಂಸ್ಕರಣಾಗಾರಗಳ ಒಳ್ಳೆಯ ದಿನಗಳು ಮುಕ್ತಾಯಗೊಂಡವು. ಭಾರತಕ್ಕೆ ಕಚ್ಚಾತೈಲದ ಉಚಿತ ಸಾಗಣೆಯನ್ನು ಇರಾನ್ ಕೊನೆಗೊಳಿಸಿದೆ, ಭಾರತೀಯ ತೈಲ ಸಂಸ್ಕರಣಾಗಾರಗಳಿಗೆ ತಮ್ಮದೇ ಸಾಗಣೆ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಸಂಸತ್ತಿಗೆ ತಿಳಿಸಿದರು. 2013 ಫೆಬ್ರುವರಿಯಲ್ಲಿ ಇರಾನ್ ವಿರುದ್ಧ ದಿಗ್ಬಂಧನ ವಿಧಿಸಿದ್ದು ಭಾರತದ ತೈಲ ಸಂಸ್ಕರಣಾಗಾರಗಳಿಗೆ ವರದಾನವಾಗಿ ಪರಿಣಮಿಸಿತ್ತು. ಆಗ ರೂಪಾಯಿ ರೂಪದಲ್ಲಿ ಅರ್ಧದಷ್ಟು ಸಾಗಣೆ ವೆಚ್ಚವನ್ನು ಮಾತ್ರ ತೆಗೆದುಕೊಂಡು ಇರಾನ್ ಕಚ್ಚಾ ತೈಲವನ್ನು ಭಾರತಕ್ಕೆ ಒದಗಿಸುತ್ತಿತ್ತು. ಉಳಿದ ಹಣಕ್ಕೆ ಬಿಲ್ ಕೂಡಾ ಹಾಕುತ್ತಿರಲಿಲ್ಲ. ಎಸ್ಸಾರ್ ಆಯಿಲ್ ಮತ್ತು ಮಂಗಳೂರು ರಿಫೈನರೀಸ್ ಲಿಮಿಟೆಡ್ ಇತ್ಯಾದಿ ಕಂಪೆನಿಗಳು ಇರಾನ್ ಉಚಿತ ಸಾಗಣೆ ಮೂಲಕವೇ ಕಚ್ಚಾ ತೈಲ ಪಡೆಯುತ್ತಿದ್ದವು. ಆದರೆ ಜನವರಿ ತಿಂಗಳಲ್ಲಿ ಇರಾನ್ ವಿರುದ್ಧ ವಿಧಿಸಲಾಗಿದ್ದ ದಿಗ್ಬಂಧನವನ್ನು ತೆರವುಗೊಳಿಸಲಾಗಿದೆ, ಮತ್ತು ನ್ಯಾಷನಲ್ ಇರಾನಿಯನ್ ಆಯಿಲ್ ಕಂಪೆನಿಯು ಎಲ್ಲಾ ಪಾವತಿಗಳನ್ನೂ ಯೂರೋದಲ್ಲಿಯೆ ಮಾಡಬೇಕು ಎಂದು ಸೂಚಿಸಿದೆ ಎಂದು ಸಚಿವ ಪ್ರಧಾನ್ ಸಂಸತ್ತಿಗೆ ತಿಳಿಸಿದರು. ಅಂದರೆ ಭಾರತೀಯ ತೈಲ ಸಂಸ್ಕರಣಾಗಾರರು ಏಪ್ರಿಲ್ನಿಂದ ಬಿಲ್ ಪಾವತಿ ಮಾಡುವುದಷ್ಟೇ ಅಲ್ಲ, 2013ರಿಂದ ಎಲ್ಲಾ ಬಾಕಿ ಹಣವನ್ನೂ ತೀರಿಸಬೇಕಾಗುತ್ತದೆ.

2016: ನವದೆಹಲಿ
: 1993 ಮುಂಬೈ ಸರಣಿ ಸ್ಪೋಟದ ಪ್ರಮುಖ ಸಂಚುಕೋರ, ಮೋಸ್ಟ್ ವಾಂಟೆಡ್ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲೇ ವಾಸವಿದ್ದಾನೆ ಎಂಬ ಭಾರತದ ವಾದಕ್ಕೆ ಮತ್ತಷ್ಟು ಪುಷ್ಟಿ ದೊರಕಿತು. ಆತ ಕರಾಚಿಯ ಕ್ಲಿಫ್ಟನ್ ಉಪನಗರದ ಬೃಹತ್ ಬಂಗ್ಲೆಯೊಂದರಲ್ಲಿ ವಾಸಿಸುತ್ತಿರುವುದು ಸುದ್ದಿವಾಹಿನಿಯೊಂದರ ಕುಟುಕು ಕಾರ್ಯಾಚರಣೆ ಯಲ್ಲಿ ಬಯಲಾಯಿತು. ಆಫ್ಘನ್ ನಿರಾಶ್ರಿತ ನೀಡಿದ ಸುಳಿವು: ಸುದ್ದಿವಾಹಿನಿಯ ತಂಡಕ್ಕೆ ಆಫ್ಘನ್ ನಿರಾಶ್ರಿತನೊಬ್ಬ ದಾವೂದ್ ಬಂಗ್ಲೆ ಇರುವ ಪ್ರದೇಶದ ಕುರಿತು ಸುಳಿವು ನೀಡಿದ.. ಆತ ನೀಡಿದ ಸುಳಿವಿನ ಮೇರೆಗೆ ತೆರಳಿದಾಗ ಬಂಗ್ಲೆ ಇರುವ ಜಾಗ ಪತ್ತೆಯಾಗಿದೆ ಎನ್ನಲಾಯಿತು.  ದಾವೂದ್ ಕರಾಚಿಯ ನಿವಾಸದಲ್ಲಿ ವಾಸವಿದ್ದಾನೆ ಎಂದು ಹಿಂದೆ ಹಲವು ಬಾರಿ ಭಾರತ ಹೇಳಿತ್ತು. ಇದಕ್ಕೆ ಪೂರಕ ದಾಖಲೆಗಳನ್ನೂ ನೀಡಲಾಗಿತ್ತು. ವಿಚಾರವನ್ನು ಪಾಕ್ ಸರ್ಕಾರ ನಿರಾಕರಿಸುತ್ತಲೇ ಬಂದಿತ್ತು.  ಕಳೆದ 23 ವರ್ಷಗಳಿಂದಲೂ ದಾವೂದ್ ಕರಾಚಿಯಲ್ಲಿದ್ದಾನೆ ಎನ್ನಲಾಗಿತ್ತು.

2009: ವಿಶ್ವದ ಅತ್ಯಂತ ಹಿರಿಯ ಮಹಿಳೆ ಎಂದು ಖ್ಯಾತಿ ಪಡೆದಿದ್ದ ಸಖಾನ್ ದೊಸೊವ (130)
ಲಂಡನ್ನಿನಲ್ಲಿ ಮೃತರಾದರು. ಅವರು ತಮ್ಮ ಸ್ನಾನಗೃಹದಲ್ಲಿ ಕಾಲುಜಾರಿ ಬಿದ್ದ ನಂತರ ಸೊಂಟ ಮುರಿದುಕೊಂಡಿದ್ದರು. ಅದರಿಂದ ಅವರು ಚೇತರಿಸಿಕೊಂಡಿರಲಿಲ್ಲ. ಆನಂತರ ಅವರು ಚಿಂತಾಜನಕ ಸ್ಥಿತಿಯಲ್ಲಿದ್ದರು. ಜನಗಣತಿಯಿಂದ ಬೆಳಕಿಗೆ ಬಂದ ಮಾಹಿತಿಯಂತೆ ದೊಸೊವ ಜನ್ಮ ದಿನಾಂಕ 27 ನೇ ಮಾರ್ಚ್ 1879 ಎಂದು ಅಧಿಕಾರಿಗಳು ದೃಢಪಡಿಸಿದ್ದಾಗಿ ಡೇಲಿ ಮೇಲ್ ಪತ್ರಿಕೆ ವರದಿ ಮಾಡಿತು. ಈಕೆಯ ದೀರ್ಘಾಯುಷ್ಯದ ಗುಟ್ಟೇನು? ಮಾರ್ಚ್ ತಿಂಗಳಲ್ಲಿ ನೀಡಿದ ಸಂದರ್ಶನದಲ್ಲಿ ಈ ಪ್ರಶ್ನೆಗೆ ತಾವೆಂದೂ ಔಷಧ, ಮಾತ್ರೆ ತೆಗೆದುಕೊಳ್ಳುತ್ತಿರಲಿಲ್ಲ, ಸಿಹಿಯನ್ನು ತಿನ್ನುತ್ತಿರಲಿಲ್ಲ ಎಂದು ಉತ್ತರಿಸಿದ್ದರು. ಎರಡು ಬಾರಿ ವಿವಾಹವಾಗಿದ್ದ ಇವರು ಎರಡನೇ ಮಹಾಯುದ್ಧದಲ್ಲಿ ಗಂಡನನ್ನು ಕಳೆದುಕೊಂಡಿದ್ದರು.

2009: ಪ್ರತಿ ವರ್ಷ ಬೇಸಿಗೆ ಅವಧಿಯಲ್ಲಿ ಪ್ರಯಾಣಿಕರಿಗೆ ಹೆಚ್ಚುವರಿ ಸೇವೆಗಳನ್ನು ಒದಗಿಸುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಮೇ 11ರಂದು ದಾಖಲೆಯ ಮೊತ್ತ 2.44 ಕೋಟಿ ರೂಪಾಯಿ ಆದಾಯವನ್ನು ಸಂಗ್ರಹಿಸಿತು. ಮೇ 4ರಂದು ಬಿಎಂಟಿಸಿ 2.38 ಕೋಟಿ ರೂಪಾಯಿ ಸಂಗ್ರಹಿಸಿತ್ತು. ಆದರೆ ಇದಕ್ಕಿಂತಲೂ ಹೆಚ್ಚು ಅಂದರೆ ಮೇ 11ರಂದು ಸಾರ್ವಕಾಲಿಕ ದಾಖಲೆಯಾದ ಮೊತ್ತವನ್ನು (2,44,21,702) ಸಂಗ್ರಹಿಸಲಾಯಿತು ಎಂದು ಬಿಎಂಟಿಸಿ ತಿಳಿಸಿತು.

2009: ನೌಕಾದಳದ ನಿವೃತ್ತ ಮುಖ್ಯಸ್ಥ ಅಡ್ಮಿರಲ್ ಎಸ್. ಎಂ. ನಂದಾ (93) ನವದೆಹಲಿಯ ಆಸ್ಪತ್ರೆಯಲ್ಲಿ ಮೃತರಾದರು. 1971ರಲ್ಲಿ ನಡೆದ ಭಾರತ ಹಾಗೂ ಪಾಕಿಸ್ಥಾನದ ಯುದ್ಧದಲ್ಲಿ ಅವರು ಭಾಗವಹಿಸಿದ್ದರು. ಕೇಂದ್ರ ಸರ್ಕಾರವು ಅವರಿಗೆ ಪದ್ಮ ಭೂಷಣ ಪ್ರಶಸ್ತಿ ನೀಡಿ ಗೌರವಿಸಿತ್ತು.

2009: ಹೈದರಾಬಾದ್ ನಗರದ ಲೋಟಸ್ ಲ್ಯಾಪ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ತೇಜಶ್ರೀ 999 ಅಡಿ ಉದ್ದದ ಹಾಳೆಯಲ್ಲಿ ಉರ್ದು ಲಿಪಿಯಲ್ಲಿ ಕುರಾನ್ ಗ್ರಂಥವನ್ನು ಬರೆದು ದಾಖಲೆ ಸ್ಥಾಪಿಸಿದಳು. 10ನೇ ತರಗತಿ ವಿದ್ಯಾರ್ಥಿನಿ ತೇಜಶ್ರೀಯ ತಂದೆ ಬಾಲು ಖ್ಯಾತ ಕಲಾವಿದರು. ಏಪ್ರಿಲ್ 23ರಿಂದ ಆಕೆ ಉರ್ದು ಲಿಪಿಯಲ್ಲಿ ಕುರಾನ್ ಬರೆಯಲು ಆರಂಭಿಸಿದ್ದಳು. ಈ ಅತಿ ಉದ್ದದ ಕುರಾನ್ ಪ್ರತಿಯನ್ನು ಟಿಡಿಪಿಯ ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರಿಗೆ ಸಲ್ಲಿಸಲಾಯಿತು.

2009: ಪ್ರತಿಷ್ಠಿತ 'ಅಮೆರಿಕನ್ ಕಾಲೇಜ್ ಆಫ್ ಫೋರೆನ್ಸಿಕ್ ಎಕ್ಸಾಮಿನರ್ಸ್‌ ಇನ್‌ಸ್ಟಿಟ್ಯೂಟ್'ನ (ಎಸಿಎಫ್‌ಇಐ) ಗೌರವ ಸದಸ್ಯರಾಗಿ ಭಾರತೀಯ ವಿಜ್ಞಾನಿ ಪ್ರೊಫೆಸರ್ ಪಕ್ಕಿರಿಸಾಮಿ ಚಂದ್ರಶೇಖರನ್ ನೇಮಕಗೊಂಡರು. ಇವರು ರಾಜೀವ್ ಗಾಂಧಿ ಹತ್ಯೆಯ ತನಿಖೆ ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಚಂದ್ರಶೇಖರ್ ಅವರು ಪದ್ಮಭೂಷಣ ಪ್ರಶಸ್ತಿಯನ್ನೂ ಪಡೆದವರು. 2008ರಲ್ಲಿ ಇವರ 'ದಿ ಅನ್‌ಟೋಲ್ಡ್ ಹ್ಯೂಮನ್ ಬಾಂಬ್-ದಿ ಅನ್‌ಟೋಲ್ಡ್ ಸ್ಟೋರಿ ಆಫ್ ದಿ ರಾಜೀವ್ ಗಾಂಧಿ ಅಸಾಸಿನೇಷನ್'' ಎಂಬ ಪುಸ್ತಕ ಬಿಡುಗಡೆಯಾಗಿತ್ತು.

2008: ಚೀನಾದಲ್ಲಿ ಸಂಭವಿಸಿದ ಭೀಕರ ಭೂಕಂಪಕ್ಕೆ ಸಿಚುವಾನ್ ಪ್ರಾಂತ್ಯದಲ್ಲಿ ಸುಮಾರು 9000 ಜನರು ಪ್ರಾಣ ಕಳೆದುಕೊಂಡರು. 900 ವಿದ್ಯಾರ್ಥಿಗಳು ಅವಶೇಷಗಳಡಿ ಸಿಲುಕಿರುವರೆಂದು ಶಂಕಿಸಲಾಯಿತು. ಅಂತಾರಾಷ್ಟ್ರೀಯ ಕಾಲಮಾನ ಬೆಳಗ್ಗೆ 11.58ಕ್ಕೆ ಸಂಭವಿಸಿದ ಈ ಭೂಕಂಪವು ಚೀನಾದ ಸಿಚುವಾನ್ ಪ್ರಾಂತ್ಯದ ದುಜಿಂಗಿಯಾನ್ ನಗರದ ವೆನಚುವಾನ್ ಕೌಂಟಿಯಲ್ಲಿ ಕೇಂದ್ರೀಕೃತಗೊಂಡಿತ್ತು. ಈ ನಗರವು ಪ್ರಾಂತೀಯ ರಾಜಧಾನಿ ಚೆಂಗ್ಡುವಿನಿಂದ ನೂರು ಕಿ.ಮೀ.ದೂರದಲ್ಲಿದ್ದು ಇಲ್ಲಿ ಸರಣಿ ಕಂಪನಗಳು ಉಂಟಾದವು. ರಿಕ್ಟರ್ ಮಾಪಕದಲ್ಲಿ 7.8ರಷ್ಟು ತೀವ್ರತೆ ಹೊಂದಿದ್ದ ಭೂಕಂಪದ ಬಿಸಿ ಬೀಜಿಂಗ್, ಶಾಂಘೈ ಸೇರಿದಂತೆ ದೇಶದ ಬಹುಭಾಗಗಳಲ್ಲಿ ವ್ಯಾಪಿಸಿತ್ತು.

2008: ಹಿಂದಿನ ತಿಂಗಳಷ್ಟೇ ಜೆಡಿ(ಎಸ್) ಸೇರಿದ್ದ ಮಾಜಿ ಸಚಿವ, ಬಳ್ಳಾರಿ ನಗರ ಕ್ಷೇತ್ರದ ಜೆಡಿ(ಎಸ್) ಅಭ್ಯರ್ಥಿ ಎಂ. ದಿವಾಕರಬಾಬು, ಈದಿನ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ಸಿಗೆ ಮರು ಸೇರ್ಪಡೆಯಾದರು.

2008: ಹುಬ್ಬಳ್ಳಿಯ ನ್ಯಾಯಾಲಯದಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಘಟನೆಯಲ್ಲಿ ಲಷ್ಕರ್-ಎ- ತೊಯ್ಬಾ ಕೈವಾಡ ಖಚಿತವಾಗಿದ್ದು, ಪಾಕಿಸ್ಥಾನದಲ್ಲಿ ತರಬೇತಿ ಪಡೆದ ಉಗ್ರಗಾಮಿಗಳು ಈ ಕೃತ್ಯ ಎಸಗಿರುವ ಸಾಧ್ಯತೆಗಳು ನಿಚ್ಚಳಗೊಂಡವು. ಬಾಂಬ್ ತಯಾರಿಕೆಗೆ ಬಳಸಿದ ಸ್ಫೋಟಕಗಳು ಕೂಡಾ ಗಡಿಯಾಚೆಯಿಂದಲೇ ಬಂದಿರಬೇಕು ಎಂದು ತನಿಖಾಧಿಕಾರಿಗಳು ಶಂಕಿಸಿದರು. ಅಮೋನಿಯಂ ನೈಟ್ರೇಟ್, ಪಾಲಿ ಸ್ಯಾಕ್ರೈಡ್, ಗಾರ್ಲೊರ್ಗಮ್, ಜೆಲ್ಲಿ ಸ್ಫೋಟಕ ಮತ್ತು ಪೆಟ್ರೋಲಿಯಂ ಜೆಲ್ಲಿಯನ್ನು ಬಾಂಬ್ ತಯಾರಿಕೆಯಲ್ಲಿ ಬಳಸಲಾಗಿದೆ ಎಂಬುದನ್ನು ತನಿಖಾ ತಂಡ ಪತ್ತೆ ಹಚ್ಚಿತು. ಹೈದರಾಬಾದಿನಲ್ಲಿ ಸಂಭವಿಸಿದ ಮೆಕ್ಕಾ ಮಸೀದಿ ಸ್ಫೋಟಕ್ಕೂ ಹುಬ್ಬಳ್ಳಿ ಸ್ಫೋಟಕ್ಕೂ ಸಾಮ್ಯತೆಯಿರುವುದೂ ಬೆಳಕಿಗೆ ಬಂತು.

2008: ಪಿಪಿಪಿ ನೇತೃತ್ವದ ಪಾಕಿಸ್ಥಾನ ಸಮ್ಮಿಶ್ರ ಸರ್ಕಾರದಿಂದ ಹೊರಬರಲು ಮಾಜಿ ಪ್ರಧಾನಿ ನವಾಜ್ ಷರೀಫ್ ನಾಯಕತ್ವದ ಪಿಎಂಎಲ್-ಎನ್ ನಿರ್ಧರಿಸಿತು. ಇದರಿಂದ ಕೇವಲ ಆರು ವಾರಗಳ ಪ್ರಧಾನಿ ಯೂಸುಫ್ ರಜಾ ಜಿಲಾನಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿತು. ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ಹಿಂದಿನ ವರ್ಷ ತುರ್ತು ಪರಿಸ್ಥಿತಿಯಲ್ಲಿ ಪದಚ್ಯುತಗೊಳಿಸಿದ ನ್ಯಾಯಮೂರ್ತಿಗಳ ಪುನರ್ ನೇಮಕಕ್ಕೆ ಸಂಬಂಧಿಸಿ ಆಡಳಿತಾರೂಢ ಪಾಕಿಸ್ಥಾನ ಪೀಪಲ್ಸ್ ಪಾರ್ಟಿ ಜೊತೆಗಿನ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಮಿತ್ರಪಕ್ಷ ಪಾಕಿಸ್ಥಾನ ಮುಸ್ಲಿಂಲೀಗ್-ನವಾಜ್ ಷರೀಫ್ ಬಣ ಈ ತೀರ್ಮಾನ ಕೈಗೊಂಡಿತು.

2008: ಭೀಕರ ಚಂಡಮಾರುತಕ್ಕೆ ತತ್ತರಿಸಿರುವ ಮ್ಯಾನ್ಮಾರ್ ತನ್ನ ಸದ್ಯದ ಕಷ್ಟ ಪರಿಸ್ಥಿತಿಯಲ್ಲೂ ಶ್ರೀಲಂಕಾಕ್ಕೆ 20 ಸಾವಿರ ಟನ್ ಅಕ್ಕಿಯನ್ನು ರಫ್ತು ಮಾಡಿತು. ಭಾರತ ಮತ್ತ ಪಾಕಿಸ್ಥಾನದಂತಹ ನೆರೆ ದೇಶಗಳು ಶ್ರೀಲಂಕಾಕ್ಕೆ ಅಕ್ಕಿ ರಫ್ತು ಮಾಡಲು ಹಿಂದುಮುಂದು ನೋಡುತ್ತಿದ್ದ ಸಂದರ್ಭದಲ್ಲೇ, ಮ್ಯಾನ್ಮಾರ್ ರವಾನಿಸಿದ 20 ಸಾವಿರ ಟನ್ ಅಕ್ಕಿ ಶ್ರೀಲಂಕಾವನ್ನು ತಲುಪಿತು.

2008: ಕೇಂದ್ರ ಸರ್ಕಾರದ ಅನುದಾನದಿಂದ ನಡೆಯುತ್ತಿರುವ ಐಐಎಂಗಳು ಮತ್ತು ಇತರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ (ಒಬಿಸಿ) ಶೇ 27ರಷ್ಟು ಮೀಸಲಾತಿ ಕಲ್ಪಿಸಬೇಕೆಂಬ ಆದೇಶವನ್ನು ಜಾರಿಗೆ ತರುವುದರ ವಿರುದ್ಧ ಸಲ್ಲಿಸಲಾದ ಅರ್ಜಿಯ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಕೇಂದ್ರಕ್ಕೆ ನೋಟಿಸ್ ಜಾರಿಗೊಳಿಸಿತು.

2008: ಮಧ್ಯಪ್ರದೇಶದ ಮೊರೆನ ಜಿಲ್ಲೆಯ ಹಾರ್ ಹಳ್ಳಿಯಲ್ಲಿ ಎರಡು ದಿನಗಳಿಂದ ಬಿಸಿಲಿನ ಝಳಕ್ಕೆ ಆರಕ್ಕೂ ಅಧಿಕ ನವಿಲುಗಳು ಸತ್ತವು. ಹಿಂದಿನ ವರ್ಷ ಕೂಡ ಅತಿಯಾದ ಬಿಸಿಲಿಗೆ 61 ನವಿಲುಗಳು ಸತ್ತಿದ್ದವು. ಜಿಲ್ಲೆಯಲ್ಲಿ 72 ಸಾವಿರ ನವಿಲುಗಳಿವೆ ಎಂದು ಅಂದಾಜಿಸಲಾಗಿದೆ.

2008: ಮುಂಬೈಯಲ್ಲಿ 1993ರಲ್ಲಿ ಸಂಭವಿಸಿದ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣದಂಡನೆಗೆ ಗುರಿಯಾದ ಅಬ್ದುಲ್ ಘನಿ ಇಸ್ಮಾ ಟರ್ಕ್ ವಿರುದ್ಧ ಶಿಕ್ಷೆ ಜಾರಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿತು. ಮುಂಬೈ `ಟಾಡಾ' ನ್ಯಾಯಾಲಯ ನೀಡಿದ ಈ ತೀರ್ಪು ಪ್ರಶ್ನಿಸಿ ಟರ್ಕ್ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಿದ ಮುಖ್ಯ ನ್ಯಾಯಮೂರ್ತಿ ಕೆ. ಜಿ. ಬಾಲಕೃಷ್ಣನ್ ನೇತೃತ್ವದ ಪೀಠ ಸಿಬಿಐಗೆ ನೋಟಿಸ್ ಜಾರಿಗೊಳಿಸಿತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಗೆ ಗುರಿಯಾದ ಶೇಕ್ ಅಲಿ ಶೇಕ್ ಉಮರನ ಅರ್ಜಿಯನ್ನೂ ಸ್ವೀಕರಿಸಿದ ಪೀಠ, ಸಿಬಿಐಗೆ ನೋಟಿಸ್ ಜಾರಿಮಾಡಿತು.

2008: ಜೆಸ್ಸಿಕಾಲಾಲ್ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾದ ಮನು ಶರ್ಮಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತು. ಈ ಪ್ರಕರಣದಲ್ಲಿ ವಿಧಿಸಿರುವ ಶಿಕ್ಷೆಯನ್ನು ರದ್ದುಪಡಿಸಿವುದಕ್ಕೆ ಹಾಗೂ ಅಪರಾಧಿಗೆ ಜಾಮೀನು ನೀಡುವುದಕ್ಕೆ ಯಾವುದೇ ಕಾರಣ ಇಲ್ಲ ಎಂದು ಹೇಳಿ ನ್ಯಾಯಮೂರ್ತಿ ಸಿ. ಕೆ. ಠಕ್ಕರ್ ನೇತೃತೃದ ಪೀಠ ಈ ಕ್ರಮ ಕೈಗೊಂಡಿತು. ಪ್ರಕರಣ ಕುರಿತು ದೆಹಲಿ ಹೈಕೋರ್ಟ್ ವಿಚಾರಣಾ ನ್ಯಾಯಾಲಯದ ತೀರ್ಪು ರದ್ದುಪಡಿಸಿ ಮನು ಶರ್ಮಾನಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

2008: ಮೋಸದಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಮಾರ್ಲೋನ್ ಸ್ಯಾಮುಯೆಲ್ಸ್ ಅವರ ಮೇಲೆ ಎರಡು ವರ್ಷಗಳ ನಿಷೇಧ ವಿಧಿಸಲಾಯಿತು. 2007ರ ಜನವರಿಯಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ವೇಳೆ ತಂಡದ ಬಗೆಗಿನ ಮಾಹಿತಿಯನ್ನು ಅವರು ಬುಕ್ಕಿಯೊಬ್ಬನಿಗೆ ನೀಡಿದ್ದರ ಬಗ್ಗೆ ಸಾಕ್ಷಿ ಸಿಕ್ಕಿರುವುದರಿಂದ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ (ಡಬ್ಲ್ಯುಐಸಿಬಿ) ಈ ಕ್ರಮಕೈಗೊಂಡಿತು.

2008: ಅಂತಾರಾಷ್ಟ್ರೀಯ ವೇಟ್ ಲಿಫ್ಟಿಂಗ್ ಫೆಡರೇಷನ್ (ಐಡಬ್ಲ್ಯುಎಫ್) ಭಾರತದ ಮಹಿಳಾ ವೇಟ್ ಲಿಫ್ಟರ್ ಕವಿತಾ ದೇವಿ ಅವರ ಮೇಲೆ ಎರಡು ವರ್ಷಗಳ ನಿಷೇಧ ಹೇರಿತು. 75 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಕವಿತಾ ಅವರು ಕಳೆದ ತಿಂಗಳು ಜಪಾನಿನಲ್ಲಿ ನಡೆದ ಏಷ್ಯನ್ ಚಾಂಪಿಯನ್ ಶಿಪ್ನಿಂದ ಹಿಂದೆ ಸರಿದಿದ್ದರು.

2008: ಜಮ್ಮುವಿನಲ್ಲಿ ಹಿಂದಿನ ದಿನ ನಡೆದ ಗುಂಡಿನ ಕಾಳಗದಲ್ಲಿ ಕೆಜಿಎಫ್ನ ಯೋಧ, ಅರ್ಜುನನ್ ಅವರ ಪುತ್ರ ರಘುನಾಥನ್ (29) ಗುಂಡಿನ ದಾಳಿಗೆ ಸಿಲುಕಿ ಸಾವನ್ನಪ್ಪಿದರು.

2007: ಅಮಾನತುಗೊಂಡ ಪಾಕಿಸ್ಥಾನದ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಎಂ. ಚೌಧರಿ ಮತ್ತು ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ಬೆಂಬಲಿಗರು ವಾಣಿಜ್ಯ ರಾಜಧಾನಿ ಕರಾಚಿಯ ಪ್ರಮುಖ ಬೀದಿಗಳಲ್ಲಿ ಗುಂಡಿನ ಕಾಳಗದಲ್ಲಿ ತೊಡಗಿದ್ದರಿಂದ ಕನಿಷ್ಠ 30 ಜನ ಮೃತರಾಗಿ 150ಕ್ಕೂ ಹೆಚ್ಚು ಜನ ಗಾಯಗೊಂಡರು.

2007: ಢಾಕಾದ ಮೀರ್ ಪುರದಲ್ಲಿ ನಡೆದ ಏರಡನೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಜಯಗಳಿಸಿದ ಭಾರತ ತಂಡವು ಸಂಘಟಿತ ಹೋರಾಟ ನೀಡಿ ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯನ್ನು 2-0 ಅಂತರದಲ್ಲಿ ತನ್ನದಾಗಿಸಿಕೊಂಡಿತು.

2007: ಉತ್ತರ ಪ್ರದೇಶದ ಸುಲ್ತಾನಪುರ, ಪ್ರತಾಪಗಢ ಹಾಗೂ ಬಾರಾಬಂಕಿ ಜಿಲ್ಲೆಗಳಲ್ಲಿ ರಾತ್ರಿ ಬೀಸಿದ ಭಾರಿ ಬಿರುಗಾಳಿಗೆ 31 ಮಂದಿ ಬಲಿಯಾದರು.

2006: ಅಮೆರಿಕದ ಜಸ್ಟಿನ್ ಗಾಟ್ಲಿನ್ ಅವರು ದೋಹಾದಲ್ಲಿ ಐಎಎಎಫ್ ಸೂಪರ್ ಟೂರ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ 100 ಮೀಟರ್ ಓಟದ ಸ್ಪರ್ಧೆಯಲ್ಲಿ ವಿಶ್ವದಾಖಲೆ ನಿರ್ಮಿಸಿದರು. ಗಾಟ್ಲಿನ್ ಅವರು 100 ಮೀಟರ್ ದೂರವನ್ನು 9.76 ಸೆಕೆಂಡುಗಳಲ್ಲಿ ಕ್ರಮಿಸಿ ಈ ದಾಖಲೆ ಸ್ಥಾಪಿಸಿದರು. ಗಾಟ್ಲಿನ್ ಸಾಧನೆಯೊಂದಿಗೆ ಜಮೈಕಾದ ಅಸಾಫಾ ಪೊವೆಲ್ ನಿರ್ಮಿಸಿದ್ದ 9.77 ಸೆಕೆಂಡುಗಳ ದಾಖಲೆ ಅಳಿಸಿಹೋಯಿತು.

2006: ಕನ್ನಡದ ಹಿರಿಯ ವಿದ್ವಾಂಸ ಡಾ. ಎಲ್. ಬಸವರಾಜು ಅವರು 2005ನೇ ಸಾಲಿನ `ಭಾಷಾ ಸಮ್ಮಾನ್' ಪ್ರಶಸ್ತಿಗೆ ಆಯ್ಕೆಯಾದರು.

2006: ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿಯಾಗಿ ಅಗ್ರಹಾರ ಕೃಷ್ಣಮೂರ್ತಿ ಅವರ ಆಯ್ಕೆಯನ್ನು ಕೇಂದ್ರ ಸಂಸ್ಕೃತಿ ನಿರ್ದೇಶನಾಲಯ ಅನುಮೋದಿಸಿತು.

2006: ನ್ಯಾಯಾಲಯ ನಿಂದನೆ ಪ್ರಕರಣದಲ್ಲಿ ಸುಪ್ರೀಂಕೋರ್ಟಿನಿಂದ ಒಂದು ತಿಂಗಳ ಶಿಕ್ಷೆಗೆ ಗುರಿಯಾದ ಮಹಾರಾಷ್ಟ್ರದ ಸಾರಿಗೆ ಸಚಿವ ಸ್ವರೂಪ್ಸಿಂಗ್ ನಾಯಕ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.

2006: ನೇಪಾಳದ ಪ್ರಜಾಸತ್ತೆ ಪರ ಚಳವಳಿಯನ್ನು ಹತ್ತಿಕ್ಕಲು ಯತ್ನಿಸಿದ್ದವರ ವಿರುದ್ಧ ಮಹತ್ವದ ಕ್ರಮ ಕೈಗೊಂಡ ಜಿ.ಪಿ. ಕೊಯಿರಾಲ ಸರ್ಕಾರವು ದೊರೆ ಜ್ಞಾನೇಂದ್ರ ಅವರ ಆಳ್ವಿಕೆಯಲ್ಲಿ ಸಚಿವರಾಗಿದ್ದ ಮಾಜಿ ಗೃಹ ಸಚಿವ ಕಮಲ್ ಥಾಪಾ, ಮಾಜಿ ಸಂಪರ್ಕ ಖಾತೆಯ ರಾಜ್ಯ ಸಚಿವ ಶ್ರೀಶ್ ಶಂಶೇರ್ ರಾಣಾ ಮತ್ತು ಮಾಜಿ ವಿದೇಶಾಂಗ ಸಚಿವ ರಮೇಶನಾಥ ಪಾಂಡೆ ಅವರನ್ನು ಬಂಧಿಸಿತು. ನೇಪಾಳಿ ದೊರೆ ಆಳ್ವಿಕೆಯ ಭದ್ರತಾ ಸಂಸ್ಥೆಗಳ ಉನ್ನತ ಅಧಿಕಾರಿಗಳಾಗಿದ್ದ ಸೇನಾ ಮುಖ್ಯಸ್ಥ ಪ್ಯಾರ್ ಜಂಗ್ ಥಾಪಾ, ಸಶಸ್ತ್ರ ಪೊಲೀಸ್ ಪಡೆ ಮುಖ್ಯಸ್ಥ ಸಹಬೀರ್ ಥಾಪಾ, ನೇಪಾಳಿ ಪೊಲೀಸ್ ಮುಖ್ಯಸ್ಥ ಶ್ಯಾಮ್ ಭಕ್ತ ಥಾಪಾ, ಮತ್ತು ರಾಷ್ಟ್ರೀಯ ತನಿಖಾ ವಿಭಾಗದ ದೇವೀರಾಮ್ ಶರ್ಮ ಅವರನ್ನು ಅಮಾನತುಗೊಳಿಸಿತು.

2006: ನೇಪಾಳದ ಸಣ್ಣ ಗ್ರಾಮ ಧುಲ್ಲುಬಾಷ್ಕೋಟ್-6 ಬಗ್ಲುಂಗಿನ 14 ವರ್ಷದ ಬಾಲಕ ಖಗೇಂದ್ರ ಥಾಪಾ ಮಗರ್ ನ ಹೆಸರು `ಭೂಮಿಯ ಮೇಲಿನ ಅತಿಕುಳ್ಳ ಮನುಷ್ಯ' ಎಂಬುದಾಗಿ ಶೀಘ್ರದಲ್ಲೇ ಗಿನ್ನಿಸ್ ವಿಶ್ವದಾಖಲೆಗಳ ಪುಸ್ತಕದಲ್ಲಿ ನಮೂದಾಗಲಿದೆ. ಖಗೇಂದ್ರ ಥಾಪಾ ಮಗರ್ ನ ತೂಕ ಕೇವಲ 4.5 ಕಿ.ಗ್ರಾಂ.ಗಳಾಗಿದ್ದು, ಎತ್ತರ ಕೇವಲ 20 ಅಂಗುಲಗಳು. ಮಾಸ್ಟರ್ ಮಗರ್ ನ ಹೆಸರು ಈವರೆಗೆ ಭೂಮಿ ಮೇಲಿನ ಅತ್ಯಂತ ಕುಳ್ಳ ಎಂಬುದಾಗಿ ಹೆಸರು ಪಡೆದಿದ್ದ ನವದೆಹಲಿಯ ಮೊಹಮ್ಮದ್ ಅಲಿ ಸ್ಥಾನದಲ್ಲಿ ನಮೂದಾಗಲಿದೆ ಎಂದು ಖಗೇಂದ್ರ ಥಾಪಾ ಮಗರ್ ಅಕಾಡೆಮಿಯ ಅಧ್ಯಕ್ಷ ಮಿನ್ ಬಹಾದುರ್ ರಾಣಾ ಅವರನ್ನು ಉಲ್ಲೇಖಿಸಿ `ದಿ ಹಿಮಾಲಯನ್ ಟೈಮ್ಸ್' ವರದಿ ಮಾಡಿತು.

1994: ಬಿಸಿ ಕಾವಲಿಗೆ ದೋಸೆ ಅಂಟದಂತೆ ಲೇಪಿಸಬಹುದಾದ `ಟೆಫ್ಲಾನ್' ಎಂಬ ಪ್ಲಾಸ್ಟಿಕ್ಕನ್ನು ಡ್ಯೂಪಾಂಟ್ ಸಂಸ್ಥೆಗಾಗಿ ದುಡಿಯುತ್ತಿದ್ದಾಗ ಆಕಸ್ಮಿಕವಾಗಿ ಕಂಡು ಹಿಡಿದ ರಾಸಾಯನಿಕ ತಜ್ಞ ರಾಯ್. ಜೆ. ಪ್ಲುಂಕೆಟ್ ತಮ್ಮ 83ನೇ ವಯಸ್ಸಿನಲ್ಲಿ ಮೃತರಾದರು. ಎರಡನೇ ವಿಶ್ವಸಮರದ ಸಂದರ್ಭದಲ್ಲಿ ಈ ಹೊಸ ಪ್ಲಾಸ್ಟಿಕ್ಕನ್ನು ಲೋಹದ ಉಪಕರಣಗಳ ಸಂರಕ್ಷಣೆಗಾಗಿ ಬಳಸಲಾಯಿತು. ರೇಡಿಯೋ ವಿಕಿರಣ (ರೇಡಿಯಾಕ್ಟಿವ್) ವಸ್ತುಗಳ ಉತ್ಪಾದನೆಯಲ್ಲೂ ಬಳಸಲಾಯಿತು. ಡ್ಯೂಪಾಂಟ್ ಸಂಸ್ಥೆಯು 1960ರಲ್ಲಿ ಟೆಫ್ಲಾನ್ ಬಳಿದ ನಾನ್ ಸ್ಟಿಕ್ ಅಡಿಗೆ ಸಲಕರಣೆಗಳನ್ನು ತನ್ನ ಟ್ರೇಡ್ ಮಾರ್ಕ್ ಹಾಕಿ ಬಿಡುಗಡೆ ಮಾಡಿತು.

1987: ಭಾರತದ ಎರಡನೆಯ ವಿಮಾನವಾಹಕ ನೌಕೆ `ಐ ಎನ್ ಎಸ್ ವಿರಾಟ್' ಭಾರತೀಯ ನೌಕಾಪಡೆಗೆ ಸೇರ್ಪಡೆಯಾಯಿತು.

1954: ಕಲಾವಿದ ಕುಮಾರ ದಾಸ ಡಿ.ಜನನ.

1952: ಸ್ವತಂತ್ರ ಭಾರತದ ಮೊತ್ತ ಮೊದಲನೆಯ ಸಂಸತ್ ಅಧಿವೇಶನ ಆರಂಭವಾಯಿತು. ಪಂಡಿತ್ ಜವಾಹರಲಾಲ್ ನೆಹರೂ ಮರುದಿನ ಸರ್ಕಾರವನ್ನು ರಚಿಸಿದರು. ರಾಜೇಂದ್ರ ಪ್ರಸಾದ್ ಮತ್ತು ಸರ್ವಪಲ್ಲಿ ರಾಧಾಕೃಷ್ಣನ್ ಕ್ರಮವಾಗಿ ಪ್ರಥಮ ಅಧ್ಯಕ್ಷ, ಉಪಾಧ್ಯಕ್ಷರಾದರು.

1949: ಕಲಾವಿದ ಶ್ರೀನಿವಾಸನ್ ಟಿ.ಟಿ. ಜನನ.

1938: ಕಲಾವಿದ ಬಸವರಾಜು ತು.ಮ. ಜನನ.

1937: ವೆಸ್ಟ್ ಮಿನ್ ಸ್ಟರ್ ಅಬ್ಬೆಯಲ್ಲಿ ಬ್ರಿಟನ್ನಿನ ದೊರೆ 6ನೇ ಜಾರ್ಜ್ ಕಿರೀಟಧಾರಣೆ ನಡೆಯಿತು.

1935: ಮದ್ಯವ್ಯಸನದಿಂದ ಸ್ವಯಂ ಮುಕ್ತಿ ಪಡೆಯಲು ನೆರವಾಗುವ `ಆಲ್ಕೋಹಾಲಿಕ್ಸ್ ಅನಾನಿಮಸ್' ಸಂಘಟನೆ ಸ್ಥಾಪನೆಗೆ ನ್ಯೂಯಾರ್ಕಿನಲ್ಲಿ ನಡೆದ ಸಭೆಯೊಂದರಲ್ಲಿ ಸ್ಟಾಕ್ ಬ್ರೋಕರ್ ವಿಲಿಯಂ ಗ್ರಿಫಿತ್ ವಿಲ್ಸನ್ ಮತ್ತು ಸರ್ಜನ್ ರಾಬರ್ಟ್ ಹೊಲ್ ಬ್ರೂಕ್ ಸ್ಮಿತ್ ನಾಂದಿ ಹಾಡಿದರು.

1926: ಕಲಾವಿದ ದ್ವಾರಕಾನಾಥ್ ಟಿ.ವಿ. ಜನನ.

1919: ಖ್ಯಾತ ವಿಮರ್ಶಕ ಕೆ. ನರಸಿಂಹ ಮೂರ್ತಿ (1919-1999) ಅವರು ಕೃಷ್ಣಮೂರ್ತಿ- ಸಾವಿತ್ರಮ್ಮ ದಂಪತಿಯ ಪುತ್ರನಾಗಿ ಕೋಲಾರ ಜಿಲ್ಲೆಯ ಗೌರಿಬಿದನೂರಿನ ಮಂಚೇನಹಳ್ಳಿಯಲ್ಲಿ ಜನಿಸಿದರು. ಹೈಸ್ಕೂಲು ಓದುತ್ತಿರುವಾಗಲೇ ಪದ್ಯರಚನೆ ಆರಂಭಿಸಿದ ನರಸಿಂಹಮೂರ್ತಿ ಕರ್ನಾಟಕ ಸರ್ಕಾರದಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸುತ್ತಲೇ ಸಾಹಿತ್ಯ ಕೃಷಿಯನ್ನೂ ಮುಂದುವರೆಸಿ ಗಮನಾರ್ಹ ಕೃತಿಗಳನ್ನು ನೀಡಿದರು. ಆರ್. ಕಲ್ಯಾಣಮ್ಮನವರ ಪತ್ರಿಕೆ `ಸರಸ್ವತಿ' ಮದ್ರಾಸಿನ (ಈಗಿನ ಚೆನ್ನೈ) ಇಂಗ್ಲಿಷ್ ಪತ್ರಿಕೆ `ಮೈ ಮ್ಯಾಗಜಿನ್', `ಅರುಣ', `ಸುಬೋಧ', `ಪ್ರಬುದ್ಧ ಕರ್ನಾಟಕ'ಗಳಲ್ಲಿ ಅವರ ಕಥೆಗಳು, ಲೇಖನಗಳು ಪ್ರಕಟವಾಗಿದ್ದವು. ವಿಶ್ವದ ಹಲವು ಭಾಷೆಗಳ ಅತ್ಯುತ್ತಮ ಕೃತಿಗಳನ್ನೂ ಕನ್ನಡಿಗರಿಗೆ ಅವರು `ಕನ್ನಡಪ್ರಭ' ಪತ್ರಿಕೆಯ ಸಾಹಿತ್ಯ ಲೋಕ ಅಂಕಣದ ಮೂಲಕ ಪರಿಚಯಿಸಿದ್ದಾರೆ. 1999ರ ಜೂನ್ 12ರಂದು ಅವರು ನಿಧನರಾದರು.

1899: ಮೂಗೂರು ಅಮೃತಪ್ಪನವರಿಂದ ಕಟ್ಟುನಿಟ್ಟಾಗಿ ವ್ಯವಸ್ಥೆಗೊಳಿಸಿ, ನೃತ್ಯಕ್ಕೊಂದು ಕ್ರಮಬದ್ಧ ಪದ್ಧತಿಯನ್ನು ಅಳವಡಿಸಿ ಮೂಗೂರು ಶೈಲಿ ಎಂಬ ಒಂದು ಪರಂಪರೆಯನ್ನೇ ಹುಟ್ಟು ಹಾಕಿದ ಕಲಾವಿದೆ ಮೂಗೂರು ಜೇಚಮ್ಮ (12-5-1899ರಿಂದ 15-8-1983) ಅವರು ಮೈಸೂರು ಜಿಲ್ಲೆಯ ಮೂಗೂರಿನಲ್ಲಿ ಜನಿಸಿದರು.

1895: ಚಿಂತಕ ಜಿಡ್ಡು ಕೃಷ್ಣಮೂರ್ತಿ ಈದಿನ ಮದನಪಲ್ಲಿಯಲ್ಲಿ ಜನಿಸಿದರು.

1820: `ಲೇಡಿ ವಿದ್ ದಿ ಲ್ಯಾಂಪ್' ಎಂದೇ ಖ್ಯಾತರಾದ ದಾದಿ ಫ್ಲಾರೆನ್ಸ್ ನೈಟಿಂಗೇಲ್ ಈದಿನ ಇಟಲಿಯಲ್ಲಿ ಜನಿಸಿದರು. ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದರೂ 17ನೇ ವಯಸ್ಸಿನಲ್ಲೇ ದಾದಿ (ನರ್ಸಿಂಗ್) ವೃತ್ತಿಯನ್ನು ಬದುಕಿನ ವೃತ್ತಿಯಾಗಿ ಅಂಗೀಕರಿಸಿ ಸಮಾಜದಲ್ಲಿ ಹಿಂದುಳಿದವರು, ಆರ್ಥಿಕವಾಗಿ ಬಡವರಾದವರಿಗೆ ಅಗತ್ಯ ವೈದ್ಯಕೀಯ ನೆರವು ಒದಗಿಸುವ ಸಂಕಲ್ಪ ಮಾಡಿದರು. 1854ರ ಅಕ್ಟೋಬರ್ 21ರಂದು ಕ್ರಿಮಿಯನ್ ಯುದ್ಧದಲ್ಲಿ ಗಾಯಗೊಂಡಿದ್ದ ಸೈನಿಕರಿಗೆ ನೈಟಿಂಗೇಲ್ ತನ್ನ 38 ಮಂದಿ ದಾದಿಯರ ತಂಡದೊಂದಿಗೆ ತೆರಳಿ ಸೇವೆ ಸಲ್ಲಿಸಿದರು. ಫ್ಲಾರೆನ್ಸ್ ನೈಟಿಂಗೇಲ್ ಸೇವೆಯನ್ನು ಜನ ಮರೆಯಲಿಲ್ಲ. ಆಕೆಯ ನೆನಪಿಗಾಗಿ ಲಂಡನ್ನಿನ ವಾಟರ್ಲೂ ಅರಮನೆಯಲ್ಲಿ ಆಕೆಯ ಬೃಹತ್ ಪ್ರತಿಮೆಯನ್ನು ನಿಲ್ಲಿಸಿದರು.

No comments:

Post a Comment