Sunday, May 6, 2018

ಇಂದಿನ ಇತಿಹಾಸ History Today ಮೇ 05

ಇಂದಿನ ಇತಿಹಾಸ History Today ಮೇ 05
2018: ವಾಂಡೆನ್ ಬರ್ಗ್ ಏರ್ ಫೋರ್ಸ್ ಬೇಸ್: ನಾಸಾವು ಈದಿನ ಮಂಗಳ ಗ್ರಹದೆಡೆಗೆ ತನ್ನ ಇತ್ತೀಚಿನ ಗಗನನೌಕೆಯನ್ನು ಉಡಾಯಿಸಿತು. ಮಂಗಳ ಮೇಲ್ಮೈಯಲ್ಲಿ ಇಳಿಯಲಿರುವ ಈ ’ಇನ್ ಸೈಟ್ ಹೆಸರಿನ ಈ ಗಗನನೌಕೆಯು ಮಂಗಳ ಕಂಪನಗಳನ್ನು ಅಧ್ಯಯನ ಮಾಡಲಿದೆ. ಮನುಷ್ಯರು ಈ ಗ್ರಹಕ್ಕೆ ಕಾಲಿರಿಸುವ ಮುನ್ನವೇ ಮಂಗಳ ಕಂಪನಗಳ ಬಗ್ಗೆ ತಿಳಿವಳಿಕೆ ಹೊಂದುವುದು ಈ ಯಾನದ ಗುರಿಯಾಗಿದೆ.  ‘ಮೂರು, ಎರಡು, ಒಂದು, ಹಾರಿತು..!’ ಎಂದು ನಾಸಾ ವಿವರಣೆಕಾರರು ಹೇಳುತ್ತಿದ್ದಂತೆಯೇ ಗಗನನೌಕೆ ಹಿಂಬದಿಯಿಂದ ಬೆಂಕಿ, ಕರಿಯ ದಟ್ಟ ಹೊಗೆ ಬಿಡುತ್ತಾ ಅಟ್ಲಾಸ್ ವಿ ರಾಕೆಟ್ ಮೂಲಕ ಕ್ಯಾಲಿಫೋರ್ನಿಯಾದ ವಾಂಡೆನ್ ಬರ್ಗ್ ವಾಯುಪಡೆ ನೆಲೆಯಿಂದ ನಸುಕಿನ ೪.೦೫ ಗಂಟೆಗೆ ಬಾನಿನತ್ತ ಚಿಮ್ಮಿತು. ಅಮೆರಿಕದ ಪಶ್ಚಿಮ ಕರಾವಳಿಯಿಂದ ಅಂತರ್ ಗ್ರಹ ಹಾರಾಟದ ಮೊದಲ  ಉಡಾವಣೆ ಇದಾಯಿತು.  ೯೯೩ ಮಿಲಿಯ (೯೯೩ ದಶಲಕ್ಷ) ಡಾಲರ್ ವೆಚ್ಚದ ಈ ಯೋಜನೆಯು ಮಂಗಳ ಗ್ರಹದ ಆಂತರಿಕ ಸ್ಥಿತಿಗತಿ ಬಗೆಗಿನ ಮಾನವ ಅರಿವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಕೋಟ್ಯಂತರ ವರ್ಷಗಳ ಹಿಂದೆ ಭೂಮಿಯಲ್ಲಿ ಇರುವಂತಹುದೇ ಕಲ್ಲು ಬಂಡೆಗಳನ್ನು ಒಳಗೊಂಡ ಗ್ರಹಗಳ ಸೃಷ್ಟಿ ಹೇಗಾಯಿತು ಎಂಬುದನ್ನು ಅರಿಯಲು ಈ ಸಾಹಸ ಅನುವು ಮಾಡಿಕೊಡಲಿದೆ. ಎಲ್ಲವೂ ಲೆಕ್ಕಾಚಾರದಂತೆ ನಡೆದರೆ ನವೆಂಬರ್ ೨೬ರಂದು ’ಇನ್ ಸೈಟ್ ಕೆಂಪುಗ್ರಹವನ್ನು ತಲುಪಲಿದೆ.  ಮಂಗಳ ಗ್ರಹದಲ್ಲಿ ಕಂಪನಗಳು, ಹಿಮಪಾತಗಳು, ಉಲ್ಕಾಪಾತಗಳು ಸಂಭವಿಸುತ್ತವೆ ಎಂಬದು ತಜ್ಞರಿಗೆ ಈಗಾಗಲೇ ಗೊತ್ತಿದೆ. ಆದರೆ ಮಂಗಳ ಗ್ರಹದಲ್ಲಿ ಕಂಪನಗಳು ಸಂಭವಿಸುವುದು ಹೇಗೆ? ಮಂಗಳ ಗ್ರಹವನ್ನು ಅಧ್ಯಯನ ಮಾಡುತ್ತಿರುವ ಮಾನವರಿಗೆ ಬೇಕಾಗಿರುವ ಮೂಲಭೂತ ಮಾಹಿತಿ ಇದು ಎಂದು ನಾಸಾ ಮುಖ್ಯ ವಿಜ್ಞಾನಿ ಜಿಮ್ ಗ್ರೀನ್ ಹೇಳಿದರು.
’ ಇನ್ ಸೈಟ್ ಒಳಗೆ ಸೀಸ್ಮಿಕ್ ಎಕ್ಸ್ ಪರಿಮೆಂಟ್ ಫಾರ್ ಇಂಟೀರಿಯರ್ ಸ್ಟ್ರಕ್ಚರ್ ಎಂದು ಕರೆಯಲಾಗುವ ಸೀಸ್ಮೋಮೀಟರ್ ಅಳವಡಿಸಲಾಗಿದ್ದು ಇದನ್ನು ಫ್ರೆಂಚ್ ಬಾಹ್ಯಾಕಾಶ ಸಂಸ್ಥೆ ನಿರ್ಮಿಸಿದೆ. ಮಂಗಳ ಮೇಲ್ಮೈಯಲ್ಲಿ ಇಳಿದ ಬಳಿಕ ರೊಬೋಟ್ ಕೈ ಈ ಸೀಸ್ಮೋಮೀಟರ್‌ನ್ನು ನೇರವಾಗಿ ಮಂಗಳ ಮೇಲ್ಮೈ ಮೇಲೆ ಎತ್ತಿ ಇರಿಸಲಿದೆ.

 2018: ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಾಗರಿಕರು ಮತ್ತು ಭದ್ರತಾ ಪಡೆಗಳನ್ನು ಗುರಿಯಾಗಿ ಇಟ್ಟುಕೊಂಡು ಬಾಂಬ್ ದಾಳಿ ನಡೆಸಿದ ಪ್ರಕರಣಗಳಲ್ಲಿ ತಪ್ಪಿತಸ್ಥರು ಎಂಬುದಾಗಿ ಸೇನಾ ನ್ಯಾಯಾಲಯದಲ್ಲಿ ಸಾಬೀತಾದ ೧೧ ಮಂದಿ ಕಟ್ಟಾ ಭಯೋತ್ಪಾದಕರಿಗೆ ಮರಣ ದಂಡನೆ ವಿಧಿಸಲಾಗಿದೆ ಎಂದು ಪಾಕ್ ಸೇನಾ ಮುಖ್ಯಸ್ಥರು ದೃಢ ಪಡಿಸಿದರು. ಈ ಸಂಬಂಧ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ ಜನರಲ್ ಖಮರ್ ಜಾವೇದ್ ಬಜ್ವಾ ಅವರು ಭಯೋತ್ಪಾದನೆ ಕೃತ್ಯಗಳಲ್ಲಿ ಶಾಮೀಲಾದುದಕ್ಕಾಗಿ ೧೧ ಮಂದಿ ಭಯೋತ್ಪಾದಕರಿಗೆ ಮರಣದಂಡನೆ ವಿಧಿಸಲಾಗಿದೆ. ಈ ಭಯೋತ್ಪಾದಕರ ಪ್ರತ್ಯೇಕ  ದಾಳಿಗಳಿಂದ  ೩೬ ಮಂದಿ ನಾಗರಿಕರು ಮತ್ತು ೨೪ ಸೈನಿಕರು ಹತರಾಗಿದ್ದರು ಎಂದು ಹೇಳಿದರು.  ವಿಚಾರಣೆಗಳನ್ನು ಮುಕ್ತಾಯಗೊಳಿಸಲಾಗಿದೆ, ಆದರೆ ಆರೋಪಿಗಳಿಗೆ ವಕೀಲರನ್ನು ನೇಮಿಸಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಅವರು ನುಡಿದರು.ಸೇನಾ ವಿಚಾರಣೆ: ಪಾಕಿಸ್ತಾನದಲ್ಲಿ ಉಗ್ರಗಾಮಿಗಳ ಸೇನಾ ವಿಚಾರಣೆಯನ್ನು ಪುನಾರಂಭಿಸಲಾಗಿದ್ದು, ೨೦೧೪ರಲ್ಲಿ ಪೇಶಾವರದ ಶಾಲೆಯ ಮೇಲಿನ ಭಯೋತ್ಪಾದಕರ ಭೀಕರ ದಾಳಿಯ ಬಳಿಕ ಮರಣದಂಡನೆ ಮೇಲೆ ವಿಧಿಸಲಾಗಿದ್ದ ನಿಷೇಧವನ್ನು ರದ್ದು ಪಡಿಸಲಾಗಿದೆ. ಈ ದಾಳಿಯಲ್ಲಿ ಬಹುತೇಕ ಎಳೆಯ ವಿದ್ಯಾರ್ಥಿಗಳು ಸೇರಿದಂತೆ ೧೫೦ಕ್ಕೂ ಹೆಚ್ಚು ಜನರನ್ನು ಕೊಲ್ಲಲಾಗಿತ್ತು.


2018: ಶ್ರೀನಗರ: ಶ್ರೀನಗರದ ಹೃದಯಭಾಗ ಚತ್ತಾಬಾಲ್‌ನಲ್ಲಿ ಭದ್ರತಾ ಪಡೆ ಹಾಗೂ ಭಯೋತ್ಪಾದಕರ ನಡುವಿನ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಗಳು ಮೂರು ಉಗ್ರಗಾಮಿಗಳನ್ನು ಕೊಂದು ಹಾಕಿದವು. ಉಗ್ರಗಾಮಿಗಳು ಚತ್ತಾಬಾಲ್‌ನಲ್ಲಿ ಅಡಗಿರುವ ಬಗ್ಗೆ ಮಾಹಿತಿ ಪಡೆದ ಭದ್ರತಾ ಪಡೆ ಬೆಳಗ್ಗೆ ಕಾರ್ಯಾಚರಣೆ ಆರಂಭಿಸಿತ್ತು.  ಒಬ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ ಪಿ ಎಫ್) ಯೋಧ ಗಂಭೀರವಾಗಿ ಗಾಯಗೊಂಡಿದ್ದು, ನೂರ್ ಬಾಗ್ ನಲ್ಲಿ ವಾಹನ ಡಿಕ್ಕಿ ಹೊಡೆದ ಪರಿಣಾಮವಾಗಿ ನಾಗರಿಕ ಅದಿಲ್ ಅಹಮದ್ ಮೃತರಾದರು. ಚತ್ತಾಬಾಲ್ ನಲ್ಲಿ ಭದ್ರತಾ ಪಡೆ ಕೈಗೊಂಡಿದ್ದ ಕಾರ್ಯಾಚರಣೆ ಮುಕ್ತಾಯವಾಗಿದ್ದು, ಮೂರು ಮೃತದೇಹಗಳನ್ನು ಸಿಕ್ಕಿದೆ ಎಂದು ಡಿಜಿಪಿ ವೈದ್ ಹೇಳಿದರು.
ರಾಜ್ಯ ಪೊಲೀಸ್ ಮತ್ತು ಸಿಆರ್ ಪಿ ಎಫ್ ಘಾಸಿ ಮೊಹಲ್ಲಾ ಎಂಬಲ್ಲಿ ಲಷ್ಕರ್ - ತೊಯ್ಬಾ ವಿರುದ್ಧ ಜಂಟಿ ಕಾರ್ಯಾಚರಣೆ ಕೈಗೊಂಡಿದ್ದರು ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.  ಅಡಗಿಕೊಂಡಿದ್ದ ಉಗ್ರಗಾಮಿಗಳ ವಿರುದ್ಧ ಭದ್ರತಾ ಪಡೆಗಳು ಈದಿನ ಬೆಳಗ್ಗೆ ಕಾರ್ಯಾಚರಣೆ ನಡೆಸಿದರೆ, ಒಬ್ಬ ನಾಗರಿಕ  ಘರ್ಷಣಾ ಸ್ಥಳದಲ್ಲಿ ವಾಹನ ಡಿಕ್ಕಿ ಹೊಡೆದ ಪರಿಣಾಮವಾಗಿ ಸಾವನ್ನಪ್ಪಿದ. ಈ ಮಧ್ಯೆ ಪುಲ್ವಾಮದಲ್ಲಿ ಶಂಕಿತ ಉಗ್ರಗಾಮಿಗಳು ಹೊಡೆದ ಗುಂಡಿನದಾಳಿಯಿಂದ ಪೊಲೀಸ್ ಒಬ್ಬರು ಗಾಯಗೊಂಡರು. ಘರ್ಷಣಾ ಸ್ಥಳದಲ್ಲಿ ಗಾಯಗೊಂಡಿದ್ದ ಅದಿಲ್ ಅಹ್ಮದ್ ಎಂಬ ವ್ಯಕ್ತಿಯನ್ನು ಶ್ರೀನಗರದ ಶ್ರೀ ಮಹಾರಾಜಾ ಹರಿ ಸಿಂಗ್ (ಎಸ್ ಎಂ ಎಚ್ ಎಸ್) ಆಸ್ಪತ್ರೆಗೆ ಕರೆತರಲಾಯಿತು. ಮಾರ್ಗಮಧ್ಯದಲ್ಲೇ ಆತ ಅಸು ನೀಗಿದ. ನೂರ್ ಬಾಗ್ ನಲ್ಲಿ ಸಂಭವಿಸಿದ ಅಪಘಾತದಲ್ಲಿ ಉಂಟಾದ ಗಾಯದ ಪರಿಣಾಮವಾಗಿ ಆತ ಸಾವನ್ನಪ್ಪಿದ್ದಾನೆ ಎಂದು ವೈದ್ಯಕೀಯ ಬುಲೆಟಿನ್ ತಿಳಿಸಿದೆ. ಆದರೆ ಸ್ಥಳೀಯರು, ಪ್ರತಿಭಟನಕಾರರನ್ನು ಅಟ್ಟಿಸಿಕೊಂಡು ಹೋಗುತ್ತಿದ್ದ ಭದ್ರತಾ ಪಡೆಗಳ ವಾಹನ ಡಿಕ್ಕಿ ಹೊಡೆದ ಪರಿಣಾಮವಾಗಿ ಅಹ್ಮದ್ ಮೃತನಾಗಿರುವುದಾಗಿ ಆಪಾದಿಸಿದ್ದಾರೆ.
ಸೇನಾ ಕಾರ್‍ಯಾಚರಣೆ ವಿರುದ್ಧ ಶ್ರೀನಗರದಲ್ಲಿ ಸ್ಥಳೀಯರು ಪ್ರತಿಭಟನೆಗಳನ್ನೂ ನಡೆಸಿದ ಪರಿಣಾಮವಾಗಿ ನಗರ ಪ್ರಕ್ಷುಬ್ಧಗೊಂಡಿತು. ಪ್ರತಿಭಟನೆಗಳ ಪರಿಣಾಮವಾಗಿ ನಗರದ ಅಂಗಡಿ, ಮಾರುಕಟ್ಟೆಗಳು ಬಾಗಿಲು ಎಳೆದುಕೊಂಡವು. ಅತಿವೇಗದ ಇಂಟರ್ ನೆಟ್ ಸೇವೆ ಮತ್ತು ಮೊಬೈಲ್ ಸೇವೆಗಳನ್ನು ಸ್ಥಗಿತಗೊಳಿಸಲಾಯಿತು.  ಇನ್ನೊಂದು ಪ್ರತ್ಯೇಕ ಘಟನೆಯಲ್ಲಿ ಪೊಲೀಸ್ ಕಾನ್ ಸ್ಟೇಬಲ್ ಶೌಕತ್ ಅಹ್ಮದ ದರ್ ಅವರನ್ನು ಪುಲ್ವಾಮದಲ್ಲಿ ಬೆಳಗ್ಗೆ ೯.೩೦ರ ವೇಳಗೆ ಉಗ್ರಗಾಮಿಗಳು ಗುಂಡು ಹೊಡೆದು ಗಾಯಗೊಳಿಸಿದರು. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಪೊಲೀಸರು ಹೇಳಿದರು.

 2018: ನವದೆಹಲಿ: ಚುನಾವಣೆ ನಡೆಯಲಿರುವ ಕರ್ನಾಟಕದಲ್ಲಿ ಈವರೆಗೆ ೧೫೨ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಮೌಲ್ಯದ ನಗದು ಹಾಗೂ ವಸ್ತುಗಳನ್ನು ಜಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿತು.  ೬೭.೨೭ ಕೋಟಿ ರೂಪಾಯಿಗಳನ್ನು  ನಗದು ಹಣದ ರೂಪದಲ್ಲೇ ವಶಪಡಿಸಿಕೊಂಡಿದ್ದರೆ, ೪೩ ಕೋಟಿ ರೂಪಾಯಿ ಮೌಲ್ಯದ ಚಿನ್ನ ಮತ್ತು ಬೆಳ್ಳಿಯನ್ನು ರಾಜ್ಯದ ವಿವಿಧ ಕಡೆಗಳಲ್ಲಿ ವಶ ಪಡಿಸಿಕೊಳ್ಳಲಾಯಿತು.  ೨೩.೩೬ ಕೋಟಿ ರೂಪಾಯಿ ಮೌಲ್ಯದ ಮದ್ಯವನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಆಯೋಗ ತಿಳಿಸಿತು.  ಒಟ್ಟು ಮೊತ್ತದಲ್ಲಿ ಆದಾಯ ತೆರಿಗೆ ಇಲಾಖೆಯು ೨೦.೪೩ ಕೋಟಿ ರೂಪಾಯಿಗಳ ನಗದು ಹಣವನ್ನು ವಶ ಪಡಿಸಿಕೊಂಡಿತು. ಇಲಾಖೆಯು ಈ ಹಿಂದೆ ಚುನಾವಣಾ ಅಭ್ಯರ್ಥಿಗಳ ವಿರುದ್ಧ ಅವರು ಸಲ್ಲಿಸಿದ್ದ ಪ್ರಮಾಣಪತ್ರಗಳ ಪರಿಶೀಲನೆಯ ಬಳಿಕ ದಾಳಿಗಳನ್ನು ನಡೆಸಿತ್ತು. ಅಭ್ಯರ್ಥಿಯೊಬ್ಬರು ೨೦೧೨-೧೩ರಿಂದ ಆದಾಯ ತೆರಿಗೆ ರಿಟರ್ನ್ಸ್‌ನ್ನು ಸಲ್ಲಿಸಿರಲಿಲ್ಲ. ತಮ್ಮ ಪ್ರಮಾಣಪತ್ರದಲ್ಲಿ ಅವರು ತಾನು ಆನ್ ಲೈನ್ ಮೂಲಕ ತಮ್ಮ ರಿಟರ್ನ್ಸ್ ಸಲ್ಲಿಕೆಯನ್ನು ತಡೆ ಹಿಡಿಯಲಾದ ಕಾರಣ ತಾವು ಸೆಲ್ಫ್ ಅಸೆಸ್ ಮೆಂಟ್ ತೆರಿಗೆ ಪಾವತಿಸುತ್ತಿರುವುದಾಗಿ ತಿಳಿಸಿದ್ದರು. ಅವರ ಪತ್ನಿ ಘೋಷಿಸಿದ ಆದಾಯದಲ್ಲಿ ಭಾರಿ ವ್ಯತ್ಯಾಸಗಳು ಕಂಡು ಬಂದಿದ್ದವು.  ಗುಪ್ತಚರ ಮಾಹಿತಿಯನ್ನು ಆಧರಿಸಿ ಏಪ್ರಿಲ್ ತಿಂಗಳ ಕೊನೆಯ ವಾರ ಆದಾಯ ತೆರಿಗೆ ಇಲಾಖೆ ಕೂಡಾ ಹಲವಾರು ಸರ್ಕಾರಿ ಗುತ್ತಿಗೆದಾರರ ವಿರುದ್ಧ ಶೋಧಗಳನ್ನು ನಡೆಸಿ ಅವರಿಂದ ವಿವರಣೆ ನೀಡಲಾಗದೇ ಇದ್ದ ಭಾರಿ ಪ್ರಮಾಣದ ನಗದು ಹಣವನ್ನು ವಶಪಡಿಸಿಕೊಂಡಿತು.

2018: ಜಮ್ಮು: ಜಮ್ಮು ಮತ್ತು ಕಾಶ್ಮೀರದ ಉಪ ಮುಖ್ಯಮಂತ್ರಿ ಕವಿಂದರ್ ಗುಪ್ತ ಅವರ ಬೆಂಗಾವಲು ವಾಹನವೊಂದು ರಸ್ತೆಯಿಂದ ಜಾರಿ ಕಾಲುವೆ ಉರುಳಿದ ಪರಿಣಾಮವಾಗಿ ರಾಜ್ಯ ಮಾಹಿತಿ ಇಲಾಖೆಯ ಛಾಯಾಗ್ರಾಹಕರೊಬ್ಬರು ಅಸುನೀಗಿ, ಇತರ ಐವರು ಗಾಯಗೊಂಡರು.
ಮೃತ ವ್ಯಕ್ತಿಯನ್ನು ಸುರಮ್ ಸಿಂಗ್ (೫೦) ಎಂಬುದಾಗಿ ಗುರುತಿಸಲಾಯಿತು.  ಗಾಯಗೊಂಡಿರುವ ನಾಲ್ವರಲ್ಲಿ ವಾಹನದ ಚಾಲಕ ಕೂಡಾ ಸೇರಿರುವುದಾಗಿ ಪೊಲೀಸರು ತಿಳಿಸಿದರು. ಜಮ್ಮು ಹೊರವಲಯದ ಗ್ರೇಟರ್ ಕೈಲಾಶ್ ಪ್ರದೇಶದ ಸಮೀಪದಲ್ಲೇ ಕವಿಂದರ್ ಅವರ ಬೆಂಗಾವಲು ವಾಹನ ಸಮಾರಂಭ ಒಂದರಿಂದ ಹಿಂತಿರುಗುವಾಗ ಅಪಘಾತ ಸಂಭವಿಸಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದರು. ವಾಹನದ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾನೆ. ಮೃತ ಸುರಮ್ ಸಿಂಗ್ ಅವರ ಪಾರ್ಥಿವ ಶರೀರವನ್ನು ವಾಹನದಿಂದ ಹೊರತೆಗೆಯಲಾಗಿದೆ ಎಂದು ಅಧಿಕಾರಿ ತಿಳಿಸಿದರು. ನಿರ್ಲಕ್ಷ್ಯದ ಚಾಲನೆಯನ್ನು ಅಲ್ಲಗಳೆದ ಗುಪ್ತ ಅವರು ವಾಹನದ ಮೇಲೆ ಚಾಲಕನಿಗೆ ನಿಯಂತ್ರಣ ತಪ್ಪಿದ್ದರಿಂದ ಅಪಘಾತ ಸಂಭವಿಸಿದೆ ಎಂದು ಹೇಳಿದರು.  ‘ನಾನು ಮೃತರ ಮನೆಗೆ ಭೇಟಿ ನೀಡಿ ವೈಯಕ್ತಿಕವಾಗಿ ನನ್ನ ಶೋಕವನ್ನು ವ್ಯಕ್ತ ಪಡಿಸುವೆ ಎಂದು ಉಪ ಮುಖ್ಯಮಂತ್ರಿ ನುಡಿದರು.

2018: ಪಾಟ್ನಾ : ಬಿಹಾರದ ಜಮೂಯಿ ಜಿಲ್ಲೆಯ "ಸ್ವಚ್ಚ ಜಮೂಯಿ ಸ್ವಸ್ಥ ಜಮೂಯಿ ಅಭಿಯಾನದ ಅಂಗವಾಗಿ ಮುದ್ರಿಸಲಾದ ಶಾಲಾ ಮಕ್ಕಳ ನೋಟ್ ಪುಸ್ತಕಗಳ ಮುಖಪುಟದಲ್ಲಿ "ಬ್ರಾಂಡ್ ಅಂಬಾಸಿಡರ್ ಆಗಿ ಪಾಕಿಸ್ತಾನದ ಬಾಲಕಿಯ ಫೋಟೋ ಕಂಡುಬಂದಿರುವ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಆದೇಶ ನೀಡಿದರು. ಯಾವುದೇ ಸಂಬಂಧಿತ ಸರ್ಕಾರಿ ಅಧಿಕಾರಿಗಳ ಗಮನಕ್ಕೆ ಬಾರದೇ ಘಟಿಸಿರುವ ಈ ಪ್ರಮಾದವನ್ನು ಮುಖ್ಯಮಂತ್ರಿ ಗಂಭೀರವಾಗಿ ಪರಿಗಣಿಸಿದರು.  ಪಾಟ್ನಾದ ಸೌರಭ್ ಎಂಟರ್ ಪ್ರೈಸಸ್ ಮುದ್ರಣಾಲಯದಿಂದ ಮುದ್ರಿತವಾಗಿರುವ "ಸ್ವಚ್ಚ ಜಮೂಯಿ ಸ್ವಸ್ಥ ಜಮೂಯಿ ಮತ್ತು ’ಬೇಟಿ ಬಚಾವೋ, ಬೇಟಿ ಪಡಾವೋ ಅಭಿಯಾನದ ಸುಮಾರು ೫,೦೦೦ ನೋಟ್ ಪುಸ್ತಕಗಳು ಜಮೂಯಿ ಜಿಲ್ಲೆಯ ವಿದ್ಯಾರ್ಥಿಗಳ ಕೈಸೇರಿವೆ. ಈ ಪುಸ್ತಕಗಳ  ಮುಖ ಪುಟದಲ್ಲಿ ಕಾಣಿಸುವ ಐದು ವರ್ಷ ಪ್ರಾಯದ ಪಾಕಿಸ್ತಾನದ ಬಾಲಕಿಯು ಕುರ್ಚಿಯಲ್ಲಿ ಕುಳಿತುಕೊಂಡು ತನ್ನ ದೇಶದ ಧ್ವಜದ ನಕ್ಷೆಯನ್ನು ಬಿಡಿಸುತ್ತಿರುವುದು ಕಂಡು ಬರುತ್ತದೆ.  ವಾಸ್ತವವಾಗಿ ಈ ಫೋಟೋವನ್ನು ಯುನಿಸೆಫ್ ಪಾಕಿಸ್ತಾನದಲ್ಲಿ ಹೆಣ್ಣು ಮಕ್ಕಳ ಶಿಕ್ಷಣ ಪ್ರಚಾರಾಭಿಯಾನದ ಅಂಗವಾಗಿ ಬಳಸಿಕೊಳ್ಳಲಾಗಿತ್ತು. ಅದೇ ಫೋಟೋವನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಡಾ. ಕೌಶಲ್ ಕಿಶೋರ್ ಅವರ ಅನುಮತಿಯ ಪ್ರಕಾರ ಬಳಸಿಕೊಳ್ಳಲಾಗಿದೆ ಎಂದು ಸ್ವಚ್ಚ ಭಾರತ ಅಭಿಯಾನದ ಜಿಲ್ಲಾ ಸಂಚಾಲಕ ಸುಧೀರ್ ಕುಮಾರ್ ತಿಳಿಸಿದರು. ನಿತೀಶ್ ಕುಮಾರ್ ಅವರು ಜಮೂಯಿ ಜಿಲ್ಲಾಧಿಕಾರಿಗೆ ಪಾಕಿಸ್ತಾನಿ ಬಾಲಕಿಯ ಚಿತ್ರವನ್ನು ನೋಟ್ ಪುಸ್ತಕದಲ್ಲಿ ’ಬ್ರಾಂಡ್ ಅಂಬಾಸಿಡರ್ ಆಗಿ ಮಾಡಿದ್ದು ಹೇಗೆ ಎಂಬುದಾಗಿ ತನಿಖೆ ನಡೆಸಿ ಎಂದು ನಿರ್ದೆಶನ ನೀಡಿದರು. ಪುಸ್ತಕದಲ್ಲಿ ಪಾಕಿಸ್ತಾನಿ ಬಾಲಕಿಯ ಚಿತ್ರ ಬಳಸಿರುವ ವಿಚಾರ ಶುಕ್ರವಾರ ಬೆಳಕಿಗೆ ಬಂದಿದ್ದು ಸರ್ಕಾರಕ್ಕೆ ತೀವ್ರ ಇರುಸು ಮುರುಸು ಉಂಟು ಮಾಡಿದೆ. ಜಿಲ್ಲೆಯ ಶಾಲೆಗಳು, ಅಂಗನವಾಡಿ ಕೇಂದ್ರಗಳು, ಶಾಲಾ ಮಕ್ಕಳು ಮತ್ತಿತರರಿಗೆ ಈ ಪುಸ್ತಕಗಳನ್ನು ವಿತರಿಸಲಾಗಿತ್ತು. ನೋಟ್ ಪುಸ್ತಕಗಳ ಕವಚಗಳಿಗೆ ಫೋಟೋ ಹಾಕುವುದಕ್ಕೆ ಮುಂಚಿತವಾಗಿ ಜಿಲ್ಲಾಡಳಿತದ ಮಂಜೂರಾತಿ ಪಡೆದುಕೊಳ್ಳಲಾಗಿತ್ತು ಎಂದು ಪುಸ್ತಕವನ್ನು ಮುದ್ರಿಸಿದ ಸುಪ್ರಭ ಎಂಟರ್ ಪ್ರೈಸಸ್ ತಿಳಿಸಿತು.

2018: ಗದಗ/ ತುಮಕೂರು/ ಶಿವಮೊಗ್ಗ:  ಚುನಾವಣಾ ಪ್ರಚಾರ ತಾರಕಕ್ಕೆ ಏರುತ್ತಿದ್ದಂತೆಯೇ ಕರ್ನಾಟಕ ರಾಜ್ಯದಲ್ಲಿ ಬಿರುಸಿನ ಪ್ರಚಾರ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮೂರು ರಾಲಿಗಳಲ್ಲಿ ’ಕಾಂಗ್ರೆಸ್ ಪಕ್ಷವು ಚುನಾವಣೆಯ ಬಳಿಕ ’ಪಂಜಾಬ್, ಪುದುಚೆರಿ ಮತ್ತು ಪರಿವಾರಮಟ್ಟಕ್ಕೆ ಇಳಿಯಲಿದೆ - ಅಂದರೆ ’ಪಿಪಿಪಿ ಕಾಂಗ್ರೆಸ್ ಆಗಲಿದೆ ಎಂದು ಛೇಡಿಸಿದರು.  ಪ್ರಧಾನಿ ಮಾತಿಗೆ ಅಷ್ಟೇ ಕಟುವಾಗಿ ಉತ್ತರ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರಣಿ ಟ್ವೀಟ್‌ಗಳ ಮೂಲಕ ’ಪ್ರಿಯ ಮೋದಿಯವರೇ, ನೀವು ಹೊಸ ’ಪಿಪಿಪಿ ಎಂಬ ಹೊಸ ಸಂಕ್ಷಿಪ್ತ ಪದ ಹುಟ್ಟು ಹಾಕಿದ್ದೀರಿ ಎಂದು ಕೇಳಿದೆ. ಸ್ವಾಮೀ, ನಾವು ಯಾವಾಗಲೂ ಪ್ರಜಾಪ್ರಭುತ್ವದ ಮೂರು ’ಪಿ- ಆಫ್ ದ ಪೀಪಲ್, ಬೈದ ಪೀಪಲ್ ಫಾರ್ ದ ಪೀಪಲ್ ಇವುಗಳನ್ನೇ ಪ್ರತಿಪಾದಿಸಿದ್ದೇವೆ. ಆದರೆ ನಿಮ್ಮ ಪಕ್ಷವು ’ಪ್ರಿಸನ್ ’ಪ್ರೈಸ್ ರೈಸ್ ಮತ್ತು ’ಪಕೋಡ ಪಾರ್ಟಿಯಾಗಿದೆ, ನಾನು ಹೇಳಿದ್ದು ಸರಿಯೇ ಸ್ವಾಮಿ?’ ಎಂದು ಚುಚ್ಚಿದರು. ಚುನಾವಣೆಗೆ ಇನ್ನೊಂದೇ ವಾರ ಬಾಕಿ ಇರುವಂತೆಯೇ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ತಮ್ಮ ಟೀಕಾ ಪ್ರಹಾರವನ್ನು ತಾರಕಕ್ಕೆ ಒಯ್ದ ಪ್ರಧಾನಿ ’ಅದು (ಸಿದ್ದರಾಮಯ್ಯ  ಸರ್ಕಾರ) ಕಾಂಗ್ರೆಸ್ ಪಕ್ಷಕ್ಕೆ ಭ್ರಷ್ಟಾಚಾರದ ಕೊಳವಾಗಿದೆ (ಕರಪ್ಷನ್ ಟ್ಯಾಂಕ್). ಕರ್ನಾಟಕದ ಈ ಟ್ಯಾಂಕಿನಿಂದ ದೆಹಲಿಗೆ ಪೈಪ್ ಲೈನ್ ಜೋಡಿಸಲಾಗಿದೆ. ಇದರ ಮೂಲಕ ಲೂಟಿ ಮಾಡಿದ ಹಣ ನೇರವಾಗಿ ದೆಹಲಿಗೆ ತಲುಪುತ್ತದೆ ಎಂದು ಹೇಳಿದರು.  ಪಕ್ಷ ಮತ್ತು ಗಾಂಧಿಗಳು ’ಸುಳ್ಳುಗಾರರು ಎಂದೂ ಶಿವಮೊಗ್ಗದ ಮೂರನೇ ರ್‍ಯಾಲಿಯಲ್ಲಿ ಜರೆದ ಪ್ರಧಾನಿ ಅವರೆಲ್ಲರೂ ’ಸುಳ್ಳಿನ ವ್ಯವಹಾರದಲ್ಲಿ ತೊಡಗಿದ್ದಾರೆ ಎಂದು ಟೀಕಿಸಿದರು.  ಕಾಂಗ್ರೆಸ್ ವರಿಷ್ಠ ಮಂಡಳಿಯು ಟಿಕೆಟ್, ಪಕ್ಷದ ಹುದ್ದೆಗಳು ಮತ್ತು ಮುಖ್ಯಮಂತ್ರಿ ಹುದ್ದೆಯನ್ನು ಕೂಡಾ ಹರಾಜು ಹಾಕುತ್ತಿದೆ ಎಂದು ಮೋದಿ ಹೇಳಿದರು.  ‘ಮೇ ೧೫ರ ಬಳಿಕ (ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ) ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷವು ’ಪಿಪಿಪಿ ಕಾಂಗ್ರೆಸ್ - ಪಿ ಅಂದರೆ ಪಂಜಾಬ್, ಪಿ ಅಂದರೆ ಪುದುಚೆರಿ ಮತ್ತು ಪಿ ಅಂದರೆ ಪರಿವಾರ (ಕುಟುಂಬ) ಮಟ್ಟಕ್ಕೆ ಇಳಿಯುತ್ತದೆ ಎಂದು ಮೋದಿ ಅವರು ಗದಗ ಚುನಾವಣಾ ರಾಲಿಯಲ್ಲಿ ನುಡಿದರು. ಹೆಲಿಕಾಪ್ಟರ್ ಹಗರಣದ ಬಳಿಕ, ಕಲ್ಲಿದ್ದಲು ಹಗರಣ, ಸಿಡಬ್ಲ್ಯೂಜಿ ಹಗರಣ ಮತ್ತು ಇತರ ಹಲವಾರು ಹಗರಣಗಳನ್ನು ಎಸಗಿರುವ ಕಾಂಗ್ರೆಸ್ ಈಗ ಟೆಂಡರ್ ವ್ಯವಸ್ಥೆಯನ್ನು ಆರಂಭಿಸಿದೆ. ಟಿಕೆಟ್ ಹಂಚಿಕೆಗಾಗಿ, ಕಾಂಗ್ರೆಸ್ ನಾಯಕರ ಆಯ್ಕೆಗಾಗಿ, ಮುಖ್ಯಮಂತ್ರಿ ಸ್ಥಾನಕ್ಕಾಗಿ ಕೂಡಾ ಟೆಂಡರ್ ವ್ಯವಸ್ಥೆಯನ್ನು ಅನುಸರಿಸಲಾಗುತ್ತಿದೆ ಎಂದು ಮೋದಿ ಹೇಳಿದರು.  ದೆಹಲಿಗೆ ಅತ್ಯಂತ ಹೆಚ್ಚು ಹಣವನ್ನು ಪ್ರತಿ ತಿಂಗಳು ಯಾರು ಕಳುಹಿಸುತ್ತಾರೋ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂದು ಕರ್ನಾಟಕದ ನಾಯಕರಿಗೆ ಅವರ ಮೇಲಿನವರು ಹೇಳಿದ್ದಾರೆ. ಮಹಾರಾಷ್ಟ್ರ, ಗೋವಾ, ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ ಗಢ, ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ತ್ರಿಪುರದಲ್ಲಿ ಚುನಾವಣಾ ಪರಾಭವಗಳನ್ನು ಅನುಭವಿಸಿದ್ದರೂ ಕಾಂಗ್ರೆಸ್ ಪಕ್ಷಕ್ಕೆ ಒಂದಿಷ್ಟೂ ಚಿಂತೆಯಿಲ್ಲ, ಏಕೆ ಗೊತ್ತೇ? ಏಕೆ ಎಂದು ನಾನು ನಿಮಗೆ ಹೇಳುತ್ತೇನೆ. ಏಕೆಂದರೆ ಕರ್ನಾಟಕದ ಅವರ ಸಚಿವರು ಮತ್ತು ನಾಯಕರು ಇಲ್ಲಿ ಟ್ಯಾಂಕ್ ಒಂದನ್ನು ಕಟ್ಟಿದ್ದಾರೆ. ಅವರು ಲೂಟಿ ಮಾಡಿದ ಹಣದಲ್ಲಿ ಒಂದು ಭಾಗ ಮನೆಗಳಿಗೆ ಹೋಗುತ್ತದೆ. ಉಳಿದದ್ದನ್ನು ಟ್ಯಾಂಕಿಗೆ ಹಾಕಲಾಗುತ್ತದೆ. ಟ್ಯಾಂಕಿಗೆ ಪೈಪ್ ಲೈನ್ ಮೂಲಕ ನೇರವಾಗಿ ದೆಹಲಿಗೆ ಸಂಪರ್ಕ ನೀಡಲಾಗಿದೆ. ಈ ಪೈಪ್ ಲೈನ್ ಮೂಲಕ ಲೂಟಿ ಮಾಡಿದ ಹಣ ನೇರವಾಗಿ ದೆಹಲಿಗೆ ತಲುಪುತ್ತದೆ ಎಂದು ಮೋದಿ ಹೇಳಿದರು.  ತಮ್ಮ ಈ ಸರ್ಕಾರ ಹೋದರೆ ಪಕ್ಷಕ್ಕೆ ಏನಾಗುತ್ತದೋ ಎಂಬ ಚಿಂತೆ ಅವರದ್ದು. ಎಚ್ಚರಿಕೆಯಿಂದ ಇರಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಅದರ ಸರ್ಕಾರ ಲೂಟಿ ಹೊಡೆಯುವುದನ್ನು ಬಿಟ್ಟು ಬೇರೇನನ್ನೂ ಮಾಡುವುದಿಲ್ಲ ಎಂದು ಮೋದಿ ನುಡಿದರು.


2017: ನವದೆಹಲಿ: ‘ನಿರ್ಭಯಾ’ ಅತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಮರಣದಂಡನೆ ವಿಧಿಸಿ ದೆಹಲಿ ಹೈ ಕೋರ್ಟ್‌ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್, ತಪ್ಪಿತಸ್ಥರಿಗೆ ಮರಣದಂಡನೆ ಖಾಯಂಗೊಳಿಸಿ ತೀರ್ಪು ಪ್ರಕಟಿಸಿತು. ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ಆರ್. ಭಾನುಮತಿ ಮತ್ತು ಅಶೋಕ್ ಭೂಷಣ್ ಅವರನ್ನು ಒಳಗೊಂಡ ತ್ರಿಸದಸ್ಯ ನ್ಯಾಯಪೀಠವು 428 ಪುಟಗಳ ಐತಿಹಾಸಿಕ ತೀರ್ಪಿನಲ್ಲಿ ಬರ್ಬರ, ಪೈಶಾಚಿಕ ಕೃತ್ಯ ಎಸಗಿರುವ ಅಪರಾಧಿಗಳು ಯಾವುದೇ ರಿಯಾಯ್ತಿಗೂ ಅರ್ಹರಲ್ಲ ಎಂದು ಸಾರಿತು. 2012ರಲ್ಲಿ ನಡೆದ ‘ನಿರ್ಭಯಾ’ ಅತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳು ಸಲ್ಲಿಸಿರುವ ವಿಶೇಷ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿತು. ಅಪರಾಧಿಗಳಾದ ಮುಖೇಶ್‌, ಪವನ್‌, ವಿನಯ್‌ ಶರ್ಮ ಮತ್ತು ಅಕ್ಷಯ ಕುಮಾರ್‌ ಸಿಂಗ್‌ ಈ ನಾಲ್ವರಿಗೆ 2013ರಲ್ಲಿ ವಿಚಾರಣಾ ಕೋರ್ಟ್ ವಿಧಿಸಿದ್ದ ಮರಣದಂಡನೆಯನ್ನು ದೆಹಲಿ ಹೈಕೋರ್ಟ್‌ 2014ರಲ್ಲಿ ಎತ್ತಿ ಹಿಡಿದಿತ್ತು. ಈ ತೀರ್ಪನ್ನು ಪ್ರಶ್ನಿಸಿ ಅಪರಾಧಿಗಳು ಸುಪ್ರೀಂಕೋರ್ಟ್‌ಗೆ ವಿಶೇಷ ಮೇಲ್ಮನವಿ ಸಲ್ಲಿಸಿದ್ದರು. ಇದರ ತೀರ್ಪನ್ನು ಕೋರ್ಟ್‌ ಕಳೆದ ಮಾರ್ಚ್‌ನಲ್ಲಿ ಕಾಯ್ದಿರಿಸಿತ್ತು. ಈದಿನ  ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ, ನಾಲ್ವರು ಅಪರಾಧಿಗಳಿಗೆ ದೆಹಲಿ ಹೈಕೋರ್ಟ್‌ ನೀಡಿದ್ದ ಮರಣದಂಡನೆಯನ್ನು ಎತ್ತಿ ಹಿಡಿದು, ಶಿಕ್ಷೆಯನ್ನು ಖಾಯಂಗೊಳಿಸಿತು. 2012ರ ಡಿಸೆಂಬರ್ 16ರಂದು 23 ವರ್ಷ ವಯಸ್ಸಿನ ಫಿಜಿಯೊಥೆರಪಿಸ್ಟ್ ವಿದ್ಯಾರ್ಥಿನಿ ಮೇಲೆ ಚಲಿಸುವ ಬಸ್‌ನಲ್ಲಿ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು.  ಬಳಿಕ ಚಿಕಿತ್ಸೆಗೆ ಸ್ಪಂದಿಸದೆ ಸಿಂಗಾಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಡಿಸೆಂಬರ್ 29ರಂದು ವಿದ್ಯಾರ್ಥಿನಿ ಕೊನೆಯುಸಿರು ಎಳೆದಿದ್ದರು. ಪ್ರಕರಣದ ಪ್ರಮುಖ ಆರೋಪಿ ರಾಮ್‌ ಸಿಂಗ್‌ 2013ರ ಮಾರ್ಚ್‌ನಲ್ಲಿ ತಿಹಾರ್ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಇನ್ನೊಬ್ಬ ಅಪ್ರಾಪ್ತ ವಯಸ್ಕನಿಗೆ ಬಾಲಾಪರಾಧಿ ಮಂಡಳಿಯು ಮೂರು ವರ್ಷಗಳ ಶಿಕ್ಷೆ ವಿಧಿಸಿ, ಅದನ್ನು ಪೂರೈಸಿದ ಬಳಿಕ 2015ರಲ್ಲಿ ಬಿಡುಗಡೆ ಮಾಡಿತ್ತು.
2017: ಬೆಂಗಳೂರು: ದಕ್ಷಿಣ ಏಷ್ಯಾ ರಾಷ್ಟ್ರಗಳ ಸಂವಹನ ಮತ್ತು ವಿಪತ್ತು ನಿರ್ವಹಣೆ ವಿಚಾರಕ್ಕೆ ಸಂಬಂಧಿಸಿ ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ಇಸ್ರೊ ನಿರ್ಮಿಸಿರುವ “ದಕ್ಷಿಣ ಏಷ್ಯಾ ಸಂವಹನ  ಉಪಗ್ರಹ’ ಜಿಸ್ಯಾಟ್–9 ನ್ನು ಸಂಜೆ 4.57ಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಜಿಎಸ್‌ಎಲ್‌ವಿ–ಎಫ್‌09 ರಾಕೆಟ್‌ ಮೂಲಕ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಪಗ್ರಹವನ್ನು ಉಡಾವಣೆ ಮಾಡಿ ಕಕ್ಷೆಗೇರಿಸಲಾಯಿತು. ‘ದಕ್ಷಿಣ ಏಷ್ಯಾ ಸಂವಹನ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಿರುವುದು ಐತಿಹಾಸಿಕ ಕ್ಷಣವಾಗಿದೆ. ಇದರಿಂದ ದಕ್ಷಿಣ ಏಷ್ಯಾದ ರಾಷ್ಟ್ರಗಳಿಗೆ ಮತ್ತು ಈ ಪ್ರದೇಶದ ಅಭಿವೃದ್ಧಿಗೆ ಪ್ರಯೋಜನವಾಗಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದರು. ‘ದಕ್ಷಿಣ ಏಷ್ಯಾ ಸಂವಹನ ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡಲು ಕಠಿಣ ಶ್ರಮ ವಹಿಸಿದ ಇಸ್ರೊದ ಎಲ್ಲ ವಿಜ್ಞಾನಿಗಳನ್ನು ಅಭಿನಂದಿಸುತ್ತೇನೆ. ಅವರ ಬಗ್ಗೆ ಹೆಮ್ಮೆಯಿದೆ’ ಎಂದೂ ಪ್ರಧಾನಿ ಹೇಳಿದರು. ದೂರಸಂಪರ್ಕ, ದೂರದರ್ಶನ, ಡಿಟಿಎಚ್‌, ವಿಸ್ಯಾಟ್, ದೂರಶಿಕ್ಷಣ ಹಾಗೂ ಟೆಲಿಮೆಡಿಸಿನ್ ಕ್ಷೇತ್ರಗಳಲ್ಲಿ ಪಾಕಿಸ್ತಾನ ಹೊರತಾದ ಸಾರ್ಕ್ ಕೂಟದ ಎಲ್ಲ ರಾಷ್ಟ್ರಗಳಿಗೆ ಉಪಗ್ರಹ ನೆರವಾಗಲಿದೆ. ಭೂಕಂಪ, ಸುನಾಮಿ, ಪ್ರವಾಹ ಮತ್ತಿತರ ಪ್ರಾಕೃತಿಕ ವಿಕೋಪಗಳ ಬಗ್ಗೆ ಮುನ್ನೆಚ್ಚರಿಕೆ ನೀಡಲೂ ಅನುಕೂಲವಾಗಲಿದೆ.
2017: ಚಂಡೀಗಢ: ಹುತಾತ್ಮ ಸುಬೇದಾರ್ ಪರಮ್‌ಜಿತ್ ಸಿಂಗ್ ಅವರ 12 ವರ್ಷ ವಯಸ್ಸಿನ ಮಗಳ
ಜೀವನದ ಸಂಪೂರ್ಣ ಜವಾಬ್ದಾರಿಯನ್ನು ಆಕೆಯ ಶಿಕ್ಷಣ ಪೂರ್ಣಗೊಳ್ಳುವವರೆಗೆ ವಹಿಸಿಕೊಳ್ಳುವುದಾಗಿ ಐಎಎಸ್‌ ಹಾಗೂ ಐಪಿಎಸ್‌ ಅಧಿಕಾರಿಗಳಾಗಿರುವ ಹಿಮಾಚಲಪ್ರದೇಶದ ಮುಸ್ಲಿಂ ದಂಪತಿ ಘೋಷಿಸಿದರು. ಐಎಎಸ್ ಅಧಿಕಾರಿ ಯೂನಸ್ ಖಾನ್ ಮತ್ತು ಅವರ ಪತ್ನಿ, ಐಪಿಎಸ್ ಅಧಿಕಾರಿ ಅಂಜುಮ್‌ ಅರಾ ಅವರೇ ಈ ಘೋಷಣೆ ಮಾಡಿದ ದಂಪತಿ. ಯೋಧನ ಮಗಳು ಶಿಕ್ಷಣ ಪೂರೈಸಿ ಸ್ವಂತ ದುಡಿಮೆ ಮಾಡಿ ಜೀವನ ಸಾಗಿಸಲು ಸಮರ್ಥಳಾಗುವವರೆಗೆ ಆಕೆಯ ಎಲ್ಲ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಾಗಿ ದಂಪತಿ ತಿಳಿಸಿದರು. ಮಗಳ ಶಿಕ್ಷಣ ಮತ್ತು ಆರ್ಥಿಕ ಜವಾಬ್ದಾರಿ ವಹಿಸಿಕೊಳ್ಳುವ ಬಗ್ಗೆ ಹುತಾತ್ಮ ಯೋಧ ಪರಮ್‌ಜಿತ್ ಪತ್ನಿ ಬಳಿ ಮಾತನಾಡಿರುವುದಾಗಿಯೂ ದಂಪತಿ ತಿಳಿಸಿದರು. ‘ನಾನು ಮತ್ತು ಪತ್ನಿ ಪಂಜಾಬ್‌ನ ಹಳ್ಳಿಯಲ್ಲಿರುವ ಪರಮ್‌ಜಿತ್ ಮನೆಗೆ ಮೇ 6ರಂದು  ಭೇಟಿ ನೀಡಲಿದ್ದೇವೆ. ಪರಮ್‌ಜಿತ್ ಕುಟುಂಬದವರ ಜತೆ ಈಗಾಗಲೇ ಮಾತನಾಡಿದ್ದೇವೆ. ಅವರ ಮಗಳ ಶಿಕ್ಷಣಕ್ಕೆ ನೆರವಾಗುವುದು ನಾವು ದೇಶಕ್ಕೆ ನೀಡುವ ಸಣ್ಣದೊಂದು ಕೊಡುಗೆ ಎಂದು ಭಾವಿಸಿದ್ದೇವೆ’ ಎಂದು ಯೂನಸ್ ಖಾನ್ ಹೇಳಿದರು. ಈ ದಂಪತಿಗೆ ನಾಲ್ಕು ವರ್ಷ ವಯಸ್ಸಿನ ಮಗನಿದ್ದಾನೆ.

2017: ರಾಜ್‌ಕೋಟ್‌: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಓದಿದ್ದ ಗುಜರಾತಿನ ರಾಜ್
ಕೋಟಿನ ಆಲ್ಫ್ರೆಡ್‌ ಹೈಸ್ಕೂಲ್‌ ಅನ್ನು ಬರೋಬ್ಬರಿ 164 ವರ್ಷಗಳ ಬಳಿಕ ಮುಚ್ಚಿ ಅದನ್ನು ಮ್ಯೂಸಿಯಂ ಆಗಿ ಬದಲಾಯಿಸಲು ಶಾಲೆಯ ಆಡಳಿತ ವರ್ಗ ಮತ್ತು ರಾಜ್‌ಕೋಟ್‌ ಮುನ್ಸಿಪಲ್‌ ಕಾರ್ಪೋರೇಷನ್‌(ಆರ್‌ಎಂಸಿ) ತೀರ್ಮಾನಿಸಿದವು. ರಾಜ್ಯ ಸರ್ಕಾರದಿಂದ ನಡೆಸಲಾಗುತ್ತಿರುವ ಗುಜರಾತಿ ಭಾಷಾ ಮಾಧ್ಯಮದ ಈ ಶಾಲೆಯನ್ನು ಮ್ಯೂಸಿಯಂ ಆಗಿ ಬದಲಾಯಿಸಲು ಕಳೆದ ವರ್ಷವೇ ಆರ್‌ಎಂಸಿ ಗುಜರಾತ್‌ ಸರ್ಕಾರಕ್ಕೆ ಮನವಿ ಮಾಡಿತ್ತು. ‘ಮನವಿ ಬಳಿಕ, ರಾಜ್ಯ ಸರ್ಕಾರ ಶಾಲಾ ಕಟ್ಟಡವನ್ನು ಆರ್‌ಎಂಸಿಗೆ ಒಪ್ಪಿಸಲು ಶಿಕ್ಷಣ ಇಲಾಖೆಯ ಸಹಮತವನ್ನೂ ಕೇಳಿತ್ತು’ ಎಂದು ಆರ್‌ಎಂಸಿ ಆಯುಕ್ತ ಬಿ.ಎನ್‌.ಪಾಣಿ ಹೇಳಿದರು. ‘ಅಂದಾಜು ರೂ.10 ಕೋಟಿ ವೆಚ್ಚದಲ್ಲಿ ಕಟ್ಟಡವನ್ನು ಮ್ಯೂಸಿಯಂ ಆಗಿ ವಿನ್ಯಾಸಗೊಳಿಸಲು ಸಲಹೆಗಾರರನ್ನು ನೇಮಿಸಲಾಗುವುದು. ಮ್ಯೂಸಿಯಂ ಮಹಾತ್ಮಾ ಗಾಂಧೀಜಿ, ಸರ್ದಾರ್‌ ಪಟೇಲ್‌ ಹಾಗೂ ಮತ್ತಿತರ ಮಹನೀಯರ ಜೀವನ ಹಾಗೂ ಹೋರಾಟಗಳ ಕುರಿತ ಮಾಹಿತಿ ಪ್ರದರ್ಶನ ಮಾಡಲಿದೆ’ ಎಂದು ಸಹ ಪಾಣಿ ತಿಳಿಸಿದರು. 1887ರಲ್ಲಿ ತಮ್ಮ 18ನೇ ವಯಸ್ಸಿನಲ್ಲಿ ಮಹಾತ್ಮಾ ಗಾಂಧಿಯವರು ಈ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಮುಗಿಸಿದ್ದರು. ಸದ್ಯ ಶಾಲೆಯಲ್ಲಿ ಕಲಿಯುತ್ತಿರುವ 125 ವಿದ್ಯಾರ್ಥಿಗಳಿಗೆ ಶಾಲೆ ಬಿಟ್ಟು ಹೊರಡುವ ಪ್ರಮಾಣ ಪತ್ರವನ್ನು ನೀಡಲಾಗುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿದವು. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲೆಯ ಶಿಕ್ಷಣಾಧಿಕಾರಿ ರೇವಾ ಪಟೇಲ್‌ ಅವರು ‘ನಾವು ವಿದ್ಯಾರ್ಥಿಗಳಿಗೆ ಶಾಲೆ ಬಿಟ್ಟು ಹೊರಡುವ ಪ್ರಮಾಣ ಪತ್ರಗಳನ್ನು ವಿತರಿಸುತ್ತಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಅವರು ತಮ್ಮ ಆದ್ಯತೆಯ ಶಾಲೆಗಳಿಗೆ ಸೇರಬಹುದು’ ಎಂದರು. ರಾಜ್‌ಕೋಟ್‌ ಪ್ರೌಢ ಶಾಲೆ ಎನ್ನಲಾಗುತ್ತಿದ್ದ ಈ ಶಾಲೆಯನ್ನು 1853ರ ಅಕ್ಟೋಬರ್‌ 1ರಂದು ಬ್ರಿಟಿಷ್‌ ಸರ್ಕಾರ ಸ್ಥಾಪನೆ ಮಾಡಿತ್ತು. ಇದು ಸೌರಾಷ್ಟ್ರ ಭಾಗದಲ್ಲಿ ತೆರೆಯಲಾಗಿದ್ದ ಮೊದಲ ಆಂಗ್ಲ ಮಾಧ್ಯಮ ಶಾಲೆ ಎನಿಸಿಕೊಂಡಿತ್ತು. ಆದರೆ, ಈಗಿರುವ ಕಟ್ಟಡವನ್ನು 1875ರಲ್ಲಿ ಜುನಗಡದ ನವಾಬ ಕಟ್ಟಿಸಿದ್ದರು. ಬಳಿಕ ಅದಕ್ಕೆ ಎಡಿನ್‌ಬರ್ಗ್‌ ರಾಜಕುಮಾರ ಆಲ್ಫ್ರೆಡ್‌ನ ಹೆಸರಿಡಲಾಗಿತ್ತು. ದೇಶದ ಸ್ವಾತಂತ್ರ್ಯಾ ನಂತರ ಶಾಲೆಗೆ ‘ಮಹಾತ್ಮಾ ಗಾಂಧಿ ಪ್ರೌಢ ಶಾಲೆ’ ಎಂದು ಮರುನಾಮಕರಣ ಮಾಡಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಶಾಲೆಯ ಶೈಕ್ಷಣಿಕ ಪ್ರಗತಿಯೂ ಕುಂಠಿತಗೊಂಡಿತ್ತು. ಕೆಲ ವರ್ಷಗಳ ಹಿಂದೆ ಶಾಲೆಯ 60 ವಿದ್ಯಾರ್ಥಿಗಳಲ್ಲಿ ಯಾರೊಬ್ಬರೂ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಲಿಲ್ಲ.
2016: ಉಜ್ಜೈನಿ: ಭಾರಿ ಗಾಳಿ, ಮಳೆಯ ಪರಿಣಾಮವಾಗಿ ಉಜ್ಜೈನಿ ಸಿಂಹಷ್ಠ ಕುಂಭ ಮೇಳದಲ್ಲಿ ಕಾಲ್ತುಳಿತ ಸಂಭವಿಸಿ, ಕನಿಷ್ಠ 7 ಜನ ಭಕ್ತರು ಸಾವನ್ನಪ್ಪಿ, 80ಕ್ಕೂ ಹೆಚ್ಚು ಮಂದಿ ಗಾಯಗೊಂಡರು.
ಭಾರೀ ಗಾಳಿ ಮಳೆಯ ಮಧ್ಯೆ ಟೆಂಟ್ ಒಂದು ಕುಸಿದ ಪರಿಣಾಮವಾಗಿ ಗಾಭರಿಗೊಂಡ ಭಕ್ತರು ಓಡತೊಡಗಿದಾಗ ಕಾಲ್ತುಳಿತ ಸಂಭವಿಸಿತು. ಪ್ರತಿ 12 ವರ್ಷಕ್ಕೆ ಒಮ್ಮೆ ಒಂದು ತಿಂಗಳ ಕಾಲ ನಡೆಯುವ ಕುಂಭ ಮೇಳದಲ್ಲಿ ಸುಮಾರು 5 ಕೋಟಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಮೇಳದ ವ್ಯವಸ್ಥೆ ಬಗ್ಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಅವರು ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿವರಿಸಿದ್ದರು.
 2016: ವಾಷಿಂಗ್ಟನ್: ಸೂರ್ಯನ ಅತಿ ಸಮೀಪದ ವಲಯದಲ್ಲಿ ಕಪ್ಪು ಘನಾಕೃತಿಯೊಂದು ಗೋಚರಿಸಿರುವುದು ಖಗೋಲ ವಿಜ್ಞಾನಿಗಳ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆಸೌರ ವೀಕ್ಷಣಾಲಯದ ಮೂಲಕ ಸೂರ್ಯನ ಚಲನ ವಲನ ಗಮನಿಸುತ್ತಿದ್ದ ಸಂದರ್ಭ ವಿಭಿನ್ನ ಕಪ್ಪು ಘನಾಕೃತಿಯನ್ನು ಪತ್ತೆಹಚ್ಚಿದ್ದಾರೆ. ಖಚಿತವಾಗಿ ಹೆಸರಿಸಲಾಗದ ನಿಗೂಢ ತೇಲುವ ಘನಾಕೃತಿ ಮೇ 2ರಂದು ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕಿದೆ. ಮಂಗಳ ಗ್ರಹದ ಬಗ್ಗೆ ಸಂಶೋಧನೆ ನಡೆಸುತ್ತಿರುವ ಖಭೌತ ವಿಜ್ಞಾನಿ ಸ್ಕಾಟ್ ಸಿ.ವಾರಿಂಗ್ ಎಂಬವರು ಸೌರ ವಿದ್ಯಮಾನ ವೀಕ್ಷಣಾ ಉಪಗ್ರಹದ ಮೂಲಕ ಚಿತ್ರವನ್ನೂ ಸೆರೆ ಹಿಡಿದಿದ್ದಾರೆ. 2011ರಲ್ಲೂ ಇದೇ ರೀತಿ ತೇಲುವ ಕಪ್ಪು ಘನಾಕೃತಿ ಸೂರ್ಯನ ಮೇಲ್ಭಾಗದಲ್ಲಿ ಕಂಡುಬಂದಿತ್ತು. ಅದನ್ನು ಅನಿಲ ತುಂಬಿದ ಗೋಳ ಎಂದು ಗುರುತಿಸಲಾಗಿತ್ತು.

2016: ನವದೆಹಲಿ: ಚಿನ್ನ ಸೇರಿದಂತೆ ಬೆಳ್ಳಿಯೇತರ ಆಭರಣಗಳ ಮೇಲೆ ವಿಧಿಸಲಾದ ಶೇಕಡಾ 1 ಅಬಕಾರಿ ಸುಂಕವನ್ನು ಹಿಂತೆಗೆದುಕೊಳ್ಳಲು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ನಿರಾಕರಿಸಿದರು.
ವಿತ್ತ ಮಸೂದೆ 2016 ಮೇಲೆ ನಡೆದ ಚರ್ಚೆಗೆ ಲೋಕಸಭೆಯಲ್ಲಿ  ಉತ್ತರ ನೀಡಿದ ಸಚಿವರು ಸರ್ಕಾರದ ನಿಲುವಿಗೆ ಭದ್ರವಾಗಿ ಅಂಟಿಕೊಂಡುಅಬಕಾರಿ ಸುಂಕವು ಸಣ್ಣ ವರ್ತಕರು ಮತ್ತು ಕುಶಲಕರ್ಮಿಗಳಿಗೆ ಅನ್ವಯಿಸುವುದಿಲ್ಲ. 12 ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ವಹಿವಾಟು ನಡೆಸುವ ಚಿನ್ನಾಭರಣ ವ್ಯಾಪಾರಿಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಹೇಳಿದರು. ‘ಸೂಟ್ ವಿರೋಧ ಮತ್ತು ಚಿನ್ನ ಪ್ರೇಮಿ ರಾಜಕೀಯವನ್ನು ನನಗೆ ಅರ್ಥ ಮಾಡಿಕೊಳ್ಳಲಾಗುತ್ತಿಲ್ಲಎಂದು ಚುಚ್ಚಿದ ಜೇಟ್ಲಿ, ಚಿನ್ನ ಹಾಗೂ ಇತರ ಅಭರಣಗಲ ಮೇಲಿನ ಅಬಕಾರಿ ಸುಂಕವನ್ನು ವಿರೋಧಿಸುತ್ತಿರುವ ಕಾಂಗ್ರೆಸ್ಸನ್ನು ತರಾಟೆಗೆ ತೆಗೆದುಕೊಂಡರು. ಕಾಂಗ್ರೆಸ್ ಸುಂಕವನ್ನು ವಿರೋಧಿಸುವುದಾದರೆ ಅದು ಕಾಂಗ್ರೆಸ್ ಆಡಳಿತ ಇರುವ ಕೇರಳದಲ್ಲಿ ಚಿನ್ನದ ಮೇಲೆ ವಿಧಿಸಲಾಗಿರುವ ಶೇಕಡಾ 5 ವ್ಯಾಟ್ನ್ನು ತೆಗೆದುಹಾಕುವುದರೊಂದಿಗೆ ಆರಂಭವಾಗಬೇಕುಎಂದು ಜೇಟ್ಲಿ ನುಡಿದರು. ಚಿನ್ನಾಭರಣಗಳ ಮೇಲಿನ ಅಬಕಾರಿ ಸುಂಕವನ್ನು ವಿರೋಧಿಸಿದ ಚಿನ್ನಾಭರಣ ವರ್ತಕರು ದೇಶವ್ಯಾಪಿ ಮುಷ್ಕರವನ್ನೂ ನಡೆಸಿದ್ದರು.

2016: ನವದೆಹಲಿ: ವಿವಾದಿತ ಕುಟುಕು ಕಾರ್ಯಾಚರಣೆ ಕುರಿತ ವಿಡಿಯೋ ಸಿಡಿಗೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳವು (ಸಿಬಿಐ) ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಅವರಿಗೆ ಸಮನ್ಸ್ ಜಾರಿ ಮಾಡಿತು. ಖಾಸಗಿ ಸುದ್ದಿವಾಹಿನಿ ಒಂದರ ಮುಖ್ಯ ಸಂಪಾದಕರು ನಡೆಸಿದ್ದ ಕುಟುಕು ಕಾರ್ಯಾಚರಣೆಯ ಸಿಡಿಯನ್ನು 9 ಮಂದಿ ಬಂಡಾಯ ಕಾಂಗ್ರೆಸ್ ಸದಸ್ಯರು ವಿಧಾನಸಭೆಯ ವಿರೋಧಿ ಬಿಜೆಪಿ ಜೊತೆಗೆ ಸೇರಿಕೊಂಡು ಬಹಿರಂಗ ಪಡಿಸುವುದರೊಂದಿಗೆ ರಾಜ್ಯದಲ್ಲಿ ಭಾರಿ ರಾಜಕೀಯ ಬಿಕ್ಕಟ್ಟು ಉಂಟಾಗಿ, ರಾವತ್ ಅವರು ಅಧಿಕಾರವನ್ನೂ ಕಳೆದುಕೊಂಡಿದ್ದರು. ರಾವತ್ ಅವರು ಬಂಡಾಯ ಶಾಸಕರ ಬೆಂಬಲ ಗಳಿಸಲು ಪತ್ರಕರ್ತನ ಜೊತೆಗೆ ಹಣಕಾಸು ವ್ಯವಹಾರ ನಡೆಸಿದ್ದನ್ನು ಸಿಡಿ ತೋರಿಸಿತ್ತು. ರಾವತ್ ಅವರು ಮೇ 9ರಂದು ವಿಚಾರಣೆ ಸಲುವಾಗಿ ಸಿಬಿಐ ಕಚೇರಿಗೆ ಹಾಜರಾಗುವರು.. ವಿಡಿಯೋದಲ್ಲಿ ಇರುವುದು ತಾವೇ ಎಂಬುದನ್ನು ಮೇ 1ರಂದು ಒಪ್ಪಿಕೊಂಡಿದ್ದ ರಾವತ್ ಅವರುಪತ್ರಕರ್ತನ ಬಳಿ ಮಾತನಾಡಿದರೆ ತಪ್ಪೇನು?’ ಎಂದು ಪ್ರಶ್ನಿಸಿದ್ದರು.


2016:ನವದೆಹಲಿ:  ವೈಸ್ ಅಡ್ಮಿರಲ್ ಸುನಿಲ್ ಲಂಬಾ ಅವರು ಭಾರತೀಯ ನೌಕಾಪಡೆಯ ಮುಂದಿನ ಮುಖ್ಯಸ್ಥರಾಗಿ ನೇಮಕಗೊಂಡರು. ಲಂಬಾ ಅವರು ಮೇ 31ರಂದು ನೌಕಾಪಡೆಯ ಮುಂದಿನ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವರು. ನೌಕಾಪಡೆಯ ಹಾಲಿ ಮುಖ್ಯಸ್ಥ ಅಡ್ಮಿರಲ್ ಆರ್.ಕೆ. ಧವನ್ ಅವರ ನಿವೃತ್ತಿಯ ಕಾರಣ ಅವರ ಸ್ಥಾನಕ್ಕೆ ಲಂಬಾ ನೇಮಕಗೊಂಡಿದ್ದಾರೆ.

2016: ನವದೆಹಲಿ: ದೆಹಲಿಯಲ್ಲಿ ಮೇ 4ರಂದು ಬಂಧಿಸಲಾದ ಮೂವರು ಶಂಕಿತ ಜೈಷ್--ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಮೂವರ ಪೈಕಿ ಸಾಜಿದ್ ಎಂಬ ಒಬ್ಬ ವ್ಯಕ್ತಿ ಒಂದು ಬಾರಿ ರಿಯಾಲಿಟಿ ಟಿವಿ ಶೋಗಳಿಗಾಗಿ ನೃತ್ಯ ಮಾಡಿದ್ದ. ಮೂವರು ಪಠಾಣ್ ಕೋಟ್ ಮಾದರಿ ದಾಳಿಯನ್ನು ದೆಹಲಿಯಲ್ಲಿ ನಡೆಸಲು ಯೋಜಿಸಿದ್ದರು ಎಂಬುದು ಬೆಳಕಿಗೆ ಬಂದಿತು. ಸಾಜಿದ್ ತಯಾರಿಸುತ್ತಿದ್ದ ಬಾಂಬ್ ಅಚಾತುರ್ಯದಿಂದ ಸಿಡಿದ ಬಳಿಕ ಆತನನ್ನು ಬಂಧಿಸಲಾಗಿತ್ತು. ರಾಷ್ಟ್ರ ರಾಜಧಾನಿ ಅಥವಾ ಎನ್ಸಿಆರ್ ಮಾಲ್ಗಳಲ್ಲಿ ಮತ್ತು ದೆಹಲಿಯಿಂದ 30 ಕಿಮೀ ದೂರದ ಹಿಂಡನ್ ವಾಯುನೆಲೆಯಲ್ಲಿ ಪಠಾಣ್ಕೋಟ್ ಮಾದರಿಯ ದಾಳಿಗಳನ್ನು ನಡೆಸಲು ಸಾಜಿದ್ ಮತ್ತು ಬಂಧಿತರಾದ ಇನ್ನಿಬ್ಬರು ಶಂಕಿತ ಭಯೋತ್ಪಾದಕರು ಯೋಜಿಸಿದ್ದರು ಎಂದು ದೆಹಲಿ ಪೊಲೀಸರು ತಿಳಿಸಿದರು. ಬಂಧಿತರಾದ ಮೂವರನ್ನೂ ಹೆಚ್ಚಿನ ವಿಚಾರಣೆಗಾಗಿ 10 ದಿನಗಳ ಅವಧಿಗೆ ಪೊಲೀಸ್ ವಶಕ್ಕೆ ಒಪ್ಪಿಸಲಾಯಿತು. ರಾಜಧಾನಿಯ ಹಲವಡೆಗಳಲ್ಲಿ ಪೊಲೀಸರು ಇದೇ ವೇಳೆಗೆ ದಾಳಿ ನಡೆಸಿ ಇತರ 10 ಮಂದಿಯನ್ನೂ ವಶಕ್ಕೆ ತೆಗೆದುಕೊಂಡು ಪ್ರಶ್ನಿಸಿದರು. ದೆಹಲಿಯ ಸಾಜಿತ್ ಅಹ್ಮದ್, ಬಿಹಾರದ ದೇವಬಂದ್ ಶಕೀರ್ ಅನ್ಸಾರಿ ಮತ್ತು ಉತ್ತರ ಪ್ರದೇಶದ ಗಾಜಿಯಾಬಾದ್ ಸಮೀರ್ ಅಹ್ಮದ್ ಮೂವರನ್ನು ದೆಹಲಿಯ ಬೇರೆ ಬೇರೆ ಸ್ಥಳಗಳಲ್ಲಿ ಬಂದಿಸಲಾಗಿತ್ತು. ಮೂವರ ಭಯೋತ್ಪಾದನಾ ಯೋಜನೆಗಳು ಇನ್ನೂ ಪ್ರಾಥಮಿಕ ಹಂತದಲ್ಲಿದ್ದು, ಇವರು ಯೂ ಟ್ಯೂಬ್ ನೆರವಿನಿಂದ ಬಾಂಬ್ ತಯಾರಿ ಕಲೆಯನ್ನು ಕಲಿತಿದ್ದರು ಎಂದು ವರದಿಗಳು ಹೇಳಿದವು.
 2016: ರಾಯ್ಪುರ (ಛತ್ತೀಸ್ಗಢ): ಖಾಸಗಿ ಬಸ್ ಹಳ್ಳಕ್ಕೆ ಉರುಳಿದ ಪರಿಣಾಮ 16 ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟು, 53 ಮಂದಿ ಗಾಯಗೊಂಡರು. ಜಾರ್ಖಂಡ್ ರಾಜ್ಯದ ಗಢ್ವಾದಿಂದ ರಾಜಧಾನಿ ರಾಯ್ಪುರಕ್ಕೆ ಬರುತ್ತಿದ್ದ ಲಕ್ಸುರಿ ಬಸ್ ಧಲದೋವಾ ಘಾಟ್ ಸಮೀಪ ಮೇ 4ರ ರಾತ್ರಿ 10.30 ಸುಮಾರಿಗೆ ಉರುಳಿ ಈ ಅವಗಢ ಸಂಭವಿಸಿತು. ಬಸ್ಸನ್ನು ಹಿಂದಿಕ್ಕುವ ಸಲುವಾಗಿ ವೇಗವಾಗಿ ಬಂದ ಬೈಕ್ ಚಾಲಕನನ್ನು ಅಪಘಾತದಿಂದ ಉಳಿಸಲು ಯತ್ನಿಸಿದ ಬಸ್ ಚಾಲಕ ಸ್ಟೇರಿಂಗ್ ಮೇಲೆ ನಿಯಂತ್ರಣ ಕಳೆದುಕೊಂಡ. ಇದರ ಪರಿಣಾಮ ನೀರಿಲ್ಲದ ಹಳ್ಳಕ್ಕೆ ಬಸ್ ಉರುಳಿತು. ತಲೆಕೆಳಕಾಗಿ ಬಸ್ ಬಿದ್ದ ಕಾರಣ ಹೆಚ್ಚಿನ ಅನಾಹುತ ಸಂಭವಿಸಿದೆ ಎಂದು ಬಲರಾಂಪುರ್ ಜಿಲ್ಲಾ ಪೊಲೀಸ್ ವರಿಷ್ಠ ಸದಾನಂದಕುಮಾರ್ ತಿಳಿಸಿದರು.
2009: ಪ್ರೀತಿಸಿ ವಿವಾಹವಾದ ಚಿತ್ರನಟರಾದ ಶ್ರುತಿ, ಮಹೇಂದರ್ ಅವರ ದಶಕದ ದಾಂಪತ್ಯದಲ್ಲಿ ಅಪಶ್ರುತಿ ಮೂಡಿತು. ಶ್ರುತಿ ಅವರು ವಿವಾಹ ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದರು. ಮೇ 21ರಂದು 11ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳಬೇಕಾಗಿದ್ದ ಈ ದಂಪತಿಯ ವೈವಾಹಿಕ ಜೀವನ, ಕಾನೂನು ಸಮರಕ್ಕೆ ನಾಂದಿ ಹಾಡಿತು. ಶ್ರುತಿ ಅವರದ್ದು ಪ್ರೇಮ ವಿವಾಹ. 1998ರ ಮೇ 21ರಂದು ಒರಿಸ್ಸಾದ ಪುರಿಯ ಜಗನ್ನಾಥ ದೇವಾಲಯದಲ್ಲಿ ಇವರ ವಿವಾಹ ನೆರವೇರಿತ್ತು. 2002ರ ಜೂನ್ 6ರಂದು ಪುತ್ರಿ ಗೌರಿಗೆ ಶ್ರುತಿ ಜನ್ಮ ನೀಡಿದ್ದರು.

2009: ಪುರುಷರಿಗೆ ಯಾವುದೇ ಅಡ್ಡ ಪರಿಣಾಮವಿಲ್ಲದ ಸಂತಾನ ನಿರೋಧಕ ಚುಚ್ಚುಮದ್ದು ಕಂಡುಹಿಡಿಯುವಲ್ಲಿ ತಾವು ಯಶಸ್ವಿಯಾಗಿರುವುದಾಗಿ ಚೀನಾ ಸಂಶೋಧಕರು ಬೀಜಿಂಗ್‌ನಲ್ಲಿ ಪ್ರಕಟಿಸಿದರು. ಈ ಚುಚ್ಚುಮದ್ದು ಮಿದುಳಿನಲ್ಲಿ ಸೃಷ್ಟಿಯಾಗುವ ಎರಡು ಬಗೆಯ ನಿಯಂತ್ರಕ ರಾಸಾಯನಿಕಗಳ ಪ್ರಮಾಣ ಕುಗ್ಗಿಸಿ ವೀರ್ಯಾಣುಗಳ ಉತ್ಪಾದನೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯುತ್ತದೆ ಎಂದು ಹೇಳಲಾಯಿತು. ಈ ಮುಂಚೆ ಪುರುಷರಿಗಾಗಿ ಇದ್ದ ಸಂತಾನ ನಿರೋಧಕಗಳು ಚಂಚಲ ಚಿತ್ತತೆ, ಲೈಂಗಿಕ ವಾಂಛೆಯ ಕ್ಷೀಣಿಸುವಿಕೆ ಸೇರಿದಂತೆ ಹಲವು ಅಡ್ಡ ಪರಿಣಾಮಗಳನ್ನು ಬೀರುತ್ತವೆ ಎಂಬ ದೂರುಗಳು ಕೇಳಿಬಂದಿದ್ದವು. ಟೆಸ್ಟೋಸ್ಟಿರಾನ್ ಆಧರಿಸಿದ ಈ ಚುಚ್ಚುಮದ್ದನ್ನು ಪುರುಷರಿಗೆ ನೀಡಿ ಪರೀಕ್ಷೆಗೆ ಒಳಪಡಿಸಿದಾಗ ಶೇ 99 ಯಶಸ್ಸು ಸಿಕ್ಕಿದೆ ಎಂದು ಸಂಶೋಧಕರು ಪ್ರತಿಪಾದಿಸಿದರು. 1000 ಆರೋಗ್ಯವಂತ ಪುರುಷರ ಮೇಲೆ ಎರಡು ವರ್ಷ ಕಾಲ ಚುಚ್ಚುಮದ್ದು ನೀಡಿ ಇದನ್ನು ಖಚಿತ ಮಾಡಿಕೊಳ್ಳಲಾಗಿದೆ ಎಂದು ರಾಷ್ಟ್ರೀಯ ಕುಟುಂಬ ನಿಯಂತ್ರಣ ಸಂಶೋಧನಾ ಕೇಂದ್ರದ ಮುಖ್ಯ ಸಂಶೋಧಕ ಡಾ.ಯಿ ಕುನ್ ಗು ತಿಳಿಸಿದರು.

2008: ಮ್ಯಾನ್ಮಾರನ್ನು ಬಾಧಿಸಿದ ಭೀಕರ `ನರ್ಗೀಸ್' ಚಂಡಮಾರುತದಿಂದ ಸತ್ತವರ ಸಂಖ್ಯೆ 10 ಸಾವಿರ ದಾಟಿದೆ ಎಂದು ಸರ್ಕಾರಿ ಸ್ವಾಮ್ಯದ ರೇಡಿಯೊ ವರದಿ ಮಾಡಿತು. ಇರವಡ್ಡಿ ನದಿಯ ತಟದಲ್ಲಿರುವ ಬೊಗಾಲೇ ಪಟ್ಟಣವೊಂದರಲ್ಲೇ 3 ಸಾವಿರಕ್ಕೂ ಅಧಿಕ ಮಂದಿ ಸತ್ತರು.

2008: ಲಾಟ್ವಿಯ ಕರಾವಳಿ ಬಳಿ ನೆಲಕಚ್ಚಿದ ಐಷಾರಾಮಿ ವಿಹಾರ ನೌಕೆಯನ್ನು ಮೇಲೆತ್ತುವ ಕಾರ್ಯ ವಿಫಲವಾಯಿತು. ಅದರಲ್ಲಿ ಸಿಕ್ಕಿಹಾಕಿಕೊಂಡ ಸುಮಾರು 650 ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳಿಸಬೇಕಾಗಿದೆ ಎಂದು ಎಂದು ಸ್ಥಳೀಯ ಕರಾವಳಿ ರಕ್ಷಣಾ ಪಡೆ ತಿಳಿಸಿತು. ಬಾಲ್ಟಿಕ್ ಸಮುದ್ರದಿಂದ ರಿಗಾ ಬಂದರಿಗೆ ಹೊರಟಿದ್ದ ಬಹುತೇಕ ಜರ್ಮನ್ನರೇ ಇದ್ದ ಬಹಾಮಾ ನೋಂದಾಯಿತ `ಮೋನಾಲಿಸಾ' ಹೆಸರಿನ ಈ ನೌಕೆ ಇರ್ಬಿ ಕಡಲ್ಗಾಲುವೆಯಲ್ಲಿ ಸಿಕ್ಕಿಹಾಕಿಕೊಂಡಿತು.

2008: 1993ರ ಮುಂಬೈ ಸರಣಿ ಸ್ಫೋಟ ಪ್ರಕರಣದ ವಿಶೇಷ ಟಾಡಾ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸಿದ್ದ ಪ್ರಮೋದ್ ಕೋಡೆ ಅವರನ್ನು ನಾಸಿಕ್ ಜಿಲ್ಲಾ ನ್ಯಾಯಾಲಯಕ್ಕೆ ನ್ಯಾಯಾಧೀಶರನ್ನಾಗಿ ವರ್ಗಾವಣೆ ಮಾಡಲಾಯಿತು. ಬಾಂಬೆ ಹೈಕೋರ್ಟಿನ ಅಧಿಕೃತ ವೆಬ್ ಸೈಟಿನಲ್ಲಿ ಪ್ರಕಟವಾದ ಅಧಿಸೂಚನೆಯಲ್ಲಿ ಈ ವಿಷಯ ಬೆಳಕಿಗೆ ಬಂತು. ಕೋಡೆ ಅವರ ಸ್ಥಾನಕ್ಕೆ ನಾಗಪುರ ಜಿಲ್ಲಾ ನ್ಯಾಯಾಧೀಶ ಟಿ.ವಿ. ನಾಲ್ವಡೆ ಅವರನ್ನು ನೇಮಕ ಮಾಡಲಾಯಿತು. ಕೋಡೆ ಅವರು ದಾವೂದ್ ಇಬ್ರಾಹಿಂ ಶಾಮೀಲಾದ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣವನ್ನು ಒಟ್ಟು 13 ವರ್ಷಗಳ ಕಾಲ ವಿಚಾರಣೆ ನಡೆಸಿ 100 ಜನರಿಗೆ ಶಿಕ್ಷೆ ನೀಡಿದ್ದರು. ಅದರಲ್ಲಿ 12 ಮಂದಿ ಗಲ್ಲು ಶಿಕ್ಷೆ ಮತ್ತು 20 ಮಂದಿಗೆ ಜೀವಾವಧಿ ಶಿಕ್ಷೆಯನ್ನು ಅವರು ಘೋಷಿಸಿದ್ದರು. ಬಾಲಿವುಡ್ ನಟ ಸಂಜಯ್ ದತ್ ಅವರನ್ನು ಕೋಡೆ ಅವರೇ ವಿಚಾರಣೆ ನಡೆಸಿ, ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಏಳು ವರ್ಷಗಳ ಸೆರೆಮನೆ ವಾಸ ಶಿಕ್ಷೆಯನ್ನು ವಿಧಿಸಿದ್ದರು.

2008: ಸಾರ್ವಜನಿಕರ ಅನುಕೂಲದ ದೃಷ್ಟಿಯಿಂದ ಎಚ್ ಎ ಎಲ್ ವಿಮಾನ ನಿಲ್ದಾಣದಲ್ಲಿ ನಾಗರಿಕ ವಿಮಾನಯಾನವನ್ನು ಮುಂದುವರೆಸಿಕೊಂಡು ಹೋಗಬೇಕೆಂಬ ಬೇಡಿಕೆಯನ್ನು ಪರಿಶೀಲಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತು. ಬೆಂಗಳೂರಿನ ಸ್ವಯಂಸೇವಾ ಸಂಸ್ಥೆಯೊಂದು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಮತ್ತು ನ್ಯಾಯಮೂರ್ತಿ ಎಂ.ಕೆ. ಶರ್ಮಾ ` ಈ ವಿಷಯದಲ್ಲಿ ನಾವೂ ಕಳಕಳಿ ಹೊಂದಿದ್ದೇವೆ' ಎಂದರು.

2008: ರಾಷ್ಟ್ರಕವಿ ಡಾ. ಜಿ.ಎಸ್ .ಶಿವರುದ್ರಪ್ಪ ಅವರಿಗೆ ಬಸವ ವೇದಿಕೆಯು ಪ್ರಸಕ್ತ ಸಾಲಿನ `ಬಸವಶ್ರೀ' ಪ್ರಶಸ್ತಿ ನೀಡಿ ಗೌರವಿಸಲು ನಿರ್ಧರಿಸಿತು. ಶರಣ ಸಾಹಿತ್ಯದಲ್ಲಿ ಅಪಾರವಾದ ಕೃಷಿ ಮಾಡಿದ ಗುಲ್ಬರ್ಗ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಜಯಶ್ರೀ ದಂಡೆಯವರನ್ನು 2008ನೇ ಸಾಲಿನ `ವಚನ ಸಾಹಿತ್ಯ ಶ್ರೀ' ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು ಎಂದು ಎಂದು ಆಯ್ಕೆ ಸಮಿತಿಯ ಕಾರ್ಯಾಧ್ಯಕ್ಷ ಡಾ. ಸಿ. ಸೋಮಶೇಖರ್ ತಿಳಿಸಿದರು.

2008: ಕಿರಿಯ ಓಟಗಾರ ಬುಧಿಯಾ ಸಿಂಗ್ ಗೆ ತರಬೇತಿ ನೀಡಿದ್ದ ಬಿರಾಂಚಿ ದಾಸ್ ಅವರನ್ನು ಕೊಲೆ ಮಾಡಿದ್ದ ಆರೋಪಿ ಸಂದೀಪ್ ಆಚಾರ್ಯ ಅಲಿಯಾಸ್ ರಾಜ ಆಚಾರ್ಯನನ್ನು ಗೋವಾದಲ್ಲಿ ಬಂಧಿಸಲಾಯಿತು.

2008: ಹೆಣ್ಣಾಗಿ ಹುಟ್ಟಿತು ಎಂಬ ಕಾರಣಕ್ಕಾಗಿ ಕೇವಲ 5 ದಿನದ ಹಸುಗೂಸನ್ನು ಸ್ವಂತ ತಂದೆ ತಾಯಿಗಳೇ 60 ಅಡಿ ಆಳದ ಬಾವಿಗೆ ಎಸೆದ ಘೋರ ಘಟನೆ ಸೇಲಂ ಬಳಿ ಜರುಗಿದ್ದು ಬೆಳಕಿಗೆ ಬಂತು. ಆಶ್ಚರ್ಯವೆಂದರೆ 60 ಅಡಿ ಬಾವಿಗೆ ಎಸೆದರೂ ಆ ಎಳೆಯ ಕಂದಮ್ಮ ಬದುಕಿತು. ಮೇ 4ರಂದು ಕೊಂಡಲಪಟ್ಟಿ ಹಳ್ಳಿಯಲ್ಲಿನ 60 ಅಡಿ ಆಳದ ಬಾವಿಯೊಳಗಿಂದ ಮಗುವಿನ ಅಳುವಿನ ದನಿ ಕೇಳಿದ ಸಾರ್ವಜನಿಕರು ಕೂಡಲೇ ಅಗ್ನಿಶಾಮಕ ದಳದವರಿಗೆ ಸುದ್ದಿ ಮುಟ್ಟಿಸಿದರು. ತತ್ ಕ್ಷಣವೇ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ 40 ಅಡಿ ಆಳದ ಪೊದೆಯೊಂದರಲ್ಲಿ ಸಿಕ್ಕಿಬಿದ್ದು, ಮೈತುಂಬ ತರಚು ಗಾಯಗಳನ್ನು ಹೊಂದಿದ್ದ ಆ ಮಗುವನ್ನು ಸುರಕ್ಷಿತವಾಗಿ ಮೇಲಕ್ಕೆ ತಂದರು. ನಂತರ ಮಗುವಿಗೆ ಮೋಹನ್ ಕುಮಾರಮಂಗಲಂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಅನಾಥಾಶ್ರಮವೊಂದಕ್ಕೆ ಸೇರಿಸಲಾಯಿತು.

2008: ಕಲಾಪಕ್ಕೆ ಅಡ್ಡಿಯುಂಟುಮಾಡಿದ 32 ಲೋಕಸಭಾ ಸದಸ್ಯರ ದುರ್ವರ್ತನೆಯನ್ನು ಹಕ್ಕು ಚ್ಯುತಿ ಸಮಿತಿ ಮುಂದಿಡುವ ಅಪರೂಪದ ನಿರ್ಧಾರ ಕೈಗೊಂಡಿದ್ದ ಲೋಕಸಭಾ ಅಧ್ಯಕ್ಷ ಸೋಮನಾಥ ಚಟರ್ಜಿ ತಮ್ಮ ನಿರ್ಧಾರ ವಾಪಸು ಪಡೆದರು. ಇದರಿಂದಾಗಿ ಐದು ದಿನಗಳಿಂದ ಉದ್ಭವಿಸಿದ್ದ ಬಿಕ್ಕಟ್ಟು ಕೊನೆಗೊಂಡಿತು. ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಏಪ್ರಿಲ್ 24ರಂದು ಬಿಜೆಪಿ ನೇತೃತ್ವದ ಎನ್ ಡಿ ಎ ಸದಸ್ಯರು ಲೋಕಸಭೆ ಕಲಾಪಕ್ಕೆ ಅಡ್ಡಿ ಮಾಡಿದ್ದರು. ಸದನ ಸುಗಮವಾಗಿ ಸಾಗುವಂತೆ ಸೋಮನಾಥ ಚಟರ್ಜಿ ಪದೇಪದೇ ಮಾಡಿದ ಮನವಿ ವ್ಯರ್ಥವಾಗಿತ್ತು. ಇದರಿಂದ ಕೆರಳಿದ ಚಟರ್ಜಿ ಸದಸ್ಯರ ದುರ್ವರ್ತನೆಯನ್ನು ಹಕ್ಕು ಚ್ಯುತಿ ಸಮಿತಿಗೆ ಒಪ್ಪಿಸಲು ನಿರ್ಧರಿಸಿದ್ದರು.

2008: ಜೂನ್ ಒಂದರಿಂದ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 48ರ ಶಿರಾಡಿ ಘಾಟಿಯಲ್ಲಿ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗುವುದು ಎಂದು ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸುಧೀರ ಕೃಷ್ಣ ಸಕಲೇಶಪುರದಲ್ಲಿ ಪ್ರಕಟಿಸಿದರು. ಹೆದ್ದಾರಿಯ ಕಿ.ಮೀ 226 ರಿಂದ 264 ರ ವರೆಗಿನ 38ಕಿ.ಮೀ. ರಸ್ತೆ ಅಭಿವೃದ್ಧಿ ಕಾಮಗಾರಿ ಶೇ. 90 ಭಾಗ ಪೂರ್ಣಗೊಂಡಿದೆ. ಈ ಕಾಮಗಾರಿಯನ್ನು ಮೂರು ಭಾಗಗಳಾಗಿ ವಿಂಗಡಣೆ ಮಾಡಿ, ಮೂರು ಮಂದಿ ಗುತ್ತಿಗೆದಾರರಿಗೆ, ಗುತ್ತಿಗೆ ಆದಾರದ ಮೇಲೆ ನೀಡಲಾಗಿತ್ತು ಎಂದು ಅವರು ನುಡಿದರು.

2008: ವಿಶೇಷ ಒಲಿಂಪಿಕ್ ಜ್ಯೋತಿಯ ಎವರೆಸ್ಟ್ ಯಾತ್ರೆ ಈದಿನವೂ ನಡೆಯಲಿಲ್ಲ. ಹಿಮಪಾತ ಉಂಟಾಗಿದ್ದ ಕಾರಣ ಜ್ಯೋತಿಯ ಯಾತ್ರೆಗೆ ಅಡ್ಡಿಯುಂಟಾಗಿತ್ತು.

2008: ಹತ್ತು ಕೋಟಿ ರೂಪಾಯಿಗಳ ಚೆಕ್ ಅಮಾನ್ಯಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರನಟಿ ಶ್ರೀದೇವಿ ಮತ್ತು ಮಹಾರಾಷ್ಟ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿತು. ಮುಂಬೈಯ ಫೋಟೋ ಫಿಲ್ಮ್ ಸರಬರಾಜುದಾರ ಹಾಗೂ ಫೈನಾನ್ಸಿಯರ್ ಜಿ.ಜಿ. ಫೋಟೋ ಲಿಮಿಟೆಡ್, ಫೋಟೋ ಫಿಲ್ಮ್ ಇಂಡಸ್ಟೀಸ್ ಮತ್ತು ಫೋಟೋ ಇಂಡಸ್ಟ್ರೀಸ್ ಸಲ್ಲಿಸಿದ ಅರ್ಜಿ ಸಂಬಂಧವಾಗಿ ಪ್ರತಿಕ್ರಿಯೆ ನೀಡುವಂತೆ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ನೇತೃತ್ವದ ಪೀಠವು ಚಿತ್ರನಟಿ ಮತ್ತು ಮಹಾರಾಷ್ಟ್ರ ಸರ್ಕಾರಕ್ಕೆ ಸೂಚಿಸಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರನಟಿ ಶ್ರೀದೇವಿ ವಿರುದ್ಧ ಕ್ರಿಮಿನಲ್ ಖಟ್ಲೆ ಹೂಡದಂತೆ ಬಾಂಬೆ ಹೈಕೋರ್ಟ್ ನೀಡಿದ ಆದೇಶವನ್ನು ಅರ್ಜಿದಾರರು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿದ್ದರು. ಚಿತ್ರನಟಿ ಶ್ರೀದೇವಿ ಅವರು ನೀಡಿದ ವಿಜಯಾಬ್ಯಾಂಕಿನ ಸಾಂತಾಕ್ರೂಜ್ ಶಾಖೆಯ ಮೂರು ಚೆಕ್ಕುಗಳು ಖಾತೆಯಲ್ಲಿ ಸಾಕಷ್ಟು ಹಣವಿರದ  ಕಾರಣ ಅಮಾನ್ಯಗೊಂಡಿವೆ ಎಂದು ಮೂರು ಸಂಸ್ಥೆಗಳ ಮಾಲೀಕರಾದ ಮಧು ಗುಪ್ತ ಮತ್ತು ಸುಶೀಲ್ ಗುಪ್ತ ತಮ್ಮ ಅರ್ಜಿಯಲ್ಲಿ ಆಪಾದಿಸಿದ್ದರು.

2008: ದಲಾಯಿ ಲಾಮಾ ಪ್ರತಿನಿಧಿಗಳು ಮತ್ತು ಚೀನಾ ನಡುವಣ ಬಹು ನಿರೀಕ್ಷಿತ ಮಾತುಕತೆ ಈದಿನ ಆರಂಭವಾದ ಎರಡು ಗಂಟೆಗಳ ಬಳಿಕ ಹಠಾತ್ತನೆ ಅಂತ್ಯಗೊಂಡಿತು. ಟಿಬೆಟಿನಲ್ಲಿ ಕಳೆದ ಮಾರ್ಚ್ ತಿಂಗಳಲ್ಲಿ ಅಶಾಂತಿ ಭುಗಿಲೆದ್ದ ಬಳಿಕ ಉಭಯ ಕಡೆಗಳು ಇದೇ ಮೊತ್ತ ಮೊದಲ ಬಾರಿಗೆ ಸಭೆ ಸೇರಿದ್ದವು.

2007: ತಮಿಳುನಾಡಿನ ರಣಜಿ ಆಟಗಾರ ಶ್ರೀಧರನ್ ಶರತ್ ಅವರು ಚೆನ್ನೈಯಲ್ಲಿ ಪ್ರಥಮ ದರ್ಜೆ ಕ್ರಿಕೆಟ್ಟಿಗೆ ವಿದಾಯ ಘೋಷಿಸಿದರು. ಕಳೆದ 15 ವರ್ಷಗಳಿಂದ ಅವರು ದೇಸೀ ಕ್ರಿಕೆಟ್ಟಿನಲ್ಲಿ ತಮಿಳುನಾಡು ತಂಡವನ್ನು ಪ್ರತಿನಿಧಿಸಿದ್ದರು.

2007: ಕರ್ನಾಟಕದ ಮಾಜಿ ಶಾಸಕ, ಹಿರಿಯ ವಕೀಲ ಕೆ.ಪಿ. ನಾಡಗೌಡ ಮುಧೋಳದಲ್ಲಿ ನಿಧನರಾದರು. ಮುಧೋಳ ಕ್ಷೇತ್ರದಲ್ಲಿ
1965-1976ರ ನಡುವಣ ಅವಧಿಯಲ್ಲಿ ಅವರು ಎರಡು ಸಲ ಚುನಾಯಿತರಾಗಿದ್ದರು. ಅವರು ಕಡಿದಾಳ್ ಮಂಜಪ್ಪ ಮತ್ತು ದೇವರಾಜ ಅರಸು ಅವರ ನಿಕಟವರ್ತಿಗಳಾಗಿದ್ದರು.

2007: ನಾಸಿಕ್ ಸಮೀಪದ ಸಿನ್ಹಾರಿನಲ್ಲಿ ನಡುರಾತ್ರಿ ವೇಳೆಯಲ್ಲಿ ಸಂಭವಿಸಿದ ರಾಸಾಯನಿಕ ಕಾರ್ಖಾನೆ ಸ್ಫೋಟದಲ್ಲಿ 20 ಮಂದಿ ಮೃತರಾಗಿ ಇತರ 10 ಮಂದಿ ಗಾಯಗೊಂಡರು.

2007: ದೇಶದಾದ್ಯಂತ ಚರ್ಚೆಗೆ ಕಾರಣವಾಗಿದ್ದ ಮುಂಬೈ ಅಪಘಾತ ಪ್ರಕರಣದಲ್ಲಿ ಅಲಿಸ್ಟರ್ ಪೆರೇರಾ ಎಂಬ ಯುವ ಉದ್ಯಮಿಗೆ ಆರು ತಿಂಗಳ ಲಘು ಸಜೆ ವಿಧಿಸಿ ತೀರ್ಪು ನೀಡಿದ್ದ ನ್ಯಾಯಾಧೀಶ ಅಜಿತ್ ಮಿಶ್ರ ಅವರು ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು. ಮುಂಬೈಯ ಬಾಂದ್ರಾದ ಫುಟ್ ಪಾತಿನಲ್ಲಿ ಮಲಗಿದ್ದವರ ಮೇಲೆ ಕಾರು ಹತ್ತಿಸಿದ ಅಲಿಸ್ಟರ್ 7 ಜನರ ಸಾವಿಗೆ ಕಾರಣನಾಗಿದ್ದ.

2007: ಸರಳ ಸಾಮೂಹಿಕ ವಿವಾಹ ಜನಪ್ರಿಯಗೊಳಿಸಲು ರಾಜ್ಯ ಸರ್ಕಾರವು ಮುಂಗಡಪತ್ರದಲ್ಲಿ ಪ್ರಕಟಿಸಿದ `ಆದರ್ಶ ವಿವಾಹ' ಯೋಜನೆಯ ಅಧಿಕೃತ ಆದೇಶ ಹೊರಬಿದ್ದಿತು.

2007: ಝೀ ಟಿವಿ ಚಾನೆಲ್ಲಿನ ಸಾಹಸಗಳ ಸರಮಾಲೆ `ಶಹಬ್ಬಾಸ್ ಇಂಡಿಯಾ' ಮಾಲಿಕೆಯ ಬುಕ್ ಆಫ್ ರೆಕಾರ್ಡಿನಲ್ಲಿ ಕುಂದಾಪುರದ ಬಾಲ ಈಜುಪಟು ಹರ್ಷಿತ್ ಎನ್ ಖಾರ್ವಿ (12) ದಾಖಲಾದನು. ಈತ ಗಂಗೊಳ್ಳಿ ಲೈಟ್ಹೌಸ್ ಸಮುದ್ರ ಕಿನಾರೆಯಿಂದ ಪಂಚಗಂಗಾವಳಿ ನದಿಯವರೆಗಿನ ಸುಮಾರು 25 ಕಿ.ಮೀ. ದೂರವನ್ನು ಸಂಕೋಲೆ ತೊಟ್ಟು ಈಜುವ ಮೂಲಕ ದಾಖಲೆ ನಿರ್ಮಿಸಿದ.

2007: ದಕ್ಷಿಣ ಕ್ಯಾಮರೂನಿನಲ್ಲಿ ಕೀನ್ಯಾ ಏರ್ ವೇಸ್ ವಿಮಾನ ಅಪಘಾತಕ್ಕೆ ಈಡಾಗಿ 15 ಭಾರತೀಯರ ಸಹಿತ 115 ಜನ ಮೃತರಾದರು. ಈ ವಿಮಾನ ಹೊರಟ ಕೆಲವೇ ಕ್ಷಣಗಳಲ್ಲಿ ಕಣ್ಮರೆಯಾಗಿ ನಂತರ ಅಪಘಾತಕ್ಕೆ ಈಡಾಗಿರುವುದು ಪತ್ತೆಯಾಯಿತು.

2006: ಭಾರತೀಯ ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ಸಂಗೀತ ನಿರ್ದೇಶಕರಲ್ಲಿ ಒಬ್ಬರಾದ, ಭಾರತೀಯ ಚಿತ್ರ ಸಂಗೀತಕ್ಕೆ ಹೊಸ ಆಯಾಮ ನೀಡಿದ್ದ ಹಿರಿಯ ಸಂಗೀತ ನಿರ್ದೇಶಕ ನೌಷಾದ್ ಅಲಿ (86) ಅವರು ಮುಂಬೈಯ ನಾನಾವತಿ ಆಸ್ಪತ್ರೆಯಲ್ಲಿ ಬೆಳಗ್ಗೆ ಹೃದಯ ಸ್ಥಂಭನದಿಂದ ಅಸು ನೀಗಿದರು.

2006: ಖ್ಯಾತ ಕೊಳಲುವಾದಕ ವಿದ್ವಾನ್ ಎಂ.ಆರ್. ದೊರೆಸ್ವಾಮಿ (84) ಅವರು ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾದರು. ಚಿಕ್ಕಮಗಳೂರಿನವರಾದ ದೊರೆಸ್ವಾಮಿ 10ನೇ ವಯಸ್ಸಿನಲ್ಲೇ ಕೊಳಲುವಾದನ ಆರಂಭಿಸಿದ್ದರು.

2006: ಕಲ್ಪನಾ ಚಾವ್ಲಾ ಅವರ ಬಳಿಕ ಇದೀಗ ಭಾರತೀಯ ಮೂಲದ ಎರಡನೇ ಮಹಿಳಾ ಗಗನಯಾನಿಯಾಗಿ ಅಮೆರಿಕ ಬಾಹ್ಯಾಕಾಶ ಯೋಜನಾ ಇಲಾಖೆಯು ಸುನೀತಾ ವಿಲಿಯಮ್ಸ್ ಅವರನ್ನು ಆಯ್ಕೆ ಮಾಡಿತು. ಮೂಲತಃ ಸುನೀತಾ ಪಾಂಡ್ಯ ಆಗಿದ್ದ ಈಕೆ ಪ್ರಸ್ತುತ ಸುನೀತಾ ವಿಲಿಯಮ್ಸ್ ಎಂದೇ ಖ್ಯಾತಳಾಗಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಗಗನಕ್ಕೆ ಏರಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಒಬ್ಬ ಗಗನಯಾನಿಯನ್ನು ಭೂಮಿಗೆ ಕಳುಹಿಸಿ, ತಾವು ಆರು ತಿಂಗಳ ಕಾಲ ಅಲ್ಲೇ ಉಳಿಯಲಿದ್ದಾರೆ ಎಂದು ಪ್ರಕಟಿಸಲಾಯಿತು.

1992: ಮಹಿಳೆಯರಿಗೆ ಮೀಸಲಾದ ಸಬರ್ಬನ್ ರೈಲ್ವೇಸೇವೆಯನ್ನು ಜಗತ್ತಿನಲ್ಲೇ ಮೊತ್ತ ಮೊದಲ ಬಾರಿಗೆ ಮುಂಬೈಯ ಪಶ್ಚಿಮ ರೈಲ್ವೇ ವಿಭಾಗವು ಆರಂಭಿಸಿತು.

1965: ಕಲಾವಿದ ಗುರುದತ್ ಎಂ.ಎಸ್. ಜನನ.

1957: ಮೈಸೂರು ಸಂಸ್ಥಾನದ ಗೇಣಿಗೆ ಸಂಬಂಧಿಸಿದ ನಾಲ್ಕು ಮಸೂದೆಗಳಿಗೆ ರಾಷ್ಟ್ರಪತಿಗಳು ತಮ್ಮ ಅಂಗೀಕಾರವನ್ನಿತ್ತರು. ಏಕರೀತಿಯ ಶಾಸನ ಜಾರಿಗೆ ಬರುವ ತನಕ, ಮೈಸೂರು ರಾಜ್ಯದ ವಿವಿಧ ಭಾಗಗಳಲ್ಲಿ ಜಾರಿಯಲ್ಲಿರುವ ವಿವಿಧ ಗೇಣಿ ಶಾಸನಗಳನ್ನು ಯಥಾಸ್ಥಿತಿಯಲ್ಲಿ ಇಡುವ ಬಗ್ಗೆ ಮೊದಲೇ ತರಲಾಗಿದ್ದ ತುರ್ತು ಶಾಸನಕ್ಕೆ ಬದಲು ಈ ಮಸೂದೆಗಳನ್ನು ಮಂಡಿಸಲಾಗಿತ್ತು.

1956: ಕೊಣನೂರಿನ ಸಂಗೀತ ಹಾಗೂ ಹರಿಕಥಾ ವಿದ್ವಾಂಸರ ಮನೆತನದಿಂದ ಬಂದ ಕರ್ನಾಟಕ ಸಂಗೀತ ಕಲಾವಿದೆ ಗೀತಾ ಬಾಲಸುಬ್ರಹ್ಮಣ್ಯಂ ಅವರು ಸಂಗೀತ ವಿದ್ವಾಂಸ ರಾಮಕೃಷ್ಣ ಶಾಸ್ತ್ರಿ- ಲೇಖಕಿ ವಾಗೀಶ್ವರಿ ಶಾಸ್ತ್ರಿ ದಂಪತಿಯ ಮಗನಾಗಿ ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಜನಿಸಿದರು.

1948: ಕಲಾವಿದ ಶಿವರಾಜ ಗವಾಯಿ ಜನನ.

1945: ಕಲಾವಿದೆ ಧನಲಕ್ಷ್ಮಿ ಎಸ್. ಜನನ.

1938: ಕಲಾವಿದ ಕೃಷ್ಣರಾವ್ ಇನಾಂದಾರ್ ಜನನ.

1916: ಗಿಯಾನಿ ಜೈಲ್ ಸಿಂಗ್ (1916-94) ಜನ್ಮದಿನ. 1982-1987 ರವರೆಗೆ ಇವರು ಭಾರತದ ರಾಷ್ಟ್ರಪತಿಯಾಗಿದ್ದರು.

1821: ನೆಪೋಲಿಯನ್ ಬೋನಪಾರ್ಟೆ ಸೈಂಟ್ ಹೆಲೆನಾ ದ್ವೀಪದಲ್ಲಿ ಅಸುನೀಗಿದ. ವಿಷಸೇವನೆಯಿಂದ ಆತ ಮೃತನಾದ ಎಂದು ನಂಬಲಾಗಿದೆ. ಆದರೂ ಆತನ ಸಾವಿಗೆ ಕಾರಣ ಏನೆಂಬುದು ಇಂದಿನವರೆಗೂ ಚರ್ಚೆಯ ವಿಷಯವಾಗಿಯೇ ಉಳಿದಿದೆ.
1818: ಜರ್ಮನ್ ತತ್ವಜ್ಞಾನಿ, ಕಮ್ಯೂನಿಸಂ ಸ್ಥಾಪಕ ಕಾರ್ಲ್ ಮಾರ್ಕ್ಸ್ ಜರ್ಮನಿಯ ಟ್ರೈಯರಿನಲ್ಲಿ ಹುಟ್ಟಿದ.

1760: ಅರ್ಲ್ ಫೆರ್ರೆರ್ಸ್ ನಿಗೆ ಮರಣದಂಡನೆ ವಿಧಿಸಲು `ಹ್ಯಾಂಗ್ ಮನ್ಸ್ ಡ್ರಾಪ್'ನ್ನು ಮೊತ್ತ ಮೊದಲ ಬಾರಿಗೆ ಲಂಡನ್ನಿನ ಟೈಬರ್ನಿನಲ್ಲಿ ಬಳಸಲಾಯಿತು.

1766: ಭಾರತದಲ್ಲಿ ಬ್ರಿಟಿಷರೊಡನೆ ನಡೆದ 7 ವರ್ಷಗಳ ಯುದ್ಧದಲ್ಲಿ ಶರಣಾಗತನಾದುದಕ್ಕಾಗಿ ಆಗ ಭಾರತದಲ್ಲಿ ಫ್ರೆಂಚ್ ಪಡೆಗಳ ನಾಯಕನಾಗಿದ್ದ ಜನರಲ್ ಕಾಮ್ಟೆ ಡೆ ಲಾಲ್ಲಿಗೆ ಪ್ಯಾರಿಸ್ಸಿನಲ್ಲಿ ಮರಣದಂಡನೆ ವಿಧಿಸಲಾಯಿತು

No comments:

Post a Comment