2020: ನವದೆಹಲಿ:
ಭಯೋತ್ಪಾದಕ ದಾಳಿಗೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಗಳನ್ನು ಬಳಸಿಕೊಳ್ಳುತ್ತಿದ್ದ, ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ (ಐಎಸ್ಕೆಪಿ) ಉಗ್ರ ಸಂಘಟನೆ ಜೊತೆಗೆ ಸಂಪರ್ಕ ಹೊಂದಿದ್ದ ಕಾಶ್ಮೀರದ ದಂಪತಿಯನ್ನು ದಕ್ಷಿಣ ದೆಹಲಿ ಜಾಮಿಯಾ ನಗರದ ಪೊಲೀಸರು 2020 ಮಾರ್ಚ್ 08ರ ಭಾನುವಾರ ಬೆಳಗ್ಗೆ ಬಂಧಿಸಿದರು.
ಈ ದಂಪತಿ ಅಫ್ಘಾನಿಸ್ಥಾನದ ಉನ್ನತ ಐಎಸ್ಕೆಪಿ ಸದಸ್ಯರ ಜೊತೆಗೆ ಸಂಪರ್ಕ ಇಟ್ಟುಕೊಂಡು ಪೌರತ್ವ ತಿದ್ದುಪಡಿ
ಕಾಯ್ದೆ ವಿರೋಧಿ ಪ್ರತಿಭಟನೆಯನ್ನು ಬಳಸಿಕೊಂಡು ಭಯೋತ್ಪಾದಕ ದಾಳಿಗಳನ್ನು ನಡೆಸುವಂತೆ ಮುಸ್ಲಿಂ ಯುವಕರನ್ನು ಪ್ರಚೋದಿಸುತ್ತಿದ್ದರು ಎಂದು ಸುದ್ದಿ ಮೂಲಗಳು ತಿಳಿಸಿದವು. ’ಕಾಶ್ಮೀರದ ಶ್ರೀನಗರದ ದಂಪತಿ ಜಹಾನ್ಜೈಬ್ ಸಮಿ ಮತ್ತು ಆತನ ಪತ್ನಿ ಹೀನಾ ಬಶೀರ್ ಬೇಗ್ ಇವರನ್ನು ಬಂಧಿಸಲಾಗಿದೆ. ಅವರನ್ನು ಬಂಧನಕ್ಕೆ ಒಳಪಡಿಸುವ ವಿಧಿವಿಧಾನದ ಪ್ರಕ್ರಿಯೆಯನ್ನು ನಾವು ಪೂರ್ಣಗೊಳಿಸುತ್ತಿದ್ದೇವೆ’ ಎಂದು
ಹಿರಿಯ ಪೊಲೀಸ್ ಅಧಿಕಾರಿ ಒಬ್ಬರು ತಿಳಿಸಿದರು. ಅಫ್ಘಾನಿಸ್ಥಾನದ ಐಎಸ್ಕೆಪಿ ಉಗ್ರ ಸಂಘಟನೆಯ ಜೊತೆಗೆ ಸಂಪರ್ಕ ಇರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಜಹಾನ್ಜೈಬ್ ಸಮಿ ಮೇಲೆ ಭಾರತೀಯ ಗುಪ್ತದಳ ಕೆಲ ದಿನಗಳಿಂದ ಕಣ್ಣಿಟ್ಟಿತ್ತು. ಐಎಸ್ಕೆಪಿಯು ಅಫ್ಘಾನಿಸ್ಥಾನ ಮೂಲದ ಇಸ್ಲಾಮಿಕ್ ಸ್ಟೇಟ್ (ಐಎಸ್) ಸಂಘಟನೆಯ ಆಧೀನ ಸಂಘಟನೆಯಾಗಿದೆ. ಆತ್ಮಹತ್ಯಾ ದಾಳಿ ಸೇರಿದಂತೆ ಭಯೋತ್ಪಾದಕ ದಾಳಿ ನಡೆಸುವ ಉದ್ದೇಶ ಈ ಸಂಘಟನೆ ಇದ್ದಂತೆ
ಕಂಡು ಬರುತ್ತದೆ. ಈ ಉದ್ದೇಶಕ್ಕಾಗಿ ಶಸ್ತ್ರಾಸ್ತ್ರ
ಸಂಗ್ರಹಿಸುವ ಯತ್ನವನ್ನು ಅದು ನಡೆಸುತ್ತಿತ್ತು ಎಂದು ಅಧಿಕಾರಿ ನುಡಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಜಮ್ಮು:
ಭಾರಿ ಮಳೆ ಹಾಗೂ ಹಿಮ ಸುರಿದ ಪರಿಣಾಮವಾಗಿ ಜಮ್ಮು-ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಮಾರ್ಗ ಮಧ್ಯೆ ಹಿಮದಲ್ಲಿ ಸಿಲುಕಿದ್ದ ಐವರು ಮಹಿಳೆಯರು ಸೇರಿ ಒಂಬತ್ತು ಜನರನ್ನು ಸೇನೆ ಕ್ಷಿಪ್ರ ಕಾರ್ಯಾಚರಣೆ ಮೂಲಕ 2020 ಮಾರ್ಚ್ 08ರ ಭಾನುವಾರ ರಕ್ಷಿಸಿತು. ಪ್ರವಾಸಿಗರ
ವಾಹನವೊಂದು ಭಾರಿ ಹಿಮಮಳೆಗೆ ಸಿಲುಕಿದ ಮಾಹಿತಿ ತಿಳಿದ ತಕ್ಷಣ ಕಾರ್ಯಾಚರಣೆ ನಡೆಸಿದ ಸೇನೆ ಅವರನ್ನು ರಕ್ಷಿಸಿತು. ಜಮ್ಮು-ಕಾಶ್ಮೀರ ಪ್ರವಾಸಕ್ಕೆಂದು ಜನರ ತಂಡಗಳು ಆಗಮಿಸತೊಡಗಿವೆ. ಹೀಗೆ ಪ್ರವಾಸಕ್ಕೆ ಬಂದಿದ್ದ ಪ್ರಯಾಣಿಕರ ಕಾರೊಂದು ರಾಜೌರಿ ಜಿಲ್ಲೆಯ ಥಾನಮಂಡಿ ಹಾಗೂ ಬಫ್ಲಿಯಾಜ್ ಮಾರ್ಗದ ನಡುವಿನ ದೇರಾ ಕಿ ಗಲಿ ಎಂಬಲ್ಲಿ
ದಿಢೀರ್ ಹಿಮಮಳೆಯಿಂದ ಸಿಲುಕಿಕೊಂಡಿತು. ಇದರ ಬೆನ್ನಲ್ಲೇ ಇನ್ನೂ ಕೆಲವರು ಸಂಕಷ್ಟಕ್ಕೆ ಗುರಿಯಾದರು. ಮಾಹಿತಿ ತಿಳಿದ ಸೇನೆಯ ರೋಮಿಯೊ ಪಡೆಯ ಸಿಬ್ಬಂದಿ ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ಆಗಮಿಸಿ ಜನರನ್ನು ರಕ್ಷಿಸಿದರು. ಸೇನೆಯ ಕಾರ್ಯಾಚರಣೆಗೆ ಸ್ಥಳೀಯ ಪೊಲೀಸರು ಸಾಥ್ ನೀಡಿ ೯ ಜನ ಪ್ರವಾಸಿಗರನ್ನು
ರಕ್ಷಿಸುವಲ್ಲಿ ಯಶಸ್ವಿಯಾದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ:
ಯೆಸ್ ಬ್ಯಾಂಕ್ ಮತ್ತು ದಿವಾನ್
ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ( ಡಿಎಚ್ಎಫ್ಎಲ್) ರಿಯಾಲಿಟಿ ಕಂಪೆನಿಗಳ ಹಣ ವರ್ಗಾವಣೆ ಪ್ರಕರಣಗಳಿಗೆ
ಸಂಬಂಧಿಸಿದಂತೆ ಯೆಸ್ ಬ್ಯಾಂಕ್ ಸ್ಥಾಪಕ ರಾಣಾ ಕಪೂರ್ ನಿವಾಸದ ಮೇಲೆ ದಾಳಿ ನಡೆಸಿದ ಜಾರಿ ನಿರ್ದೇಶನಾಲಯವು ಹಣವರ್ಗಾವಣೆ ಕಾಯ್ದೆ ಅಡಿಯಲ್ಲಿ ಅವರನ್ನು ಬಂಧಿಸಿದ ಬೆನ್ನಲ್ಲೇ ಕೇಂದ್ರೀಯ ತನಿಖಾ ದಳ (ಸಿಬಿಐ) ಕೂಡಾ 2020 ಮಾರ್ಚ್ 08ರ ಭಾನುವಾರ ಅವರ ವಿರುದ್ಧ
ಪ್ರಕರಣ ದಾಖಲಿಸಿದ್ದು ಕಪೂರ್ ಅವರಿಗೆ ’ಡಬಲ್ ಟ್ರಬಲ್’ ಎದುರಾಯಿತು. ಪ್ರಕರಣದ ಕ್ರಿಮಿನಲ್ ಪಿತೂರಿ ಮತ್ತು ಭ್ರಷ್ಟಾಚಾರದ ಅಂಶಗಳ ಮೇಲೆ ಸಿಬಿಐ ಗಮನ ಕೇಂದ್ರೀಕರಿಸುವ ಸಾಧ್ಯತೆಯಿದೆ. ಆರ್ಥಿಕ ಬಿಕ್ಕಟ್ಟನ್ನು ಎದುರಿಸುತಿರುವ ಯೆಸ್
ಬ್ಯಾಂಕನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿರುವ ಆರ್ಬಿಐ ಅದರ ವ್ಯವಹಾರಗಳನ್ನು ನಡೆಸಲು ನಿರ್ವಾಹಕರನ್ನು ನೇಮಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಂತಹ ಸಂಭಾವ್ಯ ಹೂಡಿಕೆದಾರರಿಂದ ಹೊಸ ಬಂಡವಾಳ ಸಂಗ್ರಹದ ಕಾರಣ ಬ್ಯಾಂಕಿನ ವಹಿವಾಟುಗಳ ಮೇಲೆ ೩೦
ದಿನಗಳ ಕಾಲ ನಿರ್ಬಂಧಗಳನ್ನು ವಿಧಿಸಲಾಗಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ನವದೆಹಲಿ:
ಭಾರತದ ಐದನೇ ದೊಡ್ಡ ಖಾಸಗಿ ಬ್ಯಾಂಕ್ ಎಂಬುದಾಗಿ ಹೆಸರು ಪಡೆದಿರುವ ಯೆಸ್ ಬ್ಯಾಂಕಿನ ಭಾರೀ ಬಿಕ್ಕಟ್ಟಿನ ತನಿಖೆಯ ಮಧ್ಯೆ, ಬ್ಯಾಂಕಿನ ಸ್ಥಾಪಕ ರಾಣಾ ಕಪೂರ್ ಅವರ ಪುತ್ರಿ ರೋಶನಿ ಕಪೂರ್ ಅವರನ್ನು 2020 ಮಾರ್ಚ್ 08ರ ಭಾನುವಾರ ಮುಂಬೈ ವಿಮಾನ
ನಿಲ್ದಾಣದಲ್ಲಿ ಲಂಡನ್ಗೆ ಹೋಗುವ ವಿಮಾನ
ಏರುವ ಮುನ್ನ ತಡೆಯಲಾಯಿತು. ರಾಣಾ ಕಪೂರ್ ಅವರನ್ನು ಭಾನುವಾರ ಹಣ ವರ್ಗಾವಣೆ ಆರೋಪದಲ್ಲಿ
ಬಂಧಿಸಿ, ಮುಂಬೈ ನ್ಯಾಯಾಲಯವು ಮಾರ್ಚ್ ೧೧ರವರೆಗೆ ಜಾರಿ ನಿರ್ದೇಶನಾಲಯಕ್ಕೆ ಒಪ್ಪಿಸಿದ ಬಳಿಕ ಹೊರಡಿಸಲಾದ ಲುಕ್ ಔಟ್ ನೋಟಿಸನ್ನು ಅನುಸರಿಸಿ ರೋಶನಿ ಕಪೂರ್
ಅವರ ಲಂಡನ್ ಪಯಣವನ್ನು ತಡೆಯಲಾಯಿತು ಎಂದು ಮೂಲಗಳು ಹೇಳಿದವು. ರಾಣಾ ಕಪೂರ್ ಆರ್ಥಿಕ ಅಪರಾಧಗಳ ವಿಚಾರಣೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ಕಪೂರ್ ಮತ್ತು ಅವರ ಪುತ್ರಿಯ ದೆಹಲಿ ಮತ್ತು ಮುಂಬೈ ನಿವಾಸಗಳಲ್ಲಿ ಶೋಧ ನಡೆಸಿದ ಬಳಿಕ ಭಾನುವಾರ ನಸುಕಿನಲ್ಲೇ ಬ್ಯಾಂಕ್ ಸಂಸ್ಥಾಪಕರನ್ನು ಬಂಧಿಸಿತ್ತು. ರೋಶನಿ ಕಪೂರ್, ರಾಖೀ ಕಪೂರ್ ಟಂಡನ್ ಮತ್ತು ರಾಧಾ ಕಪೂರ್ ಇವರೆಲ್ಲರೂ ಯೆಸ್ ಬ್ಯಾಂಕ್ ಪತನಕ್ಕೆ ಕಾರಣವಾದ ಹಗರಣದ ಫಲಾನುಭವಿಗಳಾಗಿದ್ದಾರೆ ಎಂದು ಜಾರಿ ನಿದೇಶನಾಲಯವನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿತು. ರಾಣಾ ಕಪೂರ್ ಅವರನ್ನು ಅವರ ವಿರುದ್ಧ ದಾಖಲಿಸಲಾದ ಹಣ ವರ್ಗಾವಣೆ ಪ್ರಕರಣಕ್ಕೆ
ಸಂಬಂಧಿಸಿದಂತೆ ಮುಂಬೈ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿತ್ತು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
2020: ಬಿಕಾನೇರ್/
ನವದೆಹಲಿ: ಕೇರಳದಲ್ಲಿ ಹೊಸದಾಗಿ ೫ ಮಂದಿಗೆ ಕೊರೋನಾವೈರಸ್
ಸೋಂಕು ತಗುಲಿದ್ದು ದೃಢ ಪಡುವುದರೊಂದಿಗೆ 2020 ಮಾರ್ಚ್ 08ರ ಭಾನುವಾರ ಭಾರತದಲ್ಲಿನ ಕೋವಿಡ್
-೧೯ ವೈರಸ್ ಸೋಂಕಿತರ ಸಂಖ್ಯೆ ೩೯ಕ್ಕೆ ಏರಿದೆ. ಇದೇ ವೇಳೆಗೆ ’ಭಾರತೀಯ ಸಂಪ್ರದಾಯ’ದಂತೆ ಮದುವೆಯಾಗಬೇಕು ಎಂದು ಬಯಸಿ ಭಾರತಕ್ಕೆ ಬಂದ ಇಟಲಿ ಜೋಡಿಯ ಕನಸು ’ಕೊರೋನಾ ವೈರಸ್’ ಪರಿಣಾಮವಾಗಿ ನುಚ್ಚು ನೂರಾದ ವರ್ತಮಾನ ಬಂದಿತು. ೨೦ ವರ್ಷಗಳ ಬಾಂಧವ್ಯದ ಬಳಿಕ, ಇಟಲಿ ಜೋಡಿಯೊಂದು ಬಿಕಾನೇರಿನಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಲು ಬಯಸಿತ್ತು. ಆದರೆ ಕನಸನ್ನು ನನಸಾಗಿಸುವ ಸಲುವಾಗಿ ಗೆಳೆಯರು ಮತ್ತು ಕುಟುಂಬ ಸದಸ್ಯರ ಜೊತೆಗೆ ಬಿಕಾನೇರ್ ಹಾದಿಯಲ್ಲಿದ್ದ ಈ ಜೋಡಿ ’ಕೊರೋನಾವೈರಸ್’ ಪರಿಣಾಮವಾಗಿ
ತಮ್ಮ ಯೋಜನೆ ಕೈ ಬಿಟ್ಟು ದೆಹಲಿಗೆ
ವಾಪಸಾಗಬೇಕಾಯಿತು. ಆಂಡ್ರಿಯಾ
ಬೆಲ್ಲಿ (೫೬) ಮತ್ತು ಆಂಟೋನೆಲ್ಲಾ ಸ್ಕಾನೋ (೫೦) ಮದುವೆಗೆ ಸ್ಥಳ, ವಾದ್ಯಮೇಳ, ಸುಮಾರು ೧೫೦ ಮಂದಿ ಅತಿಥಿಗಳಿಗೆ ಭೋಜನ, ಅರ್ಚಕರು ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಅಂತಿಮಗೊಳಿಸಲು ಕಳೆದ ವರ್ಷ ಫೆಬ್ರುವರಿ ಆದಿಯಲ್ಲಿ ಬಿಕಾನೇರಿಗೆ ಭೇಟಿ ನೀಡಿದ್ದರು. ಈ ವರ್ಷ ಮಾರ್ಚ್
೭ರಂದು ಮದುವೆಗೆ ದಿನಾಂಕ ನಿಗದಿ ಪಡಿಸಲಾಗಿತ್ತು. ಜೋಡಿ ಮತ್ತು ಮದುವೆ ದಿಬ್ಬಣದ ಇತರ ಸದಸ್ಯರು ಮಾರ್ಚ್ ೩ರಂದು ಜೈಪುರಕ್ಕೆ ಬಂದಿಳಿದರು ಮತ್ತು ಎರಡು ದಿನ ಅಲ್ಲಿ ವಾಸ್ತವ್ಯ ಹೂಡಿ ವಧುವಿಗೆ ಬೇಕಾದ ವಸ್ತುಗಳನ್ನು ಖರೀದಿಸಿದರು. ಬಳಿಕ ಮಾರ್ಚ್ ೫ರಂದು ಬಿಕಾನೇರಿಗೆ ಪಯಣ ಹೊರಟರು. ‘ಬಿಕಾನೇರಿಗೆ ಹೋಗುವ ದಾರಿಯಲ್ಲಿದ್ದಾಗ, ನಮಗೆ ಇಟಲಿ ಪ್ರಜೆಗಳೆಲ್ಲರೂ ದೆಹಲಿಗೆ ವಾಪಸಾಗಿ ಇಟಲಿ ರಾಯಭಾರಿ ಕಚೇರಿಯ ಉಪ ಮುಖ್ಯಸ್ಥರಿಗೆ ವರದಿ
ಮಾಡಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಲಾಯಿತು. ಇಟಲಿ ನಾಗರಿಕರನ್ನು ಹಿಂದಕ್ಕೆ ಕಳುಹಿಸುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೂ ರಾಜ್ಯ ಸರ್ಕಾರ ಸೂಚಿಸಿದೆ ಎಂದೂ ನಮಗೆ ತಿಳಿಸಲಾಯಿತು’ ಎಂದು
ವರನ ಕಡೆಯವರಿಗೆ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದ್ದ ಹೋಟೆಲ್ ಕಿಷನ್ ಪ್ಯಾಲೇಸ್ನ ಮಹೇಂದ್ರ ಸಿಂಗ್
ಶೆಖಾವತ್ ಪತ್ರಕರ್ತರಿಗೆ ತಿಳಿಸಿದರು. (ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)
No comments:
Post a Comment