Thursday, May 10, 2018

ಇಂದಿನ ಇತಿಹಾಸ History Today ಮೇ 09

ಇಂದಿನ ಇತಿಹಾಸ History Today ಮೇ 09
2018: ವಾಷಿಂಗ್ಟನ್/ಬೆಂಗಳೂರು: ಭಾರತದ ಬೃಹತ್ ಇ-ಕಾಮರ್ಸ್ ಸಂಸ್ಥೆಯಾಗಿರುವ ಫ್ಲಿಪ್ ಕಾರ್ಟ್‌ನ್ನು ಅಮೆರಿಕದ ಚಿಲ್ಲರೆ ಮಾರಾಟ ದೈತ್ಯ ವಾಲ್ ಮಾರ್ಟ್ ಇಂಕ್ ಖರೀದಿಸಿತು. ಫ್ಲಿಪ್ ಕಾರ್ಟ್ ಸಂಸ್ಥೆಯ ಶೇಕಡಾ ೭೭ರಷ್ಟು ಶೇರನ್ನು ವಾಲ್ ಮಾರ್ಟ್ ೧೬ ಬಿಲಿಯನ್ (೧೬೦೦ ಕೋಟಿ) ಅಮೆರಿಕನ್ ಡಾಲರ್ ಗಳಿಗೆ ಖರೀದಿ ಮಾಡಿದ್ದು, ಸಂಸ್ಥೆಯ ಈವರೆಗೆನ ಸ್ವಾಧೀನ ವ್ಯವಹಾರಗಳಲ್ಲಿ ಇದು ಅತ್ಯಂತ ದೊಡ್ಡದು.  ೧೧ ವರ್ಷದಷ್ಟು ಹಳೆಯದಾದ ಭಾರತೀಯ ೯-ಕಾಮರ್ಸ್ ಸಂಸ್ಥೆಯ ಖರೀದಿ ವ್ಯವಹಾರ ಮೌಲ್ಯ ೨೦.೮ ಬಿಲಿಯನ್ (೨೦೯೦ ಕೋಟಿ) ಅಮೆರಿಕನ್ ಡಾಲರುಗಳಾಗುತ್ತವೆ.  ಸುಮಾರು ಎರಡು ವರ್ಷಗಳ ಮಾತುಕತೆಗಳ ಬಳಿಕ ಅಂತಿಮಗೊಳಿಸಲಾಗಿರುವ ಈ ಖರೀದಿ ವ್ಯವಹಾರದಿಂದ ಬೆಂಟೋನ್ವಿಲ್ಲೆ, ಅರ್ಕನ್ಸಸ್ ಮೂಲದ ವಾಲ್ ಮಾರ್ಟ್ ಸಂಸ್ಥೆಗೆ ಅಮೆಜಾನ್.ಕಾಮ್ ವಿರುದ್ಧ ಆನ್ ಲೈನ್ ಮಾರುಕಟ್ಟೆಗೆ ಭಾಋಇ ಒತ್ತು ಸಿಗಲಿದೆ. ಅಮೆಜಾನ್.ಕಾಮ್ ಕೂಡಾ ಫ್ಲಿಪ್ ಕಾರ್ಟ್ ಸಂಸ್ಥೆಯನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳಲು ಸ್ಪರ್ಧೆ ನಡೆಸಿತ್ತು ಎನ್ನಲಾಯಿತು. ವಾಲ್ ಮಾರ್ಟ್ ಸಂಸ್ಥೆಯ ಖರೀದಿ ಒಪ್ಪಂದದ ಬಳಿಕ, ೨೦೦೭ರಲ್ಲಿ ಬಿನ್ನಿ ಬನ್ಸಲ್ ಅವರ ಜೊತೆ ಸೇರಿ ಫ್ಲಿಪ್ ಕಾರ್ಟ್ ಸಂಸ್ಥೆಯನ್ನು ಸ್ಥಾಪಿಸಿದ್ದ ಸಚಿನ್ ಬನ್ಸಲ್ ಅವರು ಕಂಪೆನಿಯಿಂದ ಹೊರ ನಡೆಯಲಿದ್ದಾರೆ.  ‘ಭಾರತವು ತನ್ನ ಗಾತ್ರ ಮತ್ತು ಬೆಳವಣಿಗೆಯ ಪ್ರಮಾಣದ ಹಿನ್ನೆಲೆಯಲ್ಲಿ ವಿಶ್ವದಲ್ಲೇ ಅತ್ಯಂತ ಆಕರ್ಷಕ ಚಿಲ್ಲರೆ ವ್ಯವಹಾರದ ಮಾರುಕಟ್ಟೆಯಾಗಿದೆ. ಇ-ಕಾಮರ್ಸ್ ಮಾರುಕಟ್ಟೆಯಲ್ಲಿ ಪಾಲುದಾರ ಕಂಪೆನಿಯ ಜೊತೆಗಿನ ನಮ್ಮ ಹೂಡಿಕೆಯು ಇ-ಕಾಮರ್ಸ್ ಮಾರುಕಟ್ಟೆ ಪರಿವರ್ತನೆಗೆ ಉತ್ತಮ ಅವಕಾಶವಾಗಲಿದೆ ಎಂದು ವಾಲ್ ಮಾರ್ಟ್ ಮುಖ್ಯ ಎಕ್ಸಿಕ್ಯೂಟಿವ್ ಅಧಿಕಾರಿ ಡೌಗ್ ಮೆಕ್ ಮಿಲನ್ ಅವರು ಬುಧವಾರ ಬೆಂಗಳೂರಿನಲ್ಲಿ ಪ್ರಕಟಣೆಯಲ್ಲಿ ತಿಳಿಸಿದರು.  ಇದಕ್ಕೆ ಮುನ್ನ ಭಾರತದ ಬೃಹತ್ ಇ-ಕಾಮರ್ಸ್ ಸಂಸ್ಥೆಯಾಗಿರುವ ಫ್ಲಿಪ್ ಕಾರ್ಟ್‌ನ್ನು ಅಮೆರಿಕದ ಚಿಲ್ಲರೆ ಮಾರಾಟ ದೈತ್ಯ ವಾಲ್ ಮಾರ್ಟ್ ಖರೀದಿಸಿದೆ ಎಂದು ಸಾಫ್ಟ್ ಬ್ಯಾಂಕ್ ಸಮುದಾಯದ ಮುಖ್ಯ ಎಕ್ಸಿಕ್ಯೂಟಿವ್ ಮಾಸೆಯೊಶಿ ಸೊನ್ ಬುಧವಾರ ವಾಷಿಂಗ್ಟನ್ ನಲ್ಲಿ ಪ್ರಕಟಿಸಿದ್ದರು. ಮೇ 8ರ ಮಂಗಳವಾರ ರಾತ್ರಿ ವ್ಯವಹಾರ ಕುದುರಿಸಲಾಗಿದೆ ಎಂದು ನುಡಿದ ಅವರು ಇದರೊಂದಿಗೆ ವಾಲ್ ಮಾರ್ಟ್‌ನ ಭಾರತೀಯ ಆನ್ ಲೈನ್ ಮಾರುಕಟ್ಟೆ ದುಪ್ಪಟ್ಟಾಗಲಿದೆ ಎಂದು ಹೇಳಿದರು. ಫ್ಲಿಪ್ ಕಾರ್ಟ್‌ನಲ್ಲಿ ಸೊನ್ ಅವರ ಸಾಫ್ಟಬ್ಯಾಂಕ್ ಸಮುದಾಯ ಶೇಕಡಾ ೨೦ರಷ್ಟು ಬಂಡವಾಳ ಹೊಂದಿದೆ.  ಫ್ಲಿಪ್ ಕಾರ್ಟ್‌ಗೆ ಕಳೆದ ವರ್ಷ ೧೨ ಬಿಲಿಯನ್ (೧೨೦೦ ಕೋಟಿ) ಡಾಲರ್ ಬೆಲೆ ಕಟ್ಟಲಾಗಿತ್ತು ಎಂದು ಸಂಶೋಧಕ ಸಇಬಿ ಇನ್ ಸೈಟ್ಸ್ ಹೇಳಿತು. ಅಮೆಜಾನ್ ಮೇಲೆ ಕಣ್ಣು: ಫ್ಲಿಪ್ ಕಾಟ್ ಖರೀದಿ ವ್ಯವಹಾರವು ವಾಲ್ ಮಾರ್ಟ್‌ಗೆ ಅಮೆಜಾನ್ ನಂತಹ ಸಂಸ್ಥೆಗಳ ಮೂಲಕ ಆನ್ ಲೈನ್ ಮಾರುಕಟ್ಟೆ ಕ್ಷೇತ್ರಕ್ಕೆ ಬದಲಾಗುತ್ತಿರುವ ಗ್ರಾಹಕರನ್ನು ತನ್ನತ್ತ ಎಳೆದುಕೊಳ್ಳಲು ಅನುಕೂಲವಾಗಲಿದೆ. ಪ್ರಸ್ತುತ ವಿಶ್ವಾದ್ಯಂತ ೧.೩ ಶತಕೋಟಿ (೧೩೦ ಕೋಟಿ) ಜನ ಆನ್ ಲೈನ್ ಮಾರುಕಟ್ಟೆಯನ್ನು ನೆಚ್ಚಿಕೊಂಡಿದ್ದು, ಆನ್ ಲೈನ್ ಮಾರುಕಟ್ಟೆಗೆ ಬದಲಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ.  ಫ್ಲಿಪ್ ಕಾರ್ಟ್ ಗೂ ಈ ವ್ಯವಹಾರವು ಅಮೆಜಾನ್ ಜೊತೆಗಿನ ಚಿಲ್ಲರೆ ಮಾರಾಟಕ್ಕೆ ಹೆಚ್ಚುವರಿ ಬಂಡವಾಳವನ್ನು ಒದಗಿಸಿಕೊಡಲಿದೆ.  ಭಾರತದ  ೩೦ ಶತಕೋಟಿ ಡಾಲರ್ ಇ-ಮಾರುಕಟ್ಟೆಯ ಬಹುತೇಕ ಪಾಲನ್ನು ಫ್ಲಿಪ್ ಕಾರ್ಟ್ ಮತ್ತು ಅಮೆಜಾನ್ ನಿಯಂತ್ರಿಸಿದೆ. ೨೦೨೬ರ ವೇಳೆಗೆ ಇ-ಕಾಮರ್ಸ್ ಮಾರುಕಟ್ಟೆ ೨೦೦ ಶತಕೋಟಿ ಡಾಲರ್ ಗಳಿಗೆ ಏರುವ ನಿರೀಕ್ಷೆ ಇದೆ ಎಂದು ಮೋರ್ಗನ್ ಸ್ಟಾನ್ಲಿ ಅಂದಾಜು ಮಾಡಿದ್ದಾರೆ.
ಫ್ಲಿಪ್ ಕಾರ್ಟ್‌ನ್ನು ವಾಲ್ ಮಾರ್ಟ್ ಖರೀದಿಸಿದ್ದರಿಂದ ಸಾಫ್ಟ್ ಬ್ಯಾಂಕಿನ ೨-೫ ಬಿಲಿಯನ್ (೨೫೦ ಕೋಟಿ ಡಾಲರ್) ಬಂಡವಾಳದ ಮೌಲ್ಯ ೪ ಬಿಲಿಯನ್ (೪೦೦ ಕೋಟಿ) ಡಾಲರ್ ಗಳಿಗೆ ಏರಲಿದೆ ಎಂದು ಸೊನ್ ಹೇಳಿದರು.  ಅಂದಾಜು ೧೫ ಬಿಲಿಯನ್ (೧೫೦೦ ಕೋಟಿ) ಡಾಲರ್ ನಿಂದ ೨೦ ಬಿಲಿಯನ್ (೨೦೦೦ ಕೋಟಿ) ಡಾಲರ್ ಮೌಲ್ಯದ ಖರೀದಿ ವ್ಯವಹಾರವನ್ನು ಬುಧವಾರ ತಡವಾಗಿ ಅಧಿಕೃತವಾಗಿ ಪ್ರಕಟಿಸುವ ನಿರೀಕ್ಷೆ ಇದೆ. ಫ್ಲಿಪ್ ಕಾರ್ಟ್ ಕೇಂದ್ರ ಕಚೇರಿ ಇರುವ ಬೆಂಗಳೂರಿನಲ್ಲಿ ವಾಲ್ ಮಾರ್ಟ್ ಸಿಇಒ ಡೌಗ್ ಮೆಕ್ ಮಿಲನ್ ಅವರು ಒಪ್ಪಂದ ವಿವರಗಳನ್ನು ಪ್ರಕಟಿಸುವರು ಎನ್ನಲಾಯಿತು.  ಫ್ಲಿಪ್ ಕಾರ್ಟ್‌ನ ಶೇಕಡಾ ೭೦ರಷ್ಟು ಶೇರನ್ನು ವಾಲ್ ಮಾರ್ಟ್ ತನ್ನ ವಶಕ್ಕೆ ತೆಗೆದುಕೊಳ್ಳಲಿದೆ ಎಂದು ನಿರೀಕ್ಷಿಸಲಾಗಿದ್ದು, ಇದು ವಿಶ್ವದ ಅತಿ ದೊಡ್ಡ ಇ-ಕಾಮರ್ಸ್ ಸ್ವಾಧೀನ ಎನಿಸಿಕೊಳ್ಳಲಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದರು.  ಭಾರತೀಯ ಮಾರುಕಟ್ಟೆಯನ್ನು ೨೦೧೩ರಲ್ಲಿ ಪ್ರವೇಶಿಸಿರುವ ಅಮೆಜಾನ್ ಅಂದಿನಿಂದ ತನ್ನ ಮಾರುಕಟ್ಟೆಯನ್ನು ಅತಿವೇಗವಾಗಿ ಬೆಳೆಸಿಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಫ್ಲಿಪ್ ಕಾರ್ಟನ್ನು ಖರೀದಿಸಲ ವಾಲ್ ಮಾರ್ಟ್ ಸಿದ್ಧತೆ ನಡೆಸುತ್ತಿದೆ ಎಂಬ ಊಹಾಪೋಹ ಕಳೆದ ಕೆಲವು ತಿಂಗಳುಗಳಿಂದ ಹರಡಿತ್ತು. ಆದರೆ ಉಭಯ ಕಂಪೆನಿಗಳೂ ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದವು. ಕಳೆದವಾರ ಫ್ಲಿಪ್ ಕಾರ್ಟ್ ಆಡಳಿತ ಮಂಡಳಿ ಕಂಪೆನಿಯ ಶೇಕಡಾ ೭೫ರಷ್ಟು ಶೇರನ್ನು ವಾಲ್ ಮಾರ್ಟ್ ನೇತೃತ್ವದ ಸಮೂಹಕ್ಕೆ ಮಾರಾಟ ಮಾಡಲು ಒಪ್ಪಿತ್ತು ಎಂದು ಹಲವು ಮಾಧ್ಯಮ ವರದಿಗಳು ಹೇಳಿದವು. ೨೦೦೭ರಲ್ಲಿ ಅಮೆಜಾನ್ ನ ಮಾಜಿ ನೌಕರರಾದ ಸಚಿನ್ ಬನ್ಸಲ್ ಮತ್ತು ಬಿನ್ನಿ ಬನ್ಸಲ್ ಅವರು ಸ್ಥಾಪಿಸಿದ ಫ್ಲಿಪ್ ಕಾರ್ಟ್ ಕಳೆದ ವರ್ಷ ಭಾರತದಲ್ಲಿ ಅಂದಾಜು ೨೧ ಬಿಲಿಯನ್ (೨೧೦೦ ಕೋಟಿ) ಡಾಲರ್ ಇ-ಕಾಮರ್ಸ್ ವ್ಯವಹಾರ ನಡೆಸಿತ್ತು ಎಂದು ಮಾರುಕಟ್ಟೆ ಸಂಶೋಧನಾ ಕಂಪೆನಿ ಫಾರ್ರೆಸ್ಟರ್ ಹೇಳಿದೆ. ೧೨೫ ಕೋಟಿ ಜನ ಇಂಟರ್ ನೆಟ್ ಸಂಪರ್ಕವನ್ನು ಬಳಸಿಕೊಳ್ಳುವ ಮೂಲಕ ಇದು ಇನ್ನಷ್ಟು ಹೆಚ್ಚು ನಿರೀಕ್ಷೆಯಿದೆ ಎಂದು ಫಾರ್ರೆಸ್ಟರ್ ಅಂದಾಜು ಮಾಡಿದೆ. ಅಮೆಜಾನ್ ನಂತೆ ಮೊದಲಿಗೆ ಆನ್ ಲೈನ್ ಬುಕ್ ಸ್ಟೋರ್ ಆಗಿ ಆರಂಭವಾದ ಫ್ಲಿಪ್ ಕಾರ್ಟ್ ಈಗ ಸಾಬೂನು, ಶೂ, ಸೋಫಾ, ಸೌಂದರ್‍ಯ ಸಾಧನಗಳಿಂದ ಹಿಡಿದು ಮೊಬೈಲ್ ಫೋನ್, ಟೆಲಿವಿಷನ್ ಸಹಿತ ಎಲ್ಲವನ್ನೂ ತನ್ನ ಮಾರಾಟ ವ್ಯಾಪ್ತಿಗೆ ತಂದಿದೆ.

2018: ವಿಶ್ವಸಂಸ್ಥೆ : ೨೦೧೮-೧೯ರಲ್ಲಿ ಭಾರತವು ವಿಶ್ವದ ಅತ್ಯಂತ ವೇಗದಲ್ಲಿ ಬೆಳೆಯುವ ಪ್ರಮುಖ ಆರ್ಥಿಕತೆ ಎನಿಸಿಕೊಳ್ಳಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಬುಧವಾರ ಪುನರುಚ್ಚರಿಸಿತು.  ಹಾಗೆಯೇ ಭಾರತ ೨೦೧೮ರಲ್ಲಿ ಶೇ.೭.೪ ಒಟ್ಟು ಆಂತರಿಕ ಉತ್ಪನ್ನವನ್ನು (ಜಿಡಿಪಿ) ಮತ್ತು ೨೦೧೯ರಲ್ಲಿ ಶೇ.೭.೮ರ ಒಟ್ಟು ಆಂತರಿಕ ಉತ್ಪನ್ನವನ್ನು (ಜಿಡಿಪಿ) ದಾಖಲಿಸಲಿದೆ ಎಂದು ಐಎಂಎಫ್ ಹೇಳಿತು. ಭಾರತದ ಮಧ್ಯಮ ಅವಧಿಯ ಆರ್ಥಿಕ ಪ್ರಗತಿಯ ವೇಗವು ಹಾಲಿ ಮತ್ತು ಮುಂದಿನ ಹಣಕಾಸು ವರ್ಷದಲ್ಲಿ ಧನಾತ್ಮಕವಾಗಿಯೇ ಮುಂದುವರಿಯಲಿದೆ ಎಂದು ಅದು ತಿಳಿಸಿತು. ಭಾರತಕ್ಕೆ  ಅಹ್ಲಾದಕರ ಎನಿಸುವ ಈ ವಿಷಯವನ್ನು ಐಎಂಎಫ್ ತನ್ನ ಏಷ್ಯಾ ಪೆಸಿಫಿಕ್ ರೀಜನಲ್ ಇಕಾನಾಮಿಕ್ ಔಟ್ ಲುಕ್ ವರದಿಯಲ್ಲಿ ಬಹಿರಂಗ ಪಡಿಸಿತು. ಭಾರತವು ನೋಟು ಅಮಾನ್ಯೀಕರಣದ ಪ್ರತಿಕೂಲ ಪರಿಣಾಮಗಳಿಂದ ಈಗ ಚೇತರಿಸಿಕೊಂಡಿದೆ; ಹಾಗೆಯೇ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)  ಅನುಷ್ಠಾನದ ಬಾಲಗ್ರಹ ಪೀಡೆಯಿಂದಲೂ ಮುಕ್ತವಾಗುತ್ತಿದೆ. ಭಾರತದ ಅತ್ಯಂತ ಸದೃಢ ಖಾಸಗಿ ಬಳಕೆದಾರಿಕೆಯ ಬಲದಿಂದ ದೇಶವು ನೋಟು ಅಮಾನ್ಯೀಕರಣ ಮತ್ತು ಜಿಎಸ್ಟಿ ಬಾಲಗ್ರಹ ಪೀಡೆಯಿಂದ ಹೊರಬರಲು ಸಾಧ್ಯವಾಗಿದೆ ಎಂದು ಐಎಂಎಫ್ ವರದಿ ಹೇಳಿತು. ದೇಶದ ಗ್ರಾಹಕ ವಸ್ತು ಹಣದುಬ್ಬರ ಬೆಲೆ ಸೂಚ್ಯಂಕವು ಶೇ.೪ರ ಮಟ್ಟದಲ್ಲಿ, ಶೇ.೨ರಷ್ಟು ಹೆಚ್ಚು ಅಥವಾ ಕಡಿಮೆ ವಲಯದಲ್ಲಿ, ಇರಬೇಕೆಂಬ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಯೋಜನೆ ಪ್ರಕಾರವೇ ಹಣದುಬ್ಬರ ಇರಲಿದೆ ಎಂದು ಐಎಂಎಫ್ ವರದಿ ವಿಶ್ವಾಸ ವ್ಯಕ್ತಪಡಿಸಿತು. ಏನಿದ್ದರೂ, ಹಣದುಬ್ಬರ ಒತ್ತಡ ಹೆಚ್ಚುತ್ತಿರುವ ಕಾರಣ ಆರ್ ಬಿಐ  ತನ್ನ ಹಣಕಾಸು ನೀತಿಯನ್ನು ಬಿಗಿಯಾಗಿ ಇರಿಸಿಕೊಳ್ಳುವ ಅಗತ್ಯವಿದೆ ಎಂದೂ ಐಎಂಎಫ್ ಭಾರತಕ್ಕೆ ಎಚ್ಚರಿಕೆಯನ್ನೂ ನೀಡಿತು. ವರದಿಯ ಪ್ರಕಾರ ವಿಶ್ವ ಆರ್ಥಿಕತೆಯ ಬೆಳವಣಿಗೆಯ ಶೇಕಡಾ ೬೦ಕ್ಕೂ ಹೆಚ್ಚು ಚೀನಾ ಮತ್ತು ಭಾರತದಿಂದಲೇ ಬರುತ್ತದೆ ಎಂದು ಹೇಳಲಾಯಿತು.  ‘ಆದರೆ ಅಪಾಯಗಳು ಮತ್ತು ಸವಾಲುಗಳೂ ಮುಂದಿವೆ. ಜಾಗತಿಕ ಹಣಕಾಸು ಪರಿಸ್ಥಿತಿಗಳನ್ನು ಬಿಗಿಗೊಳಿಸುವುದರಿಂದ ಹಿಡಿದು, ಆಂತರಿಕ ನೀತಿಗಳತ್ತ ಗಮನ, ನಿಧಾನಗೊಳ್ಳುವ ಉತ್ಪಾದಕತಾ ಬೆಳವಣಿಗೆ, ಡಿಜಿಟಲ್ ಆರ್ಥಿಕತೆಯ ಏರಿಕೆ ಇತ್ಯಾದಿಗಳಲ್ಲಿ ಎದುರಾಗುವ ಅಪಾಯ, ಸವಾಲುಗಳಿಗೆ ಸಜ್ಜಾಗಬೇಕು ಎಂದು ವರದಿ ಹೇಳಿತು. ಏಷ್ಯಾದಲ್ಲಿ ಈ ವರ್ಷ ಮತ್ತು ಮುಂದಿನ ವರ್ಷ ಶೇಕಡ ೫.೬ರಷ್ಟು ಬೆಳವಣಿಗೆ, ಪ್ರಬಲ ಜಾಗತಿಕ ಬೇಡಿಕೆ ಮತ್ತು ಅನುಕೂಲಕರ ನೀತಿಗಳು ಮತ್ತು ಹಣಕಾಸು ಸ್ಥಿತಿಗಳ ನಿರೀಕ್ಷೆ ಇದೆ ಎಂದು ವರದಿ ಹೇಳಿತು.

2018: ನವದೆಹಲಿ: ಆಫ್ಘಾನಿಸ್ಥಾನ-ಕಜಕಸ್ಥಾನ ಗಡಿ ಪ್ರದೇಶದಲ್ಲಿ ಸಂಜೆ ಭೂಕಂಪ ಸಂಭವಿಸಿದ್ದು, ದೆಹಲಿ ಸೇರಿದಂತೆ ಉತ್ತರ ಭಾರತದ ಹಲವಡೆಗಳಲ್ಲೂ ಭೂಮಿ ಕಂಪಿಸಿತು. ಆಫ್ಘಾನಿಸ್ಥಾನ - ಕಜಕಸ್ಥಾನದಲ್ಲಿ ಭೂಕಂಪದ ಕೇಂದ್ರವಿತ್ತು, ರಿಕ್ಟರ್ ಮಾಪಕದಲ್ಲಿ ೬.೨ರಷ್ಟು ಕಂಪನದ ತೀವ್ರತೆ ಇತ್ತು ಎಂದು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ತಿಳಿಸಿದರು. ನವದೆಹಲಿ, ಪಂಜಾಬ್, ಜಮ್ಮು ಕಾಶ್ಮೀರ, ಉತ್ತರ ಪ್ರದೇಶ, ಹಿಮಾಚಲ ಪ್ರದೇಶದಲ್ಲಿ ಭೂಕಂಪನದ ಅನುಭವವಾಯಿತು. ಭೂಕಂಪನದ ಅನುಭವವಾಗುತ್ತಿದ್ದಂತೆ  ಕಟ್ಟಡಗಳ ಒಳಗಿದ್ದವರು ಆತಂಕದಿಂದ ಹೊರಕ್ಕೆ ಓಡಿದರು.  ಸಂಜೆ ೪.೧೫ರ ಸುಮಾರಿಗೆ ಭೂಕಂಪನ ಅನುಭವವಾಯಿತು. ಪಂಜಾಬ್, ಹರಿಯಾಣ, ಜಮ್ಮು ಕಾಶ್ಮೀರ, ನವದೆಹಲಿಯಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಭಾರತೀಯ ಪವನಶಾಸ್ತ್ರ ಇಲಾಖೆ ಅಧಿಕಾರಿಗಳು ತಿಳಿಸಿದರು.  ನವದೆಹಲಿಯಲ್ಲ್ಲಿ ಲಘು ಭೂಕಂಪನದ ಅನುಭವವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು. ಪ್ರಾಥಮಿಕ ಮಾಹಿತಿಗಳ ಪ್ರಕಾರ ಯಾವುದೇ ಸಾವು-ನೋವು, ಆಸ್ತಿಪಾಸ್ತಿ ನಷ್ಟದ ವರದಿಯಾಗಿಲ್ಲ.

2018: ನವದೆಹಲಿ: ಸಂಸದೀಯ ಸ್ಥಾಯಿ ಸಮಿತಿಗಳ ಪ್ರಕಟಿತ ವರದಿಗಳನ್ನು ಸಾಕ್ಷಿಯಾಗಿ ಅಂಗೀಕರಿಸುವುದು ಸಂಸದೀಯ ಹಕ್ಕಿನ ಉಲ್ಲಂಘನೆಯಾಗುವುದಿಲ್ಲ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ದೀಪಕ್ ಮಿಶ್ರ ನೇತೃತ್ವದ ಸುಪ್ರೀಂಕೋರ್ಟಿನ ಪಂಚ ಸದಸ್ಯ ಸಂವಿಧಾನ ಪೀಠವು ತೀರ್ಪು ನೀಡಿತು. ಮೂರು ಪ್ರತ್ಯೇಕ ಆದರೆ ಸಹಮತದ ತೀರ್ಪುಗಳಲ್ಲಿ ಪೀಠವು ಪ್ರಕಟಿತ ವರದಿಯನ್ನು ನ್ಯಾಯಾಲಯವು ಸಾಕ್ಷಿಯಾಗಿ ಅಂಗೀಕರಿಸಿದರೆ ಮತ್ತು ಅದರ ವಿವರಗಳನ್ನು ವಿಶ್ಲೇಷಿಸಿದರೆ, ಸಂಸತ್ತು ಮತ್ತು ನ್ಯಾಯಾಂಗದ ನಡುವಣ ಅಧಿಕಾರ ಹಂಚಿಕೆಯ ನೀತಿಯ ಅಡಿಯಲ್ಲಿ ಶಾಸಕಾಂಗ ಮತ್ತು ನ್ಯಾಯಾಂಗದ ಸೂಕ್ಷ್ಮ ಸಮತೋಲನಕ್ಕೆ ಧಕ್ಕೆ ಆಗುವುದಿಲ್ಲ ಎಂದು ಹೇಳಿತು.  ಗರ್ಭಕಂಠದ ಕ್ಯಾನ್ಸರ್ ಲಸಿಕೆಗಳಿಗೆ ಸಂಬಂಧಿಸಿದ ಅರ್ಜಿಯೊಂದರ ಮೇಲೆ ಪೀಠ ಈ ತೀರ್ಪು ನೀಡಿತು. ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಕೊಲಿನ್ ಗೋನ್ಸಾಲ್ವೆಸ್ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣಕ್ಕೆ ಸಂಬಂಧಿಸಿದ ಸಂಸದೀಯ ಸ್ಥಾಯಿ ಸಮಿತಿಯ ೮೧ನೇ ವರದಿಯನ್ನು ಉಲ್ಲೇಖಿಸಿದ್ದರು. ವರದಿಯು ಹ್ಯೂಮನ್ ಪಪಿಲ್ಲೊಮಾ ವೈರಸ್ (ಎಚ್ ಪಿವಿ) ಲಸಿಕೆಗೆ ಸಂಬಂಧಿತ ಔಷಧಗಳ ಕುರಿತದ್ದಾಗಿತ್ತು.  ಫಾರ್ಮಾ ಕಂಪೆನಿಗಳ ನಿಲುವು: ಅರ್ಜಿದಾರರು ಸಂಸದೀಯ ಸಮಿತಿ ವರದಿಯನ್ನು ನ್ಯಾಯಾಲಯದಲ್ಲಿ ಅವಲಂಬಿಸುವುದನ್ನು ಫಾರ್ಮಾಸ್ಯೂಟಿಕಲ್ ಕಂಪೆನಿಗಳು ವಿರೋಧಿಸಿದ್ದವು.  ಅರ್ಜಿದಾರರ ಅಹವಾಲುಗಳನ್ನು ಬೆಂಬಲಿಸಿದ ಪೀಠವು ’ನ್ಯಾಯಾಲಯಗಳು ಸಂಸತ್ತಿನ ಕೆಲಸವನ್ನು ಉಪೇಕ್ಷಿಸುವಂತಿಲ್ಲ. ಮಾಹಿತಿಯನ್ನು ಮುಚ್ಚಿಹಾಕುವಲ್ಲಿ ನ್ಯಾಯಾಲಯಗಳೂ ಭಾಗಿಯಾದರೆ ಅದು ನಿರಂಕುಶತ್ವ ಅಥವಾ ಸರ್ವಾಧಿಕಾರಕ್ಕೆ ದಾರಿ ಮಾಡುತ್ತದೆ ಎಂದು ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಎ.ಕೆ. ಸಿಕ್ರಿ ಅವರು ತಮ್ಮ ಅಭಿಪ್ರಾಯವನ್ನು ತಿಳಿಸಿದರು. ಮುಖ್ಯ ನ್ಯಾಯಮೂರ್ತಿ ಮಿಶ್ರ ಅವರು ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ಅವರ ಜೊತೆಗೆ ನೀಡಿದ ತಮ್ಮ ಅಭಿಪ್ರಾಯದಲ್ಲಿ ಸಂಸದೀಯ ಸ್ಥಾಯಿ ಸಮಿತಿಗಳ ಪ್ರಕಟಿತ ವರದಿಗಳನ್ನು ನ್ಯಾಯಾಲಯಗಳು ಸಾಕ್ಷಿಯಾಗಿ ಪರಿಗಣಿಸಿದರೆ ಅದು ಸಂಸತ್ತಿನ ಹಕ್ಕು ಬಾಧ್ಯತೆಗಳ ಉಲ್ಲಂಘನೆ ಆಗುವುದಿಲ್ಲ ಎಂದು ಹೇಳಿದರು. ಸಂಸದೀಯ ವರದಿಗಳು ಸಾಕ್ಷ್ಯಾಧಾರ (ಎವಿಡೆನ್ಸ್) ಕಾಯ್ದೆಯ ಸೆಕ್ಷನ್ ೫೭(೪)ರ ವ್ಯಾಪ್ತಿಗೆ ಬರುತ್ತವೆ ಎಂದು ನ್ಯಾಯಮೂರ್ತಿ ಮಿಶ್ರ ಹೇಳಿದರು.  ಸಂಸದೀಯ ಸಮಿತಿಗಳ ಪ್ರಕಟಿತ ವರದಿಗಳು ಸಾರ್ವಜನಿಕ ದಾಖಲೆಗಳು, ಅವುಗಳನ್ನು ಸಾಕ್ಷಿಯಾಗಿ ಬಳಸಲು ಲೋಕಸಭಾ ಸಭಾಧ್ಯಕ್ಷರ ಪೂರ್ವಾನುಮತಿ ಪಡೆಯುವ ಅಗತ್ಯವಿಲ್ಲ ಎಂದೂ ಪೀಠ ಹೇಳಿತು. ಅಧಿಕಾರ ಹಂಚಿಕೆಯ ಸಿದ್ಧಾಂತವು ಒಂದು ಅಂಗ ಮತ್ತು ಒಂದು ಕಾನೂನು ಕಲ್ಪನೆಗಿಂತ ದೂರ ಹೋಗಿದೆ ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದರು. ಆಡಳಿತದ ಪ್ರತಿಯೊಂದು ತೋಳು ಕೂಡಾ ಇನ್ನೊಂದು ತೋಳಿಗೆ ಅದರ ಕರ್ತವ್ಯ ನಿರ್ವಹಿಸುವಲ್ಲಿ ಪೂರಕವಾಗಿ ವರ್ತಿಸಬೇಕು ಎಂದು ಅವರು ನುಡಿದರು. ಸಂಸದೀಯ ಸ್ಥಾಯಿ ಸಮಿತಿಗಳ ವರದಿಗಳನ್ನು ಚಾರಿತ್ರಿಕ ವಾಸ್ತವಾಂಶ, ಸಂಬಂಧಿತ ಸಮಸ್ಯೆಯ ಸ್ವರೂಪ, ಸಾಮಾಜಿಕ ಸಮಸ್ಯೆಯ ಕಾರಣ ಮತ್ತು ಅದರ ಪರಿಹಾರಗಳ ಅಧ್ಯಯನ ಸಲುವಾಗಿ, ಹೊರತು ಪಡಿಸಲು ಯಾವುದೇ ಕಾರಣಗಳಿಲ್ಲ ಎಂದು ತೀರ್ಪುಗಳು ಹೇಳಿದವು.  ಪ್ರಕಟಿತ ಸಂಸದೀಯ ವರದಿ ಮೇಲಿನ ನ್ಯಾಯೋಚಿತ ಟೀಕೆಯು ಸಂಸದೀಯ ಹಕ್ಕು ಬಾಧ್ಯತೆಗಳ ಉಲ್ಲಂಘನೆ ಆಗುವುದಿಲ್ಲ ಎಂದು ನ್ಯಾಯಮೂರ್ತಿ ಅಶೋಕ ಭೂಷಣ್ ತಮ್ಮ ಅಭಿಪ್ರಾಯ ನೀಡಿದರು.  ನ್ಯಾಯಾಂಗ ಕಲಾಪಗಳಲ್ಲಿ ಸಂಸದೀಯ ಸಮಿತಿ ವರದಿಯನ್ನು ಅವಲಂಬಿಸಬಹುದೇ ಎಂದು ಕಾನೂನಿನ ಪ್ರಶ್ನೆಯನ್ನು ೨೦೧೭ರ ಏಪ್ರಿಲ್‌ನಲ್ಲಿ ಸಂವಿಧಾನ ಪೀಠಕ್ಕೆ ಒಪ್ಪಿಸಲಾಗಿತ್ತು.

2018: ನವದೆಹಲಿ: ಆನ್ ಲೈನ್ ಮೂಲಕ ಪುಸ್ತಕ ಮಾರಾಟದೊಂದಿಗೆ ಆರಂಭವಾಗಿ ಕೇವಲ ೧೧ ವರ್ಷಗಳ ಒಳಗಾಗಿ ವಿಶ್ವದ ಅತಿದೊಡ್ಡ ಚಿಲ್ಲರೆ ಮಾರಾಟ ಸಂಸ್ಥೆಯ ವಾಲ್ ಮಾರ್ಟ್ ಕೈಡಿಯುವವರೆಗಿನ ಯಶೋಗಾಥೆ ಬೆಂಗಳೂರಿನಲ್ಲಿ ಹುಟ್ಟಿದ ಫ್ಲಿಪ್ ಕಾರ್ಟ್ ಕಂಪೆನಿಯದ್ದು. ಫ್ಲಿಪ್ ಕಾರ್ಟ್ ಭಾರತಕ್ಕೆ ಸ್ಟಾರ್ಟಪ್ ಯಶಸ್ಸಿನ ದೊಡ್ಡ ಕೊಡುಗೆಯನ್ನೇ ಕೊಟ್ಟಿದೆ, ತನ್ಮೂಲಕ ಸ್ಟಾರ್ಟಪ್ ಉದ್ಯಮಿಗಳಿಗೆ ಸ್ಫೂರ್ತಿಯ ಮಾದರಿಯನ್ನೂ ನೀಡಿದೆ.  ಅಮೆರಿಕದ ಇ-ಕಾಮರ್ಸ್ ದೈತ್ಯ ಅಮೆಜಾನ್.ಕಾಮ್ ನ ಮಾಜಿ ನೌಕರರಾದ ಸಚಿನ್ ಬನ್ಸಲ್ ಮತ್ತು ಬಿನ್ನಿ ಬನ್ಸಲ್ ಅವರು ೨೦೦೫ರಲ್ಲಿ ಐಐಟಿ- ದೆಹಲಿಯಲ್ಲಿ ಭೇಟಿಯಾಗುವುದರೊಂದಿಗೆ  ಹೊಸ ಉದ್ಯಮದ ಕನಸೊಂದು ಹುಟ್ಟಿತು. ೨೦೦೭ರಲ್ಲಿ ಫ್ಲಿಪ್ ಕಾರ್ಟ್‌ಗೆ ಚಾಲನೆ ಸಿಕ್ಕಿತು. ಕಲ್ಪನೆ ಅತ್ಯಂತ ಸರಳವಾಗಿತ್ತು. ಗ್ರಾಹಕರು ಆನ್ ಲೈನ್ ಮೂಲಕ ವ್ಯಾಪಾರ ಮಾಡಬಹುದು ಮತ್ತು ಪುಸ್ತಕಗಳನ್ನು ಅವರ ಮನೆಗಳಿಗೇ ತಲುಪಿಸಲಾಗುವುದು. ಚೊಚ್ಚಲ ವರ್ಷದಲ್ಲಿ ೨೦ ವ್ಯವಹಾರಗಳನ್ನು ಫ್ಲಿಪ್ ಕಾರ್ಟ್ ದಾಖಲಿಸಿತು. ಇಂಟರ್ ನೆಟ್ ಬಳಕೆಯೇ ಅತ್ಯಂತ ಕಡಿಮೆ ಇದ್ದ ಹಾಗೂ ಇ-ಕಾಮರ್ಸ್ ಎಂಬುದನ್ನು ಕೇಳಿಯೇ ಇರದಿದ್ದ ಆ ಕಾಲದಲ್ಲಿ ಆನ್ ಲೈನ್ ಮೂಲಕ ವಹಿವಾಟು ನಡೆಸುವ ಮಾರ್ಗ ಸುಲಭವಾದದ್ದೇನೂ ಆಗಿರಲಿಲ್ಲ. ಇ-ಕಾಮರ್ಸ್ ಎಂಬುದು ವಿದೇಶೀ ಕಲ್ಪನೆ ಅದು ಯಶಸ್ವಿಯಾಗುವುದು ಸಾಧ್ಯವಿಲ್ಲ, ಏಕೆಂದರೆ ಭಾರತೀಯರು ಏನನ್ನೇ ಕೊಳ್ಳಬೇಕಿದ್ದರೂ ಮುಟ್ಟಿ ನೋಡಿ, ಅನುಭವ ಮಾಡಿಕೊಂಡೇ ಖರೀದಿಸುತ್ತಾರೆ ಎಂದು ಹಲವರು ಫ್ಲಿಪ್ ಕಾರ್ಟ್ ವ್ಯವಹಾರದ ಕಲ್ಪನೆಯನ್ನೇ ತಳ್ಳಿಹಾಕಿದರು.  ಆದರೆ ಇಂದು, ಭಾರತದ ಇ-ಕಾಮರ್ಸ್ ಉದ್ಯಮ ೩೦೦೦ ಕೋಟಿ ಅಮೆರಿಕನ್ ಡಾಲರ್ ಗಾತ್ರಕ್ಕೆ ಮುಟ್ಟಿದೆ. ೨೦೨೬ರ ವೇಳೆಗೆ ಇದು ೨೦೦೦೦ ಅಮೆರಿನ್ ಡಾಲರ್‌ಗಳ ಮಟ್ಟಕ್ಕೆ ಮುಟ್ಟುವ ನಿರೀಕ್ಷೆಯಿದೆ ಎಂದು ವಿಶ್ಲೇಷಕರು ಹೇಳುತ್ತಾರೆ. ಫ್ಲಿಪ್ ಕಾರ್ಟ್ ಸಾಹಸ ಹುಟ್ಟಿದ್ದು ಬೆಂಗಳೂರಿನ ಕೋರಮಂಗಲದ ಎರಡು ಬೆಡ್ ರೂಮುಗಳ ಅಪಾರ್ಟ್ ಮೆಂಟಿನಲ್ಲಿ. ಇಂದು ಬೆಂಗಳೂರಿನಲ್ಲೇ ಕೇಂದ್ರ ಕಚೇರಿಯಲ್ಲಿ ಹೊಂದಿರುವ ಅದು ರಾಷ್ಟ್ರಾದ್ಯಂತ ಹಲವಾರು ಕಚೇರಿಗಳನ್ನು ಹೊಂದಿದೆ. ನಗರದಲ್ಲಿ ಹಲವಾರು ಕಡೆಗಳಿಂದ ಕಾರ್‍ಯನಿರ್ವಹಿಸುವ ಅದು ಇಂದು ೧ ಲಕ್ಷ ಚದರ ಅಡಿಗಳಿಗಿಂತಲೂ ಹೆಚ್ಚಿನ ಜಾಗದಲ್ಲಿ ವ್ಯಾಪಿಸಿದ್ದು ೬,೮೦೦ ನೌಕರರನ್ನು ಹೊಂದಿದೆ. ಫಿಪ್ ಕಾರ್ಟ್ ತನ್ನ ವ್ಯವಹಾರ ಆರಂಭಿಸಿದ ಹೆಚ್ಚು ಕಡಿಮೆ ಎರಡು ವರ್ಷಗಳ ಬಳಿಕ ತನ್ನ ಮೊತ್ತ ಮೊದಲ ಪೂರ್ಣಾವಧಿಯ ನೌಕರನನ್ನು ಹೊಂದಿತು. ಅಂಬುರ್ ಐಯ್ಯಪ್ಪ ಹೆಸರಿನ ಈಗ ಫ್ಲಿಪ್ ಕಾರ್ಟ್ ಪೂರ್ಣಾವಧಿಯ ನೌಕರನಾದ ಬಳಿಕ ಕೋಟ್ಯಧೀಶನಾದ, ಎಂಪಾಯೀ ಸ್ಟಾಕ್ ಓನರ್ ಶಿಪ್ ಪ್ಲಾನ್ (ಇಸೋಪ್) ಇದನ್ನು ಸಾಧ್ಯವಾಗಿಸಿತು. ಆ ವರ್ಷ ಈ ವ್ಯವಹಾರ ನಡೆಸುವ ತಲೆಗಳ ಸಂಖ್ಯೆ ೧೫೦ಕ್ಕೆ ಏರಿತು.  ಅದೇ ವರ್ಷ ಅಕ್ಟೋಬರ್ ನಲ್ಲಿ ಆಕ್ಸೆಲ್ ಪಾರ್ಟ್ನರ್‍ಸ್ ಹೂಡಿಕೆದಾರನಾಗಲು ಮುಂದೆ ಬಂದು ೧೦ ಲಕ್ಷ ಅಮೆರಿಕನ್ ಡಾಲರ್ ಗಳನ್ನು ತೊಡಗಿಸಿತು. ಕೆಲ ತಿಂಗಳುಗಳ ಬಳಿಕ ಅಮೆರಿಕದ ಟೈಗರ್ ಗ್ಲೋಬಲ್ ನಿಂದ ಫ್ಲಿಪ್ ಕಾಟ್‌ಗೆ ೧ ಕೋಟಿ ಅಮೆರಿಕನ್ ಡಾಲರ್ ನಿಧಿ ಹರಿದು ಬಂತು.  ಬಳಿಕ ಫ್ಲಿಪ್ ಕಾರ್ಟ್‌ಗೆ ಟೆನ್ಸೆಂಟ್, ಇ ಬೇ ಮತ್ತು ಮೈಕ್ರೋಸಾಫ್ಟ್ ನಿಂದ ೧೪೦ ಕೋಟಿ ಅಮೆರಿಕನ್ ಡಾಲರ್ ಹೂಡಿಕೆ ಬಂತು. ಕಳೆದ ವರ್ಷ ಸಾಫ್ಟ ಬ್ಯಾಂಕ್ ವಿಷನ್ ಫಂಡ್ ನಿಂದ ೨೫೦ ಅಮೆರಿಕನ್ ಡಾಲರ್ ಹೂಡಿಕೆ ಬಂತು.  ೨೦೧೦ ಫ್ಲಿಪ್ ಕಾರ್ಟ್ ಪಾಲಿನ ಅತ್ಯಂತ ಮಹತ್ವದ ವರ್ಷ. ಕಂಪೆನಿ ಇತರ ವಸ್ತುಗಳ ಜೊತೆಗೆ ಎಲೆಕ್ಟ್ರಾನಿಕ್ಸ್ ಮತ್ತು ಮೊಬೈಲ್ ಫೋನುಗಳನ್ನೂ ತನ್ನ ಮಾರಾಟ ವ್ಯಾಪ್ತಿಗೆ ತಂದಿತು. ಈ ವಸ್ತುಗಳು ಈಗ ಆನ್ ಲೈನ್ ವೇದಿಕೆ ಮೂಲಕ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುವ ಸರಕುಗಳಾಗಿವೆ.  ಇದೇ ವರ್ಷ ಫ್ಲಿಪ್ ಕಾರ್ಟ್ ಭಾರತದಲ್ಲಿ ’ಕ್ಯಾಶ್ ಆನ್ ಡೆಲಿವರಿ ಕಲ್ಪನೆಯನ್ನು ಕೃತಿಗಿಳಿಸಿತು. ಇದು ಆನ್ ಲೈನಿನಲ್ಲಿ ಚಿಲ್ಲರೆ ಮಾರಾಟದ ದಿಕ್ಕನ್ನೇ ಬದಲಾಯಿಸಿತು. ವಸ್ತುಗಳು ಕೈಸೇರಿದ ಬಳಿಕ ಹಣ ಪಾವತಿ ಮಾಡುವ ಈ ಸವಲತ್ತು ಆನ್ ಲೈನ್ ವಹಿವಾಟಿಗೆ ದೊಡ್ಡ ಒಟ್ಟು ಕೊಟ್ಟಿತು. ವಿತರಣೆಗಳನ್ನು ಸುಲಲಿತಗೊಳಿಸಲು ಫ್ಲಿಪ್ ಕಾರ್ಟ್ ತನ್ನ ಲಾಜಿಸ್ಟಿಕ್ಸ್ ಘಟಕ ಮತ್ತು ಇಕಾರ್ಟ್ ಗಳನ್ನೂ ಆರಂಭಿಸಿತು.  ೨೦೧೬ರಲ್ಲಿ ೧೦೦೦ ಲಕ್ಷ ನೋಂದಾಯಿತ ಗ್ರಾಹಕರನ್ನು ಹೊಂದುವ ಮೂಲಕ ಫ್ಲಿಪ್ ಕಾರ್ಟ್ ಮೈಲಿಗಲ್ಲು ಸ್ಥಾಪಿಸಿತು. ಸಚಿನ ಮತ್ತು ಬಿನ್ನಿ ಟೈಮ್ ಮ್ಯಾಗಜಿನ್ ನ ಅತ್ಯಂತ ಪ್ರಭಾವಶಾಲಿಗಳಾದ ೧೦೦ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದರು. ವಿ ರೀಡ್ ಸಂಸ್ಥೆಯನ್ನು ತನ್ನ ತೆಕ್ಕೆಗೆ ಸೆಳೆದುಕೊಂಡ ಫ್ಲಿಪ್ ಕಾಟ್ ಆ ಬಳಿಕ ಲೆಟ್ ಅಸ್ ಬೈ, ಎಫ್ ಎಕ್ಸ್ ಮಾರ್ಟ್, ಫ್ಯಾಷನ್ ಇ-ಟೈಲ್ ಪ್ಲೇಯರ್ ಮ್ಯಾಂತ್ರ, ಯುಪಿಐ ಆಧಾರಿತ ಪಾವತಿ ಸ್ಟಾರ್ಟಪ್ ಫೋನ್ ಪೆ ಇತ್ಯಾದಿಗಳನ್ನೂ ತನ್ನ ತೆಕ್ಕೆಗೆ ಸೇರಿಸಿಕೊಂಡಿತು. ಜೀವ್ಸ್ ಅಂಡ್ ಇಂಗ್ಪೇಯಂತಹ ಹಲವಾರು ಕಂಪೆನಿಗಳೂ ಫ್ಲಿಪ್ ಕಾರ್ಟ್‌ಗೆ ಸೇರ್ಪಡೆಯಾದವು.  ಕಳೆದ ವರ್ಷ ಕಲ್ಯಾಣ ಕೃಷ್ಣಮೂರ್ತಿ ಅವರನ್ನು ನೂತನ ಸಿಇಒ ಆಗಿ ಹೆಸರಿಸಿದ ಕಂಪೆನಿ ಬಿನ್ನಿ ಬನ್ಸಲ್ ಅವರನ್ನು ಗ್ರೂಪ್ ಸಿಇಒ ಹುದ್ದೆಗೆ ಏರಿಸಿತು. ಬನ್ಸಲ್ ಗಳ ಇ-ಕಾಮರ್ಸ್ ವಹಿವಾಟು ಕಡೆಗೂ ಅವರಿಗೆ ಬಹುದೊಡ್ಡ ಕೊಡುಗೆಯನ್ನು ತಂದು ಕೊಟ್ಟಿತು. ೨೦೧೮ರಲ್ಲಿ ಅಮೆರಿಕದ ಚಿಲ್ಲರೆ ಮಾರಾಟ ದೈತ್ಯ ವಾಲ್ ಮಾರ್ಟ್  ಶೇಕಡಾ ೭೭ ಶೇರು ಖರೀದಿ ಮೂಲಕ ೧೬೦೦ ಕೋಟಿ ಅಮೆರಿಕನ್ ಡಾಲರುಗಳನ್ನು ತೆತ್ತು ಫ್ಲಿಪ್ ಕಾರ್ಟ್ ನ್ನು ತನ್ನ ಹೆಗಲಿಗೆ ಏರಿಸಿಕೊಂಡಿತು.

ನವದೆಹಲಿ: ಬಿಜೆಪಿ ಗೆಲುವಿಗೆ ಎಲೆಕ್ಟ್ರಾನಿಕ್‌ ಮತ ಯಂತ್ರ(ಇವಿಎಂ)ಗಳಲ್ಲಿ ಮಾಡಲಾದ ಮಾರ್ಪಾಡು ಕಾರಣ ಎಂಬುದನ್ನು ಸಾಬೀತು ಪಡಿಸಲು ದೆಹಲಿ ವಿಧಾನಸಭೆಯಲ್ಲಿ ಆಮ್‌ ಆದ್ಮಿ ಪಕ್ಷ(ಆಪ್) ಇವಿಎಂ ಮಾರ್ಪಡಿಸುವ ಬಗೆಯನ್ನು ಪ್ರಸ್ತುತ ಪಡಿಸಿತು. ಇದು ಕೇವಲ ಮಾದರಿ ಎಂದು ತಳ್ಳಿಹಾಕಿದ ಚುನಾವಣಾ ಆಯೋಗವು ಆಯೋಗದ ಇವಿಎಂನಲ್ಲಿ ಕೈಯಾಡಿಸುವಂತೆ ಸವಾಲು ಹಾಕಿತು. ಆಪ್ ಈ ಸವಾಲನ್ನು ಅಂಗೀಕರಿಸಿತು. ಇವಿಎಂ ಮತಯಂತ್ರದ ಮುಖ್ಯಭಾಗ(ಮದರ್‌ ಬೋರ್ಡ್)ದಲ್ಲಿ ಕೆಲ ಬದಲಾವಣೆ ಮಾಡಿ, ಕೇವಲ 90 ಸೆಕೆಂಡ್‌ಗಳಲ್ಲಿ ವಂಚಿಸಲು ಸಾಧ್ಯ ಎಂದು ಸಾಫ್ಟ್‌ವೇರ್‌ ಇಂಜಿನಿಯರ್‌ ಕೂಡ ಆಗಿರುವ ಎಎಪಿ ಶಾಸಕ ಸೌರಭ್‌ ಭಾರದ್ವಾಜ್‌ ಪ್ರಾತ್ಯಕ್ಷಿಕೆ ಮೂಲಕ ಸದನದಲ್ಲಿ ವಿವರಿಸಿದರು. ಸೀಕ್ರೆಟ್‌ ಕೋಡ್‌ ತಿಳಿದಿರುವ ಯಾರೇ ಆದರೂ ಇವಿಎಂ ಯಂತ್ರಗಳಲ್ಲಿ ಮಾರ್ಪಾಡು ಮಾಡಲು ಸಾಧ್ಯವಿದೆ ಎಂದರು. ಸೌರಭ್‌ ಭಾರದ್ವಾಜ್‌ ಅವರು ನೀಡಿದ ನಿದರ್ಶನದಲ್ಲಿ ಎಎಪಿಗೆ 10 ಮತ ನೀಡಿದ್ದರು. ಆದರೆ, ಮತಯಂತ್ರ ಮಾರ್ಪಾಡಿನ ನಂತರ ಕೇವಲ 3 ಮತಗಳು ಮಾತ್ರ ಎಎಪಿ ಪಾಲಿಗಿತ್ತು! 3 ಮತ ನೀಡಿದ್ದ ಬಿಜಿಪಿ ಖಾತೆಯಲ್ಲಿ 11 ಮತಗಳಿದ್ದವು. ತೃಣಮೂಲ ಕಾಂಗ್ರೆಸ್‌, ಜನತಾ ದಳ(ಯು) ಸೇರಿದಂತೆ  ವಿರೋಧ ಪಕ್ಷದ ಹಲವು ನಾಯಕರನ್ನು ಎಎಪಿ ವಿಧಾನಸಭೆಯ ವಿಶೇಷ ಸಭೆಗೆ ಆಹ್ವಾನಿಸಲಾಗಿತ್ತು. ಚುನಾವಣಾ ಆಯೋಗವು ಇವಿಎಂ ವಿವಾದಕ್ಕೆ ಸಂಬಂಧಿಸಿದಂತೆ ಚರ್ಚೆಗೆ ಮೇ 12ರಂದು ಸರ್ವಪಕ್ಷ ಸಭೆ ಕರೆದಿದೆ.
2017: ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ವಿರುದ್ಧ ಭ್ರಷ್ಟಾಚಾರದ
ಆರೋಪ ಮಾಡಿ, ಸಚಿವ ಸ್ಥಾನದಿಂದ ವಜಾಗೊಂಡಿರುವ ಆಪ್ ಶಾಸಕ ಕಪಿಲ್‌ ಮಿಶ್ರ ಅವರು ಕೇಜ್ರಿವಾಲ್‌ ಸೇರಿದಂತೆ ಪಕ್ಷದ ಮುಖಂಡರ ವಿರುದ್ಧ ಮತ್ತೊಂದು ಬಾಂಬ್‌ ಸಿಡಿಸಿದರು. ಪಕ್ಷದ ಮುಖಂಡರಾದ ಅರವಿಂದ ಕೇಜ್ರಿವಾಲ್‌ ಹಾಗೂ ಸಚಿವ ಸತ್ಯೇಂದ್ರ ಜೈನ್‌ ಅವರು ವಿದೇಶ ಪ್ರವಾಸಕ್ಕೆ ಪಕ್ಷದ ನಿಧಿಯ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಸಿಬಿಐ ಬಳಿ ಮೂರು ದೂರು ದಾಖಲಿಸಿದರು. ಸಿಎಂ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ ಬೆನ್ನಲ್ಲೇ ಮಿಶ್ರ ಅವರನ್ನು ಹಿಂದಿನ ದಿನ ಸಂಜೆಯಷ್ಟೇ ಆಪ್ ಪ್ರಾಥಮಿಕ ಸದಸ್ಯತ್ವದಿಂದ ಅಮಾನತು ಮಾಡಲಾಗಿತ್ತು. ಈ ಎಲ್ಲಾ ಬೆಳವಣಿಗೆ ಬಳಿಕ ಸಿಬಿಐಗೆ ದೂರು ನೀಡಿದ ಮಿಶ್ರ, ಎಎಪಿಯ ಐದು ನಾಯಕರ ವಿದೇಶಿ ಭೇಟಿಗಳ ವಿವರಗಳನ್ನು ಪಕ್ಷ ಬಹಿರಂಗಪಡಿಸದಿದ್ದರೆ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಬೆದರಿಕೆ ಹಾಕಿದರು.
2017: ನವದೆಹಲಿ: ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಕೋಲ್ಕತ ಹೈಕೋರ್ಟ್​ನ ನ್ಯಾಯಮೂರ್ತಿ
ಸಿ.ಎಸ್. ಕರ್ಣನ್ ಅವರಿಗೆ ಸುಪ್ರೀಂ ಕೋರ್ಟ್  6 ತಿಂಗಳು ಜೈಲು ಶಿಕ್ಷೆ ವಿಧಿಸಿತು. ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್  ಈದಿನ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿ,, ಕರ್ಣನ್ ಅವರನ್ನು ತಕ್ಷಣವೇ ಬಂಧಿಸಬೇಕು ಎಂದು ಆಜ್ಞಾಪಿಸಿತು. ಜತೆಗೆ ಜಸ್ಟೀಸ್ ಕರ್ಣನ್ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ಮತ್ತು ಇತರ 7 ನ್ಯಾಯಮೂರ್ತಿಗಳಿಗೆ ಶಿಕ್ಷೆ ವಿಧಿಸಿರುವ ಆದೇಶ ಪ್ರತಿಯನ್ನು ಪ್ರಕಟಿಸದಂತೆ ಮಾಧ್ಯಮಗಳಿಗೆ ನಿಷೇಧ ಹೇರಿತು. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಗೆ ತಲಾ 5 ವರ್ಷ ಜೈಲು ಶಿಕ್ಷೆ ಮತ್ತು ತಲಾ 1 ಲಕ್ಷ ರೂ. ದಂಡ ವಿಧಿಸಿ ಹಿಂದಿನ ದಿನ ರಾತ್ರಿ ಆದೇಶ ಪ್ರಕಟಿಸಿದ್ದರು.

2017: ನವದೆಹಲಿ: ಸುಪ್ರೀಂ ಕೋರ್ಟಿ​ನ ಆದೇಶವನ್ನು ಮೀರಿ ಮಕ್ಕಳಿಗೆ 40 ಮಿಲಿಯನ್ ಡಾಲರ್
(ಸುಮಾರು 257 ಕೋಟಿ ರೂ.) ಹಣವನ್ನು ವರ್ಗಾವಣೆ ಮಾಡಿದ ಪ್ರಕರಣದಲ್ಲಿ ಉದ್ಯಮಿ ವಿಜಯ್ ಮಲ್ಯ ತಪ್ಪು ಸಾಬೀತಾಗಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ಕೋರ್ಟ್ ಆದೇಶವನ್ನು ಉಲ್ಲಂಘಿಸುವ ಮೂಲಕ ಮಲ್ಯ ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂಬುದು ಸಾಬೀತಾಗಿದೆ ಎಂದು ಜಸ್ಟೀಸ್ ಎ.ಕೆ.ಘೊಯಲ್ ಮತ್ತು ಯು.ಯು. ಲಲಿತ್ ಅವರಿದ್ದ ಪೀಠ ತನ್ನ ತೀರ್ಪಿನಲ್ಲಿ ತಿಳಿಸಿತು. ಜತೆಗೆ ಜುಲೈ 10 ರಂದು ಶಿಕ್ಷೆಯ ಪ್ರಮಾಣ ನಿರ್ಧರಿಸುವ ಸಂಬಂಧ ನಡೆಯುವ ವಿಚಾರಣೆಯಲ್ಲಿ ಖುದ್ದಾಗಿ ಹಾಜರಾಗಬೇಕು ಎಂದು ಕೋರ್ಟ್ ಮಲ್ಯ ಅವರಿಗೆ ಸಮನ್ಸ್ ಜಾರಿ ಮಾಡಿತು. ಬ್ರಿಟನ್ ಡಿಯಾಗಿಯೋ ಕಂಪನಿಯಿಂದ ಪಡೆದ 40 ಮಿಲಿಯನ್ ಡಾಲರ್ ಹಣವನ್ನು ಮಲ್ಯ ತನ್ನ ಮಕ್ಕಳಿಗೆ ಅಕ್ರಮವಾಗಿ ವರ್ಗಾವಣೆ ಮಾಡಿದ್ದರು. ಕೋರ್ಟ್ ಆದೇಶವನ್ನು ಉಲ್ಲಂಘಿಸಿ ಮಲ್ಯ ಹಣ ವರ್ಗಾವಣೆ ಮಾಡಿದ್ದಾರೆ ಎಂದು ಎಸ್​ಬಿಐ ನೇತೃತ್ವದ ಬ್ಯಾಂಕುಗಳ ಒಕ್ಕೂಟ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು. ಪ್ರಸ್ತುತ ಲಂಡನ್​ನಲ್ಲಿರುವ ವಿಜಯ್ ಮಲ್ಯರನ್ನು ದೇಶಕ್ಕೆ ವಾಪಸ್ ಕರೆತರುವ ಸಂಬಂಧ ಕೇಂದ್ರ ಸರ್ಕಾರ ಬ್ರಿಟನ್ ಸರ್ಕಾರದೊಂದಿಗೆ ಚರ್ಚೆ ನಡೆಸುತ್ತಿದೆ. ಲಂಡನ್ ಕೋರ್ಟ್​ನಲ್ಲಿ ವಿಜಯ್ ಮಲ್ಯ ಹಸ್ತಾಂತರ ಸಂಬಂಧ ಪ್ರಕರಣ ದಾಖಲಾಗಿದ್ದು, ವಿಚಾರಣೆ ಸಹ ನಡೆಯುತ್ತಿದೆ.
2016: ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಬೆದರಿಕೆ ಪತ್ರ ಬಂದಿರುವುದಾಗಿ ಪಕ್ಷದ ಪುದುಚೇರಿ ಘಟಕ ಹೇಳಿಕೊಂಡ ಹಿನ್ನೆಲೆಯಲ್ಲಿ ರಾಹುಲ್ ಅವರಿಗೆ ಸೂಕ್ತ ಭದ್ರತೆ ಒದಗಿಸುವತ್ತ ಗಮನ ನೀಡುವಂತೆ ಕೇಂದ್ರ ಸರ್ಕಾರವು ವಿಶೇಷ ರಕ್ಷಣಾ ತಂಡ (ಎಸ್ ಪಿಜಿ) ಗುಪ್ತಚರ ದಳ (ಐಬಿ) ಇತ್ಯಾದಿ ಕೇಂದ್ರೀಯ ಸಂಸ್ಥೆಗಳಿಗೆ ಆಜ್ಞಾಪಿಸಿದೆ. ಕಾಂಗ್ರೆಸ್ ಪಕ್ಷದ ನಾಯಕರ ನಿಯೋಗವೊಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಬೆದರಿಕೆ ಪತ್ರದ ಬಗ್ಗೆ ವಿವರಿಸಿದ ತತ್ ಕ್ಷಣವೇ ಕೇಂದ್ರ ಈ ಆದೇಶ ನೀಡಿತು., ವಿಧಾನಸಭೆ ಚುನಾವಣೆ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳುತ್ತಿರುವ ರಾಹುಲ್ ಗಾಂಧಿ ಮೇ 10ರಂದು ಪುದುಚೇರಿಗೆ ಭೇಟಿ ಕೊಡಲಿದ್ದು, ವೇಳೆ ಅವರ ಮೇಲೆ ದಾಳಿ ನಡೆಸುವುದಾಗಿ ಪತ್ರದಲ್ಲಿ ಪ್ರಾಣ ಬೆದರಿಕೆ ಹಾಕಲಾಗಿತ್ತು.  ಮೆ. 16ಕ್ಕೆ ಇಲ್ಲಿ ಮತದಾನ ನಿಗದಿಯಾಗಿದೆ.

2016: ವಿಶಾಖಪಟ್ಟಣತಂಡದಲ್ಲಿದ್ದು ಒಡನಾಡಿಯಾಗಿ, ಒಟ್ಟೊಟ್ಟಿಗೇ ಆಡಿ ಸೋಲು-ಗೆಲುವನ್ನು ಸಮನಾಗಿ ಹಂಚಿಕೊಂಡಿದ್ದ ಜನಪ್ರಿಯ ಕ್ರಿಕೆಟಿಗ ಯುವರಾಜ್ ಸಿಂಗ್ ಈದಿನ  ಮುಂಬೈ ಇಂಡಿಯನ್ಸ್ ಪಂದ್ಯದ ಬಳಿಕಕ್ರಿಕೆಟ್ ದೇವರಎದುರು ಭಾವೋದ್ವೇಗಕ್ಕೆ ಒಳಗಾದರು. ಇದಕ್ಕೆಕ್ರಿಕೆಟ್ ದೇವರು’  ಎಂದು ಬಣ್ಣಿಸಲ್ಪಟ್ಟ ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಅಷ್ಟೇ ಭಾವನಾತ್ಮಕವಾಗಿ ನಡೆದುಕೊಂಡರು. ಸ್ಟೇಡಿಯಂನಲ್ಲಿ ನೆರೆದಿದ್ದ ಸಹಸ್ರಾರು ಅಭಿಮಾನಿಗಳ ಎದುರು ಯುವರಾಜ್ ಇಷ್ಟು ಗುರುಭಾವದಿಂದ ಕಾಣುತ್ತಾರೆಂದು ಬಹುಶಃ ಸಚಿನ್ ಅಂದುಕೊಂಡಿರಲಿಲ್ಲ. ಅದಕ್ಕೇ ಒಮ್ಮೆ ಗಾಬರಿಯಾದರು. ಸಚಿನ್ ತೆಂಡುಲ್ಕರ್ ತಮಗೆ ಎದುರಾಗುತ್ತಿದ್ದಂತೆ ಅವರ ಪಾದವನ್ನು ಸ್ಪರ್ಶಿಸಿ ನಮಿಸುವ ಮೂಲಕ ಯುವರಾಜ್ ಎಲ್ಲರ ಗಮನ ಸೆಳೆದರು. ಐಪಿಎಲ್ ಒಂಬತ್ತನೇ ಆವೃತ್ತಿಯ ಮುಂಬೈ ಇಂಡಿಯನ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದಲ್ಲಿ ಮುಂಬೈ ಹೀನಾಯವಾಗಿ ಸೋಲನ್ನಪ್ಪಿತ್ತು. ಪಂದ್ಯದ ಬಳಿಕ ಮೈದಾನದಿಂದ ಹೊರಬರುವ ಸಂದರ್ಭದಲ್ಲಿ ಘಟನ ಘಟಿಸಿತು. ಯುವಿ ಹಿಂದೆ ಕೂಡ ಸಚಿನ್ ಪಾದ ಸ್ಪರ್ಶಿಸಿ ನಮಿಸಿದ್ದರು. ಜುಲೈ 2014ರಲ್ಲಿ ಲಾರ್ಡ್ಸ್ ಮೈದಾನದಲ್ಲಿ 200ನೇ ವರ್ಷದ ಸವಿನೆನಪಿಗಾಗಿ ಏರ್ಪಡಿಸಲಾದ ಪಂದ್ಯದಲ್ಲಿ ನಮಿಸಿದ್ದರು. ಇನ್ನು ವಿಶ್ವತಂಡದ ಪರ ಯುವಿ ಆಡಿದ ಸಂದರ್ಭದಲ್ಲಿ ಸಚಿನ್ ನಾಯಕರಾಗಿದ್ದರು. ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ, ಸಚಿನ್ ಕಾಲಿಗೆ ನಮಿಸಿದ್ದರು.

2016: ನವದೆಹಲಿ: ತಮ್ಮ ವಿರುದ್ಧದ ಅನರ್ಹತೆ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ಕೋರಿ ಉತ್ತರಾಖಂಡದ ಒಂಬತ್ತು ಶಾಸಕರು ಸಲ್ಲಿಸಿದ್ದ ಅರ್ಜಿ ಸಂಬಂಧ ಮಧ್ಯಂತರ ಆದೇಶ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿತು. ಇದರಿಂದ ಉತ್ತರಾಖಂಡ ವಿಧಾನಸಭೆಯಲ್ಲಿ ಮೇ 10ರ ಮಂಗಳವಾರ ನಡೆಯಲಿರುವ ಬಹುಮತ ಸಾಬೀತು ಪರೀಕ್ಷೆಯ ವೇಳೆ ಮತ ಹಾಕುವ ಅಧಿಕಾರವನ್ನು ಈ ಶಾಸಕರು ಕಳೆದುಕೊಂಡಿದ್ದಾರೆ.
ಅರ್ಜಿ ವಿಚಾರಣೆಯ ಮುಂದಿನ ವಿಚಾರಣೆಯನ್ನು ನ್ಯಾಯಾಲಯವು ಜುಲೈ 12ಕ್ಕೆ ನಿಗದಿಪಡಿಸಿತು.. ಕಾಂಗ್ರೆಸ್ ನಾಯಕ ಹರೀಶ್ ರಾವತ್ ಮೇ 10ರಂದು ಬಹುಮತ ಸಾಬೀತುಪಡಿಸುವ ಸಂದರ್ಭ 9 ಮಂದಿ ಅನರ್ಹ ಶಾಸಕರು ಮತ ಚಲಾಯಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತು. ಸುಪ್ರೀಂ ಕೋರ್ಟ್ ತೀರ್ಪಿನಿಂದ ಕಾಂಗ್ರೆಸ್ ನಾಯಕ ಹರೀಶ್ ರಾವತ್ ಅವರಿಗೆ ನಿರಾಳತೆ ಸಿಕ್ಕಂತಾಯಿತು.  ಉತ್ತರಾಖಂಡ ರಾಜಕೀಯ ಬಿಕ್ಕಟ್ಟು ಈದಿನ ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಯಿತು. ಬೆಳಗ್ಗೆ ಅನರ್ಹ ಶಾಸಕರ ಅರ್ಜಿ ವಿಚಾರಣೆಯನ್ನು ಉತ್ತರಾಖಂಡ ಹೈಕೋರ್ಟ್ ತಿರಸ್ಕರಿಸಿತ್ತು. ತಕ್ಷಣ ಅನರ್ಹ ಶಾಸಕರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.  ಸ್ಪೀಕರ್ ಗೋವಿಂದ ಸಿಂಗ್ ಕುಂಜ್ವಾಲ್ ಅವರ ಅಮಾನತು ಆದೇಶವನ್ನು ಪ್ರಶ್ನಿಸಿ ಕಾಂಗ್ರೆಸ್ 9 ಬಂಡಾಯ ಶಾಸಕರು ಉತ್ತರಾಖಂಡ ಹೈಕೋರ್ಟ್ ಮೆಟ್ಟಿಲೇರಿದ್ದರು. ಕಾಂಗ್ರೆಸ್ ಮುಖಂಡ ಹರೀಶ್ ರಾವತ್  ಬಹುಮತ ಸಾಬೀತು ಪಡಿಸುವ ಸಂದರ್ಭ ಶಾಸಕರ ಅನರ್ಹತೆ ಮುಂದುವರಿದಿದ್ದರೆ  ಮತ ಚಲಾಯಿಸುವ ಹಕ್ಕು ಇಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿತ್ತು. ಇದಕ್ಕೆ ಮುನ್ನ  ಕಾಂಗ್ರೆಸ್ನಿಂದ ಉಚ್ಚಾಟನೆಗೊಂಡ ಹಾಗೂ ಶಾಸಕತ್ವ ಅನರ್ಹಗೊಳಿಸಲಾಗಿದ್ದ ಕಾಂಗ್ರೆಸ್ 9 ಶಾಸಕರ ಅರ್ಜಿಯನ್ನು ಉತ್ತರಾಖಂಡ ಹೈ ಕೋರ್ಟ್ ವಜಾಗೊಳಿಸಿತ್ತು.. ಪರಿಣಾಮ ಶಾಸಕರು ಮೇ 10ರಂದು  ನಡೆಯಲಿರುವ ವಿಶ್ವಾಸಮತ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತಿಲ್ಲ. ವಿಶ್ವಾಸಮತ ಯಾಚನೆ ಹಿನ್ನೆಲೆಯಲ್ಲಿ ಶಾಸಕತ್ವ ಅನರ್ಹ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸುವಂತೆ ಶಾಸಕ ಉಮೇಶ್ ಶರ್ಮ, ಸುಬೋಧ್ ಉನಿಯಲ್, ಶೈಲಾರಾಣಿ ರಾವತ್ ಅರ್ಜಿ ಸಲ್ಲಿಸಿದ್ದರು.  ನ್ಯಾಯಮೂರ್ತಿ ಯು.ಸಿ. ಧ್ಯಾನಿ ಅವರು ವಿಚಾರಣೆ ನಡೆಸಿ ಶಾಸಕರ ಅರ್ಜಿಯನ್ನು ವಜಾಗೊಳಿಸಿದ್ದರು. ಶಾಸಕತ್ವ ಅನರ್ಹಗೊಳಿಸಿದ್ದ ಸ್ಪೀಕರ್ ಗೋವಿಂದ ಸಿಂಗ್ ಕುಂಜವಾಲ್ ನಿರ್ಧಾರವನ್ನು ಅವರು ಎತ್ತಿಹಿಡಿದಿದ್ದರು. ಮೇ 6ರಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿ,, ಮೇ.10ರಂದು ವಿಶ್ವಾಸಮತ ಸಾಬೀತು ಪಡಿಸುವಂತೆ ಸಿಎಂ ಹರೀಶ್ ರಾವತ್ಗೆ ಆದೇಶಿತ್ತು.
2016: ರಾಯ್ಪುರ:  ಛತ್ತೀಸಗಡದ ಸುಖ್ಮಾ ಜಿಲ್ಲೆಯಲ್ಲಿ ನಕ್ಸಲೀಯರು ಎರಡು ಕಡೆ ಸುಧಾರಿತ ಸ್ಫೋಟಕ ಸಾಧನಗಳನ್ನು ಸ್ಫೋಟಿಸಿದ್ದು, ಜಿಲ್ಲಾ ಮೀಸಲು ಪಡೆಯ ಯೋಧರೊಬ್ಬರು ಮೃತರಾಗಿ ನಾಗರಿಕರು ಹಾಗೂ ವಾಹನ ಚಾಲಕ ಗಾಯಗೊಂಡರು. ಬೆಳಿಗ್ಗೆ 11.45ಕ್ಕೆ ರಸ್ತೆ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ಸ್ಫೋಟ ಸಂಭವಿಸಿತು. ಈ ವೇಳೆ ಇಲ್ಲಿ ಕರ್ತವ್ಯದಲ್ಲಿದ್ದ ಯೋಧ ಸಾವನ್ನಪ್ಪಿದರು.ಎಂದು ಸುಖ್ಮಾ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದರು. ಮತ್ತೊಂದೆಡೆ ಸಂಭವಿಸಿದ ಸ್ಫೋಟದಲ್ಲಿ ರಸ್ತೆ ಕಾಮಗಾರಿಯಲ್ಲಿ ತೊಡಗಿದ್ದ ಜೆಸಿಬಿ ವಾಹನ ಚಾಲಕ ಗಾಯಗೊಂಡರು..

2016: ಬೀಜಿಂಗ್: ಚೀನಾದ ಫುಜಿಯಾನ್ ಪ್ರದೇಶದಲ್ಲಿ ಸತತ ಮಳೆ ಸುರಿದು, ಭೂಕುಸಿತದಿಂದ 31 ಮಂದಿ ಮೃತರಾದರು. 13 ಮಂದಿ ಗಾಯಗೊಂಡು,  7 ಮಂದಿ ಕಾಣೆಯಾದರು. ನಿರ್ಮಾಣ ಹಂತದಲ್ಲಿದ್ದ ಜಲ ವಿದ್ಯುತ್ ಘಟಕವು ಭೂಕುಸಿತದಿಂದ ನಾಶಗೊಂಡಿತು.. 24 ಗಂಟೆಯಲ್ಲಿ ಕನಿಷ್ಠ 8 ಇಂಚು(24 ಸಿ.ಎಂ) ಮಳೆ ಸುರಿದಿದ್ದು, ಫುಜಿಯಾನ್ ಪ್ರಾಂತ್ಯದ ತೈನಿಂಗ್ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿತು

2016: ಸ್ಪೇನ್ವಿಶ್ವದ ಅಗ್ರ ಶ್ರೇಯಾಂಕಿತ ನೋವಾಕ್ ಜೊಕೋವಿಕ್ 6-2, 3-6, 6-3 ಸೆಟ್ಗಳ ಅಂತರದಲ್ಲಿ ಇಂಗ್ಲೆಂಡ್ ಆಂಡಿ ಮರ್ರೆ ಅವರನ್ನು ಸೋಲಿಸಿ ಮ್ಯಾಡ್ರಿಡ್ ಓಪನ್ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡರು. ಮೂಲಕ 29ನೇ ಮಾಸ್ಟರ್ಸ್ ಪ್ರಶಸ್ತಿ ಗೆದ್ದ ಸಾಧನೆ ಮಾಡಿದರು.
ರೋಚಕ ಫೈನಲ್ ಫೈಟ್ನಲ್ಲಿ ಉಭಯ ಆಟಗಾರರು ಸಮಬಲ ಹೋರಾಟ ನಡೆಸಿದರು. ಮೊದಲ ಸೆಟ್ನಲ್ಲಿ ಸುಲಭ ಜಯ ದಾಖಲಿಸಿದ ಜೊಕೋವಿಕ್, ಎರಡನೇ ಸೆಟ್ನಲ್ಲಿ ಜೊಕೋವಿಕ್ ಮಾಡಿಕೊಂಡ ಸ್ವಯಂಕೃತ ಅಪರಾಧದಿಂದ ಮರ್ರೆ ಮೇಲುಗೈ ಸಾಧಿಸಿದರು. ಆದರೆ ಅಂತಿಮವಾಗಿ ಲಯ ಕಂಡುಕೊಂಡ ಜೊಕೋವಿಕ್ ಗೆಲುವಿನ ನಗೆ ಬೀರಿದರು. ಇದರಿಂದಾಗಿ ಜೊಕೋವಿಕ್ ಎರಡನೇ ಬಾರಿಗೆ ಮಾ್ಯುಡ್ರಿಡ್ ಓಪನ್ ಗೌರವಕ್ಕೆ ಪಾತ್ರರಾದರು. ಜೊಕೋವಿಕ್ ಕಳೆದ 35 ಪಂದ್ಯದಲ್ಲಿ ಕೇವಲ ಎರಡು ಪಂದ್ಯಗಳನ್ನು ಮಾತ್ರ ಸೋತಿದ್ದರು. ಅಗ್ರ ಹತ್ತು ಶ್ರೇಯಾಂಕಿತ ಆಟಗಾರರನ್ನು ಸೋಲಿಸಿದ ಕೀರ್ತಿಗೆ ಕೂಡ ವರ್ಷ ಭಾಜನರಾಗಿದ್ದರು. ಕಳೆದ ಐದು ಮಾಸ್ಟರ್ಸ್ ಪ್ರಶಸ್ತಿಗಳ ಪೈಕಿ ನಾಲ್ಕರಲ್ಲಿ ಜಯ ದಾಖಲಿಸಿದ್ದರು.
2016: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಶಿಕ್ಷಣಕ್ಕೆ ಸಂಬಂಧಿಸಿ ಆಡಳಿತರೂಢ ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮತ್ತು ಕೇಂದ್ರ ಸಚಿವ ಅರುಣ್ ಜೇಟ್ಲಿ ಪದವಿ ಶಿಕ್ಷಣದ ದಾಖಲೆಗಳನ್ನು ಬಿಡುಗಡೆ ಮಾಡಿದರು. ಪದವಿ ದಾಖಲೆಗಳನ್ನು ಬಹಿರಂಗಗೊಳಿಸಿದ ನಂತರ ಮಾತನಾಡಿದ ಅಮಿತ್ ಶಾ, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಪ್ರಧಾನಿ ಮೋದಿ ವಿರುದ್ಧ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಮೋದಿ ವರ್ಚಸ್ಸಿಗೆ ಮಸಿ ಬಳಿಯಲು ಪ್ರಯತ್ನಿಸಿದ ಕೇಜ್ರಿವಾಲ್, ಪ್ರಧಾನಿ ಅವರ ಕ್ಷಮೆಯಾಚಿಸಬೇಕು. ಅನಧಿಕೃತವಾಗಿ ಆರೋಪ ಹೊರಿಸಿದ್ದಕ್ಕೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದರು. ನಖಲಿ ಪದವಿ ಹೊಂದಿದ ಆರೋಪಕ್ಕೆ ಒಳಗಾದ ಮತ್ತು ವಿಚಾರಣೆಗೆ ಒಳಪಟ್ಟ ನಾಯಕರನ್ನು ಹೊಂದಿರುವ ಪಕ್ಷ ಆಮ್ ಆದ್ಮಿ ಇಂದು ಪ್ರಧಾನಿ ಪದವಿ ಬಗ್ಗೆ ಸಾರ್ವಜನಿಕರಿಗೆ ಬೋಧನೆ ಮಾಡುತ್ತಿದೆ ಎಂದು ಅರುಣ್ ಜೇಟ್ಲಿ ಲೇವಡಿ ಮಾಡಿದರು. ಇದಾದ ಕೆಲವೇ ಗಂಟೆಗಳಲ್ಲಿ ಸುದ್ದಿಗೋಷ್ಠಿ ಕರೆದ ದೆಹಲಿ ಸಿಎಂ ಕೇಜ್ರಿವಾಲ್, ಪದವಿ ನಖಲಿ ಎಂದು ಟೀಕಿಸಿದರು.
2016: ನವದೆಹಲಿ: ಬಿಜೆಪಿ ಪ್ರದರ್ಶಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ಪದವಿಗಳು ಹಾಗೂ ಅಂಕಪಟ್ಟಿಗಳು ‘ನಕಲಿ’ಯಾಗಿವೆ ಎಂದು ಆಮ್‌ ಆದ್ಮಿ ಪಕ್ಷವು ಆರೋಪಿಸಿತು.ಬಿಜೆಪಿ ಬಿಡುಗಡೆ ಮಾಡಿದ ಪದವಿ ದಾಖಲೆಗಳು ಪರಸ್ಪರ ತಾಳೆಯಾಗುತ್ತಿಲ್ಲ ಎಂದು ಎಎಪಿ ಮುಖಂಡ ಆಶುತೋಷ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ‘ನಕಲು ಮಾಡಲು ಕೂಡ ಬುದ್ಧಿ ಬೇಕು. ಬಿ.ಎ. ಪದವಿ ಪ್ರಮಾಣ ಪತ್ರದಲ್ಲಿ 1978ರಲ್ಲಿ ಪಾಸಾಗಿದ್ದಾರೆ ಎಂದಿದೆ. ಎಂ.ಎ ಪದವಿಯಲ್ಲಿ 1979ರ ತಾರೀಖಿದೆ. ಬಿ.ಎ ಪದವಿ ಅಂಕ ಪಟ್ಟಿಯಲ್ಲಿ ನರೇಂದ್ರ ಕುಮಾರ್‌ ದಾಮೋದರ್‌ದಾಸ್‌ ಮೋದಿ ಎಂದಿದ್ದರೆ, ಎಂ.ಎ ದಾಖಲೆಯಲ್ಲಿ ನರೇಂದ್ರ ದಾಮೋದರ್‌ದಾಸ್‌ ಮೋದಿ ಎಂದಿದೆ’ ಎಂ‌ದು ಅವರು ಪ್ರತಿಪಾದಿಸಿದರು. ಅಲ್ಲದೇ, ಬಿ.ಎ ಅಂಕಪಟ್ಟಿಯಲ್ಲಿ ಅಡ್ಡ ಹೆಸರು ಕೂಡ ಭಿನ್ನವಾಗಿದೆ. ಒಂದೆಡೆ ‘Modi' ಎಂದಿದೆ. ಮತ್ತೊಂದೆಡೆ, ‘Mody' ಎಂದಿದೆ ಎಂದು ಅವರು ತಿಳಿಸಿದರು. ಬಿ.ಎ ಪದವಿ ಓದಿನ ವೇಳೆ ಮೋದಿ ಅವರೊಮ್ಮೆ ಅನುತೀರ್ಣರಾಗಿದ್ದರು ಎಂದು ಅವರು ಆರೋಪಿಸಿದರು. ‘ಪದವಿಯನ್ನು ನಕಲು ಮಾಡಲಾಗಿದೆ ಎಂಬುದನ್ನು ನಾವು ಸಾಬೀತು ಪಡಿಸಿದ್ದೇವೆ. ನಕಲಿ ಮಾಡುವುದು ಅಪರಾಧವಾಗಿದ್ದು, ಅದಕ್ಕಾಗಿ ಅಮಿತ್, ಅರುಣ್ ಜೇಟ್ಲಿ ಹಾಗೂ ಮೋದಿ ಅವರು ಕ್ಷಮೆಯಾಚಿಸಬೇಕು’ ಎಂದು ಒತ್ತಾಯಿಸಿದರು.
 2016: ನವದೆಹಲಿ: ಹೈದರಾಬಾದ್ ಮೂಲದ 25 ಹರೆಯದ ಮಹಿಳೆಗೆ ದೈಹಿಕ ಹಿಂಸೆ ನೀಡಿ ಹತ್ಯೆ ಮಾಡಿರುವ ಘಟನೆ ಸೌದಿ ಅರೇಬಿಯಾದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿತು. ಅಸಿಮಾ ಖಾತೂನ್ ಸಾವನ್ನಪ್ಪಿದ ದುರದೃಷ್ಟ ಮಹಿಳೆ. ಸೌದಿಯಲ್ಲಿ ಸೇವಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭಲ್ಲಿ ಹಲವು ಬಾರಿ ದೈಹಿಕ ಹಾಗೂ ಮಾನಸಿಕ ಹಿಂಸೆಯನ್ನು ಮನೆಯ ಯಜಮಾನರು ನೀಡುತ್ತಿದ್ದರು. ಊಟ ಸಹ ನಿರಾಕರಿಸಲಾಗಿತ್ತು. ಅಷ್ಟೇ ಅಲ್ಲ ಭಾರತಕ್ಕೆ ಆಗಮಿಸಲು ಸೌದಿ ಸರ್ಕಾರ ವೀಸಾವನ್ನೂ ತಡೆಹಿಡಿದೆ ಎಂದು ಅಸಿಮಾ ಸಾವಿಗೂ ಕೆಲವು ದಿನಗಳ ಹಿಂದೆ ಪೋಷಕರ ಬಳಿ ಹೇಳಿಕೊಂಡಿದ್ದರು ಎಂದು ಹೇಳಲಾಗಿದೆ. ಕೋಣೆಯಲ್ಲಿ ಕೂಡಿಟ್ಟು, ಚಿತ್ರಹಿಂಸೆ ನೀಡಿದ್ದಾರೆ. ಸಂದರ್ಭದಲ್ಲಿ ಸ್ವದೇಶಕ್ಕೆ ಆಗಮಿಸಲು ಅವಳ ಬಳಿ ಹಣ ಕೂಡ ಇರಲಿಲ್ಲವೆಂದು ಪೋಷಕರು ಈಗ ಪ್ರತಿಪಾದಿಸಿದ್ದಾರೆ.
 2009: ಸತತ ಪರಿಶ್ರಮ, ಗುರಿ ಸಾಧಿಸುವ ಛಲವಿದ್ದರೆ ಯಶಸ್ಸು ಸಾಧಿಸಬಹುದು ಎಂಬುದಕ್ಕೆ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ರಾಂಕ್ ಗಳಿಸುವ ಮೂಲಕ ಎಸ್.ಕೆ. ಶ್ರುತಿ ಸಾಕ್ಷಿಯಾದಳು. ಸರ್ಕಾರಿ ಬಸ್‌ಗಳಿಲ್ಲದೆ ಖಾಸಗಿ ಬಸ್ ಮತ್ತು ಟೆಂಪೋಗಳಲ್ಲಿ ಪ್ರತಿದಿನ ಕಾಲೇಜಿಗೆ ಪ್ರಯಾಣ ಮಾಡಿ ಕಡುಬಡತನದಲ್ಲಿ ಅಭ್ಯಾಸ ಮಾಡಿದ ಹರಪನಹಳ್ಳಿ ಎಸ್‌ಯುಜೆಎಂ ಕಾಲೇಜಿನ ವಿದ್ಯಾರ್ಥಿನಿ ಶ್ರುತಿ ಕನ್ನಡ 94, ಸಂಸ್ಕೃತ 92, ಇತಿಹಾಸ 92, ಐಚ್ಛಿಕ ಕನ್ನಡ 98, ರಾಜ್ಯಶಾಸ್ತ್ರ 97, ಶಿಕ್ಷಣ 91, ಒಟ್ಟು 564 (ಶೇ.94) ಅಂಕಗಳನ್ನು ಗಳಿಸಿ ಪ್ರಥಮ ರಾಂಕ್ ಪಡೆದು ತಾಲ್ಲೂಕಿನ ಹೆಮ್ಮೆಯ ಪುತ್ರಿ ಎನಿಸಿಕೊಂಡಳು. ಹರಪನಹಳ್ಳಿ ತಾಲ್ಲೂಕು ಕೇಂದ್ರದಿಂದ 17 ಕಿ.ಮೀ. ದೂರದ ಜೋಷಿಲಿಂಗಾಪುರ ಗ್ರಾಮದ ಜ್ಯೋತೆಪ್ಪ ಮತ್ತು ಮಂಜಮ್ಮ ದಂಪತಿ ಮಗಳಾದ ಶ್ರುತಿ ಪ್ರಾಥಮಿಕ ಹಂತದಿಂದಲೇ ಯಾವ ಖಾಸಗಿ ಟ್ಯೂಷನ್‌ಗಳ ಗೀಳಿಗೆ ಬೀಳದೆ ಹಾಸ್ಟೆಲ್ ಮತ್ತಿತರ ಸೌಲಭ್ಯಗಳಿಲ್ಲದೆ ಸರ್ಕಾರಿ ಶಾಲೆಗಳಲ್ಲಿ ಅಭ್ಯಾಸ ಮಾಡಿದ ಬಾಲಕಿ. ಕಾನ್ವೆಂಟ್ ಮತ್ತು ವಸತಿ ಶಾಲೆಗಳಲ್ಲಿ ಅಭ್ಯಾಸ ಮಾಡಿದವರಿಗೆ ಮಾತ್ರ ರಾಂಕ್ ಎನ್ನುವವರಿಗೆ ಸವಾಲು ಎಂಬಂತೆ ಶ್ರುತಿ ಸಾಧನೆ ಮಾಡಿ ತೋರಿಸಿದಳು.

2009: ಕನ್ನಡ ಮತ್ತು ತೆಲುಗು ಭಾಷೆಗಳಿಗೆ ಶಾಸ್ತ್ರೀಯ ಸ್ಥಾನಮಾನ ನೀಡಲು ನವದೆಹಲಿಯಲ್ಲಿ ನಡೆದ ಕೇಂದ್ರ ಸಂಪುಟ ಸಭೆ ಒಪ್ಪಿಗೆ ನೀಡಿತು. ಈ ಮೂಲಕ ಶಾಸ್ತ್ರೀಯ ಸ್ಥಾನಮಾನ ಸಿಗಲು ಬೇಕಾಗಿದ್ದ ತಾಂತ್ರಿಕ ಅಗತ್ಯವೊಂದು ಪೂರ್ಣಗೊಂಡಂತಾಯಿತು. 2008ರ ರಾಜ್ಯೋತ್ಸವದ ಸಂದರ್ಭದಲ್ಲೇ ಪ್ರಧಾನಿ ಮನಮೋಹನ್ ಸಿಂಗ್ ಅವರು ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಲು ಸಮ್ಮತಿ ಸೂಚಿಸಿದ್ದರು. ಆದರೆ ಇದು ಮದ್ರಾಸ್ ಹೈಕೋರ್ಟಿನಲ್ಲಿ ಸಲ್ಲಿಸಲಾದ ಪ್ರಕರಣವೊಂದರ ಫಲಶ್ರುತಿಯನ್ನು ಆಧರಿಸಿರುತ್ತದೆ ಎಂದು ತಿಳಿಸಲಾಗಿತ್ತು. ಈದಿನ ನಡೆದ ಸಂಪುಟ ಸಭೆ ಪ್ರಧಾನಿ ಅವರು ನೀಡಿದ ಒಪ್ಪಿಗೆಗೆ ಸಮ್ಮತಿ ನೀಡಿತು.

2009: ಶ್ರೀಲಂಕಾದಲ್ಲಿ ಮುಂದುವರಿದ ಘೋರ ಕಾಳಗದಲ್ಲಿ ಒಂದೆಡೆ ಭೂಸೇನೆಯು ಇನ್ನಷ್ಟು ಮುನ್ನುಗ್ಗಿ 66 ತಮಿಳು ಉಗ್ರರ ಹತ್ಯೆ ಮಾಡಿದರೆ, ಇನ್ನೊಂದೆಡೆ ನೌಕಾಪಡೆಯು ವೈರಿಗಳ ಎರಡು ದೋಣಿಗಳನ್ನು ಹೊಡೆದುರುಳಿಸಿ 14 ಬಂಡುಕೋರರನ್ನು ಹತ್ಯೆ ಮಾಡಿತು. ಯುದ್ಧ ನಿರ್ಬಂಧ ವಲಯದಲ್ಲಿ ಎಲ್‌ಟಿಟಿಇ ಹಿಡಿತದಲ್ಲಿ ಅಳಿದುಳಿದ ಪ್ರದೇಶವನ್ನೂ ಸೇನಾ ಪಡೆಗಳು ವಶಪಡಿಸಿಕೊಳ್ಳತೊಡಗಿದವು. 'ಈ ಸಂದರ್ಭದಲ್ಲಿ 14 ಕಡಲು ವ್ಯಾಘ್ರರು ಸೇರಿ ಕನಿಷ್ಠ 80 ತಮಿಳು ಉಗ್ರರು ಹತರಾಗಿದ್ದಾರೆ' ಎಂದು ರಕ್ಷಣಾ ಸಚಿವಾಲಯ ಹೇಳಿತು.

2009: ಜೆಡಿ (ಯು) ನಾಯಕ ನಿತೀಶ್ ಕುಮಾರ್ ಅವರ ಮೇಲೆ ಅಚ್ಚರಿಯ ದಾಳಿ ನಡೆಸಿದ ಎಂ. ವೀರಪ್ಪ ಮೊಯಿಲಿ ಅವರನ್ನು ಕಾಂಗ್ರೆಸ್ ವರಿಷ್ಠ ಮಂಡಳಿಯು ಹಠಾತ್ತನೆ ಕಾಂಗ್ರೆಸ್ ಮಾಧ್ಯಮ ವಿಭಾಗದ ಅಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಿತು. ಹಿಂದೆ ಇದೇ ಹುದ್ದೆ ನಿಭಾಯಿಸುತ್ತಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೇದಿ ಅವರನ್ನು ಮೊಯಿಲಿ ಸ್ಥಾನಕ್ಕೆ ನೇಮಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿದವು. ನಿತೀಶ್ ಕುಮಾರ್ ಅವರನ್ನು 'ಹೀರೋ' ಮಾಡಲು ಕಾಂಗ್ರೆಸ್ ಪಕ್ಷವು ಹೊರಡುವುದಿಲ್ಲ ಎಂದು ಮೊಯಿಲಿ ಹೇಳಿದ್ದರು.

2009: ಬೆಂಗಳೂರು ವಿಶ್ವವಿದ್ಯಾಲಯದ ಸಂವಹನ ವಿಭಾಗದ ಪ್ರಾಧ್ಯಾಪಕ ಪ್ರೊ.ಬಿ.ಎ.ಶ್ರೀಧರ (59) ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೂಲತಃ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದವರಾದ ಶ್ರೀಧರ ಅವರು ಹತ್ತು ದಿನಗಳ ಹಿಂದೆ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. 'ಪ್ರಜಾವಾಣಿ'ಯಲ್ಲಿ ಕೆಲವು ತಿಂಗಳುಗಳ ಕಾಲ 'ಟಿವಿ ಲೋಕ' ಅಂಕಣ ಬರೆದಿದ್ದ ಶ್ರೀಧರ್ ಅವರ ಮೂರು ಕೃತಿಗಳು ಇತ್ತೀಚೆಗೆ ಪ್ರಕಟವಾಗಿದ್ದವು. ಜಗತ್ತಿನ ಶ್ರೇಷ್ಠ ಚಿಂತಕರನ್ನು ಕುರಿತ 'ಇಳೆಯ ಬೆಳಗು', ಇಪ್ಪತ್ತನೇ ಶತಮಾನದ ವಿದ್ಯಮಾನಗಳನ್ನು ಕುರಿತ 'ಪಲ್ಲಟ ಪರ್ವ', ಮಹಾತ್ಮ ಗಾಂಧೀಜಿ ಚಿಂತನೆಗಳನ್ನು ಕುರಿತ 'ಬಾಪೂ ಚಿಂತನೆ' ಎಂಬ ಬರಹ ಸಂಕಲನಗಳು ಬಿಡುಗಡೆಯಾಗಿದ್ದವು.

2008: ಹಿಂದೂಗಳ ಮನ ನೋಯಿಸದಿರಲು ಬ್ರಿಟಿಷ್ ಏರ್ವೇಸ್ ತನ್ನ ಅಂತಾರಾಷ್ಟ್ರೀಯ ವಿಮಾನಯಾನದ ಎಕಾನಮಿ ದರ್ಜೆಯ ಪ್ರಯಾಣಿಕರ ಖಾದ್ಯಪಟ್ಟಿಯಿಂದ ಗೋಮಾಂಸವನ್ನು ತೆಗೆದುಹಾಕಿತು. ಬ್ರಿಟಿಷ್ ಏರ್ ವೇಸ್ಗೆ ಭಾರತ ಎರಡನೇ ಅತಿ ದೊಡ್ಡ ಮಾರುಕಟ್ಟೆ. `ಧಾರ್ಮಿಕ ನಿರ್ಬಂಧ'ದ ಅಡಿ ಗೋಮಾಂಸಕ್ಕೆ ಬದಲು ಮೀನು, ಕೋಳಿಮಾಂಸ ನೀಡಲಾಗುವದು ಎಂದು ಏರ್ ವೇಸ್ ತಿಳಿಸಿತು.

2008: ಹೈದರಾಬಾದಿನ ಕೋಶ ಮತ್ತು ಅಣು ಜೀವಶಾಸ್ತ್ರ ಕೇಂದ್ರದ ವಿಜ್ಞಾನಿಗಳು ಗಿಡಗಳ ವಂಶವಾಹಿಯೊಂದರ (ಜೀನ್) ಕಿವಿ ಹಿಂಡಿ ಅದರ ಲಿಂಗ ಪರಿವರ್ತಿಸಲು ಸಾಧ್ಯ ಎಂದು ಕಂಡು ಕೊಂಡಿರುವುದಾಗಿ ಪ್ರಕಟಿಸಿದರು. ಈ ಸಂಶೋಧನೆಯಿಂದ ಬೆಳೆಗಳ ಉತ್ಪಾದನೆ ಹೆಚ್ಚಳ ಸುಸ್ಥಿರಗೊಳ್ಳುವಂತೆ ಮಾಡಬಹುದು ಎಂಬುದು ಈ ವಿಜ್ಞಾನಿಗಳು ಲೆಕ್ಕಾಚಾರ. `ಡ್ಯಾಡ್' ಹೆಸರಿನ ಈ ವಂಶವಾಹಿಯನ್ನು ಗುರುತಿಸಿದವರು ಕೇಂದ್ರದ ಖ್ಯಾತ ಸಂಶೋಧಕ ಇಮ್ರಾನ್ ಸಿದ್ದಿಕಿ. ಅರಬಿಡೋಪ್ಸಿಸ್ ಎಂಬ ಗಿಡದಲ್ಲಿನ ಈ ವಂಶವಾಹಿಯ ವಿಶೇಷ ಗುಣವನ್ನು ಅವರು ಪತ್ತೆ ಮಾಡಿದರು. ಈ ನಿರ್ದಿಷ್ಟ ವಂಶವಾಹಿ ಎಲ್ಲ ಗಿಡಮರಗಳಲ್ಲೂ ಇರುತ್ತದೆ ಎಂಬುದನ್ನು ನಾವು ಪತ್ತೆ ಹಚ್ಚಿದ್ದೇವೆ ಎನ್ನುತ್ತಾರೆ ಸಿದ್ದಿಕಿ. ಈ ಸಂಶೋಧನೆ ಖಚಿತ ಹಂತಕ್ಕೆ ಬಂದರೆ ರೈತರು ಹೈಬ್ರಿಡ್ ಬೀಜಗಳನ್ನು ಖರೀದಿಸದೆಯೇ ಅತಿ ಹೆಚ್ಚು ಬೆಳೆ ಬೆಳೆಯುವ ಸಸಿಗಳನ್ನು ಬೆಳೆಸಿಕೊಳ್ಳಬಹುದು ಎಂಬುದು ಸಿದ್ದಿಕಿ ಮತ್ತು ಇತರ ವಿಜ್ಞಾನಿಗಳು ಅಭಿಪ್ರಾಯ.

2008: ಜಮ್ಮು ವಲಯದ ಸಾಂಬಾ ವಿಭಾಗದಲ್ಲಿ ಬಿ ಎಸ್ ಎಫ್ ತಪಾಸಣಾ ಕೇಂದ್ರದ ಮೇಲೆ ಪಾಕಿಸ್ಥಾನದ ಕಡೆಯಿಂದ ಭಾರಿ ಗುಂಡಿನ ದಾಳಿ ನಡೆಯಿತು. ಉಗ್ರಗಾಮಿಗಳ ನುಸುಳುವಿಕೆ ಯತ್ನ ಇದೆಂದು ವರದಿಗಳು ಹೇಳಿದವು. ರಾತ್ರಿ 10.40ರ ವೇಳೆಯಲ್ಲಿ ಈ ಘಟನೆ ನಡೆಯಿತು. ಬಿ ಎಸ್ ಎಫ್ ನ 112ನೇ ಬೆಟಾಲಿಯನ್ನಿಗೆ ಸೇರಿದ ತಪಾಸಣಾ ಕೇಂದ್ರದ ಮೇಲೆ ಭಾರಿ ಗುಂಡಿನ ದಾಳಿ ನಡೆಯಿತು. ಶಂಕಿತ ಉಗ್ರಗಾಮಿಗಳು ಬಿ ಎಸ್ ಎಫ್ ತಪಾಸಣಾ ಕೇಂದ್ರದ ಮೇಲೆ ಸುಮಾರು 1000 ಸುತ್ತು ಗುಂಡು ಹಾರಿಸಿ 16 ಗ್ರೆನೇಡುಗಳನ್ನು ಎಸೆದರು.

2008: ಐಪಿಎಲ್ ಪಂದ್ಯವೊಂದರಲ್ಲಿ ಆಫ್ ಸ್ಪಿನ್ನರ್ ಹರಭಜನ್ ಸಿಂಗ್ ಅವರು ವೇಗಿ ಎಸ್. ಶ್ರೀಶಾಂತ್ ಕೆನ್ನೆಗೆ ಬಾರಿಸಿದ ಪ್ರಕರಣದ ವಿಚಾರಣೆಯನ್ನು ಆಯುಕ್ತ ಸುಧೀರ್ ನಾನಾವತಿ ಅವರು ಮುಗಿಸಿದರು.

2008: ಪಾಕಿಸ್ಥಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಅವರು 1993ರಲ್ಲಿ ತಾವು ಪ್ರಧಾನಿ ಆಗಿದ್ದಾಗ ಪರಮಾಣು ತಂತ್ರಜ್ಞಾನದ ರಹಸ್ಯವನ್ನು ಉತ್ತರ ಕೊರಿಯಾಕ್ಕೆ ತಮ್ಮ ಕೋಟಿನೊಳಗೇ ಇರಿಸಿ ರವಾನಿಸಿದ ಅಂಶ ಬಯಲಾಯಿತು. ಭುಟ್ಟೊ ಅವರ ಆಪ್ತ ಗೆಳೆಯ ಹಾಗೂ ಆಕ್ಸ್ ಫರ್ಡ್ ಸಹಪಾಠಿ ಶ್ಯಾಮ್ ಭಾಟಿಯಾ ಅವರು ಬರೆದಿರುವ `ಗುಡ್ ಬೈ ಶಹಜಾದಿ' ಜೀವನ ಚರಿತ್ರೆ ಕೃತಿ ಈ ಸ್ಫೋಟಕ ಅಂಶವನ್ನು ಬಹಿರಂಗಪಡಿಸಿತು. ಕ್ಷಿಪಣಿ ಪಡೆಯುವ ಸಲುವಾಗಿ ಪಾಕಿಸ್ಥಾನವು ಉತ್ತರ ಕೊರಿಯಾಕ್ಕೆ ಯುರೇನಿಯಮ್ಮನ್ನು ಇಂಧನವಾಗಿ ಬಳಸುವ (ಎನ್ರಿಚ್ ಮೆಂಟ್) ತಂತ್ರಜ್ಞಾನವನ್ನು ಹಸ್ತಾಂತರಿಸಿತ್ತು. ಭುಟ್ಟೊ ಅವರೇ ಇದರಲ್ಲಿ ನೇರ ಪಾತ್ರ ವಹಿಸಿದ್ದರು ಎಂದು ಕೃತಿ ತಿಳಿಸಿತು. ಶ್ಯಾಮ್ ಭಾಟಿಯಾ ಅವರೊಂದಿಗೆ ಸಂಭಾಷಣೆ ನಡೆಸುತ್ತಿದ್ದಾಗ ಸ್ವತಃ ಬೆನಜೀರ್ ಭುಟ್ಟೊ ಅವರೇ ಈ ಮಾಹಿತಿ ನೀಡಿದ್ದರು ಎಂದು ಕೃತಿ ತಿಳಿಸಿತು. ಪಾಕಿಸ್ಥಾನದ ಸೇನಾ ಸಂಶೋಧನೆಯ ಪ್ರತಿಯೊಂದು ನಡೆಯನ್ನೂ ಭಾರತ, ರಷ್ಯ ಮತ್ತು ಕೆಲವು ಪಾಶ್ಚಾತ್ಯ ರಾಷ್ಟ್ರಗಳು ಸೂಕ್ಷ್ಮವಾಗಿ ಗಮನಿಸುತ್ತಿದ್ದವು. ಇವರೆಲ್ಲರ ಕಣ್ಣು ತಪ್ಪಿಸಲು ಭುಟ್ಟೊ ಅವರು ಸ್ವತಃ ತಾವೇ ಈ ಸೂಕ್ಷ್ಮ ಮಾಹಿತಿ ರವಾನೆಯ ಹೊಣೆ ಹೊತ್ತುಕೊಂಡರು ಎಂದು ಪುಸ್ತಕ ತಿಳಿಸಿತು. `ಭುಟ್ಟೊ ಅವರು 1993ರ ಕೊನೆಯಲ್ಲಿ ಉತ್ತರ ಕೊರಿಯಾಕ್ಕೆ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿತ್ತು. ಪರಮಾಣು ತಂತ್ರಜ್ಞಾನದ ಮಾಹಿತಿಯನ್ನು ತಾವೇ ತರಲಿದ್ದು, ಪೆಂಗ್ಯಾಂಗಿಗೆ ತಲುಪಿದ ತಕ್ಷಣ ಅದನ್ನು ಹಸ್ತಾಂತರಿಸುವುದಾಗಿ ಅವರು ಉತ್ತರ ಕೊರಿಯಾಕ್ಕೆ ತಿಳಿಸಿದರು. ಇಸ್ಲಾಮಾಬಾದಿನಿಂದ ತೆರಳುವ ಮೊದಲು ಅವರು ಆಳವಾದ ಜೇಬು ಇರುವ ಓವರ್ ಕೋಟ್ ಒಂದನ್ನು ಖರೀದಿಸಿದರು. ಉತ್ತರ ಕೊರಿಯಾ ಬಯಸಿದ್ದ ಯುರೇನಿಯಂ ಎನ್ರಿಚ್ ಮೆಂಟ್ ತಂತ್ರಜ್ಞಾನದ ಬಗ್ಗೆ ಮಾಹಿತಿ ಇದ್ದ ಸಿ.ಡಿ.ಗಳನ್ನು ಜೇಬಿನಲ್ಲಿ ಇಟ್ಟರು' ಎಂದು ಪುಸ್ತಕ ವಿವರಿಸಿತು. ವಾಪಸ್ ಬರುವಾಗ ಅವರು ಉತ್ತರ ಕೊರಿಯಾದ ಕ್ಷಿಪಣಿ ಮಾಹಿತಿಗಳನ್ನು ಸಿ.ಡಿ.ಗಳಲ್ಲಿ ತಂದಿದ್ದರು' ಎಂದು ಶ್ಯಾಮ್ ಭಾಟಿಯಾ ಕೃತಿ ಹೇಳಿತು.

2008: ವಿಶ್ವ ಚೆಸ್ ಚಾಂಪಿಯನ್ ಭಾರತದ ವಿಶ್ವನಾಥನ್ ಆನಂದ್ ಅವರು ಚೆಸ್ ಆಟಗಾರರಿಗೆ ನೀಡಲಾಗುವ ಅತ್ಯುನ್ನತ ಪದವಿ `ಆಸ್ಕರ್' ಪ್ರಶಸ್ತಿಯನ್ನು ಐದನೇ ಬಾರಿ ಪಡೆದರು. 2007ರಲ್ಲಿ ಆನಂದ್ ತೋರಿದ ಶ್ರೇಷ್ಠ ಸಾಧನೆಗಾಗಿ ಈ ಪ್ರಶಸ್ತಿ ನೀಡಲಾಯಿತು. ಆನಂದ್ ಈ ಮೊದಲು 1997, 1998, 2003 ಹಾಗೂ 2004ರಲ್ಲಿ ಈ ಗೌರವ ಪಡೆದಿದ್ದರು.

2008: ಇಟಲಿಯ ಪ್ರಧಾನಿಯಾಗಿ ಸಿಲ್ವಿಯೊ ಬೆರ್ಲುಸ್ ಕೋನಿ (71) ಅವರು ಮೂರನೇ ಬಾರಿಗೆ ಅಧಿಕಾರ ವಹಿಸಿಕೊಂಡರು. ಏಪ್ರಿಲ್ 13-14ರಂದು ನಡೆದ ಚುನಾವಣೆಯಲ್ಲಿ ಸಿಲ್ವಿಯೊ ಅವರ ಕನ್ಸರ್ವೇಟಿವ್ ಪಕ್ಷ ಬಹುಮತ ಗಳಿಸಿತ್ತು.

2007: ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರ ಹಿರಿಯ ಪುತ್ರ ಎಂ.ಕೆ. ಅಳಗಿರಿ ಅವರ ಬೆಂಬಲಿಗರು ಮದುರೆಯಲ್ಲಿ ಜನಪ್ರಿಯ ತಮಿಳು ದೈನಿಕ `ದಿನಕರನ್' ಕಚೇರಿ ಮೇಲೆ ದಾಳಿ ಮಾಡಿ ಇಬ್ಬರು ನೌಕರರು ಹಾಗೂ ಭದ್ರತಾ ಸಿಬ್ಬಂದಿಯನ್ನು ಕೊಂದು ಹಾಕಿದರು. ಇದರೊಂದಿಗೆ ಆಡಳಿತಾರೂಢ ಡಿಎಂಕೆಯ ಸಂಭಾವ್ಯ ಉತ್ತರಾಧಿಕಾರಿ ಸಮರ ಬಹಿರಂಗವಾಗಿ ಬೀದಿಗೆ ಬಂತು. ಕರುಣಾನಿಧಿಯ ಕಿರಿಯ ಪುತ್ರ ಎಂ.ಕೆ. ಸ್ಟಾಲಿನ್ ಅವರನ್ನು 84ರ ಹರೆಯದ ಕರುಣಾನಿಧಿ ಅವರ ರಾಜಕೀಯ ಉತ್ತರಾಧಿಕಾರಿ ಎಂಬುದಾಗಿ ಬಿಂಬಿಸಿ `ದಿನಕರನ್' ಪ್ರಕಟಿಸಿದ ಸಮೀಕ್ಷೆಗೆ ಪ್ರತಿಭಟನೆಯಾಗಿ ಈ ದಾಳಿ ನಡೆಯಿತು.

2007: ಮೂಲಸೌಕರ್ಯಗಳಿಲ್ಲದ ಕಾರಣಕ್ಕಾಗಿ 27 ನರ್ಸಿಂಗ್ ಕಾಲೇಜುಗಳ ಮಾನ್ಯತೆಯನ್ನು (ಸಂಯೋಜನೆ) ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯವು ರದ್ದುಪಡಿಸಿತು. ಹೈಕೋರ್ಟ್ ನೀಡಿರುವ ತೀರ್ಪಿನ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿ.ವಿ. ಕುಲಪತಿ ಡಾ.ಪಿ.ಎಸ್. ಪ್ರಭಾಕರನ್ ಪ್ರಕಟಿಸಿದರು.

2007: ಮಹಿಳಾ ನೌಕರರಿಗೆ ರಾತ್ರಿ ಪಾಳಿಯನ್ನು ನಿಷೇಧಿಸುವ ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆ ಕಾಯ್ದೆ- 1961ರ ತಿದ್ದುಪಡಿಗೆ ರಾಜ್ಯ ಸರ್ಕಾರವು ಸಮ್ಮತಿ ನೀಡಿದ್ದು, ರಾಜ್ಯಪಾಲರ ಮುದ್ರೆ ಪಡೆದ ನಂತರ ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಕಾಯ್ದೆ 2007 ನ್ನು ಏಪ್ರಿಲ್ 30ರಂದು ರಾಜ್ಯಪತ್ರದಲ್ಲಿ (ಗೆಜೆಟ್) ಪ್ರಕಟಿಸಿದೆ, ಈ ಸಂಬಂಧ ಅಧಿಸೂಚನೆ 15 ದಿನಗಳ ಒಳಗೆ ಜಾರಿಯಾಗಲಿದೆ ಎಂದು ಕಾರ್ಮಿಕ ಸಚಿವ ಇಕ್ಬಾಲ್ ಅನ್ಸಾರಿ ಪ್ರಕಟಿಸಿದರು.

2007: ಕರ್ನಾಟಕದಲ್ಲಿ ಸುಮಾರು 1728.68 ಕೋಟಿ ರೂಪಾಯಿ ಹೂಡಿಕೆಯ ಎರಡು ವಿಶೇಷ ವಿತ್ತ ವಲಯಗಳಿಗೆ ಕೇಂದ್ರ ಸರ್ಕಾರವು ಮಂಜೂರಾತಿ ನೀಡಿತು. ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ತುಂಬೆ ಗ್ರಾಮದ ಬಳಿ 432.84 ಕೋಟಿ ರೂಪಾಯಿ ಹೂಡಿಕೆಯೊಂದಿಗೆ ಮಾಹಿತಿ ತಂತ್ರಜ್ಞಾನ ವಲಯ ಸ್ಥಾಪನೆ ಹಾಗೂ ಉಡುಪಿ ತಾಲ್ಲೂಕಿನ ಹೆಜಮಾಡಿ, ನಂದಿಕೂರು, ಫಲಿಮಾರು ಹಾಗೂ ನಡ್ಸಾಲು (ಪಡುಬಿದ್ರಿ) ಗ್ರಾಮಗಳ ಬಳಿ ಉನ್ನತ ತಂತ್ರಜ್ಞಾನ ಉತ್ಪನ್ನಗಳು ಹಾಗೂ ಸಂಬಂಧಿತ ಸೇವೆಗಳ ವಿಶೇಷ ಆರ್ಥಿಕ ವಲಯ ಸ್ಥಾಪನೆ ಇವುಗಳಲ್ಲಿ ಸೇರಿವೆ.

2007: ಪ್ರಶಸ್ತಿ ಪ್ರದಾನ ಸಮಾರಂಭ ಒಂದರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅವರ ಪಂಚೆ ಎಳೆದ ಆರೋಪ ಹೊತ್ತಿದ್ದ ಕನ್ನಡ ಸಂಘರ್ಷ ಸಮಿತಿಯ ಐವರು ಪದಾಧಿಕಾರಿಗಳನ್ನು ನಿರ್ದೋಷಿಗಳು ಎಂದು ಬೆಂಗಳೂರು ನಗರದ ಒಂದನೇ ಹೆಚ್ಚುವರಿ ಪ್ರಧಾನ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್ ತೀರ್ಪು ನೀಡಿತು.

2007: ಭೂ ಮೇಲ್ಮೈಯಿಂದ ಭೂ ಮೇಲ್ಮೈಗೆ ನೆಗೆಯುವಂತಹ ಅತ್ಯಾಧುನಿಕ ಮಧ್ಯಂತರಗಾಮೀ ಸ್ವದೇಶೀ ನಿರ್ಮಿತ `ಪೃಥ್ವಿ-1' ಕ್ಷಿಪಣಿಯ ಪರೀಕ್ಷಾ ಉಡಾವಣೆಯನ್ನು ಭಾರತವು ಒರಿಸ್ಸಾದ ಬಾಲಸೋರ್ ಸಮೀಪದ 15 ಕಿ.ಮೀ. ದೂರದ ಚಂಡಿಪುರದ ಸಮಗ್ರ ಪರೀಕ್ಷಾ ವಲಯದಿಂದ ಯಶಸ್ವಿಯಾಗಿ ನಡೆಸಿತು.

2007: ಲೇಖಕ ಮತ್ತು ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಶಶಿ ತರೂರ್ ಅವರಿಗೆ ಸಾಗರೋತ್ತರ ಭಾರತೀಯರಿಗೆ ನೀಡುವ ಅತ್ಯುನ್ನತ ಪ್ರಶಸ್ತಿಯಾದ ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿಯನ್ನು ನೀಡಲಾಯಿತು.

2007: ಕನ್ನಡ ಸಾಹಿತ್ಯ ಪರಿಷತ್ ಮತ್ತು ಬಿಎಂಟಿಸಿ ಸಹಯೋಗದಲ್ಲಿ ನೀಡಲಾಗುವ ಪ್ರತಿಷ್ಠಿತ `ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನೃಪತುಂಗ ಪ್ರಶಸ್ತಿ'ಗೆ ಹಿರಿಯ ಸಾಹಿತಿ ಪ್ರೊ. ದೇ. ಜವರೇಗೌಡ ಅವರನ್ನು ಆಯ್ಕೆ ಮಾಡಲಾಯಿತು.

2006: ಭಾರತದ ಮಹತ್ವಾಕಾಂಕ್ಷೆಯ `ಚಂದ್ರಯಾನ-1' ಯೋಜನೆಯ ಐತಿಹಾಸಿಕ ಒಪ್ಪಂದ ಪತ್ರಕ್ಕೆ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದ ಜಾಗತಿಕ ದಿಗ್ಗಜ ಸಂಸ್ಥೆಗಳಾದ ಭಾರತದ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಮತ್ತು ಅಮೆರಿಕದ ಬಾಹ್ಯಾಕಾಶ ಸಂಸ್ಥೆ `ನಾಸಾ' ಸಹಿ ಹಾಕಿದವು. ಇದರೊಂದಿಗೆ ಉಭಯ ರಾಷ್ಟ್ರಗಳ ಬಾಹ್ಯಾಕಾಶ ಸಂಶೋಧನೆ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಆರಂಭಗೊಂಡಿತು. ಭಾರತದ ಶ್ರೀಹರಿಕೋಟಾದಿಂದಲೇ ಮಾನವ ರಹಿತ `ಚಂದ್ರಯಾನ-1' ಉಪಗ್ರಹ ಉಡಾವಣೆಗೊಳ್ಳಲಿದ್ದು, ಚಂದ್ರಲೋಕದ ಪೂರ್ವಾಪರಗಳ ಸಂಶೋಧನೆ ನಡೆಸುವುದು.

2006: ವಿವಾದಾತ್ಮಕ `ಲಾಭದ ಹುದ್ದೆ' ವ್ಯಾಪ್ತಿಯಿಂದ ಇನ್ನಷ್ಟು ಹುದ್ದೆಗಳಿಗೆ ವಿನಾಯ್ತಿ ನೀಡುವ ಸಲುವಾಗಿ ಕಾಯ್ದೆಗೆ ತಿದ್ದುಪಡಿ ತರಲು ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ನಿರ್ಧರಿಸಿತು.

2006: ವಾರಣಾಸಿ ಸಂಕಟ ಮೋಚನ ಹನುಮಾನ್ ಮಂದಿರದಲ್ಲಿ ನಡೆದ ಬಾಂಬ್ ಸ್ಫೋಟದ ರೂವಾರಿ ಎನ್ನಲಾದ ಜಾವೇದ್ ಯಾನೆ ಜುಬೇರ್ ಜಮ್ಮು-ಕಾಶ್ಮೀರ ಪೊಲೀಸರ ಗುಂಡಿಗೆ ಬಲಿಯಾದ. ಉತ್ತರ ಪ್ರದೇಶದ ಭರೂಜ್ ನಿವಾಸಿ ಜುಬೇರನ ಚಟುವಟಿಕೆಗಳ ಮೇಲೆ ಒಂದು ತಿಂಗಳಿನಿಂದ ಕಣ್ಣಿಡಲಾಗಿತ್ತು.

2006: ಮಾನವ ಹಕ್ಕುಗಳ ಮಂಡಳಿಯ ಸದಸ್ಯತ್ವಕ್ಕೆ ಭಾರತವು ಆಯ್ಕೆಯಾಯಿತು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಏಷ್ಯಾದ 13 ರಾಷ್ಟ್ರಗಳನ್ನು ಗೌಪ್ಯ ಮತದಾನಕ್ಕೆ ಒಳಪಡಿಸಿದಾಗ ಭಾರತಕ್ಕೆ ಅತೀ ಹೆಚ್ಚು ಅಂದರೆ 173 ಮತಗಳು ಬಂದವು.

2006: ಆಸ್ಟ್ರೇಲಿಯಾದ ಗಣಿಯೊಳಗಿನ ತಂತಿಯ ಪಂಜರದಲ್ಲಿ 14ದಿನಗಳ ಕಾಲ ಸಿಕ್ಕಿ ಹಾಕಿಕೊಂಡಿದ್ದ ಬ್ರಾಂಟ್ ವೆಬ್ (37) ಮತ್ತು ಟಾಡ್ ರಸೆಲ್ (34) ಎಂಬ ಇಬ್ಬರು ಆಸ್ಟ್ರೇಲಿಯಾ ಗಣಿಕಾರ್ಮಿಕರನ್ನು ಬೆಳಗಿನ ಜಾವ ರಕ್ಷಿಸಲಾಯಿತು. ಮೂರನೇ ಗಣಿಕಾರ್ಮಿಕ ಲ್ಯಾರಿ ನೈಟ್ (44) ಭೂಕುಸಿತದಲ್ಲಿ ಸಾವಿಗೀಡಾದ. ಭೂಕಂಪದಿಂದ ಭೂಕುಸಿತ ಉಂಟಾಗಿ ಈ ಗಣಿ ಕಾರ್ಮಿಕರು 925 ಮೀಟರ್ ಆಳದಲ್ಲಿ ಎರಡು ಹಾಸಿಗೆ ಹಾಕುವಷ್ಟು ತಂತಿಯಿಂದ ಮಾಡಿದ ಪಂಜರದಲ್ಲಿ ಏ.25ರಂದು ಸಿಕ್ಕಿಹಾಕಿಕೊಂಡಿದ್ದರು.

2006: ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ತಿಂಡಿವನಮ್ಮಿನಲ್ಲಿ ಪಿಎಂಕೆಯಿಂದ ಪಕ್ಷಾಂತರಗೊಂಡ ಎಐಎಡಿಎಂಕೆ ಕಾರ್ಯಕರ್ತ ಮುರುಘನಂದಮ್ ಕೊಲೆಗೆ ಮೇ 8ರ ರಾತ್ರಿ ಪ್ರಚೋದನೆ ನೀಡಿದ ಆಪಾದನೆಯಲ್ಲಿ ಕೇಂದ್ರ ಆರೋಗ್ಯ ಸಚಿವ ಡಾ. ಅನ್ಬುಮಣಿ ರಾಮದಾಸ್ ಮತ್ತು ಪಿ ಎಂ ಕೆ ಸ್ಥಾಪಕ ಡಾ. ಎಸ್. ರಾಮದಾಸ್ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದರು.

1994: ದಕ್ಷಿಣ ಆಫ್ರಿಕಾದ ನೂತನ ಚುನಾಯಿತ ಸಂಸತ್ತು ನೆಲ್ಸನ್ ಮಂಡೇಲಾ ಅವರನ್ನು ರಾಷ್ಟ್ರದ ಪ್ರಥಮ ಕರಿಯ ರಾಷ್ಟ್ರಪತಿಯಾಗಿ ಆಯ್ಕೆ ಮಾಡಿತು.

1986: ಎಡ್ಮಂಡ್ ಹಿಲರಿ ಜೊತೆಗೆ ಮೊತ್ತ ಮೊದಲ ಬಾರಿಗೆ ಎವರೆಸ್ಟ್ ಪರ್ವತವನ್ನು ಏರಿದ್ದ ತೇನ್ ಸಿಂಗ್ ನಾರ್ಗೆ ಡಾರ್ಜಿಲಿಂಗಿನಲ್ಲಿ ತನ್ನ 72ನೇ ಹುಟ್ಟುಹಬ್ಬಕ್ಕೆ 6 ದಿನ ಮುಂಚಿತವಾಗಿ ಮೃತನಾದ.

1984: ಭಾರತದ ಫು ದೋರ್ಜಿ ಆಮ್ಲಜನಕ ಇಲ್ಲದೆಯೇ ಮೌಂಟ್ ಎವರೆಸ್ಟ್ ಏರಿದ ಪ್ರಥಮ ಭಾರತೀಯ ಎನ್ನಿಸಿಕೊಂಡ.

1975: ಕಲಾವಿದೆ ಯಮುನಾ ರಾಣಿ ಜನನ.

1951: ಕಲಾವಿದೆ ಲತಾ ನಾಡಿಗೇರ್ ಜನನ.

1935: ಕಲಾವಿದ ಬಿ.ಆರ್.ಜಿ. ರಾವ್ ಜನನ.

1927: ಸಂಗೀತ, ನೃತ್ಯ, ಭೌತ ವಿಜ್ಞಾನ, ಪುರಾತತ್ವ ಕ್ಷೇತ್ರಗಳಲ್ಲಿ ಖ್ಯಾತಿ ಪಡೆದ ಸಂಗೀತಗಾರರ ಮನೆತನದ ರಾ. ಸತ್ಯನಾರಾಯಣ ಅವರು ರಾಮಯ್ಯ- ವರಲಕ್ಷ್ಮಮ್ಮ ದಂಪತಿಯ ಮಗನಾಗಿ ಮೈಸೂರಿನಲ್ಲಿ ಜನಿಸಿದರು.

1921: ಕಲಾವಿದ ನಾರಾಯಣ ಎಲ್. ನಾಥನ್ ಜನನ.

1915: ಕಲಾವಿದ ಮಣಿ ಅಯ್ಯರ್ ಜನನ.

1908: ಕನ್ನಡನಾಡು, ನುಡಿಯ ಬಗ್ಗೆ ಮುಂಚೂಣಿಯ ಹೋರಾಟಗಾರರಾಗಿ ಕನ್ನಡಿಗರಲ್ಲಿ ಕನ್ನಡತನ ಬಡಿದೆಬ್ಬಿಸಿದ ಅರಕಲಗೂಡು ನರಸಿಂಗರಾಯ ಕೃಷ್ಣರಾಯ (ಅ.ನ.ಕೃ) (1908-1971) ಅವರು ಈದಿನ ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ನರಸಿಂಗರಾಯ- ಅನ್ನಪೂರ್ಣಮ್ಮ ದಂಪತಿಯ ಪುತ್ರರಾಗಿ ಜನಿಸಿದರು. ಶಾಲಾ ದಿನಗಳಿಂದಲೇ ಸಾಹಿತ್ಯದ ಹುಚ್ಚು ಹಚ್ಚಿಕೊಂಡ ಇವರನ್ನು ಮಣಿಪಾಲದ 42ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಮೂಲಕ ನಾಡು ಗೌರವಿಸಿತು. 14 ಐತಿಹಾಸಿಕ ಕಾದಂಬರಿ ಸೇರಿ 116 ಕಾದಂಬರಿ, ನಾಟಕಗಳು, ಸಾಹಿತ್ಯ ವಿಮರ್ಶೆ, ಜೀವನ ಚರಿತ್ರೆ, ಅನುವಾದ, ಸಂಪಾದಿತ ಗ್ರಂಥಗಳು ಇತ್ಯಾದಿ ಸೇರಿ ಒಟ್ಟು 250ಕ್ಕೂ ಹೆಚ್ಚು ಕೃತಿ ರಚಿಸಿದವರು ಅ.ನ.ಕೃ. 1971ರ ಜುಲೈ 8ರಂದು ಅವರು ನಿಧನರಾದರು.

1866: ಗೋಪಾಲ ಕೃಷ್ಣ ಗೋಖಲೆ (1866-1915) ಜನ್ಮದಿನ. ಭಾರತದ ರಾಷ್ಟ್ರೀಯ ನಾಯಕರಾದ ಇವರು ರಾಷ್ಟ್ರದ ಅತ್ಯಂತ ದುರ್ಬಲ ವರ್ಗದ ಜನರ ಏಳಿಗೆಗಾಗಿ `ಸರ್ವೆಂಟ್ಸ್ಸ್ ಆಫ್ ಇಂಡಿಯಾ ಸೊಸೈಟಿ ಸ್ಥಾಪಿಸಿದರು. ಪುಣೆಯಲ್ಲಿ ರಾನಡೆ ಇನ್ ಸ್ಟಿಟ್ಯೂಟ್ ಆಫ್ ಇಕನಾಮಿಕ್ಸ್ ಸ್ಥಾಪಿಸಿದ್ದು ಕೂಡಾ ಇವರೇ.

1800: ಅಮೆರಿಕದ ಗುಲಾಮೀ ಪದ್ಧತಿ ವಿರೋಧಿ ಹೋರಾಟಗಾರ ಜಾನ್ ಬ್ರೌನ್ (1800-1849) ಜನ್ಮದಿನ. ಗುಲಾಮೀ ಪದ್ಧತಿಯನ್ನು ಹೋಗಲಾಡಿಸಲು ಈತ ನಡೆಸಿದ ಪ್ರಯತ್ನಗಳು ಅಮೆರಿಕದ ಅಂತರ್ಯುದ್ಧಕ್ಕೆ ಪ್ರಮುಖ ಕಾರಣಗಳಾದವು.

No comments:

Post a Comment