Wednesday, May 9, 2018

ಇಂದಿನ ಇತಿಹಾಸ History Today ಮೇ 08

ಇಂದಿನ ಇತಿಹಾಸ History Today ಮೇ 08

2018: ನವದೆಹಲಿ : ’ಪರಿಸ್ಥಿತಿ ಅಭೂತಪೂರ್ವ ಎಂದು ಬಣ್ಣಿಸಿದರೂ, ಕಾಂಗ್ರೆಸ್ ಸಂಸತ್ ಸದಸ್ಯರು ಅರ್ಜಿಯನ್ನು ಹಿಂತೆಗೆದುಕೊಂಡದ್ದನ್ನು ಅನುಸರಿಸಿ ಸುಪ್ರೀಂಕೋರ್ಟಿನ ಪಂಚಸದಸ್ಯ ಪೀಠವು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆ ಐ) ದೀಪಕ್ ಮಿಶ್ರ ಅವರನ್ನು ವಾಗ್ದಂಡನೆಗೆ ಗುರಿಪಡಿಸುವುದಕ್ಕೆ ಸಂಬಂಧಿಸಿದ ಅರ್ಜಿಯನ್ನು ವಜಾಗೊಳಿಸಿತು. ‘ಹಿಂತೆಗೆದುಕೊಂಡದ್ದರಿಂದ ವಜಾಗೊಳಿಸಲಾಗಿದೆ (ಡಿಸ್ ಮಿಸ್ಡ್ ಆಸ್ ವಿದ್ ಡ್ರಾನ್) ಎಂದು ನ್ಯಾಯಮೂರ್ತಿ ಎ.ಕೆ. ಸಿಕ್ರಿ ನೇತೃತ್ವದ ಪೀಠವು ಹೇಳಿತು. ಸಂವಿಧಾನ ಪೀಠ ರಚನೆಗೆ ಸಂಬಂಧಿಸಿದ ವಿವರ/ ಆಡಳಿತಾತ್ಮಕ ಆದೇಶದ ಪ್ರತಿ ನೀಡುವಂತೆ ಹಿರಿಯ ವಕೀಲ ಕಪಿಲ್ ಸಿಬಲ್ ಮಾಡಿದ ಒತ್ತಾಯಕ್ಕೆ ಪೀಠವು ಮಣಿಯದೇ ಇದ್ದಾಗ, ಆಡಳಿತಾತ್ಮಕ ಆದೇಶದ ವಿವರ ನೀಡದೇ ಇದ್ದಲ್ಲಿ ತಾವು ಅರ್ಜಿಯನ್ನು ಹಿಂತೆಗೆದುಕೊಳ್ಳುವುದಾಗಿ ಸಿಬಲ್ ಹೇಳಿದ ಬಳಿಕ ಪೀಠವು ಅರ್ಜಿಯನ್ನು ವಜಾ ಮಾಡಿತು. ಅರ್ಜಿದಾರ ಸಂಸತ್ ಸದಸ್ಯರಾದ ಪ್ರತಾಪ್ ಸಿಂಗ್ ಬಜ್ವಾ ಮತ್ತು ಅಮೀ ಎಚ್. ಯಾಜ್ಞಿಕ್ ಅವರನ್ನು ಪ್ರತಿನಿಧಿಸಿದ ಸಿಬಲ್ ಅವರು ಸಂವಿಧಾನ ಪೀಠ ರಚನೆಗೆ ಸಂಬಂಧಿಸಿದ ಆಡಳಿತಾತ್ಮಕ ಆದೇಶದ ಪ್ರತಿ ತಮಗೆ ಲಭಿಸಿದ ಬಳಿಕ ಮಾತ್ರವೇ ಪ್ರಕರಣದ ಅರ್ಹತೆ ಬಗ್ಗೆ ತಾವು ವಾದ ಮಾಡಬಯಸಿರುವುದಾಗಿ ಹೇಳಿದರು.  ಕನಿಷ್ಠ ಪಕ್ಷ ಈ ವಿಷಯವನ್ನು ಹೇಗೆ ಪಟ್ಟಿ ಮಾಡಲಾಯಿತು ಎಂದಾದರೂ ನಮಗೆ ಹೇಳಬೇಕು. ಈ ಆದೇಶದ ಬಗ್ಗೆ ಇಷ್ಟೊಂದು ರಹಸ್ಯವೇಕೆ? ಯಾರು ಈ ಆದೇಶ ನೀಡಿದರು ಎಂದು ನಾವು ನೋಡಬಯಸುತ್ತೇವೆ. ನಾವು ಆ ಆದೇಶವನ್ನು ಪ್ರಶ್ನಿಸಬಹುದು. ಪ್ರಸ್ತಾಪಿತ ವಾಗ್ದಂಡನಾ ನಿರ್ಣಯವು ಸಿಜೆಐ ಅವರ ವಿರುದ್ಧವೇ ಇರುವುದರಿಂದ ಅವರು ಈ ವಿಚಾರದಲ್ಲಿ ಶಾಮೀಲಾಗುವುದನ್ನು ನಾವು ಬಯಸುವುದಿಲ್ಲ. ಇಲ್ಲವೇ ಈ ನ್ಯಾಯಾಲಯವು ಈ ಆಡಳಿತಾತ್ಮಕ ಆದೇಶವನ್ನು ಎಂದೂ ಪ್ರಶ್ನಿಸಲಾಗದು ಎಂದು ಈ ನ್ಯಾಯಾಲಯವು ಘೋಷಿಸಲಿ ಎಂದು ಸಿಬಲ್ ವಾದಿಸಿದರು.  ಮನವಿಯನ್ನು ಪಂಚಸದಸ್ಯ ಪೀಠಕ್ಕೆ ವಹಿಸಿದ್ದಕ್ಕೆ ಸಂಬಂಧಿಸಿದಂತೆ ಯಾವುದೇ ನ್ಯಾಯಾಂಗ ಆದೇಶ ಇಲ್ಲವಾದ್ದರಿಂದ, ಇದಕ್ಕೆ ಸಂಬಂಧಿಸಿದ ಆಡಳಿತಾತ್ಮಕ ಆದೇಶ ಇರಬಹುದು ಎಂದು ನಾನು ಊಹಿಸಬೇಕಾಗಿದೆ. ಆದ್ದರಿಂದ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲು ನನಗೆ ಆದೇಶದ ಪ್ರತಿಯ ಅಗತ್ಯ ಇದೆ ಎಂದೂ ಸಿಬಲ್ ಹೇಳಿದರು.  ಈ ಹಂತದಲ್ಲಿ ಪ್ರತಿಕ್ರಿಯಿಸಿದ ಪೀಠವು ವಿಷಯವನ್ನು ಈಗಾಗಲೇ ಪಟ್ಟಿ ಮಾಡಲಾಗಿರುವುದರಿಂದ, ಸಿಬಲ್ ಅವರು ಅರ್ಹತೆ ಮೇಲೆ ವಾದ ಮಂಡಿಸಬೇಕು ಎಂದು ಹೇಳಿತು. ’ನಾವು ನಿಮಗೆ ಆದೇಶದ ಪ್ರತಿ ನೀಡಿದರೆ ಯಾವ ಉದ್ದೇಶದ ಸಾಧನೆಯಾಗುತ್ತದೆ?’ ಎಂದು ಪ್ರಶ್ನಿಸಿದ ಪೀಠ, ಪಂಚ ಸದಸ್ಯ ಪೀಠಕ್ಕೆ ಯಾವುದಾದರೂ ವಿಷಯವನ್ನು ವಹಿಸುವುದಕ್ಕೆ ಏನಾದರೂ ನಿರ್ಬಂಧ ಇದೆಯೇ ಎಂದು ಸಿಬಲ್ ಅವರನ್ನು ಪ್ರಶ್ನಿಸಿತು. ಆದರೆ ವಕೀಲ ಸುನಿಲ್ ಫರ್ನಾಂಡಿಸ್ ನೆರವಿನೊಂದಿಗೆ, ಸಿಬಲ್ ಅವರು ದೃಢವಾಗಿ ನಿಂತು, ’ಆಡಳಿತಾತ್ಮಕ ಆದೇಶಕ್ಕೆ ಸಂಬಂಧಿಸಿದಂತೆ ಏನು ಅಂತಹ ರಹಸ್ಯವಿದೆ?’ ಎಂದು ಕೇಳಿದರು. ‘ಅದು ನಮ್ಮನ್ನು ಎಲ್ಲಿಗೂ ಒಯ್ಯುವುದಿಲ್ಲ. ಇದು ಅಭೂತಪೂರ್ವ ಪರಿಸ್ಥಿತಿ. ಸಿಜೆಐ ಅವರು ಈ ಅರ್ಜಿಯಲ್ಲಿ ಸ್ವಲ್ಪ ಮಟ್ಟಿಗೆ ಶಾಮೀಲಾಗಿದ್ದಾರೆ ಎಂದು ನೀವು ಹೇಳುತ್ತಿದ್ದೀರಿ. ಆದರೆ (ಪತ್ರಿಕಾಗೋಷ್ಠಿ ನಡೆಸಿದ) ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಕೂಡಾ ಯಾವುದೋ ಒಂದು ಅರ್ಥದಲ್ಲಿ ಶಾಮೀಲಾಗಿದ್ದಾರೆ ಎಂದು ಪೀಠ ಹೇಳಿತು.
ಈ ಹಂತದಲ್ಲಿ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರ ಪರ ವಕೀಲರಾದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರು ಮಧ್ಯಪ್ರವೇಶ ಮಾಡಿ, ಅರ್ಜಿಯ ಸಮರ್ಥನೀಯತೆಯನ್ನು ಪ್ರಶ್ನಿಸಿದರು. ’ಏಳು ರಾಜಕೀಯ ಪಕ್ಷಗಳ ೬೪ ಸಂಸತ್ ಸದಸ್ಯರು ವಾಗ್ದಂಡನಾ ನೋಟಿಸಿಗೆ ಸಹಿ ಮಾಡಿದ್ದರು. ಈ ಅರ್ಜಿಯನ್ನು ಕಾಂಗ್ರೆಸ್ ಪಕ್ಷದ ಕೇವಲ ಇಬ್ಬರು ಸಂಸತ್ ಸದಸ್ಯರು ಸಲ್ಲಿಸಿದ್ದಾರೆ. ಆದ್ದರಿಂದ ಉಳಿದ ಆರು ರಾಜಕೀಯ ಪಕ್ಷಗಳು ಉಪಾಧ್ಯಕ್ಷರ ನಿರ್ಣಯವನ್ನು ಅಂಗೀಕರಿಸಿವೆ ಎಂದು ನಾನು ಭಾವಿಸುವೆ. ಆದ್ದರಿಂದ ಈ ಅರ್ಜಿ ವಿಚಾರಣಾ ಯೋಗ್ಯವೇ ಅಲ್ಲ ಎಂದು ಅವರು ವಾದಿಸಿದರು. ಎಲ್ಲ ಪರಿಸ್ಥಿತಿಗಳಲ್ಲೂ ಸಿಜೆ ಐ ಅವರು ಮಾಸ್ಟರ್ ಆಫ್ ರೋಸ್ಟರ್ ಆಗಿರುತ್ತಾರೆ ಎಂದು ಹಿಂದಿನ ನಿದರ್ಶನಗಳೂ ಸ್ಪಷ್ಟ ಪಡಿಸಿರುವುದರಿಂದ ಸಿಜೆಐ ಅವರು ಪೀಠ ರಚನೆ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ವೇಣುಗೋಪಾಲ್ ಹೇಳಿದರು. ‘ವಕೀಲರು ಕಾನೂನು ಮತ್ತು ಸಂವಿಧಾನದ ಅಂಶಗಳ ಬಗ್ಗೆ ಚೆನ್ನಾಗಿಯೇ ವಾದ ಆರಂಭಿಸಿದ್ದಾರೆ, ಆದರೆ ಯಾರು ಈ ಆದೇಶವನ್ನು ಮಾಡಿದರು ಎಂಬ ಪ್ರಶ್ನೆಯನ್ನು ಪಟ್ಟು ಹಿಡಿದಿರುವುದು ’ಅಲ್ಲಿ ಬೇರೆ ಏನೋ ಇದೆ ಎಂಬುದನ್ನು ಸೂಚಿಸುತ್ತದೆ ಎಂದು ನ್ಯಾಯಮೂರ್ತಿ ಸಿಕ್ರಿ ಅವರು ಸಿಬಲ್ ಅವರಿಗೆ ಹೇಳಿದರು.  ಇದಕ್ಕೆ ಪ್ರತಿಕ್ರಿಯಿಸಿದ ಸಿಬಲ್ ಅರ್ಜಿದಾರರಿಗೆ ಈ ಅರ್ಜಿಯನ್ನು ಸಂವಿಧಾನ ಪೀಠದ ಮುಂದೆ ಹೇಗೆ ಪಟ್ಟಿ ಮಾಡಲಾಯಿತು ಎಂದು ತಿಳಿಸಿದರೆ ನ್ಯಾಯಾಲಯದ ಘನತೆಗೆ ಧಕ್ಕೆಯಾಗುತ್ತದೆಯೇ? ಎಂದು ಪ್ರಶ್ನಿಸಿದರು.  ‘ಇಷ್ಟು ಮಾಹಿತಿಯನ್ನೂ ನಮಗೆ ನೀಡಲಾಗದು ಎಂದಾದರೆ, ಈ ಪ್ರಕರಣದಲ್ಲಿ ಯಾವುದೇ ವಾದ ಮಂಡಿಸುವುದರಲ್ಲಿ ಅರ್ಥವಿದೆ ಎಂದು ನಮಗೆ ಅನ್ನಿಸುವುದಿಲ್ಲ. ಬದಲಾಗಿ ನಾವು ಈ ಅರ್ಜಿಯನ್ನು ಹಿಂತೆಗೆದುಕೊಳ್ಳುತ್ತೇವೆ ಎಂದು ಸಿಬಲ್ ನುಡಿದರು.  ಕೆಲವು ಸೆಕೆಂಡುಗಳ ಬಳಿಕ ಪೀಠವು ಅರ್ಜಿಯನ್ನು ’ಹಿಂತೆಗೆದುಕೊಂಡಿರುವುದರಿಂದ ಅರ್ಜಿಯನ್ನು ವಜಾ ಮಾಡಲಾಗಿದೆ ಎಂದು ಪೀಠವು ಆದೇಶ ನೀಡಿತು.

2018: ನವದೆಹಲಿ: ಕಾವೇರಿ ಕರಡು ರೂಪುರೇಷೆ (ಸ್ಕೀಮ್) ರಚಿಸದೇ ಇರುವ ಮೂಲಕ ’ನ್ಯಾಯಾಲಯ ನಿಂದನೆ ಎಸಗುತ್ತಿರುವುದಕ್ಕಾಗಿ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು, ಆದರೆ ಪ್ರಕರಣವನ್ನು ಕರ್ನಾಟಕ ವಿಧಾನಸಭಾ ಚುನಾವಣೆಗಳು ನಡೆಯಲಿರುವ ಮೇ ೧೨ ಮತ್ತು ಮತಗಳ ಎಣಿಕೆ ನಡೆಯಲಿರುವ ಮೇ ೧೫ರ ನಡುವಣ ಮೇ ೧೪ನೇ ತಾರೀಕಿಗೆ ಮುಂದೂಡಿತು.  ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರು ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ದೀಪಕ್ ಮಿಶ್ರ ನೇತೃತ್ವದ ಪೀಠಕ್ಕೆ, ಕರಡು ರೂಪುರೇಷೆಗೆ ’ಅಂತಿಮ ಸ್ಪರ್ಶ ನೀಡುವ ಸಲುವಾಗಿ ಮತ್ತು ಕೇಂದ್ರ ಸಚಿವ ಸಂಪುಟದ ಅನುಮೋದನೆ ಪಡೆಯುವ ಸಲುವಾಗಿ ೧೦ ದಿನಗಳ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು.  ಹಿಂದಿನ ವಿಚಾರಣೆ ಕಾಲದಲ್ಲಿ ವೇಣುಗೋಪಾಲ್ ಅವರು ಪ್ರಧಾನ ಮಂತ್ರಿ ಮತ್ತು ಎಲ್ಲ ಸಚಿವರೂ ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ಸಲುವಾಗಿ ಪ್ರವಾಸದಲ್ಲಿ ಮಗ್ನರಾಗಿದ್ದಾರೆ ಎಂದು ತಿಳಿಸಿದ್ದರು.  ಮೇ ೧೪ರಂದು ಕರಡು ರೂಪುರೇಷೆಯೊಂದಿಗೆ ವೈಯಕ್ತಿಕವಾಗಿ ನ್ಯಾಯಾಲಯಕ್ಕೆ ಹಾಜರಾಗುವಂತೆ ಪೀಠವು ಕೇಂದ್ರ ಜಲ ಸಂಪನ್ಮೂಲ ಕಾರ್‍ಯದರ್ಶಿಗೆ ಆಜ್ಞಾಪಿಸಿತು. ನೀರು ಬಿಡುಗಡೆ: ಕಾವೇರಿ ನೀರು ಬಿಡುಗಡೆಗೆ ಸಂಬಂಧಿಸಿದಂತೆ ತಮಿಳುನಾಡು ಸಲ್ಲಿಸಿದ ಅರ್ಜಿ ಮತ್ತು ಅದರ ವಿರುದ್ಧ ಕರ್ನಾಟಕ ಸಲ್ಲಿಸಿದ ಪ್ರತಿ ಅರ್ಜಿ ಬಗ್ಗೆ ಶೋಧಿಸದಿರುವ ಆಯ್ಕೆಯನ್ನು ನ್ಯಾಯಾಲಯ ಮಾಡಿಕೊಂಡಿತು.  ಇದು ತೀರ್ಪಿನ ಅನುಷ್ಠಾನಕ್ಕೆ ಧಕ್ಕೆಯನ್ನಷ್ಟೇ ಉಂಟು ಮಾಡೀತು. ನೀರು ಹಂಚಿಕೆಗೆ ಸಂಬಂಧಿಸಿದ ಕುಂದುಕೊರತೆಗಳನ್ನು  ರೂಪು ರೇಷಯ ಮೂಲಕ ಕೇಂದ್ರವು ನೇಮಿಸುವ ಪ್ರಾಧಿಕಾರ ನೋಡಿಕೊಳ್ಳಬೇಕು. ಸಧ್ಯಕ್ಕೆ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದರಿಂದ ಕೋರ್ಟ್ ದೂರ ಉಳಿಯುತ್ತದೆ ಎಂದು ಪೀಠ ಹೇಳಿತು.  ಏಪ್ರಿಲ್ ೯ರಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಮೇ ೩ರ ಒಳಗಾಗಿ ಕಾವೇರಿ ಕರಡು ರೂಪುರೇಷೆ ರೂಪಿಸುವಂತೆ ಖಂಡತುಂಡ ನಿರ್ದೇಶನ ನೀಡಿತ್ತು ಮತ್ತು ತನ್ಮೂಲಕ ಕರ್ನಾಟಕ ಮತ್ತು ತಮಿಳುನಾಡು ನಡುವಣ ವಿವಾದ ಕೊನೆಗೊಳಿಸುವ ನಿಟ್ಟಿನಲ್ಲಿ ತನ್ನ ವಿಶ್ವಾಸಾರ್ಹತೆಯನ್ನು ಸಾಬೀತು ಪಡಿಸುವಂತೆ ಸೂಚಿಸಿತ್ತು. ಮೇ ೭ರಂದು, ಕರ್ನಾಟಕವು ಮೇ ತಿಂಗಳಿಗಾಗಿ ಕರ್ನಾಟಕವು ೪ ಟಿಎಂಸಿ ನೀರನ್ನು ಸುಲಭವಾಗಿ ಬಿಡಬಹುದು ಎಂದು ತಮಿಳುನಾಡು ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿತ್ತು. ಕೆಲವೇ ಗಂಟೆಗಳಲ್ಲಿ ಪ್ರತಿ ಅರ್ಜಿ ಸಲ್ಲಿಸಿದ ಕರ್ನಾಟಕವು ಸತತ ಮೂರನೇ ವರ್ಷದ ಸಂಕಷ್ಟ ಸ್ಥಿತಿ ಎದುರಿಸುತ್ತಿದ್ದರೂ ಅಂತರರಾಜ್ಯ ಬಿಳಿಗೊಂಡ್ಲು ಗಡಿ ಮೂಲಕ ಈಗಾಗಲೇ ೧೧೬.೬೯೭ ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಿದೆ ಎಂದು ತಿಳಿಸಿತ್ತು.  ತಮಿಳುನಾಡು ೧೬.೬೬ ಟಿಎಂಸಿ ಅಡಿಗಳ ಹೆಚ್ಚುವರಿ ನೀರನ್ನು ಪಡೆದಿದೆ ಎಂದೂ ಕರ್ನಾಟಕ ಪ್ರತಿಪಾದಿಸಿತ್ತು.  ೨೦೧೮ರ ಫೆಬ್ರುವರಿ ೧೬ರಂದು ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಪ್ರಕಾರ ಕಾವೇರಿ ನಿರ್ವಹಣಾ ಮಂಡಳಿ ಮತ್ತು ಕಾವೇರಿ ಜಲನಿಯಂತ್ರಣ ಸಮಿತಿ ರಚಿಸುವ ಮೂಲಕ ತೀರ್ಪನ್ನು ಅನುಷ್ಠಾನಗೊಳಿಸುವ ಕರ್ತವ್ಯ ಬದ್ಧತೆ ಕೇಂದ್ರ ಸರ್ಕಾರಕ್ಕೆ ಇದೆ ಎಂದು ತಮಿಳುನಾಡು ಹೇಳಿತ್ತು.  

2018: ಬೆಂಗಳೂರು: ೨೦೧೯ರ ಮಹಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಏಕೈಕ ದೊಡ್ಡ ಪಕ್ಷವಾಗಿ ಉದಯಿಸಿದರೆ ಪ್ರಧಾನ ಮಂತ್ರಿಯಾಗಲು ತಾವು ಸಿದ್ಧ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಂಗಳವಾರ ಇಲ್ಲಿ ಹೇಳಿದರು.  ‘೨೦೧೯ರ ಲೋಕಸಭಾ ಚುನಾವಣೆಯ ಬಳಿಕ ಮೋದಿ ಅವರು ಪ್ರಧಾನ ಮಂತ್ರಿಯಾಗುವುದಿಲ್ಲ ಎಂಬುದು ನನಗೆ ಖಚಿತವಾಗಿದೆ. ನಾನು ಅದನ್ನು ಅವರ ಮುಖದಲ್ಲೇ ಕಾಣಬಲ್ಲೆ. ಅವರಿಗೆ ಇದು ಗೊತ್ತಿದೆ ಎಂದು ಪಕ್ಷದ ’ಸಮೃದ್ಧ ಭಾರತ ಕಾರ್‍ಯಕ್ರಮವನ್ನು ಉದ್ಘಾಟಿಸಿದ ಬಳಿಕ ವರದಿಗಾರರ ಜೊತೆ ಮಾತನಾಡುತ್ತಾ ರಾಹುಲ್ ಗಾಂಧಿ ನುಡಿದರು.  ‘ನೀವು ಪ್ರಧಾನಮಂತ್ರಿಯಾಗುವಿರಾ?’ ಎಂಬ ಪ್ರಶ್ನೆಗೆ, ’ಒಳ್ಳೆಯದು. ಅದು ಕಾಂಗ್ರೆಸ್ ಪಕ್ಷವು ಮಾಡುವ ಸಾಧನೆಯನ್ನು ಅವಲಂಬಿಸಿದೆ. ಕಾಂಗ್ರೆಸ್ ಪಕ್ಷವು ದೊಡ್ಡ ಪಕ್ಷವಾಗಿ ಉದಯಿಸಿದರೆ, ಹೌದು ಎಂದು ರಾಹುಲ್ ಉತ್ತರಿಸಿದರು. ‘ಬಿಜೆಪಿ ಮುಂದಿನ ಸರ್ಕಾರ ರಚಿಸುವ ಸಾಧ್ಯತೆ ಅತ್ಯಂತ ಕಡಿಮೆ. ಮೋದಿ ಅವರು ಮುಂದಿನ ಪ್ರಧಾನಿಯಾಗುವುದೂ ಸಾಧ್ಯವಿಲ್ಲ ಎಂದು ರಾಹುಲ್ ನುಡಿದರು. ಮೊದಲು ರಾಜ್ಯ ಚುನಾವಣೆ ಗೆಲ್ಲಲಿ: ಈ ಮಧ್ಯೆ,  ದೇಶದ ಪ್ರಧಾನಿಯಾಗಲು ತಾನು ಸಿದ್ಧ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿರುವುದನ್ನು ಕಟುವಾಗಿ ಟೀಕಿಸಿದ ಬಿಜೆಪಿ, "ರಾಹುಲ್  ಅವರು ದೇಶದ ಪ್ರಧಾನಿಯಾಗುವ ಮೊದಲು ರಾಜ್ಯದ ವಿಧಾನಸಭಾ ಚುನಾವಣೆಗಳನ್ನು ಗೆದ್ದು ತೋರಿಸಬೇಕು; ಕೇವಲ ದೊಡ್ಡ ದೊಡ್ಡ ಕನಸುಗಳನ್ನು ಇಟ್ಟುಕೊಂಡರೆ ಸಾಲದು ಎಂದು ವ್ಯಂಗ್ಯವಾಡಿತು.  ಬಿಜೆಪಿ ವಕ್ತಾರ ಶಹನವಾಜ್ ಹುಸೇನ್ ಅವರು ಮಧ್ಯಮಗಳ ಜೊತೆ ಮಾತನಾಡುತ್ತಾ, "ದೇಶದ ಪ್ರಧಾನಿಯಾಗುವಂತಹ ದೊಡ್ಡ ದೊಡ್ಡ ಕನಸುಗಳನ್ನು ಕಾಣುವ ಹಕ್ಕು ರಾಹುಲ್ ಗಾಂಧಿ ಅವರಿಗೆ ಇದೆ. ಆದರೆ ಕಾಂಗ್ರೆಸ್ ಮೈತ್ರಿಕೂಟದವರೇ ರಾಹುಲ್ ಅವರ ನಾಯಕತ್ವವನ್ನು ಒಪ್ಪುತ್ತಿಲ್ಲ. ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಉಪಾಧ್ಯಕ್ಷರಾದ ಬಳಿಕ ಅವರ ಪಕ್ಷ  ೧೩ ರಾಜ್ಯಗಳಲ್ಲಿನ ಚುನಾವಣೆಗಳನ್ನು ಸೋತಿದೆ; ರಾಹುಲ್ ಅವರು ಪಕ್ಷದ ಅಧ್ಯಕ್ಷರಾದ ಬಳಿಕ ಕಾಂಗ್ರೆಸ್ ಐದು ರಾಜ್ಯಗಳಲ್ಲಿ ಸೋತಿದೆ, ಈಗ ಕರ್ನಾಟಕವು ಆರನೇಯ ರಾಜ್ಯ ಎಂದು ಹೇಳಿದರು.  "ಎಂತಹ ವಿಪರ್ಯಾಸ ನೋಡಿ; ರಾಹುಲ್ ಗಾಂಧಿ ಅವರು ಪಕ್ಷದ ಉಪಾಧ್ಯಕ್ಷರಾದ ಬಳಿಕ ಮತ್ತು ಅಧ್ಯಕ್ಷರಾದ ಬಳಿಕ ನಿರಂತರವಾಗಿ ೧೮ ರಾಜ್ಯಗಳಲ್ಲಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಸೋತಿದೆ; ಆದರೂ ಅವರು ದೇಶದ ಪ್ರಧಾನಿಯಾಗುವ ಕನಸನ್ನು ಕಾಣುತ್ತಾರೆ. ಕಾಂಗ್ರೆಸ್ ಮಿತ್ರ ಪಕ್ಷಗಳು ಕೂಡ ರಾಹುಲ್ ಅವರ ನಾಯಕತ್ವವನ್ನು ಒಪ್ಪುತ್ತಿಲ್ಲ’ ಎಂದ ಹುಸೇನ್ ಹೇಳಿದರು.  ೨೦೧೯ರ ಮಹಾ ಚುನಾವಣೆಯಲ್ಲಿ ದೇಶದ ಜನರು ಮತ್ತೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿ ಚುನಾಯಿಸಲಿದ್ದಾರೆ ಎಂದು ಹುಸೇನ್ ಹೇಳಿದರು.

2018: ನವದೆಹಲಿ: ವಾಗ್ದಂಡನಾ ’ಅದ್ವಾನಗಳಿಗಾಗಿ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡ ವಿತ್ತ ಸಚಿವ ಅರುಣ್ ಜೇಟ್ಲಿ ಅವರು, ನ್ಯಾಯಾಂಗದ ಮೇಲೆ ದಾಳಿ ನಡೆಸಲು ಪಕ್ಷವು ಇತ್ತೀಚೆಗೆ ಕೈಗೊಂಡ ನಿಲುವು ಕರ್ನಾಟಕದಲ್ಲಿ ಅದಕ್ಕೆ ಅತ್ಯಂತ ತುಟ್ಟಿಯಾಗಲಿದೆ ಎಂದು ಎಚ್ಚರಿಸಿದರು. ಕಾಂಗ್ರೆಸ್ ಪಕ್ಷವು ನ್ಯಾಯಾಲಯದ ಆಂತರಿಕ ಜಗಳಗಳನ್ನು ಸಂಸದೀಯ ಪ್ರಕ್ರಿಯೆಯ ಒಳಕ್ಕೆ ತರಲು ಸಿಜೆ ಐ ವಿರುದ್ಧದ ವಾಗ್ದಂಡನಾ ನೋಟಿಸನ್ನು ’ರಾಜಕೀಯ ಸಾಧನವಾಗಿ ಬಳಸುತ್ತಿದೆ ಎಂದು ಈ ಹಿಂದೆ ಆಪಾದಿಸಿದ್ದ ಜೇಟ್ಲಿ ಅವರು ಈದಿನ ತನ್ನ ಮೂರನೇ ಫೆಸ್ ಬುಕ್ ಪೋಸ್ಟ್‌ನಲ್ಲಿ ’ಭಾರತದ ಮುಖ್ಯ ನ್ಯಾಯಮೂರ್ತಿ ವಿರುದ್ಧ ವಾಗ್ದಂಡನಾ ನೋಟಿಸ್ ಸಂಪೂರ್ಣವಾಗಿ ತಪ್ಪು ಗ್ರಹಿಕೆಯ, ದುರ್ಬಲ ಕರಡಾಗಿದ್ದು, ಸಂಪೂರ್ಣ ಜಳ್ಳಾಗಿತ್ತು ಎಂದು ಬರೆದರು.  ‘ವಾಗ್ದಂಡನಾ ನಿರ್ಣಯವೇ ಸುಸ್ಥಿರವಾಗಿರದಿದ್ದರೆ, ರಾಜ್ಯಸಭೆಯ ಸಭಾಪತಿಯವರ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗುವ ರಿಟ್ ಅರ್ಜಿಯು ವಾದ ಮಾಡಲು ಸಾಧ್ಯವೇ ಇಲ್ಲದಂತಹುದಾಗಿರುತ್ತದೆ ಎಂದು ಜೇಟ್ಲಿ ಬರೆದರು.  ವಾಗ್ದಂಡನಾ ನೋಟಿಸನ್ನು ತಿರಸ್ಕರಿಸಿ ವೆಂಕಯ್ಯ ನಾಯ್ಡು ಅವರು ನೀಡಿದ ಆದೇಶ ಸಕಾರಣವಾದುದಾಗಿದ್ದು ನ್ಯಾಯಾಂಗ ಪರಿಶೀಲನೆಗೆ ಒಳಪಡುವ ವಿಷಯವಲ್ಲ ಎಂದು ಜೇಟ್ಲಿ ಪ್ರತಿಪಾದಿಸಿದರು. ಇಷ್ಟಾದರೂ, ರಾಷ್ಟ್ರದ ಸರ್ವೋಚ್ಚ ನ್ಯಾಯಾಲಯವು ಒಡೆದ ಮನೆಯಾಗಿದ್ದುದನ್ನು ಕಂಡುಕೊಂಡ ಕಾಂಗ್ರೆಸ್ ಕದಡಿದ ನೀರಿನಲ್ಲಿ ಮೀನು ಹಿಡಿಯಲು ನಿರ್ಧರಿಸಿತು. ಪಕ್ಷವು ಉದ್ದೇಶಪೂರ್ವಕವಾಗಿಯೇ ’ವಾದ ಮಾಡಲಾಗದಂತಹ ವಿಷಯವನ್ನು ವಾದ ಮಾಡುವಂತೆ ಮಾಡುವ ಉದ್ದೇಶದಿಂದ ತನ್ನ ಅರ್ಜಿಯನ್ನು ಸಲ್ಲಿಸಿತು ಎಂದು ಜೇಟ್ಲಿ ಪೋಸ್ಟ್ ನಲ್ಲಿ ಬರೆದರು. ಸಂವಿಧಾನ ಪೀಠದ ರಚನೆಯನ್ನು ಪ್ರಸ್ತಾಪಿಸುವ ಮೂಲಕ ವಾದಿಸಲಾಗದ ವಿಷಯವನ್ನು ವಾದ ಮಾಡಲು ಸಾಧ್ಯವಾಗುವಂತೆ ಮಾಡಲು ನಿರ್ಧರಿಸಿತು. ರಾಜ್ಯಸಭೆಯ ಇಬ್ಬರು ಸಂಸದ ಅರ್ಜಿದಾರರ ವಕೀಲರು ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಆಗಿದ್ದರು. ಸಿಬಲ್ ಅವರು ಸಿಜೆಐ ದೀಪಕ್ ಮಿಶ್ರ ಅವರ ವಿರುದ್ಧದ ವಾಗ್ದಂಡನಾ ನಿರ್ಣಯದ ನೋಟಿಸಿಗೆ ಸ್ವತಃ ಸಹಿ ಹಾಕಿದ್ದವರು ಎಂದು ಜೇಟ್ಲಿ ಉಲ್ಲೇಖಿಸಿದರು. ಸಿಬಲ್ ಅವರು ನಾಯ್ಡು ಅವರು ತಿರಸ್ಕರಿಸಿದ ವಾಗ್ದಂಡನಾ ನೋಟಿಸನ್ನು ಪ್ರಶ್ನಿಸಿದ ಅರ್ಜಿಯನ್ನು ಸುಪ್ರೀಂಕೋರ್ಟಿನ ಅತ್ಯಂತ ಹಿರಿಯರೂ,  ಸಿಜೆಐ ವಿರುದ್ಧ ಕಳೆದ ಜನವರಿಯಲ್ಲಿ ಅಭೂತಪೂರ್ವ ಪತ್ರಿಕಾಗೋಷ್ಠಿ ನಡೆಸಿದ್ದ ನಾಲ್ವರು ನ್ಯಾಯಮೂರ್ತಿಗಳಲ್ಲಿ ಒಬ್ಬರೂ ಆಗಿದ್ದ ನ್ಯಾಯಮೂರ್ತಿ ಜೆ. ಚೆಲಮೇಶ್ವರ್ ಅವರ ಮುಂದೆ ಸಲ್ಲಿಸಿದರು.  ನ್ಯಾಯಾಧೀಶ ಲೋಯ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿದ ತನ್ನ ತೀರ್ಪಿಗಾಗಿ ಸಿಜೆಐ ಮತ್ತು ಸುಪ್ರೀಕೋರ್ಟಿನ ತಲೆಯ ಮೇಲೆ ಖಡ್ಗ ತೂಗಾಡಬೇಕು ಎಂಬ ಬಯಕೆಯಿಂದ ಕಾಂಗ್ರೆಸ್ ಈ ಅರ್ಜಿಯನ್ನು ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಿತು ಎಂದು ಜೇಟ್ಲಿ ಆಪಾದಿಸಿದರು. ನ್ಯಾಯಾಧೀಶ ಲೋಯ ಅವರ ದುರದೃಷ್ಟಕರ ಸಾವಿಗೆ ಸಂಬಂಧಿಸಿದ ತೀರ್ಪು ಈಗಾಗಲೇ ಅವರ ಅಸಹಜ ಸಾವಿನ ಕಥೆ ಕಟ್ಟಿದ ಕಾಂಗ್ರೆಸ್ ಪಕ್ಷದ ಭ್ರಮೆಯನ್ನು ಬಯಲು ಮಾಡಿದೆ. ’ಫಾರಿನ್ ಶಾಪಿಂಗ್ ನ ಕಾಂಗ್ರೆಸ್ ಪಕ್ಷದ ಪ್ರಯತ್ನಗಳು ವಿಫಲವಾಗಿದ್ದು, ವಾದಿಸಲಾಗದ ಅದರ ಪ್ರಕರಣವನ್ನು ಅರ್ಹತೆ ಆಧಾರದಲ್ಲಿ ತೀರ್ಮಾನಿಸಲು ಕೋರ್ಟ್ ತಿರಸ್ಕರಿಸಿದೆ ಎಂದು ಜೇಟ್ಲಿ ಬರೆದರು. ರಾಜಕೀಯದಲ್ಲಿ ಯಾವಾಗಲೂ ಕೇಂದ್ರ ಸ್ಥಾನದಲ್ಲಿ ಇರುತ್ತಿದ್ದ ಕಾಂಗ್ರೆಸ್ ನಾಯಕತ್ವವು ಒಂದರ ಬಳಿಕ ಒಂದರಂತೆ ಎಲ್ಲ ರಾಜ್ಯಗಳಿಂದ ಉಚ್ಚಾಟನೆಗೊಂಡ ಬಳಿಕ ವಿವಿಧ ವಿಷಯಗಳಲ್ಲಿ ಎದ್ದು ಕಾಣುವ ಜಾಗಗಳಲ್ಲಿ ನಿಲ್ಲಲು ಪ್ರಯತ್ನಿಸುತ್ತಿದೆ ಎಂದು ವಿತ್ತ ಸಚಿವರು ಹೇಳಿದರು. ಇದು ಚುನಾವಣಾ ಲೆಕ್ಕಾಚಾರವಷ್ಟೇ ಅಲ್ಲ, ಮುಖ್ಯ ಪ್ರವಾಹದ ಇತರ ಹಲವಾರು ವಿಷಯಗಳಲ್ಲೂ ಇಂತಹ ಯತ್ನವನ್ನು ಕಾಂಗ್ರೆಸ್ ನಡೆಸುತ್ತಿದೆ ಎಂದು ಹೇಳಿದ ಜೇಟ್ಲಿ ಇದಕ್ಕೆ ಉದಾಹರಣೆಯಾಗಿ ರಾಹುಲ್ ಗಾಂಧಿ ಅವರು ರಾಷ್ಟ್ರವಿರೋಧಿ ಚರ್ಚೆ ನಡೆಯುತ್ತಿದ್ದಾಗ ಜೆಎನ್ ಯುಗೆ ಭೇಟಿ ನೀಡಿದ್ದು, ಇವಿಎಂ ನಂತಹ ತಂತ್ರಜ್ಞಾನವನ್ನು ಪಕ್ಷವು ವಿರೋಧಿಸಿ, ಪೇಪರ್ ಮತಪತ್ರಗಳ ಯುಗಕ್ಕೆ ಹಿಂತಿರುಗಬೇಕೆಂದು ಒತ್ತಾಯಿಸಿದ್ದು, ಡಿಜಿಟಲ್ ಪಾವತಿಗಳ ಬದಲು ನಗದು ಪಾವತಿಗಳಿಗೆ ಆದ್ಯತೆ ನೀಡಿದ್ದು, ಆಧಾರ್ ಯೋಜನೆಯನ್ನು ಸ್ವತಃ ತಾನೇ ಆರಂಭಿಸಿದ್ದರೂ ಅದನ್ನು ನ್ಯಾಯಾಲಯ ಮತ್ತು ಸಂಸತ್ತಿನಲ್ಲಿ ಪ್ರಶ್ನಿಸಿದ್ದು ಇತ್ಯಾದಿಯನ್ನು ಪಟ್ಟಿ ಮಾಡಿದರು. ಆರ್ಥಿಕ ಸುಧಾರಣೆಗಳ ವಿಚಾರದಲ್ಲೂ ಪಕ್ಷವು ಸುಧಾರಣೆ ವಿರೋಧಿ ನಿಲುವು ತಳೆದಿದೆ. ರಾಹುಲ್ ಗಾಂಧಿ ಅವರು ಶಿಕ್ಷಿತ ಆರ್ ಜೆಡಿ ನಾಯಕ ಲಾಲು ಪ್ರಸಾದ್ ಅವರಂತಹವರ ಜೊತೆಗೆ ಫೋಟೋಗಳನ್ನು ತೆಗೆಸಿಕೊಂಡು ಬಿಡುಗಡೆ ಮಾಡುತ್ತಾರೆ ಎಂದೂ ಜೇಟ್ಲಿ ಜರೆದರು. ಅವರಿಗೆ ಅಧಿಕಾರಕ್ಕೆ ಬರುವ ವಿಶ್ವಾಸವಿಲ್ಲದ ಸಂಘಟನೆಗಳ ನಾಯಕರು ಎಂದೂ ಅನುಷ್ಠಾನಗೊಳಿಸುವ ಅಗತ್ಯವಿಲ್ಲದ ಸ್ಥಾನಗಳನ್ನು ಪಡೆಯಲು ಯತ್ನಿಸುತ್ತಾರೆ. ಆದರೆ ಭಾರತದಂತಹ ದೇಶವನ್ನು ದೀರ್ಘಕಾಲ ಆಳಿದ ಪಕ್ಷವು ತನ್ನನ್ನು ತಾನು ಇಂತಹ ಸ್ಥಿತಿಗೆ ತಳ್ಳಿಕೊಳ್ಳಬಹುದೇ? ಇಂತಹ ನಿಲುವುಗಳಿಗಾಗಿ ಕಾಂಗ್ರೆಸ್ ಪಕ್ಷವು ತಕ್ಕ ಬೆಲೆ ತೆರಬೇಕಾಗಿ ಬರುತ್ತದೆ. ಕರ್ನಾಟಕದ ಕಾಂಗ್ರೆಸ್ಸಿಗರು ಇದಕ್ಕೆ ತತ್ ಕ್ಷಣದ ಬಲಿಪಶುಗಳಾಗಲಿದ್ದಾರೆ ಎಂದು ಜೇಟ್ಲಿ ಬರೆದರು.

2017: ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಬಳಿ ಇಬ್ಬರು ಭಾರತೀಯ
ಯೋಧರ ಶಿರಚ್ಛೇದ ಮಾಡಿದ ಪಾಕಿಸ್ತಾನ ಸೇನೆಗೆ ಭಾರತೀಯ ಸೈನಿಕರು ತಕ್ಕ ಪ್ರತ್ಯುತ್ತರ ನೀಡಿದ್ದು, ಗಡಿಯಲ್ಲಿರುವ ಪಾಕ್ ಸೇನೆಯ ಬಂಕರ್​ಗಳನ್ನು ನಾಶ ಪಡಿಸಿದರು. ಭಾರತೀಯ ಯೋಧರ ಶಿರಚ್ಛೇದ ನಡೆಸಿದ ನಂತರವೂ ಸಹ ಪಾಕ್ ಸೇನೆ ಪದೇ ಪದೇ ಕದನ ವಿರಾಮ ಉಲ್ಲಂಘಿಸಿ ಭಾರತೀಯ ಸೈನಿಕರ ಮೇಲೆ ಗುಂಡಿನ ದಾಳಿ ನಡೆಸುತ್ತಿತ್ತು. ಈದಿನ ಕದನ ವಿರಾಮ ಉಲ್ಲಂಘಿಸಿ ಪಾಕ್ ಸೇನೆ ನಡೆಸಿದ ಗುಂಡಿನ ದಾಳಿಗೆ ತಕ್ಕ ಪ್ರತ್ಯುತ್ತರ ನೀಡಿದ ಭಾರತೀಯ ಸೇನೆ ಶೆಲ್ ದಾಳಿ ನಡೆಸಿ ಹಲವು ಬಂಕರ್​ಗಳನ್ನು ಧ್ವಂಸಗೊಳಿಸಿತು. ಬಂಕರ್ ನಾಶವಾಗಿರುವ ಕುರಿತು ಪಾಕ್ ಸೇನೆ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಲಿಲ್ಲ. ಈ ಬಂಕರ್​ಗಳನ್ನು ಉಗ್ರರು ಬಳಕೆ ಮಾಡುತ್ತಿದ್ದರು. ಭಾರತದ ಗಡಿಯೊಳಗೆ ನುಸುಳುವ ಮುನ್ನ ಅವರ ಇಲ್ಲಿ ತಂಗುತ್ತಿದ್ದರು ಎಂದು ಮಾಹಿತಿ ಲಭ್ಯವಾಗಿತ್ತು. ಪಾಕ್ ಸೇನೆಯ ಅಮಾನುಷ ದಾಳಿಗೆ ತಕ್ಕ ಪ್ರತಿದಾಳಿ ನಡೆಸುವಂತೆ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಸೂಚಿಸಿದ್ದರು. ಅದರಂತೆ ಭಾರತೀಯ ಸೈನಿಕರು ಪ್ರತಿದಾಳಿ ನಡೆಸಿದರು. ದೊಡ್ಡ ಪ್ರಮಾಣದ ದಾಳಿ ನಡೆಸುವ ಕುರಿತು ಯೋಜನೆ ರೂಪಿಸಲಾಗುತ್ತಿದೆ. ಯೋಜನೆ ಪೂರ್ಣಗೊಂಡ ನಂತರ ಅದನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
2017: ನವದೆಹಲಿ: ಬಹುಕೋಟಿ ಮೇವು ಹಗರಣದಲ್ಲಿ ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು
ಆರ್ ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್​ಗೆ ಮತ್ತೆ ಸಂಕಷ್ಟ ಎದುರಾಗಿದ್ದು, ನಾಲ್ಕು ಪ್ರಕರಣಗಳ ಮರು ವಿಚಾರಣೆ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿತು. ಮೇವು ಹಗರಣಕ್ಕೆ ಸಂಬಂಧಿಸಿದಂತೆ ಸಂಚು ರೂಪಿಸಿದ ಆರೋಪವನ್ನು ಜಾರ್ಖಂಡ್ ಹೈಕೋರ್ಟ್ ಕೈಬಿಟ್ಟಿತ್ತು. ಇದನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠ ಏಪ್ರಿಲ್ 23 ರಂದು ತನ್ನ ಆದೇಶವನ್ನು ಕಾಯ್ದಿರಿಸಿತ್ತು. ಈದಿನ ಸುಪ್ರೀಂ ಕೋರ್ಟ್ ಈ ಪ್ರಕರಣದ ತೀರ್ಪು ಪ್ರಕಟಿಸಿ, ಲಾಲು ಪ್ರಸಾದ್ ಯಾದವ್ ವಿರುದ್ಧದ 4 ಪ್ರಕರಣಗಳ ವಿಚಾರಣೆಯನ್ನು 9 ತಿಂಗಳೊಳಗೆ ಮುಕ್ತಾಯಗೊಳಿಸಬೇಕು ಎಂದು ಕೆಳ ನ್ಯಾಯಾಲಯಕ್ಕೆ ಆದೇಶಿಸಿತು. ಜತೆಗೆ ಪ್ರಕರಣದ ವಿಚಾರಣೆಗಾಗಿ ವಿಶೇಷ ಅಧಿಕಾರಿಯನ್ನು ನೇಮಿಸುವಂತೆ ಸಿಬಿಐಗೆ ನಿರ್ದೇಶಕರಿಗೆ ಸೂಚಿಸಿತು. ಮೇವು ಹಗರಣದ ವಿಚಾರಣೆ ನಡೆಸಿದ ರಾಂಚಿಯಲ್ಲಿರುವ ಸಿಬಿಐನ ವಿಶೇಷ ನ್ಯಾಯಾಲಯ 2013ರ ಅಕ್ಟೋಬರ್​ನಲ್ಲಿ ಲಾಲು ಯಾದವ್​ಗೆ 5 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಶಿಕ್ಷೆ ಪ್ರಕಟವಾದ ನಂತರ ಲಾಲು ಯಾದವ್ 11 ವರ್ಷ ಯಾವುದೇ ಚುನಾವಣೆಗೆ ಸ್ಪರ್ಧಿಸುವುದಕ್ಕೆ ಅನರ್ಹಗೊಂಡಿದ್ದರು. ಆ ನಂತರ ಸಿಬಿಐ ಕೋರ್ಟ್​ನ ತೀರ್ಪನ್ನು ಪ್ರಶ್ನಿಸಿ ಲಾಲು ಯಾದವ್ ಜಾರ್ಖಂಡ್ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್ ಸಂಚು ರೂಪಿಸಿದ ಆರೋಪವನ್ನು ಕೈ ಬಿಟ್ಟಿತ್ತು. 1990 ರಿಂದ 97ರ ಅವಧಿಯಲ್ಲಿ ಲಾಲು ಪ್ರಸಾದ್ ಯಾದವ್ ಬಿಹಾರ ಮುಖ್ಯಮಂತ್ರಿಯಾಗಿದ್ದರು. ಈ ಅವಧಿಯಲ್ಲಿ ಸುಮಾರು 1000 ಕೋಟಿ ರೂ.ಗಳ ಮೇವು ಖರೀದಿ ಹಗರಣ ನಡೆದಿತ್ತು. ಜಾನುವಾರುಗಳಿಗೆ ಮೇವು ಮತ್ತು ಔಷಧಿ ಖರೀದಿಸುವುದಾಗಿ ಸುಳ್ಳು ಬಿಲ್​ಗಳನ್ನು ನೀಡಿ ಹಣ ಪಡೆದಿರುವುದು ಪತ್ತೆಯಾಗಿತ್ತು.
2017: ಲಾಹೋರ್​:  ಇಬ್ಬರು ಭಾರತೀಯ ಸೈನಿಕರ ಶಿರಚ್ಛೇದನಗೊಳಿಸಿ ಭಾರತದೊಂದಿಗೆ
ಸಂಬಂಧವನ್ನು ಮತ್ತಷ್ಟು ಹದಗೆಡಿಸಿಕೊಂಡಿರುವ ಪಾಕ್​ ಕರಾಚಿ-ಮುಂಬೈ ವಿಮಾನ ಯಾನ ಸೇವೆಯನ್ನು ರದ್ದುಗೊಳಿಸಿತು. ಇತ್ತೀಚೆಗೆ ಇಬ್ಬರು ಭಾರತೀಯ ಸೈನಿಕರನ್ನು ಶಿರಚ್ಛೇದಗೊಳಿಸಿ ಕ್ರೌರ್ಯ ಮೆರೆದಿತ್ತು. ಇದರಿಂದ ಸದ್ಯ ಪಾಕಿಸ್ತಾನದ ವಿರುದ್ಧ ಭಾರತ ಕೆಂಡಾಮಂಡಲಗೊಂಡಿತ್ತು. ಈ ಮಧ್ಯೆ ಪಾಕಿಸ್ತಾನ ತನ್ನಷ್ಟಕ್ಕೆ ತಾನೆ ವಿಮಾನ ಸೇವೆಯನ್ನು ರದ್ದುಗೊಳಿಸಿತು. ಮಂಗಳವಾರ ಮತ್ತು ಗುರುವಾರದಂದು ಎರಡು ವಿಮಾನಗಳು ಕರಾಚಿಯಿಂದ ಮುಂಬೈಗೆ ಹಾರಾಟ ನಡೆಸುತ್ತಿದ್ದವು. ಆದರೆ ಲಾಹೋರ್​ ಮತ್ತು ದೆಹಲಿ ನಡುವಿನ ವಿಮಾನ ಸೇವೆ ಮುಂದುವರೆಸಿತು.  ಕರಾಚಿ-ಮುಂಬೈ ನಡುವಿನ ವಿಮಾನದ ಬುಕ್ಕಿಂಗ್​​ನ್ನು ಕೂಡ ಪಾಕ್​ ನಿಲ್ಲಿಸಿತು. ಈ ಮಾರ್ಗದಲ್ಲಿ ಟ್ರಾಫಿಕ್​ ಸಮಸ್ಯೆಯ ಸಬೂಬು ಹೇಳಿದ ಪಾಕಿಸ್ತಾನ ಕಳೆದ ಆರು ತಿಂಗಳಿನಿಂದ ಭಾರೀ ನಷ್ಟದಲ್ಲಿತ್ತು ಎಂದೂ ಹೇಳಿತು. ಇದಕ್ಕೆ ಸರ್ಕಾರದಿಂದಲೂ ಯಾವುದೇ ನೆರವು ನೀಡಿ ಲ್ಲವಾದ್ದರಿಂದ ಈ ಮಾರ್ಗದ ವಿಮಾನ ಸೇವೆಯನ್ನು ಸ್ಥಗಿತಗೊಳಿಸಿದ್ದೇವೆ ಎಂದು ಪಾಕಿಸ್ತಾನದ ವಿಮಾನಯಾನ ಸಂಸ್ಥೆ ಸ್ಪಷ್ಟನೆ ನೀಡಿತು. ಇದೇ ವೇಳೆ ಭಾರತ-ಪಾಕಿಸ್ತಾನ ಸಂಬಂಧ ಹಳಸಿರುವುದರಿಂದ ಪಾಕಿಸ್ತಾನ ವಿಮಾನ ಸೇವೆ ರದ್ದುಪಡಿಸಿದೆ ಎಂಬ ಮಾಧ್ಯಮದ ಆರೋಪವನ್ನು ಪಾಕ್​ ತಳ್ಳಿಹಾಕಿತು. 
2017: ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ವಿರುದ್ಧ ದೆಹಲಿ
ಸರ್ಕಾರದ ಮಾಜಿ ಸಚಿವ ಕಪಿಲ್ ಮಿಶ್ರಾ ದೂರು ದಾಖಲಿಸಿ, 400 ಕೋಟಿ ರೂ. ನೀರಿನ ಟ್ಯಾಂಕರ್ ಹಗರಣಕ್ಕೆ  ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿದರು. ಎಸಿಬಿಗೆ ನೀರಿನ ಟ್ಯಾಂಕರ್ ಹಗರಣದ ಸಂಪೂರ್ಣ ದಾಖಲೆಗಳನ್ನು ಒದಗಿಸಿದ್ದೇನೆ. ತನಿಖೆಗೆ ನಾನು ಸಹಕರಿಸುತ್ತೇನೆ. ಸಿಬಿಐ ಅಧಿಕಾರಿಗಳನ್ನು ಭೇಟಿ ಮಾಡುವ ಸಂಬಂಧ ಸಮಯ ಕೋರಿದ್ದೇನೆ. ಅವರಿಂದ ಪ್ರತಿಕ್ರಿಯೆ ಬಂದ ನಂತರ ದಾಖಲೆಗಳೊಂದಿಗೆ ಸಿಬಿಐ ಕಚೇರಿಗೆ ತೆರಳಿ ಸಂಪೂರ್ಣ ಮಾಹಿತಿ ಒದಗಿಸುತ್ತೇನೆ ಎಂದು ಕಪಿಲ್ ಮಿಶ್ರಾ ಹೇಳಿದರು. ಈ ಮೊದಲು ಹಗರಣದ ಕುರಿತು ಕಪಿಲ್ ಮಿಶ್ರಾ ಸಲ್ಲಿಸಿದ್ದ ದೂರನ್ನು ದೆಹಲಿಯ ಲೆಫ್ಟಿನೆಂಟ್  ಗವರ್ನರ್ ಅನಿಲ್ ಬೈಜಾಲ್ ಎಸಿಬಿಗೆ ವರ್ಗಾಯಿಸಿದ್ದರು. ಮೂರು ದಿನ ಹಿಂದೆ  ಕಪಿಲ್ ಮಿಶ್ರಾ ಅವರನ್ನು ಕೇಜ್ರಿವಾಲ್ ತಮ್ಮ ಸಚಿವ ಸಂಪುಟದಿಂದ ಉಚ್ಛಾಟಿಸಿದ್ದರು. ಹಿಂದಿನ ದಿನ ಸುದ್ದಿಗೋಷ್ಠಿ ನಡೆಸಿದ ಮಿಶ್ರಾ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರು ಸಿಎಂ ಕೇಜ್ರಿವಾಲ್ ಅವರಿಗೆ 2 ಕೋಟಿ ರೂ. ಲಂಚ ನೀಡಿದ್ದಾರೆ. ಈ ಸಂಬಂಧ ನನ್ನ ಬಳಿ ದಾಖಲೆಗಳಿವೆ ಎಂದು ಆರೋಪ ಮಾಡಿದ್ದರು. ದೆಹಲಿ ಬಿಜೆಪಿ ಘಟಕ ಅರವಿಂದ ಕೇಜ್ರಿವಾಲ್ ವಿರುದ್ಧ ದೆಹಲಿ ಲೋಕಾಯುಕ್ತಕ್ಕೆ ದೂರು ನೀಡಿತು. ಲೆಫ್ಟಿನೆಂಟ್  ಗವರ್ನರ್ ಅವರನ್ನು ವಿರೋಧ ಪಕ್ಷದ ನಾಯಕರು ಭೇಟಿ ಮಾಡಿ ಹಗರಣದ ಕುರಿತು ದಾಖಲೆಗಳನ್ನು ಸಲ್ಲಿಸಲಿದ್ದೇವೆ ಎಂದು ಬಿಜೆಪಿ ವಕ್ತಾರ ರಾಜೀವ್ ಬಬ್ಬರ್ ತಿಳಿಸಿದರು.
2017: ಉಡುಪಿ: ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ ಅವರ ಸಂಕಲ್ಪದಂತೆ ಪಾಜಕ ಕ್ಷೇತ್ರ
ಸಮೀಪದ ಕುಂಜಾರುಗಿರಿಯಲ್ಲಿ ಮಧ್ವಾಚಾರ್ಯರ ಏಕಶಿಲಾ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು. ಪ್ರತಿಷ್ಠಾಪನೆಯ ಧಾರ್ಮಿಕ ವಿಧಿ ವಿಧಾನಗಳು ಬೆಳಿಗ್ಗೆ 5ರಿಂದಲೇ ಆರಂಭವಾದವು. ತತ್ವ ಹೋಮ, ತತ್ವ ಕಲಶಹೋಮ, ನಾರಾಯಣ ಪವಿತ್ರ ಹೋಮ, ವಿಷ್ಣು ಗಾಯತ್ರಿ ಮಂತ್ರ ಹೋಮ, ಪ್ರಾಣ ಪ್ರತಿಷ್ಠೆ ಮತ್ತು ಬಿಂಬ ಪ್ರತಿಷ್ಠೆ ಮಾಡಲಾಯಿತು. ಪ್ರತಿಷ್ಠಾಂಗ ಹೋಮ ನಡೆಸಿದ ನಂತರ ಬೆಳಿಗ್ಗೆ 9.06ರ ಶುಭ ಮುಹೂರ್ತದಲ್ಲಿ ವಿಗ್ರಹ ಪ್ರತಿಷ್ಠಾಪನೆ ಮಾಡಲಾಯಿತು. ಆ ನಂತರ ಮೂರ್ತಿಗೆ ಕ್ಷೀರ ಹಾಗೂ ಪಂಚಾಮೃತ ಅಭಿಷೇಕ ಮಾಡಲಾಯಿತು. ನೂರಾರು ಮಂದಿ ಭಕ್ತರು ಈ ಅಪೂರ್ವ ಕ್ಷಣಕ್ಕೆ ಸಾಕ್ಷಿಯಾದರು.

2017: ಫ್ರಾನ್ಸ್‌ : ಯುರೋಪಿನಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಫ್ರಾನ್ಸ್‌ಅಧ್ಯಕ್ಷೀಯ ಚುನಾವಣೆಯಲ್ಲಿ ಆಯ್ಕೆಯಾಗುವ ಮೂಲಕ,  39ವರ್ಷದ ಎಮ್ಯಾನುಯಲ್ ಮ್ಯಾಕ್ರನ್‌ ದೇಶದ ಅತ್ಯಂತ ಕಿರಿಯ ಅಧ್ಯಕ್ಷರಾಗಿ ರಾಜಕೀಯದಲ್ಲಿ ಇತಿಹಾಸ ಸೃಷ್ಟಿಸಿದರು. ಎಮ್ಯಾನುಯಲ್  ಶೇ 65.1 ಮತ್ತು ಮೆಲೀನ್‌ ಲೇ ಪೆನ್‌  ಶೇ 34.9ರಷ್ಟು ಮತ ಗಳಿಸಿದರು. ಎಮ್ಯಾನುಯಲ್ ನಿರೀಕ್ಷೆಗಿಂತ ಅಧಿಕ ಮತ ಪಡೆದರು.

ಇಂದು ವಿಶ್ವ ರೆಡ್ ಕ್ರಾಸ್ ದಿನ. ರೆಡ್ ಕ್ರಾಸ್ ಸಂಸ್ಥೆಯ ಸ್ಥಾಪನೆಗೆ ಕಾರಣನಾದ ಸ್ವಿಸ್ ವ್ಯಾಪಾರಿ ಹೆನ್ರಿ ಡ್ಯೂನಾಟ್ ಅವರ ಜನ್ಮದಿನ. 1859ರಲ್ಲಿ ಸೆಲ್ಫೋರಿನೋ ಎಂಬಲ್ಲಿ ಬರುತ್ತಿದ್ದಾಗ ಯುದ್ಧದಲ್ಲಿ ಸಹಸ್ರಾರು ಜನ ಸತ್ತು ಹಲವಾರು ಗಾಯಗೊಂಡು ನರಳುತ್ತಿದ್ದುದನ್ನು ಡ್ಯೂನಾಟ್ ನೋಡಿದರು. ತತ್ ಕ್ಷಣವೇ ತಮ್ಮ ಕೆಲಸ ಬದಿಗಿಟ್ಟು ಸ್ಥಳೀಯರ ನೆರವು ಪಡೆದು ಗಾಯಾಳುಗಳಿಗೆ ಸಹಾಯ ಮಾಡಿದರು. ಇದರೊಂದಿಗೆ ಹುಟ್ಟಿದ ರೆಡ್ ಕ್ರಾಸ್ ಸಂಸ್ಥೆ ಈಗ ವಿಶ್ವವ್ಯಾಪಿ. ಜಾತಿ, ಧರ್ಮ, ಪ್ರದೇಶ, ರಾಜಕೀಯ ಇತ್ಯಾದಿ ಯಾವುದರ ಆಧಾರದ ಮೇಲೆ ತಾರತಮ್ಯ ಮಾಡದೆ ತೊಂದರೆಯಲ್ಲಿ ಇರುವ ಜನರಿಗೆ ನೆರವಾಗುತ್ತದೆ.

2016: ಡೆಹ್ರಾಡೂನ್: ಉತ್ತರಾಖಂಡ ವಿಧಾನಸಭೆಯಲ್ಲಿ ಮೇ 10ರಂದು ಪದಚ್ಯುತ ಮುಖ್ಯಮಂತ್ರಿ ಹರೀಶ್ ರಾವತ್ ಅವರು ನಿರ್ಣಾಯಕ ವಿಶ್ವಾಸ ಮತ ಯಾಚನೆ ಮಾಡುವುದಕ್ಕೆ ಇನ್ನೂ ಎರಡು ದಿನಗಳು ಇರುವಾಗಲೇ, ಲಂಚ ಕೈಬದಲಾದುದನ್ನು ಕಾಂಗ್ರೆಸ್ ಶಾಸಕರೊಬ್ಬರು ಒಪ್ಪಿಕೊಂಡ ಇನ್ನೊಂದು ಕುಟುಕು ವಿಡಿಯೋ ಈದಿನ ಬೆಳಕಿಗೆ ಬಂದಿದ್ದು, ರಾವತ್ ವರ್ಚಸ್ಸಿಗೆ ಇನ್ನಷ್ಟು ಮಸಿ ಬಳಿಯಿತು. ಪ್ರಾದೇಶಿಕ ಸುದ್ದಿವಾಹಿನಿ ಸಮಾಚಾರ್ ಪ್ಲಸ್ ಕುಟುಕು ವಿಡಿಯೋವನ್ನು ಪ್ರಸಾರ ಮಾಡಿತು. ಕಾಂಗ್ರೆಸ್ ಶಾಸಕ ಮದನ್ ಬಿಶ್ತ್ ಅವರು ಬಂಡಾಯ ಶಾಸಕ ಹರಕ್ ಸಿಂಗ್ ರಾವತ್ ಅವರ ಬಳಿ 12 ಮಂದಿ ಕಾಂಗ್ರೆಸ್ ಶಾಸಕರಿಗೆ ಲಕ್ಷಾಂತರ ರೂಪಾಯಿಗಳನ್ನು ನೀಡಿರುವುದರ ಹಿಂದಿನ ಸೂತ್ರಧಾರಿ ತಾನೇ ಎಂದು ಹೇಳಿಕೊಂಡಿದ್ದು ವಿಡಿಯೋದಲ್ಲಿ ಇದೆ. ಉಪಸಭಾಧ್ಯಕ್ಷ ಎಪಿ. ಮೈಖುರಿ ಸೇರಿದಂತೆ 12 ಕಾಂಗ್ರೆಸ್ ಶಾಸಕರಿಗೆ ಪದಚ್ಯುತ ಮುಖ್ಯಮಂತ್ರಿಯ ಪರವಾಗಿ ಲಕ್ಷಾಂತರ ರೂಪಾಯಿ ಒದಗಿಸಲಾಗಿತ್ತು ಎಂದು ಅವರು ಹೇಳಿದ್ದು ವಿಡಿಯೋದಲ್ಲಿ ದಾಖಲಾಗಿದೆ. ರಾವತ್ ಅವರು 25 ಲಕ್ಷ ರೂಪಾಯಿಗಳನ್ನು ಕೆಲವು ಎಂಎಲ್ಎಗಳಿಗೆ ಮತ್ತು ಮೈಖುರಿ ಅವರಿಗೆ 50 ಲಕ್ಷ ರೂಪಾಯಿ ನೀಡಿದ್ದಾರೆ ಎಂದು ಬಿಶ್ತ್ ಹೇಳಿದ್ದು ಕೂಡಾ ವಿಡಿಯೋದಲ್ಲಿ ದಾಖಲಾಗಿದೆ. ‘ನಾನು ವೇತನ ಪಡೆದುಕೊಳ್ಳುವುದಿಲ್ಲ, ಆದರೆ ತಿಂಗಳಿಗೆ 5ರಿಂದ 10 ಲಕ್ಷ ರೂಪಾಯಿಗಳನ್ನು ಬಯಸಿದಾಗೆಲ್ಲಾ ಮುಖ್ಯಮಂತ್ರಿಯಿಂದ ಪಡೆದುಕೊಳ್ಳುತ್ತೇನೆಎಂದೂ ಶಾಸಕ ಪ್ರತಿಪಾದಿಸಿದ್ದಾರೆ. ಜಿಲ್ಲಾ ಮ್ಯಾಜಿಸ್ಟ್ರೇಟ್ಗಳು ಮತ್ತು ಜಿಲ್ಲಾ ಪೊಲೀಸ್ ಅಧಿಕಾರಿಗಳು ಪ್ರತಿ ತಿಂಗಳೂ ಒಂದು ಲಕ್ಷ ರೂಪಾಯಿಗಳನ್ನು ಅಕ್ರಮ ಗಣಿಗಾರಿಕೆ ಟ್ರಕ್ಗಳ ಬಿಡುಗಡೆಗೆ ಸಂಗ್ರಹಿಸುತ್ತಾರೆ. ಗಣಿಗಾರಿಕೆ ಪಟ್ಟಾ (ಪರವಾನಗಿಗಳು) ಮಾರಾಟ ಮೂಲಕ ರಾವತ್ ಅವರು ಸುಮಾರು 27 ಕೋಟಿ ರೂಪಾಯಿ ಸಂಪಾದನೆ ಮಾಡಿದ್ದಾರೆ ಎಂದು ಬಿಶ್ತ್ ಪ್ರತಿಪಾದಿಸಿರುವುದೂ ವಿಡಿಯೋದಲ್ಲಿ ಕಂಡು ಬಂದಿತು.

2016:ನವದೆಹಲಿ: ನಲ್ವತ್ತೆಂಟು ವರ್ಷಗಳಷ್ಟು ಹಳೆಯದಾದ ವೈರಿ ಆಸ್ತಿ ಕಾಯ್ದೆಗೆ ತಿದ್ದು ಪಡಿ ತರಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನಡೆಸಿರುವ ಯತ್ನಕ್ಕೆ ರಾಜ್ಯಸಭೆಯಲ್ಲಿ ಅನುಮೋದನೆ ಲಭಿಸುವ ಸಾಧ್ಯತೆಗಳು ಇಲ್ಲ ಎಂದು ವರದಿಗಳು ತಿಳಿಸಿದವು.  ನಾಲ್ಕು ರಾಜಕೀಯ ಪಕ್ಷಗಳು ತಿದ್ದುಪಡಿಯನ್ನು ವಿರೋಧಿಸಿದ್ದುಮೂಲ ಕಾನೂನು ಸಮತೋಲನದಿಂದ ಕೂಡಿದೆಹೊಸ ಬದಲಾವಣೆಗಳು ಸಹಜ ನ್ಯಾಯಕ್ಕೆ ವಿರುದ್ಧವಾಗಿವೆ ಎಂದು ಹೇಳಿರುವುದು ಇದಕ್ಕೆ ಕಾರಣಜೆಡಿ(ಯು), ಸಿಪಿಐ ಮತ್ತು ಸಮಾಜವಾದಿ ಪಕ್ಷಗಳು ಪ್ರಸ್ತಾಪಿದ ಬದಲಾವಣೆಗಳ ಪರಿಣಾಮವಾಗಿ ಲಕ್ಷಾಂತರ ಭಾರತೀಯ ನಾಗರಿಕರಿಗೆ ಶಿಕ್ಷೆಯಾಗುತ್ತದೆ ಮತ್ತು ‘ವೈರಿ ಸರ್ಕಾರ ಮೇಲೆ ಯಾವ ಪರಿಣಾಮವನ್ನೂ ಬೀರುವುದಿಲ್ಲ ಎಂದು ಹೇಳಿವೆನಾಲ್ಕು ಪಕ್ಷಗಳ ಪ್ರತಿನಿಧಿಗಳಾದ ಕೆ ಸಿ ತ್ಯಾಗಿ (ಜೆಡಿ-ಯು), ಕೆರಹಮಾನ್ ಖಾನ್ಪಿ.ಎಲ್ಪೂರ್ಣಿಯಾ ಮತ್ತು ಹುಸೇನ್ ದಲ್ವಾಯಿ (ಎಲ್ಲರೂ ಕಾಂಗ್ರೆಸ್), ಡಿರಾಜಾ (ಸಿಪಿಐಮತ್ತು ಜಾವೇದ್ ಅಲಿ ಖಾನ್ ಇವರು 1968 ವೈರಿ ಆಸ್ತಿ ಕಾಯ್ದೆಗೆ ತಿದ್ದುಪಡಿ ತರುವ ಕುರಿತ ಆಯ್ಕೆ ಸಮಿತಿ ವರದಿಯಲ್ಲಿ ಭಿನ್ನ ಟಿಪ್ಪಣಿ ನಮೂದಿಸಿದ್ದಾರೆವರದಿಯನ್ನು ಮೇ 6ರಂದು  ರಾಜ್ಯಸಭೆಯಲ್ಲಿ ಮಂಡಿಸಲಾಗಿದೆ. ‘ಪ್ರಸ್ತಾಪಿತ ಮಸೂದೆ, 2016 ವಿಧಿಗಳು ಮೂಲಕಾಯ್ದೆಯ ತತ್ವಗಳಿಗೆ ವ್ಯತಿರಿಕ್ತವಾಗಿವೆಇವುಗಳನ್ನು ಕಾಯ್ದೆಗೆ ಸೇರ್ಪಡೆ ಮಾಡಿದ್ದೇ ಆದರೆ ಸಂಪೂರ್ಣ ಸಮತೋಲನ ತಪ್ಪುವುದರ ಜೊತೆಗೆ ಅದು ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲಹೀಗಾಗಿ ನಾವು  ಮೂಲಕ ಭಿನ್ನ ಟಿಪ್ಪಣಿ ನಮೂದಿಸುತ್ತಿದ್ದುಇದನ್ನು ಸಮಿತಿಯ ವರದಿಯ ಭಾಗವಾಗಿ ಪರಿಗಣಿಸಬೇಕು’ ಎಂದು ಭಿನ್ನ ಟಿಪ್ಪಣಿಯನ್ನು ನಮೂದಿಸಲಾಗಿದೆತಿದ್ದುಪಡಿಯು ಸಹಜ ನ್ಯಾಯ ಮತ್ತು ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದೂ ಅವರು ಹೇಳಿದ್ದಾರೆ.

2016: ಚಂಡೀಗಢ: ಹರಿಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಸಂಕಷ್ಟಕ್ಕೆ ಸಿಲುಕಿಕೊಂಡರು. ನ್ಯಾಷನಲ್ ಹೆರಾಲ್ಡ್ ಅಕ್ರಮ ಭೂ ಪರಭಾರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೂಡಾ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ರಾಜಕೀಯ ವಲಯದ ಸಂಚಲನಕ್ಕೆ ಕಾರಣವಾಯಿತು. ದೇಶದಲ್ಲಿ ಸಾಕಷ್ಟು ಸದ್ದು ಮಾಡಿದ್ದ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಭೂಪೇಂದ್ರ ಸಿಂಗ್ ಹೆಸರು ನೇರವಾಗಿ ಪ್ರಸ್ತಾಪವಾಗಿದೆ.  ಅಂದಿನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರರಾಗಿದ್ದ ಹೂಡಾ ವಿರುದ್ಧ ಚಂಡೀಗಢದ ಜಾಗೃತ ದಳ ಪ್ರಕರಣ ದಾಖಲಿಸಿತು. ಹೂಡಾ ಅವರ ಜತೆ ಇನ್ನೂ ಕೆಲವು ಅಧಿಕಾರಿಗಳ ವಿರುದ್ಧವೂ ಪ್ರಕರಣ ದಾಖಲಾಯಿತು. ಹೂಡಾ ಅವರು ಅಧಿಕಾರಿಗಳ ಜತೆಗೂಡಿ ಅಕ್ರಮವಾ ಭೂ ಪರಭಾರೆ ಮಾಡಿದ್ದಾರೆ ಎಂದು ಆರೋಪಿಸಲಾಯಿತು. ಭ್ರಷ್ಟಾಚಾರ ನಿಗ್ರಹ ಕಾಯ್ದೆ 409, 420 ಮತ್ತು 120 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಯಿತು. ಪ್ರಕರಣದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಮೇಲೂ ಆರೋಪವಿದ್ದು, ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿದವು..
2016: ನವದೆಹಲಿ: ಬೆಲ್ಜಿಯಂ ಮಹಿಳೆಯ ಮಾನಭಂಗ ಆಪಾದನೆಯಲ್ಲಿ ದೆಹಲಿಯ ಓಲಾ ಕ್ಯಾಬ್ ಚಾಲಕನೊಬ್ಬನನ್ನು ಹಿಂದಿನ ರಾತ್ರಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. ಆಪಾದಿತ ಚಾಲಕನನ್ನು ವಜಾ ಮಾಡಲಾಗಿದೆ ಎಂದು ಓಲಾ ಟ್ಯಾಕ್ಸಿ ವ್ಯವಸ್ಥಾಪಕರು ಹೇಳಿಕೆ ನೀಡಿದರು.
23 ಹರೆಯದ ಬೆಲ್ಜಿಯಂ ಮಹಿಳೆ, ತಾನು ಗುರ್ಗಾಂವ್ನಿಂದ ದೆಹಲಿಗೆ ಓಲಾ ಕ್ಯಾಬ್ನಲ್ಲಿ ಪ್ರಯಾಣಿಸುತ್ತಿದ್ದಾಗ ಚಾಲಕ ತನ್ನ ಜಿಪಿಎಸ್ ಉಪಕರಣ ಕೆಟ್ಟಿರುವುದರಿಂದ ಮುಂದಿನ ಸೀಟಿನಲ್ಲಿ ಕುಳಿತು ಮಾರ್ಗದರ್ಶನ ಮಾಡುವಂತೆ ಕೋರಿದ. ಹಾಗೆ ಮುಂದೆ ಕುಳಿತಿದ್ದಾಗ ಚಾಲಕ ರಾಜ್ಸಿಂಗ್ ತನ್ನನ್ನು ಚುಂಬಿಸಿದ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದರು. ಕ್ಯಾಬ್ನಿಂದ ಇಳಿದ ಬಳಿಕ ಆಕೆ ಘಟನೆ ಬಗ್ಗೆ ತನ್ನ ಗೆಳೆಯನಿಗೆ ತಿಳಿಸಿದ್ದು, ಆಮೇಲೆ ಆಗ್ನೇಯ ದೆಹಲಿಯ ಸಿಆರ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಬುಕಿಂಗ್ ವಿವರಗಳನ್ನು ಆಧರಿಸಿ ಚಾಲಕನನ್ನು ಗುರುತಿಸಲಾಯಿತು ಎಂದು ಪೊಲೀಸರು ಹೇಳಿದರು.
2016: ಪಟನಾ: ತನ್ನ ಕಾರನ್ನು ಓವರ್ಟೇಕ್ ಮಾಡಿ ಮುಂದೆ ಸಾಗಿದ್ದಕ್ಕಾಗಿ 12ನೇ ತರಗತಿಯ ವಿದ್ಯಾರ್ಥಿಯನ್ನು ಜನತಾ ದಳ (ಯು) ಶಾಸಕರ ಪುತ್ರನೊಬ್ಬ ಗುಂಡು ಹಾರಿಸಿ ಕೊಲೆಗೈದ ಘಟನೆ ಬಿಹಾರದ ಗಯಾ ಪಟ್ಟಣದಲ್ಲಿ ಘಟಿಸಿತು. ವ್ಯಾಪಾರಿಯೊಬ್ಬರ ಪುತ್ರ ಆದಿತ್ಯ ಸಚದೇವ ಎಂಬ ವಿದ್ಯಾರ್ಥಿಯನ್ನು ಜೆಡಿ(ಯು) ವಿಧಾನಪರಿಷತ್ ಸದಸ್ಯೆ ಮನೋರಮಾ ದೇವಿ ಮತ್ತು ಬಿಂದಿ ಯಾದವ್ ಅವರ ಪುತ್ರ ರಾಕಿ ಯಾದವ್ ಹಿಂದಿನ ದಿನ ತಡರಾತ್ರಿಯಲ್ಲಿ ಗುಂಡಿಟ್ಟು ಕೊಲೆಗೈದ.  ಈತನ ಅಪ್ಪ ಬಿಂದಿ ಯಾದವ್ ರಾಜಕಾರಣಿಯಾಗಿ ಬದಲಾದ ಕ್ರಿಮಿನಲ್ ವ್ಯಕ್ತಿ. ಆದಿತ್ಯನ ಕೊಲೆ ವಿರುದ್ಧ ತೀವ್ರ ಪ್ರತಿಭಟನೆ ಭುಗಿಲೆದ್ದ ಬಳಿಕ ಪೊಲೀಸರು ಬಿಂದಿ ಯಾದವ್ನನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡರು. ತನ್ನ ಹೊಸ ಲ್ಯಾಂಡ್ ರೋವರ್ ಕಾರಿಗೆ ಹೋಗಲು ದಾರಿ ಬಿಟ್ಟು ಕೊಡದೇ ಇದ್ದುದಕ್ಕಾಗಿ ಸಿಟ್ಟಿಗೆದ್ದ ರಾಕಿ ಯಾದವ್ ತೀವ್ರ ಮಾತಿನ ಚಕಮಕಿಯ ಮಧ್ಯೆ ಆದಿತ್ಯ ಮೇಲೆ ಗುಂಡು ಹಾರಿಸಿದ ಎಂದು ಪ್ರಾಥಮಿಕ ವರದಿಗಳು ತಿಳಿಸಿದವು.  ಪೊಲೀಸರು ರಾಕಿಯ ಕಾರನ್ನು ಹೆತ್ತವರ ಮನೆಯಲ್ಲಿ ಪತ್ತೆ ಹಚ್ಚಿದ್ದಾರೆ ಎಂದು ವರದಿಗಳು ಹೇಳಿದವು.

2016: ಕೋಲ್ಕತ: ಘಟಾನುಘಟಿ ನಟ-ನಟಿಯರಾದ ಸಂಜೀವ್ ಕುಮಾರ್, ಶಬಾನಾ ಆಜ್ಮಿ ಮತ್ತು ಅಮ್ಜದ್ ಖಾನ್ ನಟನೆಯ 1977ರಲ್ಲಿ ತೆರೆಕಂಡಶತ್ರಂಜ್ ಕೆ ಖಿಲಾರಿಚಿತ್ರದ ಶೂಟಿಂಗ್ ವೇಳೆ ಸೆಟ್ನಲ್ಲಿ ಒಂದುವರೆ ಗಂಟೆಗೂ ಹೆಚ್ಚು ಸಮಯ ಕಾಯುವಂತೆ ಮಾಡಿದ್ದರು! – 1966ರಲ್ಲಿ ಧೂಳೆಬ್ಬಿಸಿದ್ದ ನಾಯಕ್ ಚಿತ್ರಕ್ಕಾಗಿ 100ಕ್ಕೂ ಹೆಚ್ಚು ಶೇವಿಂಗ್ ಬ್ರಶ್ಗಳನ್ನು ನಿರಾಕರಿಸಿದ್ದರು. ಸಾಕಷ್ಟು ಬಾರಿ ಶೂಟಿಂಗ್ ಮುಂದೂಡಿದ್ದರು!  1981 ನಿರ್ಮಾಣವಾದ ಹಿಂದಿ ದೂರದರ್ಶನ ಚಿತ್ರ ಸದ್ಗತಿಗಾಗಿ ಮಾರ್ಗ ಮಧ್ಯೆ ಸಿಕ್ಕ ಅವಶೇಷಗಳನ್ನೆಲ್ಲ ಸಂಗ್ರಹಿಸಿಕೊಂಡು ಬರುತ್ತಿದ್ದರು!  ಇಷ್ಟೆಲ್ಲಾ ಮಾಡಿದ್ದು, ಯಾರು ಎನ್ನುವ ಕೌತುಕಕ್ಕೆ ಉತ್ತರವೇ ಖ್ಯಾತ ನಿರ್ದೇಶಕ ಸತ್ಯಜಿತ್ ರಾಯ್. ಅವರ 95ನೇ ಜನ್ಮದಿನದ ನಿಮಿತ್ತ ಕೋಲ್ಕತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಲ್ಲಾ ಆಸಕ್ತಿದಾಯಕ ಕ್ಷಣಗಳನ್ನು ಅವರೊಂದಿಗೆ 21 ಚಿತ್ರಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ ಸುಬ್ರತೊ ಲಾಹಿರಿ ಮೆಲುಕು ಹಾಕಿದರು. ದೃಶ್ಯಗಳಲ್ಲಿ ನೈಜತೆ ಕಾಪಾಡಿಕೊಳ್ಳುವುದಕ್ಕೆ ಸಾಕಷ್ಟು ಮಹತ್ವ ನೀಡುತ್ತಿದ್ದ ಅವರು, ನಿರ್ದೇಶನದ ವೇಳೆ ಊಹಿಸಲಿಕ್ಕೂ ಸಾಧ್ಯವಾಗದಷ್ಟು ಸೂಕ್ಷ್ಮಗಳನ್ನು ಗ್ರಹಿಸಿ ತಮಗೆ ಬೇಕಾದ ರೀತಿಯಲ್ಲಿ ಮಾಡಿಸಿಕೊಳ್ಳುತ್ತಿದ್ದರು ಎಂದು ತಮ್ಮ ಅನುಭವಗಳನ್ನು ಹಂಚಿಕೊಂಡರುಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಆಶ್ರಯದಲ್ಲಿ ಸತ್ಯಜಿತ್ ರಾಯ್ ಫಿಲ್ಮ್ ಆಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಶನಿವಾರ ಸಂಜೆ ಕಾರ್ಯಕ್ರಮ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅನೇಕರು ರಾಯ್ ಅವರೊಂದಿಗಿನ ಆಸಕ್ತಿದಾಯಕ ಕ್ಷಣಗಳನ್ನು ಹಂಚಿಕೊಂಡರು.

2016: ಶಿಮ್ಲಾ: ಹಿಮಾಚಲ ಪ್ರದೇಶದ ಮಾಂಡಿ ಜಿಲ್ಲೆಯಲ್ಲಿ ಭಾನುವಾರ ನಸುಕಿನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 14 ಜನರು ಸಾವನ್ನಪ್ಪಿ, 40ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಗಾಯಾಳುಗಳಲ್ಲಿ ಬಹುತೇಕ ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದರು. 50ಕ್ಕೂ ಹೆಚ್ಚು ಪ್ರಯಾಣಿಕರಿದ್ದ ನತದೃಷ್ಟ ಹಿಮಾಚಲ ರಸ್ತೆ ಸಾರಿಗೆ ನಿಗಮ ಬಸ್ಸು ಧರ್ಮಶಾಲಾದ ಕಿನ್ನೌರ್ ಜಿಲ್ಲೆಯ ರೆಕೊಂಗ ಪಿಯೊ ಮಾರ್ಗವಾಗಿ ಸಾಗುತ್ತಿದ್ದಾಗ ರಾಜಧಾನಿಯಿಂದ 200 ಕಿಮೀ ದೂರದ ಜೋಗಿಂದರ್ ನಗರದ ಬಳಿ ಕಣಿವೆ ಉರುಳಿ ಅಪಘಾತ ಸಂಭವಿಸಿತು. ಬಸ್ಸಿನಲ್ಲಿ ಮಿತಿಗಿಂತ ಹೆಚ್ಚು ಜನರನ್ನು ತುಂಬಿಸಿದ್ದು ಹಾಗೂ ಹದಗೆಟ್ಟ ರಸ್ತೆ ಅಪಘಾತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ತಿಳಿಸಿದರು.  ಎದುರಿನಿಂದ ಬಂದ ಬಸ್ಸಿಗೆ ತೆರಳಲು ನತದೃಷ್ಟ ಬಸ್ಸಿನ ಚಾಲಕ ಅವಕಾಶ ಮಾಡಿಕೊಡುತ್ತಿದ್ದಾಗ ರಸ್ತೆಯ ಒಂದು ಬದಿ ಕುಸಿದು ಬಸ್ಸು ಕಣಿವೆಗೆ ಉರುಳಿತು ಎಂದು ಅಪಘಾತದಲ್ಲಿ ಬದುಕಿ ಉಳಿದ ವ್ಯಕ್ತಿಯೊಬ್ಬರು ಹೇಳಿದರು.

2016: ಶ್ರೀನಗರ: ಶಂಕಿತ ಉಗ್ರರು ಪೊಲೀಸ್ ಕೋಟೆಯನ್ನೇ ಬೇಧಿಸಿ ಅತ್ಯಾಧುನಿಕ ಮೂರು ರೈಫಲ್ಗಳನ್ನು ಕದ್ದೊಯ್ದ ಘಟನೆ ಜಮ್ಮು ಕಾಶ್ಮೀರದ ಕುಲಗಾಂನಲ್ಲಿ ಘಟಿಸಿತು. ಮೂಲಗಳ ಪ್ರಕಾರ ನಾಲ್ಕು ಮಂದಿ ಶಂಕಿತ ಉಗ್ರರು ಕುಲಗಾಂ ಪ್ರದೇಶದಲ್ಲಿ ನಿಯೋಜಿಸಲಾದ ಪೊಲೀಸ್ ಪಡೆಯನ್ನೇ ಭೇದಿಸಿ, ಪೊಲೀಸರನ್ನು ಯಾಮಾರಿಸಿ ಕೃತ್ಯವೆಸಗಿದರು. ಘಟನೆ ಹಿಂದಿನ ರಾತ್ರಿ ಘಟಿಸಿತು. ಲೂಟಿ ಮಾಡಲಾದ ಶಸ್ತ್ರಾಸ್ತ್ರಗಳ ಪೈಕಿ ಎರಡು ಎಕೆ 47 ಆಗಿದ್ದು, ಇನ್ನೊಂದು ಐಎನ್ಎಸ್ಎಎಸ್ ರೈಫಲ್ ಎಂದು ಪೊಲೀಸರು ತಿಳಿಸಿದರು.. ಇತ್ತೀಚೆಗಷ್ಟೆ ಬಿಜ್ಬೆಹಾರ್ನಲ್ಲಿ ಇದೇ ಮಾದರಿಯ ಪ್ರಕರಣ ನಡೆದಿದ್ದು, ಐದು ರೈಫಲ್ಗಳನ್ನು ಕದ್ದೊಯ್ದಿದ್ದರು. ಬಳಿಕ ಭದ್ರತಾ ಪಡೆ ಸಿಬ್ಬಂದಿಗಳು ರೈಫಲ್ಗಳನ್ನು ವಶಪಡಿಸಿಕೊಂಡಿದ್ದರು.

2016: ನಾಗಪುರ: ದಲಿತಳೆನ್ನುವ ಕಾರಣದಿಂದ ತನ್ನ ಪತ್ನಿಗೆ ನೀರು ನೀಡಲು ಮಾಲೀಕ ನಿರಾಕರಿಸಿದ ಸಿಟ್ಟಿಗೆ ದಲಿತನೊಬ್ಬ ಕೇವಲ ನಲವತ್ತು ದಿನಗಳಲ್ಲಿ ಬಾವಿ ತೋಡಿ ಸಾಹಸ ಮೆರೆದ ಪ್ರಕರಣ ಬೆಳಕಿಗೆ ಬಂತು.  ಅಂತಿಮ ವರ್ಷ ಬಿಎ ವರೆಗೆ ಕಲಿತು ಕೂಲಿ ಕಾರ್ವಿುಕನಾಗಿರುವ ವಾಶಿಂ ಜಿಲ್ಲೆಯ ಕಲಾಂಬೇಶ್ವರ್ ಗ್ರಾಮದ ಬಾಪುರಾವ್ ತಾಜ್ನೆ ಕೆಲಸಕ್ಕೆ ಹೋಗುವ ಮೊದಲು ನಾಲ್ಕು ಗಂಟೆ ಮತ್ತು ಕೆಲಸದಿಂದ ಬಂದ ನಂತರ 2 ಗಂಟೆ ಸಮಯ ಬಾವಿ ತೋಡಿ 4-5 ಜನ ಮಾಡಬೇಕಾದ ಕೆಲಸವನ್ನು 40 ದಿನಗಳಲ್ಲಿ ಏಕಾಂಗಿಯಾಗಿ ಮುಗಿಸಿದ. ಇದೀಗ 5 ಅಡಿಯಷ್ಟು ಆಳದ ಬಾವಿಯಲ್ಲಿ ನೀರಿನ ಸೆಲೆ ಕಂಡುಬಂದಿದ್ದು, ಎಲ್ಲರೂ ಬಾಪುರಾವ್ ಬೆನ್ನು ತಟ್ಟಿದರು. ಬಾಪುರಾವ್ ತಾಜ್ನೆ ಹುಚ್ಚು ಸಾಹಸಕ್ಕೆ ಕೈಹಾಕಿದನೆಂದು ಪತ್ನಿ ಸೇರಿದಂತೆ ಯಾರೂ ಅವನಿಗೆ ಸಹಾಯ ಮಾಡಿರಲಿಲ್ಲ. ಈಗ ಊರಿನ ದಲಿತರೆಲ್ಲ ಬಾವಿಯಿಂದಲೇ ನೀರು ತೆಗೆಯುತಿದ್ದಾರೆ. ತಾಜ್ನೆ ತನ್ನ ಬಾವಿಯನ್ನು ಇನ್ನೂ ಐದು ಅಡಿ ಆಳ ಅಗೆಯಬೇಕೆಂದು ನಿರ್ಧರಿಸಿದ್ದು ಊರವರೂ ಇದಕ್ಕೆ ಸಹಾಯ ನೀಡುವುದಾಗಿ ಹೇಳಿದರು.


2016: ಉಜ್ಜೈನಿ: ಮುಂಬರುವ ನವೆಂಬರ್ 9ರಿಂದ ರಾಮಮಂದಿರ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ಸಂತರ ಗುಂಪೊಂದು ಘೋಷಿಸಿತು. ಈ ವಿಚಾರವಾಗಿ ಎಪ್ರಿಲ್ 22ರಂದು ಉಜ್ಜೈನಿಯಲ್ಲಿ ಆರಂಭವಾಗಿರುವ ಕುಂಭ ಮೇಳದಲ್ಲಿ ಸಂತರು ಚರ್ಚಿಸಿ ನಿರ್ಧಾರಕ್ಕೆ ಬರಲಾಯಿತು. 12 ವರ್ಷಕ್ಕೊಮ್ಮೆ ನಡೆಯುವ ಮಹಾ ಕುಂಭಮೇಳದಲ್ಲಿ ಸೇರಿದ ಸಾವಿರಾರು ಸಾಧು, ಸಂತರು ಒಕ್ಕೊರಲಿನಿಂದ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಯಿತು. ಇದೇ ವಿಚಾರವಾಗಿ ಕಳೆದ ಬಿಜೆಪಿ ರಾಜ್ಯ ಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ಆದಷ್ಟು ಬೇಗ ಸುಪ್ರೀಂ ಕೋರ್ಟ್ ಪ್ರಕರಣವನ್ನು ಇತ್ಯರ್ಥಗೊಳಿಸಬೇಕೆಂದು ಆಗ್ರಹಿಸಿದ್ದರು. ಪ್ರಧಾನಿ ಮತ್ತು ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿಯವರು ಬಾಕಿ ಪ್ರಕರಣಗಳ ತ್ವರಿತ ಇತ್ಯರ್ಥ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ಸ್ವಾಮಿ ಹೇಳಿದ್ದರು.

2016: ನವದೆಹಲಿ: ಸುಮಾರು 3600 ಕೋಟಿ ರೂಪಾಯಿ ಮೊತ್ತದ ಅಗಸ್ತಾ ವೆಸ್ಟ್ ಲ್ಯಾಂಡ್ ಅತಿಗಣ್ಯರ ಹೆಲಿಕಾಪ್ಟರ್ ವಹಿವಾಟಿನ ಹಣ ವರ್ಗಾವಣೆ ಕುರಿತು ತನಿಖೆ ನಡೆಸುತ್ತಿರುವ ತನಿಖೆಗಾರರಿಗೆ ಸ್ಥಳೀಯ ಚಾಲಕನೊಬ್ಬನ ವಿಚಾರಣೆ ಬಳಿಕ ಆರೋಪಿತ ಮಧ್ಯವರ್ತಿಕ್ರಿಶ್ಚಿಯನ್ ಮೈಖೆಲ್ ಭಾರತೀಯ ಸಂಪರ್ಕಗಳು ಮತ್ತು ಹಣದ ಮೂಲಗಳ ಬಗ್ಗೆಮಹತ್ವ ಸುಳಿವುಗಳು ಲಭಿಸಿದವು. ನಾರಾಯಣ ಬಹಾದುರ್ ಹೆಸರಿನ ಚಾಲಕ ಮೈಖೆಲ್ ಚಾಲಕನಾಗಿದ್ದು ಜಾರಿ ನಿರ್ದೇಶನಾಲಯ ಸಿಬ್ಬಂದಿ ಈತನನ್ನು ಸುದೀರ್ಘವಾಗಿ ಪ್ರಶ್ನಿಸಿದ್ದರು.   ಸಂದರ್ಭದಲ್ಲಿ ಈತ ಬ್ರಿಟಿಷ್ ಪ್ರಜೆ ಮೈಖೆಲ್ಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯರ ಜೊತೆಗೆ ಇದ್ದ ಸಂಪರ್ಕಗಳ ಕುರಿತು ವಿವರಿಸಿದ್ದಾನೆ ಎಂದು ಸುದ್ದಿ ಮೂಲಗಳು ತಿಳಿಸಿದವು. ಇತ್ತೀಚಿನವರೆಗೂ ಕಾರು ಚಾಲಕನಿಗೆ ಗ್ಲೋಬಲ್ ವೈರ್ ಫಂಡ್ ಟ್ರಾನ್ಸ್ಫರ್ ಸೇವೆ ಮೂಲಕ ಹಣ ಬರುತ್ತಿತ್ತು. ಇದು ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ತನಿಖೆಗಾರರಿಗೆ ಮೈಖೆಲ್ ಹಾಲಿ ಕಾರ್ಯಾಚರಣೆ ಮತ್ತು ಚಟುವಟಿಕೆಗಳ ಬಗ್ಗೆ ತಿಳಿದುಕೊಳ್ಳಲು ಅನುಕೂಲವಾಯಿತು ಎಂದು ವರದಿಗಳು ಹೇಳಿದವು. ಮೈಖೆಲ್ ಬಂಧನಕ್ಕಾಗಿ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಈಗಾಗಲೇ ಇಂಟರ್ಪೋಲ್ ರೆಡ್ಕಾರ್ನರ್ ನೋಟಿಸ್ ಪಡೆದುಕೊಂಡಿದ್ದವು. ಚಾಲಕನ ನೀಡಿದ ಮಾಹಿತಿ ಪ್ರಕಾರ ಮೈಖೆಲ್ ಭಾರತಕ್ಕೆ ಬಂದಾಗಲೆಲ್ಲಾ ಆತನ ಕಾರಿನಲ್ಲೇ ಸಂಚರಿಸುತ್ತಿದ್ದ. ಕೇಂದ್ರ ದೆಹಲಿಯ ಹೋಟೆಲ್ನಿಂದ ಆತನನ್ನು ಕರೆದುಕೊಂಡು ಲ್ಯೂಟಿಯೆನ್ಸ್ ದೆಹಲಿ ಮತ್ತು ದೆಹಲಿಯ ದಕ್ಷಿಣ ಭಾಗದಲ್ಲಿನ ದೇಶ ವಿದೇಶಗಳ ಆತನ ಪರಿಚಿತರ ಬಳಿಗೆ ಕರೆದೊಯ್ಯುತ್ತಿದ್ದ.

2016: ನವದೆಹಲಿ: ಪ್ರಸ್ತುತ ಭಾರತದಲ್ಲಿ ನಾಲ್ಕು ತುರ್ತು ಸಂಖ್ಯೆಗಳಿದ್ದು, 2017ರಿಂದ ಪೊಲೀಸ್, ಅಗ್ನಿ ಶಾಮಕ ದಳ ಹಾಗೂ ಆಂಬುಲೆನ್ಸ್ ಸೇವೆ ಪಡೆಯಲು ‘122’ ಏಕ ಸಂಖ್ಯೆ ಚಾಲ್ತಿಗೆ ಬರಲಿದೆ.
ತುರ್ತು ಸೇವೆಯನ್ನು ಇನ್ನಷ್ಟು ಸುಲಭ ಮಾಡುವ ನಿಟ್ಟಿನಲ್ಲಿ ಕೇಂದ್ರ ಚಿಂತಿಸಿದ್ದು, ಯೋಜನೆ ಹೊಸ ವರ್ಷದ ಮೊದಲನೇ ದಿನದಿಂದಲೇ ಜಾರಿಗೆ ಬರಲಿದೆ. ರೀತಿ ಏಕ ಸಂಖ್ಯೆ ಈಗಾಗಲೇ ಅಮೆರಿಕಾದಲ್ಲಿ (911) ಜಾರಿಯಲ್ಲಿದೆ. ಇದೇ ರೀತಿ ಸೌಲಭ್ಯವನ್ನು ಭಾರತೀಯರಿಗೂ ನೀಡಲು ಕೇಂದ್ರ ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್ ಒಪ್ಪಿಗೆ ಸೂಚಿಸಿದ್ದಾರೆ ಎಂದು ವರದಿಗಳು ತಿಳಿಸಿದವು. ಯಾರು ತುರ್ತಯಾತನೆ ಅನುಭವಿಸುತ್ತಿದ್ದಾರೋ, ಅವರು ಕೂಡಲೇ ತಮ್ಮ ಮೊಬೈಲ್ ಪೋನ್ ಅಥವಾ ಲ್ಯಾಂಡ್ ಲೈನ್ ಮೂಲಕ 122 ಡಯಲ್ ಮಾಡಿದರೆ ಸಂಬಂಧಪಟ್ಟ ಇಲಾಖೆಗೆ ಕರೆ ಹೋಗುತ್ತದೆ. ರೀತಿ ಕಾರ್ಯ ನಿರ್ವಹಣೆಗೆ ಜಿಪಿಎಸ್ ತಂತ್ರಜ್ಞಾನವನ್ನು ಅಳವಡಿಕೆ ಮಾಡಲಾಗುತ್ತದೆ. ಪ್ರಸ್ತುತ ಪೊಲೀಸ್ ಇಲಾಖೆಗೆ ಕರೆ ಮಾಡಲು 100, ಅಗ್ನಿ ಶಾಮಕ ದಳ 101, ಆಂಬುಲೆನ್ಸ್ 102 ಹಾಗೂ ತುರ್ತು ವಿಪತ್ತು ನಿರ್ವಹಣಾ ಇಲಾಖೆಗೆ 108 ನಂಬರ್ಗೆ ಕರೆ ಮಾಡಬೇಕು.
2016:ಕಾಬೂಲ್ವಿಚ್ಛಿದ್ರಕಾರಿ ಚಟುವಟಿಕೆಗಳಲ್ಲಿ ಷಾಮೀಲಾಗಿದ್ದುದಕ್ಕಾಗಿ ಮರಣದಂಡನೆಗೆ ಗುರಿಯಾಗಿದ್ದ 6 ಮಂದಿ ಭಯೋತ್ಪಾದಕರನ್ನು ಆಫ್ಘನ್ ಸರ್ಕಾರವು ಈದಿನ ಗಲ್ಲಿಗೇರಿಸಿದೆ ಎಂದು ಅಧ್ಯಕ್ಷೀಯ ಅರಮನೆ ತಿಳಿಸಿ
ತು. ಆರು ಮಂದಿ ಭಯೋತ್ಪಾದಕರಿಗೆ ಮರಣದಂಡನೆ ವಿಧಿಸಿದ ಕೋರ್ಟ್ ತೀರ್ಪನ್ನು ಸರ್ಕಾರವು ಅನುಷ್ಠಾನಗೊಳಿಸಿದ್ದು ಅವರನ್ನು ಗಲ್ಲಿಗೇರಿಸಲಾಗಿದೆ’ ಎಂದು ಅಧ್ಯಕ್ಷೀಯ ಅರಮನೆಯ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಕ್ಷಿನ್ ಹುವಾ ಸುದ್ದಿ ಸಂಸ್ಥೆ ವರದಿ ಮಾಡಿತು.ಹಖ್ಖಾನಿ ಜಾಲದ ಸ್ಥಾಪಕ ಜಲಾಲುದ್ದೀನ್ ಹಖ್ಖಾನಿಯ ಪುತ್ರ ಅನಸ್ ಹಖ್ಖಾನಿ ಗಲ್ಲಿಗೇರಿಸಲ್ಪಟವರಲ್ಲಿ ಸೇರಿಲ್ಲ ಎಂದು ಅಧಿಕಾರಿ ಹೇಳಿದರು. ಏಪ್ರಿಲ್ 25ರಂದು ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಿದ್ದ ಅಧ್ಯಕ್ಷ ಅಶ್ರಫ್ ಘನಿ ಅವರು ಭಯೋತ್ಪಾದಕರನ್ನು ಗಲ್ಲಿಗೇರಿಸುವುದಾಗಿಯೂ ಭಯೋತ್ಪಾದನೆಯನ್ನು ಬೇರು ಸಹಿತ ಕಿತ್ತು ಹಾಕುವುದಾಗಿಯೂ ಘೋಷಿಸಿದ್ದರು.

2009: ರಾಗಿಂಗ್ ಘಟನೆಗಳ ಪರಿಶೀಲನೆಗಾಗಿ ಸಮಿತಿಗಳನ್ನು ರಚಿಸಿ ರಾಗಿಂಗ್ ಹಾವಳಿಯನ್ನು ನಿಯಂತ್ರಿಸುವಂತೆ ಸುಪ್ರೀಂ ಕೋರ್ಟ್ ಎಲ್ಲ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿತು. ದೇಶಾದ್ಯಂತ ಶಿಕ್ಷಣ ಸಂಸ್ಥೆಗಳಿಂದ ರಾಗಿಂಗ್ ಹಾವಳಿಯನ್ನು ಸಂಪೂರ್ಣವಾಗಿ ನಿರ್ಮೂಲನಗೊಳಿಸಲು ಹಲವಾರು ನಿರ್ದೇಶನಗಳನ್ನು ನೀಡಿದ ನ್ಯಾಯಮೂರ್ತಿ ಅರಿಜಿತ್ ಪಸಾಯತ್ ನೇತೃತ್ವದ ಪೀಠವು ವಿದ್ಯಾರ್ಥಿಗಳಿಗೆ ಆಪ್ತ ಸಮಾಲೋಚನೆಗಾಗಿ ಪ್ರತಿಯೊಂದು ಕಾಲೇಜು ಕೂಡಾ ಮನಃಶಾಸ್ತ್ರಜ್ಞರನ್ನು ಹೊಂದಿರಬೇಕು ಎಂದು ಹೇಳಿತು. ಮದ್ಯಪಾನ ಸಮಸ್ಯೆಯ ಪ್ರಕರಣಗಳ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಗಳು ಚಟ ಬಿಡಿಸುವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನ್ಯಾಯಾಲಯ ಸೂಚಿಸಿತು.

2009: ಸುಪ್ರೀಂ ಕೋರ್ಟ್ ನೇಮಿತ ವಿಶೇಷ ತನಿಖಾ ತಂಡವು (ಸಿಟ್) 2002ರ ಗೋಧ್ರಾ ಘಟನೆ ನಂತರದ ದಂಗೆ ಪ್ರಕರಣಗಳ ವಿಚಾರಣೆಗಾಗಿ ವಿಶೇಷ ನ್ಯಾಯಾಲಯಗಳಿಗೆ ಒಂಭತ್ತು ನ್ಯಾಯಾಧೀಶರನ್ನು ಗುಜರಾತ್ ಹೈಕೋರ್ಟ್ ನಿಯೋಜಿಸಿತು. ಈ ನಿಟ್ಟಿನಲ್ಲಿ ಈ ತಿಂಗಳ ಆದಿಯಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿಗೆ ಅನುಗುಣವಾಗಿ ಆದೇಶ ಹೊರಡಿಸಿದ ಹೈಕೋರ್ಟ್ ಪ್ರತಿಯೊಂದು ವಿಶೇಷ ನ್ಯಾಯಾಲಯಕ್ಕೂ ಒಬ್ಬೊಬ್ಬರಂತೆ ನ್ಯಾಯಾಧೀಶರನ್ನು ನಿಯೋಜಿಸಿತು. ನ್ಯಾಯಾಲಯದ ಆದೇಶದಂತೆ ಹೆಚ್ಚುವರಿ ಸತ್ರ ನ್ಯಾಯಾಧೀಶ ಪಿ.ಆರ್. ಪಟೇಲ್ ಅವರು ಗೋಧ್ರಾ ರೈಲು ಹತ್ಯಾಕಾಂಡ ಘಟನೆಯ ತನಿಖೆಗೆಗಾಗಿ ನಿಯೋಜಿತರಾದರು.

2009: ಭಯೋತ್ಪಾದನೆ ಕೃತ್ಯದಲ್ಲಿ ಭಾಗಿಯಾಗಿರುವುದು ಸಾಬೀತಾದರೆ ಮರಣ ದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸುವುದು, ಅಪರಾಧ ಮಾಡಿದ್ದಕ್ಕೆ ಐದು ಲಕ್ಷ ರೂಪಾಯಿ ದಂಡ ವಿಧಿಸುವುದು ಸೇರಿದಂತೆ ಕರ್ನಾಟಕ ವ್ಯವಸ್ಥಿತ ಅಪರಾಧ ನಿಯಂತ್ರಣ ಮಸೂದೆ- 2009ಕ್ಕೆ ಕೆಲವು ತಿದ್ದುಪಡಿಗಳನ್ನು ತರುವ ಸಲುವಾಗಿ ಸುಗ್ರಿವಾಜ್ಞೆ ಹೊರಡಿಸಲು ಸರ್ಕಾರ ತೀರ್ಮಾನಿಸಿತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು.

2009: ಜಗತ್ತಿನ ನಿದ್ದೆಗೆಡಿಸಿದ ಎಚ್1ಎನ್1 ರೋಗಾಣುವಿನ (ವೈರಸ್) ತಳಿಸೂತ್ರ ಭೇದಿಸುವಲ್ಲಿ ತಮ್ಮ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ ಎಂದು ಕೆನಡಾ ಪ್ರತಿಪಾದಿಸಿತು. ಕೆನಡಾ ವಿಜ್ಞಾನಿಗಳ ತಂಡವ ರೋಗಾಣು ಹೇಗೆ ಹರಡುತ್ತದೆ, ಅದು ಹೇಗೆ ವೃದ್ಧಿಯಾಗುತ್ತದೆ ಎಂಬುದನ್ನು ಆವಿಷ್ಕರಿಸಿದೆ. ಈ ರೋಗಾಣುವಿನ ತಳಿ ಸೂತ್ರದ ರಹಸ್ಯ ಪತ್ತೆಹಚ್ಚಿದ ಹೆಗ್ಗಳಿಕೆ ನಮ್ಮದಾಗಿದೆ. ಇನ್ನು ಮುಂದೆ ಹಂದಿ ಜ್ವರ ನಿಯಂತ್ರಣ, ಲಸಿಕೆ ಹಾಗೂ ಪರಿಣಾಮಕಾರಿ ಔಷಧಗಳ ತಯಾರಿಕೆಗಳ ಹೊಸ ಬಾಗಿಲುಗಳನ್ನು ಇದು ತೆರೆಯಲಿದೆ ಎಂದು ತಜ್ಞರು ಟೊರಾಂಟೊದಲ್ಲಿ ಅಭಿಪ್ರಾಯಪಟ್ಟರು.

2009: 'ಅಜ್ಮಲ್ ಅಮೀರ್ ಕಸಾಬ್ ಎ.ಕೆ. 47 ರೈಫಲ್‌ನಿಂದ ಎಎಸ್‌ಐ ತುಕಾರಾಂ ಓಂಬ್ಳೆ ಅವರತ್ತ ಗುಂಡು ಹಾರಿಸಿದ್ದನ್ನು ನಾನು ನೋಡಿದೆ' ಎಂದು ಮುಂಬೈ ದಾಳಿಯ ಮೊದಲ ಪ್ರತ್ಯಕ್ಷ ಸಾಕ್ಷಿ ಸಬ್ ಇನ್ಸ್‌ಪೆಕ್ಟರ್ ಭಾಸ್ಕರ್ ಕದಂ ಅವರು, ಪ್ರಕರಣದ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದರು. ಇದರಿಂದ ಇತ್ತೀಚೆಗೆ ಆರಂಭವಾದ ಪ್ರಕರಣದ ವಿಚಾರಣೆ ವೇಗ ಪಡೆದುಕೊಂಡಿತು. ದಾಳಿಯಂದು ಕಸಾಬ್ ಜತೆ ಸ್ಕೋಡಾ ಕಾರಿನಲ್ಲಿ ಇದ್ದ ಅಬು ಇಸ್ಮಾಯಿಲ್‌ನತ್ತ ಗುಂಡು ಹಾರಿಸಿದ ಅಧಿಕಾರಿಗಳ ತಂಡದಲ್ಲಿ ತಾವೂ ಒಬ್ಬರಾಗಿದ್ದುದಾಗಿ ಕದಂ ಹೇಳಿದರು. 2008ರ ನವೆಂಬರ್ 26ರಂದು ಗಿರ್‌ಗಾವ್ ಚೌಪಾಟಿಯಲ್ಲಿ ನಡೆದ ಉಗ್ರರ ದಾಳಿಯಲ್ಲಿ ಓಂಬ್ಳೆ ಮೃತರಾಗಿದ್ದರು.

2008: ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಹಾಗೂ ಖ್ಯಾತ ಹೃದ್ರೋಗ ತಜ್ಞ ಡಾ. ಪಿ. ವೇಣು ಗೋಪಾಲ್ ಅವರು ತಮ್ಮ ಎತ್ತಂಗಡಿ ಮಾಡುವ `ಏಮ್ಸ್' ಕಾಯ್ದೆ ತಿದ್ದುಪಡಿಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿತು. ಏಮ್ಸ್ ಕಾಯ್ದೆಗೆ ತಿದ್ದುಪಡಿಯು ಅಸಂವಿಧಾನಾತ್ಮಕವಾದುದು ಹಾಗಾಗಿ ಅದನ್ನು ರದ್ದುಗೊಳಿಸಲಾಗುವುದು ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿತು. ವೇಣುಗೋಪಾಲ್ ವಿರುದ್ಧ `ಸಮರ'ವನ್ನೇ ಸಾರಿದಂತಿದ್ದ ಕೇಂದ್ರ ಆರೋಗ್ಯ ಸಚಿವ ಅನ್ಬುಮಣಿ ರಾಮದಾಸ್ ಅವರಿಗೆ ಈ ತೀರ್ಪಿನಿಂದ ತೀವ್ರ ಮುಖಭಂಗವಾದರೆ, ಕೇಂದ್ರ ಸರ್ಕಾರಕ್ಕೆ ಕೂಡಾ ಮುಜುಗರ ಉಂಟಾಯಿತು. ಏಮ್ಸ್ ನಿರ್ದೇಶಕ ಸ್ಥಾನದಲ್ಲಿ ಇರುವವವರು 65 ವರ್ಷಕ್ಕೆ ನಿವೃತ್ತಿ ಹೊಂದಬೇಕು ಮತ್ತು ಅವರ ಅಧಿಕಾರದ ಅವಧಿಯನ್ನು ಗರಿಷ್ಠ 5 ವರ್ಷಗಳವರೆಗೆ ವಿಸ್ತರಿಸಲೂಬಹುದು ಎಂದು ನ್ಯಾಯಮೂರ್ತಿಗಳಾದ ತರುಣ್ ಚಟರ್ಜಿ ಮತ್ತು ಹರ್ಜಿತ್ ಸಿಂಗ್ ಬೇಡಿ ಅವರನ್ನೊಳಗೊಂಡ ವಿಭಾಗೀಯ ಪೀಠ ಹೇಳಿತು.

2008: ಜಮ್ಮುವಿನ ಕಿಸ್ತ್ವಾರ್ ಪ್ರದೇಶದಲ್ಲಿ ಚಿನಾಬ್ ನದಿಗೆ ಬಸ್ ಉರುಳಿ ಬಿದ್ದ ಕಾರಣ 28 ಮಂದಿ ಪ್ರಯಾಣಿಕರು ಅಸು ನೀಗಿದರು.

2008: ನಂದಿ ಇನ್ ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ ಪ್ರೈಸಸ್ (ನೈಸ್) ಕುರಿತು ರಾಜ್ಯಪಾಲ ರಾಮೇಶ್ವರ ಠಾಕೂರ್ ನೇತೃತ್ವದ ಕಾರ್ಯಕಾರಿ ಸಮಿತಿ ಕಳೆದ ಏಪ್ರಿಲಿನಲ್ಲಿ ತೆಗೆದುಕೊಂಡ ನಿರ್ಣಯವನ್ನು ಆಕ್ಷೇಪಿಸಿದ ಚುನಾವಣಾ ಆಯೋಗ ಮೇ 28 ರತನಕ ಇದನ್ನು ತಡೆಹಿಡಿಯಲು ಸೂಚಿಸಿತು. ಬಿಎಂಐಸಿ ಯೋಜನೆಯಿಂದ `ನೈಸ್'ನ್ನು ಬೇರ್ಪಡಿಸಲು ಈ ಹಿಂದಿನ ಕುಮಾರಸ್ವಾಮಿ ಸರ್ಕಾರ ತೆಗೆದುಕೊಂಡ ನಿರ್ಣಯವನ್ನು ಮಾರ್ಪಾಡು ಮಾಡಿ ಕಳೆದ ಏಪ್ರಿಲ್ 25 ರಂದು ರಾಜ್ಯಪಾಲರು ನಿರ್ಣಯ ತೆಗೆದುಕೊಂಡಿದ್ದರು. ರಾಜ್ಯಪಾಲರ ನಿರ್ಣಯದಲ್ಲಿ ನೈಸ್ ಮೇಲೆ ಹಿಂದಿನ ಸರ್ಕಾರ ವಿಧಿಸಿದ್ದ ಹಲವು ನಿರ್ಬಂಧಗಳನ್ನು ಸಡಿಲಿಸಲಾಗಿತ್ತು. ಈ ನಿರ್ಣಯವನ್ನು ರಾಜ್ಯಪಾಲರು ಚುನಾವಣೆ ಮುಗಿಯುವ ತನಕ ಅಂದರೆ ಮೇ 28ರತನಕ ಕೈಗೊಳ್ಳುವಂತಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ಗೋಪಾಲಸ್ವಾಮಿ ತಿಳಿಸಿದರು.

2008: ಸುನಿಲ್ ಗಾವಸ್ಕರ್ ಅವರು ಐಸಿಸಿ ಕ್ರಿಕೆಟ್ ಸಮಿತಿಯ ಹುದ್ದೆಗೆ ರಾಜೀನಾಮೆ ನೀಡಿದರು. ಭಾರತ ತಂಡದ ಮಾಜಿ ಆಟಗಾರ ಈದಿನ ತಮ್ಮ ನಿರ್ಧಾರವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಗೆ ತಿಳಿಸಿದರು. ಇದರೊಂದಿಗೆ ಗಾವಸ್ಕರ್ ಅವರ ಎಂಟು ವರ್ಷಗಳ ಸುದೀರ್ಘ ಅವಧಿಯ ಆಡಳಿತ ಅನಿರೀಕ್ಷಿತವಾಗಿ ಅಂತ್ಯಗೊಂಡಿತು. ಗಾವಸ್ಕರ್ ಈ ಅವಧಿಯಲ್ಲಿ ಕ್ರಿಕೆಟ್ ಕ್ರೀಡೆಯ ಬೆಳವಣಿಗೆಗೆ ಹಲವು ಕ್ರಮಗಳನ್ನು ಕೈಗೊಂಡಿದ್ದರಲ್ಲದೆ ವಿವಾದಗಳಲ್ಲೂ ಸಿಲುಕಿದ್ದರು. ಐಸಿಸಿ ಹುದ್ದೆಯಲ್ಲಿದ್ದುಕೊಂಡು ಅವರು ಮಾಧ್ಯಮಗಳಿಗೆ ಅಂಕಣ ಬರೆಯುತ್ತಿದ್ದುದು ವಿವಾದಕ್ಕೆ ಕಾರಣವಾಗಿತ್ತು. ಕ್ರಿಕೆಟ್ ಸಮಿತಿ ಹುದ್ದೆ ಅಥವಾ ಮಾಧ್ಯಮ ಹುದ್ದೆ ಈ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ಐಸಿಸಿ ಇತ್ತೀಚೆಗೆ ಅವರಲ್ಲಿ ಕೇಳಿಕೊಂಡಿತ್ತು.

2008: ಒಲಿಂಪಿಕ್ ಜ್ಯೋತಿಯ ಮೌಂಟ್ ಎವರೆಸ್ಟ್ ಪಯಣ ಈದಿನ ಯಶಸ್ವಿಯಾಗಿ ನಡೆಯಿತು. ಬೀಜಿಂಗ್ ಕೂಟದ ಜ್ಯೋತಿಯ ಪಯಣದ `ಹೈಲೈಟ್' ಎಂದೇ ಬಣ್ಣಿಸಲಾದ ಈ ಸಾಹಸ ಯಾತ್ರೆ ಯಶಸ್ವಿಯಾಗಿ ಕೊನೆಗೊಂಡಿತು. 26 ಸದಸ್ಯರ ಪರ್ವತಾರೋಹಿಗಳ ತಂಡದವರು ಬೆಳಗಿನ ಜಾವ 3.00 ಗಂಟೆಗೆ ತಮ್ಮ ಯಾತ್ರೆಯನ್ನು ಆರಂಭಿಸಿ, 9.18ಕ್ಕೆ ಸರಿಯಾಗಿ 8,844 ಮೀ. ಎತ್ತರದ ಶಿಖರದ ತುತ್ತತುದಿ ತಲುಪುವಲ್ಲಿ ಯಶಸ್ವಿಯಾದರು. ಚೀನಾದ ಧ್ವಜ ಮತ್ತು ಒಲಿಂಪಿಕ್ ಧ್ವಜಗಳನ್ನು ಬೀಸುವ ಮೂಲಕ ಪರ್ವತಾರೋಹಿಗಳು ಸಂಭ್ರಮಿಸಿದರು. ಆ ಕ್ಷಣವು ಒಲಿಂಪಿಕ್ ಜ್ಯೋತಿಯ ಇತಿಹಾಸದಲ್ಲಿ ಅವಿಸ್ಮರಣೀಯ ಕ್ಷಣ ಎನಿಸಿತು. ಪರ್ವತಾರೋಹಿಗಳು ಸಾಹಸ ಯಾತ್ರೆ ಆರಂಭಕ್ಕೆ ಮುನ್ನ ಶಿಖರದ ತಳಭಾಗದಲ್ಲಿ 30 ಮೀ. ದೂರದ ರಿಲೇ ನಡೆಸಿದ್ದರು. ತಂಡದಲ್ಲಿರುವ ಮಹಿಳಾ ಸದಸ್ಯೆ ರಿಲೇಗೆ ಚಾಲನೆ ನೀಡಿದರು. ಬೇಸ್ ಕ್ಯಾಂಪಿನಲ್ಲಿ ತಂಗಿದ್ದ ಪರ್ವತಾರೋಹಿಗಳು ಮಧ್ಯರಾತ್ರಿ 1.30ಕ್ಕೆ ಎದ್ದು ಪ್ರಾರ್ಥನೆ ಮಾಡಿದರು. ಆ ಬಳಿಕ ತಮ್ಮ ಯಾತ್ರೆ ಆರಂಭಿಸಿದರು. ಎವರೆಸ್ಟ್ ಯಾತ್ರೆಗೆ ಪರ್ವತಾರೋಹಿಗಳು ಒಂದು ವಾರದಿಂದ ಪ್ರಯತ್ನ ನಡೆಸಿದ್ದರು. ಹಿಂದಿನ ವಾರ ಯಾತ್ರೆ ಆರಂಭಿಸಿದ್ದರೂ, ಹಿಮಪಾತ ಉಂಟಾದ ಕಾರಣ ಬೇಸ್ ಕ್ಯಾಂಪಿಗೆ ವಾಪಸಾಗಿದ್ದರು. ಎರಡು ದಿನಗಳ ಕಾಲ ಹಿಮಪಾತವಾದುದರಿಂದ ಜ್ಯೋತಿಯ ಯಾತ್ರೆಯ ಬಗ್ಗೆ ಅನಿಶ್ಚಿತತೆ ಉಂಟಾಗಿತ್ತು. ಆದರೆ ಸಂಘಟಕರು ಈ ಸಾಹಸದಿಂದ ಹಿಂದೆ ಸರಿಯಲಿಲ್ಲ.

2008: ಭಾರತವು ಅಗ್ನಿ-3 ಕ್ಷಿಪಣಿ ಪರೀಕ್ಷೆ ನಡೆಸಿದ ಬೆನ್ನಲ್ಲೇ ಪಾಕಿಸ್ಥಾನವು ಯುದ್ಧ ವಿಮಾನಗಳಿಂದ ಉಡಾಯಿಸಬಹುದಾದ ಹಾಗೂ ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯಬಲ್ಲ `ಹತ್ಫ್-8 ರಾದ್' ಕ್ಷಿಪಣಿಯ ಪರೀಕ್ಷೆ ನಡೆಸಿತು. `ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದೆ' ಎಂದು ಹೇಳಿಕೊಳ್ಳಲಾಗಿರುವ ಈ ಕ್ಷಿಪಣಿಗೆ 350 ಕಿ.ಮೀ. ದೂರಕ್ಕೆ ಚಲಿಸಿ ಗುರಿ ತಲುಪುವ ಸಾಮರ್ಥ್ಯ ಇದೆ ಎಂದು ಜಿಯೊ ಟಿವಿ ವರದಿ ಮಾಡಿತು.

2008: ಹಿಂದೂ ದೇವತೆಗಳನ್ನು ಅಶ್ಲೀಲವಾಗಿ ಚಿತ್ರಿಸುವ ಮೂಲಕ ಒಂದು ಕೋಮಿನ ಭಾವನೆಗಳನ್ನು ಕೆರಳಿಸಿದ್ದಾರೆಂದು ಆರೋಪಿಸಿ ಖ್ಯಾತ ಕಲಾವಿದ ಎಂ.ಎಫ್. ಹುಸೇನ್ ವಿರುದ್ಧ ದಾಖಲಾಗಿದ್ದ ಪ್ರಕರಣಗಳ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿತು. ಅವರ ಮೇಲಿನ ಆರೋಪ ಹುರುಳಿಲ್ಲದ್ದು ಎಂದು ನ್ಯಾಯಮೂರ್ತಿ ಸಂಜಯ್ ಕಿಶನ್ ಹೇಳಿದರು. ಹುಸೇನ್ ಮೇಲಿನ ಆರೋಪದ ದೂರನ್ನು ವಿವಿಧ ರಾಜ್ಯಗಳಿಂದ ದಾಖಲಿಸಿದ್ದು ಅದನ್ನು ನ್ಯಾಯಾಲಯ ವಜಾ ಮಾಡಿತು. ಈ ಮುನ್ನ ಈ ದೂರುಗಳಿಗೆ ನ್ಯಾಯಾಲಯ ತಡೆಯಾಜ್ಞೆ ನೀಡಿತ್ತು.

2008: ಮಾಹಿತಿ ಶೋಧನೆಯ ಅಂತರ್ಜಾಲ ಸೇವಾ ತಾಣ ಯಾಹೂ ವೆಬ್ ಸರ್ವೀಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಒಂದು ಪುಟದ ಪರಿಹಾರ ನೀಡುವ `ಗ್ಲೂ ಪೇಜ್' ವಿಶೇಷ ಸೇವೆಗೆ ಬೆಂಗಳೂರಿನಲ್ಲಿ ಚಾಲನೆ ನೀಡಿತು. ಆನಂತರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಯಾಹೂ ಇಂಡಿಯಾ ಮುಖ್ಯಸ್ಥ ಗೋಪಾಲ್ ಕೃಷ್ಣ, `ಬಳಕೆದಾರರು ಸರ್ಚಿನಲ್ಲಿ ಕೇಳುವ ಪ್ರಶ್ನೆಗೆ ನೇರ ಉತ್ತರವನ್ನು ದೊರಕಿಸುವ ಉದ್ದೇಶದಿಂದ ಗ್ಲೂ ಪೇಜ್ ಪರಿಣಾಮಕಾರಿಯಾಗಿ ಬಳಕೆಯಾಗಲಿದೆ. ಪ್ರಸ್ತುತ ಪರೀಕ್ಷಾರ್ಥವಾಗಿ ಬಳಕೆಗೆ ಬಿಡಲಾಗಿತ್ತು. ಪ್ರತಿಕ್ರಿಯೆ ಕೂಡಾ ಅದ್ಭುತವಾಗಿ ಬಂದಿದೆ' ಎಂದು ಹೇಳಿದರು.

2007: ಏಪ್ರಿಲ್ ಒಂದರಿಂದ ಜಾರಿಗೆ ಬರುವಂತೆ ಎಲ್ಲ ಬಗೆಯ ಲಾಟರಿ ನಿಷೇಧ ಮಾಡಿ ಸರ್ಕಾರ ಕಳೆದ ಮಾರ್ಚ್ 27ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿಯಿತು. ಕೊನೆಯ ಪಕ್ಷ ನಾಲ್ಕು ವಾರಗಳ ಮಟ್ಟಿಗಾದರೂ ಈ ತೀರ್ಪಿಗೆ ತಡೆ ನೀಡಿ ಲಾಟರಿ ಮುಂದುವರೆಸಲು ಅವಕಾಶ ನೀಡುವಂತೆ ಅರ್ಜಿದಾರರು ಮಾಡಿದ್ದ ಮನವಿಯನ್ನು ನ್ಯಾಯಮೂರ್ತಿ ವಿ. ಜಗನ್ನಾಥ ತಿರಸ್ಕರಿಸಿದರು.

2007: ಎಂಟು ವರ್ಷಗಳ ಹಿಂದೆ ಸಿಪಿಐ- ಎಂ.ಎಲ್. ಕಾರ್ಯಕರ್ತ ಛೋಟೆಲಾಲ್ ಗುಪ್ತ ಅವರನ್ನು ಅಪಹರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿವಾನ್ ವಿಶೇಷ ನ್ಯಾಯಾಲಯವು ಆರ್ ಜೆ ಡಿ ಸಂಸತ್ ಸದಸ್ಯ ಮೊಹಮ್ಮದ್ ಶಹಾಬ್ದುದ್ದೀನ್ ಅವರಿಗೆ ಜೀವಾವಧಿ ಶಿಕ್ಷೆ ನೀಡಿತು. ಸಿವಾನಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಗ್ಯಾನೇಶ್ವರ ಪ್ರಸಾದ್ ಅವರು ಶಹಾಬುದ್ದೀನ್ ಅವರಿಗೆ 10,000 ರೂಪಾಯಿಗಳ ದಂಡವನ್ನೂ ವಿಧಿಸಿದರು. 1999ರ ಫೆಬ್ರುವರಿ 7ರಂದು ಸಿಪಿಐ-ಎಂ.ಎಲ್ ಕಾರ್ಯಕರ್ತ ಛೋಟೆಲಾಲ್ ಅವರನ್ನು ಕೊಲ್ಲುವ ಸಲುವಾಗಿ ಅಪಹರಿಸಿದ ಪ್ರಕರಣದಲ್ಲಿ ಶಹಾಬ್ದುದೀನ್ ತಪ್ಪಿತಸ್ಥರು ಎಂದು ನ್ಯಾಯಾಲಯ ಮೇ 5ರಂದು ತೀರ್ಪು ನೀಡಿತ್ತು.

2007: ವಿಶ್ವದಲ್ಲೇ ಅತ್ಯಂತ ದೊಡ್ಡದಾದ ನಾಗರಿಕ ವಿಮಾನ ಯಾನಿ ಸೂಪರ್ ಜಂಬೋ ವಿಮಾನ ಏರ್ ಬಸ್ ಎ 380 ಈದಿನ ದೆಹಲಿಯಿಂದ ಹೊರಟು ಮುಂಬೈಯಲ್ಲಿ ಬಂದಿಳಿಯಿತು.

2007: ಹಿಂದೆಂದೂ ಕಂಡು ಕೇಳರಿಯದಂತಹ ಅತ್ಯಂತ ಪ್ರಖರ ಮತ್ತು ಭಾರಿ ನಕ್ಷತ್ರಪುಂಜದ ಸ್ಫೋಟ (ಸೂಪರ್ ನೋವಾ) ತಾರಾಮಂಡಲದಲ್ಲಿ ಇತ್ತೀಚೆಗೆ ನಡೆದುದನ್ನು ಪತ್ತೆ ಹಚ್ಚಿರುವುದಾಗಿ ವಿಜ್ಞಾನಿಗಳು ಪ್ರಕಟಿಸಿದರು. ಸೂಪರ್ ನೋವಾ ಎಂದು ಕರೆಯಲಾಗುವ ಪ್ರಕ್ರಿಯೆಯನ್ನು ನಾಸಾದ ಚಂದ್ರ ಎಕ್ಸ್ ರೇ ದೂರದರ್ಶಕ ಮತ್ತು ವೀಕ್ಷಣಾಲಯ ದಾಖಲಿಸಿದೆ. ಸೂಪರ್ ನೋವಾ ಸರಣಿಗಳಲ್ಲೇ ಇದು ಅತ್ಯಂತ ದೊಡ್ಡದು ಎನ್ನಲಾಗಿದ್ದು ಸೂರ್ಯ ಒಂದು ಕೋಟಿ ವರ್ಷಕಾಲ ನೀಡುವಷ್ಟು ಓಜಸ್ಸು (ಶಕ್ತಿ) ಈ ಸ್ಫೋಟವೊಂದರಲ್ಲೇ ಬಿಡುಗಡೆಯಾಗಿದೆ. ಸ್ಫೋಟದ ಅಲೆಗಳು ಇಡೀ ನಕ್ಷತ್ರ ಸಮೂಹದ ಅನಿಲವನ್ನೇ ಅಲುಗಾಡಿಸಿದೆ. ಸೌರಮಂಡಲ ಸೃಷ್ಟಿಯಾದ ಆರಂಭದಲ್ಲಿದ್ದ ನಕ್ಷತ್ರಗಳ ಅವನತಿಗೆ ಕಾರಣವೇನು ಎಂಬುದಕ್ಕೆ ಈ ಸೂಪರ್ ನೋವಾ ಉತ್ತರ ಒದಗಿಸಿದೆ. ಭೂಮಿಯಿಂದ 2.4 ಕೋಟಿ ಜ್ಯೋತಿರ್ ವರ್ಷಗಳಷ್ಟು ದೂರದಲ್ಲಿರುವ ಆಕಾಶ ಗಂಗೆ ಎನ್ ಜಿ ಸಿ 1260ರಲ್ಲಿ ಈ ಸ್ಫೋಟ ಸಂಭವಿಸಿದೆ ಎಂದು ಬರ್ಕಲಿಯದಲ್ಲಿನ ಕ್ಯಾಲಿಫೋರ್ನಿಯಾ ವಿ.ವಿ. ವಿಜ್ಞಾನಿ ನಾಥನ್ ಸ್ಮಿತ್ ವಿವರಿಸಿದರು. ಭಾರಿ ನಕ್ಷತ್ರಗಳು ಶಕ್ತಿ ಅಥವಾ ಇಂಧನ ಕಳೆದುಕೊಂಡು ತಮ್ಮ ಸ್ವಂತ ಗುರುತ್ವಾಕರ್ಷಣದಲ್ಲೇ ಕುಸಿದು ಬಿದ್ದಾಗ ಇಂತಹ ಸ್ಫೋಟಗಳು ಸಂಭವಿಸುತ್ತವೆ.

2007: ಕ್ಯೂಬಾದ ರಾಜಧಾನಿ ಹವಾನಾದಲ್ಲಿ ಶ್ರೇಷ್ಠ ಕವಿ ರಬೀಂದ್ರನಾಥ ಟ್ಯಾಗೋರ್ ಅವರ 146ನೇ ಜಯಂತಿ ಆಚರಿಸಿ ಅವರ ಪ್ರತಿಮೆ ಅನಾವರಣ ಮಾಡಲಾಯಿತು.

2006: ಲಾಭದಾಯಕ ಹುದ್ದೆ ಹೊಂದಿದ್ದಾರೆ ಎಂಬ ಕಾರಣಕ್ಕೆ ರಾಜ್ಯಸಭೆ ಸದಸ್ಯತ್ವದಿಂದ ಅನರ್ಹಗೊಳಿಸಿದ್ದ ಕ್ರಮವನ್ನು ಪ್ರಶ್ನಿಸಿ ಜಯಾ ಬಚ್ಚನ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿತು. ಜಯಾ ಅವರು ಲಾಭದಾಯಕ ಹುದ್ದೆ ಹೊಂದಿದ್ದಾರೆಂದು ಆಪಾದಿಸಿ ಅವರನ್ನು ರಾಜ್ಯಸಭೆ ಸದಸ್ಯತ್ವದಿಂದ ಅನರ್ಹಗೊಳಿಸುವಂತೆ ಚುನಾವಣಾ ಆಯೋಗ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಗೆ ಶಿಫಾರಸು ಮಾಡಿತ್ತು. ಈ ಶಿಫಾರಸನ್ನು ಅನುಸರಿಸಿ ರಾಷ್ಟ್ರಪತಿ ಜಯಾ ಅವರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು.

2006: ಟೈಟಾನಿಕ್ ಹಡಗು ದುರಂತದ ಐತಿಹಾಸಿಕ ಘಟನೆಯನ್ನು ಕಣ್ಣಾರೆ ಕಂಡ ಸಾಕ್ಷಿಗಳ ಪೈಕಿ ಜೀವಿಸಿದ್ದ ಕೊನೆಯ ವ್ಯಕ್ತಿ ಲಿಲಿಯೆನ್ ಜೆರ್ ಟ್ರೂಡ್ ಆಸ್ಟ್ಲೆಂಡ್ ಈದಿನ ನಿಧನರಾದರು. 1912ರಲ್ಲಿ ರಾತ್ರಿ ವೇಳೆಯಲ್ಲಿ ದುರಂತ ಸಂಭವಿಸಿದಾಗ ಆಸ್ಟ್ಲೆಂಡ್ ಕೇವಲ ಐದರ ಹರೆಯದ ಬಾಲಕಿ. ಈ ಮಹಾನ್ ದುರಂತದಲ್ಲಿ ಆಕೆ ತನ್ನ ತಂದೆ ಹಾಗೂ ಚಿಕ್ಕಪ್ಪನ ಅವಳಿ ಮಕ್ಕಳೂ ಸೇರಿದಂತೆ ಮೂವರು ಸಹೋದರರನ್ನು ಕಳೆದುಕೊಂಡಿದ್ದರು. ದುರಂತದಲ್ಲಿ ಬದುಕಿ ಉಳಿದ ಬಾರ್ಬರಾ ಜಾಯ್ಸ್ ವೆಸ್ಟ್ ಡೇಂಟೆನ್ ಹಾಗೂ ಎಲಿಜಬೆತ್ ಗ್ಲಾಡಿಸ್ ಅವರಿಗೆ ಆಗ ಕ್ರಮವಾಗಿ ಕೇವಲ 10 ತಿಂಗಳು ಮತ್ತು ಎರಡು ತಿಂಗಳ ವಯಸ್ಸಾಗಿದ್ದದ್ದರಿಂದ ಇಬ್ಬರಿಗೂ ಘಟನೆಯ ಬಗ್ಗೆ ಯಾವುದೇ ನೆನಪೂ ಉಳಿದಿಲ್ಲ.

2006: ಆಂಡ್ರ್ಯೂ ಫ್ಲಿಂಟಾಫ್ ಹಾಗೂ ಕ್ಯಾಥರೀನ್ ಬ್ರಂಟ್ ಅವರು ಕ್ರಮವಾಗಿ ಇಂಗ್ಲೆಂಡಿನ ವರ್ಷದ ಕ್ರಿಕೆಟ್ ಆಟಗಾರ ಮತ್ತು ಆಟಗಾರ್ತಿ ಗೌರವಕ್ಕೆ ಪಾತ್ರರಾದರು. ಈ ದಿನ ರಾತ್ರಿ ಲಂಡನ್ನಿನಲ್ಲಿ ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.

2006: ಏಪ್ರಿಲ್ ತಿಂಗಳಲ್ಲಿ ನಡೆದ ಥಾಯ್ಲೆಂಡ್ ಮಹಾ ಚುನಾವಣೆಯನ್ನು ಸಂವಿಧಾನ ವಿರೋಧಿ ಎಂದು ತೀರ್ಪು ನೀಡಿದ ಸುಪ್ರೀಂಕೋರ್ಟ್ ಹೊಸದಾಗಿ ಚುನಾವಣೆ ನಡೆಸುವಂತೆ ಆದೇಶ ನೀಡಿತು. ಮಹಾಚುನಾವಣೆಯಲ್ಲಿ ವಿರೋಧ ಪಕ್ಷಗಳು ಭಾಗವಹಿಸಲಿಲ್ಲ. ಆದರೂ ಸಂಸತ್ತಿನ 400 ಸ್ಥಾನಗಳಿಗೆ ಚುನಾವಣೆ ನಡೆಯಿತು. ಇದರಲ್ಲಿ ಉಸ್ತುವಾರಿ ಪ್ರಧಾನಿ ತಕ್ ಸಿನ್ ಶಿನವರ್ತ ನೇತೃತ್ವದ ಥಾಯ್ ರಾಕ್ ಥಾಯ್ ಪಕ್ಷ ಮಾತ್ರವೇ ಭಾಗವಹಿಸಿದ್ದರೂ ಪ್ರಧಾನಿ ಸರ್ಕಾರ ರಚಿಸಲು ವಿಫಲವಾದರು. ಚುನಾವಣೆಗೆ ಸಿದ್ಧತೆ ನಡೆಸಲು ಸಮಯ ಸಿಗಲಿಲ್ಲ ಎಂದು ವಿರೋಧ ಪಕ್ಷಗಳು ಆಪಾದಿಸಿದ ಹಿನ್ನೆಲೆ ಹಾಗೂ ಚುನಾವಣೆಯ ಬಗ್ಗೆ ಪರಿಶೀಲನೆ ನಡೆಸುವಂತೆ ದೇಶದಲ್ಲಿ ಪೂಜ್ಯ ಸ್ಥಾನ ಪಡೆದುಕೊಂಡಿರುವ ದೊರೆ ಭುಮಿಬೋಲ್ ಅಡುಲ್ ಯಾದೇಜ್ ನ್ಯಾಯಾಲಯವನ್ನು ಕೋರಿದ್ದರು.

1971: ಕನ್ನಡ ಸಾಹಿತಿ ದೊಡ್ಡಬೆಲೆಯ ಡಿ.ಎಲ್.ಎನ್. (27-10-1906- 8-5-1971) ಮೃತರಾದರು. ಸಂಶೋಧನೆ, ವಿಮರ್ಶಾ ಕ್ಷೇತದಲ್ಲಿ ಹೆಚ್ಚಿನ ಸಾಧನೆ ಮಾಡಿರುವ ಇವರು `ವಡ್ಡಾರಾಧನೆ', `ಪಂಪರಾಮಾಯಣ ಸಂಗ್ರಹ', `ಭೀಷ್ಮಪರ್ವ' ಇತ್ಯಾದಿ ಕೃತಿಗಳ ಮೂಲಕ ಖ್ಯಾತರು.

1971: ಕನ್ನಡ ಸಾಹಿತಿ ಧಾರವಾಡದ ಉತ್ತಂಗಿ ಚನ್ನಪ್ಪ (28-10-1881ರಿಂದ 8-5-1971) ನಿಧನರಾದರು. `ಹಿಂದೂ ಸಮಾಜದ ಹಿತಚಿಂತಕ', `ಮಕ್ಕಳ ಶಿಕ್ಷಣಪಟ' ಇತ್ಯಾದಿ ಕೃತಿಗಳನ್ನು ರಚಿಸಿದ ಇವರು 1949ರಲ್ಲಿ 32ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

1928: ಇಂಗ್ಲಿಷ್, ಕನ್ನಡ, ಸಂಸ್ಕೃತ ಭಾಷಾ ವಿದ್ವಾಂಸ, ಸಂಗೀತ ವಿಮರ್ಶಕ ಶಂಕರ ಮೊಕಾಶಿ ಪುಣೇಕರ ಹುಟ್ಟಿದ ದಿನ. ಧಾರವಾಡದಲ್ಲಿ ರಾವಜಿ ರಾವ್- ಸುಂದರಾಬಾಯಿ ದಂಪತಿಯ ಪುತ್ರನಾಗಿ 1928ರಲ್ಲಿ ಈದಿನ ಜನಿಸಿದ ಮೊಕಾಶಿ ಕೇಂದ್ರ ಸಾಹಿತ್ಯ ಅಕಾಡೆಮಿ, ರಾಜ್ಯ ಸಾಹಿತ್ಯ ಅಕಾಡೆಮಿ, ಕರ್ನಾಟಕ ಚಲನಚಿತ್ರ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.

1917: ಅಮೆರಿಕದ ಚಾರ್ಲ್ಸ್ `ಸೋನ್ನಿ' ಲಿಸ್ಟನ್ (1917-70) ಹುಟ್ಟಿದ ದಿನ. 1962ರಿಂದ 1964ರವರೆಗೆ ಈತ ಜಾಗತಿಕ ಹೆವಿವೈಟ್ ಬಾಕ್ಸಿಂಗ್ ಚಾಂಪಿಯನ್ ಆಗಿದ್ದ. 1964ರಲ್ಲಿ ಮೊಹಮ್ಮದಾಲಿ ಈತನನ್ನು ಸೋಲಿಸಿದ.

1916: ಸ್ವಾಮಿ ಚಿನ್ಮಯಾನಂದ ಸರಸ್ವತಿ ಎಂದೇ ಖ್ಯಾತರಾದ ಬಾಲಕೃಷ್ಣ ಮೆನನ್ (1916-93) ಜನ್ಮದಿನ. ಚಿನ್ಮಯ ಮಿಷನನ್ನು ಸ್ಥಾಪಿಸಿದ ಇವರು 1993ರಲ್ಲಿ ಚಿಕಾಗೋದಲ್ಲಿ ನಡೆದ ಜಾಗತಿಕ ಧಾರ್ಮಿಕ ಸಂಸತ್ತಿನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

1891: ಥಿಯೋಸೋಫಿಕಲ್ ಸೊಸೈಟಿಯ ಸಹ ಸಂಸ್ಥಾಪಕಿ ಮೇಡಂ ಹೆಲೆನಾ ಬ್ಲಾವಟ್ ಸ್ಕಿ ನಿಧನರಾದರು.

1884: ಹ್ಯಾರಿ ಎಸ್. ಟ್ರೂಮನ್ (1884-1972) ಜನ್ಮದಿನ. ಅಮೆರಿಕದ 33ನೇ ಅಧ್ಯಕ್ಷನಾಗಿದ್ದ ಈತ ಸೋವಿಯತ್ ಮತ್ತು ಚೀನೀ ಕಮ್ಯೂನಿಸಂ ವಿರುದ್ಧದ ಅಂತಾರಾಷ್ಟ್ರೀಯ ಹೋರಾಟದತ್ತ ತನ್ನ ರಾಷ್ಟ್ರವನ್ನು ಮುನ್ನಡೆಸಿದ.

1794: ಆಧುನಿಕ ರಸಾಯನ ಶಾಸ್ತ್ರದ ಪಿತಾಮಹನೆಂದೇ ಖ್ಯಾತನಾದ ಫ್ರೆಂಚ್ ವಿಜ್ಞಾನಿ ಆಂಟೋನಿ ಲಾವೋಯಿಸೀರನನ್ನು ಗಿಲೋಟಿನ್ಗೆ ಗುರಿಪಡಿಸಿ ಕೊಲ್ಲಲಾಯಿತು. `ಆ ತಲೆ ಕಡಿಯಲು ಕ್ಷಣ ಸಾಕಾಯಿತು. ಆದರೆ ಇನ್ನೂ ನೂರು ವರ್ಷ ಕಳೆದರೂ ಅಂತಹ ಇನ್ನೊಂದು ತಲೆ ಉತ್ಪಾದಿಸಲು ಸಾಧ್ಯವಾಗಲಾರದು' ಎಂದು ಗಣಿತ ತಜ್ಞ ಜೋಸೆಫ್ ಲೂಯಿ ಉದ್ಗರಿಸಿದ.

No comments:

Post a Comment