2020: ನವದೆಹಲಿ: ಕೊರೋನವೈರಸ್ ವಿರುದ್ಧ ಹೋರಾಡುವಲ್ಲಿ ಮುಂಚೂಣಿಯಲ್ಲಿರುವ ವೈದ್ಯರು, ವಿಮಾನಯಾನ ಸಿಬ್ಬಂದಿ ಮತ್ತು ಅಗತ್ಯ ಸೇವೆಗಳ ಸಿಬ್ಬಂದಿಗಳ ವಿರುದ್ಧ ಕೆಲವರು ದುರ್ವರ್ತನೆ ತೋರುತ್ತಿರುವ ವರದಿಗಳು ಬಂದಿರುವುದು ಬೇಸರ
ಉಂಟು ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ 2020 ಮಾರ್ಚ್ 25ರ ಬುಧವಾರ ಹೇಳಿದರು. ಸಚಿವ ಸಂಪುಟ ಸಭೆಯಲ್ಲಿ
ಸಚಿವರ ಮಧ್ಯೆ ಅಂತರ ಕಾಯ್ದುಕೊಳ್ಳುವ ಮೂಲಕ ದೇಶಕ್ಕೆ ಕೊರೋನಾವೈರಸ್ ವಿರೋಧಿ ಹೋರಾಟದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಮಹತ್ವವನ್ನು ಸಾರಿದ ಪ್ರಧಾನಿ ಬಳಿಕ ತಮ್ಮ ಕ್ಷೇತ್ರವಾದ ವಾರಣಾಸಿಯ ಜನರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಹನ ನಡೆಸಿದರು.‘ಆಸ್ಪತ್ರೆಗಳಲ್ಲಿ ಬಿಳಿ ಸಮವಸ್ತ್ರದಲ್ಲಿ ಕೆಲಸ ಮಾಡುವ ಆರೋಗ್ಯ ರಕ್ಷಣಾ
ವೃತ್ತಿನಿರತರು ಇಂದು ನಮಗೆ ದೇವರಿಗೆ
ಸಮಾನರು. ಅವರು ನಮ್ಮನ್ನು ರೋಗದಿಂದ ರಕ್ಷಿಸುತ್ತಿದ್ದಾರೆ. ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು
ಅವರು ನಮ್ಮನ್ನು ಉಳಿಸುತ್ತಿದ್ದಾರೆ"
ಎಂದು ಅವರು ಈ ಸಂದರ್ಭದಲ್ಲಿ ನುಡಿದರು. ಮಾರಣಾಂತಿಕ ವೈರಸ್ ಶ್ರೀಮಂತರು ಮತ್ತು ಬಡವರ ನಡುವೆ ಯಾವುದೇ ವ್ಯತ್ಯಾಸವನ್ನು ತೋರಿಸುವುದಿಲ್ಲ ಎಂದು ಪ್ರಧಾನಿ ಪ್ರತಿಪಾದಿಸಿದರು ಮತ್ತು ಜನರು ಮನೆಯಲ್ಲಿಯೇ ಇದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಅಭ್ಯಾಸ ಮಾಡಲು ಸಲಹೆ ಮಾಡಿದರು. ಮಹಾಭಾರತ ಯುದ್ಧವನ್ನು ೧೮ ದಿನಗಳಲ್ಲಿ ಗೆದ್ದಿದ್ದಾರೆ ಆದರೆ ಕೊರೋನವೈರಸ್ ವಿರುದ್ಧದ ಈ ಯುದ್ಧ
ಗೆಲ್ಲಲು ೨೧ ದಿನಗಳು ಬೇಕು ಎಂದು ಮೋದಿ ೨೧ ದಿನಗಳ ರಾಷ್ಟ್ರವ್ಯಾಪಿ ಸ್ತಬ್ಧ
ಸ್ಥಿತಿಯನ್ನು (ಲಾಕ್ ಡೌನ್) ಉಲ್ಲೇಖಿಸುತ್ತಾ ಹೇಳಿದರು. ಈಮಧ್ಯೆ, ಭಾರತದಲ್ಲಿ ಕೊರೊನಾವೈರಸ್- ಸೋಂಕು
ಖಚಿತಪಟ್ಟಿರುವ ಪ್ರಕರಣಗಳ ಸಂಖ್ಯೆ ೬೦೬ ಕ್ಕೆ ಏರಿತು.
ಇದುವರೆಗೆ ೪೨ ರೋಗಿಗಳು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿತು. ದೇಶಾದ್ಯಂತ ಈವರೆಗೆ 10 ಸಾವುಗಳು ವರದಿಯಾಗಿವೆ. ಏನಿದ್ದರೂ
ಈವರೆಗೂ ಸೋಂಕಿನ ಸಮುದಾಯ ಪ್ರಸರಣದ ವರದಿಗಳು ಬಂದಿಲ್ಲ ಎಂದು ಸಚಿವಾಲಯದ ಜಂಟಿ ಕಾರ್ಯದರ್ಶಿ
ಲವ ಅಗರ್ವಾಲ್ ತಿಳಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಅಯೋಧ್ಯಾ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು 2020 ಮಾರ್ಚ್
25ರ ಬುಧವಾರ ಅಯೋಧ್ಯೆಯ
ರಾಮ ಜನ್ಮಭೂಮಿಯಲ್ಲಿ ನಡೆದ ಸಮಾರಂಭದಲ್ಲಿ ರಾಮಲಲ್ಲಾ ವಿಗ್ರಹವನ್ನು ತಾತ್ಕಾಲಿಕ
ದೇವಾಲಯದಿಂದ ಆವರಣದಲ್ಲಿ ನಿರ್ಮಿಸಲಾದ ‘ಬಾಲ ಆಲಯ’ಕ್ಕೆ 27 ವರ್ಷಗಳ
ಬಳಿಕ ಸ್ಥಳಾಂತರಿಸಿದರು. ಒಂಬತ್ತು ದಿನಗಳ ಕಾಲ ನಡೆಯುವ ನವರಾತ್ರಿ ಹಬ್ಬದ ಮೊದಲ ದಿನವಾದ ಬುಧವಾರ
ಮುಂಜಾನೆ ೪.೩೦ ರ
ಸುಮಾರಿಗೆ ಸಮಾರಂಭವು ನಡೆಯಿತು.
ರಾಮ ಜನ್ಮಭೂಮಿಯ ಆರಾಧ್ಯ ದೇವತೆಯಾಗಿರುವ ರಾಮ ಲಲ್ಲಾನನ್ನು ೨೭ ವರ್ಷಗಳ
ನಂತರ
(ಡಿಸೆಂಬರ್ ೬, ೧೯೯೨) ತಾತ್ಕಾಲಿಕ ದೇವಾಲಯದ ಗರ್ಭಗುಡಿಯಿಂದ ಸ್ಥಳಾಂತರಿಸಲಾಯಿತು.
ಈ
ಸಂದರ್ಭದಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್
ಸದಸ್ಯರು
ಉಪಸ್ಥಿತರಿದ್ದರು.
ನವದೆಹಲಿ, ಅಯೋಧ್ಯೆ ಮತ್ತು ವಾರಣಾಸಿಯ ಹಲವಾರು ಅರ್ಚಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಪುರೋಹಿತರು
ನಿರ್ಧರಿಸಿದ್ದ ಶುಭ ಸಮಯದಲ್ಲಿ ಆರಾಧ್ಯದೇವತೆ ರಾಮಲಲ್ಲಾನನ್ನು ತಾತ್ಕಾಲಿಕ ದೇವಾಲಯದಿಂದ ಪಲ್ಲಕ್ಕಿಯಲ್ಲಿ ಸ್ಥಳಾಂತರಿಸಲಾಯಿತು. ಈಗಿರುವ ತಾತ್ಕಾಲಿಕ ದೇವಾಲಯದಿಂದ ಕೆಲವೇ ಮೀಟರ್ ದೂರದಲ್ಲಿರುವ ಹೊಸ ಸ್ಥಳಕ್ಕೆ ಈ ಪಲ್ಲಕ್ಕಿಯನ್ನು ಮುಖ್ಯಮಂತ್ರಿ ಸೇರಿದಂತೆ ನಾಲ್ಕು ಮಂದಿ
ಹೊತ್ತುಕೊಂಡು ನಡೆದರು.
ರಾಮಲಲ್ಲಾ ವಿಗ್ರಹದ ಸ್ಥಳಾಂತರವು ರಾಮ
ಜನ್ಮಭೂಮಿಯಲ್ಲಿ ಭವ್ಯ ದೇವಾಲಯವನ್ನು ನಿರ್ಮಿಸುವ ಯೋಜನೆಯ ಭಾಗವಾಗಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ: ಕೊರೋನಾವೈರಸ್ ಸೋಂಕಿನ ವಿರುದ್ಧ ಸಮರಕ್ಕಾಗಿ 21 ದಿನಗಳ ಸ್ತಬ್ಧ ಸ್ಥಿತಿ (ಲಾಕ್ ಡೌನ್) ಘೋಷಿಸಿರುವ ಕೇಂದ್ರ
ಸರ್ಕಾರ,, ಈ ಸಂಕಷ್ಟದ ಸಮಯದಲ್ಲಿ ದೇಶದ ಜನಸಾಮಾನ್ಯರ ನೆರವಿಗಾಗಿ
ನೂತನ ಪಡಿತರ ಯೋಜನೆಯನ್ನು 2020 ಜನವರಿ
25ರ ಬುಧವಾರ ಜಾರಿಗೊಳಿಸಿತು. ಈ ಯೋಜನೆಯ ಅಡಿಯಲ್ಲಿ ೮೦ ಕೋಟಿ ಪಡಿತರದಾರರಿಗೆ ಪ್ರತೀ ಕೆ.ಜಿ.ಗೆ ೨ ರೂ. ದರದಲ್ಲಿ ಗೋಧಿ ಹಾಗೂ ಪ್ರತೀ ಕೆ.ಜಿ.ಗೆ ೩ ರೂ. ದರದಲ್ಲಿ ಅಕ್ಕಿಯನ್ನು ನೀಡಲು ಕೇಂದ್ರ ಸರ್ಕಾರ ತೀರ್ಮಾನಿಸಿತು. ದೆಹಲಿಯಲ್ಲಿ ಸಚಿವ ಪ್ರಕಾಶ್ ಜಾವಡೇಕರ್ ಅವರು ಸುದ್ದಿಗೋಷ್ಠಿ ಯಲ್ಲಿ
ಈ ವಿಚಾರವನ್ನು ಪ್ರಕಟಿಸಿದರು. ಕಟ್ಟಡ ಕಾರ್ಮಿಕರಿಗೆ ಉಚಿತ ಊಟವನ್ನು ಪೂರೈಸುವ ನಿರ್ಧಾರಕ್ಕೂ ಕೇಂದ್ರ ಬಂದಿದೆ. ಜೊತೆಗೆ
ಕೋವಿಡ್ ೧೯ ಕ್ಕೆ ಸಂಬಂಧಿಸಿದಂತೆ ಜಿಲ್ಲಾವಾರು ಸಹಾಯ ವಾಣಿ (ಹೆಲ್ಪ್ ಲೈನ್) ತೆರೆಯಲೂ ನಿರ್ಧರಿಸಲಾಯಿತು.
ಪ್ರಧಾನಿ ನರೇಂದ್ರ ಮೋದಿಯವರು ೨೧ ದಿನ ಇಡೀ ದೇಶ ಸ್ತಗಿತ ಸ್ಸ್ಥಿತಿ (ಲಾಕ್ ಡೌನ್) ಘೋಷಿಸಿ ಆದೇಶ ಹೊರಡಿಸಿದ್ದಾರೆ.
ಅದರ ಬೆನ್ನಲ್ಲೇ ದೇಶಾದ್ಯಂತ ಏಪ್ರಿಲ್ ೧೪ರವರೆಗೆ ರೈಲು ಸಂಚಾರ ಸ್ತಬ್ದ ಮಾಡಲಾಯಿತು.
ಮಾ. ೩೧ರವರೆಗೆ ಮಾತ್ರ ರೈಲು
ಸಂಚಾರ ಬಂದ್ ಮಾಡಿದ್ದ ರೈಲ್ವೆ ಇಲಾಖೆ ಈಗ ಇಡೀ ದೇಶ ಸ್ತಗಿತ
ಸ್ಥಿತಿ ಘೋಷಿಸಿದ ಹಿನ್ನೆಲೆಯಲ್ಲಿ ರೈಲು ಸಂಚಾರ ಆದೇಶವನ್ನು ಏ.೧೪ರವರೆಗೂ ವಿಸ್ತರಿಸಿ ಅಧಿಕೃತವಾಗಿ ಆದೇಶ ವನ್ನು
ಈದಿನ ಹೊರಡಿಸಿತು. (ವಿವರಗಳಿಗೆಇಲ್ಲಿ ಕ್ಲಿಕ್ ಮಾಡಿರಿ)
2020: ಲಂಡನ್: ವಿಶ್ವವ್ಯಾಪಿ ಕೋವಿಡ್ ೧೯ ವೈರಸ್ ಮಹಾಮಾರಿ ಲಂಡನ್ ಅರಮನೆಗೂ ಕಾಲಿಟ್ಟಿತು. 71ರ ಹರೆಯದ ರಾಜಕುಮಾರ ಚಾರ್ಲ್ಸ್ ಅವರಲ್ಲಿ ಈ ವೈರಸ್ ಸೋಂಕಿನ ಲಕ್ಷಣಗಳು ದೃಢಪಟ್ಟಿವೆ ಎಂದು ಅರಮನೆಯ ಮೂಲಗಳು 2020 ಮಾರ್ಚ್ 25ರ ಬುಧವಾರ ತಿಳಿಸಿದವು. ಸ್ಕಾಟ್ ಲ್ಯಾಂಡ್ ನಲ್ಲಿ ಸೋಂಕು ಪತ್ತೆ ಪರೀಕ್ಷೆಗೆ ಒಳಗಾಗಿದ್ದ ರಾಜಕುಮಾರ
ಚಾರ್ಲ್ಸ್ ಅವರ ಪರೀಕ್ಷಾ ವರದಿಗಳು ಸೋಂಕು
ತಗುಲಿದ್ದನ್ನು ಖಚಿತ ಪಡಿಸಿವೆ. ಏನಿದ್ದರೂ ಚಾರ್ಲ್ಸ್ ಅವರ ಜೊತೆಯಲ್ಲಿಯೇ ಪರೀಕ್ಷೆಗೊಳಗಾಗಿದ್ದ ಅವರ ಪತ್ನಿ ಕಾರ್ನ್ ವಾಲ್ ಡ್ಯೂಕ್ ಕ್ಯಾಮಿಲ್ಲ ಅವರಲ್ಲಿ ವೈರಸ್ ಸೋಂಕಿನ ಲಕ್ಷಣ ಕಂಡು ಬಂದಿಲ್ಲ ಎಂದು ವರದಿ ಹೇಳಿತು. ಇದೀಗ ರಾಜಕುಮಾರ ಚಾರ್ಲ್ಸ್ ಅವರು ಏಕಾಂಗಿವಾಸಕ್ಕೆ ( ಐಸೊಲೇಷನ್ ) ಒಳಗಾಗಿದ್ದಾರೆ ಎಂದು
ವರದಿ ತಿಳಿಸಿತು. ಚಾರ್ಲ್ಸ್
ಅವರ ದೇಹದಲ್ಲಿ ಕೋವಿಡ್ ೧೯ ವೈರಸ್ಸಿನ
ಅಲ್ಪ ಪ್ರಮಾಣದ ಲಕ್ಷಣಗಳು ಕಾಣಿಸಿಕೊಂಡಿರುವುದು ಹೊರತುಪಡಿಸಿದರೆ ಉಳಿದಂತೆ ಅವರ ಆರೋಗ್ಯ ಸ್ಥಿರವಾಗಿದೆ ಹಾಗೂ ಕಳೆದ ವಾರ ಪೂರ್ತಿ ಅವರು ಮನೆಯಲ್ಲಿದ್ದು ತಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ನಿರತರಾಗಿದ್ದರು ಎಂದು
ವರದಿ ಹೇಳಿತು. ಸ್ಪೇನಿನಲ್ಲಿ ಗಂಭೀರ ಸ್ಥಿತಿ: ಈಮಧ್ಯೆ
ಸ್ಪೇನಿನಲ್ಲಿ ಕೊರೋನಾ ಸೋಂಕಿಗೆ ಬಲಿಯಾದವರ ಸಂಖ್ಯೆ ಇಟಲಿ ಮತ್ತು ಚೀನಾವನ್ನೇ ಮೀರಿಸಿತು.
. ಕಳೆದ ೨೪ಗಂಟೆಗಳ ಅವಧಿಯಲ್ಲಿ ಸ್ಪೇನಿನಲ್ಲಿ
೭೩೮ ಜನ ಸಾವನ್ನಪ್ಪಿದ್ದು ಒಟ್ಟಾರೆ ಸಾವಿನ ಸಂಖ್ಯೆ ೩,೪೩೪ಕ್ಕೆ ಏರಿಕೆಯಾಗಿದೆ ಎಂದು ಅಲ್ಲಿನ ಸರ್ಕಾರ ತಿಳಿಸಿತು.
(ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಕಾಬೂಲ್: ಭಾರೀ ಶಸ್ತ್ರ ಸಜ್ಜಿತ ಉಗ್ರರ ಗುಂಪು ಗುರುದ್ವಾರದ ಮೇಲೆ ಏಕಾಏಕಿ ದಾಳಿ ನಡೆಸಿ ೨೭ ಮಂದಿಯನ್ನು ಹತ್ಯೆಗೈದ
ಘಟನೆ ಅಪ್ಘಾನಿಸ್ಥಾನದ ಕಾಬೂಲ್ ನ ಶೋರ್ ಬಜಾರ್ ಪ್ರದೇಶದಲ್ಲಿ 2020 ಮಾರ್ಚ್ 25ರ ಬುಧವಾರ ಘಟಿಸಿತು. ಸಿಖ್ ಗುರುದ್ವಾರದ ಮೇಲೆ ದಾಳಿ ನಡೆಸಿರುವ ಘಟನೆಯನ್ನು ಭಾರತ ‘ಹೇಡಿ
ಕೃತ್ಯ’ ಎಂಬುದಾಗಿ ಖಂಡಿಸಿತು. ಸಂತ್ರಸ್ತರ ಕುಟುಂಬಕ್ಕೆ ಸಾಂತ್ವನ ಹೇಳಿದ
ಕೇಂದ್ರ ಸರ್ಕಾರ ಘಟನೆಯಲ್ಲಿ ಗಾಯಗೊಂಡವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸಿತು.
ಅಫ್ಘಾನಿಸ್ತಾನದಲ್ಲಿರುವ ಎಲ್ಲಾ ಹಿಂದೂ ಮತ್ತು ಸಿಖ್ ಸಮುದಾಯದ ಕುಟುಂಬಗಳಿಗೆ ಎಲ್ಲಾ ರೀತಿಯ ನೆರವು ನೀಡಲು ಭಾರತ ಸಿದ್ದವಾಗಿದೆ ಎಂದು ಸರ್ಕಾರ
ತಿಳಿಸಿತು. ಕಾಬೂಲ್ ನಲ್ಲಿರುವ ಸಿಖ್ ಗುರುದ್ವಾರದ ಮೇಲೆ ನಡೆಸಿರುವ ದಾಳಿಯ ಹೊಣೆಯನ್ನು ಐಸಿಸ್ ಹೊತ್ತುಕೊಂಡಿರುವುದಾಗಿ ಎಸ್ ಐಟಿಇ ಇಂಟೆಲಿಜೆನ್ಸ್ ಗ್ರೂಪ್ ತಿಳಿಸಿತು.
ಈ ದಾಳಿಯ ಹಿಂದೆ ಪಾಕಿಸ್ತಾನದ ಐಎಸ್ ಐ ಕೈವಾಡ ಇದ್ದಿರಬಹುದು ಎಂದು ಭಾರತದ ಗುಪ್ತಚರ ಇಲಾಖೆ ಶಂಕೆ ವ್ಯಕ್ತಪಡಿಸಿತು.
(ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment