Thursday, May 3, 2018

ಇಂದಿನ ಇತಿಹಾಸ History Today ಮೇ 02

ಇಂದಿನ ಇತಿಹಾಸ History Today ಮೇ 02

2018:  ನವದೆಹಲಿ: ಹಿರಿಯ ನಾಗರಿಕರಿಗೆ ಒಂದಷ್ಟು ನಿರಾಳತೆ ನೀಡುವ ಕ್ರಮವಾಗಿ ಕೇಂದ್ರ ಸರ್ಕಾರವು ಪಿಎಂವಿವಿವೈ (ಪ್ರಧಾನಮಂತ್ರಿ ವಯ ವಂದನಾ ಯೋಜನೆ) ಪಿಂಚಣಿ ಜೋಜನೆಯಲ್ಲಿನ ಹೂಡಿಕೆ ಮಿತಿಯನ್ನು ದುಪ್ಪಟ್ಟುಗೊಳಿಸಿ, ೧೫ ಲಕ್ಷ ರೂಪಾಯಿಗಳಿಗೆ ಏರಿಸಿದೆ. ಜೊತೆಗೇ ಮೇ 3ರ ಗುರುವಾರ ಮುಕ್ತಾಯವಾಗಲಿದ್ದ ಚಂದಾ ಅವಧಿಯನ್ನು ಎರಡು ವರ್ಷಗಳಷ್ಟು ಅವಧಿಗೆ ವಿಸ್ತರಿಸಿತು. ಪಿಎಂವಿವಿವೈ ಪಿಂಚಣಿ ಯೋಜನೆಯನ್ನು ೬೦ ವರ್ಷ ಮತ್ತು ಹೆಚ್ಚಿನ ವಯಸ್ಸಿನ ನಾಗರಿಕರ ಸಲುವಾಗಿ ರೂಪಿಸಲಾಗಿದೆ. ೨೦೧೭ರ ಮೇ ೪ರಿಂದ ೨೦೧೮ರ ಮೇ ೩ರವರೆಗೆ ಈ ಯೋಜನೆಗೆ ಚಂದಾದಾರರಾಗಲು ಅವಕಾಶವಿತ್ತು. ಈಗ ಚಂದಾದಾರರಾಗುವ ಅವಧಿಯನ್ನು ೨೦೨೦ರ ಮಾರ್ಚ್ ೩೧ರವರೆಗೆ ವಿಸ್ತರಿಸಲಾಗಿದೆ. ಯೋಜನೆಯು ೧೦ ವರ್ಷಗಳ ಅವಧಿಗೆ ವಾರ್ಷಿಕ ಶೇಕಡಾ ೮ರ ದರದ ಆದಾಯವನ್ನು ಒದಗಿಸುವ ಖಚಿತತೆಯನ್ನು ನೀಡುತ್ತದೆ. ಈ ಪಿಂಚಣಿಯನ್ನು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕ ಆಧಾರದಲ್ಲಿ ಪಡೆಯುವ ಅವಕಾಶವಿದೆ.  ಈದಿನ  ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟದ ಸಭೆಯಲ್ಲಿ ಪಿಎಂವಿವಿವೈ ಗೆ ಸಂಬಂಧಿಸಿದ ನಿರ್ಧಾರ ಕೈಗೊಳ್ಳಲಾಯಿತು ಎಂದು ಮಾಹಿತಿ ತಂತ್ರಜ್ಞಾನ ಮತ್ತು ಕಾನೂನು ಸಚಿವ ರವಿ ಶಂಕರ ಪ್ರಸಾದ್ ಹೇಳಿದರು.  ಸಚಿವ ಸಂಪುಟವು ಪಿಎಂವಿವಿವೈ ಯೋಜನೆಯಲ್ಲಿನ ಹೂಡಿಕೆ ಮಿತಿಯನ್ನು ೭.೫ ಲಕ್ಷ ರೂಪಾಯಿಗಳಿಂದ ೧೫ ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲು ಮತು ಚಂದಾ ಅವಧಿಯನ್ನು ಎರಡು ವರ್ಷಗಳ ಅವಧಿಗೆ ವಿಸ್ತರಿಸಲು ಅನುಮೋದನೆ ನೀಡಿತು. ಆರ್ಥಿಕ ಸಾಮಾಜಿಕ ಸುರಕ್ಷತೆಗೆ ಸಂಬಂಧಿಸಿದ ಸರ್ಕಾರದ ಬದ್ಧತೆಯ ಅಂಗವಾಗಿ ಈ ಯೋಜನೆಯನ್ನು ಸರ್ಕಾರ ಆರಂಭಿಸಿದೆ.  ಸರ್ಕಾರದ ಕ್ರಮದಿಂದ ಯೋಜನೆಯ ಅಡಿಯಲ್ಲಿ ಹಿರಿಯ ನಾಗರಿಕರಿಗೆ ೧೦,೦೦೦ ರೂಪಾಯಿಗಳವರೆಗಿನ ಖಚಿತ ವರಮಾನ ಪಡೆಯಲು ಸಾಧ್ಯವಾಗುತ್ತದೆ ಎಂದು ಪ್ರಸಾದ್ ಹೇಳಿದರು.  ೨೦೧೮ರ ಮಾರ್ಚ್ ವರೆಗಿನ ಅಂಕಿಸಂಖ್ಯೆಗಳ ಪ್ರಕಾರ ೨.೨೩ ಲಕ್ಷ ಹಿರಿಯ ನಾಗರಿಕರು ಪಿಎಂವಿವಿವೈ ಯೋಜನೆಗೆ ಚಂದಾದಾರರಾಗಿದ್ದಾರೆ. ಹಿಂದಿನ ವರಿಷ್ಠ ಪಿಂಚಣಿ ಬಿಮಾ ಯೋಜನೆ- ೨೦೧೪ರ ಅಡಿಯಲ್ಲಿ ೩.೧೧ ಲಕ್ಷ ಹಿರಿಯ ನಾಗರಿಕರು ಹಣ ಹೂಡಿಕೆ ಮಾಡಿದ್ದರು.  ಪಿಎಂ ವಿವಿವೈ ಪಿಂಚಣಿ ಯೋಜನೆಯನ್ನು ಭಾರತೀಯ ಜೀವ ವಿಮಾ ನಿಗಮ (ಎಲ್ ಐಸಿ) ಮೂಲಕ ೬೦ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯರಿಗೆ ಸಾಮಾಜಿಕ ಭದ್ರತೆ ಒದಗಿಸುವ ಸಲುವಾಗಿ ರೂಪಿಸಲಾಗಿದೆ. ಅನಿಶ್ಚಿತ ಮಾರುಕಟ್ಟೆ ಪರಿಸ್ಥಿತಿಯಲ್ಲಿ ಅವರ ಹೂಡಿಕೆಗೆ ಬರುವ ಬಡ್ಡಿ ಆದಾಯ ಕುಸಿಯದಂತೆ ಈ ಯೋಜನೆಯು ರಕ್ಷಣೆ ಒದಗಿಸುತ್ತದೆ.
ಎಲ್ ಐಸಿ ಮೂಲಕ ಒದಗಿಸಲಾಗುವ ಗಳಿಕೆ ಮತ್ತು ಶೇಕಡಾ ೮ರ ಭರವಸೆ ನೀಡಲಾದ ವಾರ್ಷಿಕ ಗಳಿಕೆಯ ನಡುವಣ ವ್ಯತ್ಯಾಸದ ಹಣವನ್ನು ಸರ್ಕಾರವ ವಾರ್ಷಿಕ ಸಬ್ಸಿಡಿಯ ಮೂಲಕ ಭರಿಸುತ್ತದೆ.

2018: ಶ್ರೀನಗರ : ಜಮ್ಮು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಝವೂರಾದಲ್ಲಿ ಬೆಳಗ್ಗೆ ಖಾಸಗಿ ಶಾಲಾ ಬಸ್ಸಿಗೆ ದುಷ್ಕರ್ಮಿಗಳು ಕಲೆಸೆತ ನಡೆಸಿದ ಪರಿಣಾಮವಾಗಿ ಇಬ್ಬರು ಶಾಲಾ ಮಕ್ಕಳು ಗಾಯಗೊಂಡರು.  ರೈನ್ ಬೋ ಹೈಸ್ಕೂಲ್ ಎಂಬ ಖಾಸಗಿ ಶಾಲೆಯ ಬಸ್ಸಿನ ಮೇಲೆ ದುಷ್ಕರ್ಮಿಗಳು ನಡೆಸಿದ ಕಲ್ಲೆಸೆತದಲ್ಲಿ ಎರಡನೇ ತರಗತಿಯ ಮಗುವೋಂದರ ತಲೆಗೆ ಗಂಭೀರ ಏಟು ಬಿದ್ದಿದ್ದು, ಇನ್ನೊಂದು ಮಗುವೂ ಕಲ್ಲೇಟಿನಿಂದ ಗಾಯಗೊಂಡಿತು. ಮಕ್ಕಳಿಬ್ಬರನ್ನೂ ತತ್ ಕ್ಷಣವೇ ಶೇರ್-ಈ- ಕಾಶ್ಮೀರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಗೆ ದಾಖಲಿಸಲಾಯಿತು.  ಘಟನೆಯ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿ ಮಾಹಿತಿ ನೀಡಿದ ಶೋಪಿಯಾನ್ ಎಸ್ಸೆಸ್ಪಿ ಶೈಲೇಂದ್ರ ಕುಮಾರ್ ಅವರು, "ಇಂದು ಬೆಳಗ್ಗೆ ಕೆಲವು ದುಷ್ಕರ್ಮಿಗಳು ಖಾಸಗಿ ಶಾಲೆಯ ಬಸ್ಸನ್ನು ಘೇರಾವ್ ಮಾಡಿ ಕಲ್ಲೆಸೆದರು. ೨ನೇ ತರಗತಿಯ ಮಗು ವಿನ ತಲೆಗೆ ಗಾಯವಾದುದು ಸೇರಿ ಇಬ್ಬರು ಮಕ್ಕಳಿಗೆ ಗಾಯಗಳಾದವು. ಅವರನ್ನು ಕೂಡಲೇ ಆಸ್ಪತ್ರೆಗೆ ಒಯ್ದು ಚಿಕಿತ್ಸೆ ನೀಡಲಾಯಿತು. ಘಟನೆಯನ್ನು ಅನುಸರಿಸಿ ಕಲ್ಲೆಸೆದ ದುಷ್ಕರ್ಮಿಗಳನ್ನು ಸೆರೆ ಹಿಡಿಯಲು ಇಡಿಯ ಪ್ರದೇಶವನ್ನು ಪೊಲೀಸರು ಸುತ್ತುವರಿದರು. ದುಷ್ಕಮಿಗಳನ್ನು ಬೇಗನೆ ಬಂಧಿಸಲಾಗುವುದು ಎಂದು ತಿಳಿಸಿದರು.  ಘಟನೆಯ ಬಗ್ಗೆ ಆಘಾತ, ಆಕ್ರೋಶ ವ್ಯಕ್ತಪಡಿಸಿ  ಖಂಡಿಸಿದ  ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರು ದಾಳಿಕೋರರನ್ನು ಬೇಗನೆ ಸೆರೆ ಹಿಡಿಯಲಾಗುವುದು ಎಂದು ಹೇಳಿದರು. ’ಈ ಮತಿಗೇಡಿ ಹೇಡಿ ದಾಳಿ ನಡೆಸಿದ ದುಷ್ಕರ್ಮಿಗಳಿಗೆ ಶಿಕ್ಷೆ ವಿಧಿಸಲಾಗುವುದು ಎಂದು ಅವರು ಟ್ವೀಟ್ ಮಾಡಿದರು.  ಮಾಜಿ ಮುಖ್ಯಮಂತ್ರಿ ಉಮರ್ ಅಬ್ದುಲ್ಲ ಅವರು ಘಟನೆಯನ್ನು ಖಂಡಿಸಿ "ಶಾಲಾ ಮಕ್ಕಳ ಮೇಲೆ ಕಲ್ಲೆಸೆಯುವ ಮೂಲಕ ದುಷ್ಕರ್ಮಿಗಳ ಯಾವ ಉದ್ದೇಶ ಈಡೇರಲು ಸಾಧ್ಯ? ಇದನ್ನು ನಾವೆಲ್ಲರೂ ಒಗ್ಗೂಡಿ ಏಕಮತದಿಂದ ಖಂಡಿಸಬೇಕು ಎಂದು ಟ್ವೀಟ್ ಮಾಡಿದರು.  ಕಲ್ಲೆಸೆಯುವ ಕೆಲವರು ತಮಗೆ ನೀಡಲಾದ ಕ್ಷಮಾದಾನದ ಸಮರ್ಪಕ ಬಳಕೆಯನ್ನು ಮಾಡುತ್ತಿಲ್ಲ. ತಮಗೆ ನೀಡಿದ ಕ್ಷಮಾದಾನವು ಕಲ್ಲೆಸೆಯುವ ತಮ್ಮ ಗೂಂಡಾ ವರ್ತನೆಗೆ ನೀಡಿದ ಪ್ರೋತ್ಸಾಹ ಎಂದು ಭಾವಿಸಿದ್ದಾರೆ ಎಂದು ಒಮರ್ ಹೇಳಿದರು.  ಕಲ್ಲೇಟಿನ ದಾಳಿಗೆ ಗರಿಯಾದ ಬಸ್ಸಿನಲ್ಲಿ ೩೫ ಮಂದಿ ಮಕ್ಕಳಿದ್ದರು. ಒಂದು ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಯಿತು. ತಲೆಗೆ ಬಿದ್ದ ಏಟಿನಿಂದ ತೀವ್ರ ಗಾಯಗೊಂಡ ೨ನೇ ತರಗತಿಯ ಮಗುವನ್ನು ಶ್ರೀನಗರಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಯಿತು ಎಂದು ಪೊಲೀಸರು ತಿಳಿಸಿದರು.   ಭಯೋತ್ಪಾದಕ ಸಂಘಟನೆ ಒಂದರ ಕಮಾಂಡರ್ ಸಮೀರ್ ಟೈಗರ್ ಸೇರಿದಂತೆ ಇಬ್ಬರು ಉಗ್ರಗಾಮಿಗಳು ಮತ್ತು ಒಬ್ಬ ನಾಗರಿಕ ನೆರೆಯ ಪುಲ್ವಾಮಾ ಜಿಲ್ಲೆಯ ಡ್ರಬ್ಗಮ್ ಸೇನಾಕಾರ್ಯಾಚರಣೆಯಲ್ಲಿ ಹತರಾದ ಹಿನ್ನೆಲೆಯಲ್ಲಿ ಶೋಪಿಯಾನ್ ಜಿಲ್ಲೆಯಲ್ಲಿ ಹರತಾಳಕ್ಕೆ ಕರೆ ನೀಡಲಾಗಿತ್ತು. ಘಟನೆಯನ್ನು ಖಂಡಿಸಿರುವ ಪೊಲೀಸ್ ಮಹಾನಿರ್ದೇಶಕ ಎಸ್ ಪಿ ವೈದ್ ಅವರು ’ಕಲ್ಲೆಸೆಯುವವರು ಈ ರೀತಿ ಎಳೆಯ ಮಕ್ಕಳ ಮೇಲೆ ಕಲ್ಲೆಸೆಯುತ್ತಿರುವುದು ಹುಚ್ಚಿನ ಪರಮಾವಧಿ. ಈ ಕ್ರಿಮಿನಲ್‌ಗಳು ಕಾನೂನಿನ ರುಚಿ ನೋಡಿಯೇ ನೋಡುತ್ತಾರೆ ಎಂದು ಹೇಳಿದರು.

2018: ಮುಂಬೈ: ದರೋಡೆಕೋರ ಛೋಟಾ ರಾಜನ್ ಮತ್ತು ಶೂಟರ್ ಸತೀಶ್ ಕಲಿಯಾ ಸೇರಿದಂತೆ ಒಂಬತ್ತು ಮಂದಿ ಅಪರಾಧಿಗಳಿಗೆ ಮುಂಬೈಯ ಮಹಾರಾಷ್ಟ್ರದ ಸಂಘಟಿತ ಅಪರಾಧ ನಿಯಂತ್ರಣ ಮಸೂದೆ (ಎಂಸಿಒಸಿಎ- ಮೊಕಾ) ನ್ಯಾಯಾಲಯವೊಂದು ಪತ್ರಕರ್ತ  ಜ್ಯೋತಿರ್ಮಯ ಡೇ ಕೊಲೆ ಪ್ರಕರಣದಲ್ಲಿ ಜೀವಾವಧಿ ಸಜೆಯನ್ನು ವಿಧಿಸಿತು.  ಇದಕ್ಕೆ ಮುನ್ನ ಛೋಟಾ ರಾಜನ್ ಸಹಿತ ೯ ಮಂದಿ ಅಪರಾಧಿಗಳು ತಪ್ಪಿತಸ್ಥರು ಎಂದು ತೀರ್ಪು ನೀಡಿದ ನ್ಯಾಯಾಲಯವು ಕೊಲೆಗೆ ಪ್ರಚೋದನೆ ನೀಡಿದ ಆರೋಪವನ್ನು ಎದುರಿಸುತ್ತಿದ್ದ ಪತ್ರಕರ್ತ ಜಿಗ್ನಾ ವೋರಾ ಮತ್ತು ಪೌಲ್ಸನ್ ಜೋಸೆಫ್ ಅವರನ್ನು ಖುಲಾಸೆಗೊಳಿಸಿತ್ತು.  ಜ್ಯೋತಿರ್ಮಯ ಡೇ ಅವರನ್ನು ಛೋಟಾ ರಾಜನ್ ಆದೇಶದ ಮೇರೆಗೆ ೨೦೧೧ರ ಜೂನ್ ೧೧ರಂದು ಪೊವೈಯಲ್ಲಿ ಗುಂಡಿಟ್ಟು ಕೊಲ್ಲಲಾಗಿತ್ತು ಎಂದು ಆಪಾದಿಸಲಾಗಿತ್ತು. ಪ್ರಾಸೆಕ್ಯೂಷನ್ ಪ್ರಕರಣದಲ್ಲಿ ೧೫೫ ಸಾಕ್ಷಿಗಳನ್ನು ಪರಿಶೀಲಿಸಿತ್ತು. ಈ ಸಾಕ್ಷಿಗಳ ಪೈಕಿ ೧೦ ಸಾಕ್ಷಿಗಳು ಪ್ರತಿಕೂಲ ಸಾಕ್ಷಿಗಳಾಗಿ ಬದಲಾಗಿದ್ದರು. ೧೪ ಮಂದಿ ಆರೋಪಿಗಳಲ್ಲಿ, ವಿನೋದ ಅಸ್ರಾಣಿ ಸಾವನ್ನಪ್ಪಿದ್ದು, ಇಬ್ಬರು ತಲೆ ತಪ್ಪಿಸಕೊಂಡಿದ್ದರು. ಇತರ ಆರೋಪಿಗಳೆಂದರೆ ಛೋಟಾ ರಾಜನ್, ಸತೀಶ್ ಕಲಿಯಾ, ಅಭಿಜೀತ್ ಶೀಂಧೆ, ಅರುಣ್ ದಕೆ, ಸಚಿನ್ ಗಾಯಕ್ ವಾಡ್, ಅನಿಲ್ ವಾಗ್ಮೋಡೆ, ನೀಲೇಶ್ ಶೆಂಡ್ಗೆ, ಮಂಗೇಶ ಅಗವನೆ, ಪೌಲ್ಸನ್ ಜೋಸೆಫ್, ದೀಪಕ್ ಸಿಸೋಡಿಯ, ಮತ್ತು ವೋರಾ.   ಮುಂಬೈ ಪೊಲೀಸ್ ಅಪರಾಧ ಶಾಖೆಯು, ಪ್ರಕರಣಕ್ಕೆ ಸಂಬಂಧಿಸಿದಂತೆ ೨೦೧೧ರ ಡಿಸೆಂಬರ್ ೩ರಂದು ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿತ್ತು. ೨೦೧೬ರ ಆಗಸ್ಟ್ ೫ರಂದು ಸಿಬಿಐ ಪೂರಕ ದೋಷಾರೋಪ ಪಟ್ಟಿಯನ್ನು ಸಲ್ಲಿಸಿತ್ತು. ಈ ಚಾರ್ಜ್‌ಶೀಟಿನಲ್ಲಿ ಡೇ ಅವರು ಜಾಗತಿಕ ಭಯೋತ್ಪಾದಕ ದಾವೂದ್ ಇಬ್ರಾಹಿಂ ನಡೆಸುತ್ತಿದ್ದ ಡಿ-ಗ್ಯಾಂಗ್ ಗಾಗಿ ಕೆಲಸ ಮಾಡುತ್ತಿರುವ ಶಂಕೆ ಇದೆ ಎಂಬುದಾಗಿ ಛೋಟಾ ರಾಜನ್ ಪತ್ರಕರ್ತನೊಬ್ಬನಿಗೆ ತಿಳಿಸಿದ್ದ ಎಂದು ಪ್ರತಿಪಾದಿಸಲಾಗಿತ್ತು.
೨೦೧೧ರ ಮೇ ೩೦ರಂದು ’ರಾಜನ್ ಕಸ್ಕರ್ ಹತ್ಯೆಗೆ ಯೋಜಿಸಿರುವನೇ?’ ತಲೆಬರಹದ ಅಡಿಯಲ್ಲಿ ಡೇ ಲೇಖನವೊಂದನ್ನು ಬರೆದಿದ್ದರು. ’ವಯಸ್ಸಾಗುತ್ತಿರುವ ದರೋಡೆಕೋರ ಭೂಗತ ಜಗತ್ತಿನ ಲಾಭದಲ್ಲಿ ತನ್ನ ಸಿಂಹಪಾಲು ಪಡೆಯುವ ಹತಾಶ ಯತ್ನವಾಗಿ ಗುಂಡು ಹಾರಾಟದ ಸಂಚು ರೂಪಿಸಿದ್ದಾನೆಂದು ಮೂಲಗಳು ನಂಬಿವೆ ಎಂದು ಈ ಲೇಖನದಲ್ಲಿ ಡೇ ಬರೆದಿದ್ದರು. ’ರಾಜನ್ ದರೋಡೆಕೋರರು ಯಾತ್ರೆ ಹೊರಟಿದ್ದಾರೆ. ನಗರದ ತಮ್ಮ ಅಡಗುದಾಣಗಳಿಂದ ಕಣ್ಮರೆಯಾಗಿದ್ದಾರೆ ಎಂದು ಪೊಲೀಸರು ಹೇಳುತ್ತಾರೆ ಎಂದೂ ಲೇಖನ ಪ್ರತಿಪಾದಿಸಿತ್ತು.  ಕೊಲೆಯ ಬಳಿಕ ರಾಜನ್ ಪತ್ರಕರ್ತನಿಗೆ ’ಜೆ. ಡೇ ಅವರು ಪತ್ರಿಕೆಗಳಲ್ಲಿ ನನ್ನ ವಿರುದ್ಧ ಬಹಳಷ್ಟು ಲೇಖನಗಳನ್ನು ಬರೆದಿದ್ದಾರೆ. ಹೀಗಾಗಿ ನಾನು ಅವರನ್ನು ಸಂಪರ್ಕಿಸಿ ನಯವಾಗಿಯೇ ನನ್ನ ಜೊತೆಗೆ ವೈಯಕ್ತಿಕ ದ್ವೇಷ ಇದೆಯೇ ಎಂದು ಕೇಳಿದ್ದೆ. ಅವರು ನಿರಾಕರಿಸಿದ್ದರು ಆದರೆ ನನ್ನ ವಿರುದ್ಧ ಬರೆಯುವುದನ್ನು ಮುಂದುವರೆಸಿದ್ದರು. ಅದರಲ್ಲಿ ನನ್ನ ಗ್ಯಾಂಗ್ ದುರ್ಬಲವಾಗಿದೆ, ನಾನು ಅಸ್ವಸ್ಥನಾಗಿದ್ದೇನೆ. ನನ್ನ ನಿಷ್ಠಾವಂತರು ನನ್ನನ್ನು ತ್ಯಜಿಸಿದ್ದಾರೆ ಇತ್ಯಾದಿಯಾಗಿ ನನ್ನ ವಿರುದ್ಧ ಬರೆಯುವುದನ್ನು ಮುಂದುವರೆಸಿದ್ದರು. ಜೆ. ಡೇ ಅವರ ಇಂತಹ ಬರವಣಿಗೆಗಳು ನನ್ನನ್ನು ಸಿಟ್ಟಿಗೆಬ್ಬಿಸಿದವು. ಹೀಗಾಗಿ ಅವರು ದಾವೂದ್ ಇಬ್ರಾಹಿಂಗಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಭಾವನೆ ನನ್ನಲ್ಲಿ ಬೆಳೆಯಿತು. ಕೊಲ್ಲುವುದಕ್ಕೆ ಮುನ್ನ ಅವರ ಮನವೊಲಿಸಲು ನಾನು ಯತ್ನಿಸಿದೆ. ಆದರೆ ಅವರು ಕೇಳಲಿಲ್ಲ. ಅವರು ನಿಜವಾಗಿಯೂ ದಾವೂದ್ ಗ್ಯಾಂಗಿಗೆ ನಿಕಟವಾಗಿದ್ದರೇ ಎಂಬ ಬಗ್ಗೆ ನನಗೆ ಖಚಿತತೆ ಇಲ್ಲ. ಆದರೆ ಅವರ ಬರವಣಿಗೆಗಳು ನನ್ನಲ್ಲಿ ಅಂತಹ ಭಾವನೆಗಳನ್ನು ಹುಟ್ಟು ಹಾಕಿದವು ಎಂದು ಛೋಟಾ ರಾಜನ್ ಹೇಳಿದ್ದ.

 2018: ನವದೆಹಲಿ: ಉತ್ತರಾಖಂಡದ ಮುಖ್ಯ ನ್ಯಾಯಮೂರ್ತಿ ಕೆ. ಎಂ. ಜೋಸೆಫ್ ಅವರಿಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ ನೀಡಲು ಸರ್ಕಾರ ವ್ಯಕ್ತ ಪಡಿಸಿದ ಆಕ್ಷೇಪಕ್ಕೆ ಸಂಬಂಧಿಸಿದಂತೆ ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ಸುಪ್ರೀಂಕೋರ್ಟ್ ಕೊಲಿಜಿಯಂ ತನ್ನ ನಿರ್ಧಾರವನ್ನು  ಮುಂದೂಡಿತು.  ಈದಿನ ಸಂಜೆ ೪.೧೫ಕ್ಕೆ ಅರ್ಧ ಗಂಟೆ ಕಾಲ ಸಭೆ ನಡೆಸಿದ ಕೊಲಿಜಿಯಂ ಯಾವುದೇ ನಿರ್ಧಾರವನ್ನೂ ಕೈಗೊಳ್ಳದೆಯೇ ಮುಂದೂಡಲ್ಪಟ್ಟಿತು. ವಿಷಯಕ್ಕೆ ಸಂಬಂಧಿಸಿದಂತೆ ಚರ್ಚಿಸಲು ಮುಂದಿನ ಸಭೆಗೆ ದಿನಾಂಕವನ್ನು ಅದು ನಿಗದಿ ಪಡಿಸಲಿಲ್ಲ.  ನ್ಯಾಯಮೂರ್ತಿ ಜೋಸೆಫ್ ಅವರಿಗೆ ಸಂಬಂಧಿಸಿದಂತೆ ಕೊಲಿಜಿಯಂ ತನ್ನ ಶಿಫಾರಸನ್ನು ಪುನರುಚ್ಚರಿಸಿದ್ದರೆ ಅದು ಸರ್ಕಾರಕ್ಕೆ ಬಂಧನಕಾರಿಯಾಗುತ್ತಿತ್ತು.  ನ್ಯಾಯಮೂರ್ತಿಗಳಾದ ಜೆ. ಚೆಲಮೇಶ್ವರ್, ರಂಜನ್ ಗೊಗೋಯಿ, ಮದನ್ ಬಿ. ಲೋಕುರ್ ಮತ್ತು ಕುರಿಯನ್ ಜೋಸೆಫ್ ಅವರೂ ಇದ್ದ ಕೊಲಿಜಿಯಂ ಜನವರಿ ೧೧ರಂದು ಕೈಗೊಂಡ ನಿರ್ಣಯದಲ್ಲಿ ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಅವರನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ನೇಮಿಸಲು ಸರ್ವಾನುಮತದ ಶಿಫಾರಸು ಮಾಡಿತ್ತು.  ಸರ್ಕಾರವು ಇತ್ತೀಚೆಗೆ ಹಿರಿಯ ವಕೀಲೆ ಇಂದು ಮಲ್ಹೋತ್ರ ಅವರ ಹೆಸರನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ನೇಮಿಸಲು ಒಪ್ಪಿಗೆ ನೀಡಿತ್ತು. ಇದೇ ವೇಳೆಗೆ ನ್ಯಾಯಮೂರ್ತಿ ಜೋಸೆಫ್ ಅವರ ಕಡತವನ್ನು ಮರುಪರಿಶೀಲಿಸುವಂತೆ ಸೂಚಿಸಿ ಕೊಲಿಜಿಯಂಗೆ ಹಿಂತಿರುಗಿಸಿತ್ತು. ಎರಡೂ ಹೆಸರುಗಳನ್ನು ಒಟ್ಟಿಗೇ ಶಿಫಾರಸು ಮಾಡಲಾಗಿದ್ದರೂ, ಮೂರು ತಿಂಗಳುಗಳ ಬಳಿಕ ಸರ್ಕಾರ ಈ ತೀರ್ಮಾನ ಕೈಗೊಂಡಿತ್ತು.  ನ್ಯಾಯಮೂರ್ತಿ ಜೋಸೆಫ್ ಅವರು ಅಖಿಲ ಭಾರತ ಹಿರಿತನ ಪಟ್ಟಿಯಲ್ಲಿ ೪೨ನೇ ಸ್ಥಾನದಲ್ಲಿ ಇದ್ದಾರೆ. ವಿವಿಧ ಹೈಕೋರ್ಟ್‌ಗಳಲ್ಲಿನ ೧೧ ಮುಖ್ಯ ನ್ಯಾಯಮೂರ್ತಿಗಳು ಅವರಿಗಿಂತ ಹಿರಿಯರಾಗಿದ್ದಾರೆ ಮತ್ತು ಕೇರಳ ಹೈಕೋರ್ಟ್ ಈಗಾಗಲೇ ಸುಪ್ರೀಂಕೋರ್ಟಿನಲ್ಲಿ ಸೂಕ್ತವಾಗಿ ಪ್ರತಿನಿಧಿಸಲ್ಪಟ್ಟಿದೆ ಮತ್ತು ಇನ್ನೂ ಒಬ್ಬ ನ್ಯಾಯಮೂರ್ತಿಯನ್ನು ಪ್ರತಿನಿಧಿಸುವಷ್ಟು ದೊಡ್ಡ ಕೋರ್ಟ್ ಕೇರಳ ಹೈಕೋರ್ಟ್ ಅಲ್ಲ, ಅಲ್ಲಿನವರಾದ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ಅವರು ಈಗಾಗಲೇ ಸುಪ್ರೀಂನ್ಯಾಯಮೂರ್ತಿಯಾಗಿದ್ದು ಕೊಲಿಜಿಯಂ ಸದಸ್ಯರೂ ಆಗಿದ್ದಾರೆ ಎಂಬುದು ಸರ್ಕಾರದ ವಾದವಾಗಿತ್ತು.

2018: ಜಿನೇವಾ : ಫೇಸ್ ಬುಕ್ ನಲ್ಲಿ  ವಿಶ್ವ ನಾಯಕರು ಕುರಿತಾಗಿ ನಡೆಸಿರುವ ಅಧ್ಯಯನ ಒಂದರ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಇತರ ಅನೇಕ ವಿಶ್ವ ನಾಯಕರಿಗಿಂತ ಸಾಮಾಜಿಕ ಜಾಲ ತಾಣದ ಜನಪ್ರಿಯತೆಯಲ್ಲಿ ಎಷ್ಟೋ  ಮುಂದಿದ್ದಾರೆ.  ಬರ್ಸನ್ ಕೋಹನ್ ಮತ್ತು ವೂಲ್ಫ್ ಅವರು ಈ ಆಧ್ಯಯನವನ್ನು ನಡೆಸಿದ್ದು ಅದರ ವರದಿಯನ್ನು ಈದಿನ  ಬಿಡುಗಡೆ ಮಾಡಲಾಯಿತು.
ಫೇಸ್ ಬುಕ್ ನಲ್ಲಿ ೪೩.೨ ದಶಲಕ್ಷ ಹಿಂಬಾಲಕರನ್ನು ಹೊಂದಿರುವ ಪ್ರಧಾನಿ ಮೋದಿ ವಿಶ್ವ ನಾಯಕರ ಪೈಕಿ ಅಗ್ರ ಸ್ಥಾನದಲ್ಲಿದ್ದಾರೆ. ಟ್ರಂಪ್ ಅವರಿಗಿಂತ ಈ ಸಂಖ್ಯೆ ಎರಡು ಪಟ್ಟಾಗಿರುವುದು ದೊಡ್ಡ ಸಾಧನೆ ಎಂದು ಅಧ್ಯಯನ ವರದಿ ಹೇಳಿತು.  ಟ್ವಿಟ್ಟರಿನಲ್ಲಿ ಮೋದಿ ಅವರಿಗಿಂತ ಮುಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಫೇಸ್ ಬುಕ್ ನಲ್ಲಿ ೨೩.೧ ದಶಲಕ್ಷ ಹಿಂಬಾಲಕರನ್ನು ಹೊಂದುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.  ಈ ಅಧ್ಯಯನವು ೨೦೧೭ರ ಜನವರಿ ೧ರಿಂದ ಫೇಸ್ ಬುಕ್ ನಲ್ಲಿ ಸಕ್ರಿಯರಾಗಿರುವ ಸುಮಾರು ೬೫೦ ವಿಶ್ವ ನಾಯಕರು ಮತ್ತು ವಿದೇಶ ಸಚಿವರ ಚಟುವಟಿಕೆಗಳನ್ನು ವಿಶ್ಲೇಷಿಸಿದೆ. ಅದಕ್ಕಾಗಿ ಫೇಸ್ ಬುಕ್ ನ ಕ್ರೌಡ್ ಟ್ಯಾಂಗಲ್ ಸಲಕರಣೆಯನ್ನು ಅದು ಬಳಸಿಕೊಂಡಿತ್ತು.  ಕಳೆದ ಹದಿನಾಲ್ಕು ತಿಂಗಳಲ್ಲಿ  ವಿಶ್ವದ ಎಲ್ಲ ನಾಯಕರ ಪೈಕಿ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಫೆಸ್ ಬುಕ್ ನಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಅಂದರೆ ಒಟ್ಟು ೨೦೪.೯ ದಶಲಕ್ಷ ಸಂವಹನಗಳನ್ನು (ಕಮೆಂಟ್ಸ್, ಲೈಕ್ಸ್ ಮತ್ತು ಶೇರುಗಳನ್ನು ಒಳಗೊಂಡಂತೆ) ನಡೆಸಿರುವುದು ಅತೀ ದೊಡ್ಡ ದಾಖಲೆ.   ಪ್ರಧಾನಿ ಮೋದಿ ಅವರ ಫೇಸ್ ಬುಕ್ ಸಂವಹನ ಸಂಖ್ಯೆಯು ೧೧೩.೬ ದಶಲಕ್ಷ ಆಗಿದ್ದು ಇದರ ದುಪ್ಪಟ್ಟಿಗಿಂತಲೂ ಹೆಚ್ಚು ಸಂವಹನಗಳನ್ನು ಟ್ರಂಪ್ ನಡೆಸಿದ್ದಾರೆ.   ಇಂಡೋನೇಶ್ಯದ ಅಧ್ಯಕ್ಷ ಜೋಕೋ ವಿದೋದೋ ಅವರು ಫೇಸ್ ಬುಕ್‌ನಲ್ಲಿ ನಡೆಸಿರುವ ಸಂವಹನ ೪೬ ದಶಲಕ್ಷ; ಕಾಂಬೋಡಿಯಾದ ಪ್ರಧಾನಿ ಸಮದೇಚ್ ಹುನ್ ಸೆನ್ ಮತ್ತು ಆರ್ಜೆಂಟೀನಾ ಅಧ್ಯಕ್ಷ ಮಾರಿಶಿಯೋ ಮ್ಯಾಕ್ರಿ ನಡೆಸಿರುವ ಫೇಸ್ ಬುಕ್ ಸಂವಹನಗಳು ಕ್ರಮವಾಗಿ ೩೬ ಮತ್ತು ೩೩.೪ ದಶಲಕ್ಷ ಎಂದು ಅಧ್ಯಯನ ವರದಿ ಹೇಳಿತು.


2017: ನ್ಯೂಯಾರ್ಕ್‌: ಆಸ್ಕರ್ಪ್ರಶಸ್ತಿ ಸಮಾರಂಭದಲ್ಲಿ ಭಿನ್ನ ಗೌನ್ತೊಟ್ಟು ಗಮನ ಸೆಳೆದಿದ್ದ ನಟಿ ಪ್ರಿಯಾಂಕಾ ಚೋಪ್ರಾ, ನೀಳ ನಿಲುವಂಗಿಯಿಂದ ಮತ್ತೆ ಜಾಗತಿಕ ಮಟ್ಟದಲ್ಲಿ ಸುದ್ದಿಯಾದರು. ನ್ಯೂಯಾರ್ಕ್ಮೂಲದ ವಸ್ತ್ರವಿನ್ಯಾಸ ಸಂಸ್ಥೆಯ ಪ್ರದರ್ಶನ ಕಾರ್ಯಕ್ರಮಮೆಟ್ಗಾಲಾ 2017’ದಲ್ಲಿ ಪ್ರಿಯಾಂಕಾ ಚೋಪ್ರಾ ಉದ್ದನೆಯ ಮಳೆಯ ನಿಲುವಂಗಿಯಲ್ಲಿ ಕಾಣಿಸಿಕೊಂಡರು. ಇದೇ ತಿಂಗಳ ಕೊನೆಯ ವಾರದಲ್ಲಿ ಬಿಡುಗಡೆಯಾಗಲಿರುವ ಬೇ ವಾಚ್ ಚಿತ್ರದ ಪ್ರಚಾರದಲ್ಲಿಯೂ ತೊಡಗಿರುವ ಪ್ರಿಯಾಂಕಾ, ಜಗತ್ತಿನ ಅತಿ ಉದ್ದನೆಯ ರಾಲ್ಫ್ಲಾರೆನ್ಟ್ರೆಂಚ್ಕೋಟ್ತೊಟ್ಟು ನಡೆದರು. ಕ್ವಾಂಟಿಕೋ ತಾರೆ ಪ್ರಿಯಾಂಕಾ(34) ಅವರ ಟ್ರೆಂಚ್ಕೋಟ್ಫ್ಯಾಷನ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶಂಸೆ ವ್ಯಕ್ತವಾಯಿತು.
2017: ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಪಾಕಿಸ್ತಾನ ಬೆಂಬಲಿತ 55 ಸಕ್ರಿಯ
ಭಯೋತ್ಪಾದಕ ಶಿಬಿರಗಳಿವೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದರು. ಇದರೊಂದಿಗೆ, ಕಳೆದ ಸೆಪ್ಟೆಂಬರ್ನಲ್ಲಿ ಸೇನೆ ನಿರ್ದಿಷ್ಟ ದಾಳಿ ನಡೆಸಿದ ವೇಳೆ ಅಲ್ಲಿ ಇದ್ದ ಭಯೋತ್ಪಾದಕ ಶಿಬಿರಗಳಿಗಿಂತ ಈಗ ಭಯೋತ್ಪಾದಕ ಶಿಬಿರಗಳು ಇನ್ನೂ ಹೆಚ್ಚಾದಂತಾಯಿತು. ನಿರ್ದಿಷ್ಟ ದಾಳಿ ನಡೆಸಿದ್ದ ಸಂದರ್ಭ ಪಿಒಕೆಯಲ್ಲಿ 35 ಉಗ್ರ ತರಬೇತಿ ಶಿಬಿರಗಳಿರುವುದು ತಿಳಿದುಬಂದಿತ್ತು. ಗುಪ್ತಚರ ಮೂಲಗಳನ್ನು ಉಲ್ಲೇಖಿಸಿ ಮಾಹಿತಿ ನೀಡಿರುವ ಸರ್ಕಾರಿ ಅಧಿಕಾರಿಗಳು, 20 ಹೊಸ ಭಯೋತ್ಪಾದಕ ಶಿಬಿರಗಳು ಪಿಒಕೆಯಲ್ಲಿ ತಲೆಯೆತ್ತಿವೆ ಎಂದು ಹೇಳಿದರು. ಪಾಕಿಸ್ತಾನ ಸೇನೆ ಭಾರತೀಯ ಯೋಧರಿಬ್ಬರ ದೇಹ ತುಂಡರಿಸಿದ ಮರುದಿನವೇ ಅಧಿಕಾರಿಗಳು ಮಾಹಿತಿ ನೀಡಿದರು. 2017 ಮೊದಲ ನಾಲ್ಕು ತಿಂಗಳಲ್ಲಿ ಗಡಿ ನಿಯಂತ್ರಣ ರೇಖೆ ಬಳಿ 60 ಬಾರಿ ಉಗ್ರರ ಒಳನುಸುಳುವಿಕೆ ಯತ್ನ ನಡೆದಿದೆ. 15 ಉಗ್ರರು ಜಮ್ಮು ಮತ್ತು ಕಾಶ್ಮೀರ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು. ಈ ಮಧ್ಯೆ ಹಿಂದಿನ ದಿನ ಭಾರತದ ಸೈನಿಕರು ಪಾಕ್ ಶಿಬಿರಗಳ ಮೇಲೆ ದಾಳಿ ನಡೆಸಿ 7 ಪಾಕ್ ಸೈನಿಕರನ್ನು ಕೊಂದಿರುವುದಾಗಿ ಟಿವಿಗಳಲ್ಲಿ ಪ್ರಸಾರವಾದ ಸುದ್ದಿ ಸತ್ಯದೂರ ಸುದ್ದಿ ಎಂದು ಸೇನಾ ಮೂಲಗಳು ಸ್ಪಷ್ಟ ಪಡಿಸಿದವು.
2017: ಭೋಪಾಲ್: ಏಪ್ರಿಲ್ನಿಂದ ಮಾರ್ಚ್ವರೆಗೆ ಇರುವ ಹಣಕಾಸು ವರ್ಷದ ಅವಧಿಯನ್ನು
ಮಧ್ಯಪ್ರದೇಶ ಸರ್ಕಾರ ಜನವರಿಯಿಂದ ಡಿಸೆಂಬರ್ಗೆ ಬದಲಾಯಿಸಿತು. ಇದರೊಂದಿಗೆ, ಹಣಕಾಸು ವರ್ಷವನ್ನು ಜನವರಿಯಿಂದ ಡಿಸೆಂಬರ್ಗೆ ನಿಗದಿಗೊಳಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಮಧ್ಯಪ್ರದೇಶ ಪಾತ್ರವಾಯಿತು. ಈದಿನ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಣಕಾಸು ವರ್ಷದ ಅವಧಿ ಬದಲಿಸುವ ನಿರ್ಧಾರ ಕೈಗೊಳ್ಳಲಾಯಿತು. ಹಣಕಾಸು ವರ್ಷವನ್ನು ಜನವರಿಯಿಂದ ಡಿಸೆಂಬರ್ವರೆಗೆ ಪರಿಗಣಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ನೀತಿ ಆಯೋಗದ ಸಭೆಯಲ್ಲಿ ಒಲವು ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಮಧ್ಯಪ್ರದೇಶ ಸರ್ಕಾರ ನಿರ್ಧಾರ ಕೈಗೊಂಡಿತು. ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಹೀಗಾಗಿ ಮುಂದಿನ ಹಣಕಾಸು ವರ್ಷದ ಬಜೆಟ್ಅನ್ನು ಡಿಸೆಂಬರ್ನಲ್ಲಿ ಮಂಡಿಸಲಾಗುವುದುಎಂದು ರಾಜ್ಯ ಸಾರ್ವಜನಿಕ ಸಂಪರ್ಕ ಸಚಿವ ನರೊಟ್ಟಂ ಮಿಶ್ರಾ ತಿಳಿಸಿದರು. 2017–18 ಬಜೆಟ್ಅಂಶಗಳನ್ನು ಡಿಸೆಂಬರ್ಒಳಗೇ ಅನುಷ್ಠಾನಗೊಳಿಸಲು ಸರ್ಕಾರ ಪ್ರಯತ್ನಿಸಲಿದೆ ಎಂದು ಅವರು ಹೇಳಿದರು.
2017: ಲಂಡನ್‌: ಅತಿ ವೇಗವಾಗಿ ಚಿತ್ರೀಕರಿಸುವ  ಕ್ಯಾಮೆರಾವನ್ನು ಅಭಿವೃದ್ಧಿ ಪಡಿಸಿರುವುದಾಗಿ
ವಿಜ್ಞಾನಿಗಳು ಪ್ರಕಟಿಸಿದರು. ಇದು ಪ್ರತಿ ಸೆಕೆಂಡಿಗೆ 5 ಲಕ್ಷ ಕೋಟಿ ಚಿತ್ರಗಳನ್ನು ಸೆರೆಯುವ ಸಾಮರ್ಥ್ಯ ಹೊಂದಿದೆ. ಪ್ರತಿ ಸೆಕೆಂಡಿಗೆ 5 ಲಕ್ಷ ಕೋಟಿ ಚಿತ್ರಗಳನ್ನು ಸೆರೆಯುವಷ್ಟು ಸಾಮರ್ಥ್ಯ ಹೊಂದಿರುವ ಸೂಪರ್ಫಾಸ್ಟ್ಕ್ಯಾಮೆರಾ ಮೂಲಕ ಬೆಳಕಿನ ಚಲನೆಯನ್ನು ದೃಶ್ಯೀಕರಿಸಲು ಸಾಧ್ಯವಾಗಲಿದೆ. ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಜೀವಶಾಸ್ತ್ರ ವಿಭಾಗಗಳಲ್ಲಿ ಈವರೆಗೂ ಸೆರೆಹಿಡಿಯಲಾಗದ ಅನೇಕ ಶೀಘ್ರ ಪ್ರಕ್ರಿಯೆಗಳನ್ನು ಚಿತ್ರೀಕರಿಸಬಹುದು. ಸ್ವೀಡನ್ ಲುಂಡ್ವಿವಿಯ ಸಂಶೋಧಕರು ಫೋಟಾನ್ಗಳ ಸಂಗ್ರಹ(ಬೆಳಕು) ಸಾಗುವುದನ್ನು ಸೆರೆಹಿಡಿದವರು. ಪೀಕೋ ಸೆಕೆಂಡ್‌ (0.000000000001)ನಲ್ಲಿ ಪೂರ್ಣಗೊಳ್ಳುವ ಇಂಥ ಪ್ರಕ್ರಿಯೆಗಳನ್ನು ಸೆರೆಹಿಡಿದು ವೇಗವನ್ನು ಹಲವು ಲಕ್ಷ ಕೋಟಿ ಪಟ್ಟು ಕಡಿಮೆಗೊಳಿಸಿ ದೃಶ್ಯ ಕಾಣಲು ಸಾಧ್ಯವಿದೆ. ಸ್ಫೋಟ, ರಾಸಾಯನಿಕ ಪ್ರಕ್ರಿಯೆ, ಮೆದುಳಿನ ಚಟುವಟಿಕೆಯಂತಹ ಸೂಕ್ಷ್ಮ ಪ್ರಕ್ರಿಯೆಗಳನ್ನು ಸ್ಪಷ್ಟವಾಗಿ ಕಾಣಬಹುದು. ಫ್ರೇಮ್‌ (Frequency Recognition Algorithm for Multiple Exposures)ತಂತ್ರಜ್ಞಾನವು ಒಂದೇ ಚಿತ್ರದಲ್ಲಿ ಹಲವು ಕೋಡೆಡ್ಚಿತ್ರಗಳನ್ನು ಸೆರೆಹಿಡಿದಿರುತ್ತದೆ. ಪ್ರಸ್ತುತ ಬಳಕೆಯಲ್ಲಿರುವ ಹೈಸ್ಪೀಡ್ಕ್ಯಾಮೆರಾಗಳು ಸೆಕೆಂಡ್ಗೆ 1 ಲಕ್ಷ ಚಿತ್ರಗಳನ್ನು ಸೆರೆಹಿಡಿಯುವ ಸಾಮರ್ಥ್ಯ ಹೊಂದಿವೆ.
2017: ಬೀಜಿಂಗ್: ಕಾಶ್ಮೀರ ಸಮಸ್ಯೆಯನ್ನು ಮಾತುಕತೆಯ ಮೂಲಕ ಬಗೆಹರಿಸಲು ಭಾರತ ಮತ್ತು  ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ವಹಿಸುವಲ್ಲಿ ಚೀನಾಕ್ಕೆಸ್ವ ಹಿತಾಸಕ್ತಿಇದೆ ಎಂದು ಚೀನಾ ಸರ್ಕಾರಿ ಸ್ವಾಮ್ಯದ ಪತ್ರಿಕೆಗ್ಲೋಬಲ್ ಟೈಮ್ಸ್ತನ್ನ ಲೇಖನದಲ್ಲಿ ತಿಳಿಸಿತು. ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಹಾದು ಹೋಗುವ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ಗೆ ಚೀನಾ ಸುಮಾರು 50 ಬಿಲಿಯನ್ ಅಮೆರಿಕನ್ ಡಾಲರ್ ಬಂಡವಾಳ ಹೂಡುತ್ತಿದೆ. ಹಾಗಾಗಿ ಪ್ರದೇಶದ ಸಮಸ್ಯೆಯನ್ನು ಬಗೆಹರಿಸುವಲ್ಲಿ ಚೀನಾಕ್ಕೆಸ್ವ ಹಿತಾಸಕ್ತಿಇದೆ ಎಂದು ಪತ್ರಿಕೆ ಪ್ರತಿಪಾದಿಸಿದೆ. ಮೂಲಕ ಚೀನಾ ಕಾಶ್ಮೀರ ಸಮಸ್ಯೆಯಲ್ಲಿ ಹಸ್ತಕ್ಷೇಪ ನಡೆಸುವ ಬಗ್ಗೆ ಇದೇ ಮೊದಲ ಬಾರಿಗೆ ಸುಳಿವು ನೀಡಿದೆ. ಚೀನಾ ತನ್ನ ನೆರೆ ರಾಷ್ಟ್ರಗಳ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ ಚೀನಾದ ಉದ್ದಿಮೆದಾರರು ವಿದೇಶಗಳಲ್ಲಿ ಹೂಡಿಕೆ ಮಾಡಿದ್ದು, ಅವರ ಹಿತಾಸಕ್ತಿಗಳನ್ನು ಕಾಪಾಡಲು ಚೀನಾ ಸರ್ಕಾರ ಬದ್ಧವಾಗಿದೆಹಾಗಾಗಿ ರೋಹಿಂಗ್ಯಾ ನಿರಾಶ್ರಿತರ ಸಮಸ್ಯೆಯನ್ನು ಬಗೆಹರಿಸುವ ಸಂಬಂಧ ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದ ನಡುವೆ ಚೀನಾ ಮಧ್ಯಸ್ಥಿಕೆ ವಹಿಸಿದೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಚೀನಾ ಭಾರೀ ಹೂಡಿಕೆ ಮಾಡಿದೆ. ಹಾಗಾಗಿ ಕಾಶ್ಮೀರ ವಿಷಯದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಮಾತುಕತೆಗೆ ಮಧ್ಯಸ್ಥಿಕೆ ವಹಿಸುವ ಸ್ವಂತ ಹಿತಾಸಕ್ತಿ ಈಗ ಚೀನಾಕ್ಕೆ ಇದೆ ಎಂದು ಪತ್ರಿಕೆ ಪ್ರತಿಪಾದನೆ ಮಾಡಿತು. ಕಾಶ್ಮೀರ ವಿಷಯದಲ್ಲಿ ಭಾರತ ಮತ್ತು ಪಾಕ್ ಮಧ್ಯೆ ಮಧ್ಯಸ್ಥಿಕೆ ವಹಿಸುವುದು ಚೀನಾಗೆ ಸವಾಲಿನ ಕೆಲಸ. ಆದರೆ ಚೀನಾ ತನ್ನ ಹೂಡಿಕೆದಾರರ ಹಿತ ಕಾಯುವ ಸಲುವಾಗಿ ಕಠಿಣ ಸವಾಲನ್ನೂ ಸಹ ಎದುರಿಸಲು ಸಿದ್ಧವಿದೆ ಎಂದು ಪತ್ರಿಕೆ ತಿಳಿಸಿತು.
2009: ಹಂದಿ ಜ್ವರದ ಹಿನ್ನೆಲೆಯಲ್ಲಿ ಈಜಿಪ್ಟ್ ಸುಮಾರು ಎರಡೂವರೆ ಲಕ್ಷ ಹಂದಿಗಳನ್ನು ಕೊಲ್ಲುವ ಕಾರ್ಯವನ್ನು ಆರಂಭಿಸಿತು. ಮನುಷ್ಯರನ್ನು ಕಾಡಿದ ಹಂದಿಜ್ವರ ಮತ್ತು ಹಂದಿಗಳಿಗೆ ಯಾವುದೇ ಸಂಬಂಧ ಇಲ್ಲ ಎಂದು ಹೇಳುವ ಮೂಲಕ ವಿಶ್ವ ಆರೋಗ್ಯ ಸಂಸ್ಥೆ ಈ ರೀತಿಯ ಹಂದಿ ನಾಶವನ್ನು ವಿರೋಧಿಸಿತು. ಮೊದಲ ಹಂತದಲ್ಲಿ ಈಜಿಪ್ಟಿನ ಕೊಳೆಗೇರಿಗಳಲ್ಲಿರುವ ಸುಮಾರು 60,000 ಹಂದಿಗಳನ್ನು ಕೊಲ್ಲಲಾಗುವುದು ಎಂದು ಕೈರೊ ರಾಜ್ಯಪಾಲ ಅಬ್ದಲ್ ಹಲೀಂ ವಾಜಿರ್ ಅವರು ತಿಳಿಸಿದ್ದರು.

2009: ವಯಸ್ಸನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ತೆಗೆಯಲಾದ ಹಲ್ಲು ಮತ್ತು ಮೂಳೆಗಳ ಎಕ್ಸ್‌ರೇಯನ್ನು ನೋಡಲು ಅವಕಾಶ ನೀಡಬೇಕು ಎಂಬ ಕಸಾಬ್ ಮನವಿಯನ್ನು ನ್ಯಾಯಾಲಯವು ತಿರಸ್ಕರಿಸಿತು. ಎಕ್ಸ್‌ರೇ ಮತ್ತು ಇತರ ವೈದ್ಯಕೀಯ ಪರೀಕ್ಷೆಗಳ ಪ್ರಕಾರ ಕಸಾಬ್‌ನ ವಯಸ್ಸು 20 ವರ್ಷಕ್ಕಿಂತ ಹೆಚ್ಚು ಎಂಬುದು ಬೆಳಕಿಗೆ ಬಂದಿತ್ತು. ಕಸಾಬ್‌ನ ಮನವಿಯನ್ನು ತಿರಸ್ಕರಿಸಿದ ನ್ಯಾಯಾಧೀಶ ಎಂ. ಎಲ್. ತಹಿಲ್ಯಾನಿ ಅವರು, ಕಸಾಬ್‌ನ ವಕೀಲರಾದ ಅಬ್ಬಾಸ್ ಕಜ್ಮಿ ಅವರು ಎಕ್ಸ್‌ರೇ ನೋಡಬಹುದು ಎಂದು ತಿಳಿಸಿದರು. ಆದರೆ ಕಜ್ಮಿ ಇದಕ್ಕೆ ಆಸಕ್ತಿ ತೋರಿಸಲಿಲ್ಲ. ತಜ್ಞರನ್ನು ಕರೆಸಿ ಎಕ್ಸ್‌ರೇಯನ್ನು ಪರೀಕ್ಷೆ ಮಾಡಿಸಿಕೊಳ್ಳಲು ನ್ಯಾಯಾಲಯ ಕಜ್ಮಿ ಅವರಿಗೆ ಅನುಮತಿ ನೀಡಿತ್ತು.

2009: ಬೆಂಗಳೂರು ಮಹಾನಗರದ ಸಾಂಸ್ಕೃತಿಕ ಹಾಗೂ ವೈಚಾರಿಕ ಕಾರ್ಯಕ್ರಮಗಳಿಗೆ ಗಂಭೀರ ವೇದಿಕೆಯಾದ ಮಿಥಿಕ್ ಸೊಸೈಟಿಗೆ ಶತಮಾನದ ಸಂಭ್ರಮ. ಬೆಂಗಳೂರು ನೃಪತುಂಗ ರಸ್ತೆಯಲ್ಲಿರುವ ಈ ಪಾರಂಪರಿಕ ಕಟ್ಟಡ ಮೇ 5, 1909ರಂದು ಬೆಂಗಳೂರಿನ ಕಂಟೋನ್ಮೆಂಟ್ ಕಲೆಕ್ಟರ್ ಆಗಿದ್ದ ಎಫ್.ಜೆ.ರಿಚರ್ಡ್ಸ್ ಹಾಗೂ ರೆವರೆಂಡ್ ಫಾದರ್ ಎ.ಎಂ.ತಬಾರ್ಡ್ ಅವರಿಂದ ಪ್ರಾರಂಭಗೊಂಡಿತ್ತು. 1917ರಲ್ಲಿ ಮೈಸೂರು ಸರ್ಕಾರದಿಂದ ನಿವೇಶನ ದೊರಕಿ ಡಾಲಿ ಸ್ಮಾರಕ ಸಭಾಂಗಣ ಉದ್ಘಾಟನೆಗೊಂಡಿತು. ಈ ಸಂಸ್ಥೆಯ ಸ್ಥಾಪಕ ಸದಸ್ಯರಲ್ಲಿ ಅಂದಿನ ಮೈಸೂರು ಸರ್ಕಾರದ ಪ್ರಧಾನ ಆರ್ಕಿಟೆಕ್ಟ್ ಆಗಿದ್ದ ಡಾ.ಜಿ.ಎಸ್.ಕ್ರುಂಬಿಗಲ್ ಮತ್ತು ಬೆಂಗಳೂರು ಸೆಂಟ್ರಲ್ ಕಾಲೇಜಿನ ಪ್ರಾಧ್ಯಾಪಕ ಎಸ್.ಕೃಷ್ಣಸ್ವಾಮಿ ಅಯ್ಯಂಗಾರ್ ಅವರು ಇದ್ದರು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಮೊದಲ ನಿರ್ದೇಶಕರಾಗಿದ್ದ ಡಾ. ಮಾರಿಸ್ ಟ್ರಾವರ್ಸ್ ಮಿಥಿಕ್ ಸೊಸೈಟಿಯ ಪ್ರಥಮ ಅಧ್ಯಕ್ಷರಾಗಿದ್ದರು. ಈ ಸಂಸ್ಥೆಗೆ ಮೈಸೂರು ಮಹಾರಾಜರು, ಬರೋಡದ ಮಹಾರಾಜರು ಪೋಷಕರಾಗಿದ್ದರು.

2008: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ವೆಲ್ಲೂರು ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ನಳಿನಿಯನ್ನು ಮಾರ್ಚ್ ತಿಂಗಳಿನಲ್ಲಿ ಪ್ರಿಯಾಂಕ ಗಾಂಧಿ ಭೇಟಿ ಮಾಡಿದ್ದರು ಎನ್ನುವ ವಿಷಯವನ್ನು ಕಾರಾಗೃಹದ ಅಧಿಕಾರಿ ಅಲ್ಲಗಳೆದರು. ಪ್ರಿಯಾಂಕ-ನಳಿನಿ ಭೇಟಿ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಚೆನ್ನೈ ನಗರ ವಕೀಲ ಡಾ.ರಾಜಕುಮಾರ್ ಅವರು ವಿವರ ಕೇಳಿದ್ದರು. ಆದರೆ ಜೈಲು ಸೂಪರಿಂಟೆಂಡೆಂಟ್ ರಾಜಸುಂದರಿ ಅವರು ಪ್ರಿಯಾಂಕ-ನಳಿನಿ ಭೇಟಿಯನ್ನು ನಿರಾಕರಿಸಿದರು. 2008 ರ ಮಾರ್ಚ್ 14 ಹಾಗೂ 19 ರಂದು ವೆಲ್ಲೂರು ಕಾರಾಗೃಹಕ್ಕೆ ಯಾರೂ ಭೇಟಿ ನೀಡಿಲ್ಲ ಎಂದು ರಾಜಸುಂದರಿ ಅವರು ರಾಜಕುಮಾರ್ ಅವರಿಗೆ ಸ್ಪಷ್ಟನೆ ನೀಡಿದರು.

2008: ಚುನಾವಣಾ ಪ್ರಚಾರದಲ್ಲಿ ಮೊಬೈಲ್ ಮೂಲಕ ಕನ್ನಡವೂ ಸೇರಿದಂತೆ ಒಟ್ಟು 11 ಪ್ರಾದೇಶಿಕ ಭಾಷೆಗಳಲ್ಲಿ ಸಂಕ್ಷಿಪ್ತ ಸಂದೇಶ ಸೇವೆ (ಎಸ್ಎಂಎಸ್) ಹಾಗೂ ಮೊಬೈಲಿನಿಂದ ವಿವಿಧ ಬಗೆಯಲ್ಲಿ ಮತದಾರರನ್ನು ನೇರವಾಗಿ ತಲುಪುವಂತಹ ಸಾಫ್ಟ್ವೇರನ್ನು ಬೆಂಗಳೂರು ಮೂಲದ ಜಿನೆವಾ ಸಾಫ್ಟ್ವೇರ್ ಟೆಕ್ನಾಲಜೀಸ್ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿತು. ಈ ಬಗ್ಗೆ ವಿವರಗಳನ್ನು ನೀಡಿದ ಮಾರುಕಟ್ಟೆ ವಿಭಾಗದ ನಿರ್ದೇಶಕ ಆರ್. ಅಮರಸಿಂಗ್ ಅವರು ವಿಶಿಷ್ಟ ಬಗೆಯಲ್ಲಿ ಮತದಾರರನ್ನು ತಲುಪುವ ಈ ರೀತಿಯ ಪ್ರಚಾರ ಅಭಿಯಾನಕ್ಕೆ ಚುನಾವಣಾ ಆಯೋಗವು ಸಮ್ಮತಿ ನೀಡಿದೆ ಎಂದು ಹೇಳಿದರು.

2008: ಚೀನಾವು ಜಲಾಂತರ್ಗಾಮಿ ಪರಮಾಣು ಘಟಕವೊಂದನ್ನು ರಹಸ್ಯವಾಗಿ ಸ್ಥಾಪಿಸಿರುವುದು ಏಷ್ಯಾ ದೇಶಗಳಿಗೆ ಆತಂಕ ಉಂಟು ಮಾಡುವಂತಿದ್ದು, ಅಮೆರಿಕಾ ಶಕ್ತಿಗೆ ಸವಾಲು ಒಡ್ಡುವಂತಹುದೂ ಆಗಿದೆ ಎಂದು ಲಂಡನ್ನಿನ ಮಾಧ್ಯಮಗಳು ವರದಿ ಮಾಡಿದವು. ಉಪಗ್ರಹವೊಂದರಿಂದ ತೆಗೆಯಲಾದ ಅಸ್ಪಷ್ಟ ಚಿತ್ರಗಳನ್ನು `ದಿ ಡೈಲಿ ಟೆಲಿಗ್ರಾಫ್' ಮುದ್ರಿಸಿತು. ಅದರಲ್ಲಿ ಚೀನಾ ಕಡಲತೀರದಲ್ಲಿನ ಬಂದರಿನ ಚಿತ್ರವಿತ್ತು. ಈ ಬಂದರಿನಲ್ಲಿ ಪರಮಾಣು ಶಸ್ತ್ರಾಸ್ತ್ರಗಳು ಮತ್ತು ಇಂತಹ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲಾಗಿರುವ ಸಬ್ ಮೆರಿನುಗಳು, ಏರ್ ಕ್ರಾಫ್ಟ್ ಇತ್ಯಾದಿಗಳ ಕುರಿತು ಮಾಹಿತಿ ನೀಡಲಾಯಿತು. ತನ್ನ ನೆರೆಯ ದೇಶಕ್ಕಿಂತ ಕೇವಲ ಕೆಲವೇ ನೂರು ಕಿ.ಮೀ. ದೂರದಲ್ಲಿ ಚೀನಾವು ಅತ್ಯಾಧುನಿಕ ಪರಮಾಣು ಶಸ್ತ್ರಾಸ್ತ್ರವನ್ನು ಸಂಗ್ರಹಿಸಿಟ್ಟಿರುವ ಬಗ್ಗೆ ಕೂಡ ಈ ವರದಿಯಲ್ಲಿ ಛಾಯಾಚಿತ್ರ ಸಹಿತ ವಿವರ ನೀಡಲಾಯಿತು.

2008: ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಮಾಡಿದ ವ್ಯಕ್ತಿಗೆ ಸಿರ್ಸಾದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ 5 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ತೀರ್ಪು ಕೊಟ್ಟಿತು. ಹರಿಯಾಣದ ಕಲನ್ವಾಲಿ ಪಟ್ಟಣದ ಬಿಲ್ಲೂ ಎಂಬಾತ ಶಾಲೆಯಿಂದ ಹಿಂದಿರುಗುತ್ತಿದ್ದ ಅದೇ ಪಟ್ಟಣದ ಬಾಲಕಿಯೊಬ್ಬಳನ್ನು ಪುಸಲಾಯಿಸಿ ಆಮೇಲೆ ಅತ್ಯಾಚಾರ ಎಸಗಿದ್ದ. ಪಟ್ಟಣದ ಪುರಸಭೆಯ ನೌಕರನಾದ ಬಿಲ್ಲೂ ಅತ್ಯಾಚಾರ ಎಸಗಿದ್ದು ವೈದ್ಯಕೀಯ ಪರೀಕ್ಷೆಯಲ್ಲೂ ಖಚಿತವಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎಚ್.ಪಿ.ಸಿಂಗ್ ಅವರು 5 ವರ್ಷ ಕಠಿಣ ಶಿಕ್ಷೆ ಹಾಗೂ 1000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದರು.

2008: ಬಿಎಸ್ಪಿ ನಾಯಕನೊಬ್ಬನನ್ನು ಹತ್ಯೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷದ ಕಾರ್ಯಕರ್ತನೊಬ್ಬ ಸೇರಿದಂತೆ ಏಳು ಮಂದಿಗೆ ಬಸ್ತಿಯ ತ್ವರಿತಗತಿಯ ನ್ಯಾಯಾಲಯ ಜೀವಾವಧಿ ಸಜೆ ವಿಧಿಸಿತು.

2008: ರಾಷ್ಟ್ರೀಯ ಸಲಹಾ ಮಂಡಳಿ ಪ್ರಧಾನ ಕಾರ್ಯದರ್ಶಿ, ನಿವೃತ್ತ ಐಎಎಸ್ ಅಧಿಕಾರಿ ಅರುಣ್ ಭಟ್ನಾಗರ್ ಅವರು ಪ್ರಸಾರ ಭಾರತಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಎಂ.ವಿ.ಕಾಮತ್ ಅವರಿಂದ ತೆರವಾದ ಸ್ಥಾನಕ್ಕೆ 2 ತಿಂಗಳ ಬಳಿಕ ಅರುಣ್ ನೇಮಕಗೊಂಡರು.

2008: ಅಶಿಸ್ತು ತೋರಿದ ರಾಜಸ್ಥಾನ ರಾಯಲ್ಸ್ ನಾಯಕ ಶೇನ್ ವಾರ್ನ್ ಹಾಗೂ ಕೋಲ್ಕತ ನೈಟ್ ರೈಡರ್ಸ್ ಮುಂದಾಳು ಸೌರವ್ ಗಂಗೂಲಿಗೆ ಪಂದ್ಯ ಸಂಭಾವನೆಯ ಶೇಕಡಾ ಹತ್ತರಷ್ಟು ಮೊತ್ತದ ದಂಡ ವಿಧಿಸಿ, ಛೀಮಾರಿ ಹಾಕಲಾಯಿತು.

2007: ರೈತರ ಬೆಳೆಸಾಲ ಮನ್ನಾ ಯೋಜನೆಗೆ ವಿಧಿಸಲಾಗಿದ್ದ 50,000 ರೂಪಾಯಿಗಳ ಮಿತಿಯನ್ನು ರಾಜ್ಯ ಸರ್ಕಾರವು ತೆಗೆದುಹಾಕಿತು. ಬೆಳೆಸಾಲ ಪಡೆದ ಎಲ್ಲ ರೈತರಿಗೂ ಸಾಲ ಮನ್ನಾ ಯೋಜನೆ ವಿಸ್ತರಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಕಟಿಸಿದರು.

2007: ಹಿರಿಯ ಸಾಹಿತಿ ಪಿ.ವಿ. ನಾರಾಯಣ ಅವರ `ಧರ್ಮಕಾರಣ' ಕೃತಿಯ ಮೇಲೆ ರಾಜ್ಯ ಸರ್ಕಾರವು ವಿಧಿಸಿದ್ದ ನಿಷೇಧವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿಯಿತು. ಬಸವಣ್ಣ, ಅಕ್ಕನಾಗಮ್ಮ ಮತ್ತು ಚನ್ನಬಸವಣ್ಣ ಅವರ ಜನ್ಮ ಕುರಿತು ಕೃತಿಯಲ್ಲಿ ಮಾಡಿದ್ದ ಉಲ್ಲೇಖವು ತೀವ್ರ ವಿವಾದಕ್ಕೆ ಕಾರಣವಾಗಿತ್ತು.

2006: ಒರಿಸ್ಸಾದ ನಾಲ್ಕೂವರೆ ವರ್ಷದ ಪೋರ ಬುಧಿಯಾ ಸಿಂಗ್ 65 ಕಿ.ಮೀ. ದೂರವನ್ನು ಯಾವುದೇ ಅಡತಡೆ ರಹಿತವಾಗಿ ಕ್ರಮಿಸಿ ಮ್ಯಾರಾಥಾನ್ ಓಟದಲ್ಲಿ ಲಿಮ್ಕಾ ದಾಖಲೆ ನಿರ್ಮಿಸಿದ. ಪುರಿಯ ಜಗನ್ನಾಥ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಭುವನೇಶ್ವರದ ಲಯನ್ಸ್ ಗೇಟಿನಿಂದ ಓಟ ಆರಂಭಿಸಿದ ಬುಧಿಯಸಿಂಗ್ ಕೇವಲ 7 ಗಂಟೆ, 2 ನಿಮಿಷದಲ್ಲಿ 65 ಕಿ.ಮೀ. ಓಡಿ ಭುವನೇಶ್ವರದ ಡಿಎವಿ ಚೌಕವನ್ನು ತಲುಪಿದ.

1945: ಎರಡನೇ ವಿಶ್ವಸಮರದಲ್ಲಿ ಬರ್ಲಿನ್ ಪತನವನ್ನು ಸೋವಿಯತ್ ಒಕ್ಕೂಟ ಪ್ರಕಟಿಸಿತು. ಇದೇ ವೇಳೆಗೆ ಮಿತ್ರ ಪಡೆಗಳು ಇಟಲಿ ಮತ್ತು ಆಸ್ಟ್ರಿಯಾದ ಕೆಲವು ಭಾಗಗಳಲ್ಲಿ ನಾಝಿ ಪಡೆಗಳು ಶರಣಾಗತವಾದುದನ್ನು ಪ್ರಕಟಿಸಿದವು.

1922: ಭಾರತದ ಬಿಲಿಯರ್ಡ್ಸ್ ಆಟಗಾರ ವಿಲ್ಸನ್ ಜೋನ್ಸ್ ಹುಟ್ಟಿದ ದಿನ. ಇವರು 1958ರಲ್ಲ್ಲಿ ಮೊತ್ತ ಮೊದಲ ಬಾರಿಗೆ ವಿಶ್ವ ಪ್ರಶಸ್ತಿ ಪಡೆಯುವ ಮೂಲಕ ಭಾರತದ ಪ್ರಪ್ರಥಮ ವೈಯಕ್ತಿಕ ಬಿಲಿಯರ್ಡ್ಸ್ ವಿಶ್ವ ಚಾಂಪಿಯನ್ ಎಂಬ ಹೆಗ್ಗಳಿಕೆ ಪಡೆದರು. ಮೂರು ಅಮೆಚೂರ್ ಜಾಗತಿಕ ಪ್ರಶಸ್ತಿಗಳನ್ನು ಇವರು ಗೆದ್ದುಕೊಂಡರು.

1921: ಇಪ್ಪತ್ತನೇ ಶತಮಾನದ ಶ್ರೇಷ್ಠ ಚಿತ್ರ ನಿರ್ಮಾಪಕರಲ್ಲೊಬ್ಬರಾದ ಬಂಗಾಳಿ ಚಲನಚಿತ್ರ ನಿರ್ದೇಶಕ ಸತ್ಯಜಿತ್ ರೇ (1921-92) ಜನ್ಮದಿನ. ಇವರ `ಪಥೇರ್ ಪಾಂಚಾಲಿ' ಚಿತ್ರವು ಭಾರತೀಯ ಸಿನಿಮಾಕ್ಕೆ ಜಾಗತಿಕ ಮನ್ನಣೆಯನ್ನು ತಂದುಕೊಟ್ಟಿತು.

1913: ಹಳೆ ತಲೆಮಾರಿನ ಅಪರೂಪದ ಅನುವಾದಕಿ ಲೇಖಕಿ ಸಾವಿತ್ರಮ್ಮ ಹೆಬ್ಬಳಲು ವೆಲಪನೂರು ಸಾವಿತ್ರಮ್ಮ (ಎಚ್.ವಿ. ಸಾವಿತ್ರಮ್ಮ) ಅವರು ಎಂ.ರಾಮರಾವ್- ಮೀನಾಕ್ಷಮ್ಮ ದಂಪತಿಯ ಪುತ್ರರಾಗಿ ಈ ದಿನ ಜನಿಸಿದರು.

1519: ಜಗತ್ತಿನ ಶ್ರೇಷ್ಠ ಕಲಾವಿದರಲ್ಲಿ ಒಬ್ಬನಾದ ಲಿಯೋನಾರ್ಡ್ ಡ ವಿಂಚಿ ತನ್ನ 67ನೇ ವಯಸ್ಸಿನಲ್ಲಿ ಫ್ರಾನ್ಸಿನ ಕ್ಲೌಕ್ಸಿನಲ್ಲಿ ಮೃತನಾದ. ಸೇಂಟ್ ಫ್ಲೋರೆಂಟಿನ್ನಿನ ಪ್ಯಾಲೇಸ್ ಚರ್ಚಿನಲ್ಲ್ಲಿ ಆತನ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಫ್ರೆಂಚ್ ಕ್ರಾಂತಿಯ ಸಂದರ್ಭದಲ್ಲಿ ಈ ಪ್ಯಾಲೇಸ್ ಚರ್ಚ್ ವಿಂಚಿಯ ಗೋರಿ ಸಹಿತವಾಗಿ ಧ್ವಂಸಗೊಂಡಿತು.

No comments:

Post a Comment