ನಾನು ಮೆಚ್ಚಿದ ವಾಟ್ಸಪ್

Sunday, March 15, 2020

ಇಂದಿನ ಇತಿಹಾಸ History Today ಮಾರ್ಚ್ 15

2020: ನವದೆಹಲಿ: ಮಾರಣಾಂತಿಕ ಕೋವಿಡ್ -೧೯ (ಕೊರೋನಾವೈರಸ್) ವಿರುದ್ಧ ಹೋರಾಡಲು ಸರ್ವ ಸನ್ನದ್ಧರಾಗಿರಿ. ಆದರೆ ಭಯಪಡಬೇಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘದ (ಸಾರ್ಕ್) ರಾಷ್ಟ್ರಗಳಿಗೆ  2020 ಮಾರ್ಚ್ 15ರ ಭಾನುವಾರ ಸಂದೇಶ ನೀಡಿದರು.ಸಾರ್ಕ್ ಸದಸ್ಯ ರಾಷ್ಟ್ರಗಳ ನಾಯಕರ ಜೊತೆಗೆ ಕೊರೋನಾವೈರಸ್ ಹಾವಳಿಯ ಹಿನ್ನೆಲೆಯಲ್ಲಿ ವಿಡಿಯೋ ಕಾನ್ಫರೆನ್ಸ್ನಲ್ಲಿ ಮಾತನಾಡಿದ ಪ್ರಧಾನಿವಿಶ್ವ ಜನಸಂಖ್ಯೆಯ ಐದನೇ ಒಂದು ಭಾಗವನ್ನು ಹೊಂದಿರುವ ಪ್ರದೇಶವು ಕೊರೋನಾವೈರಸ್ ಹಾವಳಿ ಎದುರಿಸಲು ಆಪತ್ಕಾಲೀನ ಯೋಜನೆಯೊಂದಿಗೆ ಸಿದ್ಧವಾಗಬೇಕಿದೆ ಎಂದು ಹೇಳಿದರು. "ಇಲ್ಲಿಯವರೆಗೆ ನಮ್ಮ ಸಾರ್ಕ್ ಪ್ರದೇಶವು ೧೫೦ ಕ್ಕಿಂತಲೂ ಕಡಿಮೆ ಪ್ರಕರಣಗಳನ್ನು ದಾಖಲಿಸಿದೆ ಆದರೆ ನಮ್ಮ ಸಾರ್ಕ್ ಪ್ರದೇಶವು ಒಟ್ಟು ವಿಶ್ವ ಜನಸಂಖ್ಯೆಯ ಐದನೇ ಒಂದು ಭಾಗzಷ್ಟನ್ನು ವ್ಯಾಪಿಸಿರುವುದರಿಂದ ನಾವು ಜಾಗರೂಕರಾಗಿರಬೇಕು" ಎಂದು ಆರಂಭಿಕ ಭಾಷಣ ಮಾಡುತ್ತಾ ಪ್ರಧಾನಿ ಹೇಳಿದರು. ಪ್ರದೇಶದಲ್ಲಿ ಆರೋಗ್ಯ ಸೌಲಭ್ಯಗಳಿಗೆ ಗಮನಾರ್ಹ ಸವಾಲುಗಳಿವೆ. ಆದ್ದರಿಂದ, "ನಾವೆಲ್ಲರೂ ಒಟ್ಟಾಗಿ ತಯಾರಿ ಮಾಡಬೇಕು, ನಾವೆಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸಬೇಕು ಮತ್ತು ನಾವೆಲ್ಲರೂ ಒಟ್ಟಾಗಿ ಯಶಸ್ವಿಯಾಗಬೇಕು" ಎಂದು ಮೋದಿ ಹೇಳಿದರು. (ವಿವರಗಳಿಗೆಇಲ್ಲಿ ಕ್ಲಿಕ್   ಮಾಡಿರಿ)

2020: ಬೆಂಗಳೂರು: ಬೆಂಗಳೂರಿನ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇರುವ ರಾಮಕೃಷ್ಣ ಹೆಗಡೆ ನಗರದ ಶ್ರೀ ಬಾಲಾಜಿ ಕೃಪಾ ಬಡಾವಣೆಗೆ 2020 ಮಾರ್ಚ್ 15ರ ಭಾನುವಾರ ‘ಕಾವೇರಿ’ ಪದಾರ್ಪಣೆ ಗೈದಳು. ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ  ಕೃಷ್ಣ ಭೈರೇಗೌಡ  ಬಡಾವಣೆಯಲ್ಲಿ ಪೂಜೆಯ ಬಳಿಕ ನಲ್ಲಿ ತಿರುಗಿಸುವ ಮೂಲಕ ಕಾವೇರಿ ನೀರು ಸರಬರಾಜನ್ನು ಉದ್ಘಾಟನೆ ಮಾಡಿದರು. ಇದರೊಂದಿಗೆ ಬಡಾವಣೆ ನಿವಾಸಿಗಳ ಹಲವಾರು ವರ್ಷಗಳ ಕಾಯಂ ನೀರಿನ ವ್ಯವಸ್ಥೆಯ  ಬೇಡಿಕೆ ಈಡೇರಿತು. ಬಡಾವಣೆಯ ಹಿರಿಯ ನಾಗರಿಕ ನಾರಾಯಣಸ್ವಾಮಿ ಅವರು ಕಾವೇರಿ ಪೂಜೆ ನೆರವೇರಿಸಿದರು. ಬಳಿಕ ನಡೆದ ಸಂಕ್ಷಿಪ್ತ ಸಮಾರಂಭದಲ್ಲಿ ಭೈರೇಗೌಡ  ಅವರು ಕಾವೇರಿ ನೀರನ್ನು ಬಡಾವಣೆಗೆ ತರಲು ಪಟ್ಟ ಶ್ರಮದ ವಿವರಣೆಯನ್ನು ನೀಡಿ ಈ ಕೆಲಸದಲ್ಲಿ ಸಹಕರಿಸಿದ  ಬೆಂಗಳೂರು ಜಲಮಂಡಳಿಯ ಅಧಿಕಾರಿಗಳೂ ಸೇರಿದಂತೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಬೆಂಗಳೂರು ಜಲಮಂಡಳಿಯ ಅಧಿಕಾರಿಗಳಾದ ದಲಾಯತ್,  ನಾರಾಯಣಸ್ವಾಮಿ,  ಬಡಾವಣೆಗೆ ನೀರು ತರುವ ನಿಟ್ಟಿನಲ್ಲಿ ಶ್ರಮಿಸಿದ ಹಿರಿಯರಾದ ಉದಯಶಂಕರ್, ಚೌಡರೆಡ್ಡಿ, ಸೇತೂರಾಂ, ಕಾಂಗ್ರೆಸ್ ನಾಯಕ ಶಿವಕುಮಾರ್ ಮತ್ತಿತತರು ಹಾಜರಿದ್ದರು. (ವಿವರಗಳಿಗೆಇಲ್ಲಿ ಕ್ಲಿಕ್   ಮಾಡಿರಿ)

2020: ಭೋಪಾಲ್: ಮಧ್ಯಪ್ರದೇಶದಲ್ಲಿ ರಾಜಕೀಯ ಹೈಡ್ರಾಮಾ ದಿನದಿಂದ ದಿನಕ್ಕೆ ಕಳೆಗಟ್ಟುತ್ತಿದ್ದು, ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಮುಖ್ಯಮಂತ್ರಿ ಕಮಲನಾಥ್ 2020 ಮಾರ್ಚ್ 16ರ  ಸೋಮವಾರ ಅವಕಾಶ ಕಲ್ಪಿಸುವಂತೆ ವಿಧಾನಸಭಾಧ್ಯಕ್ಷರಿಗೆ ರಾಜ್ಯಪಾಲ ಲಾಲಜಿ ಟಂಡನ್ 2020 ಮಾರ್ಚ್ 15ರ ಭಾನುವಾರ ಸೂಚನೆ ನೀಡಿದರು. ಇದರೊಂದಿಗೆ ಕಮಲನಾಥ್ ಸರ್ಕಾರದಅಗ್ನಿಪರೀಕ್ಷೆಗೆ ಕ್ಷಣಗಣನೆ ಆರಂಭವಾಯಿತು.  ಬಿಜೆಪಿಗೆ ಸೇರ್ಪಡೆಯಾಗಿರುವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಬೆಂಬಲಿಗ ಕಾಂಗ್ರೆಸ್ ಶಾಸಕರ ಬಂಡಾಯದಿಂದ ಬಿಕ್ಕಟ್ಟಿಗೆ ಸಿಲುಕಿರುವ ಕಮಲನಾಥ್ ಸರ್ಕಾರವು ವಿಶ್ವಾಸಮತ ಗೆಲ್ಲಲಿದೆ ಎಂದು ಜೈಪುರದ ರೆಸಾರ್ಟ್ನಿಂದ ಭಾನುವಾರ ಭೋಪಾಲ್ಗೆ ಆಗಮಿಸಿದ ಕಾಂಗ್ರೆಸ್ ಶಾಸಕರುವಿಜಯ (ವಿ) ಸಂಕೇತ ತೋರಿಸುತ್ತಾ ಆತ್ಮ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ’ವಿಶ್ವಾಸಮತ ಕಲಾಪದ ಸಂಭವನೀಯತೆ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಶನಿವಾರ ಮಧ್ಯಪ್ರದೇಶದ ರಾಜ್ಯಪಾಲರನ್ನು ಭೇಟಿ ಮಾಡಿದ್ದ ಬಿಜೆಪಿ ನಾಯಕರು, ಮುಖ್ಯಮಂತ್ರಿ ಕಮಲನಾಥ್ ಅವರಿಗೆ ಮಾರ್ಚ್ ೧೬ರ ಸೋಮವಾರ ಸದನದಲ್ಲಿ ವಿಶ್ವಾಸಮತ ಯಾಚಿಸಿ ಬಹುಮತ ಸಾಬೀತು ಪಡಿಸಲು ನಿರ್ದೇಶನ ನೀಡುವಂತೆ ಒತ್ತಾಯಿಸಿದ್ದರು. ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಬಿಜೆಪಿ ನಿಯೋಗ ರಾಜ್ಯಪಾಲ ಲಾಲಜಿ ಟಂಡನ್ ಅವರ ಬಳಿಗೆ ತೆರಳಿ ಮನವಿ ಮಾಡಿತ್ತು. ಜೈಪುರದ ರೆಸಾರ್ಟಿನಿಂದ ಭೋಪಾಲ್ಗೆ ವಾಪಸಾಗಿರುವ ಕಾಂಗ್ರೆಸ್ ಶಾಸಕರು ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ. (ವಿವರಗಳಿಗೆಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ಮಾರಕ ಕೋವಿಡ್-೧೯ ಸೋಂಕು ಹರಡದಂತೆ ತಡೆಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮರೋಪಾದಿ ಕ್ರಮಗಳನ್ನು ಕೈಗೊಳ್ಳುತ್ತಿರುವುದರ ಮಧ್ಯೆಯೇ,  ವಿದೇಶೀ ಪ್ರಜೆಗಳೂ ಸೇರಿದಂತೆ ಭಾರತದಲ್ಲಿ ಕೊರೋನಾವೈರಸ್ ಸೋಂಕಿತರ ಸಂಖ್ಯೆ 2020 ಮಾರ್ಚ್ 15ರ ಭಾನುವಾರ ೧೦೮ಕ್ಕೆ ಏರಿತು. ದೆಹಲಿ ಮತ್ತು ಕರ್ನಾಟಕದಲ್ಲಿ ಇಬ್ಬರು ವ್ಯಕ್ತಿಗಳು ಸೋಂಕಿಗೆ ಬಲಿಯಾಗಿದ್ದಾರೆ.ಮಹಾರಾಷ್ಟ್ರದಲ್ಲಿ ಅತ್ಯಧಿಕ ಜನರಿಗೆ ಕೊರೋನಾವೈರಸ್ ಸೋಂಕು ತಗುಲಿದ್ದು, ಸೋಂಕು ದೃಢಪಟ್ಟವರ ಸಂಖ್ಯೆ ೩೨ಕ್ಕೆ ಏರಿದೆ. ಕೇರಳ ನಂತರದ ಸ್ಥಾನದಲ್ಲಿದ್ದು ೨೨ ಮಂದಿಗೆ ಸೋಂಕು ತಗುಲಿದೆ. ಉತ್ತರ ಪ್ರದೇಶದಲ್ಲಿ ೧೧ ಮಂದಿಗೆ ಸೋಂಕು ತಗುಲಿರುವುದು ಖಚಿತ ಪಟ್ಟಿದೆ. ಒಟ್ಟು ೧೦೭ ಪ್ರಕರಣಗಳಲ್ಲಿ ೧೭ ಮಂದಿ ವಿದೇಶೀ ಪ್ರಜೆಗಳಾಗಿದ್ದಾರೆ. ಭಾರತ ಸರ್ಕಾರವು ಈಗಾಗಲೇ ಕೋವಿಡ್-೧೯ನ್ನುವಿಪತ್ತು ಎಂಬುದಾಗಿ ಘೋಷಿಸಿದೆ ಮತ್ತು  ೨೦೨೦ ಜೂನ್ ೩೦ರವರೆಗೆ ಮುಖವಾಡ (ಮಾಸ್ಕ್) ಮತ್ತು ಸ್ಯಾನಿಟೈಜರ್ಗಳನ್ನು ಅಗತ್ಯ ವಸ್ತುಗಳ ಕಾಯ್ದೆಯ ಅಡಿಯಲ್ಲಿ ಅಗತ್ಯ ವಸ್ತುಗಳು ಎಂಬುದಾಗಿ ಘೋಷಿಸಿದೆ. ಅಗತ್ಯ ವಸ್ತು ಕಾಯ್ದೆಯ ಅಡಿಯಲ್ಲಿ ರಾಜ್ಯಗಳು ಉತ್ಪಾದಕರಿಗೆ ಉತ್ಪನ್ನಗಳ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಸರಬರಾಜಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಲು ನಿರ್ದೇಶನ ನೀಡಬಹುದಾಗಿದೆ.ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸರ್ಕಾರದ ಯಾರೇ ಸಚಿವರು ಮುಂಬರುವ ದಿನಗಳಲ್ಲಿ ವಿದೇಶ ಪ್ರಯಾಣ ಮಾಡುವುದಿಲ್ಲ ಎಂದು ಘೋಷಿಸಿ, ಸೋಂಕು ಹರಡದಂತೆ ತಡೆಯುವ ಸಲುವಾಗಿ ಅನಗತ್ಯ ವಿದೇಶ ಪಯಣಗಳನ್ನು ಮುಂದೂಡುವಂತೆ ಜನತೆಗೆ ಮನವಿ ಮಾಡಿದ್ದರು. ಹೆಚ್ಚು ಜನರು ಸೇರುವಂತಹ ಸಭೆ ಸಮಾರಂಭಗಳನ್ನು ನಡೆಸಬೇಡಿ, ಆದರೆ ಭಯಭೀತರಾಗುವ ಅಗತ್ಯವಿಲ್ಲ ಎಂದು ಪ್ರಧಾನಿ ಹೇಳಿದ್ದರು. (ವಿವರಗಳಿಗೆಇಲ್ಲಿ ಕ್ಲಿಕ್   ಮಾಡಿರಿ)

2020: ಮ್ಯಾಡ್ರಿಡ್: ವಿಶ್ವಾದ್ಯಂತ ತನ್ನ ಕಬಂಧಬಾಹುವನ್ನು ಬಿಗಿಗೊಳಿಸುತ್ತಿರುವ ಕೊರೋನಾವೈರಸ್ ಕಳೆದ ೨೪ ಗಂಟೆಗಳಲ್ಲಿ ಸ್ಪೇನಿನಲ್ಲಿ ರುದ್ರ ತಾಂಡವ ನಡೆಸಿದ್ದು, ೨೦೦೦ ಹೊಸ ಪ್ರಕರಣಗಳು ಮತ್ತು ಇನ್ನೂ ೧೦೦ ಸಾವಿನ ಪ್ರಕರಣಗಳು 2020 ಮಾರ್ಚ್ 15ರ ಭಾನುವಾರ ವರದಿಯಾದವು. ಯುರೋಪಿನಲ್ಲಿ ಇಟಲಿಯ ಬಳಿಕ ಅತ್ಯಂತ ಹೆಚ್ಚು ಕೊರೋನಾಬಾಧೆಗೆ ಒಳಗಾದ ದೇಶ ಎಂಬ ಕುಖ್ಯಾತಿಗೆ ಇದೀಗ ಸ್ಪೇನ್ ಪಾತ್ರವಾಗಿದೆ. ಹೊಸ ಪ್ರಕರಣಗಳು ವರದಿಯಾಗುವುದರೊಂದಿಗೆ ಸ್ಪೇನಿನಲ್ಲಿ ಕೋವಿಡ್ -೧೯ ಪ್ರಕರಣಗಳ ಸಂಖ್ಯೆ ,೭೫೩ಕ್ಕೆ ಏರಿದ್ದು, ಸಾವಿನ ಸಂಖ್ಯೆ ೨೮೮ನ್ನು ತಲುಪಿದೆ. ಸರ್ಕಾರವು ಇಡೀ ರಾಷ್ಟ್ರದಲ್ಲಿ ತುರ್ತು ಸ್ಥಿತಿ ಘೋಷಿಸಿದ್ದು, ಜನರಿಗೆ ಮನೆಗಳಿಂದ ಹೊರಕ್ಕೆ ಬರದಂತೆ ಸೂಚನೆ ನೀಡಿದೆ. ಕೆಲಸಕ್ಕೆ ಹೋಗಲು ಇಲ್ಲವೇ ಔಷಧ, ಆಹಾರ ಖರೀದಿಗಾಗಿ ಮಾತ್ರವೇ ಮನೆಯಿಂದ ಹೊರಬರಲು ಅವಕಾಶ ಕಲ್ಪಿಸಿದೆ. (ವಿವರಗಳಿಗೆ ಇಲ್ಲಿ ಕ್ಲಿಕ್  ಮಾಡಿರಿ)

2020: ನವದೆಹಲಿ: ದೆಹಲಿ ವಿಮಾನ ನಿಲ್ದಾಣಕ್ಕೆ ಇಟಲಿಯಿಂದ ಫೆಬ್ರವರಿ ೨೦ ರಂದು ಹಿಂದಿರುಗಿದ ಬಳಿಕ, ಮಾರ್ಚ್ ೧೨ ರಂದು ಮಾರಕ ಕೊರೊನಾವೈರಸ್ (ಕೋವಿಡ್ -೧೯) ಸೋಂಕು ಪತ್ತೆಯಾಗುವವರೆಗಿನ ಅವಧಿಯಲಿ ಪಶ್ಚಿಮ ದೆಹಲಿಯ ಜನಕಪುರಿಯ ೪೬ ವರ್ಷದ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದಿದ್ದ ವ್ಯಕ್ತಿಗಳ ಸಂಖ್ಯೆ ೮೧೩ ಎಂಬುದು ಬೆಳಕಿಗೆ ಬಂದಿದೆ. ಇತರ ವ್ಯಕ್ತಿಗಳ ಜೊತೆ ಕೋವಿಡ್ -೧೯ ಸೋಂಕಿತ ವ್ಯಕ್ತಿಯೊಬ್ಬರು ಇತರರ ಜೊತೆ ಗರಿಷ್ಠ ಸಂಪರ್ಕ ಪಡೆದ ಪ್ರಕರಣ ಇದಾಗಿದೆ ಎಂದು ಸುದ್ದಿ ಮೂಲಗಳು 2020 ಮಾರ್ಚ್ 15ರ ಭಾನುವಾರ ತಿಳಿಸಿದವು. ಕೊರೋನಾವೈರಸ್ ಸೋಂಕಿಗೆ ಒಳಗಾದ ವ್ಯಕ್ತಿಯ ೬೮ ವರ್ಷದ ತಾಯಿ ಶುಕ್ರವಾರ ರಾತ್ರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಇದು ದೇಶದಲ್ಲಿ ವ್ಯಾಧಿಯಿಂದ ಸಂಭವಿಸಿದ ಎರಡನೇ ಸಾವು ಎಂದು ಶಂಕಿತ ವ್ಯಕ್ತಿಯ ಓಡಾಟಗಳ ಮಾಹಿತಿ ಸಂಗ್ರಹಿಸಿರುವ ಆರೋಗ್ಯ ಕಾಳಜಿ ವೃತ್ತಿನಿರತರು  ಹೇಳಿದರು.  ೪೬ ವರ್ಷದ ವ್ಯಕ್ತಿ ಮತ್ತು ಕುಟುಂಬ ಕುಟುಂಬ ಸದಸ್ಯರು ಇತ್ತೀಚೆಗೆ ಯುರೋಪಿನ ನಾಲ್ಕು ದೇಶಗಳ ಕೆಲಸದ ಪ್ರವಾಸದಿಂದ ವಾಪಸಾಗಿದ್ದರು. ಅವರು ಪಯಣಿಸಿದ್ದ ದೇಶಗಳಲ್ಲಿ ಇಟಲಿ ಕೂಡಾ ಒಂದು ಎಂದು ವರದಿಗಳು ಹೇಳಿವೆ. ಇಟಲಿಯಲ್ಲಿ ಮಾರಕ ಸೋಂಕಿನ ಪರಿಣಾಮವಾಗಿ ಕನಿಷ್ಠ ,೪೦೦ ಸಾವುಗಳು ಸಂಭವಿಸಿವೆ. (ವಿವರಗಳಿಗೆಇಲ್ಲಿ ಕ್ಲಿಕ್   ಮಾಡಿರಿ)

ಇಂದಿನ ಇತಿಹಾಸ  History Today ಮಾರ್ಚ್ 15  (2019+ ಹಿಂದಿನವುಗಳಿಗೆ ಇಲ್ಲಿ ಕ್ಲಿಕ್ ಮಾಡಿರಿ)



No comments:

Post a Comment